S O U L B L I S S

Loading

Bhagavad Gita – Vinayak Rao Bapat – Chapter 1

ಮೊದಲನೆಯ ಅಧ್ಯಾಯ – ಅರ್ಜುನ ವಿಷಾದಯೋಗ

ಧೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಂಡವಾಶ್ಛೈವ ಕಿಮಕುರ್ವತ ಸಂಜಯ || 1 : 1 ||

ಧೃತರಾಷ್ಟ್ರ ಹೇಳುತ್ತಾನೆ .

ಅರ್ಥ : ಎಲೈ ಸಂಜಯನೇ ಪವಿತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡುವುದಕ್ಕಾಗಿ ಸೇರಿದ ನನ್ನ ಮಕ್ಕಳು ಮತ್ತು ಪಾಂಡುರಾಜನ ಮಕ್ಕಳು ಏನು ಮಾಡಿದರು ?

ಇಡೀ ಭಗವದ್ಗೀತೆಯಲ್ಲಿ ಧೃತರಾಷ್ಟ್ರನು ಹೇಳಿದುದು ಇದೊಂದೇ ವಾಕ್ಯ . ಕುರುಡನಾದ ಧೃತರಾಷ್ಟ್ರನು ತನ್ನ ಮಕ್ಕಳ ಮೇಲಿನ ಮೋಹದಿಂದಾಗಿ ಭಾರತ ಯುದ್ಧಕ್ಕೆ ಆಸ್ಪದವನ್ನು ಕೊಟ್ಟನು. ಪಾಂಡವರ ಮತ್ತು ಕೌರವರ ಸೇನಾಬಲವು ಎಷ್ಟೆಷ್ಟಿದೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಹೆಚ್ಚು ಸೈನ್ಯ ಶಕ್ತಿಯಿರುವ ತನ್ನ ಮಕ್ಕಳು ಯುದ್ಧದಲ್ಲಿ ಗೆಲ್ಲುತ್ತಾರೆಂಬ. ನಂಬಿಕೆಯಿದ್ದರೂ ಪಾಂಡವರು ಧರ್ಮಪಕ್ಷವನ್ನೂ , ತನ್ನ ಮಕ್ಕಳು ಅಧರ್ಮ ಪಕ್ಷವನ್ನೂ ಹಿಡಿದಿದ್ದರಿಂದ ಯುದ್ಧದ ಕೊನೆಯ ಪರಿಣಾಮವು ಏನಾಗುತ್ತದೋ ಎಂಬ ಸಂಶಯವು ಅವನನ್ನು ಬಾಧಿಸುತ್ತಿತ್ತು. ಯುದ್ದ ಪ್ರಾರಂಭವಾಗುವ ಮೊದಲು ವೇದವ್ಯಾಸರು ಧೃತರಾಷ್ಟ್ರನ ಹತ್ತಿರ ಬಂದು, ಅವನ ಅಪೇಕ್ಷೆಯಂತೆ, ಅರಮನೆಯಲ್ಲಿ ಅವನ ಪಕ್ಕದಲ್ಲಿಯೇ, ಕುಳಿತು ಯುದ್ಧದಲ್ಲಿ ನಡೆಯುತ್ತಿರ್ವ ಎಲ್ಲಾ ಘಟನೆಗಳನ್ನೂ ಧೃತರಾಷ್ಟ್ರನಿಗೆ ವರದಿ ಮಾಡುವಂತೆ ಸಂಜಯನನ್ನು ನಿಯಮಿಸಿದರು, ಹಾಗೂ ಅವನಿಗೆ ಕುಳಿತಲ್ಲಿಯೇ ಯುದ್ಧದ ಸಂಪೂರ್ಣ ದೃಶ್ಯವನ್ನು ನೋಡುವಂತಹ ಮತ್ತು ಅಲ್ಲಿ ನಡೆಯುವ ಮಾತುಕಥೆಗಳನ್ನು ಕೇಳುವಂತಹ ಶಕ್ತಿಯನ್ನು ದಯಪಾಲಿಸಿದರು. ಅದಕ್ಕಾಗಿಯೇ ಧೃತರಾಷ್ಟ್ರನು ಸಂಜಯನನ್ನು ಈ ರೀತಿಯಾಗಿ ಪ್ರಶ್ನಿಸಿದ್ದಾನೆ .

ಸಂಜಯ ಉವಾಚ

ದೃಷ್ಟ್ವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ |

ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ || 1 : 2 ||

ಸಂಜಯನು ಹೇಳುತ್ತಾನೆ

ಅರ್ಥ : ಪಾಂಡವರ ಸೇನೆಯು ಕೋಟೆಗಟ್ಟಿ ನಿಂತಿರುವುದನ್ನು ಕಂಡು ದುರ್ಯೋಧನನು ತನ್ನ ಗುರುಗಳಾದ ದ್ರೋಣಾಚಾರ್ಯರ ಸಮೀಪಕ್ಕೆ ಬಂದು ಈ ಮಾತುಗಳನ್ನು ಹೇಳಿದನು .

ಸಂಜಯನ ವರದಿಯು ಈ ಶ್ಲೋಕದಿಂದ ಪ್ರಾರಂಭವಾಗುತ್ತದೆ. ಪಾಂಡವರ ಸೇನೆಯು ತನ್ನ ಸೇನೆಗಿಂತಲೂ ಜನಸಂಖ್ಯೆಯಲ್ಲಿ ಕಾಡಿಮೆಯಿದ್ದಾಗ್ಯೂ, ದುರ್ಯೋಧನನು ಮನದಲ್ಲಿಯೇ ಅಳುಕಿದನು. ಅಧರ್ಮ ಮಾರ್ಗವನ್ನು ಹಿಡಿದ ಅವನ ಮನಸ್ಸು ಒಳಗೇ ಕೊರೆಯುತ್ತಿದ್ದುದರಿಂದ ಅದು ಅವನಲ್ಲಿ ಈ ತರಹದ ಹೆದರಿಕೆಯನ್ನುಂಟು ಮಾಡಿತು. ಪಾಂಡವರು ಕೋಟೆ ಕಟ್ಟಿ ನಿಂತಿರುವುದನ್ನು ಕಂಡು ದುರ್ಯೋಧನನು ತನ್ನ ಅಸ್ತ್ರ ಗುರುಗಳ ಸಲಹೆಯನ್ನು ಪಡೆಯುವದಕ್ಕಾಗಿ ದ್ರೋಣಾಚಾರ್ಯರ ಬಳಿಗೆ ಹೋದನು. ಆದಾಗ್ಯೂ ಅವನು ಗುರುಗಳೆಂದು ವಿನಯದಿಂದ ವರ್ತಿಸದೆ ರಾಜನೆಂಬ ಹೆಮ್ಮೆಯಿಂದಲೇ ವರ್ತಿಸಿದುದನ್ನು ಮುಂದೆ ಕಾಣಬಹುದು.

ಪಶ್ಯತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂಚ ಮಾಮ್ |

ವ್ಯೂಢಾಂ ದ್ರುಪದಪುತ್ರೇಣ ತವಶಿಷ್ಯೇಣಧೀಮತಾ || 1 : 3 ||

ಅರ್ಥ : ಎಲೈ ಆಚಾರ್ಯನೆ, ಪಾಂಡವರ ಈ ಮಹಾಬಲಿಷ್ಟವಾದ ಸೈನ್ಯವು ನಿಮ್ಮ ಬುದ್ಧಿಶಾಲಿ ಶಿಷ್ಯನಾದ ದ್ರುಪದನ ಮಗನಿಂದ ಕೋಟೆಕಟ್ಟಲ್ಪಟ್ಟಿದ್ದನ್ನು ನೋಡಿರಿ.

ಇಲ್ಲಿ ದುರ್ಯೋಧನನು ಪಾಂಡವರ ಸೇನೆಯು ಮಹಾಬಲಷ್ಟವಾದುದೆಂದು ಹೇಳಿದ್ದಾನೆ. ಜೊತೆಗೆ ಆ ಸೇನೆಯ ನಾಯಕನಾದ ದ್ರುಪದ ಪುತ್ರನನ್ನು ಹೊಗಳಿ ದ್ರೋಣಾಚಾರ್ಯರು ಅಂತಹ ಶಿಷ್ಯನಿಗೆ ಅಸ್ತ್ರವಿದ್ಯೆಯನ್ನು ಹೇಳಿಕೊಟ್ಟಿದ್ದರೆಂದೂ ಅವರ ಶಿಷ್ಯನೇ ಅವರನ್ನು ಈಗ ಯುದ್ಧದಲ್ಲಿ ಎದುರಿಸುತ್ತಿದ್ದಾನೆಂದೂ ಚುಚ್ಚು ಮಾತುನಾಡಿದ್ದಾನೆ.

ಅತ್ರಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ |

ಯುಯುಧಾನೋ ವಿರಾಟಶ್ವ ದ್ರುಪದಶ್ವ ಮಹಾರಥಃ || 1 : 4 ||

ಅರ್ಥ : ಈ ಸೇನೆಯಲ್ಲಿ ಶೂರರೂ, ಯುದ್ಧದಲ್ಲಿ ಭೀಮ ಮತ್ತು ಅರ್ಜುನರಿಗೆ ಸಮಾನರಾದ ಬಿಲ್ಲುಗಾರರೂ ಯುಯುಧಾನ, ವಿರಾಟ, ದ್ರುಪದ ಮೊದಲಾದ ಮಹಾರಥರೂ, ಇದ್ದಾರೆ. (ಹನ್ನೊಂದು ಸಾವಿರ ಬಿಲ್ಲುಗಾರಾರ ದಳಪತಿಗೆ ಮಹಾರಥ ಎಂದು ಹೆಸರು)

ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ |

ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ || 1 : 5 ||

ಅರ್ಥ : ಧೃಷ್ಟಕೇತು, ಚೇಕಿತಾನ, ವೀರನಾದ ಕಾಶಿರಾಜ, ಪುರುಜಿತ್, ಕುಂತಿಭೋಜ, ಶಲ್ಯ, ಮೊದಲಾದ ರಾಜರೂ ಇದ್ದಾರೆ .

ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ |

ಸೌಭದ್ರೋ ದ್ರೌಪದೇಯಶ್ಚ ಸರ್ವಏವ ಮಹಾರಥಾಃ || 1 : 6 ||

ಅರ್ಥ : ಬಲಿಷ್ಠನಾದ ಯುಧಾಮನ್ಯು, ವೀರ್ಯವಂತನಾದ ಉತ್ತಮೌಜ, ಸುಭದ್ರಾ ಪುತ್ರನಾದ ಅಭಿಮನ್ಯು ದ್ರೌಪದಿಯ ಮಕ್ಕಳು ಇವರೆಲ್ಲರೂ ಮಹಾರಥರು.

ಈ ಮೂರು ಶ್ಲೋಕಗಳನ್ನು ದುರ್ಯೋಧನನು ಪಾಂಡವರ ಸೇನೆಯ ಮುಖ್ಯಸ್ಥರ ಹೆಸರನ್ನು ಹೇಳಿದ್ದಾನೆ. ಈ ಸೇನೆಯ ಸಂಖ್ಯೆಯು ಕಡಿಮೆಯಿದ್ದಾಗ್ಯೂ, ವೀರರ ಸಂಖ್ಯೆಯು ಹೆಚ್ಚಾಗಿದೆ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾನೆ. ಯುದ್ಧಮನ್ಯುವಿಗೆ ಸಾತ್ಯಃ ಎಂಬ ಹೆಸರೂ ಇದೆ. ಇವನು ಕೃಷ್ಣನ ಸಾರಥಿಯಾಗಿದ್ದನು. ವಿರಾಟನುಯಯುನಾ ಮತ್ತು ಯಮುನಾ ಸರಸ್ವತೀ ನದಿಗಳ ಮಧ್ಯದಲ್ಲಿದ್ದ ಮತ್ಸ್ಯದೇಶದ ರಾಜನು ಇವನ ರಾಜ್ಯದಲ್ಲಿಯೇ ಪಾಂಡವರು ಒಂದು ವರ್ಷದ ಅಜ್ಞಾತವಾಸದಲ್ಲಿದ್ದರು. ದ್ರುಪದನು ಪಾಂಡವರ ಮಾವ ಇವನು ಪಾಂಚಾಲ ದೇಶದ ರಾಜನು ಧೃಷ್ಟಕೇತುವು ಚೇದಿದೇಶದ ರಾಜನು . ನಕುಲನ ಭಾವಮೈದುನ ಪುರುಜಿತ್ ಮತ್ತು ಕುಂತಿಭೋಜ ಇವರಿಬ್ಬರೂ ಸೋದರರು. ಪಾಂಡವರ ತಾಯಿಯಾದ ಕುಂತಿಯು ಕುಂತಿಭೋಜನ ದತ್ತುಮಗಳು. ಶೈಭ್ಯನು ಶಿಬಿ ದೇಶದ ರಾಜನು. ಇವರೆಲ್ಲರೂ ವೀರರೂ ಮಹಾರಥರೂ ಆಗಿದ್ದರು. ಪ್ರತಿಯೊಬ್ಬರು ಪ್ರತ್ಯೇಕವಾಗಿ 11,000 ಸೇನೆಯ ತುಕಡಿಯ ದಳಪತಿಗಳಾಗಿದ್ದರು.

ಅಸ್ಮಾಂಕಂತು ವಿಶಿಷ್ಟಾಯ ತಾನ್ನಿಬೋಧ ದ್ವಿಜೋತ್ತಮ |

ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿತೇ || 1 : 7 ||

ಅರ್ಥ : ಎಲೈ ದ್ವಿಜಶ್ರೇಷ್ಠನೇ ನಿನ್ನ ಮಾಹಿತಿಗೋಸ್ಕರ ನಮ್ಮ ಕಡೆಯ ಪ್ರಮುಖ ಸೇನಾನಾಯಕರ ಹೆಸರನ್ನು ಹೇಳುತ್ತೇನೆ.

ದುರ್ಯೋಧನನು ಪಾಂಡವರ ಸೇನಾಶಕ್ತಿಯನ್ನು ವರ್ಣಿಸಿ, ತನ್ನ ಸೇನಾಶಕ್ತಿಯನ್ನು ವರ್ಣಿಸಲು ಪ್ರಾರಂಭಿಸಿದ್ದಾನೆ. ಅವನಿಗೆ ದ್ರೋಣಾಚಾರ್ಯರಲ್ಲಿ ಅಪನಂಬಿಕೆಯುಂಟಾಗಿದೆ. ಅವರು ಬ್ರಾಹ್ಮಣ ಶ್ರೇಷ್ಠರಾದುದರಿಂದ್ ಕರುಣಾಳು ದಯಾದವರೆಂದೂ, ಪಾಂಡವ ಸೇನೆಯ ಪ್ರಮುಖ ನಾಯಕರೆಲ್ಲಾ ಅವರ ಶಿಷ್ಯರಾದುದರಿಂದ ಅವರಿಗೆ ಸ್ವಾಭಾವಿಕವಾಗಿ ಶಿಷ್ಯರ ಮೇಲೆ ಕರುಣೆ ಹುಟ್ಟಿ ತನ್ನ ಪರವಾಗಿ ಮನಃ ಪೂರ್ವಕ ಯುದ್ಧ ಮಾಡದೆ ಇರಬಹುದೆಂದೂ ಸಂಶಯವುಂಟಾಗಿದೆ. ಅಧರ್ಮಿಷ್ಟನಿಗೆ ಯಾವಾಗಲೂ ಮನಸ್ಸಿನಲ್ಲಿ ಸಂಶಯವಿರುವಂತೆ ದುರ್ಯೋಧನನಿಗೂ ಆಗಿದೆ.

ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ |

ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿ ಸ್ತಥೈವಚ || 1 : 8 ||

ಅರ್ಥ : ನೀವು, ಭೀಷ್ಮ, ಕರ್ಣ, ಜಯಶೀಲನಾದ ಕೃಪನು, ಅಶ್ವತ್ಥಾಮ, ವಿಕರ್ಣ ಮತ್ತು ಸೋಮದತ್ತನ ಮಗ.

ದುರ್ಯೋದನನು ತನ್ನ ಆಚಾರ್ಯನಿಗೆ ಮಾಡಿದ ಅಪರಾಧವನ್ನು ಮನಗಂಡು (ಆಚಾರ್ಯನು ಮೌನವಾಗಿದ್ದುದರಿಂದ) ಅವನನ್ನು ಪ್ರೀತಿಗೊಳಿಸಲು ತನ್ನ ಸೈನಿಕ ವೀರರನ್ನು ವರ್ಣಿಸಲು ಪ್ರಾರಂಭಿಸಿದ್ದಾನೆ. ಈ ವರ್ಣನೆಯ ಪ್ರಾರಂಭದಲ್ಲಿ ದ್ರೋಣಾಚಾರ್ಯರ ಹೆಸರನ್ನ ಮೊದಲು ಹೇಳಿದ್ದಾನೆ. ದ್ರೋಣಾಚಾರ್ಯನ ಭಾವನಾದ ಕೃಪನು ಯುದ್ಧದಲ್ಲಿ ‘ಜಯಶಾಲಿ’ ಎಂದು ಹೊಗಳಿದ್ದಾನೆ. ದ್ರೋಣಾಚಾರ್ಯನ ಮಗನಾದ ಅಶ್ವತ್ಥಾಮನನ್ನೂ ಸಹ ವೀರರ ಪಂಕ್ತಿಯಲ್ಲಿ ಸೇರಿಸಿದ್ದಾನೆ. ವೀರರಲ್ಲಿ ಹೆಚ್ಚಾಗಿ ದ್ರೋಣಾಚಾರ್ಯನ ಮನೆಯವರೇ ಇದ್ದಾರೆಂದು ಅವನನ್ನು ಸಂತೋûûಷಪಡಿಸಲು ಹೇಳಿದ್ದಾನೆ.

ಅನ್ಯೇಚ ಬಹವಃ ಶೂರಾಃ ಮದರ್ಥೆತ್ಯಕ್ತ ಜೀವಿತಾಃ |

ನಾನಾಶಸ್ತ್ರಪ್ರಹರಣಾಃ ಸರ್ವೆಯುದ್ಧವಿಶಾರದಾಃ || 1 : 9 ||

ಅರ್ಥ : ನನಗೋಸ್ಕರವಾಗಿ ಪ್ರಾಣವನ್ನು ತ್ಯಾಗಮಾಡಿದ (ತ್ಯಜಿಸಲು ತಯಾರಾದ) ಯುದ್ಧದಲ್ಲಿ ನಿಪುಣರಾದ ಇನ್ನೂ ಅನೇಕ ಶೂರರು, ನಾನತರಹದ ಶಸ್ತ್ರಾಸ್ತ್ರಗಳಿಂದ ಸನ್ನದ್ಧರಾಗಿ, ಯುದ್ಧಕ್ಕೆ ತಯಾರಾಗಿ ಬಂದಿದ್ದಾರೆ.

ದುರ್ಯೋಧನನು ತನ್ನ ಮನಸ್ಸಿನ ಭೀತಿಯನ್ನು ಇಲ್ಲಿ ವ್ಯಕ್ತಪಡಿಸಿದ್ದಾನೆ. ಪಾಂಡವರ ಸೇನೆಯಲ್ಲಿ ಅನೇಕ ಶೂರರ ಹೆಸರನ್ನು ಹೇಳಿ, ತನ್ನ ಕಡೆಯಲ್ಲಿ ಕೆಲವೇ ಜನರ ಹೆಸರನ್ನು ಮಾತ್ರ ಹೇಳಿದ್ದಾನೆ.

ಅಪರ್ಯಾಪ್ತಂತದಸ್ಮಾಕಂ ಬಲಂಭೀಷ್ಮಾಭಿರಕ್ಷಿತಮ್ |

ಪರ್ಯಾಪ್ರಂತ್ವಿದಮೇತೇಷಾಂ ಬಲಂಭೀಮಾಭಿರಕ್ಷತಮ್ || 1 : 10 ||

ಅರ್ಥ: ಭೀಷ್ಮನಿಂದ ರಕ್ಷಿಸಲ್ಪಟ್ಟ ನಮ್ಮ ಸೇನೆಯು ಮೇರೆ ಇಲ್ಲದುದು ಅಂದರೆ ಜಯಿಸಲಸಾಧ್ಯವಾದುದು. ಭೀಮನಿಂದ ರಕ್ಷಿಸಲ್ಪಟ್ಟ ಅವರ ಸೇನೆಯು ಪರಿಮಿತವಾದುದು. ಸುಲಭವಾಗಿ ಜಯಿಸಲ್ಪಡಬಹುದು .

ಭೀಷ್ಮನಿಂದ ರಕ್ಷಿಸಲ್ಪಟ್ಟ ಅವರ ಸೇನೆಯು ಏತಕ್ಕೂ ಸಾಲದು. ಭೀಮನಿಂದ ರಕ್ಷಿಸಲ್ಪಟ್ಟ ನಮ್ಮ ಸೇನೆಯು ನಮ್ಮನ್ನು ಸೋಲಿಸಲು ಸಾಕು ಎಂಬ ಅರ್ಥವನ್ನೂ ಕೆಲವು ಟೀಕಾಕಾರರು ಮಾಡಿದ್ದಾರೆ. ಇದರಿಂದ ದುರ್ಯೋಧನನ ಮಾನಸಿಕ ಪರಿಸ್ಥಿತಿಯು ವ್ಯಕ್ತವಾಗುತ್ತದೆ. ಪಾಂಡವರು ಧರ್ಮಪಕ್ಷದಿಂದ ಯುದ್ಧ ಮಾಡುತ್ತಿರುವುದರಿಂದ ಅವರ ಸೈನ್ಯದಲ್ಲಿರುವ ಪ್ರತಿಯೊಬ್ಬರೂ ಧಾರ್ಮಿಕ ಭಾವನೆಯಿಂದ ಪ್ರಚೋದಿತರಾಗಿದ್ದಾರೆ. ಆದ್ದರಿಂದ ಅವರು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಆತ್ಮ ತೇಜಸ್ಸಿನಿಂದ ಯುದ್ಧ ಮಾಡುವವರಾಗಿದ್ದಾರೆ. ಕೌರವರು ಅಧರ್ಮಿಗಳು. ಅವರ ಸೈನ್ಯವು ಅಧರ್ಮಪಕ್ಷದ್ದು. ಇವರ ಸಂಖ್ಯೆಯು ಸಾಕಷ್ಟಿದ್ದರೂ ಧಾರ್ಮಿಕ ಹಿನ್ನಲೆಯಿಲ್ಲದಿರುವುದರಿಂದ ದುರ್ಬಲರು ಎಂಬ ಅಳುಕು ದುರ್ಯೋಧನನ ಮನಸ್ಸಿನಲ್ಲಿ ಹುಟ್ಟಿದೆ.

ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ |

ಭೀಷ್ಮಮೇವಾಭಿರಕ್ಷಂತು ಭವಂತ: ಸರ್ವ ಏವಹಿ || 1 : 11 ||

ಅರ್ಥ : ಆದ್ದರಿಂದ ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನದಲ್ಲಿದ್ದುಕೊಂಡು ಭೀಷ್ಮನೊಬ್ಬನನ್ನು ರಕ್ಷಣೆಮಾಡಿರಿ.

ದುರ್ಯೋಧನನು ಈಗ ಧೈರ್ಯವನ್ನು ತಂದುಕೊಂಡು ಸರ್ವಸೇನಾ ನಾಯಕನಂತೆ ಅಪ್ಪಣೆಯನ್ನು ಮಾಡುತ್ತಿದ್ದಾನೆ. ಪ್ರತಿಯೊಬ್ಬರೂ ಶಿಸ್ತಿನಿಂದ ತಮ್ಮ ತಮ್ಮ ಸ್ಥಳದಲ್ಲಿ ನಿಂತುಕೊಂಡು ಭೀಷ್ಮನೊಬ್ಬನನ್ನು ರಕ್ಷಣೆ ಮಾಡಬೇಕೆಂದು ವಿಧಿಸಿದ್ದಾನೆ. ಭೀಷ್ಮನು ಮಹಾವೀರನಷ್ಟೇ ಅಲ್ಲ ಆಗಿನ ಕಾಲದ ರಾಜರು ಹಾಗೂ ಜನತೆಗೆ ಅವನಲ್ಲಿ ಗೌರವವಿತ್ತು. ಯುದ್ಧಕ್ಕಾಗಿ ಸಿದ್ಧರಾಗಿ ಬಂದ ಅನೇಕ ರಾಜರು ಭೀಷ್ಮನಿಗೆ ಗೌರವ ತೋರಿಸುವ ಉದ್ದೇಶದಿಂದ ದುರ್ಯೋಧನನ ಸಹಾಯಕ್ಕೆ ಬಂದಿದ್ದರು.

ಭೀಷ್ಮನು ಇಲ್ಲವಾದರೆ ಅವರೆಲ್ಲರೂ ತಮ್ಮ ಸೈನ್ಯದೊಡನೆ ಹಿಂದೆ ಸರಿಯುವ ಭೀತಿಯಿತ್ತು. ಮೇಲಾಗಿ ಭೀಷ್ಮನನ್ನು ಯುದ್ಧದಲ್ಲಿ ಜಯಿಸಬಲ್ಲ ವೀರನು ಆ ಕಾಲದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಭೀಷ್ಮನೊಬ್ಬನನ್ನು ರಕ್ಷಿಸಬೇಕೆಂದು ಹೇಳಲಾಗಿದೆ.

ತಸ್ಯ ಸಂಜಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |

ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌಪ್ರತಾಪವಾನ್ || 1: 12 ||

ಅರ್ಥ : ಕುರುಪಿತಾಮಹನಾದ, ಭೀಷ್ಮನು, ದುರ್ಯೋಧನನಿಗೆ ಸಂತೋಷವನ್ನುಂಟು ಮಾಡುವುದಕ್ಕಾಗಿ ಮತ್ತು ಅವನನ್ನು ಸ್ಪೂರ್ತಿಗೊಳಿಸುವುದಕ್ಕಾಗಿ ಯುದ್ಧ ಸೂಚಕ ಶಂಖವನ್ನೂದಿದನು .

ದುರ್ಯೋಧನನ ದೌರ್ಬಲ್ಯವನ್ನು ಹತ್ತಿರದಲ್ಲಿಯೇ ನಿಂತಿದ್ದ ಭೀಷ್ಮನು ಗುರುತಿಸಿದನು. ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ ಸೇನಾನಾಯಕರಲ್ಲಿ ಮನೋದೌರ್ಬಲ್ಯವುಂಟಾಗಬಹುದೆಂದು ಊಹಿಸಿ ಅವರಿಗೆ ವಿಚಾರ ಮಾಡುವುದಕ್ಕೂ ಸಹ ಆಸ್ಪದ ಕೊಡಬಾರದೆಂದು ಬಗೆದು ಭೀಷ್ಮನು ಆಕ್ರಮಣದ ಹಾಗೂ ಯುದ್ಧ ಪ್ರಾರಂಭಕ್ಕೆ ಸೂಚಕವಾದ ರಣಕಹಳೆಯ ಮೂಲಕ ಸಿಂಹನಾದವನ್ನು ಮಾಡಿದನು. ಈ ಮೂಲಕ ತನ್ನ ಎಲ್ಲ ಸೇನಾನಾಯಕರಿಗೂ, ಆಕ್ರಮಣಕ್ಕೆ ಸಿದ್ಧರಾಗಿರಬೇಕೆಂದು ಸೂಚಿಸಿದನು.

ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ |

ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋ„ಭವತ್ || 1 : 13 ||

ಅರ್ಥ : ಅನಂತರ ಕೂಡಲೆ ಇತರೆ ಶಂಖಗಳು ಭೇರಿಗಳು, ಮದ್ದಳೆಗಳು, ಕಹಳೆಗಳು, ಬಾರಿಸಲ್ಪಟ್ಟವು. ಆ ಶಬ್ದವು ಭಯಂಕರವಾಗಿತ್ತು.

ಯುದ್ಧದ ವರದಿಯನ್ನೊಪ್ಪಿಸಲು ನಿಯಮಿಸಲ್ಪಟ್ಟ ಸಂಜಯನು ಧರ್ಮ ಪಕ್ಷಪಾತಿಯಾದುದರಿಂದ ಪಾಂಡವರ ಬಗ್ಗೆ ಸಹಾನುಭೂತಿಯುಳ್ಳವನಾಗಿದ್ದನು. ಧೃತರಾಷ್ಟ್ರನು ಕೊನೆಯ ಘಳಿಗೆಯಲ್ಲಾದರೂ ಯುದ್ಧವನ್ನು ನಿಲ್ಲಿಸಲಿ ಎಂಬ ಆಶಯವು ಅವನಿಗಿತ್ತು. ಆದುದರಿಂದ ಯುದ್ಧ ಪ್ರಾರಂಭವಾಗುವವರೆಗೂ ಅವನು ತನ್ನ ವರದಿಯಲ್ಲಿ ಬುದ್ಧಿವಂತಿಕೆಂiÀi ಶಬ್ದಗಳನ್ನುಪಯೋಗಿಸಿದ್ದಾನೆ. ಈ ಶ್ಲೋಕದಲ್ಲಿಯೂ ಅದನ್ನು ಕಾಣಬಹುದು. ಕೌರವರ ಸೈನ್ಯದ ಶಂಖ, ಭೇರಿ, ಕಹಳೆ ಮೊದಲಾದ ರಣವಾದ್ಯಗಳ ಶಬ್ದವು ಭಯಂಕರವಾಗಿತ್ತು ಎಂದು ಅರ್ಧಮನಸ್ಸಿನಿಂದ ಹೇಳಿದ್ದಾನೆ. ಆದರೆ ಮುಂದೆ ಬರುವ ಪಾಂಡವರ ರಣವಾದ್ಯದ – ಪ್ರತ್ಯುತ್ತರ – ಶಬ್ದವನ್ನು ವಿಸ್ತಾರವಾಗಿ ವರ್ಣಿಸಿ ಆ ಶಬ್ದವು ಧೃತರಾಷ್ಟ್ರನ ಮಕ್ಕಳ ಹೃದಯವನ್ನು ಸೀಳುವಂತಿತ್ತೆಂದೂ ಅದು ಭೂಲೋಕ ಮತ್ತು ಆಕಾಶಗಳಲ್ಲಿ ಪ್ರತಿ ಧ್ವನಿಸುತ್ತಿತ್ತೆಂದೂ ವರ್ಣಿಸಿರುವುದನ್ನು ಕಾಣಬಹುದು.

ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಕಂದನೇ ಸ್ಥಿತೌ |

ಮಾಧವಃ ಪಾಂಡವಶ್ಚೈವ ದಿವ್ಯೌಶಂಖೌ ಪ್ರದಧ್ಮತುಃ || 1 : 14 ||

ಅರ್ಥ : ಅನಂತರ ಬಿಳಿಯ ಕುದುರೆಗಳನ್ನು ಕಟ್ಟಿದ ಉತ್ತಮವಾದ ರಥದಲ್ಲಿ ಕುಳಿತಿದ್ದ ಶ್ರೀಕೃಷ್ಣ ಮತ್ತು ಅರ್ಜುನ ಇವರಿಬ್ಬರಿಗೂ ತಮ್ಮ ತಮ್ಮ ಶಂಖಗಳನ್ನು ಊದಿದರು.

ಶ್ರೀಕೃಷ್ಣ ಮತ್ತು ಅರ್ಜುನ ಇವರು, ಯುದ್ಧ ಕಹಳೆಗೆ ಪಾಂಡವರ ಪರವಾಗಿ ಉತ್ತರ ಕೊಟ್ಟರೆಂದು ಸಂಜಯನು ಬೇಕೆಂತಲೇ ಹೇಳಿದ್ದಾನೆ. ಶ್ರೀಕೃಷ್ಣನು ಅರ್ಜುನನಿಗೆ ಸಾರಥಿಯಾಗಿ ಯುದ್ಧದಲ್ಲಿ ಸಹಾಯ ಮಾಡಲು ಬಂದಿದ್ದಾನೆಂದೂ, ಶ್ರೀಕೃಷ್ಣನಿದ್ದಲ್ಲಿ ಜಯವು ಸಿದ್ಧವೆಂದೂ ಕುರುಡನಾದ ಧೃತರಾಷ್ಟ್ರನಿಗೆ ಜ್ಞಾಪಕ ಮಾಡಿಕೊಡುವುದಕ್ಕಾಗಿ ಸಂಜಯನು ಈ ರೀತಿ ಹೇಳಿದ್ದಾನೆ .

ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ |

ಪೌಂಡ್ರಂ ದಧ್ಮೌಮಹಾಶಂಖಂ ಭೀಮಕರ್ಮಾ ವೃಕೋದರಃ || 1 : 15 ||

ಅರ್ಥ : ಹೃಷಿಕೇಶ (ಕೃಷ್ಣ)ನು ಪಾಂಚಜನ್ಯವನ್ನೂ, ಅರ್ಜುನನು ದೇವದತ್ತ ಎಂ¨ ಶಂಖವನ್ನೂ, ಭಯಂಕರ ಕರ್ಮಗಳನ್ನೂ ಮಾಡಬಲ್ಲ ಭೀಮನು ಪೌಂಡ್ರ ಎಂಬ ಶಂಖವನ್ನು ಊದಿದರು.

ಸಂಜಯನು ಪಾಂಡವರ ಪಕ್ಷದ ವರ್ಣನೆಯನ್ನು ಮಾಡುವಾಗ ಬೇರೆ ಬೇರೆ ಮಹಾರಥರ ಹೆಸರಿನ ಜೊತೆಗೆ ಅವರ ಶಂಖದ ಹೆಸರನ್ನೂ ಹೇಳಿ ಓದುವುದರಿಂದ ಅವನ ಮಟ್ಟಿಗೆ ಪಾಂಡವರ ಪಕ್ಷಪಾತಿ ಎಂಬುದು ವ್ಯಕ್ತವಾಗುತ್ತದೆ.

ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ |

ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ || 1 : 16 ||

ಅರ್ಥ : ಕುಂತಿಯ ಮಗನಾದ ಯುಧಿಷ್ಠಿರನು ಅನಂತವಿಜಯ ಎಂಬ ಶಂಖವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಊದಿದರು

ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ |

ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ || 1 : 17 ||

ಅರ್ಥ : ಮಹಾಬಿಲ್ಲುಗಾರನಾದ ಕಾಶಿರಾಜ ಮಹಾರಥನಾದ ಶಿಖಂಡಿ ಸೋಲನ್ನು ಅರಿಯದ ಧೃಷ್ಟದ್ಯುಮ್ನ ವಿರಾಟ ಮತ್ತು ಸಾತ್ಯಕೀ ಇವರು.

ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ |

ಸಾಭದ್ರಶ್ಚ ಮಹಾಬಾಹುಃ ಶಂಬಾನ್ ದಧ್ಮುಃ ಪೃಥಕ್ಪೃಥಕ್ || 1 : 18 ||

ಅರ್ಥ : ದ್ರುಪದ, ದ್ರೌಪದಿಯ ಮಕ್ಕಳು, ಮಹಾಬಾಹುವಾದ ಅಭಿಮನ್ಯು ಇವರೆಲ್ಲರೂ, ಎಲೈ ರಾಜನೇ, ತಮ್ಮ ತಮ್ಮ ಶಂಖಗಳನ್ನು ಊದಿದರು.

ಸುಘೋಷೋಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |

ನಭಶ್ಚಪೃಥಿವೀಂ ಚೈವ ತುಮುಲೋ ವ್ಯನುನಾದಯನ್ || 1 : 19 ||

ಅರ್ಥ : ಈ ಶಂಖಗಳ ಶಬ್ದಗಳು ಧೃತರಾಷ್ಟ್ರನ ಮಕ್ಕಳ ಮತ್ತು ಸೈನಿಕರ ಹೃದಯವನ್ನು ಭೇದಿಸಿ ಭೂಮಂಡಲದಲ್ಲೆಲ್ಲಾ ಗರ್ಜಿಸುತ್ತಾ, ಆಕಾಶದಲ್ಲಿ ಪ್ರತಿಧ್ವನಿಯನ್ನುಂಟು ಮಾಡಿತು.

ಸಂಜಯನು, ಪಾಂಡುವರ ಸೇನೆಯನ್ನು ಯುದ್ಧ ಕಹಳೆಯ ಸ್ವೀಕಾರವನ್ನು ವರ್ಣಿಸಿ, ಇದು ಧೃತರಾಷ್ಟ್ರನ ಮಕ್ಕಳ ಮೇಲೆ ಹಾಗೂ ಸೈನ್ಯದ ಮೇಲೆ ಯಾವ ಪರಿಣಾಮವನ್ನುಂಟು ಮಾಡೀತೆಂದು ಹೇಳಿದ್ದಾನೆ. ಧೃತರಾಷ್ಟ್ರನು ಕೊನೆಯ ಘಳಿಗೆಯಲ್ಲಾದರೂ ಯುದ್ಧವನ್ನು ನಿಲ್ಲಿಸಬಹುದೆಂಬ ಆಸೆ ಅವನಿಗಿತ್ತು. ಆದ್ದರಿಂದಲೇ ಹೀಗೆ ಹೇಳಿದ್ದಾನೆ.

ಅಥ ವ್ಯವಸ್ಥಿತಾನ್ ದೃಷ್ಟ್ವಾಧಾರ್ತರಾಷ್ಟ್ರಾನ್ ಕಪಿಧ್ವಜಃ |

ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ || 1 : 20 ||

ಹೃಷೀಕೇಶಂ ತದಾವಾಕ್ಯಮಿದಮಾಹ ಮಹೀಪತೇ |

ಅರ್ಥ : ಧೃತರಾಷ್ಟ್ರನ ಸೈನ್ಯವು ಶಿಸ್ತಿನಿಂದ ಕೋಟೆಕಟ್ಟಿನಿಂತಿರುವುದನ್ನು ನೋಡಿ ಪಾಂಡುವಿನ ಮಗನಾದ, ಕಪಿಧ್ವಜವುಳ್ಳ ಅರ್ಜುನನು, ಎಲೈರಾಜನೇ, ಬಾಣವನ್ನೂ ಹೂಡುವುದಕ್ಕಾಗಿ ತನ್ನ ಕೈಯಲ್ಲಿ ಬಿಲ್ಲನ್ನು ಎತ್ತಿ ಹಿಡಿದುಕೊಂಡು, ಹೃಷೀಕೇಶನಿಗೆ (ಕೃಷ್ಣ) ಈ ರೀತಿ ಹೇಳಿದನು.

ಅರ್ಜುನ ಉವಾಚ

ಸೇನೆಯೋರುಭಯೋರ್ಮಧ್ಯೆ ರಥಂ ಸ್ಥಾಪಯ ಮೇ„ಚ್ಯುತ || 1 : 21 ||

ಯಾವದೇತಾನ್ನಿರೀಕ್ಷೇ„ಹಂ ಯೋದ್ಧುಕಾಮಾನವಸ್ಥಿತಾನ್ |

ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ || 1 : 22 ||

ಅರ್ಜುನನು ಹೇಳುತ್ತಾನೆ

ಅರ್ಥ : ಎಲೈ ಅಚ್ಯುತನೇ, ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು. ಏಕೆಂದರೆ ಯುದ್ಧಮಾಡಲು ಬಂದು ನಿಂತಿರುವ ಶತ್ರುಗಳು ಯಾರ್ಯಾರು ಎಂಬುದನ್ನೂ, ಮತ್ತು ನಾನು ಯಾರೊಡನೆ ಯುದ್ಧ ಮಾಡಬೇಕೆಂದು ನಿರೀಕ್ಷಿಸಿ ನೋಡುತ್ತೇನೆ.

ಇಲ್ಲಿ ಅರ್ಜುನನು ಶತ್ರುಬಲವನ್ನು ತಿಳಿದುಕೊಂಡು, ತಾನು ಎಂತೆಂತಹ ಶೂರರೊಡನೆ ಕಾದಾಡಬೇಕಾಗುತ್ತದೆಂಬುದನ್ನು ತಿಳಿದುಕೊಳ್ಳಲೋಸುಗ, ತನ್ನ ರಥವನ್ನು ಶತ್ರುಗಳ ಮಧ್ಯದಲ್ಲಿ ಒಯ್ದು ನಿಲ್ಲಿಸಬೇಕೆಂದು, ನಿಜವಾದ ವೀರರಂತೆ ಅಪ್ಪಣೆ ಮಾಡಿದ್ದಾನೆ. ಅರ್ಜುನನು ಆಗ ನಿಜವಾಗಿಯೂ ಯುದ್ಧಮಾಡಬೇಕೆಂದು ಉತ್ಸುಕನಾಗಿದ್ದನು. ಯುದ್ಧವನ್ನು ಪ್ರಾರಂಭಿಸಲು ಅವನು ಬಿಲ್ಲನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು, ನಂತರ, ಮುಂಜಾಗ್ರತೆಯ ದೃಷ್ಟಿಯಿಂದ ಮೇಲಿನ ಅಪ್ಪಣೆಯನ್ನು ನೀಡಿದ್ದಾನೆ.

ಯೋತ್ಸ್ಯಮಾನಾನವೇಕ್ಷೇ„ಹಂ ಯ ಏತೇ„ತ್ರ ಸಮಾಗತಾಃ |

ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ || 1 : 23 ||

ಅರ್ಥ : ಧೃತರಾಷ್ಟ್ರನ ಮಗನಾದ ದುರ್ಯೋಧನನನ್ನು ಸಂತುಷ್ಟಗೊಳಿಸುವುದಕ್ಕಾಗಿ ಈ ಯುದ್ಧದಲ್ಲಿ ಒಟ್ಟು ಸೇರಿದ ಶತ್ರುವೀರರನ್ನು ನೋಡಬಯಸುತ್ತೇನೆ.

ಹಿಂದಿನ ಶ್ಲೋಕದಲ್ಲಿ ಹೇಳಿದ ವಿಷಯವನ್ನೇ ಇನ್ನೊಮ್ಮೆ ಹೇಳಿ ಅರ್ಜುನನು ತನ್ನ ಆದೇಶದ ಕಾರಣವನ್ನು ತಿಳಿಸಿದ್ದಾನೆ .

ಸಂಜಯ ಉವಾಚ :

ಏವಮುಕ್ತೋ ಹೃಷಿಕೇಶೋ ಗುಡಾಕೇಶೇನ ಭಾರತ |

ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾರಥೋತ್ತಮಮ್ || 1 : 24 ||

ಅರ್ಥ : ಎಲೈ ಭಾರತನೆ (ಧೃತರಾಷ್ಟ್ರನೇ), ಅರ್ಜುನನ ಈ ಮಾತನ್ನು ಕೇಳಿ ಶ್ರೀಕೃಷ್ಣನು ಎರಡೂ ಸೈನ್ಯಗಳ ಮಧ್ಯದಲ್ಲಿ ಉತ್ತಮವಾದ ರಥವನ್ನು ನಿಲ್ಲಿಸಿ.

ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ |

ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ || 1 : 25 ||

ಅರ್ಥ : ರಥವನ್ನು ನೇರವಾಗಿ ಭೀಷ್ಮ ಹಾಗೂ ದ್ರೋಣಾಚಾರ್ಯರುಗಳ ಮತ್ತು ಇತರೆ ಎಲ್ಲಾ ರಾಜರುಗಳ ಎದುರಿಗೆ ನಿಲ್ಲಿಸಿ, “ಎಲೈ ಪ್ರಾರ್ಥನೆ, ಒಟ್ಟುಗೂಡಿದ ಈ ಎಲ್ಲಾ ಕುರುಸೈನ್ಯವನ್ನು ನೋಡು.” ಎಂದು ಹೇಳಿದರು.

ಹೃಷಿಕೇಶ – ಹೃಷೀಕ + ಈಶ ಇಂದ್ರಿಯಗಳ ಒಡೆಯನು. ಎಂದರೆ ಇಂದ್ರಿಯಗಳನ್ನು ಗೆದ್ದವನು. ಶ್ರೀಕೃಷ್ಣನು ಇಂದ್ರಿಯಗಳನ್ನು ಗೆದ್ದಿರುವುದರಿಂದ ಅವನಿಗೆ ಹೃಷಿಕೇಶ ಎಂಬ ಹೆಸರು ಬಂದಿದೆ. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನು. ಅಥವಾ ಗುಡಾಕ್ + ಈಶ ಅಂದರೆ ತಲೆಯ ಕೂದಲನ್ನು ಗಾಳಿಗೆ ಹಾರದಂತೆ ನೆತ್ತಿಯ ಮಧ್ಯದಲ್ಲಿ ಗಂಟು ಕಟ್ಟಿಕೊಂಡವನು – ಅರ್ಜುನನ

ತತ್ರಾಪಶ್ಯತ್ಸ್ಥಿತಾನ್ ಪಾರ್ಥಃ ಪಿತೃನಥ ಪಿತಾಮಹಾನ್ |

ಆಚಾರ್ಯಾನ್ಮಾತುಲಾನ್ ಭ್ರಾತ್ವನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ || 1 : 26 ||

ಅರ್ಥ : ಅಲ್ಲಿ ಅರ್ಜುನನು ತನ್ನ ತಂದೆಗೆ ಸಮಾನರಾದ ಚಿಕ್ಕಪ್ಪ ದೊಡ್ಡಪ್ಪಂದಿರು, ಅಜ್ಜಂದಿರು, ಮುತ್ತಜ್ಜಂದಿರು, ಗುರುಗಳು, ಸೋದರ ಮಾವಂದಿರು, ಸೋದರರು, ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು

ಶ್ವಶುರಾನ್ ಸುಹೃದಶ್ಚ್ಯೆವ ಸೇನಯೋರುಭಯೋರಪಿ ||

ತಾನ್ ಸಮೀಕ್ಷ್ಯಸ ಕೌಂತೇಯಃ ಸರ್ವಾಂನ್ಬಂಧೂನವಸ್ಥಿತಾನ್ || 1 :27 ||

ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ |

ಅರ್ಥ : ಮಾವಂದಿರು ಮತ್ತು ಸ್ನೇಹಿತರು ಇವರನ್ನು ಎರಡೂ ಸೈನ್ಯಗಳಲ್ಲಿಯೂ ಕಂಡನು. ಆಗ ಕುಂತಿಯ ಮಗನಾದ ಅರ್ಜುನನು ತನ್ನ ಎಲ್ಲಾ ಸಂಬಂಧಿಕರೂ ಯುದ್ಧಕ್ಕಾಗಿ ಬಂದು ನಿಂತಿರುವುದನ್ನು ನೋಡಿ, ದುಃಖ ಹಾಗೂ ಕನಿಕರದಿಂದ ಕೂಡಿದವನಾಗಿ ಈ ರೀತಿಯಾಗಿ ಹೇಳಿದನು .

ತನ್ನ ಹಾಗೂ ಶತ್ರುಗಳ ಸೇನೆಯಲ್ಲಿ ತನ್ನ ವಿವಿಧ ಸಂಬಂಧಿಕರು, ಹಾಗೂ ಸ್ನೇಹಿತರೇ ಇರುವುದನ್ನು ಮೊದಲ ಬಾರಿಗೆ ಕಂಡು, ಅರ್ಜುನನು ದುಃಖ ಹಾಗೂ ಕನಿಕರದಿಂದ ಆವರಿತನಾದನು. ಯುದ್ಧದಿಂದ ಆಗುವ ಮಾರಣ ಹೋಮ ಮತ್ತು ಜನಹತ್ಯೆಯನ್ನು ಈಗ ಅವನು ಪ್ರಾಯಶಃ ಮನಗಂಡನು. ಇದುವರೆವಿಗೆ ಅವನಿಗೆ ಆ ವಿಚಾರವು ಸಹ ಮನಸ್ಸಿನಲ್ಲಿ ಬಂದಿರಲಿಲ್ಲ. ಕೇವಲ ತಮಗಾಗಿ ಹಾಗೂ ದುರ್ಯೋಧನನಿಗಾಗಿ ಇಡೀ ಸಮಾಜವು, ಎಲ್ಲಾ ಜನತೆಯು ತಮ್ಮ ಪ್ರಾಣವನ್ನು ಅರ್ಪಿಸಲು ತಯಾರಾಗಿರುವುದನ್ನು ಆತನು ಮನಗಂಡನು. ಹೀಗಾಗಿ ಅವನು ದುಃಖದಿಂದ ಉದ್ವಿಗ್ನನಾಗಿದ್ದಾನೆ.

ಅರ್ಜುನನಿಗೆ ಈಗ ಉಂಟಾಗುವ ಕನಿಕರ ಹಾಗೂ ದುಃಖವು ಅವನ ಸ್ವಭಾವಕ್ಕೆ ಅನುಗುಣವಾದದ್ದಲ್ಲ. ಅವನ ಮಾನಸಿಕ ಉದ್ವಿಗ್ನತೆ ಹಾಗೂ ಅಲ್ಲೋಲಕಲ್ಲೋಲತೆಯಿಂದಾಗಿ ಅವನಲ್ಲ ಈ ರೀತಿಯ ಕನಿಕರವೂ, ದುಃಖವೂ ಉಂಟಾಗಿದೆ. ಈ ಮನಸಿನ ದುರ್ಬಲತೆಯು ಸಾಮಾನ್ಯವಾದದ್ದಾಗಿರದೆ, ಅದು ‘ಮೋಹ’ ‘ಭ್ರಮೆ’ ಎಂಬ ಮಾನಸಿಕ ರೋಗದ ರೂಪವನ್ನು ತಾಳಿತ್ತು. ವಸ್ತುಸ್ಥಿತಿಯನ್ನು, ಇದ್ದುದನ್ನು ಇದ್ದಂತೆ ತಿಳಿಯದೆ ಬೇರೆ ಯಾವುದೋ ಒಂದು ವಿಧವಾಗಿರುವಂತೆ ಊಹಿಸುವುದಕ್ಕೆ ‘ಮೋಹ’ ಅಥವಾ ‘ಭ್ರಮೆ’ ಎಂದು ಹೆಸರು.

ಗೀತೋಪದೇಶದ ಕೊನೆಯಲ್ಲಿ, ಅಂದರೆ ಈ ಉಪದೇಶದ ಮುಖಾಂತರ ಕೃಷ್ಣನು ಮಾಡಿದ ಮಾನಸಿಕ ಚಿಕಿತ್ಸೆಯ ನಂತರ, ‘ನನ್ನ ಮೋಹವು ನಷ್ಟವಾಯಿತು’ ಎಂದು ಅರ್ಜುನನೇ ಹೇಳಿರುವುದನ್ನು ಕಾಣಬಹುದು.

ಅರ್ಜುನ ಉವಾಚ

ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ || 1 : 28 ||

ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ |

ವೇಪಥುಶ್ಚ ಶರೀರೇ ಮೇ ರೋವiಹರ್ಷಶ್ಚ ಜಾಯತೇ || 1 : 29 ||

ಅರ್ಜುನನು ಹೇಳುತ್ತಾನೆ

ಅರ್ಥ: ನನ್ನ ಈ ಜನರು ಯುದ್ಧ ಮಾಡಲು ಬಂದಿರುವುದನ್ನೂ ನೋಡಿ, ಎಲೈ ಕೃಷ್ಣನೇ, ನನ್ನ ಕೈಕಾಲುಗಳು ಕಳಚಿ ಬೀಳೂತ್ತವೆ. ನನ್ನ ನಾಲಿಗೆಯು ಒಣಗುತ್ತಿದೆ. ನನ್ನ ಶರೀರವು ನಡಗುತ್ತಿದೆ, ಮೈಮೇಲೆಲ್ಲಾ ರೋಮಾಂಚನವಾಗುತ್ತಿದೆ.

ಈ ಎಲ್ಲಾ ಲಕ್ಷಣಗಳು ಅರ್ಜುನನ ರೋಗದ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ .

ಗಾಂಡೀವಂ ಸ್ರಂಸತೇ ಹಸ್ತಾತ್ತ್ವಕ್ಚ್ಯೆವ ಪರಿದಹ್ಯತೇ |

ನ ಚ ಶಕ್ನೋಮ್ಯವಸ್ಥಾತುಂ ಭ್ರುಮತೀವ ಚ ಮೇ ಮನಃ || 1 : 30 ||

ಅರ್ಥ : ಗಾಂಡೀವವು ಕೈಯಿಂದ ಜಾರಿ ಬೀಳುತ್ತಿದೆ. ನನ್ನ ಅಂಗಾಂಗಗಳಲ್ಲೆಲ್ಲಾ ಉರಿಯುವಂತಾಗಿದೆ. ನನಗೆ ಸ್ಥಿರವಾಗಿ ನಿಂತುಕೊಳ್ಳಲು ಸಹ ಸಾಧ್ಯವಿಲ್ಲವಾಗಿದೆ. ನನ್ನ ಮನಸ್ಸು ಚಂಚಲವಾಗಿದೆ (ಭ್ರಮಿಷ್ಟವಾಗಿದೆ) .

ಅರ್ಜುನನು ತನ್ನ ಇತರೆ ಲಕ್ಷಣಗಳನ್ನು ವರ್ಣಿಸಿದ್ದಾನೆ. ಅವನೆಲ್ಲ ಕೇವಲ ಮಾನಸಿಕ ಭ್ರಮೆಯಷ್ಟೋ ಅಲ್ಲದೆ ನೈತಿಕ ಅಧೋಗತಿಯು ಸಹ ಕಾಣುತ್ತಿದೆ. ಅವನಲ್ಲಿಯ ವಿವೇಕ ಹಾಗೂ ವಿಚಾರ ಶಕ್ತಿಯು ಸಂಪೂರ್ಣ ನಷ್ಟವಾಗಿ ಮನಸ್ಸು ಭ್ರಮಿಸಿದೆ.

ನಿಮಿತ್ತಾನಿ ಚ ಪಶ್ಯಾನಿ ವಿಪರೀತಾನಿ ಕೇಶವ |

ನ ಚ ಶ್ರೇಯೋ„ನುಪಶ್ಯಾಮಿ ಹತ್ವಾಸ್ವಜನಮಾಹವೇ || 1 :31 ||

ಅರ್ಥ : ಎಲೈ ಕೇಶವನೆ, ನಾನು ಅಪಶಕುನಗಳನ್ನು ಕಾಣುತ್ತಿದ್ದೇನೆ. ಯುದ್ಧದಲ್ಲಿ ಸ್ವಜನರನ್ನು ಕೊಲ್ಲುವುದರಿಂದ್ ನಮಗೇನು ಶ್ರೇಯಸ್ಸುಂಟಾಗುತ್ತದೆಯೋ ತಿಳಿಯಲಾರದವನಾಗಿದ್ದೇನೆ.

ಅರ್ಜುನನ ಭ್ರಮಿಸಿದ ಮನಸ್ಸು ಅವನನ್ನು ಹೇಗೆ ಯುದ್ಧದಿಂದ ಹೆಮ್ಮೆಟ್ಟಿಸಬೇಕೆಂದಿದೆ ಎಂಬುದು ಅವನ ಮಾತಿನಿಂದಲೇ ತಿಳಿಯುತ್ತದೆ.

ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ |

ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ || 1: 32 ||

ಅರ್ಥ : ಕೃಷ್ಣಾ, ನನಗೆ ವಿಜಯವೂ ಬೇಡ, ರಾಜ್ಯವೂ ಬೇಡ, ಸುಖವೂ ಬೇಡ. ನಮಗೆ ರಾಜ್ಯದಿಂದ, ಭೋಗಗಳಿಂದ ಇಲ್ಲದೆ ಸುಖಗಳಿಂದ ಆಗಬೇಕಾದುದೇನು ?

ರಾಜ್ಯ, ಸುಖ, ಭೋಗಗಳು ಏಕೆ ಬೇಡವೆಂದು ಮುಂದಿನ ಶ್ಲೋಕದಲ್ಲಿ ಅರ್ಜುನನೇ ಹೇಳಿದ್ದಾನೆ.

ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ |

ತ ಇಮೇ„ವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾಧನಾನಿ ಚ || 1 : 33 ||

ಅರ್ಥ : ಯಾರ ಸುಖಕ್ಕಾಗಿ ನಾವು ಈ ರಾಜ್ಯ, ಭೋಗ ಮತ್ತು ಸುಖಗಳನ್ನು ಅಪೇಕ್ಷಿಸಿದ್ದೇವೆಯೋ, ಅವರೇನೇ ತಮ್ಮ ಧನವನ್ನೂ, ಪ್ರಾಣವನ್ನೂ ತ್ಯಜಿಸಿ ಯುದ್ಧಕ್ಕೆ ತಯಾರಾಗಿ ಬಂದು ನಿಂತಿದ್ದಾರೆ.

ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ |

ಮಾತುಲಾ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ || 1 : 34 ||

ಅರ್ಥ : ಗುರುಗಳು, ಚಿಕ್ಕಪ್ಪ, ದೊಡ್ಡಪ್ಪಂದಿರು, ಮಕ್ಕಳು, ಅಜ್ಜಂದಿರು, ಸೋದರ ಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವಮೈದುನಂದಿರು, ಇವರೇ ಯುದ್ಧಕ್ಕೆ ಸನ್ನದ್ಧರಾಗಿ ಬಂದಿದ್ದಾರೆ .

ಅಧರ್ಮವನ್ನು ನಾಶಮಾಡಿ, ಧರ್ಮವನ್ನು ಸ್ತಾಪಿಸಬೇಕೆಂಬ ಉಚ್ಛ ಧ್ಯೇಯವನ್ನಿಟ್ಟೂಕೊಂಡು ಯುದ್ಧಮಾಡಲು ಸಿದ್ಧವಾಗಿದ್ದ ಅರ್ಜುನನು, ಈಗ ತನಗೆ ಉಂಟಾದ ಮಾನಸಿಕ ರೋಗದಿಂದಾಗಿ, ಅರ್ಜುನ ಧರ್ಮ-ಅಧರ್ಮದ ವಿಚಾರವನ್ನು ಮರೆತು. ತಾನು ಯುದ್ಧದಿಂದ ಹಿಂದಕ್ಕೆ ಸರಿಯಬೇಕೆಂಬುದಕ್ಕೆ, ಅನುಗುಣವಾದ ತರ್ಕವನ್ನು ಮುಂದುಮಾಡುತ್ತಾ, ತನ್ನ ಅತೀ ಹತ್ತಿರದ ರಕ್ತಸಂಬಂಧಿಕರೇ ಯುದ್ಧಕ್ಕೆ ಬಂದಿದ್ದಾರೆ ಎಂಬ ಮಾತನ್ನು ಪ್ರಾರಂಭಿಸಿದ್ದಾನೆ. ಅರ್ಜುನನ ವಾದವನ್ನು ಕೇಳುತ್ತಿದ್ದ ಶ್ರೀಕೃಷ್ಣನು ಅದನ್ನು ಸಮರ್ಥಿಸದೆ, ಮುಗುಳುನಗೆ ನಗುತ್ತಾ ಇನ್ನೂ ಮೌನವಾಗಿಯೇ ಇದ್ದುದರಿಂದ ಅವನನ್ನು ಏನಾದರೂ ಮಾಡಿ ಒಪ್ಪಿಸಬೇಕು. ಅರ್ಜುನನು ಅದೇವಾದವನ್ನು ಇನ್ನೂ ಮುಂದುವರಿಸುತ್ತಾನೆ.

ಏತಾನ್ನ ಹಂತುಮಿಚ್ಛಾಮಿ ಘ್ನತೋ„ಪಿ ಮಧುಸೂದನ |

ಅಪಿ ತ್ರೈಲೋಕ್ಯರಾಜ್ಯಸ್ಯ ಹತೋಃ ಕಿಂ ನು ಮಹೀಕೃತೇ || 1 : 35 ||

ಅರ್ಥ: ಎಲೈ ಮಧುಸೂದನನೇ, ಅವರೇ ಮೇಲೆ ಬಿದ್ದು ನನ್ನನ್ನು ಕೊಂದಾಗ್ಯೂ ನಾನು ಮಾತ್ರ ಅವರನ್ನು ಕೊಲ್ಲುವುದಿಲ್ಲ. ಮೂರು ಲೋಕದ ಒಡೆತನ ಸಿಗುವುದಾದಾಗ್ಯೂ ಸಹ, ನಾನು ಅವರನ್ನ ಕೊಲ್ಲಲಾರೆನು. ಇನ್ನೂ ಭೂಮಿಯ ಒಡೆತನದ ಮಾತೇನು ?

ಶ್ರೀಕೃಷ್ಣನು ಇನ್ನೂ ಮೌನವಾಗಿರುವುದನ್ನೂ ಕಂಡು, ಅವನು ತನ್ನ ತರ್ಕ ಸರಣಿಯನ್ನು ಒಪ್ಪಿದ್ದಾನೆಂದು ಊಹಿಸಿ ತಾನಾಗಿಯೇ ತನ್ನ ತೀರ್ಮಾನವನ್ನು ಹೇಳಿದ್ದಾನೆ. “ಈ ಕ್ಷುಲ್ಲಕವಾದ ಹಸ್ತನಾಪುರದ ಒಡೆತನವಿರಲಿ, ನನಗೆ ಮೂರು ಲೋಕದ ಒಡೆತನವು ಸಿಗುವುದಾದರೂ ಸಹ, ಈ ಕ್ಷುಲ್ಲಕವಾದ, ವೈಯುಕ್ತಿಕ ಲಾಭಕ್ಕಾಗಿ ತನ್ನ ಸಂಬಂಧಿಕರನ್ನು ಕೊಲ್ಲಲಾರೆನು” ಎಂದು ಹೇಳಿ ತನ್ನ ಉದಾರ ತನವನ್ನು ವ್ಯಕ್ತಪಡಿಸಿ, ತನ್ಮೂಲಕ ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ .

ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ |

ಪಾಪಮೇವಾಶ್ರಯೇದಾಸ್ಮಾನ್ ಹತ್ವೈತಾನಾತತಾಯಿನಃ || 1 : 36 ||

ಅರ್ಥ: ಜನಾರ್ಧನನೇ, ಈ ಧೃತರಾಷ್ಟ್ರನ ಮಕ್ಕಳನ್ನು ಕೊಲ್ಲುವುದರಿಂದ ನಮಗಾಗುವ ಸಂತೋಷವಾದರೂ ಏನು? ಈ ಆತ ತಾಯಿಗಳನ್ನು ಕೊಲ್ಲುವುದರಿಂದ ನಮಗೆ ಪಾಪವೇ ಲಭಿಸೀತು.

ಶ್ರೀಕೃಷ್ಣನ ಮೌನದಿಂದ ಉತ್ತೇಜನಗೊಂಡ ಅರ್ಜುನನು ತನ್ನ ವಾದವನ್ನು ಅದೇ ಸರಣಿಯಲ್ಲಿ ಇನ್ನೂ ಮುಂದುವರಿಸಿದ್ದಾನೆ. ಧೃತರಾಷ್ಟ್ರನ ಮಕ್ಕಳನ್ನು ಕೊಲ್ಲುವುದರಿಂದ ತಮಗಾವ ಪ್ರೀತಿಯೂ ಆಗುವುದಿಲ್ಲವೆಂದು ಹೇಳಿದಾಗ್ಯೂ ಕೃಷ್ಣನು ಮೌನವಾಗಿದ್ದನು. ಅದರ ಕಾರಣವನ್ನು ಹುಡುಕುತ್ತಾ ಕೌರವರು ‘ಆತತಾಯಿಗಳು ಎಂಬುದು ಅರ್ಜುನನಿಗೆ ಜ್ಞಾಪಕವಾಯಿತು. ( ಮನೆಗೆ ಬೆಂಕಿ ಹಚ್ಚಿ ಸುಡುವವನು, ವಿಷ ಹಾಕಿ ಕೊಲ್ಲುವವನು, ಶಸ್ತ್ರವಿಲ್ಲದವನ ಮೇಲೆ ಶಸ್ತ್ರಯುಕ್ತನಾಗಿ ಆಕ್ರಮಣ ಮಾಡಿ ಕೊಲ್ಲುವವನು, ಬೇರೊಬ್ಬರ ಧನ, ಭೀಮಿ, ಸ್ತ್ರೀ ಇವರನ್ನು ಅಪಹರಿಸುವವನು ಇವರಿಗೆ ‘ಆತ ತಾಯಿಗಳು’ ಎಂದು ಹೆಸರು) ಈ ತರಹದ ಅಪರಾಧವನ್ನು ಮಾಡಿದವನು ಗುರುವೇ ಇರಲಿ, ವೃದ್ಧನೇ ಆಗಿರಲಿ, ವೇದವನ್ನು ತಿಳಿದ ಬ್ರಾಹ್ಮಣನೇ ಆಗಿರಲಿ, ಅವನನ್ನು ಕಂಡ ಕೂಡಲೆ ಕೊಲ್ಲಬೇಕೆಂದು ‘ಮನು’ ಹೇಳಿದ್ದಾನೆ. ಕೌರವರು ಈ ಎಲ್ಲಾ ತರಹದ ಪಾಪಗಳನ್ನೂ ಮಾಡಿದ್ದಾರೆ. ಅರ್ಜುನನು ಇದನ್ನೇ ಹಿಡಿದುಕೊಂಡು, ಇದರ ಜೊತೆಗೆ ‘ಅಹಿಂಸೆ’ ಯನ್ನು ಜೋಡಿಸಿ, ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇವರನ್ನು ಕೊಲ್ಲುವುದರಿಂದ ‘ನಮಗೆ ಪಾಪವೇ ಬರುತ್ತದೆ’ ಎಂದು ಅವನು ಅನ್ನುತ್ತಾನೆ. ಅರ್ಜುನನು ಮಾನಸಿಕ ಭ್ರಮೆಯನ್ನು ಕಂಡು ಕೃಷ್ಣನು ಮನಸ್ಸಿನಲ್ಲಿಯೇ ನಗುತ್ತಾ ಅವನು ತನ್ನ ಮನಸ್ಸಿನಲ್ಲಿರ್ವುದನ್ನೆಲ್ಲ ಹೇಳಿ ಮುಗಿಸಲೆಂದು ಇನ್ನೂ ಮೌನವಾಗಿಯೇ ಉಳಿದಿದ್ದಾನೆ.

ತಸ್ಮಾನಾರ್ಹಾ ವಯಂ ಹಂತುಂ ದಾರ್ತರಾಷ್ಟ್ರಾನ್ ಸ್ವಭಾಂಧವಾನ್ |

ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ || 1 : 37 ||

ಅರ್ಥ : ಆದ್ದರಿಂದ ನಾವು ಧೃತರಾಷ್ಟ್ರನ ಮಕ್ಕಳನ್ನು ಕೊಲ್ಲಬಾರದು. ನಮ್ಮ ಸಂಬಂಧಿಕರನ್ನೇ (ಸ್ವಜನರನ್ನೇ) ಕೊಂದಮೇಲೆ ನಾವು, ಮಾಧವಾ, ಹೇಗೆ ತಾನೇ ಸುಖದಿಂದಿರುವುದು.

ತನ್ನ ತಪ್ಪು ತಿಳಿವಳಿಕೆಯಿಂದ ಕೂಡಿದ ವಾದದಿಂದ ತಾನೇ ತೃಪ್ತಿಪಟ್ಟವನಂತೆ ಅರ್ಜುನನು ವರ್ತಿಸುತ್ತಿದ್ದಾನೆ. ಈ ಶ್ಲೋಕದಲ್ಲಿ ತನ್ನ ತೀರ್ಮಾನವನ್ನು ಸಮರ್ಥಿಸುವ ವಾದವಿದೆ. ಆದಾಗ್ಯೂ ಶ್ರೀಕೃಷ್ಣನು ಮೌನವಾಗಿದ್ದಾನೆ.

ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ |

ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ || 1 : 38 ||

ಅರ್ಥ : ಅತ್ಯಾಶೆಯಿಂದ ಬುದ್ಧಿಮಾಂದ್ಯರಾದ ಇವರು, ಸಮಾಜದಲ್ಲಿ ಕುಲನಾಶವಾಗುವುದರಿಂದ ಉಂಟಾಗುವ ಹಾನಿಯನ್ನೂ, ಮಿತ್ರದ್ರೋಹದಿಂದ ಉತ್ಪನ್ನವಾಗುವ ಪಾಪವನ್ನೂ ತಿಳಿಯದೆ ಇದ್ದಾಗ್ಯೂ

ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ |

ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ || 1: 39 ||

ಅರ್ಥ : ಎಲೈ ಜನಾರ್ಧನನೇ, ಕುಲಕ್ಷಯ ಮತ್ತು ಮಿತ್ರದ್ರೋಹದಿಂದ ಉಂಟಾಗುವ ಹಾನಿಯನ್ನು ತಿಳಿದ ನಾವು, ಅಂತಹ ಪಾಪಕರ್ಮದಿಂದ ಏಕೆ ಹಿಂದೆ ಸರಿಯಬಾರದು ?

ಕೃಷ್ಣನು ಮೌನವಾಗಿಯೇ ಇದ್ದುದರಿಂದ ಅರ್ಜುನನು ಅದೇ ಧಾಟಿಯಲ್ಲಿ ತನ್ನ ವಾದವನ್ನು ಮುಂದುವರಿಸಿದ್ದಾನೆ. ಕೌರವರು ಸ್ವಾರ್ಥಪರರಾಗಿ ಇಂತಹ ಹೀನವಾದ ಹಿಂಸಾಕೃತ್ಯಕ್ಕೆ ಇಳಿದಿದ್ದಾರೆಂಬುದೂ ಅದರಿಂದ ಸಮಾಜದಲ್ಲಿ ಅನರ್ಥವಾಗುತ್ತವೆಂಬುದೂ ಶತಃಸಿದ್ಧವಾದುದು. ಅವರು ಸರಿಯಾದ ಜ್ಞಾನವಿಲ್ಲದೆ ಇಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ತಿಳಿದ ವಿವೇಕಿಗಳಾದ ನಾವು ಸಹ ಅವರಂತೆಯೇ ಹೀನಕಾರ್ಯಕ್ಕಿಳಿಯಬಾರದು. ಹಿಂಸೆಗೆ ಆಸ್ಪದ ಕೊಟ್ಟು ಸಮಾಜ ನಾಶಕ್ಕೆ ಕಾರಣವಾಗಬಾರದು. ಅವರು ಏನೇ ಮಾಡಿದರೂ ನಾವು ಸುಮ್ಮನಿರಬೇಕು. ಮೌನವಾಗಿ ಸಹಿಸಿಕೊಳ್ಳಬೇಕು” ಎಂಬುದು ಅರ್ಜುನನ ವಾದ (ಈ ವಾದವು ಎಷ್ಟು ತಪ್ಪಾದುದೆಂಬುದನ್ನೂ, ಅನ್ಯಾಯವನ್ನೂ ತೀವ್ರವಾಗಿ ಪ್ರತಿಭಟಿಸಲೇಬೇಕೆಂಬುದನ್ನೂ ಮುಂದೆ ಗೀತೆಯ ಉಪದೇಶದಲ್ಲಿ ಕಾಣುತ್ತವೆ.)

ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ |

ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋ„ಭಿಭಮತ್ಯುತ || 1 : 40 ||

ಅರ್ಥ : ಕುಲವು ನಾಶವಾದರೆ ಆ ಕುಲದಲ್ಲಿ ತಲೆತಲಾಂತರದಿಂದ ನಡೆದು ಬಂದ ಕುಲಧರ್ಮಗಳು ನಾಶವಾಗುತ್ತವೆ. ಹೀಗೆ ಧರ್ಮವು ನಾಶವಾದ ಮೇಲೆ ಆ ಕುಲದಲ್ಲಿ ಅಧರ್ಮವು ತಾಂಡವವಾಡುತ್ತದೆ.

ಅರ್ಜುನನು ಹೊಸ ಸ್ಪೂರ್ತಿಯಿಂದ ತನ್ನ ವಾದದಲ್ಲಿ ಇನ್ನೊಂದು ಹೊಸ ಅಂಶವನ್ನು ಜೋಡಿಸಿದ್ದಾನೆ. ಪ್ರತಿಯೊಂದು ಮನೆತನದಲ್ಲೂ ಸಂಸ್ಕೃತಿ ಹಾಗೂ ಬೌದ್ಧಿಕ ವಿಕಾಸಕ್ಕೆ ಸಂಬಂಧಪಟ್ಟಂತೆ ವಿಶಿಷ್ಟ ಕುಲಾಚಾರಗಳೂ, ಧಾರ್ಮಿಕ ನಡತೆಗಳೂ, ತಲೆತಲಾಂತರದಿಂದ ನಡೆದು ಬಂದಿರುತ್ತವೆ. ಕುಲವು ನಷ್ಟವಾದರೆ, ಈ ವಿವರಗಳನ್ನು ಪ್ರತ್ಯಕ್ಷವಾಗಿ ತಿಳಿಸಬಲ್ಲ ಹಿರಿಯರು ಇಲ್ಲವಾಗುವುದರಿಂದ ಕಿರಿಯರು ಅವುಗಳನ್ನು ತಿಳಿಯಲಾರದೆ, ಅಂದರೆ ತಲೆಮಾರುಗಳಿಂದ ನಡೆದುಬಂದ್ ಜೀವನ ವಿಕಾಸದ ವಿಧಿನಿಯಮಗಳನ್ನು ತಿಳಿಯಲಾರದೆ ತಮ್ಮ ಇಷ್ಟಬಂದಂತೆ ವರ್ತಿಸುವುದರಿಂದ ಆ ಕುಲಕ್ಕೆ ಸಂಬಂಧಪಟ್ಟ ಧಾರ್ಮಿಕ ಆಚರಣೆಗಳಲ್ಲಿ ಲೋಪವುಂಟಾಗುತ್ತದೆ. ಹೀಗೆ ಧರ್ಮಭ್ರಷ್ಟತೆ ಪ್ರಾಪ್ತಿಯಾಗುತ್ತದೆ.

ಅಧರ್ಮಾಭಿಭವಾತ್‍ಕೃಷ್ಣ್ ಪ್ರದುಷ್ಯಂತಿ ಕುಲಸ್ತ್ರಿಯಃ |

ಸ್ತ್ರೀಷು ದುಷ್ಟಾಸು ವಾಷ್ರ್ಣೇಯ ಜಾಯತೇ ವರ್ಣಸಂಕರಃ || 1: 41 ||

ಅರ್ಥ : ಅಧರ್ಮದಿಂದ, ಕೃಷ್ಣನೇ, ಆ ಕುಲದ ಸ್ತ್ರೀಯರು ನೀತಿ ಭ್ರಷ್ಟರಾಗುತ್ತಾರೆ. ಅನೀತಿಯಿಂದ ವರ್ಣಸಂಕರವಾಗುತ್ತದೆ. (ಎರಡು ಜಾತಿಯ ಗಂಡು ಹೆಣ್ಣುಗಳಲ್ಲಿ ವಿವಾಹವಾಗುವುದರಿಂದ ತನ್ಮೂಲಕ ವರ್ಣಸಂಕರವಾಗುತ್ತದೆ)

ತನ್ನ ವಾದವನ್ನು ಮುಂದುವರೆಸುತ್ತಾ ಇನ್ನೂ ಏನಾಗುತ್ತದೆಂಬುದನ್ನು ಅರ್ಜುನನು ವರ್ಣಿಸಿದ್ದಾನೆ. ಜನರಲ್ಲಿ ನೀತಿಯು ಇಲ್ಲವಾಯಿತೆಂದರೆ ಸಮಾಜದಲ್ಲಿ ಗಂಡು ಹೆಣ್ಣುಗಳು ಒಟ್ಟೊಟ್ಟಾಗಿ ವ್ಯವಹರಿಸಲು ಪ್ರಾರಂಭಿಸುತ್ತಾರೆ. ಅವರು ಕ್ರಮೇಣ ಆಕರ್ಷಿತರಾಗಿ ಒಟ್ಟುಗೂಡುವುದರಿಂದ ಪ್ರತಿಯೊಂದು ಜಾತಿಯಲ್ಲಿದ್ದ ಮಾನಸಿಕ ಹಾಗೂ ಬೌದ್ಧಿಕ ಪವಿತ್ರತೆ. ಶ್ರೇಷ್ಠತೆ, ಕುಶಲತೆಗಳು ಇಲ್ಲವಾಗಿ ಮಿಶ್ರಜಾತಿಯ ಸಂತಾನವುತ್ಪನ್ನವಾಗುತ್ತದೆ. ಹೀಗಾಗಿ ಅವರಿಗೆ ತಮ್ಮ ಮೂಲಕುಲದ ಶ್ರೇಷ್ಠ ಆಚಾರ ವಿಚಾರಗಳು ತಿಳಿಯದೆ ಸಮಾಜದ ಅವನತಿ ಪ್ರಾರಂಭವಾಗುತ್ತದೆ.

ಜಾತಿ ಎಂದರೆ ಆಧುನಿಕ ಯುಗದ ಕಲ್ಪನೆಯ ಜಾತಿಯಲ್ಲ ಮುಂದೆ ಶ್ರೀಕೃಷ್ಣನೇ ಹೇಳುವಂತೆ ಜನರ ಶಾರೀರಿಕ, ಮಾನಸಿಕ, ಬೌದ್ಧಿಕ ಯೋಗ್ಯತೆ ಹಾಗೂ ಅವರು ಮಾಡುವ ಕರ್ಮ ಇವುಗಳಿಗನುಸಾರವಾಗಿ ಜಾತಿಯ ವಿಂಗಡನೆಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ನಮ ಈಗಿನ ಸಮಾಜದಲ್ಲಿ ಸಹ ಬೌದ್ಧಿಕ ವ್ಯವಸಾಯಗಳು, ವೈದ್ಯರು, ವಕೀಲರು, ಉಪಾಧ್ಯಾಯರು, ಕವಿಗಳು ಇತ್ಯಾದಿ) ರಾಜಕೀಯ ಮುಖಂಡರು, ವ್ಯಾಪಾರಿಗಳು ಮತ್ತು ಕೂಲಿಕಾರರು ಎಂಬ ಕರ್ಮಕ್ಕನುಗುಣವಾದ ಜಾತಿಭೇದಗಳಿರುವುದನ್ನು ಕಾಣಬಹುದು. ಪ್ರತಿಯೊಂದು ಧಂಧೆಯವರಲ್ಲಿಯೂ ಆಯಾಯಾ ಧಂಧೆಗೆ ಸಂಬಂಧಪಟ್ಟ ಒಳಗುಟ್ಟುಗಳು ತಲೆತಲಾಂತರದಿಂದ ಅವರು ಸಂಸಾರದಲ್ಲೂ ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಜಾತಿ ಸಂಕರವಾದರೆ ಈ ಕರಕೌಶಲ್ಯ ಅಥವಾ ಗುಟ್ಟುನಾಶವಾಗುತ್ತದೆ

ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ |

ಪಸಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ || 1 : 42 ||

ಅರ್ಥ : ಹೀಗೆ ಜಾತಿ ಸಂಕರವನ್ನುಂಟು ಮಾಡಿದ ಕುಲಪಾತಕರು ನರಕದಲ್ಲಿ ಬೀಳುತ್ತಾರೆ ಏಕೆಂದರೆ ಅವರು ತಮ್ಮ ಪಿತೃಗಳಿಗೆ ಪಿಂಡಗಳನ್ನಾಗಲೀ, ತರ್ಪಣಗಳನ್ನಾಗಲೀ ಕೊಡುವುದಿಲ್ಲ.

ಮನುಷ್ಯನು ಸತ್ತನಂತರ ಅವನ ಹತ್ತಿರದ ಸಂಬಂಧಿಕರು ಅವನ ಉತ್ತರ ಕ್ರಿಯೆಗಳನ್ನು ಮಾಡಿ ಶ್ರಾದ್ಧವನ್ನು ಮಾಡುತ್ತಾರೆ. ಈ ಕರ್ಮದಲ್ಲಿ , ಪಿತೃಗಳಿಗೆ ‘ಶಾಂತಿ’ ಸಿಗಲೆಂದು ಪಿಂಡ’ ಹಾಕುವ ಹಾಗು ‘ತರ್ಪಣ’ಗಳನ್ನು ಕೊಡುವ ಪದ್ಧತಿ ಇದೆ. ಜಾತಿ ಸಂಕರವಾದರೆ ಶ್ರಾದ್ಧವನ್ನು ಮಾಡುವ ಅರ್ಹತೆಯು ತಪ್ಪುತ್ತದೆ.

ಇಲ್ಲಿ ಶ್ರಾದ್ಧ ಮಾಡುವುದೆಂದರೆ ಕೆಲವು ನಿರ್ದಿಷ್ಟ ಕಾಲದಲ್ಲಿ ಪಿಂಡವನ್ನೂ ಹಾಕುವುದು ಎಂದು ತಿಳಿದರೆ ಅದರ ಭಾವವನ್ನು ನಾಶಮಾಡಿದಂತಾಗುತ್ತದೆ. ತಾವು ಇರುವವರೆಗೆ ಗಳಿಸಿದ ಮಾನವ ವಿಕಾಸ ಹಾಗೂ ಸಂಸ್ಕೃತಿಯನ್ನು, ತಮ್ಮ ಮಕ್ಕಳು, ಮೊಮ್ಮಕ್ಕಳು, ಅದೇ ರೀತಿಯಲ್ಲಿ ಮುಂದುವರಿಸಿಕೊಂಡು, ವಿಕಾಸಗೊಳಿಸಿಕೊಂಡು, ಇಡೀ ಸಮಾಜಕ್ಕೆ ಅದರ ಲಾಭವನ್ನು ಮುಟ್ಟಿಸಲೆಂದು ಸತ್ತು ಹೋದ ಪಿತೃಗಳು ಅಪೇಕ್ಷಿಸುತ್ತಾರೆ. ಅನೇಕ ತಲೆಮಾರಿನಿಂದ, ಹಾಗೂ ದೀರ್ಘ ತಪಸ್ಸಿನಿಂದ ಗಳಿಸಿದ ಈ ವಿವರಗಳು ನಷ್ಟವಾಗಬಾರದೆಂದು ಅವರ ಇಚ್ಛೆ, ವರ್ಣ ಸಂಕರವಾದರೆ ಸಂಸ್ಕೃತಿಯು ನಾಶವಾಗುತ್ತದೆ, ಮತ್ತು ಜನರು ತನ್ಮೂಲಕ ಅಧೋಗತಿಗಿಳಿಯುತ್ತಾರೆ. ಸಂಸ್ಕೃತಿ, ವಿಜ್ಞಾನ, ಇವೆರಡೂ, ಧಾರ್ಮಿಕ ಆಚರಣೆಯ ರೂಪದಲ್ಲಿ ನಮ್ಮಲ್ಲಿ ಮೈಗೂಡಿವೆ .

ದೋಷೈರೇತೇಃ ಕುಲಘ್ನಾನಾಂ ವರ್ಣಸಂಕರಕಾರಕೈಃ |

ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚಶಾಶ್ವತಾಃ || 1 : 43 ||

ಅರ್ಥ : ಕುಲಘಾತಕರ ಇಂತಹ ಪಾಪಕರ್ಮಗಳಿಂದ, ಆ ಕುಲಗಳಲ್ಲಿ ಶಾಶ್ವತವಾಗಿ ನಡೆದು ಬಂದ ಕುಲಧರ್ಮಗಳೂ, ಜಾತಿಧರ್ಮಗಳೂ ನಾಶವಾಗುತ್ತವೆ .

ಯುದ್ಧದಿಂದ ಪ್ರತಿಯೊಂದು ಕುಟುಂಬ, ಸಮಾಜ ಹಾಗೂ ಸಂಸ್ಕೃತಿಯ ಮೇಲಿರುವ ದುಷ್ಪರಿಣಾಮವನ್ನು ಅರ್ಜುನನು ಸುಂದರವಾಗಿ ವರ್ಣಿಸಿದ್ದಾನೆ .

ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ಧನ |

ನರಕೇ„ನಿಯತಂ ವಾಸೋ ಭವತೀತ್ಯನುಶುಶ್ರುಮ || 1 : 44 ||

ಅರ್ಥ : ಎಲೈ ಜನಾರ್ಧನನೇ, ಕುಲಧರ್ಮಗಳು ನಾಶವಾಗುವ ಕುಲದ ಜನರು ದೀರ್ಘಕಾಲದವರೆಗೂ ನರಕವಾಸವನ್ನನುಭವಿಸಬೇಕಾಗುತ್ತದೆಂದು ನಾವು ಕೇಳಬಲ್ಲವರಾಗಿಲ್ಲವೇ?

ಅರ್ಜುನನು ತನ್ನ ವಾದವನ್ನು ಮುಗಿಸುತ್ತಾ ಬಂದಾಗ್ಯೂ ಕೃಷ್ಣನು ಇನ್ನೂ ಮೌನವಾಗಿಯೇ ಇದ್ದಾನೆ.

ಧರ್ಮದ ನಿಯಮಗಳನ್ನು ಪಾಲಿಸದಿದ್ದರೆ ದೀರ್ಘಕಾಲ ನರಕವಾಸವನ್ನು ಅನುಭವಿಸಬೇಕಾಗುತ್ತದೇಕೆ ಎಂಬ ಹಿನ್ನಲೆಯನ್ನು ತಿಳಿದುಕೊಂಡರೆ ಸತ್ಯಾಂಶವು ಸ್ಪಷ್ಟವಾಗುತ್ತದೆ. ಕುಟುಂಬ ಧರ್ಮ ಎಂದರೆ ಸಮಾಜದ ಒಂದ್ ಮೂಲ ಘಟಕದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಧರ್ಮ. ಈ ಧರ್ಮದ ಆಚರಣೆಯಿಂದ ಆ ಕುಟುಂಬದ ಜನರು ತಮ್ಮ ಕುಟುಂಬದಲ್ಲಿ ವಿಶೇಷವಾಗಿ ವ್ಯಕ್ತಪಡಿಸಿಲ್ಪಟ್ಟ ಶ್ರೇಷ್ಠತೆಯನ್ನು (ಜೀವನದ ವಿವಿಧ ರಂಗಗಳಲ್ಲಿ) ಕಾಪಾಡಿಕೊಂಡು ಅದನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಮರ್ಥರಾಗುತ್ತಾರೆ. ಈ ರೀತಿಯ ಕೌಟುಂಬಿಕ ಸಂಸ್ಕೃತಿಯ ಆಚರಣೆಯೇ ಅವರ ಧರ್ಮ. ಈ ಎಲ್ಲಾ ನಿಯಮಗಳೂ ಧಾರ್ಮಿಕ ಆಚರಣೆಂiÀi ಕಟ್ಟುಕಟ್ಟಳೆಗಳ ರೂಪದಲ್ಲಿ ಬಳಕೆಯಲ್ಲಿ ಬಂದಿವೆ. ಏಕೆಂದರೆ ಆಗಿನ ಕಾಲದ ಜನರು ಧರ್ಮದ ಹೆಸರಿದ್ದರೆ ಎಂತಹ ಕಟ್ಟುನಿಟ್ಟಾದ ನಿಯಮಗಳನ್ನಾದರೂ ಪಾಲಿಸುತ್ತಿದ್ದರು. ಕುಟುಂಬದ ಮುಖಂಡರು ಈ ಧರ್ಮದ ನಿಯಮಗಳನ್ನು ಮುರಿದರೆ ಕ್ರಮೇಣ ಅವನ ಹಾಗೂ ಅವನ ಸಂತತಿಯ ಸಾಂಸ್ಕೃತಿಕ ಹಾಗೂ ಬೌದ್ಧಿಕ ಅವನತಿಯು ಕಟ್ಟ ಕಟ್ಟಿಟ್ಟ ಗಂಟು, ಎಂಬುದು ಐತಿಹಾಸಿಕ ಸತ್ಯವಾಗಿದೆ. ಕುಟುಂಬದ ಅವನತಿಯು ಕ್ರಮೇಣ ಸಮಾಜ, ಕೇರಿ, ಊರು, ಪಟ್ಟಣ ಹಾಗೂ ಇಡೀ ರಾಷ್ಟ್ರಕ್ಕೆ ಹರಡುತ್ತದೆ. ತತ್ಪರಿಣಾಮವಾಗಿ ಅನ್ಯಾಯ, ಮೋಸ, ಸುಲಿಗೆ, ದುವ್ರ್ಯವಹಾರ, ದುರಾಡಳಿತೆ ಹಾಗೂ ರಾಷ್ಟ್ರದ ಅವನತಿಗಳಾಗುತ್ತಿರುವುದನ್ನು ಇತಿಹಾಸದಿಂದ ಸಿದ್ಧಪಡಿಸಬಹುದು.

ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ |

ಯದ್ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ || 1 : 45 ||

ಅರ್ಥ : ಅಯ್ಯೋ, ನಾವು ರಾಜ್ಯಲೋಭದಿಂದ ಸ್ವಜನರನ್ನೇ ಕೊಲ್ಲುವಂತಹ ಮಹತ್ತರವಾದ ಪಾಪಕಾರ್ಯವನ್ನು ಮಾಡಲು ಉದ್ಯುಕ್ತರಾಗಿದ್ದೇವಲ್ಲಾ!

ಅರ್ಜುನನು ತಾನು ಕ್ಷತ್ರಿಯ ವೀರನೆಂಬುದನ್ನೂ ಈಗ ಸಂಪೂರ್ಣವಾಗಿ ಮರೆತುಬಿಟ್ಟು ಮಾನಸಿಕ ಭ್ರಮೆಯ ಸೆಳೆತಕ್ಕೆ ಸಿಕ್ಕಿಕೊಂಡಿದ್ದಾನೆ. ಪರಿಸ್ಥಿತಿಯನ್ನು ತನ್ನ ಹತೋಟಿಯಲ್ಲಿಟ್ಟೂಕೊಳ್ಳುವ ಬದಲು ತಾನೇ ಅದರ ದಾಸನಾಗಿದ್ದಾನೆ. ತಾನು ಕ್ಷತ್ರಿಯ ವೀರ, ಅಧರ್ಮದೊಡನೆ ಯುದ್ಧ ಮಾಡುವುದು ತನ್ನ ಧರ್ಮ ಎಂದು ಈ ಹಿಂದೆ ಧರ್ಮರಾಜನ ಜೊತೆಗೆ ವಾದಮಾಡಿ (ಮಧ್ಯಭಾಗ- ಭೀಷ್ಮ ಪರ್ವದಲ್ಲಿ) ಕೌರವರೊಡನೆ ಯುದ್ಧಮಾಡಲೇಬೇಕೆಂದು ನಿರ್ಧಾರಕ್ಕೆ ಬಂದ ಅರ್ಜುನನೇ, ತನ್ನ ಹೇಡಿತನವನ್ನೂ, ಮನೋದೌರ್ಬಲ್ಯವನ್ನೂ ಮುಚ್ಚಿಕೊಳ್ಳುವುದಕ್ಕಾಗಿ, “ಸಜ್ಜನರನ್ನು ಕೊಂದು ಮಹಾತ್ಪಾಪವನ್ನು ಮಾಡುತ್ತಿದ್ದೇವೆ” ಎಂಬ ಸಾಧುತನದ ವೇಷವನ್ನು ಸೋಗನ್ನು ಹಾಕಿಕೊಂಡು ಮಾತನಾಡುತ್ತಿದ್ದಾನೆ .

ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಾಯಃ |

ಧಾರ್ತಾರಾಷ್ಟ್ರಾರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ || 1 : 46 ||

ಅರ್ಥ : ಧೃತರಾಷ್ಟ್ರನ ಮಕ್ಕಳು ಶಸ್ತ್ರಸನ್ನದ್ಧರಾಗಿ ಬಂದು ನನ್ನ ಮೇಲೆ ಆಕ್ರಮಣಮಾಡಿ, ನಾನು ಶಸ್ತ್ರ ಹೀನವಾಗಿ ಪ್ರತಿಭಟಿಸದೆ ಇರುವಾಗ ಅವರು ನನ್ನನ್ನು ಕೊಂದರೂ ಅದೇ ಹೆಚ್ಚು ಕ್ಷೇಮವಾದೀತು .

ಅರ್ಜುನನ ಮನೋದೌರ್ಬಲ್ಯವು ತುತ್ತ ತುದಿಗೆ ಮುಟ್ಟಿದೆ. ಶತ್ರುಗಳು ತನ್ನನ್ನು ಕೊಲ್ಲಲು ಬಂದಗ್ಯೂ ತಾನು ಯಾವ ರೀತಿಯ ಪ್ರತಿಭಟನೆಯನ್ನು ವ್ಯಕ್ತಮಾಡದೆ, ಬೇಟೆಯ ಮೃಗದಂತೆ ಅವರ ಶಸ್ತ್ರಾಸ್ತ್ರಗಳಿಗೆ ಬಲಿಯಾಗುತ್ತೇನೆಂದೂ, ಅದೇ ಹಿತಕರವೆಂದೂ, ತನ್ನ ಆಬೈರು ತೀರ್ಮಾನವನ್ನು ತಿಳಿಸಿದ್ದಾನೆ. ಇಲ್ಲಿ ಅರ್ಜುನನು ಉಪಯೋಗಿಸಿದ ‘ಕ್ಷೇಮತರಮ್’ ಎಂಬ ಶಬ್ದವು ಅವನ ಮಾನಸಿಕ ಅವನತಿಯನ್ನು ವ್ಯಕ್ತಪಡಿಸುತ್ತದೆ. ಇದುವರೆಗಿನ ಅವನ ವಾದವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಂiÀi ಮೇಲಿತ್ತು. ಈಗ ಮಾತ್ರ, ಯುದ್ಧಮಾಡದೆ ಇದ್ದರೆ ಶಾರೀರಿಕ ಹಾಗೂ ಪ್ರಾಪಂಚಿಕ ದೃಷ್ಟಿಯಿಂದ ಅದು ‘ಕ್ಷೇಮಕರ’ ಅಲ್ಲ. ‘ಕ್ಷೇಮತರ’ ಎಂದು ಹೇಳುತ್ತಿದ್ದಾನೆ. ಮೋಕ್ಷದ ವಿಚಾರವು ಎಲ್ಲಿಯೋ ಅಡಗಿ ಹೋಯಿತು. ಶತ್ರು ಸೈನ್ಯವನ್ನು ನೋಡಿ ಹೆದರಿ ಕಂಗಾಲಾದ ಅರ್ಜುನನು ಮಾನಸಿಕವಾಗಿ ದಿಗ್ಭ್ರಮೆ ಹೊಂದಿ ತನ್ನ ವಿಚಾರ ಶಕ್ತಿಯನ್ನು ವಿವೇಕವನ್ನು ಕಳೆದುಕೊಂಡು. ಸಂಪೂರ್ಣವಾಗಿ ಭ್ರಮಿಷ್ಟನಾಗಿದ್ದಾನೆ. ತನ್ನ ನಿಜವಾದ ಕರ್ತವ್ಯವೇನು ಎಂಬುದನ್ನು ತಿಳಿಯಲಾರದೆ ತಾನು ಮಾಡಬಾರದ ಕೆಲಸವೇ ತನ್ನ ಕರ್ತವ್ಯ ಎಂಬ ಭ್ರಮೆಗೀಡಾಗಿದ್ದಾನೆ. ಇದು ಅರ್ಜುನನ ಮಾನಸಿಕ ಹಾಗೂ ನೈತಿಕ ಅವನತಿಯ ಸೂಚನೆ.

ಸಂಜಯ ಉವಾಚ

ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ |

ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ || 1 :47 ||

ಸಂಜಯ ಹೇಳುತ್ತಾನೆ

ಅರ್ಥ : ರಣರಂಗದ ಮಧ್ಯದಲ್ಲಿ ಈ ರೀತಿಯಾಗಿ ಹೇಳಿ. ಅರ್ಜುನನು ದುಃಖದಿಂದ ಭಗ್ನವಾದ ಮನಸ್ಸುಳ್ಳವನಾಗಿ ತನ್ನ ಬಿಲ್ಲುಬಾಣಗಳನ್ನು ಬಸುಟು ರಥದ ಆಸನದ ಮೇಲೆ ಮೇಲೆ ಕುಳಿತು ಬಿಟ್ಟನು.

ಭಗವದ್ಗೀತಾ ಉಪದೇಶವು ಪ್ರಾರಂಭವಾಗುವಾಗ ಅರ್ಜುನನ ಮಾನಸಿಕ ಪರಿಸ್ಥಿತಿ ಹೇಗಿತ್ತು ಮತ್ತು ಅವನು ಎಂತಹ ವಾತಾವರಣದ ಮಧ್ಯದಲ್ಲಿದ್ದನು. ಎಂಬ ಚಿತ್ರವು ಇದುವರೆಗಿನ್ ವಿವರಣದಿಂದ ತಿಳಿಯುತ್ತದೆ. ಅರ್ಜುನನು ಮಾನಸಿಕ ರೋಗದಿಂದ ಪೀಡಿತನಾಗಿ ಬುದ್ಧಿಗೆಟ್ಟು ತನ್ನ ಕರ್ತವ್ಯವನ್ನು ಮರೆತು ಯುದ್ಧವನ್ನು ಮಾಡುವುದಿಲ್ಲವೆಂದು ತೀರ್ಮಾನಿಸಿರುವಂತಹ ಇಕ್ಕಟ್ಟಿನ ಸಂದರ್ಭದಲ್ಲಿ, ಯುದ್ಧರಂಗದ ಮಧ್ಯದಲ್ಲಿ, ಭಗವದ್ಗೀತೆಯು ಬೋಧಿಸಲ್ಪಟ್ಟಿದೆ. ಪ್ರಪಂಚದ ಪ್ರತಿಯೊಬ್ಬ ನರನನ್ನು ಅರ್ಜುನನಿಗೆ ಹೋಲಿಸಬಹುದು, ಮತ್ತು ಜೀವನದ ವಿವಿಧ ಕಷ್ಟದಾಯಕ ಸಂದರ್ಭಗಳಲ್ಲಿ ನಮ್ಮ ಮನಸ್ಸು ಭ್ರಮಿಸಿ ಕರ್ತವ್ಯಾಕರ್ತವ್ಯಗಳನ್ನು ನಿರ್ಣಯಿಸಲಾರದೆ ಹೋಗುವ, ಇಲ್ಲವೆ ನಮ್ಮನ್ನು ಕರ್ತವ್ಯ ಭ್ರಷ್ಟರನ್ನಾಗಿ ಮಾಡುವ ಸಂದರ್ಭಗಳೆಲ್ಲವನ್ನೂ ಅರ್ಜುನನ ಪರಿಸ್ಥಿತಿಗೆ ಹೋಲಿಸಬಹುದು. ಭಗವದ್ಗೀತೆಯು ಅರ್ಜುನನ ನೆಪ ಮಾಡಿಕೊಂಡು, ಪ್ರತಿಯೊಬ್ಬ ಜೀವಿಗೂ, ಅವನ ಜೀವನವು ಯಶಸ್ವಿಯೂ, ಸುಖಮಯವೂ ಆಗುವಂತೆ, ಹಾಗೂ ಆತನು ಕ್ರಮೇಣ ಬ್ರಹ್ಮಜ್ಞಾನವನ್ನು ಪಡೆಯುವಂತೆ ಸರಿಯಾದ ಮಾರ್ಗವನ್ನು ಸೂಚಿಸತಕ್ಕ ಪ್ರತ್ಯಕ್ಷ ಶಾಸ್ತ್ರವಾಗಿದೆ. ಹಿಂದೆ ಇದು ಅರ್ಜುನನಿಗೆ ಎಷ್ಟು ಅವಶ್ಯಕವಿತ್ತೋ ಇವತ್ತು ಸಹ ಇಡೀ ಪ್ರಪಂಚದ ಜನತೆಗೆ ಅಷ್ಟೇ ಅವಶ್ಯಕವಾಗಿದೆ. ಶುದ್ಧವಾದ ಕುಡಿಯುವ ನೀರಿನ ಬುಗ್ಗೆ ಇಲ್ಲ್ಲಿದೆ ಯಾರು ಯಾರು ಯಾವ ಯಾವ ಪಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಾರೋ ಅದರದರ ತುಂಬ ನೀರು ಸಿಗುತ್ತದೆ. ನೀರನ್ನು ತರುವ ಹಾಗೂ ಕುಡಿದು ಆನಂದಪಡುವ ಪ್ರಯತ್ನವು ಮಾತ್ರಬೇಕು. ಇದು ಪ್ರತಿಯೊಬ್ಬನ ಕೈಯಲ್ಲಿದೆ.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ತು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಅರ್ಜುನ ವಿಷಾದಯೋಗೋ ನಾಮ
ಪ್ರಥಮೋ„ಧ್ಯಾಯಃ