S O U L B L I S S

Loading

Bhagavad Gita – Vinayak Rao Bapat – Chapter 10

ಅಧ್ಯಾಯ-10
ವಿಭೂತಿ ಯೋಗ
ಪೀಠಿಕೆ
ತರ್ಕಬದ್ಧವಾಗಿ ವರ್ಣಿಸಲ್ಪಡುವ ಪ್ರತಿಯೊಂದು ಶಾಸ್ತ್ರೀಯ ಗ್ರಂಥದಲ್ಲಿಯೂ, ಕೊನೆಯ ಅಧ್ಯಾಯಗಳಲ್ಲಿ, ಹಿಂದಿನ ಅಧ್ಯಾಯದಲ್ಲಿ ಹೇಳಿರುವ ವಿಷಯಗಳನ್ನೇ ಎತ್ತಿಕೊಂಡು ಮುಂದಿನ ಸಂಬಂಧವನ್ನು ಸ್ಥಾಪಿಸಲಾಗುತ್ತದೆ. ಇಲ್ಲವೇ ಅದೇ ವಿಷಯದಲ್ಲಿ ಹೆಚ್ಚಿನ ವಿವರಗಳನ್ನು ಕೊಡಲಾಗುತ್ತದೆ. ಇದು ಸಾಮಾನ್ಯವಾದ ಪದ್ಧತಿ. ಭಗವದ್ಗೀತೆಯಲ್ಲಿ ಸಹ ಇದೇ ಪದ್ಧತಿಯನ್ನು ಅನುಸರಿಸಲಾಗಿದೆ.
ಹಿಂದೆ ಹೇಳಲಾದ, “ನಾನು ಈ ಪ್ರಪಂಚದ ಸೃಷ್ಟಿಗೂ ನಾಶಕ್ಕೂ ಕಾರಣನಾಗಿದ್ದೇನೆ. ನನ್ನ ಆಚೆಗೆ ಬೇರೆ ಏನೂ ಇಲ್ಲ, ಸೂತ್ರದಲ್ಲಿ ಮಣಿಗಳು ಪೋಣಿಸಲ್ಪಟ್ಟಂತೆ ಇಡೀ ಪ್ರಪಂಚವೂ ನನ್ನಲ್ಲಿ ಪೋಣಿಸಲ್ಪಟ್ಟಿದೆ” (ಅ. 2 ಶ್ಲೋ. 6-2) ಎಂಬ ವರ್ಣನೆಯನ್ನು ಆಧರಿಸಿ, ಇನ್ನೂ ಹೆಚ್ಚಿನ ವಿವರಗಳನ್ನು ಕೊಡಲೋಸುಗ ಪ್ರತ್ಯೇಕ ಅಧ್ಯಾಯದ ಅವಶ್ಯಕತೆಯೊದಗಿತು. ಅದಕ್ಕಾಗಿ ಈ ಅಧ್ಯಾಯ ಮೀಸಲು.
ಮನುಷ್ಯ ಶರೀರದಲ್ಲಿ ರಕ್ತಪರಿಚಲಾನಕ್ರಮವನ್ನು ಅಭ್ಯಾಸಮಾಡುವಾಗ, ನಾವು ತಿಂದ ಆಹಾರದ ಸಾರವನ್ನು ರಕ್ತವು ಸ್ವೀಕರಿಸಿ, ಅದನ್ನು ಶರೀರದ ಎಲ್ಲಾ ಭಾಗಗಳಿಗೂ ಮುಟ್ಟಿಸುತ್ತದೆಂದೂ, ನಂತರ ಶರೀರದ ಧಾತುಗಳಲ್ಲಿ ವಿಸರ್ಜಿಸಲ್ಪಡುವ ಮಲವನ್ನು ಹೊತ್ತುಕೊಂಡು ಶ್ವಾಸಕೋಶಕ್ಕೆ ಮುಟ್ಟಿಸಿ, ಅದು ಅಲ್ಲಿ ಶುದ್ಧಗೊಳಿಸಲ್ಪಟ್ಟನಂತರ ಹೃದಯಕ್ಕೊಯ್ದು, ಅಲ್ಲಿಂದ ಶುದ್ಧ ರಕ್ತವನ್ನು ಶರೀರದ ಎಲ್ಲಾ ಭಾಗಗಳಿಗೂ ಒಯ್ದು ಮುಟ್ಟಿಸುತ್ತದೆಂದೂ, ಈ ಕಾರ್ಯವು ಸತತವಾಗಿ ನಡೆಯುತ್ತಲೇ ಇದೆ ಎಂದೂ ಕಲಿತಿದ್ದೇವೆ. ಇದನ್ನು ಸಿದ್ಧಪಡಿಸಬೇಕಾದರೆ ರಕ್ತಪರಿಚಲನಾಕ್ರಮವನ್ನು ಎಲ್ಲಾ ಜಾತಿಯ ಪ್ರಾಣಿಗಳಲ್ಲಿಯೂ ಅಭ್ಯಾಸಮಾಡಿ ಖಚಿತಮಾಡಿಕೊಳ್ಳಬೇಕು.
ಇದೇ ರೀತಿಯಾಗಿ ಕೃಷ್ಣನು ಎಲ್ಲಾ ಪ್ರಾಣಿಗಳಲ್ಲಿಯ ಆತ್ಮನು ಅವ್ಯಯನೂ, ಸರ್ವವ್ಯಾಪಕನೂ ಆಗಿದ್ದಾಗ್ಯೂ, ಅವನು ಎಲ್ಲಾ ನಾಮರೂಪಗಳಿಗೆ ಆಧಾರನಾಗಿದ್ದಾಗ್ಯೂ, ಇದನ್ನು ಅರ್ಜುನನಿಗೆ ಸ್ಪಷ್ಟಗೊಳಿಸಿ, ಅವನ ಮನಸ್ಸಿಗೆ ಹಿಡಿಯುವಂತೆ ಮಾಡುವುದಕ್ಕಾಗಿ, ತನ್ನ ವಿಭೂತಿಗಳನ್ನು ಈ ಅಧ್ಯಾಯದಲ್ಲಿ ವರ್ಣಿಸಿದ್ದಾನೆ. ಇದುವರೆಗಿನ ಉಪದೇಶದಿಂದ, ಅರ್ಜುನಲ್ಲಿ ಪರಿವರ್ತನೆಯಾದುದನ್ನು ಕಂಡು, ಈ ವಿವರಗಳನ್ನು ಕೊಡಬಯಸಿದ್ದಾನೆ. ಮುಂದೆ ಅರ್ಜುನನೇ, ಪರಮಾತ್ಮನ ಎಲ್ಲಾ ವಿಭೂತಿಗಳನ್ನೂ ವಿವರವಾಗಿ ವರ್ಣಿಸಬೇಕೆಂದು ಕೇಳಿದ್ದರಿಂದ ಹೆಚ್ಚಿನ ವಿವರಣೆಯನ್ನು ಕೊಡಲಾಗಿದೆ.
ಶರೀರಧಾರಿಯಾಗಿರುವ ಪರಮಾತ್ಮನಿಗೆ ‘ಜೀವ’ ಎಂದು ಹೆಸರು. ಇದೇ ಪರಮಾತ್ಮನು ಎಲ್ಲಾ ಜೀವಿಗಳ ಒಟ್ಟು ಮನಸ್ಸು ಬುದ್ಧಿಗಳ ಮುಖಾಂತರ ಪ್ರಕಟಗೊಂಡರೆ ಅವನಿಗೆ ‘ಈಶ್ವರ’ ಎಂದು ಹೆಸರು. ಹೀಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಹಾಗೂ ಸರ್ವಸೃಷ್ಟಿಯಲ್ಲಿ, ಎಲ್ಲಾ ಕಡೆಗೂ ಪರಮಾತ್ಮನು ವ್ಯಾಪ್ತನಾಗಿ ಅವುಗಳ ಇರುವಿಕೆಗೂ, ನಾಶಕ್ಕೂ, ಪುನಃ ಸೃಷ್ಟಿಗೂ ಕಾರಣವಾಗಿದ್ದಾನೆ. ಇದನ್ನು ಅನುಭವದಿಂದ ತಿಳಿದುಕೊಳ್ಳಲು ಸುಲಭವಾಗಲೆಂದು, ಆರಿಸಿದ ಕೆಲವು ಉದಾಹರಣೆಗಳನ್ನು ಕೊಟ್ಟು, ಈ ವರ್ಣನೆಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲವೆಂದೂ ಪ್ರಪಂಚದಲ್ಲಿರುವ ಸರ್ವವಸ್ತುಗಳಲ್ಲಿಯೂ, ಪರಮಾತ್ಮನ ಅಧಿಷ್ಠಾನವನ್ನು ಕಾಣಬಹುದೆಂದೂ ಆಖೈರು ತೀರ್ಮಾನವನ್ನು ತಿಳಿಸಲಾಗಿದೆ.
******

ಅಧ್ಯಾಯ-10
ವಿಭೂತಿ ಯೋಗ
ಶ್ರೀ ಭಗವಾನುವಾಚ
ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ |
ಯತ್ತೇ„ಹಂ ಪ್ರೀಯಮಾಣಾಯ ವಕ್ತ್ಯಾಮಿ ಹಿತಕಾಮ್ಯಯಾ || || 1 ||
ಅರ್ಥ :- ಮಹಾಬಾಹುವೇ, ನನ್ನ ಶ್ರೇಷ್ಠವಾದ ಈ ವಚನಗಳನ್ನು ಇನ್ನೂ ಕೇಳು. ನನ್ನ ಮಾತುಗಳನ್ನು ಕೇಳಿ ನೀನು ಸಂತೋಷಗೊಂಡಿರುವುದರಿಂದ, ನಿನ್ನ ಹಿತಕ್ಕೋಸ್ಕರವಾಗಿ ಇನ್ನೂ ಹೇಳುತ್ತೇನೆ.
ಮೊದಲನೆಯ ಅಧ್ಯಾಯದಲ್ಲಿ, ನಡುಗುತ್ತಾ ನಿರುತ್ಸಾಹಗೊಂಡು, ಯುದ್ಧದಿಂದ ಓಡಿಹೋಗಬೇಕೆಂದಿದ್ದ ಅರ್ಜುನನ ಚಿತ್ರವನ್ನು ಹಿನ್ನೆಲೆಯಲ್ಲಿಟ್ಟುಕೊಂಡು, ಈ ವಚನವನ್ನು ನೋಡಬೇಕು. ಶ್ರೀಕೃಷ್ಣನ ಉಪದೇಶವನ್ನು ಕೇಳಿದ ಹಾಗೆ ಅರ್ಜುನನ ಮನಸ್ಸು ಸ್ತಿಮಿತಕ್ಕೆ ಬಂದಿತು. ಅವನಿಗೆ ಈ ಉಪದೇಶವನ್ನು ಇನ್ನೂ ಕೇಳಬೇಕೆಂಬ ಆಸೆ ಉತ್ಪನ್ನವಾಯಿತು. ಅದನ್ನು ತಿಳಿದುಕೊಂಡು ಕೃಷ್ಣನು ಈ ಮಾತುಗಳನ್ನು ಹೇಳಿದ್ದಾನೆ. ಇದುವರೆಗಿನ ಉಪದೇಶದಿಂದ ಅರ್ಜುನನಲ್ಲುಂಟಾದ ಮಾನಸಿಕ ಪರಿವರ್ತನೆಯನ್ನು ಗಮನಿಸಿ ಅವನನ್ನು ಇನ್ನೂ ಮೇಲ್ಮಟ್ಟಕ್ಕೆ ಒಯ್ಯಬೇಕೆಂದು ಬಯಸಿ ಶ್ರೀಕೃಷ್ಣನು ತನ್ನ ಉಪದೇಶವನ್ನು ಪ್ರಾರಂಭಿಸಿದ್ದಾನೆ.

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ |
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ || || 2 ||
ಅರ್ಥ :- ದೇವತೆಗಳ ಸಮೂಹವೇ ಆಗಲೀ, ಮಹರ್ಷಿಗಳೇ ಆಗಲೀ, ನನ್ನ ಮೂಲವನ್ನು ತಿಳಿಯಲಾರರು ಎಲ್ಲಾ ದೇವತೆಗಳಿಗೆ ಮತ್ತು ಮಹರ್ಷಿಗಳಿಗೆ ನಾನೇ ಮೂಲಕಾರಣನು.
ಇಲ್ಲಿ ದೇವತೆಗಳು ಎಂದರೆ ಸ್ವರ್ಗಲೋಕದಲ್ಲಿ ವಾಸಿಸುವವರು ಎಂದು ತಿಳಿಯುವುದಕ್ಕಿಂತ, ಹಿಂದೆ ತಿಳಿಸಿದಂತೆ ಇಂದ್ರಿಯಗಳ ಅಧಿದೇವತೆಗಳು ಅಂದರೆ ಆಯಾಯಾ ಇಂದ್ರಿಯಗಳಿಗೆ ಬೆಳಕನ್ನು, ಕಾರ್ಯಪಟುತ್ವವನ್ನು ಕೊಡಬಲ್ಲ ಶಕ್ತಿ ವಿಶೇಷಗಳು ಎಂದು ತಿಳಿಯಬೇಕು. ಸಪ್ತರ್ಷಿಗಳ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಳಗೆ ತೋರಿಸಿದಂತೆ ಮೂರು ವಿಧದ (ಗುಂಪಿನ) ಸಪ್ತರ್ಷಿಗಳ ಉಲ್ಲೇಖವಿದೆ.
1 2 3
ಭೃಗು ಮರೀಚಿ ಕಶ್ಯಪ
ನಾಭ ಆಂಗೀರಸ ಅತ್ರಿ
ವಿವಸ್ವಾನ್ ಅತ್ರಿ ಭರದ್ವಾಜ
ಸುದಾಮ ಪುಲಸ್ತ್ಯ ವಿಶ್ವಾಮಿತ್ರ
ವಿರಾಜ ಪುಲಹ ಗೌತಮ
ಅತಿನಾಮ ಶ್ರುತು ಜಮದಗ್ನಿ
ಸಹಿಷ್ಣು ವಸಿಷ್ಠ ವಸಿಷ್ಠ
ಎಲ್ಲಾ ದೇವತೆಗಳಿಗೂ ಮತ್ತು ಸಪ್ತರ್ಷಿಗಳಿಗೂ ನಾನೇ ಕಾರಣನು ದೇವತೆಗಳು ಮನಸ್ಸಿನ ಅಧಿದೇವತೆಗಳಿದ್ದಂತೆ, ಸಪ್ತರ್ಷಿಗಳು ಬುದ್ಧಿಯ ಅಧಿದೇವತೆಗಳು. ಪರಮಾತ್ಮನು ಶರೀರ, ಮನಸ್ಸು, ಬುದ್ಧಿಗಳಿಗೆ ಕಾರಣನಾಗಿರುವುದರಿಂದ ಇವುಗಳ ಮುಖಾಂತರ ಅವನನ್ನು ತಿಳಿಯುವುದು ಸಾಧ್ಯವಿಲ್ಲ.

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ |
ಅಸಮ್ಮೂಢಃ ಸ ಮತ್ರ್ಯೇಷು ಸರ್ವ ಪಾಪೈಃ ಪ್ರಮುಚ್ಯತೇ || || 3 ||
ಅರ್ಥ :- ಯಾರು ನನ್ನನ್ನು ಹುಟ್ಟಿಲ್ಲದವನು, ಅನಾದಿಯು, ಎಲ್ಲಾ ಲೋಕಗಳಿಗೂ ಒಡೆಯ ಎಂದು ತಿಳಿಯುತ್ತಾನೋ, ಅವನು ಮನುಷ್ಯರಲ್ಲಿ ಸರಿಯಾದ ಜ್ಞಾನವುಳ್ಳವನೆನಿಸಿಕೊಳ್ಳುತ್ತಾನೆ, ಮತ್ತು ಅವನು ಎಲ್ಲಾ ಪಾಪಗಳಿಂದಲೂ ಮುಕ್ತನಾಗುತ್ತಾನೆ.
ಪರಮಾತ್ಮನು ಹುಟ್ಟು ಇಲ್ಲದವನು, ಪ್ರಾರಂಭವಿಲ್ಲದವನು, ಮತ್ತು ಎಲ್ಲಾ ಲೋಕಗಳ ಒಡೆಯನು ಎಂದು ಕೇವಲ ತಿಳಿದುಕೊಂಡರೆ ಅಥವಾ ನಂಬಿದರೆ ಸಾಲದು, ಆ ರೀತಿಯಾಗಿ ಅನುಭವವನ್ನು ಪಡೆಯಬೇಕು. ಆಗ ಮಾತ್ರ ಮುಷ್ಯನು ಅಜ್ಞಾನವನ್ನು ಕಳೆದುಕೊಂಡು ಎಲ್ಲಾ ಪಾಪಗಳಿಂದಲೂ (ವಾಸನೆ) ಮುಕ್ತನಾಗುತ್ತಾನೆ. ಮನಸ್ಸಿನಲ್ಲಿ ಕಂಭವನ್ನು ಭೂತವೆಂದು ತಿಳಿದವನು, ಬೆಳಕನ್ನು ತಂದು ನೋಡಿ ಅದು ಭೂತವಲ್ಲ, ಅದು ಕಂಬ ಎಂಬುದನ್ನು ಕಂಡು ಆ ಅನುಭವವನ್ನು ದೃಢವಾಗಿ ಪಡೆದರೆ; ಮುಂದೆ ಭೂತದ ಕಲ್ಪನೆಯಾಗಲೀ, ಹೆದರಿಕೆಯಾಗಲೀ ಆಗದಂತೆ, ಪರಮಾತ್ಮನು ಅಜನು, ಅನಾದಿ, ಮತ್ತು ಸರ್ವಲೋಕದ ಮಹೇಶ್ವರನು ಎಂಬ ಅನುಭವನುನ ಪಡೆದರೆ ಆಗ ಅಜ್ಞಾನವೂ, ತಜ್ಜನ್ಯ ವಾಸನೆಗಳೂ ಕಳಚಿಹೋಗುತ್ತವೆ. ತಾನೇ ಪರಮಾತ್ಮನು ಎಂಬ ಜ್ಞಾನವುಂಟಾಗುತ್ತದೆ.
ಆತ್ಮನು ಪ್ರಪಂಚದ ಒಡೆಯನು ಹೇಗೆ
ಬುದ್ಧಿಜ್ರ್ಞಾನಮಸಮ್ಮೋಹಂ ಕ್ಷಮಾ ಸತ್ಯಂ ದಮಃ ಶಮಃ |
ಸುಖಂ ದುಃಖಂ ಭವೊ„ೀಭಾವೋ ಭಯಂ ಚಾಭಯಮೇವಚ || 4 ||
ಅಹಿಂಸಾ ಸಮತಾ ತುಷ್ಪ್ತಿಸಪೋದಾನಂ ಯಶೋಯಶಃ |
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ || || 5 ||
ಅರ್ಥ :- ಮನುಷ್ಯನಲ್ಲಿರುವ ಬುದ್ಧಿ-ಜ್ಞಾನ, ಭ್ರಮೆಗೊಳ್ಳದಿರುವಿಕೆ, ಕ್ಷಮಾಗುಣ, ಸತ್ಯ, ಇಂದ್ರಿಯನಿಗ್ರಹ, ಶಾಂತಿ, ಸುಖ, ದುಃಖ, ಹುಟ್ಟುವಿಕೆ, ಸಾವು, ಹೆದರಿಕೆ, ಹೆದರಿಕೆಯಿಲ್ಲದಿರುವುದು, ಅಹಿಂಸೆ, ಸಮತ್ವ, ತೃಪ್ತಿ, ತಪಸ್ಸು, ದಾನ, ಯಶಸ್ಸು, ಸೋಲು ಈ ಎಲ್ಲಾ ಗುಣಗಳೂ ನನ್ನಿಂದಳೇ ಉದ್ಭವಿಸುತ್ತವೆ.
ಮನುಷ್ಯನಲ್ಲಿರುವ ಹಾಗೂ ಪ್ರಪಂಚದಲ್ಲಿರುವ ಎಲ್ಲಾ ಗುಣಗಳಿಗೂ ಪರಮಾತ್ಮನೇ ಕಾರಣನೆಂದು ಇಲ್ಲಿ ಹೇಳಲಾಗಿದೆ. ಸೃಷ್ಟಿ ಎಂದರೆ ಕೇವಲ ಭೌತಿಕ ಅಥವಾ ಶಾರೀರಿಕ ಸೃಷ್ಟಿಯಲ್ಲ. ಮಾನಸಿಕ ಹಾಗೂ ಬೌದ್ಧಿಕ ವಿಚಾರಗಳೂ ಸಹ ಸೃಷ್ಟಿಯಲ್ಲಿ ಐಕ್ಯವಾಗುತ್ತವೆ ಎಂಬ ಅಂಶವನ್ನು ಮೇಲಿನ ಗುಣಗಳ ವರ್ಣನೆಯಿಂದ ತಿಳಿದುಕೊಳ್ಳಬೇಕು. ಇಲ್ಲಿ ಸದ್ಗುಣಗಳನ್ನಷ್ಟೇ ಹೇಳಿದಾಗ್ಯೂ, ಮುಂದೆ “ಚ” ಎಂಬ ಅಕ್ಷರವನ್ನೂ ಜೋಡಿಸಿರುವುದರಿಂದ ಎಲ್ಲಾ ಸದ್ಗುಣಗಳ ವಿಶುದ್ಧಗುಣಗಳು ವಿರುದ್ಧ ಗುಣಗಳು ವಿರುದ್ಧ ಸಹ ಪರಮಾತ್ಮನಿಂದಲೇ ಹುಟ್ಟುತ್ತವೆ ಎಂದು ಊಹಿಸಿಕೊಳ್ಳಬೇಕು.
ಶಮ- ಮನಸ್ಸಿನಲ್ಲಿ ಏಳುವ ವಿಚಾರ ತರಂಗಗಳು ಹಾಗೂ ಆಸೆಗಳನ್ನು ನಿಗ್ರಹಿಸುವ ಶಕ್ತಿ. ನಮ್ಮ ಇಂದ್ರಿಯಗಳು ಮನಸ್ಸಿನಲ್ಲೆದ್ದ ಆಸೆಗಳ ಸೆಳೆತಕ್ಕೆ ಸಿಕ್ಕಿರುವಾಗ, ಮನಸ್ಸು ವಿಷಯೋಪಭೋಗಗಳಲ್ಲಿ ನಿರತವಾಗದಂತೆ ನಿಗ್ರಹಿಸಿ ತಡೆದು ನಿಲ್ಲಿಸುವ ಶಕ್ತಿಗೆ ‘ದಮ’ ಎಂದು ಹೆಸರು. ಸಾಧಕನು ಶಮ ಮತ್ತು ದಮ ಈ ಎರಡೂ ಗುಣಗಳನ್ನೂ ಮೊಟ್ಟಮೊದಲು ಮೈಗೂಡಿಸಿಕೊಳ್ಳುವುದು ಅವಶ್ಯಕವಿರುವುದರಿಂದ ಇವುಗಳಲ್ಲಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
ಮೇಲೆ ತಿಳಿಸಿದ ಎಲ್ಲಾ ಗುಣಗಳೂ ಪರಮಾತ್ಮನಿಂದಲೇ ಹುಟ್ಟುತ್ತವೆ. ಕಂಬದಲ್ಲಿ ಭೂತವು ನಗುತ್ತಿರಲಿ, ಸಿಟ್ಟು ಮಾಡುತ್ತಿರಲಿ, ಹೆದರಿಸುತ್ತಿರಲಿ, ಏನೇ ಮಾಡುತ್ತಿದ್ದಾಗ್ಯೂ ಆ ಎಲ್ಲಾ ಗುಣಗಳೂ ಕಂಬದಿಂದಲೇ ಉತ್ಪನ್ನವಾಗಿ ಭೂತದಲ್ಲಿ ಕಂಡುಬಂದಂತೆ, ಈ ಗುಣಗಳು ಸಹ ಪರಮಾತ್ಮನಿಂದಲೇ ಉತ್ಪನ್ನವಾಗುತ್ತವೆ.

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾಃ |
ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ || || 6 ||
ಅರ್ಥ :- ಸಪ್ತರ್ಷಿಗಳು, ನಾಲ್ವರು ಕುಮಾರರು (ಸನತ್ಕುಮಾರ, ಸನಕ, ಸನಾತನ, ಸನಂದನ) ಮತ್ತು ಮನುಗಳು (ನಾಲ್ಕು ಸವರ್ಣ ಮನುಗಳು), ಇವರು ನನ್ನ ಮನಸ್ಸಿನಿಂದ ಹುಟ್ಟಿದವರು ಅಂದರೆ ಮಾನಸ ಪುತ್ರರು. ಅವರು ನನ್ನಂತೆಯೇ ಶಕ್ತಿಯುಳ್ಳವರು. ಇವರಿಂದಲೇ ಈ ಪ್ರಪಂಚದ ಪ್ರಜೆಗಳ ಸೃಷ್ಟಿಯಾಯಿತು.
ಸಪ್ತರ್ಷಿಗಳು – ಬುದ್ಧಿ, ಅಹಂಕಾರ, ಮತ್ತು ಐದು ಇಂದ್ರಿಯ ತನ್ಮಾತ್ರಗಳು (ಶಬ್ದತನ್ಮಾತ್ರ, ಸ್ಪರ್ಶತನ್ಮಾತ್ರ, ರೂಪ ತನ್ಮಾತ್ರ, ರಸತನ್ಮಾತ್ರ, ಗಂಧತನ್ಮಾತ್ರ) ಹೀಗೆ ಒಟ್ಟು ಏಳು ಅಂಶಗಳಿಗೆ ಸಪ್ತರ್ಷಿಗಳೆಂದು ಹೆಸರು. ಇವು ಪ್ರತಿಯೊಬ್ಬ ಜಿವಿಯ ಶರೀರದಲ್ಲಿರುವ ಸಪ್ತರ್ಷಿಗಳು ಇವುಗಳ ಸಂಯೋಗದಿಂದ ಮನುಷ್ಯನಿಗೆ ಹೊರಗಿನ ಪ್ರಪಂಚದ ಅನುಭವವಾಗುತ್ತದೆ. ಬಾಹ್ಯ ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳ ಒಟ್ಟು ಬುದ್ಧಿಗಳ ಸಮೂಹ (ಇದಕ್ಕೆ ‘ಮಹತ್’ ಎಂದು ಹೆಸರು) ಅಹಂಕಾರ (ಒಟ್ಟು) ಮತ್ತು ಪಂಚ ಮಹಾ ಭೂತಗಳ ತನ್ಮಾತ್ರಗಳು ಇವುಗಳಿಗೆ ಸಾಮೂಹಿಕವಾಗಿ ‘ಬಾಹ್ಯ ಪ್ರಪಂಚದಲ್ಲಿರುವ’ ಸಪ್ತರ್ಷಿಗಳೆಂದು ಹೆಸರು. ಪ್ರತಿಯೊಂದು ವ್ಯಕ್ತಿಯಲ್ಲಿರುವ ಸಪ್ತರ್ಷಿಗಳು ಆಯಾಯಾ ವ್ಯಕ್ತಿಯ ಅನುಭವಕ್ಕೆ ಕಾರಣವಾದಂತೆ, ಬಾಹ್ಯ ಪ್ರಪಂಚದಲ್ಲಿಯು ಸಪ್ತರ್ಷಿಗಳು ಬಾಹ್ಯ ಸೃಷ್ಟಿಗೆ ಕಾರಣರಾಗುತ್ತಾರೆ.
ವಿಭೂತಿಗಳನ್ನು ತಿಳಿದುಕೊಳ್ಳುವುದರ ಪ್ರಯೋಜನ
ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ |
ಸೋ„ವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ || 7 ||
ಅರ್ಥ :- ನನ್ನ ಈ ವಿಶಾಲವಾದ ವಿಭೂತಿಯನ್ನು (ಬೇರೆ ಬೇರೆ ತರಹದ ನಾಮರೂಪಗಳು), ಹಾಗೂ ಯೋಗ ಶಕ್ತಿಯನ್ನು ಯಾರು ತತ್ವಶಃ ತಿಳಿಯುತ್ತಾರೋ! ಅವರು ನಿಶ್ಚಯವಾಗಿಯೂ ಯೋಗದಲ್ಲಿ ಸ್ಥಿರವಾಗುತ್ತಾರೆ. ಇದರಲ್ಲಿ ಸಂಶಯವಿಲ್ಲ. ಅಂದರೆ ಅವರು ನನ್ನ ಅನುಭವವನ್ನು ಪಡೆಯುತ್ತಾರೆ.
ಈ ತತ್ವವನ್ನು ಕೇವಲ ಬುದ್ಧಿಯಿಂದ ತಿಳಿದುಕೊಂಡರೆ ಸಾಲದು- “ಅಕ್ಷರಶಃ” ಅಂದರೆ ಅದರ ಅನುಭವವನ್ನು ಹೊಂದಿದವನು ಯೋಗಾರೂಢನಾಗುತ್ತಾನೆ. ಆತನು ಸ್ಥಿರವಾಗಿ – ಕಂಪಿಸದೆ-ಯೋಗಾರೂಢನಾಗಿ, ಆತ್ಮಾನಂದದಲ್ಲಿರುತ್ತಾನೆ. ‘ಯೋಗ’ ಎಂಬ ಶಬ್ದಕ್ಕೆ ‘ಅವಿಕಂಪೇನ ಯೋಗೇನ” ಎಂಬ ಹೊಸ ಅರ್ಥವನ್ನು ಇಲ್ಲಿ ಕೊಡಲಾಗಿದೆ. ಈ ಹಿಂದೆ “ಸಮತ್ವಂ ಯೋಗ ಉಚ್ಯತೆ” (ಅ2-48), ‘ಯೋಗಃ ಕರ್ಮಸು ಕೌಶಲಮ್” (ಅ2-50). “ದುಃಖ ಸಂಯೋಗ ವಿಯೋಗಂ ಯೋಗಸಂಜ್ಞಿತಮ್” (ಅ2-23) ಎಂದು ಬೇರೆ ಬೇರೆ ಅರ್ಥಗಳನ್ನು ಹೇಳಿರುವುದನ್ನು ಇದರೊಡನೆ ತುಲನಾತ್ಮಕವಾಗಿ ತಿಳಿದುಕೊಳ್ಳಬೇಕು.
ಈ ಅನುಭವವನ್ನು ತಿಳಿಸಲು ಉದಾಹರಣಾರ್ಥವಾಗಿ ಪರಮಾತ್ಮನ ವಿಭೂತಿಗಳನ್ನು ವರ್ಣಿಸಲಾಗುತ್ತದೆ.
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |
ಇತಿ ಮತ್ವಾಭಜಂತೇ ಮಾಂ ಬುಧಾ ಭಾವಸಮನ್ವಿತಾಃ || || 8 ||
ಅರ್ಥ :- ಪ್ರಪಂಚದಲ್ಲಿ ಪ್ರತಿಯೊಂದರ ಮೂಲ ಸ್ರೋತವು ನಾನು. ನನ್ನಿಂದಲೇ ಪ್ರತಿಯೊಂದು ಹುಟ್ಟುತ್ತದೆ. ಈ ತತ್ವವನ್ನು ತಿಳಿದು ನನ್ನ ಧ್ಯಾನದಲ್ಲಿಯೇ ನಿರತರಾದ ಜ್ಞಾನಿಗಳು ನನ್ನನ್ನೇ ಅರ್ಚಿಸುತ್ತಾರೆ.
ಇಲ್ಲಿ ಪ್ರಪಂಚದ ಹಾಗೂ ಜೀವಿಯ ಸೃಷ್ಟಿಕ್ರಮವನ್ನು ಹೇಳಲಾಗಿದೆ. ಶುದ್ಧಪರಮಾತ್ಮನು ‘ಮಹತ್’ ತತ್ವದೊಡನೆ ಅಂದರೆ ಎಲ್ಲಾ ಜೀವಿಗಳ ಸಾಮೂಹಿಕ ಬುದ್ಧಿಯೊಡನೆ, ಸೇರಿಕೊಂಡರೆ, ಪರಮೇಶ್ವರನೆಂಬ ಹೆಸರಿನಿಂದ ಪ್ರಪಂಚದ ಸೃಷ್ಟಿಯನ್ನು ಮಾಡುತ್ತಾನೆ. ಅವನೇ ಪ್ರತಿಯೊಂದು ವ್ಯಕ್ತಿಯ ಅಹಂಕಾರದೊಡನೆ ಸೇರಿಕೊಂರೆ ‘ಜೀವಿ’ ಎಂಬ ಹೆಸರಿನಿಂದ ವ್ಯಕ್ತಿಯ ಪ್ರಪಂಚವನ್ನು ಸೃಷ್ಟಿಸುತ್ತಾನೆ. ಹೀಗೆ ಜೀವಿಯ ಮತ್ತು ಸರ್ವ ಪ್ರಾಣಿಗಳ ಸೃಷ್ಟಿಗೆ ಕಾರಣನಾದ ಪರಮಾತ್ಮನೇ ಪ್ರಪಂಚದ ಸೃಷ್ಟಿಗೂ ಕಾರಣನಾಗಿದ್ದಾನೆ. ಆದರೆ ಸಾಧನ ಮಾತ್ರ ಬೇರೆಬೇರೆ. ಸಮಾನವಾದ ಒಂದೇ ವಿದ್ಯುಚ್ಛಕ್ತಿಯು ಬೇರೆಬೇರೆ ಸಾಧನಗಳೊಡನೆ ಸೇರಿ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡುವಂತೆ (ದೀಪ, ಪಂಖ, ರೇಡಿಯೋ ಇತ್ಯಾದಿಗಳನ್ನು ಚಲಿಸುವಂತೆ) ತಿಳಿದುಕೊಳ್ಳಬೇಕು.

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ |
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ || || 9 ||
ಅರ್ಥ :- ಅವರು ತಮ್ಮ ಮನಸ್ಸನ್ನು ಸಂಪೂರ್ಣವಾಗಿ ನನ್ನ ಚಿಂತೆಯಲ್ಲಿಯೇ ನಿಲ್ಲಿಸಿ, ಇಂದ್ರಿಯಗಳನ್ನೂ ನನ್ನ ವಿಚಾರದಲ್ಲಿ ಕೇಂದ್ರೀಕರಿಸಿ ನನ್ನ ವಿಚಾರ ಜ್ಞಾನವನ್ನು ಇತರೆ ಭಕ್ತರಿಗೆ ತಿಳಿಸುತ್ತಾ ನನ್ನ ಸದ್ಗುಣಗಳನ್ನು ಸ್ತುತಿಸುತ್ತಾ, ಅದರಲ್ಲಿಯೇ ತೃಪ್ತಿಯನ್ನು ಆನಂದವನ್ನು ಪಡೆಯುತ್ತಾರೆ.
ಮಚ್ಚಿತ್ತಾ -ಎಂದರೆ ಯಾವಾಗಲೂ ಪರಮಾತ್ಮನ ಧ್ಯಾನ ಮಾಡುತ್ತಿರುವುದು. ವ್ಯಕ್ತಿ, ಪ್ರಪಂಚದ (ಜೀವಿ) ಇಲ್ಲವೇ ಬಾಹ್ಯಪ್ರಪಂಚದ (ಪರಮೇಶ್ವರ) ಯಾವುದೇ ವಿಚಾರಗಳು ಮನಸ್ಸಿನಲ್ಲಿ ಬಂದಾಗ್ಯೂ ಅವೆಲ್ಲವುಗಳಿಗೂ ಮೂಲಕಾರಣ ನಾದವನು ಒಬ್ಬನೇ ಶುದ್ಧಪರಮಾತ್ಮನು ಆಗಿದ್ದಾನೆ, ಎಂದು ಆತನ ಜ್ಞಾಪಕ ಮಾಡಿಕೊಳ್ಳುತ್ತಿರುವುದು.
ಮದ್ಗತಪ್ರಾಣಾ – ಇಲ್ಲಿ ಪ್ರಾಣ ಎಂದರೆ ಪ್ರಾಣವಾಯು ಎಂದು ಅರ್ಥಮಾಡುವುದಕ್ಕಿಂತ ಪಂಚ ಜ್ಞಾನೇಂದ್ರಿಗಳ ಚಲನವಲನಗಳಿಗೆ ಕಾರಣವಾದ ಪ್ರಧಾನವಾಯು ಎಂದು ತಿಳಿಯಬೇಕು. ಮನಸ್ಸಿನಲ್ಲಿ ಯಾವ ವಿಷಯಗಳ ವಿಚಾರ ಬಂದಾಗ್ಯೂ ಅವುಗಳ ಹಿಂದೆ ಪರಮಾತ್ಮನಿದ್ದಾನೆ. ಅವನ ಪ್ರೇರಣೆ ಇದೆ. ಎಂಬ ಭಾವದಿಂದ ಪರಮಾತ್ಮನನ್ನು ಪದೇಪದೇ ಜ್ಞಾಪಿಸಿಕೊಳ್ಳಬೇಕು. ಈ ಇಂದ್ರಿಯಗಳಿಗೆ ಅಥವಾ ಇಂದ್ರಿಯ ವಿಷಯಗಳ ಆಕರ್ಷಣೆಗೆ ಪರಮಾತ್ಮನ ಇರುವನ್ನು ಅರಿಯಲು ಯತ್ನಿಸಬೇಕು. ಸಾಧಕರೊಡನೆ ಇಲ್ಲವೇ ಸಿದ್ಧ ಪುರುಷರೊಡನೆ ಪರಸ್ಪರ ಚರ್ಚೆ ಮಾಡುವುದರಿಂದ ಪರಮಾತ್ಮನ ವಿಷಯದ ಜ್ಞಾನವು ದೃಢವಾಗುತ್ತದೆ. ಅನುಭವವು ಹೆಚ್ಚುತ್ತದೆ, (ಬೋಧೆಯಂತಃ ಪರಸ್ಪರಮ್)
ಇಂತಹ ಸಾಧಕರಿಗೆ ಹೇಗೆ ಜ್ಞಾನೋದಯವಾಗುತ್ತದೆ.

ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |
ದದಾಮಿ ಬುದ್ಧಿಯೋಗಂತಂ ಯೇನ ಮಾಮುಪಯಾಂತಿ ತೇ || || 10 ||
ಅರ್ಥ :- ಈ ರೀತಿಯಾಗಿ ಯಾವಾಗಲೂ ನನ್ನ ಧ್ಯಾನದಲ್ಲಿಯೇ ಮಗ್ನರಾಗಿ ಪ್ರೀತಿಯಿಂದ ನನ್ನನ್ನೇ ಭಜಿಸುತ್ತಿರುವ ಸಾಧಕರಿಗೆ ನಾನು ಬುದ್ಧಿ ಯೋಗವನ್ನು ಕೊಡುತ್ತೇನೆ. ಇದರಿಂದ ಅವರಿಗೆ ಜ್ಞಾನೋದಯವಾಗಿ ಅವರು ನನ್ನನ್ನು ಸೇರುತ್ತಾರೆ.
ಯೋಗದಿಂದ ಕೂಡಿ, ಜೀವನದ ವಿವಿಧ ರಂಗಗಳಲ್ಲಿ ಯಾವಾಗಲೂ, ಪರಮಾತ್ಮನ ಚಿಂತನೆಯನ್ನು ಮಾಡುವ ಸಾಧಕನಿಗೆ, ಅವಶ್ಯಕವಾದ ಶಕ್ತಿಯನ್ನೂ, ಜ್ಞಾನವನ್ನು ಪರಮಾತ್ಮನು ಕೊಡುತ್ತಾನೆಂದೂ, ಇದರಿಂದಾಗಿ ಸಾಧಕನು ಪರಮಾತ್ಮನ ಸಾಕ್ಷತ್ಕಾರವನ್ನು ಪಡೆಯುತ್ತಾನೆಂದೂ, ಇಲ್ಲಿ ಆಶ್ವಾಸನೆಯನ್ನು ಕೊಡಲಾಗಿದೆ. ಸಾಧನೆಯನ್ನು ಮಾಡುವಾಗ ಸಾಧಕನು ಜಾರಿ ಬೀಳಬಹುದು. ಇಂದ್ರಿಯ ಲಾಲಸೆಗಳಿಗೆ ಅಧಿನವಾಗಬಹುದು. ಮಾನಸಿಕವಾಗಿ ಹೀಗೆ ಹೀನ ವಿಚಾರಗಳನ್ನೂ ಚಿಂತಿಸಬಹುದು. ಆದಾಗ್ಯೂ ಈ ಎಲ್ಲಾ ವಿವಿಧ ಸಂದರ್ಭಗಳಲ್ಲಿ ಸಹ ಅವನು (ಸಾಧಕನು) ತನ್ನ ಈ ಎಲ್ಲಾ ವಿಚಾರಗಳು, ಆಚಾರಗಳು, ಕರ್ಮಗಳು ಮತ್ತು ದೌರ್ಬಲ್ಯಗಳ ಹಿಂದೆ ಪರಮಾತ್ಮನಿದ್ದಾನೆಂಬ ಅಂಶವನ್ನು ಜ್ಞಾಪಕ ಮಾಡಿಕೊಂಡರೂ ಸಾಕು, ಆತನು ‘ಯೋಗ ಯುಕ್ತನು’ ಎಂದು ತಿಳಿಯಬೇಕು- ಇಂತಹ ಸಾಧಕನಿಗೆ ಸಹ ಪರಮಾತ್ಮನು ಜ್ಞಾನವನ್ನು ಕೊಡುತ್ತಾರೆ.
ಈ ಬುದ್ಧಿ ಯೋಗದಿಂದ ಜ್ಞಾನ ಹೇಗೆ ಸಿಗುತ್ತದೆ.

ಅರ್ಜುನ ಉವಾಚ
ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ || || 11 ||
ಅರ್ಥ :- ಅವರ ಹೃದಯದಲ್ಲಿ ನೆಲೆಸಿರುವ ನಾನು ಅವರ ಮೇಲಿನ ಪ್ರೇಮದಿಂದ ಅವರಿಗೆ ಅಜ್ಞಾನದಿಂದ ಉಂಟಾದ ಕತ್ತಲೆಯನ್ನು ಜ್ಞಾನ ಎಂಬ ಬೆಳಕಿನಿಂದ ಹೋಗಲಾಡಿಸುತ್ತೇನೆ.
ನಮ್ಮ ಇಂದ್ರಿಯಗಳಿಗೆ ಯಾವುದಾದರೂ ವಸ್ತುವಿನ ಜ್ಞಾನವಾಗಬೇಕಾದರೆ, ಅದಕ್ಕೆ ಅನುಕೂಲವಾದ ಸಕಲ ಸಲಕರಣಗಳು ಬೇಕು. ಉದಾಹರಣೆಗೆ ಕೋಣೆಯ ಮೇಜಿನ ಮೇಲೆ ಒಂದು ಬೀಗದ ಕೈ ಇದೆ ಆದರೆ ಕೋಣೆಯಲ್ಲಿ ಕತ್ತಲೆ ಇದ್ದರೆ ಅದು ನಮಗೆ ಕಾಣುವುದಿಲ್ಲ, ಬೀಗದ ಕೈಯ ಮೇಲೆ ಬೆಳಕು ಬೀಳಬೇಕು. ಅಂದರೆ ಮಾತ್ರ ನಮಗೆ ಬೀಗದ ಕೈಯು ಕಂಡೀತು. ಕತ್ತಲೆಯ ಕೋಣೆಯಲ್ಲಿ ಯಾರಾದರೂ ದೀಪವನ್ನು ಹಚ್ಚಿದರೆ, ನಮಗೆ ಕೂಡಲೇ ಬೀಗದ ಕೈಯು ಕಾಣುತ್ತದೆ. ಈಗ ದೀಪ ಹಚ್ಚಿದ ವ್ಯಕ್ತಿಯು ಕರುಣೆಯಿಂದ, ಪ್ರೀತಿಯಿಂದ ಕೋಣೆಯೊಳಕ್ಕೆ ಬೆಳಕನ್ನು ತಂದು ಬೀಗದ ಕೈಯನ್ನು ತೋರಿಸಿದನು ಎನ್ನುತ್ತೇವೆ. ಇದೇ ರೀತಿಯಾಗಿ ಪರಮಾತ್ಮನು ಸಾಧಕನ ಮನೋಲೋಕದಲ್ಲಿ ಜ್ಞಾನ ಎಂಬ ಬೆಳಕನ್ನು ಚೆಲ್ಲಿ, ಅಜ್ಞಾನವನ್ನು ಹೋಗಲಾಡಿಸುತ್ತಾನೆ. (ದೀಪ ಬಂದ ಮಾತ್ರಕ್ಕೆ ಕತ್ತಲೆಯು ಓಡಿ ಹೋಗುವಂತೆ) ಮತ್ತು ಅದೇ ಕಾಲದಲ್ಲಿ ಬೆಳಕು ಬೀಗದ ಕೈಯನ್ನು ತೋರಿಸುವಂತೆ ಜ್ಞಾನ ಎಂಬ ಬೆಳಕಿನಿಂದ ಪರಮಾತ್ಮನನ್ನು ತೋರಿಸುತ್ತಾನೆ. ಜ್ಞಾನದ ಬೆಳಕು ಬಂದನಂತರ ಅಜ್ಞಾನವೆಲ್ಲವೂ ತನ್ನಷ್ಟಕ್ಕೆ ತಾನೇ ಓಡಿಹೋಗುತ್ತದೆ. ‘ಜೀವ’ನಲ್ಲಿಯ ಅಜ್ಞಾನವು ನಾಶವಾಯಿತೆಂದರೆ, ಅವನ ವಾಸನೆಗಳೂ, ಅಹಂಕಾರವೂ ನಾಶವಾಗುತ್ತವೆ. ಈಗ ಅವನಿಗೆ ತಾನು ಆವರಣರಹಿತನಾದ ಶುದ್ಧ ಪರಮಾತ್ಮನು ಎಂಬ ಅರಿವುಂಟಾಗುತ್ತದೆ. ಇದೇ ಜ್ಞಾನೋದಯ, ಪರಮಾತ್ಮನ ಈ ದಯೆಯು ಎಲ್ಲಾ ಕಡೆಗೂ ಅಖಂಡವಾಗಿ ವ್ಯಾಪ್ತವಾಗಿದ್ದಾಗ್ಯೂ, ಅದೂ ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ಸಿಗುವುದಿಲ್ಲ. ಅದು ಲಭಿಸಬೇಕಾದರೆ ಸತತ ಪ್ರಯತ್ನಬೇಕು. ಹೊರಗೆ ಬೇಕಾದಷ್ಟು ಸೂರ್ಯನ ಬೆಳಕಿದೆ. ನನ್ನ ಕೋಣೆಯ ಕಿಟಕಿಯ ಬಾಗಿಲನ್ನು ನಾನು ಮುಚ್ಚಿಕೊಂಡಿರುವವರೆಗೂ ಬೆಳಕು ನನ್ನ ಕೋಣೆಯೊಳಕ್ಕೆ ಪ್ರವೇಶಿಸುವುದಿಲ್ಲ. ಬಾಗಿಲನ್ನು ತೆರೆದ ಕೂಡಲೇ ನಾನು ಬೇಡವೆಂದರೂ ಬೆಳಕು ಬರುತ್ತದೆ. ಪರಮಾತ್ಮನ ದಯೆಯೂ ಹೀಗೆಯೇ. ಅಜ್ಞಾನದಿಂದ ಮುಚ್ಚಿದ ನಮ್ಮ ಹೃದಯದ ದ್ವಾರವನ್ನು ಭಕ್ತಿಯಿಂದ, ಸಾಧನೆಯಿಂದ ತೆರೆಯುವುದಷ್ಟೇ ನಮ್ಮ ಕೆಲಸ. ಕೂಡಲೇ ಪರಮಾತ್ಮನ ಕರುಣೆಯು ನಮ್ಮ ಮೇಲೆ ಬೀಳುತ್ತದೆ. ಪರಮಾತ್ಮನು ಹೇಳಿದ ‘ಬುದ್ಧಿಯೋಗವನ್ನು ಕೊಡುತ್ತೇನೆ’ ಎಂಬುದನ್ನು ಈ ರೀತಿಯಾಗಿ ತಿಳಿದುಕೊಳ್ಳಬೇಕು.
ಪರಮಾತ್ಮನ ವಿಭೂತಿಯನ್ನು ತಿಳಿದುಕೊಳ್ಳುವ ಈ ತಾರ್ಕಿಕ ವಿವರಣೆಯಿಂದ ಅರ್ಜುನನಿಗೆ ತೃಪ್ತಿಯಾಗಲಿಲ್ಲ ಆದ್ದರಿಂದ ಪುನಃ ಪ್ರಶ್ನೆಯನ್ನು ಕೇಳುತ್ತಾನೆ.
ಅರ್ಜುನ ಉವಾಚ
ಪರಂ ಬ್ರಹ್ಮಪರಂ ಧಾಮ ಪವಿತ್ರಂ ಪರಮಂ ಭವಾನ್ |
ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್ || || 12 ||
ಅರ್ಜುನ ಹೇಳುತ್ತಾನೆ
ಅರ್ಥ :- ನೀನು ಪರಬ್ರಹ್ಮನೆಂದೂ, ಶ್ರೇಷ್ಠವಾದ ನಿವಾಸಸ್ಥಾನವೆಂದೂ, ಪಾವನಕರವೆಂದೂ, ಸರ್ವಶ್ರೇಷ್ಠನೆಂದೂ, ಶಾಶ್ವತವಾದ ದಿವ್ಯಪುರುಷನೆಂದೂ, ಆದಿ ದೇವನೆಂದೂ, ಹುಟ್ಟು ಇಲ್ಲದವನೆಂದೂ, ಸರ್ವವ್ಯಾಪಿ ಎಂದೂ,

ಅಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ |
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ || || 13 ||
ಅರ್ಥ :- ಎಲ್ಲಾ ಋಷಿಗಳೂ, ದೇವರ್ಷಿಯಾದ ನಾರದರೂ, ಅಸಿತನೂ, ದೇವನೂ, ಮತ್ತು ವ್ಯಾಸರೂ ಹೇಳುತ್ತಾರೆ. ಅದೇ ಮಾತನ್ನು ಈಗ ನೀನೇ ಸ್ವತಃ ಹೇಳುತ್ತಿದ್ದೀಯೆ.
ವೈದಿಕ ಸಾಹಿತ್ಯದಲ್ಲಿ ಶಿಕ್ಷಣವನ್ನು ಹೊಂದಿದ್ದ ಅರ್ಜುನನಿಗೆ ಪರಮಾತ್ಮನ ಗುಣಗಳನ್ನು ವರ್ಣಿಸತಕ್ಕ ಮೇಲಿನ ಶಬ್ದಗಳ ಪರಿಚಯವಿತ್ತು. ಅವನು ಅವುಗಳನ್ನು ಕೇಳಿ ತಿಳಿದಿದ್ದನು. ಆದರೆ ಅವನ ಕಾಲದ ಇತರೆ ಜನರಂತೆ ಅವನು ಅವುಗಳ ಅನುಭವವನ್ನು ಹೊಂದಿರದೆ ಅವು ಕೇವಲ ಶಬ್ದಾಡಂಬರಗಳೆಂದು ಭಾವಿಸಿದ್ದನು. ತನ್ನ ಪರಿಚಿತನೂ, ಪರಮ ಮಿತ್ರನೂ ಹಿತೈಷಿಯೂ, ಸಂಬಂಧಿಯೂ, ಆದ ಶ್ರೀಕೃಷ್ಣನೇ ಆ ಶಬ್ದಗಳನ್ನು ಹೇಳಿ, ತಾನೇ ಪರಮಾತ್ಮನೆಂದು ಹೇಳಿದಾಗ್ಯೆ ಅವನ ಕುತೂಹಲವು ಹೆಚ್ಚಾಯಿತು. ಜೊತೆಗೆ ಆಶ್ಚರ್ಯವೂ ಆಯಿತು. ತನ್ನೆದುರಿಗಿರುವ ತನ್ನಂತೆಯೇ ಮನುಷ್ಯನಾದ ಕೃಷ್ಣನು ಪರಮಾತ್ಮನಾಗಲು ಹೇಗೆ ಸಾಧ್ಯ? ಎಂಬ ಆಶ್ಚರ್ಯವೂ ಉಂಟಾಯಿತು. ಅದನ್ನು ಈ ಎರಡು ಶ್ಲೋಕಗಳಲ್ಲಿ ಮತ್ತು ಮುಂದಿನ ಶ್ಲೋಕಗಳಲ್ಲಿ ವ್ಯಕ್ತಪಡಿಸಿದ್ದಾನೆ.

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ |
ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ || || 14 ||
ಅರ್ಥ :- ನನಗೆ ನೀನು ಹೇಳುತ್ತಿರುವ ಎಲ್ಲಾ ಮಾತುಗಳೂ ನಿಜವೆಂದು ನಂಬುತ್ತೇನೆ. ಆದರೆ, ಭಗವಂತನೇ, ದೇವತೆಗಳಾಗಲೀ, ದಾನವರಾಗಲೀ, ಇವರಾರೂ ನಿನ್ನ ಸ್ಪಷ್ಟರೂಪವನ್ನು ತಿಳಿಯಲಾರರು.
ಸ್ವರ್ಗಲೋಕದಲ್ಲಿರುವವರು ದೇವತೆಗಳು ಇವರಿಗೆ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳುವ ಶಕ್ತಿ ಇದೆ. ಇವರು ಮಾನವರಿಗಿಂತ ಹೆಚ್ಚು ಮಾನಸಿಕ ಹಾಗೂ ಬೌದ್ಧಿಕ ಶಕ್ತಿಯುಳ್ಳವರಾಗಿದ್ದಾರೆ. ದನುವಿನ ಮಕ್ಕಳು ದಾನವರು. ಇವರು ಶೂರರಾಗಿದ್ದರು ಅಧಾರ್ಮಿಕರು ಇವರು ಪದೇ ಪದೇ ದೇವಲೋಕದ ಮೇಲೆ ದಾಳಿ ಮಾಡಿ ಯಜ್ಞ ಯಾಗಾದಿಗಳನ್ನು ನಾಶಮಾಡುತ್ತಾರೆ. ಇವರಿಬ್ಬರೂ ಪರಮಾತ್ಮನ ನಿಜವಾದ ರೂಪನ್ನು ತಿಳಿಯಲಾರರು.
ಹಿಂದೆ ತಿಳಿಸಿದಂತೆ, ದೇವತೆಗಳೆಂದರೆ ಇಂದ್ರಿಯಗಳ ಅಧಿದೇವತೆಗಳು, ಮನುಷ್ಯನಲ್ಲಿರುವ ಸದ್ಗುಣಗಳೆಲ್ಲದರ ಅಧಿದೇವತೆಗಳು. ಎನ್ನಬಹುದು. ಅಂತೆಯೇ ದುರ್ಗುಣಗಳಿಗೆ ದಾನವರು ಎನ್ನಬಹುದು. ಕೇವಲ ಸದ್ಗುಣಗಳನ್ನು ಮೈಗೂಡಿಸಿ ಕೊಳ್ಳುವುದರಿಂದ, ಇಲ್ಲವೆ ದುರ್ಗುಣಗಳನ್ನು ಮೈಗೂಡಿಸಿಕೊಳ್ಳುವುದರಿಂದ ಪರಮಾತ್ಮನ ಯಥಾಸ್ಥಿತಿಯನ್ನು (ನಿಜವಾದ ರೂಪವನ್ನು) ತಿಳಿಯುವುದು ಸಾಧ್ಯವಿಲ್ಲವೆಂದು ಅರ್ಜುನನು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾನೆ.

ಸ್ವಯಮೇವಾತ್ಮನಾ„ತ್ಮಾನಂ ವೇತ್ಥ ತ್ವಂ ಪುರುಷೋತ್ತಮ |
ಭೂತಭಾವನ ಭೂತೇಶ ದೇವದೇವ ಜಗತ್ಪತೇ || || 15 ||
ಅರ್ಥ :- ಎಲ್ಲಾ ಜೀವಿಗಳಿಗೂ ಆಧಾರನಾದವನೇ, ಎಲ್ಲಾ ಜೀವಿಗಳ ಒಡೆಯನೇ, ದೇವ ದೇವನೇ, ಜಗತ್ಪತಿಯೇ, ಪುರುಷೋತ್ತಮನೇ, ನಿನ್ನ ನಿಜರೂಪವನ್ನು ನೀನು ಮಾತ್ರ ತಿಳಿದಿದ್ದೀಯ.
ಪ್ರತಿಯೊಬ್ಬ ಮನುಷ್ಯನ ಇರುವಿಕೆ, ಹಾಗೂ ವಿವಿಧ ಚೇಷ್ಟೆಗಳಿಗೆ, ಚೇತನವನ್ನು ಕೊಡುವ ಪರಮಾತ್ಮನಿಗೆ ‘ಪುರುಷ’ ಎಂದು ಹೆಸರು ಇಲ್ಲಿ ಈ ಶಬ್ದವನ್ನುಪಯೋಗಿಸಿ ಪುರುಷೋತ್ತಮ ಎಂದು ಹೇಳಲಾಗಿದೆ.
ಆಶ್ಚರ್ಯದಿಂದ ಕೂಡಿದ ಅರ್ಜುನನು ತನ್ನ ಮನಸ್ಸಿನೊಳಗಿನ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾನೆ.

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ |
ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠತಿ || || 16 ||
ಅರ್ಥ :- ನೀನು ಹೇಗೆ ಈ ಎಲ್ಲಾ ಲೋಕಗಳಲ್ಲಿಯೂ ವ್ಯಾಪಿಸಿಕೊಂಡಿದ್ದೀಯೆ, ಎಂಬ ನಿನ್ನ ದಿವ್ಯವಾದ ಎಲ್ಲಾ ವಿಭೂತಿಗಳನ್ನೂ (ಮಹಿಮೆಗಳನ್ನೂ) ಸಂಪೂರ್ಣವಾಗಿ ನನಗೆ ಹೇಳು.
ಶ್ರೀಕೃಷ್ಣನು ಪರಮಾತ್ಮನೆಂಬುದು ಅರ್ಜುನನಿಗೆ ಈಗ ಮನದಟ್ಟಾಗಿದೆ. ಮತ್ತು ತಾನು ಸ್ವತಃ ತನ್ನ ಶರೀರ ಮನಸ್ಸು ಬುದ್ಧಿಗಳಿಂದ ಅವನ ದಿವ್ಯ ಮಹಿಮೆಗಳನ್ನು ತಿಳಿದುಕೊಳ್ಳಲಾರನೆಂಬುದು ಸ್ಥಿರವಾಗಿದೆ. ಆದುದರಿಂದ ಅವನ ಎಲ್ಲಾ ಮಹಿಮೆಗಳನ್ನು ವಿಸ್ತಾರವಾಗಿ ತಿಳಿಸಬೇಕೆಂದು ಪರಮಾತ್ಮನನ್ನು ಬೇಡುತ್ತಿದ್ದಾನೆ.
ಅರ್ಜುನನ ಈ ಬೇಡಿಕೆಯು ಕೇವಲ ಬೌದ್ಧಿಕ ಕುತೂಹಲವಷ್ಟೇ ಅಲ್ಲ. ಅವನ ಆಂತರಿಕ ಹೃದಯದ ಬಯಕೆಯೂ ಆಗಿತ್ತು.

ಕಥಂ ವದ್ಯಾಮಹಂ ಯೊಗಿಂಸ್ತ್ವಾಂ ಸದಾ ಪರಿಚಿಂತಯನ್ |
ಕೇಷು ಕೇಷು ಚ ಭಾವೇಷು ಚಿಂತ್ಯೋ„ಸಿ ಭಗವನ್ಮಯಾ || || 17 ||
ಅರ್ಥ :- ಎಲೈ ಯೋಗಿಯೇ, ನಾನು ನಿನ್ನನ್ನು ಯಾವ ಯಾವ ರೀತಿಯಲ್ಲಿ ಧ್ಯಾನ ಮಾಡಿ ತಿಳಿದುಕೊಳ್ಳಲಿ. ಭಗವಂತನೇ, ನಿನ್ನನ್ನು ನಾನು ಯಾವಯಾವ ಭಾವಗಳಿಂದ ಚಿಂತನೆಮಾಡಲಿ?
ಅರ್ಜುನನು ಪ್ರಶ್ನೆಯನ್ನು ಕೇವಲ ಬೌದ್ಧಿಕ ಕುತೂಹಲದಿಂದ ಕೇಳಲಿಲ್ಲ. ಗೀತೆಯ ಇದುವರೆಗಿನ ಉಪದೇಶವು ಕರ್ಮಯೋಗವನ್ನು ಪ್ರತಿಪಾದಿಸಿ, ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ಪಾಲಿಸುತ್ತಾ, ಜೀವನ ನಿರ್ವಹಣೆಗಾಗಿ ಉಚಿತವಾದ ಕರ್ಮವನ್ನು ಮಾಡುತ್ತಾ, ಸದಾಕಾಲವೂ ಪರಮಾತ್ಮನನ್ನು ಧ್ಯಾನಿಸುತ್ತಾ, ಫಲಾಪೇಕ್ಷೆಯನ್ನು ತ್ಯಜಿಸಿ ಕರ್ಮಗಳನ್ನು ಮಾಡಬೇಕೆಂದು ಹೇಳುತ್ತಾ ಬಂದಿದೆ. ಅದೇ ಭಾವವನ್ನು ಹಿಡಿದುಕೊಂಡು, ಪರಮಾತ್ಮನನ್ನು ಯಾವ ಯಾವ ಭಾವಗಳಿಂದ ಅದೇ ಭಾವವನ್ನು ಧ್ಯಾನಮಾಡಬೇಕು ಎಂಬ ಪ್ರಶ್ನೆಯನ್ನು ಅರ್ಜುನನು ಕೇಳಿದ್ದಾನೆ. ಇಲ್ಲಿ ಅರ್ಜುನನು ಕೃಷ್ಣನನ್ನು ‘ಯೋಗಿ’ ಎಂದೂ, ‘ಭಗವಾನ್’ ಎಂದೂ ಸಂಬೋಧಿಸಿರುವುದು ಅವನ ಮಾನಸಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಇದುವರೆಗಿನ ಉಪದೇಶವನ್ನು ಅರ್ಜುನನು ಒಪ್ಪಿಕೊಂಡು ಗೀತೆಯ ಉಪದೇಶದಂತೆ ಮಾರ್ಪಾಟು ಹೊಂದಿದ್ದಾನೆ.
ಅರ್ಜುನನು ಕುತೂಹಲವು ತೀವ್ರವಾಗಿತ್ತೆಂಬುದು ಮುಂದಿನ ಪ್ರಶ್ನೆಯಿಂದ ತಿಳಿದುಬರುತ್ತದೆ. ಹಿಂದಿನ ಪ್ರಶ್ನೆಗೆ ಉತ್ತರವನ್ನು ವಿಸ್ತಾರವಾಗಿ ಹೇಳಬೇಕೆಂದು ಅವನು ಬಯಸುತ್ತಾನೆ.

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ |
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿಮೇ„ಮೃತಮ್ || || 18 ||
ಅರ್ಥ :- ಜರ್ನಾದನನೇ, ನಿನ್ನ ಯೋಗವನ್ನು ಮತ್ತು ವಿಭೂತಿಗಳನ್ನು ನನಗೆ ವಿಸ್ತಾರವಾಗಿ ಹೇಳು. ಅಮೃತ ಸಮಾನವಾದ ನಿನ್ನ ಈ ಉಪದೇಶವನ್ನು ಕೇಳಿ ನನಗೆ ತೃಪ್ತಿಯಾಗಲಿಲ್ಲ. ಇನ್ನೂ ಕೇಳಬೇಕೆನಿಸುತ್ತದೆ.
ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆಂಬ ವಿದ್ಯಾರ್ಥಿಗೆ ಈ ತರಹದ ಜ್ಞಾನದ ಹಸಿವು ಇರುವುದು ಅವಶ್ಯಕ. ವಿಶೇಷವಾಗಿ ಅಧ್ಯಾತ್ಮ ವಿಷಯದಲ್ಲಿ ಇದು ಬೇಕೇ ಬೇಕು. ಏಕೆಂದರೆ ಈ ಜ್ಞಾನವನ್ನು ಕೇವಲ ತಿಳಿದುಕೊಂಡರೆ ಸಾಲದು. ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತಂದು ಅನುಭವಿಸಬೇಕು. ಆದುದರಿಂದ ವ್ಯವಹಾರಿಕವಾದ ಎಲ್ಲಾ ಸಣ್ಣಸಣ್ಣ ವಿವರಗಳನ್ನು ಸಹ ತಿಳಿದುಕೊಳ್ಳುವುದು ಅವಶ್ಯಕ.
ಶ್ರೀ ಭಗವಾನುವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ |
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ || || 19 ||
ಶ್ರೀ ಭಗವಂತನು ಹೇಳುತ್ತಾನೆ.
ಅರ್ಥ :- ಒಳ್ಳೇದು! ಕುರುಶ್ರೇಷ್ಠನೇ, ನನ್ನ ದಿವ್ಯವಾದ ವಿಭೂತಿಗಳಲ್ಲಿ ಪ್ರಾಮುಖ್ಯವಾದವುಗಳನ್ನು ನಿನಗೆ ಹೇಳುತ್ತೇನೆ. ಏಕೆಂದರೆ ಅವುಗಳನ್ನು ಸಂಪೂರ್ಣವಾಗಿ ಹೇಳಿ ಮುಗಿಸುವುದು ಸಾಧ್ಯವಿಲ್ಲ.
ಈ ಮುಂದೆ ವಿವರಿಸಲಾಗುವ ವರ್ಣನೆಗಳಲ್ಲಿ ಪರಮಾತ್ಮನನ್ನು ತಿಳಿದುಕೊಳ್ಳ ಬಹುದಾದ ಹಲವಾರು ಜೀವಿಗಳು ಹಾಗೂ ವಸ್ತುಗಳ ಉಲ್ಲೇಖವಿದೆ. ಮತ್ತು ಕೆಲವೆಡೆ ಇವೆರಡರ ಮಿಶ್ರಣವೂ ಇದೆ.
ಈ ವಿಭೂತಿಗಳಲ್ಲಿ ಎರಡು ಅಂಶಗಳನ್ನು ಗಮನಿಸಬೇಕು
(1) ಪ್ರತಿಯೊಂದು ವಿಶಿಷ್ಟ ಜೀವಿ ಇಲ್ಲವೆ ವಸ್ತುಗಳಲ್ಲಿ ಪರಮಾತ್ಮನು ಪ್ರಧಾನವಾಗಿದ್ದಾನೆ.
(2) ಪರಮಾತ್ಮನ ಅಸ್ತಿತ್ವದ ವಿನಹ ಆ ವಸ್ತುಗಳಾಗಲೀ, ಜೀವಿಗಳಾಗಲೀ, ಅವುಗಳ ಸಂಯೋಗವಾಗಲೀ ವಸ್ತುತಃ ಇರಲಾರವು.
ಇದುವರೆಗಿನ ಉಪದೇಶದಿಂದ ಅರ್ಜುನನಿಗೆ ಇನ್ನೂ ಜ್ಞಾನೋದಯವಾಗಲಿಲ್ಲ ವೆಂಬ ಕನಿಕರದಿಂದ ಶ್ರೀಕೃಷ್ಣನು ಅವನಿಗೆ ತನ್ನ ವಿಭೂತಿಗಳನ್ನು ವರ್ಣಿಸುವುದಾಗಿ ಪ್ರಾರಂಭದಲ್ಲಿಯೇ ಆಶ್ವಾಸನೆಯನ್ನು ಕೊಟ್ಟಿದ್ದಾನೆ. ಏಕೆಂದರೆ ಅರ್ಜುನನ್ನು ತಿದ್ದುವುದು ಅವನಿಗೆ ಬೇಕಾಗಿತ್ತು. ಆದಾಗ್ಯೂ ತನ್ನ ವಿಭೂತಿಗಳಲ್ಲಿ ಉದಾಹರಣೆಗೆ ರೂಪವಾಗಿ ಕೆಲವನ್ನು ಮಾತ್ರ ಹೇಳುವುದಾಗಿ ತಿಳಿಸಿದ್ದಾನೆ. ಏಕೆಂದರೆ ಪ್ರಪಂಚದ ಎಲ್ಲಾ ಕಡೆಗೂ ಅವನೇ ತುಂಬಿರುವುದರಿಂದ ಎಲ್ಲಾ ವಿಭೂತಿಗಳನ್ನೂ ಹೇಳಿ ಮುಗಿಸುವುದು ಸಾಧ್ಯವೇ ಇಲ್ಲ.
ವಿಭೂತಿಗಳ ಮೂಲತತ್ವವನ್ನು ಪ್ರಾರಂಭದಲ್ಲಿ ಹೇಳಲಾಗಿದೆ.
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ || || 20 ||
ಅರ್ಥ :- ಗುಡಾ ಕೇಶನೇ, ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುವ, ಅವುಗಳ ಆತ್ಮವು ನಾನು, ಎಲ್ಲಾ ಜೀವಿಗಳ ಸೃಷ್ಟಿ (ಪ್ರಾರಂಭ) ಇರುವಿಕೆ ಮತ್ತು ನಾಶ (ಕೊನೆ) ಇವೆಲ್ಲವೂ ನಾನೇ.
ಈ ಶ್ಲೋಕದಲ್ಲಿ ಸ್ಥೂಲವಾದ ಸಿದ್ಧಾಂತವನ್ನು ಹೇಳಿ, ಮುಂದಿನ ಶ್ಲೋಕಗಳಲ್ಲಿ ಯಾವ ಯಾವ ಜೀವಿಗಳು ಮತ್ತು ವಸ್ತುಗಳಲ್ಲಿ ಪರಮಾತ್ಮನನ್ನು ಕಾಣಬಹುದೆಂಬ ಉದಾಹರಣೆಗಳನ್ನು ಹೇಳಲಾಗಿದೆ.

ಆದಿತ್ಯಾನಾಮಹಂ ವಿಷ್ಣುಜ್ರ್ಯೋತಿಷಾಂ ರವಿರಂಶುಮಾನ್ |
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ || || 21 ||
ಅರ್ಥ :- ದ್ವಾದಶಾದಿತ್ಯರ ಪೈಕಿ ನಾನು ವಿಷ್ಣುವು. ಬೆಳಕು ಕೊಡುವ ಗ್ರಹಗಳ ಪೈಕಿ ನಾನು ಸೂರ್ಯನು, ಮರುತ್ತುಗಳ (ಗಾಳಿ) ಪೈಕಿ ನಾನು ಮರೀಚಿಯು. ನಕ್ಷತ್ರಗಳ ಪೈಕಿ ನಾನು ಚಂದ್ರನು.
ಆದಿತ್ಯರು ಎಂದರೆ ಅದಿತಿಯ ಮಕ್ಕಳು. ಹನ್ನೆರಡು ಆದಿತ್ಯರುಗಳಿದ್ದಾರೆಂದೂ, ಇವರು ಹನ್ನೆರಡು ತಿಂಗಳುಗಳೆಂದೂ, ಉಲ್ಲೇಖವಿದೆ. ವಿಷ್ಣುವು ಆದಿತ್ಯರುಗಳ ಪೈಕಿ ಒಬ್ಬನೆಂದು ವಿಷ್ಣು ಪುರಾಣದಲ್ಲಿ ಉಲ್ಲೇಖವಿದೆ. ಮರತ್ತುಗಳು (ಗಾಳಿ) ರುದ್ರನ ಮಕ್ಕಳು. ಮರೀಚಿಯು ಇವರ ಮುಖಂಡನು.
ಈ ವಿಭಾಗದಲ್ಲಿರುವ ಇಪ್ಪತ್ತೆರಡು ಶ್ಲೋಕಗಳಲ್ಲಿ ಪರಮಾತ್ಮನ ಶಕ್ತಿ ಹಾಗೂ ವಿಭೂತಿಗಳನ್ನು ಧ್ಯಾನಮಾಡಲು ಅನುಕೂಲವಾಗಲೆಂದು ಎಪ್ಪತ್ತೈದು ಉದಾಹರಣೆ-ಗಳನ್ನು ಕೊಡಲಾಗಿದೆ.

ವೇದಾನಾಂ ಸಾಮವೇದೋ„ಸ್ಮಿ ದೇವಾನಾಮಸ್ಮಿ ವಾಸವಃ |
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ || || 22 ||
ಅರ್ಥ :- ವೇದಗಳ ಪೈಕಿ ನಾನು ಸಾಮವೇದವು. ದೇವತೆಗಳ ಪೈಕಿ ನಾನು ವಾಸವನು. ಇಂದ್ರಿಯಗಳ ಪೈಕಿ ಮನಸ್ಸು. ಎಲ್ಲಾ ಜೀವಂತ ಪ್ರಾಣಿಗಳ ಬುದ್ಧಿಶಕ್ತಿಯು ನಾನು.
ವೇದಗಳ ಪೈಕಿ ಋಗ್ವೇದವು ಹಿರಿದೆಂದು ಪರಿಗಣಿಸಲಾಗಿದೆ. ಆದರೆ ಸಾಮವೇದದಲ್ಲಿ ಋಗ್ವೇದದ ಸಾರವೆಲ್ಲವೂ ತುಂಬಿರುವುದರ ಜೊತೆಗೆ, ಇದನ್ನು ಸಂಗೀತದ ವಿವಿಧ ಧಾಟಿಗಳಲ್ಲಿ ತಾಳಬದ್ಧವಾಗಿ ಹಾಡಲು ಅನುಕೂಲವಾಗುವಂತೆ ರಚಿಸಲಾಗಿದೆ. ಸಂಗೀತಶಾಸ್ತ್ರವು ವೇದಕಾಲದಲ್ಲಿ ಎಷ್ಟು ಉಚ್ಚ ಸ್ಥಿತಿಗೆ ಏರಿತ್ತೆಂಬುದನ್ನು ಇದು ಸೂಚಿಸುತ್ತದೆ. ಈ ಸಾಮವೇದವೇ ಪರಮಾತ್ಮನೆಂದು ಇಲ್ಲಿ ಹೇಳಲಾಗಿದೆ. ವಾಸವ ಎಂದರೆ ಇಂದ್ರ. ಇವನು ದೇವತೆಗಳಿಗೆ ರಾಜನು. ಭೂಲೋಕದಲ್ಲಿ ಪುಣ್ಯ ಕರ್ಮಗಳನ್ನು ಮಾಡಿದವರು ದೇವತೆಗಳಾಗಿ ಹುಟ್ಟಿ ಸ್ವರ್ಗಲೋಕದಲ್ಲಿ ಸುಖವನ್ನು ಅನುಭವಿಸುತ್ತಾರೆಂಬ ಉಲ್ಲೇಖವಿದೆ. ದೇವತೆಗಳ ರಾಜನಾದ ಇಂದ್ರನು ಪರಮಾತ್ಮನ ವಿಭೂತಿಯಿದ್ದಂತೆ, ಮನುಷ್ಯ ಶರೀರದಲ್ಲಿಯ ದೇವತೆ ಎಂದರೆ ಇಂದ್ರಿಯಗಳ ರಾಜನಾದ ಮನಸ್ಸು ಸಹ ಪರಮಾತ್ಮನ ವಿಭೂತಿ ಎಂದು ತಿಳಿಯಬೇಕೆಂದು ಹೇಳಲಾಗಿದೆ. ಎಲ್ಲಾ ಸಜೀವ ಪ್ರಾಣಿಗಳ ಬುದ್ಧಿಶಕ್ತಿಯು ನಾನು, ಅವುಗಳ ಚಲನವಲನಾದಿಗಳಿಗೆ ಚೇತನಾಶಕ್ತಿಯನ್ನು ಕೊಡುವವನೂ ನಾನು.

ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ |
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ || || 23 ||
ಅರ್ಥ :- ಏಕಾದಶ ರುದ್ರರ ಪೈಕಿ ನಾನು ಶಂಕರನು. ಯಕ್ಷ, ರಾಕ್ಷಸರುಗಳ ಪೈಕಿ ನಾನು ಧನಾಧಿಪತಿಯಾದ ಕುಬೇರನು. ಅಷ್ಟವಸುಗಳ ಪೈಕಿ ನಾನು ಅಗ್ನಿಯು. ಪರ್ವತಗಳ ಪೈಕಿ ನಾನು ಮೇರು ಪರ್ವತವು.
ಅರ್ಜುನನು ವೇದವನ್ನು ಅಭ್ಯಾಸಮಾಡಿ ಅದರಲ್ಲಿ ಶ್ರದ್ಧೆಯುಳ್ಳವನಾದ್ದುದರಿಂದ, ಅವನಿಗೆ ಧ್ಯಾನಮಾಡಲು ಸುಲಭವಾಗಲೆಂದು, ವೇದದಲ್ಲಿ ಉಲ್ಲೇಖವಿರುವ ಶಬ್ದಗಳನ್ನೇ ಇಲ್ಲಿ ಹೇಳಲಾಗಿದೆ.
ನಾಶಮಾಡುವ ದೇವತೆಗಳಿಗೆ ‘ರುದ್ರರು’ ಎಂದು ಹೆಸರು. ಹೊಸ ಸೃಷ್ಟಿಯಾಗಬೇಕಾದರೆ ಮೊದಲಿದ್ದುದು ನಾಶವಾಗಲೇ ಬೇಕು. ಇಲ್ಲಿ ನಾಶ ಮಾಡುವುದೆಂದರೆ ಸಂಪೂರ್ಣ ಹಾಳು ಮಾಡುವುದೆಂದಲ್ಲ. ಹೊಸಸೃಷ್ಟಿಗೆ ಆಸ್ಪದ ಮಾಡಿಕೊಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ನಾಶಮಾಡುವುದು ಎಂದರ್ಥ – ಬೀಜದ ಸೃಷ್ಟಿಯಾಗಬೇಕಾದರೆ ಫಲವು ನಾಶವಾಗಲೇ ಬೇಕು. ಫಲ ಬರಬೇಕಾದರೆ ‘ಹೂವು’ ನಾಶವಾಗಬೇಕು. ಸೃಷ್ಟಿ ಚಕ್ರದ ಒಂದು ತುದಿ ‘ನಾಶ’ವಾದರೆ, ಇನ್ನೊಂದು ತುದಿ ‘ಸೃಷ್ಟಿ’- ಹೀಗೆ ನಾಶಮಾಡುವ ರುದ್ರರ ಪೈಕಿ ‘ನಾನು’ ಶಂಕರನು ಎಂದು ಹೇಳಲಾಗಿದೆ.
ದೇವಲೋಕದ ಖಜಾಂಚಿಗೆ ‘ಕುಬೇರ’ ಎಂದು ಹೆಸರು- ಯಕ್ಷರು ಮತ್ತು ರಾಕ್ಷಸರು ಇವನ ಅನುಚರರು. ವಸುಗಳು ಸಂಖ್ಯೆಯಲ್ಲಿ ಎಂಟು ಜನರಿದ್ದಾರೆ. ಇವರು ಋತುಗಳ ಅಧಿದೇವತೆಗಳು ಆರು ಋತುಗಳು, ಮತ್ತು ಮನಸ್ಸಿನಲ್ಲುಂಟಾಗುವ ಸುಖ, ದುಃಖಗಳು ಇವು ಎಂಟು ವಸುಗಳು ಎಂದು ತಿಳಿಯಲಾಗಿದೆ. ಅಗ್ನಿಯು ಈ ವಸುಗಳ ‘ಮುಖ’- ಮುಖ ಎಂದರೆ ಭೋಗ ಪಡುವ ಇಂದ್ರಿಯ. ಪರಮಾತ್ಮನನ್ನು ವಸುಗಳ ಪೈಕಿ ಅಗ್ನಿಯಲ್ಲಿ ಧ್ಯಾನಮಾಡಬೇಕು. ಪರ್ವತಗಳ ಪೈಕಿ ನಾನು ಮೇರುಪರ್ವತವು. ಎಂದೂ ಧರ್ಮಶಾಸ್ತ್ರದ ಪ್ರಕಾರ ಮೇರು ಪರ್ವತವು ಪ್ರಪಂಚದಲ್ಲೆಲ್ಲಾ ಅತಿ ದೊಡ್ಡ ಪರ್ವತ. ಇದು ಪ್ರಪಂಚದ ಮಧ್ಯಭಾಗದಲ್ಲಿದೆ. ಜಂಬೂ ದ್ವೀಪವು ಇದರ ಮಧ್ಯಭಾಗ ಹಿಮಾಲಯ ಪರ್ವತವು ಮೇರು ಪರ್ವತ ಎಂದು ಕೆಲವರು ಹೇಳುತ್ತಾರೆ.

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ |
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ || || 24 ||
ಅರ್ಥ :- ಪಾರ್ಥನೇ, ಪುರೋಹಿತರುಗಳ ಪೈಕಿ ನಾನು ದೇವಗುರುವಾದ ಬೃಹಸ್ಪತಿಯು, ಸೇನಾಮುಖಂಡರುಗಳ ಪೈಕಿ ನಾನು ಸ್ಕಂದನು, ಸರೋವರಗಳ ಪೈಕಿ ನಾನು ಸಮುದ್ರವು.
ಸ್ಕಂದನು ಈಶ್ವರನ ಮಗ. ಇವನಿಗೆ ಸುಬ್ರಹ್ಮಣ್ಯ ಎಂಬ ಹೆಸರೂ ಇದೆ. ಸಮುದ್ರವು ಎಲ್ಲಾ ನೀರುಗಳಿಗೂ ಆಹಾರ.

ಮಹರ್ಷೀಣಾಂ ಭೃಗುರಹಂ ಗಿರಾಮಸ್ಮೈೀಕಮಕ್ಷರಮ್ |
ಯಜ್ಞಾನಾಂ ಜಪಯಜ್ಞೋ„ಸ್ಮಿ ಸ್ಥಾವರಾಣಾಂ ಹಿಮಾಲಯಃ || || 25 ||
ಅರ್ಥ :- ಮಹರ್ಷಿಗಳ ಪೈಕಿ ನಾನು ಭೃಗು ಋಷಿಯು. ಶಬ್ದಗಳ ಪೈಕಿ ನಾನು ‘ಓಂ’ ಕಾರವು. ಯಜ್ಞಗಳ ಪೈಕಿ ನಾನು ಜಪಯಜ್ಞವು. ಅಚಲ ವಸ್ತುಗಳಲ್ಲಿ ನಾನು ಹಿಮಾಲಯ ಪರ್ವತವು.
ಭೃಗುವು ಸಪ್ತರ್ಷಿಗಳಲ್ಲಿ ಒಬ್ಬನು – ಇವನು ಮಾನವ ಧರ್ಮಶಾಸ್ತ್ರವನ್ನು ರಚಿಸಿದ್ದಾನೆ. ನಮ್ಮ ಮನಸ್ಸಿನ ಭಾವಗಳನ್ನು ನಾವು ಶಬ್ದಗಳ ಮೂಲಕ ವ್ಯಕ್ತಪಡಿಸುತ್ತೇವೆ. ಇದೇ ರೀತಿ ಪರಮಾತ್ಮನನ್ನು ಪೂಜಿಸಲು ಓಂಕಾರವನ್ನು ಉಪಯೋಗಿಸಲಾಗಿದೆ. ಜಪ ಎಂದರೆ ಪರಮಾತ್ಮನವನ್ನು ಅಖಂಡವಾಗಿ ಧ್ಯಾನಮಾಡುವುದು. ಪ್ರತಿಯೊಂದು ಯಜ್ಞದಲ್ಲಿಯೂ ಒಂದಲ್ಲ ಇನ್ನೊಂದು ವಿಧದ ಜಪವಿದ್ದೇ. ನಿಜವಾಗಿ ನೋಡಿದರೆ ಎಲ್ಲಾ ಯಜ್ಞಗಳಲ್ಲಿಯೂ ಜಪವು ಪ್ರಧಾನವಾಗಿದೆ.

ಅಶ್ಚತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ |
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ || || 26 ||
ಅರ್ಥ :- ವೃಕ್ಷಗಳ ಪೈಕಿ ನಾನು ಅಶ್ವತ್ಥವೃಕ್ಷವು. ದೇವರ್ಷಿಗಳಲ್ಲಿ ನಾರದನು. ಗಂಧರ್ವರ ಪೈಕಿ ಚಿತ್ರರಥನೂ ನಾನು. ಸಿದ್ಧರ ಪೈಕಿ ನಾನು ಕಪಿಲ ಮುನಿಯು.
ಅಶ್ವತ್ಥ ಮರವು ಹಿಂದುಗಳಿಗೆ ಪವಿತ್ರವಾಗಿದೆ. ಇದು ಬಹಳ ಎತ್ತರವಾಗಿ ಬೆಳೆಯುವುದರ ಜೊತೆಗೆ ನೂರಾರು ವರ್ಷಗಳವರೆಗೂ ಬದುಕಿರುತ್ತದೆ. ನಾರದನು ಹರಿಭಕ್ತನು. ಇವನು ಹರಿನಾಮವನ್ನು ಘೋಷಿಸುತ್ತಾ ಸ್ವರ್ಗಲೋಕ, ಭೂಲೋಕ, ಮತ್ತು ಪಾತಾಳ ಲೋಕಗಳಲ್ಲಿ ಸಂಚರಿಸುತ್ತಿದ್ದಾನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಗಂಧರ್ವರು ದೇವಲೋಕದ ಗಾಯಕರು, ಇವರು ಸಂಗೀತಶಾಸ್ತ್ರದಲ್ಲಿ ನಿಪುಣರು. ಚಿತ್ರರಥನು ಪ್ರಾಯಶಃ ಇವರ ಮುಖಂಡನು ಇಲ್ಲವೆ ಪ್ರಸಿದ್ಧನಾದ ಗಾಯಕನು. ಸಿದ್ಧರು ಎಂದರೆ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದವರು. ಹಿಂದೆ ತಿಳಿಸಿದ ಯೋಗಾರೂಢರು. ಮುನಿ ಎಂದರೆ ಯಾವಾಗಲೂ ಮನನ ಮಾಡುವವನು. ಪರಮಾತ್ಮನ ನಾಮ ರೂಪಗಳನ್ನು ಮನನ ಮಾಡುವವನು ಸಿದ್ಧರ ಪೈಕಿ ಕಪಿಲನು ಹೆಸರುವಾಸಿಯಾದವನು. ಇವನು ಸಾಂಖ್ಯಶಾಸ್ತ್ರವನ್ನು ರಚಿಸಿದ್ದಾನೆ. ಅದು ಈಗಲೂ ಪೂಜ್ಯವಾಗಿದೆ. ಸಾಂಖ್ಯವೆಂದರೆ ಜ್ಞಾನವನ್ನು ತರ್ಕಬದ್ಧವಾಗಿ ವಿವರಿಸುವ ಶಾಸ್ತ್ರ- ಗೀತೆಯು ಸಾಂಖ್ಯಶಾಸ್ತ್ರವನ್ನವಲಂಬಿಸಿದೆ.

ಉಚ್ಛೈಶ್ರವಸಮಶ್ಚಾನಾಂ ವಿದ್ಧಿ ಮಾಮಮೃತೋದ್ಭವಮ್ |
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ || || 27 ||
ಅರ್ಥ :- ಕುದುರೆಗಳ ಪೈಕಿ ನಾನು, ಸಮುದ್ರಮಥನಕಾಲದಲ್ಲಿ ಹುಟ್ಟಿ ಬಂದ ಉಚ್ಛೈಶ್ರವಸ್ ಎಂಬ ಕುದುರೆಯು. ಆನೆಗಳ ಪೈಕಿ ನಾನು ಐರಾವತವು. ಮನುಷ್ಯರ ಪೈಕಿ ನಾನು ರಾಜನು.
ಅಮೃತವನ್ನು ಸಂಪಾದಿಸುವುದಕ್ಕಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಥನಮಾಡಲು ಪ್ರಾರಂಭಿಸಿದರು. ಆಗ ಅನೇಕ ಅಮೂಲ್ಯ ವಸ್ತುಗಳು ಹುಟ್ಟಿ ಬಂದವು. ಅವುಗಳ ಪೈಕಿ ಉಚ್ಛೈಶ್ರವಸ್ ಎಂಬ ಕುದುರೆ ಮತ್ತು ಐರಾವತ ಎಂಬ ಆನೆ ಇವು ಇದ್ದುವು. ಇವುಗಳನ್ನು ಇಂದ್ರನಿಗೆ ಕೊಡಲಾಯಿತು. ಈ ಕಾಲದಲ್ಲಿ ಒಟ್ಟು ಹದಿಮೂರು ಅಪೂರ್ವ ವಸ್ತುಗಳು ಹುಟ್ಟಿಬಂದವು. ಅವುಗಳನ್ನು ಬೇರೆಬೇರೆ ಮುಖಂಡರು ಹಂಚಿಕೊಂಡರು.

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿಕಾಮಧುಕ್ |
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕೀ || || 28 ||
ಅರ್ಥ :- ಆಯುಧಗಳ ಪೈಕಿ ನಾನು ವಜ್ರಾಯುಧವು, ಹಸುಗಳ ಪೈಕಿ ಕಾಮಧೇನುವು, ಸೃಷ್ಟಗೆ ಕಾರಣರಾದವರ ಪೈಕಿ ನಾನು ಮನ್ಮಥನು. ಸರ್ಪಗಳ ಪೈಕಿ ವಾಸುಕಿಯು ನಾನಾಗಿದ್ದೇನೆ.
ರಾಕ್ಷಸರನ್ನು ಕೊಲ್ಲುವುದಕ್ಕೆ ಅನುಕೂಲವಾದ ಆಯುಧವು ದೇವತೆಗಳಿಗೆ ಬೇಕಿತ್ತು. ದಧೀಚಿ ಎಂಬ ಋಷಿಯು ತನ್ನ ಬೆನ್ನೆಲುಬನ್ನು ಈ ಕಾರ್ಯಕ್ಕಾಗಿ ಕೊಟ್ಟನು. ಅವನನ್ನು ಕೊಂದು ಅವನ ಎಲುಬುಗಳಿಂದ ವಜ್ರಾಯುಧವನ್ನು ತಯಾರಿಸಲಾಯಿತು. ಈ ಆಯುಧವು ಇತರೆ ಎಲ್ಲಾ ಆಯುಧಗಳನ್ನು ನಾಶಮಾಡಬಲ್ಲದಾದಾಗ್ಯೂ, ಇದನ್ನು ಬೇರೆ ಯಾವ ಆಯುಧದಿಂzಲೂ ಮುರಿಯಲು ಸಾಧ್ಯವಿಲ್ಲ. ನಂತರ ಇಂದ್ರನು ಇದನ್ನು ಉಪಯೋಗಿಸಿ ವೃತ್ರಾಸುರನೇ ಮೊದಲಾದ ಅನೇಕ ರಾಕ್ಷರನ್ನು ಸಂಹಾರಮಾಡಿದನು. ಕಾಮಧೇನು ಎಂಬ ಹಸುವು ಕೇಳಿದ ವಸ್ತುಗಳನ್ನು ಕೊಡುತ್ತದೆ. ಮನ್ಮಥನು ಪ್ರೇಮದ ಅಧಿದೇವತೆ. ಇದು ಇಂದ್ರಿಯಗಳನ್ನು ಸೋಲಿಸುವುದಕ್ಕೆ ಆಕರ್ಷಿಸುವುದಕ್ಕೆ ಇವನು ಯಾವಾಗಲೂ ಹೂವಿನ ಐದು ಬಾಣಗಳನ್ನು ಹೂಡಲು ತಯಾರಾಗಿದ್ದಾನೆ. ಈ ಬಾಣಗಳು ನಾಟಿದರೆ ಆ ಮನುಷ್ಯನು ಇಂದ್ರಿಯ ವಿಷಯ ಸುಖಗಳ ದಾಸನಾಗಿ ಕಾಮಲೀಲೆಯಲ್ಲಿ ನಿರತನಾಗಿರುತ್ತಾನೆಂಬ ವರ್ಣನೆಯಿದೆ. ವಾಸುಕಿಯು ಒಂದು ಪ್ರಮುಖ ಸರ್ಪ. ಈಶ್ವರನು ಇದನ್ನು ತನ್ನ ಬೆರಳುಗಳಲ್ಲಿ ಉಂಗುರದಂತೆ ಧರಿಸಿಕೊಂಡಿದ್ದಾನೆ. ಸಮುದ್ರ ಮಂಥನ ಕಾರ್ಯದಲ್ಲಿ ಇದನ್ನು ಹಗ್ಗವಾಗಿ ಉಪಯೋಗಿಸಲಾಗಿತ್ತು. ಸರ್ಪಗಳಿಗೆ ಒಂದೇ ಹೆಡೆ ಇದೆ. ಮುಂದಿನ ಶ್ಲೋಕದಲ್ಲಿ ವರ್ಣಿಸುವ ನಾಗಗಳಿಗೆ ಅನೇಕ ಹೆಡೆಗಳಿವೆ.

ಅನಂತಶ್ಚಾಸ್ಥಿ ನಾಗಾನಾಂ ವರುಣೋ ಯಾದಸಾಮಹಮ್ |
ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ || || 29 ||
ಅರ್ಥ :- ನಾಗಗಳ ಪೈಕಿ ನಾನು ಅನಂತನು. ನೀರಿನ ಅಧಿದೇವತೆಗಳ ಪೈಕಿ ನಾನು ವರಣನು. ಪಿತೃಗಳ ಪೈಕಿ ನಾನು ಆರ್ಯಮನೂನಿಯಾಮಕರಲ್ಲಿ ಯಮನೂ ನಾನಾಗಿದ್ದೇನೆ. ಆರ್ಯಮನು. ಚಿಜಜ sಣoಠಿ

ಶ್ರೀವಿಷ್ಣುವು ಸಾವಿರ ಹೆಡೆಗಳಿರುವ ನಾಗನ ಮೇಲೆ ಯೋಗನಿದ್ರೆ ಮಾಡುತ್ತಾ ಮಲಗಿದ್ದಾನೆ. ಅವನ ಹೊಕ್ಕಳಿನಿಂದ ಬ್ರಹ್ಮನು ಹುಟ್ಟಿದವನೆಂದು ಪುರಾಣಗಳಲ್ಲಿ ವರ್ಣನೆ ಇದೆ. ವರುಣನು ನೀರಿನ ಅಧಿದೇವತೆ, ಇವನ ಶರೀರವು ಅರ್ಧ ಮನುಷ್ಯಾಕಾರವಾಗಿದ್ದು, ಅರ್ಧ ಮೀನಿನಾಕಾರದ್ದೂ ಆಗಿದೆ ಸಮುದ್ರ ಮತ್ತು ಇತರೆ ಎಲ್ಲಾ ಜಲಾಶಯಗಳ ಮೇಲೂ ಇವನ ಅಧಿಕಾರವಿದೆ ಆರ್ಯಮನು ಪಿತೃಲೋಕದ ರಾಜನು ಯಮನು ಮರಣದ ಅಧಿದೇವತೆ, ನರಕಕ್ಕೆ ಇವನು ರಾಜನು. ಮನುಷ್ಯರು ಮಾಡಿದ ವಿವಿಧ ಪಾಪಗಳ ಲೆಕ್ಕವನ್ನಿಟ್ಟುಕೊಂಡು ಅವರು ಸತ್ತನಂತರ ಅವರ ಪಾಪಗಳಿಗನುಸಾರವಾದ ಶಿಕ್ಷೆಯನ್ನು ನರಕದಲ್ಲಿ ವಿಧಿಸುತ್ತಾನೆಂದು ಪುರಾಣಗಳಲ್ಲಿ ವರ್ಣಣೆ ಇದೆ. ಯಮನು ಜೀವಿಸುವಿಕೆ ಹಾಗೂ ಹಾಗೂ ಮರಣಗಳ ನಿಯಾಮಕನು. ಪ್ರಪಂಚದಲ್ಲಿ ಮರಣವಿಲ್ಲದೆ ಕೇವಲ ಸೃಷ್ಟಿಯಷ್ಟೇ ಇದ್ದಿದ್ದರೆ ಇಷ್ಟರಲ್ಲಿ ಪ್ರಪಂಚದಲ್ಲಿ ಉಸಿರಾಡಲು ಸಹ ಸ್ಥಳವಿರುತ್ತಿರಲಿಲ್ಲ. ಹೊಸ ಸೃಷ್ಟಿ ಆಗಬೇಕಾದರೆ ಹಳತು ನಾಶವಾಗಬೇಕು. ನಾಶ ಮತ್ತು ಸೃಷ್ಟಿ ಇವು ಒಂದಾದ ಮೇಲೊಂದರಂತೆ ಬರತಕ್ಕವು. ಮನುಷ್ಯನು ಪುನಃ ಹುಟ್ಟಬೇಕಾದರೆ ಮೊದಲು ಸಾಯಲೇಬೇಕು. ಯಮನು ಇದನ್ನು ನಿಯಂತ್ರಿಸುವವನು. ಮರಣವನ್ನು ನಿಯಂತ್ರಿಸುತ್ತದೆ. ಪುನಃ ಪುನಃ ಸೃಷ್ಟಿ ಅಷ್ಟೇ ಆಗುತ್ತಿದ್ದರೆ ಪ್ರಪಂಚದಲ್ಲಿ ಏನಾಗುತ್ತಿತ್ತೆಂದು ಊಹಿಸುವುದು ಕೂಡ ಕಷ್ಟ!
ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್
ಮೃಗಾಣಾಂ ಚ ಮೃಗೇಂದ್ರೋ„ಹಂ ವೈನತೇಯಶ್ಚಪಕ್ಷಿಣಾಮ್|| || 30 ||
ಅರ್ಥ :- ದೈತ್ಯರುಗಳ ಪೈಕಿ ನಾನು ಪ್ರಹ್ಲಾದನು. ಅಳತೆ (ಲೆಕ್ಕ) ಮಾಡುವುದರಲ್ಲಿ ನಾನು ಕಾಲವು. ಮೃಗಗಳಲ್ಲಿ ನಾನು ಸಿಂಹವು. ಪಕ್ಷಿಗಳಲ್ಲಿ ನಾನು ಗರುಡನಾಗಿದ್ದೇನೆ.
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ |
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ || || 31 ||
ಅರ್ಥ :- ಶುದ್ಧಿಗೊಳಿಸುವ ವಸ್ತುಗಳ ಪೈಕಿ ನಾನು ಗಾಳಿಯು, ಶಸ್ತ್ರಧಾರಿ ವೀರರಲ್ಲಿ ನಾನು ರಾಮನು. ಮೀನುಗಳ ಪೈಕಿ ನಾನು ಮೊಸಳೆಯು, ನದಿಗಳ ಪೈಕಿ ಗಂಗಾನದಿಯೂ ನಾನಾಗಿದ್ದೇನೆ.
ಶ್ರೀರಾಮನು ಶಸ್ತ್ರಧಾರಿಗಳಲ್ಲಿ ಹೆಸರಾದವನು. ರಾಮನ ಬಾಣಕ್ಕೆ ಹುಸಿಯಿಲ್ಲ ಎಂಬ ಗಾದೆ ಇದೆ. ಅವನು ಗುರಿಯಿಟ್ಟನೆಂದರೆ ಅದನ್ನು ಹೊಡದೇ ಸಿದ್ಧ. ಅವನ ಗುರಿಯೂ ಎಂದಿಗೂ ತಪ್ಪಲಿಲ್ಲ. ಶ್ರೀರಾಮನು ಸರ್ವವಿಧದಿಂದಲೂ, ಅಂದರೆ ಮಗ, ಸೋದರ, ಪತಿ, ರಾಜ, ಆಡಳಿತಗಾರ,
ಯೋಧ, ಪ್ರಜಾರಂಜಕ ಹೀಗೆ ಎಲ್ಲಾ ವಿಧದಲ್ಲಿಯೂ ಆದರ್ಶಮೂರ್ತಿಯಾಗಿದ್ದಾನೆ. ಜಹ್ನು
ಎಂಬ ಋಷಿಯು ತನ್ನ ತಪಸ್ಸಿಗೆ ಭಂಗವನ್ನುಂಟು ಮಾಡಿತೆಂದು ಗಂಗಾನದಿಯನ್ನು ಆಪೋಷಣಾ ರೂಪದಲ್ಲಿ ಕುಡಿದನು. ಪೂರ್ಣವಾಗಿ ಒಣಗಿಸಿಬಿಟ್ಟನು. ನಂತರ ಲೋಕ ಹಿತಕ್ಕಾಗಿ ಅದನ್ನು ತನ್ನ ಕಿವಿಯಿಂದ ಹೊರಕ್ಕೆ ಬಿಟ್ಟನು. ಜಹ್ನುವಿನ ಶರೀರದಿಂದ ಹೊರಕ್ಕೆ ಬಂದಿದ್ದರಿಂದ ಗಂಗಾನದಿಗೆ ಜಾಹ್ನವೀ ಎಂಬ ಹೆಸರು ಬಂದಿದೆ. ಗಂಗೆಯು ಪರ್ವಜನರ ಸರ್ವಪಾಪಗಳನ್ನೂ ತೊಳೆಯುತ್ತಾಳೆ ಎಂಬ ನಂಬಿಕೆ ಇದೆ.

ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ |
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ || || 32 ||
ಅರ್ಥ :- ಅರ್ಜುನನೇ, ಸೃಷ್ಟಿಗಳಲ್ಲಿ ನಾನು ಆದಿ, ಮಧ್ಯ ಮತ್ತು ಕೊನೆಯ ಭಾಗವು ವಿವಿಧ ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯು ನಾನಾಗಿದ್ದೇನೆ. ಎಲ್ಲಾ ವಾದಗಳಲ್ಲಿ ತರ್ಕವು ನಾನಾಗಿದ್ದೇನೆ.
ಎಲ್ಲಾ ಸೃಷ್ಟಿಗಳ ಪ್ರಾರಂಭ, ಮಧ್ಯಭಾಗ, ಮತ್ತು ಅಂತ್ಯಭಾಗ ಹೀಗೆ ಪ್ರತಿಯೊಂದು ಭಾಗಗಳಲ್ಲಿಯೂ ಪರಮಾತ್ಮನಿದ್ದಾನೆ. ಎಲ್ಲಾ ಜೀವಿಗಳಲ್ಲಿಯೂ ಪರಮಾತ್ಮನಿದ್ದಾನೆ ಎಂದು ಹಿಂದೆ ತಿಳಿಸಿ, ಅದನ್ನೇ ಇನ್ನೂ ವಿಶಾಲಭಾವದಿಂದ ವರ್ಣಿಸುತ್ತಾ ಸರ್ವಸೃಷ್ಟಿಗಳ ಆದಿ, ಮಧ್ಯ ಮತ್ತು ಅಂತ್ಯಭಾಗಗಳಲ್ಲಿಯೂ ಪರಮಾತ್ಮನನ್ನು ಕಾಣಬೇಕೆಂದು ಹೇಳಲಾಗಿದೆ. ವಿವಿಧ ವಿದ್ಯೆಗಳು ಅಂದರೆ ಸಸ್ಯಶಾಸ್ತ್ರ, ಮೊದಲಾದ ನಾನಾ ರೀತಿಯ ವೈಜ್ಞಾನಿಕ ಶಾಸ್ತ್ರಗಳು ಇವುಗಳ ಜ್ಞಾನವನ್ನು ಸಂಪಾದಿಸಬೇಕಾದರೆ ಆಯಾಯಾ ವಿದ್ಯೆಯನ್ನು ಕಲಿಯಬೇಕು. ರಸಾಯನಶಾಸ್ತ್ರ ಜ್ಞಾನವು, ಸಸ್ಯಶಾಸ್ತ್ರ ಜ್ಞಾನಕ್ಕಿಂತ ಭಿನ್ನವಾಗಿದೆ. ಇವೆರಡೂ ಸಂಗೀತಶಾಸ್ತ್ರ ಜ್ಞಾನಕ್ಕಿಂತ ಭಿನ್ನವಾಗಿವೆ. ಒಟ್ಟಿನಲ್ಲಿ ಪ್ರತಿಯೊಂದು ಶಾಸ್ತ್ರ ಜ್ಞಾನವೂ ಇನ್ನೊಂದು ಶಾಸ್ತ್ರಜ್ಞಾನಕ್ಕಿಂತ ಭಿನ್ನವಾಗಿದೆ. ಆದಾಗ್ಯೂ ಅವೆಲ್ಲದರಲ್ಲಿಯೂ ‘ಜ್ಞಾನ’ವು ಮಾತ್ರ ಸಮಾನವಾಗಿದೆ, ಒಂದೇ ಆಗಿದೆ. ಈ ಎಲ್ಲಾ ಜ್ಞಾನಕ್ಕೂ ಮೂಲಸ್ರೋತಸ್ಸು ‘ಆತ್ಮಜ್ಞಾನ’ ಈ ಜ್ಞಾನ ಪ್ರಾಪ್ತಿಯಾದರೆ ಮುಂದೆ ಯಾವ ಶಾಸ್ತ್ರದ ಜ್ಞಾನವನ್ನಾದರೂ ಸುಲಭವಾಗಿ ಪಡೆಯಬಹುದು. ಆದ್ದರಿಂದ ಎಲ್ಲಾ ವಿದ್ಯೆಗಳಲ್ಲಿ ಅಧ್ಯಾತ್ಮ ವಿದ್ಯೆ ‘ನಾನು’ ಎಂದು ಹೇಳಲಾಗಿದೆ. ವಾದದಲ್ಲಿ ಜಲ್ವ (ಕಟುವಾಗಿ ಟೀಕೆ ಮಾಡುವುದು) ವಿತಂಡ (ಎದುರು ಪಕ್ಷದವನು ಉಪಯೋಗಿಸಿದ ಶಬ್ದಗಳಲ್ಲಿಯ ದೋಷಗಳನ್ನೇ ಎತ್ತಿ ನಿರರ್ಥಕ ವಾದ ಮಾಡುವುದು). ಮತ್ತು ತಾರ್ಕಿಕ (ತರ್ಕಬದ್ಧವಾಗಿ ಮಾತನಾಡುವುದು) ಎಂದು ಮೂರ ವಿಧಗಳಿವೆ. ತರ್ಕಬದ್ಧವಾದ ವಾದಕ್ಕೇ ವಾದ ಎಂದು ಹೆಸರು. ಅದರಲ್ಲಿ ಪರಮಾತ್ಮನನ್ನು ಕಾಣಬೇಕೆಂದು ಹೇಳಲಾಗಿದೆ.

ಅಕ್ಷರಾಣಾಮಕಾರೋ„ಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ |
ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ || || 33 ||
ಅರ್ಥ :- ಅಕ್ಷರಗಳಲ್ಲಿ ಮೊದಲನೆಯ ಅಕ್ಷರವಾದ ‘ಅ’ ಕಾರವು ನಾನು. ಎಲ್ಲಾ ಸಮಾಸಗಳಲ್ಲಿ ನಾನು ದ್ವಂದ್ವ ಸಮಾಸವು. ಕೊನೆಯಿಲ್ಲದ ಕಾಲವೂ ನಾನು, ಎಲ್ಲವನ್ನು ಧರಿಸಿರುವವನೂ ನಾನು. ಎಲ್ಲ ಕಡೆಯಲ್ಲಿಯೂ ಮುಖವುಳ್ಳವನೂ ನಾನಾಗಿದ್ದೇನೆ.
ಸಂಸ್ಕøತ ಭಾಷೆಯಲ್ಲಿ ಮೊಟ್ಟ ಮೊದಲಿನ ಅಕ್ಷರವಾದ ‘ಅ’ ಕಾರಕ್ಕೆ ಪ್ರಾಧಾನ್ಯತೆಯಿದೆ. ಸ್ವರವಿಲ್ಲದೆ ಶಬ್ದವಾಗುವುದಿಲ್ಲ. ‘ಅ’ ಸ್ವರವು ಪ್ರತಿಯೊಂದು ಅಕ್ಷರದಲ್ಲಿಯೂ, ಪದದಲ್ಲಿಯೂ ಒಳಹೊಕ್ಕಿರುವುದರಿಂದ, ಸಂಸ್ಕøತ ಭಾಷೆಗೆ, ಇತರೆ ಭಾಷೆಗಳಿಗಿಂತ ಒಂದು ವಿಶೇಷ ತರಹದ ಪ್ರಾಧಾನ್ಯತೆ ಹಾಗೂ ಮಾಧುರ್ಯವಿದೆ. ವ್ಯಾಕರಣದಲ್ಲಿ ಅನೇಕ ಸಮಾಸಗಳಿದ್ದಾಗ್ಯೂ, ಎರಡು ವಸ್ತುಗಳನ್ನು ಸೂಚಿಸತಕ್ಕದ್ದ ದ್ವಂದ್ವ ಸಮಾಸಕ್ಕೆ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಇದರಲ್ಲಿ ರಾಮ ಮತ್ತು ಲಕ್ಷ್ಮಣ ಎಂದು ಹೇಳುವಾಗ, ಎರಡೂ ಶಬ್ದಗಳೂ ಸ್ಪಷ್ಟವಾಗಿ ಎದ್ದು ಕಾಣುವಂತೆ ರಾಮಲಕ್ಷ್ಮಣೌ” ಎಂದು ಹೇಳಲಾಗುತ್ತದೆ. ಇದೇ ರೀತಿ ಆತ್ಮ ಮತ್ತು ಅನಾತ್ಮ ವಸ್ತುಗಳು ದ್ವಂದ್ವ ಸಮಾಸದಂತೆ ಸೇರಿವೆ. ಬುದ್ಧಿವಂತನಾದವನು ಈ ಸಮಾಸದ ಎರಡು ಶಬ್ದಗಳನ್ನು ಸುಲಭವಾಗಿ, ಸ್ಪಷ್ಟವಾಗಿ ತಿಳಿಯುವಂತೆ ಆತ್ಮ ಹಾಗೂ ಅನಾತ್ಮಗಳ ಸಂಯೋಗದಿಂದಾದ ಮನುಷ್ಯನಲ್ಲಿ, ಬುದ್ಧಿವಂತನು, ಇವೆರಡಕ್ಕೂ ಸುಲಭವಾಗಿ ಗುರಿತಿಸಬಲ್ಲನು ಎಂಬ ಭಾವ.
ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ |
ಕೀರ್ತಿಃಶ್ರೀರ್ವಾಕ್ಚನಾರೀಣಾಮ್ ಸ್ಮøತಿರ್ಮೇಧಾ ಧೃತಿಃ ಶ್ಚಮಾ || 34 ||
ಅರ್ಥ :- ಎಲ್ಲವನ್ನೂ ನಾಶಮಾಡುವ ಮೃತ್ಯು ದೇವತೆಯು ನಾನಾಗಿದ್ದೇನೆ ಮತ್ತು ಹುಟ್ಟಬಹುದಾದ ಪ್ರತಿಯೊಂದು ವಸ್ತುವಿನ ಆಗರವೂ ನಾನು. ಖ್ಯಾತಿ ಸಂಪತ್ತು ಮಾತು, ಸ್ಮøತಿ, ಮೇಧಾ ಶಕ್ತಿ, ದೃಢತೆ, ಕ್ಷಮಾಗುಣ, ಮೊದಲಾದ ಸ್ತ್ರೀ ವಾಚಕ ಸದ್ಗುಣಗಳು ಸಹ ನಾನಾಗಿದ್ದೇನೆ.
ಮರಣ ಎಂದರೆ ಸಂಪೂರ್ಣನಾಶ, ಎಂದು ತಿಳಿಯಬಾರದು. ಮರಣ ದೇವತೆಯು ತಾನು ಎಂದು ಹೇಳಿದ ಉಸುಕಿನಲ್ಲಿಯೇ ಸರ್ವ ಹುಟ್ಟುಗಳಿಗೂ ರಾಮ ತಾನು ಕಾರಣನು ಎಂದು ಸಹ ಹೇಳಲಾಗಿದೆ. ಆದುದರಿಂದ ಮರಣ ಎಂದರೆ ಹುಟ್ಟುವಿಕೆಯ ತಯಾರಿ ಎಂದರ್ಥ. ಸಮುದ್ರದಲ್ಲಿ ಎದ್ದು ಬರುವ ಮಹದಾಕಾರದ ಅಲೆಗಳು, ಒಂದೊಂದಾಗಿ ನಾಶವಾಗಬಹುದು. ಆದರೆ ಅದರ ಹಿಂದುಗಡೆಯಲ್ಲಿಯೇ.. ಅದೇ ತೆರೆಯು, ಅನೇಕ ತೆರೆಗಳ ಗುಂಪುಗಳನ್ನೇ ತೆಗೆದುಕೊಂಡು, ಎಳೆದುಕೊಂಡು ಬರುತ್ತದೆ. ಮರಣ ಮತ್ತು ಜನನಗಳನ್ನು ಇದೇ ರೀತಿಯಾಗಿ ತಿಳಿದುಕೊಂಡು ಅವೆರಡರಲ್ಲಿಯೂ ಪರಮಾತ್ಮನ ಶಕ್ತಿಯನ್ನು ಕಾಣಬೇಕು.

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ |
ಮಾಸಾನಾಂ ಮಾರ್ಗಶೀರ್ಷೋ„ಹಮೃತೂನಾಂ ಕುಸುಮಾಕರಃ || 35 ||
ಅರ್ಥ : – ವಿವಿಧ ಸ್ತೋತ್ರಗಳಲ್ಲಿ ‘ಬೃಹತ್ಸಾಮ’ ಎಂಬ ಸ್ತೋತ್ರ ನಾನಾಗಿದ್ದೇನೆ. ಸಾಹಿತ್ಯದ ಛಂದಸ್ಸುಗಳಲ್ಲಿ ‘ಗಾಯತ್ರೀ ಎಂಬ ಛಂದಸ್ಸು ನಾನು. ತಿಂಗಳುಗಳ ಪೈಕಿ ನಾನು ಮಾರ್ಗಶಿರ ತಿಂಗಳೂ, ಋತುಗಳಲ್ಲಿ ವಸಂತ ಋತುವೂ ನಾನಾಗಿದ್ದೇನೆ.
ಸಾಮವೇದದ ಮಂತ್ರಗಳಿಗೆ ‘ಸಾಮನ್’ ಎನ್ನುತ್ತಾರೆ. ಇದನ್ನು ಬೇರೆ ಬೇರೆ ರೀತಿಯ ತಾಳ ಕಾಳಗಗಳಲ್ಲಿ ಹಾಡಬೇಕು. ಸುಶ್ರಾವ್ಯವಾಗಿ ಹಾಡಬೇಕಾದರೆ ಗುರುವಿನ ಹತ್ತಿರ ಅನೇಕ ವರ್ಷಗಳ ಕಾಲ ಅಭ್ಯಾಸಮಾಡಬೇಕು. ಸಾಮವೇದಲ್ಲಿರುವ ವಿವಿಧ ವೃತ್ತಗಳಲ್ಲಿ ‘ಬೃಹಸ್ಪತಿ ವೃತ್ತವು’ ಬಹು ಕಠಿಣವಾದುದು. ಈ ವೃತ್ತದಲ್ಲಿ ರಚಿಸಲ್ಪಟ್ಟ ಸಾಮನ್ ಅಥವಾ ಮಂತ್ರಗಳಿಗೆ ‘ಬೃಹತ್ಸಾಮ’ ಎಂದು ಹೆಸರು. ಪದ್ಯಮಯವಾದ ಸಂಸ್ಕøತ ಸಾಹಿತ್ಯವು ಅನೇಕ ವೃತ್ತಗಳಲ್ಲಿ ಬರೆಯಲ್ಪಟ್ಟಿವೆ. ಎಲ್ಲಾ ಛಂದಸ್ಸುಗಳ ಪೈಕಿ ಗಾಯತ್ರೀ ಛಂದಸ್ಸು ಪವಿತ್ರವಾದುದೆಂದೂ, ಹಿರಿದಾದುದೆಂದು ಗಣಿಸಲ್ಪಟ್ಟಿದೆ. ಏಕೆಂದರೆ ಪವಿತ್ರವಾದ ಗಾಯತ್ರೀ ಮಂತ್ರವು ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ.
ನೀಚ ವಸ್ತುಗಳಲ್ಲಿ ಸಹ ಕಾಣಬಹುದು ಎಂಬುದನ್ನು ಉದಾಹರಣೆಯಿಂದ ಸೂಚಿಸಲಾಗಿದೆ. ಪರಮಾತ್ಮನನ್ನು ಶ್ರೇಷ್ಠವಾದ ವಸ್ತುಗಳಲ್ಲಿ ಮಾತ್ರಕಾಣಬೇಕೆಂದಿಲ್ಲ.

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |
ಜಯೋ„ಸ್ಮಿ ವ್ಯವಸಾಯೋ„ಸ್ಮಿ ಸತ್ತ್ವಂ ಸತ್ತ್ವವತಾಮಹಮ್|| || 36 ||
ಅರ್ಥ :- ಎಲ್ಲಾ ಮೋಸದ ಆಟಗಳಲ್ಲಿ ಜೂಜಾಟವು ನಾನಾಗಿದ್ದೇನೆ. ತೇಜಸ್ಸಿನಿಂದ ಕೂಡಿದ ವಸ್ತುಗಳ ತೇಜಸ್ಸೂ, ಜಯವೂ, ದೃಢವಾದ ನಿರ್ಧಾರವೂ, ನಾನಾಗಿದ್ದೇನೆ, ದೃಢ ನಿರ್ಧಾರವುಳ್ಳವರಲ್ಲಿಯ ದೃಢತ್ವವು ಸಹ ನಾನು.
ಜೂಜಾಟದಿಂದ ಧರ್ಮರಾಜನು ರಾಜ್ಯವನ್ನು ಕಳೆದುಕೊಂಡು, ಸಹೋದರ-ರೊಂದಿಗೆ ಕಾಡಿಗೆ ಹೋಗಿ ನಾನಾ ರೀತಿಯ ಕಷ್ಟಕ್ಕೆ ಗುರಿಯಾದುದು ಅರ್ಜುನನಿಗೆ ಚನ್ನಾಗಿ ಜ್ಞಾಪಕವಿದೆ. ಆದುದರಿಂದ ಜೂಜಾಟವು ‘ನಾನು’ ಎಂದು ಹೇಳಿದುದು ಮಹತ್ವದ್ದಾಗಿದೆ. (ಪಗಡೆಯ ಜೂಜಾಟವು ಈಗ ಮರೆದು ಹೋಗಿರುವುದರಿಂದ ಈಗಿನ ಕಾಲದ ಕೆಲವು ಉದಾಹರಣೆಗಳನ್ನು ಎದುರಿಗಿಟ್ಟುಕೊಳ್ಳಬಹುದು. ‘ಮೋಸದ ಆಟಗಳಲ್ಲಿ ಮೂರೆಲೆಯ ಇಸ್ಪೀಟು ಆಟ, ಜೂಜಾಟಗಳಲ್ಲಿ ಕುದುರೆಯ ಜೂಜು, ಸಮಾಜದ ಅನೀತಿಗಳಲ್ಲಿ ಫೋರ್ಜರಿ ಇತ್ಯಾದಿ).

ವೃಷ್ಣೀನಾಂ ವಾಸುದೇವೋ„ಸ್ಮಿ ಪಾಂಡವಾನಾಂ ಧನಂಜಯಃ |
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ || || 37 ||
ಅರ್ಥ :- ವೃಷ್ಣಿಗಳ ಪೈಕಿ ನಾನು ವಾಸುದೇವನು. ಪಾಂಡವರ ಪೈಕಿ ಅರ್ಜುನನು, ಮುನಿಗಳ ಪೈಕಿ ನಾನು ವ್ಯಾಸನು. ಕವಿಗಳ ಪೈಕಿ ಉಶನ ಎಂಬ ಕವಿಯು ನಾನಾಗಿದ್ದೇನೆ.
ಯಾದವರ ಮೂಲ ಪುರುಷನಾದ ಯದುವಿಗೆ ವೃಷ್ಣಿ ಎಂಬ ಮಗನಿದ್ದನು. ಅವನ ಸಂತತಿಯವರೆಲ್ಲರೂ ‘ವೃಷ್ಣಿಗಳು’ ಎಂದು ಕರೆಯಲ್ಪಡುತ್ತಾರೆ. ಈ ಕುಲದಲ್ಲಿ ವಸುದೇವನು ಹುಟ್ಟಿದನು. ಅವನು ಕಂಸನ ತಂಗಿಯಾದ ದೇವಕಿಯನ್ನು ಮದುವೆಯಾದನು. ಅವರಿಂದ ಕೃಷ್ಣನು ಹುಟ್ಟಿದನು, ಇವನಿಗೆ ವಾಸುದೇವ ಎಂಬ ಹೆಸರೂ ಇದೆ. ಯಾದವ ಕುಲದಲ್ಲಿ (ವೃಷ್ಣಿ) ಶ್ರೀಕೃಷ್ಣನು ಪ್ರಸಿದ್ಧನಾದಂತೆ, ಪಾಂಡವರಲ್ಲಿ ಅರ್ಜುನನು ಪ್ರಧಾನನು. ಇವನಿಗೆ ಧನಂಜಯ (ಸಂಪತ್ತನ್ನು ಗೆಲ್ಲುವವನು) ಎಂಬ ಹೆಸರಿದೆ. ಮುನಿಗಳಲ್ಲಿ ನಾನು ವ್ಯಾಸನು ಎಂದು ಹೇಳಿರುವುದರಿಂದ, ವ್ಯಾಸನು ತನ್ನನ್ನು ತಾನೇ ಹೊಗಳಿಕೊಳ್ಳುತ್ತಿದ್ದಾನೆ ಎಂದು ಭಾವಿಸಬಹುದಾಗಿದೆ. ಆದರೆ ಅದು ಸಲ್ಲದು. ಕೇವಲ ಮಂತ್ರರೂಪದಲ್ಲಿದ್ದ ಉಪನಿಷತ್ತುಗಳು ಹಾಗೂ ವೇದಾಂತ ಸಾಹಿತ್ಯವನ್ನು ಕೃಷ್ಣ ದ್ವೈಪಾಯನ ಎಂಬ ಋಷಿಯು ಬರೆದನು. ಅವನು ‘ವ್ಯಾಸ’ ಎಂಬ ಅಂಕಿತನಾಮದಿಂದ ಬರೆದು ತನ್ನ ನಿಜವಾದ ಹೆಸರನ್ನು ಬಚ್ಚಿಟ್ಟುಕೊಂಡಿದ್ದಾನೆ, ಎಂಬ ಸತ್ಯಾಂಶವನ್ನು ಹೀಗೆ ಟೀಕೆ ಮಾಡುವವರು ನೆನಪಿಡಬೇಕು. ಶುಕ್ರಾಚಾರ್ಯರಿಗೆ ‘ಉಶನ’ ಎಂಬ ಹೆಸರಿತ್ತೆಂದು ಕೆಲವು ವ್ಯಾಖ್ಯಾನಕರ್ತರು ಅಭಿಪ್ರಾಯಪಡುತ್ತಾರೆ. ಈ ಹೆಸರು ಬೇರೆ ಕಡೆ ಬರಲಿಲ್ಲ, ಇವನು ಭೃಗು ಋಷಿಯ ಮಗನು, ಮತ್ತು ದೈತ್ಯರ ಗುರು. ಋಗ್ವೇದದಲ್ಲಿ ಶುಕ್ರನನನ್ನು ‘ಕವಿ’ ಎಂದು ಕರೆಯಲಾಗಿದೆ. ಕವಿ ಎಂದರೆ ಜ್ಞಾನೋದಯವಾದವನು ಎಂದರ್ಥ.

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ |
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್|| || 38 ||
ಅರ್ಥ :- ಶಿಕ್ಷೆ ಮಾಡುವವರಲ್ಲಿ ನಾನು ರಾಜದಂಡವು, ಜಯವನ್ನು ಬಯಸುವವರಲ್ಲಿ ನಾನು ನೀತಿಯು. ಗುಟ್ಟುಗಳಲ್ಲಿ ನಾನು ಮೌನವು, ಜ್ಞಾನಿಗಳಲ್ಲಿಯ ಜ್ಞಾನವು ನಾನಾಗಿದ್ದೇನೆ.
ರಾಜದಂಡ ಎಂಬುದು ಒಂದು ಸಂಕೇತ. ಪೊಲೀಸನ ಯೂನಿಫಾರಮ್ ಬಟ್ಟೆಯಿದ್ದಂತೆ. ಈ ಬಟ್ಟೆಯನ್ನು ಧರಿಸಿದ ಪೊಲೀಸ್ ಸಿಪಾಯಿಯ ಅಪ್ಪಣೆಯನ್ನು ಎಲ್ಲರೂ ಪಾಲಿಸುವಂತೆ, ಕುರ್ಚಿಯ ಮೇಲೆ ಕುಳಿತಿರುವ ನ್ಯಾಯಾಧೀಶನ ತೀರ್ಮಾನವನ್ನು ಒಪ್ಪುವಂತೆ, ರಾಜನ ಅಥವಾ ಕೇಂದ್ರ ಸರ್ಕಾರದ ವರಿಷ್ಟನ ಅಪ್ಪಣೆಯು ಮಾನ್ಯವಾದುದು. ಅಧಿಕಾರಸೂಚಕ ಈ ಸಂಜ್ಞೆಗಳಿಲ್ಲದಿದ್ದರೆ, ಅವರೆಲ್ಲರೂ ಸಾಮಾನ್ಯ ಪ್ರಜೆಗಳಂತೆಯೇ ಸರಿ.
ಶತ್ರುಗಳನ್ನು ಜಯಿಸಿದಾಗ್ಯೂ, ಆನಂತರ, ನೀತಿಯಿಂದ ರಾಜ್ಯಭಾರ ಮಾಡಿ, ಶತ್ರುಗಳನ್ನು ತನ್ನೆಡೆಗೆ ಒಲಿಸಿಕೊಳ್ಳುವವರೆಗೂ ರಾಜ್ಯವು ಭದ್ರವಾಗಿರಲಾರದು. ಆದ್ದರಿಂದ ಭೌತಿಕ ಜಯಕ್ಕಿಂತ ನೀತಿಯುತವಾದ ಮಾನಸಿಕ ಜಯವು ಶ್ರೇಷ್ಠವಾದುದು. ಯಾವುದಾದರೂ ವಿಷಯವನ್ನು ಗುಟ್ಟಾಗಿಡ ಬೇಕಾದರೆ ಮೌನವು ಅವಶ್ಯಕ. ಇದನ್ನು ಹೇಳಿದರೆ ತಿಳಿಯುವುದಿಲ್ಲ, ತಿಳಿಸಲು ಬರುವುದೂ ಇಲ್ಲ. ಮೌನವಾಗಿದ್ದು, ಸಾಧನೆಯ ಮೂಲಕ ಅದನ್ನು ಅನುಭವಿಸಬೇಕು.
ಇದುವರೆಗೆ ಹೇಳಿದುದನ್ನು ಪುನಃ ಸಂಕ್ಷೇಪವಾಗಿತಿಳಿಸಲಾಗಿದೆ.
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ |
ನ ತದಸ್ತಿ ವಿನಾ ಯತ್ಸ್ಮಾನ್ಮಯಾ ಭೂತಂ ಚರಾಚರಮ್ || || 39 ||
ಅರ್ಥ :- ಎಲ್ಲಾ ಭೂತಗಳ ಹುಟ್ಟುವಿಕೆಗೆ ಅವಶ್ಯಕವಾದ ಬೀಜವು ನಾನು. ಅರ್ಜುನನೇ, ನನ್ನ ಹೊರತು ಚರಾಚರ ವಸ್ತುಗಳಾವುವೂ ಇರಲಾರವು.
ಪರಮಾತ್ಮನೇ ಎಲ್ಲಾ ಸೃಷ್ಟಿಗೂ ಕಾರಣನನು ಎಂಬ ವಾಕ್ಯವನ್ನೇ ಬೇರೆ ರೂಪದಲ್ಲಿ ಹೇಳಲಾಗಿದೆ. ಪ್ರಳಯಕಾಲದಲ್ಲಿ ಇಡೀ ಪ್ರಪಂಚವು ಪರಮಾತ್ಮನಲ್ಲಿ ಸೂಕ್ಷ್ಮವಾಗಿ ಬೀಜರೂಪದಲ್ಲಿರುತ್ತದೆ. ಬೀಜವು ಮೊಳೆತು ಮರವಾಗುವಂತೆ ಪುನಃ ಸೃಷ್ಟಿಯು ಪ್ರಾರಂಭವಾದ ನಂತರ, ಈ ಬೀಜದ ಮುಖಾಂತರ ಚರಾಚರ ವಸ್ತುಗಳು ಹುಟ್ಟುತ್ತವೆ. ನಮ್ಮ ನಿತ್ಯಜೀವನದಲ್ಲಿ ಸಹ ಇಂತಹ ವ್ಯಾಪಾರವನ್ನು ಕಾಣಬಹುದು. ನಾವು ಗಾಢ ನಿದ್ರೆಯಲ್ಲಿರುವಾಗ, ನಮ್ಮ ವೈಯಕ್ತಿಕ ಗುಣದೋಷಗಳು, ಶಕ್ತಿ ಸಾಮಥ್ರ್ಯ, ಸಂಸ್ಕøತಿ, ಬುದ್ಧಿವಂತಿಕೆ, ಮತ್ತು ಇತರೆ ಎಲ್ಲಾ ಗುಣಗಳೂ ನಮ್ಮಲ್ಲಿ ಬೀಜರೂಪವಾಗಿ ಸ್ತಬ್ಧವಾಗಿ ಇರುತ್ತವೆ. ಆಗ ಈ ಯಾವ ಗುಣಗಳು ಪ್ರಕಟವಾಗುವುದಿಲ್ಲ. ಆದರೆ ಎಚ್ಚರವಾದ ನಂತರ, ಸಂದರ್ಭವೊದಗಿದ ಹಾಗೆ ಈ ಎಲ್ಲಾ ಗುಣಗಳೂ ತಾವಾಗಿಯೇ ಪ್ರಕಟವಾಗುತ್ತವೆ. ಮೇಲಿನ ವರ್ಣನೆಯನ್ನು ಇದೇ ರೀತಿಯಾಗಿ ತಿಳಿದುಕೊಳ್ಳಬೇಕು.

ನಾಂತೋ„ಸ್ತಿಮಮ ದಿವ್ಯಾನಾಂ ವಿಭೂತೀನಾಂ ಪರಂತಪ |
ಏಷ ತೂದ್ದೇಶತುಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ|| || 40||
ಅರ್ಥ :- ನನ್ನ ವಿಭೂತಿಗಳನ್ನು ವರ್ಣಿಸಿ ಮುಗಿಸಲು ಸಾಧ್ಯವಿಲ್ಲ. ಅದಕ್ಕೆ ಕೊನೆ ಎಂಬುದೇ ಇಲ್ಲ. ಆದಾಗ್ಯೂ, ಪರಂತಪನೇ, ನನ್ನ ವಿಭೂತಿಗಳನ್ನು ಈಗ ನಿನಗೆ ಸಂಕ್ಷೇಪವಾಗಿ ತಿಳಿಸಿದ್ದೇನೆ.
ಪರಮಾತ್ಮನ ವಿಭೂತಿಗಳ್ನು ಎಲ್ಲೆಲ್ಲಿ ಕಾಣಬಹುದೆಂಬುದನ್ನು, ಇದುವರೆಗೆ ಐವತ್ತು ನಾಲ್ಕು ಉದಾಹರಣೆಗಳ ಮೂಲಕ ತಿಳಿಸಲಾಯಿತು. ಇದೇ ರೀತಿಯಾಗಿ ಇಂದ್ರಿಯಗಳಿಗೆ ಗೋಚರವಾಗುವ ಎಲ್ಲಾ ವಸ್ತುಗಳಲ್ಲಿಯೂ ಪರಮಾತ್ಮನನ್ನು ಕಾಣಲು ಗುರುತಿಸಲು ಕಲಿಯಬೇಕೆಂಬುದು ನಿಜ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಸಾಧಕರಿಗೆ ಸುಲಭವಾಗಲೆಂಬ ದೃಷ್ಟಿಯಿಂದ ಉತ್ತಮವಾದ ಕೆಲವು ವಸ್ತುಗಳನ್ನು ಬೊಟ್ಟುಮಾಡಿ ತೋರಿಸಲಾಗಿದೆ ಅಷ್ಟೆ. ಇವುಗಳಲ್ಲಿ ಪರಮಾತ್ಮನನ್ನು ಕಾಣಲು ಅಭ್ಯಾಸ ಮಾಡಿ, ಕ್ರಮೇಣ ಇತರೆ ಎಲ್ಲಾ ವಸ್ತುಗಳಲ್ಲಿಯೂ ಆತನನ್ನು ಕಾಣಲು ಕಲಿಯಬೇಕು.
ಘೋತಗಮೇ ಈಸದನಾ ತಗಲಾ ಜೋಮಾ ಇದೇ ಭಾವವನ್ನು ಸಾರಂಶರೂಪದಲ್ಲಿ ಹೇಳಲಾಗಿದೆ.
ಯದ್ಯದ್ವಿಭೂತಿಮತ್ಸತ್ಸ್ವಂ ಶ್ರೀಮದೂರ್ಚಿತಮೇವ ವಾ |
ತತ್ತದೇವಾವಗಚ್ಛ ತ್ವಂ ಮಮ ತೇಜೋ„ಂಶಸಂಭವಮ್ || || 41 ||
ಅರ್ಥ :- ಪ್ರಪಂಚದಲ್ಲಿ ಪ್ರತಿಭಾವಂತವಾದ, ಅಭಿವೃದ್ಧಿಗೊಳ್ಳುತ್ತಿರುವ ಹಾಗೂ ಶಕ್ತಿಯುತವಾದ ಏನೇನಿವೆಯೋ, ಅವೆಲ್ಲವೂ ನನ್ನ ಅಂಶದಿಂದ ಹುಟ್ಟಿದವುಗಳೆಂದು ತಿಳಿ. ನಾನು ಅವುಗಳಲ್ಲಿದ್ದೇನೆಂದು ತಿಳಿದುಕೋ
ಅದೂಅಲ್ಲದಿದ್ದರೆ.
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ |
ವಿಷ್ವಭ್ಯಾಹಮಿದಂ ಕೃತ್ಸ್ವಮೇಕಾಂಶೇನ ಸ್ಥಿತೋ ಜಗತ್ || || 42 ||
ಅರ್ಥ :- ಇಷ್ಟೆಲ್ಲಾ ವಿವರಗಳನ್ನು ತಿಳಿದುಕೊಳ್ಳುವುದರಿಂದಾದರೂ ಏನು ಪ್ರಯೋಜನ, ಅರ್ಜುನನೇ, ಈ ಇಡೀ ಪ್ರಪಂಚವೂ ನನ್ನ ಕೇವಲ ಒಂದು ಅಂಶ ಮಾತ್ರದಿಂದ ಆಧರಿಸಿ ನಿಂತಿದೆ ಎಂದು ತಿಳಿದುಕೊ.
ಪ್ರಪಂಚದಲ್ಲಿರುವ ವಸ್ತುಗಳೆಲ್ಲದರಲ್ಲಿಯೂ ಪರಮಾತ್ಮನಿದ್ದಾನೆಂದು ಅವುಗಳ ಹೆಸರನ್ನು ಹೇಳುತ್ತಾ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಪ್ರತಿಯೊಂದು ಮಣ್ಣಿನ ಪಾತ್ರೆಗಳಲ್ಲಿಯೂ ಮಣ್ಣು ಇದೆ ಎಂದು ಹೇಳಿದಂತಾಗುತ್ತದೆ ಅಷ್ಟೆ. ಗಣಿತಶಾಸ್ತ್ರದ ಶಿಕ್ಷಕರು ಗಣಿತದ ಎಲ್ಲಾ ಲೆಕ್ಕಗಳನ್ನೂ ಮಾಡಿ ತೋರಿಸಿ ಮುಗಿಸಲು ಸಾಧ್ಯವಿಲ್ಲದಂತೆ, ಎಲ್ಲಾ ವಸ್ತುಗಳ ಹೆಸರನ್ನು ಹೇಳಿ ಮುಗಿಸಲೂ ಸಾಧ್ಯವಿಲ್ಲ.
‘ಜಗತ್’ ಎಂದರೆ, ಭೂಲೋಕ, ಸ್ವರ್ಗಲೋಕ, ಪಾತಾಳಲೋಕ, ನಕ್ಷತ್ರಲೋಕ, ಗ್ರಹಲೋಕ, ಮೊದಲಾದುವುಗಳಷ್ಟೇ ಅಲ್ಲ ವೇದಾಂತ ರೀತ್ಯಾ ‘ಜಗತ್’ ಎಂದರೆ ಪ್ರತಿಯೊಬ್ಬ ಜೀವಿಯೂ ತನ್ನ ಶರೀರ, ಮನಸ್ಸು, ಬುದ್ಧಿಗಳಿಂದ ಕಾಣುವ ಹಾಗೂ ಅನುಭವಿಸುವ ಅನುಭವಗಳೂ, ಭಾವಗಳೂ, ಊಹಾ ಪ್ರಪಂಚ ಮೊದಲಾದವುಗಳೆಲ್ಲವೂ ‘ಜಗತ್’ನೊಳಗೆ ಅಂತರ್ಭೂತವಾಗುತ್ತವೆ. ಇಂದ್ರಿಯಗಳು, ಮನಸ್ಸು, ಬುದ್ಧಿಗಳ ಕಲ್ಪನೆಗೆ ಸಿಗುವ ಪ್ರತಿಯೊಂದು ವಸ್ತುವೂ, ಭಾವವೂ ‘ಜಗತ್’ ಶಬ್ದದ ವ್ಯಾಖ್ಯೆಯೊಳಗೆ ಬರುತ್ತವೆ.
ಓಂ ತತ್ವದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ವಿಭೂತಿಯೋಗೋನಾಮ…
ದಶಮೋ„ಧ್ಯಾಯಃ
*******