S O U L B L I S S

Loading

Bhagavad Gita – Vinayak Rao Bapat – Chapter 12

ಅಧ್ಯಾಯ-12
ಭಕ್ತಿ ಯೋಗ
ಪೀಠಿಕೆ
ಶ್ರೀಕೃಷ್ಣನು ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿ ಅವನಲ್ಲಿ ಭಕ್ತಿ ಭಾವವನ್ನು ಜಾಗೃತಗೊಳಿಸಿದನು. ಇದುವರೆಗಿನ ಬೋಧವನ್ನು ಕೇಳಿದ ಅರ್ಜುನನನು, ಪರಮ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಪಡೆಯಬೇಕೆಂದು ಈಗ ಬಯಸಿದ್ದಾನೆ. ಕ್ಷತ್ರಿಯ ವೀರನು ಸ್ವಭಾವದಿಂದ ಮಹತ್ವಾಕಾಂಕ್ಷೆಯುಳ್ಳವನಾಗಿದ್ದು, ಅದನ್ನು ಸಾಧಿಸಲು ಎಂತಹ ಕಠಿಣತರವಾದ ಪ್ರಯತ್ನವನ್ನಾದರೂ ಮಾಡಲು ಸಿದ್ಧನಾಗುತ್ತಾನೆ. ಕ್ಷತ್ರಿಯರಲ್ಲಿ ಶ್ರೇಷ್ಠನೆಂದೂ, ಅಜೇಯನೆಂದೂ ಹೆಸರನ್ನು ಗಳಿಸಿದ ಅರ್ಜುನನಿಗೆ ಈ ಉತ್ಕಟ ಆಶೆಯುಂಟಾಗುವುದು ಸ್ವಾಭಾವಿಕ. ಆದರೆ ಅವನಿಗೆ ಈಗ ಉಂಟಾಗಿರುವ ಆಸೆಯು ರಾಜ್ಯದಾಹದ್ದಲ್ಲ. ಅದು ಆತ್ಮ ರಾಜ್ಯವನ್ನು ಜಯಿಸಿ ಆತ್ಮಾನಂದವನ್ನು ಅನುಭವಿಸಬೇಕೆಂಬ ಆಸೆಯಾಗಿತ್ತು. ಇದುವರೆಗೆ ಆತ್ಮ ಜ್ಞಾನದ ತಾತ್ವಿಕ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡ ಅವನು ಅದನ್ನು ವಿಶ್ವರೂಪದರ್ಶನದಿಂದ ಪ್ರತ್ಯಕ್ಷವಾಗಿ ನೋಡಿ ಅನುಭವಿಸಿದನು. ಬುದ್ಧಿಯಿಂದ ಒಪ್ಪಿದುದನ್ನು ಆಚರಣೆಗೆ ತರಬೇಕೆಂದು ಬಯಸುವುದು ಮನುಷ್ಯನ ಸ್ವಭಾವ. ಅಂತೆಯೇ ಬುದ್ಧಿಯಿಂದ ಒಪ್ಪಿ. ಈಸತದನಾ ದಜ. ಓ ಮದಸಸೋ ಪ್ರತ್ಯಕ್ಷ ದರ್ಶನದಿಂದ ಸ್ಥಿರವಾದ ಈ ಹಿನ್ನೆಲೆಯಲ್ಲಿ ಅರ್ಜುನನಿಗೆ ಸಾಕ್ಷಾತ್ಕಾರ ಬಗ್ಗೆ ತೀವ್ರವಾದ ಕುತೂಹಲವುಂಟಾಗಿದೆ. ಮೂಢನಂಬಿಕೆಯಿಂದ ಧಾರ್ಮಿಕ ವಿಧಿಗಳನ್ನು ಆಚರಣೆಯಲ್ಲಿ ತರುವವನಿಗಿಂತಲೂ ತರ್ಕಬದ್ಧವಾದ ತತ್ವಜ್ಞಾನವನ್ನು ತಿಳಿದು, ಆಚರಣೆಯಲ್ಲಿ ತರುವವನು ಶ್ರೇಷ್ಠನು.
ವಿಶ್ವರೂಪ ದರ್ಶನವಾದ ನಂತರ ಅರ್ಜುನನಿಗೆ ಶ್ರೀಕೃಷ್ಣನಲ್ಲಿ ಭಕ್ತಿಯೂ, ಗೌರವವೂ ಹೆಚ್ಚಾಯಿತು. ಅವನು ಕೇವಲ ಗೋಪಾಲನಲ್ಲದೆ, ಶುದ್ಧ ಪರಮಾತ್ಮನು ಎಂಬ ದೃಢವಾದ ವಿಶ್ವಾಸವುಂಟಾಯಿತು. ಆದ್ದರಿಂದ ತಾನೂ ಸಹ ಆತ್ಮಜ್ಞಾನವನ್ನು ಪಡೆಯಬೇಕೆಂಬ ಬಲವಾದ ಬಯಕೆಯಾಯಿತು. ಹಿಂದಿನ ಅಧ್ಯಾಯದ ಕೊನೆಯಲ್ಲಿ ಹೇಳಿದ ‘ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂವಿಧೋ„ರ್ಜುನ | ಜ್ಞಾತುಂ ದ್ರಷ್ಟುಂಚ ತತ್ವೇನ ಪ್ರವೇಷ್ಟುಂಚ ಪರಂತಪ’ ಎಂಬ ವಾಕ್ಯವು ಅರ್ಜುನನ ಮನಸ್ಸಿನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡಿದೆ. ಆದರೆ ತನ್ನ ವಿದ್ಯಾಭ್ಯಾಸ ಕಾಲದಲ್ಲಿ ‘ಪರಮಾತ್ಮನು ನಿರಾಕಾರನು, ನಾಮರೂಪಗಳಲ್ಲಿದವನು’ ಎಂದು ತಿಳಿದ ವಿಚಾರವೂ ಎದುರಿಗಿತ್ತು. ಶ್ರೀಕೃಷ್ಣನು ತನ್ನ ಶರೀರದಲ್ಲಿ ತೋರಿಸಿದ ವಿವಿಧ ರೂಪಗಳನ್ನು ಪ್ರತ್ಯಕ್ಷವಾಗಿ ಕಂಡ ಅವನು ತನಗೆ ಸಾಕಾರಧ್ಯಾನವು ಹಿತಕರವೋ, ನಿರಾಕಾರ ಧ್ಯಾನವು ಹಿತಕರವೋ ಎಂಬುದನ್ನು ತೀರ್ಮಾನಿಸಲಾರದೆ ಹೋದನು. ಮೇಲಾಗಿ ಅನನ್ಯ ಭಕ್ತಿಯಿಂದ ತನ್ನನ್ನು ಪಡೆಯಬಹುದೆಂದು ಶ್ರೀಕೃಷ್ಣನು ಹೇಳಿದ ಮಾತು ಅವನ ಮನಸ್ಸಿನಲ್ಲಿ ಮೇಲ್ಗಡೆಯಿತ್ತು. ಆದ ಕಾರಣ ಈ ಭಕ್ತಿಯ ವಿಧಾನವು ಹೇಗೆ? ಸಾಕಾರ ಧ್ಯಾನದಿಂದ ಮುಂದೆ ನಿರಾಕಾರ ಧ್ಯಾನವು ಸಾಧ್ಯವಾಗುವುದೇ? ಹಾಗಾದ್ದರೆ ಅದರ ದಾರಿಯಾವುದು? ವಿವರಗಳೇನು? ಎಂಬ ವಿಚಾರಗಳನ್ನು ವಿವರವಾಗಿ ತಿಳಿದುಕೊಳ್ಳುವುದಕ್ಕಾಗಿ ಈ ಅಧ್ಯಾಯದ ಪ್ರಾರಂಭದಲ್ಲಿ ಪ್ರಶ್ನೆಮಾಡಿದ್ದಾನೆ. ಶ್ರೀಕೃಷ್ಣನು ಅರ್ಜುನನ್ನು ನೆಪಮಾಡಿಕೊಂಡು, ಇಡೀ ಜಗತ್ತಿಗೆ, ಭಕ್ತಿಮಾರ್ಗದ ಬಗ್ಗೆ ಶಾಸ್ತ್ರೀಯ ವಿವರಣೆಯನ್ನು ಈ ಅಧ್ಯಾಯರಲ್ಲಿ ತಿಳಿಸಿದ್ದಾನೆ. ಜೊತೆಗೆ ಭಕ್ತನು ಕೇವಲ ಮಾನಸಿಕ ಉದ್ರೇಕದಿಂದ ತಾತ್ಕಾಲದಲ್ಲಿ ಉಂಟಾದ ಭಕ್ತಿಯಲ್ಲ. ಮನಸ್ಸು ಬುದ್ಧಿಗಳು ತರ್ಕದಿಂದ ಒಪ್ಪಿರುವುದನ್ನು, ಶ್ರದ್ಧೆಯಿಂದ, ಮನಃಪೂರ್ವಕವಾಗಿ ಆಚರಣೆಗೆ ತಂದು, ಅದಕ್ಕನುಗುಣವಾದ ಜೀವನವನ್ನು ನಡೆಯಿಸಬೇಕು. ಈ ಯೋಗದ ವಿವರಗಳನ್ನು ಈ ಅಧ್ಯಾಯದಲ್ಲಿ ಕಾಣಬಹುದು.

ಅಧ್ಯಾಯ-12
ಭಕ್ತಿಯೋಗ
ಅರ್ಜುನ ಉವಾಚ
ಏವಂ ಸತತಯುಕ್ತಾ ಯೇ ಭಕ್ತಾ ಸ್ತ್ವಾಂ ಪರ್ಯುಪಾಸತೇಃ |
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ || 1 ||
ಅರ್ಜುನನು ಹೇಳುತ್ತಾನೆ.
ಅರ್ಥ :- ಅನನ್ಯವಾದ ಭಕ್ತಿಯಿಂದ ನಿನ್ನನ್ನು ಭಜಿಸುವವರು, ಮತ್ತು ನಿನ್ನ ಅವ್ಯೋಕ್ತೋಪಾಸನೆಯಲ್ಲಿ ನಿರತರಾದವರ, ಇವರಿಬ್ಬರಲ್ಲಿ ಯಾರು ನಿಜವಾದ ಯೋಗವನ್ನು ಬಲ್ಲವರು?
ಅನನ್ಯವಾದ ಭಕ್ತಿಯಿಂದ ‘ನನ್ನನ್ನು’ ಸೇರಬಹುದು ಎಂಬ ಹಿಂದಿನ ಅಧ್ಯಾಯದ ಉಪದೇಶವನ್ನು ಹಿಡಿದುಕೊಂಡು, ಅರ್ಜುನನು ವ್ಯಾವಹಾರಿಕ ಮನುಷ್ಯನಂತೆ ಅದನ್ನು ಆಚರಣೆಯಲ್ಲಿ ತರುವುದಕ್ಕೆ ಅವಶ್ಯಕವಾದ ವಿವರಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಪ್ರಶ್ನೆಯನ್ನು ಕೇಳಿದ್ದಾನೆ. ತಾನು ಸಾಕಾರ ಧ್ಯಾನವನ್ನು ಮಾಡಬೇಕೋ ಅಥವಾ ನಿರಾಕಾರ ಧ್ಯಾನವನ್ನು ಮಾಡಬೇಕೋ ಎಂಬುದೇ ಅವನ ಮುಖ್ಯವಾದ ಪ್ರಶ್ನೆ.

ಶ್ರೀ ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ|
ಶ್ರದ್ಧಾಯ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ || 2 ||
ಶ್ರೀ ಭಗವಂತನು ಹೇಳುತ್ತಾನೆ
ಅರ್ಥ :- ತಮ್ಮ ಮನಸ್ಸನ್ನು ನನ್ನಲ್ಲೇ ನಿಲ್ಲಿಸಿ, ನನ್ನಲ್ಲಿ ಸಂಪೂರ್ಣ ಶ್ರದ್ಧೆಯುಳ್ಳವರಾಗಿ ಯಾರು ನಮ್ಮನ್ನು ನಿತ್ಯವೂ ಉಪಾಸನೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ನನ್ನ ಅಭಿಪ್ರಾಯವು.
ಸಾಧಕನಿಗೆ ಪರಮಾತ್ಮನಲ್ಲಿರುವ ಭಕ್ತಿಯು ಫಲಿಸಬೇಕಾದರೆ ಮೂರು ಅವಶ್ಯಕತೆಗಳು ಪೂರೈಸಲ್ಪಡಬೇಕೆಂದು ಪ್ರಾರಂಭದಲ್ಲಿಯೇ ಶ್ರೀ ಕೃಷ್ಣನು ಹೇಳಿದ್ದಾನೆ. ಆತ್ಮ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗವು ಸುಲಭವಾದ ದಾರಿ ಎಂಬ ಸಾಮಾನ್ಯ ಕಲ್ಪನೆ ಇದೆ. ನಿಜಸ್ಥಿತಿ ಏನೆಂದರೆ, ಯಾವ ದಾರಿಯೂ ಸುಲಭವಲ್ಲ. ಅದೇ ರೀತಿ ಉತ್ಸುಕನಾದ ಸಾಧಕನಿಗೆ, ತಾನು ಆರಿಸಿಕೊಂಡಿರುವ ದಾರಿಯು ಕಷ್ಟವೂ ಅಲ್ಲ. ಉಪಯೋಗಿಸುವ ಸಾಧನಗಳು ಭಿನ್ನವಾದಂತೆ ಮಾರ್ಗಗಳೂ ಭಿನ್ನವಾಗಿರುತ್ತವೆ ಅಷ್ಟೆ. ದೋಣಿಯಲ್ಲಿ ಕುಳಿತು ರಸ್ತೆಯ ಮೇಲೆ ಚಲಿಸಲು ಸಾಧ್ಯವಿಲ್ಲ, ಇಲ್ಲವೇ ಬೈಸಿಕಲ್ಲಿನ ಮೇಲೆ ಕುಳಿತು ಗಂಟೆಗೆ ಅರವತ್ತು ಮೈಲು ವೇಗದಲ್ಲಿ ಚಲಿಸುವುದೂ ಆಗುವುದಿಲ್ಲ. ಆದಾಗ್ಯೂ, ಈ ಪ್ರತಿಯೊಂದು ಸಾಧನಗಳ ಮೇಲೆ ಕುಳಿತುಕೊಂಡು ಹೋಗುವವರೆಲ್ಲರೂ ಮುಂದು ಮುಂದಕ್ಕೆ ಹೋಗುತ್ತಾರೆಂಬುದು ನಿರ್ವಿವಾದವಾದುದು. ಇದರಂತೆ ಸಾಧಕರು ತಮಗೆ ಸಿಕ್ಕ ಸಾಧನಗಳಿಗೆ ಅನುಗುಣವಾದ ಮಾರ್ಗವನ್ನು ಅಂದರೆ ಭಕ್ತಿಮಾರ್ಗ, ಕರ್ಮಮಾರ್ಗ, ಇಲ್ಲವೆ ಜ್ಞಾನ ಮಾರ್ಗವನ್ನು, ಆರಿಸಿಕೊಂಡು ಆ ಮಾರ್ಗದಲ್ಲಿ ಶ್ರದ್ಧೆಯಿಂದ ಸಾಧನೆಯನ್ನು ಮುಂದುವರೆಸುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಮಾರ್ಗವು ಸುಲಭ. ಇದನ್ನು ಸಾಧಕನಿಗೆ ಬೇಕಾದ ಮೂರು ಅವಶ್ಯಕತೆಗಳೇನೆಂಬುದನ್ನು ನೋಡೋಣ.
ಮಯ್ಯಾವೇಶ್ಯಮನ :- ಸಾಧನೆಯಿಂದ ಪರಮಾತ್ಮನ ಜ್ಞಾನವನ್ನು ಪಡೆಯಬೇಕೆಂದು ನಿರ್ಧರಿಸಿಕೊಂಡು ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ನಿರತಗೊಳಿಸುವುದು. ಇದರ ಪರಿಣಾಮವಾಗಿ ತನ್ನ ಇಷ್ಟಮೂರ್ತಿಯಲ್ಲಿ ದಿನದಿನಕ್ಕೂ ಪ್ರೇಮವು ಹೆಚ್ಚಾಗಬೇಕು.
ನಿತ್ಯ-ಯುಕ್ತ ಉಪಾಸನೆ- ಪರಮಾತ್ಮನ ಧ್ಯಾನವನ್ನು ಪ್ರಾರಂಭಿಸುವುದು, ಮೊದಲನೆಯ ಹೆಜ್ಜೆ. ಎರಡನೆಯ ‘ನಿತ್ಯಯುಕ್ತ’ ಅಂದರೆ ಪರಮಾತ್ಮನನ್ನು ಅರ್ಚಿಸುವಾಗ ಸಾಕಷ್ಟು ಇಂದ್ರಿಯ ನಿಗ್ರಹವನ್ನು ಸಾಧಿಸಿರುವುದು ಇವರ ಜೊತೆಗೆ ಉಪಾಸನೆಯೂ ಅವಶ್ಯಕ. ಶಂಕರಾಚಾರ್ಯರ ಅಭಿಪ್ರಾಯದಂತೆ ಉಪಾಸನೆಯ ಅರ್ಥ ಇಂತಿದೆ. ಸಾಧಕನು ಸ್ಥಿರಾಸನದಲ್ಲಿ ಕುಳಿತುಕೊಂಡು, ಶಾಸ್ತ್ರವಿಧಿಯನುಸಾರವಾಗಿ ತನ್ನ ಇಷ್ಟಮೂರ್ತಿಯ ಅರ್ಚನೆಯನ್ನು ಮಾಡಿ, ಇಷ್ಟಮೂರ್ತಿಯ ಚಿತ್ರವನ್ನು ಮನಸ್ಸಿನ್ಲಿ ನಿಲ್ಲಿಸಿಕೊಂಡು, ಹನಿಕಡೆಯದ ತೈಲಧಾರೆಯಂತೆ, ಆ ಚಿತ್ರವನ್ನು ದೀರ್ಘಕಾಲದವರೆಗೆ ಧ್ಯಾನಮಾಡಬೇಕು. ಇದಕ್ಕೆ ‘ಉಪಾಸನೆ’ ಎಂದು ಹೆಸರು. (ಉಪಾಸನಮ್ ನಾಮ ಯಥಾಶಾಸ್ತ್ರ ಮುಪಾರ್ಥಸ್ಯ ವಿಷಯಾಕರಣೇನ ತೈಲ ಧಾರಾವತ್ ಸಮಾನ ಪ್ರತ್ಯಯ ಪ್ರವಾಹೇಣ ದೀರ್ಘಕಾಲಂ ಯದಾಸನಂ ತದುಪಾಸನಮಾಚಕ್ಷತೇ)
ಶ್ರದ್ಧಯಾಪರಯೋಪೇತಾ :- ಪರಮಾತ್ಮನಲ್ಲಿ ಸಂಪೂರ್ಣ ಶ್ರದ್ಧೆಯುಳ್ಳವನಾಗ ಬೇಕಾದುದು ಮೂರನೆಯ ಅವಶ್ಯಕತೆ.

ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ |
ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ || 3 ||
ಅರ್ಥ :- ಯಾರು ನಾಶವಿಲ್ಲದ, ವರ್ಣಿಸಿ ಮುಗಿಸಲು ಸಾಧ್ಯವಿಲ್ಲದ, ಅವ್ಯಕ್ತನಾದ, ಎಲ್ಲಾ ಕಡೆಯಲ್ಲಿಯೂ ಇರುವ, ಚಿಂತನೆಗೆ ಸಿಗದ, ಬದಲಾವಣೆಯಿಲ್ಲದ, ಚಲಿಸದೆ ಇರುವ, ಸ್ಥಿರವಾದ ಪರಮಾತ್ಮನ ಉಪಾಸನೆಯನ್ನು ಮಾಡುತ್ತಾರೋ,

ಸನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |
ತೇ ಪ್ರಾಪ್ತ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ || 4 ||
ಅರ್ಥ :- ಎಲ್ಲಾ ಇಂದ್ರಿಯಗಳನ್ನು ನಿಗ್ರಹಿಸಿ, ಎಲ್ಲೆಡೆಯಲ್ಲಿಯೂ, ಎಲ್ಲಾ ಕಾಲಗಳಲ್ಲಿಯೂ ಸಮ ಬುದ್ಧಿಯುಳ್ಳವನಾಗಿ, ಎಲ್ಲಾ ಪ್ರಾಣಿಗಳ ಹಿತವನ್ನು ಸಾಧಿಸುವುದರಲ್ಲಿಯೇ ಆನಂದವನ್ನು ಕಾಣುತ್ತಾ, ಅದರಲ್ಲಿಯೇ ನಿರತನಾಗಿರುವವನು ನನ್ನನ್ನೇ ಸೇರುತ್ತಾನೆ.
ಹಿಂದೆ ಸಾಕಾರ ಧ್ಯಾನ ಮಾಡುವ ವಿಧಾನವನ್ನು ಹೇಳಿ ಈ ಎರಡು ಶ್ಲೋಕಗಳಲ್ಲಿ ನಿರಾಕಾರ ಧ್ಯಾನದ ವಿಷಯವನ್ನು ಹೇಳಲಾಗಿದೆ. ಪರಮಾತ್ಮನ ಗುಣಗಳನ್ನು ವರ್ಣಿಸುವಾಗ ಮೇಲಿನ ಶ್ಲೋಕದಲ್ಲಿ ‘ಅಚಲಮ್’ ಎಂದರೆ ಚಲಿಸದೇ ಇರುವುದು ಎಂದು ಹೇಳಿದೆ. ಚಲಿಸುವುದು ಎಂದರೆ ತಾನು ಇರುವ ಒಂದು ಸ್ಥಳವನ್ನು ಬಿಟ್ಟು, ತಾನು ಇಲ್ಲದೆ ಇರುವ ಇನ್ನೊಂದು ಸ್ಥಳಕ್ಕೆ ಹೋಗುವುದು. ಪರಮಾತ್ಮನು ಎಲ್ಲಾ ಕಡೆಯಲ್ಲಿಯೂ ಇರುವುದರಿಂದ, ಮತ್ತು ಅವನು ಇರದ ಸ್ಥಳವೇ ಸಿಗದಿರುವುದರಿಂದ ಅವನು ಚಲಿಸಬೇಕಾದುದೂ ಇಲ್ಲ. ಚಲಿಸುವುದೂ ಸಾಧ್ಯವಿಲ್ಲ. ಆದ್ದರಿಂದ ಅಚಲಮ್ ಎಂದು ಹೇಳಲಾಗಿದೆ. ಸನ್ನಿಯಮ್ಯೇಂದ್ರಿಯ ಗ್ರಾಮಂ:- ಇಂದ್ರಿಯಗಳ ಮುಖಾಂತರ ಹೊರಗಿನ ವಿಷಯಗಳು ಮನಸ್ಸನ್ನು ಪ್ರವೇಶಿಸಿ, ಅಲ್ಲಿ ರಾಗದ್ವೇಷಾದಿಗಳನ್ನುಂಟು ಮಾಡುತ್ತವೆ. ನಂತರ ಮನಸ್ಸು ಇಂದ್ರಿಯಗಳ ಮುಖಾಂತರವೇ ಹೊರಕ್ಕೆ ಹೋಗಿ ಇಂದ್ರಿಯ ವಿಷಯಗಳ ಜೊತೆಗೆ ಸಂಯೋಗವಾಗುತ್ತದೆ. ಇಂತಹ ಮನಸ್ಸಿನಿಂದ ಪರಮಾತ್ಮನ ಧ್ಯಾನವನ್ನು ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಇಂದ್ರಿಯ ನಿಗ್ರಹವು ಅವಶ್ಯಕ. ಮನಸ್ಸು ಇಂದ್ರಿಯ ವಿಷಯಗಳ ಚಾಪಲ್ಯಕ್ಕೆ ಸಿಗದಂತೆ, ಅದನ್ನು ಹಿಂದಕ್ಕೆ ತಿರುಗಿಸಿ, ಪರಮಾತ್ಮನ ಚಿಂತನೆಯನ್ನು ಮಾಡಲು ಹಚ್ಚಬೇಕು.
ಸಮುಬುದ್ಧಯ : ಸಮಬುದ್ಧಯಃ ಅಂದರೆ ಮನಸ್ಸು ಉದ್ರೇಕಗೊಳ್ಳದೆ ಶಾಂತವಾಗಿ ಸಮಸ್ಥಿತಿಯಲ್ಲಿರುವುದು. ಪ್ರಪಂಚದಲ್ಲಿ ಮನಸ್ಸನ್ನು ಆಕರ್ಷಿಸುವ, ಇಲ್ಲವೇ ಉದ್ರೇಕಗೊಳಿಸುವ ನಾನಾತರಹದ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಘಟನೆಗಳೆಲ್ಲವೂ ನಡೆದು ಮುಗಿದ ಮೇಲೆ ಮನಸ್ಸನ್ನು ನಿಗ್ರಹಿಸುತ್ತೇನೆಂದಾಗಲೀ ಇಲ್ಲವೇ ತನಗೆ ಅನುಕೂಲ ಸಮಯವೊದಗಿದಾಗ ಮನೋನಿಗ್ರಹವನ್ನು ಅಭ್ಯಾಸಮಾಡುತ್ತೇನೆಂದಾಗಲೀ, ಯೋಚಿಸುವುದು ಮೂರ್ಖತನ. ಸಮುದ್ರದ ಅಲೆಗಳೆಲ್ಲವೂ ನಿಂತ ಮೇಲೆ ಸಮುದ್ರಸ್ನಾನವನ್ನು ಮಾಡುತ್ತೇನೆ ಎಂದಂತೆ. ಈ ಪ್ರಪಂಚದಲ್ಲಿ ಒಂದಾದ ಮೇಲೊಂದರಂತೆ ನಾನಾ ತರಹದ ಘಟನೆಗಳು ಘಟಿಸುತ್ತಲೇ ಇರುತ್ತವೆ. ಸಾಧಕನು ಇವುಗಳ ಮಧ್ಯದಲ್ಲಿಯೇ ತನ್ನ ಮನಸ್ಸು ಆ ಘಟನೆಗಳಲ್ಲಿ ಆಸಕ್ತಿಯನನ್ನು ಹೊಂದದಂತೆ ಹಿಂದಕ್ಕೆಳೆದುಕೊಳ್ಳಬೇಕು. ಮತ್ತು ಈ ಘಟನೆಳಿಂದ ತನ್ನ ಮನಸ್ಸು ಉದ್ರೇಕಗೊಳ್ಳದಂತೆ ಅವುಗಳ ಬಗ್ಗೆ ಉದಾಸೀನತೆ-ಯಿಂದಿರಲು ಅಭ್ಯಾಸಮಾಡಿಕೊಳ್ಳಬೇಕು. ಇದಕ್ಕೆ ‘ಸಮಬುದ್ಧಿ’ ಎಂದು ಹೆಸರು. ಮಗುವು ಬೆಳಿಗ್ಯೆ ಅಳುತ್ತದೆ, ಸಾಯಂಕಾಲದಲ್ಲಿ ಹಟಮಾಡುತ್ತದೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ತಂದೆಯಾದವನು ಒಂದೇ ಮಗುವನ್ನೇ ನೋಡುತ್ತಾನೆಯೇ ಹೊರತು, ಅಳುವುದು, ನಗುವುದು, ಮತ್ತು ಹಟಮಾಡುವುದರಿಂದ ಮಗುವು ಬೇರೆ ಬೇರೆ ಎಂಬ ಭೇದವನ್ನು ಕಾಣುವುದಿಲ್ಲ. ಇದು ತಂದೆಯು ಮಗುವಿನಲ್ಲಿಡಬಹುದಾದ ಸಮಬುದ್ಧೀ, ಇದೇ ರೀತಿಯಲ್ಲಿ ಭಕ್ತನು ಪ್ರಪಂಚದ ಭಯಂಕರವಾದ ಘಟನೆಗಳು, ನಗುತ್ತಿರುವ ಘಟನೆಗಳು, ಉತ್ಸಾಹಭರಿತವಾದ ಜಯ, ವಿವಿಧ ದುಃಖಪ್ರಸಂಗಗಳು, ಸೋಲಿನ ಕೊರಗು, ಇತ್ಯಾದಿ ನಿತ್ಯದ ಎಲ್ಲಾ ಘಟನೆಗಳಲ್ಲಿಯೂ, ಅವುಗಳಿಂದ ಉದ್ರಿಕ್ತನಾಗದೆ, ನಿರುತ್ಸಾಹಗೊಳ್ಳದೆ, ಹರ್ಷಿತನಾಗದೆ, ಎಲ್ಲಾ ಸಂದರ್ಭಗಳಲ್ಲಿಯೂ ಒಂದೇ ರೀತಿ ಸಮಬುದ್ಧಿಯುಳ್ಳವನಾಗಿ, ಪ್ರತಿಯೊಂದು ಘಟನೆಯಲ್ಲಿಯೂ ತನ್ನ ಹೃದಯದ ದೇವನನ್ನು ಕಾಣಲು ಕಲಿಯಬೇಕು. ಇದು ಭಕ್ತನು ಗಳಿಸಬೇಕಾದ ಸಮಬುದ್ಧಿ. ಸರ್ವಭೂತ ಹಿತೇರತಾ:- ಎಲ್ಲಾ ಪ್ರಾಣಿಗಳ ಹಿತವನ್ನು ಸಾಧಿಸಬೇಕಾದುದು ಮೂರನೆಯ ಅವಶ್ಯಕವಾದ ಗುಣ. ಪ್ರಪಂದಲ್ಲಿ ನಾವು ಜೀವಿಸಿರುವವರೆಗೆ, ಇಡೀ ಜೀವಮಾನದ ಪೂರ್ತಿಯೂ, ಪರಮಾತ್ಮನ ಧ್ಯಾನದಲ್ಲಿಯೇ ನಿರತರಾಗಿರುತ್ತೇವೆಂಬುದು ಸಾಧ್ಯವಿಲ್ಲದ ಮಾತು. ಪ್ರತಿಯೊಬ್ಬನೂ ಸಮಾಜದ ವ್ಯಕ್ತಿಗಳೊಡನೆ ಬೆರೆಯಲೇ ಬೇಕಾಗುತ್ತದೆ. ಸಾಧಕನು ಪ್ರಪಂಚದ ಪ್ರತಿಯೊಂದು ಜೀವಿಗಳಲ್ಲಿಯೂ, ಪ್ರಾಣಿಗಳಲ್ಲಿಯೂ, ತನ್ನ ಇಷ್ಟಮೂರ್ತಿಯನ್ನು ಕಾಣುತ್ತಾ, ಎಲ್ಲಾ ಜೀವಿಗಳ ಸೇವೆಮಾಡುವುದು, ಅವುಗಳಿಗೆ ಹಿತವಾದ ಕಾರ್ಯಗಳನ್ನು ಮಾಡುವುದು, ಮತ್ತು ಅವುಗಳ ಉತ್ಕರ್ಷೆಯನ್ನು ಸಾಧಿಸುವುದು, ಇವುಗಳ ಮೂಲಕ ಪರಮಾತ್ಮನ ಅರ್ಚನೆಯನ್ನು ಮಾಡಬೇಕು. ಇವುಗಳ ಸೇವಾಕಾರ್ಯವೇ ಪರಮಾತ್ಮನ ಅರ್ಚನೆ ಎಂದು ತಿಳಿಯಬೇಕು. ನಿರ್ದಿಷ್ಟ ಕಾಲದಲ್ಲಿ ಧ್ಯಾನಜಪಾದಿಗಳನ್ನು ಮಾಡಿ, ವಿರಾಮ ಕಾಲದಲ್ಲಿ ಜನಹಿತಕಾರ್ಯವನ್ನು ಮಾಡಬೇಕು. ಅವ್ಯಕ್ತೋಪಾಸಕರು ಸಹ ಈ ರೀತಿಯಾಗಿ ಕರ್ಮಮಾಡಿದರೆ ಅವರೂ ಪರಮಾತ್ಮನನ್ನೇ ಸೇರುತ್ತಾರೆ.
ಅರ್ಜುನನು ಕೇಳಿದ ಪ್ರಶ್ನೆಯು ಬಹಳ ಗಡುಸಾಗಿತ್ತು. ಶ್ರೀಕೃಷ್ಣನು ಅದಕ್ಕೆ ಸುಂದರವಾದ ಉತ್ತರವನ್ನು ಕೊಟ್ಟಿದ್ದಾನೆ. ಎರಡೂ ತರಹದ ಸಾಧಕರೂ ಪರಮಾತ್ಮನನ್ನು ಸೇರುತ್ತಾರೆ ಎಂದು ಹೇಳಿ, ಅವರಿಬ್ಬರೂ ಯಾವ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ವಿವರವನ್ನೂ ತಿಳಿಸಿದ್ದಾನೆ.

ಕ್ಲೇಶೋ„ಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ |
ಅವ್ಯಕ್ತಾ ಹಿ ಗತಿರ್ದುಖಂ ದೇಹವದ್ಭಿರವಾಪ್ಯತೇ || || 5 ||
ಅರ್ಥ :- ಅವ್ಯಕ್ತೋಪಾಸನೆ ಮಾಡುವವರು ಅಧಿಕ ಕಷ್ಟವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ವ್ಯಕ್ತವಾದ ದೇಹವನ್ನು ಧರಿಸಿರುವರಿಗೆ ಅವ್ಯಕ್ತವನ್ನು ಧ್ಯಾನಮಾಡುವುದು ಕಷ್ಟ.
ವ್ಯಕ್ತೋಪಾಸನೆ ಮತ್ತು ಅವ್ಯಕ್ತೋಪಾಸನೆ ಇವೆರಡರ ಗುರಿಯೂ ಒಂದೇ ಎಂಬುದನ್ನು ವಿವರಿಸಿ ಶ್ರೀಕೃಷ್ಣನು ಇವೆರಡೂ ಮಾರ್ಗಗಳನ್ನು ತುಲನಾತ್ಮಕವಾಗಿ ಹೋಲಿಸಿ ವರ್ಣಿಸಲು ಪ್ರಾರಂಭಿಸಿದ್ದಾನೆ. ಅವ್ಯಕ್ತೋಪಾಸನೆ ಮಾಡುವವರಿಗೆ ಶ್ರಮ ಹೆಚ್ಚು. ಇದರ ಕಾರಣವನ್ನು ತಿಳಿಸುತ್ತಾ, ಶರೀರಧಾರಿಗಳು, ಶರೀರವಲ್ಲದ ಅವ್ಯಕ್ತವನ್ನು ಧ್ಯಾನಮಾಡುವುದು ಕಷ್ಟ ಎಂದು ಹೇಳಲಾಗಿದೆ. ಈ ವರ್ಣನೆಯನ್ನು ಆಧರಿಸಿ ವಿಚಾರ ಮಾಡಿದರೆ, “ಮನುಷ್ಯ ಶರೀರ ಇರುವವರೆಗೂ ಅವ್ಯಕ್ತೋಪಾಸನೆಯು ಸಾಧ್ಯವೇ ಇಲ್ಲ, ಈ ಶರೀರವನ್ನು ತ್ಯಜಿಸಿದ ನಂತರ ಸೂಕ್ಷ್ಮ ಶರೀರವನ್ನು ಪಡೆದಾಗ್ಯೆ ಅವ್ಯಕ್ತೋಪಾಸನೆಯನ್ನು ಸುಲಭವಾಗಿ ಮಾಡಬಹುದು.” ಎಂಬ ಅರ್ಥವಾಗಬಹುದು. ಆದರೆ ಈ ವಾಕ್ಯದ ಅರ್ಥವು ಅದಲ್ಲ. ಶಂಕರಾಚಾರ್ಯರ ಮತದಂತೆ ಶರೀರಧಾರಿಗಳಿಗೆ ಅಂದರೆ ಈ ಶರೀರದ ಮೇಲೆ ಅಭಿಮಾನವುಳ್ಳವರಿಗೆ, ಶರೀರದ ಪೋಷಣೆಯಲ್ಲಿ ಆಸಕ್ತರಾದವರಿಗೆ, ಇಂದ್ರಿಯಗಳ ವಿಷಯಾಭಿಲಾಷೆಗಳಲ್ಲಿ ಮುಳುಗಿದವರಿಗೆ ಎಂದರ್ಥ. ಈ ರೀತಿ ಶರೀರಾಭಿಮಾನವುಳ್ಳವರು, ಕಣ್ಣಿನ ದೃಷ್ಟಿಯು ಕಡಿಮೆಯಾಗಿರುವ, ಕೈನಡುಗುತ್ತಿರುವ ಮುದುಕನು ಸೂಜಿಯಲ್ಲಿ ದಾರನ್ನು ಪೋಣಿಸಲಾರನು. ಇದರಂತೆಯೇ ಮನಸ್ಸು ಬುದ್ಧಿಗಳು ಉದ್ರಿಕ್ತವಾಗಿದ್ದರೆ, ವಿಷಯ ಸುಖಭೋಗಗಳಲ್ಲಿ ಮಗ್ನವಾಗಿದ್ದರೆ, ಅದರ ಮುಖಾಂತರ ಅವ್ಯಕ್ತ ಧ್ಯಾನವು ಸಾಧ್ಯವಿಲ್ಲ.
ಸಾಮಾನ್ಯ ಜನತೆಗೆ ಮೂರ್ತಿಪೂಜೆಯ (ವ್ಯಕ್ತೋಪಾಸನೆ) ಸುಲಭವಾದುದು. ಮನುಷ್ಯರು ಮೂರ್ತಿಯನ್ನು ಭಕ್ತಿಯಿಂದಲೂ, ಶ್ರದ್ಧೆಯಿಂದಲೂ ಸೇವೆ ಮಾಡಬಲ್ಲರು. ಈ ರೀತಿಯ ಉಪಾಸನೆಯಿಂದ, ಮನಸ್ಸು ಬುದ್ಧಿಗಳು ಕ್ರಮೇಣ ಪರಿಶುದ್ಧವಾಗಿ, ಮುಂದೆ ಅವ್ಯಕ್ತೋಪಾಸನೆಯ ಹಂತಕ್ಕೆ ಏರಲು ಶಕ್ತಿ ಬರುತ್ತದೆ.
ಪರಮಾತ್ಮನನ್ನು ಭಕ್ತಿಯಿಂದ ಉಪಾಸನೆ ಮಾಡಬೇಕೆನ್ನುವ ಸಾಧಕರು ತಮ್ಮ ಜೀವನವನ್ನು ಯಾವ ರೀತಿ ಮಾರ್ಪಡಿಸಿಕೊಳ್ಳಬೇಕು ಎಂಬುದನ್ನು ಹೇಳಲಾಗಿದೆ.

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ |
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ || 6 ||
ಅರ್ಥ :- ಯಾರು ಎಲ್ಲಾ ಕರ್ಮಗಳ್ನೂ ನನಗೆ ಅರ್ಪಿಸಿ, ನಾನೇ ಪರಮಧ್ಯೇಯನೆಂದು ನಂಬಿ, ಅನನ್ಯವಾದ ಯೋಗದಿಂದ ನನ್ನ ಉಪಾಸನೆಯನ್ನು ಮಾಡುತ್ತಾರೋ, ಸಧಕರು ಅವಶ್ಯಕವಾಗಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಪರಮಾತ್ಮನು ಇಲ್ಲಿ ತಿಳಿಸಿದ್ದಾನೆ. ಈ ನಿಯಮಗಳನ್ನು ಪಾಲಿಸುವ ಭಕ್ತರು ಅವನನ್ನು ಯಾವ ರೂಪದಿಂದ ಭಜಿಸುತ್ತಾರೋ, ಆ ರೂಪದಿಂದಲ ಅವನು, ಅವರನ್ನು ಸಂಸಾರಸಾಗರದಿಂದ ದಾಟಿಸುತ್ತಾನೆಂಬ ಭರವಸೆ ಇಲ್ಲಿದೆ. ಸಾಧಕರಿಗೆ ಪ್ರಾರಂಭದಲ್ಲಿ ಇಂತಹ ಭರವಸೆಗಳು ಬೇಕು. ಸಾಧನೆಯು ಬೆಳೆದಂತೆ, ಆಂತರಿಕ ಶಕ್ತಿಯು ಜಾಗೃತವಾದಂತೆ, ಅವರಿಗೆ ಬೇರೆಯವರ ಸಹಾಯದ ಅವಶ್ಯಕತೆಯೊದಗುವುದಿಲ್ಲ. ತಾವೇ ಸ್ವತಃ ತಮ್ಮ ಸಾಧನೆ ಹಾಗೂ ಧ್ಯಾನದ ಮೂಲಕ ತಮ್ಮ ಗುರಿಯನ್ನು ತಲುಪಬಲ್ಲರು. ಸಾಧಕರು ಪಾಲಿಸಬೇಕಾದ ಈ ನಿಯಮಗಳೇನೇಂಬುದನ್ನು ನೋಡೋಣ.
‘ಎಲ್ಲಾ ಕರ್ಮಗಳನ್ನೂ ‘ನನಗೆ’ ಅರ್ಪಿಸುವುದು’- ನಾವು ಮಾಡುವ ಎಲ್ಲಾ ಕರ್ಮಗಳನ್ನೂ ಒಂದು ಸಂಸ್ಥೆಗೆ ಉಚ್ಚ ಧ್ಯೇಯಕ್ಕೆ, ಇಲ್ಲವೇ ಪರಮಾತ್ಮನಿಗೆ ಅರ್ಪಿಸುವುದೆಂದರೆ, “ಕರ್ಮವನ್ನು ಮಾಡುವವನು ನಾನು, ಕರ್ಮಫಲದ ಅಧಿಕಾರಿಯು ನಾನು” ಎಂಬ ಅಹಂಕಾರವನ್ನು ತ್ಯಜಿಸುವುದೇ ಆಗಿದೆ. ಪರದೇಶದಲ್ಲಿರುವ ಒಂದು ದೇಶದ ರಾಯಭಾರಿಯು, ತನ್ನ ಆಚಾರ, ವಿಚಾರ, ಮತ್ತು ಮಾತುಗಳನ್ನು ತನ್ನ ದೇಶದ ಹಿತಕ್ಕಾಗಿ ಮುಡುಪಾಗಿಡುವುದರಿಂದ, ಅವನು ಪರದೇಶದಲ್ಲಿ ತನ್ನ ದೇಶಕ್ಕೆ ಸಲ್ಲಬೇಕಾದ ಗೌರವವನ್ನು ಪಡೆಯುತಾನೆ. ಇದೇ ರೀತಿಯಾಗಿ ಭಕ್ತನು, ತನ್ನ ಸರ್ವಕರ್ಮಗಳನ್ನೂ ಪರಮಾತ್ಮನಿಗೆ ಅರ್ಪಿಸಿ, ಅವುಗಳನ್ನು ಪರಮಾತ್ಮನ ಸೇವೆ ಎಂಬ ಭಾವದಿಂದ ಮಾಡುವುದರಿಂದ, ಅವನು ಪರಮಾತ್ಮನ ರಾಯಭಾರಿಯಂತೆ ಈ ಪ್ರಪಂಚದಲ್ಲಿ ವರ್ತಿಸುತ್ತಾನೆ. ನಾನೇ ಪರಮ ಧ್ಯೇಯ ಎಂದು ನಂಬುವುದು- ನರ್ತಕಿಯು ಕುಣಿತದಲ್ಲಿ ಎಷ್ಟೇ ಮಗ್ನಳಾಗಿದ್ದರೂ, ಅವಳು ತಾಳವನ್ನು ತಪ್ಪುವುದಿಲ್ಲ. ಕುಣಿತದ ಉದ್ದಕ್ಕೂ ಅವಳ ದೃಷ್ಟಿಯು ತಾಳದ ಕಡೆಗೇ ಇರುತ್ತದೆ. ಸಂಗೀತಗಾರನು ಹಾಡನ್ನು ಹಾಡುವಾಗ ತನ್ನ ದೃಷ್ಟಿಯನ್ನು ಯಾವಾಗಲೂ ಹಿನ್ನೆಯ ಶ್ರುತಿಯ ಮೇಲಿಟ್ಟುತ್ತಾನೆ. ಇದೇ ರೀತಿ ಭಕ್ತನು ತನ್ನ ವಿವಿಧ ಕಾರ್ಯಗಳ ಮಧ್ಯದಲ್ಲಿಯೂ ಸಹ, ಪರಮಾತ್ಮನೇ ತನ್ನ ಗುರಿ ಎಂಬುದನ್ನು ಸತತವೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅನನ್ಯಯೋಗದಿಂದ – ಮನಸ್ಸಿನಲ್ಲಿ ಈಗಿರುವ ಎಲ್ಲಾ ತರಹದ ಉದ್ರೇಕಗಳನ್ನೂ ದಾಟಿ, ಮನಸ್ಸು ನಿರರ್ಥಕವಾದ ಸಂಕಲ್ಪಗಳಲ್ಲಿ ಇಲ್ಲವೆ ಫಲಾಶೆಗಳಲ್ಲಿ ಮಗ್ನವಾಗದಂತೆ, ನಿಗ್ರಹಿಸಿ ಪರಮಾತ್ಮನ ಧ್ಯಾನದಲ್ಲಿ ನಿಲ್ಲಿಸುವುದು ‘ಯೋಗ’ ಎನಿಸಿಕೊಳ್ಳುತ್ತದೆ. ಈ ರೀತಿಯ ಯೋಗ ಶಕ್ತಿಯು, ತರತಮ ಭೇದದಿಂದ ಎಲ್ಲರಲ್ಲಿಯೂ ಇದೆ. ಆದರೆ ನಾವು ಅದನ್ನು ಉಪಯೋಗಿಸುವ ಗುರಿಯು ಮಾತ್ರ. ಭಿನ್ನಭಿನ್ನವಾಗಿದೆ. ಚಂಚಲತೆಯಿಂದ ದಿನದಿನವೂ ಗುರಿಯನ್ನು ಬದಲಿಸುತ್ತಾ ಹೋಗದೆ, ತನ್ನ ಗುರಿಯು ಪರಮಾತ್ಮನ ಸಾಧನೆ ಎಂಬುದನ್ನು ದೃಢವಾಗಿ ನಂಬಿ ಆ ಮಾರ್ಗದಲ್ಲಿ ತನ್ನ ಸರ್ವಶಕ್ತಿಯನ್ನು ವಿನಿಯೋಗಿಸಬೇಕು. ಈ ಗುರಿಯು ಪರಮಾತ್ಮನನ್ನು ಬಿಟ್ಟು ಬೇರೆ ಕಡೆಗೆ ಹೋಗಬಾರದು. ಇದಕ್ಕೆ ಅನನ್ಯಯೋಗ ಎಂದು ಹೆಸರು. ಅನನ್ಯ ಎಂದರೆ ಬೇರೆ ಇಲ್ಲದುದು ಎಂದರ್ಥ.
ಈ ರೀತಿಯಾದ ಹಿನ್ನೆಲೆಯನ್ನು ತಯಾರು ಮಾಡಿಕೊಂಡು, ಉಪಾಸನೆ ಮಾಡುವ ಭಕ್ತರನ್ನು, ಅವರ ಮಾರ್ಗವು ಯಾವುದೇ ಇದ್ದರೂ, ಅವರನ್ನು ಜಾಗ್ರತೆಯಾಗಿ ಸಂಸಾರ ಸಾಗರದಿಂದ ಉದ್ಧಾರಮಾಡುತ್ತೇನೆ ಎಂದು ಪರಮಾತ್ಮನು ಆಶ್ವಾಸನೆ ಕೊಟ್ಟಿದ್ದಾನೆ.

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ |
ಭವಾಮಿನ ಚಿರಾತ್ಪರ್ಥಮಯ್ಯಾವೇಶಿತ ಚೇತಸಾಮ್ || 7 ||
ಅರ್ಥ :- ನನ್ನಲ್ಲಿ ಮನಸ್ಸುಳ್ಳ ಅಂತಹ ಭಕ್ತರನ್ನು ಪಾರ್ಥನೇ ನಾನು ಈ ಸಂಸಾರಸಾಗರದಿಂದ ಎತ್ತಿರಕ್ಷಿಸುತ್ತೇನೆ.
ಮಯ್ಯೇವ ಮನ ಅಧಸ್ಸ್ವಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊಧ್ರ್ವಂ ನ ಸಂಶಯಃ || 8 ||
ಅರ್ಥ :- ನಿನ್ನ ಮನಸ್ಸನ್ನು ನನ್ನಲ್ಲಿಯೇ ನಿಲ್ಲಿಸು. ನಿನ್ನ ಬುದ್ಧಿಯನ್ನು ನನಗೆ ಅರ್ಪಿಸು. ಹೀಗೆ ಮಾಡಿದೆಯಾದರೆ ನೀನು ಸಂಶಯವಿಲ್ಲದೆ ನನ್ನಲ್ಲಿಯೇ ಇರುತ್ತೀಯೆ.
ಧ್ಯಾನವೆಂದರೆ, ಕೇವಲ ಶಾರೀರಿಕ ಕ್ರಿಯೆಯಷ್ಟೇ ಅಲ್ಲ. ಆಂತರಿಕ ಪರಿಶುದ್ಧತೆ ಹಾಗೂ ಪವಿತ್ರತೆಗಳು ಸಹ ಅಷ್ಟೇ ಅವಶ್ಯಕ. ಬುದ್ಧಿಯು ಒಪ್ಪಿದುದನ್ನು ಹೃದಯವು ಒಪ್ಪುವುದಿಲ್ಲ, ಹಾಗೂ ಹೃದಯದ ಒಪ್ಪಿಗೆಯಿದ್ದರೆ ಬುದ್ಧಿಯು ಅದಕ್ಕೆ ನಗುತ್ತದೆ, ಎಂಬ ಅನುಭವವು ಸಾಧಕರಿಗೆ ಅನೇಕ ಸಾರಿ ಬಂದಿರುತ್ತದೆ. ಬುದ್ಧೀ ಹಾಗೂ ಹೃದಯಗಳು ಮೊಳಗುಡುವುದು ಧ್ಯಾನಕ್ಕೆ ಅವಶ್ಯಕ. ಧ್ಯಾನದ ಈ ಗುಟ್ಟನ್ನು, ಕೌಶಲ್ಯವನ್ನು ಇಲ್ಲಿ ವರ್ಣಿಸಲಾಗಿದೆ.
ಸಾಧಕನು ತನ್ನ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಬೇಕು. ಧ್ಯಾನಮಾಡುವಾಗ ಇಷ್ಟ ದೇವತೆಯ ಮೂರ್ತಿಯನ್ನು ಕಣ್ಣೆದುರಿಗೆಟ್ಟುಕೊಂಡು, ಮೂರ್ತಿಯ ಪಾದಗಳಲ್ಲಿ ಮನಸ್ಸು ಏಕಾಗ್ರಮಾಡಿ ಧ್ಯಾನಮಾಡಬೇಕು. ಧ್ಯಾನ ಕಾಲದಲ್ಲಿ ಸಾಧಕನು ತನ್ನ ಇಷ್ಟದಂತೆ, ಮಾನಸಿಕವಾಗಿ ಮೂರ್ತಿಗೆ ನಾನಾ ರೀತಿಯ ಅಲಂಕಾರ ಮಾಡಬಹುದು, ಇಲ್ಲವೇ ಮೂರ್ತಿಯ ಪಾದಗಳಿಗೆ ನಮಸ್ಕಾರ ಮಾಡಬಹುದು; ಅಥವಾ ಆವಾಹನೆ, ಆಸನ, ಪಾದ್ಯ, ಸ್ನಾನ, ವಸ್ತ್ರ, ಅಲಂಕಾರ, ಧೂಪ, ದೀಪ, ನೈವೇದ್ಯ, ಮೊದಲಾದ ವಿಧಿಗಳಿಂದ ಅರ್ಚನೆ ಮಾಡಬಹುದು; ಅಥವಾ ಇಷ್ಟದೇವತೆಯ ಭಜನೆಯನ್ನು ಮಾಡಬಹುದು, ಈ ಎಲ್ಲಾ ವಿಧದ ಸಾಧನೆಗಳಲ್ಲಿಯೂ ಮನಸ್ಸನ್ನು ಪರಮಾತ್ಮನ ಪಾದ ಕಮಲಗಳಲ್ಲಿ ನಿಲ್ಲಿಸಿ ಧ್ಯಾನಮಾಡಬೇಕು, ಕೇವಲ ಮನಸ್ಸು ಪರಮಾತ್ಮನ ಧ್ಯಾನದಲ್ಲಿದ್ದರೆ ಸಾಲದು. ಅದರ ಜೊತೆಗೆ ಬುದ್ಧಿಯ ಮೇಳವೂ ಕೂಡಬೇಕು. ಹೀಗಾದರೆ ಮಾತ್ರ ಧ್ಯಾನವು ಪುಷ್ಟಿಗೊಳ್ಳುತ್ತದೆ. ಆದ್ದರಿಂದಲೇ, ‘ಮಯಿ ಬುದ್ಧಿಂ ನಿವೇಶಯ’ ಎಂದು ಹೇಳಲಾಗಿದೆ. ಮನಸ್ಸು ಧ್ಯಾನಮಾಡುವ ಇಷ್ಟಮೂರ್ತಿಯಲ್ಲಿ, ಬುದ್ಧಿಯ ವಿಚಾರ ಶಕ್ತಿಯು ಒಪ್ಪಿಗೆ ಕೊಟ್ಟು ಆ ಧ್ಯಾನದಲ್ಲಿ ಸ್ಥಿರವಾಗಬೇಕು. ಹೀಗೆ ಸಾಧಕನ ಶಾರೀರಿಕ ಧ್ಯಾನದಲ್ಲಿ ಮನಸ್ಸು ಬುದ್ಧಿಗಳ ಮೇಳ ಕೂಡಿದರೆ, ಆಗ ಧ್ಯಾನವು ಸ್ಥಿರವಾಗುತ್ತದೆ. ಆದ್ದರಿಂದಲೇ ‘ಆನಂತರ ನೀನು ಸಂಶಯವಿಲ್ಲದೆ ನನ್ನಲ್ಲಿರುತ್ತೀಯೆ’ ಎಂದು ಹೇಳಲಾಗಿದೆ. ಇದನ್ನು ದೃಢವಾಗಿ ನಂಬಬೇಕು ಎಂಬುದನ್ನು ತಿಳಿಸುವುದಕ್ಕಾಗಿ ‘ನ ಸಂಶಯಃ’ ಎಂದು ಹೇಳಲಾಗಿದೆ.
ಸಾಧಕರ ವಿವಿಧ ಅಂತಸ್ತುಗಳಿಗೆ ಅನುಕೂಲವಾಗುವಂತೆ , ಪರಮಾತ್ಮನು ಇತರೆ ಸಾಧನಮಾರ್ಗಗಳನ್ನು ಸಹ ತಿಳಿಸುತ್ತಿದ್ದಾನೆ. ಈ ರೀತಿಯ ಧ್ಯಾನವು ಸಾಧ್ಯವಿಲ್ಲದಿದ್ದರೆ ಬೇರೆ ಏನು ಮಾಡಬಹುದೆಂಬುದನ್ನು ಮುಂದಿನ ಶ್ಲೋಕದಲ್ಲಿ ಹೇಳಲಾಗಿದೆ.

ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ |
ಅಭ್ಯಾಸಯೋಗೇನ ತತೋ ಮಾಮಿಚ್ಛಾಫ್ತುಂ ಧನಂಜಯ || 9 ||
ಅರ್ಥ :- ನಿನ್ನ ಮನಸದ್ಸನ್ನು ನನ್ನಲ್ಲಿ ಸ್ಥಿರವಾಗಿ ನಿಲ್ಲಿಸಲು ಸಾಧ್ಯವಾಗದೆ ಹೋದರೆ, ಧನಂಜಯನೇ, ಸತತವಾಗಿ ‘ಯೋಗ’ವನ್ನು ಅಭ್ಯಾಸಮಾಡಿದರೂ ನನ್ನನ್ನು ಸೇರಲು ಪ್ರಯತ್ನಿಸು.
ಹಿಂದೆ ತಿಳಿಸಿದಂತೆ, ಮನಸ್ಸು ಬುದ್ಧಿಗಳನ್ನು ಪರಮಾತ್ಮನ ಪಾದ ಧ್ಯಾನದಲ್ಲಿ ನಿಲ್ಲಿಸಲು ಸಾಧ್ಯವಾಗದವರು ‘ಅಭ್ಯಾಸಯೋಗ’ವನ್ನು ಸಾಧಿಸಬೇಕೆಂದು ಹೇಳಲಾಗಿದೆ. ಮನಸ್ಸು ಪರಮಾತ್ಮನ ಧ್ಯಾನವನ್ನು ಬಿಟ್ಟು, ಬೇರೆ ಕಡೆಗೆ ವಿಹರಿಸಲು ಹೋದರೆ, ಅದನ್ನು ಅಲ್ಲಿಂದ ಹಿಂದಕ್ಕೆ ಎಳೆದು ತಂದು, ಪುನಃ ಪರಮಾತ್ಮನ ಧ್ಯಾನದಲ್ಲಿ ನಿಲ್ಲಿಸಬೇಕು. ಮನಸ್ಸು ಏಕಾಗ್ರವಾಗುವವರೆಗೂ ಪುನಃ ಪುನಃ ಈ ಪ್ರಯತ್ನ ಮಾಡಬೇಕು. ಇದಕ್ಕೆ ಅಭ್ಯಾಸಯೋಗ (ಅ. 6 ಶ್ಲೋ 26) ಎಂದು ಹೆಸರು. ಈ ಯೋಗವನ್ನು ಸಾಧಿಸುವಾಗ, ಸಾಧಕರು ಮನಸ್ಸು ಬುದ್ಧಿಗಳೊಡನೆ ಸೇರದೆ, ತಾನು ಅವುಗಳಿಗಿಂತ ಭಿನ್ನನಾದವನು. ಮತ್ತು ಅವು ತನ್ನ ಅಧೀನದಲ್ಲಿರುವುಗಳು ಎಂದು ತಿಳಿದುಕೊಂಡು, ಮನಸ್ಸು ಓಡಿ ಹೋದ ಹಾಗೆ ಪದೇಪದೇ ಎಳೆದುತಂದು ಇಷ್ಟಮೂರ್ತಿಯ ಧ್ಯಾನದಲ್ಲಿ ಸ್ಥಿರಪಡಿಸ ಬೇಕು. ಒಂದೇ ಸಾರಿ ಏಕಾಗ್ರತೆಯಿಂದ ಧ್ಯಾನಮಾಡಲು ಸಾಧ್ಯವಾಗದವರು ಈ ರೀತಿ ಅಭ್ಯಾಸ ಮಾಡಿದರೆ ಕ್ರಮೇಣ ಏಕಾಗ್ರಮನಸ್ಸಿನಿಂದ ಧ್ಯಾನಮಾಡುವ ಶಕ್ತಿಯನ್ನು ಗಳಿಸುತ್ತಾರೆ.
ಇದು ಸಾಧ್ಯವಾಗದಿದ್ದರೆ ಏನು ಮಾಡಬೇಕು.

ಅಭ್ಯಾಸೇ„ಪ್ಯಸಮರ್ಥೋ„ಸಿ ಮತ್ಕರ್ಮಪರಮೋ ಭವ |
ಮದರ್ಥಮಪಿ ಕರ್ಮಾಣಿಕುರ್ವನ್ಸಿದ್ಧಿಮವಾಪ್ಸ್ಯಸಿ || || 10 ||
ಅರ್ಥ:- ಅಭ್ಯಾಸಯೋಗವನ್ನು ಸಾಧಿಸುವುದು ಕೂಡ ಸಾಧ್ಯವಿಲ್ಲದಿದ್ದರೆ, ನೀನು ನನಗೋಸ್ಕರವಾಗಿಯಾದರೂ ಕರ್ಮಗಳನ್ನು ಮಾಡು, ಹೀಗೆ ನನಗೋಸ್ಕರ ಕರ್ಮವನ್ನು ಮಾಡುವುದರಿಂದ (ಕರ್ಮಯೋಗ) ಸಹ, ನೀನು ಸಿದ್ಧಿಯನ್ನು ಪಡೆಯುತ್ತೀಯೆ.
ಆತ್ಮವಿಕಾಸವನ್ನು ಸಾಧಿಸುವ ವಿವಿಧ ವಿಧಾನಗಳು. ಹಿಂದೂ ಧರ್ಮಶಾಸ್ತ್ರದಲ್ಲಿ ಸುಂದರವಾಗಿ ವರ್ಣಿಸಲ್ಪಟ್ಟಿವೆ. ಇದನ್ನು ಆಳವಾಗಿ ಅಭ್ಯಾಸ ಮಾಡಿದ ಹಾಗೆ ಈ ವಿಧಾನಗಳು ಎಷ್ಟು ತರ್ಕಬದ್ಧವಾಗಿವೆ ಎಂದು ವೇದ್ಯವಾಗುತ್ತದೆ. ಇತರೆ ಧರ್ಮಗಳಲ್ಲಿ ಇದ್ದಂತೆ ಇದರಲ್ಲಿ “ಇದನ್ನು ಮಾಡು ಇಲ್ಲವೇ ನಕರವನ್ನು ಅನುಭವಿಸು” ಎಂಬ ಕಠೋರೋಕ್ತಿಯಿಲ್ಲ. ಪ್ರತಿಯೊಬ್ಬ ಸಾಧಕನೂ ತನ್ನ ಯೋಗ್ಯತೆ ಹಾಗೂ ಶಕ್ತಿಗನು-ಸಾರವಾಗಿ, ತನಗೆ ಸುಲಭವಾದ ಮಾರ್ಗವನ್ನು ಆರಿಸಿಕೊಳ್ಳಬಹುದಾದ ಸ್ವಾತಂತ್ರ್ಯವಿದೆ ಇಲ್ಲಿ ಇನ್ನೂ ವಿಕಾಸವನ್ನು ಹೊಂದಿರುವ ಮನುಷ್ಯನು ಕಠಿಣ ನಿಯಮಗಳನ್ನು ಆಚರಿಸುವುದು, ಅವನ ಏಳಿಗೆಗೆ ಸಾಧನವಾಗುವುದಕ್ಕಿಂತ ಹೆಚ್ಚು, ಅವನ ಅವನತಿಗೆ ಕಾರಣವಾಗುತ್ತದೆ ಎಂಬ ತತ್ವವನ್ನು ಹಿಂದೂ ಧರ್ಮಶಾಸ್ತ್ರಕಾರರು ಚನ್ನಾಗಿ ಅರಿತಿದ್ದಾರೆ. ಮಾನಸಿಕವಾಗಿ ಮೇಲ್ಮಟ್ಟಕ್ಕೇರಲು ಧ್ಯಾನಮಾಡುವುದು ಒಂದು ಸಾಧನ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲವೆಂಬುದನ್ನು ಅರಿತು ಶ್ರೀಕೃಷ್ಣನು ಅದರ ಬದಲು ಬೇರೆ ಯಾವ ಯಾವ ಮಾರ್ಗಗಳನ್ನು ಆರಿಸಿಕೊಳ್ಳಬಹುದೆಂಬುದನ್ನು ಹೇಳಿದ್ದಾನೆ. ಧ್ಯಾನಯೋಗವು ಸಾಧ್ಯವಿಲ್ಲದಿದ್ದರೆ ಅಭ್ಯಾಸಯೋಗವನ್ನು ಸಾಧಿಸಬೇಕೆಂದು ಹೇಳಿ, ಅದೂ ಸಾಧ್ಯವಿಲ್ಲದವರಿಗೆ ತಾವು ಮಾಡುವ ಎಲ್ಲಾ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಬೇಕೆನ್ನುವ ‘ಕರ್ಮಯೋಗ’ವನ್ನು ಹೇಳಲಾಗಿದೆ. ಧರ್ಮದ ವಿಚಾರದಲ್ಲಿ ಮೂಢನಂಬಿಕೆ ಇರುವ ಜನರಿಗೆ, ಅವರಿಗೆ ಒಪ್ಪಿತವಾದ ಹಿಂದಿನ ಕಾಲದಿಂದಲೂ ನಡೆದು ಬಂದ, ಹಳೆಯ ಪದ್ಧತಿಯ ಬದಲು, ಹೊಸ ಪದ್ಧತಿಯನ್ನು ಆಚರಿಸಲು ಹೇಳಿದಾಗ್ಯೆ, ಹಾಗೆ ಹೇಳಿದ ವ್ಯಕ್ತಿಯು ಎಷ್ಟೇ ದೊಡ್ಡ ಮನುಷ್ಯರನಿರಲಿ, ಜನರಿಗೆ ಒಂದೇ ಸಾರಿ ಆ ಹೊಸ ಪದ್ಧತಿಯಲ್ಲಿ ಶ್ರದ್ಧೆ ಹುಟ್ಟುವುದಿಲ್ಲ. ಇದನ್ನು ಪರಿಹರಿಸುವುದಕ್ಕಾಗಿ ಶ್ರೀಕೃಷ್ಣನು, ‘ನೀನು, ಕರ್ಮಯೋಗವನ್ನು ಆಚರಿಸುವುದರಿಂದ ಸಹ ಸಿದ್ಧಿಯನ್ನು ಪಡೆಯುತ್ತೀಯೆ” ಎಂಬ ಆಶ್ವಾಸನೆಯನ್ನು ಕೊಟ್ಟಿದ್ದಾನೆ.
ಇದೂ ಸಾಧ್ಯವಿಲ್ಲದಿದ್ದರೆ ಇನ್ನೊಂದು ಮಾರ್ಗವಿದೆ

ಅಥೈತದಪ್ಯಶಕ್ತೋ„ಸಿ ಕರ್ತುಂ ಮದ್ಯೋಗಮಾಶ್ರಿತಃ |
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ || 11 ||
ಅರ್ಥ :- ನೀನು ಇದನ್ನೂ ಮಾಡಲು ಸಾಧ್ಯವಿಲ್ಲದಿದ್ದರೆ, ನನ್ನಲ್ಲಿ ಶರಣಾಗತನಾಗಿ ಇಂದ್ರಿಯಗಳನ್ನು ನಿಗ್ರಹಿಸಿ, ನೀನು ಮಾಡುವ ಕರ್ಮಗಳ ಫಲವನ್ನಾದರೂ ತ್ಯಾಗಮಾಡಿಬಿಡು.
ಪರಮಾತ್ಮನಿಗೋಸ್ಕರವಾಗಿ ಕರ್ಮವನ್ನು ಮಾಡಲು ಸಾಧ್ಯವಿಲ್ಲದಿದ್ದವರು, ಇಂದ್ರಿಯ ನಿಗ್ರಹವನುನ ಮಾಡಿ, ಮನಸ್ಸನ್ನು ಪರಮಾತ್ಮನಿಗೆ ಅರ್ಪಿಸಿ, ತಾವು ಮಾಡುವ ಕರ್ಮಗಳ ಫಲವನ್ನೂ ಸಹ ಪರಮಾತ್ಮನಿಗೆ ಅರ್ಪಿಸಿ ಬಿಡುವುದರಿಂದ ಇದು ಸಹ ಹಿಂದಿನಷ್ಟೇ ಫಲದಾಯಕವಾದ ಮಾರ್ಗವಾಗಿದೆ. ಮಾನಸಿಕ ಏಳಿಗೆಗೆ ಕೂಡ ಅಷ್ಟೇ ಸಹಾಯಕವಾಗಿದೆ.
ಪ್ರತಿಯೊಬ್ಬ ಜೀವನದಲ್ಲಿರುವ ಸಂಚಿತ ವಾಸನೆಗಳಿಗನುಸಾರವಾಗಿ ಅವನ ಮನಸ್ಸು ಬುದ್ಧಿಗಳ ಮೇಲೆ ತರತಮ ಭೇದದಿಂದ ಅಜ್ಞಾನದ ಲೇಪವಿರುತ್ತದೆ. ಈ ಅಜ್ಞಾನವನ್ನು ಹೋಗಲಾಡಿಸಲು, ಆ ಲೇಪವು ತೆಳುವಾಗಿರುವಾಗ ಸ್ವಲ್ಪ ಉಜ್ಜುವಿಕೆಯು ಸಾಕು. ಇನ್ನೂ ಹೆಚ್ಚು ದಪ್ಪವಾಗಿದ್ದರೆ ಅಜ್ಞಾನವನ್ನು ಕರಗಿಸಬಲ್ಲ ಇನ್ನೂ ಹೆಚ್ಚು ಬಲವಾದ ಸಾಧನವನ್ನೇ ಉಪಯೋಗಿಸಬೇಕಾಗುತ್ತದೆ. ಈ ಮೂರು ವಿಧದ ಸಾಧಕರ ಮಾನಸಿಕ ಸ್ಥಿತಿಗನುಸಾರವಾಗಿ ಅಭ್ಯಾಸಯೋಗ, ಪರಮಾತ್ಮನಿಗೋಸ್ಕರವಾಗಿ ಕರ್ಮ ಮಾಡುವುದು, ಮತ್ತು ಕರ್ಮಫಲವನ್ನು ತ್ಯಾಗಮಾಡುವುದು ಎಂಬ ಮೂರು ವಿಧದ ಸಾಧನೆಗಳನ್ನು ಹೇಳಲಾಗಿದೆ. ಈ ರೀತಿಯ ವಿವಿಧ ಮಾರ್ಗಗಳು ಪ್ರಪಂಚದ ಬೇರೆ ಯಾವ ಧರ್ಮದಲ್ಲಿಯೂ ಇಲ್ಲ.
ಕರ್ಮಫಲ ತ್ಯಾಗದ ಹಿರಿಮೆಯನ್ನು ವರ್ಣಿಸಲಾಗಿದೆ.

ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಜ್ಞಾನಾದ್ಧ್ಯಾನಂ ವಿಶಿಷ್ಯತೇ |
ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್|| || 12 ||
ಅರ್ಥ :- ಅಭ್ಯಾಸಯೋಗಕ್ಕಿಂತ ಜ್ಞಾನಯೋಗವು ಹಿರಿದು, ಅದಕ್ಕಿಂತ ಧ್ಯಾನ ಯೋಗವು ಶ್ರೇಷ್ಠ. ಇದಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠವಾದುದು. ಈ ತರಹದ ತ್ಯಾಗದಿಂದ ಮುಂದೆ ಶಾಂತಿ ದೊರೆಯುತ್ತದೆ.
ಇದುವರೆಗೆ ಉಪದೇಶಿಸಿದ ಮಾರ್ಗಗಳನ್ನು ಶ್ರೀಕೃಷ್ಣನು ಸಂಗ್ರಹಿಸಿ ಹೇಳಿ ಅವುಗಳ ಪೈಕಿ ಯಾವ ಮಾರ್ಗವು ಹಿರಿದಾದುದು ಎಂಬುದನ್ನು ತುಲನಾತ್ಮಕವಾಗಿ ಹೇಳಿದ್ದಾನೆ.
ಅಭ್ಯಾಸಯೋಗಕ್ಕಿಂತ ಜ್ಞಾನವು ಶ್ರೇಷ್ಠ :- ಅಧ್ಯಾತ್ಮ ಸಾಧನೆಯು ಕೇವಲ ಶಾರೀರಿಕ ಕ್ರಿಯೆಯಲ್ಲ. ಶಾರೀರಿಕ ಕ್ರಿಯೆಯು ಈ ಸಾಧನೆಯಲ್ಲಿ ಒಂದು ಹಂತ, ಅಥವಾ ಅಂಗ, ಇದರಿಂದ ಮುಂದಿನ ಮೆಟ್ಟಿಲನ್ನು ಏರಲು ಸುಲಭವಾಗುತ್ತದೆ. ಈ ಸಾಧನೆಯ ವಿವರ ಹಾಗೂ ತಾತ್ವಿಕ ಹಿನ್ನೆಲೆಯನ್ನು ತಾರ್ಕಿಕವಾಗಿ ತಿಳಿದುಕೊಳ್ಳದ ವಿನಹ ಸಾಧನೆಯು ಪೂರ್ತಿಯಾಗಲಾರದು. ಮನಸ್ಸು ಬುದ್ಧಿಗಳು ಒಪ್ಪಿಗೆಯನ್ನು ಕೊಡಲಾರವು. ತಾತ್ವಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದಕ್ಕೆ ಜ್ಞಾನ ಎಂದು ಹೆಸರು. ನಾವು ಮಾಡುವ ಸಾಧನೆಯ ಗುರಿ ಏನು, ವಿವಿಧ ಸಾಧನಾ ಕ್ರಮಗಳಿಂದ ಯಾವ ಲಾಭವಾಗುತ್ತದೆ. ಎಂಬುದನ್ನು ತಿಳಿದುಕೊಂಡಂತೆ, ನಮ್ಮ ಗುರಿಯತ್ತ ಸಾಗಲು, ಸಾಧನೆಯನ್ನು ಬಲಪಡಿಸಲು ಮಧ್ಯದಲ್ಲಿ ಬರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಮುಂದುವರಿಯಲು ಸುಲಭವಾಗುತ್ತದೆ. ಇದಕ್ಕಾಗಿ ಜ್ಞಾನಕ್ಕೆ ಮಹತ್ವ ಹೆಚ್ಚು. ಆದ್ದರಿಂದ ‘ಅಭ್ಯಾಸಕ್ಕಿಂತ ಜ್ಞಾನವು ಹಿರಿದು’ ಎಂದು ಹೇಳಲಾಗಿದೆ. ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ. ಪರಮಾತ್ಮನ ಜ್ಞಾನವು ಕೇವಲ ತಾತ್ವಿಕ ವಿಚಾರಗಳ ಜ್ಞಾನದಿಂದ, ಶಾಸ್ತ್ರೀಯ ಗ್ರಂಥಗಳನ್ನು ಓದುವುದರಿಂದ ದೊರೆಯುವುದಿಲ್ಲ. ಶಾಸ್ತ್ರಾಭ್ಯಾಸದಿಂದ ತಿಳಿದುಕೊಂಡ ತತ್ವವನ್ನು ಆಚರಣೆಯಲ್ಲಿ ತಂದು ಅನುಭವಿಸುವುದೇ ನಿಜವಾದ ಜ್ಞಾನದ ಫಲ. ಇದಕ್ಕಾಗಿ ಧ್ಯಾನಮಾಡಿ, ಬುದ್ಧಿಯು ತಿಳಿದುಕೊಂಡ ತತ್ವವನ್ನು ಸ್ವತಃ ಅನುಭವಿಸಬೇಕು. ಆದ್ದರಿಂದ ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ ಎನ್ನಲಾಗಿದೆ.
ಧ್ಯಾನಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠ ಧ್ಯಾನ ಎಂದರೆ, ಜ್ಞಾನದಿಂದ ತಿಳಿದುಕೊಂಡ ತತ್ವವನ್ನು ಅನುಭವಿಸಲು ಎತ್ತಿ ಇಡುವ ಮುಂದಿನ ಹೆಜ್ಜೆ ಅಥವಾ ನೆಗೆತ ಅಥವಾ ಸಾಧನೆಯ ಮುಂದಿನ ಹಂತ. ಇದರ ಸಾಧನೆಗೆ ಇಂದ್ರಿಯ ನಿಗ್ರಹ ಎಂಬ ಪೂರ್ವ ತಯಾರಿಯು ಅಗತ್ಯ. ಮುಂದೆ ಸಿಗಬಹುದಾದ ಕರ್ಮಫಲದ ವಿಚಾರದಲ್ಲಿ ಈಗ ಯೋಚಿಸುತ್ತಾ, ಬೌದ್ಧಿಕ, ಮಾನಸಿಕ, ಶಾರೀರಿಕ ಶಕ್ತಿಗಳ ದುರುಪಯೋಗವನ್ನು ಮಾಡುತ್ತಿರುವವನಿಗೆ, ಇಲ್ಲವೆ ಭವಿಷ್ಯದಲ್ಲಿ ಸಿಗುವ ಫಲದ ಬಗ್ಗೆ ಮನಸ್ಸಿನಲ್ಲಿ ವಿವಿಧ ಆಲೋಚನೆಗಳಲ್ಲಿ ಮಗ್ನನಾದವನಿಗೆ ಧ್ಯಾನವು ಸಾಧ್ಯವಿಲ್ಲ. ಕರ್ಮಫಲ ಎಂದರೆ ಮುಂದೆ ಸಿಗಬಹುದಾದ (ಭವಿಷ್ಯ) ಲಾಭ. ಇದರ ವಿಚಾರವಾಗಿ ಚಿಂತಿಸುವುದೆಂದರೆ, ಇವತ್ತನ್ನು ಮರೆಯುವುದೂ, ಮತ್ತು ಅನಾವಶ್ಯಕವಾಗಿ ಮಾನಸಿಕ ಉದ್ರೇಕಕ್ಕೆ ಆಸ್ಪದ ಕೊಡುವುದೂ ಆಗಿದೆ. ಹೀಗೆ ಮಾನಸಿಕ ಉದ್ರೇಕವಿರುವಾಗ ಮನಸ್ಸಿನ ಏಕಾಗ್ರತೆಯಾಗಲೀ, ಧ್ಯಾನವಾಗಲೀ ಸಾಧ್ಯವಿಲ್ಲ. ಆದುದರಿಂದ ಧ್ಯಾನಕ್ಕಿಂತ ಕರ್ಮಫಲ ತ್ಯಾಗವು ಹಿರಿದೆಂದು ಹೇಳಲಾಗಿದೆ. ಕರ್ಮಫಲತ್ಯಾಗದಿಂದ ಮನಃಶಾಂತಿಯು ತಾನಾಗಿಯೇ ಲಭಿಸುತ್ತದೆಂಬುದನ್ನೂ ತಿಳಿಸಲಾಗಿದೆ.

ಭಕ್ತರು ಮೈಗೂಡಿಸಿಕೊಳ್ಳಬೇಕಾದ ಗುಣಗಳು
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃಕರುಣ ಏವ ಚ |
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ || || 13 ||
ಅರ್ಥ:- ಯಾವ ಪ್ರಾಣಿಗಳ್ನೂ ದ್ವೇಷಿಸದೇ ಇರುವ, ಎಲ್ಲರೊಡನೆಯೂ ಮೈತ್ರೀಭಾವವನ್ನು ಹೊಂದಿ ಎಲ್ಲರಲ್ಲಿಯೂ ಕರುಣೆಯನ್ನು ತೋರಿಸುವ, ಮಮಕಾರವನ್ನು ತೊರೆದಿರುವ, ಅಹಂಕಾರವಿಲ್ಲದಿರುವ, ಸುಖ ದುಃಖಗಳೆರಡನ್ನೂ ಸಮಾನವಾಗಿ ತಿಳಿಯುವ, ಕ್ಷಮಾಗುಣವುಳ್ಳ,
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |
ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ || || 14 ||
ಅರ್ಥ :- ಯಾವಾಗಲೂ ತೃಪ್ತನಾಗಿರುವ, ಯೋಗಾಭ್ಯಾಸದಲ್ಲಿ ನಿರತನಾಗಿರುವ, ಆತ್ಮನಿಗ್ರಹವುಳ್ಳ, ದೃಢವಾದ ನಿರ್ಧಾರವುಳ್ಳ, ಮನಸ್ಸು ಬುದ್ಧಿಗಳನ್ನು ನನಗೆ ಅರ್ಪಿಸಿರುವ ನನ್ನ ಭಕ್ತನು ನನಗೆ ಪ್ರಿಯನಾದವನು.
ಇಲ್ಲಿಂದ ಎಂಟು ಶ್ಲೋಕಗಳಲ್ಲಿ, ಪರಮ ಗುರಿಯನ್ನು ಮುಟ್ಟಿದ ಸಾಧಕನ, ಭಕ್ತನ, ಲಕ್ಷಣಗಳನ್ನೂ, ಅವನ ಮಾನಸಿನ ಹಾಗೂ ಬೌದ್ಧಿಕ ಸ್ಥಿತಿಯನ್ನೂ, ಅವನು ವ್ಯವಹಾರದಲ್ಲಿ ಜನರೊಡನೆ ವರ್ತಿಸುವ ರೀತಿಯನ್ನೂ, ಶ್ರೀಕೃಷ್ಣನು ಸುಂದರವಾಗಿ ವರ್ಣಿಸಿದ್ದಾನೆ. ಸಾಧಕನು ಇದನ್ನು ಸ್ಪಷ್ಟವಾಗಿ, ತಿಳಿದುಕೊಳ್ಳುವುದರಿಂದ ತಾನೂ ಸಹ ತನ್ನ ನಡತೆಯನ್ನು ಅದರಂತೆ ಮಾರ್ಪಡಿಸಿಕೊಂಡು, ಈ ಅಂತಸ್ತಿಗೇರಲು ಸಹಾಯವಾಗುತ್ತದೆ. ಈ ಎಂಟು ಶ್ಲೋಕಗಳಿಗೆ ಕೆಲವರು ಗೀತೆಯ ‘ಅಮೃತಾಷ್ಟಕ’ ಎನ್ನುತ್ತಾರೆ. ಸಾಧಕನಿಗೆ ಅವಶ್ಯಕವಾದ ಮುಖ್ಯವಿವರಗಳೆಲ್ಲವೂ ಇದರಲ್ಲಿ ಅಡಗಿವೆ. ಎರಡನೆಯ ಅಧ್ಯಾಯದಲ್ಲಿ ಹೇಳಿದ ಸ್ಥಿತಪ್ರಜ್ಞನ ಲಕ್ಷಣಗಳನ್ನೂ (ಅ. 2. ಶ್ಲೋ. 55 ರಿಂದ 68) ಇದರೊಡನೆ ಗಮನಿಸಿ ಅವೆರಡನ್ನೂ ಒಟ್ಟಾಗಿ ಅಭ್ಯಾಸಮಾಡುವುದ ಲಾಭಕರ.
‘ಅಮೃತಾಷ್ಟಕ’ದ ಮೇಲಿನ ಪ್ರಾರಂಭಿಕ ಶ್ಲೋಕದಲ್ಲಿ ಹನ್ನೊಂದು ಸದ್ಗುಣಗಳ ಉಲ್ಲೇಖವಿದೆ. ಸರ್ವಪ್ರಾಣಿಗಳ ಹೃದಯದಲ್ಲಿರುವ ಪರಮಾತ್ಮನು ಒಬ್ಬನೇ ಎಂದೂ, ಅವನೇ ತನ್ನ ಹೃದಯದಲ್ಲಿಯೂ ಇದ್ದಾನೆಂದೂ ಯಾರು ತಿಳಿಯುತ್ತಾರೋ ಅವರು, ತಾನು ಮತ್ತು ಪರರು ಎಂದು ಭೇದವನ್ನೆಣಿಸುವುದಿಲ್ಲ. ಅಂತೆಯೇ ಅವರು ಪರರನ್ನು ದ್ವೇಷಿಸುವುದೂ ಇಲ್ಲ. ನಮ್ಮ ಎಡಗೈಯು ಬಲಗೈಯನ್ನು ದ್ವೇಷಿಸದಿರುವಂತೆ. ಅಂತೆಯೇ ಅವನು ಎಲ್ಲರಲ್ಲಿಯೂ ಕರುಣೆಯನ್ನು ತೋರಿಸುತ್ತಾನೆ. ಎಲ್ಲರನ್ನೂ ಪ್ರೀತಿಸುತ್ತಾನೆ.

ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ |
ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ || 15 ||
ಅರ್ಥ :- ಯಾರಿಂದ ಪ್ರಪಂಚಕ್ಕೆ (ಜನರಿಗೆ) ಯಾವ ತರಹದ ಉದ್ದೇಶಗಳಾಗಲೀ, ಉದ್ವೇಗಗಳಾಗಲೀ ತೊಂದರೆಗಳಾಗಲೀ ಇಲ್ಲವೋ, ಮತ್ತು, ಪ್ರಪಂಚದ ವಿವಿಧ ವ್ಯವಹಾರಗಳು ಹಾಗೂ ಘಟನೆಗಳಿಂದ ಯಾರು ಮಾನಸಿಕ ಉದ್ವೇಗವನ್ನು ಹೊಂದುವುದಿಲ್ಲವೋ ಯಾರು ಸಂತೋಷ ದುಃಖ, ಹೆದರಿಕೆ, ಕಾತರತೆಗಳಿಂದ ಮುಕ್ತರಾಗಿರುವರೋ ಅಂತಹ ಸಾಧಕನು ನನಗೆ ಪ್ರಿಯನಾದವನು.
ಸಿದ್ಧಪುರುಷನು ತನ್ನ ನಡತೆಯಿಂದ ಇಲ್ಲವೆ ಉಪದೇಶದಿಂದ ಜನರಲ್ಲಿ ಮಾನಸಿಕ ಉದ್ವೇಗವನ್ನುಂಟು ಮಾಡುವುದಿಲ್ಲ. ತಾನು ಸಾಧಿಸಿದ ಶಾಂತಿಯಿಂದ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ (ತಾನು ವಾಸವಾಗಿರುವ ಹಾಗೂ ತಿರುಗಾಡುವ ಎಲ್ಲಾ ಸ್ಥಳಗಳಲ್ಲಿ) ವಿಶಿಷ್ಟವಾದ ಶಾಂತಿಯನ್ನೂ, ಆನಂದವನ್ನೂ ಬೀರುತ್ತಾನೆ. ನಾನಾರೀತಿಯ ದುಃಖಗಳಿಂದ ಇಲ್ಲವೆ ಉದ್ವೇಗಗಳಿಂದ ಪೀಡಿತರಾದ ಜನರು ಇಂತಹ ಸಿದ್ಧಪುರುಷನ ಸಾನ್ನಿಧ್ಯವನ್ನು ಸೇರುವ ಮಾತ್ರದಿಂದಲೇ ಮನಃಶಾಂತಿಯನ್ನು ಗಳಿಸುತ್ತಾರೆ. ಪ್ರಪಂಚದ ತನ್ನ ಜೀವನದಲ್ಲಿ ಒದಗಬಹುದಾದ ವಿವಿಧ ಆಘಾತಗಳು, ನಾನಾತರಹದ ಘಟನೆಗಳು, ಇವಾವುದರಿಂದಲೂ ಅವನು ಉದ್ವಿಗ್ನನಾಗದೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ತನ್ನ ಮನಃಶಾಂತಿಯನ್ನು ಕಾಯ್ದುಕೊಳ್ಳುತ್ತಾನೆ. ಈ ಎಲ್ಲಾ ಘಟನಗೆಳಲ್ಲಿಯೂ ಸಹ ಅವನು ಪರಮಾತ್ಮನ ಅಸ್ತಿತ್ವವನ್ನು ಕಾಣುತ್ತಾನೆ.

ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ |
ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ || 16 ||
ಅರ್ಥ :- ಯಾವ ಆಸೆಯೂ ಇಲ್ಲದ, ಶರೀರ ಮನಸ್ಸುಗಳನ್ನು ಶುಶಿಯಾಗಿಟ್ಟು ಕೊಂಡಿರುವ, ತಾನು ಹಿಡಿದ ಕಾರ್ಯವನ್ನು ದಕ್ಷತೆಯಿಂದ ಪೂರೈಸುವ, ಲಾಭಾಲಾಭ, ಸುಖ ದುಃಖಾದಿ ದ್ವಂದ್ವಗಳಲ್ಲಿ ಉದಾಸೀನನಾಗಿರುವ, ಯಾವ ದುಃಖಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದಿರುವ, ಕರ್ಮಗಳನ್ನು ಅಹಂಕಾರಭಾವದಿಂದ ಮಾಡದಿರುವ, ಭಕ್ತನು ನನಗೆ ಪ್ರಿಯನಾದವನು.
ಅನಪೇಕ್ಷ :- ನಿಜವಾದ ಭಕ್ತನು ಪ್ರಪಂಚದ ಬಾಹ್ಯ ವಸ್ತುಗಳನ್ನು ಅಪೇಕ್ಷಿಸುವುದಿಲ್ಲ. ಅವುಗಳಿಂದ ತನಗೆ ನಿಜವಾದ ಸುಖವು ಲಭಿಸುವುದಿಲ್ಲವೆಂಬುದನ್ನು ಅವನು ಮನಗಂಡಿರುತ್ತಾನೆ. ತನ್ನ ಜೀವನ ನಿರ್ವಹಣೆಗೆ ಅವಶ್ಯಕವಾದಷ್ಟನ್ನು ಪರಮಾತ್ಮನು ಒದಗಿಸುತ್ತಾನೆಂದು ಅವನು ನಂಬಿ, ತನಗೆ ಎಷ್ಟು ಲಭಿಸುತ್ತದೆಯೋ ಅಂದರೆ ಪರಮಾತ್ಮನು ಎಷ್ಟನ್ನು ಒದಗಿಸುತ್ತಾನೋ, ಅಷ್ಟರಿಂದಲೇ ತೃಪ್ತಿಯನ್ನು ಹೊಂದುತ್ತಾನೆ. ಬಾಹ್ಯ ವಸ್ತುಗಳ ಪ್ರಾಪ್ತಿಯಿಂದಲ್ಲ.
ಶುಚಿ :- ಭಕ್ತನು ತನ್ನ ಶರೀರ ಹಾಗೂ ಮನಸ್ಸುಗಳನ್ನು ಶುಚಿಯಾಗಿಟ್ಟುಕೊಂಡಿರುವುದರ ಜೊತೆಗೆ, ತಾನು ವಾಸವಾಗಿರುವ ಸ್ಥಳವನ್ನೂ, ಸುತ್ತಲಿನ ವಾತಾವರಣವನ್ನೂ ಶುಚಿಯಾಗಿಟ್ಟುಕೊಂಡಿರುತ್ತಾನೆ. ಕೆಟ್ಟ ವಿಚಾರಗಳನ್ನು ಸಹ ಚಿಂತಿಸದೆ ಅವುಗಳ ವಿಚಾರದಲ್ಲಿ ಮಾತನಾಡದೆ, ಮಾನಸಿಕ ಶುಚಿತ್ವವನ್ನು ಸಾಧಿಸಿರುತ್ತಾನೆ. ಆಂತರಿಕ ಶುಚಿಯನ್ನು ಸಾಧಿಸಲು ಬಾಹ್ಯ ಶುಚಿತ್ವ ತುಂಬಾ ಸಹಾಯಕ.
ದಕ್ಷ :- ಈತನು ವ್ಯವಹಾರದಲ್ಲಿ ಸಾಧಿಸಬೇಕಾದ ವೈಯಕ್ತಿಕ ಲಾಭವಾವುದೂ ಇಲ್ಲದಿರುವುದರಿಂದಲೂ, ಅದರಲ್ಲಿ ಅವನಿಗೆ ಆಸೆ ಇಲ್ಲದಿರುವುದರಿಂದಲೂ ಲೋಕಹಿತವೇ ಪರಮಾತ್ಮನ ಸೇವೆ ಎಂದು ಅವನು ದೃಢವಾಗಿ ನಂಬಿರುವುದರಿಂದಲೂ, ಲೋಕಹಿತಕ್ಕಾಗಿ ತಾನು ಕೈಗೊಂಡ ಎಲ್ಲಾ ಕಾರ್ಯಗಳನ್ನೂ ಅವನು ಬುದ್ಧಿವಂತಿಕೆಯಿಂದಲೂ, ಕುಶಲತೆಯಿಂದಲೂ ದಕ್ಷತೆಯಿಂದಲೂ ಸಾಂಗವಾಗಿ ನೆರವೇರಿಸುತ್ತಾನೆ. ಅವನ ಮನಸ್ಸು ಫಲದ ಚಿಂತನೆಯಲ್ಲಿ ವೇಳೆಯನ್ನು ವ್ಯಯಮಾಡದೆ ಯಿರುವುದರಿಂದ, ಅದು ಕರ್ಮದ ದಕ್ಷತೆಯ ಬಗ್ಗೆ ಸತತವೂ ಜಾಗರೂಕತೆಯಿಂದಿರುತ್ತದೆ. ಉದಾಸೀನ:- ಪ್ರಪಂಚ ವ್ಯವಹಾರದಲ್ಲಿ, ಲಾಭ-ನಷ್ಟ, ಸುಖ-ದುಃಖ, ಇತ್ಯಾದಿ ದ್ವಂದ್ವಗಳು ಒದಗುತ್ತಲೇ ಇರುತ್ತವೆ. ಇವು ಎಷ್ಟೇ ಬಲವತ್ತರವಾಗಿದ್ದರೂ, ಭಕ್ತನು ಅವುಗಳ ಕಡೆಗೆ ಲಕ್ಷ್ಯವನ್ನು ಕೊಡದೆ, ತನ್ನ ನಿರ್ದಿಷ್ಟ ಪಥದಲ್ಲಿ ಚಲಿಸುತ್ತಾನೆ. ಇವುಗಳ ಬಗ್ಗೆ ಅವನ ಉಪೇಕ್ಷೆಯು ಎಷ್ಟು ಬಲವಾಗಿರುತ್ತದೆಂದರೆ, ಅವು ಒದಗಿ ಬಂದುದು ಸಹ ಎಷ್ಟೋ ಬಾರಿ ಅವನಿಗೆ ತಿಳಿಯುವುದಿಲ್ಲ. ಮನಸ್ಸು ಸುಖ-ದುಃಖಾದಿಗಳಲ್ಲಿ ಮಗ್ನವಾದರೆ ಮಾತ್ರ ನಮಗೆ ಸುಖದುಃಖಾದಿಗಳ ಅರಿವುಂಟಾಗುತ್ತದೆ. ಅದರಲ್ಲಿ ಮಗ್ನವಾಗದಿದ್ದರೆ, ಉದಾಸೀನವಾಗಿದ್ದರೆ, ಸುಖದುಃಖಾದಿಗಳು ನಮ್ಮನ್ನು ಬಾಧಿಸಲಾರವು.
ಗತವ್ಯಥ:- ಮನಸ್ಸಿನಲ್ಲಿ ಆಸೆಯು ಉತ್ಪನ್ನವಾದರೆ ಅದು ಕ್ರಮೇಣ ಬಲಿಯುತ್ತದೆ. ಈ ಆಸೆಯು ಕೈಗೂಡದಿದ್ದರೆ ಅಥವಾ ಮನಸ್ಸು ಮತ್ತು ಆಸೆ ಇವುಗಳ ಮಧ್ಯದಲ್ಲಿ ಆತಂಕ (ವಿಘ್ನ) ವೊದಗಿದರೆ ಅದರಿಂದ ಸಿಟ್ಟು ಬರುತ್ತದೆ, ಹಾಗೂ ಕ್ರಮೇಣ ನಾನಾ ತರಹದ ದುಃಖವಾಗುತ್ತದೆ. ಈ ಎಲ್ಲಾ ದುಃಖಗಳಿಗೂ ಆಸೆಯೇ ಮೂಲ. ಭಕ್ತನಿಗೆ ಅಥವಾ ಸಿದ್ಧನಿಗೆ ಯಾವ ಆಸೆಗಳೂ ಇಲ್ಲದಿರುವುದರಿಂದ ಮತ್ತು ಅವನ ಮನೋಪಥದಲ್ಲಿ ಹೊಸ ಆಸೆಗಳು ನಾನು ಮುಂದು ತಾನು ಮುಂದು ಎಂದು ಬಂದಾಗ್ಯೂ, ಅವನು ಅವುಗಳಿಗೆ ಆಸ್ಪದ ಕೊಡದಿರುವುದರಿಂದ ಅವನಿಗೆ ಈ ಆಸೆಗಳಿಂದ ದುಃಖವಾಗುವುದಿಲ್ಲ.
ಸರ್ವಾರಂಭ ಪರಿತ್ಯಾಗೀ :- ಅಂದರೆ ಯಾವ ಹೊಸ ಕೆಲಸಗಳನ್ನೂ ಮಾಡದಿರುವುದು ಎಂದು ಅರ್ಥವಾಗುತ್ತದೆ. ಇದರಲ್ಲಿ ಶಾಬ್ದಿಕ ಅರ್ಥಕ್ಕಿಂತ ಹಿಂದಿನ ಭಾವವನ್ನು ನೋಡಬೇಕು. ಏಕೆಂದರೆ ಭಕ್ತನು ಅಥವಾ ಸಿದ್ಧನು ಲೋಕಹಿತಕ್ಕಾಗಿ ನಾನಾ ವಿಧವಾದ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಮತ್ತು ಅವುಗಳನ್ನು ದಕ್ಷತೆಯಿಂದ ಮಾಡುತ್ತಾನೆ. ಇಲ್ಲಿ ಕರ್ಮವನ್ನು ತ್ಯಜಿಸುತ್ತಾನೆ ಎಂದರೆ ಕರ್ಮಗಳನ್ನು ಮಾಡುವಾಗ “ನಾನು ಮಾಡುವವನು, ನಿರ್ದಿಷ್ಟ ಲಾಭಕ್ಕಾಗಿ ಮಾಡುತ್ತೇನೆ” ಎಂಬ ಅಹಂಕಾರವನ್ನು ತ್ಯಜಿಸಿ ಕರ್ಮ ಮಾಡುತ್ತಾನೆ ಎಂದರ್ಥ. ಹೀಗೆ ಅಹಂಕಾರವನ್ನು ತ್ಯಜಿಸಿ, ಕರ್ಮಮಾಡಿದರೆ ಅವನು ವಸ್ತುತಃ ಕರ್ಮವನ್ನು ಮಾಡಿದಂತೆಯೇ ಅಲ್ಲ.
ಅಲ್ಲ. ಆದ್ದರಿಂದ ಸರ್ವಾರಂಭ ಪರಿತ್ಯಾಗಿ ಎಂದು ಹೇಳಲಾಗಿದೆ. ಪ್ರಪಂಚದಲ್ಲಿ ನಾವು ಮಾಡುವ ಎಲ್ಲಾ ಕರ್ಮಗಳೂ ಕರ್ಮಚಕ್ರದಂತೆ ಅಖಂಡವಾಗಿ ತಿರುಗುತ್ತಿವೆ. ಪ್ರಾರಂಭವಾಗುತ್ತವೆ, ಸಾಗುತ್ತವೆ, ಕೊನೆಗೊಳ್ಳುತ್ತವೆ, ಮತ್ತೆ ಪುನಃ ಪ್ರಾರಂಭವಾಗಿ ಕೊನೆಗೊಳ್ಳುತ್ತವೆ. ತತ್ವಶಃ ನೋಡಿದರೆ ಹೊಸದಾಗಿ ಪ್ರಾರಂಭವಾಗುವುದೆಂಬುದೇ ಇಲ್ಲ. ಆದ್ದರಿಂದ ಅಹಂಕಾರಯುತವಾಗಿ ಕರ್ಮವನ್ನು ಪ್ರಾರಂಭಿಸಬಾರದು ಎಂಬ ಅರ್ಥವು ಸಾಧುವಾದುದು. ಭಕ್ತನು ತಾನು ಪರಮಾತ್ಮನ ಪ್ರತಿನಿಧಿ ಎಂದು ತಿಳಿದುಕೊಂಡು ಕರ್ಮಮಾಡುವುದರಿಂದ ಅವನಿಗೆ ಅದರಲ್ಲಿ ಅಹಂಕಾರವಿಲ್ಲ.

ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ |
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ || || 17 ||
ಅರ್ಥ :- ಯಾರು ಇಷ್ಟವಾದ ವಸ್ತುವು ಸಿಕ್ಕರೆ ಸಂತೋಷ ಪಡುವುದಿಲ್ಲವೋ, ಬೇಡಾದ ವಸ್ತುಗಳು ಸಿಕ್ಕರೆ ದುಃಖಪಡುವುದಿಲ್ಲವೋ, ತನಗೆ ಇಂತಹದೇ ವಸ್ತು ಸಿಗಬೇಕೆಂಬ ಆಸೆಗಳನ್ನಿಟ್ಟುಕೊಳ್ಳುವುದಿಲ್ಲವೋ, ತನಗೆ ಒದಗಿದ ಶುಭ ಮತ್ತು ಅಶುಭಗಳೆರಡನ್ನೂ ತ್ಯಾಗಮಾಡುತ್ತಾನೋ, ಮತ್ತು ಯಾವನು ನನ್ನಲ್ಲಿ ಭಕ್ತಿಯುಳ್ಳವನಾಗಿರುತ್ತಾನೋ ಅವನು ನನಗೆ ಪ್ರಿಯನು.
ಉಚ್ಚ ಮಟ್ಟಕ್ಕೇರಿದ ಭಕ್ತನು ಮನಸ್ಸು ಬುದ್ಧಿಗಳಾಚೆಗೆ ದಾಟಿ ತನ್ನ ಆತ್ಮಶಕ್ತಿಯನ್ನು ಜಾಗ್ರತಗೊಳಿಸಿಕೊಂಡಿರುತ್ತಾನೆ. ಆದುದರಿಂದ ಕೆಳಮಟ್ಟದ ಸುಖದುಃಖಾದಿ ದ್ವಂದ್ವಗಳು ಅವನನ್ನು ಪೀಡಿಸಲಾರವು. ಈ ಪ್ರಪಂಚದಲ್ಲಿ ತಾನು ಗಳಸಿಬೇಕಾದುದು ಕೇವಲ ಪರಮಾತ್ಮನ ಜ್ಞಾನ ಮಾತ್ರ ಎಂದು ಅವನು ನಂಬಿರುತ್ತಾನೆ. ಅವನಿಗೆ ಪರಮಾತ್ಮನ ದರ್ಶನದ ಹೊರತಾಗಿ ಬೇರೆ ಯಾವುದರ ಆಸೆಯೂ ಇಲ್ಲ. ಪರಮಾತ್ಮನು ತನ್ನಲ್ಲಿಯೇ ಇದ್ದಾನೆ, ತನ್ನನ್ನು ಬಿಟ್ಟು ಬೇರೆಯಾಗುವುದಿಲ್ಲ, ಎಂದು ಅವನು ತಿಳಿದಿದ್ದಾನೆ. ಇದರಲ್ಲಿಯೇ ಅವನಿಗೆ ತೃಪ್ತಿ, ಆದ್ದರಿಂದ ಶುಭಾಶುಭಗಳಲ್ಲಿ ಲಿಪ್ತನಾಗದೆ ಅವುಗಳನ್ನು ಮಾನಸಿಕವಾಗಿ ತ್ಯಜಿಸಿರುತ್ತಾನೆ.

ಸಮಃಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ |
ಶೀತೋಷ್ಣಸುಖದುಃಖೇಷು ಸಮಃ ಸಂಗವಿರ್ವಜಿತಃ || 18 ||
ತುಲ್ಯನಿಂದಸ್ತುತಿರ್ಮೌನೀ ಸಂತುಷ್ಟೋ ಯೇನಕೇನಚಿತ್ |
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ || 19 ||
ಅರ್ಥ :- ಶತ್ರುಗಳು ಮತ್ತು ಮಿತ್ರರು ಇಬ್ಬರನ್ನೂ ಸಮಾನವಾಗಿ ತಿಳಿಯುವವನು, ಮಾನ-ಅಪಮಾನ, ಶೀತ-ಉಷ್ಣ, ಸುಖ-ದುಃಖ ಇವುಗಳನ್ನು ಸಮಾನವಾಗಿ ತಿಳಿಯುವವನು, ಯಾವುದರಲ್ಲಿಯೂ ಮಮಕಾರವನ್ನು ಹಚ್ಚಿಕೊಳ್ಳದೆ ಇರುವವನು, ಹೊಗಳಿಕೆ ಮತ್ತು ನಿಂದೆಗಳನ್ನು ಒಂದೇ ಎಂದೆಣಿಸುವವನು, ಮೌನದಿಂದಿರುವನು, ತನಗೆ ದೈವೆಛ್ಚೆಯಿಂದ
ಏನು ಹಾಗು ಎಷ್ಟು ಸಿಗುತ್ತದೆಯೋ ಅಷ್ಟರಿಂದಲೇ ತೃಪ್ತಿಪಡುವವನು, ವಾಸಸ್ಥಾನದ ಯಾಜಮಾನ್ಯವಿಲ್ಲದವನು (ವಾಸದ ಮನೆಯು ತನ್ನದು ಎಂಬ ಅಹಂಕಾರವಿಲ್ಲದವನು), ಸ್ಥಿರವಾದ ಬುದ್ಧಿಯಿರುವವನು, ಮತ್ತು ನನ್ನಲ್ಲಿ ಭಕ್ತಿಯಿರುವವನು, ಇಂತಹ ಭಕ್ತನು ನನಗೆ ಪ್ರಿಯವಾದವನು.
ಭಕ್ತನ ಇತರೆ ಲಕ್ಷಣಗಳನ್ನು ವಿವರಿಸಲಾಗಿದೆ. ಸಣ್ಣದೋಣಿಯಲ್ಲಿ ಕುಳಿತುಕೊಂಡು ಸಮುದ್ರದಲ್ಲಿ ಹೋಗುವವನು ಉಕ್ಕಿ ಬರುವ ಅಲೆಗಳ ಬಡಿತಕ್ಕೆ ಸಿಕ್ಕು ದಿಕ್ಕು ತೋಚದವನಾಗುತ್ತಾನೆ. ಆದರೆ ಸಮುದ್ರದ ಅಂಚಿನಲ್ಲಿರುವ ತನ್ನ ಮನೆಯ ಮಹಡಿಯ ಮೇಲೆ ಕುಳಿತುಕೊಂಡು ಈ ದೃಶ್ಯವನ್ನು ನೋಡುತ್ತಿರುವವನು, ಸಮುದ್ರ ಅಲೆಗಳಿಗೆ ಹೆದರದೆ ನಿಶ್ಚಿಂತೆಯಿಂದ ಇರುತ್ತಾನೆ. ಭಕ್ತನು ಈ ರೀತಿಯಾಗಿ ಪರಮಾತ್ಮನ ಧ್ಯಾನಾನಂದದಲ್ಲಿ ನಿರತನಾಗಿದ್ದು ತನ್ನ ಮನಸ್ಸು ಬುದ್ಧಿಗಳು ಎದುರಿಸುತ್ತಿರುವ ಶತ್ರು-ಮಿತ್ರ, ಮಾನ-ಅಪಮಾನ, ಶೀತ-ಉಷ್ಣ, ಸುಖ-ದುಃಖ, ನಿಂದೆ-ಸ್ತುತಿ, ಮೊದಲಾದ ದ್ವಂದ್ವಗಳಿಂದ ಚಲಿತನಾಗದೆ, ಅವುಗಳ ಕಡೆಗೆ ಲಕ್ಷ್ಯವನ್ನೂ ಕೊಡದೆ, ತನ್ನ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊಳ್ಳುತ್ತಾನೆ. ಒಟ್ಟಿನಲ್ಲಿ ಭಕ್ತನು, ತಾನು ಶಾರೀರಿಕ, ಮಾನಸಿಕ, ಹಾಗೂ ಬೌದ್ಧಿಕ ಹಂತಗಳಲ್ಲಿ ಎದುರಿಸಬಹುದಾದ ಯಾವ ತರಹದ ದ್ವಂದ್ವಗಳಿಂದಲೂ ಬಾಧಿತನಾಗದೆ ಶಾಂತಮನಸ್ಸುಳ್ಳವನಾಗಿರುತ್ತಾನೆ. ಭಕ್ತನು ಆತ್ಮಾನುಸಂಧಾನದಲ್ಲಿರುವುದರಿಂದ ಹೊಗಳಿಕೆ ಮತ್ತು ತೆಗಳಿಕೆಗಳಿಂದ ಚಲಿಸುವುದಿಲ್ಲ. ಅಂದರೆ ಅವನು ಬೈಗಳನ್ನು ತಿಳಿದುಕೊಳ್ಳಲಾರದಷ್ಟು ದಡ್ಡನೆಂದು ತಿಳಿಯಬಾರದು. ಹೊಗಳಿಕೆ ಮತ್ತು ತೆಗಳಿಕೆ ಇವೆರಡೂ ಅದನ್ನು ಉಪಯೋಗಿಸುವವರ ಮನೋಭೂಮಿಕೆಯ ನಿದರ್ಶನ ಎಂದು ಅವನು ತಿಳಿದುಕೊಂಡು, ಹೊಗಳಿಕೆಯಿಂದ ಹಿಗ್ಗುವುದೂ ಇಲ್ಲ, ತೆಗಳಿಕೆಯಿಂದ ಉದ್ರಿಕ್ತನಾಗುವುದೂ ಇಲ್ಲ. ಇಲ್ಲವೇ ಕುಗ್ಗುವುದೂ ಇಲ್ಲ- ಈತನು ಮೌನವಾಗಿರುತ್ತಾನೆ.
ಮನೆ ಇಲ್ಲದವನು (ಅನಿಕೇತ) – ಭಕ್ತನು ಮನೆಯಲ್ಲಿ ವಾಸ ಮಾಡಿರಬಹುದು, ಆದರೆ ಆ ಮನೆಯು ತನ್ನದು ಎಂಬ ಅಹಂಕಾರವನ್ನು ತಾಳುವುದಿಲ್ಲ. ನಾನು ಒಂದು ರಾತ್ರೆ ರೈಲ್ವೆ ನಿಲ್ದಾಣದಲ್ಲಿ ಇಲ್ಲವೆ ಧರ್ಮಶಾಲೆಯಲ್ಲಿ ವಾಸವಾಗಿರಬಹುದು. ಆದರೆ ನಮ್ಮ ಮನೆಯಾಗುವುದಿಲ್ಲ. ಮನೆಯ ಒಡೆತನವನ್ನು ಹೊಂದುವುದರಿಂದ, ಇಲ್ಲವೇ ಅದು ನನ್ನದು ಎಂಬ ಅಭಿಮಾನವನ್ನು ಹೊಂದಿರುವುದರಿಂದ ಅದು ನನ್ನದಾಗುತ್ತದೆ. ಭಕ್ತನಿಗೆ ಇಂತಹ ಅಭಿಮಾನವಿಲ್ಲ. ಪರಮಾತ್ಮನ ಪಾದವೇ ತನ್ನ ಮನೆ ಎಂದು ಅವರು ತಿಳಿದಿರುತ್ತಾನೆ.
ಇದುವರೆಗೆ ಭಕ್ತನ ಮೂವತ್ತಾರು ಲಕ್ಷಣಗಳನ್ನು ವರ್ಣಿಸಲಾಯಿತು. ಸಾಧಕನು ಅವುಗಳನ್ನು ಮೈಗೂಡಿಸಿಕೊಳ್ಳಬೇಕು.
ಯೇ ತು ಧಮ್ರ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ |
ಶ್ರದ್ಧಧಾನಾ ಮತ್ಪರಮಾ ಭಕ್ತಾಸ್ತೇ„ತೀವ ಮೇ ಪ್ರಿಯಾಃ || 20 ||
ಅರ್ಥ :- ಇದುವರೆಗೆ ಹೇಳಲ್ಪಟ್ಟ ಶಾಶ್ವತವಾದ ಧರ್ಮವನ್ನು (ಜೀವನದ ನಿಯಮಗಳು) ಶ್ರದ್ಧೆಯಿಂದ ಕೂಡಿ ಆಚರಿಸುತ್ತಾ, ಪರಮಾತ್ಮನಾದ ನಾನೇ ಪರಮ ಧ್ಯೇಯನು ಎಂದು ನಂಬಿರುವ ಭಕ್ತನು ನನಗೆ ಅತ್ಯಂತ ಪ್ರಿಯನಾದವನು.
ಮೇಲೆ ತಿಳಿಸಿದ ಧರ್ಮದ ವಿವರಗಳನ್ನು ಸದ್ಗುಣಗಳನ್ನು ಕೇವಲ ಓದಿ ತಿಳಿದುಕೊಂಡರೆ ಅಥವಾ ಬೇರೆಯವರಿಗೆ ಉಪದೇಶ ಮಾಡಿದರೆ ಸಾಲದು. ಅವುಗಳನ್ನು ತಾನು ಸ್ವತಃ ಆಚರಣೆಯಲ್ಲಿ ತಂದು ಅನುಭವಿಸಬೇಕು. ಆಚರಣೆಯಲ್ಲಿ ತರುವಾಗ ಪರಮಾತ್ಮನ ವಚನದಲ್ಲಿ ಶ್ರದ್ಧೆಯಿರಬೇಕಾದುದು ಅವಶ್ಯಕ. ಹೀಗೆ ಶ್ರದ್ಧೆಯಿಂದ ಆಚರಣೆಗೆ ತರುವ ಭಕ್ತನು ಪರಮಾತ್ಮನಿಗೆ ಅತೀವ ಪ್ರಿಯನಾದವನು.
ಓಂ ತತ್ವದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಭಕ್ತಿಯೋಗೋನಾಮ…
ದ್ವಾದಶೋ„ಧ್ಯಾಯಃ
*******