S O U L B L I S S

Loading

Bhagavad Gita – Vinayak Rao Bapat – Chapter 14

ಅಧ್ಯಾಯ-14
ಗುಣತ್ರಯ ವಿಭಾಗ ಯೋಗ 

ಪೀಠಿಕೆ
ಸೃಷ್ಟಿಯಾದ ಚರಾಚರವಸ್ತುಗಳೆಲ್ಲದರಲ್ಲಿಯೂ, ಪರಮಾತ್ಮನು ಅಖಂಡನಾಗಿದ್ದು, ಅವುಗಳ ಇರುವಿಕೆಗೂ, ಚಲನವಲನಾದಿಗಳಿಗೂ ಕಾರಣನಾಗಿದ್ದಾನೆಂದು ಹಿಂದಿನ ಅಧ್ಯಾಯದಲ್ಲಿ ತಿಳಿದಿದ್ದೇವೆ. ಎಲ್ಲಾ ವಸ್ತುಗಳ ಚೇತನಕ್ಕೆ ಕಾರಣನಾದ ಪರಮಾತ್ಮನು ಒಬ್ಬನೇ. ಒಂದೇ ಜಾತಿಯ ವಸ್ತುಗಳು ಭಿನ್ನಭಿನ್ನವಾಗಿರುವಂತೆ, ಸೃಷ್ಟಿಯಾದ ವಸ್ತುಗಳಲ್ಲಿ ಖನಿಜ, ಸಸ್ಯ, ಪ್ರಾಣಿ, ಪಶು, ಪಕ್ಷಿ, ಮನುಷ್ಯ ಎಂಬ ವರ್ಗಗಳಿವೆ. ಪ್ರತಿಯೊಂದು ಜಾತಿಯಲ್ಲಿಯ ಜೀವಿಗಳೇ ಭಿನ್ನಭಿನ್ನವಾಗಿವೆ. ಯಾವ ಎರಡು ಪ್ರಾಣಿಗಳೂ ಒಂದೇ ರೀತಿಯಾಗಿಲ್ಲ. ಮನುಷ್ಯರಲ್ಲಿ ಸಹ ಶರೀರ, ಮನಸ್ಸು, ಬುದ್ಧಿಗಳ ಬೆಳವಣಿಗೆಯ ದೃಷ್ಟಿಯಿಂದ ಬಹಳ ವ್ಯತ್ಯಾಸವನ್ನು ಕಾಣುತ್ತೇವೆ. ಈ ರೀತಿ ವ್ಯತ್ಯಾಸಕ್ಕೆ ಕಾರಣವೇನು?
ಹಿಂದಿನ ಅಧ್ಯಾಯದ ಇಪ್ಪತ್ತೆರಡನೆಯ ಶ್ಲೋಕದಲ್ಲಿ ಇದರ ಕಾರಣವನ್ನು ಸಂಕ್ಷೇಪವಾಗಿ ತಿಳಿಸಲಾಗಿದೆ. “ಪುರುಷನು ಪ್ರಕೃತಿಯಲ್ಲಿದ್ದುಕೊಂಡು ಪ್ರಕೃತಿಯ ಗುಣಗಳನ್ನು ಅನುಭವಿಸುತ್ತಾನೆ, ಮತ್ತು ಅವುಗಳಿಗೆ ಅನುಗುಣವಾಗಿ ಒಳ್ಳೆಯ- ಕೆಟ್ಟ ಜನ್ಮಗಳನ್ನು ಪಡೆಯುತ್ತಾನೆ” ಎಂದು ಹೇಳಲಾಗಿದೆ. ಒಂದೇ ಗಂಗಾನದಿಯ ನೀರನ್ನು ಬೇರೆ ಬೇರೆ ಸೀಸೆಗಳಲ್ಲಿ ಹಾಕಿದರೆ, ಆ ನೀರು ಪಾತ್ರೆಯ ಆಕಾರ ಮತ್ತು ಬಣ್ಣಕ್ಕನುಗುಣವಾಗಿ ಭಿನ್ನಭಿನ್ನವಾಗಿ ಕಾಣುತ್ತದೆ. ನಾವು ಆ ನೀರನ್ನು ಬಾಟ್ಲಿಯ ಹೊರಗಡೆಯಿಂದ ನೋಡಿದರೆ ನೀರು ನೀಲಿ, ಕೆಂಪು, ಹಸಿರು, ಬಿಳುಪು ಬಣ್ಣಗಳಿಂದ್ದಾಗಿರುವಂತೆ ತೋರುತ್ತದೆ. ಇಲ್ಲಿ ಸೀಸೆಯ ಆಕಾರ ಹಾಗೂ ಬಣ್ಣಗಳನ್ನು ನೀರಿನ ಮೇಲೇ ಆರೋಪಿಸುತ್ತೇವೆ. ನೀರಿಗೆ ವಾಸ್ತವವಾಗಿ ಬಣ್ಣ ಹಾಗೂ ಆಕಾರಗಳಿಲ್ಲದಿದ್ದಾಗ್ಯೂ, ಅವುಗಳಿರುವಂತೆ ಕಾಣುತ್ತದೆ. ಇದೇ ರೀತಿಯಾಗಿ ಪರಮಾತ್ಮನು ವಿವಿಧ ಶರೀರಗಳಲ್ಲಿರುವಾಗ ನಾನಾರೀತಿಯ ಗುಣಗಳನ್ನು ವ್ಯಕ್ತಪಡಿಸುತ್ತಾನೆ. ಈ ಗುಣಗಳು ಆಯಾಯಾ ಶರೀರದ ಮನಸ್ಸು ಬುದ್ಧಿಗಳಿಗನುಗುಣವಾಗಿವೆಯೇ ಹೊರತು, ಅವು ಪರಮಾತ್ಮನಿಗಿಲ್ಲ. ಇವು ಆ ವ್ಯಕ್ತಿಯ ಮನಸ್ಸಿನ ಭಾವ ಇಲ್ಲವೇ ವಾಸನೆಗಳಿಗನು ಗುಣವಾಗಿರುತ್ತವೆ. ಈ ಗುಣಗಳನ್ನು ಸಾತ್ವಿಕ, ರಾಜಸಿಕ, ತಾಮಸಿಕ ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಈ ಮೂರು ಗುಣಗಳಿವೆ. ಆದರೆ ಅವುಗಳ ಸಂಯೋಗದ ಪ್ರಮಾಣವು ಮಾತ್ರ ಭಿನ್ನಭಿನ್ನವಾಗಿವೆ. ಈ ಸಂಯೋಗದಲ್ಲಿ ಯಾವ ಗುಣವು ಪ್ರಧಾನವಾಗಿರುತ್ತದೆಯೋ. ವ್ಯಕ್ತಿಯು ಆ ಗುಣದವನೆಂದು ಹೇಳುತ್ತೇವೆ. ಇವುಗಳಲ್ಲಿ ಸತ್ಯಗುಣವು ಶ್ರೇಷ್ಠವಾದುದು. ಆತ್ಮಜ್ಞಾನಕ್ಕೆ ಪೋಷಕವಾದುದು. ತಮೋ ಗುಣವು ಅಜ್ಞಾನವನ್ನು ಹೆಚ್ಚಿಸುತ್ತದೆ. ನಮ್ಮ ಪ್ರಯತ್ನದಿಂದ ತಮೋಗುಣ, ರಜೋಗುಣಗಳನ್ನು ಅಮುಕಿ, ಸತ್ವಗುಣವನ್ನು ಜಾಗೃತಗೊಳಿಸಿ ಕೊಳ್ಳುವುದು ಸಾಧ್ಯವಿದೆ. ಹೀಗೆ ಮಾಡಬೇಕೆಂಬುದೇ ವೇದಾಂತ ಶಾಸ್ತ್ರದ ಉಪದೇಶ. ಆದುದರಿಂದ ಈ ಅಧ್ಯಾಯದಲ್ಲಿ ಈ ಮೂರು ಗುಣಗಳ ಸ್ವಭಾವವೇನು? ಎಂಬುದರ ವಿವರವಾದ ವರ್ಣನೆಯಿದೆ. ಇಲ್ಲಿ ತಿಳಿಸಲಾಗುವ ಲಕ್ಷಣಗಳ ಮೇಲಿನಿಂದ, ಪ್ರತಿಯೊಬ್ಬ ಸಾಧಕನೂ ತಾನು ಯಾವ ಗುಣದವನು, ಇಲ್ಲವೇ ವಿಶಿಷ್ಟ ಬೇರೆ ಬೇರೆ ಸಂದರ್ಭಗಳಲ್ಲಿ ತನ್ನಲ್ಲಿ ಯಾವ ಗುಣವು ಉಲ್ಬಣವಾಗಿದೆ, ಎಂಬುದನ್ನು ಕಂಡು ಹಿಡಿದು, ತಮೋಗುಣ ಇಲ್ಲವೇ ರಜೋಗುಣ ಉಲ್ಬಣವಾಗಿದ್ದರೆ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು, ಸತ್ವಗುಣವನ್ನು ಜಾಗೃತಗೊಳಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ, ಇಂದ್ರಿಯ ನಿಗ್ರಹ ಮೂಲಕ ಮನಸ್ಸಿನ ಏಕಾಗ್ರತೆಯನ್ನೂ, ತನ್ಮೂಲಕ ಶಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಅನೇಕ ಸಾಧಕರು ಸಾಧನೆಯಲ್ಲಿ ತುಂಬಾ ಮುಂದುವರಿದ್ದಾಗ್ಯೂ ತಮ್ಮ ಮನಸ್ಸು ರಜೋಗುಣ ಇಲ್ಲವೇ ತಮೋಗುಣಗಳ ಸೆಳೆತಕ್ಕೆ ಸಿಕ್ಕಿಕೊಂಡು ಹೋಗುತ್ತಿರುವಾಗ, ಮನಸ್ಸಿನ ಈ ದೋಷವನ್ನು ತಿಳಿಯಲಾರದೆ, ಸಾಧನೆಯಿಂದ ವಿಮುಖರಾಗುತ್ತಾರೆ. ಆದುದರಿಂದ ಈ ಜ್ಞಾನವನ್ನು ತಿಳಿದುಕೊಂಡರೆ, ಸಕಾಲದಲ್ಲಿ ತಮ್ಮ ದೋಷವನ್ನು ಅರಿತು, ತಿದ್ದಿಕೊಂಡು ಸಾಧನೆಯನ್ನು ಇನ್ನೂ ಬಲಪಡಿಸಿ ಗುರಿಯತ್ತ ವೇಗದಿಂದ ಸಾಗುವುದು ಸುಲಭವಾಗುತ್ತದೆ. ಈ ದೃಷ್ಟಿಯಿಂದ ಸಾಧಕರಿಗೆ ಈ ಅಧ್ಯಾಯವು ತುಂಬಾ ಉಪಯುಕ್ತವಾಗಿದೆ.

ಹದಿನಾಲ್ಕನೆಯ ಅಧ್ಯಾಯ
ಗುಣತ್ರಯ ವಿಭಾಗ ಯೋಗ
ಶ್ರೀ ಭಗವಾನುವಾಚ
ಪರಂ ಭೂಯಃ ಪ್ರವತ್ಸ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ | ಪ್ರವಕ್ಷ್ಯಾಮಿ
ಯಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ || 1 ||

ಅರ್ಥ :- ಯಾವ ಜ್ಞಾನವನ್ನು ತಿಳಿಯುವುದರಿಂದ ಎಲ್ಲಾ ಋಷಿಗಳೂ, ಈ ಶರೀರವನ್ನೂ ವನ್ನುಬಿಟ್ಟನಂತರ, ಶ್ರೇಷ್ಠವಾದ ಗತಿಯನ್ನು ಹೊಂದಿದರೋ ಅಂತಹ ಜ್ಞಾನವನ್ನು ನಾನು ಪುನಃ ಹೇಳುತ್ತೇನೆ.
ಅರ್ಥ :- ತಾನೇ ಶರೀರ ಎಂಬ ಅಜ್ಞಾನಕ್ಕೆ ಸಿಕ್ಕ ಮನುಷ್ಯನು ಬುದ್ಧಿವಂತ-ನಾಗಿದ್ದಾಗ್ಯೂ ಸಹ, ಅವನ ಮನಸ್ಸು ಸುಖದುಃಖಗಳಿಂದ ಉದ್ರೇಗೊಳ್ಳುವುದರಿಂದ ವೇದಾಂತ ಬೋಧವು ಒಂದೇ ಸಾರಿ ಅವನ ಮನಸ್ಸಿಗೆ ನಾಟುವುದಿಲ್ಲ. ಮನಸ್ಸಿನಿಂದ ಒಪ್ಪಿದರೂ ಸಾಧನೆಯನ್ನು ಮಾಡುವಷ್ಟು ಬಲವಾದ ನಿಶ್ಚಯವಿರುವುದಿಲ್ಲ ಸಾಧನೆಯು ಪ್ರಾರಂಭವಾದ ನಂತರ ಮನಸ್ಸು ನಾನಾ ನೆಪಗಳನ್ನೂ ಮುಂದೂಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದುದರಿಂದ ಈ ಉಪದೇವನ್ನು ಅದು ಸ್ಪಷ್ಟವಾಗಿ ಮನಸ್ಸಿನಲ್ಲಿ ಬೇರೂರುವವರೆಗೂ, ಬೇರೆಬೇರೆ ರೀತಿಯಲ್ಲಿ ಪುನಃ ಪುನಃ ಹೇಳಬೇಕಾಗುತ್ತದೆ. ಗುರುಶಿಷ್ಯ ಸಂಪ್ರದಾಯದಲ್ಲಿ ಗುರುವು ತನ್ನ ಶಿಷ್ಯನ ಮೇಲಿನ ಪ್ರೇಮದಿಂದ ಹೀಗೆ ಪದೇ ಪದೇ ಹೇಳುವ ಪದ್ಧತಿಯು ನಡೆದು ಬಂದಿದೆ- ಅರ್ಜುನನಿಗೆ ಈ ರೀತಿ ಉಪದೇಶ ಮಾಡುವ ಅವಶ್ಯಕತೆಯನ್ನು ಕಂಡ ಶ್ರೀಕೃಷ್ಣನು ಈ ಅಧ್ಯಾಯದಲ್ಲಿ ಉಪದೇಶವನ್ನು ಪ್ರಾರಂಭಿಸಿದ್ದಾನೆ.
ಈಗ ಉಪದೇಶಿಸುವ ಜ್ಞಾನದ ಕಡೆಗೆ ಅರ್ಜುನನ ಮನಸ್ಸನ್ನು ಆಕರ್ಷಿಸುವ ಸಲುವಾಗಿ, ಈ ಜ್ಞಾನದಿಂದ ಲಭಿಸುವ ಲಾಭವೇನೆಂಬುದನ್ನು ಹೇಳಲಾಗಿದೆ. ಈ ಜ್ಞಾನವನ್ನು ತಿಳಿದುಕೊಳ್ಳುವುದರಿಂದ, ಮಾರ್ಗದಲ್ಲಿ ಒದಗಬಹುದಾದ ವಿಘ್ನಗಳಾವುವು, ಈಗ ಯಾವ ತರಹದ ಎಚ್ಚರಿಕೆಯನ್ನು ವಹಿಸಬೇಕು, ಯಾವ ರೀತಿಯಲ್ಲಿ ರಕ್ಷಣೆಯನ್ನು ಮಾಡಿಕೊಳ್ಳ ಬೇಕು ಅಪಾಯ ವೊದಗಿದಾಗ ಯಾವ ರೀತಿ ಎದುರಿಸಬೇಕು ಎಂಬ ಎಲ್ಲಾ ವಿವರಗಳನ್ನೂ ಮುಂಚಿತವಾಗಿ ವಿಚಾರಮಾಡಿ ಸಂಪೂರ್ಣ ಸುಸಜ್ಜಿತವಾಗಿ ಪ್ರಯಾಣ ಮಾಡಿ ಗುರಿಯನ್ನು ಸುಖವಾಗಿ ತಲುಪಬಹುದು.
ಈ ಜ್ಞಾನವನ್ನು ಪಡೆದರೆ ತಾನೇ ಪರಮಾತ್ಮನು ಎಂಬ ಅರಿವಾಗುತ್ತದೆ.
ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧಮ್ರ್ಯಮಾಗತಾಃ |
ಸರ್ಗೇ„ಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ || 2 ||
ಅರ್ಥ :- ಈ ಜ್ಞಾನವನ್ನು ಆಶ್ರಯಿಸಿ, ಸಾಧನೆ ಮಾಡಿ, ನನ್ನನ್ನು ಸೇರಿದವರು ಪ್ರಪಂಚವು ಸೃಷ್ಟಿಯಾಗುವಾಗ ಹುಟ್ಟುವುದೂ ಇಲ್ಲ. ಪ್ರಳಯದಲ್ಲಿ ದುಃಖಿಸುವುದೂ ಇಲ್ಲ.

ಮಮ ಯೋನಿರ್ಮಹದ್ಭ್ರಹ್ಮತಸ್ಮಿನ್ ಗರ್ಭಂ ದಧಾಮ್ಯಹಮ್ |
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ || 3 ||
ಅರ್ಥ :- ಬ್ರಹ್ಮನು ತನ್ನ ಗರ್ಭಕೋಶವು ಅಲ್ಲಿ ನಾನು ಗರ್ಭ ಬೀಜವನ್ನು ಇಡುತ್ತೇನೆ. ಭಾರತನೇ, ಇದರಿಂದ ಎಲ್ಲಾ ಭೂತಗಳೂ ಜನಿಸುತ್ತವೆ.
ಇಡೀ ಪ್ರಪಂಚವು (ಚರಾಚರವಸ್ತುಗಳೆಲ್ಲವೂ) ಒಂದೇ ಗರ್ಭದಿಂದ ಜನಿಸುತ್ತದೆ, ಎಂಬ ತತ್ವವನ್ನು ಇಲ್ಲಿ ಹೇಳಲಾಗಿದೆ- ದೇಶದ ಕಾಯ್ದೆಯಂತೆ ಮುಖ್ಯಮಂತ್ರಿಯು ಸಾಮಾನ್ಯ ಪ್ರಜೆ ಹಾಗೆ ಒಂದು ಮತವನ್ನು ಕೊಡುವ ಅಧಿಕಾರವುಳ್ಳವನಾಗಿದ್ದಾನೆ. ಆದರೆ ಮುಖ್ಯಮಂತ್ರಿಯ ಅಧಿಕಾರವು ಸಾಮಾನ್ಯ ಪ್ರಜೆಗಳ ಅಧಿಕಾರಕ್ಕಿಂತ ಸಾವಿರಾರು ಪಟ್ಟು ಹೆಚ್ಚಾಗಿದೆ. ಈ ಶಕ್ತಿಯು ಅವನಿಗೆ ಅಧಿಕಾರ ಸ್ಥಾನದಿಂದ ಲಭಿಸಿದೆ. ಅವನು ತನ್ನ ಮತಕೊಡುವ ಅಧಿಕಾರ ಬಲದಿಂದ ಬಹುಮತದ ಬೆಂಬಲವನ್ನು ಪಡೆದಿದ್ದಾನೆ. ಪರಮಾತ್ಮನು ಸರ್ವಶಕ್ತನಾಗಿದ್ದಾಗ್ಯೂ, ಅಹಂಕಾರದಿಂದ ಕೂಡಿ, ಜೀವನೆನಿಸಿಕೊಳ್ಳುತ್ತಾನೆ. ಮುಖ್ಯಮಂತ್ರಿಯು ತನ್ನ ವೈಯಕ್ತಿಕ ಆಸೆಗಳ್ನು ಬದಿಗೊತ್ತಿ, ಬಹುಜನರ ಆಸೆ ಆಕಾಂಕ್ಷೆಗಳನ್ನು ತನ್ನ ಆಸೆ ಆಕಾಂಕ್ಷೆಗಳೆಂದು ವ್ಯಕ್ತಪಡಿಸುವಂತೆ ಜೀವನು ತನ್ನ ವೈಯಕ್ತಿಕ ಆಸೆಗಳನ್ನು ಬದಿಗೊತ್ತಿ, ಪ್ರಪಂಚದ ಎಲ್ಲಾ ಭೂತಗಳ ಅಥವಾ ಜೀವಗಳ ಒಟ್ಟು ವಾಸನೆಗಳೇ ತಾನು ಎಂದು ತಿಳಿದರೆ ಅವನೇ ಈಶ್ವರನಾಗುತ್ತಾನೆ. ಈ ಒಟ್ಟು ವಾಸನೆಗಳ ಸಮುದಾಯಕ್ಕೆ ಬ್ರಹ್ಮ ಎಂದು ಹೆಸರು. ಪರಮಾತ್ಮನು ಈ ಗರ್ಭದಲ್ಲಿ ಪ್ರವೇಶಿಸಿ, ಸೃಷ್ಟಿ ಸಮುದಾಯಕ್ಕೆ ಚೇತನವನ್ನು ಕೊಡುತ್ತಾನೆ. ಇವನಿಗೆ ಹಿರಣ್ಯಗರ್ಭ ಎಂದೂ ಹೆಸರು. ಎಲ್ಲಾ ವಾಸನೆಗಳ ಒಟ್ಟು ಸಮುದಾಯಕ್ಕೆ ‘ಪ್ರಕೃತಿ’ ಎಂಬ ಹೆಸರೂ ಇದೆ. ಇದು ಸಹ ತ್ರಿಗುಣಾತ್ಮಕವಾದುದು. ಈ ಮೂರು ಗುಣಗಳಿಗೆ ವೇದಾಂತ ಭಾಷೆಯಲ್ಲಿ ‘ಮಾಯೆ’ ಎನ್ನುತ್ತಾರೆ. ಮಾಯೆಯು ಪ್ರಕೃತಿಯಿಂದ ಸೃಷ್ಟಿಕಾರ್ಯವನ್ನು ಮಾಡಿಸಿದಂತೆ, ಜೀವರಲ್ಲಿ ಅಹಂಕಾರವನ್ನುಂಟು ಮಾಡಿ (ಅವಿದ್ಯೆ) ಅವರಿಂದ ಅವರಿವರ ಸಂಸಾರದಲ್ಲಿ ನಾನಾತರಹದ ಕಾರ್ಯಗಳನ್ನು ಮಾಡಿಸುತ್ತದೆ. ಜೀವನು ಈ ಅವಿದ್ಯೆಯ ಹಿಡಿತದಲ್ಲಿದ್ದಂತೆ ಮಾಯೆಯು ಈಶ್ವರನ ಹಿಡಿತದಲ್ಲಿದೆ.

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ || 4 ||
ಅರ್ಥ :- ಕೌಂತೇಯನೇ, ಪ್ರತಿಯೊಂದು ಗರ್ಭದಿಂದ ನಾನಾರೂಪಗಳ ಜನ್ಮವಾದಾಗ್ಯೂ ಅವೆಲ್ಲವುಗಳಲ್ಲಿಯೂ ಬ್ರಹ್ಮನು ಗರ್ಭಕೋಶವೆಂತಲೂ, ನಾನು ಬೀಜವನ್ನಿಡುವ ತಂದೆ ಎಂತಲೂ ತಿಳಿದುಕೊ.

ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ |
ನಿಬಧ್ನಂತಿ ಮಹಾಬಾಹೋ ದೇಹೇ ದೇಹೀನಮವ್ಯಯಮ್ || 5 ||
ಅರ್ಥ :- ಮಹಾಬಾಹುವೇ, ಪ್ರಕೃತಿಜನ್ಯವಾದ ಸತ್ವ, ರಜಸ್, ತಮಸ್ ಎಂಬ ಮೂರು ಗುಣಗಳು, ನಾಶವಿಲ್ಲದ ಜೀವವನ್ನು ಈ ಶರೀರದಲ್ಲಿ ಬಂಧಿಸುತ್ತದೆ.
ಸತ್ವ ಗುಣವು ಪರಿಶುದ್ಧವಾದುದೂ, ತೇಜೋಮಯವಾದುದೂ ಆಗಿದೆ. ಇದಕ್ಕೆ ವಿರುದ್ಧ ಗುಣಗಳಾದ, ಅಶುದ್ಧತೆ ಮತ್ತು ಕತ್ತಲೆ (ಅಜ್ಞಾನ)ಗಳು ತಮಸ್ಸಿನ ಲಕ್ಷಣಗಳು ಮಸಕಲಾದುದು, ಮತ್ತು ಬಣ್ಣದಿಂದ ಕೂಡಿದುದು ರಜೋಗುಣ. ಗುಣ ಎಂದರೆ ಹಗ್ಗ ಹಬ್ಬ, ಈ ಮೂರು ಹಗ್ಗಗಳಿಂದ ಜೀವನು ಶರೀರಕ್ಕೆ ಬಂಧಿಸಲ್ಪಟ್ಟಿರುವುದರಿಂದ ಗುಣ ಎಂದು ಹೆಸರು. ಇಲ್ಲಿ ಬಂಧನವೆಂದರೆ ಸ್ಥೂಲ ಬಂಧನವಲ್ಲ. ಗುಣಗಳು ಜೀವನಿಗೆ ಶರೀರದ ಮೇಲೆ ಅನುರಾಗ, ಆಸೆ, ಮೋಹಗಳನ್ನು ಹುಟ್ಟಿಸಿ, ಪುನಃ ಪುನಃ ಜನನ ಮರಣದ ಚಕ್ರದಲ್ಲಿ ಸಿಲುಕುವಂತೆ ಮಾಡುತ್ತವೆ ಪ್ರತಿಯೊಬ್ಬನಲ್ಲಿಯೂ ಈ ಮೂರೂ ಗುಣಗಳಿವೆ. ಇವುಗಳ ಸಂಯೋಗದ ತರತಮ ಭೇದಕ್ಕನುಸರಿಸಿ ‘ಜೀವ’ನ ಮನೋಭಾವವುಂಟಾಗುತ್ತದೆ. ಜೀವನು ನಾಶರಹಿತನಾಗಿದ್ದಾಗ್ಯೂ ಈ ಮೂರು ಗುಣಗಳ ಪ್ರಭಾವದಿಂದ, ಈ ಶರೀರವೇ ತಾನು ಎಂಬ ಅಭಿಮಾನವನ್ನು ಹೊಂದಿ ಶರೀರ ಮನಸ್ಸಿನಲ್ಲಾಗುವ ಬದಲಾವಣೆಗಳೂ ತನ್ನಲ್ಲಾಗುವ ಬದಲಾವಣೆಗಳು ಎಂದು ಭ್ರಮಿಸುತ್ತಾನೆ. ಕನಸು ಕಾಣುವವನು ಕನಸು ನಿಜವೆಂದು ಭ್ರಮಿಸುವಂತೆ-

ಸತ್ವಗುಣದ ಲಕ್ಷಣಗಳು
ತತ್ರ ಸತ್ತ್ವಂ ನಿರ್ಮಲತ್ಥಾತ್ಪ್ರಕಾಶಕಮನಾಮಯಮ್ |
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ || 6 ||
ಅರ್ಥ :- ಇವುಗಳ ಪೈಕಿ ಸತ್ವ ಗುಣವು ನಿರ್ಮಲವಾದುದೂ, ಪ್ರಕಾಶಮಾನ-ವಾದುದೂ, ದೋಷವಿಲ್ಲದುದೂ ಆಗಿದೆ. ಪಾಪರಹಿತನಾದವನೇ, ಇದು ಜೀವನವನ್ನು ಸುಖ ಮತ್ತು ಜ್ಞಾನದಿಂದ ಬಂಧಿಸುತ್ತದೆ.
ಸತ್ವಗುಣವು ಎಲ್ಲಾ ಗುಣಗಳ ಪೈಕಿ ಶ್ರೇಷ್ಠವಾದುದು. ಇದು ಪರಿಶುದ್ಧವಾದುದರಿಂದ ಪ್ರಕಾಶವುಳ್ಳದ್ದಾಗಿದೆ. ಸತ್ವಗುಣದಿಂದ ಕೂಡಿದ ಮನಸ್ಸು ಸ್ಥಿರವಾಗಿಯೂ, ನಿಶ್ಶಬ್ಧವಾಗಿಯೂ, ಏಕಾಗ್ರವಾಗಿಯೂ ಇದೆ, ಇದು ಆತ್ಮನನ್ನು ಪ್ರತಿಬಿಂಬಿಸುತ್ತದೆ. ಸತ್ವಗುಣವು ಪ್ರಧಾನವಾಗಿದ್ದರೆ ಜೀವನು ಸುಖಿಯಾಗುತ್ತಾನೆ. ಪರಮಾತ್ಮನ ಜ್ಞಾನವನ್ನು ಪಡೆಯುತ್ತಾನೆ. ಎಲ್ಲಾ ವಿಧದ ಜ್ಞಾನದ ಪ್ರಕಾಶಕ್ಕೂ ಸತ್ವಗುಣವೇ ಕಾರಣ. ವ್ಯಾವಹಾರಿಕವಾದ ವಿವಿಧ ಶಾಸ್ತ್ರದ ಹಾಗೂ ಕಲೆಗಳ ಜ್ಞಾನ, ವಿಜ್ಞಾನಗಳು, ಸತ್ವಗುಣದಿಂದಲೂ ಲಭಿಸುತ್ತವೆ. ಆದಾಗ್ಯೂ ಸಹ ಈ ಸತ್ವವಯ ಸತ್ವವು ಸುಖ ಮತ್ತು ಜ್ಞಾನ ಎಂಬ ಹಗ್ಗಳಿಂದ 2 ಜೀವನನ್ನೂ ಶರೀರಕ್ಕೆ ಬಂಧಿಸಿದ್ದು ಸಿಟ್ಟು ಆತನ ಸ್ವಾತಂತ್ರ್ಯವನ್ನು ಮೊಟಕು ಮಾಡುತ್ತದೆ – ಬಲವಾದ ಬಂಗಾದರ ಸರಪಳಿಯಿಂದ ಮನುಷ್ಯನನ್ನು ಕಟ್ಟು ಹಾಕುವಂತೆ ಸತ್ವಗುಣವು ಎಲ್ಲಾ ದುರ್ಗುಣಗಳನ್ನೂ ಹೋಗಲಾಡಿಸಿದಾಗ್ಯೂ ಇದೂ ಸಹ ಬಂಧನಕರವೇ ಸರಿ. ಜೀವಿಯ ಸತ್ವಗುಣದಿಂದ ಲಭಿಸಿದ ಸೌಖ್ಯವನ್ನೂ, ಜ್ಞಾನವನ್ನು ಅನುಭವಿಸಿದರೆ, ಅದೇ ಆನಂದವನ್ನು ಪುನಃ ಪುನಃ ಅನುಭವಿಸಬೇಕೆಂದು ಆಶಿಸುತ್ತಾನೆ. ಈ ಸುಖಕ್ಕಾಗಿ ತನ್ನ ಇತರೆ ಎಲ್ಲಾ ಲೌಕಿಕ ಸುಖಗಳನ್ನು ತ್ಯಾಗಮಾಡಲು ಸಹ ಸಿದ್ಧನಾಗುತ್ತಾನೆ. ಉದಾಹರಣೆ- ವಿಜ್ಞಾನಿಯು ತನ್ನ ರಸಾಯನ ಶಾಲೆಯಲ್ಲಿ ಬಾಹ್ಯ ಪ್ರಪಂಚವನ್ನು ಮರೆತು ಏಕಾಗ್ರವಾಗಿ ಕಾರ್ಯನಿರತನಾಗಿರುವುದು. ಚಿತ್ರಕಾರನು ಚಿತ್ರಲೇಖನದಲ್ಲಿ ಅನುರಕ್ತನಾಗುವುದು. ಕವಿಯು ಕವನ ರಚನೆಯಲ್ಲಿ ಮಗ್ನನಾಗಿರುವುದು. ದೇಶಪ್ರೇಮಿಯು ಶತ್ರುಗಳು ವಿಧಿಸುವ ಕಠಿಣಶಿಕ್ಷೆಯನ್ನು ಸಂತೋಷದಿಂದ ಅನುಭವಿಸುವುದು, ಇತ್ಯಾದಿ- ಯೋಗಾರೂಢನು ಮಾತ್ರ ಈ ಎಲ್ಲಾ ಬಂಧನಗಳನ್ನೂ ಕಳಚಿಕೊಳ್ಳಬಲ್ಲನು.

ರಜೋಗುಣದ ಲಕ್ಷಣ
ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಮುದ್ಭವಮ್ |
ತನ್ನಿಬಧ್ನಾನಿ ಕೌಂತೇಯ ಕರ್ಮಸಂಗೇನ ದೇಹಿನಮ್ || 7 ||
ಅರ್ಥ :- ಕೌಂತೇಯನೇ, ರಜೋಗುಣವು ಆಸೆ ಮತ್ತು ಮೋಹವನ್ನುಂಟು ಮಾಡತಕ್ಕದ್ದೆಂದು ತಿಳಿ. ಇದು ಜೀವನವನ್ನು ಯೋಗ ಮತ್ತು ಕರ್ಮಗಳಿಂದ ಬಂಧಿಸುತ್ತದೆ.
ಮನೋನಿಗ್ರಹವನ್ನು ಸಾಧಿಸ ಬೇಕೆಂಬ ಸಾಧಕನು ಈ ಮೂರು ಗುಣಗಳ ಸೂಕ್ಷ್ಮ ಒಲವುಗಳೇನು ಎಂಬುದನ್ನು ಚನ್ನಾಗಿ ಅರಿತುಕೊಂಡಿರಬೇಕು. ಮನಸ್ಸು ಪುನಃ ಪುನಃ ಈ ಗುಣಗಳ ಸೆಳೆತಕ್ಕೆ ಸಿಕ್ಕ ಸಿಕ್ಕಿ ಆ ಕಡೆಗೆ ಬಲಾತ್ಕಾರವಾಗಿ ಎಳೆಯಲ್ಪಡುವುದರಿಂದ ಅವುಗಳನ್ನು ಕೂಡಲೇ ಗುರುತಿಸಿ ಮನಸ್ಸನ್ನು –ಹಿಂದಕ್ಕೆ ಜಗ್ಗಿಕೊಳ್ಲಲು ಕೊಳ್ಳಲು ಈ ಜ್ಞಾನವು ಅವಶ್ಯಕ ಜಗ್ಗಿಕೊಳ್ಳಲು.

ರಜೊರಾಗಾತ್ಮಕಮ್ –
ರಜೋಗುಣವು ಪ್ರಧಾನವಾಗಿರುವಾಗ ಅದು ಮನಸ್ಸಿನಲ್ಲಿ ನಾನಾ ತರಹದ ಆಸೆ ಆಕಾಂಕ್ಷೆಗಳ ಹಾಗೂ ಭಾವೋದ್ರೇಕಗಳ ರೂಪದಲ್ಲಿ ಪ್ರಕಟವಾಗುತ್ತದೆ. ಇವೆಲ್ಲವುಗಳನ್ನೂ ಆಸೆ ಮತ್ತು ಮೋಹ ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಆಸೆಗೆ ತೃಷ್ಣಾ ಎಂಬ ಹೆಸರೂ ಇದೆ. ಬಾಯಾರಿಕೆಯಾದವನಿಗೆ ನೀರನ್ನು ಕುಡಿಯುವವರೆಗೂ ಯಾವ ರೀತಿ ಸಮಾಧಾನವಾಗುವುದಿಲ್ಲವೋ ಅದೇ ರೀತಿಯಲ್ಲಿ ಆಸೆಗಳಿಂದ ಕೂಡಿದ ಮನುಷ್ಯನಿಗೆ ಆಸೆಗಳನ್ನು ಪೂರೈಸಿಕೊಂಡು ಅನುಭವಿಸುವವರೆಗೂ ಸಮಾಧಾನವಿಲ್ಲ. ನಮ್ಮಲ್ಲಿ ಇಲ್ಲದ ವಸ್ತುಗಳನ್ನು ಪಡೆಯಬೇಕೆಂಬ ಮನಸ್ಸು ಹಾಗೂ ವಸ್ತು ಇವುಗಳಲ್ಲಿರುವ ನಿಕಟ ಸಂಬಂಧಕ್ಕೆ ‘ಆಸೆ’ ಎಂದು ಹೆಸರು. ಹೀಗೆ ಪಡೆದ ವಸ್ತುಗಳಲ್ಲಿರುವ ನಿಕಟವಾದ ಮಮತೆಗೆ ‘ಮೋಹ’ ಎಂದು ಹೆಸರು. ಆಸೆ ಮತ್ತು ಮೋಹಗಳಿಂದ ಪೀಡಿತನಾದ ಮನುಷ್ಯನು ಸುಮ್ಮನೆ ಕುಳಿತುಕೊಳ್ಳಲಾರನು. ಅವನು ಕೊನೆಮೊದಲಿಲ್ಲದಂತೆ, ಆಸೆಯ ವಿಷಯಗಳನ್ನು ಗಳಿಸುವುದಕ್ಕೆ ಅನುಭವಿಸುವುದಕ್ಕೆ, ಮತ್ತು ರಕ್ಷಿಸುವುದಕ್ಕೆ ಸತತವೂ ದುಡಿಯುತ್ತಾನೆ. ಉತ್ಪಾದಿಸುತ್ತಾನೆ ಮತ್ತು ಶೇಖರಿಸುತ್ತಾನೆ. ಇದ್ದುದು ಕಳೆದು ಹೋಗಬಹುದುದೆಂಬ ಭೀತಿಯಿಂದ, ಇನ್ನಷ್ಟು ಶೇಖರಿಸಬೇಕೆಂಬ ಲೋಭದಿಂದ ಅವನು ಒಂದಾದ ಮೇಲೊಂದು ಕರ್ಮವನ್ನು ಮಾಡುತ್ತಲೇ ಇರುತ್ತಾನೆ. ಹೀಗಾಗಿ ಅವನು ಸತತವೂ ಸುಖ ದುಃಖಗಳ ಜಾಲದಲ್ಲಿ ಸಿಕ್ಕಿ ಬೀಳುತ್ತಾನೆ, ಸೋಲುಗಳಿಂದ ಪರಿತಪಿಸುತ್ತಾನೆ. ವಿವಿಧ ಕರ್ಮಗಳಿಂದ ಸಂಸಾರಕ್ಕೆ ಬಂಧಿತನಾಗುತ್ತಾನೆ.
ಸತ್ವಗುಣವು, ಸಂತೋಷ, ಸುಖ, ಜ್ಞಾನ, ಮತ್ತು ಬುದ್ಧಿವಂತಿಕೆಗಳಿಂದ ಜೀವನವನ್ನು ಬಂಧಿಸುವಂತೆ, ರಜೋಗುಣವು ಕರ್ಮಗಳಿಂದ ಬಂಧಿಸುತ್ತದೆ. ರಜೋಗುಣವಿದ್ದಲ್ಲಿ ಕರ್ಮವಿದೆ. ಇದು ಪ್ರಧಾನವಾಗಿರುವಾಗ ಜೀವನು “ನಾನು ಕರ್ಮಗಳನ್ನು ಮಾಡುವವನು” ಎಂಬ ಅಹಂಕಾರದಿಂದ ಕೂಡಿರುತ್ತಾನೆ.
ತಮೊಗುಣವೂ ಸಹ ಬಂಧನಕರವು
ತಮ ತವ ತಮ ಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ |
ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ || 8 ||
ಅರ್ಥ :- ತಮಸ್ಸು ಅಜ್ಞಾನವನ್ನುಂಟು ಮಾಡುತ್ತದೆ. ಭಾರತನೇ, ಇದು ಎಚ್ಚರಗೇಡಿತನ, ಆಲಸ್ಯ, ನಿದ್ರೆ ಇವುಗಳಿಂದ ಜೀವನನ್ನು ಸಂಸಾರಕ್ಕೆ ಬಂಧಿಸುತ್ತದೆ.
ತಮೋಗುಣವು ಪ್ರಧಾನವಾಗಿರುವಾಗ ಒಳ್ಳೆಯದು, ಕೆಟ್ಟದ್ದು, ಎಂದು ತೀರ್ಮಾನಿಸುವ ವಿವೇಚನಾ ಶಕ್ತಿಯು ಮಂಕಾಗುತ್ತದೆ. ಇಲ್ಲವೇ ನಾಶವಾಗುತ್ತದೆ. ಆ ಮನುಷ್ಯನು ಭ್ರಾಂತಿಗೊಂಡವನಂತೆ ವರ್ತಿಸುತ್ತಾನೆ ಇದು ಜೀವನದ ಉದ್ದೇಶ ಹಾಗೂ ಧ್ಯೇಯದ ಬಗ್ಗೆ ನಾನಾ ತರಹದ ತಪ್ಪು ಕಲ್ಪನೆಗಳನ್ನುಂಟು ಮಾಡುತ್ತದೆ. ಇದರಿಂದ ಆವೃತವಾದ ಮನುಷ್ಯನು ಎಲ್ಲಾ ಕಾರ್ಯಗಳಲ್ಲಿಯೂ, ನಿರ್ಲಕ್ಷವಾಗಿರುತ್ತಾನೆ, ಯಾವುದರಲ್ಲಿಯೂ ದಕ್ಷತೆಯಿರುವುದಿಲ್ಲ. ಉದಾತ್ತ ಭಾವಗಳಾಗಲೀ ಧ್ಯೇಯಗಳಾಗಲೀ, ಸ್ಪಷ್ಟವಾದ ವಿಚಾರವಾಗಲೀ, ಇವರಲ್ಲಿರುವುದಿಲ್ಲ. ಈ ತರಹದ ಕೆಳಮಟ್ಟದ ಆಸೆ-ಆಲಸ್ಯಾದಿಗಳಿಂದ, ತಮೋಗುಣವು ಜೀವನನ್ನು ಸಂಸಾರಕ್ಕೆ ಬಂಧಿಸುತ್ತದೆ.

ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ |
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಯಿತ್ಯುತ ಸಂಜಯತ್ಯುತ || 9 ||

ಅರ್ಥ :- ಭಾರತನೇ, ಸತ್ವಗುಣವು ಸುಖವನ್ನೂ, ರಜೋಗುಣವು ಕರ್ಮವನ್ನೂ ಪ್ರೇರೇಪಿಸುತ್ತವೆ. ತಮೋಗುಣವು ಜ್ಞಾನವನ್ನು ಕವಿದು, ಎಚ್ಚರಗೇಡಿತನವನ್ನು ಪ್ರೇರೇಪಿಸುತ್ತದೆ.
ಹಿಂದೆ ಮೂರು ಶ್ಲೋಕಗಳಲ್ಲಿ ಹೇಳಿದುದನ್ನೇ ಪುನಃ ಸಂಕ್ಷೇಪವಾಗಿ ಸಂಶ್ಲೇಷಣೆ ತುಲನಾತ್ಮಕವಾಗಿ ವರ್ಣಿಸಲಾಗಿದೆ. ಸತ್ವಮ್ ಸುಖೇ ಸತ್ವ-ಸುಖ-ಸತ್ತ್ವಂ ಸುಖೇ ವ್ಯಕ್ತಿಯು ಮಾನಸಿಕವಾಗಿ ಮೇಲ್ತರಗತಿಯ ಆನಂದದಿಂದ ರೋಮಾಂಚಗೊಂಡಿರುವಾಗ ವಿಜ್ಞಾನಿ ಕಲಾವಂತ ಕವಿ, ಹಾಗೂ ಸ್ವತಂತ್ರವಾಗಿ ವಿಚಾರ ಮಾಡಬಲ್ಲ ಪ್ರತಿಯೊಬ್ಬರೂ ಆ ಸುಖದಿಂದ ಇಳಿದು ಆಸೆ-ಮೋಹಗಳಿಂದ ಕೂಡಿದ ರಜೋಭೂಮಿಗೆ, ಇಲ್ಲವೇ ಅಜ್ಞಾನ ಜನ್ಯವಾದ ತಮೋಭೂಮಿಗೆ ಕೆಳಕ್ಕೆಬರಲು ಒಪ್ಪುವುದಿಲ್ಲ.
ಸತ್ತ್ವಗುಣವು ಆಂತರಿಕವಾದ ಈ ಶಾಂತಿ ಹಾಗೂ ಆನಂದದಿಂದ ಜೀವನನ್ನು ಬಂಧಿಸುತ್ತದೆ. ರಜೋಗುಣವು, ವ್ಯಕ್ತಿಯನ್ನು ಆಸೆಮೋಹಗಳಿಂದ ಕೂಡಿದ ನಾನಾತರಹದ ಕರ್ಮಗಳನ್ನು ಮಾಡುವಂತೆ ಪ್ರೇರೇಪಿಸಿ ತನ್ಮೂಲಕ ಸಂಸಾರಕ್ಕೆ ಬಂಧಿಸುತ್ತದೆ. ತಮೋಗುಣವು ವ್ಯಕ್ತಿಯ ಜ್ಞಾನವನ್ನು ಮುಚ್ಚಿ, ಅಂದೆರ ಅಂದರೆ ಅವನಲ್ಲಿ ಅಜ್ಞಾನವನ್ನುಂಟು ಮಾಡುವಂತೆ ಪ್ರೇರೇಪಿಸಿ ತನ್ಮೂಲಕ ಸಂಸಾರಕ್ಕೆ ಬಂಧಿಸುತ್ತದೆ. ತಮೋಗುಣವು ವ್ಯಕ್ತಿಯ ಜ್ಞಾನವನ್ನು ಮುಚ್ಚಿ, ಅಂದರೆ ಅವನಲ್ಲಿ ಅಜ್ಞಾನವನ್ನುಂಟು ಮಾಡಿ, ಬುದ್ಧಿವಂತಿಕೆಯನ್ನು ಮಸಕುಗೊಳಿಸಿ, ವಿವೇಕವನ್ನು ಹಾಳುಮಾಡಿ, ಅವನು ತಪ್ಪಾಗಿ ತೀರ್ಮಾನ ಮಾಡುವಂತೆಯೂ, ಎಚ್ಚರಗೇಡಿತನದಿಂದ ವರ್ತಿಸುವಂತೆಯೂ, ಮೇಲ್ಮಟ್ಟದ ಉದಾರ ಭಾವಗಳನ್ನು ಒಪ್ಪದಂತೆಯು ಮಾಡಿ ಸಂಸಾರಕ್ಕೆ ಬಂಧಿಸುತ್ತದೆ.

ರಜಸ್ತಮಶ್ಶಾಭಿಭೂಯ ಸತ್ವಂ ಭವತಿ ಭಾರತ |
ರಜಃ ಸತ್ವಂ ತಮಶ್ಶೈವತಮಃಸತ್ವಂ ರಜಸ್ತಥಾ || || 10 ||
ಅರ್ಥ :- ಭಾರತನೇ, ಸತ್ವಗುಣವು ಪ್ರಧಾನವಾಗಿರುವಾಗ, ರಜೋಗುಣ ಮತ್ತು ತಮೋ ಗುಣಗಳು ಅಮುಕಲ್ಪಟ್ಟಿರುತ್ತವೆ. ರಜೋಗುಣವು ಪ್ರಧಾನವಾಗಿರುವಾಗ ಸತ್ವಗುಣ ಮತ್ತು ತಮೋಗುಣಗಳು ಅಮುಕಲ್ಪಟ್ಟಿರುತ್ತವೆ. ತಮೋಗುಣವು ಪ್ರಧಾನವಾಗಿರುವಾಗ ರಜೋಗುಣ ಮತ್ತು ಸತ್ವಗುಣಗಳು ಅಮುಕಲ್ಪಟ್ಟಿರುತ್ತವೆ.
ಈ ಮೂರು ಗುಣಗಳು ಮನಸ್ಸಿನಲ್ಲಿರುವಾಗ ಎಲ್ಲಾ ಗುಣಗಳೂ ಒಟ್ಟಿಗೇ ತಮ್ಮ ತಮ್ಮ ಪ್ರಭಾವವನ್ನು ಬೀರುತ್ತವೆಯೋ, ಇಲ್ಲವೇ ಒಂದಾಗ ಮೇಲೊಂದರಂತೆ ತಮ್ಮ ಪ್ರಭಾವವನ್ನು ಬೀರುತ್ತವೆಯೋ ಎಂಬ ಸಂಶಯವುಂಟಾಗ ಬಹುದೆಂಬುದನ್ನು ಊಹಿಸಿ, ಈ ಶ್ಲೋಕದಲ್ಲಿ ಅದನ್ನು ಪರಿಹರಿಸಲಾಗಿದೆ. ಪ್ರತಿಯೊಂದು ಗುಣಗಳೂ ಪ್ರಧಾನವಾಗಿರುವಾಗ, ಪ್ರಬಲವಾಗಿರುವಾಗ ಉಳಿದ ಎರಡು ಗುಣಗಳು ಅಮುಕಲ್ಪಟ್ಟಿರುತ್ತವೆ. ಜೀವನದ ಪ್ರತಿಯೊಂದು ಸಂದರ್ಭದಲ್ಲಿಯೂ, ಮನುಷ್ಯನಲ್ಲಿ ಯಾವುದಾದರೊಂದು ಗುಣವು ಪ್ರಧಾನವಾಗಿದ್ದು, ಅವನು ಅದಕ್ಕನುಸಾರವಾಗಿ ವರ್ತಿಸುತ್ತಾನೆ. ಉಳಿದ ಎರಡು ಗುಣಗಳು ಅವನಲ್ಲಿರುವುದಾದರೂ, ಅವು ಅಷ್ಟು ಸ್ಪಷ್ಟವಾಗಿ ವ್ಯಕ್ತವಾಗಿರುವುದಿಲ್ಲ- ಪ್ರತಿಯೊಂದು ಗುಣವು ಪ್ರಧಾನವಾಗಿರುವಾಗ ಯಾವ ಯಾವ ಲಕ್ಷಣಗಳು ಕಾಣುತ್ತವೆ ಎಂಬುದನ್ನು ಮುಂದೆ ವಿವರಿಸಲಾಗಿದೆ.
ಸತ್ತ್ವಗುಣವು ಪ್ರಧಾನವಾಗಿರುವ ಲಕ್ಷಣಗಳು
ಸರ್ವದ್ವಾರೇಷು ದೇಹೇ„ಸ್ಮಿನ್‍ಪ್ರಕಾಶ ಉಪಜಾಯತೇ |
ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವ ಮಿತ್ಯುತ || || 11 ||
ಅರ್ಥ :- ಈ ಶರೀರದ ಇಂದ್ರಿಯಗಳೆಂಬ ಎಲ್ಲಾ ದ್ವಾರಗಳ ಮೂಲಕ ಜ್ಞಾನದ ಪ್ರಕಾಶವು ಪ್ರಕಟವಾಗಿದ್ದರೆ, ಆಗ ಸತ್ವಗುಣವು ಪ್ರಧಾನವಾಗಿದೆ ಎಂದು ತಿಳಿಯಬೇಕು.
ಇಂದ್ರಿಯಗಳು ನಮಗೆ ಹೊರಗಿನ ವಸ್ತುಗಳ ಜ್ಞಾನವನ್ನುಂಟು ಮಾಡಿಕೊಡುತ್ತವೆ. ಶರೀರದೊಳಗಿನ ಪ್ರಕಾಶವು (ಚೇತನ) ಇಂದ್ರಿಯಗಳ ಮುಖಾಂತರ ಹೊರಟು ಆಯಾಯ ವಸ್ತುಗಳ ಮೇಲೆ ಬಿದ್ದರೆ ಆಗ ಅವುಗಳ ಸ್ಪಷ್ಟವಾದ ಜ್ಞಾನವುಂಟಾಗುತ್ತದೆ. ಕಣ್ಣಿನಿಂದ ಹೊರಬಿದ್ದ ತೇಜಸ್ಸು, ವಸ್ತುಗಳ ಚಿತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕಿವಿಯಿಂದ ಹೊರಬಿದ್ದ ತೇಜಸ್ಸು, ಶಬ್ದಗಳನ್ನೂ ಸ್ಪಷ್ಟವಾಗಿ ಕೇಳಿಸುತ್ತದೆ. ನಾಲಿಗೆಯಿಂದ ಹೊರಬಿದ್ದ ತೇಜಸ್ಸು ಸ್ಪಷ್ಟವಾದ ರುಚಿಗೆ ಕಾರಣ. ಇತ್ಯಾದಿ. ಹೀಗೆ ಎಲ್ಲಾ ಇಂದ್ರಿಯಗಳ ಮುಖಾಂತರ ಸ್ಪಷ್ಟವಾದ ಜ್ಞಾನವಾಗಬೇಕಾದರೆ, ಸತ್ವಗುಣವು ಪ್ರಧಾನವಾಗಿರಬೇಕು. ಮನಸ್ಸಿನಲ್ಲಿ ರಜೋಗುಣದಿಂದ ಉದ್ರೇಕಗಳುಂಟಾಗಿದ್ದರೆ, ಇಲ್ಲವೇ ತಮೋಗುಣದ ಮಾಂಧ್ಯತೆ ಹಾಗೂ ಅಜ್ಞಾನಗಳಿದ್ದರೆ ಈ ತರಹದ ಸ್ಪಷ್ಟವಾದ ಜ್ಞಾನವಾಗಲಾರದು. ಆದುದರಿಂದ ನಾವು ರಜೋಗುಣ ಹಾಗೂ ತಮೋಗುಣಗಳನ್ನು ಕಡಿಮೆ ಮಾಡಿಕೊಂಡು, ಹೃದಯದಲ್ಲಿ ಸತ್ವಗುಣವನ್ನು ಹೆಚ್ಚಿಸಿಕೊಂಡಷ್ಟು ನಮ್ಮಲ್ಲಿ ನಿರೀಕ್ಷಿಸುವ, ವಿಭಜನೆ ಮಾಡುವ, ಅರಿಯುವ, ವಿಮರ್ಶೆಮಾಡುವ, ಹಾಗೂ ಹೊರಗಿನ ಪ್ರಪಂಚವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವ ಸಾಮಥ್ರ್ಯವು ಹೆಚ್ಚಾಗುತ್ತದೆ. ಮನಸ್ಸು ಬುದ್ಧಿಗಳು ಸತ್ವಗುಣದಿಂದ ಕೂಡಿದ್ದರೆ ಎಲ್ಲಾ ವಿಷಯಗಳನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ರಜೋಗುಣದ ಉದ್ವಿಗ್ನತೆಯಿದ್ದರೆ, ಇಲ್ಲವೇ ತಮೋಗುಣದ ಅಜ್ಞಾನವಿದ್ದರೆ ಮನಸದ್ಸು ಅಶಾಂತವಾಗುತ್ತದೆ, ಇಲ್ಲವೇ ಅಸ್ಪಷ್ಟವಾಗುತ್ತದೆ. ಆದುದರಿಂದ ಸ್ಪಷ್ಟವಾದ ಜ್ಞಾನವಾಗುವುದಿಲ್ಲ.

ರಜೋಗುಣವು ಪ್ರಧಾನವಾಗಿರುವ ಲಕ್ಷಣಗಳು
ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪøಹಾ |
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ || 12 ||
ಅರ್ಥ :- ಭsರತ ಶ್ರೇಷ್ಠನೇ, ಲೋಭ, ಸಾಹಸ, ಕರ್ಮಗಳನ್ನು ಕೂಡಲೆ ಕೂಡಲೇ
ಪ್ರಾರಂಭಿಸುವಿಕೆ, ಅಶಾಂತಿ, ಅತ್ಯಾಶೆ, ಇವು ರಜೋಗುಣವು ಪ್ರಬಲವಾಗಿರುವ ಲಕ್ಷಣಗಳು.
ಲೋಭ:- ಎಂದರೆ ಬೇರೆಯವರ ವಸ್ತುಗಳನ್ನು ತನ್ನದಾಗಿ ಮಾಡಿಕೊಳ್ಳ ಬೇಕೆಂಬ ಆಸೆ. ಈ ಆಸೆಯು ಅದನ್ನು ತೃಪ್ತಿಪಡಿಸಿದಷ್ಟು ವೃದ್ಧಿಯಾಗುತ್ತಾ ಹೋಗುವುದೇ ಹೊರತು, ಕಡಿಮೆಯಾಗುವುದಿಲ್ಲ. ಆರಂಭಃ – ಕರ್ಮಾಣಾಮ್-ಎಂದರೆ ಅಹಂಕಾರದಿಂದ ಕೂಡಿ ಮಾಡಿದ ಎಲ್ಲಾ ಸಾಹಸ ಕಾರ್ಯಗಳು. ಇವುಗಳ ಹಿಂದೆ ಸಹ ಆಸೆಯು ಪ್ರಬಲವಾಗಿದೆ. ಅಶಮಃ- ಮನುಷ್ಯನಿಗೆ ಎಷ್ಟೇ ಸುಖಗಳು ದೊರೆತರೂ ಮನಸ್ಸಿಗೆ ತೃಪ್ತಿಯಾಗುವುದಿಲ್ಲ. ಹಾಗೂ ಸಮಾಧಾನವಿಲ್ಲ. ಈ ಮೂರು ಗುಣಗಳೂ ಒಂದಕ್ಕೊಂದು ತಳಿಕೆ ಹಾಕಿದಂತಿವೆ. ಆಸೆ ಉಂಟಾದರೆ ಮನುಷ್ಯನು ಆಸೆಗಳನ್ನು ಪೂರೈಸಿ-ಕೊಳ್ಳುವುದಕ್ಕಾಗಿ ನಾನಾತರಹದ ಸಾಹಸ ಕಾರ್ಯಗಳಲ್ಲಿ ಉದ್ಯುಕ್ತನಾಗುತ್ತಾನೆ. ಈ ಆಸೆಯು ಕ್ರಮೇಣ ಸ್ವಾರ್ಥವಾಗುತ್ತದೆ. ಇದರಿಂದಾಗಿ ಮನಸ್ಸು ಉದ್ವಿಗ್ನಗೊಳ್ಳುತ್ತದೆ. ಆಸೆಯು ಫಲಿಸದಿದ್ದರೆ ಇಲ್ಲವೇ ಮಧ್ಯದಲ್ಲಿ ಯಾರಾದರೂ ವಿಘ್ನವನ್ನೊಡ್ಡಿದರೆ ಆಗ ಸಿಟ್ಟು ಬರುತ್ತದೆ. ಈಗ ವ್ಯಕ್ತಿಯು ನಾನಾ ತರಹದ ಅನೀತಿಯ ಹಾಗೂ ಕ್ರೂರ ಕರ್ಮಗಳನ್ನು ಮಾಡುತ್ತಾನೆ. ಇದರಿಂದಾಗಿ ಮಾನಸಿಕ ಅಶಾಂತಿಯು ಹೆಚ್ಚುತ್ತದೆ. ಹೀಗೆ ಹೊರಗಡೆ ಎಡಬಿಡುವಿಲ್ಲದೆ ನಾನಾತರಹದ ಕರ್ಮಗಳಲ್ಲಿ ಮಗ್ನನಾಗಿರುವಂತೆ, ಒಳಗೆ ಮನಸ್ಸಿನಲ್ಲಿ ಕಾತರತೆ, ಭೀತಿ, ಅಶಾಂತಿಗಳು ತಾಂಡವವಾಡುತ್ತವೆ. ಇಂತಹ ವ್ಯಕ್ತಿಯು ಸಮಾಜದಲ್ಲಿರುವಾಗ ಅವನ ದುಃಖ ಹಾಗೂ ಅಶಾಂತಿಗಳು, ಅವನ ಕರ್ಮಗಳ ಮೂಲಕ ಸುತ್ತಲಿನ ಸಮಾಜದಲ್ಲೆಲ್ಲಾ, ಅಂಟುರೋಗದಂತೆ ಹರಡುತ್ತವೆ.
ತಮೋಗುಣವು ಪ್ರಧಾನವಾಗಿರುವ ಲಕ್ಷಣಗಳು
ಅಪ್ರಕಾಶೋ„ ಪ್ರವೃತ್ತಿಶ್ಚ ಪ್ರಮಾದೋ ಮೋಹ ಏವಚ|
ತಮಸ್ಯೇತಾನಿ ಜಾಯಂತೆ ವಿವೃದ್ಧೇ ಕುರುನಂದನ || 13 ||
ಅರ್ಥ :- ಬೆಳಕಿಲ್ಲದಿರುವಿಕೆ, ಜಡತ್ವ, ಎಚ್ಚರಗೇಡಿತನ, ಮೋಹ, ಇವು ಕುರುನಂದನನೇ, ತಮೋಗುಣವು ಪ್ರಧಾನವಾಗಿರುವ ಲಕ್ಷಣಗಳು.
ಅಪ್ರಕಾಶ:- ಬೆಳಕು ತೋಚದಿರುವಿಕೆ ಅಂದರೆ ದಡ್ಡತನ, ತಮೋಗುಣವು ಪ್ರಧಾನವಾಗಿರುವಾಗ ಅದು ಮನಸ್ಸು ಬುದ್ಧಿಗಳನ್ನು ಕವಿದಿರುವುದರಿಂದ, ಜ್ಞಾನವು ಹೊರಕ್ಕೆ ಬರುವುದಿಲ್ಲ. ದೀಪದ ಬಲ್ಬಿನ ಸುತ್ತಲೂ ಕರಿಯ ಬಣ್ಣವನ್ನು ಬಳಿದರೆ, ಒಳಗೆ ದೀಪವು ಉರಿಯುತ್ತಿದ್ದರೂ, ಬೆಳಕು ಮಾತ್ರ ಹೊರಕ್ಕೆ ಬರದಿರುವಂತೆ, ಈ ವ್ಯಕ್ತಿಯ ಮಾನಸಿಕ ಸ್ಥಿತಿಯಿರುತ್ತದೆ. ಈತನು ಬುದ್ಧಿಮಾಂದ್ಯತೆಯಿಂದಾಗಿ ಯಾವ ತೀರ್ಮಾನವನ್ನೂ ಮÁಡಲು ಅಸಮರ್ಥನಾಗಿರುತ್ತಾನೆ. ಒಳ್ಳೆಯದು- ಕೆಟ್ಟದ್ದು, ನ್ಯಾಯ-ಅನ್ಯಾಯ, ನೀತಿ-ಅನೀತಿ ಇವುಗಳನ್ನು ವಿಮರ್ಶಿಸುವುದು ಇವನಿಗೆ ಸಾಧ್ಯವಿಲ್ಲ. – ತಾನು ಮಾಡುವ ಕಾರ್ಯಗಳಲ್ಲಿ ಸಾಕಷ್ಟು ಲಕ್ಷ್ಯವನ್ನು ಕೊಡಲಾಗುವುದಿಲ್ಲ. ಅಪ್ರವೃತ್ತಿ:- ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವ ಸ್ವಭಾವ, ಸಾಹಸ ಕಾರ್ಯಗಳನ್ನು ಕೈಗೊಳ್ಳಲು ಉತ್ಸಾಹವಿಲ್ಲದಿರುವಿಕೆ, ಇವು ತಮೋಗುಣವು ಪ್ರಬಲವಾಗಿರುವಾಗ ಎದ್ದು ಕಾಣುತ್ತವೆ. ಮಹತ್ವಾಕಾಂಕ್ಷೆಯು ಮೊಟಕಾಗುತ್ತದೆ, ಉತ್ಸಾಹವು ನಿದ್ರಿಸುತ್ತದೆ. ಕಾರ್ಯಶಕ್ತಿಯು ಕುಂಠಿತವಾಗುತ್ತದೆ. ತಿನ್ನುವುದು ಹಾಗೂ ನಿದ್ರಿಸುವುದು ಇವೆರಡೇ ಬೇಕಾಗುತ್ತವೆ.
ಇದುವರೆಗೆ ಸತ್ವ, ರಜಸ್, ತಮೋಗುಣಗಳನ್ನು ವರ್ಣಿಸಲಾಯಿತು. ಈ ಗುಣಗಳು ಮನುಷ್ಯನು ಜೀವಿಸಿರುವಾಗ, ಅವನ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡಿ, ಅವನಿಂದ ಅನುಗುಣವಾದ ಶಾರೀರಿಕ, ಮಾನಸಿಕ ಕರ್ಮಗಳನ್ನು ಮಾಡಿಸಿದಂತೆ, ಅವನು ಸತ್ತಮೇಲೆ ಸಹ ಈ ಕರ್ಮಗಳ ಸೂಕ್ಷ್ಮ ಪರಿಣಾಮಗಳು ಅವನ ಅಂತರಂಗದ ಮೇಲೆ ಮುದ್ರಿತವಾಗಿ ಉಳಿಯುವಂತೆಯೂ (ವಾಸನೆ), ಮತ್ತು ಮುಂದಿನ ಜನ್ಮದಲ್ಲಿ ಅದಕ್ಕನುಗುಣವಾದ ಶರೀರವನ್ನು ಪಡೆಯುವಂತೆಯೂ ಮಾಡುತ್ತವೆ.
ಮರಣ ಕಾಲದಲ್ಲಿ ಪ್ರಧಾನವಾಗಿರುವ ಗುಣಗಳಿಗನುಸಾರವಾಗಿ ಮುಂದಿನ ಜನ್ಮವುಂಟಾಗುತ್ತದೆ.
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾಂತಿ ದೇಹಭೃತ್ |
ತದೋತ್ತಮಿವಿದಾಂ ಲೋಕಾನಮಲಾನ್ ಪ್ರತಿಪದ್ಯತೇ || 14 ||
ಅರ್ಥ :- ಮನುಷ್ಯನು ಸಾಯುವ ಕಾಲದಲ್ಲಿ ಸತ್ವಗುಣವು ಪ್ರಧಾನವಾಗಿದ್ದರೆ ಆತನು ಶುಭ್ರವಾದ, ಉತ್ತಮ ಜನರಿರುವ ಲೋಕಗಳನ್ನು ಸೇರುತ್ತಾನೆ.
ಮರಣದ ನಂತರ ಜೀವನು ಶರೀರನ್ನು ಬಿಟ್ಟು ಎಲ್ಲಿಗೆ ಹೋಗುತ್ತಾನೆ ಎಂಬುದರ ವಿವರಣೆಯನ್ನು ಶ್ರೀಕೃಷ್ಣನು ಕೊಡಲು ಪ್ರಾರಂಭಿಸಿದ್ದಾನೆ. ಮರಣ ಕಾಲದಲ್ಲಿ ಮಾನಸಿಕ ಭಾವವು ಹೇಗಿರುತ್ತದೆಯೋ, ಅಂದರೆ ಯಾವ ಗುಣವು ಪ್ರಧಾನವಾಗಿರುತ್ತದೆಯೋ, ಅದಕ್ಕನುಗುಣವಾದ ಶರೀರವನ್ನು, ಜೀವನು ಮುಂದಿನ ಜನ್ಮದಲ್ಲಿ ಪಡೆಯುತ್ತಾನೆಂದು ಹಿಂದೆ ಹೇಳಲಾಗಿದೆ. ಮರಣಕಾಲದಲ್ಲಿ ಉಂಟಾಗುವ ಭಾವ, ಇಲ್ಲವೇ ಗುಣದ ಪ್ರಧಾನತೆಯು, ಆ ವ್ಯಕ್ತಿಯ ನಿತ್ಯ ಜೀವನದಲ್ಲಿಯ ನಡತೆಯನ್ನು ಅವಂಬಿಸಿದೆ. ಜೀವನವೆಲ್ಲವನ್ನು ವೈದ್ಯವೃತ್ತಿಯಲ್ಲಿ ಕಳೆದವನು, ಅಕಸ್ಮಾತ್ತಾಗಿ ಒಂದೇ ಸಾರಿ ಇಂಜನೀಯರನಾಗಲಾರನು. ಇದೇ ರೀತಿ ಇಡೀ ಜೀವನದಲ್ಲಿ ಇಂಜನೀಯರ-ನಾಗಿದ್ದವನು ಒಂದೇ ದಿನದಲ್ಲಿ ವೈದ್ಯನಾಗಲಾರನು. ಇದರ ಭಾವವೇನೆಂದರೆ, ಇಡೀ ಜೀವನದಲ್ಲಿಯ ನಡತೆಗಳು, ಭಾವನಾ ತರಂಗಗಳು ಮಾತ್ರ ಮರಣಕಾಲದಲ್ಲಿ ಬರುತ್ತವೆ. ಮರಣ ಕಾಲದಲ್ಲಿ ಸತ್ವಗುಣವು ಪ್ರಧಾನವಾಗಿರಬೇಕಾದರೆ, ಆ ವ್ಯಕ್ತಿಯು ಜೀವನದ ಉದ್ದಕ್ಕೂ ಸತ್ವಗುಣವನ್ನೇ ಮೈಗೂಡಿಸಿಕೊಂಡಿರಬೇಕು. ಇದೇ ರೀತಿಯಲ್ಲಿ ಇತರೆ ಗುಣಗಳನ್ನೂ ತಿಳಿದುಕೊಳ್ಳಬೇಕು.
ಮನೋಭಾವಗಳೂ ಸಹ ಹೀಗೆಯೇ ಭಾವಿಕ ಜೀವನದಲ್ಲಿ ಅಖಂಡ ಸಂಬಂಧವಿದೆ- ಕಳೆದ ವರ್ಷ ನಮ್ಮ ಮನಸ್ಸಿನಲ್ಲಿದ್ದ ವಿಚಾರಗಳೇ, ಈ ವರ್ಷ ಬೆಳೆದು ಮರವಾಗಿವೆ. ಈ ತಿಂಗಳು ಅಥವಾ ಈ ವಾರದ ವಿಚಾರಗಳು, ಹಿಂದಿನ ತಿಂಗಳು ಅಥವಾ ಹಿಂದಿನ ವಾರದ ವಿಚಾರಗಳ ಮುಂದುವರಿಯುವಿಕೆಯಾಗಿವೆ. ಇವತ್ತಿನ ವಿಚಾರವು ಕ್ರಮೇಣ ಬಲಿತು ನಾಳೆಗೆ ಮುಂದುವರಿಯುತ್ತದೆ. ಇದೇ ರೀತಿಯಾಗಿ ಪ್ರತಿಯೊಂದು ಘಳಿಗೆಯೂ ಸಹ, ಹಿಂದಿನ ವಿಚಾರ ಘಳಿಗೆಯ ಮುಂದು-ವರಿಯುವಿಕೆಯಾಗಿದೆ. ಹೀಗೆ ಹಿಂದಿನ ಮತ್ತು ಇಂದಿನ ಮಾನಸಿಕ ವಿಚಾರಗಳು, ಅಖಂಡವಾಗಿರುವಂತೆ, ಇವತ್ತಿನ ವಿಚಾರಗಳು ಹಾಗೂ ಮುಂದಿನ ನಾಳೆಯ ವಿಚಾರಗಳು ಸಹ ಅಖಂಡವಾಗಿವೆ. ಮರಣವು ಸಹ ಇದೇರೀತಿ ಒಂದು ಬದಲಾವಣೆ ಎಂದೂ, ಇದೂ ಜೀವನಿಗೆ ಹೊಸ ಅನುಭವವನ್ನು ಕೊಡುತ್ತದೆಂದೂ ಹಿಂದೆ ತಿಳಿಸಲಾಗಿದೆ. ಆದುದರಿಂದ ಮರಣಕ್ಕಿಂತ ಮೊದಲು ಇದ್ದ ಭಾವವೇ ಮರಣದ ನಂತರ ಮುಂದುವರೆಯುವುದು ಹಾಗೂ ಅಭಿವೃದ್ಧಿಯಾಗುವುದು ಸ್ವಾಭಾವಿಕ. ಉತ್ತಮವಿದಾಂಲೋಕಮ್-ಲೋಕಾನ್ ಕಾನ್ ಎಂದರೆ ಬ್ರಹ್ಮಲೋಕ. ಮರಣ ಕಾಲದಲ್ಲಿ ಸತ್ವಗುಣ ಪ್ರಧಾನವಾಗಿರುವವರು ಬ್ರಹ್ಮಲೋಕಕ್ಕೆ ಹೋಗಿ ಅಲ್ಲಿ ಆನಂದವನ್ನೂ, ಶಾಂತಿಯನ್ನು ಅನುಭವಿಸುತ್ತಾರೆ.
ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ |
ತಥಾಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ || 15 ||
ಅರ್ಥ :- ಮರಣ ಕಾಲದಲ್ಲಿ ರಜೋಗುಣವು ಪ್ರಧಾನವಾಗಿದ್ದರೆ ಜೀವನು, ಮುಂದೆ ಕರ್ಮಗಳಿಗೆ ಅಂಟಿಕೊಂಡಿರಲು ಸುಲಭವಾದ ರಜೋಗುಣದ ಶರೀರವನ್ನೇ ಪಡೆಯುತ್ತಾನೆ. ತಮೋಗುಣವು ಪ್ರಧಾನವಾಗಿದ್ದರೆ, ದಡ್ಡರಾದ ತಂದೆತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತಾನೆ.
ರಜೋಗುಣವು ಪ್ರಧಾನವಾಗಿರುವಾಗ ಮನುಷ್ಯನು ಮರಣವನ್ನು ಹೊಂದಿದರೆ, ಮುಂದಿನ ಜನ್ಮದಲ್ಲಿ, ಸತತವಾಗಿ ಕರ್ಮಗಳನ್ನು ಮಾಡುವುದಕ್ಕೆ ಅನುಕೂಲ ವಾಗುವಂತಹ ಶರೀರವನ್ನು ಪಡೆಯುತ್ತಾನೆ. ಅಂತಹ ಶರೀರದಿಂದ ಮಾತ್ರ ಸೂಚಿತವಾದ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮರಣ ಕಾಲದಲ್ಲಿ ತಮೋಗುಣವು ಪ್ರಧಾನವಾಗಿದ್ದರೆ, ಮುಂದಿನ ಜನ್ಮದಲ್ಲಿ ಅಜ್ಞಾನ ಮತ್ತು ಆಲಸ್ಯಜನ್ಯವಾದ ವಾಸನೆಗಳ್ನು ಬರಿದು ಮಾಡಿಕೊಳ್ಳಲು ಅನುಕೂಲವಾಗುವಂತಹ, ದಡ್ಡತನದ ಮನಸ್ಸಿರುವ ಶರೀರವನ್ನೇ ಆರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ದಡ್ಡರಾದ ತಂದೆತಾಯಿಗಳ ಉದರದಲ್ಲಿ ಹುಟ್ಟುತ್ತಾನೆ.
ಒಮ್ಮೆ ಮನುಷ್ಯ ಜನ್ಮ ಬಂದ ಮೇಲೆ, ಜೀವನು ಪುನಃ ಹಿಂದಕ್ಕೆ ಹೋಗಿ, ಪಶುಪಕ್ಷಿಗಳ ಜನ್ಮವನ್ನು ಪಡೆಯುವುದಿಲ್ಲವೆಂದೂ, ಪುನಃ ಪುನಃ ಮನುಷ್ಯ ಜನ್ಮವನ್ನೇ ಪಡೆಯುತ್ತಾನೆಂದೂ ನಂಬಿಕೆ ಇದೆ. ಆದರೆ ಇದು ವಿಚಾರಕ್ಕೆ ಒಪ್ಪುವುದಿಲ್ಲ. ಮನುಷ್ಯನು ತನ್ನ ಜೀವಮಾನದಲ್ಲಿ ಮಾಡಿದ ಕರ್ಮಗಳು, ಹಾಗೂ ಮಾನಸಿಕ ವಿಚಾರ, ಇವುಗಳ ವಾಸನೆಗಳಿಗೆ ಅನುಸಾರವಾಗಿ ಮೇಲಿನ ಅಥವಾ ಕೆಳಗಿನ ಜನ್ಮಗಳಲ್ಲಿ ಜನಿಸಬಹುದು. ಮನುಷ್ಯನು ಇಡೀ ಜೀವನದಲ್ಲಿ ಪಶುವಿನಂತೆ ನಾಯಿನರಿಗಳಂತೆ, ವರ್ತಿಸುತ್ತಿದ್ದರೆ (ತಾಮಸಿಕ), ಅವನ ಮನಸ್ಸಿನಲ್ಲಿ ಸದಾ ಈ ಭಾವಗಳೇ ಜಾಗೃತವಾಗಿರುವುದರಿಂದ, ಆ ವಾಸನೆಗಳು ಪ್ರಬಲವಾಗಿರುತ್ತವೆ. ಅವನು ಈ ವಾಸನೆಗಳನ್ನು ಬರಿದು ಮಾಡಿಕೊಳ್ಳ ಬೇಕಾದರೆ ಮುಂದಿನ ಜನ್ಮದಲ್ಲಿ, ಪಶುಗಳ ಅಥವಾ ನಾಯಿನರಿಗಳ ಶರೀರವನ್ನು ಪಡೆಯ ಬೇಕೇ ಹೊರತು, ಬೇರೆ ಯಾವ ಶರೀರದಿಂದಲೂ ಅದು ಸಾಧ್ಯವಿಲ್ಲ. ಪ್ರಪಂಚದಲ್ಲಿ ಅತ್ಯುತ್ತಮವಾದ ಸಾಧನೆಸಲಕರಣೆಗಳು ಹಾಗೂ ವಾತಾವರಣಗಳಿದ್ದಾಗ್ಯೂ, ಎಲ್ಲಾ ಜನರೂ ತಮ್ಮ ಮೇಲ್ಮೆಯನ್ನು ಸಾಧಿಸಿಕೊಳ್ಳಲಾರದೆಂಬುದನ್ನು ನಾವು ನಿತ್ಯದ ಘಟನೆಗಳಿಂದ ಕಾಣಬಹುದು. ಉದಾಹರಣೆಗೆ- ಸಾಮಾನ್ಯ ಬುದ್ಧಿವಂತಿಕೆ ಇರುವ ವ್ಯಕ್ತಿಯು, ಶ್ರೀಮಂತನ ಮಗನಾಗಿರುವುದರಿಂದ, ಪ್ರಗತಿಯನ್ನು ಸಾಧಿಸಲು ಬೇಕಾದಷ್ಟು ಅನುಕೂಲ, ಸಂಪತ್ತುಗಳಿದ್ದಾಗ್ಯೂ, ಅವನು ತನ್ನಲ್ಲಿಯ ಆಲಸ್ಯ ಹಾಗೂ ಎಚ್ಚರ ಗೇಡಿತನಗಳಿಂದ ತನ್ನ ಜೀವನದಲ್ಲಿ ಎಲ್ಲವನ್ನೂ ನಾಶಮಾಡಿಕೊಳ್ಳುತ್ತಾನೆ. ಕುಡುಕನಿಗೆ ಹಾಲು ಸೇರುವುದಿಲ್ಲ. ಅವನಿಗೆ ಮದ್ಯವೇ ಬೇಕು. ಅವನನ್ನು ಅರಮನೆಯ ಸುಖದಲ್ಲಿಟ್ಟರೂ, ಅವನು ಮದ್ಯವನ್ನು ಹುಡುಕಿಕೊಂಡೇ ಹೋಗುತ್ತಾನೆ. ಕುಡುಕರ ಸಹವಾಸವನ್ನು ಕೂಡಲೇ ಗಳಿಸುತ್ತಾನೆ. ಇದೇ ರೀತಿ ಮದ್ಯವನ್ನು ಕಣ್ಣಿನಿಂದ ಸಹ ನೋಡದಿರುವ ಸಾತ್ವಿಕನಿಗೆ ಮದ್ಯವೆಂದರೆ ಜಿಗುಪ್ಸೆ, ಅದರ ಹತ್ತಿರವೂ ಸೇರುವುದಿಲ್ಲ.

ಇದುವರೆಗೆ ಹೇಳಿರುವುದನ್ನೇ ಸಂಗ್ರಹವಾಗಿ ತಿಳಿಸಲಾಗಿದೆ.
ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ |
ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ || 16 ||
ಅರ್ಥ :- ಒಳ್ಳೆಯ ಕರ್ಮಗಳ ಫಲವು ಸಾತ್ವಿಕ ಮತ್ತು ನಿರ್ಮವಾದುದೆಂದೂ, ರಜೋಗುಣದ ಫಲವು ದುಃಖಕರವೆಂದೂ, ತಮೋಗುಣದ ಫಲವು ಅಜ್ಞಾನಕರವೆಂದೂ ಹೇಳಲಾಗಿದೆ.
ಒಳ್ಳೆಯ ಕರ್ಮಗಳ ಫಲವು ಸಾತ್ವಿಕವಾದುದು- ಮಾನಸಿಕ ವಿಚಾರಗಳಿಂದ ಎಲ್ಲಾ ಕರ್ಮಗಳೂ ಹುಟ್ಟುತ್ತವೆ. ಆದುದರಿಂದ ವಿಚಾರಗಳು ಕರ್ಮಗಳ ಬೀಜವೆಂದೂ ಕರ್ಮಗಳು ‘ವಿಚಾರಬೀಜಗಳ’ ಫಲ ಎಂದೂ ಹೇಳಬಹುದು. ಸೌತೆಕಾಯಿಯ ಬೀಜವನ್ನು ಬಿತ್ತಿದರೆ ಸೌತೆಕಾಯಿಯೂ, ಹಾಗಲ ಬೀಜವನ್ನು ಬಿತ್ತಿದರೆ ಹಾಗಲಕಾಯಿಯೂ ಸಿಗುವಂತೆ, ಕಳೆಗಳ ಬೀಜವನ್ನು ಬಿತ್ತಿದರೆ ಕೇವಲ ಕಳೆಗಳೇ ಬೆಳೆಯುತ್ತವೆ. ಸದ್ವಿಚಾರಗಳು ಸದ್ವಿಚಾರಗಳನ್ನೇ ಹುಟ್ಟಿಸುವಂತೆ, ಕೆಟ್ಟ ವಿಚಾರಗಳನ್ನು ಚಿಂತಿಸವುದರಿಂದ ಅಂತಹ ವಿಚಾರಗಳೇ ಇನ್ನೂ ಪ್ರಬಲವಾಗುತ್ತವೆ. ಇವು ಮನಸ್ಸಿನ ಉದ್ವಿಗ್ನತೆಯನ್ನು ಇನ್ನೂ ಹೆಚ್ಚಿಸುತ್ತವೆ.
ಈಗ ಒಬ್ಬ ಮನುಷ್ಯನು ಕೆಟ್ಟ ವಿಚಾರಗಳನ್ನು ಚಿಂತಿಸುತ್ತಾ ದುರ್ಗುಣಗಳನ್ನೂ ಮೈಗೂಡಿಸಿಕೊಂಡಿದ್ದರೆ, ಮೇಲಿನ ತತ್ವದಂತೆ ಅವನು ಪ್ರಳಯ ಕಾಲದವರೆಗೂ ಹೆಚ್ಚು ಹೆಚ್ಚು ಕೆಟ್ಟವನೇ ಆಗುತ್ತಾ ಹೋಗಬೇಕಾಗುತ್ತದಲ್ಲಾ! ಅವನು ಸುಧಾರಿಸಿ ಒಳ್ಳೆಯವನಾಗುವ ಬಗೆ ಹೇಗೆ ಎಂಬ ಪ್ರಶ್ನೆಯು ಸಾಮಾನ್ಯವಾಗಿ ಉದ್ಭವಿಸುತ್ತದೆ. ಪ್ರಪಂಚದಲ್ಲಿರುವ ಎಲ್ಲಾ ಧರ್ಮಶಾಸ್ತ್ರಗಳೂ ಇದಕ್ಕೆ ಒಮ್ಮತದಿಂದ ಒಂದೇ ಉತ್ತರವನ್ನು ಹೇಳುತ್ತವೆ. ಇಂತಹ ವ್ಯಕ್ತಿಯು ತನ್ನ ದುರ್ನಡತೆಗಳಿಗಾಗಿ ಪಶ್ಚಾತ್ತಾಪಪಟ್ಟು, ದುರ್ನಡತೆಗಳನ್ನು ತ್ಯಜಿಸಿ, ಹೃದಯದಲ್ಲಿ ಸದ್ವಿಚಾರಗಳನ್ನು ತುಂಬಿಕೊಂಡು, ಸತ್ಕರ್ಮಗಳನ್ನು ಮಾಡುತ್ತಾ, ನೀತಿವಂತನಾಗಿ ಬಾಳಿ, ಧಾರ್ಮಿಕ ಆಚರಣೆಯುಳ್ಳವ-ನಾದರೆ ಕ್ರಮೇಣ ಮೇಲ್ಮಟ್ಟಕ್ಕೇರಬಲ್ಲನು.
ಮನಸ್ಸನ್ನು ತಿದ್ದುವುದು, ಹಾಗೂ ಮನೋವಿಚಾರಗಳ ಧಾಟಿಯನ್ನು ಬದಲಿಸುವುದು. ಅಷ್ಟೇನೂ ಸುಲಭವಾದ ಕಾರ್ಯವಲ್ಲ. ಆದರೆ ನಾವು ಮಾಡುವ ಕಾರ್ಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ಹಾಗೂ ಇಂದ್ರಿಯಗಳ ಚಲನವಲನಗಳನ್ನು ಪರಿವರ್ತಿಸುವುದು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಆದುದರಿಂದ ಆತ್ಮಕಲ್ಯಾಣವನ್ನು ಬಯಸುವ ಪ್ರತಿಯೊಬ್ಬನೂ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದು, ಮತ್ತು ಸನ್ಮಾರ್ಗದಲ್ಲಿ ವರ್ತಿಸುವುದು, ಇವೆರಡನ್ನೂ ಮೊಟ್ಟಮೊದಲು ಸಾಧಿಸಬೇಕು. ಈ ರೀತಿಯ ನಡವಳಿಕೆಯು ಪ್ರಾರಂಭದಲ್ಲಿ ಕೇವಲ ಇಂದ್ರಿಯಗಳಿಂದ ಮಾಡಲ್ಪಡುವ ಬೂಟಾಟಿಕೆ ಅಥವಾ ಡಾಂಭಿಕ ಸೋಗು ಎಂದು ಕಂಡು ಬಂದರೂ, ದೋಷವಿಲ್ಲ. ಏಕೆಂದರೆ ಇದೇ ಕ್ರಮೇಣ ಅಭ್ಯಾಸವಾಗಿ, ಮನಸ್ಸು ಅದರ ಜೊತೆಗೆ ಮೇಳಗೊಂಡು, ಅದೇ ಆಂತರಿಕವಾದ ಸದ್ವರ್ತನೆಯಾಗಿ ಪರಿಣಮಿಸುತ್ತದೆ. ಸಾಧನೆಯ ಪ್ರಾರಂಭದಲ್ಲ ದಲ್ಲಿ ಈ ಸ್ಥಿತಿಯು ಅನಿವಾರ್ಯ. ಅದನ್ನು ದಾಟಿ ನಂತರವೇ ಮುಂದಕ್ಕೆ ಹೋಗಬೇಕು. ಆದುದರಿಂದಲೇ ಸುಸಂಸ್ಕøತ ಜನಾಂಗದಲ್ಲಿ ಗುರುಹಿರಿಯರಲ್ಲಿ ಗೌರವ, ಶಾಸ್ತ್ರಗಳ ಮತ್ತು ಹಿರಿಯರ ಆಜ್ಞೆಗಳನ್ನು ಪಾಲಿಸುವಿಕೆ; ಸುಳ್ಳನ್ನು ಹೇಳದಿರುವುದು, ಧರ್ಮಗ್ರಂಥಗಳನ್ನು ಅಭ್ಯಾಸ ಮಾಡುವುದು, ವಿದ್ಯಾಭ್ಯಾಸ ಮಾಡುವುದು, ಸತ್ಯವನ್ನೇ ನುಡಿಯುವುದು, ಚೊಕ್ಕಟತನ, ತಂದೆ ತಾಯಿಗಳಲ್ಲಿ ಪೂಜ್ಯಭಾವನೆ, ಮೊದಲಾದ ಅನೇಕ ಸದ್ಗುಣಗಳನ್ನು ಚಿಕ್ಕಂದಿನಿಂದಲೇ ಆಚರಣೆಗೆ ತರಬೇಕೆಂದು ಬೋಧಿಸುವ ಪರಿಪಾಠವಿದೆ. ಮಕ್ಕಳಿಗೆ ಈ ನಿಯಮಗಳನ್ನು ಕಲಿಸಿ ಅವರ ನಿತ್ಯದ ಆಚರಣೆಯಲ್ಲಿ ಮೈಗೂಡುವಂತೆ ಮಾಡುವುದರಿಂದ ಅವರಿಗೆ ತಿಳಿಯದಂತೆಯೇ, ಅವರು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಕಲೆಯನ್ನು ಕಲಿಯುವುದರ ಜೊತೆಗೆ ಇತರೆ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಮಾನಸಿಕ ಏಕಾಗ್ರತೆಯಿಂದ ಲಭಿಸುವ ರೋಮಾಂಚಕರವಾಗುವಂತಹ ಆನಂದ, ಮನಸ್ಸಿನ ಉದ್ರೇಕಗಳು (ಅಂತಹ ಘಟನೆಗಳು ಒದಗಿದಾಗ) ಕಡಿಮೆಯಾಗುವುದು, ಹಾಗೂ ತೀರ ಕಡಿಮೆಯಾಗುವುದು, ಯಾವ ವಿಷಯದಲ್ಲಿ ಬೇಕಾದರೂ ಏಕಾಗ್ರತೆಯಿಂದ ಧ್ಯಾನಮಾಡುವ ಇಲ್ಲವೆ ವಿಚಾರ ಮಾಡುವ ಸಾಮಥ್ರ್ಯ ಇವು ಸತ್ಕರ್ಮಗಳ ಫಲವಾಗಿವೆ. ಇಂತಹ ಸಂದರ್ಭಗಳಲ್ಲಿ ಸತ್ವಗುಣವು ಪ್ರಧಾನವಾಗಿರುತ್ತದೆ ಎಂದು ತಿಳಿಯಬೇಕು ಹಿಂಗಲಾರದಷ್ಟು ನಾನಾತರಹದ ಆಸೆಗಳು, ಮನಸ್ಸಿನ ಉದ್ವಿಗ್ನತೆ ಅಥವಾ ಕ್ಷೋಭೆ, ಇವು ಮನಸ್ಸಿನ ದೋಷಗಳು. ದುರ್ನಡತೆಗಳಿಂದ ಇವು ಹೆಚ್ಚುತ್ತವೆ. ಸದ್ವರ್ತನೆಗಳು ತಮ್ಮ ಸ್ವಭಾವದಿಂದ ಉದ್ವಿಗ್ನ ಮನಸ್ಸನ್ನು ಶಾಂತಗೊಳಿಸುತ್ತವೆ, ಹಾಗೂ ಆಸೆಗಳನ್ನು ಅಳಿಸಲು ಸಹಾಯಮಾಡುತ್ತವೆ. ಆಸೆ ಮತ್ತು ಉದ್ವಿಗ್ನತೆಗಳು ರಜೋಗುಣದ ಲಕ್ಷಣಗಳು. ಇವು ದುಃಖಕಾರಕವಾಗಿವೆ. ತಮಸ್ಸು ಪ್ರಬಲವಾಗಿರುವಾಗ ಆಲಸ್ಯ, ಎಚ್ಚರಗೇಡಿತನ, ನಿರ್ಲಕ್ಷ್ಯೆ, ಭ್ರಾಂತಿ, ಇವು ಇರುತ್ತವೆ. ಇದರಿಂದ ಮನಸ್ಸಿನ ಸಾರಾಸಾರ ವಿಚಾರ ಶಕ್ತಿಯು ಕುಂಠಿತವಾಗುತ್ತವೆ.

ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ |
ಪ್ರಮಾದಮೋಹೌ ತಮಸೋ ಭವತೋ„ಜ್ಞಾನಮೇವ ಚ || 17 ||
ಅರ್ಥ :- ಸತ್ವಗುಣದಿಂದ ಜ್ಞಾನವೂ, ರಜೋಗುಣದಿಂದ ಲೋಭವೂ, ತಮೋಗುಣದಿಂದ ಎಚ್ಚರಗೇಡಿತನ, ಭ್ರಾಂತಿ, ಮತ್ತು ಅಜ್ಞಾನಗಳೂ ಉಂಟಾಗುತ್ತವೆ.
ಗುಣಗಳು ಮನಸ್ಸು ಹಾಗೂ ಬುದ್ಧಿಯ ರಂಗದಲ್ಲಿ ನಾಟಡ್ಯವಾಡಲು ನಾಟ್ಯ ಪ್ರಾರಂಭಿಸಿದರೆ ಯಾವ ಯಾವ ದೃಶ್ಯಗಳನ್ನು ತೋರಿಸುತ್ತವೆ ಎಂಬುದನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಸತ್ವಗುಣವು ನಾಟ್ಯವಾಡುವಾಗ ಮನಸ್ಸು ಬುದ್ಧಿಗಳು ಶುಭ್ರವಾಗಿ, ಜಾಗೃತವಾಗಿರುವುದರಿಂದ, ಮತ್ತು ಉದ್ವೇಗಗಳು ಕಡಿಮೆಯಾಗಿರುವುದರಿಂದ ಇಂದ್ರಿಯಗಳ ಮುಖಾಂತರ ಹೊರಚೆಲ್ಲುವ ಬೆಳಕನ್ನು (ತೇಜಸ್ಸನ್ನು) ಬೇಕಾದ ಕಡೆಗೆ ಸುಲಭವಾಗಿ ಕೇಂದ್ರೀಕರಿಸಿ ಆಯಾಯಾ ದೃಶ್ಯಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಅಧ್ಯಾತ್ಮ ದೃಷ್ಟಿಯಿಂದ ಈ ಬೆಳಕನ್ನು ಆತ್ಮನ ಕಡೆಗೆ ಕೇಂದ್ರೀಕರಿಸಿದರೆ, ಆತ್ಮಜ್ಞಾನವಾಗುತ್ತದೆ. ವ್ಯಾವಹಾರಿಕ ದೃಷ್ಟಿಯಿಂದ ವಿವಿಧ ಸಂಶೋಧನೆಗಳ ಕಡೆಗೆ ಕೇಂದ್ರೀಕರಿಸಿದರೆ ಆಯಾಯಾ ಶಾಸ್ತ್ರಗಳ ಮೂಲ ಸಿದ್ಧಾಂತಗಳನ್ನು ಹೆಚ್ಚು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಧಾರ್ಮಿಕ ಗುರಿಯನ್ನು ಸಾಧಿಸಲು ಸತ್ವಗುಣವು ಬೇಕಾಗುವಂತೆ, ಎಲ್ಲಾ ತರಹದ ಭೌತಿಕ ಸಂಶೋಧನೆಗಳನ್ನು ಸಾಧಿಸಲು ಸಹ ಸತ್ವಗುಣವನ್ನು ಜಾಗೃತಗೊಳಿಸಿ ಕೊಳ್ಳುವುದು ಅವಶ್ಯಕ.
ರಜೋಗುಣವು ಮನೋರಂಗದಲ್ಲಿ ನಾಟ್ಯವಾಡುತ್ತಿದ್ದರೆ, ಆಸೆಯು ಉದ್ಭವಿಸುತ್ತದೆ. ಒಂದು ಆಸೆಯನ್ನು ಪೂರೈಸುವುದರೊಳಗಾಗಿ ಅದರ ಹಿಂದೆಯೇ ನೂರಾರು ಆಸೆಗಳ ತಳಿಕೆಗಳು ಬರುತ್ತದೆ. ಆಸೆಗಳು ಪೂರೈಸಲ್ಪಟ್ಟಂತೆ ಅವುಗಳಲ್ಲಿ ಪ್ರೇಮವು ಹುಟ್ಟಿ ಅವುಗಳನ್ನು ರಕ್ಷಿಸಿಕೊಳ್ಳ ಬೇಕೆಂಬ ಲೋಭವುಂಟಾಗುತ್ತದೆ. ಇದೇ ಚಕ್ರವು ಪುನಃ ಪುನಃ ತಿರುಗುತ್ತಿರುತ್ತದೆ.
ತಮೋಗುಣವು ಮನೋರಂಗದಲ್ಲಿ ನಾಟ್ಯವಾಡುತ್ತಿರುವಾಗ ಎಚ್ಚರಗೇಡಿತನ ಮತ್ತು ಭ್ರಮೆಗಳುಂಟಾಗುತ್ತವೆ. ಒಳ್ಳೆಯದು ಮತ್ತು ಕೆಟ್ಟದ್ದು ಎಂದು ವಿಮರ್ಶೆ ಮಾಡುವ, ಮತ್ತು ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ತ್ಯಜಿಸುವ ವಿಚಾರ ಶಕ್ತಿ ಅಥವಾ ವಿವೇಕವು ಮನುಷ್ಯನಿಗೆ ಮಾತ್ರ ಇದೆ. ಪ್ರಾಣಿಗಳಿಗಿಲ್ಲ ತಮೋಗುಣವು ಪ್ರಬಲವಾಗಿರುವಾಗ ಈ ಶಕ್ತಿಯು ಕುಂಠಿತವಾಗಿ ಆತನು ಪಶುವಿನಂತೆ ವರ್ತಿಸಲು ಪ್ರಾರಂಭಿಸುತ್ತಾನೆ.
ನಮಗೆ ಯಾವುದಾದರೊಂದು ವಿಷಯವು ತಿಳಿಯದಿರುವಾಗ ನಾವು ಅದೇ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ಅದರ ಬಗ್ಗೆ ಯಾವುದಾದರೊಂದು ತರಹದ ಕಲ್ಪನೆಯು (ತಪ್ಪಾದ ತಿಳುವಳಿಕೆಯು) ನಮ್ಮಲ್ಲುಂಟಾಗುತ್ತದೆ. ಈ ತಪ್ಪು ತಿಳುವಳಿಕೆಯಿಂದ ನಾವು ನಿಜವಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತೇವೆ. ಇಡೀ ಸಮುದ್ರದಲ್ಲಿ ಕುಡಿಯುವ ಶುದ್ಧ ನೀರು ಒಂದು ಲೋಟದಷ್ಟೂ ಸಿಗಲಾರದು. ಇದೇ ರೀತಿಯಲ್ಲಿ ದುಃಖದಿಂದ ಕೂಡಿದ ಈ ಬಾಹ್ಯ ಪ್ರಪಂಚದಲ್ಲಿ ಶಾಶ್ವತವಾದ ಸುಖವು ಸಿಗಲಾರದು. ಆದಾಗ್ಯೂ ತಮೋಗುಣದ ಪ್ರಭಾವದಿಂದ ಈ ರೀತಿಯ ತಪ್ಪು ತಿಳಿವಳಿಕೆಗೆ ಒಳಗಾದ ಮನುಷ್ಯನು, ಪ್ರಪಂಚವನ್ನು ತಪ್ಪಾಗಿ ಕಾಣುತ್ತಾ, ತಾನು ದುಃಖಪಟ್ಟ ಹಾಗೆಲ್ಲಾ ಪ್ರಪಂಚವನ್ನು ಶಪಿಸುತ್ತಾ ಇನ್ನೂ ದುಃಖಕ್ಕೊಳಗಾಗುತ್ತಾನೆ.

ಊಧ್ರ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ |
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ || 18 ||
ಅರ್ಥ :- ಸಾತ್ವಿಕ ಗುಣವಿರುವವರು ಮೇಲಿನ ಲೋಕಕ್ಕೆ ಹೋಗುತ್ತಾರೆ. ರಜೋಗುಣವಿರುವವರು ಮಧ್ಯದಲ್ಲಿಯೇ ನಿಲ್ಲುತ್ತಾರೆ. ಕೆಳದರ್ಜೆಯ ತಮೋ-ಗುಣವಿರುವವರು ಇನ್ನೂ ಕೆಳಗಿನ ಲೋಕಕ್ಕೆ ಹೋಗುತ್ತಾರೆ.
ಜೀವಿಗಳ ಉತ್ಕ್ರಾಂತಿ ಕ್ರಮವನ್ನು ಇಲ್ಲಿ ವರ್ಣಿಸಲಾಗಿದೆ. ಖನಿಜ, ಸಸ್ಯ, ಮತ್ತು ಪ್ರಾಣಿಗಳು ತೀರ ಕೆಳವರ್ಗದವರೆಂದೂ, ಬುದ್ಧಿವಂತಿಕೆ ಇರುವ ಮನುಷ್ಯನು ಮಧ್ಯಮ ವರ್ಗದವನೆಂದೂ, ಸ್ವರ್ಗದಲ್ಲಿರುವ ದೇವತೆಗಳು ಮೇಲಿನ ವರ್ಗದವರೆಂದೂ ತಿಳಿಯಲಾಗಿದೆ. ಇಲ್ಲಿ ಉತ್ಕ್ರಾಂತಿ ಎಂದರೆ ಹೆಚ್ಚು ಹೆಚ್ಚು ಅನುಭವ ಹಾಗೂ ಜ್ಞಾನವನ್ನು ಪಡೆಯುವಿಕೆ, ಮನಸ್ಸಿನ ಉದ್ವಿಗ್ನತೆಯು ಕಡಿಮೆಯಾಗುತ್ತಾ ಶಾಂತಸ್ಥಿತಿಯನ್ನು ಸಾಧಿಸುವಿಕೆ ಮತ್ತು ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ಗಳಿಸುವಿಕೆ ಎಂದು ತಿಳಿಯಬೇಕು. ಒಟ್ಟಿನಲ್ಲಿ ವ್ಯಕ್ತಿಯು ಅನುಭವಿಸುವ ಮಾನಸಿಕ ಶಾಂತಿ ಹಾಗೂ ಆನಂದವನ್ನು ಈ ಉತ್ಕ್ರಾಂತಿಯ ವರ್ಣನೆಯಲ್ಲಿ, ಅಳತೆಗೋಲನ್ನಾಗಿ ಹಿಡಿಯಲಾಗಿದೆ.
ಖನಿಜಗಳಲ್ಲಿ ಮಾನಸಿಕ ಜಾಗೃತಿ ಏನೂ ಇಲ್ಲದಿರುವುದರಿಂದಲೂ, ಅವು ಯಾವ ಪರಿವರ್ತನೆಯನ್ನೂ ಹೊಂದದಿರುವುದರಿಂದಲೂ, ಅವು ಅತಿ ಕೆಳಮಟ್ಟದ್ದೆಂದು ತಿಳಿಯಬೇಕು. ಇದರ ನಂತರ ಸಸ್ಯವರ್ಗ, ಇವುಗಳಲ್ಲಿ ಸ್ವಲ್ಪ ತಿಳಿವಳಿಕೆ ಪ್ರಾರಂಭವಾಗುತ್ತದೆ. ಇದರ ಮುಂದೆ ಪ್ರಾಣಿವರ್ಗ, ಇವುಗಳಲ್ಲಿ ತಿಳಿವಳಿಕೆಯೂ ಇನ್ನೂ ಹೆಚ್ಚಾಗಿದೆ. ಪ್ರಾಣಿಗಳಲ್ಲಿ ಮನುಷ್ಯನು ಜ್ಞಾನ ಹಾಗೂ ಬುದ್ಧಿ ಶಕ್ತಿಗಳನ್ನು ಹೆಚ್ಚಾಗಿ ಬೆಳೆಸಿಕೊಂಡಿದ್ದಾನೆ. ಆದಾಗ್ಯೂ ಮನುಷ್ಯನ ಬುದ್ಧಿ ಶಕ್ತಿಗೂ ಮಿತಿ ಇದೆ. ದೇವತೆಗಳು ಮನುಷ್ಯರಿಗಿಂತ ಮೇಲ್ಮಟ್ಟದವರು.
ಪ್ರತಿಯೊಂದು ಎರಡು ಮಹಡಿ ಇರುವ ಮನೆಗಳಲ್ಲಿ ಏಣಿಗಳಿವೆ. ಎರಡು ಏಣಿಗಳ ಮಧ್ಯದಲ್ಲಿ ವಿಶ್ರಮಿಸಿಕೊಳ್ಳುವ ಸಮಮಟ್ಟದ ಜಾಗವಿದೆ. ಎರಡನೆಯ ಏಣಿಯನ್ನು ಹತ್ತಿ ಹೋದರೆ ಮಾತ್ರ ಮೇಲ್ಮಟ್ಟಕ್ಕೆ ಹೋಗಬಹುದು. ಕೆಳಗಿನ ಏಣಿಯ ಮೊದಲನೆಯ ಮೆಟ್ಟಿಲಿನ ಮೇಲೆ ನಿಂತಿರುವವನ್ನು ಕೆಳಗಿರುವವನೆಂದೂ ಮೊದಲನೆಯ ಮಹಡಿಯ ಮೇಲೆ ಸಮತಳ ಜಾಗದಲ್ಲಿ ನಿಂತಿರುವನನ್ನು ಮಧ್ಯದಲ್ಲಿರುವನೆಂದೂ ಎರಡನೆಯ ಮಹಡಿಯ ಮೇಲೆ ಏರಿ ನಿಂತಿರುವವನನ್ನು ಮೇಲಿರುವವನೆಂದೂ ಕರೆಯುತ್ತೇವೆ. ಸಸ್ಯ ಮತ್ತು ಪಶುಗಳು ಕೆಳಮಟ್ಟದವುಗಳು. ಮನುಷ್ಯರು ಮಧ್ಯದಲ್ಲಿರುವವನು. ವವರು ದೇವತೆಗಳು ಮೇಲಿರುವವರು. ಮಧ್ಯದಲ್ಲಿರುವ ಮನುಷ್ಯರು ಸತ್ವಗುಣಗಳನ್ನು ಜಾಗ್ರತಗೊಳಿಸಿಕೊಂಡರೆ ಮೇಲಕ್ಕೇರುತ್ತಾರೆ. ರಜೋಗುಣವನ್ನು ಜಾಗೃತಗೊಳಿಸಿಕೊಂಡರೆ ಇದ್ದಲ್ಲಿಯೇ ಇರುತ್ತಾರೆ. ತಮೋಗುಣದ ಸೆಳೆತಕ್ಕೊಳಗಾದರೆ ಇನ್ನೂ ಕೆಳಗಿಳಿಯುತ್ತಾರೆ. ಅಂದರೆ ಕೆಳವರ್ಗದ ಪ್ರಾಣಿಗಳು ಇಲ್ಲವೇ ಸತ್ಯಗಳ ವರ್ಗಕ್ಕಿಳಿಯುತ್ತಾನೆ.
ಈ ಮೂರೂ ಗುಣಗಳು, ಜೀವನನ್ನು ಶರೀರಕ್ಕೆ ಬಂಧಿಸುವ ವಿಧಾನವನ್ನೂ, ಉತ್ಕ್ರಾಂತಿಯಲ್ಲಿ ಕ್ರಮೇಣ ಹೇಗೆ ಮೇಲಕ್ಕೇರಬಹುದೆಂಬುದನ್ನು ತಿಳಿಸುತ್ತವೆ. ಆದಾಗ್ಯೂ ಈ ಎಲ್ಲಾ ಗುಣಗಳೂ (ಸತ್ವಗುಣ ಸಹ) ಜೀವನನ್ನು ಈ ಶರೀರದಲ್ಲಿ ಬಂಧಿಸುವುದರಿಂದ, ಇದರಿಂದ ಬಿಡುಗಡೆ ಹೊಂದುವ ಬಗೆ ಹೇಗೆ (ಇದಕ್ಕೆ ಮೋಕ್ಷ ಎಂದು ಹೆಸರು) ಎಂಬುದನ್ನು ವಿವರಿಸಲಾಗುತ್ತದೆ.

ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ |
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋ„ಧಿಗಚ್ಛತಿ || || 19 ||
ಅರ್ಥ :- ಗುಣಗಳ ಹೊರತು ಯಾವ ಕರ್ಮಗಳೂ ಆಗುವುದಿಲ್ಲವೆಂದು ಯಾವನು ತಿಳಿಯುತ್ತಾನೋ, ಮತ್ತು ಯಾವನು ಎಲ್ಲಾ ಗುಣಗಳ ಆಚೆಗಿರುವ ನನ್ನನ್ನು ತಿಳಿಯುತ್ತಾನೋ, ಅವನು ನನ್ನನ್ನೇ ಸೇರುತ್ತಾನೆ.
ಈ ಗುಣಗಳ ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಚಲಿಸುತ್ತಿರುವ ರೈಲಿನಲ್ಲಿ ನಿಂತುಕೊಂಡಿರುವವನು, ಒಂದೇ ಸ್ಥಳದಲ್ಲಿ ನಿಂತುಕೊಂಡಿದ್ದಾಗ್ಯೂ, ರೈಲು ಚಲಿಸಿದಂತೆ ಅವನೂ ಚಲಿಸುತ್ತಾನೆ. ಅವನು ರೈಲಿನಿಂದ ಇಳಿದು ನಿಲ್ದಾಣದಲ್ಲಿ ನಿಂತುಕೊಂಡ ಮೇಲೆ, ರೈಲು ಚಲಿಸಿದಾಗ್ಯೂ ಅವನು ಚಲಿಸುವುದಿಲ್ಲ. ಇದೇ ರೀತಿಯಾಗಿ ಜೀವನು ತಾನೇ ಮನಸ್ಸು ಬುದ್ಧಿಗಳೆಂದು ತಿಳಿದು, ಅವುಗಳ ಮೇಲೆ ಕುಳಿತು ಸವಾರಿಮಾಡುತ್ತಿರುವಾಗ, ಮನಸ್ಸು ಬೇರೆಬೇರೆ ವಿಚಾರಗಳಲ್ಲಿ ಓಡಿದಂತೆಲ್ಲಾ ಅವನೂ ಆ ವಿಚಾರಗಳಲ್ಲಿ ಚಲಿಸುತ್ತಾನೆ. (ಪ್ರಧಾನವಾಗಿರುವ ಗುಣಗಳು ಎಳೆದುಕೊಂಡು ಹೋದ ಕಡೆಗೆ ಮನಸ್ಸು ಹೋಗುತ್ತದೆ). ಜೀವನು ಇವುಗಳಿಂದ ಬಿಡುಗಡೆಯನ್ನು ಹೊಂದುವುದೆಂದರೆ, ಚಲಿಸುವ ರೈಲಿನಿಂದ ಕೆಳಗಿಳಿದಂತೆ, ತಾನು ಮನಸ್ಸು, ಬುದ್ಧಿಗಳೆಂಬ ಅಜ್ಞಾನವನ್ನು ಕಳಚಿಕೊಂಡು ಅವುಗಳಾಚೆಗೆ ನಿಲ್ಲಬೇಕು. ಹೀಗೆ ಮನಸ್ಸಿನ ವಿಚಾರಗಳಲ್ಲಿ ಮಗ್ನನಾಗದೆ ಹಿಂದಕ್ಕೆ ಸರಿಯುವ ಕಾರ್ಯವು ಧ್ಯಾನದಿಂದ ಸಾಧಿಸುತ್ತದೆ. ಗುಣಗಳು ಯಾವಾಗಲೂ ಮನಸ್ಸಿನ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತವೆ. ಮನಸ್ಸು ಹೋದೆಡೆಯಲ್ಲೆಲ್ಲಾ ಜೊತೆಗೆ ಜೀವನು, ಹೋಗುತ್ತಾನೆ. ಆದುದರಿಂದ ಗುಣಗಳೂ ಜೀವನ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ ಎನ್ನಲಾಗಿದೆ. ಈ ಗುಣಗಳ ಪ್ರಭಾವಕ್ಕೆ, ಸೆಳೆತಕ್ಕೆ, ಸಿಕ್ಕದೆ, ಜೀವನು ಗುಣಗಳಾಚೆಗಿರುವ, ಪರಮಾತ್ಮನನ್ನು ತಿಳಿದರೆ, ಅವನೇ ಪರಮಾತ್ಮನಾಗುತ್ತಾನೆ. ಕನಸು ಕಂಡವನು ಎಚ್ಚರಾದನಂತರ ಕನಸುಕಂಡವನನ್ನು ಸಂಬೋಧಿಸಿ ಹೇಳಿದಂತಿದೆ ಈ ಮಾತು. ಕನಸು ಕಂಡವನು, ಮತ್ತು ಎಚ್ಚರಾದವನು ಇಬ್ಬರೂ ಒಬ್ಬನೇ. ಅದೇ ರೀತಿ ಗುಣಗಳಿಂದ ಬಂಧಿತನಾದ ಜೀವನು ಕನಸು ಕಾಣುವವನಂತೆ ಭ್ರಮಿಸುತ್ತಾನೆ. ಅವನು ಜಾಗೃತನಾಗಿ (ಎಚ್ಚರಾಗಿ) ಅಂದರೆ ಗುಣಗಳ ಸೆಳೆತಕ್ಕೆ ಸಿಕ್ಕರೆ ಸಿಕ್ಕದೇ ಬದಿಗೆ ಸರಿದು ನಿಂತರೆ, ಗುಣಗಳಿಂದ ಬಂಧಿತನಾಗದ ಪರಮಾತ್ಮನು ತಾನೇ ಆಗಿದ್ದೇನೆ ಎಂಬ ಜ್ಞಾನವನ್ನೂ, ಅನುಭವವನ್ನೂ ಪಡೆಯುತ್ತಾನೆ.

ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್ |
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋ„ಮೃತಮಶ್ನುತೇ || 20 ||
ಅರ್ಥ :- ಜೀವನು ಈ ಶರೀರದ ಹುಟ್ಟುವಿಕೆಗೆ ಕಾರಣನಾದ ಈ ಮೂರು ಗುಣಗಳನ್ನೂ, ಜನನ, ಮರಣ, ಮುಪ್ಪು ಮತ್ತು ದುಃಖಗಳನ್ನೂ ದಾಟಿ ಅಮೃತತ್ವವನ್ನು ಹೊಂದುತ್ತಾನೆ.
ಅಡಿಗೆಯ ಮನೆಯ ಒಲೆಯ ಹತ್ತಿರ ಕುಳಿತಿರುವಾಗ ಬೆಂಕಿಯ ಝಳ ಹಾಗೂ ಹೊಗೆಯನ್ನು ಅನುಭವಿಸಲೇಬೇಕು. ಅಡಿಗೆಯ ಮನೆಯಿಂದ ಹೊರಗೆ ಹೋದರೆ ಇವೆರಡೂ ಇಲ್ಲ. ಏಕೆಂದರೆ ಹೊಗೆ ಮತ್ತು ಝಳ, ಇವು ಬೆಂಕಿಯಿಂದ ಬಂದಿವೆಯೋ ಹೊರತು ವಾತಾವರಣದಿಂದಲ್ಲ. ಬೇಸಿಗೆಯ ಕಾಲದಲ್ಲಿ ಬಿಸಿಲಿರುವಾಗ ಮನೆಯ ಅಂಗಳದಲ್ಲಿ ಕುಳಿತರೆ ಬಿಸಲಿನ ಕಾವು ಹಾಗೂ ಬೆಳಕಿನ ಪ್ರಭೆ ಇವೆರಡನ್ನೂ ಎದುರಿಸಲೇ ಬೇಕು. ಅವುಗಳನ್ನೂ ತಪ್ಪಿಸಿಕೊಳ್ಳಬೇಕಾದರೆ ಮನೆಯೊಳಗೆ ಹೋಗಬೇಕು. ಇದೇ ರೀತಿಯಾಗಿ ಗುಣಗಳಿಂದ ಬಂಧಿತನಾಗಿ ಮನೋಭೂಮಿಯಲ್ಲಿ ವಿಹರಿಸುತ್ತಿರುವವರೆಗೆ ಜೀವನದ ದುಃಖಗಳನ್ನು ಅನುಭವಿಸಲೇಬೇಕು. ಗುಣಗಳ ಬಂಧನವನ್ನು ಕಳಚಿಕೊಂಡರೆ ಮುಂದೆ ಆ ದುಃಖಗಳಿಲ್ಲ. ಆತ್ಮನಿಗೆ ನಾಶ, ಉದ್ವಿಗ್ನತೆ, ದುಃಖ ಬದಲಾವಣೆ ಇವಾವುವೂ ಇಲ್ಲ.
ಚಿತ್ರಕಾರನು ತನ್ನ ಚಿತ್ರಕಲೆಯನ್ನು ಚಿತ್ರಿಸಿ ತೋರಿಸಬೇಕಾದರೆ ಅವನಿಗೆ ಕುಂಚ, ಬಣ್ಣ, ಬಟ್ಟೆ ಹಾಗೂ ಇತರೆ ಸಾಧನಗಳು ಬೇಕು. ಸಂಗೀತಗಾರನು ತನ್ನ ಪ್ರಾವೀಣ್ಯತೆಯನ್ನು ತೋರಿಸಬೇಕಾದರೆ ಹಿಮ್ಮೇಳದ ವಾದ್ಯಗಳು ಬೇಕು. ಕುಂಚ, ಬಣ್ಣಗಳು ಸಂಗೀತಗಾರನಿಗೆ ಉಪಯೋಗವಿಲ್ಲ, ಅಂತೆಯೇ ವಾದ್ಯಗಳು ಚಿತ್ರಗಾರನಿಗೆ ಉಪಯೋಗವಿಲ್ಲ. ಏಕೆಂದರೆ ಅವನು ಅವುಗಳ ಮುಖಾಂತರ ತಮ್ಮ ಕಲೆಯನ್ನು ಪ್ರಕಟಿಸಲಾರು. ಇದರಂತೆಯೇ ನಮ್ಮಲ್ಲಿ ದಡ್ಡತನ, ದುಃಖ, ಎಚ್ಚರಗೇಡಿತನ, ಹಾಗೂ ಮೃಗೀಯ ಸ್ವಭಾವಗಳಿದ್ದರೆ ಆಗ ಮನುಷ್ಯ ಶರೀರವು ದುಃಖಕರವಾಗುತ್ತವೆ. ಮೃಗೀಯ ಗುಣಗಳನ್ನು ವ್ಯಕ್ತಪಡಿಸಲು ಇಲ್ಲವೇ ಭೋಗಿಸಲು ಮೃಗಗಳನ್ನೇ ಸೇರಬೇಕು. ಜೀವನು ಮರಣದ ನಂತರ, ಹಿಂದಿನ ಜನ್ಮಗಳಲ್ಲಿ ಪ್ರಬಲವಾದ ಗುಣಗಳಿಗೆ ಅನುಸಾರವಾದ ವಾಸನೆಗಳನ್ನು ಪಡೆದಿರುತ್ತಾನೆ. ಅವುಗಳನ್ನು ಬರಿದು ಮಾಡಿಕೊಂಡು ಭೋಗಿಸಲು ಅನುಕೂಲವಾದಂತಹ ಶರೀರಗಳನ್ನೇ ಆರಿಸಿಕೊಳ್ಳುತ್ತಾನೆ. ಈ ಗುಣಗಳನ್ನು ಮೀರಿದವನು ಪುನಃ ಶರೀರವನ್ನು ಪಡೆಯಬೇಕಾಗಿಲ್ಲ. ಏಕೆಂದರೆ ಅವನು ಅನುಭವಿಸಬೇಕಾದ ಯಾವ ವಾಸನೆಗಳೂ ಅವನಲ್ಲಿಲ್ಲ. ಈಗ ಅವನು ಜನನ, ಮರಣ, ದುಃಖಗಳನ್ನು ದಾಟಿ ತಾನೇ ಪರಮಾತ್ಮನಾಗುತ್ತಾನೆ. ಗಾಢನಿದ್ರೆ ಬಂದಿರುವಾಗ, ಅದರ ಮೊದಲು ಅನುಭವಿಸುತ್ತಿದ್ದ ರೋಗಗಳ ವೇದನೆ, ಹಸಿವು, ದುಃಖ, ಇವಾವುದೂ ತಿಳಿಯುವುದಿಲ್ಲ. ಆದರೆ ಎಚ್ಚರಾದ ಕೂಡಲೇ ಅವೆಲ್ಲವೂ ಪುನಃ ತೋರುತ್ತವೆ. ಆದರೆ ಆತ್ಮಜ್ಞಾನವಾದ ಮೇಲೆ ಈ ಎಲ್ಲಾ ದುಃಖಗಳೇ ಸಂಪೂರ್ಣ ನಾಶವಾಗುತ್ತವೆಯಷ್ಟೇ ಅಲ್ಲ ಅವು ಪುನಃ ಉದ್ಭವಿಸುವುದಿಲ್ಲ.

ಅರ್ಜುನ ಉವಾಚ
ಕೈರ್ಲಿಂಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ |
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ || 21 ||
ಅರ್ಜುನ ಹೇಳುತ್ತಾನೆ.
ಅರ್ಥ :- ಪ್ರಭುವೇ, ಮೂರು ಗುಣಗಳನ್ನೂ ದಾಟಿದವನ ಲಕ್ಷಣಗಳೇನು, ಅವನ ನಡತೆ ಹೇಗಿರುತ್ತದೆ. ಮತ್ತು ಅವನು ಗುಣಗಳನ್ನು ಹೇಗೆ ದಾಟುತ್ತಾನೆ.

ಶ್ರೀ ಭಗವಾನುವಾಚ.
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ |
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ || 22 ||
ಶ್ರೀ ಭಗವಾನುವಾಚ ಶ್ರೀ ಭಗವಂತನು
ಅರ್ಥ :- ಬೆಳಕು(ಜ್ಞಾನ), ಕಾರ್ಯಮಾಡುವ ಉತ್ಸಾಹ ಮತ್ತು ಮೋಹ ಇವುಗಳಿದ್ದರೆ ಪಾಂಡವನೇ,
ಅವನು, ಅವುಗಳನ್ನು ದ್ವೇಷಿಸುವುದಿಲ್ಲ. ಇಲ್ಲದಿದ್ದರೆ ಅವುಗಳನ್ನು ಆಶಿಸುವುದೂ ಇಲ್ಲ.
ಶ್ರೀಕೃಷ್ಣನು ಅರ್ಜುನನ ಮೊದಲನೆಯ ಪ್ರಶ್ನೆಯನ್ನು (ಗುಣಾತೀತನ ಲಕ್ಷಣಗಳೇನು) ಉತ್ತರಿಸುತ್ತಿದ್ದಾನೆ. ಗುಣಾತೀತನು ತನ್ನಲ್ಲಿ ಸ್ವಾಭಾವಿಕವಾಗಿದ್ದ ಸಾತ್ವಿಕ, ರಾಜಸಿಕ, ಇಲ್ಲವೇ ತಾಮಸಿಕ ಗುಣಗಳನ್ನು ದ್ವೇಷಿಸುವುದಿಲ್ಲ. ಆ ಗುಣಗಳು ಕಡಿಮೆ ಇದ್ದರೆ ಅವುಗಳು ಬೇಕೆಂದು ಆಶಿಸುವುದೂ ಇಲ್ಲ. ಈ ಎರಡೂ ಸಂದರ್ಭಗಳಲ್ಲಿಯೂ, ಅವನು ತನ್ನ ಮನಃಶಾಂತಿಯನ್ನು ಅನುಭವಿಸುತ್ತಿರುವುದರಿಂದ ಈ ಎರಡರ ಬಗ್ಗೆಯೂ ಉದಾಸೀನನಾಗಿರುತ್ತಾನೆ. ಕೋಟ್ಯಾಧೀಶನು ರಸ್ತೆಯಲ್ಲಿ ಹೊಗುತ್ತಿರುವಾಗ್ಯೆ ನಾಲ್ಕಾಣೆಯ ಒಂದು ನಾಣ್ಯವನ್ನು ಕಂಡರೆ ಅವನು ಅದರ ಬಗ್ಗೆ ಉದಾಸೀನನಾಗಿರುತ್ತಾನೆ. ಅದನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಆಗ ಬೇಕಾದುದೇನೂ ಇಲ್ಲ. ಇದರಂತೆಯೇ ಗುಣಾತೀತನು ಆತ್ಮಜ್ಞಾನಾನಂದವನ್ನು ಅನುಭವಿಸುತ್ತಿರುವುದರಿಂದ, ಅದರೆದುರಿಗೆ ಗುಣಗಳಿಂದ ಲಭಸಿಬೇಕಾದ ಆನಂದವು ಕ್ಷುಲ್ಲಕವಾಗಿ ಕಾಣುತ್ತದೆ. ಆದುದರಿಂದ ಅವನು ಉದಾಸೀನನಾಗಿರುತ್ತಾನೆ. ಪ್ರಾಪಂಚಿಕ ಸುಖದುಃಖಗಳಾವುವೂ ಅವನ ಆನಂದವನ್ನು ಹೆಚ್ಚಿಸಲಾರವು ಇಲ್ಲವೇ ಕಡಿಮೆ ಸಹ ಮಾಡಲಾರವು.
ಗುಣಾಗೀತನ ಮನೋಭಾವವನ್ನು ವರ್ಣಿಸಿ ಈಗ ಅವನ ಲಕ್ಷಣ ಗಳನ್ನು ಶ್ಲೋಕಗಳನ್ನು ವಿವರಿಸಲಾಗುತ್ತದೆ.

ಉದಾಸೀನವದಾಸೀನೋ ಗುಣೈರ್ಯೋನ ವಿಚಾಲ್ಯತೇ |
ಗುಣಾ ವರ್ತಂತ ಇತ್ಯೇವ ಯೋ„ವತಿಷ್ಠತಿ ನೇಂಗತೇ || 23 ||
ಅರ್ಥ :- ಉದಾಸೀನನಾಗಿರುವ ಇವನನ್ನು ಗುಣಗಳು ಕದಲಿಸಲಾರವು. ಗುಣಗಳು ತಮ್ಮಷ್ಟಕ್ಕೆ ತಾವೇ ಕೆಲಸಮಾಡುತ್ತವೆ ಎಂದು ಅವನು ತಿಳಿದುಕೊಂಡವನಾಗಿ, ತನ್ನ ಶಾಂತಿ ಸ್ಥಿತಿಯಿಂದ ಕದಲುವುದಿಲ್ಲ.
ಗುಣಾತೀತನು ಪ್ರಪಂಚದಲ್ಲಿ ಹೇಗೆ ವರ್ತಿಸುತ್ತಾನೆ ಎಂಬ ವಿವರಣೆಯು ಇಲ್ಲಿಂದ ಮೂರು ಶ್ಲೋಕಗಳಲ್ಲಿ ಹೇಳಲ್ಪಟ್ಟಿವೆ. ಅನೇಕ ಸಾರಿ ಮನುಷ್ಯನು ತನ್ನ ಒಳಗಿನ ದುರ್ಗುಣಗಳನ್ನು ಮುಚ್ಚಿಕೊಳ್ಳಲು ಹೊರಗೆ ಸದ್ಗುಣಗಳ ಸೋಗನ್ನು ಹಾಕಿಕೊಳ್ಳುತ್ತಾನೆ. ಆಕರ್ಷಕ ಸನ್ನಿವೇಶಗಳಿಲ್ಲದಿರುವಾಗ ಇಲ್ಲವೇ ಆಕರ್ಷಕ ವಸ್ತುಗಳೂ ಸಿಗದಿರುವಾಗ ನಾವು ಸಾಧು ಪುರುಷರಂತೆ ವರ್ತಿಸಬಹುದು. ಅಧಿಕಾರವಿಲ್ಲದಿರುವಾಗ ಕ್ರೂರಿಯಂತೆ ಕಾಣದಿರಬಹುದು. ಬಡವನಾಗಿರುವಾಗ ಸರಳ ಜೀವನವನ್ನು ನಡೆಸಬಹುದು. ಲಂಚವನ್ನು ಕೊಡುವವರೇ ಇಲ್ಲದಿರುವಾಗ ಲಂಚವನ್ನು ಸ್ವೀಕರಿಸದೆ ಸದೇ ಇರಬಹುದು; ಆದರೆ ಇದಕ್ಕೆ ವಿರುದ್ಧವಾದ ಸಂದರ್ಭಗಳು ಒದಗಿದರೆ ಆಗ ನಿಜವಾದ ಗುಣಗಳು ಬಯಲಿಗೆ ಬರುತ್ತವೆ. ಆದುದರಿಂದ ನಿಜವಾದ ಯೋಗಿಯ ಯೋಗ್ಯತೆಯನ್ನು ಅವನು ಒಂಟಿಯಾಗಿ, ಒಂದು ಮೂಲೆಯ ಗುಹೆಯ ಒಳಗಡೆ ಕುಳಿತಿರುವಾಗ ಕುಳಿತಿರುವುದರಿಂದ ಅಳೆಯದೆ, ವಿವಿಧ ಆಕರ್ಷಕ ಸನ್ನಿವೇಶಗಳ ಮಧ್ಯದಲ್ಲಿ ಇರುವಾಗ, ಅವನ ನಡತೆ ಹೇಗಿರುತ್ತದೆ ಎಂಬುದನ್ನು ನೋಡಿ ಪರೀಕ್ಷಿಸಬೇಕು. ಏಸುಕ್ರಿಸ್ತನನ್ನು ಶಿಲುಬೆಗೇರಿಸಿ, ಮೊಳೆಗಳನ್ನು ಹೊಡೆಯುವವರೆಗೂ ಅವನ ಮಹಾತ್ಮೆಯು ಪ್ರಕಟವಾಗಲಿಲ್ಲ. ಮನುಷ್ಯನು ನಾನಾತರಹದ ದುಃಖದುಮ್ಮಾನಗಳಿಗೆ ಬಲಿಯಾದಾಗ್ಯೆ ಮಾತ್ರ ಅವನ ನಿಜವಾದ ಯೋಗ್ಯತೆಯು ತಿಳಿಯುತ್ತದೆ. ಗಂಧದ ಕೊರಡನ್ನು ಚನ್ನಾಗಿ ತೇಯ್ದಾಗ, ಇಲ್ಲವೇ ಸುಟ್ಟಾಗ ಅದರ ಸುವಾಸನೆಯು ಹೊರಬೀಳುತ್ತದೆ. ಆದುದರಿಂದ ಗುಣಾತೀತನು ಪ್ರಪಂಚದಲ್ಲಿ ಹೇಗೆ ವರ್ತಿಸುತ್ತಿದ್ದಾನೆಂದು ತಿಳಿದುಕೊಳ್ಳುವುದರಿಂದ ಸಾಧಕನು ತನ್ನ ನಡತೆಯನ್ನು ತಿದ್ದಿಕೊಂಡು, ಅದರಂತೆ ಮಾರ್ಪಡಿಸಿಕೊಳ್ಳಲು ಸಹಾಯಕವಾಗುತ್ತದೆ.
ಉದಾಸೀನವದಾಸೀನ :- ಗುಣಾತೀತನು ತನ್ನ ಸುತ್ತಮುತ್ತಲು ನಡೆಯುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳಿಂದ ತನ್ನ ಮನಃಶಾಂತಿಯು ಕದಡಲು ಆಸ್ಪದ ಕೊಡುವುದಿಲ್ಲ. ಗುಣಗಳು ತಮ್ಮಷ್ಟಕ್ಕೆ ತಾವ ತಾವೇ ಕೆಲಸ ಮಾಡುವುದರಿಂದ ಈ ಎಲ್ಲಾ ಘಟನೆಗಳು ಘಟಿಸುತ್ತವೆ ಎಂದು ಅವನು ತಿಳಿದುಕೊಂಡು, ಅವುಗಳಿಂದ ಉದ್ವಿಗ್ನನಾದರೆ ಉದಾಸೀನನಾಗಿ ಶಾಂತವಾಗಿರುತ್ತಾನೆ. ಚಿತ್ರಮಂದಿರದ ಪರದೆಯ ಮೇಲೆ ಸುಖಾಂತ್ಯ ಹಾಗೂ ದುಃಖಾಂತ್ಯ ದೃಶ್ಯಗಳು ತೋರಿಸಲ್ಪಡುತ್ತವೆ. ಅವು ಕೇವಲ ಮನೋರಂಜಕ ಚಿತ್ರಗಳು ಎಂದು ನಮಗೆ ಖಚಿತವಾಗಿ ಗೊತ್ತಿರುವುದರಿಂದ ನಾವು ಅವುಗಳ ಸುಖ, ದುಃಖಗಳ ಬಗ್ಗೆ ವಿಚಲಿತರಾಗುವುದಿಲ್ಲ. ಇದೇ ರೀತಿ ಗುಣಾತೀತನ ವರ್ತನೆಯಿರುತ್ತದೆ. ಹೀಗೆಂದು ಹೇಳಿದ ಮಾತ್ರಕ್ಕೆ ಈ ಯೋಗದಲ್ಲಿ ಯೋಗಿಯು ನಿರುತ್ಸಾಹನೂ, ಆಲಸಿಯೂ ಆಗಿರುತ್ತಾನೆಂದು ತಿಳಿಯಬಾರದು. ಅವನು ‘ಉದಾಸೀನನಂತೆ’ ಇರುತ್ತಾನೆ. ಆದಾಗ್ಯೂ ಕರ್ತವ್ಯದೃಷ್ಟಿಯಿಂದ ತಾನು ಮಾಡಬೇಕಾದ ಕರ್ಮಗಳನ್ನು ಅಹಂಕಾರವಿಲ್ಲದೆ ದಕ್ಷತೆಯಿಂದ ಮಾಡುತ್ತಲೇ ಇರುತ್ತಾನೆ.
ಗುಣಗಳು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತವೆ ಎಂದು ತಿಳಿಯ ಬೇಕಾಗಿದ್ದರೆ ಗುಣಗಳಿಂದ ಉದ್ವಿಗ್ನನಾದರೆ, ಅವುಗಳಾಚೆಗೆ ಇರಬೇಕು. ಇವನು ಆತ್ಮಾನಂದದಲ್ಲಿದ್ದು ಕೊಂಡು ಗುಣಗಳ ಈ ಆಟವನ್ನು ಪ್ರೇಕ್ಷಕನಂತೆ ನೋಡುತ್ತಾನೆ.

ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮ ಕಾಂಚನಃ |
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ || 24 ||
ಅರ್ಥ :- ಸುಖ ಮತ್ತು ದುಃಖಗಳೆರಡನ್ನೂ ಸಮನಾಗಿ ತಿಳಿಯುವುದು; ಆತ್ಮಾನಂದದಲ್ಲಿ ಸ್ವಸ್ಥನಾಗಿರುವುದು; ಮಣ್ಣು ಹೆಂಟೆ, ಕಲ್ಲು, ಬಂಗಾರಗಳನ್ನು ಒಂದೇ ರೀತಿಯಾಗಿ ಕಾಣುವುದು; ಪ್ರಿಯವಾದುದು ಮತ್ತು ಅಪ್ರಿಯವಾದುದು ಇವೆರಡನ್ನೂ ಸಮನವಾಗಿ ಕಾಣುವುದು; ಧೀರನಾಗಿರುವುದು, ಹೊಗಳಿಕೆ ಮತ್ತು ತೆಗಳಿಕೆಗಳಿಂದ ಉದ್ವಿಗ್ನನಾಗದೆ ಸಮಚಿತ್ತವುಳ್ಳವನಾಗಿರುವುದು, (ಇವು ಗುಣಾತೀತನ ಲಕ್ಷಣಗಳು)
ಸಂಸಾರದಲ್ಲಿ ನಿತ್ಯವೂ ಒದಗುವ ಹಿತವಾದ ಮತ್ತು ಅಹಿತವಾದ, ನಾನಾ ರೀತಿಯ ಘಟನೆಗಳಿಂದ ಮನಸ್ಸಿನ ತಾಳ್ಮೆಯನ್ನು ಕೆಡಸಿಕೊಳ್ಳದೆ, ಅವುಗಳಿಂದ ಉದ್ವಿಗ್ನನಾದರೆ, ಎಲ್ಲಾ ಸಂದರ್ಭಗಳನ್ನೂ ಒಂದೇ ರೀತಿಯಾಗಿ ಶಾಂತತೆಯಿಂದ ಎದುರಿಸುತ್ತಾ ಅವುಗಳ ಬಗ್ಗೆ ಉದಾಸೀನನಂತೆ ಇರುವುದು, ಇವು ಗುಣಗಳನ್ನು ಗೆಲ್ಲುವುದಕ್ಕೆ ಅವಶ್ಯಕ. ಗುಣಗಳನ್ನು ಗೆದ್ದವನು ತಾನೇ ತಾನಾಗಿ ಆತ್ಮಾನಂದದಲ್ಲಿರುವಾಗ ಸತ್ವಗುಣದ ರೋಮಾಂಚನವಾಗಲೀ, ರಜೋಗುಣದ ಆಸೆ ಮತ್ತು ಕಾರ್ಯಪಟುತ್ವಗಳಾಗಲೀ ತಮೋಗುಣದ ಆಲಸ್ಯವಾಗಲೀ, ಅವನ ಶಾಂತತೆಯನ್ನು ಕದಲಿಸಲಾರವು. ಇಂತಹ ಸ್ಥಿತಿಯು ವ್ಯವಹಾರದ ಸಾಮಾನ್ಯ ಮನುಷ್ಯನ ದೃಷ್ಟಿಯಿಂದ “ಜೀವಂತ ಹೆಣವಿದ್ದಂತೆ” ಎಂದು ಕಾಣಬಹುದು. ನಿಜ, ಈ ವ್ಯಕ್ತಿಯಲ್ಲಿ ವ್ಯವಹಾರ ದೃಷ್ಟಿಯಿಂದ ಅಹಂಕಾರವು ನಾಶವಾಗಿರುತ್ತದೆ. ಸತ್ತು ಹೋಗಿರುತ್ತದೆ. ಮನಸ್ಸಿನ ಉದ್ವಿಗ್ನತೆಗೆ ಕಾರಣವಾದ ಈ ಗುಣಗಳಿಂದ ದೂರ ಸರಿಯುವುದೆಂದರೆ, ಆತ್ಮನಲ್ಲಿ ರಕ್ಷಣೆಯನ್ನು ಪಡೆದಂತೆ, ಕನಸು ಕಾಣುವವನು, ನಾಶವಾಗಿ, ಎಚ್ಚರಗೊಂಡವನಂತೆ. ಕನಸಿನಿಂದ ಎಚ್ಚರಗೊಂಡ ನಂತರ ಅವನಿಗೆ ಹಿಂದಿನ ರಾತ್ರಿಯ ಕನಸಿನ ರಾಜ್ಯದೊಡನೆ ಯಾವ ತರಹದ ಸಂಬಂಧವಿರುತ್ತದೆ ಎಂಬುದು ಅರ್ಜುನನ ಪ್ರಶ್ನೆ. ಶ್ರೀಕೃಷ್ಣನು ಇದರ ಉತ್ತರವನ್ನು ಮೇಲಿನಂತೆ ತಿಳಿಸಿದ್ದಾನೆ. ಪ್ರಪಂಚದ ಎಲ್ಲಾ ತರಹದ ಅನುಭವಗಳನ್ನೂ, ಅವನು ಒಂದೇ ರೀತಿಯಾಗಿ ತಿಳಿಯುತ್ತಾ ಮನಸ್ಸಿನ ಶಾಂತಿಯನ್ನು ಕಾಯ್ದುಕೊಂಡಿರುತ್ತಾನೆ. ಈ ಸ್ಥಿತಿಯನ್ನು ಹೇಗೆ ಕಾಯ್ದುಕೊಳ್ಳುತ್ತಾನೆಂಬುದನ್ನು ಕೆಳಗೆ ಕಾಣಬಹುದು.
ಸಮದುಃಖಿಸುಖ ಸಮದುಃಖಸುಖಃ :- ಸುಖ ದುಃಖಗಳು ಮನಸ್ಸಿನಲ್ಲಿ ಭ್ರಮೆಯನ್ನುಂಟು ಮಾಡುತ್ತವೆ. ಒಂದೇ ಕಾಲದಲ್ಲಿ ಒಬ್ಬನಿಗೆ ಸುಖ ಎಂದು ಕಂಡುದುದು, ಅದೇ ಕಾಲದಲ್ಲಿ ಇನ್ನೊಬ್ಬನಿಗೆ ದುಃಖಕರವಾಗುತ್ತದೆ. ದುಃಖಕರವಾಗುತ್ತದೆ. ಅದೇ ರೀತಿಯಲ್ಲಿ ಒಂದು ಕಾಲದಲ್ಲಿ ಸುಖಕರವಾದ ವಸ್ತುವು, ಇನ್ನೊಂದು ಕಾಲದಲ್ಲಿ ಅವನಿಗೇ ದುಃಖಕರವಾಗುತ್ತದೆ. ಅಂದರೆ ಸುಖ ಮತ್ತು ದುಃಖಗಳು ವಸ್ತುಗಳಲ್ಲಿಲ್ಲದೆ, ನಮ್ಮ ಮನಸ್ಸಿನಲ್ಲಿವೆ. ಗುಣಾತೀತನು ಮನಸ್ಸನ್ನು ಈ ಅನುಭವಗಳಿಂದ ಹಿಂದಕ್ಕೆಳೆದು-ಕೊಂಡದ್ದರಿಂದ, ಆ ವಸ್ತುಗಳನ್ನು ಅವನು ಉಪಯೋಗಿಸಿದಾಗ್ಯೂ, ಅವನ ಮನಸ್ಸು ಅವುಗಳಲ್ಲಿ ಪ್ರವೇಶಿಸಿರುವುದಿಲ್ಲ. ಆದುದರಿಂದ ಅವನು ಸುಖವನ್ನೂ ಅನುಭವಿಸುವುದಿಲ್ಲ. ದುಃಖವನ್ನೂ ಅನುಭವಿಸಿರುವುದಿಲ್ಲ.
ಸಮಲೊಷ್ಠಾಶ್ಮಕಾಂಚನಃ:- ಪ್ರಪಂಚದಲ್ಲಿ ಕೆಲವು ವಸ್ತುಗಳಿಗೆ ಬೆಲೆ ಹೆಚ್ಚು, ಕೆಲವು ವಸ್ತುಗಳಿಗೆ ಯಾವ ಬೆಲೆಯೂ ಇಲ್ಲ. ಇಲ್ಲಿ ಸುವರ್ಣವು ಬೆಲೆಯುಳ್ಳದ್ದು, ಮಣ್ಣು ಹೆಂಟೆಗೆ ಯಾವ ಬೆಲೆಯೂ ಇಲ್ಲ. ಗುಣಾತೀತನು ಯಾವುದನ್ನೂ ಆಶಿಸುವುದಿಲ್ಲ, ಯಾವುದನ್ನೂ ಸಂಗ್ರಹಿಸುವುದಿಲ್ಲ ಯಾವುದನ್ನೂ ದ್ವೇಷಿಸುವುದಿಲ್ಲ. ತನ್ನ ಜೀವನ ನಿರ್ವಹಣೆಗೆ, ಪರಮಾತ್ಮನು ಏನನ್ನು ಹಾಗೂ ಎಷ್ಟನ್ನು ಒದಗಿಸುತ್ತಾನೋ ಅಷ್ಟರಿಂದ ತೃಪ್ತಿಯನ್ನು ಹೊಂದುತ್ತಾನೆ. ಈ ತೃಪ್ತಿಯಿಂದಾಗಿ ಅವನಿಗೆ ಸುವರ್ಣವೂ ಒಂದೇ ಮಣ್ಣು ಹೆಂಟೆಯೂ ಒಂದೇ. ಅವೆರಡೂ ಅವನಿಗೆ ಬೇಡಾದ ವಸ್ತಗಳು.
ಮನೆಯಲ್ಲಿ ಚಿಕ್ಕ ಮಕ್ಕಳು ಹಳೆಯ ಸ್ಟಾಂಪು, ಬೆಂಕಿ ಪೊಟ್ಟಣದ ಮೇಲಿನ ಚಿತ್ರಗಳು ಹಳೆಯ ಬಳೆ, ತರಹಾವರಿ ಕಲ್ಲುಗಳು, ಇವನ್ನು ರಸ್ತೆಯ ಮೂಲೆ ಮೂಲೆಯಿಂದ ಆರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಮತ್ತು ಆ ಸಂಗ್ರಹಕ್ಕಾಗಿ ಹೆಮ್ಮೆ ಪಟ್ಟು ಅದನ್ನು ಎಲ್ಲರಿಗೂ ತೋರಿಸುತ್ತಾರೆ. ಆದರೆ ಅವರೇ ಬೆಳೆದು ದೊಡ್ಡವರಾಗಿ, ಬುದ್ಧಿಯು ವಿಕಾಸಗೊಂಡಮೇಲೆ, ಇವೆಲ್ಲವೂ ನಿರುಪಯುಕ್ತ ವಸ್ತುಗಳೆಂದೂ ಅವುಗಳನ್ನು ಬಿಸಾಡುತ್ತಾರೆ ಇಲ್ಲವೆ ತಮಗಿಂತ ಚಿಕ್ಕವರಿಗೆ ಕೊಡುತ್ತಾರೆ. ಇದೇ ರೀತಿಯಾಗಿ ಪ್ರಪಂಚದ ದೃಷ್ಟಿಯಿಂದ ಬೆಲೆಬಾಳುವ ವಸ್ತುಗಳು, ಗುಣಾತೀತನಿಗ ತುಚ್ಛವಾಗಿ, ಏನೂ ಬೆಲೆಯಿಲ್ಲದವುಗಳಾಗಿ ಕಾಣಿಸುತ್ತವೆ.
ತುಲ್ಯಪ್ರಿಯಾಪ್ರಿಯ:- ನಾವು ಸಂಸಾರದಲ್ಲಿ ವಿವಿಧ ರೀತಿಯ ಜನರೊಡನೆ ವ್ಯವಹರಿಸುವಾಗ, ಯಾರಲ್ಲಿ ನಮಗೆ ಒಪ್ಪಿಗೆಯಾಗುವ ನಡತೆಗಳು, ಗುಣಗಳು ಕಂಡು ಬರುತ್ತವೆಯೋ, ಅವರನ್ನು ನಾವು ಪ್ರೀತಿಸುತ್ತೇವೆ. ಯಾರ ನಡತೆಗಳು, ಹಾಗೂ ಗುಣಗಳು ನಮಗೆ ಅಹಿತವಾಗಿವೆಯೋ ಅವರನ್ನು ದ್ವೇಷಿಸುತ್ತೇವೆ. ಆದುದರಿಂದ ಪ್ರೀತಿ ಮತ್ತು ದ್ವೇಷ ಎಂಬುದು ಎದುರು ಪಕ್ಷದವರಲ್ಲಿ ಇಲ್ಲದೆ, ಹಿತ ಮತ್ತು ಅಹಿತಗಳೊಡನೆ ನಮ್ಮ ಮನಸ್ಸು ಹೊಂದುವ ಸಂಪರ್ಕ ಹಾಗೂ ಸಂಬಂಧದೊಡನೆ ಮಾತ್ರ ಇದೆ. ಅಂದರೆ ಇದು ನಮ್ಮಲ್ಲಿಯೇ ಇದೆ. ಸಾಮಾನ್ಯ ಮನುಷ್ಯನು, ತಾನೇ ಮನಸ್ಸು ಎಂದು ತಿಳಿದುಕೊಂಡು, ಮನಸ್ಸಿನ ಮುಖಾಂತರ ಪ್ರಪಂಚದೊಡನೆ ಸೇರಿ, ಹಿತ ಮತ್ತು ಅಹಿತ ಎಂಬ ಅನುಭವಗಳನ್ನು ಹೊಂದಿ ಭ್ರಾಂತಿಗೀಡಾಗುತ್ತಾನೆ. ಗುಣಾತೀತನು, ತನ್ನ ಮನಸ್ಸನ್ನು ಇವುಗಳಿಂದ ಹಿಂದಕ್ಕೆಳೆದುಕೊಂಡದ್ದರಿಂದ, ಹಿತ, ಅಹಿತಗಳೆರಡನ್ನು ಉದಾಸೀನವಾಗಿ ಕಾಣುತ್ತಾನೆ. ತುಲ್ಯನಿಂದಾಸ್ತುತಿ:- ಹಿಂದಿನ ರಾತ್ರಿಯ ಕನಸಿನಲ್ಲಿ ತಾನು ರಾಜನಾಗಿದ್ದಂತೆ, ಇಲ್ಲವೆ ಭಿಕ್ಷುಕನಾಗಿದ್ದಂತೆ ಕಂಡವನು ಎಚ್ಚರಗೊಂಡ ನಂತರ, ತನಗೆ ಕನಸಿನಲ್ಲಿ ಸಿಕ್ಕ ವಿಸ್ತಾರವಾದ ರಾಜವೈಭವದಿಂದ ಸಂತೋಷಪಡುವುದಿಲ್ಲ. ಇಲ್ಲವೇ ತಾನು ಭಿಕ್ಷುಕನಾಗಿದ್ದನೆಂದು ದುಃಖಪಡುವುದೂ ಇಲ್ಲ. ಇದ ರೀತಿ ಗುಣಾತೀತನು, ಪ್ರಪಂಚವು ಒಂದು ಕನಸು, ಒಂದು ನಾಟಕ, ಎಂದು ತಿಳಿದಿರುವುದರಿಂದ, ಇದರಲ್ಲಿ ಜನರಿಂದ ಬರುವ ಹೊಗಳಿಕೆ, ಹಾಗೂ ತೆಗಳಿಕೆಗಳು, ತನಗಲ್ಲವೆಂದೂ, ಅವು ಈ ಶರೀರಕ್ಕೆಂದೂ, ಇವೆಲ್ಲವೂ ಕನಸಿನ ಪಾತ್ರಗಳಂತೆ ಕರಗಿ ಹೋಗತಕ್ಕವುಗಳೆಂದೂ, ನಿಶ್ಚಯವಾಗಿ ತಿಳಿದು, ಅವುಗಳಿಂದ ನಿರ್ಬಾಧಿತನಾಗಿರುತ್ತಾನೆ.
ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ |
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ || 25 ||
ಅರ್ಥ :- ಮಾನ ಮತ್ತು ಅಪಮಾನಗಳೆರಡನ್ನೂ ಸಮಾನವಾಗಿ ಗಣಿಸುವುದು, ಶತ್ರು-ಮಿತ್ರರಿಬ್ಬರನ್ನು ಸಮಾನವಾಗಿ ತಿಳಿಯುವುದು, ಅಹಂಕಾರದಿಂದ ಯಾವ ಕೆಲಸವನ್ನೂ ಮಾಡದಿರುವುದು (ಇವು ಗುಣಾತೀತನ ಲಕ್ಷಣಗಳು).
ಗುಣಾತೀತನು ಜನರೊಡನೆ ಯಾವ ರೀತಿ ವರ್ತಿಸುತ್ತಾನೆಂಬುದನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಮಾನಾಪಮಾನಯೋಸ್ತುಲ್ಯಮ್- ಮಾನ ಮತ್ತು ಅಪಮಾನ ಇವು ನಮ್ಮ ಬುದ್ಧಿಯು ಸಂಬಂಧಿಸಿದ ಘಟನೆಗಳಿಗೆ ಕಟ್ಟಿದ ಬೆಲೆ ಎನ್ನಬಹುದು. ಕಾಲ ಮತ್ತು ಸಂದರ್ಭಕ್ಕನುಸಾರವಾಗಿ ಇದು ಭಿನ್ನಭಿನ್ನವಾಗಿರುತ್ತದೆ. ಅಹಂಕಾರವನ್ನು ದಾಟಿದವನು ಜನರು ಕೊಡುವ ಗೌರವ ಹಾಗೂ ಅಪಮಾನ ಇವಾವುವೂ ತನಗಲ್ಲವೆಂದು ತಿಳಿದು ಅವೆರಡರಲ್ಲಿಯೂ ಉದಾಸೀನನಾಗಿರುತ್ತಾನೆ. ತುಲ್ಯೋಮಿತ್ರಾರಿಪಕ್ಷಯೋ:- ಗುಣಗಳನ್ನು ದಾಟಿದವನಿಗೆ ಪ್ರಪಂಚದಲ್ಲಿ ಶತ್ರುಗಳಾರೂ ಇಲ್ಲ. ಅಂತೆಯೇ ಮಿತ್ರರೂ ಇಲ್ಲ. ಪ್ರಪಂಚದಲ್ಲಿರುವವರೆಲ್ಲರೂ ಬೇರೆಬೇರೆ ರೂಪದಲ್ಲಿ ನಟಿಸುತ್ತಿರುವ ಪರಮಾತ್ಮನ ವಿಭೂತಿಗಳು ಎಂದು ಅವನು ತಿಳಿದಿರುತ್ತಾನೆ. ಸರ್ವಾರಂಭ ಪರಿತ್ಯಾಗೀ:- ಗುಣಾತೀತನಲ್ಲಿ ಅಹಂಕಾರವಿಲ್ಲ. ಅಹಂಕಾರವಿದ್ದರೆ ಮಾತ್ರ ಹೊಸ ವಸ್ತುಗಳನ್ನು ಗಳಿಸಬೇಕೆಂಬ ಆಸೆಯಿಂದ ಕರ್ಮ ಮಾಡಬೇಕಾಗುತ್ತದೆ. ಇವನಿಗೆ ಹೊಸದನ್ನು ಗಳಿಸ ಬೇಕೆಂಬ ಆಸೆ ಇಲ್ಲ. ಆದುದರಿಂದ ಆಸೆಯಿಂದ ಕೂಡಿದ ಹೊಸ ಸಾಹಸ ಕಾರ್ಯಗಳನ್ನು ಇವನು ಮಾಡುವುದಿಲ್ಲ. ಆದರೆ ಕರ್ತವ್ಯ ದೃಷ್ಟಿಯಿಂದ ತಾನು ಮಾಡಬೇಕಾದ ಎಲ್ಲಾ ಕರ್ಮಗಳನ್ನೂ, ಫಲಾಪೇಕ್ಷೆಯನ್ನು ತ್ಯಜಿಸಿ, ಲೋಕಸಂಗ್ರಹ ದೃಷ್ಟಿಯಿಂದ ತಪ್ಪದೆ ಮಾಡುತ್ತಲೇ ಇರುತ್ತಾನೆ. ಇವನಲ್ಲಿ ಆಲಸ್ಯವಿರುವುದಿಲ್ಲ. ಇದುವರೆಗೆ ಹೇಳಿದ ಎಲ್ಲಾ ಗುಣಗಳನ್ನೂ ಸಾಧಕನು ಮೈಗೂಡಿಸಿಕೊಂಡು ತನ್ನ ನಿತ್ಯದ ಆಚರಣೆಯಲ್ಲಿ ತರಬೇಕು.
ಗುಣಗಳನ್ನು ದಾಟುವುದು ಹೇಗೆ
ಮಾಂ ಚ ಯೋ„ವ್ಯಭಿಚಾರೇಣ ಭಕ್ತಿಯೋಗೇನ ಸೇವತೇ |
ಸ ಗುಣಾನ್ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ || 26 ||
ಅರ್ಥ :- ಯಾರು ನಿಷ್ಠಾವಂತರಾಗಿ ಭಕ್ತಿಯೋಗದಿಂದ ಸೇವೆಯನ್ನು ಮಾಡುತ್ತಾರೋ, ಅವರು ಗುಣಗಳನ್ನು ದಾಟಿ ಬ್ರಹ್ಮಾನಂದವನ್ನು ಪಡೆಯುತ್ತಾರೆ.
ಗೀತೆಯ ಉಪದೇಶದಲ್ಲಿ ಪ್ರತ್ಯಕ್ಷ ಆಚರಣೆಗೆ ಮಹತ್ವವನ್ನು ಕೊಡಲಾಗಿದೆ. ವೇದಾಂತದ ತಾತ್ವಿಕ ಹಿನ್ನೆಲೆಯನ್ನೂ ಯನ್ನು ವರ್ಣಿಸಿದ ಕೂಡಲೇ, ಅವುಗಳನ್ನೂ ಗಳನ್ನು ಆಚರಣೆಯಲ್ಲಿ ತರುವ ವಿಧಾನವನ್ನು ಗೀತೆಯ ಉದ್ದಕ್ಕೂ ತಿಳಿಸುತ್ತದೆ. ಇದೇ ರೀತಿಯಾಗಿ ಪರಮಾತ್ಮನನ್ನು ಏಕಭಕ್ತಿಯಿಂದ ಉಪಾಸನೆ ಮಾಡುವುದರ ಮೂಲಕ ಗುಣಗಳನ್ನು ದಾಟಬೇಕೆಂಬ ಸಾಧನೆಯ ಪ್ರತ್ಯಕ್ಷ ಮಾರ್ಗವನ್ನು — ಇಲ್ಲಿ ತಿಳಿಸಲಾಗಿದೆ.
ಅವ್ಯಭಿಜಾರೇಣ ಭಕ್ತಿ ಯೋಗೇನ- ಪರಮಾತ್ಮನಲ್ಲಿ ಭಕ್ತನು ತೋರಿಸುವ ಪ್ರೀತಿಗೆ ಭಕ್ತಿ ಎಂದು ಹೆಸರು. ಭಕ್ತಿಯಲ್ಲಿ ಶ್ರವಣ, ಕೀರ್ತನ, ಸ್ಮರಣ, ಅರ್ಚನ, ವಂದನ, ಪಾದಸೇವೆ, ದಾಸ್ಯ, ಸಖ್ಯ, ಮತ್ತು ನಿವೇದನ ಎಂದು ಒಂಭತ್ತು ವಿಧಗಳಿವೆ. ಆತ್ಮನಿವೇದನವು ಕಟ್ಟಕಡೆಯ ತುದಿ. ಇದಕ್ಕೆ ಮಧುರ ಪ್ರೇಮ ಎಂಬ ಹೆಸರೂ ಇದೆ. ಇದನ್ನು ಗಂಡ-ಹೆಂಡಿರ ಪ್ರೇಮಕ್ಕೆ ಹೋಲಿಸಲಾಗಿದೆ. ಪ್ರತಿಯೊಬ್ಬ ಸಾಧಕನೂ, ಪರಮಾತ್ಮನು ತನ್ನ ಪತಿ ಎಂದೂ, ತಾನು ಅವನ ಸತಿ ಎಂದೂ ಭಾವಿಸಿ, ವ್ಯವಹಾರದಲ್ಲಿ ಪತಿವ್ರತೆಯಾದ ಸತಿಯು, ತನ್ನ ಪತಿಯನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡುವಂತೆ, ಪರಮಾತ್ಮನಲ್ಲಿ ಭಕ್ತಿಯನ್ನೂ, ಸೇವೆಯನ್ನೂ ಅರ್ಪಿಸುತ್ತಾನೆ. ಪತಿವ್ರತಾ ಸ್ತ್ರೀಯು ತನ್ನ ಪತಿಯ ಹೊರತಾಗಿ ಬೇರೆ ಯಾವ ಪುರುಷನನ್ನೂ ಒಪ್ಪುವುದಿಲ್ಲ. ಬೇರೆ ಪುರುಷನೊಡನೆ ಪ್ರೇಮ ಮಾಡಿದರೆ ಅವಳನ್ನು ವ್ಯಭಿಚಾರಿಣಿ ಎಂದು ಕರೆಯುತ್ತೇವೆ. ಪತಿವ್ರತೆಯಾದ ಸತಿಯಂತೇ ಭಕ್ತನು ಪರಮಾತ್ಮನೊಬ್ಬನನ್ನೇ ಅನನ್ಯಭಕ್ತಿಯಿಂದ ಭಜಿಸಬೇಕೆಂದು ತಿಳಿಸಲು ಇಲ್ಲಿ ಅವ್ಯಭಿಚಾರಣಿ ಎಂಬ ಶಬ್ದವನ್ನು ಉಪಯೋಗಿಸ-ಲಾಗಿದೆ. ಹೀಗೆ ಏಕ ಭಕ್ತಿಯನ್ನು ಮಾಡುತ್ತಾ ಕ್ರಮೇಣ ತನ್ನ ಆತ್ಮ ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂಬ ಏಕಭಾವವನ್ನು ಹೊಂದಬೇಕು.
ಪರಮಾತ್ಮನ ಭಜನೆಯನ್ನಾಗಲೀ, ಅಥವಾ ಧ್ಯಾನವನ್ನೇ ಆಗಲೀ, ಬಹಳ ದೀರ್ಘಕಾಲದವರೆಗೆ ಮಾಡಲು ಸಾಧ್ಯವಿಲ್ಲ. ಮನುಷ್ಯನ ಈ ದೌರ್ಬಲ್ಯವನ್ನು ತಿಳಿದು ಶ್ರೀಕೃಷ್ಣನು ಇದಕ್ಕಾಗಿ ಇನ್ನೊಂದು ಮಾರ್ಗವನ್ನು ತೋರಿಸಿದ್ದಾನೆ. ಪ್ರಪಂಚದಲ್ಲಿರುವ ವಿವಿಧ ಮನುಷ್ಯ ಹಾಗೂ ಪ್ರಾಣಿಗಳ ರೂಪದಲ್ಲಿ, ಪರಮಾತ್ಮನು ಆಯಾಯ ರೂಪಗಳಿಂದ ನಟಿಸುತ್ತಿದ್ದಾನೆಂದು, ತಿಳಿದುಕೊಂಡು, ಅನನ್ಯವಾದ ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ಪ್ರಪಂಚದ ಸೇವೆಯನ್ನು (ಜನ ಸೇವೆ, ಪ್ರಾಣಿಸೇವೆ) ಮಾಡಬೇಕೆಂದೂ, ಅದೂ ಪರಮಾತ್ಮನ ಅರ್ಚನೆಯಾಗುತ್ತದೆಂದೂ, ಅದರಿಂದ ಸಾಧಕನು ಬ್ರಹ್ಮಪದವಿಯನ್ನು ಸೇರುತ್ತಾನೆಂದೂ ಹೇಳಲಾಗಿದೆ.
ಅವ್ಯಭಿಚಾರೇಣಭಕ್ತಿಯೋಗೇನ ಸೇವತೇ, ಎಂಬಲ್ಲಿ ಈ ರೀತಿಯ ಸೇವೆಗೆ ಪ್ರಾಧಾನ್ಯತೆಯನ್ನು ಕೊಟ್ಟಿರುವುದನ್ನು ಗಮನಿಸಬೇಕು. ಇಂತಹ ಸಿದ್ಧನು ಮಾತ್ರ ಸಂಪೂರ್ಣ ಶ್ರದ್ಧೆಯಿಂದಲೂ, ದಕ್ಷತೆಯಿಂದಲೂ, ಸಮಾಜ ಸೇವೆಯನ್ನು ಚನ್ನಾಗಿ ಮಾಡಬಲ್ಲನು. ಸಾಧಕನು, ತಾನು ಮಾಡುವ ಪ್ರತಿಯೊಂದು ಕೆಲಸವೂ ಪರಮಾತ್ನ ಕೆಲಸ. ಸೇವೆ, ಎಂಬ ಭಾವವನ್ನಿಟ್ಟುಕೊಂಡು, ಅವುಗಳನ್ನು ಪ್ರೇಮದಿಂದ ಚೊಕ್ಕಟವಾಗಿ, ದಕ್ಷೆಯಿಂದ ಮಾಡಬೇಕು. ಅದರಲ್ಲಿ ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೇ, ಆ ಕರ್ಮವನ್ನು ಮಾಡುವ ಮೂಲಕ, ಪರಮಾತ್ಮನ ಸೇವೆಯನ್ನು ಮಾಡುವ ಆಸ್ಪದ ಸಿಕ್ಕಿದುದೇ ತನ್ನ ಭಾಗ್ಯ ಎಂದು ಭಾವಿಸಬೇಕು. ಹೀಗೆ ಕರ್ಮ ಮಾಡುವುದರಿಂದ ಮನಃಶಾಂತಿಯು ಲಭಿಸಿ, ಧ್ಯಾನವನ್ನು ಇನ್ನೂ ಹೆಚ್ಚು ಏಕಾಗ್ರತೆಯಿಂದ ದೀಘಕಾಲ ಮಾಡುವ ಸಾಮಥ್ರ್ಯವು ಲಭಿಸುತ್ತದೆ. ಇದರಿಂದ ತಮೋಗುಣ ರಜೋಗುಣಗಳು ಕಡಿಮೆಯಾಗಿ ಸತ್ವಗುಣವು ವೃದ್ಧಿಯಾಗುತ್ತದೆ. ಅದು ಈಗ ತಾನೇಬ್ರಹ್ಮನು ಎಂಬ ಜ್ಞಾನವನ್ನು ಪಡೆಯಲು, ಅದನ್ನು ಅನುಭವಿಸಲು ಅರ್ಹನಾಗುತ್ತಾನೆ.

ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ |
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ || 27 ||
ಅರ್ಥ :- ನಾಶರಹಿತವಾದ, ಬದಲಾವಣೆಯನ್ನು ಹೊಂದದ, ಶಾಶ್ವತವಾದ ಧರ್ಮದ, ಮತ್ತು ಪರಮ ಶಾಂತಿಗೆ ಸ್ಥಾನವಾದ ಬ್ರಹ್ಮನ ವಾಸಸ್ಥಾನವು ನಾನೇ ಸರಿ.
ಅನನ್ಯ ಭಕ್ತಿಯಿಂದ ಪರಮಾತ್ಮನ ಸೇವೆಯನ್ನು ಮಾಡುವುದರಿಂದ ಸಾಧಕನ ಅಹಂಕಾರವು ನಾಶವಾಗುತ್ತದೆ. ‘ಜೀವ’ನಿಂದ ಅಹಂಕಾರವನ್ನು ಕಳಚಿಬಿಟ್ಟರೆ ಉಳಿಯುವುದೇ ಪರಮಾತ್ಮ. (ಜೀವ-ಅಹಂಕಾರ= ಪರಮಾತ್ಮ). ಈಗ ಅವನು ತಾನೇ ತಾನಾಗುತ್ತಾನೆ. ಈ ಪರಬ್ರಹ್ಮ ಪದವು ನಾಶವಿಲ್ಲದುದೂ, ಶಾಶ್ವತವಾದುದೂ ಆಗಿದೆ. ಪಾತ್ರೆಯು ಇರುವವರೆಗೂ ಘಟಕಾಶ ಮತ್ತು ಹೊರಗಿನ ಆಕಾಶ ಎಂದು ಎರಡು ಬೇರೆಬೇರೆ ಆಕಾಶಗಳನ್ನು ಗುರುತಿಸುತ್ತೇವೆ. ಘಟ ಫಲವನ್ನು ಒಡೆದು ಹಾಕಿದರೆ ಇನ್ನು ಮುಂದೆ ಘಟಾಕಾಶವಿಲ್ಲ.
ಅದು ಹೊರಗಿನ ಆಕಾಶದೊಡನೆ ಸೇರಿ ಲೀನವಾಗುತ್ತದೆ. ಇದೇ ರೀತಿ ಅಹಂಕಾರವು ನಾಶವಾದರೆ, ಜೀವ ಮತ್ತು ಪರಮಾತ್ಮ ಇಬ್ಬರೂ ಒಂದೇ ಆಗಿಬಿಡುತ್ತಾರೆ. ಏಕೆಂದರೆ ಜೀವನು ಮೂಲತಃ ಪರಮಾತ್ಮನೇ ಆಗಿದ್ದು ಆಕಾಶಕ್ಕೆ ಘಟದ ಕವಚದಂತೆ, ಆವರಣದಂತೆ, ಅವನಿಗೆ ಅಹಂಕಾರದ ಕವಚವಿತ್ತು ಈ ಕವಚವು ಕಳಚಿದ ಕೂಡಲೇ ಅವನೇ ಅವನಾಗುತ್ತಾನೆ. ಶಂಕರಾಚಾರ್ಯರು ಜೀವ-ಪರಮಾತ್ಮರ ಸಂಬಂಧವನ್ನು ಈ ರೀತಿಯಾಗಿ ವರ್ಣಿಸಿದ್ದಾರೆ. ಬ್ರಹ್ಮನೇ ಪರಮಾತ್ಮನು. ಅವನು ಬದಲಾವಣೆಯನ್ನು ಹೊಂದದವನೂ, ನಾಶವಿಲ್ಲದವನೂ ಆಗಿದ್ದಾನೆ. ಅವನು ಆತ್ಮ (ಜೀವ) ಎಂಬ ನನ್ನಲ್ಲಿ ವಾಸವಾಗಿದ್ದಾನೆ (ಪ್ರತ್ಯಗಾತ್ಮ). ಸರಿಯಾದ ಜ್ಞಾನದಿಂದ ಜೀವ ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂದೂ, ಇವನು ಅಖಂಡವಾಗಿ ಇಡೀ ಪ್ರಪಂಚದಲ್ಲಿ ವ್ಯಾಪಿಸಿದ್ದಾನೆಂದೂ ತಿಳಿದುಕೊಳ್ಳಬೇಕು.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಗುಣತ್ರಯ ವಿಭಾಗಯೋಗೋನಾಮ…
ಚತುರ್ದಶೋ„ಧ್ಯಾಯಃ
*******