S O U L B L I S S

Loading

Bhagavad Gita – Vinayak Rao Bapat – Chapter 2

ಅಧ್ಯಾಯ – 2 ಸಾಂಖ್ಯಯೋಗ

ಸಂಜಯ ಉವಾಚ
ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್|

ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ || 2: 1 ||

ಅರ್ಥ : ಆ ರೀತಿ ಕನಿಕರದಿಂದ ಕೂಡಿ ಕಣ್ಣಿನಲ್ಲಿ ನೀರೂರಿ ದುಃಖದಿಂದ ಕೂಡಿದ ಅರ್ಜುನನಿಗೆ (ಮಧು ಎಂಬ ರಾಕ್ಷಸನನ್ನು ಕೊಂದ) ಕೃಷ್ಣನು (ಮಧುಸೂದನನು) ಈ ರೀತಿಯಾಗಿ ಹೇಳಿದನು.

ಈ ಅಧ್ಯಾಯದ ಪ್ರಾರಂಭದಲ್ಲಿ, ಆರಿಸಿದ ಕೆಲವೇ ಶಬ್ದಗಳಲ್ಲಿ, ಅರ್ಜುನನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವರ್ಣಿಸಲಾಗಿದೆ. ಅರ್ಜುನನು ತನ್ನ ಮನೋಧೈರ್ಯವನ್ನು ಕಳೆದುಕೊಂಡು, ದುಃಖದಿಂದ ಆವೃತನಾಗಿ ಸಂದರ್ಭದ ಹಿಡಿತಕ್ಕೆ ಸಿಕ್ಕಿಕೊಂಡಿದ್ದಾನೆ. ವೀರನಾದ ಅರ್ಜುನನು ಸಹ ಮನೋದೌರ್ಬಲ್ಯದಿಂದಾಗಿ ಪರಿಸ್ಥಿತಿಯ ದಾಸನಾಗಬೇಕಾಯಿತು ಅಂದರೆ ಎಂತಹ ಕಷ್ಟ ಪರಿಸ್ಥಿತಿಯೇ ಒದಗಲಿ, ನಮ್ಮ ಮನೋಧೈರ್ಯ ಹಾಗೂ ಶಾಂತತೆಯನ್ನು ಕಳೆದುಕೊಂಡರೆ ನಾವೂ ಸಹ ಅರ್ಜುನನಂತೆಯೇ ಆಗುತ್ತೇವೆ. ಅವನ ಮನಸ್ಸು ಕಳವಳದಿಂದ ಕ್ಷೋಭೆಗೊಂಡು ಸಾರಾಸಾರ ವಿವೇಚನಾಶಕ್ತಿಯನ್ನು ಕಳೆದುಕೊಂಡು ತನ್ನ ನಿಜವಾದ ಕರ್ತವ್ಯವನ್ನು ನಿರ್ಧರಿಸಲಾಗದೆ ಅವನನ್ನು ಕಾರ್ಯ ವಿಮುಖನನ್ನಾಗಿ ಮಾಡಿತು.

ಶ್ರೀಭಗವಾನ್ ಉವಾಚ
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ |
ಅನಾರ್ಯಜುಷ್ಟಮಸ್ವಗ್ರ್ಯಮಕೀರ್ತಿಕರಮರ್ಜುನ || 2 : 2 ||

ಶ್ರೀ ಭಗವಂತನು ಹೇಳುತ್ತಾನೆ
ಅರ್ಥ : ಇಂತಹ ಆಯಕಟ್ಟಿನ ಸಂದರ್ಭದಲ್ಲಿ ಆರ್ಯನಿಗೆ ಸಲ್ಲದ ಸ್ವರ್ಗಪ್ರಾಪ್ತಿಗೆ ಅಹಿತವಾದ, ಅಕೀರ್ತಿಕರವಾದ, ಇಂತಹ ಹೊಲಸು ವಿಚಾರವು ನಿನಗೆ ಎಲ್ಲಿಂದ ಬಂದಿತು ಅರ್ಜುನ ?
ಆರ್ಯರ Àಲ್ಲಿ ಶ್ರೇಷ್ಠನೂ, ಧೀರನೂ, ಸದ್ಗುಣಿಯೂ ಆದ ಅರ್ಜುನನಲ್ಲಿ ಇಂತಹ ದೌರ್ಬಲ್ಯವನ್ನು ಕಂಡು ಶ್ರೀಕೃಷ್ಣನು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ ಈ ಪ್ರಶ್ನೆಯನ್ನು ಕೇಳಿದ್ದಾನೆ.

ಕ್ಲೈಬ್ಯಂ ಮಾ ಸ್ಮಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ || 3 ||
ಅರ್ಥ : ಪಾರ್ಥನೇ, ನಿನ್ನ ಈ ಮಾತಿನ ಷಂಢತ್ವವನ್ನು ಕೊಡವಿಹಾಕು. ಇದು ನಿನಗೆ ಯೋಗ್ಯವ¯್ಲ. ಕ್ಷುಲ್ಲಕವಾದ ಈ ಹೃದಯ ದೌರ್ಬಲ್ಯವನ್ನು ಕಿತ್ತುಬಿಸಾಡು. ಶತ್ರುಗಳನ್ನು ಪರಿತಪಿಸುವವನೇ ಎದ್ದೇಳು. ಇದುವರೆವಿಗೂ ಮೌನದಿಂದಿದ್ದ ಕೃಷ್ಣನು, ಮಾನಸಿಕ ದೌರ್ಬಲ್ಯ (ರೋಗ) ಕ್ಕೊಳಗಾದ ತನ್ನ ಪ್ರಿಯಶಿಷ್ಯನನ್ನು ರೋಗಮುಕ್ತನನ್ನಾಗಿ ಮಾಡಿ, ಕಾರ್ಯಪ್ರವೃತ್ತನನ್ನಾಗಿ ಮಾಡುವ ಉದ್ದೇಶದಿಂದ ರೋಗಪರಿಹಾರಕ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾನೆ. ಈ ಶ್ಲೋಕ ಮತ್ತು ಮುಂದಿನ ಶ್ಲೋಕಗಳಲ್ಲಿ ಆರಿಸಿದ ಹಾಗೂ ಪರಿಣಾಮಕರವಾದ ತೀವ್ರ ಶಬ್ದಗಳನ್ನು ಉಪಯೋಗಿಸಿದ್ದಾನೆ.

ಅರ್ಜುನನ ಇದುವರೆಗಿನ ವಾದವನ್ನು ಕೇಳುತ್ತಾ ಶ್ರೀಕೃಷ್ಣನು ಮೌನವಾಗಿದ್ದನು. ಅವನ ವಾದವು ಮುಗಿದು, ಅವನು ತನ್ನ ದೌರ್ಬಲ್ಯವನ್ನು ತಾನೇ ಮನಗಂಡು, ಮುಂದೆ ಏನು ಮಾಡಬೇಕೆಂದು ದಾರಿಕಾಣದೆ ದುಃಖದಿಂದ ಕಣ್ಣೀರನ್ನು ಸುರಿಸುತ್ತಾ ಶರಣಾಗತನಾದ ಕೂಡಲೇ ಶ್ರೀಕೃಷ್ಣನು ಕನಿಕರದಿಂದ ಅವನ ಸಹಾಯಕ್ಕೆ ಬಂದನು. ಅಲ್ಲಿಯವರೆಗೂ ಮೌನವಾಗಿಯೇ ಇದ್ದನು. ವ್ಯವಹಾರದಲ್ಲಿ ಸಹ ನಾವು ನಮ್ಮ ಬುದ್ಧಿವಂತಿಕೆಯ ಅಹಂಕಾರದಿಂದ ವಾದಮಾಡುತ್ತಿರುವವರೆಗೂ ಪರಮಾತ್ಮನು ಮೌನದಿಂದ ನೋಡುತ್ತಿರುತ್ತಾನೆ. ವಾದವು ಶಾಂತವಾಗಿ, ಅಂತಃಕರಣವು ಕರಗಿ ಮೃದುವಾದ ಕೂಡಲೇ, ಅವನು ನಮ್ಮ ಸಹಾಯಕ್ಕೆ ನಾವು ಕೇಳಿದೆಯೇ, ತಾನಾಗಿಯೇ ಧಾವಿಸಿ ಬರುತ್ತಾನೆ.
ಅರ್ಜುನ ಉವಾಚ
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ || 4 ||
ಅರ್ಥ : ಮಧುಸೂದನನೇ, ಪೂಜೆಗೆ ಅರ್ಹರಾದ ದ್ರೋಣ ಹಾಗೂ ಭೀಷ್ಮ ಇವರ ಮೇಲೆ ಹೇಗೆ ತಾನೇ ಬಾಣ ಪ್ರಯೋಗ ಮಾಡಿ ಯುದ್ಧಮಾಡಲಿ.
ಕೃಷ್ಣನ ಬಿರುಸು ಶಬ್ದಗಳು ಅರ್ಜುನನ ಮೇಲೆ ಸ್ವಲ್ಪ ಪರಿಣಾಮವನ್ನುಂಟು ಮಾಡಿದರೂ. ಅವನು ಯುದ್ಧಮಾಡಲು ಇನ್ನೂ ತಯಾರಾಗಿರಲಿಲ್ಲ. ಅವನು ಪುನಃ ತನ್ನ ವಾದವನ್ನು ಮುಂದುವರಿಸಿದ್ದಾನೆ.

ಗುರೂನಹತ್ವಾಹಿ ಮಹಾನುಭಾವಾನ್ ಶ್ರೇಯೋ
ಭೋಕ್ತುಂ ಭೈಕ್ಷ್ಯಮಪೀಹ ಲೋಕೇ
ಹತ್ವಾರ್ಥಕಾಮಾಂಸ್ತು ಗುರೂನಿಹೈವ
ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ || 5 ||
ಅರ್ಥ : ನನ್ನ ಗುರುಗಳನ್ನು ಯುದ್ಧದಲ್ಲಿ ಕೊಂದು ಬದುಕಿರುವುದಕ್ಕಿಂತ ಯುದ್ಧದಿಂದ ಹಿಮ್ಮೆಟ್ಟಿ, ಭಿಕ್ಷೆ ಬೇಡಿಕೊಂಡು ಜೀವಿಸುವುದು ಶ್ರೇಷ್ಠವಾದುದು. ಒಂದು ವೇಳೆ ನಾನು ಅವರನ್ನು ಕೊಂದರೆ, ಅನಂತರ ನಾನು ಅನುಭೋಗಿಸುವ ಸುಖ ಸಂಪತ್ತುಗಳು ರಕ್ತದ ಕಲೆಗಳಿಂದ ಕೂಡಿದವುಗಳಾಗಿರುತ್ತವೆ.
ನಮ್ಮ ಮನಸ್ಸು ಹಾಗೂ ಬುದ್ಧಿ ಒಮ್ಮೆ ಕಲುಷಿತವಾದರೆ ಆ ಧೋರಣೆಗೆ ಅನುಕೂಲವಾದ ವಾದವನ್ನು ಹೇಗೆ ಮುಂದೂಡುತ್ತೇವೆ ಎಂಬುದನ್ನು ವ್ಯಾಸರು ಈ ಮೂಲಕ ಸುಂದರವಾಗಿ ಚಿತ್ರಿಸಿದ್ದಾರೆ.

ನ ಚೈತದ್ವಿದ್ಮಃ ಕತರನ್ನೋ ಗರೀಯೋ
ಯದ್ವಾಜಯೇಮ ಯದಿ ವಾ ನೋ ಜಯೇಯುಃ |
ಯಾನೇನ ಹತ್ವಾನ ಜಿಜೀವಿಷಾಮ-
ಸ್ತೇ„ವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ || 6 ||

ಅರ್ಥ : ನಾವು ಅವರನ್ನು ಗೆಲ್ಲುವುದು ಶ್ರೇಷ್ಠವೋ, ಅಥವಾ ಅವರು ನಮ್ಮನ್ನು ಗೆಲ್ಲುವುದು ಶ್ರೇಷ್ಠವೋ ಅದು ನನಗೆ ತಿಳಿಯದಾಗಿದೆ. ಏಕೆಂದರೆ ಯಾರನ್ನು ಕೊಂದರೆ ನಾನು ಸುಖದಿಂದ ಬದುಕುರಲಾರೆವೋ, ಅಂತಹ ಧೃತರಾಷ್ಟ್ರನ ಮಕ್ಕಳು ನಮ್ಮೆದುರಿಗೆ ಯುದ್ಧಕ್ಕೆ ಬಂದು ನಿಂತಿದ್ದಾರೆ.

ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಂಮೂಢಚೇತಾಃ |
ಯಚ್ಛ್ರೇಯಃ ಸ್ಯಾನ್ನಿಶ್ಚಿತಮ್ ಬ್ರೂಹಿ ತನ್ಮೇ
ಶಿಷ್ಯಸ್ತೇ„ಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ || 7 ||
ಅಥ : ನನ್ನ ಹೃದಯವು ಕನಿಕರದಿಂದ ತುಂಬಿ ಉಕ್ಕುತ್ತದೆ. ನನ್ನ ಮನಸ್ಸು ಭ್ರಾಂತಿಗೊಳಗಾಗಿರುವುದರಿಂದ ಧರ್ಮಾಧರ್ಮದ ನಿಶ್ಚಯವನ್ನು ಮಾಡಲಾರದನಾಗಿದ್ದಾನೆ. ನನಗೆ ಯಾವುದು ಶ್ರೇಯಸ್ಕರ ಎಂಬುದನ್ನು ತಿಳಿಸು. ನಿನ್ನ ಶಿಷ್ಯನಾದ ನಾನು ನಿನ್ನಲ್ಲಿ ಶರಣಾಗತನಾಗಿ ಈ ವಿಷಯವನ್ನು ಬೇಡಿಕೊಳ್ಳುತ್ತಿದ್ದೇನೆ.
ಈಗ ಅರ್ಜುನನು ಮಾನಸಿಕ ದೌರ್ಬಲ್ಯದಿಂದಾಗಿ ತಾನು ಏನು ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗದಂತಹ ತನ್ನ ಅಸಮರ್ಥತೆಯನ್ನು ಮನಗಂಡು ಕೃಷ್ಣನಿಗೆ ಶರಣಾಗತನಾಗಿದ್ದಾನೆ. ತನ್ನ ಮಾನಸಿಕ ವಿಕಾರದ ಕಾರಣವು, ದಮನ ಮಾಡಲಶಕ್ಯವಾದಂತಹ ಅನುಕಂಪ ಎಂಬುದನ್ನೂ ಕಂಡುಕೊಂಡಿದ್ದಾನೆ. ಆದರೆ ಈ ಅನುಕಂಪವು ಅಯೋಗ್ಯ ಸ್ಥಳದಲ್ಲಿ ತೋರಿಸಲ್ಪಡುತ್ತಿದೆ ಎಂಬುದನ್ನು ತಿಳಿಯಲಾರದವನಾಗಿದ್ದಾನೆ. ಹೀಗೆ ಅರ್ಜುನನು ಮಾನಸಿಕವಾಗಿ ಜರ್ಝರಿತನಾಗಿ ಕಂಗಾಣದೆ ಶ್ರೀಕೃಷ್ಣನಿಗೆ ಶರಣಾಗತನಾಗಿದ್ದಾನೆ.

ನ ಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ |
ಅವಾಪ್ಯ ಭೂಮಾವಸಪತ್ನಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ || 8 ||
ಅರ್ಥ : ನನ್ನ ಇಂದ್ರಿಯಗಳನ್ನು ಸುಡುತ್ತಿರುವ ಈ ದುಃಖವು, ಭೂಮಂಡಲದ ಸ್ವಾಮಿತ್ವವನ್ನು ಪಡೆಯುವುದರಿಂದಾಗಲೀ, ಅಥವಾ ದೇವಲೋಕದ ಒಡೆತನವನ್ನು ಹೊಂದುವುದರಿಂದಾಗಲೀ ಶಮನವಾಗುವುದೆಂದು ನಾನು ತಿಳಿಯುವುದಿಲ್ಲ.
ಮಾನಸಿಕ ಅಶಾಂತತೆಯಿಂದಾಗಿ ಅರ್ಜುನನ ಇಂದ್ರಿಯಗಳು ಸಹ ದುರ್ಬಲವಾಗಿವೆ. ತನ್ನ ಈ ದುಃಖವು ಶತ್ರುಗಳನ್ನು ಜಯಿಸುವುದರಿಂದ ಇಲ್ಲವೇ ಸರ್ವಲೋಕದ ಸ್ವಾಮಿತ್ವವನ್ನು ಪಡೆಯುವುದರಿಂದ ಶಮನವಾಗುವುದಿಲ್ಲವೆಂದು ಅವನೇ ಹೇಳುತ್ತಿದ್ದಾನೆ. ಅವನಲ್ಲಿ ಸಾರಾಸಾರ ವಿವೇಕ ಶಕ್ತಿಯು ನಾಶವಾಗಿರುವುದರಿಂದ ಅವನು ತನ್ನ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಲಾರದವನಾಗಿದ್ದಾನೆ.

ಸಂಜಯ ಉವಾಚ
ಏವಮುಕ್ತಾ ಹೃಷಿಕೇಶಂ ಗುಡಾಕೇಶಃ ಪರಂತಪ |
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾತೋಷ್ಣೀಂ ಬಭೂವ ಹ || 9 ||
ಅರ್ಥ : ಅರ್ಜುನನು ಕೃಷ್ಣನಿಗೆ ಈ ರೀತಿಯಾಗಿ ಹೇಳಿ, “ನಾನು ಯುದ್ಧಮಾಡುವುದಿಲ್ಲ” ಎಂದು ಸುಮ್ಮನಾಗುಳಿದನು.

ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ |
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ || 10 ||
ಅರ್ಥ : ಎರಡೂ ಸೇನೆಗಳ ಮಧ್ಯದಲ್ಲಿ ನಿರ್ವಿಣ್ಣನಾಗಿ ಕುಳಿತ ಅರ್ಜುನನ್ನು ಉದ್ಧೇಶಿಸಿ, ಶ್ರೀಕೃಷ್ಣನು ಮುಗುಳುನಗೆ ನಗುತ್ತಾ ಈ ರೀತಿಯಾಗಿ ಹೇಳಿದನು.

ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ || 11 ||
ಅರ್ಥ : ಯಾರಿಗಾಗಿ ಅಥವಾ ಯಾವ ವಿಷಯಕ್ಕಾಗಿ ದುಃಖಪಡಬಾರದೋ, ಅಂತಹದಕ್ಕೆ ದುಃಖಿಸುತ್ತಿದ್ದೀಯೆ. ಮೇಲಾಗಿ ಬುದ್ಧಿವಂತನಂತೆ ಮಾತನಾಡುತ್ತೀದ್ದೀಯೆ. ಬುದ್ಧಿವಂತನಾದವನು, ಸತ್ತವರಿಗಾಗಿ ದುಃಖಿಸುವುದಿಲ್ಲ. ಇನ್ನೂ ಸಾಯದೆ ಬದುಕಿರುವವರಿಗಂತೂ ದುಃಖಿಸುವುದೇ ಇಲ್ಲ.
ಗೀತೆಯ ಉಪದೇಶವು ಈ ಶ್ಲೋಕದಿಂದ ಪ್ರಾರಂಭವಾಗುತ್ತದೆ. ಮಾನಸಿಕ ದೌರ್ಬಲ್ಯ (ರೋಗ) ಕ್ಕೊಳಗಾದ ಅರ್ಜುನನಿಗೆ ಪುನಃ ಚೈತನ್ಯವನ್ನು ಕೊಟ್ಟು, ಅವನು ತನ್ನ ಧರ್ಮಕ್ಕನುಗುಣವಾದ ಕರ್ಮಗಳನ್ನು ಮಾಡುವಂತೆ ಸಜ್ಜುಗೊಳಿಸಲು, ಅವನಿಗೆ ಆಧ್ಯಾತ್ಮಿಕ ಉಪದೇಶ ಮಾಡುವುದೊಂದೇ ದಾರಿ ಎಂದು ನಿಶ್ಚಯಿಸಿ ಶ್ರೀಕೃಷ್ಣನು ಉಪದೇಶವನ್ನು ಪ್ರಾರಂಭಿಸಿದ್ದಾನೆ. ದಕ್ಷನಾದ ವೈದ್ಯನು ಹೊರಗಿನ ಲಕ್ಷಣಗಳಿಂದ ರೋಗದ ಮೂಲಕಾರಣವನ್ನು ಕಂಡುಹಿಡಿದು ಚಿಕಿತ್ಸೆ ಮಾಡುವಂತೆ, ಕೃಷ್ಣನು ಸಹ ಅರ್ಜುನನ ರೋಗದ ಮೂಲ ಕಾರಣವು ಅವನು ಎದುರಿಸಬೇಕಾಗಿದ್ದ ಯುದ್ಧವಲ್ಲವೆಂದೂ, ಅದು ಬೇರೆಯೇ ಇದೆ ಎಂದೂ ನಿರ್ಧರಿಸಿದ್ದಾನೆ.
“ನಾನು “ನನ್ನದು’ ಎಂಬ ಅಹಂಕಾರವು ಮನುಷ್ಯನ ಬುದ್ಧಿಶಕ್ತಿಯನ್ನು ಮಂಕುಗೊಳಿಸಿ “ತಾನು ಆತ್ಮನಿಗಿಂತ ಭಿನ್ನನು ಮತ್ತು ಶರೀರ ಮನಸ್ಸು, ಬುದ್ಧಿಗಳಿಂದ ನಿರ್ಬಂಧಿತನಾದವನು” ಎಂಬ ಅಜ್ಞಾನಕ್ಕೆ ಒಳಪಡುವಂತೆ ಮಾಡುತ್ತದೆ. ಅರ್ಜುನನಿಗೆ ಸಹ ಈ ತರಹದ ದೌರ್ಬಲ್ಯವುಂಟಾಗಿದೆ. ‘ತಾನು ಯುದ್ಧಮಾಡುವವನು, ತಾನು ತನ್ನ ಗುರುಗಳು, ಬಂಧುಗಳು, ಮೊದಲಾದವರನ್ನು ಕೊಲ್ಲುವವನು” ಎಂಬ ಅಹಂಕಾರವು ಅವನನ್ನು ಆವರಿಸಿದೆ, ಅವನನ್ನು ಈ ರೀತಿಯ ಷಂಢತನಕ್ಕೆ ಗುರಿಮಾಡಿದೆ. ಇಂತಹ ಅಜ್ಞಾನ ಮತ್ತು ಕರ್ಮಬಾಹಿರತೆಯಿಂದ ಬಿಡುಗಡೆ ಹೊಂದುವುದೆಂದರೆ, “ನಾನು ಎಂದರೆ ಈ ಶರೀರವಲ್ಲ. ಮನಸ್ಸು ಅ¯್ಲ. ಬುದ್ಧಿಯೂ ಅಲ್ಲ. ಇವೆಲ್ಲವುಗಳಿಗಿಂತಲೂ ಮೇಲಿರುವ, ಇವೆಲ್ಲಕ್ಕೂ ಚೇತನವನ್ನು ಕೊಡುವ ಪರವಸ್ತುವೇ ನಾನಾಗಿದ್ದೇನೆ,” ಎಂಬ ಸತ್ಯಾಂಶವನ್ನು ತಿಳಿದುಕೊಳ್ಳುವುದೇ ಆಗಿದೆ. ಆದುದರಿಂದ ಶ್ರೀಕೃಷ್ಣನು ಎಲ್ಲಾ ಉಪನಿಷತ್ತುಗಳ ಸಾರವಾದ ಈ ಉಪದೇಶವನ್ನು ಅರ್ಜುನನಿಗೆ ಬೋಧಿಸಲು ಪ್ರಾರಂಭಿಸಿದ್ದಾನೆ .
“ಯಾರಿಗೋಸ್ಕರವಾಗಿ ದುಃಖಿಸಬಾರದೋ ಅಂತಹವರಿಗಾಗಿ ದುಃಖಿಸುತ್ತೀಯೆ” ಎಂದು ಕೃಷ್ಣನು ಪ್ರಾರಂಭಿಸಿದ್ದಾನೆ. ಶಾರೀರಿಕ, ಮಾನಸಿಕ, ಬೌದ್ಧಿಕ ದೃಷ್ಟಿಯಿಂದ ನಮ್ಮ ಕಣ್ಣೆದುರಿಗೆ ಕಾಣುವ ಸಜೀವ, ನಿರ್ಜೀವ ವಸ್ತುಗಳೆಲ್ಲವೂ ನಮಗೆ ಭಿನ್ನ ಭಿನ್ನವಾಗಿ ಕಾಣುತ್ತವೆ, ಹಾಗೂ ನಮ್ಮಲ್ಲಿ ಭಿನ್ನ ಭಿನ್ನ ಪರಿಣಾಮವನ್ನುಂಟು ಮಾಡುತ್ತವೆ. ಶರೀರ ದೃಷ್ಟಿಯಿಂದ ನನ್ನ ಕಣ್ಣೆದುರಿಗೆ ಕಾಣುವ ಸ್ತ್ರೀರೂಪವು ಮಾನಸಿಕ ದೃಷ್ಟಿಯಿಂದ ನನ್ನ ತಾಯಿಯಾಗಿರಬಹುದು. ಬೌದ್ಧಿಕ ದೃಷ್ಟಿಯಿಂದ ವಿಚಾರ ಮಾಡಿದರೆ ಅದು ಅಸ್ಥಿಮಾಂಸಾದಿಗಳಿಂದ ಕೂಡಿದ, ಹಾಗೂ ಮಧ್ಯದಲ್ಲಿ ಅಣುಕೇಂದ್ರವುಳ್ಳ ಕಣಗಳ ಸಮೂಹವಾಗಿದೆ. ಶಾರೀರ ದೃಷ್ಟಿಯಿಂದ ಆಕರ್ಷಕವಾಗದಿರುವ ರೂಪವು ನನ್ನ ಮಾನಸಿಕ ಮೆಚ್ಚುಗೆಯನ್ನು ಪಡೆದರೆ, ಶಾರೀರಿಕ ದೋಷಗಳು ನನಗೆ ಯಾವ ತರಹದ ದ್ವೇಷವನ್ನು ಉಂಟುಮಾಡಲಾರವು. ಇದೇ ರೀತಿಯಾಗಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಮೆಚ್ಚುಗೆಯಾಗದಿರುವ ರೂಪವು ನನ್ನ ಬೌದ್ಧಿಕ ಮೆಚ್ಚುಗೆಯನ್ನು ಪಡೆದರೆ ಆಗ ಸಹ ಅದು ನನಗೆ ದ್ವೇಷವನ್ನೂ , ದುಃಖವನ್ನೂ ಉಂಟುಮಾಡಲಾರದು. ಅಂದರೆ ಶರೀರಕ್ಕಿಂತ ಮನಸ್ಸು ಹಿರಿದು, ಮನಸ್ಸಿಗಿಂತ ಬುದ್ಧಿ ಹಿರಿದು ಎಂದು ತಿಳಿದುಕೊಳ್ಳಬೇಕು. ಹೀಗೆಯೇ ಶಾರೀರಿಕ, ಮಾನಸಿಕ ಬೌದ್ಧಿಕ ದೃಷ್ಟಿಗಳಿಂದ ನನ್ನನ್ನು ಆಕರ್ಷಿಸಲಾಗದ, ಹಾಗೂ ನನ್ನಲ್ಲಿ ದ್ವೇಷವನ್ನು ಹುಟ್ಟಿಸದ ವಸ್ತುವನ್ನು ನಾನು ಆಧ್ಯಾತ್ಮಿಕ ದೃಷ್ಟಿಯಿಂದ ಪ್ರೀತಿಸಿದರೆ ಅದೇ ವಸ್ತುವು ನನಗೆ ಮಹದಾನಂದವನ್ನುಂಟುಮಾಡಬಹುದು. ಈ ಹಿನ್ನಲೆಯ ಮೇಲೆ ಅರ್ಜುನನು ತನ್ನ ಗುರುಗಳು, ಹಿರಿಯರು, ಸಂಬಧಿಕರು ಮೊದಲಾದವರನ್ನು ಶಾರೀರಿಕ, ಮಾನಸಿಕ, ಬೌದ್ಧಿಕ ದೃಷ್ಟಿಗಳಿಂದ ನೋಡದೆ ಆಧ್ಯಾತ್ಮಿಕ ದೃಷ್ಟಿಯಿಂದ ಕಾಣಬೇಕಾಗಿದೆ. ಅವರಿಂದಾಗಿ ಏಕೆ ದುಃಖಿಸಬಾರದು ? ಏಕೆಂದರೆ ಅವರು ಮರಣರಹಿತರು.

ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ |
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ || 12 ||
ಅರ್ಥ : ನಾನಾಗಲೀ, ನೀನಾಗಲೀ ಈ ರಾಜರುಗಳಾಗಲೀ ಹಿಂದೆ ಇರಲಿಲ್ಲವೆಂಬಂತಿಲ್ಲ. ಮುಂದೆ ಇರುವುದಿಲ್ಲವೆಂಬುಂತೆಯೂ ಇಲ್ಲ. ಅಂದರೆ ನಾವೆಲ್ಲರೂ ಹಿಂದೆಯೂ ಇದ್ದೆವು, ಮುಂದೆಯೂ ಇರುತ್ತೇವೆ. ಈಗಲಂತೂ ಇದ್ದೇ ಇದ್ದೇವೆ.
ಆತ್ಮವಸ್ತುವು ಹಿಂದೆ, ಇಂದು ಮತ್ತು ಮುಂದೆ ಯಾವಾಗಲೂ ಒಂದೇ ಅಖಂಡ ತತ್ವವಾಗಿದೆ, ಎಂಬುದನ್ನು ಇಲ್ಲಿ ಹೇಳಲಾಗಿದೆ. ಶರೀರಧಾರಿಯಾದ ಜೀವನು ತನ್ನ ಯಾತ್ರೆಯನ್ನು ಪ್ರಾರಂಭಿಸಿದ್ದಾನೆ. ನಿರ್ದಿಷ್ಟವಾದ ವಿವಿಧ ಭೋಗಗಳನ್ನು ಅನುಭವಿಸುವುದಕ್ಕಾಗಿ ಹಾಗೂ ವಿವಿಧ ಅನುಭವಗಳನ್ನು ಪಡೆಯುವುದಕ್ಕಾಗಿ ಈ ಯಾತ್ರೆಯ ಕಾಲದಲ್ಲಿ ಅವನು ಅನುಗುಣವಾದ ಬೇರೆ ಬೇರೆ ಶರೀರಗಳನ್ನು ಧರಿಸಿ, ಬೇರೆ ಬೇರೆ ರೂಪ ಅಥವಾ ಹೆಸರಿನಿಂದ ಗುರುತಿಸಲ್ಪಡುತ್ತಾನೆ. ಒಂದು ಶರೀರದಿಂದ ಪಡೆಯಬೇಕಾದ ಅನುಭವವು ಭೋಗಿಸಿ ಮುಗಿದ ನಂತರ, ಬೇರೆತರಹದ ಶರೀರವನ್ನು ಪಡೆಯುತ್ತಾನೆ. ಹೀಗೆ ಅವನ ಯಾತ್ರೆಯು ಅಖಂಡವಾಗಿರುವುದರಿಂದ ಜೀವನು ಒಂದು ಶರೀರವನ್ನು ಬಿಟ್ಟು ಹೋದ ಮಾತ್ರಕ್ಕೆ ಅವನು ನಾಶವಾದನು ಎಂದು ತಿಳಿಯುವುದು ತಪ್ಪು. ಅರ್ಜುನನಿಗೆ ಇದು ಅರ್ಥವಾಗಲಿಲ್ಲ. ಆದುದರಿಂದ ಅದನ್ನು ಮುಂದೆ ಇನ್ನೂ ವಿವರಿಸಲಾಗಿದೆ.

ದೇಹಿನೋ„ಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ || 13 ||
ಅರ್ಥ : ಮನುಷ್ಯನು ಜೀವಿಸಿರುವಾಗ ಕೌಮಾರ್ಯ, ಯೌವನ, ವಾರ್ಧಿಕ್ಯ ಎಂಬ ಅವಸ್ಥೆಗಳನ್ನು ಅನುಭವಿಸುವಂತೆ ಜೀವಿಯು ಈ ದೇಹವನ್ನು ಬಿಟ್ಟು ಬೇರೆ ದೇಹವನ್ನು ಸ್ವೀಕರಿಸುವ ಅವಸ್ಥೆಯೂ ಇದೆ. ಇದು ಸ್ವಾಭಾವಿಕವಾದುದರಿಂದ ಇದಕ್ಕಾಗಿ ಧೀರನಾದವನು ದುಃಖಿಸಬಾರದು.
ಮನುಷ್ಯನು ವೃದ್ಧನಾಗಿರುವಾಗ ತನ್ನ ಬಾಲ್ಯದ ಹಾಗೂ ಯೌವನದ ಘಟನೆಗಳನ್ನು ಜ್ಞಾಪಿಸಿಕೊಳ್ಳುª ಜ್ಞಾಪಿಸಿಕೊಳ್ಳುªದು ಸಾಧ್ಯವಿದೆ. ಏಕೆಂದರೆ ಅವನೇ ಸ್ವತಃ ಆಯಾಯಾ ಅವಸ್ಥೆಗಳಲ್ಲಿ ಆಯಾಯಾ ಘಟನೆಗಳನ್ನು ಅನುಭವಿಸಿದ್ದಾನೆ. ಇದು ಮನುಷ್ಯನ ಅಭಿವೃದ್ಧಿ ಹಾಗೂ ಬೆಳೆವಣಿಗೆಯಲ್ಲಿ ಸ್ವಾಭಾವಿಕವಾದುದು. ಈ ರೀತಿಯ ಬೆಳೆವಣಿಗೆಯ ಪರಂಪರೆಯಲ್ಲಿ, ಪ್ರಾಯವು ಬರುವಾಗ ಬಾಲ್ಯವು ನಾಶವಾಗಲೇಬೇಕು, ವಾರ್ಧಿಕ್ಯ ಬರುವಾಗ ಪ್ರಾಯವು ನಾಶವಾಗಬೇಕು. ವಾರ್ಧಿಕ್ಯ ಬಂದಾಗ ಆ ಮನುಷ್ಯನಲ್ಲಿ ಬಾಲ್ಯವಾಗಲೀ, ಯೌವನವಾಗಲೀ ಇರುವುದಿಲ್ಲ ಎಂಬುದು ಸ್ವತಃ ಸಿದ್ಧವಾದ ವಿಚಾರ. ಈ ತತ್ವದ ಹಿನ್ನಲೆಯಲ್ಲಿ ಸ್ಪಷ್ಟವಾಗುವುದೇನೆಂದರೆ ಬಾಲ್ಯ, ಯೌವನ, ವಾರ್ಧಿಕ್ಯ ಈ ಮೂರು ಅವಸ್ಥೆಗಳಲ್ಲಿಯೂ ಯಾವುದೋ ಒಂದು ವಸ್ತುವು ಅಖಂಡವಾಗಿ ಜಾಗ್ರತವಾಗಿದ್ದು, ಈ ಎಲ್ಲಾ ಅನುಭವಗಳನ್ನೂ ಹೊಂದಿ ಅವುಗಳನ್ನು ಜ್ಞಾಪಕದಲ್ಲಿಟ್ಟುಕೊಂಡಿದೆ. ಈ ವಿವಿಧ ಅವಸ್ಥೆ ಅಥವಾ ಬದಲಾವಣೆಗಳು ಶರೀರದಲ್ಲಿ ಕಂಡ ವ್ಯತ್ಯಾಸಗಳೇ ಹೊರತು ಅಖಂಡವಾದ ಆ ‘ವಸ್ತು’ವಿನಲ್ಲಿಲ್ಲ. ಈ ವಸ್ತುವಿಗೆ ದೇಹೀ ಅಥವಾ ಜೀವ ಎಂದು ಹೆಸರು.
ಬಾಲ್ಯವು ಹೋಗಿ ಪ್ರಾಯವು ಬಂದಾಗ್ಯೆ ಬಾಲ್ಯವು ನಾಶವಾಯಿತೆಂದೂ, ಪ್ರಾಯವು ಹುಟ್ಟಿತೆಂದೂ ತಿಳಿಯಬೇಕು. ಸದಾಕಾಲ ಬಾಲ್ಯವೇ ಇರಲು ಸಾಧ್ಯವಿಲ್ಲ. ಇದೇ ರೀತಿ ಪ್ರಾಯವು ನಾಶವಾಗಿ ವಾರ್ಧಿಕ್ಯ ಬರುತ್ತದೆ. ಈ ಬದಲಾವಣೆಯಿಂದ ನಾವಾರೂ ದುಃಖಪಡುವುದಿಲ್ಲ. ಆದರೆ ‘ನನಗೆ ಇನ್ನೂ ದೊಡ್ಡಸ್ತಿಕೆ ಬಂದಿತು. ಹೆಚ್ಚು ಅನುಭವವು ಸಿಕ್ಕಿತು ಎಂದು ಸಂತೋಷಪಡುತ್ತೇವೆ. ಬಾಲ್ಯ, ಯೌವನ, ವಾರ್ಧಿಕ್ಯಗಳು ಇದೇ ಶರೀರದಲ್ಲುಂಟಾಗುವ ಬದಲಾವಣೆಗಳು. ಜೀವನಿಗೆ ಈ ಶರೀರದ ಅನುಭವಿಸಬೇಕಾದ ಸುಖದುಃಖಗಳೆಲ್ಲವೂ ಮುಗಿದ ಮೇಲೆ ಆತನು ಈ ಶರೀರವನ್ನು ಬಿಸುಟಿ ಹಾಕಿ ಬೇರೆ ಶರೀರವನ್ನು ಪಡೆಯುತ್ತಾನೆ. ಆದುದರಿಂದ ಈ ಅವಸ್ಥಾ ವಿಶೇಷಕ್ಕಾಗಿ ಅಂದರೆ ಸ್ವಾಭಾವಿಕ ಬದಲಾವಣೆಗಾಗಿ ಯಾರೂ ದುಃಖಪಡಕೂಡದು ಎಂದು ಶ್ರೀಕೃಷ್ಣನು ಹೇಳಿದ್ದಾನೆ. ಜೀವನು ಈ ಶರೀರವನ್ನು ಬಿಟ್ಟು ಬೇರೆ ಶರೀರವನ್ನು ಪಡೆಯುವಾಗ ಕೇವಲ ಶರೀರವಷ್ಟೇ ನಾಶವಾಗುತ್ತದೆಯೇ ಹೊರತು ಜೀವನ ನಾಶವಾಗುವುದಿಲ್ಲ. ಅವನು ಹಿಂದಿನ ಶರೀರದಲ್ಲಿ ಪಡೆದ ಸಂಸ್ಕಾರಗಳಿಗನುಸಾರವಾಗಿ ಬೇರೆ ಬೇರೆ ಶರೀರಗಳನ್ನು ಧರಿಸಿ ಸುಖ ದುಃಖಗಳನ್ನು ಭೋಗಿಸುತ್ತಾರೆ.
ಈ ಶರೀರವನ್ನು ಬಿಟ್ಟು ಹೋಗುವಾಗ ‘ಜೀವ’ನಿಗೆ ದುಃಖವಾಗುವುದಿಲ್ಲವಾದರೆ ಆತನು ಶರೀರಧಾರಿಯಾಗಿರುವಾಗ ಶೀತ- ಉಷ್ಣ, ಸುಖ-ದುಃಖ ಮೊದಲಾದ ದ್ವಂದ್ವಗಳಿಂದ ಪೀಡಿತನಾಗುವುದು ಏಕೆ? ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀಕೃಷ್ಣನು ಹೇಳುತ್ತಾನೆ.

ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಕದುಃಖದಾಃ |
ಆಗಮಾಪಾಯಿನೋ„ನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ || 14 ||
ಅರ್ಥ : ಇಂದ್ರಿಯಗಳು ಇಂದ್ರಿಯವಿಷಯಗಳೊಡನೆ ಸಂಪರ್ಕ ಹೊಂದುವುದರಿಂದ ಉಂಟಾಗುವ ಶೀತ-ಉಷ್ಣ , ಸುಖ – ದುಃಖ, ಮೊದಲಾದವುಗಳು ಸ್ಥಿರವಾದವುಗಳಲ್ಲ. ಬರುತ್ತವೆ ಹಾಗೂ ಹೋಗುತ್ತವೆ. ಆದುದರಿಂದ ಅರ್ಜುನನೇ ಅವುಗಳನ್ನು ನೀನು ಸಹಿಸಿಕೊಳ್ಳಬೇಕು.
ವೇದಾಂತದ ಸಿದ್ಧಾಂತಕ್ಕನುಸಾರವಾಗಿ ವಸ್ತುಗಳ ಜ್ಞಾನವು ಇಂದ್ರಿಯಗಳಿಂದ ಆಗದೆ ಇಂದ್ರಿಯಗಳ ಮುಖಾಂತರ ಆಗುತ್ತದೆ. ಇಂದ್ರಿಯಗಳ ಮುಖಾಂತರ ವಿವಿಧ ವಸ್ತುಗಳ ಜ್ಞಾನವನ್ನು ‘ನಾನು’ ಎಂಬ ಜೀವಿಯು ಪಡೆಯುತ್ತಾನೆ. ಜೀವಿಯು ಇಂದ್ರಿಯಗಳ ಮುಖಾಂತರ ವಸ್ತುಗಳನ್ನು ನೋq ದೇ ಇದ್ದರೆ ಆ ವಸ್ತುವು ಆತನೆದುರಿಗೇ ಇದ್ದಾಗ್ಯೂ ಗೋಚರಿಸಲಾರದು.

ಒಂದೇ ವಸ್ತುವು, ಒಂದೇ ಕಾಲದಲ್ಲಿ ಬೇರೆ ಬೇರೆ ಮನುಷ್ಯರಲ್ಲಿ ಬೇರೆ ಬೇರೆ ತರಹದ ಅನುಭವವನ್ನುಂಟು ಮಾಡಬಲ್ಲದು ಎಂಬುದು ಒಪ್ಪಲ್ಪಟ್ಟ ವಿಷಯವಾಗಿದೆ. ಹೀಗೆ ವಸ್ತುವು ಒಂದೇ ಆಗಿದ್ದು ಅನುಭವವು ಬೇರೆಬೇರೆಯಾಗುವುದರ ಕಾರಣವು ಆಯಾಯಾ ವ್ಯಕ್ತಿಗಳ ಮಾನಸಿಕ ಅವಸ್ಥೆಗಳನ್ನು ಅನುಸರಿಸಿರುತ್ತದೆ. ಇದೇ ರೀತಿಯಾಗಿ ಒಂದೇ ವ್ಯಕ್ತಿಯ ಜೀವನದ ಬಾಲ್ಯಾದಿ ಅವಸ್ಥೆಗಳಲ್ಲಿ, ಒಂದು ಕಾಲದಲ್ಲಿ ಅತಿಯಾಗಿ ಪ್ರೀತಿಸಲ್ಪಟ್ಟ ವಸ್ತುವು ಬೇರೊಂದು ಕಾಲದಲ್ಲಿ ದ್ವೇಷಿಸಲ್ಪಡುತ್ತಿರುವುದನ್ನು ಕಾಣಬಹುದು. ಯಾವ ವಸ್ತುವೇ ಆಗಲೀ ಅದು ಇಂದ್ರಿಯಗಳಿಂದ ನೋಡಲ್ಪಡುತ್ತಿದ್ದಾಗ್ಯೂ ಮನಸ್ಸು, ಇಂದ್ರಿಯಗಳ ಮುಖಾಂತರ ಆ ವಸ್ತುವನ್ನು ಪ್ರವೇಶಿಸಿ ಅದರಲ್ಲಿ ಎಷ್ಟು ಆಸಕ್ತಿಯುಳ್ಳದ್ದಾಗುತ್ತದೆಯೋ, ಅಷ್ಟು ಪ್ರಮಾಣದಿಂದ ಅದರ ಪರಿಣಾಮವು ನಮ್ಮ ಮನಸ್ಸಿನ ಮೇಲಾಗುತ್ತದೆ.
ಪ್ರತಿ ಘಳಿಗೆಯಲ್ಲಿಯೂ ಬದಲಾವಣೆಯನ್ನೂ ಹೊಂದುತ್ತಿರುವುದು ಪ್ರಪಂಚದ ನಿಯಮ. ಅದೇ ರೀತಿ ನಮ್ಮ ಜೀವನದಲ್ಲಿ ಅನೇಕ ವಿಷಯಗಳು ಹಾಗೂ ಘಟನೆಗಳು ಬರುತ್ತವೆ. ಇರುತ್ತವೆ ಮತ್ತು ನಾಶವಾಗಿ ಹೋಗುತ್ತವೆ ಹಾಗೂ ಬೇರೆ ಹೊಸ ಘಟನೆಗಳಿಗೆ ದಾರಿಮಾಡಿ ಕೊಡುತ್ತವೆ. ಇದೇ ರೀತಿ ಶೀತ-ಉಷ್ಣ, ಸುಖ-ದುಃಖ ಮೊದಲಾದ ದ್ವಂದ್ವಗಳನ್ನು ತಿಳಿದುಕೊಂಡು, ಅವುಗಳಿಂದ ಲಭಿಸುವ ಅನುಭವಗಳಷ್ಟನ್ನೇ ಪಡೆದುಕೊಂಡು ಉದಾಸೀನತೆಯಿಂದ ಇರಬೇಕೇ ಹೊರತು ಅವುಗಳಿಗಾಗಿ ಮನಸ್ಸಿನ ಶಾಂತತೆಯನ್ನು ಕೆಡಿಸಿಕೊಳ್ಳಬಾರದು. ನಮಗುಂಟಾಗುವ ಸುಖ-ದುಃಖ, ಯಶಸ್ಸು- ಸೋಲು, ಮೊದಲಾದವುಗಳು ಸಹ ಕಾಲನಿಯಮಕ್ಕನುಸಾರವಾಗಿ ನಾಶವಾಗತಕ್ಕವುಗಳೇ ಸರಿ ಎಂಬ ಧೃಢ ನಿರ್ಧಾರದಿಂದ. ಅವುಗಳ ಬಲೆಗೆ ಸಿಲುಕಿಕೊಳ್ಳದೇ ನಿಶ್ಚಿಂತನಾಗಿರಬೇಕು.

ಹೀಗೆ ಸುಖದುಃಖಗಳನ್ನು ಸಹಿಸಿಕೊಳ್ಳುವುದರಿಂದ ಲಾಭವೇನು ?
ಯಂ ಹಿ ನ ವ್ಯಥಯಂತ್ಯೇ ತೇ ಪುರುಷಂಪುರುಷರ್ಷಭ |
ಸಮದುಃಖಸುಖಂ ಧೀರಂ ಸೋ„ಮೃತತ್ವಾಯ ಕಲ್ಪತೇ || 15 ||
ಅರ್ಥ : ಪುರುಷರಲ್ಲಿ ಶ್ರೇಷ್ಠವಾದ ಅರ್ಜುನನೇ, ಈ ಸುಖ-ದುಃಖಾದಿ ದ್ವಂದ್ವಗಳು ಯಾವನನ್ನು ಪೀಡಿಸುವುದಿಲ್ಲವೋ, ಅಂದರೆ ಯಾವನ ಮನಸ್ಸಿನಲ್ಲಿ ಉದ್ರೇಕವನ್ನುಂಟು ಮಾಡುವುದಿಲ್ಲವೋ, ಮತ್ತು ಯಾವನು ತನಗೆ ಒದಗುವ ಸುಖ-ದುಃಖಾದಿಗಳ ಮಧ್ಯದಲ್ಲಿ ಮನಃಶಾಂತಿಯನ್ನು ಕಾಪಾಡಿಕೊಳ್ಳುತ್ತಾನೋ, ಅಂತಹ ಮನುಷ್ಯನು ಅಮೃತಕ್ಕೆ (ಅಮರತ್ವ)ವನ್ನು ಹೊಂದಲು ಅರ್ಹನಾಗುತ್ತಾನೆ.
ಪ್ರತಿಯೊಬ್ಬನೂ ಮರಣಕ್ಕೆ ಅಂಜುತ್ತಾನೆ. ಶಾರೀರಿಕ ದೃಷ್ಟಿಯಿಂದ ಅತಿ ಬಲಶಾಲಿಯಾದವನಿಗೆ ಸಹ ಈ ಭೀತಿ ತಪ್ಪಿದ್ದಲ್ಲ. ಮರಣದ ಭೀತಿ ಯಿಲ್ಲದವನು ಆತ್ಮಜ್ಞಾನಕ್ಕೆ ಅರ್ಹನೆಂದು ಉಪನಿಷತ್ಕಾಲದ ಪ್ರಾರಂಭದಲ್ಲಿ ತಿಳಿಯಲಾಗಿತ್ತು. ಆದರೆ ಮುಂದಿನ ಉಪನಿಷತ್ತುಗಳಲ್ಲಿ ಇದಕ್ಕೆ ‘ಜನ್ಮರಹಿತನಾಗುವುದು’ ಎಂದು ವ್ಯಾಖ್ಯೆಯನ್ನು ಮಾಡಲಾಯಿತು. ಪ್ರಸ್ತುತಃ ಇವೆರಡರಲ್ಲಿ ಭೇದವಿಲ್ಲ.

ಅಮರಣತ್ವ ಮತ್ತು ಜನ್ಮರಹಿತ ಎಂಬ ಶಬ್ದಗಳಲ್ಲಿಯ ‘ಮರಣ’ ಮತ್ತು ‘ಜನ್ಮ’ ಗಳೆಂದರೆ ಈ ಶರೀರದ ಜನನ ಮರಣಗಳೆಂದು ತಿಳಿಯಕೂಡದು. ಇಲ್ಲಿ ‘ಮರಣ’ ಎಂದರೆ ಶರೀರದ ಮರಣದ ಜೊತೆಗೆ ಜೀವಿಯ ಅಥವಾ ದೇಹಿಯ ಮುದ್ರಿತ ಸಂಸ್ಕಾರಗಳ ಅಥವಾ ವಾಸನೆಗಳ ಮರಣ ಅಥವಾ ನಾಶ ಎಂದು ತಿಳಿಯಬೇಕು. ಅಂತೆಯೇ ‘ಜನ್ಮ’ ಎಂದರೆ ಅಂತರಂಗದ ಮೇಲೆ ಮುದ್ರಿತವಾದ ಕರ್ಮದ ಸಂಸ್ಕಾರಗಳು’ ಅಥವಾ ‘ವಾಸನೆಗಳು’ ಎಂದರ್ಥ ಜೀವನು ಈ ವಾಸನೆಗಳ ಭೋಗಕ್ಕಾಗಿ ಹಾಗೂ ಅವುಗಳ ನಿವೃತ್ತಿ (ಭೋಗಿಸಿ ತೀರಿಸುವುದು) ಗಾಗಿ ಅನುಕೂಲವಾದ ಬೇರೆಬೇರೆ ಶರೀರಗಳನ್ನು ಧರಿಸುತ್ತಾನೆ. ಆದುದರಿಂದ ಇಂತಹ ವಾಸನಾ ನಿವೃತ್ತಿಗಾಗಿ ಒದಗುವ ಸುಖದುಃಖಾದಿಗಳನ್ನು ಸಮಾಧಾನದಿಂದ ಅಥವಾ ಉದಾಸೀನ ವೃತ್ತಿಯಿಂದ ಭೋಗಿಸಬೇಕೆಂದು ಈ ಶ್ಲೋಕದಲ್ಲಿ ಹೇಳಲಾಗಿದೆ.
ನಮಗೆ ಒದಗುವ ಸುಖದುಃಖಗಳನ್ನು ಸಮಾಧಾನದಿಂದ ಭೋಗಿಸಬೇಕೆಂದರೆ, ವ್ಯವಹಾರ ದೃಷ್ಟಿಯಿಂದ ‘ಮೂಢನಂಬಿಕೆ’ ಅಥವಾ ‘ ಲಾಭಕರವಲ್ಲದ ವ್ಯವಹಾರ’ ಎಂದು ಟೀಕಿಸಬಹುದು. ಆದರೆ ಗೀತೆಯು ಲಾಭಕರವಲ್ಲದ ನಿರುಪಯುಕ್ತವಾದ ಬೋಧವನ್ನು ಹೇಳುತ್ತಿಲ್ಲ. ಅಂತೆಯೇ ಹೇಡಿಯಂತೆ ನಿಸ್ಸಹಾಯಕನಾಗಿ ಬಂದ ಕಷ್ಟಗಳನ್ನು ಸಹಿಸಿಕೊಳ್ಳಬೇಕೆಂದೂ ಹೇಳುತ್ತಿಲ್ಲ. ತನಗೆ ಒದಗುವ ಸುಖ
ಹಾಗೂ ದುಃಖದ ಸಂದರ್ಭಗಳಲ್ಲಿ ಸುಖದಿಂದ ಹಿಗ್ಗದೆ, ದುಃಖದಿಂದ ಕುಗ್ಗದೆ ಇರುವ ಧೀರನು ಮುಂದೆ ಉತ್ತಮವಾದ ಹಾಗೂ ಮೇಲ್ಮಟ್ಟದ ಸಂಸ್ಕಾರಗಳನ್ನು ಹೊಂದುತ್ತಾನೆ. ಅಂದರೆ ಇಂತಹ ಸಮತ್ವವು ಅವನಿಗೆ ಅಜ್ಞಾನದಿಂದ ಬಂದಿರದೆ, ಜ್ಞಾನ ಹಾಗೂ ಬುದ್ಧಿವಂತಿಕೆಯಿಂದ ಜನಿಸಿದ್ದಾಗಿರಬೇಕು.
ನಾವು ಶಾರೀರಿಕ ಮಟ್ಟದಿಂದ ನೋಡುವುದಾದರೆ ಶರೀರಕ್ಕೆ ಒದಗುವ ಕಷ್ಟಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಆದರೆ ಇದಕ್ಕಿಂತ ಮೇಲ್ತರಗತಿಯ ಮಾನಸಿಕ ಮಟ್ಟದಿಂದ ನೋಡುವ ನಮ್ಮಲ್ಲಿ ಪ್ರೇಮ ಅಥವಾ ದ್ವೇಷವುಂಟಾದರೆ, ನಾವು ಅದರ ಸಾಧನೆಗಾಗಿ ಎಂತಹ ಕಠಿಣತರ ಶಾರೀರಿಕ ಕಷ್ಟವನ್ನಾದರೂ ಸುಖವಾಗಿ ಸಂತೋಷದಿಂದ ಎದರಿಸುತ್ತೇವೆ. ನಮ್ಮ ಹತ್ತಿರದ ಸಂಬಂಧಿಕರಾಗಿ (ಸತಿ, ಸುತ, ಪಿತೃ, ಇತ್ಯಾದಿ) ನಮ್ಮ ಶಾರೀರಿಕ ಅವಶ್ಯಕತೆಗಳನ್ನು ತ್ಯಾಗಮಾಡಿ ನಾನಾತರಹದ ಶಾರೀರಿಕ ಕಷ್ಟಗಳನ್ನು ಸಂತೋಷದಿಂದಲೇ ಸಹಿಸಿಕೊಳ್ಳುತ್ತೇವೆ. ಇದಕ್ಕಿಂತಲೂ ಮೇಲ್ತರಗತಿಯ ‘ಬುದ್ಧಿ’ ದೃಷ್ಟಿಯು ನಮ್ಮಲ್ಲಿ ಜಾಗೃತವಾದರೆ, ಅಂದರೆ ನಾವು ಬೌದ್ಧಿಕ ದೃಷ್ಟಿಯಿಂದ ವಿಚಾರಮಾಡಿದರೆ, ನಾವು ಒಪ್ಪಿದ ತತ್ವಕ್ಕಾಗಿ ಇಲ್ಲವೇ ಧ್ಯೇಯಕಾಗಿ ಅಥವಾ ಅದರ ಸಾಧನೆಗಾಗಿ ನಮ್ಮ ಶಾರೀರಿಕ ಹಾಗೂ ಮಾನಸಿಕ ಮಟ್ಟದ ಸುಖಗಳೆಲ್ಲವನ್ನು ತ್ಯಾಗಮಾಡಿ, ಎರಡೂ ತರಹದ ಕಷ್ಟಗಳನ್ನು ಭೋಗಿಸಲು ಸಿದ್ಧರಾಗುತ್ತೇವೆ. ಇಂತಹ ಅನೇಕ ಉದಾಹರಣೆಗಳನ್ನು ಪುರಾಣ ಇತಿಹಾಸಗಳಲ್ಲಿ ಕಾಣುವುದು. ಹೀಗೆ ಮನುಷ್ಯನ ಶಾರೀರಿಕ, ಮಾನಸಿಕ, ಬೌದ್ಧಿಕ ಮಟ್ಟಗಳ ಪೈಕಿ ಕೆಳಗಿನ ಸ್ತರಗಳಾದ ಶಾರೀರಿಕ, ಮಾನಸಿಕ ಮಟ್ಟಗಳನ್ನು ದಾಟಿ ಬೌದ್ಧಿಕ ಮಟ್ಟಕ್ಕೇರಿದರೆ ಅವನು ತನಗೊದಗುವ ಸುಖ-ದುಃಖಾದಿ ದ್ವಂದ್ವಗಳಲ್ಲಿ ಮನಃಶಾಂತಿಯನ್ನೂ ಕಾಪಾಡಿಕೊಂಡು ಆತ್ಮಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆ.
ಈ ಕೆಳಗಿನ ಕಾರಣಗಳಿಗಾಗಿ ಸಹ ನೀನು ಸುಖ-ದುಃಖಾದಿಗಳನ್ನು ಸಮಾಧಾನದಿಂದ ಎದುರಿಸಬೇಕು.

ನಾಸತೋವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋ„ಂತಸ್ತ್ವನಯೋಸ್ತತ್ವದರ್ಶಿಭಿಃ || 16 ||
ಅರ್ಥ : ಅಸತ್ಯವಸ್ತುವು ಶಾಶ್ವತವಾಗಿರಲಾರದು. ಸತ್ಯವಸ್ತುವಿಗೆ ‘ಇಲ್ಲ’ ಎಂಬ ಸ್ಥಿತಿಯೂ ಇರದು ಅಂದರೆ ಅದು ಯಾವಾಗಲೂ ಇರತಕ್ಕದ್ದು. ಈ ಎರಡೂ ವಿಷಯಗಳ ಜ್ಞಾನವು ಸತ್ಯವನ್ನು ತಿಳಿದವರಿಗೆ ಮಾತ್ರ ಗೊತ್ತು.
ಇಲ್ಲಿ ‘ಸತ್’ ಮತ್ತು ‘ಅಸತ್’ ವಸ್ತುಗಳೆಂದರೇನೆಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಯಾವುದು ಹಿಂದೆ ಇರಲಿಲ್ಲವೋ, ಮುಂದೆ ಇರುವುದಿಲ್ಲವೋ ಮತ್ತು ಮಧ್ಯದಲ್ಲಿ ಈಗ ಮಾತ್ರ ನಮ್ಮೆಲ್ಲರಿಗೆ ಇದ್ದಂತೆ ಕಾಣುತ್ತದೆಯೋ ಅಂತಹ ಎಲ್ಲಾ ವಸ್ತುಗಳಿಗೂ ‘ಅಸತ್’ ವಸ್ತುಗಳೆಂದು ಹೆಸರು. ‘ಸತ್’ ಎಂದರೆ ಹಿಂದೆ, ಇಂದು, ಮತ್ತು ಮುಂದು ಈ ಎಲ್ಲಾ ಕಾಲಗಳಲ್ಲಿಯೂ ಯಾವ ಬದಲಾವಣೆಯನ್ನೂ ಹೊಂದದೆ ಒಂದೇ ರೀತಿಯಾಗಿರುವುದು. ಉದಾಹರu ಗೆÉ ಕತ್ತಲಲ್ಲಿ ನಾವು ಒಂದು ಕಂಬವನ್ನು ನೋಡಿ ಅದನ್ನು ‘ದೆವ್ವ’ ಎಂದು ತಿಳಿಯುತ್ತೇವೆ, ಮತ್ತು ನಮ್ಮ ವರ್ತನೆಯು ಅದು ನಿಜವಾದ ದೆವ್ವ ಎಂಬ ನಂಬಿಕೆಯಿಂದ ಕೂಡಿದ್ದಾಗಿರುತ್ತದೆ. ಇಲ್ಲಿ ದೆವ್ವ ಎನ್ನುವುದು ‘ಅಸತ್’ ಏಕೆಂದರೆ ಬೆಳಕನ್ನು ತಂದ ಕೂಡಲೆ ಅದು ದೆವ್ವವಲ್ಲವೆಂಬುದೂ ಕೇವಲ ಕಂಬವೆಂಬುದೂ ನಮಗೆ ಮನದಟ್ಟಾಗುತ್ತದೆ. ಇದೇ ರೀತಿಯಾಗಿ ಸ್ವಪ್ನದಲ್ಲಿ ನಾವು ಕಾಣುವ ಸತಿ, ಪುತ್ರಾದಿಗಳು ಸಹ, ನಮಗೆ ಎಚ್ಚರವಾದ ಮೇಲೆ ‘ಅಸತ್’ ಎಂಬ ಅರಿವಾಗುತ್ತದೆ.
ನಮ್ಮ ಜೀವನದಲ್ಲಿ ನಮಗೆ ಅನೇಕ ತರಹದ ಅನುಭವಗಳಾಗುತ್ತವೆ. ಶರೀರ, ಮನಸ್ಸು, ಬುದ್ಧಿಗಳಲ್ಲಿ ನಿತ್ಯವೂ ಬದಲಾವಣೆಗಳಾಗುತ್ತಲೇ ಇವೆ. ಆದುದರಿಂದ ಅವೆಲ್ಲವೂ ‘ಅಸತ್’ ಹೀಗೆ ‘ನಿತ್ಯವೂ ಬದಲಾವಣೆಯಾಗುತ್ತದೆ ಎಂದ ಮೇಲೆ ಅವುಗಳೆಲ್ಲದರಲ್ಲಿಯೂ ಹಾಸುಹೊಕ್ಕಿರುವ, ಎಂದಿಗೂ ಬದಲಾಗದ ಸತ್ಯವಸ್ತುವು ಇರಲೇಬೇಕು. ನದಿಯ ನೀರು ಯಾವಾಗಲೂ ಹರಿಯುತ್ತಿರಬೇಕಾದರೆ ಸ್ಥಿರವಾಗಿರುವ ನದಿಯ ಪಾತ್ರ ಬೇಕೇ ಬೇಕು. ಅಂತೆಯೇ ಶರೀರ, ಮನಸ್ಸು, ಬುದ್ಧಿಗಳಲ್ಲಿ ಉಂಟಾಗುವ ಅನುಭವಗಳನ್ನು ಬದಲಾವಣೆಗಳನ್ನು ಮುದ್ರಿಸಿ, ಸಂಗ್ರಹಿಸಿಟ್ಟುಕೊಳ್ಳುವ, ಎಂದಿಗೂ ಬದಲಾಗದ ಹಾಗೂ ಸ್ಥಿರವಾದ ಒಂದು ವಸ್ತು ಇರಲೇಬೇಕು. ಇದಕ್ಕೆ ‘ಆತ್ಮ’ ಎಂದು ಹೆಸರು. ಇದೇ
ಸತ್’ ಎಂಬು ವಸ್ತು .

ಹಾಗಾದರೆ ‘ಸತ್’ ವಸ್ತುವಿನ ಗುಣಗಳೇನು ?
ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್ |
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ || 17 ||
ಅರ್ಥ : ಈ ಆತ್ಮ ವಸ್ತುವು ನಾಶರಹಿತವಾದುದು. ಚರಾಚರವಸ್ತುಗಳೆಲ್ಲವೂ ಇದರಿಂದ ವ್ಯಾಪ್ತವಾಗಿದೆ. ಯಾರೂ ಅದನ್ನು ನಾಶಮಾಡಲಾರರು.
ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳನ್ನೂ ಸತ್-ಎಂದರೆ ನಾಶರಹಿತವಾದುದು, ಮತ್ತು ಅಸತ್- ಎಂದರೆ ನಾಶವಾಗತಕ್ಕದ್ದು ಎಂದು ಎರಡು ವಿಧವಾಗಿ ವಿಂಗಡಿಸಬಹುದು. ನಾಶವಾಗತಕ್ಕ ಪ್ರತಿಯೊಂದು ವಸ್ತುವಿನ ಕಣಕಣಗಳಲ್ಲಿ ಅದರ ಒಳಗೆ ಹೊರಗೆ ಸಹ ಈ ‘ಸತ್’ ವಸ್ತುವು ವ್ಯಾಪ್ತವಾಗಿದೆ . ‘ಸತ್’ ವಸ್ತುವು ಇಲ್ಲದಿರುವ ಸ್ಥಳವೇ ಇಲ್ಲ. ನಮ್ಮೆದುರಿಗೆ ಅನೇಕ ಆಕಾರದ ನಾನಾ ತರಹ ಬಣ್ಣಗಳುಳ್ಳ ಮಣ್ಣಿನ ಪಾತ್ರೆಗಳಿವೆ ಎಂದಿಟ್ಟುಕೊಳ್ಳೋಣ. ಈ ಪಾತ್ರೆಗಳ ಆಕಾರ, ರೂಪ, ಮತ್ತು ಉಪಯೋಗಗಳ ದೃಷ್ಟಿಯಿಂದ ಅವೆಲ್ಲವೂ ಭಿನ್ನಭಿನ್ನವಾಗಿವೆ ಮತ್ತು ಅವುಗಳ ಹೆಸರೂ ಸಹ ಭಿನ್ನವಾಗಿವೆ. ಆದರೆ ಅವೆಲ್ಲವುಗಳಲ್ಲಿಯೂ ಸಾಮಾನ್ಯವಾದ ‘ಮಣ್ಣು’ ಮಾತ್ರ ಆ ಎಲ್ಲಾ ಪಾತ್ರೆಗಳ ಕಣಕಣಗಳಲ್ಲಿಯೂ ವ್ಯಾಪ್ತವಾಗಿದೆ. ‘ಮಣ್ಣು’ ಇಲ್ಲದೆ ಯಾವ ಪಾತ್ರೆಗಳೂ ತಯಾರಾಗಲಾರದು, ಇರಲೂ ಆಗದು. ಆ ಪಾತ್ರೆಗಳೆಲ್ಲವೂ ನಾಶವಾದ ಮೇಲೆ ಪುನಃ ‘ಮಣ್ಣು’ ಆಗುತ್ತದೆ. ಪಾತ್ರೆಗಳು ನಾಶವಾದಾಗ್ಯೂ ಮಣ್ಣು ಮಾತ್ರ ಅದರಲಿ ಯ ‘ಸತ್’ ವಸ್ತುವು.
ಇದೇ ರೀತಿಯಾಗಿ ಪ್ರಪಂಚದ ಪ್ರತಿಯೊಂದು ಚರಾಚರ ವಸ್ತುಗಳಲ್ಲಿಯೂ ನಾಶರಹಿತವಾದ, ಹಾಗೂ ವಿಕಾರ ರಹಿತವಾದ ‘ಆತ್ಮ ತತ್ವ’ವು ವ್ಯಾಪ್ತವಾಗಿದೆ. ವಸ್ತುU ಳು ನಾಶವಾದಾಗ್ಯೂ ‘ಆತ್ಮ ತತ್ವ’ವು ನಾಶವಾಗದೆ ಸ್ಥಿರವಾಗಿಯೇ ಉಳಿಯುತ್ತದೆ.

ಹಾಗಾದರೆ ‘ಅಸತ್’ ವಸ್ತುವಿನ ಲಕ್ಷಣಗಳೇನು ?
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ |
ಅನಾಶಿನೋ„ಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ || 18 ||
ಅರ್ಥ : ಶರೀರ ಧಾರಿಯಾದ ಆತ್ಮನ ಈ ದೇಹಗಳು ನಾಶವಾಗತಕ್ಕವುಗಳಾಗಿವೆ. ಆದರೆ ಆತ್ಮನು ಮಾತ್ರ ಶಾಶ್ವತನೂ, ನಾಶವಿಲ್ಲದವನೂ, ಅಚಿಂತ್ಯನೂ ಆಗಿದ್ದಾನೆ. ಆದುದರಿಂದ ಭಾರತನೇ, ಯುದ್ಧಮಾಡು.
ಭೀಷ್ಮ ದ್ರೋಣಾದಿಗಳನ್ನು ಯುದ್ಧದಲ್ಲಿ ‘ನಾನು’ಕೊಲ್ಲುತ್ತೇನೆ ಎಂದು ಅರ್ಜುನನು ತಿಳಿದಿರುವುದು ತಪ್ಪು ಭಾವನೆ.

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ |
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ || 19 ||
ಅರ್ಥ : ಯಾರು ಇವನನ್ನೂ (ಆತ್ಮ) ಕೊಲ್ಲುವವನೆಂದು ತಿಳಿಯುತ್ತಾರೋ, ಮತ್ತು ಯಾರು, ಇವನು ಕೊಲ್ಲಲ್ಪಡುವವನೆಂದು ತಿಳಿಯುತ್ತಾರೋ, ಅವರಿಬ್ಬರೂ ಸರಿಯಾದ ತಿಳಿವಳಿಕೆಯಿಲ್ಲದವರು. ಏಕೆಂದರೆ ಆತ್ಮವು ಬೇರೊಬ್ಬರನ್ನು ಕೊಲ್ಲುವುದೂ ಇಲ್ಲ ಅಥವಾ ಇನ್ನೊಬ್ಬರಿಂದ ಕೊಲ್ಲಲ್ಪಡುವುದೂ ಇಲ್ಲ.
ನಾನು ವ್ಯವಹಾರದಲ್ಲಿ ‘ಕೊಂದನು’ ‘ಕೊಲ್ಲಲ್ಪಟ್ಟನು’ ಎಂದು ಹೇಳುವಾಗ ಆಯಾಯಾ ವ್ಯಕ್ತಿಯ ಶರೀರವನ್ನು ಗಮನಿಸಿ ಹೇಳುತ್ತೇವೆ. ನಾನು ಕೊಂದೆನು ಎನ್ನುವಾಗ ಅಹಂಕಾರದಿಂದ ಕೂಡಿದ’ಜೀವ’ ನನ್ನೂ ಗಮನಿಸಿ ಭ್ರಮೆಯಿಂದ ಹಾಗೆ ಹೇಳುತ್ತೇವೆ. ಇಲ್ಲಿ ಕೊಲ್ಲುವುದು, ಕೊಲ್ಲಲ್ಪಡುವುದು ಶರೀರವೇ ಹೊರತು ‘ಆತ್ಮ’ವ¯್ಲ. ಅಹಂಭಾವದಿಂದ ಕೂಡಿದ ‘ಜೀವ’ ನಲ್ಲಿ ಕೊಲ್ಲುವ ಹಾಗೂ ಕೊಲ್ಲಲ್ಪಡುವ ಸಂಸ್ಕಾರವು ಸೂಕ್ಷ್ಮರೂಪದಲ್ಲಿ ಮುದ್ರಿತವಾಗಿರುತ್ತದೆ. ಆದರೆ ಅದು ಆತ್ಮನಿಗೆ ಲೇಪವಿಲ್ಲ. ‘ಜೀವ’ನು ಸಹ ಇಂತಹ ಸಂಸ್ಕಾರಗಳ ಲೇಪನ ಹೊಂದದಂತೆ ಕರ್ಮ ಮಾಡುವ ವಿಧಾನವನ್ನು ಮುಂದೆ ಗೀತೆಯಲ್ಲಿ ವಿವರಿಸಲಾಗಿದೆ.

ಆತ್ಮವು ಶಾಶ್ವತ ಹೇಗೆ ?
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾsಭವಿತಾ ವಾ ನ ಭೂಯಃ |
ಅಜೋ ನಿತ್ಯಃ ಶಾಶ್ವತೋ„ಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ || 20 ||
ಅರ್ಥ : ಅವನು (ಆತ್ಮ) ಎಂದೂ ಹುಟ್ಟಲೂ ಇಲ್ಲ. ಸಾಯುವುದೂ ಇಲ್ಲ. ಈಗ ಇದ್ದಾಗ್ಯೂ ಮುಂದೆ ಎಂದಿಗೂ ಇಲ್ಲದಾಗುವುದಿಲ್ಲ. ಅಂದರೆ ಯಾವಾಗಲೂ ಇರುತ್ತಾನೆ. ಅವನು ಜನನವಿಲ್ಲದವನೂ, ಯಾವಾಗಲೂ ಇರುವವನೂ, ಬದಲಾವಣೆಯನ್ನೂ ಹೊಂದದವನು, ಪುರಾತನೂ ಆಗಿದ್ದಾನೆ. ನಾಶವಾಗುವ ಶರೀರದಲ್ಲಿ ಅಧಿಷ್ಠಾನನಾಗಿದ್ದಾಗ್ಯೂ ಈ ಶರೀರವು ಕೊಲ್ಲಲ್ಪಟ್ಟಾಗ ಅವನು ಮಾತ್ರ ಕೊಲ್ಲಲ್ಪಡದೆ ಶಾಶ್ವತವಾಗಿಯೇ ಉಳಿಯುತ್ತಾನೆ.
ಶರೀರ ಮತ್ತು ಆತ್ಮ ಇವುಗಳಲ್ಲಿಯ ವ್ಯತ್ಯಾಸವನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಶರೀರಕ್ಕೆ ಹುಟ್ಟು ಬದುಕುವಿಕೆ ಬೆಳವಣಿಗೆ, ಸವಕಳಿ ರೋಗ ಮತ್ತು ಮರಣ ಈ ಆರು ಅವಸ್ಥೆಗಳು ಸ್ವಾಭಾವಿಕವಾಗಿವೆ. ಇವು ಜೀವನದ ವಿವಿಧ ದುಃಖಗಳಿಗೆ ಕಾರಣವಾಗಿವೆ. ಈ ಆರು ಅವಸ್ಥೆಗಳಲ್ಲಿ ಯಾವುದೂ ಆತ್ಮನಿಗಿಲ್ಲ ಮತ್ತು ಆತ್ಮವು ಶರೀರದಂತೆ ಯಾವ ಬದಲಾವಣೆಯನ್ನೂ ಹೊಂದುವುದಿಲ್ಲ.

ಆತ್ಮವು ಶಾಶ್ವತ ಎಂಬುದನ್ನು ಇನ್ನೂ ವರ್ಣಿಸಲಾಗಿದೆ
ವೇ ದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ |
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ || 21 ||
ಅರ್ಥ : ಯಾರು ಅವನನ್ನು ನಾಶವಿಲ್ಲದವನು, ಎಲ್ಲಾ ಕಾಲಗಳಲ್ಲಿಯೂ ಇರತಕ್ಕವನು ಜನನವಿಲ್ಲದವನು, ಅಳತೆಗೆ ಸಿಗದವನು ಎಂಬುದಾಗಿ ತಿಳಿಯುತ್ತಾರೋ, ಅಂತಹ ಪುರುಷನು (ಆತ್ಮನು) ಏ ಪಾರ್ಥನೇ! ಹೇಗೆ ತಾನೆ ಕೊಲ್ಲುತ್ತಾನೆ ? ಅಥವಾ ಕೊಲ್ಲಲ್ಪಡುತ್ತಾನೆ, ಅಂದರೆ ಅವನು ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ.
ಸಕಲ ಜೀವಿಗಳಲ್ಲಿ ನೆಲೆಸಿರುವ ಆತ್ಮನು ‘ಅವಿನಾಶಿ’ ವೇದಲಾದ ಗುಣಗಳುಳ್ಳವನಾಗಿರುವುದರಿಂದಲೂ, ಮತ್ತು ಸರ್ವ ಜೀವಿಗಳಲ್ಲಿಯೂ ಅವನೇ ಅಖಂಡವಾಗಿ ವ್ಯಾಪ್ತನಾಗಿರುವುದರಿಂದಲೂ, ಅವನು ಇನ್ನೂಬ್ಬನನ್ನು ಕೊಲ್ಲುತ್ತಾನೆ. ಅಥವಾ ಇನ್ನೊಬ್ಬರಿಂದ ಕೊಲ್ಲಲ್ಪಡುತ್ತಾನೆ ಎಂಬುದು ಸಲ್ಲದು. ಕೊಲ್ಲುವವನನ್ನು ಮತ್ತು ಕೊಲ್ಲಲ್ಪಡುವವನು ಇವರಿಬ್ಬರಲ್ಲಿಯೂ ಅವನು ಅಖಂಡವಾಗಿ ವ್ಯಾಪಿಸಿ ಕೊಂಡಿದ್ದಾನೆ.

ಆತ್ಮನು ನಾಶರಹಿತನು ಹೇಗೆ ?
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾ
ನ್ಯನ್ಯಾನಿ ಸಂಯಾತಿ ನವಾನಿ ದೇಹೀ || 22 ||
ಅರ್ಥ : ಮನುಷ್ಯನು ತನ್ನ ನಿತ್ಯಜೀವನದಲ್ಲಿ ಹಳತಾದ ಬಟ್ಟೆಗಳನ್ನು ಬಿಸುಟೆಹಾಕಿ ಹೊಸಬಟ್ಟೆಗಳನ್ನು ಧರಿಸುವಂತೆ, ದೇಹಧಾರಿಯಾದ ಆತ್ಮನು ಸಹ, ಒಂದು ದೇಹವು ಹಳತಾದ ಹಾಗೆ ಅದನ್ನು ಕಳಚಿ ಹಾಕಿ ಬೇರೆ ಹೊಸ ದೇಹವನ್ನು ಸ್ವೀಕರಿಸುತ್ತಾನೆ .
ಮನುಷ್ಯನು ಪ್ರತಿನಿತ್ಯವೂ ಬೇರೆಬೇರೆ ಕಾಲಗಳಲ್ಲಿ ಆಯಾಯಾ ಸಂದರ್ಭಕ್ಕೆ ಹಾಗೂ ಕೆಲಸಕ್ಕೆ ಅನುಕೂಲವಾಗುವಂತಹ ಬಟ್ಟೆಗಳನ್ನು ಧರಿಸುತ್ತಾನಷ್ಟೆ. ಉದಾಹರಣೆ ಸ್ನಾನಮಾಡುವಾಗ ಧರಿಸುವ ಬಟ್ಟೆಗಳನ್ನು ಊಟಮಾಡುವಾಗ ಧರಿಸುವುದಿಲ್ಲ. ಆಫೀಸಿಗೆ ಹೋಗುವಾಗ ವಿಶಿಷ್ಟರೀತಿಯ ಬಟ್ಟೆಗಳಿದ್ದರೆ ಮಲಗುವಾಗ ಬೇರೆ ರೀತಿಯ ಬಟ್ಟೆ ಇತ್ಯಾದಿ. ಇದೇ ರೀತಿಯಾಗಿ ಅವನು ಒಂದು ಬಟ್ಟೆಯು ಹರಿದು ಹೋದರೆ ಅದನ್ನು ತ್ಯಜಿಸಿ ಬೇರೆ ಹೊಸಬಟ್ಟೆಯನ್ನು ಧರಿಸುತ್ತಾನೆ. ಹೀಗೆ ಬೇರೆ ಹೊಸ ಬಟ್ಟೆಗಳನ್ನು ಧರಿಸುವುದಕ್ಕಾಗಿ ಹಳೆಯ ಬಟ್ಟೆಯನ್ನು ಕಳಚುವುದಾದರೆ ಯಾರಿಗೂ ದುಃಖವಾಗುವುದಿಲ್ಲ. ಹೊಸಬಟ್ಟೆಯನ್ನು ಧರಿಸುವಾಗ ಸಂತೋಷವೇ ಆಗುತ್ತದೆ. ಇದೇ ರೀತಿಯಾಗಿ ದೇಹಧಾರಿಯಾದ ಜೀವನು ತನ್ನ ಹಿಂದಿನ ಜನ್ಮದ ಸಂಸ್ಕಾರಗಳನ್ನು ಈ ದೇಹದ ಮೂಲಕ ಭೋಗಿಸಿ ಮುಗಿಯಿತೆಂದು ತಿಳಿದ ಕೂqಲೇ ಈ ದೇಹವನ್ನು ಬಿಟ್ಟು ಮುಂದೆ ಭೋಗಿಸಬೇಕಾದ ಸಂಸ್ಕಾರಗಳಿಗೆ ಅನುಕೂಲವಾಗುವಂತಹ ಹೊಸ ಶರೀರವನ್ನು ಧರಿಸುತ್ತಾನೆ. ಈ ಶರೀರದ ಮುಖಾಂತರ ಅನುಭವಿಸಬೇಕಾದ ಸುಖ-ದುಃಖಗಳು ಮುಗಿದ ನಂತರ ಅವನಿಗೆ ಈ ಶರೀರವು ಹಳತಾಗುತ್ತದೆ.
ಶರೀರಕ್ಕೆ ಆಗಿರುವ ವಯಸ್ಸು ಇಲ್ಲಿ ಮುಖ್ಯವಲ್ಲ. ಜೀವಿಯು ಭೋಗಿಸಬೇಕಾದ ಸುಖ-ದುಃಖಗಳಿಗೆ ಆ ಶರೀರವು ಉಪಯುಕ್ತವಾಗಿದೆಯೋ, ಇಲ್ಲವೋ ಎಂಬುದೇ ಮುಖ್ಯ. ಅದನ್ನು ತೀರ್ಮಾನಿಸತಕ್ಕವರು ಜೀವಿಯೇ ಸರಿ. ಬಾಲ್ಯಮರಣ, ಅಕಾಲಮರಣಗಳನ್ನು ಈ ದೃಷ್ಟಿಯಿಂದ ಅಳೆಯಬೇಕು. ಈ ಶ್ಲೋಕದಲ್ಲಿ ಹೇಳಿದ ತತ್ವದ ಮೇಲೆನಿಂದ ಶರೀರವು ಜೀರ್ಣವಾಗದೆಯೇ ಬಾಲ್ಯದಲ್ಲಿಯೇ ಮಕ್ಕಳು ಸಾಯುವುದನ್ನು ನೋಡಿ ಕೆಲವರು ಟೀಕೆಮಾಡಬಹುದಾಗಿದೆ. ಶರೀರವು ಜೀರ್ಣವಾಗದಿರಬಹುದು. ಆದರೆ ಅದು ಆ ಜೀವನಿಗೆ ಮಾತ್ರ ನಿರುಪಯುಕ್ತವಾಯಿತು. ವ್ಯವಹಾರವಲ್ಲಿ ಸಹ ಇಂತಹ ಉದಾಹರಣೆಯನ್ನು ಕಾಣಬಹುದು. ಶ್ರೀಮಂತನು ತನ್ನ ಭೋಗ ವಸ್ತುಗಳನ್ನು ಉದಾಹರಣೆಗೆ ಒಂದು ಮೋಟಾರು ಕಾರನ್ನು ಕೊಂಡ ನಾಲ್ಕಾರು ತಿಂಗಳಲ್ಲಿಯೇ ಮಾರಿ ಬೇರೆ ಹೊಸದೊಂದನ್ನು ಕೊಂಡುಒಳ್ಳೂತ್ತಾನೆ. ಅವನಿಗೆ ಅಷ್ಟರಲ್ಲಿಯೇ ಅದು ಹಳತಾಯಿತು. ಆದುದರಿಂದ ಇಲ್ಲಿ ಸಹ ಶರೀರದ ವಯಸ್ಸನ್ನು ಗಮನಿಸದೆ, ಅದು ಜೀವಾತ್ಮನಿಗೆ ಉಪಯುಕ್ತವೋ, ಇಲ್ಲವೋ ಎಂಬ ದೃಷ್ಟಿಯಿಂದ ನೋಡಬೇಕು. ಅದನ್ನು ಅವನೇ ತೀರ್ಮಾನಿಸಬೇಕು. ಇಲ್ಲಿ ಬದಲಾವಣೆ, ಭೋಗ, ಇತ್ಯಾದಿಗಳು ಮನಸ್ಸು ಬುದ್ಧಿಗಳಿಂದ ಕೂಡಿದ ಜೀವಾತ್ಮನಿಗೆ ಸೇರಿವೆ. ಆತ್ಮನಿಗಲ್ಲ ಎಂಬುದನ್ನು ಗಮನಿಸಬೇಕು.

ಆತ್ಮನಿಗೆ ಯಾವ ಬದಲಾವಣೆಗಳೂ ಇಲ್ಲ.
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈವಂ ಕ್ಲೇದಯಂತ್ಯಾಪೆÇೀ ನ ಶೋಷಯತಿ ಮಾರುತಃ || 23 ||
ಅರ್ಥ : ಶಸ್ತ್ರಾಸ್ತ್ರಗಳು ಇವನನ್ನು ಛೇದಿಸಲಾರವು. ಬೆಂಕಿಯು ಸುಡಲಾರದು. ನೀರು ನೆನೆಯಿಸಲಾರದು. ಮತ್ತು ಗಾಳಿಯು ಒಣಗಿಸಲಾರದು .
ಕಣ್ಣಿಗೆ ಕಾಣದೆ ಇರುವ ವಸ್ತುಗಳನ್ನು ವರ್ಣಿಸುವಾಗ ಎಲ್ಲರಿಗೂ ಪರಿಚಿತವಾದ ವಸ್ತುಗಳೊಡನೆ ಹೋಲಿಸಿ ವರ್ಣಿಸುವುದರಿಂದ ಸುಲಭವಾಗಿ ಆ ವಸ್ತುವಿನ ಜ್ಞಾನವಾಗುತ್ತದೆ. ಇದೇ ರೀತಿಯಾಗಿ ಆತ್ಮ ತತ್ವವನ್ನು ಎಲ್ಲರಿಗೂ ಪರಿಚಿತವಾದ ವಸ್ತುಗಳ ಮುಖಾಂತರ ವರ್ಣಿಸಲಾಗಿದೆ. ನಾಶವಾಗತಕ್ಕ ಈ ಪ್ರಪಂಚದಲ್ಲಿ ಪ್ರತಿಯೊಂದು ವಸ್ತುಗಳೂ, ಶಸ್ತ್ರ, ನೀರು, ಗಾಳಿ ಇಲ್ಲವೇ ಬೆಂಕಿಗಳಿಂದ ನಾಶವಾಗುತ್ತವೆ. ಆದರೆ ಇವು ಆತ್ಮವಸ್ತುವನ್ನು ನಾಶಮಾಡಲು ಅಸಮರ್ಥವಾಗಿವೆ ಎಂಬುದನ್ನು ಇಲ್ಲಿ ಸೂಚಿಸಲಾಗಿದೆ. ಅಂದರೆ ಸರ್ವವಸ್ತುಗಳನ್ನು ನಾಶಮಾಡಬಲ್ಲ ಈ ಸಾಧನಗಳು ಆತ್ಮವನ್ನು ನಾಶಮಾಡಲಾರವು .
ನಮಗೆ ತಿಳಿದಿರುವ ಸಣ್ಣ ಹಾಗೂ ದೊಡ್ಡ ಶಸ್ತ್ರಗಳು. ತಮಗಿಂತ ಹೆಚ್ಚು ಸ್ಥೂಲವಾದ ವಸ್ತುಗಳನ್ನು ಮಾತ್ರ ನಾಶ ಮಾಡಬಲ್ಲವೇ ಹೊರತು, ತಮಗಿಂತ ಸೂಕ್ಷ್ಮವಾದ ವಸ್ತುಗಳನ್ನು ನಾಶಮಾಡಲಾರವು. ಅಂತೆಯೂ ಯಾವ ಶಸ್ತ್ರವೇ ಆಗಲೀ ಅದಕ್ಕಿಂತ ಸೂಕ್ಷ್ಮವಾದ ನೀರು, ಗಾಳಿ, ಬೆಂಕಿಗಳನ್ನು ತುಂಡುಮಾಡಲಾರದು. ಆತ್ಮವಸ್ತುವು ಬೆಂಕಿ, ಗಾಳಿ ಗಳಿಗಿಂತಲೂ ಸೂಕ್ಷ್ಮವಾಗಿರುವುದರಿಂದ ಅದನ್ನೂ ನಾಶಮಾಡಲಾರವು. ಬೆಂಕಿಯು ಎಲ್ಲಾ ವಸ್ತುಗಳನ್ನು ಸುಡಬಲ್ಲದಾದರೂ ಬೆಂಕಿಯನ್ನು ಮಾತ್ರ ಸುಡಲಾಗದು. ಬೆಂಕಿಯಿಂದ ಎಲ್ಲಾ ವಸ್ತುಗಳನ್ನು ಆಕಾಶದಲ್ಲಿ ಸುಡಲ್ಪಡುತ್ತವೆ. ಆದರೆ ಬೆಂಕಿಗಿಂತ ಸೂಕ್ಷ್ಮವಾದ ಆಕಾಶವನ್ನು ಸುಡಲಾಗುವುದಿಲ್ಲ. ಬೆಂಕಿಗೆ ಆಕಾಶವನ್ನು ಸುಡುಲಾಗದಿದ್ದರೆ, ಅದಕ್ಕಿಂತಲೂ ಸೂಕ್ಷ್ಮವಾದ ಮತ್ತು ಆಕಾಶದ ಇರುವಿಕೆಗೆ ಕಾರಣವಾದ ಆತ್ಮವನ್ನು ಸುಡುವುದು ಹೇಗೆ?

ಇದನ್ನೇ ಇನ್ನು ವಿವರಿಸಲಾಗಿದೆ.
ಅಚ್ಛೇದ್ಯೋ„ಯಮದಾಹ್ಯೋ„ಯಮಕ್ಲೇದ್ಯೋ„ಶೋಷ್ಯ ಏವ ಚ |
ನಿತ್ಯಃ ಸರ್ವಗತಃ ಸ್ಥಾಣುರಚಲೋ„ಯಂ ಸನಾತನಃ || 24 ||
ಅರ್ಥ : ಆತ್ಮವನ್ನು ಶಸ್ತ್ರಗಳಿಂದ ತುಂಡರಿಸಲಾಗುವುದಿಲ್ಲ. ಬೆಂಕಿಯಿಂದ ಸುಡಲು ಸಾಧ್ಯವಿಲ್ಲ. ನೀರಿನಿಂದ ತೋಯಿಸಲಾಗದು. ಗಾಳಿಯಿಂದ ಒಣಗಿಸಲೂ ಸಾಧ್ಯವಿಲ್ಲ. ಈತನು ನಿತ್ಯನು, ಸರ್ವಾಂತವ್ರ್ಯಾಪಿಯೂ, ಅಲುಗಾಡದಂತೆ ಸ್ಥಿರವಾಗಿರುವವನು ನೇರವಾಗಿರುವವನು, ಚಲನವಲನವಿಲ್ಲದವನು ಮತ್ತು ಪುರಾತನನೂ ಆಗಿದ್ದಾನೆ.
ಸರ್ವಾಂತವ್ರ್ಯಾಪಿ ಎಂದರೆ ಪರಮಾತ್ಮನು ಸರ್ವ ಚರ-ಅಚರ, ಗೋಚರ-ಅಗೋಚರ, ಸೂಕ್ಷ್ಮ-ಸ್ಥೂಲ ಹಾಗೂ ಸರ್ವ ದಿಕ್ಕುಗಳನ್ನೂ ಸಂಪೂರ್ಣವಾಗಿ ಒಳ ಹೊರಗೆ ವ್ಯಾಪಿಸಿಕೊಂಡು ಅಖಂಡವಾಗಿದ್ದಾನೆ, ಅವನು ಇಲ್ಲದ ಸ್ಥಳ ಹಾಗೂ ವಸ್ತುಗಳೇ ಇಲ್ಲ ಎಂದರ್ಥ. ಇವನಿಗೆ ಯಾವ ಆಕಾರವನ್ನೂ ಕಲ್ಪಿಸಿ ಅದರೊಳಗೆ ಸೀಮಿತಗೊಳಿಸಲಾಗುವುದಿಲ್ಲ. ಆಕಾರವನ್ನು ಕಲ್ಪಿಸಿದರೆ ಅವನು ಆ ಆಕಾರದ ಹೊರಗಡೆ ಇಲ್ಲವೆಂದಾಗುತ್ತದೆ. ನಾವು ಕಲ್ಪಿಸಿಕೊಂಡಿರುವ ಮೂರ್ತಿಗಳಲ್ಲಿ, ಪರಮಾತ್ಮನು, ವಿವಿಧ ಆಕಾರಗಳ ಮಣ್ಣಿನ ಪಾತ್ರೆಗಳಲ್ಲಿಯ ಮಣ್ಣಿನಂತೆ ಆ ಆಕಾರದ ಒಳಗೆ, ಹೊರಗೆ ಎಲ್ಲಾ ಕಡೆಯೂ ವ್ಯಾಪಿಸಿಕೊಂಡಿದ್ದಾನೆ ಎಂದು ತಿಳಿಯಬೇಕು ‘ಸ್ಥಾಣು’ ಮತ್ತು ‘ಅಚಲ’ ಈ ಎರಡೂ ಶಬ್ದಗಳೂ ಒಂದೇ ಅರ್ಥವನ್ನೂ ಸೂಚಿಸಿದಾಗ್ಯೂ ಅವುಗಳಲ್ಲಿ ವ್ಯತ್ಯಾಸವಿದೆ. ‘ಸ್ಥಾಣು’ ಮತ್ತು ‘ಅಚಲ’ ಈ ಎರಡೂ ಶಬ್ದಗಳೂ ಒಂದೇ ಅರ್ಥವನ್ನು ಸೂಚಿಸಿದಾಗ್ಯೂ ಅವುಗಳಲ್ಲಿ ವ್ಯತ್ಯಾಸವಿದೆ. ‘ಸ್ಥಾಣು’ ಎಂದರೆ ಆಲದ ಮರದಂತೆ ಬುಡದಲ್ಲಿ ಭದ್ರವಾಗಿ ಅಲುಗಾಡದಂತೆ ಸ್ಥಾರವಾಗಿರುವುದು (ಮೇಲೆ ಚಲಿಸಬಹುದು). ‘ಅಚಲ’ ಎಂದರೆ ಒಂದು ಸ್ಥಾನವನ್ನು ಬಿಟ್ಟು ಇನ್ನೊಂದು ಸ್ಥಾನಕ್ಕೆ ಚಲಿಸದೆ ಸ್ಥಿರವಾಗಿರುವುದು. ಪರಮಾತ್ಮನು ಸರ್ವವ್ಯಾಪಿ ಎಂದ ಮೇಲೆ ಅವನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ಎಂಬ ಪ್ರಶ್ನೆಯೇ ಇಲ್ಲ. ಏಕೆಂದರೆ ಚಲಿಸುವುದು ಎಂದರೆ ಮೊದಲು ಇದ್ದ ಸ್ಥಳವನ್ನೂ ಬಿಟ್ಟು, ಮೊದಲು ಇಲ್ಲದಿದ್ದ ಇನ್ನೊಂದು ಸ್ಥಳಕ್ಕೆ ಹೋಗುವುದು. ಎಲ್ಲಾ ಸ್ಥಳ, ಮತ್ತು ಕಾಲಗಳಲ್ಲಿ ಪರಮಾತ್ಮನು ಸದಾ ಇರುವುದರಿಂದ ಅವನು ಚಲನವಲನವಿಲ್ಲದವನು ಎಂದು ಹೇಳಲಾಗಿದೆ.

ಈತನ ಗುಣಗಳನ್ನು ಇನ್ನೂ ವಿವರಿಸಲಾಗಿದೆ.

ಅವ್ಯಕ್ತೋ„ಯಮಚಿಂತ್ಯೋ„ಯಮವಿಕಾರ್ಯೋ„ಯ ಮುಚ್ಯತೇ |
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ || 25 ||
ಅರ್ಥ : ಈ ಪರಮಾತ್ಮನು ಅವ್ಯಕ್ತನೂ, ಮನಸ್ಸಿನಿಂದ ಊಹಿಸಿ ತಿಳಿಯಲ್ಪಡದವನೂ, ಯಾವುದೇ ತರಹದ ವಿಕಾರ ಅಥವಾ ಬದಲಾವಣೆಗಳನ್ನೂ ಹೊಂದದವನೂ ಆಗಿದ್ದಾನೆ. ಈತನನ್ನು ನೀನು ಈ ರೀತಿಯಾಗಿ ತಿಳಿದರೆ ನೀನು ದುಃಖಪಡಬೇಕಾಗಿಲ್ಲ.
ಪರಮಾತ್ಮನನ್ನು ಶರೀರದಿಂದ, ಮನಸ್ಸಿನಿಂದ, ಮತ್ತು ಬುದ್ಧಿಯಿಂದ ತಿಳಿಯಲು ಸಾಧ್ಯವಿಲ್ಲ (ವ್ಯಕ್ತವಾದ ರೂಪವಿಲ್ಲದಿರುವುದರಿಂದ) ವೆಂದು ಹೇಳಿ ಅವನನ್ನೂ ಕೊಲ್ಲುವುದಾಗಲೀ, ಅವನಿಂದ ಕೊಲ್ಲಲ್ಪಡುವುದಾಗಲೀ ಸಹ ಸಾಧ್ಯವಿಲ್ಲವೆಂದು ಪರ್ಯಾಯವಾಗಿ ಸೂಚಿಸಲಾಗಿದೆ.
‘ಅವ್ಯಕ್ತ’ ಎಂದರೆ ಯಾವ ಸ್ಥೂಲ ಇಂದ್ರಿಯಗಳಿಗೂ ಗೋಚರವಾಗದುದು. ಪೂರ್ಣ ಪಕ್ವವಾದ ಮಾವಿನ ಹಣ್ಣು ನಮ್ಮ ಕಣ್ಣೆದುರಿಗೆ ಕಾಣುತ್ತಿದ್ದಾಗ್ಯೂ, ಅದರ ಬೀಜದಲ್ಲಿ ಅಡಗಿರುವ ಮಾವಿನ ಮರವನ್ನು ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮ ಈ ಯಾವ ಇಂದ್ರಿಯಗಳೂ ಕಾಣಲಾರವು. ಮಾವಿನ ಮರವು ಪೂರ್ಣಬಲಿತ ಹಣ್ಣಿನ ಓಟೆಯ್ಲಲ್ಲಿ (ಬೀಜ) ‘ಅವ್ಯಕ್ತ’ ವಾಗಿದೆ. ಇದೇ ರೀತಿ ಪರಮಾತ್ಮನು ‘ಅವ್ಯಕ್ತ’ ನಾಗಿದ್ದಾನೆ. ನಮ್ಮ ಸ್ಥೂಲ ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಅಂಚಿಂತ್ಯ ಚಿಂತೆ ಎಂಬುದು ಮನಸ್ಸು ಬುದ್ಧಿಗಳ ಕಾರ್ಯ. ಶರೀರದಲ್ಲಿ ‘ಜೀವನು’ ಇದ್ದರೆ ಮಾತ್ರ – ಅಂದರೆ ಮನುಷ್ಯನು ಜೀವಂತನಾಗಿದ್ದರೆ – ಮನಸ್ಸು ಬುದ್ಧಿಗಳು ಕಾರ್ಯ ಮಾಡುತ್ತವೆ. ಹೀಗೆ ಪರಾವಲಂಬಿಗಳಾದ ಮನಸ್ಸು, ಬುದ್ಧಿಗಳು ಇತರೆ ವಸ್ತುಗಳನ್ನು ಚಿಂತಿಸಿದಂತೆ. ತಮಗೆ ಚೇತನವನ್ನು ಕೂಡುವ ‘ಆತ್ಮ’ನನ್ನು ತಮ್ಮ ಚಿಂತನದ ವಸ್ತುವನ್ನಾಗಿ ಮಾಡಿಕೊಳ್ಳಲಾರವು. ದೂರದರ್ಶಕ ಯಂತ್ರದಿಂದ ದೂರದ ವಸ್ತುಗಳನ್ನು ನೋಡುವವನು ತನ್ನ ರೂಪವನ್ನು ಅದರಿಂದ ನೋಡಲಾರನು. ಅವನು ಒಂದೇ ಕಾಲದಲ್ಲಿ ನೋಡುವವನೂ, ನೋಡಲ್ಪಡುವವನೂ ಆಗಲಾರನು.

ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ |
ತಥಾಪಿ ತ್ವಂ ಮಹಾಬಾಹೋ ನೈವಂ ಶೋಚಿತು ಮರ್ಹಸಿ || 26 ||
ಅರ್ಥ : ಇವನು ಪದೇ ಪದೇ ಹುಟ್ಟುವವನು, ಮತ್ತು ಪದೇ ಪದೇ ಸಾಯುವವನು ಎಂದು ನೀನು ತಿಳಿದಾಗ್ಯೂ ಸಹ, ಮಹಾಬಾಹುವಾದ ಅರ್ಜುನನೇ, ನೀನು ಇದಕ್ಕಾಗಿ ದುಃಖಪಡಬಾರದು.

ವೇದಾಂತ ದೃಷ್ಟ್ಯಾ ಆತ್ಮನು ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ, ಎಂಬುದನ್ನು ವರ್ಣಿಸಿ, ಅದನ್ನೇ ಪ್ರಾಪಂಚಿಕ ರೀತ್ಯಾ ವರ್ಣಿಸಲಾಗಿದೆ. ಶರೀರಧಾರಿಯು ಪುನಃ ಪುನಃ ಹುಟ್ಟುತ್ತಾನೆ ಮತ್ತು ಪುನಃ ಪುನಃ ಸಾಯುತ್ತಾನೆ ಎಂದು ತಿಳಿಯುವುದಾದರೆ ಇದು ಸ್ವಾಭಾವಿಕ ಹಾಗೂ ಅಪರಿಹಾರ್ಯ ಎಂದಂತಾಯಿತು. ಮನೆಯ ಅಂಗಳದಲ್ಲಿ ಮಳೆಗಾಲದಲ್ಲಿ ನೀರು ನಿಂತರುವಾಗ ಅನೇಕಾನೇಕ ನೀರಿನಗುಳ್ಳೆಗಳು ಹುಟ್ಟುತ್ತವೆ ಮತ್ತು ಸಾಯುತ್ತವೆ. ಇದರಂತೆಯೇ ಮನುಷ್ಯನು ಹುಟ್ಟುತ್ತಾನೆ ಮತ್ತು ಸಾಯುತ್ತಾನೆ. ಅಂದಮೇಲೆ ಅದಕ್ಕಾಗಿ ದುಃಖಪಡಬೇಕಾದ ಕಾರಣವೇ ಇಲ್ಲ.
ಏಕೆಂದರೆ

ಜಾತಸ್ಯ ಹಿ ಧ್ರುಮೋ ಮೃತ್ಯುಧ್ರ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇ„ರ್ಥೇ ನ ತ್ವಂ ಶೋಚಿತು ಮರ್ಹಸಿ || 27 ||
ಅರ್ಥ : ಹುಟ್ಟಿದವನು ಸಾಯುವುದು ನಿಶ್ಚಯ ಅಂತೆಯೇ ಸತ್ತವನೂ ಪುನಃ ಹುಟ್ಟೂವುದೂ ನಿಶ್ಚಯ. ಅಂದಮೇಲೆ ತಪ್ಪಿಸಲು ಆU ದೇಯಿರುವ ಈ ವಿಷಯದಲ್ಲಿ ನೀನು ದುಃಖಪಡಕೂಡದು .
ಜೀವನದಲ್ಲಿ ಹುಟ್ಟು ಸಾವುಗಳು ಅನಿವಾರ್ಯವಾದವುಗಳೂ, ಮತ್ತು ಮನುಷ್ಯನ ಹತೋಟಿಗೆ. ಸಿಗದವುಗಳೂ ಆಗಿವೆ. ನಾವು ಬೇಕೆನ್ನಲಿ ಬೇಡವೆನ್ನಲಿ ಅವು ಪುನಃ ಪುನಃ ಒದಗುತ್ತಲೇ ಇರುತ್ತವೆ. ಆದುದರಿಂದ ಇದಕ್ಕಾಗಿ ದುಃಖಪಟ್ಟರೆ ಯಾವ ಫಲವೂ ಇಲ್ಲ.

ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ |
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ || 28 ||
ಅರ್ಥ : ಜೀವಿಗಳು ಹುಟ್ಟುವ ಮೊದಲು ಅವ್ಯಕ್ತವಾಗಿದ್ದುವು, ಅಂದರೆ ಕಣ್ಣಿಗೆ ಕಾಣುತ್ತಿರಲಿಲ್ಲ. ಸತ್ತನಂತರದ ಸಹ ಕಾಣದಾಗುತ್ತವೆ. ಮಧ್ಯಕಾಲದಲ್ಲಿ ಮಾತ್ರ ಅಂದರೆ ಜೀವಂತಕಾಲದಲ್ಲಿ ಕಾಣುತ್ತವೆ. ಇದಕ್ಕಾಗಿ ದುಃಖವೇಕೆ .
ಈ ವರ್ಣನೆಯು ಸಾಮಾನ್ಯವ್ಯವಹಾರ ದೃಷ್ಟಿಯಿಂದ ಮಾಡಲ್ಪಟ್ಟಿದೆ. ಶ್ರೀಕೃಷ್ಣನು, ಅರ್ಜುನನ ಮನೋದೌರ್ಬಲ್ಯವನ್ನೂ ನಿವಾರಿಸಲು ಇದುವರೆಗೆ ಆಧ್ಯಾತ್ಮಕ ದೃಷ್ಟಿಯಿಂದ ವಿಷಯ ಸಮರ್ಥನೆ ಮಾಡಿ ಈಗ ಅದನ್ನೇ ಸಾಮಾನ್ಯ ವ್ಯವಹಾರ ದೃಷ್ಟಿಯಿಂದ ವರ್ಣಿಸುತ್ತಿದ್ದಾನೆ. ಮುಂದೆ ಇದೇ ತತ್ವವನ್ನು ಕರ್ಮಯೋಗ, ಭಕ್ತಿಯೋಗಗಳ ಮುಖಾಂತರ ವರ್ಣಿಸಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಪ್ರತಿಯೊಂದು ದೃಷ್ಟಿಯಿಂದಲೂ ಅರ್ಜುನನ ವಾದವು ಒಪ್ಪತಕ್ಕದ್ದಲ್ಲವೆಂದೂ, ಅವನು ರಾಜನಾಗಿ ಧಾರ್ಮಿಕಪಕ್ಷದಿಂದ ಯುದ್ಧಮಾಡುವುದು ಅವನ ಧರ್ಮವೆಂದೂ. ಅದಕ್ಕಾಗಿ ಅವನು ಹಿಂಜರಿಯಬಾರದೆಂದೂ ಸಮರ್ಥಿಸಲಾಗಿದೆ.
ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳೂ ಕಾರ್ಯ-ಕಾರಣ ನಿಯಮದಂತೆ ಚಲಿಸುತ್ತಿವೆ. ಇವತ್ತಿನ ‘ಕಾರ್ಯ’ವು ನಿನ್ನೆಯ ‘ಕಾರಣ’ ದಿಂದ ಜನಿಸಿದೆ. ಕಾರಣವು ಸಾಮಾನ್ಯವಾಗಿ ಅವ್ಯಕ್ತವಾಗಿದ್ದು ಕಾರ್ಯವು ಮಾತ್ರ ವ್ಯಕ್ತವಾಗಿದೆ.
ಇದೇ ರೀತಿ ಇವತ್ತಿನ ಕಾರ್ಯವು ಪ್ರಪಂಚವು ಸೃಷ್ಟಿಯಾಗುವ ಮೊದಲು ಅವ್ಯಕ್ತ ಸ್ಥಿತಿಯಲ್ಲಿತ್ತು. ಈಗ ಸ್ವಲ್ಪ ಕಾಲ ಮಾತ್ರವ್ಯಕ್ತವಾಗಿದೆ. ಮುಂದೆ ನಾಶವಾದನಂತರ ಪುನಃ ಅವ್ಯಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ತಿರುಗುತ್ತಿರುವ ಚಕ್ರದ ಹಲ್ಲುಗಳು ಕೆಳಕ್ಕೆ ಅಥವಾ ಮೇಲಕ್ಕೆ ಬಂದಿತೆಂದು ದುಃಖಪಡುವುದಾದರೂ ಏತಕ್ಕೆ ?
ನಾವು ಕನಸಿನಲ್ಲಿ ಕಾಣುವ ಹೆಂಡತಿ, ಮಕ್ಕಳು ನಿದ್ರೆಬರುವ ಮೊದಲು ಇರಲಿಲ್ಲ ಮತ್ತು ಎಚ್ಚರವಾದ ನಂತರವೂ ಇರುವುದಿಲ್ಲ ನಿಜವಾಗಿಯೂ ಹುಟ್ಟದೆ ಇರುವ ಕನಸಿನ ಹೆಂಡತಿ ಮಕ್ಕಳಿಗಾಗಿ ದುಃಖಪಡುವುದು ವ್ಯರ್ಥವೇ ಸರಿ. ಇವರು ನಮಗೆ ಕನಸಿನಲ್ಲಿ ನಿಜವಾದ ಹೆಂಡತಿ ಮಕ್ಕಳೆಂದು ಕಂಡುಬಂದರೂ ಎಚ್ಚರವಾದ ನಂತರ ನಿಜ ಸ್ಥೀತಿಯ ಅರಿವಾಗುತ್ತದೆ. ಪ್ರಪಂಚದ ಆಗು ಹೋಗುಗಳೆಲ್ಲವೂ ಈ ಕನಸಿನಂತೆಯೇ ಅಸತ್ಯ ಎಂದು ತಿಳಿಯಬೇಕು. ಈ ತತ್ವವನ್ನು ಪುನಃ ಪುನಃ ಹೇಳಿದಾಗ್ಯೂ ನಮಗೆ ಇದರಲ್ಲಿ ದೃಢವಾದ ನಂಬಿಕೆ ಹುಟ್ಟುವುದಿಲ್ಲ

ಈ ನ್ಯೂನತೆಯು ಎಲ್ಲರಲ್ಲಿಯೂ ಇದೆ
ಆಶ್ಚರ್ಯವತ್ಪಶ್ಯತಿ ಕಶ್ಚಿದೇನಮಾಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯಮಚ್ಚೈನಮನ್ಯಃ ಶೃಣೋತಿ ಶ್ರುತ್ವಾಷ್ಯೇನಂ ವೇದ ನ ಚೈವ ಕಶ್ಚಿತ್ || 29 ||
ಅರ್ಥ : ಕೆಲವರು ಇದು ಒಂದು ಆಶ್ಚರ್ಯವೆಂದು ಕಾಣುತ್ತಾರೆ, ಕೆಲವರು ಹೇಳುತ್ತಾರೆ ಮತ್ತು ಆಶ್ಚರ್ಯವೆಂದು ಹೇಳಿದುದನ್ನು ಕೆಲವರು ಕೇಳುತ್ತಾರೆ. ಹೀಗೆ ಕಂಡು ಹೇಳಿ ಕೇಳಿದಾಗ್ಯೂ ಯಾರೂ ಇದನ್ನು ಸರಿಯಾಗಿ ತಿಳಿಯಲಾರರು.
ನಾವು ನಮ್ಮ ಅಜ್ಞಾನ ಪ್ರಕೃತಿಯ ಮೂಲಕ ಸತ್ಯವಸ್ತುವನ್ನು ನೋಡಲು ಪ್ರಯತ್ನಪಡುತ್ತೇವೆ. ಆದುದರಿಂದ ಅದು ನಮ್ಮಿಂದ ಬಹುದೂರದಲ್ಲಿರುವಂತೆ ಕಾಣುತ್ತದೆ. ಆದರೆ ನಾವು ಪರಮಾತ್ಮನ ವಾಕ್ಯವನ್ನು ನಂಬುವುದಾದರೆ ಆತ್ಮತತ್ವವು ನಮ್ಮಿಂದ ದೂರವಿಲ್ಲದೆ, ಕೇವಲ ಅತೀ ಹತ್ತಿರದಲ್ಲಿಯೇ ನಮ್ಮೊಳಗೇ ಇದೆ. ಕನಸುಕಾಣುವವನು ಎಚ್ಚರಿಸುವವನಿಗಿಂತಲೂ ಬಹುದೂರದಲ್ಲಿದ್ದಾನೆ. ಎಚ್ಚರಾದ ನಂತರ ಅವನೇ ಇವನಾಗುತ್ತಾನೆ.
ಮನುಷ್ಯನಲ್ಲಿ ಆತ್ಮ ತತ್ವದ ಜಾಗೃತಿಯುಂಟಾದರೆ ಅವನೇ ಪರಮಾತ್ಮನಾಗುತ್ತಾನೆ. ಪರಮಾತ್ಮನು ತನ್ನ ಆತ್ಮತೇಜಸ್ಸನ್ನು ಮರೆತು ಮನುಷ್ಯನಾಗುತ್ತಾನೆ. ಜ್ಞಾನಿಯು ತಾನು ‘ದೇಹಧಾರಿಯಾದ ಆತ್ಮ’ ಎಂದು ತಿಳಿಯುತ್ತಾನೆ. ಅಜ್ಞಾನದಿಂದ ಕವಿದ ಮನುಷ್ಯನು ತಾನು ಆತ್ಮದಿಂದ ಕೂಡಿದ ದೇಹ ಎಂದು ತಿಳಿಯುತ್ತಾನೆ.

ಶ್ರೀಕೃಷ್ಣ ಪರಮಾತ್ಮನು ತನ್ನ ತೀರ್ಮಾನವನ್ನು ಹೇಳಿದ್ದಾನೆ .
ದೇಹೀ ನಿತ್ಯಮವಧ್ಯೋ„ಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸೀ || 30 ||
ಅರ್ಥ : ಭಾರತನೇ! ಎಲ್ಲಾ ಭೂತಗಳಲ್ಲಿಯೂ (ಸೃಷ್ಟಿಯಾದ ಎಲ್ಲಾ ಚರಾಚರ ವಸ್ತುಗಳಿಗೂ ಭೂತ ಎಂದು ಹೆಸರು) ನೆಲೆಸಿರುವ ‘ಆತ್ಮ’ ನನ್ನು ಕೊಲ್ಲುವುದು ಸಾಧ್ಯವಿಲ್ಲವೆಂದೂ, ನಾಶವಾಗುವುದು ಕೇವಲ ಹೊರಗಿನ ಕವಚ-ಶರೀರ-ಎಂದೂ, ಅದಕ್ಕಾಗಿ ದುಃಖಿಸದೆ ಯುದ್ಧಮಾಡಬೇಕೆಂದೂ ಹೇಳಲಾಗಿದೆ.

ಇದೇ ತತ್ವವನ್ನು ಕ್ಷತ್ರಿಯರ ಧರ್ಮದ ದೃಷ್ಟಿಯಿಂದ ವಿವರಿಸಲಾಗಿದೆ
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ |
ಧಮ್ರ್ಯಾದ್ಧಿ ಯುದ್ಧಾಚ್ಛ್ರೇಯೋ„ನ್ಯತ್‍ಕ್ಷತ್ರಿಯಸ್ಯ ನ ವಿದ್ಯತೇ || 31 ||
ಅರ್ಥ : ನಿನ್ನ ಧರ್ಮದ ದೃಷ್ಟಿಯಿಂದ ನೋಡುವುದಾದರೆ ಸಹ ನೀನು ಮನಸ್ಸಿನಲ್ಲಿ ನಡುಗಬೇಕಾಗಿಲ್ಲ. ಏಕೆಂದರೆ ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತ ಹಿರಿದಾದುದು ಬೇರೊಂದಿಲ್ಲ.
ತನ್ನ ದೇಶದ ಜನರ ಹಿತಕ್ಕಾಗಿ ದೇಶದ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಮತ್ತು ಧರ್ಮಸ್ಥಾಪನೆಗಾಗಿ ಯುದ್ಧಮಾಡುವುದು ಕ್ಷತ್ರಿಯ ರಾಜರ ಧರ್ಮವಾಗಿದೆ. ಕ್ಷತ್ರಿಯನಲ್ಲಿರಬೇಕಾದ ಎಲ್ಲಾ ಗುಣಗಳು ಅರ್ಜುನನಲ್ಲಿವೆ. ಈಗ ಒದಗಿದ ಯುದ್ಧವು ಧರ್ಮ ಮತ್ತು ಅಧರ್ಮ ಪಕ್ಷಗಳಲ್ಲಿದೆ.
ಅರ್ಜುನನು ಧರ್ಮಪಕ್ಷದ ವರವಾಗಿ ಯುದ್ಧ ಮಾಡಲು ನಿಂತಿದ್ದಾನೆ. ಧರ್ಮದ ಪರವಾಗಿ ಯುದ್ಧಮಾಡುವ ಅವಸರ ಸಿಗುವುದು ಸುದೈವವೆಂದು ಕ್ಷತ್ರಿಯನು ತಿಳಿಯುತ್ತಾನೆ.

ಪೆÇೀಷಕವಾದ ಇತರೆ ಕಾರಣಗಳನ್ನೂ ಹೇಳಲಾಗಿದೆ.

ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ |
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ || 32 ||
ಅರ್ಥ : ತಾನಾಗಿಯೇ ಒದಗಿ ಬಂದ, ಸ್ವರ್ಗಪ್ರವೇಶಕ್ಕೆ ಬಾಗಿಲನ್ನು ತೆರೆಯುವ ಇಂತಹ ಧರ್ಮಯುದ್ಧದಲ್ಲಿ ಭಾಗವಹಿಸಲು ಆಸ್ಪದ ಸಿಗುವ ಕ್ಷತ್ರಿಯರು ತಾವು ಸುಖಿಗಳೆಂದು ತಿಳಿಯುತ್ತಾರೆ.
ತನ್ನ ವಾದವು ಅರ್ಜುನನ ಮೇಲೆ ಪರಿಣಾಮವನ್ನುಂಟು ಮಾಡುತ್ತಿದೆ ಎಂಬುದನ್ನು ಕಂಡು ಕೃಷ್ಣನು, ಇದೇ ಧಾಟಿಯಲ್ಲಿ ಮುಂದುವರಿಸುತ್ತಾ, ಅರ್ಜುನನು ಯುದ್ಧ ಮಾಡದೆ ಹಿಂಜರಿದರೆ ಏನಾಗಬಹುದೆಂಬುದನ್ನು ಸುಂದರವಾಗಿ ಚಿತ್ರಿಸಿದ್ದಾನೆ.

ಅಥ ಚೇತ್ತ್ವಮಿಮಂ ಧಮ್ರ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ || 33 ||
ಅರ್ಥ : ನೀನು ಈ ಧರ್ಮಯುದ್ಧವನ್ನು ಮಾಡದಿದ್ದರೆ ಧರ್ಮಭ್ರಷ್ಟನಾಗುವುದರ ಜೊತೆಗೆ ಇದುವರೆಗೆ ಗಳಿಸಿದ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನೂ ಸಂಪಾದಿಸುತ್ತೀಯೆ.
ಕ್ಷತ್ರಿಯನಿಗೆ ಅಧರ್ಮದ ವಿರುದ್ಧ ಯುದ್ಧ ಮಾಡುವುದು ಧರ್ಮ ಕಾರ್ಯವೂ, ಕರ್ತವ್ಯವೂ ಆಗಿರುವುದರಿಂದ ಕ್ಷತ್ರಿಯನಾದವನು ಈ ಯುದ್ಧದಿಂದ ವಿಮುಖನಾದರೆ ಕರ್ತವ್ಯ ಭ್ರಷ್ಟನಾಗುವುದರ ಜೊತೆಗೆ ಪಾಪವನ್ನೂ ಸಂಪಾದಿಸುತ್ತಾನೆ. ಏಕೆಂದರೆ ಧರ್ಮಭ್ರಷ್ಟರಾದವರನ್ನು ಯುದ್ಧದಲ್ಲಿ ಕೊಲ್ಲದಿರುವುದು ಧಾರ್ಮಿಕರನ್ನು ಕೊಂದಷ್ಟೇ ಪಾಪಕರವಾದುದು .
ಈ ಸಂದರ್ಭದಲ್ಲಿ ಪ್ರತಿಯೊಂದು ವ್ಯಕ್ತಿಯ ಧರ್ಮ, ಅಂದರೆ ಅವನ ‘ಸ್ವಧರ್ಮ’ ಎಂದರೇನೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅವಶ್ಯಕ. ಪ್ರತಿಯೊಂದು ಜೀವಿಯೂ ತಾನು ಹಿಂದಿನ ಜನ್ಮದಲ್ಲಿ ಮಾಡಿದ ವಿವಿಧ ಕರ್ಮಗಳ ವಾಸನಾ ಸಮುದಾಯಗಳನ್ನು ಭೋಗಿಸಿ ವಾಸನಾಮುಕ್ತನಾಗುವುದಕ್ಕಾಗಿ, ಅನುಕೂಲವಾದ ಶರೀರಗಳನ್ನು ಧರಿಸಿ ಜನ್ಮಕ್ಕೆ ಬರುತ್ತಾನೆ. ಅಂದರೆ ಈ ಜನ್ಮದಲ್ಲಿ ಧರಿಸಿದ ಶರೀರದ ಮೂಲಕ ಸಾಧ್ಯವಿದ್ದ ಮಟ್ಟಿಗೂ ವಾಸನೆಗಳನ್ನು ಭೋಗಿಸಿ ಬರಿದುಮಾಡಿಕೊಳ್ಳಬೇಕಾಗಿದೆ. ಈ ವಾಸನಾಸಮುದಾಯಗಳಿಗನುಸಾರವಾಗಿ ಆಯಾಯಾ ವ್ಯಕ್ತಿಯ ಧರ್ಮವನ್ನು ನಿರ್ಣಯಿಸಬೇಕು. ಈ ದೃಷ್ಟಿಯಿಂದ ಅರ್ಜುನನು ಕ್ಷತ್ರಿಯನಾಗಿರುವುದರಿಂದ ಸಾಹಸ, ಶೌರ್ಯ, ಧೈರ್ಯ, ಯಶಸ್ಸು, ಕೀರ್ತಿ, ಇವು ಅವನ ಧರ್ಮವಾಗಿವೆ. ಜೀವಿಯು, ಸಂಚಿತ ವಾಸನೆಗಳನ್ನು ಬರಿದು ಮಾಡಿಕೊಳ್ಳುವುದಕ್ಕೆ ಅನುಕೂಲವಾದ ಜಾತಿ, ಕುಲ, ಮಾತಾಪಿತೃಗಳು ಮತ್ತು ವಾತಾವರಣವನ್ನು ಆರಿಸಿಕೊಂಡು ಜನ್ಮವೆತ್ತುತ್ತಾನೆ.

ಜನ್ಮಕ್ಕೆ ಬಂದ ಮೇಲೆ ಸಂದರ್ಭವೊದಗಿದಂತೆಲ್ಲಾ ತನ್ನ ತನ್ನ ಸಂಗ್ರಹಿತ ವಾಸನಾ ಸಮುದಾಯಗಳನ್ನು ವಿವಿಧ ಭೋಗಗಳ (ಸುಖ-ದುಃಖ) ಮೂಲಕ ಬರಿದು ಮಾಡಿಕೊಳ್ಳಬೇಕಾಗಿದೆ. ಹೀಗೆ ಮಾಡದಿದ್ದರೆ ಮೊದಲೇ ಸಂಗ್ರಹವಾಗಿದ್ದ ವಾಸನಾಸಮುದಾಯಗಳ ಒತ್ತಡವು ಹೆಚ್ಚಾಗಿರುವುದರಿಂದ, ಅವು ಉಲ್ಬಣಾವಸ್ಥೆಗೆ ಹೋಗಿ ಮನಸ್ಸು ಬುದ್ಧಿಗಳ ಮೇಲೆ ಇನ್ನೂ ಹೆಚ್ಚು ಒತ್ತಡವನ್ನುಂಟು ಮಾಡಿ, ಬೇಡವೆಂದರೂ ಅವನಿಂದ ಅವನ ಪ್ರಕೃತಿ ಧರ್ಮಕ್ಕೆ ಅನುಗುಣವಾದ ಕರ್ಮಗಳನ್ನು ಮಾಡಿಸಿಯೇ ಬಿಡುತ್ತದೆ. ಇದು ಆ ವ್ಯಕ್ತಿಗಳಿಗೆ ಗೊತ್ತಿಲ್ಲದಂತೆ, ಅವನ ಹತೋಟಿಗೆ ಸಿಗದೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸದ್ಯಕೆ ಅರ್ಜುನನು ಯುದ್ಧಮಾಡುವುದಿಲ್ಲವೆಂದು ತಪ್ಪಿಸಿಕೊಂಡರೂ, ಯುದ್ಧದ ಕಾವು ಏರಿದ ಹಾಗೆ ಯುದ್ಧದ ವಾರ್ತೆಗಳು ಬಂದ ಹಾಗೆ, ಅವನ ಮಾನಸಿಕ ಉದ್ರೇಕ ಹಾಗೂ ಒತ್ತಡವು ಇನ್ನೂ ಹೆಚ್ಚಾಗಿ ಅವನನ್ನು ಯುದ್ಧ ಪ್ರವೃತ್ತನನ್ನಾಗಿ ಮಾಡುತ್ತದೆ
ಆದರೆ ವ್ಯಕ್ತಿಯು ಮನೋದೌರ್ಬಲ್ಯದಿಂದ ಅಥವಾ ತಪ್ಪು ತಿಳುವಳಿಕೆಯಿಂದ, ತಾತ್ಕಾಲಿಕ ಸುಖ, ಆಸೆ, ಶಾಂತಿಗಳಿಗಾಗಿ ತನ್ನ ಧರ್ಮಕ್ಕೆ ವಿರೋಧವಾದ ಕಾರ್ಯವನ್ನು ಮಾಡಿದರೆ ಅದು ಅವನ ಮನಸ್ಸಿನಲ್ಲಿ ಯಾವಾಗಲೂ ಸುತ್ತುತ್ತಲೇ ಇರುತ್ತದೆ, ಮತ್ತು ಸಂದರ್ಭವೊದಗಿದಾಗಲೆಲ್ಲ ಹೊಸ ಹೊಸ ಉದ್ರೇಕಗಳನ್ನುಂಟು ಮಾಡುತ್ತದೆ. ಇದು ಮಾನಸಿಕ ಪಾಪ .

ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇ„ವ್ಯಯಾಮ್ |
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ || 34 ||
ಅರ್ಥ : ನಿನಗೆ ಈ ರೀತಿ ಉಂಟಾದ ಅವಮಾನವನ್ನು (ನೀನು ಧರ್ಮಭ್ರಷ್ಟನಾದುದನ್ನು) ಜನರು ಪ್ರಚಾರ ಮಾಡುತ್ತಾರೆ. ಲೋಕದಲ್ಲಿ ಗೌರವದಿಂದ ಜೀವಿಸಿದ ವ್ಯಕ್ತಿಗೆ ಅಪಮಾನವೆಂಬುದು ಮರಣಕ್ಕಿಂತಲೂ ಕೆಡುಕಾದುದು.

ಇದೇ ವಿಷಯವನ್ನು ಕೃಷ್ಣನು ಇನ್ನೂ ಒತ್ತಿ ಹೇಳುತ್ತಿದ್ದಾನೆ.
ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ |
ಯೇಷಾಂ ಚ ತ್ವಂ ಬಹುಮತೋ ಭೂತ್ವಾಯಾಸ್ಯಸಿ ಲಾಘವಮ್ || 35 ||
ಅರ್ಥ : ನಿನಗೆ ಸಮಾನರಾದ ಮಹಾರಥರು ನೀನು ಯುದ್ಧದಿಂದ ಹೆದರಿ ಓಡಿ ಹೋಗಿರುವ ಹೇಡಿ ಎಂದು ತಿಳಿಯುತ್ತಾರೆ. ಇದುವರೆಗೆ ಯಾರು ನಿನ್ನನ್ನು ಮಹಾಪರಾಕ್ರಮಿ ಎಂದು ಗೌರವಿಸುತ್ತಿದ್ದರೋ ಅವರು ಇನ್ನು ಮೇಲೆ ನಿನ್ನನ್ನು ತುಚ್ಛವಾಗಿ ಕಾಣುತ್ತಾರೆ.

ಅಲ್ಲದೆ
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ |
ನಿಂದಂತಸ್ತವ ಸಾಮಥ್ರ್ಯಂ ತತೋ ದುಃಖತರಮ್ ನು ಕಿಮ್ || 36 ||
ಅರ್ಥ : ನಿನ್ನ ಶತ್ರುಗಳು, ನುಡಿಯಬಾರದಂತಹ ಕೆಟ್ಟ ಮಾತುಗಳಿಂದ ನಿನ್ನ ಪರಾಕ್ರಮವನ್ನು ತುಚ್ಛೀಕರಿಸಿ ನಿನ್ನನ್ನು ಬಹುವಾಗಿ ಹೀನಗಳೆಯುತ್ತಾರೆ. ಶೂರನಾದವನಿಗೆ ಇದಕ್ಕಿಂತ ದುಃಖಕರವಾದುದು ಬೇರೆ ಏನಿದೆ ?

ತನ್ನ ವಾದವು ಅರ್ಜುನನ ಮನಸ್ಸಿಗೆ ನಾಟಿತೆಂದು ತಿಳಿದು ಕೃಷ್ಣನು ಅದೇ ವಿಷಯವನ್ನು ಇನ್ನೂ ವಿವರಿಸಿ ಹೇಳುತ್ತಿದ್ದಾನೆ. ಇತಿಹಾಸಕಾರರು ನಿನ್ನನ್ನು ದೂಷಿಸುವುದಲ್ಲದೆ, ನೀನು ಇನ್ನೂ ಬದುಕಿರುವಾಗಲೇ ನಿನ್ನ ಸರಿಸಮಾನರು ಹಾಗೂ ಶತ್ರುಗಳು ನಿನ್ನನ್ನು ತೀರಾಕೆಟ್ಟ ಶಬ್ದಗಳಿಂದ ಬಯ್ಯುತ್ತಾರೆ ಹಾಗೂ ನೀನು ಯುದ್ಧದಿಂದ ಹೆದರಿ ಓಡಿಹೋದ ‘ಕ್ಷತ್ರಿಯ ವೀರ’ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ ಎಂಬಿತ್ಯಾದಿ ಮುಂದೊದಗಬಹುದಾದ ಅಪಮಾನಕರ ಸಂದರ್ಭಗಳನ್ನು ಕೃಷ್ಣನು ಎತ್ತಿ ತೋರಿಸಿದ್ದಾನೆ.

ಶತ್ರು ಸಮುದಾಯದಲ್ಲಿ ಕರ್ಣ ಮೊದಲಾದ ವೀರರೊಡನೆ
ಯುದ್ಧ ಮಾಡಿದರೆ ಆಗುವ ಲಾಭವನ್ನು ವಿವರಿಸಲಾಗಿದೆ.
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ || 37 ||
ಅರ್ಥ : ಶತ್ರುಪಕ್ಷದ ವೀರರೊಡನೆ ಯುದ್ಧಮಾಡುವಾಗ ಮಡಿದರೆ ನೀನು ಕೂಡಲೆ ‘ವೀರಸ್ವರ್ಗ’ ವನ್ನು ಪಡೆಯುತ್ತೀಯೆ ಅಥವಾ ಯುದ್ಧದಲ್ಲಿ ನೀನು ಜಯಶಾಲಿಯಾದರೆ ಈ ರಾಜ್ಯಕ್ಕೆ ಅಧಿಪತಿಯಾಗುತ್ತೀಯೆ. ಆದುದರಿಂದ ಅರ್ಜುನಾ, ಯುದ್ಧ ಮಾಡೆಬೇಕೆಂಬ ದೃಢನಿಶ್ಚಯದಿಂದ ಎದ್ದೇಳು. ಯುದ್ಧದಲ್ಲಿ ಮಡಿದ ಕ್ಷತ್ರಿಯರಿಗೆ ವೀರಸ್ವರ್ಗವು ಲಭಿಸುತ್ತದೆಂದೂ ಅಲ್ಲಿ ದೀರ್ಘಕಾಲ ಸುಖ ಸಿಗುತ್ತದೆಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ . ಅದನ್ನೇ ಶ್ರೀಕೃಷ್ಣನು ಪುನಃ ಅರ್ಜುನನಿಗೆ ತಿಳಿಸುತ್ತಿದ್ದಾನೆ. ಗೆದ್ದರಂತೂ ಭೂಮಿಯ ಒಡೆತನ ಸಿಗುವುದರ ಜೊತೆಗೆ, ಧರ್ಮದ ಪಕ್ಷದಿಂದ ಯುದ್ಧ ಮಾಡಿದ್ದರ ಫಲವಾಗಿ ಮುಂದೆ ವೀರಸ್ವರ್ಗವು ಸಿಕ್ಕೇ ಸಿಗುತ್ತದೆ. ಹೀಗೆ ಯುದ್ಧದಲ್ಲಿ ಸತ್ತರೂ ಲಾಭ ಗೆದ್ದರೂ ಲಾಭ, ಎಂದು ಅರ್ಜುನನನ್ನು ಹುರಿದುಂಬಿಸಿದ್ದಾನೆ.

ಯುದ್ಧಮಾಡುವಾಗ ಮಾನಸಿಕ ಭಾವವು ಹೇಗಿರಬೇಕು ?

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |
ತತೋ ಯುದ್ಧಾಯ ಯುಜ್ಯಸ್ವನೈವಂ ಪಾಪಮವಾಪ್ಸ್ಯಸಿ || 38 ||
ಅರ್ಥ : ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಇವುಗಳೆಲ್ಲದರಲ್ಲಿಯೂ, ಮಾನಸಿಕ ಉದ್ರೇಕಕ್ಕೆ ಆಸ್ಪದಕೊಡದೆ ಮನಸ್ಸಿನ ಸಮತ್ವವನ್ನು ಕಾಪಾಡಿಕೊಂಡು ಯುದ್ಧಮಾಡು. ಹೀಗೆ ಮಾಡಿದರೆ ಇಂತಹ ಯುದ್ಧದಿಂದ ನಿನಗೆ ಪಾಪವು ಘಟಿಸುವುದಿಲ್ಲ.
ಗೀತೆಯಲ್ಲಿ ಈ ಶ್ಲೋಕದಿಂದ ಕರ್ಮಯೋಗದ ವಿವರಣೆಯು ಪ್ರಾರಂಭವಾಗಿದೆ. ಇಲ್ಲಿ ಕರ್ಮಯೋಗಕ್ಕೆ ಒಂದು ಹೊಸರೂಪವನ್ನು ಕೊಡಲಾಗಿದೆ. ಅದು ಉಪನಿಷತ್ತುಗಳನ್ನು ಆಧರಿಸಿದೆ. ಹೇಳುವ ವಿಧಾನದಲ್ಲಿ ಮಾತ್ರ ಹೊಸತನವಿದೆ .
ಮೇಲಿನ ಶ್ಲೋಕದಲ್ಲಿ ವಿವರಿಸಿದ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯಗಳು, ಕ್ರಮವಾಗಿ ಬೌದ್ಧಿಕ, ಮಾನಸಿಕ, ಶಾರೀರಿಕ, ಸಂವೇದನೆಗಳನ್ನು ಸೂಚಿಸುತ್ತದೆ. ನಾವು ಪ್ರತಿಯೊಂದು ಕರ್ಮವನ್ನು ಮಾಡುವಗಲೂ ಈ ಮೂರೂ ದೃಷ್ಟಿಯಿಂದಲೂ ಸಮತ್ವವನ್ನು ಕಾಯ್ದುಕೊಳ್ಳಬೇಕು.
ನಾವು ಸಮುದ್ರ ಸ್ನಾನದ ಸುಖವನ್ನು ಅನುಭವಿಸಬೇಕಾದರೆ ನೀರಿನ ತೆರೆಗಳ ಮಧ್ಯದಲ್ಲಿಯೇ ಸ್ನಾನ ಮಾಡುವುದನ್ನು ಕಲಿಯಬೇಕು. ಒಂದೋ ದೊಡ್ಡ ಅಲೆಯು ಬಂದಾಗ ಅದರ ಬುಡದಲ್ಲಿ ಮುಳುಗಬೇಕು, ಇಲ್ಲವೇ ಸಣ್ಣ ಅಲೆಗಳು ಬಂದಾಗ್ಯೇ ಅವುಗಳ ಮೇಲೆ ಈಸಬೇಕು. ಹೀಗೆ ಮಾಡದಿದ್ದರೆ ಅಲೆಗಳು ನಮ್ಮನ್ನೂ ಕೊಚ್ಚಿಕೊಂಡು ಹೋಗಿ ಮುಳುಗಿಸಿ ಬಿಡುತ್ತವೆ. ಅಲೆಗಳೆಲ್ಲವೂ ಬಂದು ನಿಂತು ಹೋಗುವವರೆಗೂ ಕಾಯುತ್ತೇನೆಂದರೆ ಸಮುದ್ರ ಸ್ನಾನವನ್ನು ಮಾಡುವಂತೆಯೇ ಇಲ್ಲಿ. ಏಕೆಂದರೆ ಅಲೆಗಳು ಎಂದಿಗೂ ನಿಲ್ಲುವುದಿಲ್ಲ. ಸತತವೂ ಬರುತ್ತಲೇ ಇರುತ್ತವೆ. ನಮ್ಮ ಜೀವನವು ಸಹ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ ಎಂಬ ಅಲೆಗಳಿಂದ ತುಂಬಿಕೊಂಡಿದೆ. ಇವು ಯಾವಾಗಲೂ ಇರತಕ್ಕವುಗಳೇ.
ಹೀಗೆ ನಮ್ಮ ಜೀವನವು ಅಲೆಗಳಿಂದ ತುಂಬಿದ ಸಮುದ್ರದಂತಾದರೆ, ನಾವು ಈ ಅಲೆಗಳ ಮಧ್ಯದಲ್ಲಿ ಜೀವಿಸುವ ಕಲೆಯನ್ನು ಕಲಿಯಲೇಬೇಕು. ಸಮುದ್ರದ ಮಧ್ಯದಲ್ಲಿರುವ ದೀಪಸ್ತಂಭವು ಅಲೆಗಳ ಏರಿಳಿತಗಳಿಂದ ಸ್ವಲ್ಪವೂ ಧೃತಿಗೆಡದೆ, ಎಲ್ಲಾ ಸಂದಭಗಳಲ್ಲಿಯೂ ಶಾಂತವಾಗಿರುವಂತೆ, ಮನುಷ್ಯರು ಸಹ ಸುಖ-ದುಃಖಾದಿ ಅಲೆಗಳಿಂದ ಧೃತಿಗೆಡದೆ ಶಾಂತವಾಗಿದ್ದು, ತನ್ನ ಕಾರ್ಯವನ್ನು ಮಾಡುತ್ತಿದ್ದರೆ. ಅವನಿಗೆ ಯಶಸ್ಸು ಸಿಗುತ್ತದೆಂದು ಇಲ್ಲಿ ಪರ್ಯಾಯವಾಗಿ ಸೂಚಿಸಲಾಗಿದೆ .

ಈ ರೀತಿಯಾಗಿ ಸುಖ-ದುಃಖಾದಿಗಳಲ್ಲಿ ಸಮತ್ವವನ್ನು ಕಾಪಾಡಿಕೊಂಡು ಕರ್ಮಮಾಡುವುದರಿಂದ, ಸಂಜಿತವಾಸನೆಗಳನ್ನು ಬರಿದುಮಾಡಿಕೊಳ್ಳುವುದು ಸಾಧ್ಯವಿದೆ. ಹೀಗೆ ಮಾಡದೆ ಅಹಂಭಾವನೆಯಿಂದ ಕರ್ಮಮಾಡಿದರೆ ವಾಸನೆಗಳುಬಂದಾಗುವ ಮಾರ್ಗಗಳು ಮುಚ್ಚಿದಂತಾಗಿ ಹಳೆಯ ವಾಸನೆಗಳು ಒಳಗೇ ಉಳಿಯುವುದರ ಜೊತೆಗೆ ಹೊಸ ವಾಸನೆಗಳೂ ಹುಟ್ಟುತ್ತವೆ. ಸಾರಾಂಶವೇನೆಂದರೆ, ಅಹಂಭಾವದಿಂದ ಕರ್ಮಮಾಡಿದರೆ ಅದು ಹೊಸವಾಸನೆಗಳಿಗೆ ಕಾರಣವಾಗುತ್ತದೆ. ‘ಮಮ’ ಕಾರವನ್ನು ತ್ಯಜಿಸಿ ಸುಖ-ದುಃಖಾದಿಗಳಲ್ಲಿ ಸಮಭಾವವನ್ನಿಟ್ಟುಕೊಂಡು ಕರ್ಮಮಾಡಿದರೆ ಅಂತಹ ಕರ್ಮದಿಂದ ಲೇಪವಿಲ್ಲ. ಅಂದರೆ ಹೊಸ ವಾಸನೆಗಳು ಹುಟ್ಟುವುದಿಲ್ಲ. ಜೊತೆಗೆ ಹಿಂದಿನಸಂಚಿತ ವಾಸನೆಗಳೂ ಬರಿದಾಗುತ್ತವೆ.

ಏಷಾ ತೇ„ಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು |
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಪಿ || 39 ||
ಅರ್ಥ : ನಿನಗೆ ಇರುವರೆಗೆ ಸಾಂಖ್ಯಯೋಗದ ರೀತ್ಯಾ ಜ್ಞಾನವನ್ನು ವಿವರಿಸಿ ಹೇಳಲಾಯಿತು. ಈಗ ಅದೇ ವಿಷಯವನ್ನು ಯೋಗ ಅಂದರೆ ಕರ್ಮಯೋಗ ರೀತ್ಯಾ ಹೇಳುತ್ತೇನೆ. ಈ ಬುದ್ಧಿಯಿಂದ ಕೂಡಿ, ಪಾರ್ಥನೇ, ನೀನು ಕರ್ಮವನ್ನೂ ಮಾಡಿದೆಯಾದರೆ ಕರ್ಮಬಂಧನಗಳಿಂದ ಬಿಡುಗಡೆಯನ್ನು ಹೊಂದುತ್ತೀಯೆ.
ಆತ್ಮಜ್ಞಾನದ ವಿಚಾರವನ್ನು ಇದುವರೆಗೆ ಸಾಂಖ್ಯಶಾಸ್ತ್ರದ ರೀತ್ಯಾ ಅಂದರೆ ತರ್ಕಯುಕ್ತವಾಗಿ ವಿವರಿಸಲಾಯಿತು. ಇದೇ ವಿಷಯವನ್ನು ಈಗ ಬೇರೊಂದು ವಿಧಾನದಿಂದ–ಕರ್ಮಯೋಗ ರೀತ್ಯಾ– ವಿವರಿಸಲಾಗುತ್ತದೆ ಯುದ್ಧದಲ್ಲಿ ತನ್ನ ಗುರುಗಳು, ಬಾಂಧವರು ಮೊದಲಾದವರನ್ನು ಕೊಂದರೆ ತನಗೆ ಪಾಪವುಂಟಾಗುತ್ತದೆ ಎಂಬ ಅರ್ಜುನನ ಮನಃಕ್ಲೇಶವನ್ನು ನಿವಾರಿಸುವುದಕ್ಕಾಗಿ ಇನ್ನೊಂದು ವಿಧವಾಗಿ ವರ್ಣಿಸಲಾಗಿದೆ. ಕರ್ಮಯೋಗ ತತ್ವಕ್ಕನುಗುಣವಾಗಿ, ಮಾನಸಿಕ ಸಮತ್ವದಿಂದ ಯುದ್ಧ ಮಾಡಿದರೆ, ಆ ಕರ್ಮದಿಂದ ಯಾವ ಬಂಧನವೂ ಉಂಟಾಗುವುದಿಲ್ಲವೆಂದೂ ಪಾಪವು ಘಟಿಸುವುದಿಲ್ಲವೆಂದೂ, ಮೊಟ್ಟಮೊದಲೈಗೆ ಆಶ್ವಾಸನೆಯನ್ನು ಕೊಡಲಾಗಿದೆ.
ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮದಿಂದ ನಮ್ಮ ಮನಸ್ಸಿನ ಮೇಲೆ ಉಂಟಾದ ‘ವಾಸನೆ’ ಯ ಪರಿಣಾಮವಾಗಿ, ನಾವು ಈ ಜನ್ಮದಲ್ಲಿ ಹೇಗೆ ಸುಖ-ದುಃಖಾದಿಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಅವು ನಮ್ಮ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡದಂತೆ ಹೀಗೆ ಪರಿಹರಿಸಿಕೊಳ್ಳಬಹುದು, ಎಂಬುದನ್ನು ಈ ಸಂದರ್ಭದಲ್ಲಿ ತಿಳಿದುಕೊಳ್ಳುವುದು ಉಪಯುಕ್ತವಾಗಿದೆ.
ಮದ್ರಾಸಿನಲ್ಲಿ ಕಳೆದ ವರ್ಷ ರಮಣ ಎಂಬ ವ್ಯಕ್ತಿಯು ಮಾಡಿದ ಅಪರಾಧಕ್ಕಾಗಿ, ಈಗ ಮುಂಬಯಿಯಲ್ಲಿರುವ ಒಬ್ಬ ಸಾಧುವು ಶಿಕ್ಷಿಸಲ್ಪಡಬೇಕಾದರೆ, ಅಪರಾಧಿಯಾದ ರಮಣನಿಗೂ, ಮುಂಬಯಿಯ ಸಾಧುವಿಗೂ ಯಾವುದೋ ಒಂದು ಸಮಾನತೆಯಿರೆಬೇಕು. ಕಾಯಿದೆಯ ನಿಯಮಗಳು ಮದ್ರಾಸಿನಿಂದ ಮುಂಬಯಿಯವರೆಗೂ ಬಂದು, ಆ ಸಾಮ್ಯತೆಯನ್ನು ಮುಂಬಯಿಯ ಸಾಧುವಿನಲ್ಲಿ ಕಂಡು ಅವನನ್ನು ಶಿಕ್ಷೆಗೆ ಗುರಿಪಡಿಸಿದೆ. ಇದೇ ರೀತಿ ನಮ್ಮ ಶಾಸ್ತ್ರಗಳು ಹೇಳುವುದೇನೆಂದರೆ–ಈಗ ಅನುಭೋಗಿಸುತ್ತಿರುವ ದುಃಖ ಗಳು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳ ಫಲವಾಗಿ ನಮಗೆ ದೊರೆತಿವೆ. ಈ ಪಾಪಕರ್ಮಗಳು ಹಿಂದಿನ ಜನ್ಮದಲ್ಲಿ ನಮ್ಮ ಅಂತರಂಗದ ಮೇಲೆ ಮುದ್ರಿತವಾಗಿದ್ದು, ಅವುಗಳನ್ನು ಈಗ ಅನುಭೋಗಿಸುತ್ತಿದ್ದೇವೆ. ಮನಸ್ಸಿನ ಮೇಲೆ ಮುದ್ರಿತವಾದ ಪಾಪಸಂಸ್ಕಾರಗಳು ಪಶ್ಚಾತ್ತಾಪದಿಂದಲೂ, ಮತ್ತು ದುಃಖದಿಂದ ಅತ್ತು ಕಣ್ಣೀರು ಸುರಿಸುವುದರಿಂದಲೂ ಕಡಿಮೆಯಾಗುತ್ತವೆ.
ನಾವು ಅನುಭವಿಸಬೇಕಾದ ಹಾಗೂ ಅನುಭವಿಸುತ್ತಿರುವ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಇತ್ಯಾದಿ ದ್ವಂದ್ವಗಳಲ್ಲಿ ನಮ್ಮ ಮನಸ್ಸನ್ನು ನಿರ್ಲಿಪ್ತವಾಗಿ ಶಾಂತ ವಾ ಗಿಟ್ಟುಕೊಳ್ಳುವುದರಿಂದ ಅಷ್ಟರ ಮಟ್ಟಿಗೆ ಅಹಂಭಾವವು ನಾಶವಾಗಿ, ನಾವು ಹಿಂದಿನ ಜನ್ಮದ ಕರ್ಮಫಲವನ್ನು ಅನುಭವಿಸಿದಾಗ್ಯೂ ಆ ಸುಖ-ದುಃಖಾದಿಗಳಿಂದ ನಿರ್ಲಿಪ್ತರಾಗಿರಬಹುದು. ಇಂತಹ ಕರ್ಮಗಳಿಂದ ಹೊಸವಾಸನೆಗಳು ಹುಟ್ಟುವುದಿಲ್ಲ. ಅಂತೆಯೇ ಈ ಕರ್ಮಗಳಿಂದ ಬಂಧನವಿಲ್ಲ.

ನನ್ನ ಹತ್ತಿರ ಗ್ರಾಮಫೆÇೀನ್ ರಿಕಾರ್ಡ್ ಇದ್ದ ಮಾತ್ರಕ್ಕೆ ನಾನು ಸಂಗೀತವನ್ನು ಕೇಳಲಾಗುವುದಿಲ್ಲ. ಅದನ್ನು ಯಂತ್ರದ ತಟ್ಟೆಯ ಮೇಲಿಟ್ಟು, ಸೂಕ್ತವಾದ ವೇಗದಿಂದ ತಿರುಗಿಸಿದಾಗ್ಯೂ, ಸಂಗೀತವಿರುವ ರಿಕಾರ್ಡ್ ಸಂಗೀತವನ್ನು ಹಾಡಲಾರದು. ರಿಕಾರ್ಡಿನ ಜೊತೆಗೆ ಸೂಜಿಯನ್ನು ಜೋಡಿಸಿದ್ದರೆ ಮಾತ್ರ ಸಂಗೀತ ಹೊರಡುತ್ತದೆ. ಇದೇ ರೀತಿಯಾಗಿ ಹಿಂದಿನ ಜನ್ಮದಲ್ಲಿ ನಮ್ಮ ಮನಸ್ಸಿನ ಮೇಲೆ ಮುದ್ರಿತ್ರವಾದ ವಾಸನೆಗಳು ತಮ್ಮಷ್ಟಕ್ಕೆ ತಾವೇ ನಮಗೆ ಸುಖದುಃಖಾದಿಗಳನ್ನುಂಟು ಮಾಡಲಾರವು. ಗ್ರಾಮಫೆÇೀನಿನ ಸೂಜಿಯಂತಿರುವ ಅಹಂಕಾರಯುತನಾದ ಜೀವಿಯು, ಈ ಜನ್ಮದ ಕರ್ಮಗಳನ್ನು ಅಹಂಭಾವದಿಂದ ಮಾಡಿದರೆ ಮಾತ್ರ ಹಿಂದಿನ ಜನ್ಮದ ಸುಖದುಃಖಾದಿಗಳನ್ನು ಅನುಭವಿಸಬೇಕಾಗುತ್ತದೆ. ಮನಸ್ಸನ್ನು ಈ ಎಲ್ಲಾ ಕರ್ಮಗಳಿಂದಲೂ ಹಿಂದೆಳೆದುಕೊಂಡರೆ, ಹಾಗೂ ಎಲ್ಲಾ ಸಂದರ್ಭಗಳಲ್ಲಿಯೂ ಮನಸ್ಸನ್ನು ಸಮತ್ವ ಸ್ಥಿತಿಯಲ್ಲಿಟ್ಟುಕೊಂಡರೆ ಸುಖ-ದುಃಖ ಭೋಗಗಳೇ ಇಲ್ಲ. ತಪ್ಪಿತಸ್ಥನಾದ ಕಳ್ಳನು ಪೆÇೀಲೀಸರೊಡನೆ ನಡೆದ ಚಕಮಕಿಯಲ್ಲಿ ಮೃತನಾದುದರಿಂದ ಅವನನ್ನು ಕೋರ್ಟಿಗೆ ಎಳೆದು ತರುವುದಾಗಲೀ, ಅವನನ್ನು ವಿಚಾರಿಸಿ ಶಿಕ್ಷೆ ಮಾಡುವುದಾಗಲೀ, ಸಾಧ್ಯವಿಲ್ಲ.

ನೇಹಾಭಿಕ್ರಮನಾಶೋ„ಸ್ತಿ ಪ್ರತ್ಯವಾಯೋ ನ ವಿದ್ಯತೇ |
ಸ್ವಲ್ಪಮಷ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ || 40 ||
ಅರ್ಥ : ಈ ರೀತಿಯಾಗಿ ಕರ್ಮಮಾಡುವುದರಿಂದ, ಮಾಡಿದ ಶ್ರಮವು ಸ್ವಲ್ಪವೂ ವ್ಯರ್ಥವಾಗುವುದಿಲ್ಲ. ವಿರುದ್ಧ ಫಲವಂತೂ ಎಂದಿಗೂ ಇಲ್ಲ. ಕರ್ಮಯೋಗದ ಈ ಜ್ಞಾನವನ್ನು ಸ್ವಲ್ಪವೇ ಪಡೆದಿದ್ದು ಆ ರೀತಿಯಲ್ಲಿ ಸ್ವಲ್ಪ ಮಾತ್ರವೇ ಕರ್ಮವನ್ನು ಆಚರಿಸಿದಾಗ್ಯೂ ಅದು ಮಹತ್ತರವಾದ ಫಲವನ್ನು ಕೊಡುತ್ತದೆ. ಕರ್ಮಕಾಂಡದಲ್ಲಿ ಉಕ್ತವಾದ ವೇದೋಕ್ತ ಕರ್ಮಗಳನ್ನು (ಇವು ವಿಶಿಷ್ಟ ಫಲ ಪ್ರಾಪ್ತಿಗಾಗಿ ಮಾಡುವ ಕರ್ಮಗಳು) ಮಾಡುವಾಗ ಕೆಲವು ವಿಶಿಷ್ಟ ವಿಧಿ ನಿಯಮಗಳನ್ನು ಪಾಲಿಸಬೇಕು. ಅವುಗಳಲ್ಲಿ ಲೋಪದೋಷಗಳುಂಟಾದರೆ ಇಚ್ಛಿತ ಫಲವು ಸಿಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ದೋಷವೂ ಘಟಿಸುತ್ತದೆ. ಇಂತಹ ಕರ್ಮಗಳನ್ನು ಪೂರ್ತಿಯಾಗಿ ಸಾಂಗಗೊಳಿಸದೆ ಅರ್ಧಕ್ಕೆ ಬಿಟ್ಟರೂ ಇಚ್ಛಿತ ಫಲವು ಸಿಗುವುದಿಲ್ಲ. ಗೀತೆಯ ಕಾಲದಲ್ಲಿ ಜನರು ಇಂತಹ ಕರ್ಮಗಳನ್ನೇ ಮಾಡುತ್ತಿದ್ದುದರಿಂದ ಕರ್ಮಫಲದ ಬಗ್ಗೆ ಅರ್ಜುನನ ಮನಸ್ಸಿನ ಗೊಂದಲವನ್ನು ನಿವಾರಿಸಲು”ಕರ್ಮಯೋಗಿ ದೃಷ್ಟಿಯಿಂದ ಮಾಡುವ ಕರ್ಮವು ಯಾವ ವಿರುದ್ಧ ಫಲವನ್ನು ಕೊಡುವುದಿಲ್ಲ. ಮಾಡಿದ ಸ್ವಲ್ಪ ಕರ್ಮವೂ ಸಹ ಮಹತ್ತಾದ ಫಲವನ್ನು ಕೊಡುತ್ತದೆ” ಎಂಬ ವೈಶಿಷ್ಟ್ಯವನ್ನು ಎತ್ತಿ ತೋರಿಸಲಾಗಿದೆ.

ಕರ್ಮಮಾಡುವಾಗ ಬುದ್ದಿಯ ಏಕಾಗ್ರತೆಯು ಅವಶ್ಯಕ

ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ |
ಬಹುಶಾಖಾ ಹ್ಯನಂತಾಶ್ಚ ಬುದ್ಧಯೋ„ವ್ಯವಸಾಯಿನಾಮ್ || 41 ||
ಅರ್ಥ : ಕುರುನಂದನನೇ! ಈ ಕರ್ಮಯೋಗಗಳಲ್ಲಿ ಬುದ್ಧಿಯು ಏಕಾಗ್ರವಾಗಿರಬೇಕು. ಏಕಾಗ್ರತೆಯಲ್ಲಿದ್ದರೆ ವಿಚಾರವು ನಾನಾ ದಿಕ್ಕಿಗೆ ನಾನಾ ವಿಷಯಗಳ ಕಡೆಗೆ ಓಡುತ್ತದೆ.
ಮನಸ್ಸನ್ನು ಏಕಾಗ್ರಮಾಡಿ ಪರಮಾತ್ಮನ ಕಡೆಗೆ ತಿರುಗಿಸಿ ಫಲಾಫಲದ ಕಡೆಗೆ ಲಕ್ಷ್ಯಕೊಡದೆ, ಮನಸ್ಸಿನ ಸಮತ್ವವನ್ನು ಕಾಯ್ದುಕೊಂಡು, ತನ್ನ ಶಕ್ತಿಗನುಗುಣವಗಿ ಕರ್ಮಮಾಡಿ, ಅದನ್ನು ಪರಮಾತ್ಮನಿಗೆ ಅರ್ಪಿಸಬಿಡುವುದರಿಂದ ಇಂತಹ ಕರ್ಮಗಳು ಮನಸ್ಸಿನ ಮೇಲೆ ಯಾವ ತರಹದ ಕ್ಷೋಭೆಯನ್ನೂ ಉಂಟುಮಾಡಲಾರವು, ಮತ್ತು ಈ ಕರ್ಮಗಳಿಂದ ಅಂತರಂಗದ ಮೇಲೆ ಯಾವ ವಾಸನೆಯೂ ಉಂಟಾಗುವುದಿಲ್ಲ. ಹೀಗೆ ಮಾಡದೆ, ಮನಸ್ಸಿನಲ್ಲಿ ಅನೇಕ ಆಸೆಗಳನ್ನಿಟ್ಟೂಕೊಂಡು ಕರ್ಮಮಾಡುವುದಾದರೆ, ಮನಸ್ಸು ಆ ಎಲ್ಲಾ ಆಸೆಗಳ ಕಡೆಗೆ ಓಡುತ್ತಾ, ಮನಸ್ಸಿನ ಸ್ಥೈರ್ಯವು ಕಡಿಮೆಯಾಗಿ ಆ ವ್ಯಕ್ತಿಯು ಯಾವ ಕಾರ್ಯವನ್ನೂ ಸಂಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಪೂರೈಸಲಾರದವನಾಗುತ್ತಾನೆ. ಆಶೆಯಿಂದ ಮಾಡುವ ಕರ್ಮಗಳ ವಾಸನೆಯು ಮನಸ್ಸಿನ ಮೇಲೆ ಸೂಕ್ಷ್ಮವಾಗಿ ಮುದ್ರಿತವಾಗಿರುತ್ತದೆ.
ಕೃಷ್ಣ ಪರಮಾತ್ಮನು ಕರ್ಮಯೋಗವನ್ನು ವಿವರಿಸುವಾಗ ಇದರ ಶ್ರೇಷ್ಠತೆಯನ್ನು ತೋರಿಸುವುದರ ಜೊತೆಗೆ, ಅದುವರೆಗೆ (ಆಕಾಲದಲ್ಲಿ) ಅರ್ಜುನನ ಹಾಗೂ ಆ ಕಾಲದ ಇತರೆ ಜನರು ತಿಳಿದುಕೊಂಡಂತೆ ಕರ್ಮ ಎಂದರೆ ವೇದೋಕ್ತ ‘ಬ್ರಾಹ್ಮಣ’ ವಿಭಾಗದಲ್ಲಿ ಹೇಳಿದ ’ಕರ್ಮಕಾಂಡದ ಕರ್ಮಗಳಲ್ಲ ಎಂಬುದನ್ನು ಸೂಚಿಸಿ ಕರ್ಮಯೋಗದ ಹೆಚ್ಚುಗಾರಿಕೆಯನ್ನು ತುಲನಾತ್ಮಕವಾಗಿ ತೋರಿಸಿದ್ದಾನೆ. ಇದೇ ವಿಷಯವನ್ನು ಮುಂದಿನ ಶ್ಲೋಕದಲ್ಲಿ ಇನ್ನೂ ವಿವರಿಸಿದ್ದಾನೆ. ಕರ್ಮಕಾಂಡೋಕ್ತ ಕರ್ಮಗಳನ್ನು ಮಾಡುವಾಗ, ಆ ವ್ಯಕ್ತಿಗೆ ಅದರಲ್ಲಿ ಹೇಳಿದ ್ಟ ವಿಶಿಷ್ಟ ಫಲವನ್ನು ಪಡೆಯಬೇಕೆಂಬ ಧ್ಯೇಯವಿರುತ್ತದೆ. ಅದರ ಸಾಧನೆಗಾಗಿಯೇ ಅವನು ಕರ್ಮವನ್ನು ಮಾಡುತ್ತಾನೆ. ಈ ಬೇರೆ ಬೇರೆ ಕರ್ಮಗಳನ್ನು ಮಾಡುವಾಗ ಮನಸ್ಸಿನಲ್ಲಿ ಆಸೆಗಳ ಹೊರೆಯನ್ನು ತುಂಬಿಕೊಂಡು ಬೇರೆ ಬೇರೆ ದೇವತೆಗಳ ಅರ್ಚನೆಯನ್ನು ಮಾಡುತ್ತಾನೆ. ಇಂತಹ ಆಸೆಗಳ ಹೊರೆಯಿಂದ ಮನಸ್ಸಿನ ಏಕಾಗ್ರತೆಯಾಗಲೀ, ಶಾಂತಿಯಾಗಲೀ, ಸಮತ್ವವಾಗಲೀ ದೊರೆಯುವುದಿಲ್ಲ.

ಚಂಚಲ ವೃತ್ತಿಯವರು ಏನು ಮಾಡುತ್ತಾರೆ ?

ಯಾಮಿಮಾಂ ಪುಷ್ಟಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ |
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ || 42 ||
ಅರ್ಥ : ಅರ್ಜುನನೇ! ವೇದಗಳಲ್ಲಿ (ಕರ್ಮಕಾಂಡ) ಹೇಳಿದ ಕರ್ಮಗಳ ಫಲಶ್ರುತಿಗಲನ್ನು ಹೊಗಳುವ ಹಾಗೂ ಪ್ರತಿಪಾದಿಸುವ ಅಜ್ಞಾನಿಗಳು, “ಇವರ ಹೊರತು ಬೇರೊಂದಿಲ್ಲ” ಎಂದು ಹೇಳುತ್ತಾರೆ.

ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಮ್ |
ಕ್ರಿಯಾವಿಶೇಷ¨ಹುಲಾಂ ಭೋಗೈಶ್ವರ್ಯಗತಿಂ ಪ್ರತಿ || 43 ||

ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತಚೇತಸಾಮ್ |
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ || 44 ||
ಅರ್ಥ : ಇವರು ವಿವಿಧ ಆಸೆಗಳಿಂದ ಕೂಡಿದ, ಸ್ವರ್ಗಪ್ರಾಪ್ತಿಯೇ ಧ್ಯೇಯವಾಗುಳ್ಳ, ಇನ್ನೂ ಉತ್ತಮವಾದ ಯೋನೀ ಹಾಗೂ ಕುಲಗಳಲ್ಲಿ ಜನ್ಮವನ್ನು ಪಡೆಯಬಹುದಾದ ಹಾಗೂ ನಾನಾತರಹದ ಭೋಗಗಳನ್ನೂ ಐಶ್ವರ್ಯವನ್ನೂ ಸಾಧಿಸಬಹುದಾದ ಅನೇಕ ವ್ರತಾದಿ ಕರ್ಮಗಳನ್ನು ಮಾಡುತ್ತಾರೆ. ವಿವಿಧ ಭೋಗ ಮತ್ತು ಐಶ್ವರ್ಯವನ್ನು ಪಡೆಯುವ ಆಸೆಯುಳ್ಳ ಜನರ ಮನಸ್ಸು, ಅವುಗಳ ಕಡೆಗೆ ಆಕರ್ಷಿಸಲ್ಪಡುವುದರಿಂದ ಅವರು ಮನಸ್ಸನ್ನು ಏಕಾಗ್ರವಾಗಿಟ್ಟುಕೊಳ್ಳಲಾರರು ಮತ್ತು ಸಮಾಧಿ ಸ್ಥಿತರಾಗಿ ಧ್ಯಾನಮಾಡಲಾರರು .
ಮಹಾಭಾರತ ಕಾಲದಲ್ಲಿಯು ಜನರು ವೇದದ ಕರ್ಮಕಾಂಡ ವಿಭಾಗದಲ್ಲಿ ಹೇಳಲ್ಪಟ್ಟ ಯಜ್ಞ , ಯಾಗ, ವ್ರತಾದಿಗಳನ್ನು ವಿಶಿಷ್ಟ ಕಾಮ್ಯಸಿದ್ಧಿಗಾಗಿ ಮಾಡುತ್ತಿರುವುದನ್ನು , ವೇದವ್ಯಾಸರು ತೀವ್ರವಾಗಿ ಖಂಡಿಸಿ, ಗೀತೆಯ ಮುಖಾಂತರ ವೇದೋಕ್ತ ಕರ್ಮಗಳಿಗೆ ಹೊಸರೂಪವನ್ನು ಕೊಟ್ಟು, ಈ ಮಾರ್ಗದ ಶ್ರೇಷ್ಟತೆಯನ್ನು ತೋರಿಸಿದ್ದಾರೆ. ಆಗಿನ ಕಾಲದ ಜನರು ವಿವಿಧ ಕಾಮ್ಯಕರ್ಮಗಳಲ್ಲಿ ಮಗ್ನರಾಗಿ, ಧಾರ್ಮಿಕ ಸೋಗನ್ನು ಹಾಕಿಕೊಂಡು ಭೋಗ ಜೀವಿಗಳಾಗಿ, ಆಧ್ಯಾತ್ಮಕ ದೃಷ್ಟಿಯನ್ನು ಮರೆತು ಬಿಟ್ಟಿದ್ದರಿಂದ ವ್ಯಾಸರು ಗೀತೆಯ ಮೂಲಕ ಹೊಸ ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ಕೆಲವು ಶತಮಾನಗಳ ಹಿಂದೆ ಬುದ್ಧನು ಕಾಮ್ಯಕರ್ಮಗಳನ್ನು ಈ ರೀತಿಯಾಗಿ ಖಂಡಿಸಿದ್ದಾನೆ. “ಜ್ಯೂ” ಜನರಲ್ಲಿ ಸಹ ಈ ತರಹದ ಕಾಮ್ಯಕರ್ಮಗಳ ಕಡೆಗಿನ ಒಲವು ಹೆಚ್ಚಾಗಿದ್ದಾಗ, ಏಸುಕ್ರಿಸ್ತನು ಜನಿಸಿ ‘ಭಕ್ತಿಯಿಂದ ಶರಣಾಗತನಾಗುವುದು’ ವಿವಿಧ ಕಾಮ್ಯ ಕರ್ಮಗಳಿಗಿಂತ ಹೆಚ್ಚು ಸುಲಭವಾದ ಹಾಗೂ ಶ್ರೇಷ್ಠವಾದ ಮಾರ್ಗ ಎಂದು ತನ್ನ ಧರ್ಮದಲ್ಲಿ ಪ್ರಚಾರಮಾಡಿದನು.
ಕರ್ಮಕಾಂಡದಲ್ಲಿ ಹೇಳಿದ ವಿವಿಧ ಯಜ್ಞ, ಯಾಗ, ವ್ರತಾದಿಗಳನ್ನು ವೇದವ್ಯಾಸರು ಖಂಡಿಸಿದ್ದಾರೆಂದು ಇದರ ಅರ್ಥವ¯್ಲ. ಧಾರ್ಮಿಕ ಒಲವು ಇಲ್ಲದವರು. ವಿಶಿಷ್ಟ ಆಸೆಯ ಪ್ರಾಪ್ತಿಗಾದರೂ ಧಾರ್ಮಿಕ ಸಾಧನೆಗಳನ್ನು ಮಾಡಿ, ಮನಸ್ಸನ್ನು ಏಕಾಗ್ರಮಾಡಿಕೊಂಡು, ಮುಂದೆ ಕ್ರಮೇಣ ನಿಷ್ಕಾಮಕರ್ಮವನ್ನು ಮಾಡುವಂತೆ, ಇಲ್ಲವೇ ಧ್ಯಾನಾದಿಗಳನ್ನು ಮಾಡುವಂತೆ ಆಕರ್ಷಿತರಾಗಲಿ, ಎಂಬುದೇ ಈ ಕರ್ಮಗಳ ಉದ್ದೇಶವಾಗಿದೆ. ಆದರೆ ಜನರು ಆಶಾಪೂರ್ತಿಗಾಗಿ ಮಾತ್ರ ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಭೋಗಾಸಕ್ತರಾದುದರಿಂದ, ವೇದವ್ಯಾಸರು ಗೀತೆಯ ಮುಖಾಂತರ ಈ ಮಾರ್ಗವನ್ನು ಖಂಡಿಸಿ ‘ಕರ್ಮ’ ಎಂಬ ಶಬ್ದಕ್ಕೆ ಹೊಸ ವ್ಯಾಖ್ಯೆಯನ್ನೇ ಕೊಟ್ಟಿದ್ದಾರೆ ಮತ್ತು ಆಸೆಯಿಂದ ಕರ್ಮಮಾಡಿ ದರೆ ಮನಸ್ಸಿನ ಏಕಾಗ್ರತೆ ಹಾಗೂ ಶಾಂತತೆಗಳು ಲಭಿಸುವುದಿಲ್ಲ ಎಂಬ ತೀರ್ಮಾನವನ್ನೂ ತಾರ್ಕಿತವಾಗಿ ವಿವರಿಸಿದ್ದಾರೆ

ತ್ರೈಗುಣ್ಯವಿಷಯಾವೇದಾ ನಿಸ್ತ್ರೈಗುಣ್ಯೋ ಭವಾರ್ಜುನ |
ನಿದ್ರ್ವಂದ್ವೋ ನಿತ್ಯಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ || 45 ||
ಅರ್ಥ : ಅರ್ಜುನನೇ! ವೇದಗಳು ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣಗಳಿಗೆ ಅನುಗುಣವಾದ ಕರ್ಮಗಳನ್ನು ಬೋಧಿಸುತ್ತವೆ. ನೀನು ಈ ಮೂರು ಗುಣಗಳನ್ನೂ ಮೀರಿದವನಾಗು. ಸುಖದುಃಖಾದಿ ದ್ವಂದ್ವಗಳ ಬಲೆಗೆ ಸಿಗದಿರು, ಯಾವಾಗಲೂ ಸತ್ವಗುಣವನ್ನೂ ಮೈಗೂಡಿಸಿಕೋ ಯೋಗಕ್ಷೇಮಗಳ ಬಗ್ಗೆ ಕಾತರನಾಗಬೇಡ, (ಯೋಗ ಎಂದರೆ ಹೊಸಭೋಗವಸ್ತುಗಳನ್ನು ಗಳಿಸುವುದು ಕ್ಷೇಮ ಎಂದರೆ ಗಳಿಸಿದ ವಸ್ತುಗಳನ್ನು ಕಾಪಾಡಿಕೊಳ್ಳುವುದು) ಮತ್ತು ಆತ್ಮನಿಷ್ಠನಾಗಿರು.
ಮನಸ್ಸು ಸತ್ಯ, ರಜ, ತಮೋಗುಣಗಳಿಂದ ಕೂಡಿದುದಾಗಿದೆ. ಇದು ಸ್ವಾಭಾವಿಕವಾದುದು ಈ ಗುಣಗಳನ್ನೂ ಮೀರಿ ಜೀವಿಸುವುದೆಂದರೆ ಅಸಾಧ್ಯವಾದುದನ್ನೇ ಮಾಡಲು ಹೇಳಿದಂತಾಗುತ್ತದೆ. ಮಿಶ್ರಲೋಹದ ಪಾತ್ರೆಯು ಹಿತ್ತಾಳೆ, ತಾಮ್ರ ಮತ್ತು ಸತುಗಳಿಂದ ಮಾಡಲ್ಪಟ್ಟಿವೆ ಎಂದಿಟ್ಟುಕೊಳ್ಳೋಣ. ಈ ಪಾತ್ರೆಯಿಂದ ಎಲ್ಲಾ ಧಾತುಗಳನ್ನು ತೆಗೆದು ಹಾಕು ಎಂದರೆ ಆ ಪಾತ್ರೆಯನ್ನೇ ನಾಶಮಾಡು ಎಂದಂತಾಗುತ್ತದೆ. ಮನುಷ್ಯನು ತನ್ನ ಮನಸ್ಸು ಬುದ್ಧಿಗಳಿಂದ ಈ ಮೂರೂ ಗುಣಗಳನ್ನು ಕಿತ್ತು ಹಾಕಿದರೆ ಆತನು ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬ ವಾಕ್ಯವು “ಮೊಲದ ಕೋಡನ್ನು ತಂದುಕೊಟ್ಟರೆ ರೋಗಿಯನ್ನು ರೋಗ ಮುಕ್ತನನ್ನಾಗಿ ಮಾಡಬಹುದು. ಎಂಬಂತಿದೆ” ಎಂಬ ಟೀಕೆಯು ಸ್ವಾಭಾವಿಕವಾಗಿ ಬರುತ್ತದೆ. ಆದರೆ ‘ನೀನು ಗುಣಗಳನ್ನು ಮೀರಿದವನಾಗು ಎಂಬ ವಾಕ್ಯದಲ್ಲಿ ಹೊಸ ಉಪದೇಶವನ್ನೇ ಕೊಡಲಾಗಿದೆ.
‘ಗುಣಗಳನ್ನು ಮೀರಿದವನಾಗು’ ಎಂದು ಹೇಳಿ ಅಷ್ಟಕ್ಕೇ ನಿಲ್ಲಿಸಲಿಲ್ಲ. ಮುಂದಿನ ಸಾಲಿನಲ್ಲಿ ವ್ಯಾವಹಾರಿಕವಾದ ಸಾಧನೆಯ ದಾರಿಯನ್ನು ತೋರಿಸಲಾಗಿದೆ. ಅರ್ಜುನನು ಯಾವ ಮನೋಭಾವದಿಂದ ಯುದ್ಧವನ್ನು ಮಾಡಬೇಕೆಂದು ಹಿಂದೆ ತಿಳಿಸಲಾಗಿದೆ. ಅದನ್ನೇ ಈಗ ಬೇರೊಂದು ರೀತಿಯಲ್ಲಿ ವಿವರಿಸಲಾಗಿದೆ. ಈ ಸ್ಥಿತಿಯನ್ನು ಹೇಗೆ ಸಾಧಿಸಬೇಕೆಂಬುದರ ವಿವರಣೆಯು ಇಲ್ಲಿದೆ.

‘ದ್ವಂದ್ವಗಳನ್ನು ಮೀರಿದವನಾಗು’ ಸುಖ-ದುಃಖ, ರೋಗ-ಆರೋಗ್ಯ, ಜಯ-ಸೋಲು, ಲಾಭ-ನಷ್ಟ, ಚಳಿ-ಸೆಕೆ, ಇತ್ಯಾದಿಗಳು ದ್ವಂದ್ವಗಳ ಕೆಲವು ಉದಾಹರಣೆಗಳು. ಇವುಗಳಲ್ಲಿ ಒಂದನ್ನು ತಿಳಿದುಕೊಳ್ಳಬೇಕಾದರೆ, ಅದರ ವಿರೋಧಗುಣದ ಅನುಭವ ಮಾಡಿಕೊಳ್ಳಬೇಕು, ಅಂದರೆ ಮಾತ್ರ ಅವೆರಡರ ಸ್ಪಷ್ಟ ಜ್ಞಾನವಾಗುತ್ತದೆ. ಈ ದ್ವಂದ್ವಗಳು ಜೀವನದಲ್ಲಿ ಬಂದೇ ಬರುತ್ತವೆ. ಅವುಗಳನ್ನು ಅನುಭವಿಸುತ್ತಿದ್ದಾಗ್ಯೂ ಮನಸ್ಸನ್ನು ಅವುಗಳಲ್ಲಿ ಹಾಯಗೊಡದೆ ಸಮತ್ವವನ್ನು ಕಾಪಾಡಿಕೊಂಡು ಸುಖ-ದುಃಖಾದಿಗಳನ್ನು ಭೋಗಿಸಬೇಕೆಂದು ಇಲ್ಲಿ ತಿಳಿಸಲಾಗಿದೆ.
ನಿತ್ಯಸತ್ವಸ್ಥ : ಯಾವಾಗಲೂ ಸತ್ವ ಗುಣವುಳ್ಳವನಾಗಿರು. ಸತ್ವಗುಣವು ಶುದ್ಧವಾದುದು. ಅದು ರಜಸ್ಸು ತಮಸ್ಸುಗಳೊಡನೆ ಕೂಡಿದರೆ ಅದರಿಂದ ಮನಸ್ಸಿನಲ್ಲಿ ಅಶಾಂತಿ, ಅಜ್ಞಾನ, ಉದ್ವೇಗಾದಿಗಳುಂಟಾಗಿ ಮನಃಶಾಂತಿಯು ಕೆಡುತ್ತದೆ ಮತ್ತು ಸತ್ವಗುಣವು ದೂಷಿತವಾಗುತ್ತದೆ. ಆದುದರಿಂದ ಶುದ್ಧ ಸಾತ್ವಿಕ ಸ್ಥಿತಿಯನ್ನಿಟ್ಟುಕೊಳ್ಳಬೇಕಾದರೆ, ಮನಸ್ಸು ರಜೋತಮೋಗುಣಗಳಿಂದ ದೂರವಿರುವಂತೆ ಸತತ ಪ್ರಯತ್ನಮಾಡಬೇಕು.
ನಿರ್ಯೋಗಕ್ಷೇಮ – ಗಳಿಸುವುದು ಮತ್ತು ಗಳಿಸಿದ್ದನ್ನು ಕಾಪಾಡಿಕೊಳ್ಳುವುದು, ಇವು ಮನುಷ್ಯನ ಜೀವನದಲ್ಲಿಯ ಎಲ್ಲಾ ವ್ಯಾಪಾರಗಳಿಗೂ ಕಾರಣವಾಗಿವೆ. ಇವುಗಳನ್ನು ಬಿಡಬೇಕೆಂದು ಕೃಷ್ಣನ ಮತವಲ್ಲ. “ನೀನು ಮಾಡತಕ್ಕ ಕೆಲಸಗಳನ್ನು ಕರ್ತವ್ಯ ದೃಷ್ಟಿಯಿಂದ ಮಾಡು. ಗಳಿಸುವುದು ಮತ್ತು ಉಳಿಸುವುದು ಇವು ನಿನ್ನ ಸ್ವಾರ್ಥಕ್ಕ ಲ್ಲವೆಂದೂ, ಈ ಲೋಕಹಿತಕ್ಕೆಂದೂ ಗಮನದಲ್ಲಿಟ್ಟುಕೊ. ಜೊತೆಗೆ ನೀನು ಅವುಗಳನ್ನು ಅನುಭವಿಸಿದರೆ ದೋಷವಿಲ್ಲ. ಆದರೆ ಅಹಂಕಾರ ರಹಿತನಾಗಿ ಗಳಿಸು. ಉಳಿಸು, ಹಾಗೂ ಭೋಗಿಸು “ಎಂಬುದೇ ಮೂಲತತ್ವ ಆತ್ಮವಾನ್ ಮೇಲಿನ ಗುಣಗಳನ್ನು ಗಳಿಸುವಾಗ ಹಾಗೂ ಸಾಧಿಸುವಾಗ ‘ನಾನು’ ಎಂಬ ಅಹಂಕಾರವನ್ನೂ ಸಂಪೂರ್ಣವಾಗಿ ಮರೆತು ಕರ್ತವ್ಯ ದೃಷ್ಟಿಯಿಂದ ಮಾತ್ರ ಕರ್ಮಮಾಡು. ಹೊರಗೆ ದಕ್ಷತೆಯಿಂದ ಕರ್ಮ ಮಾಡುತ್ತಿದ್ದಾಗ್ಯೂ ನಿನ್ನ ಮನಸ್ಸಿನಲ್ಲಿ ಮಾತ್ರ ಆ ಕರ್ಮದ ಮೂಲಕ ಪರಮಾತ್ಮನ ಅರ್ಚನೆಯನ್ನು ಮಾಡುತ್ತಿದ್ದೇವೆ’ ಎಂಬ ಭಾವವಿರಲಿ. ವಿವಿಧ ಕೆಲಸಗಳನ್ನೂ ಮಾಡುವಾಗ ಪರಮಾತ್ಮನ ನೆನಪಾಗಲಿ ಹೀಗೆ ಮಾಡಿದರೆ ಕಾಲಕ್ರಮದಲ್ಲಿ ಗುಣಗಳನ್ನು ಮೀರಬಹುದು ಎಂಬುದು ಈ ಶ್ಲೋಕದ ಮಥಿತಾರ್ಥ-

ವೇದೋಕ್ತ ಕಾಮ್ಯಕರ್ಮಗಳನ್ನು ಏತಕ್ಕೆ ಮಾಡಕೂಡದು ?

ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ |
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ || 46 ||
ಅರ್ಥ : ಪ್ರವಾಹದಿಂದ ಇಡೀ ಪ್ರದೇಶದಲ್ಲೆಲ್ಲಾ ನೀರು ತುಂಬಿರುವಾಗ ಅದರ ಒಂದು ಭಾಗದಲ್ಲಿದ್ದ ಕೆರೆಯಿಂದ ಸಿಗುವ ಪ್ರಯೋಜನವೆಲ್ಲವೂ, ತನ್ನ ಪಕ್ಕದಲ್ಲಿಯೇ ಇರುವ ಪ್ರವಾಹದ ನೀರಿನಿಂದ ಸಿಗುವಂತೆ, ಆತ್ಮಜ್ಞಾನವನ್ನು ಪಡೆದ ಬ್ರಾಹ್ಮಣನಿಗೆ ವೇದಗಳಿಂದ ಸಿಗುವ ಫಲವು ಈ ಜ್ಞಾನದಿಂದಲೇ ಸಿಗುತ್ತದೆ.
ಎಲ್ಲಾ ಕಡೆಯಲ್ಲಿಯೂ ನೀರು ತುಂಬಿರುವಾಗ, ನೀರನ್ನು ತನಗೆ ಇಷ್ಟವಾದಾಗ್ಯೆ ಬೇಕಷ್ಟು ಉಪಯೋಗಿಸಿಕೊಳ್ಳಬಹುದು. ನೀರಿನ ಮಧ್ಯದಲ್ಲಿ ಮುಳುಗಿ ಹೋಗಿರುವ ಕೆರೆಗೆ ಹೋಗಿ ನೀರನ್ನು ತರಬೇಕಾದ ಅವಶ್ಯಕತೆಯಿಲ್ಲ. ಇದೇ ರೀತಿಯಾಗಿ ಆತ್ಮನಿಷ್ಠನಾದ ಬ್ರಾಹ್ಮಣನಿಗೆ ಮನಃಶಾಂತಿ ಲಭಿಸಿರುವುದರಿಂದ ಅವನಿಗೆ ವೇದೋಕ್ತ ಕಾಮ್ಯಕರ್ಮಗಳಿಂದ ಹೊಸದಾಗಿ ಲಭಿಸಬೇಕಾದುದು ಇಲ್ಲ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋ„ಸ್ತ್ವಕರ್ಮಣಿ || 47 ||
ಅರ್ಥ : ಕರ್ಮ ಮಾಡುವುದಷ್ಟೇ ನಿನ್ನ ಕರ್ತವ್ಯ,. ಅದರ ಫಲದ ಬಗ್ಗೆ ಯಾವಾಗಲೂ ನಿನಗೆ ಅಧಿಕಾರವಿ¯್ಲ, ಹತೋಟಿಯೂ ಇಲ್ಲ. ನೀನು ಕರ್ಮವನ್ನು ಮಾಡುವಾಗ ಅದನ್ನು ದಕ್ಷತೆಯಿಂದ ಪೂರ್ಣಗೊಳಿಸಬೇಕೆಂಬ ಧ್ಯೇಯವಿರಬೇಕೇ ಹೊರತು ವಿಶಿಷ್ಟ ಫಲವನ್ನು ಗಳಿಸಬೇಕೆಂಬ ಧ್ಯೇಯವಿರಬಾರದು ಮತ್ತು ಕರ್ಮಮಾಡದೆ ಸುಮ್ಮನೆ ಕುಳೀತುಕೊಳ್ಳಲೂಬಾರದು.
ಈ ಎರಡು ಶ್ಲೋಕಗಳಲ್ಲಿ ಶ್ರೀಕೃಷ್ಣನು, ಅರ್ಜುನನಿಗೆ ಆತನು ಸಾಧಿಸಬೇಕಾದ ಗುರಿಯನ್ನು ಬೊಟ್ಟುಮಾಡಿ ತೋರಿಸಿದ್ದಾನೆ. ಕರ್ಮವನ್ನು ದಕ್ಷತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ಮಾಡುವುದರ ಮೂಲಕ ಮನುಷ್ಯನು ತನ್ನ ವಿಕಾಸವನ್ನು ಸಾಧಿಸಿಕೊಂಡು ಆತ್ಮನೊಡನೆ ಐಕ್ಯ ಹೊಂದುವುದನ್ನು ಕಲಿಯಬೇಕು. ಆದುದರಿಂದ ಕರ್ಮದ ಬಗ್ಗೆ ಈ ಶ್ಲೋಕದಲ್ಲಿ ಇನ್ನೂ ಕೆಲವು ಒಳಗುಟ್ಟ್ಟುಗಳನ್ನು – ಸಾಧನಾ ವಿವರಗಳನ್ನು – ವಿವರಿಸಲಾಗಿದೆ.
ಕಲ್ಪನಾಲೋಕದಲ್ಲಿ ಮುಳುಗಿರುವುದು ಮನಸ್ಸಿನ ಜೀವನದಲ್ಲಿಯ ಸೋಲುಗಳಿಗೂ, ನಾನಾ ಕಷ್ಟಗಳಿಗೂ ದೊಡ್ಡ ಕಾರಣವಾಗಿದೆ. ಈ ಕಲ್ಪನೆಯು ಮುಂದೊದಗಬಹುದಾದ ಕಾಲ್ಪನಿಕ ಭೀತಿಯಿಂದ ಉಂಟಾಗಿದೆ. ನಾವು ಈಗ ಕೈಗೊಂಡಿರುವ ಕಾರ್ಯವು ಮುಂದೆ ಸಫಲವಾಗುವುದಿಲ್ಲ, ಅಥವಾ ಅದರಲ್ಲಿ ಹಾನಿಯಾದಗುತ್ತದೆ. ಇತ್ಯಾದಿ ತರಹದ ಭೀತಿಯು ಮನಸ್ಸಿನಲ್ಲಿ ಮೂಡಿತೆಂದರೆ, ಆಗ ನಾವು ಆ ಭೀತಿಯಿಂದ ಆವೃತರಾಗಿ ಹಿಡಿದ ಕೆಲಸವನ್ನು ದಕ್ಷತೆಯಿಂದ ಮಾಡುವುದಿಲ್ಲ, ಇಲ್ಲವೇ ಅರ್ಧಕ್ಕೇ ಬಿಟ್ಟು ಬಿಡಬಹುದು, ಅಥವಾ ಕರ್ಮದಲ್ಲಿ ಅವಶ್ಯಕವಾದ ಜಾಣ್ಮೆಯನ್ನು ಉಪಯೋಗಿಸಲು ಅಸಮರ್ಥರಾಗುತ್ತೇವೆ. ಭೀತಿಯಿಂದಾಗಿ ನಮ್ಮ ಬುದ್ಧಿಯು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ನಮಗೆ ಸೋಲು ಕಟ್ಟಿಟ್ಟಂತಾಗುತ್ತದೆ. ಆದುದರಿಂದ ಕರ್ಮವು ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಕಲ್ಪನೆಗಳನ್ನು ಮಾಡುತ್ತಾ ಕಲ್ಪನಾ ಸಾಮ್ರಾಜ್ಯದಲ್ಲಿ ಈಸಾಡುತ್ತಿರದೆ, ಅಂದರೆ ಶಕ್ತಿಯನ್ನು ಕಲ್ಪನೆಯಲ್ಲಿ ವ್ಯಯಮಾಡದೆ, ಕರ್ಮವನ್ನು ದಕ್ಷತೆಯಿಂದ ಮಾಡುವುದಕ್ಕೆ ಉಪಯೋಗಿಸಬೇಕು. ಹೀಗೆ ಮಾಡಿದರೆ ನಮ್ಮ ದಕ್ಷತೆಯ ಪ್ರಮಾಣಕ್ಕೆ ತಕ್ಕಷ್ಟು ಫಲವು ಬೇಡವೆಂದರೂ ನಮ್ಮ ಪಾಲಿಗೆ ಬಂದೇ ಬರುತ್ತದೆ. ಅದು ಕಟ್ಟಿಟ್ಟ ಗಂಟು.
ಭವಿಷ್ಯದ ಉಗಮವು ಇವತ್ತಿನ ಕರ್ಮದಲ್ಲಿದೆ. ನಾಳಿನ ಪೈರು ಇವತ್ತು ಮಾಡುವ ಉಳುವುದು, ಬಿತ್ತುವುದು, ಮೊದಲಾದ ಕೃಷಿಕರ್ಮದಲ್ಲಿದೆ. ಮುಂದೆ ಪೈರು ಕೊಯ್ಯುವ ಕಾಲಕ್ಕೆ ನಾನಾ ರೀತಿಯ ಹಾನಿಯಾಗಿ ಪೈರುನಾಶವಾಗಬಹುದು. ಇಲ್ಲವೆ ಸಕಾಲದಲ್ಲಿ ಮಳೆಬಾರದೆ ಪೈರು ನಾಶವಾಗಬಹುದು ಎಂಬಿತ್ಯಾದಿ ಭವಿಷ್ಯದ ಕಾಲ್ಪನಿಕ ಭೀತಿಯಿಂದ ಹೆದರಿಕೊಂಡು, ಇವತ್ತು ಮಾಡಬೇಕಾದ ಕೃಷಿಕರ್ಮಗಳನ್ನು ಮಾಡದಿದ್ದರೆ ನಮಗೆ ಮುಂದೆ ಪೈರು ಸಿಕ್ಕುವುದಿಲ್ಲವೆಂಬುದು ನಿಶ್ಚಿತವಷ್ಟೆ! ನಾವು ಇವತ್ತು ಕೃಷಿಯನ್ನು ಕಾಲಕ್ಕೆ ಸರಿಯಾಗಿ ದಕ್ಷತೆಯಿಂದ ಮಾಡಿದರೆ ಮಾತ್ರ ನಾಳೆ ಪೈರು ಸಿಗುತ್ತದೆ. ಅನ್ಯಥಾ ಇಲ್ಲ.

ಕರ್ಮ, ಪ್ರತಿಕರ್ಮ ಮತ್ತು ಕರ್ಮಫಲ
ಕರ್ಮದಲ್ಲಿ ಯಶಸ್ಸನ್ನು ಗಳಿಸಬೇಕೆಂದಿದ್ದರೆ ಮನಸ್ಸಿನಲ್ಲಿ ನಾನಾ ತರಹದ ಕಾತರತೆ, ಭೀತಿ, ಮತ್ತು ಕರ್ಮಫಲಗಳ ಬಗ್ಗೆ ವಿನಾಕಾರಣ ಕಲ್ಪನೆ ಇವುಗಳಿಗೆ ಆಸ್ಪದವನ್ನು ಕೊಡಕೂಡದು ಎಂಬ ಮೂಲತತ್ವವನ್ನೂ ಇಲ್ಲಿ ಪ್ರತಿಪಾದಿಸಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಆಳವಾಗಿ ವಿಚಾರ ಮಾಡಿ ಗೀತೆಯು ಹೇಳುವ ಕರ್ಮಫಲ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಕರ್ಮವನ್ನೂ ದಕ್ಷತೆಯಿಂದ ಮಾಡಿದರೆ ಮಾತ್ರ ಫಲ ಸಿಗುತ್ತದೆ ಎಂದಮೇಲೆ ‘ಕರ್ಮಫಲ’ ಎಂದರೆ ಕರ್ಮವನ್ನು ದಕ್ಷತೆಯಿಂದ ಮಾಡುವುದು’ ಎಂದೇ ಆಗುತ್ತದೆ. ಈಗ ಮಾಡುವ ಕರ್ಮವು ಕಾಲಸಂಸ್ಕಾರದಿಂದ ಮುಂದೆ ‘ಕರ್ಮಫಲ’ ವಾಗುತ್ತದೆ. ಆದರೆ ಈ ಫಲವು ಈ ದಿನ ಮಾಡಿದ ಕರ್ಮದ ಪ್ರತಿಕರ್ಮ ಅಥವಾ ಪ್ರತಿಕ್ರಿಯೆ ಆಗಿದೆ. ಇನ್ನೂ ಹುಟ್ಟದೇ ಇರುವ ಅಂದರೆ ಮುಂದೊದಗಬಹುದಾದ ಕರ್ಮಫಲದ ಬಗ್ಗೆ ಇವತ್ತು ಯೋಚನೆ ಮಾಡಿ ಕಾತರಗೊಳ್ಳುವುದೆಂದರೆ, ಈ ದಿನ ದಕ್ಷತೆಯಿಂದ ಮಾಡಬೇಕಾದ ಕರ್ಮದಲ್ಲಿ ವಿಘ್ನವನ್ನುಂಟು ಮಾಡಿದಂತೆಯೇ ಸರಿ, ಮತ್ತು ಕರ್ಮವನ್ನು ಮಾಡುವುದರಲ್ಲಿ ಉಪಯೋಗಿಸಬೇಕಾದ ಶಕ್ತಿಯನ್ನು, ಅದರಲ್ಲಿ ಸಂಪೂರ್ಣವಾಗಿ ಉಪಯೋಗಿಸದೆ, ಮಾನಸಿಕ ಕಲ್ಪನೆಗಳಲ್ಲಿ ಉಪಯೋಗಿಸಿ ಶಕ್ತಿಯ ದುರುಪಯೋಗ ಮಾಡಿದಂತಾಗುತ್ತದೆ ಹಾಗೂ ಕರ್ತವ್ಯ ಭ್ರಷ್ಟನಾದಂತಾಗುತ್ತದೆ. ಈ ಶ್ಲೋಕದಲ್ಲಿ ಕರ್ಮಯೋಗಿಗೆ ನಾಲ್ಕು ಸೂಚನೆಗಳನ್ನು ಕೊಡಲಾಗಿದೆ
1 ಕರ್ಮ ಮಾಡುವು ದಷ್ಟೇ ನಿನ್ನ ಕರ್ತವ್ಯ
2 ಕರ್ಮಫಲದ ಬಗ್ಗೆ ನಿನಗೆ ಅಧಿಕಾರವಿಲ್ಲ
3 ನೀನು ಮಾಡುವ ಕರ್ಮಕ್ಕೆ ಇಂತಹದೇ ಫಲಸಿಗಬೇಕೆಂಬ ಕಲ್ಪನೆಯನ್ನು ಮಾಡಬಾರದು

  1. ನಿನ್ನ ಕರ್ತವ್ಯ ಕರ್ಮವನ್ನು ಬಿಡಬಾರದು.
    ಈ ನಿಯಮಗಳನ್ನು ಪಾಲಿಸುವುದರಿಂದ ಕರ್ಮಮಾಡುವುದಷ್ಟೆ ತನ್ನ ಕರ್ತವ್ಯ ಎಂದು ತಿಳಿದು, ಕರ್ಮವನ್ನು ಮಾಡಲು ಆಸ್ಪದ ಸಿಕ್ಕಿದುದಕ್ಕಾಗಿ ಸಂತೋಷಪಟ್ಟು ಕರ್ಮವನ್ನು ದಕ್ಷತೆಯಿಂದ ಮಾಡಲು ಸಾಧ್ಯವಾಗುತ್ತದೆ ಮತ್ತು ಸಾಧಕನು ಮನಸ್ಸಿನಲ್ಲಿ ವಿಕಾರಗಳಿಗೆ ಆಸ್ಪದ ಕೊಡದೆ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಇಂತಹ ಕರ್ಮದ ಮೂಲಕ ವಾಸನಾಸಂಗ್ರಹವನ್ನು ಬರಿದು ಮಾಡಿಕೊಳ್ಳಬಹುದು. ಹೀಗೆ ಕರ್ಮಮಾಡುವುದರಿಂದ ಸಾಧಕನು ತನ್ನ ಶರೀರ ಮನಸ್ಸುಗಳನ್ನು ಶುದ್ಧಗೊಳಿಸಿಕೊಂಡು ಮುಂದೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಯೋಗ್ಯತೆಯನ್ನು ಗಳಿಸುತ್ತಾನೆ.

ಕರ್ಮಫಲದ ಆಸೆಯನ್ನು ಬಿಟ್ಟು ಹೇಗೆ ಕರ್ಮಮಾಡಬೇಕು ?

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾಸಮತ್ವಂ ಯೋಗ ಉಚ್ಯತೇ || 48 ||
ಅರ್ಥ : ಧನಂಜಯನೇ! ಯೋಗಸ್ಥನಾಗಿ, ಅಂದರೆ ಕರ್ಮಯೋಗದಲ್ಲಿ ಸ್ಥಿರಬುದ್ಧಿಯುಳ್ಳವನಾಗಿ, ಕರ್ಮದಲ್ಲಿ ಮಮಕಾರವನ್ನಿಟ್ಟುಕೊಳ್ಳದೆ, ಜಯಾಪಜಯಗಳಲ್ಲಿ ಸಮಬುದ್ಧಿಯನ್ನು ಹೊಂದಿ ಕರ್ತವ್ಯ ದೃಷ್ಟಿಯಿಂದ ಕರ್ಮಮಾಡು, ಕರ್ಮದ ಮುಖಾಂತರ ಜಯಾಪಜಯಗಳಲ್ಲಿ (ಅಂತೆಯೇ ಎಲ್ಲಾ ದ್ವಂದ್ವ ಗಳಲ್ಲಿ ್ಲ) ಸಮಬುದ್ಧಿಯನ್ನೂ ಹೊಂದುವುದಕ್ಕೆ ‘ಯೋಗ’ ಎಂದು ಹೆಸರು.

ಸಮಬುದ್ಧಿಯನ್ನಿಟ್ಟುಕೊಂಡು ಕರ್ಮಮಾಡುವುದು ಕರ್ಮಯೋಗದ ಗುಟ್ಟು ಎಂಬುದನ್ನು ಸಂಕ್ಷೇಪವಾಗಿ ಹೇಳಿ ಮುಂದಿನ ಶ್ಲೋಕದಲ್ಲಿ ಕರ್ಮಯೋಗದ ವಿವರಗಳನ್ನು ತಿಳಿಸಲಾಗಿದೆ.
ಲಾಭಾಲಾಭ, ಜಯಾಪಜಂiÀi, ಸುಖದುಃಖ ಮೊದಲಾದ ದ್ವಂದ್ವಗಳಲ್ಲಿ ಸಮಬುದ್ಧಿಯನ್ನಿಟ್ಟುಕೊಂಡು, ಮನಸ್ಸಿನ ಸ್ಥಿರತೆಯನ್ನು ಕಾಯ್ದುಕೊಂಡರೆ ಕರ್ಮಯೋಗ ತತ್ವದಂತೆ ಫಲಾಶಾರಹಿತವಾಗಿ ಕರ್ಮಮಾಡುವುದು ಸಾಧ್ಯವಿದೆ ಎಂದು ಇಲ್ಲಿ ತಿಳಿಸಲಾಗಿದೆ. ಕರ್ಮಮಾಡುವಾಗ ಸಮಬುದ್ಧಿಯನ್ನಿಟ್ಟುಕೊಂಡರಷ್ಟೇ ಸಾಲದು, ಜೊತೆಗೆ ಸಂಗರಹಿತನಾಗಿರಬೇಕು ಮಾಡುವ ಕರ್ಮದಲ್ಲಿ ಮಾಡುವವನು ‘ನಾನು’ ಮಾಡುವ ಕರ್ಮವು ‘ನನ್ನದು’ ಫಲವನ್ನು ಅನುಭವಿಸುವವನು ‘ನಾನು’ ಇತ್ಯಾದಿ ರೀತಿಯ ಮಮಕಾರವನ್ನು ತ್ಯಜಿಸಬೇಕು. ಈ ಮಮಕಾರಕ್ಕೆ ‘ಅಹಂಕಾರ’ ಎಂಬ ಹೆಸರೂ ಇದೆ. ‘ಅಹಂಕಾರ’ ಎಂದರೆ ಹಿಂದಿನ ಜನ್ಮದ ‘ವಾಸನಾಸಮುಚ್ಚಯ’ ಮತ್ತು ಭವಿಷ್ಯದ ಆಶಾಗೋಪುರ ಇವುಗಳ ಒಂದು ದೊಡ್ದ ರಾಶಿ. ಮುಂದಿನ (ಭವಿಷ್ಯ) ಆಶಾಗೋಪುರಗಳ ಮೇಲೆ ನಿಲ್ಲೋಣವೆಂದರೆ ಆ ಭವಿಷ್ಯವು ಇನ್ನೂ ಹುಟ್ಟಲೇ ಇಲ್ಲ. ಹಿಂದಿನ ವಾಸನಾ ಸಮುಚ್ಚಯಗಳನ್ನು ಅವಲಂಬಿಸೋಣವೆಂದರೆ ಭೂತಕಾಲವು ಆಗಲೇ ಗತಿಸಿ ಹೋಗಿದೆ. ಅದು ಈಗ ಇಲ್ಲ. ಹೀಗಾಗಿ ಇವೆರಡರ ಬಗ್ಗೆ ಚಿಂತಿಸುತ್ತಾ ಕಾಲ ಕಳೆದರೆ ಈಗ ಸಧ್ಯದಲ್ಲಿ ನಮ್ಮೆದುರಿಗಿರುವ ಪ್ರತ್ಯಕ್ಷ ಕರ್ಮವನ್ನೂ ಮಾಡುವ ಅವಸರವನ್ನೂ ಕಳೆದುಕೊಂಡಂತಾಗುತ್ತದೆ. ಆದುದರಿಂದ ಅಹಂಕಾರವನ್ನು ತ್ಯಜಿಸಿ ಅಂದರೆ ಭೂತ ಹಾಗೂ ಭವಿಷ್ಯಗಳ ಆಗು ಹೋಗುಗಳ ಮೇಲೆ ಅವಲಂಬಿಸದೆ ಸದ್ಯ ಸ್ಥಿತಿಯಲ್ಲಿ ಪಾಲಿಗೆ ಬಂದ ಕರ್ಮವನ್ನು ಸಮಬುದ್ಧಿಯಿಂದ ಮಾಡಬೇಕೆಂದು ಹೇಳಲಾಗಿದೆ.
ಕರ್ಮಯೋಗದ ಮೂಲ ಸೂತ್ರಗಳನ್ನು ಈ ಕೆಳಗಿನ ರೀತಿಯಲ್ಲಿ ಸಂಗ್ರಹಿಸಿ ಹೇಳಬಹುದು.
1. ದ್ವಂದ್ವಗಳಲ್ಲಿ ಸಮಬುದ್ಧಿಯಿರಲಿ
2. ಕರ್ಮಫಲದ ಬಗ್ಗೆ ಆಸೆ ಬೇಡ
3. ಕರ್ಮಮಾಡುವಾಗ ಅಹಂಕಾರವಿರಕೂಡದು
4. ಮಾಡುವ ಕರ್ಮವನ್ನು ತನ್ನ ಕರ್ತವ್ಯ ಎಂದು ತಿಳಿದು ದಕ್ಷತೆಯಿಂದ ಮಾಡಬೇಕು.
5. ಕರ್ಮವನ್ನು ಮಾಡಿ ತನ್ಮೂಲಕ ಸಂಚಿತವಾಸನೆಗಳನ್ನು ಬರಿದು ಮಾಡಿಕೊಳ್ಳಲು ಆಸ್ಪದ ಕಲ್ಪಿಸಿಕೊಟ್ಟಿದ್ದಾಕ್ಕಾಗಿ ಪರಮಾತ್ಮನಿಗೆ ಕೃತಜ್ಞನಾಗಿರಬೇಕು.
6. ಮಾಡುವ ಕರ್ಮವು ಪರಮಾತ್ಮನ ಸೇವೆ ಎಂಬ ಭಾವವಿರಲಿ
7. ಕರ್ಮಫಲದ ಬಗ್ಗೆ ಕಲ್ಪನೆಗಳಲ್ಲಿ ಶಕ್ತಿಯನ್ನೂ ಕಾಲವನ್ನೂ ಹರಣಮಾಡ ಕೂಡದು.
8. ಕರ್ಮ ಮಾಡದೆ ಇರಕೂಡದು.

ದೂರೇಣ ಹ್ಯವರಮ್ ಕರ್ಮ ಬುದ್ಧಿಯೋಗಾದ್ಧನಂಜಯ |
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ || 49 ||
ಅರ್ಥ : ಧನಂಜಯನೇ ಫಲಾಶೆಯಿಂದ ಕರ್ಮಮಾಡುವುದು ಬುದ್ಧಿಯೋಗಕ್ಕಿಂತ ನಿಕೃಷ್ಟವಾದುದು ಬುದ್ಧಿಗೆ ಶರಣು ಹೋಗು. ಫಲಕ್ಕಾಗಿ ಅಪೇಕ್ಷೆ ಪಡುವವರು ಹೀನರು.
ಮನಸ್ಸು, ಇಂದ್ರಿಯಗಳಿಗಿಂತಲೂ ಹಿರಿದು. ಅದು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯವನ್ನು ಕೊಡುವ ಶಕ್ತಿಯಿಲ್ಲ. ಧರ್ಮ-ಅಧರ್ಮ, ನೀತಿ-ಅನೀತಿ, ಒಳ್ಳೆಯದು-ಕೆಟ್ಟದ್ದು, ಬೇಕು-ಬೇಡ, ಇತ್ಯಾದಿ ಎಲ್ಲಾ ಸಂದರ್ಭಗಳಲ್ಲಿಯೂ, ಹೀಗೆಯೇ ಮಾಡಬೇಕೆಂದು ತೀರ್ಮಾನಿಸಿ, ಅಪ್ಪಣೆಯನ್ನು ನೀಡುವ ಕೆಲಸವು ಬುದ್ಧಿಗೆ ಸೇರಿದ್ದು. ಬುದ್ಧಿಯು ನಿಶ್ಚಯಾತ್ಮಕ ಶಕ್ತಿಯುಳ್ಳದ್ದು. ಹಿಂದೆ ಹೇಳಿದ ಕರ್ಮಯೋಗದ ನಿಯಮಗಳನ್ನೂ ಜ್ಞಾಪಕದಲ್ಲಿಟ್ಟುಕೊಂಡು, ನಾವು ಕರ್ಮ ಮಾಡುವಾಗಲೆಲ್ಲಾ ಹೀಗೆಯೇ ಮಾಡಬೇಕೆಂದು ಮನಸ್ಸಿಗೆ ಆದೇಶ ಕೊಡುವುದು ಬುದ್ಧಿಯ ಕೆಲಸ. ಮನಸ್ಸು ಸ್ವೇಚ್ಛೆಯಾಗಿ ಚಲಿಸದೆ, ಬುದ್ಧಿಗೆ ಅಧೀನವಾಗಿದ್ದು ಅದರ ಆದೇಶದಂತೆ ಕೆಲಸ ಮಾಡುವುದಕ್ಕೆ ‘ಬುದ್ಧಿಯೋಗ’ ಎಂದು ಹೆಸರು. ಆದ್ದರಿಂದಲೇ ಬುದ್ಧಿಗೆ ಶರಣು ಹೋಗು ಎನ್ನಲಾಗಿದೆ.

ಸಮಬುದ್ಧಿಯಿಂದ ಕರ್ಮ ಮಾಡಿದರೆ ಯಾವ ಲಾಭ ವಾಗುತ್ತದೆ?

ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ |
ತಸ್ಮಾದ್ಯೋಗಾಯ ಯುಜ್ಯಸ್ಯಯೋಗಃ ಕರ್ಮಸು ಕೌಶಲಮ್ || 50||
ಅರ್ಥ : ಮನುಷ್ಯನು ಸಮಬುದ್ಧಿಯುಳ್ಳವನಾಗಿ ಕರ್ಮಗಳನ್ನು ಮಾಡಿದರೆ ಈ ಜನ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳ ಬಂಧನದಿಂದ ಮುಕ್ತವಾಗುತ್ತಾನೆ. ಅವನಿಗೆ ಅವುಗಳ ವಾಸನೆಗಳು ಅಂಟಿಕೊಳ್ಳುವುದಿಲ್ಲ. (ಅಂದರೆ ಕರ್ಮದ ಸಂಸ್ಕಾರಗಳು ಅಂತರಂಗದ ಮೇಲೆ ಮುದ್ರಿತವಾಗಿ ಸಂಚಯವಾಗುವುದಿಲ್ಲ) ಆದುದರಿಂದ ಈ ರೀತಿಯಾಗಿ ಯೋಗಯುಕ್ತನಾಗಿ ಕರ್ಮಮಾಡು. ಕರ್ಮz Àಲ್ಲಿ ತೋರಿಸಲಾಗುವ ಈ ಕೌಶಲ್ಯಕ್ಕೆ ‘ಯೋಗ’ ಎಂದು ಹೆಸರು.
ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಭಾವನೆಯು ಮುಖ್ಯವಾಗಿ ಮನಸ್ಸಿನ ಕಾರ್ಯ. ಇವುಗಳಿಂದ ಮನಸ್ಸಿನ ಮೇಲಾಗುವ ಪ್ರತೀಕಾರವು, ಇಲ್ಲವೆ ಪರಿಣಾಮವು ಸೂಕ್ಷ್ಮರೂಪದಲ್ಲಿ ಅಂತರಂಗದ ಮೇಲೆ ಮುದ್ರಿತವಾಗಿ ಉಳಿಯುತ್ತದೆ. ಇದಕ್ಕೆ ವಾಸನೆ ಅಥವಾ ಸಂಸ್ಕಾರ ಎಂದು ಹೆಸರು. ಒಳ್ಳೆಯದು, ಕೆಟ್ಟದ್ದು, ಇತ್ಯಾದಿ ದ್ವಂದ್ವಗಳಲ್ಲಿ ಮನಸ್ಸನ್ನು ಹರಿಬಿಡದೇ ಅಂತಹ ಸಂದರ್ಭಗಳಲ್ಲೆಲ್ಲಾ ಮನಸ್ಸಿನ ಸಮತ್ವವನ್ನು ಕಾಪಾಡಿಕೊಂಡು, ಮನಸ್ಸು ಉದ್ರೇಕ ಕಾತರತೆಗಳಿಗೊಳಗಾಗದಂತೆ ಕರ್ಮವನ್ನು ಮಾಡಿದರೆ ಅಂತಹ ಕರ್ಮಗಳು ಮನಸ್ಸಿನ ಮೇಲೆ ಯಾವ ವಾಸನೆಯನ್ನೂ ಉಂಟುಮಾಡಲಾರವು.
ಈ ರೀತಿಯಾಗಿ ಕರ್ಮ ಮಾಡುವ ಕಲೆಗೆ ‘ಬುದ್ಧಿಯೋಗ’ ಎಂದು ಹೆಸರು.
ಮನುಷ್ಯನಲ್ಲಿ ಮನಸ್ಸು, ಬುದ್ಧಿಗಳು ಇತರೆ ಪ್ರಾಣಿಗಳಿಗಿಂತಲೂ ಹೆಚ್ಚು ವಿಕಾಸವನ್ನು ಹೊಂದಿವೆ ಎಂಬ ಕಾರಣದಿಂದಲೇ ಮನುಷ್ಯನು ಎಲ್ಲಾ ಪ್ರಾಣಿಗಳಲ್ಲಿಯೂ ಶ್ರೇಷ್ಠನು ಎಂದು ಪರಿಗಣಿಸಲ್ಪಟ್ಟಿದ್ದಾನೆ. ಕೇವಲ ಶಾರೀರಿಕ ಇಂದ್ರಿಯ ಸುಖಗಳನ್ನೇ ಬಯಸುವುದು ಪ್ರಾಣಿ ಜಾತಿಯ ಲಕ್ಷಣ. ಈ ಹಿಂದೆ ತಿಳಿಸಿದಂತೆ, ಮನುಷ್ಯನು ಮೇಲ್ಮಟ್ಟಕ್ಕೇರಿದ ಹಾಗೆ, ಮಾನಸಿಕ ಸುಖಕ್ಕಾಗಿ ಇಂದ್ರಿಯ ಸುಖವನ್ನು ತ್ಯಜಿಸಲು ಸಿದ್ಧನಾಗುತ್ತಾನೆ. ಇನ್ನೂ ಮುಂದಿನ(ಮೇಲಿನ) ಹಂತಕ್ಕೇರಿದ ಮನುಷ್ಯನು ಬೌದ್ಧಿಕ ಸುಖಕ್ಕಾಗಿ, ಅಂದರೆ ಉಚ್ಛಮಟ್ಟದ ತತ್ವ, ಧರ್ಮ, ದೇಶ ಇತ್ಯಾದಿ ಮೇಲ್ಪಟ್ಟಿದ್ದ ಸುಖಕ್ಕಾಗಿ, ತನ್ನ ಇಂದ್ರಿಯ ಸುಖವನ್ನಷ್ಟೇ ಅಲ್ಲ, ಮನಸ್ಸಿನ ಸುಖವನ್ನು ಸಹ ತ್ಯಜಿಸಲು ಸಿದ್ಧನಾಗುತ್ತಾನೆ. ಇವನು ಶ್ರೇಷ್ಠ ತರಗತಿಯ ಮನುಷ್ಯನೆಂದು ತಿಳಿಯಲ್ಪಡುತ್ತಾನೆ. ಪ್ರತಿಯೊಬ್ಬ ಮಾನವನೂ ಕನಿಷ್ಠ ಪಕ್ಷ ಈ ಮಟ್ಟಕ್ಕೇರಿ, ಬುದ್ಧಿಯ ಮಟ್ಟಿದಿಂದ ವಿಚಾರ ಮಾಡುತ್ತಾ. ಬುದ್ಧಿಯೋಗಯುಕ್ತನಾಗಿ ಕರ್ಮಮಾಡಬೇಕೆಂದೂ, ಹಾಗೆ ಮಾಡಿದರೆ ಕರ್ಮಗಳಿಂದ ಬಂಧಿತನಾಗುವುದಿಲ್ಲವೆಂದು. ಅಂತಹ ಕರ್ಮಗಳ ಸಂಸ್ಕಾರವು ಅಂತರಂಗದ ಮೇಲೆ ಉಳಿಯುವುದಿಲ್ಲ ತತ್ವ ದೃಷ್ಟಿಯಿಂದ ಇಂತಹ ಕರ್ಮಗಳು ‘ಅಕರ್ಮ’ ವಾಗುವುದೆಂದೂ ಕರ್ಮಯೋಗವು ಸಾರುತ್ತದೆ.
ಹಿಂದೆ 48ನೇ ಶ್ಲೋಕದಲ್ಲಿ ಸಮತ್ವಂಯೋಗ ಉಚ್ಯತೇ| ಅಂದರೆ ಸುಖದುಃಖಾದಿಗಳಲ್ಲಿ ಸಮತ್ವವನ್ನು ಕಾಯ್ದುಕೊಳ್ಳುವುದಕ್ಕೆ ‘ಯೋಗ’ ಎಂದು ಹೇಳಲಾಗಿತ್ತು. ಅದೇ ಅರ್ಥವನ್ನು ಇಲ್ಲಿ ಇನ್ನೂ ವಿಶದೀಕರಿಸಲಾಗಿದೆ. ಸಮತ್ವವನ್ನು ಕಾಯ್ದುಕೊಳ್ಳುವುದರ ಜೊತೆಗೆ, ತಾನು ಕೈಗೊಂಡ ಕೆಲಸವನ್ನು ಬುದ್ಧಿವಂತಿಕೆಯಿಂದಲೂ, ದಕ್ಷತೆಯಿಂದಲೂ, ಮಾಡಿ ಮುಗಿಸಿದರೆ ಮಾತ್ರ ಅದು ‘ಯೋಗ’ ಎನಿಸಿಕೊಳ್ಳುತ್ತದ್ದೆ, ಎಂದು ಯೋಗಃ ಕರ್ಮಸು ಕೌಶಲಮ್: ಎಂಬ ಶಬ್ದಗಳಲ್ಲಿ ಹೆಚ್ಚಿನ ವಿಚಾರವನ್ನು ಹೇಳಲಾಗಿದೆ.

ಬುದ್ಧಿಯೋಗದಿಂದ ಕರ್ಮವನ್ನೂ ಏಕೆ ಮಾಡಬೇಕು ?

ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ |
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ || 51 ||
ಅರ್ಥ : ಈ ರೀತಿ ಬುದ್ಧಿಯೋಗದಿಂದ ಕೂಡಿದ ಜಾಣರು, ಕರ್ಮಫಲವನ್ನು ತ್ಯಜಿಸಿ, ಅಂದರೆ ಕರ್ಮಫಲದ ಮೇಲಿನ ಆಸೆಯನ್ನು ಬಿಟ್ಟು, ತನ್ಮೂಲಕ ಜನನ ಬಂಧನದಿಂದ ತಪ್ಪಿಸಿಕೊಂಡು ದುಃಖವಿಲ್ಲದ ಸ್ಥಿತಿಯನ್ನು ತಲುಪುತ್ತಾರೆ.

ಫಲಾಸೆಯಿಲ್ಲದೆ ಸಮತ್ವ ಬುದ್ಧಿಯಿಂದ ಕರ್ಮಮಾಡಿದರೆ ಅಂತಹ ಕರ್ಮವು ಲೇಪಕ್ಕೆ ಕಾರಣವಾಗುವುದಿಲ್ಲ. ಅಂದರೆ ಅಂತಹ ಕರ್ಮಗಳಿಂದ ಹೊಸವಾಸನೆಗಳುಂಟಾಗುವುದಿಲ್ಲ. ಕರ್ಮಮಾಡಿ ತನ್ಮೂಲ ಕ ವಾಸನೆಗಳನ್ನು ಭೋಗಿಸಿ ಮುಗಿಸಿದಂತಾಗುವುದರಿಂದ ಸಂಚಿತವಾಸನೆಗಳು ಬರಿದಾಗುತ್ತವೆ. ಹೀಗಾಗಿ ಒಂದೇ ಕಾರ್ಯದಿಂದ ಎರಡು ಫಲಗಳು ಲಭಿಸಿದಂತಾಗಿ ಸಂಚಿತ ವಾಸನೆಗಳ ಒತ್ತಡವು ಕಡಿಮೆಯಾಗಿ ಕ್ರಮೇಣ ವಾಸನೆಗಳನ್ನೂ ಬರಿದುಮಾಡಿಕೊಳ್ಳ¨ಹುದಾಗಿದೆ. ಹೀಗೆ ವಾಸನಾ ಸಂಗ್ರಹವು ಬರಿದಾದರೆ ಮತ್ತು ಹೊಸವಾಸನೆಗಳು ಹುಟ್ಟಿದಿದ್ದರೆ, ಮುಂದೆ ‘ಜೀವ’ನು ಹೊಸ ಶರೀರವನ್ನು ಪಡೆಯಬೇಕಾಗುವುದಿಲ್ಲ, ಅಂದರೆ ಅವನು ಜನನ ಮರಣಗಳಿಂದ ಮುಕ್ತನಾಗುತ್ತಾನೆ ಮತ್ತು ಪರಮಾತ್ಮನಲ್ಲಿ ಐಕ್ಯವಾಗುತ್ತಾನೆ.
ಜೀವ ಅಥವಾ ಜೀವಾತ್ಮ ಎಂದರೆ ‘ನಾನು’ ಅಹಂಕಾರದಿಂದ ಯುಕ್ತನಾದ ಪರಮಾತ್ಮನೇ ಸರಿ. ಜೀವನಲ್ಲಿಯ ಅಹಂಕಾರವು ನಾಶವಾದರೆ ಆಗ ಉಳಿಯುವುದು ಪರಮಾತ್ಮ. ಹೊಸದಾಗಿ ಪರಮಾತ್ಮನಲ್ಲಿ ಸೇರುವುದೆಂಬುರಿಲ್ಲ. ತಾನೇ ಪರಮಾತ್ಮನಾಗುವುದು, ಎಂಬ ಭಾವ. ಆದುದರಿಂದ ಬುದ್ಧೀಯುಕ್ತನಾಗಿ ಫಲಾಶೆಯಿಲ್ಲದೆ ಕರ್ಮಮಾಡಿದರೆ ದುಃಖವಿಲ್ಲದ ಸ್ಥಾನವನ್ನು ಸೇರುತ್ತೀಯೆ ಎಂದು ಹೇಳಲಾಗಿದೆ.

ಇಂತಹ ಸ್ಥಿತಿಯು ಎಂದು ಲಭಿಸುತ್ತದೆ ?

ಯದಾ ತೇ ಮೋಹಕಲಿಲಂ ಬುದ್ಧಿವ್ರ್ಯತಿತರಿಷ್ಯತಿ |
ತದಾ ಗಂತಾಪಿ ನಿರ್ವೇದಮ್ ಶ್ರೋತವ್ಯಸ್ಯ ಶ್ರುತಸ್ಯ ಚ || 52 ||
ಅರ್ಥ : ನಿನ್ನ ಬುದ್ಧಿಯು ಯಾವಾಗ್ಯೆ ಭ್ರಮೆ ಎಂಬ ಕೆಸರನ್ನು ದಾಟಿಹೋಗುತ್ತದೆಯೋ ಆಗ ನೀನು ಕೇಳಿದ, ಹಾಗೂ ಇನ್ನೂ ಕೇಳಬೇಕಾಗಿರುವ ವಿಷಯಗಳ ಬಗ್ಗೆ ಉದಾಸೀನನಾಗುತ್ತೀಯ.
ಇಲ್ಲಿ ಕೇಳಿದ, ಮತ್ತು ಕೇಳಬೇಕಾದ ಎಂಬ ‘ಕಿವಿ’ ಇಂದ್ರಿಯಕ್ಕೆ ಸಂಬಂಧಪಟ್ಟ ಕರ್ಮಗಳಷ್ಟನ್ನೇ ಹೇಳಿದಾಗ್ಯೂ, ಇವುಗಳ ಮುಖಾಂತರ ಎಲ್ಲಾ ಇಂದ್ರಿಯಗಳಿಗೂ ಸಂಬಂಧಪಟ್ಟ ಈಗ ಅನುಭವಿಸುತ್ತಿರುವ, ಮತ್ತು ಇನ್ನೂ ಅನುಭವಿಸದೇ ಇರುವ ಅಂದರೆ ಮುಂದೆ ಅನುಭೋಗಿಸುವ ಸುಖ-ದುಃಖಗಳೆಲ್ಲವೂ ಹೇಳಲ್ಪಟ್ಟವೆ ಎಂದು ತಿಳಿದುಕೊಳ್ಳಬೇಕು.
ಬುದ್ಧಿಯು, ಹಿಂದೆ ಹೇಳಿದ ಕರ್ಮಯೋಗ ಸಾಧನೆಯಿಂದ, ತಿಳಿಗೊಂಡರೆ ಅಥವಾ ಶುದ್ಧಿಗೊಂಡರೆ, ಆಗ ಅದು ‘ಮಾಯೆ’ ಯಿಂದ ಒದಗಿದ ಭ್ರಮೆಯ ಬಲೆಗೆ ಸಿಗದೆ, ಆತ್ಮನೊಡನೆ ಐಕ್ಯ ಪ್ರಯತ್ನಪಡುತ್ತದೆ. ಬುದ್ಧಿಯು ಭ್ರಮೆಯ ಕವಚಗಳನ್ನು ಕಳಚಿ ಹಾಕಿದರೆ ಆಗ ಅದು ಇಂದ್ರಿಯ ಸುಖಗಳ ಆಕರ್ಷಣೆಗೆ ಒಳಗಾಗುವುದಿಲ್ಲ. ಸದ್ಯದಲ್ಲಿ ಮಾಯೆಯ ಹಿಡಿತಕ್ಕೆ ಒಳಗಾದ ಬುದ್ಧಿಯು ಭ್ರಮೆಯಿಂದ ಕೂಡಿದ್ದಾಗಿ ಇಂದ್ರಿಯವಿಷಯಗಳನ್ನು ಭೋಗಿಸುವುದರಲ್ಲಿಯೇ ನಿಜವಾದ ಸುಖವಿದೆ ಎಂದು ತಿಳಿದುಕೊಳ್ಳುತ್ತಿದೆ. ಅಂತಹ ಭೋಗದಿಂದ, ಭೋಗದ ಅಪೇಕ್ಷೆಯು ಇನ್ನೂ ಹೆಚ್ಚುತ್ತಾ ಹೋಗಿ, ಭ್ರಮೆಯ ಕವಚವು ಇನ್ನೂ ದಪ್ಪವಾಗುತ್ತಾ ಹೋಗುತ್ತದೆ. ಚಳಿಗಾಲದಲ್ಲಿ ದಟ್ಟವಾದ ಮೋಡ, ಇಬ್ಬನಿಗಳಿಂದ ಸೂರ್ಯನು ಮುಚ್ಚಲ್ಪಟ್ಟಿರುವಾಗ ಮೋಡಗಳು ಸರಿದು ಸೂರ್ಯನ ಪ್ರಖರ ಕಿರಣಗಳು ಭೂಮಿಗೆ ಬಂದಹಾಗೆ. ಬೆಂಕಿಯ ಹತ್ತಿರ ಮೈಯನ್ನು ಕಾಯಿಸಿಕೊಳ್ಳುತ್ತಿರುವ ಮನುಷ್ಯನು ಬೆಂಕಿಯನ್ನು ಬಿಟ್ಟು ಸೂರ್ಯನ ಬಿಸಲಿನ ತಾಪಕ್ಕೆ ಮೈಯನ್ನೊಡ್ಡುವಂತೆ ಬುದ್ಧಿಯನ್ನು ಆವರಿಸಿಕೊಂಡಿರುವ ‘ವಿಷಯ ಸುಖ’ಎಂಬ ದಟ್ಟವಾದ ಭ್ರಮೆಯು ಕರಗಿದ ಹಾಗೆ ಇಂದ್ರಿಯ ಸುಖಗಳಲ್ಲಿಯು ಆಸೆಯು (ಆಕರ್ಷಣೆಯು) ಕಡಿಮೆಯಾಗುತ್ತಾ ಬರುತ್ತದೆ.

ಅಜ್ಞಾನವು ಪರಿಹಾರವಾದ ಮೇಲೆ ಆತ್ಮ ಜ್ಞಾನ ವಾಗುತ್ತದೆ

ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ |
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ || 53 ||
ಅರ್ಥ : ನಿನ್ನ ಬುದ್ಧಿಯು, ಕೇಳುವ, ನೋಡುವ ಮೊದಲಾದ ಪಂಚೇಂದ್ರಿಯಗಳ ಮೂಲಕ ಭೋಗಿಸಲಾಗುತ್ತಿರುವ ವಿಷಯ ಸುಖಗಳಿಂದ ಕಲುಷಿತವಾಗದೆ ಅಂದರೆ ಅವುಗಳಿಂದ ನಿರ್ಲಿಪ್ತವಾಗಿ, ಶಾಂತತೆಯನ್ನು ಪಡೆದು ಏಕಾಗ್ರವಾಗಿ ಧ್ಯಾನದಲ್ಲಿದ್ದರೆ ಆಗ ನೀನು ಆತ್ಮಜ್ಞಾನವನ್ನು ಪಡೆಯುತ್ತೀಯೆ.
ಪ್ರಪಂಚದಲ್ಲಿ ಇಂದ್ರಿಯಗಳಿಗೆ ಗೋಚರಿಸುತ್ತಿರುವ, ನಾನಾ ತರಹದ, ಆಕರ್ಷಕವಾದ ಇಂದ್ರಿಯ ವಿಷಯಗಳು, ಆಯಾಯಾ ಇಂದ್ರಿಯಗಳ ಮೂಲಕ ಮನಸ್ಸಿನಲ್ಲಿ ವಿಷಯವಾಸನೆಯನ್ನು ಕೆರಳಿಸುತ್ತವೆ. ಬುದ್ಧಿಯ ಅನುಮತಿಯಿಂದ ಮನಸ್ಸು ಅದರಲ್ಲಿ ಪ್ರವೇಶಿಸಿದರೆ ಆ ವ್ಯಕ್ತಿಯು ವಿವಿಧ ಭೋಗಗಳನ್ನು ಅನುಭವಿಸುತ್ತಾನೆ. ಇಂದ್ರಿಯಗಳು ಭೋಗಸುಖವನ್ನು ಕೊಡಲು, ವಿಷಯಗಳು ಹಾಗೂ ಅಂತಹ ಭೋಗಗಳನ್ನು ಅನುಭವಿಸುತ್ತಿದ್ದಾಗ್ಯೂ, ಬುದ್ಧಿಯು ಅದರಿಂದ ಕಲುಷಿತವಾಗದೆ ಸಮತ್ವವನ್ನು ಕಾಯ್ದುಕೊಂಡು ಆತ್ಮಧ್ಯಾನದಲ್ಲಿ ಏಕಾಗ್ರವಾಗಿದ್ದರೆ, ಆಗ ಯೋಗವನ್ನೂ ಸಾಧಿಸಿದಂತಾಗುತ್ತದೆ.
ಈ ಬೋಧವು ಅರ್ಜುನನ ಮನಸ್ಸಿಗೆ ನಾಟಿದುದರಿಂದ ಅವನು ಇನ್ನೂ ಹೆಚ್ಚು ವಿವರಗಳನ್ನು ತಿಳಿದುಕೊಳ್ಳಲು ಮುಂದಿನ ಪ್ರಶ್ನೆಯನ್ನೂ ಕೇಳಿದ್ದಾನೆ.

ಅರ್ಜುನನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 54 ||
ಅರ್ಥ : ಕೇಶವನೇ! ಶುದ್ಧ ಬುದ್ಧಿಯನ್ನು ಗಳಿಸಿ ಆತ್ಮಜ್ಞಾನದಲ್ಲಿ ನಿರತನಾಗಿವಾಗಿರುವ ಸ್ಥಿತಪ್ರಜ್ಞನ ಲಕ್ಷ್ಚಣಗಳೇನು? ಅವನ ಮಾತು ಹೇಗಿರುತ್ತದೆ. ಅವನು ಕುಳಿತುಕೊಳ್ಳುವುದು ಹೇಗೆ ? ಅವನು ಓಡಾಡುವ ರೀತಿ ಯಾವುದು ?
ಮೇಲಿನ ಪ್ರಶ್ನೆಯಲ್ಲಿ ಅರ್ಜುನನು ಎರಡು ಮುಖ್ಯವಿಷಯಗಳ ಬಗ್ಗೆ ವಿವರಣೆಗಳನ್ನು ಅಪೇಕ್ಷಿಸಿದ್ದಾನೆ.
1. ಬುದ್ಧಿಯು ತಿಳಿಯಾಗಿ ಯೋಗವನ್ನು ಸಾಧಿಸಿ ಆತ್ಮಜ್ಞಾನದಲ್ಲಿ ನಿಷ್ಠನಾದವನ ವರ್ಣನೆ
2. ಮತ್ತು ಅವನು ಪ್ರಪಂÀಚದಲ್ಲಿ ವ್ಯವಹರಿಸುವ ವಿಧಾನ.

ಮುಂದಿನ ಶ್ಲೋಕಗಳಲ್ಲಿ ಸ್ತಿತಪ್ರಜ್ಞನ ವರ್ಣನೆಯಿದೆ
ಭಗವಾನ್ ಉವಾಚ
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |
ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ || 55 ||
ಭಗವಂತನು ಹೇಳುತ್ತಾನೆ
ಅರ್ಥ : ಮನುಷ್ಯನು, ಎಲೈ ಪಾರ್ಥನೇ ಮನಸ್ಸಿನಲ್ಲಿ ಹುಟ್ಟುವ ಇಂದ್ರಿಯಭೋಗಗಳೆಂಬ ಆಸೆಗಳೆಲ್ಲವನ್ನೂ ಕಳಚಿ ಹಾಕಿ, ಮನಸ್ಸನ್ನು ಆತ್ಮನಲ್ಲಿ ಸ್ಥಿರಪಡಿಸಿ ಸಂತುಷ್ಟನಾಗಿದ್ದರೆ, ಅವನಿಗೆ ಸ್ಥಿತಿಪ್ರಜ್ಞ ಅಂದರೆ ಬುದ್ಧಿಯು ನಮತ್ವದಲ್ಲಿರುವವನು (ಸಮಬುದ್ಧಿ) ಎಂದು ಹೆಸರು.
ಈ ಶ್ಲೋಕದಿಂದ ಹಿಡಿದು ಅಧ್ಯಾಯದ ಕೊನೆವರೆಗೆ ಸ್ಥಿತಪ್ರಜ್ಞನ ಆಂತರಿಕ ಅನುಭವ ಹಾಗೂ ಬಾಹ್ಯ ಚಟುವಟಿಕೆಗಳ ಬಗ್ಗೆ ವರ್ಣನೆಯಿದೆ.
ಈ ವರ್ಣನೆಯು ಸಾಧಕರಿಗೆ ಎರಡು ವಿಧದಿಂದ ಉಪಯುಕ್ತವಾಗಿದೆ. ಮೊದಲನೆಯದಾಗಿ ಸಾಧಕನು ವೇಷಧಾರಿ ಛದ್ಮಗುರುಗಳ ಮಧ್ಯದಲ್ಲಿ ಆತ್ಮನಿಷ್ಠನಾದ ಸದ್ಗುರುವನ್ನು ಆರಿಸಿಕೊಳ್ಳಲು ಈ ಲಕ್ಷಣಗಳು ಸಹಾಯಕವಾಗಿವೆ. ಸದ್ಗುರುವು ನಿಜವಾಗಿಯೂ ಯೋಗ ನಿಷ್ಠನಾಗಿರುವುದರಿಂದ ಮನಸ್ಸು ಬುದ್ಧಿಗಳ ಸಮತ್ವವನ್ನು ಕಾಯ್ದುಕೊಂಡು ‘ಸ್ಥಿತಪ್ರಜ್ಞನ’ ಅಂತಸ್ತಿಗೆ ಏರಿದವನಾಗಿರಬೇಕು. ಎರಡನೆಯದಾಗಿ ಸಾಧಕನು ತಾನು ಸ್ವತಃ ಈ ಸ್ಥಿತಿಗೆ ಏರಲು, ಆಂತರಿಕ ಹಾಗೂ ಬಾಹ್ಯರೀತಿಯಿಂದ ಯಾವ ಯಾವ ಲಕ್ಷಣಗಳನ್ನೂ ಮೈಗೂಡಿಸಿಕೊಳ್ಳಬೇಕೆಂಬುದನ್ನು ತಿಳಿದುಕೊಂಡು, ಅದಕ್ಕನುಗುಣವಗಿ ತನ್ನ ನಡತೆಯನ್ನೂ ತಿದ್ದಿಕೊಳ್ಳಲು ಸಹಾಯಕವಾಗುತ್ತದೆ. ಈ ಎರಡೂ ಗುರಿಯನ್ನೂ ಎದುರಿಸಿಟ್ಟುಕೊಂಡು, ಭಗವಂತನು ಅರ್ಜುನನ ನೆಪಮಾಡಿಕೊಂಡು, ಈ ವಿಷಯವನ್ನೂ ವಿವರವಾಗಿ ವರ್ಣಿಸಿದ್ದಾನೆ.

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ |
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ || 56 ||
ಅರ್ಥ : ತನಗೆ ಒದಗಿದ ದುಃಖ ಹಾಗೂ ಕಷ್ಟಗಳಲ್ಲಿ ಮನಸ್ಸು ಅಂಜಿ, ಅಳುಕದೆ, ಉದ್ವೇಗಕ್ಕೊಳಗಾಗದೆ ಸ್ಥಿರವಾಗಿರುವುದು, ವಿವಿಧ ಸುಖದ ಸಂದರ್ಭಗಳಲ್ಲಿ, ಸಂತೋಷದಲ್ಲಿ, ಮುಳುಗಿ ಮಗ್ನನಾಗಿರದೆ, ಆ ಭೋಗಗಳನ್ನು ಉದಾಸೀನವಾಗಿ ಅನುಭವಿಸುತ್ತಿರುವುದು. ಅತಿಯಾದ ಮೋಹ, ದುಃಖ ಮತ್ತು ಕ್ರೋಧಗಳನ್ನು ಬಿಟ್ಟಿರುವುದು. ಇವು ಸ್ಥಿರಬುದ್ಧಿಯುಳ್ಳ ಮುನಿಯ ಲಕ್ಷಣಗಳು.
ಸ್ಥಿರಪ್ರಜ್ಞನು ತನ್ನ ಇಂದ್ರಿಯ ಆಸೆಗಳನ್ನೆಲ್ಲಾ ಆತ್ಮನಲ್ಲಿ ಹೋಮಮಾಡಿ, ಆತ್ಮಧ್ಯಾನದ ಆನಂದದಲ್ಲಿ ತೃಪ್ತನಾಗಿರುತ್ತಾನೆಂದು ಹೇಳಿ, ಅವನು ಶಾರೀರಿಕ ಸುಖ-ದುಃಖಗಳನ್ನು ಹೇಗೆ ಎದುರಿಸುತ್ತಾನೆ. ಎಂಬುದನ್ನು ತಿಳಿಸಲಾಗಿದೆ. ಇವನು ಸುಖದುಃಖಗಳಿಂದ ಉದ್ರಿಕ್ತನಾಗದೆ, ಅವೆರಡನ್ನೂ ಒಂದೇ ರೀತಿಯಾಗಿ ಕಾಣುತ್ತಾ ಅಂದರೆ ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಯಾವಾಗಲೂ ಸಮಬುದ್ಧಿಯನ್ನು ಕಾಯ್ದುಕೊಂಡು, ಸುಖ ದುಃಖಗಳು ತಮ್ಮಷ್ಟಕ್ಕೇ ಬರುತ್ತವೆ, ಹೋಗುತ್ತವೆ ಅವು ನನ್ನನ್ನು ಬಾಧಿಸಲಾರವು “ಎಂಬ ಸ್ಥಿರಬುದ್ಧಿಯಿಂದ ಸಮುದ್ರ ಮಧ್ಯದಲ್ಲಿರುವ ದೀಪಸ್ತಂಭವು ಅದಕ್ಕೆ ಬಂದು ಬಡಿಯುತ್ತಿರುವ ಸಣ್ಣ ದೊಡ್ಡ ಅಲೆಗಳಿಂದ ವಿಚಲಿತವಾಗದೆ, ಸ್ಥಿರವಾಗಿ, ನಿಶ್ಚಿಂತೆಯಿಂದ ಇರುವಂತೆ ಇರುತ್ತಾನೆ.
ಮಾನಸಿಕ ದೋಷಗಳಾದ ರಾಗ, ಭಯ, ಕ್ರೋಧ ಇವು ಮೂರನ್ನು ಮಾತ್ರ ಇಲ್ಲಿ ಹೇಳಲಾಗಿದೆ. ಇವುಗಳ ಜೊತೆಗೆ ಲೋಭ, ಮೋಹ ಮದ, ಮತ್ಸರಾದಿಗಳನ್ನು ಸಹ ತಿಳಿದುಕೊಳ್ಳಬೇಕು. ಸೂಕ್ಷ್ಮವಾಗಿ ವಿಚಾರ ಮಾಡಿದರೆ ಲೋಭ, ಮೋಹ, ಮತ್ಸರಗಳು ರಾಗ, ಭಯ, ಕ್ರೋಧಗಳಲ್ಲಿ ಅಂತರ್ಗತವಾಗಿದೆ.
ನಮಗೆ ಯಾವುದಾದರೂಂದು ವಸ್ತುವಿನಲ್ಲಿ ಆಕರ್ಷಣೆಯುಂಟಾಗಿ ಅದರ ಮೇಲೆ ಅತಿಯಾದ ಆಸೆಯುಂಟಾದರೆ (ರಾಗ), ಆ ಅತಿಯಾದ ಆಸೆ ಅಥವಾ ಮೋಹದ ಪರಿಣಾಮವಾಗಿ, ನಮ್ಮ ಮನಸ್ಸಿನಲ್ಲಿ ಒಂದು ತರಹದ ‘ಭಯ’ ಉಂಟಾಗುತ್ತದೆ. ಅತಿ ಪ್ರಿಯವಾದ ಆ ವಸ್ತುವು ನಾಶವಾಗಬಹುದು ಅದಕ್ಕೆ ಏನಾದರೂ ವಿಪತ್ತು ಒದಗಬಹುದು, ಇಲ್ಲವೇ ಯಾರಾದರೂ ಅದನ್ನು ನನ್ನಿಂದ ಕಿತ್ತುಕೊಳ್ಳಬಹುದು ಎಂಬ ನಾನಾ ರೀತಿಯ ಭಯವು ಮನಸ್ಸಿನಲ್ಲಿ ಹುಟ್ಟುತ್ತದೆ. ಹೀಗೆ ನಾನು ಮತ್ತು ಈ ವಸ್ತುಗಳ ಮದ್ಯದಲ್ಲಿ ಬರುವ ವಿಘ್ನಗಳಿಂದ ನನ್ನಲ್ಲಿ ಕೋಪವುಂಟಾಗಿ, ಆ ವಿಘ್ನಕ್ಕೆ ಕಾರಣವಾಗಿರುವವರ ಮೇಲೆ ಅದು ತಿರುಗುತ್ತದೆ. ಹೀಗೆ ರಾಗ, ಭಯ, ಕ್ರೋಧಗಳು ಒಂದಕ್ಕೊಂದು ನಿಕಟ ಸಂಬಂಧವನ್ನೂ ಹೊಂದಿದೆ. ಒಂದರಿಂದ ಇನ್ನೊಂದು ಹುಟ್ಟುತ್ತದೆ.
ಸ್ಥಿತಪ್ರಜ್ಞನು
1. ಆಧ್ಯಾತ್ಮಿಕ ಅಂದರೆ ಶಾರೀರಿಕ ಮತ್ತು ಮಾನಸಿಕ ರೋಗ ಅಥವಾ ದುಃಖಗಳಿಂದ,
2. ಆಧಿಭೌತಿಕ ಅಂದರೆ ಬಾಹ್ಯಕಾರಣಗಳಾದ ಶಸ್ತ್ರ ಅಥವಾ ಕ್ರೂರ ಪ್ರಾಣಿ ಮೊದಲಾದವುಗಳಿಂದ
3. ಮತ್ತು ಆಧಿದೈವಿಕ ಅಂದರೆ ಮಳೆ, ಗಾಳಿ, ಬೆಂಕಿ ಮೊದಲಾದ ಪ್ರಕೃತಿ ಪ್ರಕೋಪಗಳಿಂದ, ಧೃತಿಗೆಡದೆ ಸ್ಥಿರನಾಗುತ್ತಾನೆ ಎಂದು ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ.
ಬೆಂಕಿಗೆ ಕಟ್ಟಿಗೆಯನ್ನು ಹಾಕಿದರೆ ಬೆಂಕಿಯು ಇನ್ನೂ ದೊಡ್ಡದಾಗಿ ಉರಿಯುತ್ತದೆ. ಆದರೆ ಸ್ಥಿತಪ್ರಜ್ಞನಲ್ಲಿ ‘ಆಸೆ’ ಎಂಬ ಬೆಂಕಿಗೆ ಭೋಗ ಎಂಬ ಕಟ್ಟಿಗೆಯನ್ನು ಹಾಕಿದರೆ ಆಸೆಯು ಸ್ವಲ್ಪವೂ ವೃದ್ಧಿಯಾಗುವುದಿಲ್ಲ.

ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಷ್ಯ ಶುಭಾಶುಭಮ್ |
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ || 57 ||
ಅರ್ಥ : ಸ್ಥಿತಪ್ರಜ್ಞನು ಯಾವ ವಸ್ತು ಅಥವಾ ವಿಷಯಗಳಲ್ಲಿಯೂ ಆಸಕ್ತಿಯನ್ನಿಟ್ಟುಕೊಳ್ಳದೆ ಅಲಿಪ್ತನಾಗಿರುತ್ತಾನೆ. ಶುಭಫಲಗಳು ಸಿಕ್ಕರೆ ಸಂತೋಷ ಪಡುವುದೂ ಇಲ್ಲ. ದುಃಖಫಲಗಳು ದೊರೆತರೆ ದುಃಖಿಸುವುದೂ ಇಲ್ಲ. ಈ ಎರಡೂ ಸಂದರ್ಭಗಳಲ್ಲಿಯೂ ಅವನು ಬುದ್ಧಿಯು ಸಮತೆಯನ್ನೂ ಕಾಪಾಡಿಕೊಳ್ಳುತ್ತಾನೆ’.
ಚಿತ್ರಕಾರನು ತಾನು ಬರೆಯುತ್ತಿರುವ ಚಿತ್ರವನ್ನು ಮಧ್ಯದಲ್ಲಿ ಬಿಟ್ಟು, ದೂರದಲ್ಲಿ ನಿಂತು ನೋಡಿ, ಪುನಃ ಪುನಃ ಅವಶ್ಯಕವಾದಲ್ಲೆಲ್ಲಾ ಕುಂಚದಿಂದ ರೂಪವನ್ನು ಸುಂದರಗೊಳಿಸುವಂತೆ, ಶ್ರೀಕೃಷ್ಣನು ಹಿಂದೆ ಹೇಳುವ ವರ್ಣನೆಯನ್ನು ಇನ್ನೂ ಸ್ಪಷ್ಟವಾಗಿ ಅರ್ಥವಾಗುವಂತೆ ಬೇರೆಬೇರೆ ಶಬ್ದಗಳಿಂದ ವರ್ಣಿಸುತ್ತಿದ್ದಾನೆ.
ಮೇಲೆ ಹೇಳಿದ ‘ಆಲಿಪ್ತತೆ’ ಎಂದರೆ ಸಂಸಾರದ ಸುಖದುಃಖಗಳಲ್ಲಿ ಜಿಗುಪ್ಸೆಯನ್ನು ಹೊಂದಿ, ಸಂಸಾರವನ್ನು ಬಿಟ್ಟು ಓಡಿಹೋಗಿ ಕಾಡಿನಲ್ಲಿ ಜೀವಿಸುವುದೆಂದೆಲ್ಲ. ಈ ಶಬ್ದವನ್ನು ಮುಂದೆ ಹೇಳುವ ವರ್ಣನೆಯೊಡನೆ ಜೋಡಿಸಿ ತಿಳಿದುಕೊಳ್ಳಬೇಕು. ಪ್ರಾಪಂಚಿಕ ವ್ಯವಹಾರಗಳಲ್ಲಿ, ಇಲ್ಲವೆ ಸುಖದುಃಖಾದಿಗಳಲ್ಲಿ ‘ಲಿಪ್ತ’ನಾಗಿ ಇಲ್ಲವೇ ಆಸಕ್ತನಾಗಿ ಜೀವಿಸುವುದೆಂದರೆ ಪರಾಧೀನತೆಯಲ್ಲಿದ್ದಂತೆಯೇ ಸರಿ. ನಾವು ಪ್ರಪಂಚದಲ್ಲಿ ಜೀವಿಸಿರುವವರೆಗೂ ಸುಖದುಃಖಗಳು ಇದ್ದೇ ಇರುತ್ತವೆ ಯಾವಾಗಲೂ ಕೇವಲ ಸುಖವೇ ಇರುವುದಿಲ್ಲ, ಅಂತೆಯೇ ಯಾವಾಗಲೂ ಕೇವಲ ದುಃಖವೇ ಇರುವುದಿಲ್ಲ. ಪ್ರಪಂಚವು ಇವೆರಡರ ಮಿಶ್ರಣವಾಗಿದೆ. ಸ್ಥಿರಪ್ರಜ್ಞನು ತನ್ನ ಮನಸ್ಸು ಬುದ್ಧಿಗಳನ್ನು ಪರಮಾತ್ಮನಲ್ಲಿ ಸ್ಥಿರವಾಗಿ ನಿಲ್ಲಿಸಿ, ಅನಾಸಕ್ತನಾಗಿದ್ದುಕೊಂಡು, ತನಗೆ ಸುಖವೇ ಒದಗಲಿ ಇಲ್ಲವೇ ದುಃಖವೇ ಒದಗಲಿ, ಎರಡನ್ನೂ ಸಮಾನವೆಂದು ತಿಳಿದು ವರ್ತಿಸುತ್ತಾನೆ. ಅವನು ದುಃಖಗಳ ಬಗ್ಗೆ ತಿರಸ್ಕಾರವನ್ನೂ, ಸುಖಗಳ ಬಗ್ಗೆ ಆಸಕ್ತಿಯನ್ನೂ ಹೊಂದುವುದಿಲ್ಲ.

ಯದಾ ಸಂಹರತೇ ಚಾಯಂ ಕೂಮೋ„ಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ || 58 ||
ಅರ್ಥ : ಆಮೆಯು, ಹೊರಗಿನ ಭಯದ ಸೂಚನೆಯನ್ನು ಕಂಡ ಕೂಡಲೆ, ತನ್ನ ಇಂದ್ರಿಯಗಳನ್ನೆಲ್ಲಾ ಒಳಗೆ ಎಳೆದುಕೊಂಡು ತನ್ನ ಚಿಪ್ಪಿನೊಳಗೆ (ಕವಚ) ಸೇರಿಸಿ ನಿಶ್ಚಿಂತೆಯಿಂದ ಇರುವಂತೆ, ಸ್ಥಿತಪ್ರಜ್ಞನು ತನ್ನ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದುಕೊಂಡು ಸ್ಥಿರನಾಗಿರುತ್ತಾನೆ.

ಇದುವರೆಗೆ ಸ್ಥಿತಪ್ರಜ್ಞನ ಮೂರು ಲಕ್ಷಣಗಳನ್ನೂ ಹೇಳಲಾಯಿತು.
1. ಅವನು ಯಾವಾಗಲೂ ಆತ್ಮಸಂತುಷ್ಟನಾಗಿರುತ್ತಾನೆ.
2. ಸುಖ ದುಃಖಗಳಲ್ಲಿ ಸಮಬುದ್ಧಿಯನ್ನು ಕಾಯ್ದುಕೊಳ್ಳುತ್ತಾನೆ.
3. ಸುಖದಿಂದ ಹಿಗ್ಗುವುದೂ ಇಲ್ಲ, ದುಃಖದಿಂದ ಕುಗ್ಗುವುದೂ ಇಲ್ಲ. ಈಗ ಈ ಮೂರು ಲಕ್ಷಣಗಳ ಜೊತೆಗೆ ಇನ್ನೊಂದು ಹೊಸ ಲಕ್ಷಣವನ್ನು ಸೇರಿಸಲಾಗಿದೆ.
4. ಅವಶ್ಯಕವೆಂದು ಕಂಡಾಗ ಇಂದ್ರಿಯಗಳನ್ನು ಇಂದ್ರಿಯವಿಷಯಗಳಿಂದ ಹಿಂದಕ್ಕೆಳೆದುಕೊಂಡು ಇಂದ್ರಿಯ ವಿಷಯಗಳು ಮನಸ್ಸು, ಬುದ್ಧಿಯ ಮೇಲೆ ಯಾವ ಉದ್ರೇಕವನ್ನೂ ಉಂಟು ಮಾಡದÀಂತೆ ತಡೆ ಹಿಡಿಯುತ್ತಾನೆ.
ನಮ್ಮ ಮನಸ್ಸು ಇಂದ್ರಿಯಗಳ ಮುಖಾಂತರ ಶರೀರದಿಂದ ಹೊರಕ್ಕೆ ಹೊರಟು ಇಂದ್ರಿಯ ವಿಷಯಗಳನ್ನು ಸೇರಿ ವಿವಿಧ ವಸ್ತುಗಳ ಜ್ಞಾನವನ್ನು ಪಡೆಯುತ್ತದೆ. ಇಂದ್ರಿಯಗಳೆಂಬ ರಂಧ್ರಗಳ ಮೂಲಕ ಜ್ಞಾನ ಜ್ಯೋತಿಯು ಬಾಹ್ಯವಸ್ತುಗಳ ಮೇಲೆ ಬಿದ್ದು ಅವುಗಳ ಜ್ಞಾನವನ್ನು ಮಾಡಿಕೊಡುತ್ತದೆ. ಉದಾಹರಣೆ ಕಣ್ಣಿನ ಮೂಲಕ ಹೊರಬಿದ್ದ ಜ್ಯೋತಿಯು ವಸ್ತುಗಳ ರೂಪ ಬಣ್ಣಗಳ ಜ್ಞಾನವನ್ನು ತಿಳಿಸುತ್ತದೆ. ಕಿವಿಯ ಮುಖಾಂತರ ಹೊರಟ ಜ್ಯೋತಿಯು ಆ ವಸ್ತುವಿನ ಶಬ್ದ ಜ್ಞಾನವನ್ನು ತಿಳಿಸುತ್ತದೆ ಇತ್ಯಾದಿ. ಹೀಗೆ ಬೇರೆ ಬೇರೆ ಇಂದ್ರಿಯಗಳಿಂದ ಆ ವಸ್ತುವಿನ ಬಗ್ಗೆ ವಿವಿಧ ಜ್ಞಾನವುಂಟಾಗುತ್ತದೆ. ನಮ್ಮ ನಿತ್ಯ ಪ್ರಾಪಂಚಿಕ ವ್ಯವಹಾರದಲ್ಲಿ ಸಹ ಈ ತರಹದ ಉದಾಹರಣೆಯನ್ನು ಕಾಣಬಹುದು. ಕೋಣೆಯಲ್ಲಿರುವ ಸಾಮಾನ್ಯ ಇಲೆಕ್ಟ್ರಿಕ್ ಗೋಳದ ಮುಖಾಂತರ ಹೊರಬೀಳುವ ವಿದ್ಯುಚ್ಛಕ್ತಿಯು ಕೋಣೆಯಲ್ಲಿ ಬೆಳಕನ್ನುಂಟು ಮಾಡುತ್ತದೆ. ಅದೇ ವಿದ್ಯುತ್ ಶಕ್ತಿಯು ‘ಕ್ಷ’ ಯಂತ್ರದ ಮುಖಾಂತರ ಹರಿದರೆ ಸಾಮಾನ್ಯ ಕಣ್ಣಿಗೆ ಗೋಚರಿಸದ ಶರೀರದ ಒಳಗಿರುವ ಅನೇಕ ಭಾಗಗಳನ್ನು ತೋರಿಸುತ್ತದೆ.
ಹೀಗೆ ಐದು ಇಂದ್ರಿಯಗಳ ಮುಖಾಂತರ ಹೊರಬೀಳುವ ಜ್ಯೋತಿಯು ಪ್ರಾಪಂಚಿಕ ವಸ್ತುಗಳ ವಿವಿಧ ರೀತಿಯ ಜ್ಞಾನವನ್ನು ಮನಸ್ಸಿಗೆ ತಂದು ಕೊಡುತ್ತದೆ. ಇದರಿಂದ ಮನಸ್ಸಿನ ಮೇಲೆ ನಾನಾರೀತಿಯ ಉದ್ರೇಕ ಇಲ್ಲವೆ ಆಘಾತಗಳುಂಟಾಗುತ್ತವೆ. ಐದು ಇಂದ್ರಿಯಗಳ ಪೈಕಿ ಒಂದು ಇಂದ್ರಿಯವು ಊನವಾಗಿದ್ದರೆ ಅದರ ಮುಖಾಂತರ ಉಂಟಾಗಬಹುದಾದ ವಸ್ತುಜ್ಞಾನವಾಗಲೀ, ಮಾನಸಿಕ ಉದ್ರೇಕವಾಗಲೀ ಆಗುವುದಿಲ್ಲ. ಉದಾಹರಣೆ-ನಾನು ಕುರುಡನಾಗಿದ್ದರೆ ನನ್ನೆದುರಿಗೆ ಹಾಯ್ದು ಹೋಗುವ ಸುಂದರ ರೂಪವು ನನ್ನ ಮನಸ್ಸಿನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಾರದು. ನಾನು ಕಿವುಡನಾಗಿದ್ದರೆ ನನ್ನ ಬಗ್ಗೆ ಇತರೆಯವರು ಮಾಡುವ ಟೀಕೆಗಳನ್ನು ನಾನು ಕದ್ದು ಕೇಳಲಾರೆನು ಮತ್ತು ಅವು ನನ್ನನ್ನು ಉದ್ರಿಕ್ತನನ್ನಾಗಿ ಮಾಡಲಾರವು. ನಾನು ರುಚಿ ನೋಡದ, ವಾಸನೆ ನೋಡದ, ಮುಟ್ಟಿನೋಡದ ವಸ್ತುಗಳಾವುವೂ ನನ್ನ ಮನಸ್ಸಿನ ಮೇಲೆ ಸುಖ ಇಲ್ಲವೇ ದುಃಖಕಾರಕ ಪರಿಣಾಮಗಳನ್ನುಂಟು ಮಾಡಲಾರವು. ಹೊರಗಿನ ಯಾವ ವಸ್ತುವೇ ಆಗಲೀ, ಅಹಿತಕರವಾದ ರೀತಿಯಲ್ಲಿ ಅತಿಯಾದ ಉದ್ರೇಕವನ್ನುಂಟುಮಾಡುತ್ತಿದೆ, ಇಲ್ಲವೆ ಮಾನಸಿಕ ಶಾಂತಿಯ ಭಂಗಮಾಡುತ್ತಿದೆ ಎಂದು ಕಂಡುಬಂದ ಕೂಡಲೆ, ಇಂದ್ರಿಯಗಳನ್ನೂ ಆಯಾಯಾ ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದುಕೊಂಡು, ಸ್ಥಿತಪ್ರಜ್ಞನು ಮನಸ್ಸಿನ ಸಮತ್ವವನ್ನೂ ಕಾಯ್ದುಕೊಳ್ಳೂತ್ತಾನೆ. ಹೀಗೆ ತಾನು ಅಪೇಕ್ಷಿಸಿದಾಗ ಇಂದ್ರಿಯಗಳನ್ನು ಇಂದ್ರಿಯ ಸುಖಭೋಗಗಳಿಂದ ಹಿಂದಕ್ಕೆ ಎಳೆದುಕೊಳ್ಳುವ ಕಲೆಗೆ ಯೋಗ ಶಾಸ್ತ್ರ ದಲ್ಲಿ ಪ್ರತ್ಯಾಹಾರ’ ಎನ್ನುತ್ತಾ ರೆ. ಭಕ್ತನಿಗೆ ಈ ಕಲೆಯು ಸ್ವಾಭಾವಿಕವಾಗಿಯೇ ಸಾಧಿಸುತ್ತದೆ. ಏಕೆಂದರೆ ಅವನು, “ತನ್ನ ಕಿವಿಗಳು ಪರಮಾತ್ಮನ ಸ್ತೋತ್ರಗಳನ್ನು ಕೇಳುವದಕ್ಕೂ, ಕಣ್ಣು ಪರಮಾತ್ಮನ ರೂಪವನ್ನು ನೋಡುವುದಕ್ಕೂ ಇದೇ ರೀತಿ ಇತರ ಇಂದ್ರಿಯಗಳು ಪರಮಾತ್ಮನ ಸೇವೆ ಮಾಡುವುದಕ್ಕೂ ಮೀಸಲಾಗಿವೆ” ಎಂದು ತಿಳಿದು ಆ ಕಾರ್ಯಕ್ಕೆ ಮಾತ್ರ ಉಪಯೋಗಿಸುವುದರಿಂದ ಇಂದ್ರಿಯ ಸುಖಭೋಗಗಳ ಕಡೆಗೆ ಆಕರ್ಷಿಸಲ್ಪಡುವುದಿಲ್ಲ. ಯೋಗಿಯು (ಹಟಯೋಗಿ) ಪ್ರಾಣಾಯಾಮ ಮಾಡಿ ಶಾರೀರಿಕ ಸಾಧನೆಗಳಿಂದ ಈ ಶಕ್ತಿಯನ್ನು ಪಡೆಯುತ್ತಾನೆ. ವೇದಾಂತಿಯು, ಇಂದ್ರಿಯ ಸುಖಗಳು ನಿಜವಾದ ಶಾಂತಿಯನ್ನು ಕೊಡಲಾರವೆಂದೂ ಅವು ಜೀವನವನ್ನು ವಿಷಯ ಸುಖಭೊಗಗಳ ಮೂಲಕ ಇನ್ನೂ ಅಧೋಗತಿಗೆ ನೂಕಿ ಮಾಯಾಜಾಲದಲ್ಲಿ ಸಿಲುಕಿಸುತ್ತವೆಂದೂ ಸ್ಪಷ್ಟವಾಗಿ ತಿಳಿದಿರುವುದರಿಂದ, ಅವನ ಸೂಕ್ಷ್ಮ ಹಾಗೂ ತೀಕ್ಷ್ಣ ಬುದ್ಧಿಯು ಅವನನ್ನು ವಿಷಯ ಸುಖಾಭಿಲಾಷೆಯಿಂದ ಹಿಂದಕ್ಕೆಳೆಯುತ್ತದೆ. ಇದಕ್ಕೇ ’ಉಪರತಿ’ ಎಂದು ಹೆಸರು.
ಶಾರೀರಿಕ ದೌರ್ಬಲ್ಯಗಳಿರುವಾಗ ಇಂದ್ರಿಯ ಸುಖಭೋಗಗಳಲ್ಲಿ ಆಸೆಯು ಇಲ್ಲವಾಗುತ್ತದೆ. ಆದರೆ ಆ ದೌರ್ಬಲ್ಯವು ಪರಿಹಾರವಾದ ಕೂಡಲೇ ಪುನಃ ಆಸೆಯು ಬೆಳೆಯುತ್ತದೆ. ಇದು ಸಂಪೂರ್ಣ ನಾಶವಾಗುವುದು ಹೇಗೆ ?

ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ |
ರಸವರ್ಜಂ ರಸೋ„ಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ || 59 ||
ಅರ್ಥ : ಇಂದ್ರಿಯ ವಿಷಯಗಳು, ಆಹಾರವನ್ನು ತೆಗೆದುಕೊಳ್ಳದೆ ಉಪವಾಸಮಾಡಿರುವವನನ್ನು ಆಕರ್ಷಿಸದೆ ಹಿಂದೆ ಸರಿಯುತ್ತವೆ. ಅಂದರೆ ಅವನು ಶಾರೀರಿಕವಾಗಿ ಇಂದ್ರಿಯಸುಖಗಳನ್ನು ಅನುಭವಿಸಲಾರನು. ಆದರೆ ಮನಸ್ಸಿನಲ್ಲಿ ಮಾತ್ರ ಸುಖಾಭಿಲಾಷೆಯು ಇದ್ದೇ ಇರುತ್ತದೆ. ಸಾಕ್ಷಾತ್ಕಾರವಾದನಂತರ ಮಾತ್ರ ಈ ಆಸೆಯು ಇಲ್ಲವಾಗುತ್ತದೆ.
ಇಂದ್ರಿಯಸುಖಗಳನ್ನು ಕೊಡುವ ಭೋಗವಸ್ತುಗಳು (ವಿಷಯಗಳು) ಯಾರು ಅವುಗಳನ್ನು ಅತಿಯಾಗಿ ಅಪೇಕ್ಷಿಸುತ್ತಾರೋ, ಅಂದರೆ ಯಾರು ಅವುಗಳನ್ನು ಸ್ವಾಗತಿಸುತ್ತಾರೋ ಅವರನ್ನು ಸೇರುತ್ತವೆ ಯಾರಿಗೆ ಅವುಗಳ ಬಗ್ಗೆ ತಿರಸ್ಕಾರವಿದೆಯೋ ಅವರನ್ನು ಆಕರ್ಷಿಸುವುದಿಲ್ಲ. ತಾತ್ಕಾಲಿಕ ಜನಿತವಾದ ತಿರಸ್ಕಾರದಿಂದಾಗಲೀ, ಬೇಕಂತ ಸಾಧಿಸಿದ ಬಲಾತ್ಕಾರದಿಂದಾಗಲೀ, ಇಲ್ಲವೆ ಇತರೆ ಕಾರಣಗಳಿಂದಾಗಲೀ, ಇಂದ್ರಿಯ ಸುಖಭೋಗವನ್ನು ಪ್ರಯತ್ನಪೂರ್ವಕವಾಗಿ ತ್ಯಜಿಸಿ, ವಿಷಯ ವಸ್ತುಗಳನ್ನು ದೂರೀಕರಿಸಿದಾಗ್ಯೂ, ಒಳಮನಸ್ಸಿನಲ್ಲಿ ಮಾತ್ರ ಆ ವಿಷಯೋಪಭೋಗಗಳ ಬಗ್ಗೆ ಸ್ವಲ್ಪವಾದರೂ ಆಸೆ ಇದ್ದೇ ಇರುತ್ತದೆ. ಈ ರೀತಿಯ ಸೂಕ್ಷ್ಮರೂಪದ ಆಸೆಯು ಸಾಕ್ಷಾತ್ಕಾರವಾದ ನಂತರ, ಹುರಿದ ಬೀಜದಂತೆ, ಪುನಃ ಮೊಳಕೆಯಾಗುವುದಿಲ್ಲ. ಅಲ್ಲಿಯವರೆಗೆ ಪ್ರಯತ್ನದಿಂದ ಅದುಮಲ್ಪಟ್ಟ ಆಸೆಯು, ಪುನಃ ಸಂದರ್ಭವೊದಗಿದಾಗಲೆಲ್ಲಾ ತನ್ನ ಇಚ್ಛೆಯನ್ನೂ ಪೂರೈಸಿಕೊಳ್ಳಲು ಪ್ರಯತ್ನಪಡುತ್ತಲೇ ಇರುತ್ತದೆ. ಆದುದರಿಂದ ಸಾಧಕನಾದವನು. ಇಂದ್ರಿಯನಿಗ್ರಹ ಎಂಬ ಪ್ರಯತ್ನದಲ್ಲಿ ಸದಾ ಜಾಗರೂಕನಾಗಿದ್ದು ಅದನ್ನು ಎಂದಿಗೂ ಸಡಿಲುಬಿಡಬಾರದು. ಸಡಿಲುಬಿಟ್ಟರೆ ಅದು ಹೆಚ್ಚು ತೀವ್ರವಾಗಿ ಬಂದು ಮೊದಲಿನ ಸೇಡನ್ನು ತೀರಿಸಿಕೊಳ್ಳಲು ಆತನನ್ನು ಇಂದ್ರಿಯಲೋಲಪನನ್ನಾಗಿ ಮಾಡಬಹುದು, ಹಾಗೂ ತನ್ಮೂಲಕ ಸಾಧಕನನ್ನು ಅಧೋಗತಿಗೆ ಕೆಡವಬಹುದು.

ಯತತೋ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ |
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ || 60 ||
ಅರ್ಥ : ಕೌಂತೇಯನೇ, ಬುದ್ಧಿವಂತನಾದ ಮನುಷ್ಯನು, ಇಂದ್ರಿಯಗಳು ಇಂದ್ರಿಯ ವಿಷಯಗಳ ಕಡೆಗೆ ಓಡದಂತೆ ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಬಹುವಾಗಿ ಪ್ರಯತ್ನಮಾಡುತ್ತಿದ್ದಾಗ್ಯೂ ಸಹ, ಅವು ಸಮಯವನ್ನು ಕಾಯುತ್ತಲೇ ಇದ್ದು, ಸಂದರ್ಭವೊದಗಿದಾಗ ಮನಸ್ಸನ್ನು ಬಲಾತ್ಕಾರವಾಗಿ ವಿಷಯ ಸುಖಗಳ ಕಡೆಗೆ ಎಳೆದುಕೊಂಡು ಹೋಗುತ್ತವೆ.
ಮನಸ್ಸು ಚಂಚಲವಾದುದೆಂದು, ಇಂದ್ರಿಯ ನಿಗ್ರಹವು ಅಷ್ಟು ಸುಲಭವಲ್ಲವೆಂದೂ ಪ್ರಯತ್ನ ಪೂರ್ವಕವಾಗಿ, ನಿಗ್ರಹವನ್ನೂ ಸಾಧಿಸಿದ ಸಾಧಕನನ್ನು ಸಹ ಅದು ಪುನಃ ವಿಚಲಿತನನ್ನಾಗಿ ಮಾಡುವುದೆಂದೂ ಆದುದರಿಂದ ಈ ವಿಷಯದಲ್ಲಿ ಅತಿಬಲವಾದ, ಸತತಪ್ರಯತ್ನವು ಅವಶ್ಯಕವೆಂದೂ ಇಲ್ಲಿ ಹೇಳಲಾಗಿದೆ.
ಪ್ರಪಂಚದ ಸಾಧಕರ ಜೀವನ ಚರಿತ್ರೆಯನ್ನು ಓದಿದರೆ ಇದೇ ವಿಷಯವು ಸ್ಪಷ್ಟವಾಗಿ ಕಂಡುಬರುತ್ತದೆ. ಸಾಧಕರು ಕೆಲವು ವರ್ಷಗಳವರೆಗೆ ಪ್ರಯತ್ನಪೂರ್ವಕವಾಗಿ ಇಂದ್ರಿಯ ನಿಗ್ರಹದ ಮೂಲಕ ಸಾಧನೆಯನ್ನು ಮಾಡಿ ಅಲ್ಪಸ್ವಲ್ಪ ಫಲವನ್ನೂ ಮನಃಶಾಂತಿಯನ್ನೂ ಗಳಿಸುತ್ತಾರೆ. ಆದರೆ ಮುಂದೆ ತಮ್ಮ ಸಾಧನೆಯ ಬಗ್ಗೆ ಅಹಂಕಾರವನ್ನು ಹೊಂದಿ, ಇಲ್ಲವೆ ತಮ್ಮಲ್ಲಿ ಇಂದ್ರಿಯನಿಗ್ರಹ ಸಾಮಥ್ರ್ಯವು ಸಾಕಷ್ಟಿದೆ ಎಂದು ತಪ್ಪು ತಿಳಿದುಕೊಂಡು ಸುಖಭೋಗಗಳ ಕಡೆಗೆ ಒಲಿಯುತ್ತಾರೆ ಅಂತಹವರು ಕ್ರಮೇಣ ಇಂದ್ರಿಯಗಳ ದಾಸನಾಗಿ, ತಮ್ಮ ಮೊದಲಿನ ನಿಗ್ರಹ ಶಕ್ತಿಯನ್ನು ಕಳೆದುಕೊಂಡು ಪತಿತರಾಗುತ್ತಾರೆ.

ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ |
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ || 61 ||
ಅರ್ಥ : ಇಂದ್ರಿಯಗಳು ಇಂದ್ರಿಯವಿಷಯ ಭೋಗಗಳ ಕಡೆಗೆ ಓಡದಂತೆ ತಡೆದು ನಿಲ್ಲಿಸಿ, ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ಏಕಾಗ್ರ ಮಾಡಬೇಕು. ಹೀಗೆ ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರುವವನಿಗೆ “ಸ್ಥಿತಪ್ರಜ್ಞಾ ಎಂದು ಹೆಸರು.
ವಿಷಯಾಭಿಲಾಷೆಯು, ಮನುಷ್ಯನ ಸ್ವಾಭಾವಿಕವಾದ ಆಕಾಂಕ್ಷೆ ಎಂದೂ, ಅದನ್ನೂ ನಿಗ್ರಹಿಸುವುದೆಂದರೆ ಹುಟ್ಟುಗುಣವನ್ನು ನಾಶಮಾಡಿದಂತಾಗುತ್ತದೆಂದೂ. ಆಧುನಿಕ ಮಾನಸಿಕ ಶಾಸ್ತ್ರಜ್ಞರು ವಾದಿಸುತ್ತಿದ್ದಾರೆ. ಇಂದ್ರಿಯಗಳು, ಮತ್ತು ಮನಸ್ಸಿನ ಸ್ವಾಭಾವಿಕ ಮಾರ್ಗವನ್ನು ಅಮುಕಬಾರದೆಂದು ಅವರ ಮತ. ಇಲ್ಲಿ ಆಮುಕುವದು ಇಲ್ಲವೇ ನಿರೋಧಿಸುವುದು ಮತ್ತು ಹಿಡಿತದಲ್ಲಿಟ್ಟುಕೊಳ್ಳುವುದು. ಇವುಗಳ ವ್ಯತ್ಯಾಸವನ್ನು ಗಮನಿಸಬೇಕು. ವೇದಾಂತ ಶಾಸ್ತ್ರ ರೀತ್ಯಾ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ಮನುಷ್ಯನು ಆತ್ಮವಿಕಾಸವನ್ನು ಸಾಧಿಸಿಕೊಂಡು ಜೀವಮಾನದಲ್ಲಿ ಒದಗಬಹುದಾದ ವಿವಿಧ ಕಷ್ಟ ಸಂದರ್ಭಗಳಲ್ಲಿಯೂ ಸಹ ಸಂತೋಷವನ್ನೂ ಆನಂದವನ್ನೂ ಅನುಭವಿಸಲು ಸಾಧ್ಯವಾಗುತ್ತದೆ.
ಈ ಶ್ಲೋಕದಲ್ಲಿ ಇಂದ್ರಿಯ ನಿಗ್ರಹವನ್ನಷ್ಟೇ ಹೇಳಿ ನಿಲ್ಲಿಸಲಿಲ್ಲ. ಅದೇ ಉಸುರಿನಲ್ಲಿ ಮುಂದೆ ಏನು ಮಾಡಬೇಕೆಂಬ ದಾರಿಯನ್ನೂ ತೋರಿಸಲಾಗಿದೆ. ಮನಸ್ಸನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದುಕೊಂಡು, ಆತ್ಮನೆಡೆಗೆ ತಿರುಗಿಸುವಾಗ, ಇಂದ್ರಿಯಗಳ ಸ್ವಾಭಾವಿಕ ಕರ್ಮಗಳನ್ನು ನಾಶಮಾಡಿದಂತೆ ಆಗುವುದಿಲ್ಲ. ಇಂದ್ರಿಯಗಳ ಮುಖಾಂತರ ಒದಗಿಸುವ ಜ್ಞಾನದ ಬಾಗಿಲನ್ನು ಮುಚ್ಚಿದಂತೆಯೂ ಆಗುವುದಿಲ್ಲ. ಇಂತಹ ಸಾಧಕನ ಇಂದ್ರಿಯಗಳು ತಮ್ಮ ಸ್ವಾಭಾವಿಕ ಕಾರ್ಯಗಳನ್ನು ಮಾಡುತ್ತಿದ್ದಾಗ್ಯೂ ಅವು ಪಳಗಿಸಲ್ಪಟ್ಟ ಸರ್ಕಸ್ಸಿನ ಮೃಗಗಳಂತೆ, ಮನಸ್ಸಿನ ಸೇವಕರಾಗಿರುತ್ತವೆ.

ಇಂದ್ರಿಯಗಳು ವಿಷಯಗಳ ಜೊತೆಗೆ ಸಂಪರ್ಕವನ್ನೂ ಹೊಂದಿ
ಅವುಗಳಲ್ಲಿ ಲೀನವಾದರೆ ಒದಗುವ ದುಃಖ ಪರಂಪರೆಗಳೇನು?

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋ„ಭಿಜಾಯತೇ || 62 ||

ಕ್ರೋಧಾದ್ಬವತಿ ಸಮ್ಮೋಹಃ ಸಮ್ಮೋಹಾತ್‍ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾದ್‍ಬುದ್ಧಿನಾಶೋ ಬುದ್ಧಿನಾಶಾತ್‍ಪ್ರಣಶ್ಯತಿ || 63 ||

ಅರ್ಥ : ಮನುಷ್ಯನು ಭೋಗವಸ್ತುಗಳನ್ನು ಮನಸ್ಸಿನಲ್ಲಿ ಚಿಂತೆಮಾಡುವುದರಿಂದ ಅದರ ಬಗ್ಗೆ ಆತ್ಮೀಯತೆ ಇಲ್ಲವೇ ಪ್ರೇಮವುಂಟಾಗುತ್ತದೆ. ಈ ಪ್ರೇಮದಿಂದ ಮುಂದೆ ಅದರ ಬಗ್ಗೆ ‘ಆಸೆ’ ಉಂಟಾಗುತ್ತದೆ. ಆಸೆಯು ತೃಪ್ತಿಯಾಗದಿದ್ದರೆ ಇಲ್ಲವೆ ಆಸೆ ಹಾಗೂ ವಸ್ತುವಿನ ನಡುವೆ ಯಾರಾದರೂ ವಿಘ್ನವನ್ನುಂಟು ಮಾಡಿದರೆ ಅವರ ಮೇಲೆ ಕ್ರೋಧ (ಸಿಟ್ಟು) ವುಂಟಾಗುತ್ತದೆ. ಈ ಸಿಟ್ಟಿನಿಂದ ಮನಸ್ಸಿನಲ್ಲಿ ‘ವಿಭ್ರಮೆ’ಯುಂಟಾಗುತ್ತದೆ. ಈ ವಿಭ್ರಮೆಯಿಂದ ‘ಸ್ಮೃತಿನಾಶ ಅಂದರೆ ಜ್ಞಾಪಕ ಶಕ್ತಿಯು ನಾಶವಾಗುತ್ತದೆ. ಮುಂದೆ ಬಿದ್ಧಿಯ ಸಾರಾಸಾರ ವಿಚಾರ ಶಕ್ತಿಯು ಹಾಳಾಗುತ್ತದೆ. ಇದರ ಪರಿಣಾಮವಾಗಿ ಆ ವ್ಯಕ್ತಿಯು ಪತಿತನಾಗುತಾನೆ.
ಸಾಧಕನ ಮನಸ್ಸು ಇಂದ್ರಿಯಗಳ ವಶಕ್ಕೊಳಗಾದರೆ ಅವನು ಹೇಗೆ ಪತನವನ್ನೂ ಹೊಂದುತ್ತಾನೆಂಬಿದನ್ನು ಮೇಲಿನ ಎರಡು ಶ್ಲೋಕಗಳಲ್ಲಿ ಸುಂದರವಾಗಿ ವಿವರಿಸಲಾಗಿದೆ. ಇಲ್ಲಿ ಇಳಿತನದ ಪ್ರತಿಯೊಂದು ಮೆಟ್ಟಿಲೂ ಹೇಗೆ ಒಂದಕ್ಕೊಂದು ಹೊಂದಿಕೊಂಡಿವೆ ಎಂಬುದನ್ನು ತೋರಿಸಲಾಗಿದೆ. ಸಾಧಕನು ಇಂದ್ರಿಯಗಳ ಹತೋಟಿಯನ್ನು ಸಡಿಲು ಮಾಡಿದರೆ, ಅವನು ಈ ರೀತಿ ಅವನತಿಗೆ ಬೀಳುವ ಭೀತಿಯಿದೆ, ಎಂಬುದನ್ನು ಇಲ್ಲಿ ಎತ್ತಿ ತೋರಿಸಿ ಎಚ್ಚರಿಸಲಾಗಿದೆ. ಅವನತಿಯ ಕ್ರಮವನ್ನು ವಿವರಿಸುವಂತೆ ಮೇಲುಕ್ಕೇರುವ ಕ್ರಮವನ್ನೂ ವಿವರಿಸಲಾಗಿದೆ.
ರಾಗದ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ |
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ || 64 ||
ಅರ್ಥ : ಆತ್ಮಧ್ಯಾನದಲ್ಲಿ ನಿರತನಾದ ಸಾಧಕನು ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, ಇಂದ್ರಿಯ ವಿಷಯಗಳನ್ನು ದ್ವೇಷಿಸಿದೆ ಅಥವಾ ಪ್ರೀತಿಸದೆ ಸಮಚಿತ್ತನಾಗಿ ಅವಶ್ಯಕವಾದಷ್ಟು ಭೋಗಗಳನ್ನು ಅನುಭವಿಸುತ್ತಾ (ಆದರೆ ಆ ಭೋಗಗಳಲ್ಲಿ ನಿರತನಾಗಿರದೆ) ಮನಃಶಾಂತಿಯನ್ನು ಪಡೆಯುತ್ತಾನೆ.
ವಿಷಯ ಭೋಗಗಳನ್ನು ತ್ಯಜಿಸುವುದರಿಂದ, ಇಲ್ಲವೇ ಅವುಗಳಿಗೆ ಹೆದರಿ ದೂರ ಸರಿಯುವುದರಿಂದ ಮನಃಶಾಂತಿ ಲಭಿಸುವುದಿಲ್ಲ ಮನಃಶಾಂತಿಯು ಕೇವಲ ಬಾಹ್ಯವಸ್ತುಗಳ ಸಂಗ್ರಹ ಇಲ್ಲವೆ ತ್ಯಾಗದಲ್ಲಿರದೆ, ಆ ವಸ್ತುಗಳಿಂದ ಮನಸ್ಸಿನ ಮೇಲಾಗುವ ಉದ್ವೇಗವನ್ನವಲಂಬಿಸಿದೆ. ಸ್ಥಿತಪ್ರಜ್ಞನಾದ ಮನುಷ್ಯನು ನೋಡುವುದಕ್ಕೆ ವಿಷಯಸುಖಗಳನ್ನು ಭೋಗಿಸುತ್ತಿರುವಂತೆ ಕಂಡಾಗ್ಯೂ ಅವನ ಮನಸ್ಸು ಆ ಭೋಗಗಳಲ್ಲಿ ಆಸಕ್ತಿಯನ್ನು ಹೊಂದದಿರುವುದರಿಂದ ವಿಷಯಗಳು ಅವನನ್ನು ಎಂದಿಗೂ ಬಾಧಿಸುವುದಿಲ್ಲ, ಮತ್ತು ಅವನ ಮನಸ್ಸಿನ ಮೇಲೆ ಸಂಗ, ಕಾಮ ಇತ್ಯಾದಿ ಪರಿಣಾಮವನ್ನೂ ಉಂಟುಮಾಡುವುದಿಲ್ಲ .
ನಮ್ಮೆದುರಿಗಿಸುವ ಹುಚ್ಚನು, ಚಾವಟಿಯಿಂದ ತನ್ನನ್ನು ತಾನೇ ಹೊಡೆದುಕೊಳ್ಳುತ್ತಿದ್ದಾನೆಂದು ಇಟ್ಟುಕೊಳ್ಳೋಣ. ಹೊಡೆತದ ನೋವಿನಿಂದ ಅಳುತ್ತಿದ್ದಾಗ್ಯೂ, ಅವನು ಹೊಡೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇಲ್ಲಿ ಹುಚ್ಚನ ನೋವನ್ನು ನಿಲ್ಲಸಬೇಕಾದರೆ ಚಾವಟಿಯ ಹೊಡೆತವನ್ನು ನಿಲ್ಲಿಸುವಂತೆ ಅವನಿಗೆ ತಿಳಿಸಿ ಹೇಳಬೇಕು. ಅಂದರೆ ಕೂಡಲೆ ಹೊಡೆತದಿಂದ ಆಗುವ ಹೊಸವೇದನೆಯು ನಿಲ್ಲುತ್ತದೆ. ಇದೇ ರೀತಿಯಲ್ಲಿ ಮನಸ್ಸನ್ನು ಮೂರು ವಿಧವಾಗಿ ತಿದ್ದಿಕೊಳ್ಳಬೇಕು
1. ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು.
2. ಇಂದ್ರಿಯ ಸುಖಗಳನ್ನು ಅನುಭೋಗಿಸುತ್ತಿದ್ದಾಗ್ಯೂ ಅವುಗಳಲ್ಲಿ ರಾಗ ದ್ವೇಷಗಳನ್ನಿಟ್ಟುಕೊಳ್ಳದೆ, ಮನಸ್ಸು ಅದರಲ್ಲಿ ಆಸಕ್ತಿಯನ್ನು ಹೊಂದದಂತೆ ನೋಡಿಕೊಳ್ಳುವುದು.
3. ಇಂದ್ರಿಯ ಭೋಗಗಳಿಂದ ಮನುಷ್ಯನಲ್ಲಿ ಆಸಕ್ತಿಯಾಗಲೀ, ಉದ್ವೇಗವಾಗಲೀ, ಕಂಡುಬಂದಿತೆಂದು ತಿಳಿದ ಕೂಡಲೆ ಇಂದ್ರಿಯಗಳನ್ನು ಹಿಂದಕ್ಕೆಳೆದುಕೊಂಡು ಆತ್ಮಧ್ಯಾನದಲ್ಲಿ ನಿರತನಾಗುವುದು
ಮನಃಶಾಂತಿ ಲಭಿಸಿದರೆ ಆಗುವ ಲಾಭವೇನು ?

ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ |
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ || 65 ||
ಅರ್ಥ : ಮನಃಶಾಂತಿಯು ದೊರೆತರೆ, ಎಲ್ಲಾ ದುಃಖಗಳೂ ನಾಶವಾಗುತ್ತವೆ ಮತ್ತು ಅದರಿಂದ ಕೂಡಲೆ ಬುದ್ಧಿಯು ತಿಳಿಯಾಗಿ ಏಕಾಗ್ರವಾಗಿ ಆತ್ಮಧ್ಯಾನದಲ್ಲಿ ನಿರತವಾಗುತ್ತದೆ. ಮನಸ್ಸು ವಿವಿಧ ದುಃಖಗಳಲ್ಲಿ ಉದ್ವಿಗ್ನವಾಗದೆ ಶಾಂತವಾಗಿದ್ದರೆ ಅದಕ್ಕೆ ‘ಸುಖ’ ಎಂದು ಹೆಸರು. ಮನಃಶಾಂತಿಯಿರುವವನಿಗೆ ದುಃಖಗಳಿರುವುದಿಲ್ಲ. ಅಂದರೆ ದುಃಖಗಳ ಅವನ ಮನಸ್ಸಿನ ಮೇಲೆ ಯಾವುದೇ ತರಹದ ಉದ್ವೇಗಗಳನ್ನು ಉಂಟುಮಾಡದಿರುವುದರಿಂದ, ಶರೀರಕ್ಕೆ ದುಃಖವೆಂದು ಕಂಡರೂ ಅವನಿಗೆ ದುಃಖವೆಂದು ಕಾಣುವುದಿಲ್ಲ. ಅಂದರೆ ದುಃಖಗಳು ಅವನ ಮನಸ್ಸಿನ ಮೇಲೆ ಯಾವ ಪರಿಣಾಮವನ್ನು ಮಾಡುವುದಿಲ್ಲ. ಹಾಗಾಗಿ ಇವುಗಳಿಂದ ಹೊಸವಾಸನೆಗಳಿಲ್ಲ. ಆದ್ದರಿಂದ ದುಃಖಗಳು ನಾಶವಾಗುತ್ತವೆ ಎಂದು ಹೇಳಲಾಗಿದೆ.

ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ |
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ || 66 ||
ಅರ್ಥ : ಮನಸ್ಸು ಏಕಾಗ್ರವಾಗಿರದಿದ್ದರೆ ಆತ್ಮಜ್ಞಾನವಾಗಲಾರದು, ಏಕಚಿತ್ತದಿಂದ ಧ್ಯಾನಮಾಡಲೂ ಆಗದು. ಧ್ಯಾನವಿಲ್ಲದಿದ್ದರೆ ಮನಃಶಾಂತಿ ಲಭಿಸುವುದು ಹೇಗೆ ? ಮನಃಶಾಂತಿಯಿಲ್ಲದಿದ್ದರೆ ಸುಖವೆಲ್ಲಿಹುದು?
ಆತ್ಮಜ್ಞಾನವಾಗಬೇಕಾದರೆ ಮೊಟ್ಟಮೊದಲು ಸುಖದುಃಖಗಳೆರಡರಲ್ಲಿಯೂ ವಿಚಲಿತವಾಗದ ಏಕಾಗ್ರಬುದ್ಧಿಯನ್ನು ಗಳಿಸಿಕೊಳ್ಳುವುದು ಅತ್ಯವಶ್ಯಕವೆಂದು ಇಲ್ಲಿ ಒತ್ತಿ ಹೇಳಲಾಗಿದೆ. ಸಾಧಕನು ತನ್ನ ಗುರಿಯನ್ನು ಮುಟ್ಟಲು ಇದನ್ನು ಮೊದಲು ಸಾಧಿಸಿಕೊಳ್ಳಬೇಕು. ನಂತರ ಧ್ಯಾನಾದಿಗಳು.

ಮನಃಶಾಂತಿಯಿಲ್ಲದಿದ್ದರೆ ಆತ್ಮಜ್ಞಾನವಾಗುವುದಿಲ್ಲ ಏಕೆ ?

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ„ನು ವಿಧೀಯತೇ |
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ || 67 ||
ಅರ್ಥ : ಗಾಳಿಯು ನೀರಿನಲ್ಲಿರುವ ದೋಣಿಯನ್ನು ತಾನು ಬೀಸುವ ದಿಕ್ಕಿಗೆ ಬಲತ್ಕಾರವಾಗಿ ನೂಕಿಕೊಂಡು ಹೋಗುವಂತೆ ಇಂದ್ರಿಯ ಭೋಗಗಳಲ್ಲಿ ಚಲಿಸುತ್ತಿರುವ ಮನಸ್ಸು, ಆ ವ್ಯಕ್ತಿಯ ಬುದ್ಧಿಯನ್ನು (ವಿವೇಕ ಅಥವಾ ವಿಚಾರ ಶಕ್ತಿಯನ್ನು) ಇಂದ್ರಿಯ ಭೋಗಗಳ ಕಡೆಗೆ ಬಲಾತ್ಕಾರವಾಗಿ ಎಳೆದುಕೊಂಡು ಹೋಗುತ್ತದೆ
ನಾವಿಕವಿಲ್ಲದ ದೋಣಿಯು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಾಗ ಚಲ್ಲಾಪಿಲ್ಲಿಯಾಗಿ ಗಾಳಿಯು ನೂಕಿದತ್ತ ಚಲಿಸಿ, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಮುಂದೆ ಸಮುದ್ರದಲ್ಲಿ ಮುಳುಗಿ, ಇಲ್ಲವೇ ಹತ್ತಿರದ ಬಂಡೆಗೆ ಬಡಿದು ನಾಶವಾಗುತ್ತದೆ. ಇದೇ ರೀತಿಯಾಗಿ ಇಂದ್ರಿಯ ಭೋಗಗಳೆಂಬ ಬಿರುಗಾಳಿಗೆ ಸಿಕ್ಕ, ಬುದ್ಧಿ ಎಂಬ ನಾವಿಕನ ಹತೋಟಿಯಿಲ್ಲದ ಮನಸ್ಸು ಅಲ್ಲೋಲಕಲ್ಲೋಲವಾಗಿ ತತ್ತರಿಸುತ್ತಾ, ಬುದ್ಧಿಯ ವಿಚಾರ ಶಕ್ತಿಯನ್ನೂ ನಾಶಮಾಡಿ, ಆ ವ್ಯಕ್ತಿಯನ್ನು ಅವನತಿಗೆ ನೂಕಿ ನಾನಾ ರೀತಿಯ ಕಷ್ಟಗಳಿಗೆ ಗುರಿಪಡಿಸುತ್ತದೆ. ಆದುದರಿಂದ ಜೀವನದಲ್ಲಿ ಯಶಸ್ಸನ್ನೂ ಸುಖವನ್ನೂ ಗಳಿಸಲು ಮನಸ್ಸನ್ನು ಇಂದ್ರಿಯ ಸುಖಗಳಿಂದ ಹಿಂದಕ್ಕೆಳೆದುಕೊಂಡು ಹಿಡಿತದಲ್ಲಿಟ್ಟುಕೊಳ್ಳುವುದು ಅವಶ್ಯಕ .

ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪರಿಷ್ಠಿತಾ || 68 ||
ಅರ್ಥ : ಆದ್ದರಿಂದ ಎಲೈ ಮಹಾಬಾಹುವೇ! ಯಾರ ಇಂದ್ರಿಯಗಳು ಇಂದ್ರಿಯ ವಿಷಯಗಳ ಕಡೆಗೆ ಓಡದಂತೆ ಸಂಪೂರ್ಣವಾಗಿ ನಿಗ್ರಹಿಸಲ್ಪಡುತ್ತವೆಯೋ ಅವರ ಬುದ್ಧಿಯು ಸಮತ್ವದಲ್ಲಿದೆ ಎಂದು ತಿಳಿದುಕೊಳ್ಳಬೇಕು
ಇದುವರೆಗೂ ಶ್ರೀಕೃಷ್ಣನು ಇಂದ್ರಿಯ ನಿಗ್ರಹದ ವಿಷಯದಲ್ಲಿ ತಾರ್ಕಿತವಾಗಿ ವಿಷಯ ಸಮರ್ಥನೆಯನ್ನು ಮಾಡಿ, ಈಗ ತನ್ನ ತೀರ್ಮಾನವನ್ನು ಹೇಳಿದ್ದಾನೆ. ಬುದ್ಧಿಯು ಏಕಾಗ್ರವಾಗಬೇಕಾದರೆ ಮನಸ್ಸು ಇಂದ್ರಿಯಗಳ ಮುಖಾಂತರ ಇಂದ್ರಿಯ ವಿಷಯ ಸುಖಗಳಲ್ಲಿ ಮಗ್ನವಾಗಿ ಮುಳುಗಬಾರದೆಂದು ಹೇಳಿದ್ದಾನೆ. ಹೀಗೆ ವ್ಯಾವಹಾರಿಕ ದೃಷ್ಟಿಯಿಂದ ಅವಶ್ಯಕವಾದಷ್ಟು ಇಂದ್ರಿಯ ಭೋಗಗಳನ್ನು ಅನುಭವಿಸಿದಾಗ್ಯೂ ಮನಸ್ಸು ಅದರಲ್ಲಿ ಮಗ್ನವಾಗದಂತೆ ಅಹಂಕಾರವನ್ನು ತ್ಯಜಿಸಿ ವಿಷಯಸುಖಗಳನ್ನು ಭೋಗಿಸಬಹುದು. ಸಾಧ್ಯವಾದ ಮಟ್ಟಿಗೂ ಅಂತಹ ಸುಖಭೋಗಗಳಿಂದ ಮನಸ್ಸಿನಲ್ಲಿ ಉದ್ವೇಗ ಮತ್ತು ಆಸೆಗಳು ಹುಟ್ಟಿದಂತೆ ಎಚ್ಚರಿಕೆಯಿಂದ ಇರಬೇಕು.

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ |
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ || 69 ||
ಅರ್ಥ : ಸಾಮಾನ್ಯ ಪ್ರಾಣಿಗಳಿಗೆ ಯಾವುದು ರಾತ್ರಿಯೋ ಆಗ ಸಂಯಮಿಯಾದ ಮುನಿಯು ಎಚ್ಚರವಾಗಿರುತ್ತಾನೆ ಮತ್ತು ಸಾಮಾನ್ಯ ಪ್ರಾಣಿಗಳು ಎಚ್ಚರಿರುವಾಗ ಅವನು ನಿದ್ರೆ ಮಾಡುತ್ತಾನೆ.
ನಾವು ಶರೀರ ಮನಸ್ಸು ಮತ್ತು ಬುದ್ಧಿಮಟ್ಟದ ಕನ್ನಡಕದಿಂದ ಕಾಣುವ ಪ್ರಪಂಚವು ಅಧ್ಯಾತ್ಮಕ ದೃಷ್ಟಿಯಿಂದ ತೀರ ಭಿನ್ನವಾಗಿದೆ, ಎಂಬುದನ್ನು ಸೃಷ್ಟೀಕರಿಸಲು ಈ ಶ್ಲೋಕವನ್ನು ಹೇಳಲಾಗಿದೆ. ಈ ಶ್ಲೋಕವು ತುಲನಾತ್ಮಕವಾಗಿರುವಂತೆ ಸಂಕ್ಷೇಪವಾಗಿಯೂ, ಕಾವ್ಯಮಯವಾಗಿಯೂ ಇದೆ.

ಇದರಲ್ಲಿ ಜ್ಞಾನಿ ಮತ್ತು ಅಜ್ಞಾನಿ ಇವರ ಹೋಲಿಕೆ ಇದೆ. ಅಜ್ಞಾನಿಯು ಪ್ರಪಂಚವನ್ನು, ಅಜ್ಞಾನದಿಂದ ಆವರಿಸಲ್ಪಟ್ಟ ತನ್ನ ಶರೀರ, ಮನಸ್ಸು, ಬುದ್ಧಿಗಳ ಮುಖಾಂತರ ನೋಡುತ್ತಾನೆ. ಮಗುವು, ಮಲಗುವ ಕೋಣೆಯ ಕಿಟಕಿಯ ಕಾಜಿನ ಮುಖಾಂತರ ಹೊರಗಿನ ಪ್ರಪಂಚವನ್ನು ನೋಡಿ, ಕಾಜಿನ ಬಣ್ಣಗಳು ಭಿನ್ನವಾಗಿದ್ದಂತೆ, ಹೊರಗಿನ ದೃಶ್ಯಗಳು ಬೇರೆ ಬೇರೆ ಬಣ್ಣಗಳುಳ್ಳದ್ದಾಗಿದೆ ಎಂದು ತಿಳಿಯುವಂತೆ, ನಮ್ಮ ನಮ್ಮ ಮಾನಸಿಕ ಬಣ್ಣ (ಅಜ್ಞಾನ) ಕ್ಕನುಗುಣವಾಗಿ, ನಾವು ಪ್ರಪಂಚವನ್ನೂ ಅರ್ಥ ಮಾಡಿಕೊಳ್ಳುತ್ತೇವೆ. ಕಿಟಕಿಯ ಕನ್ನಡಿ ಬಾಗಿಲುಗಳನ್ನು ತೆರೆದು ನೋಡಿದರೆ ಹೊರಗಿನ ಪ್ರಪಂಚದ ನಿಜಸ್ಥಿತಿಂiÀi ಅರಿವಾಗುವಂತೆ, ನಾವು ಶರೀರ, ಮನಸ್ಸು ಬುದ್ಧಿಗಳ ಆವರಣವನ್ನು ಕಿತ್ತು ಹಾಕಿ, ಶುದ್ಧಬುದ್ಧಿಯಿಂದ ನೋಡಿದರೆ ಪ್ರಪಂಚದ ನಿಜವಾದ ಸ್ಥಿತಿಯು ತಿಳಿಯುತ್ತದೆ.

ಇಲ್ಲಿ ಕತ್ತಲೆಯನ್ನೂ ಅಜ್ಞಾನಿಗೂ ಬೆಳಕನ್ನೂ ಜ್ಞಾನಿಗೂ ಹೋಲಿಸಲಾಗಿದೆ. ಅಜ್ಞಾನಿಗಳು ಹಗಲಿನಲ್ಲಿ ಜಾಗೃತರಾಗಿದ್ದು, ತಮ್ಮ ವಿವಿಧ ಚಟುವಟಿಕೆಗಳ ಮುಖಾಂತರ ಇಂದ್ರಿಯ ಭೋಗಗಳಲ್ಲಿ ನಿರತರಾಗಿರುತ್ತಾರೆ. ಆದರೆ ಜ್ಞಾನಿಯು ಇಂದ್ರಿಯ ಸುಖಭೋಗಗಳ ಕಡೆಗೆ ಆಸಕ್ತಿಯನ್ನು ಹೊಂದದಿರುವುದರಿಂದ ಅವನಿಗೆ ಇದು ರಾತ್ರಿಯು. ರಾತ್ರಿಯಲ್ಲಿ ಅಜ್ಞಾನಿಯು ನಿದ್ರೆ ಮಾಡುವಂತೆ ಜ್ಞಾನಿಗೆ ಸುಖಭೋಗಗಳ ಕಡೆಗೆ ಆಕರ್ಷಣೆಯಲ್ಲದಿರುವುದರಿಂದ ಅವನು ಈಗ ನಿದ್ರೆ ಮಾಡದಂತೆಯೇ ಸರಿ ಅಂದರೆ ಅವನಿಗೆ ಈಗ ಎಚ್ಚರು ಅಥವಾ ಹಗಲು. ಜ್ಞಾನಿಯು ಇಂದ್ರಿಯ ನಿಗ್ರಹವನ್ನು ಮಾಡಿ, ಏಕಾಗ್ರ ಮನಸ್ಸಿನಿಂದ ದ್ಯಾನಮಗ್ನನಾಗಿರುವ ಸ್ಥಿತಿಯು ಅವನಿಗೆ ಹಗಲು. ಅಜ್ಞಾನಿಗೆ ಇದರಲ್ಲಿ ಆಕರ್ಷಣೆಯಿಲ್ಲದಿರುವುದರಿಂದ ಮತ್ತು ಅವನು ಈ ವಿಷಯದಲ್ಲಿ ಕಣ್ಣುಮುಚ್ಚಿಕೊಂಡಿರುವುದರಿಂದ ಅವನಿಗೆ ಇದು ರಾತ್ರಿಯು.

ಯಾರು ಮೋಕ್ಷಕ್ಕೆ ಅರ್ಹರು ?

ಅಪೂರ್ಯಮಾಣಮಚಲಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪೆÇ್ನೀತಿ ನ ಕಾಮಕಾಮೀ || 70 ||
ಅರ್ಥ : ಎಲ್ಲಾ ಕಡೆಯಿಂದಲೂ ಸಮುದ್ರಕ್ಕೆ ನೀರು ಬಂದು ಬೀಳುತ್ತಿದ್ದಾಗ್ಯೂ ಸಮುದ್ರವು ಯಾವ ರೀತಿಯಲ್ಲಿ ವ್ಯತ್ಯಾಸವನ್ನು ಹೊಂದದೆ ಸ್ತಿಮಿತವಾಗಿ ಸ್ಥಿರವಾಗಿರುತ್ತದೆಯೋ, ಅದೇ ರೀತಿಯಲ್ಲಿ ಸ್ಥಿತಪ್ರಜ್ಞನಾದವನು ತನ್ನನ್ನು ಆಕರ್ಷಿಸುವ ಆಸೆಗಳಿಂದ ವಿಚಲಿತನಾಗದೆ ಸ್ತಿಮಿತನಾಗಿರುತ್ತಾನೆ. ಇಂತಹವನು ನಿಜವಾದ ಶಾಂತಿಯನ್ನು ಹೊಂದುತ್ತಾನೆ.
ಸಮುದ್ರದೊಳಕೆ ಎಷ್ಟೋ ನದಿಗಳ ನೀರು ಬಂದು ಸೇರಿದರೂ, ಸಮುದ್ರವು ಸ್ವಲ್ಪವೂ ಉಕ್ಕೇರದೆ ಮೊದಲನಂತೆಯೇ ಇರುತ್ತದೆ. ಇದೇ ರೀತಿಯಲ್ಲಿ ಸ್ಥಿತಪ್ರಜ್ಞನಲ್ಲಿ ನಾನಾ ತರಹದ ಇಂದ್ರಿಯ ವಿಷಯಗಳು ಐದು ಇಂದ್ರಿಯಗಳ ಮುಖಾಂತರ ಪ್ರವೇಶಿಸಿ ಮನಸ್ಸಿನ ಮೇಲೆ ಹಲ್ಲೆಯನ್ನು ಮಾಡಿ, ವಿವಿಧ ಆಕರ್ಷಣೆಗಳೆಂಬ ಉದ್ವೇಗವನ್ನುಂಟು ಮಾಡಲು ಪ್ರಯತ್ನಿಸಿದರೂ ಅವನು ಸ್ವಲ್ಪವೂ ವಿಚಲಿತನಾಗದೆ ಆತ್ಮನಿಷ್ಠನಾಗಿಯೇ ಇರುತ್ತಾನೆ. ಇವನು ಇಂದ್ರಿಯಗಳ ಮೂಲಕ ವಿಷಯ ಸುಖಗಳನ್ನೂ ಸೇವಿಸಿದಾಗ್ಯೂ ಅವುಗಳಲ್ಲಿ ಆಸಕ್ತನಾಗಿರ್ವುದಿಲ್ಲ. ಇಂತಹ ಸಾಧಕನು ಮಾತ್ರ ನಿಜವಾಗಿ ಶಾಂತಿಯನ್ನು ಹೊಂದಬಲ್ಲನು.
ಈ ವಾದವನ್ನು ಆಧುನಿಕ ದೇಹಾತ್ಮವಾದಿಗಳು ಒಪ್ಪುವುದಿಲ್ಲ. ಮನುಷ್ಯನಾಗಿ ಈ ಪ್ರಪಂಚದಲ್ಲಿ ಹುಟ್ಟಿದವನು ತನ್ನ ಬುದ್ಧಿವಂತಿಕೆ ಮತ್ತು ಜ್ಞಾನಗಳಿಂದ ಹೆಚ್ಚು ಹೆಚ್ಚು ಸುಖಸಾಧನಗಳನ್ನು ಕಂಡುಹಿಡಿದು ಅವುಗಳನ್ನು ಬೋಗಿಸುವುದರಿಂದಲೂ ಹೆಚ್ಚು ಸುಖಿಯಾಗುತ್ತಾನೆಂಬುದು ಇವರ ವಾದ. ಆಧುನಿಕ ವಿಜ್ಞಾನಿಗಳು ಹಾಗೂ ಕಾರ್ಖಾನೆಗಾರರು ಹೊಸ ಹೊಸ ಸುಖ ಸಾಧನಗಳನ್ನು ಒದಗಿಸಿಕೊಟ್ಟು ದೇಹಾತ್ಮವಾದಿಗಳ ಆಸೆ ಹಾಗೂ ಬಯಕೆಗಳಿಗೆ ಪುಟಕೊಟ್ಟಿದ್ದಾರೆ. ಇದರಿಂದಾಗಿ ಹೆಚ್ಚು ಸುಖಸಾಧನಗಳನ್ನು ಸಂಗ್ರಹಿಸಿದಷ್ಟು ಮನುಷ್ಯನು ಹೆಚ್ಚು ಸುಖಿಯಾಗುತ್ತಾನೆ ಎಂಬುದು ಆಧುನಿಕ ನಾಗರಿಕ ಪ್ರಪಂಚದ ಕಲ್ಪನೆಯಾಗಿದೆ.
ನಮ್ಮ ಪೂರ್ವಜ ಋಷಿಮುನಿಗಳ ಸಿದ್ಧಾಂತವು ಇದಕ್ಕೆ ವಿರುದ್ಧವಾಗಿದೆ. ದೀರ್ಘಕಾಲದ ಅನುಭವ ಹಾಗೂ ಪ್ರಯೋಗಗಳಿಂದ ಕಂಡ ಸತ್ಯವನ್ನು ಅವರು ಪ್ರಪಂಚದ ಎದುರಿಗೆ ಸಿದ್ಧಾಂತರೂಪದಲ್ಲಿಟ್ಟಿದ್ದಾರೆ. ಮನಸ್ಸಿನಲ್ಲಿ ಹುಟ್ಟೂವ ಆಸೆಗಳನ್ನು ಪೂರೈಸುವುದರಿಂದ ‘ಸುಖ’ ಸಿಗುವುದಿಲ್ಲ ಎಂಬುದು ಅವರ ಸಿದ್ಧಾಂತ. ಏಕೆಂದರೆ ಆಸೆಗಳು ಕೊನೆಮೊದಲಿಲ್ಲದಂತೆ ಹೊಸ ಹೊಸದಾಗಿ ಹುಟ್ಟುತ್ತಲೇ ಇರುತ್ತವೆ. ಇವನ್ನು ಪೂರೈಸಿ ತೀರಿಸುವುದು ಸಾಧ್ಯವೇ ಇಲ್ಲ. ಆಸೆಯು ಪೂರೈಸಲ್ಪಡದಿದ್ದರೆ ಹಿಂದೆ 62-63ನೇ ಶ್ಲೋಕದಲ್ಲಿ ಹೇಳಿದಂತೆ, ಕ್ರೋಧಾದಿಗಳು ಜನಿಸಿ ಕ್ರಮೇಣ ಮನುಷ್ಯನು ಪತಿತನಾಗುತ್ತಾನೆ. ಸುಖ ಎಂಬುದು ಯಾವಾಗಲೂ ಒಂದು ಅಪೂರ್ಣಾಂಕ. ಗಣಿತಶಾಸ್ತ್ರದರೀತ್ಯಾ ಇದನ್ನು ಕೆಳಗಿನಂತೆ ವಿವರಿಸಬಹುದು.

ಗಣಿತಶಾಸ್ತ್ರದ ಈ ತತ್ವವು ಆಧಿನಿಕ ಭೌತಿಕವಾದಿಗಳಿಗೆ ಸಹ ಮಾನ್ಯವಾಗಿದೆ. ವೇದಾಂತವಾದಿಗಳ ಸಿದ್ಧಾಂತ ಹಾಗೂ ನಮ್ಮ ಪೂರ್ವಿಕರ ಸಿದ್ಧಾಂತ ಇವುಗಳಲ್ಲಿ ಯಾವುದು ಈ ಒರೆಗಲ್ಲಿಗೆ ಹತ್ತುತ್ತದೆಂಬುದನ್ನು ನೋಡೋಣ.
ಈಗಿನ ನಮ್ಮ ಪ್ರಯತ್ನವು ಮೇಲಿನ ಗಣಿತ ಸೂತ್ರದಲ್ಲಿಯ ಭಾಜ್ಯ ಅಂದರೆ ಪೂರೈಸಲ್ಪಟ್ಟ ಆಸೆಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿದೆ. ಇದು ಹೆಚ್ಚಿದರೆ ಮಾತ್ರ ಸುಖದ ಪ್ರಮಾಣವು ಹೆಚ್ಚಾಗುತ್ತದೆಂಬುದು ಬೌತಿಕವಾದಿಗಲ ಮತ. ಈಗಿನ ವಾತಾವರಣದಲ್ಲಿ ‘ಭಾಜ್ಯ’ವು ನಮ್ಮ ಪ್ರಯತ್ನದಿಂದ ಹೆಚ್ಚಿಸಲ್ಪಡುವುದೇನೋ ನಿಜ. ಆದರೆ ಇದರ ಜೊತೆಗೆ ಭಾಜಕವು ಅನೇಕ ಪಟ್ಟು ಹೆಚ್ಚಾಗುತ್ತಲೇ ಇದೆ. ಭಾಜ್ಯವು ಒಂದು ಭಾಗ ಹೆಚ್ಚಾದರೆ ಭಜಕವು ಹತ್ತು ಭಾಗ ಹೆಚ್ಚಾಗಿದೆ ಹೀಗಾಗಿ ಒಟ್ಟು ಸುಖದ ಪ್ರಮಾಣವು ಮೊದಲಿಗಿಂತಲೂ ಕಡಿಮೆಯೇ ಆಗಿದೆ. ಆಧುನಿಕ ಸುಖಸಾಧನೆಗಳ ಸಂಖ್ಯೆಯು ಹೆಚ್ಚಾಗಿದ್ದಾಗ್ಯೂ ಆಸೆಯ ಪ್ರಮಾಣವು ಮಿತಿಮೀರಿ ಹೆಚ್ಚಾಗಿದೆ ಮತ್ತು ಹೆಚ್ಚಾಗುತ್ತಿದೆ. ನಮ್ಮ ಧಾರ್ಮಿಕ ಸಿದ್ಧಾಂತದಂತೆ ಮನಸ್ಸಿನಲ್ಲಿ ಹುಟ್ಟುವ ಆಸೆ ಅಂದರೆ ಭಾಜಕವನ್ನೂ ಕಡಿಮೆ ಮಾಡುವುದರಿಂದ್ ಮಾತ್ರ ಸುಖದ ಪ್ರಮಾಣವು ಹೆಚ್ಚಾಗುತ್ತದೆ. ಇದು ಗಣಿತ ಶಾಸ್ತ್ರಕ್ಕೆ ಒಪ್ಪಿಗೆಯಾಗಿದೆ. ಗೀತೆಯು ಇದೇ ವಿಷಯವನ್ನು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಮನಸ್ಸನ್ನು ಇಂದ್ರಿಯ ವಿಷಯಗಳ ಕಡೆಗೆ ಹರಿಬಿಡದೆ ಹಿಡಿತದಲ್ಲಿಟ್ಟುಕೊಂಡು, ವಿಷಯ ಸುಖವನ್ನು ಅನುಭವಿಸುತ್ತಿದ್ದಾಗ್ಯೂ ಅದರಲ್ಲಿ ಮಗ್ನನಾಗಿರದೆ, ಅಂದರೆ ಮನಸ್ಸನ್ನು ಅದರಿಂದ ಹಿಂದಕ್ಕೆಳೆದುಕೊಂಡು ಆತ್ಮನಲ್ಲಿ ಸ್ಥಿರಪಡಿಸಿದರೆ ಶಾಂತಸ್ಥಿತಿಯನ್ನು ಸಾಧಿಸಬಹುದೆಂದು ಹೇಳಲಾಗಿದೆ. ಮನಸ್ಸಿನಲ್ಲಿ ಹುಟ್ಟುವ ಆಸೆಗಳನ್ನು ನಿರ್ಮೂಲ ಮಾಡುವುದಕ್ಕೆ ಇದೇ ಶ್ರೇಷ್ಠವಾದ ಮಾರ್ಗ.

ಇದನ್ನೇ ಇನ್ನೂ ವಿಚಾರಸಲಾಗಿದೆ.

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ |
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ || 71 ||
ಅರ್ಥ : ಯಾವನು ಎಲ್ಲಾ ಆಸೆಗಳನ್ನು ತ್ಯಜಿಸಿ ಹೊಸ ಆಸೆಗಳು ಹುಟ್ಟಿದಂತೆ ವಿಷಯ ಸುಖಗಳ ಬಗ್ಗೆ ಉದಾಸೀನನಾಗಿದ್ದು, ‘ಮಮ’ ಕಾರವನ್ನೂ, ಅಹಂಕಾರವನ್ನೂ ತ್ಯಜಿಸಿರುತ್ತಾನೋ ಅವನು ಶಾಂತಿಯನ್ನು ಹೊಂದುತ್ತಾನೆ.
ಈ ಶ್ಲೋಕದ ಮೊದಲನೆಯ ಸಾಲಿನಲ್ಲಿ ಶಾಂತಿಯನ್ನು ಪಡೆಯಲು ಅರ್ಹನಾದವನ ಮಾನಸಿಕ ಸ್ಥಿತಿ ಹೇಗಿರಬೇಕೆಂಬುದನ್ನು ವರ್ಣಿಸಲಾಗಿದೆ. ಎರಡನೆಯ ಸಾಲಿನಲ್ಲಿ ಬುದ್ಧಿಯ ಮಟ್ಟವು ಹೇಗಿರಬೇಕೆಂಬುದನ್ನು ತಿಳಿಸಲಾಗಿದೆ. ಸಾಧನೆಯ ‘ನಾನು’ ‘ನನ್ನದು’ ಎಂಬ ಅಭಿಮಾನಗಳನ್ನು ತ್ಯಜಿಸಿದರೆ ಮಾತ್ರ ಶಾಂತಿ ಸಿಗುತ್ತದೆಂದು ಸ್ಪಷ್ಟಪಡಿಸಲಾಗಿದೆ.

21 ಮತ್ತು 22ನೆ ಶ್ಲೋಕಗಳಲ್ಲಿ ಸನ್ಯಾಸ ಧರ್ಮವನ್ನು ಪ್ರತಿಪಾದಿಸಲಾಗಿದೆ ಎಂದು ಕೆಲವರು ಅರ್ಥ ‹ಮಾಡುತ್ತಾರೆ. ಸನ್ಯಾಸವೆಂದರೆ ಕಾವಿ ಬಟ್ಟೆಯನ್ನು ಧರಿಸಿ ಕಾಡಿನಲ್ಲಿ ವಾಸಮಾಡುವುದೆಂದಲ್ಲ ಗೀತೆಯ ‘ಸನ್ಯಾಸ’ದ ವ್ಯಾಖ್ಯೆಯೇ ಬೇರೆಯಾಗಿದೆ. ಸನ್ಯಾಸ ಎಂದರೆ ತ್ಯಾಗ. ಸನ್ಯಾಸವನ್ನು ಸ್ವೀಕರಿಸಲು ತಯಾರಿರುವವನು ಮಮಕಾರ, ಅಹಂಕಾರ (ನಾನು, ನನ್ನದು ಎಂಬ ಭಾವ) ಹಾಗೂ ಇಂದ್ರಿಯ ಭೋಗಾಭಿಲಾಷೆಗಳನ್ನು ತ್ಯಾಗಮಾಡಲು ಸಿದ್ಧನಾಗಿರಬೇಕು. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಬರೆದ ಸನ್ಯಾಸದ ವ್ಯಾಖ್ಯೆಯನ್ನು ಇಲ್ಲಿ ಉದ್ಧರಿಸಬಹುದು. ಸನ್ಯಾಸಿಯು ಎಲ್ಲಾ ಆಸೆಗಳನ್ನೂ ತ್ಯಜಿಸಬೇಕು. ತಾನು ಜೀವಿಸಲು ಅವಶ್ಯಕವಾದ ವಸ್ತುಗಳನ್ನೂ ಸಹ ‘ತನ್ನವು’ ಎಂದು ತಿಳಿಯಬಾರದು. ತನಗೆ ಲಭಿಸಿರುವ ಜ್ಞಾನ ಹಾಗೂ ಅನುಭವಕ್ಕಾಗಿ ಜಂಭ ಪಡಬಾರದು. ಈ ಗುಣಗಳನ್ನು ಪಡೆದು ಏಕಾಗ್ರ ಬುದ್ಧಿಯುಳ್ಳವನು ಮಾತ್ರ ಬ್ರಹ್ಮಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆ.

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ |
ಸ್ಥಿತ್ವಾಸ್ಯಾಮಂತಕಾಲೇ„ಪಿ ಬ್ರಹ್ಮನಿರ್ವಾಣಮೃಚ್ಛತಿ || 72 ||
ಅರ್ಥ : ಅಹಂಕಾರವನ್ನೂ ಸಂಪೂರ್ಣವಾಗಿ ತ್ಯಜಿಸುವುದು. ಹಾಗೂ ಆತ್ಮಜ್ಞಾನವಾಗುವುದು ಇವೆರಡೂ ಒಂದೇ. ‘ಅಹಂಭಾವ’ ವನ್ನು ಕಳಚಿ ಹಾಕಿದ ಕೂಡಲೆ ಜ್ಞಾನೋದಯವಾಗುತ್ತದೆ. ಆತ್ಮಜ್ಞಾನವಾಗುವುದು ಎಂಬ ಕಾರ್ಯವು ಹೊಸದಾಗಿ ಆಗಬೇಕಾಗಿಲ್ಲ. ಹೀಗೆ ಜ್ಞಾನವನ್ನು ಪಡೆಯುವ ವ್ಯಕ್ತಿಯು ಬೇರೆಯೂ ಅಲ್ಲ. ‘ಜೀವ’ ನ ವ್ಯಾಖ್ಯೆಯನ್ನು ಹೇಳುವಾಗ ಹಿಂದೆ,”ಪರಮಾತ್ಮನು ಅಹಂಭಾವದಿಂದ ಕೂಡಿ ಜೀವ ಎನಿಸಿಕೊಳ್ಳುತ್ತಾನೆ” ಎಂದು ಹೇಳಲಾಗಿದೆ. (ಅಧ್ಯಾಯ 2 ಶ್ಲೋಕ 51) (62 ಶ್ಲೋಕ 51) ಆದೇ ಜೀವನು ಅಹಂಕಾರ ಎಂಬ ಕವಚವನ್ನು ಕಳಚಿ ಹಾಕಿಬಿಟ್ಟರೆ ತಾನೇ ಪರಮಾತ್ಮನು ಎಂಬ ಜ್ಞಾನವನ್ನು ಪಡೆಯುತ್ತಾನೆ (ಅವನೇ ಪರಮಾತ್ಮನಾಗುತ್ತಾನೆ). ಈ ಜ್ಞಾನವು ಪ್ರಾಪ್ತಿಯಾದ ನಂತರ ಜೀವನು ಪುನಃ ಭ್ರಾಂತಿಗೊಳ್ಳುವುದಿಲ ಮತ್ತು ಪುನಃ ಜನ್ಮವೆತ್ತುವುದಿಲ್ಲ. ಈ ಜ್ಞಾನವು ಕೇವಲ ಮರಣಕಾಲದಲ್ಲಿ ಕ್ಷಣ ಕಾಲ ಪ್ರಾಪ್ತಿಯಾದರೂ ಸಾಕು ಇದರಿಂದ ಜೀವನು ಜನ್ಮಬಂಧನದಿಂದ ಮುಕ್ತನಾಗಿ ಬ್ರಾಹ್ಮೀಸ್ಥಿತಿಯಲ್ಲಿರುತ್ತಾನೆ.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಸಾಂಖ್ಯಯೋಗೋ ನಾಮ
ದ್ವಿತೀಯೋ„ಧ್ಯಾಯಃ