S O U L B L I S S

Loading

Bhagavad Gita – Vinayak Rao Bapat – Chapter 3

ಮೂರನೆಯ ಅಧ್ಯಾಯ
ಕರ್ಮಯೋಗ
ಪೀಠಿಕೆ
ಹಿಂದಿನ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ,”ಫಲಾಶೆಯನ್ನು ಬಿಟ್ಟು, ಮಮಕಾರವಿಲ್ಲದೆ ಕರ್ಮಮಾಡು” ಎಂದು ಬೋಧಿಸಿದನು. ಆದರೆ ಮುಂದೆ ಸಂಗರಹಿತನಾಗಿ ಕರ್ಮಮಾಡಬೇಕೆಂದು ಹೇಳಿ ಬುದ್ಧಿಯೋಗವನ್ನು ಆಶ್ರಯಿಸಬೇಕೆಂದು ಸಹ ಹೇಳಿದನು. ಇದರಿಂದ ಅರ್ಜುನನ ಮನಸ್ಸಿನಲ್ಲಿ ಗೊಂದಲವುಂಟಾಯಿತು. ತಾನು ಕರ್ಮಯೋಗವನ್ನು ಶ್ರಮಿಸಬೇಕೋ, ಇಲ್ಲವೇ ಬುದ್ಧಿಯೋಗವನ್ನಾಶ್ರಯಿಸಬೇಕೋ ತಿಳಿಯದಾಯಿತು. ಮೇಲಾಗಿ ಬುದ್ಧಿಯೋಗವನ್ನಾಶ್ರಯಿಸುವುದು ಎಂದರೆ, ತಾನು ಹೇಳಿದ ಬೌದ್ಧಿಕವಾದವೇ ಸರಿ ಎಂದು ಕೃಷ್ಣನು ಹೇಳುತ್ತಾನೆಂಬ ಭ್ರಾಂತಿಯೂ ಉಚಿಟಾಯಿತು. ಈ ಸಂಶಯವನ್ನು ಹೋಗಲಾಡಿಸಿಕೊಳ್ಳಲು ಈ ಅಧ್ಯಾಯದ ಪ್ರಾರಂಭದಲ್ಲಿ ಪ್ರಶ್ನೆ ಮಾಡಿದ್ದಾನೆ.
ಹಿಂದಿನ ಜನ್ಮದ ಕರ್ಮಸಂಸ್ಕಾರಗಳು ಅಥವಾ ವಾಸನೆಗಳು ಪುನರ್ಜನ್ಮಕ್ಕೆ ಹಾಗೂ ಈಗಿನ ಸುಖ ದುಃಖಗಳಿಗೆ ಕಾರಣವಾಗಿವೆ. ನಾವು ಹುಟ್ಟುವಾಗಲೇ ಈ ವಾಸನೆಯ ಹೊರೆಯನ್ನು ಹೊತ್ತುಕೊಂಡು ಬಂದಿದ್ದೇವೆ. ಈ ವಾಸನೆಗಳನ್ನು ಭೋಗಿಸಲು ಅನುಕೂಲವಾದ ವಾತಾವರಣದಲ್ಲಿ ನಾವೆಲ್ಲರೂ ಜನ್ಮವೆತ್ತಿದ್ದೇವೆ. ಅಂತೆಯೇ ವಾಸನೆಗಳ ಭೋಗಕ್ಕಾಗಿ ನಾವು ವಿವಿಧ ಕರ್ಮಗಳನ್ನು ಮಾಡುವುದು ಸ್ವಾಭಾವಿಕವಾದುದು. ಆದರೆ ನಾವು ಕರ್ಮಮಾಡುವಾಗ ಆ ಕರ್ಮಗಳಿಂದ ನಮ್ಮ ಅಂತರಂಗದ ಮೇಲೆ ಪುನಃ ಪುನಃ ಸೂಕ್ಷ್ಮ ಪರಿಣಾಮಗಳಾಗುತ್ತಲೇ ಇರುತ್ತವೆ. ಇವು ಹೊಸವಾಸನೆಗಳಿಗೆ ಕಾರಣವಾಗುತ್ತವೆ. ಇನ್ನೂ ಹಳೆಯ ವಾಸನೆಗಳನ್ನೂ ಭೋಗಿಸಿ ಮುಗಿಸುವ ಮೊದಲೇ ಹೊಸವಾಸನೆಗಳು ಬಂದು ಶೇಖರವಾಗಲು ಪ್ರಾರಂಭಿಸುತ್ತವೆ. ಕರ್ಮಮಾಡಿದಂತೆಲ್ಲಾ ಹೊಸವಾಸನೆಗಳ ಸಂಗ್ರಹವೂ ಹೆಚ್ಚುತ್ತಾ ಹೋಗುತ್ತದೆ. ಈ ವಾಸನೆಗಳ ಪೂರೈಕೆಗಾಗಿ ಪುನಃ ಪುನಃ ಜನ್ಮವೆತ್ತಲೇಬೇಕು. ಈ ವಿಷಚಕ್ರವು ತಿರುಗುತ್ತಲೇ ಇರುತ್ತದೆ. ಪರಿಣಾಮವೇನೆಂದರೆ ಪುನಃ ಪುನಃ ಜನನ-ಮರಣ.
ಸಂಚಿತವಾದ ವಾಸನೆಗಳನ್ನೂ ಬರಿದು ಮಾಡಿಕೊಂಡು ಹೊಸ ವಾಸನೆಗಳು ಹುಟ್ಟದಂತೆ ಮಾಡಿದರೆ ಅಂತಃಕರಣವು ಶುದ್ಧವಾಗಿ, ಅಹಂಭಾವವು ನಾಶವಾಗಿ ಆತ್ಮಜ್ಞಾನವಾಗುತ್ತದೆ. ಈ ಗುರಿಯನ್ನು ಸಾಧಿಸಲು ಯಾವ ರೀತಿ ಕರ್ಮಮಾಡಬೇಕೆಂಬ ದಾರಿಯನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಕರ್ಮಯೋಗ
ಅರ್ಜುನ ಉವಾಚ
ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ಧನ |
ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ || 1 ||
ಅರ್ಥ : ಜನಾರ್ಧನನೇ, ಬುದ್ಧಿಯೋಗವು ಕರ್ಮಕ್ಕಿಂತ ಶ್ರೇಷ್ಠವೆಂತ ನಿನ್ನ ಅಭಿಪ್ರಾಯವಾದರೆ, ನನಗೆ ಈ ಘೋರಕರ್ಮವನ್ನು ಮಾಡಲಾದರೂ ಏಕೆ ಹಚ್ಚುತ್ತೀಯೆ ?
ಇದುವರೆಗಿನ ಉಪದೇಶವನ್ನು ಕೇಳಿದಾಗ್ಯೂ ಅರ್ಜುನನ ಮಾನಸಿಕ ಕ್ಷೋಭೆಯು ಸ್ತಿಮಿತಕ್ಕೆ ಬರಲಿಲ್ಲ. ಯುದ್ಧ ಮಾಡಿ ಶತ್ರುಗಳನ್ನು ಕೊಲ್ಲುವುದು ಹೀನಕಾರ್ಯವೆಂದು ಅವನು ಈಗಲೂ ಭಾವಿಸಿದ್ದಾನೆ. ಧರ್ಮ ಮತ್ತು ಅಧರ್ಮ ಪಕ್ಷಗಳಲ್ಲಿ ನಡೆಯಲಿರುವ ಈ ಯುದ್ಧದಲ್ಲಿ, “ಕ್ಷತ್ರಿಯನಾದ ತಾನು ಧರ್ಮಪಕ್ಷದಿಂದ ಯುದ್ಧಮಾಡುತ್ತಿದ್ದೇನೆ, ಅಧರ್ಮನಾಶ ಮತ್ತು ಧರ್ಮ ಸ್ಥಾಪನೆಗಾಗಿ ಪಾಂಡವರ ಪರವಾಗಿ, ತಾನು ಒಬ್ಬ ಪ್ರಮುಖ ಯೋಧನಾಗಿ ಯುದ್ಧಮಾಡುತ್ತಿದ್ದೇನೆ.” ಎಂಬುದನ್ನು ಮರೆತು, ಅಹಂಕಾರದಿಂದ ಕೂಡಿ ತಾನು ಭೀಷ್ಮದ್ರೋಣಾದಿಗಳನ್ನು (ಅವರು ಅಧರ್ಮ ಪಕ್ಷದವರೆಂಬುದನ್ನು ಮರೆತು) ಕೊಲ್ಲುವೆನಲ್ಲಾ ಎಂಬ ಕನಿಕರ ರೂಪದ ಅಜ್ಞಾನದಿಂದ ಇನ್ನೂ ಆವೃತವಾಗಿದ್ದಾನೆ. ಹಿಂದಿನ ಅಧ್ಯಾಯದಲ್ಲಿ ಹೇಳಿದ ಕೊನೆಯ ಭಾಗದ ಉಪದೇಶವನ್ನು ಹಿಡಿದುಕೊಂಡು ಶ್ರೀಕೃಷ್ಣನು, ‘ತ್ಯಾಗವನ್ನೇ ಸಮರ್ಥಿಸುತ್ತಿದ್ದಾನೆಂದು ತಪ್ಪಾಗಿ ತಿಳಿದುಕೊಂಡು ಅವನು ಈ ಪ್ರಶ್ನೆಯನ್ನು ಕೇಳುತ್ತಿದ್ದಾನೆ.

ವ್ಯಾಮಿಶ್ರೇಣೀವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ |
ತದೇಕಂ ವದ ನಿಶ್ಚಿತ್ಯ ಯೇನ ಶ್ರೆಯೊ„ಹಮಾಪ್ನುಯಾಮ್ || 2 ||
ಅರ್ಥ : Œವಿರೋಧಾರ್ಥಗಳನ್ನು ಕೊಡುವ ವಾಕ್ಯಗಳಿಂದ ನನ್ನ ಬುದ್ಧಿಯನ್ನು ಇನ್ನೂ ಹೆಚ್ಚು ಗೊಂದಲಕ್ಕೀಡು ಮಾಡುತ್ತಿದ್ದೇಯೆ. ಆದುದರಿಂದ ನನಗೆ ಯಾವುದು ಹಿತವೋ ನಿನ್ನ ಅನಿಶ್ಚಿತ ಅಭಿಪ್ರಾಯವನ್ನು ತಿಳಿಸು.
ಶ್ರೀಕೃಷ್ಣನು ಹಿಂದಿನ ಅಧ್ಯಾಯವನ್ನು ಉಪದೇಶಿಸಿದ ವಿವಿಧ ಸಾಧನಮಾರ್ಗಗಳನ್ನು ಅರ್ಜುನನು ಸರಿಯಾಗಿ ಜೀರ್ಣಿಸಿಕೊಳ್ಳಲಿಲ್ಲ. ತನ್ನ ಮನಸ್ಸು ಇನ್ನೂ ಗೊಂದಲಮಯವಾಗಿದೆ ಎಂದು ಅವನೇ ಒಪ್ಪಿಕೊಂಡಿದ್ದಾನೆ. ಹಿಂದೆ ತಿಳಿಸಿದ ಕರ್ಮಯೋಗ ಮತ್ತು ಬುದ್ಧಿಯೋಗ ಇವು ಭಿನ್ನಮಾರ್ಗಗಳು ಎಂದು ಭಾವಿಸಿ, ಅವುಗಳಲ್ಲಿ ಯಾವುದು ಶ್ರೇಯಸ್ಕರ ಎಂಬುದನ್ನು ತಿಳಿಯಲಾರದೆ ಈ ವಿಷಯದಲ್ಲಿ ಕೃಷ್ಣನ ಸಹಾಯವನ್ನು ಅಪೇಕ್ಷಿಸಿದ್ದಾನೆ.

ಶ್ರೀ ಭಗವಾನ್ ಉವಾಚ
ಲೋಕೇ„ಸ್ಮಿನ್‍ದ್ವಿವಿಧಾ ನಿಷ್ಠಾಪುರಾಪೆÇ್ರೀಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ || 3 ||
ಅರ್ಥ : ಪಾಪರಹಿತನಾದ ಅರ್ಜುನನೇ, ಪ್ರಪಂಚದಲ್ಲಿ ಎರಡು ಮಾರ್ಗಗಳಿವೆ. ಒಂದು ಸಾಂಖ್ಯ ಯೋಗ, ಜ್ಞಾನಯೋಗ, ಮತ್ತೊಂದು ಯೋಗಿಗಳ ಕರ್ಮಯೋಗ.
ಹಿಂದೆ ಜ್ಞಾನಯೋಗವನ್ನು ವರ್ಣಿಸುವಾಗ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ, ಮೊದಲಾದ ದ್ವಂದ್ವಗಳಲ್ಲಿ ಸಮತ್ವವನ್ನು ಕಾಪಾಡಿಕೊಂಡು ಪ್ರಾಪಂಚಿಕ ವ್ಯವಹಾರವನ್ನು ಸಾಗಿಸಬೇಕೆಂದು ಹೇಳಲಾಗಿದೆ. ಅಧ್ಯಾಯದ ಕೊನೆಯಲ್ಲಿ ಕರ್ಮಕ್ಕಿಂತ ಬುದ್ಧಿಯು (ಜ್ಞಾನ)ಹಿರಿದೆಂದೂ ಕರ್ಮಯೋಗಿಯು ದ್ವಂದ್ವಗಳಲ್ಲಿ ಬುದ್ಧಿಯ ಸಮತ್ವವನ್ನು ಕಾಪಾಡಿಕೊಂಡು, ಮಮಕಾರ ರಹಿತವಾಗಿ ಕರ್ಮಮಾಡಬೇಕೆಂದೂ ಹೇಳಲಾಗಿದೆ. ವಸ್ತುತಃ ಇಲ್ಲಿ ಕರ್ಮಮಾಡುವಾಗ ಕರ್ಮಯೋಗಿಯ ಮಾನಸಿಕ ಹಿನ್ನಲೆ ಹೇಗಿರಬೇಕೆಂಬುದನ್ನು ವಿವರಿಸಲಾಗಿದೆ. ತತ್ವತಃ ಇವೆರಡೂ ಒಂದೆ ಮಾರ್ಗ. ಆದರೆ ಅರ್ಜುನನು ಇವೆರಡೂ ಭಿನ್ನ ಮಾರ್ಗಗಳೆಂದು ಭಾವಿಸಿ ಮೇಲಿನ ಪ್ರಶ್ನೆಯನ್ನು ಕೇಳಿದ್ದಾನೆ.
ಕರ್ಮಯೋಗ ಮತ್ತು ಜ್ಞಾನಯೋಗ ಇವು ಭಿನ್ನವಾದ ಮಾರ್ಗಗಳಲ್ಲ. ಒಂದಕ್ಕೊಂದು ಪರಸ್ಪರ ಪೂರಕವಾಗಿವೆ. ಎರಡೂ ಸೇರಿ ಒಂದೇ ಮಾರ್ಗ. ಮಮಕಾರವನ್ನಿಟ್ಟುಕೊಳ್ಳದೆ ಆಶಾರಹಿತನಾಗಿ ಕರ್ಮಮಾಡುವುದರಿಂದ ವಾಸನಾಸಮುದಾಯಗಳನ್ನು ಬರಿದು ಮಾಡಿಕೊಳ್ಳುವುದು ಸುಲಭ ಮತ್ತು ಇಂತಹ ಕರ್ಮಗಳಿಂದ ಹೊಸ ವಾಸನೆಗಳು ಹುಟ್ಟುವುದಿಲ್ಲ.
ಶ್ರೀಕೃಷ್ಣನು, ತಾನು ದೇವಕಿಯ ನಂದನಾದ, ಅರ್ಜುನನ ಸಾರಥಿಯಾದ, ಕೃಷ್ಣನೆಂಬುದನ್ನು ಮರೆತು ತಾನು ಶುದ್ಧಪರಮಾತ್ಮ ಎಂಬ ಭಾವದಲ್ಲಿ ನಿಂತು ಧ್ಯಾನಾಸಕ್ತರಾದವರಿಗೆ ಜ್ಞಾನಮಾರ್ಗವನ್ನೂ ಯೋಗಿಗಳಿಗೆ ಅಂದರೆ ಕರ್ಮದಲ್ಲಿ ನಿರತರಾಗಿರುವವರಿಗೆ ಕರ್ಮಮಾರ್ಗವನ್ನೂ ಈ ಹಿಂದೆ ತಾನು ಬೋಧಿಸಿದ್ದೇನೆಂಬುದಾಗಿ ತಿಳಿಸಿದ್ದಾನೆ. ಗೀತೆಯ ಉದ್ದಕ್ಕೂ ಕೃಷ್ಣನು ‘ನಾನು’ಎಂದು ಹೇಳುವಾಗ ‘ಪರಮಾತ್ಮ’ ಎಂಬ ಭಾವವನ್ನಿಟ್ಟುಕೊಂಡೇ ಹೇಳಿದ್ದಾನೆ.

ನ ಕರ್ಮಣಾಮನಾರಂಭಾನ್ನೈಷ್ಕಮ್ರ್ಯಂ ಪುರುಷೋ„ಶ್ನುತೇ |
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || 4 ||
ಅರ್ಥ : ಬಾಹ್ಯಕರ್ಮಗಳನ್ನೂ ಮಾಡದೆ ಬಿಡುವುದರಿಂದ ಕರ್ಮವನ್ನು ಬಿಟ್ಟಂತಾಗುವುದಿಲ್ಲ. (ನೈಷ್ಕಮ್ರ್ಯ). ಇದೇ ರೀತಿಯಾಗಿ ಸನ್ಯಾಸವನ್ನು ಸ್ವೀಕರಿಸಿದ ಮಾತ್ರಕ್ಕೆ ಸಿದ್ಧಿಯು (ಆತ್ಮಜ್ಞಾನ) ಲಭಿಸುವುದಿಲ್ಲ.
ಹೊರಗೆ ಕರ್ಮಗಳನ್ನು ಮಾಡದೆಬಿಟ್ಯಾಗ್ಯೂ, ಮನಸ್ಸಿನಲ್ಲಿ ಆ ಕರ್ಮದ ವಿಚಾರವು ನಡೆದೇ ಇರುವುದರಿಂದ ವಸ್ತುತಃ ಕರ್ಮಮಾಡಿದಂತೆಯೇ ಸರಿ. ಈ ರೀತಿಯ ಮಾನಸಿಕ ಕರ್ಮವು ಸಹ ಬಂಧನಕ್ಕೆ ಕಾರಣವಾಗುತ್ತದೆ. ಇದೇ ರೀತಿಯಾಗಿ ಸಂಸಾರವನ್ನು ತ್ಯಾಗಮಾಡಿ ಕಾವಿಯನ್ನು ಧರಿಸಿದ ಮಾತ್ರಕ್ಕೆ ಸಿದ್ಧಿಯು ಸಿಗಲಾರದು. ಸಿದ್ಧಿ ಅಥವಾ ಆತ್ಮಜ್ಞಾನ ಇವು ಮನಸ್ಸು ಬುದ್ಧಿಗಳ ಕಾರ್ಯ. ಹೊರಗಿನ ತ್ಯಾಗದ ಜೊತೆಗೆ ಒಳಗಿನ ತ್ಯಾಗ, ಸಾಧನೆಗಳು ಸಹ ಮೇಳಗೂಡಬೇಕು. ಅದಿಲ್ಲದಿದ್ದರೆ ಹೊರಗಿನ ತ್ಯಾಗವು ವ್ಯರ್ಥವೇ ಸರಿ. ಏಕೆಂದರೆ ಈಗ ಹೊರಗೆ ತ್ಯಾಗ ಮಾಡಿದಾಗ್ಯೂ, ಮನಸ್ಸಿನಲ್ಲಿ ಮಾತ್ರ ಯಾವಾಗಲೂ ಭೋಗದ ವಿಚಾರವೇ ನಡೆದಿರುವುದರಿಂದ ಇದೂ ಸಹ ಬಂಧನಕ್ಕೆ, ವಾಸನೆಗಳಿಗೆ ಕಾರಣವಾಗುತ್ತದೆ.
ಈ ಸಂದರ್ಭದಲ್ಲಿ ಕರ್ಮದ ಉಗಮವು ಹೇಗಾಗುತ್ತದೆಂಬುದನ್ನು ತಿಳಿಯುವುದು ವಿಹಿತ. ಪ್ರತಿಯೊಬ್ಬ ಮನುಷ್ಯನೂ ಶುದ್ಧ ಪರಮಾತ್ಮನೇ ಆಗಿದ್ದಾಗ್ಯೂ, ಅವನಲ್ಲಿ ಅಜ್ಞಾನದ ಆವರಣವಿರುವುದರಿಂದ ಅವನು ಮಾಯಾ ಬಂಧನಕ್ಕೆ ಸಿಲುಕಿ ‘ಜೀವಿ’ ಯಂತೆ ನಟಿಸುತ್ತಾನೆ. ಬುದ್ಧಿಯು ನಮ್ಮ ಹತ್ತಿರ ಇಲ್ಲದಿರುವ, ಅಥವಾ ನಮಗೆ ಇನ್ನೂ ಬೇಕಾಗುವ ವಸ್ತುವನ್ನು ಅಪೇಕ್ಷಿಸುತ್ತದೆ. ಇದಕ್ಕೆ ‘ಆಸೆ’ ಎಂದು ಹೆಸರು. ಆಸೆಗೆ ಅನುಗುಣವಾಗಿ ನಮ್ಮ ವಿಚಾರವಿರುತ್ತದೆ. ಆಸೆಗಳು ನಮ್ಮ ಬುದ್ಧಿಯ ಮೇಲೆ ಉಂಟು ಮಾಡಿದ ಆಘಾತ ಅಥವಾ ಅಲ್ಲೋಲಕಲ್ಲೋಲಗಳ ತರಂಗಗಳ ಸಮೂಹವು ವಿಚಾರ ಎನಿಸಿಕೊಳ್ಳುತ್ತದೆ. ನಮ್ಮ ವಿಚಾರಗಳ ತೀವ್ರತೆ ಮತ್ತು ಯೋಗ್ಯತೆಗಳು ನೇರವಾಗಿ ಬುದ್ಧಿಯಲ್ಲುಂಟಾದ ಆಸೆಗೆ ಅನುಗುಣವಾಗಿವೆ. ಈ ವಿಚಾರಧಾರೆಯು ಹೊರಗಿನ ಪ್ರಪಂಚದಲ್ಲಿ, ವಸ್ತು ಇಲ್ಲವೇ ವಿಷಯಗಳ ಪ್ರಾಪ್ತಿಗಾಗಿ ವ್ಯಕ್ತಿಪಡಿಸುವ ಚಲನವಲನಾದಿಗಳಿಗೆ ‘ಕರ್ಮ’ ಎಂದು ಹೆಸರು. ಆಸೆಗೆ ಅನುಗುಣವಾದ ವಿಚಾರವಿದ್ದಂತೆ, ವಿಚಾರಕ್ಕನುಗುಣವಾದ ಆಚಾರ ಅಥವಾ ಕರ್ಮವಿರುತ್ತದೆ. ಈ ಸರಪಳಿಯಲ್ಲಿ ಅಜ್ಞಾನ, ಆಸೆ, ವಿಚಾರ, ಕರ್ಮ ಇವು ಅನುಕ್ರಮವಾಗಿ ಬರುತ್ತವೆ. ಅಜ್ಞಾನವನ್ನು ಪ್ರತಿಯೊಬ್ಬನಲ್ಲಿಯೂ ಇದೆ. ಆಸೆಯು ಮನುಷ್ಯನ ಮಟ್ಟದಲ್ಲಿಯೂ, ವಿಚಾರವು ಬುದ್ಧಿಯಮಟ್ಟದಲ್ಲಿಯೂ ಮತ್ತು ಕರ್ಮವು ಶಾರೀರಿಕ ಮಟ್ಟದಲ್ಲಿಯೂ ಕಾರ್ಯ ಮಾಡುತ್ತವೆ. ಅಂದರೆ ಅಖಂಡವಾದ ಅಜ್ಞಾನವು ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಹೆಸರನ್ನು ಪಡೆಯುತ್ತದೆ.

ಕರ್ಮವನ್ನು ಮಾಡದೆ ಬದುಕಿರಲು ಸಾಧ್ಯವೇ ಇಲ್ಲ.

ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈೀರ್ಗುಣೈಃ || 5 ||
ಅರ್ಥ : ಕರ್ಮವನ್ನು ಮಾಡದೆ ಯಾರೂ ಕ್ಷಣಕಾಲ ಸಹ ಬದುಕಿರಲಾರರು. ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರಕೃತಿಗನುಗುಣವಾಗಿ ಕರ್ಮವನ್ನು ಮಾಡುತ್ತಲೇ ಇರುತ್ತಾರೆ.
ಪ್ರತಿಯೊಬ್ಬನೂ ಸತ್ವ, ರಜಸ್ಸು, ತಮಸ್ಸು ಎಂಬ ಮೂರು ತರಹದ ಗುಣಗಳಿಂದ ಕೂಡಿರುತ್ತಾನೆ. ಕೇವಲ ಸತ್ಯ, ಕೇವಲ ರಜಸ್ಸು, ಹಾಗೂ ಕೇವಲ ತಮಸ್ಸು ಪ್ರಕೃತಿಯವರು ಸಿಗುವುದಿಲ್ಲ. ಈ ಪ್ರಕೃತಿಗಳು ಪ್ರತಿಯೊಬ್ಬರಲ್ಲಿಯೂ ಅವರವರ ಸಂಸ್ಕಾರ ಯಾ ವಾಸನೆಗನುಸಾರವಾಗಿ ತರತಮ ಭೇದದಿಂದ ಭಿನ್ನ ಭಿನ್ನವಾಗಿರುತ್ತವೆ. ಯಾರಲ್ಲಿ ಯಾವ ಪ್ರಕೃತಿಯ ಲಕ್ಷಣಗಳು ಎದ್ದು ಕಾಣುತ್ತವೆಯೋ ಅವರನ್ನು ಆ ಪ್ರಕೃತಿಯವರೆಂದು ತಿಳಿಯಲಾಗುತ್ತದೆ. ಹೀಗೆ ಪ್ರಕೃತಿಯಿಂದ ಕೂಡಿದ ಮನುಷ್ಯನು ಯಾವ ಕರ್ಮವನ್ನು ಮಾಡದೆ ಒಂದು ಕ್ಷಣಕಾಲ ಸಹ ಇರಲಾರನು. (ಅಕರ್ಮ). ಕರ್ಮ ಮಾಡುತ್ತಿರುವುದು ವ್ಯಕ್ತಿಯು ಜೀವಿಸಿರುವ ಲಕ್ಷಣ ಶಾರೀರಿಕ ದೃಷ್ಟಿಯಿಂದ ನಾವು ಯಾವ ಕರ್ಮವನ್ನೂ ಮಾಡದೆ ಇದ್ದರೂ, ಮಾನಸಿಕ ಹಾಗೂ ಬೌದ್ಧಿಕ ಕರ್ಮಗಳನ್ನಾದರು ಮಾಡುತ್ತಲೇ ಇರುತ್ತೇವೆ. ಇವು ಅವರವರ ಪ್ರಕೃತಿಗನುಗುಣವಾಗಿ ಸಾಗಿರುತ್ತವೆ.

ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ |
ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ || 6 ||
ಅರ್ಥ : ಕರ್ಮೇಂದ್ರಿಯಗಳನ್ನು ಅಮುಕಿ ಶಾರೀರಿಕ ಕರ್ಮಗಳನ್ನು ಮಾಡದಂತೆ ತಡೆ ಹಿಡಿದು ಆದರೆ ಆಯಾಯಾ ಇಂದ್ರಿಯ ವಿಷಯಗಳನ್ನೂ ಅಂದರೆ ಸುಖಭೋಗಗಳನ್ನು ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಳ್ಳುತ್ತಿರುವವನು, ಬುದ್ಧಿಹೀನನೆಂದೂ, ಮೋಸಗಾರನೆಂದೂ ತಿಳಿಯಲ್ಪಡುತ್ತಾನೆ.
ಸಂಸಾರದಲ್ಲುಂಟಾಗುವ ತಾತ್ಕಾಲಿಕ ಜಿಗುಪ್ಸೆ, ಅಥವಾ ವೈರಾಗ್ಯದಿಂದ, ಇಲ್ಲವೆ, ನೆಂಟರಿಷ್ಟರ ಮೇಲಿನ ದ್ವೇಷ ಕ್ರೋಧಾದಿಗಳಿಂದ, ಇಂದ್ರಿಯ ಸುಖಗಳನ್ನು ಅನುಭವಿಸದೆ ಶಾರೀರಿಕವಾಗಿ ಇಂದ್ರಿಯ ನಿಗ್ರಹವನ್ನು ಮಾಡಿದಾಗ್ಯೂ ಮಾನಸಿಕ ಹಾಗೂ ಬೌದ್ಧಿಕವಾಗಿ ಈ ನಿಗ್ರಹದ ಮೇಳ ಅಥವಾ ಹೊಂದಾಣಿಕೆಯಲ್ಲದಿದ್ದರೆ ಅದು ವ್ಯರ್ಥವಷ್ಟೇ ಅಲ್ಲ. ಆ ವ್ಯಕ್ತಿಯನ್ನೂ ಇನ್ನು ಅಧೋಗತಿಗೆ ನೂಕುತ್ತದೆ ಎಂಬುದನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಶಾರೀರಿಕವಾಗಿ ಇಂದ್ರಿಯ ನಿಗ್ರಹ ಮಾಡಿ ಮನಸ್ಸಿನಲ್ಲಿ ಇಂದ್ರಿಯ ಭೋಗಗಳ ಬಗ್ಗೆ ಆಸೆಪಡುತ್ತಾ ಮಾನಸಿಕ ಕಲ್ಪನಾಲೋಕದಲ್ಲಿ ಅವುಗಳನ್ನು ಭೋಗಿಸುವುದರಿಂದ ಮನಸ್ಸಿನಲ್ಲಿ ಅದರ ಪ್ರಭಾವವು ವೃದ್ಧಿಯಾಗಿ ವಾಸನೆಗೆ ಕಾರಣವಾಗುವುದರ ಜೊತೆಗೆ, ಮುಂದೆ ವ್ಯಕ್ತಿಯು ತನಗೆ ತಿಳಿಯದಂತೆಯೇ ಶಾರೀರಿಕವಾಗಿ ಇಂದ್ರಿಯಗಳ ಮೂಲಕ ಆ ಸುಖಗಳನ್ನು ಭೋಗಿಸಲು ಪ್ರಾರಂಭಿಸುತ್ತಾನೆ. ಇಂತಹ ನೂರಾರು ಉದಾಹರಣೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಕಾಣಬಹುದು.
ಇದೇ ತತ್ವವನ್ನು ಆಧುನಿಕ ಮಾನಸ ಶಾಸ್ತ್ರರೀತ್ಯಾ ವರ್ಣಿಸುವುದಾದರೆ ಹೀಗೆ ಹೇಳಬಹುದು. ಮನಸ್ಸಿನಲ್ಲಿ ಯಾವುದಾದರೊಂದು ವಿಚಾರವು ಉದಯಸಿತೆಂದರೆ ಅದು ಕೆರೆಯಲ್ಲಿ ಬಿದ್ದ ಕಲ್ಲಿನಂತೆ, ಅದೇ ತರಹದ ಅನೇಕ ವಿಚಾರ ತರಂಗಗಳನ್ನು ಎಬ್ಬಿಸುತ್ತದೆ. ಪ್ರತಿಯೊಂದು ತರಂಗವೂ ಅದೇ ತರಹದ ಇನ್ನೂ ಅನೇಕ ದೊಡ್ಡ ತರಂಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ನಮ್ಮ ಮನಸ್ಸಿನಲ್ಲಿ ಆ ವಿಚಾರವು ಆಳವಾಗಿ ಮುದ್ರಿತವಾಗಿ ತನ್ನದೇ ಆದ ಮಾರ್ಗವನ್ನು (ಗತಿ) ಸೃಷ್ಟಿ ಮಾಡಿಕೊಳ್ಳುತ್ತದೆ. ಮುಂದೆ ಇದೇ ತರಹದ ವಿಚಾರವು ಮನಸ್ಸಿನಲ್ಲಿದ್ದಾಗ ಅದು ಸ್ವಾಭಾವಿಕವಾಗಿ ಹಿಂದಿನ ಅಂತಹ ವಿಚಾರವು ತಯಾರಿಸಿದ ಮಾರ್ಗದಲ್ಲಿ ಸುಲಭವಾಗಿ ಹರಿಯುತ್ತದೆ. ಹೀಗೆ ಅದರ ಮಾರ್ಗವು ನಿಶ್ಚಯವಾದ ಮೇಲೆ, ಆ ವ್ಯಕ್ತಿಯ ಬಾಹ್ಯ (ಶಾರೀರಿಕ) ಚಲನವಲನಾದಿಗಳೂ, ಕರ್ಮಗಳೂ, ಕ್ರಮೇಣ ಅದಕ್ಕನುಗುಣವಾಗಿಯೇ ಸಾಗುತ್ತವೆ. ಇಂದ್ರಿಯ ವಿಷಯ ಸುಖಗಳನ್ನು ಚಿಂತಿಸುವ ಮನುಷ್ಯ ಆ ಸುಖದಲ್ಲಿ ಬಲವಾದ ಪ್ರವೃತ್ತಿಯುಳ್ಳದ್ದಾಗುತ್ತದೆ. ಹೀಗಾಗಿ ಆ ವ್ಯಕ್ತಿಯು ನಿಃಸ್ಸಹಾಯಕವಾಗಿ ಇಂದ್ರಿಯ ಸುಖದಲ್ಲಿ ಮಗ್ನನಾಗಿ ಅಧೋಗತಿಗಿಳಿಯುತ್ತಾನೆ.

ಇದನ್ನು ಜಯಿಸುವುದು ಹೇಗೆ ?

ಯಸ್ತ್ವಿಂದ್ರಿಯಾಣಿ ಮನಸಾ ನಿಯಾಮ್ಯಾರಭತೇ„ರ್ಜುನ |
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇಃ || 7 ||
ಅರ್ಥ : ಯಾರು ಮನಸ್ಸಿನಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಅಂದರೆ ಮನಸ್ಸು ಇಂದ್ರಿಯವಿಷಯ ಭೋಗದ ಕಡೆಗೆ ಓಡದಂತೆ ತಡೆಗಟ್ಟಿ ನಿರಾಸಕ್ತನಾಗಿ, ಕರ್ಮೇಂದ್ರಿಯಗಳ ಮೂಲಕ, ಕರ್ಮಯೋಗರೀತ್ಯಾ ಕರ್ಮವನ್ನು ಆಚರಿಸುತ್ತಾನೋ, ಅವನು ಶ್ರೇಷ್ಠನು.
ಈ ಪುಟ್ಟ ಶ್ಲೋಕದಲ್ಲಿ ಕರ್ಮಯೋಗವನ್ನು ಸಂಗ್ರಹವಾಗಿ ವರ್ಣಿಸಲಾಗಿದೆ. ಮನಸ್ಸು ಜ್ಞಾನೇಂದ್ರಿಯಗಳ ಮೂಲಕ ಹೊರಕ್ಕೆ ಹರಿದು ಆಯಾಯಾ ಇಂದ್ರಿಯ ವಿಷಯಗಳನ್ನು ತಲುಪಿದರೆ ಆಗ ಜ್ಞಾನೇಂದ್ರಿಯಗಳಿಗೆ ವಿಷಯಗಳ ಜ್ಞಾನ (ಅರಿವು) ವುಂಟಾಗುತ್ತದೆ. ಜ್ಞಾನೇಂದ್ರಿಯಗಳು ಮಾಡುವ ಈ ಕಾರ್ಯದಲ್ಲಿ ಮನಸ್ಸು ಪ್ರವೃತ್ತವಾಗದಿದ್ದರೆ ನಮಗೆ ವಸ್ತುಗಳ ಜ್ಞಾನವಾಗುವುದಿಲ್ಲ. ಉದಾಹರಣೆ – ನಾವು ಯಾವುದಾದರೂ ವಿಚಾರದಲ್ಲಿ ಗಾಢವಾಗಿ ಮಗ್ನರಾಗಿರುವಾಗ, ನಮ್ಮ ಪಕ್ಕದಲ್ಲಿಯೇ ಯಾರಾದರೂ ಬಂದುನಿಂತು ಏನನ್ನಾದರೂ ಹೇಳಿದರೆ, ಅದು ನಮಗೆ ತಿಳಿಯುವುದೇ ಇಲ್ಲ. ಅಂದರೆ ಇಂದ್ರಿಯಗಳು ಮಾಡುವ ಕಾರ್ಯದಲ್ಲಿ ಮನಸ್ಸು ಹೊಕ್ಕರೆ ಮಾತ್ರ, ಇಂದ್ರಿಯಗಳು ತಿಳಿಸುವ ವೇದನೆಗಳ ಅರಿವು ನಮಗಾಗುತ್ತದೆ. ಅನ್ಯಥಾ ಇಲ್ಲ.
ಜ್ಞಾನೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಹೇಳಿ ಸಾಧಿಸುವ ವಿವರಗಳನ್ನು ಸಹ ತಿಳಿಸಲಾಗಿದೆ. ಇಂದ್ರಿಯಗಳನ್ನು ನಿಗ್ರಹಮಾಡಿ ಅದರಿಂದ ದೊಡ್ಡಪ್ರಮಾಣದಲ್ಲಿ ಶಕ್ತಿ ನಂಚಯವಾಗುತ್ತದೆ. ಈ ಶಕ್ತಿಯನ್ನು ಬೇರೊಂದು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದಿದ್ದರೆ, ಅದು ಜೀವಿಯ ವ್ಯಕ್ತಿಕ್ವವನ್ನೇ ಕೊಚ್ಚಿಕೊಂಡು ಹೋಗಬಹುದು. ಇದನ್ನು ತಡೆಯುವುದಕ್ಕಾಗಿ ಮತ್ತು ವ್ಯಕ್ತಿಯ ಜೀವನವನ್ನು ಸುಂದರಮಯವನ್ನಾಗಿ ಮಾಡುವುದಕ್ಕಾಗಿ, ಈ ಶಕ್ತಿಯನ್ನು ಹೇಗೆ ವಿನಿಯೋಗಿಸಬೇಕೆಂದು ಶ್ಲೋಕದ ಎರಡನೆಯ ಭಾಗದಲ್ಲಿ ಹೇಳಲಾಗಿದೆ. ಇಂದ್ರಿಯಗಳನ್ನು ನಿಗ್ರಹಿಸಿ, ಅನಾಸಕ್ತನಾಗಿ, ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಬೇಕೆಂಬ ದಾರಿಯನ್ನು ತೋರಿಸಲಾಗಿದೆ. ಇಂತಹ ಕರ್ಮವು ಬಂಧಕರವಲ್ಲ.
ನಾವು ಒಂದು ಕ್ಯಾಮರಾ (ಛಾಯಾಗ್ರಾಹಿ) ಹಿಂದುಗಡೆ ಬಳಿಯ ಕಾಗದವನ್ನಿಟ್ಟೂ ಮುಂದಿನ ಉಬ್ಬಿದ ಕಾಚನ್ನು (ಲೆನ್ಸ್) ಬೆಳಕಿನೆದುರಿಗೆ ತೆರೆಬಿಟ್ಟರೆ ಆ ಕಾಚಿನಲ್ಲಿ ಸಂಗ್ರಹಿಸಲಾಗುವ ಚಿತ್ರಗಳಾವುವೂ ಬಿಳಿಯ ಕಾಗದದ ಮೇಲೆ ಮುದ್ರಿಸಲ್ಪಡುವುದಿಲ್ಲ. ಆದರೆ ನಾವು ಅದೇ ಕಾಗದಕ್ಕೆ ಸೂಕ್ಷ್ಮಗ್ರಾಹಿ ಶಕ್ತಿ ಬರುವಂತೆ ಮಾಡಿದರೆ (seಟಿsiಣiviseಜ) ಆಗ ಮುಂದಿನ ಕಾಚಿನಲ್ಲಿ ಸಂಗ್ರಹಿಸಲ್ಪಡುವ ಚಿತ್ರಗಳೆಲ್ಲವೂ ಆ ಕಾಗದದ ಮೇಲೆ ಮುದ್ರಿತವಾಗುತ್ತವೆ. ಇದರಂತೆಯೇ ಮನಸ್ಸನ್ನು ತಿಳಿಯಬೇಕು. ಮನಸ್ಸು ಇಂದ್ರಿಯಗಳಲ್ಲಿ ಪ್ರವೇಶಿಸಿದರೆ ಕಾಗದಕ್ಕೆ ಸೂಕ್ಷ್ಮಗ್ರಾಹಿ ಶಕ್ತಿಯನ್ನು ಕೊಟ್ಟಂತಾಗಿ, ಇಂದ್ರಿಯಗಳಿಂದುಂಟಾಗುವ ಸಂವೇದನೆಗಳು ಮನಸ್ಸಿನ ಮೇಲೆ ಮುದ್ರಿತವಾಗಿ, ‘ವಾಸನೆಗಳಿಗೆ ಕಾರಣವಾಗುತ್ತವೆ. ಮನಸ್ಸು ಇಂದ್ರಿಯಗಳಲ್ಲಿ ಪ್ರವೇಶಿಸದೆ ಇದ್ದರೆ, ಬಿಳಿಯ ಕಾಗದದ ಮೇಲೆ ಚಿತ್ರಗಳು ಮುದ್ರಿತವಾಗದಂತೆ, ಇಂದ್ರಿಯಗಳಿಂದ ಕರ್ಮ ಮಾಡಿದಾಗ್ಯೂ ‘ವಾಸನೆಗಳಿಗೆ ಆಸ್ಪದವಿಲ್ಲ.

ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ |
ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ || 8 ||
ಅರ್ಥ : ನೀನು ಅವಶ್ಯಕವಾಗಿ ಮಾಡಬೇಕಾದ ಕರ್ಮಗಳನ್ನು ತಪ್ಪದೆ ಮಾಡು ಏಕೆಂದರೆ ಕರ್ಮವನ್ನು ತ್ಯಜಿಸುವುದಕ್ಕಿಂತ ಮಾಡುವುದು ಲೇಸು. ಕರ್ಮಗಳನ್ನು ತ್ಯಜಿಸಿದರೆ ನಿನ್ನ ಶರೀರದ ರಕ್ಷಣೆಯು ಸಹ ಆಗಲಾರದು. ಅದಕ್ಕಾಗಿಯಾದರೂ ನೀನು ಕರ್ಮಮಾಡಲೇ ಬೇಕಾಗುತ್ತದೆ.
ಶ್ರೀಕೃಷ್ಣನು ತನ್ನ ಉಪದೇಶದ ಉದ್ದಕ್ಕೂ, ಮೊದಲು ತಾರ್ಕಿತ ವಾದವನ್ನು ಮಂಡಿಸಿ, ನಂತರ ತೀರ್ಮಾನವನ್ನು ಹೇಳಿದ್ದಾನೆ. ಇಲ್ಲಿ ಸಹ ಇದೇ ಪದ್ಧತಿಯನ್ನುಸರಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನೂ ತನ್ನ ವೈಯಕ್ತಿಕ ಜೀವನ, ಕುಟುಂಬ, ಸಮಾಜ, ಸಂಸ್ಕೃತಿ, ದೇಶ, ಇತ್ಯಾದಿ ವಿವಿಧ ದೃಷ್ಟಿಗಳಿಂದ ಅವಶ್ಯಕವಾಗಿ ಮಾಡಲೇಬೇಕಾದ ಕರ್ಮಗಳನ್ನು ಮಾಡಬೇಕೆಂದು ವಿಧಿಸಲಾಗಿದೆ. ಇದಕ್ಕೆ ಕರ್ತವ್ಯ ಕರ್ಮ’ ಎಂದು ಹೆಸರು. ಈ ಕರ್ಮಗಳನ್ನು ಮಾಡದಿದ್ದರೆ ವ್ಯಕ್ತಿಯು ಅಧೋಗತಿಗಿಳಿಯುವುದರ ಜೊತೆಗೆ ಕುಟುಂಬ, ಸಮಾಜಗಳ ನಾಶಕ್ಕೂ ಕಾರಣವಾಗುತ್ತಾನೆ.

ಎಂತಹ ಕರ್ಮಗಳು ಬಂಧನಕ್ಕೆ ಕಾರಣವಾಗುತ್ತದೆ ?

ಯಜ್ಞಾರ್ಥಾತ್ಕರ್ಮಣೋ„ನ್ಯತ್ರ ಲೋಕೋ„ಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ || 9 ||
ಅರ್ಥ : ಯಜ್ಞ ದೃಷ್ಟಿಯಿಂದಲ್ಲದೆ ಇತರೆ ದೃಷ್ಟಿಯಿಂದ ಮಾಡಿದ ಎಲ್ಲಾ ಕರ್ಮಗಳೂ ಬಂಧಕವಾಗಿವೆ. ಪ್ರಪಂಚದಲ್ಲಿ ಬಹು ಜನರು ಇಂತಹ ಬಂಧನಕರ ಕರ್ಮದಲ್ಲಿ ನಿರತವಾಗಿದ್ದಾರೆಯೇ ಹೊರತು ಯಜ್ಞದಲ್ಲಲ್ಲ. ಆದರೆ ನೀನು ಮಾತ್ರ ಯಜ್ಞ ದೃಷ್ಟಿಯನ್ನಿಟ್ಟುಕೊಂಡು ಸಂಗರಹಿತವಾಗಿ ಕರ್ಮ ಮಾಡು.
ಅಹಂಕಾರದಿಂದ ಯುಕ್ತನಾಗಿ ಫಲಾಪೇಕ್ಷೆಯಿಂದ ಮಾಡಿದ ಕರ್ಮಗಳು ಮಾತ್ರ ಬಂಧನಕ್ಕೆ ಕಾರಣವಾಗುತ್ತವೆ. ಇವುಗಳಿಂದ ವಾಸನೆಗಳ ಹೊರೆಯು ಇನ್ನೂ ಹೆಚ್ಚಾಗುತ್ತದೆ. ಅಹಂಕಾರವಿಲ್ಲದೆ ಫಲಾಪೇಕ್ಷೆಯನ್ನು ತ್ಯಜಿಸಿ ಮಾಡಿದ ಕರ್ಮಗಳಿಂದ ಬಂಧನವಿಲ್ಲ, ವಾಸನೆಯೂ ಇಲ್ಲ. ಇವು ಮನಃಶಾಂತಿಯನ್ನು ಕೊಟ್ಟು ಆತ್ಮಜ್ಞಾನಕ್ಕೆ ಸಹಾಯ ಮಾಡುತ್ತವೆ. ಇಂತಹ ಕರ್ಮಕ್ಕೆ ‘ಯಜ್ಞ’ ಎಂದು ಹೆಸರು. ಯಜ್ಞ ದೃಷ್ಟಿಯಿಂದ ಮಾಡುವ ಕರ್ಮದಲ್ಲಿ ತ್ಯಾಗಬುದ್ಧಿಯಿರುವುದರಿಂದ ಅದು ಬಂಧನಕ್ಕೆ ಕಾರಣವಾಗುವುದಿಲ್ಲ. ಆದುದರಿಂದ ‘ಯಜ್ಞ’ ದೃಷ್ಟಿಯನ್ನಿಟ್ಟುಕೊಂಡು ಕರ್ಮಮಾಡು ಎಂದು ಹೇಳಲಾಗಿದೆ. ವೇದೋಕ್ತ ಕರ್ಮಕಾಂಡಗಳಲ್ಲಿ ಹೇಳಲಾದ ವಿವಿಧ ಯಜ್ಞಗಳಲ್ಲಿ ಸಹ ತ್ಯಾಗ ಹಾಗೂ ಇಂದ್ರಿಯ ನಿಗ್ರಹ ದೃಷ್ಟಿಯಿರುವುದರಿಂದ, ಅವು ಇಚ್ಛಿತ ಫಲಾಪೇಕ್ಷೆಯಿಂದ ಮಾಡಲ್ಪಟ್ಟಾಗ್ಯೂ ತ್ಯಾಗ ಪ್ರಧಾನವಾದುದರಿಂದಲೂ ಮುಂದೆ ಫಲಾಪೇಕ್ಷೆಯನ್ನು ಬಿಟ್ಟು ಕರ್ಮ ಮಾಡಲು ಸಹಾಯವಾಗುವುದರಿಂದಲೂ ಅವುಗಳನ್ನು ‘ಯಜ್ಞ’ ಎಂದು ಕರೆಯಲಾಗಿದೆ.
ಈ ಶ್ಲೋಕದಲ್ಲಿ ‘ಯಜ್ಞ’ ಎಂದುಹೇಳಿರುವಲ್ಲಿ, ವೇದಗಳಲ್ಲಿ ಹೇಳಿರುವ ಯಜ್ಞಗಳು ಎಂದು ಕೆಲವರು ಭಾವಿಸುತ್ತಾರೆ. ಈ ಅರ್ಥದ ಯಜ್ಞದಲ್ಲಿ ವ್ಯಕ್ತಿಯು ತಾನು ವಿಶಿಷ್ಟ ಫಲವನ್ನು ಪಡೆಯುವ ಉದ್ದೇಶದಿಂದ ಕೆಲವು ವಿಧಿ ನಿಯಮ ತ್ಯಾಗಗಳಿಗೆ ಒಳಪಟ್ಟು ನಿಯಮಿತ ಜೀವನವನ್ನು ನಡೆಯಿಸಿ ಈ ಯಜ್ಞವನ್ನೂ ಮಾಡಬೇಕಾಗುತ್ತದೆ. ಇದರಿಂದ ಅವನು ನಿರ್ದಿಷ್ಟ ಫಲವನ್ನು ಭೋಗಿಸಿ ಅಧ್ಯಾತ್ಮ ದೃಷ್ಟಿಯಿಂದ ಮೇಲಕ್ಕೇರುತ್ತಾ ಹೋಗುತ್ತಾನೆ. ಫಲಾಸೆಯಿಂದಲಾದರೂ ಧಾರ್ಮಿಕ ಸಾಧನೆಗಳನ್ನು ಮಾಡಿ, ಅಭಿವೃದ್ಧಿಯನ್ನು ಹೊಂದಿ ಮುಂದೆ ಕ್ರಮೇಣ ಫಲಾಪೇಕ್ಷೆಯನ್ನೂ ತ್ಯಜಿಸಿ ಕರ್ಮಮಾಡುವಂತಾಗಲೀ ಎಂಬ ಉದ್ದೇಶ ಈ ‘ಯಜ್ಞ’ಗಳ ಹಿಂದೆ ಇದ್ದಿರಬೇಕು. ಇನ್ನೂ ಉದಾರಿಗಳು ‘ಯಜ್ಞ’ದ ವ್ಯಾಖ್ಯೆಯನ್ನು ವಿಸ್ತರಿಸಿ, ಗೃಹಸ್ಥನು ಪ್ರತಿನಿತ್ಯವೂ ದೇವಯಜ್ಞ ಪಿತೃಯಜ್ಞ ಬ್ರಹ್ಮಯಜ್ಞ, ಅತಿಥಿಯಜ್ಞ, ಭೂತಯಜ್ಞ ಎಂಬ ಪಂಚ ಮಹಾಯಜ್ಞಗಳನ್ನು ಮಾಡಬೇಕೆಂದು ವಿಧಿಸಿದರು. ಇದರಲ್ಲಿ ನಿರ್ದಿಷ್ಟ ಫಲಾಪೇಕ್ಷೆಯೂ ಇಲ್ಲ. ಕೇವಲ ಕರ್ತವ್ಯ ದೃಷ್ಟಿ ಹಾಗೂ ಧರ್ಮ, ಕುಟುಂಬ, ಸಮಾಜ ಮತ್ತು ಸಂಸ್ಕೃತಿ ಇವುಗಳ ಹಿತದೃಷ್ಟಿಯಿದೆ. ಇಲ್ಲಿ ಇದು ಮೇಲಿನದಕ್ಕಿಂತಲೂ ಉದಾರವಾದುದು. ಆದಾಗ್ಯೂ ಜನರು ಫಲಾಪೇಕ್ಷೆಯನ್ನು ಬಿಟ್ಟು ಕಾರ್ಯಮಾಡುವುದನ್ನು ಕಲಿಯಲಿಲ್ಲವೆಂದು ವೇದವ್ಯಾಸರು ತಿಳಿದು, ಗೀತೆಯ ಮೂಲಕ ಹೊಸಕ್ರಾಂತಿಯನ್ನೆಬ್ಬಿಸಿದ್ದಾರೆ ಯಜ್ಞ ಎಂದರೆ ವೇದೋಕ್ತ ಕರ್ಮಗಳಲ್ಲ. ಇಲ್ಲಿ ಬಾಹ್ಯಕರ್ಮಕ್ಕಿಂತ ಮಾನಸಿಕ ಬೌದ್ಧಿಕ ಯಜ್ಞ ಭಾವನೆ ಮುಖ್ಯ” ಎಂದು ಹೇಳಿ ಇದನ್ನು ಜೀವನದ ಎಲ್ಲಾ ಕರ್ಮಗಳಲ್ಲಿಯೂ ವ್ಯಕ್ತಪಡಿಸಿ, ತನ್ಮೂಲಕ ವಾಸನಾಸಂಗ್ರಹವನ್ನು ಬರಿದು ಮಾಡಿಕೊಂಡು ಹೊಸವಾಸನೆಗಳಿಗೆ ಆಸ್ಪದವುಂಟಾಗದಂತೆ ಕರ್ಮಮಾಡುವ ಕಲೆಯನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಮೇಷ ವೋ„ಸ್ತಿಷ್ಟಕಾಮಧುಕ್ || 10 ||
ಅರ್ಥ : ಪ್ರಜಾಪತಿ ಬ್ರಹ್ಮನು ಪ್ರಪಂಚವನ್ನು ಸೃಷ್ಟಿ ಮಾಡುವಾಗ ಮನುಷ್ಯರನ್ನೂ, ಯಜ್ಞವನ್ನೂ ಒಟ್ಟಿಗೆ ಸೃಷ್ಟಿಮಾಡಿ, ‘ಈ ಯಜ್ಞವು ನಿಮಗೆ (ಮನುಷ್ಯರಿಗೆ) ಇಷ್ಟಾರ್ಥಗಳನ್ನು ಕೊಡುವ ಕಾಮಧೇನುವಾಗಲಿ’ ಎಂದು ಹೇಳಿದನು.
ಪ್ರಪಂಚದಲ್ಲಿ ಎಲ್ಲೆಡೆಗಳಲ್ಲಿಯೂ ಯಜ್ಞ ಅಂದರೆ ತ್ಯಾಗ ಬುದ್ಧಿಯಿಂದ ಕೂಡಿದ, ಫಲಾಪೇಕ್ಷೆಯನ್ನಿಟ್ಟುಕೊಳ್ಳದೆ ಮಾಡುವ ಸತತ ಕರ್ಮವನ್ನೇ ನಾವು ನೋಡುತ್ತಿದ್ದೇವೆ. ಉದಾಹರಣೆ – ಸೂರ್ಯನು ಒಂದು ನಿಮಿಷವೂ ತಪ್ಪದೆ ಸತತವೂ ತನ್ನ ಗತಿಯಲ್ಲಿ ಸಂಚರಿಸುತ್ತಾ ಪ್ರಪಂಚಕ್ಕೆಲ್ಲಾ, ಬೆಳಕನ್ನೂ, ಕಾವನ್ನೂ ಚೇತನವನ್ನೂ ಕೊಡುತ್ತಿದ್ದಾನೆ. ಚಂದ್ರನೂ ಇದೇ ರೀತಿಯಲ್ಲಿ ಸತತವೂ ತನ್ನ ಕರ್ಮದಲ್ಲಿ ನಿರತನಾಗಿದ್ದಾನೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಗಾಳಿಯು ಎಡಬಿಡದೆ ಚಲಿಸುತ್ತಲೇ ಇದೆ. ಹೊಳೆಯು ಸತತವಾಗಿ ಹರಿಯುತ್ತಿದೆ. ಗಿಡಮರಗಳು ಆಹಾರವನ್ನೂ, ನೆರಳನ್ನೂ, ವಸತಿಯನ್ನೂ ಒದಗಿಸುತ್ತವೆ. ಹೀಗೆ ನಮ್ಮ ಸುತ್ತಮುತ್ತಲೂ ಎಲ್ಲಿ ನೋಡಿದರೂ, ಪ್ರಕೃತಿ ಮಾತೆಯ ಮಡಿಲಲ್ಲಿ ಫಲಾಪೇಕ್ಷೆಯಿಲ್ಲದೆ, ಪ್ರಪಂಚಕ್ಕೆ ಹಿತವಾಗಲೆಂಬ ತ್ಯಾಗಬುದ್ಧಿಯಿಂದ ಕೂಡಿದ ಸತತವಾದ ಕರ್ಮವನ್ನೇ ಕಾಣುತ್ತೇವೆ. ಮನುಷ್ಯನು ಸಹ ಈ ರೀತಿಯ ಕರ್ಮವನ್ನು ಮಾಡಿ ಸುಖಪಡಲೆಂದು ಬ್ರಹ್ಮ ನು’ಯಜ್ಞ’ ಎಂಬ ಹೆಸರಿನ ಇಂತಹ ವಿಶಿಷ್ಟ ಕರ್ಮವನ್ನು ಮನುಷ್ಯನ ಹಿತಕ್ಕಾಗಿ ಸೃಷ್ಟಿಸಿದನು.

ದೇವನ್ಬಾವಯತಾನೇನ ತೇ ದೇವಾ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || 11 ||
ಅರ್ಥ : ನೀವು ಈ ಯಜ್ಞದ ಮೂಲಕ ದೇವತೆಗಳನ್ನು ತೃಪ್ತಿಪಡಿಸಿರಿ. ಅದರಿಂದ ಸಂತುಷ್ಟರಾದ ದೇವತೆಗಳು ನಿಮ್ಮನ್ನು ತೃಪ್ತಿಪಡಿಸಲಿ. ಹೀಗೆ ಪರಸ್ಪರ ತೃಪ್ತಿಯನ್ನು ಹೊಂದಿ ನೀವು ಶ್ರೇಯವನ್ನು ಪಡೆಯಿರಿ.
ವೇದದಲ್ಲಿ ಅಸಂಖ್ಯಾತ ದೇವತೆಗಳ ಹೆಸರನ್ನು ಹೇಳಲಾಗಿದೆ. ಪಂಚಭೂತಗಳು, ಚಂದ್ರ, ಸೂರ್ಯ, ನಕ್ಷತ್ರಗಳು, ಇಂದ್ರ, ಪ್ರಜಾಪತಿ, ಮನುಷ್ಯನಲ್ಲಿರುವ ಪ್ರಾಣಾವಾಯು, ಮನಸ್ಸು ಇವು ಕೆಲವು ಉದಾಹರಣೆಗಳು. ಪ್ರಪಂಚದಲ್ಲಿರುವ ಈ ಎಲ್ಲಾ ದೇವತೆಗಳೂ ನಿರ್ದಿಷ್ಟ ಕರ್ಮಗಳನ್ನೂ ಮಾಡಬೇಕಾಗಿದೆ. ಸ್ಥೂಲವಾಗಿ ಹೇಳುವುದಾದರೆ ಈ ಎಲ್ಲಾ ದೇವತೆಗಳೂ ಬೇರೆ ಬೇರೆ ರೂಪದಲ್ಲಿ ಪ್ರಕಟವಾದ ಪರಮಾತ್ಮನ ಶಕ್ತಿಗಳೇ ಆಗಿವೆ. ವೇದೋಕ್ತ ಯಜ್ಞಯಾಗಾದಿಗಳನ್ನು ಮಾಡುವಾಗ ಇಚ್ಛಿತ ಫಲಪ್ರಾಪ್ತಿಗಾಗಿ ನಿರ್ದಿಷ್ಟ ದೇವತೆಯ-ನ್ನು ಆ ಶಕ್ತಿಯನ್ನು, ಆವಾಹನೆ ಮಾಡಿ, ತೃಪ್ತಿಪಡಿಸಬೇಕಾಗಿತ್ತು. ಆ ದೇವತೆಯಿಂದ ಇಚ್ಛಿತ ಫಲವನ್ನು ಪಡೆಯಬೇಕಾಗಿತ್ತು.
ಇದೇ ಭಾವವನ್ನು ಆಧುನಿಕ ದೃಷ್ಟಿಯಿಂದ ಬೇರೊಂದು ರೀತಿಯಲ್ಲಿ ವರ್ಣಿಸಬಹುದು. ನಾವು ಮಾಡುವ ವಿವಿಧ ಕರ್ಮಗಳಲ್ಲಿ ಆಯಾಯಾ ಕರ್ಮಗಳು ಸುಗಮವಾಗಿ ಯಶಸ್ವಿಯಾಗಿ ಸಾಗಿ, ಅವು ಫಲದಾಯಕವಾಗುವಂತೆ ಆಶೀರ್ವದಿಸುವ ಶಕ್ತಿಗೆ ಆ ಕರ್ಮದ ದೇವತೆ ಎಂದು ಹೆಸರು. ಕರ್ಮವನ್ನು ಅನುಗ್ರಹಿಸುವ ‘ದೇವತೆ’ ಎಂದರೆ ಮನುಷ್ಯನಲ್ಲಿ ಕರ್ಮಮಾಡುವ ಬಗ್ಗೆ ಇರುವ ಕೌಶಲ್ಯ, ಸಾಮಥ್ರ್ಯ ಹಾಗೂ ಬುದ್ಧಿವಂತಿಕೆಯಾಗಿದೆ. ನಾವು ಮಾಡುವ ಕರ್ಮದಲ್ಲಿ ನಮ್ಮ ಸಂಪೂರ್ಣ ಶಕ್ತಿಯನ್ನೂ, ಬುದ್ಧಿವಂತಿಕೆಯನ್ನೂ ವಿಧಿವತ್ತಾಗಿ ವಿನಿಯೋಗಿಸಿದರೆ ನಾವು ಈ ‘ದೇವತೆ’ ಯನ್ನೂ ಜಾಗೃತಗೊಳಿಸಿದಂತಾಗಿ, ಆವಾಹನೆ ಮಾಡಿದಂತಾಗಿ ಅರ್ಚನೆ ಮಾಡಿದಂತಾಗಿ ನಮಗೆ ಆ ದೇವತೆಯು ಇಚ್ಛಿತ ಫಲವನ್ನು ಕೊಟ್ಟೇಕೊಡುತ್ತದೆ. ಅವ್ಯಕ್ತವಾಗಿರುವ ಈ ಕಾರ್ಯಶಕ್ತಿಯನ್ನೂ, ದಕ್ಷತೆಯನ್ನು, ಜಾಗೃತಗೊಳಿಸುವುದು ಆ ದೇವತೆಯನ್ನೂ ಆವಾಹನೆ ಮಾಡಿದಂತೆಯೇ ಸರಿ. ಆ ಶಕ್ತಿಯನ್ನು ವಿನಿಯೋಗಿಸಿ ಕರ್ಮಮಾಡುವುದು ದೇವತೆಯನ್ನು ಯಜ್ಞದಿಂದ ತೃಪ್ತಿಪಡಿಸಿದಂತೆ. ಹೀಗೆ ತೃಪ್ತಿಯನ್ನು ಹೊಂದಿದ ದೇವತೆಯು ನಮಗೆ ಇಚ್ಛಿತ ಫಲವನ್ನು ಕೊಟ್ಟೇಕೊಡುತ್ತದೆ. ದೇವತೆ ಎಂಬ ಶಬ್ದಕ್ಕೆ ಈ ಅರ್ಥವನ್ನಿಟ್ಟುಕೊಂಡರೆ, ಮೊದಲಿನ ಅರ್ಥಕ್ಕೆ ಭಾಧಕವೇನೂ ಇಲ್ಲ. ಜೊತೆಗೆ ಮೇಲಿನ ಶ್ಲೋಕವು ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇಷ್ಟಾನ್ ಭೋಗಾನ್ಹಿವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ |
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ || 12 ||
ಅರ್ಥ : ಯಜ್ಞ ದೃಷ್ಟಿಯಿಂದ ಮಾಡಿದ ಕರ್ಮಗಳಿಂದ ತೃಪ್ತರಾದ ದೇವತೆಗಳು, ನಾವು ಅಪೇಕ್ಷಿಸಿದ (ನಾವು ಮಾಡಿದ ಕರ್ಮದ ಮೂಲಕ) ಭೋಗವಸ್ತುಗಳನ್ನು ಕೊಡುತ್ತಾರೆ. ಹೀಗೆ ಅವರು ಕೊಟ್ಟು ಭೋಗವಸ್ತುಗಳನ್ನು ಬೇರೆಯವರಿಗೆ, ಮತ್ತು ಪುನಃ ದೇವತೆಗಳಿಗೆ ಕೊಡದೆ ತಾನು ಮಾತ್ರ ಅನುಭವಿಸುವವನು ಶುದ್ಧಕಳ್ಳನೇ ಸರಿ.
ಯಜ್ಞದೃಷ್ಟಿಯಿಂದ ಮಾಡಿದ ಕರ್ಮದಲ್ಲಿ ಅಧಿಷ್ಟಿತವಾದ ದೇವತೆಯು ನಾವು ಮಾಡಿದ ಕರ್ಮದ ದಕ್ಷತೆಯಿಂದ ತೃಪ್ತಿಹೊಂದಿದರೆ ನಮ್ಮ ಕರ್ಮಕ್ಕೆ ಅನುಗುಣವಾದ ಫಲವು ಲಭಿಸುತ್ತದೆ. ನಾವು ಮಾಡುವ ಎಲ್ಲಿ ಕರ್ಮಗಳಲ್ಲಿಯೂ ಹಲವಾರು ಜನರ ಸಹಕಾರವಿರುವುದರಿಂದ. ನಮಗೆ ಹೀಗೆ ಲಭಿಸಿದ ಫಲವನ್ನು ಅವರೆಲ್ಲರಿಗೂ ಹಂಚದೆ, “ಅದಕ್ಕೆ ನಾನೊಬ್ಬನೇ ಅಧಿಕಾರಿ ನನ್ನ ಕರ್ಮದಕ್ಷತೆಯಿಂದ ಈ ಫಲ ನನಗೆ ಸಿಕ್ಕಿತು ಎಂದು ಭಾವಿಸಿ, ತಾನೊಬ್ಬನೇ ಅನುಭವಿಸಿದರೆ ಅದು ಸಮಾಜಕ್ಕೆ ಮಾಡಿದ ದ್ರೋಹ ಎಂಬುದನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ತನಗೆ ಲಭಿಸಿದ ಸಂಪತ್ತು ಹಾಗೂ ಭೋಗಗಳನ್ನೂ ಇತರರೊಡನೆ ಹಂಚಿಕೊಂಡು ತಾನೂ ಭೋಗಿಸಿದರೆ ಮಾತ್ರ ದೇವತೆಗಳು ತೃಪ್ತಿಯನ್ನೂ ಹೊಂದುತ್ತಾರೆ.

ಯಜ್ಞಶಿಷ್ಟಾಶಿವಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಜಂತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್ || 13 ||
ಅರ್ಥ : ಯಜ್ಞ ದೃಷ್ಟಿಯಿಂದ ಕರ್ಮಮಾಡಿ, ಉಳಿದುದನ್ನು ಭೋಗಿಸುವ ಸಂತರು ಎಲ್ಲಾ ಪಾಪಗಳಿಂದಲೂ ಮುಕ್ತರಾಗುತ್ತಾರೆ. ಇದನ್ನು ಬಿಟ್ಟು ಕೇವಲ ತಮ್ಮ ಸುಖಭೋಗಕ್ಕಾಗಿಯೇ ಕರ್ಮವನ್ನು ಮಾಡುವವರು (ಕೇವಲ ತಮಗಾಗಿಯೇ ಆಹಾರವನ್ನು ಬೇಯಿಸುವವರು) ಪಾಪವನ್ನೇ ಭೋಗಿಸುತ್ತಾರೆ.
‘ಯಜ್ಞ’ ದೃಷ್ಟಿಯಿಂದ ಕರ್ಮಮಾಡಿದವರು ಯಾವ ಫಲವನ್ನು ಅನುಭವಿಸುತ್ತಾರೆ ಮತ್ತು ಈ ದೃಷ್ಟಿಯಿಲ್ಲದೆ ಕೇವಲ ಸ್ವಾರ್ಥಕ್ಕಾಗಿ ಕರ್ಮಮಾಡಿದವರು ಯಾವ ಫಲವನ್ನು ಅನುಭವಿಸುತ್ತಾರೆ ಎಂಬುದನ್ನು ಇಲ್ಲಿ ತುಲನಾತ್ಮಕವಾಗಿ ವಿವರಿಸಲಾಗಿದೆ. ಮೊದಲನೆಯ ಗುಂಪಿನವರು ತ್ಯಾಗ ಬುದ್ಧಿಯನ್ನಿಟ್ಟೂಕೊಂಡು ತಮ್ಮ ಶಕ್ತಿಯನ್ನೂ ವಿನಿಯೋಗಿಸಿ ಕರ್ಮಮಾಡಿ, ಲಭಿಸಿದ ಫಲವನ್ನು ಸಂಬಂಧಪಟ್ಟವರೊಡನೆ ಹಾಗೂ ಸಮಾಜದೊಡನೆ ಹಂಚಿಕೊಂಡು ಉಳಿದುದನ್ನು ತಾವು ಭೋಗಿಸಿ ಎಲ್ಲಾ ಪಾಪಗಳಿಂದಲೂ ಮುಕ್ತರಾಗುತ್ತಾರೆ. ಇದಕ್ಕೆ ವಿರುದ್ಧವಾಗಿ ಸ್ವಾರ್ಥಬುದ್ಧಿಯಿಂದ ಕರ್ಮಮಾಡುವವರು, ತಮ್ಮ ಬೌದ್ಧಿಕ ಇಲ್ಲವೆ ಸಾಮಾಜಿಕ ಸ್ಥಾನಮಾನದಿಂದಾಗಿ ಇತರೆ ಜನರ ಮೂಲಕ, ಅವರ ಸಹಕಾರದಿಂದ ಕರ್ಮವನ್ನು ಮಾಡಿ ಬಂದ ಫಲವನ್ನು ತಾವೇ ಭೋಗಿಸುವುದರಿಂದ ಅವರು ಉಣ್ಣುವುದು, ಭೋಗಿಸುವುದು, ಪಾಪವನ್ನೇ. ಇಂತಹ ಕರ್ಮವು ಲೇಪಕ್ಕೆ ಕಾರಣವಾಗಿ ಬಂಧನಕರವಾಗಿದೆ.

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಬವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಬವಃ || 14 ||
ಅರ್ಥ : ಜೀವಿಗಳು ಅನ್ನದಿಂದ ಬದುಕುತ್ತವೆ. ಅನ್ನ ಬೆಳೆಯುವುದು ಮಳೆಯಿಂದ ಮಳೆ ಬರುವುದು ಯಜ್ಞದಿಂದ, ಯಜ್ಞವು ಆಗುವುದು ಕರ್ಮದಿಂದ.

ಕರ್ಮ ಬ್ರಹ್ಮೋದ್ಬವಂ ವಿದ್ಧಿಬ್ರಹ್ಮಾಕ್ಷರಸಮುದ್ಬವಮ್ |
ತಸ್ಮಾತ್ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ || 15 ||
ಅರ್ಥ : ಕರ್ಮವು ಬ್ರಹ್ಮನಿಂದ ಹುಟ್ಟಿದೆ. ಬ್ರಹ್ಮನು ನಾಶವಿಲ್ಲದ ಪರಮಾತ್ಮನಿಂದ ಹುಟ್ಟಿದ್ದಾನೆ. ಆದುದರಿಂದ ಎಲ್ಲಾ ಕಡೆಗೂ ವ್ಯಾಪಿಸಿರುವ ಪರಮಾತ್ಮನು ಯಜ್ಞದಲ್ಲಿ (ಯಜ್ಞಭಾವದ ಕರ್ಮದಲ್ಲಿ) ಯಾವಾಗಲೂ ನೆಲೆಸಿರುತ್ತಾನೆ ಪ್ರಪಂಚದಲ್ಲಿ ಕರ್ಮ ಚಕ್ರದ ಹಲ್ಲುಗಳು ಹೇಗೆ ತಿರುಗುತ್ತವೆ ಮತ್ತು ಹೇಗೆ ಒಂದಕ್ಕೊಂದು ಸಂಬಂಧಿಸಿವೆ ಎಂಬುದನ್ನು ಇಲ್ಲಿ ಕಾಣಬಹುದು. ನಾವು ಮಾಡುವ ಕರ್ಮವನ್ನು ಲೋಕಹಿತ ದೃಷ್ಟಿಯಿಂದ ತ್ಯಾಗ ಬುದ್ಧಿಯಿಂದ, ಮತ್ತು ಬುದ್ಧಿವಂತಿಕೆಯಿಂದ ಮಾಡಿದರೆ ‘ಮಳೆ’ ಯಿಂದಾಗುವ ಫಲವನ್ನು ಪಡೆಯಬಹುದು. ಉದಾಹರಣೆ – ಹೊಳೆಗೆ ಆಣೆಕಟ್ಟನ್ನು ಕಟ್ಟಿ ಆ ನೀರನ್ನು ಹಾಯಿಸಿಕೊಂಡು ಪೈರನ್ನು ಬೆಳೆಯಬಹುದು.
ಈ ಕರ್ಮಚಕ್ರವನ್ನು ಹೊಂದಿಕೊಂಡು ನಡೆಯುವವನು ಜೀವನದ ಸೌಂದರ್ಯವನ್ನು ಹೆಚ್ಚಿಸುತ್ತಾನೆ.

ಅದಕ್ಕೆ ವಿರುದ್ಧವಾಗಿ ಕರ್ಮ ಮಾಡುವವನ ಗತಿ ಏನು ?

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ |
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿಃ || 16 ||
ಅರ್ಥ : ಹೀಗೆ ತಿರುಗುತ್ತಿರುವ ಕರ್ಮಚಕ್ರಕ್ಕೆ ಅನುಗುಣವಾಗಿ ನಡೆಯದೆ ಇಂದ್ರಿಯ ಸುಖಗಳಲ್ಲಿಯೇ ಮಗ್ನನಾಗಿರುವವನು. ಏ, ಪಾರ್ಥನೇ, ಜೀವಿಸಿರುವುದು ವ್ಯರ್ಥವು. ಅವನು ಮಹಾಪಾಪಿಯೇ ಸರಿ.
ಸೃಷ್ಟಿಯಲ್ಲಿ ಮನುಷ್ಯನನ್ನು ಳಿದು ಮನುಷ್ಯನನ್ನುಳಿದು ಖನಿಜ ವರ್ಗ, ಸಸ್ಯವರ್ಗ ಮತ್ತು ಎಲ್ಲಾ ಪ್ರಾಣಿವರ್ಗಗಳೂ ಪ್ರಕೃತಿಯ ನಿಯಮಕ್ಕನುಸಾರವಾಗಿ ನಡೆಯುತ್ತಾ ಕರ್ಮಚಕ್ರದ ಚಲನೆಗೆ ಸಹಾಯ ಮಾಡುತ್ತವೆ. ಆದರೆ ಮನುಷ್ಯನಿಗ ಮಾತ್ರ ಇದಕ್ಕೆ ಅನುಗುಣವಾಗಿ ಇಲ್ಲವೇ ವಿರೋಧವಾಗಿ ವರ್ತಿಸುವ ಸ್ವಾತಂತ್ರ್ಯವಿದೆ. ಮನುಷ್ಯರಲ್ಲಿ ಬಹುಜನರು ಈ ಕರ್ಮಚಕ್ರಕ್ಕೆ ಪೆÇೀಷಕವಾಗುವಂತೆ ವರ್ತಿಸುತ್ತಿದ್ದ ಕಾಲದಲ್ಲಿ ಅದನ್ನು ಸುವರ್ಣಯುಗ’ ಎಂದು ಕರೆಯಲಾಗುತ್ತಿತ್ತು. ಪ್ರಪಂಚದಲ್ಲಿ ಶಾಂತಿಯೂ, ಕ್ಷೇಮವೂ ನೆಲೆಸಿದ್ದಿತು. ಆದರೆ ಇದೇ ರೀತಿಯಾವಾಗಲೂ ವರ್ತಿಸುತ್ತಿರಲು ಮನುಷ್ಯನಿಗೆ ಸಾಧ್ಯವಾಗಲಿಲ್ಲ. ಅವನು ಪ್ರಪಂಚದ ಈ ನಿಯಮವನ್ನು ಉಲ್ಲಂಘಿಸಿ ತನ್ನ ಶಕ್ತಿ ಸಾಮಥ್ರ್ಯಗಳನ್ನು ನಂಬಿ ಸ್ವೇಚ್ಛೆಯಾಗಿ ವರ್ತಿಸಲು ಪ್ರಾರಂಭಿಸಿದನು. ಬಹು ಜನರು ಹೀಗೆ ಮಾಡಿದಾಗ ಅದು “ಕತ್ತಲೆಯ ಯುಗ” ಏಕೆಂದರೆ ಸಮಾಜದ ಬಹುದೊಡ್ಡ ಘಟಕಗಳಾದ ಈ ಬಹುಜನರು ಇಂದ್ರಿಯ ಭೋಗಗಳಲ್ಲಿ ನಿರತರಾಗಿ ಸಮಾಜದ ನಿಯಮಗಳನ್ನುಲ್ಲಂಘಿಸಿ ಅಶಾಂತಿಯನ್ನುಂಟು ಮಾಡಿ ಕರ್ಮಚಕ್ರವು ಸರಿಯಾಗಿ ಕೆಲಸಮಾಡದಂತೆ ವಿಘ್ನವನ್ನುಂಟು ಮಾಡುತ್ತಾರೆ.

ಜ್ಞಾನಿಗೆ ಕರ್ಮಮಾಡುವುದರಲ್ಲಿಯೇ ಆನಂದ

ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ |
ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ || 17 ||
ಅರ್ಥ : ಯಾವನು ಆತ್ಮಧ್ಯಾನದಲ್ಲಿಯೇ ಮಗ್ನನಾಗಿದ್ದು, ಅದರಲ್ಲಿಯೇ ತೃಪ್ತಿಯನ್ನು ಹೊಂದಿ ಸಂತುಷ್ಟನಾಗಿರುತ್ತಾನೋ, ಅಂತಹ ಮನುಷ್ಯನು ಇನ್ನು ಮುಂದೆ ಮಾಡಬೇಕಾದುದೇನೂ (ಕರ್ಮ) ಇಲ್ಲ (ತೃಪ್ತಿ-ಆಸೆ ಕೈಗೂಡಿರುವುದು ಸಂತುಷ್ಟತೆ ಹೊಸ ಆಸೆಗಳುಂಟಾಗದೆ ತೃಪ್ತನಾಗಿರುವುದು)
ಯಜ್ಞಭಾವದಿಂದ ಕರ್ಮ ಮಾಡಿದರೆ ಆ ವ್ಯಕ್ತಿಯ ಮನಸ್ಸು ಶುದ್ಧವಾಗಿ, ಧ್ಯಾನದಲ್ಲಿ ಏಕಾಗ್ರತೆಯು ದೊರೆಯುತ್ತದೆ, ಮತ್ತು ಆತನು ಅಹಂಕಾರವನ್ನು ದಾಟಿ ಆತ್ಮಜ್ಞಾನವನ್ನು ಪಡೆಯಲು ಅರ್ಹನಾಗುತ್ತಾನೆ, ತನಗೆ ಲಭಿಸಿದ ಆನಂದದಿಂದ ಸಂತುಷ್ಟನಾಗಿರುತ್ತಾನೆ. ಇಂತಹ ಮನುಷ್ಯನು ವ್ಯವಹಾರದಲ್ಲಿ ಮಾಡುವ ಕರ್ಮಗಳಿಂದ ಹೊಸದಾಗಿ ಸಾಧಿಸಬೇಕಾದುದೇನೂ ಇಲ್ಲ. ಅವನು ತನ್ನ ನಿತ್ಯದ ಕರ್ಮಗಳನ್ನು ಮಾಡುವುದರಲ್ಲಿಯೇ ಆತ್ಮಾನಂದವನ್ನು ಅನುಭವಿಸುತ್ತಾನೆ.

ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ |
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ || 18 ||
ಅರ್ಥ : ಇಂತಹ ಸಿದ್ಧಪುರುಷನು ಕರ್ಮಮಾಡಿ ಗಳಿಸಬೇಕಾದುದೇನೂ ಇಲ್ಲ. ಕರ್ಮ ಮಾಡದೆ ಕಳೆದುಕೊಳ್ಳುವುದೇನೂ ಇಲ್ಲ. ಇವನು ತನ್ನ ಜೀವನ ನಿರ್ವಹಣಕ್ಕಾಗಿ ಯಾರ ಮೇಲೂ ಅವಲಂಬಿಸುವುದೂ ಇಲ್ಲ.
ವ್ಯವಹಾರದಲ್ಲಿ ಸಾಮಾನ್ಯ ಮನುಷ್ಯನು, ತಾನು ನಿರ್ದಿಷ್ಟ ಲಾಭವನ್ನು ಪಡೆಯಬೇಕೆಂಬ ಆಸೆಯಿಂದ, ಇಲ್ಲವೆ ಕರ್ಮ ಮಾಡದೆ ಇದ್ದರೆ ತನಗೆ ನಷ್ಟವಾಗುತ್ತದೆಂಬ ಭೀತಿಯಿಂದ ಕೂಡಿ ಕರ್ಮಮಾಡುತ್ತಾನೆ. ಆತ್ಮಾನಂದದಲ್ಲಿರುವವನಿಗೆ ಆಸೆಯೂ ಇಲ್ಲ. ಭೀತಿಯೂ ಇಲ್ಲ. ಆತ್ಮಾನಂದವನ್ನೂ ಗಳಿಸುವುದಕ್ಕೆ ಇಲ್ಲವೇ ಉಳಿಸಿಕೊಳ್ಳುವುದಕ್ಕೆ ಅವನು ಬೇರೆ ಯಾರನ್ನು ಅವಲಂಬಿಸಿರದೆ ತನ್ನ ಸಾಧನೆ ಹಾಗೂ ಸಾಮಥ್ರ್ಯಗಳನ್ನೇ ಅವಲಂಬಿಸಿರುತ್ತಾನೆ.

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ |
ಆಸಕ್ತೋ ಹ್ಯಾಚರನ್ಕರ್ಮ ಪರಮಾಪೆÇ್ನೀತಿ ಪೂರುಷಃ|| 19 ||
ಅರ್ಥ : ಆದುದರಿಂದ ನೀನು ಮಾಡಬೇಕಾದ ಎಲ್ಲಾ ಕರ್ಮಗಳನ್ನೂ “ನನ್ನದು, ನಾನು ಮಾಡುತ್ತೇನೆ ‘ಎಂಬ ಆಸಕ್ತಿಯನ್ನಿಟ್ಟುಕೊಳ್ಳದೆ ಮಾಡು. ಏಕೆಂದರೆ ಆಸಕ್ತಿಯನ್ನು ಇಟ್ಟುಕೊಳ್ಳದೆ ಕರ್ಮ ಮಾಡಿದರೆ ನೀನು ಪರಮ ಪದವಿಯನ್ನು ಸೇರುತ್ತೀಯೆ.
ಮನುಷ್ಯನು ವ್ಯವಹಾರದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕಾಗಿ ಕುಟುಂಬ, ಸಮಾಜ, ದೇಶ, ಸಂಸ್ಕೃತಿ, ಆತ್ಮಸಾಧನೆ ಇತ್ಯಾದಿ ದೃಷ್ಟಿಯಿಂದ ಕೆಲವು ಮಾಡಲೇಬೇಕಾದ ಕರ್ಮಗಳಿವೆ. ಈ ಕರ್ಮಗಳನ್ನು ಸಹ ಫಲಾಶೆಯನ್ನಿಟ್ಟುಕೊಳ್ಳದೆ ಅನಾಸಕ್ತಿಯಿಂದ ಮಾಡಬೇಕೆಂದು. ತೀರ್ಮಾನ ರೂಪದಲ್ಲಿ ತಿಳಿಸಲಾಗಿದೆ. ಇಲ್ಲಿಯವರೆಗೆ ಮಾಮೂಲಿನಂತೆ ಕೃಷ್ಣನು ತರ್ಕಬದ್ಧವಾಗಿ ವಿಷಯವನ್ನು ವಿವೇಚಿಸಿ, ಈಗ ತನ್ನ ತೀರ್ಮಾನವನ್ನು ಹೇಳಿದ್ದಾನೆ.

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ |
ಲೋಕಸಂಗ್ರಹಮೇವಾಪಿ ಸಂಪಶ್ಯನ್ಕರ್ತುಮರ್ಹಸಿ || 20 ||
ಅರ್ಥ : ಜನಕ ಅಶ್ವಪತಿ ಮೊದಲಾದ ರಾಜರ್ಷಿಗಳು ಈ ರೀತಿಯಾಗಿ ಕರ್ಮಮಾಡುವುದರಿಂದಲೇ ಸಿದ್ಧಿಯನ್ನು ಪಡೆದರು. ಪ್ರಪಂಚದಲ್ಲಿ ಬಹುಜನರ ಹಿತಕ್ಕಾಗಿಯಾದರೂ (ಲೋಕಸಂಗ್ರಹ) ನೀನು ಈ ರೀತಿಯಲ್ಲಿ ಕರ್ಮಮಾಡಬೇಕು.

ಪ್ರಪಂಚದ ಹಿತವನ್ನು ಸಾಧಿಸುವವರಾರು ?

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ || 21 ||
ಅರ್ಥ : ಸಮಾಜದಲ್ಲಿ ಹಾಗೂ ದೇಶದಲ್ಲಿ ಮುಖಂಡರಾದವರು, ಹಾಗೂ ಶ್ರೇಷ್ಠರಾದವರು, ಯಾವ ರೀತಿಯ ಆಚರಣೆಯನ್ನಿಟ್ಟುಕೊಳ್ಳುತ್ತಾರೋ, ಇತರೆ ಜನರು ಸಹ, ಅದೇ ರೀತಿ ಅನುಸರಿಸುತ್ತಾರೆ. ಅವರು ಪ್ರತಿಪಾದಿಸುವ ಸಿದ್ಧಾಂತವನ್ನು ಸಾಮಾನ್ಯ ಜನರೆಲ್ಲರೂ ಒಪ್ಪುತ್ತಾರೆ. ಹಾಗೂ ಅನುಸರಿಸುತ್ತಾರೆ.
ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಆಚರಣೆ ಮತ್ತು ಸಿದ್ಧಾಂತಗಳನ್ನು ಅವರ ಅನುಯಾಯಿಗಳು, ಅನುಸರಿಸುತ್ತಿರುವುದನ್ನು ಕಾಣಬಹುದು. ಇದು ಮೊದಲನಿಂದಲೂ ನಡೆದು ಬಂದಿದೆ. ಆದುದರಿದ ಸಮಾಜದ ಹಿರಿಯರು, ಮುಖಂಡರು, ಜನರ ಆಚರಣೆಯನ್ನು ತಿದ್ದಬೇಕಾದರೆ, ಮೊಟ್ಟಮೊದಲು ತಮ್ಮ ಆಚರಣೆಯನ್ನು ಶುದ್ಧವಾಗಿಟ್ಟುಕೊಂಡು, ಸಾಮಾನ್ಯ ಜನರಿಗೆ ಮೇಲ್ಪಂಗ್ತಿಯನ್ನು ಹಾಕಿಕೊಡಬೇಕು.
ಈ ದೃಷ್ಟಿಯಿಂದ ಕೃಷ್ಣನು ತನ್ನ ಉದಾಹರಣೆಯನ್ನು ಹೇಳುತ್ತಾನೆ.

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತಏವ ಚ ಕರ್ಮಣಿ || 22 ||
ಅರ್ಥ : ಪಾರ್ಥನೇ! ಈ ಮೂರು ಲೋಕಗಳಲ್ಲಿ (ಭೂಲೋಕ, ಸ್ವರ್ಗಲೋಕ ಮತ್ತು ಪಾತಾಳ ಲೋಕ), ನಾನು ಕರ್ಮಮಾಡಿ ನನ್ನಲ್ಲಿಲ್ಲದ ಹೊಸದಾಗಿ ಗಳಿಸಬೇಕಾದ ವಸ್ತುವು ಯಾವುದೂ ಇಲ್ಲ . ಆದಾಗ್ಯೂ ನಾನು ಮಾತ್ರ ಯಾವಾಗಲೂ ಕರ್ಮದಲ್ಲಿ ನಿರತನಾಗಿಯೇ ಇದ್ದೇನೆ.
ಶ್ರೀಕೃಷ್ಣನ ಜೀವನವನ್ನು ನೋಡಿದರೆ, ಅವನು ಬಾಲ್ಯಾವಸ್ಥೆಯಿಂದಲೂ ಅಲಿಪ್ತನಾಗಿರುವುದು ಕಂಡುಬರುತ್ತದೆ. ಹುಟ್ಟಿದ ಕೂಡಲೇ ಹಡೆದ ತಂದೆ ತಾಯಿಗಳನ್ನೂ ಬಿಟ್ಟು, ಗೋಕುಲದಲ್ಲಿ ಸಾಕು ತಂದೆ ತಾಯಿಗಳ ಹತ್ತಿರ ಬೆಳೆದನು. ನಂತರ ಗೋಕುಲವನ್ನು ಬಿಟ್ಟು ವೃಂದಾವನಕ್ಕೆ ಹೋದನು. ಅಲ್ಲಿ ಗೋಪಿಕಾಸ್ತ್ರೀಯರ ಮಧ್ಯದಲ್ಲಿದ್ದಾಗ, ಕರ್ತವ್ಯದ ಕರೆಯನ್ನು ಆಲಿಸಿ, ಕೂಡಲೆ ಗೋಪಿಕಾಸ್ತ್ರೀಯರು ಗೋವುಗಳ ಹಿಂಡು, ಗೋಪಾ¯ರ ಗುಂಪು, ಕೊಳಲಿನ ಮಧುರ ಸಂಗೀತ ಇವೆಲ್ಲವನ್ನೂ ಬಿಟ್ಟು ಮಧುರೆಗೆ ಹೋಗಿ ಕಂಸನನ್ನು ಕೊಂದು ಆ ರಾಜ್ಯವನ್ನು ಗೆದ್ದನು. ಈಗ ತನ್ನದಾದ ಆ ರಾಜ್ಯವನ್ನು ಉಗ್ರಸೇನನಿಗೆ ಕೊಟ್ಟು ತಾನು ದ್ವಾರಕೆಗೆ ಹೋದನು. ಈ ಹಾಳು ಬಿದ್ದ ಪ್ರದೇಶದಲ್ಲಿ ಹೊಸರಾಜ್ಯವನ್ನು ಕಟ್ಟಿ, ಅದು ಉತ್ಕರ್ಷಾವಸ್ಥೆಗೆ ಬಂದಾಗ ಸಂಪೂರ್ಣ ರಾಜ್ಯವನ್ನು ತನ್ನ ಕುಲದವರಾದ ವೃಷ್ಣಿಗಳಿಗೆ ಕೊಟ್ಟು ಅವನು ಹಸ್ತಿನಾಪುರಕ್ಕೆ ಬಂದನು. ಅವನು ಸತತವೂ ನಿರ್ಲಪ್ತನಾಗಿ ಕರ್ಮಮಾಡುತ್ತಲೇ ಬಂದಿದ್ದಾನೆ.

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ |
ಮಮ ವತ್ರ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || 23 ||
ಅರ್ಥ : ಒಂದು ವೇಳೆ ನಾನು ಈ ರೀತಿಯಾಗಿ ಸತತವೂ ಕರ್ಮ ಮಾಡದಿದ್ದರೆ ಪಾರ್ಥನೇ ಮನುಷ್ಯರು ನನ್ನನ್ನೇ ಅನುಸರಿಸಿ ಕರ್ಮವನ್ನು ತ್ಯಜಿಸಿಯಾರು .
ನಾನು ಕರ್ಮವನ್ನು ತ್ಯಜಿಸಿದರೆ ಏನಾಗುತ್ತದೆ ?

ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ |
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ || 24 ||
ಅರ್ಥ : ನಾನು ಕರ್ಮವನ್ನು ಮಾಡದಿದ್ದರೆ ಈ ಪ್ರಪಂಚಗಳು ನಾಶವಾದವು. ಜಾತಿ ಸಂಕರಕ್ಕೂ ಮತ್ತು ಎಲ್ಲಾ ಪ್ರಜೆಗಳ ನಾಶಕ್ಕೂ ನಾನೇ ಕಾರಣನಾದೇನು.
ಪ್ರಪಂಚದ ಎಲ್ಲಾ ಕಡೆಯಲ್ಲಿಯೂ ಪ್ರಕೃತಿಯ ಕಾರ್ಯಗಳು ವಿಧಿಬದ್ಧವಾಗಿ ನಿರ್ದಿಷ್ಟ ನಿಯಮದಂತೆ ನಡೆಯುತ್ತಿವೆ. ಪ್ರಪಂಚದ ವಿವಿಧ ಆಗು ಹೋಗುಗಳು, ಗ್ರಹಗಳ ಚಲನವಲನಾದಿಗಳು, ಕಾಲಕ್ಕೆ ಸರಿಯಾಗಿ ಋತುಗಳ ಆಗಮನ ನಿರ್ಗಮನ, ಇತ್ಯಾದಿಗಳೆಲ್ಲವೂ ಕ್ಲುಪ್ತ ನಿಯಮದಂತೆ ಚಲಿಸುತ್ತಿವೆ. ಪರಮಾತ್ಮನು ಕರ್ಮಮಾಡದೆ ಆಲಿಸಿಯಾದರೆ ಈ ಕಾರ್ಯಗಳೆಲ್ಲವೂ ನಿಂತು ಪ್ರಪಂಚವು ಗೊಂದಲಮಯವಾಗುತ್ತದೆಂದೂ, ಹಾಗಾಗಬಾರದೆಂದು ತಾನು ಸತತವೂ ಕರ್ಮದಲ್ಲಿ ನಿರತನಾಗಿದ್ದೇನೆಂದು, ಶ್ರೀಕೃಷ್ಣನು ಹೇಳಿದ್ದಾನೆ.

ಸಿದ್ಧಾವಸ್ಥೆಯನ್ನು ತಲ್ಪಿದ ಮನುಷ್ಯನು ಹೇಗೆ ಕರ್ಮ ಮಾಡಬೇಕು ?

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ |
ಕುರ್ಯಾದ್ವಿದ್ವಾಂಸ್ತಥಾಸಕ್ತಶ್ಚಿಕೀರ್ಷುರ್ಲೋಕಸಂಗ್ರಹಮ್ || 25 ||
ಅರ್ಥ : ಭಾರತನೇ, ಅಜ್ಞಾನಿಯು ಯಾವ ರೀತಿಯಲ್ಲಿ ಆಸಕ್ತಿಯಿಂದ ಕರ್ಮದಲ್ಲಿ ನಿರತನಾಗಿರುತ್ತಾನೋ, ಅದೇ ರೀತಿಯಲ್ಲಿ ಜ್ಞಾನಿಯು ನಿರಾಸಕ್ತನಾಗಿ ಕರ್ಮದಲ್ಲಿ ನಿರತನಾಗಿರಬೇಕು.
ಪ್ರಪಂಚದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬನೂ ತನ್ನ ತನ್ನ ಜೀವನ ನಿರ್ವಹಣ, ಸ್ಥಾನಮಾನ ಇತ್ಯಾದಿಗಳ ಸಾಧನೆಗಾಗಿ ಸತತವೂ ಕರ್ಮದಲ್ಲಿ ಉದ್ಯುಕ್ತನಾಗುತ್ತಾನೆ. ಅವನು ಇನ್ನೂ ಹೆಚ್ಚು ಸುಖಸಾಧನೆಗಳನ್ನೂ ಐಶ್ವರ್ಯವನ್ನೂ ಸಂಪಾದಿಸಬೇಕೆಂಬ ಬಲವಾದ ಆಸೆಯಿಂದ ವಿವಿಧ ಕಷ್ಟಗಳನ್ನು ಎದುರಿಸುತ್ತಾ, ಸುಖ ದುಃಖಗಳ ಮಧ್ಯದಲ್ಲಿ ತೊಳಲಾಡುತ್ತಾ ಇಚ್ಛಿತ ಕಾರ್ಯಗಳನ್ನು ದೃಢವಾದ ಆಸಕ್ತಿಯಿಂದ ಮಾಡುತ್ತಾನೆ. ಈ ಕರ್ಮಗಳಲ್ಲಿ ತನ್ನ ದಕ್ಷತೆಯನ್ನೂ, ಬುದ್ಧಿವಂತಿಕೆಯನ್ನೂ ಸಂಪೂರ್ಣವಾಗಿ ವಿನಿಯೋಗಿಸುತ್ತಾನೆ. ಜ್ಞಾನಿಯಾದವನು ಸಹ ಇಷ್ಟೇ ಉತ್ಸುಕತೆಯಿಂದ, ದಕ್ಷತೆಯಿಂದ, ಸತತವೂ ಕರ್ಮ ಮಾಡಬೇಕೆಂದು ವಿಧಿಸಲಾಗಿದೆ. ಆದರೆ ಇವನು ಕರ್ಮ ಮಾಡುವ ಮಾನಸಿಕ ಹಾಗೂ ಬೌದ್ಧಿಕ ಹಿನ್ನಲೆಯಲ್ಲಿ ಮಾತ್ರ ವ್ಯತ್ಯಾಸವಿದೆ.
ಅಜ್ಞಾನಿಯು ಫಲಾಪೇಕ್ಷೆಯಿಲ್ಲದೆ, ನಿರಾಸಕ್ತನಾಗಿ, ಮಮಕಾರವನ್ನು ತ್ಯಜಿಸಿ ಕರ್ಮ ಮಾಡಬೇಕು. ಕರ್ಮದಲ್ಲಿಯ ದೋಷ ಎಂದರೆ ಮಮಕಾರವಾಗಿದೆ. ಇದು ಹೆಚ್ಚಾದಷ್ಟೂ ಅಪಾಯವು ಹೆಚ್ಚು. ಕಡಿಮೆಯಾದಷ್ಟೂ ಅಪಾಯವು ಕಡಿಮೆ. ಅಹಂಕಾರವು ಸಂಪೂರ್ಣವಾಗಿ ನಾಶವಾಗುವುದು ಸಾಧ್ಯವಿಲ್ಲದ್ದರಿಂದ ಅದನ್ನು ತ್ಯಜಿಸಿ ಕರ್ಮಮಾಡಲು ಸತತವೂ ಯತ್ನಿಸಬೇಕು. ಅಹಂಕಾರವನ್ನೂ ಎಷ್ಟರ ಮಟ್ಟಿಗೆ ತ್ಯಜಿಸಿ ನಾವು ಕರ್ಮ ಮಾಡುತ್ತೇವೆಯೋ, ಅಷ್ಟರ ಮಟ್ಟಿಗೆ ಆ ಕರ್ಮವು ಬಹುಜನರಿಗೆ ಕಲ್ಯಾಣಕರವಾಗುತ್ತದೆ. ಹೀಗೆ ಬಹುಜನರ ಹಿತಕ್ಕಾಗಿ (ಲೋಕಸಂಗ್ರಹ) ಜ್ಞಾನಿಯು ಕರ್ಮ ಮಾಡಬೇಕು. ವಿಷವು ತನ್ನ ಸ್ವಾಭಾವಿಕ ಸ್ಥಿತಿಯಲ್ಲಿ ಮರಣವನ್ನುಂಟು ಮಾಡುತ್ತದೆ. ಆದರೆ ಅದನ್ನೇ ಅಲ್ಪ ಪ್ರಮಾಣದಲ್ಲಿ ಔಷಧಿಯ ರೂಪದಲ್ಲಿ ಸೇವಿಸಿದರೆ ಅದು ಅಮೃತವಾಗುತ್ತದೆ, ಮರಣವನ್ನೂ ತಪ್ಪಿಸುತ್ತದೆ. ಇದೇ ರೀತಿ ತೀವ್ರವಾದ ಅಹಂಕಾರವು ವಿಷವಾಗಿದೆ, ಅಜ್ಞಾನಕ್ಕೂ ಬಂಧನಕ್ಕೂ ಕಾರಣವಾಗಿದೆ.
ಇದು ಕಡಿಮೆಯಾದಷ್ಟೂ ಜೀವನವು ಅಮೃತಮಯವಾಗುತ್ತದೆ.
ತಾನು ಕರ್ಮವನ್ನು ಮಾಡಿದಗ್ಯೂ ತನ್ನ ಉಪದೇಶದಿಂದ ಅಜ್ಞಾನಿಗಳಿಗೆ ಬುದ್ಧಿ ಗೊಂದಲವನ್ನುಂಟು ಮಾಡಬಾರದು.

ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್ |
ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್ || 26 ||
ಅರ್ಥ : ಕರ್ಮದಲ್ಲಿ ನಿರತರಾದ ಅಜ್ಞಾನಿಗಳಿಗೆ ಕೇವಲ ಉಪದೇಶ ಮಾಡಿ ಅವರನ್ನು ಮಾನಸಿಕ ಗೊಂದಲಕ್ಕೀಡು ಮಾಡಬಾರದು. ಜ್ಞಾನಿಯಾದವನು ತಾನು ಸ್ವತಃ ಅಹಂಕಾರ ವಿರಹಿತನಾಗಿ ಕರ್ಮ ಮಾಡುತ್ತಾ, ತನ್ನ ಉದಾಹರಣೆ ಅಥವಾ ಮೇಲ್ಪಂಕ್ತಿಯಿಂದ ಅಜ್ಞಾನಿಗಳು ಬೆಳಕನ್ನು ಕಾಣುವಂತೆ ಮಾಡಬೇಕು.
ಜ್ಞಾನಿಯಾದವನು ಸಾಮಾನ್ಯ ಜನರಿಗೆ ಉಪದೇಶ ಮಾಡುವುದು ಸ್ವಾಭಾವಿಕ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಇತ್ಯಾದಿ ರಂಗಗಳನ್ನು ಅವನ ಉಪದೇಶವು ವ್ಯಾಪಿಸಿರುತ್ತದೆ. ಈ ಉಪದೇಶಗಳನ್ನು ಕೇಳಿದ ಸಾಮಾನ್ಯ ಜನರು ಅದನ್ನು ತಪ್ಪಾಗಿ ಗ್ರಹಿಸಿ ಅನರ್ಥಕ್ಕೀಡಾಗಬಹುದಾಗಿದೆ. ಆದುದರಿಂದ ಈ ತರಹದ ಉಪದೇಶಕರಿಗೆ ಇಲ್ಲಿ ಎಚ್ಚರಿಕೆಯನ್ನು ಕೊಡಲಾಗಿದೆ. ಜನರಿಗೆ ಉಪದೇಶ ಮಾಡುವ ಗೋಜಿಗೆ ಹೋಗದೆ, ತಾವು ಪ್ರತ್ಯಕ್ಷವಾಗಿ, ಫಲಾಪೇಕ್ಷೆಯನ್ನೂ ಅಹಂಕಾರವನ್ನೂ ತ್ಯಜಿಸಿ ಕರ್ಮ ಮಾಡುತ್ತಾ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು, ಅಜ್ಞಾನಿಗಳು ತಾವಾಗಿಯೇ ತಮ್ಮನ್ನು ಅನುಕರಿಸುವಂತೆ ಮಾಡಬೇಕು. ಇದರಿಂದ ಅಜ್ಞಾನಿಗೂ ಲಾಭ, ಜ್ಞಾನಿಯು ಕೆಳಮಟ್ಟಕ್ಕೆ ಬೀಳುವ ಭಯವೂ ಇಲ್ಲ.

ಅಜ್ಞಾನಿಯು ಕರ್ಮದಿಂದ ಹೇಗೆ ಬಂಧಿತನಾಗುತ್ತಾನೆ ?

ಪ್ರಕೃತೇಃ ಕ್ರಿಯಾಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ |
ಅಹಂಕಾರಮೂಢಾತ್ಮಾ ಕರ್ತಾಹಮಿತಿ ಮನ್ಯತೇ || 27 ||
ಅರ್ಥ : ಪ್ರತಿಯೊಬ್ಬ ಮನುಷ್ಯನೂ ತನ್ನ ಸ್ವಾಭಾವಿಕ ಗುಣಗಳಿಗನುಸಾರವಾಗಿ ಕರ್ಮಗಳನ್ನು ಮಾಡುತ್ತಾನೆ. ಆದರೆ ಅಹಂಕಾರದಿಂದ ಕೂಡಿದ ಮನುಷ್ಯನು ಕರ್ಮಗಳನ್ನು ಮಾಡುವವನು ‘ನಾನು’ ಎಂದು ತಪ್ಪಾಗಿ ತಿಳಿದುಕೊಂಡು ಆ ಕರ್ಮಗಳಿಂದ ಬಂಧಿತನಾಗುತ್ತಾನೆ.
ಜೀವನು ತನ್ನ ಹಿಂದಿನ ಜನ್ಮದ ಸಂಸ್ಕಾರ ಅಥವಾ ವಾಸನೆಗಳನ್ನು ಬರಿದು ಮಾಡಿಕೊಳ್ಳುವುದಕ್ಕಾಗಿ ಅನುಕೂಲವಾದ ಶರೀರ ಮನಸ್ಸು ಬುದ್ಧಿಗಳನ್ನು ಪಡೆದು ಈ ಜನ್ಮಕ್ಕೆ ಬಂದಿದ್ದಾನೆ. ಆದ್ದರಿಂದ ಸ್ವಾಭಾವಿಕವಾಗಿ ಬಂದ ಪ್ರಕೃತಿ ಗುಣಗಳಿಗನುಸಾರವಾಗಿ ಅವನು ಕರ್ಮವನ್ನು ಮಾಡುತ್ತಲೇ ಇರುತ್ತಾನೆ. ಇದು ಸ್ವಾಭಾವಿಕ. ಮನುಷ್ಯನು ಈ ಜನ್ಮದಲ್ಲಿ ಬುದ್ಧಿವಂತಿಕೆ ಹಾಗೂ ದಕ್ಷತೆಯಿಂದ ಕರ್ಮವನ್ನು ಮಾಡಬೇಕು. ಹೀಗೆ ಕರ್ಮವು ವಿಶಿಷ್ಟ ರೀತಿಯಲ್ಲಿ ಸಾಗುತ್ತಿದ್ದಾಗ್ಯೂ ಅದರಲ್ಲಿ ಆಸಕ್ತಿಯನ್ನೂ ಫಲಾಪೇಕ್ಷೆಯನ್ನೂ, “ಕರ್ಮವನ್ನೂ ಮಾಡುವವನು ನಾನು ಫಲವನ್ನೂ ಅನುಭವಿಸಬೇಕಾದವನು ನಾನು” ಎಂಬ ಅಹಂಕಾರವನ್ನು ತ್ಯಜಿಸಬೇಕು. ಹೀಗೆ ಕರ್ಮವನ್ನು ಮಾಡಿದರೆ ಅದರಿಂದ ಬಂಧನವಿಲ್ಲ, ಸಂಚಿತ ವಾಸನೆಗಳು ಸಹ ಬರಿದಾಗುತ್ತವೆ. ಆದರೆ ಅಜ್ಞಾನಿಯು ಅಹಂಕಾರದಿಂದ ಕರ್ಮ ಮಾಡಿ ಇನ್ನೂ ಹೆಚ್ಚು ಬಂಧಿತನಾಗುತ್ತಾನೆ.
ಜ್ಞಾನಿಯು ಹೇಗೆ ವರ್ತಿಸುತ್ತಾನೆ.

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ |
ಗುಣಾ ಗುಣೇಷು ವರ್ತಂತ ಇತಿ ಮತ್ವಾನ ಸಜ್ಜತೇ || 28 ||
ಅರ್ಥ : ಜ್ಞಾನಿಯಾದವನು, ಎಲೈ ಮಹಾಬಾಹುವೇ! ತನ್ನ ಪ್ರಕೃತಿಗೆ ಸ್ವಾಭಾವಿಕವಾಗಿ ಬಂದ ಸತ್ವರಜತಮೋ ಗುಣಗಳು ವಿವಿಧ ಕರ್ಮಗಳಲ್ಲಿಯ ಆಯಾಯಾ ಸ್ವಾಭಾವಿಕ ಗುಣಗಳೊಡನೆ ಸೇರುವುದರಿಂದ ಕರ್ಮಗಳಾಗುತ್ತವೆ, ಮಾಡುವವನು ನಾನಲ್ಲ, ಎಂದು ಆಲಿಪ್ತನಾಗಿರುತ್ತಾನೆ.
ನಿಜವಾದ ಆಟಗಾರನಿಗೆ ಆಟವಾಡುವುದರಿಂದಲೇ ಆನಂದ. ತಾನು ಗಳಿಸಿದ ಅಂಕಗಳಿಂದಲ್ಲ. ಅದೇ ರೀತಿ ಜ್ಞಾನಿಯು ಆಲಿಪ್ತನಾಗಿ ಫಲಾಪೇಕ್ಷೆಯಿಲ್ಲದೆ ಕರ್ಮಮಾಡುವುದರಲ್ಲಿಯೇ ಆನಂದವನ್ನು ಕಾಣುತ್ತಾನೆ.

ಪ್ರಕೃತೇರ್ಗುಣಸಮ್ಮೂಢಾಃ ಸಜ್ಜಂತೇ ಗುಣಕರ್ಮಸು |
ತಾನಕೃತ್ಸ್ನವಿದೋ ಮಂದಾನ್‍ಕೃತ್ಸ್ನವಿನ್ನ ವಿಚಾಲಯೇತ್ || 29 ||
ಅರ್ಥ : ಸ್ವಾಭಾವಿಕವಾಗಿ ಬಂದ ಗುಣಗಳು ಅಜ್ಞಾನಿಗಳನ್ನು ಅನುಗುಣವಾದ ಕರ್ಮಗಳಲ್ಲಿ ನಿರತರನ್ನಾಗಿ ಮಾಡುತ್ತವೆ. ಜ್ಞಾನಿಯಾದವನು ಇಂತಹ ಮೂಢರಿಗೆ ಉಪದೇಶ ಮಾಡಿ ಅವರಿಗೆ ಮಾನಸಿಕ ಗೊಂದಲವನ್ನುಂಟು ಮಾಡಬಾರದು.
ಈ ವಿಷಯವನ್ನು ಒತ್ತಿ ಹೇಳುವ ಉದ್ದೇಶದಿಂದ ಹಿಂದೆ ಹೇಳಿದಾಗ್ಯೂ ಪುನಃ ಹೇಳಲಾಗಿದೆ. ಅಜ್ಞಾನಿಗಳು ತಮ್ಮ ಸಂಚಿತ ವಾಸನೆಗಳ ಹೊರೆಯನ್ನು ಬರಿದು ಮಾಡಿಕೊಳ್ಳಲು ಆಸ್ಪದ ಕೊಡಬೇಕು

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ |
ನಿರಾಶೀರ್ನಿರ್ಮಮೋ ಭೂತ್ವಾ ಯುದ್ಧಸ್ವ ವಿಗತಜ್ವರಃ || 30 ||
ಅರ್ಥ : ನಿನ್ನ ಮನಸ್ಸನ್ನು ಆತ್ಮಧ್ಯಾನದಲ್ಲಿ ನಿಲ್ಲಿಸಿ, ಕರ್ಮಫಲಗಳ ಆಸೆಯನ್ನು ನನ್ನಲ್ಲಿ ತ್ಯಾಗ ಮಾಡಿ (ನನಗೆ ಅರ್ಪಿಸಿ) ಯಾವ ತರಹದ ಆಸೆಯಾಗಲೀ, ಮಮಕಾರವಾಗಲೀ ಇಲ್ಲದೆ ಹೆದರಿಕೆಯನ್ನು ಬಿಟ್ಟು ಯುದ್ಧಮಾಡು.
ಎಲ್ಲಾ ಕರ್ಮಗಳನ್ನೂ ತ್ಯಾಗಮಾಡಿ (ಸರ್ವಾಣಿ ಕರ್ಮಾಣಿ ಸನ್ಯಸ್ಯ) ಎಂದು ಹೇಳಿದುದರ ಅರ್ಥವು ಅರ್ಜುನನು ಕರ್ಮತ್ಯಾಗ ಮಾಡಿ ಸನ್ಯಾಸವನ್ನು ಸ್ವೀಕರಿಸಬೇಕೆಂದಲ್ಲ ಏಕೆಂದರೆ ಇದೇ ಉಸಿರಿನಲ್ಲಿಯೇ ಹೆದರದೇ ಯುದ್ಧಮಾಡು’ ಎಂದು ಹೇಳಲಾಗಿದೆ. ಕರ್ಮದ ವಿಷಬೀಜವಾದ ಫಲಾಸೆಯನ್ನೂ ಅಹಂಕಾರವನ್ನೂ ತ್ಯಜಿಸಿ ಅವುಗಳನ್ನು ಪರಮಾತ್ಮನಿಗೆ ಅರ್ಪಿಸಿ ಕರ್ಮಮಾಡು ಎಂದು ಇದುವರೆಗೆ ಬೋಧಿಸಿದ ಕರ್ಮದ ಗುಟ್ಟನ್ನು ಪುನಃ ಇಲ್ಲಿ ಹೇಳಲಾಗಿದೆ.
ಅಹಂಕಾರವನ್ನೂ ತ್ಯಜಿಸಿ ‘ನಾನು ಶುದ್ಧ ಪರಮಾತ್ಮನು’ ಎಂಬ ಭಾವವನ್ನಿಟ್ಟುಕೊಂಡು, ಅದು ಸಾಧ್ಯವಿಲ್ಲದಿದ್ದರೆ ಮನಸ್ಸಿನಲ್ಲಿ ಪರಮಾತ್ಮನ ಚಿಂತನೆಯನ್ನು ಮಾಡುತ್ತಾ “ನಾನು ಮಾಡುತ್ತಿರುವ ಕರ್ಮವು ಪರಮಾತ್ಮನದ್ದು ಈ ಕರ್ಮದ ಮೂಲಕ ಆತನ ಸೇವೆಯನ್ನು ಮಾಡುತ್ತೇನೆ. ಕರ್ಮಫಲವನ್ನು ಅವನಿಗೇ ಅರ್ಪಿಸುತ್ತೇನೆ. ಅದಕ್ಕೆ ಅವನೇ ಅಧಿಕಾರಿಯು” ಎಂಬ ಭಾವವನ್ನಿಟ್ಟುಕೊಂಡು ದಕ್ಷತೆಯಿಂದ ಕರ್ಮ ಮಾಡಬೇಕೆಂದು ಇಲ್ಲಿ ಹೇಳಲಾಗಿದೆ. ಕರ್ಮಫಲದ ಆಸೆ ಹಾಗೂ ಅಹಂಕಾರವನ್ನು ತ್ಯಜಿಸಿ ಮಾಡಿದ ಕರ್ಮವು ತತ್ವಶಃ ಕರ್ಮವೇ ಅಲ್ಲ. ಏಕೆಂದರೆ ಅದರಿಂದ ಬಂಧನವಿಲ್ಲ ಮತ್ತು ಹೊಸ ವಾಸನೆಯೂ ಇಲ್ಲ.
ನಿರಾಶೀಃ ಆಸೆಯನ್ನಿಟ್ಟುಕೊಳ್ಳದೆ ಕರ್ಮಮಾಡು ಎಂದು ಹೇಳಲಾಗಿದೆ. ಫಲಾಸೆ ಎಂದರೆ ಇನ್ನೂ ಹುಟ್ಟದೆ ಇರುವ ಮುಂದೆ ಹುಟ್ಟುವ ಭವಿಷ್ಯ. ಇಂತಹ ಅನಿಶ್ಚಿತ ಭವಿಷ್ಯದ ಬಗ್ಗೆ ಯೋಚಿಸುತ್ತಾ ಕಲ್ಪನೆಗಳಲ್ಲಿ ಶಕ್ತಿಯನ್ನು ವ್ಯಯಮಾಡುವುದಕ್ಕಿಂತ, ಅದೇ ಶಕ್ತಿಯನ್ನು ದಕ್ಷತೆಯಿಂದ ಕರ್ಮ ಮಾಡಲು ವಿನಿಯೋಗಿಸಿದರೆ ಇವತ್ತಿನ ಕೃಷಿಗೆ ತಕ್ಕಷ್ಟು ಫಲವು ಸಿಕ್ಕೇ ಸಿಗುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ಇಲ್ಲವೆ ಫಲದ ಬಗ್ಗೆ ಚಿಂತೆ ಮಾಡಕೂಡದು.
ನಿರ್ಮಮ : ಆಸೆಯು ಭವಿಷ್ಯದ ಕೂಸಾದರೆ ವಾಸನೆಗಳ ‘ಮಮ’ಕಾರ ಇಲ್ಲವೆ ಅಹಂಕಾರವು ಹಿಂದಿನ ಜನ್ಮಗಳಲ್ಲಿ ಸಂಗ್ರಹಿತವಾದ ವಾಸನೆಗಳ ಸಮೂಹ. ಅಂದರೆ ಗತಿಸಿ ಹೋದ ಕಾಲದ ನೆನಪು. ಸತ್ತು ಹೋದ ಕಾಲದ ಮತ್ತು ಇನ್ನೂ ಹುಟ್ಟದೆ ಇರುವ ಭವಿಷ್ಯದ ವಿಚಾರಗಳನ್ನು ಚಿಂತಿಸುವ ಗೊಂದಲದಲ್ಲಿ ಸಿಕ್ಕು ಅವುಗಳಲ್ಲಿ ಶಕ್ತಿಯು ವ್ಯರ್ಥವಾಗಿ ಖರ್ಚಾದರೆ, ಈಗ ಬದುಕಿರುವ, ಎದುರಿಗಿರುವ ಕರ್ಮವನ್ನು ಮಾಡಲು ಶಕ್ತಿಯ ಕೊರತೆಯಾಗುತ್ತದೆ. ಆದುದರಿಂದ ಇವೆರಡರ ಬಗ್ಗೆಯೂ ಚಿಂತಿಸದೆ ಕರ್ಮವನ್ನು ಮಾಡುವುದಷ್ಟೇ ಈಗಿನ ನನ್ನ ಕರ್ತವ್ಯ. ಇವತ್ತಿನ ಕರ್ಮವನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ಕಾತರತೆ. ಭಯ, ಮೊದಲಾದ ಉದ್ವೇಗಗಳುಂಟಾಗಿ ಕರ್ಮದ ದಕ್ಷತೆಯಲ್ಲಿ ಕೊರತೆಯಾಗಬಹುದಾದ ಸಂಭವವಿರುವುದರಿಂದ ಅವುಗಳನ್ನು ಪರಮಾತ್ಮನಿಗೆ ಅರ್ಪಣೆ ಮಾಡಿ ಕರ್ಮ ಮಾಡಬೇಕೆಂದು ಹೇಳಲಾಗಿದೆ. ಇಲ್ಲಿ ‘ಯುದ್ಧಮಾಡು’ ಎಂದು ಹೇಳಿದುದು. ಕೇವಲ ಅರ್ಜುನನಿಗಾದರೂ, ಈ ಮೂಲಕ ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಎದುರಿಸಬೇಕಾದ ವಿವಿಧ ಹೋರಾಟಗಳಲ್ಲಿ ಅಂದರೆ ವಿವಿಧ ಕರ್ಮಗಳಲ್ಲಿ ಇದುವರೆಗೆ ಬೆಳಿಸಿದ ಮನೋಭಾವವನ್ನು ಮೈಕೂಡಿಸಿಕೊಂಡು ಹೋರಾಡಬೇಕು ಅಂದರೆ ಕರ್ಮ ಮಾಡಬೇಕು ಎಂದು ತಿಳಿಸಲಾಗಿದೆ.

ಹೀಗೆ ಕರ್ಮ ಮಾಡಿದರೆ ಏನಾಗುತ್ತದೆ ?

ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ |
ಶ್ರದ್ಧಾವಂತೋ„ನಸೂಯಂತೋ ಮುಚ್ಯಂತೇ ತೇ„ಪಿ ಕರ್ಮಭಿಃ || 31 ||
ಅರ್ಥ : ಯಾರು ನನ್ನ ಈ ಮಾತಿನಲ್ಲಿ ಶ್ರದ್ಧೆಯನ್ನಿಟ್ಟು ಅದರಲ್ಲಿ ತಪ್ಪುಕಂಡುಹಿಡಿಯುವ ಗೋಜಿಗೆ ಹೋಗದೆ, ನನ್ನ ಉಪದೇಶದಂತೆ ನಿತ್ಯವೂ ಕರ್ಮವನ್ನೂ ಮಾಡುತ್ತಾರೋ, ಅವರು ಕರ್ಮಬಂಧನದಿಂದ ಬಿಡುಗಡೆಯನ್ನು ಹೊಂದುತ್ತಾರೆ.
ಕರ್ಮದ ಈ ರಹಸ್ಯವನ್ನು ತಿಳಿದುಕೊಂಡರೆ ಮಾತ್ರ ಸಾಲದು, ಅದನ್ನು ನಿತ್ಯಜೀವನದಲ್ಲಿ ಪ್ರತ್ಯಕ್ಷ ಆಚರಣೆಯಲ್ಲಿ ತರಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಈ ಉಪದೇಶದಲ್ಲಿ ನಂಬಿಕೆ ಮತ್ತು ಶ್ರದ್ಧೆಗಳನ್ನಿಟ್ಟುಕೊಳ್ಳುವುದು ಅವಶ್ಯಕ. ಹುಳುಕು ಇಲ್ಲವೇ ದೋಷವನ್ನು ಹುಡುಕುವುದರಿಂದ ಯಾವ ಲಾಭವೂ ಇಲ್ಲ. ಅದೇ ಕೇವಲ ಬುದ್ಧಿಗೆ ಕೆಲಸಕೊಟ್ಟಂತೆ ಆಗುತ್ತದೆಯೇ ಹೊರತು ಪ್ರತ್ಯಕ್ಷ ಆಚರಣೆಗೆ ತರದಿದ್ದರೆ ಸಿದ್ಧಿಯು ದೊರೆಯಲಾರದು.

ಕೇವಲ ತಪ್ಪುಗಳನ್ನೇ ಹುಡುಕುವವರ ಗತಿ ಏನು ?

ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಮ್ |
ಸರ್ವಜ್ಞಾನವಿಮೂಢಾಂಸ್ತಾನ್ವಿದ್ಧಿ ನಷ್ಟಾನಚೇತಸಃ || 32 ||
ಅರ್ಥ : ಯಾರು ನನ್ನ ಈ ಉಪದೇಶವನ್ನು ಆಚರಣೆಗೆ ತರದೆ, ತಪ್ಪನ್ನೇ ಹುಡುಕುವುದರಲ್ಲಿ ಉದ್ಯುಕ್ತರಾಗಿರುತ್ತಾರೋ ಅಂತಹ ಅಜ್ಞಾನಿಗಳು, ತಮ್ಮ ವಿಚಾರ ಶಕ್ತಿಯನ್ನು ಕಳೆದುಕೊಂಡು ಇನ್ನೂ ಹೆಚ್ಚು ಅಜ್ಞಾನದಿಂದ ಆವೃತರಾಗಿ ಅಧೋಗತಿಗಿಳಿಯುತ್ತಾರೆ.
ಈ ತತ್ವವನ್ನು ಆಚರಣೆಗೆ ತರದೆ ಕೇವಲ ಮುತಿಯಿಂದ ವಾದ ಮಾಡುತ್ತಾ ಟೀಕೆಯಲ್ಲಿ ಕಾಲಹರಣ ಮಾಡುವವರ ಗತಿ ಏನಾಗುತ್ತದೆ ಎಂಬುದನ್ನು ಇಲ್ಲಿ ಎತ್ತಿ ತೋರಿಸಲಾಗಿದೆ.

ಪ್ರತಿಯೊಬ್ಬರು ಈ ತತ್ವವನ್ನು ಏಕೆ ಆಚರಣೆಯಲ್ಲಿ ತರುವುದಿಲ್ಲ ?

ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇಜ್ರ್ಞಾನವಾನಪಿ |
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ || 33 ||
ಅರ್ಥ: ಪ್ರತಿಯೊಬ್ಬ ಜೀವಿಯು (ಜ್ಞಾನಿಯಾದವನು ಸಹ) ತಮ್ಮ ತಮ್ಮ ಸ್ವಾಭಾವಿಕ ಪ್ರಕೃತಿಗನುಗುಣವಾಗಿ ಕರ್ಮವನ್ನೂ ಮಾಡುತ್ತಾರೆ. ಜೀವಿಗಳು ಪ್ರಕೃತಿಯನ್ನೇ ಅನುಸರಿಸುತ್ತವೆ. ನಿಗ್ರಹವು ಪ್ರಕೃತಿಯ ವಿರುದ್ಧ ಏನು ಮಾಡೀತು?
ಪೂರ್ವಜನ್ಮದ ವಾಸನೆಗೆ ಅನುಗುಣವಾದ ಶರೀರ, ಮನಸ್ಸು ಬುದ್ಧಿಗಳನ್ನು ಪಡೆದು ಜೀವಿಯು ಜನ್ಮಕ್ಕೆ ಬರುತ್ತಾನೆ. ಅದೇ ಮನಸ್ಸು ಬುದ್ಧಿಗಳಿಗನುಸಾರವಾಗಿ ಈ ಪ್ರಪಂಚದಲ್ಲಿ ಆತನ ಆಚರಣೆಯಿರುತ್ತದೆ. ಸಂಚಿತ ವಾಸನೆಗಳಿಗೆ ಅನುಗುಣವಾದ ವಿಚಾರಗಳು ಮನಸ್ಸಿನಲ್ಲಿ ಏಳುತ್ತವೆ. ಅದೇ ವಿಚಾರಗಳು ಪುನಃ ಪುನಃ ಅಂತಹದೇ ವಿಚಾರ ತರಂಗಗಳನ್ನು ಹುಟ್ಟಿಸುತ್ತವೆ. ಹೀಗಾಗಿ ಮನಸ್ಸಿನಲ್ಲಿ ಅದೇ ತರಹದ ವಿಚಾರಗಳ ಕಲ್ಪನೆಗಳು ಸಾಗಿರುತ್ತವೆ. ಬಲವಾದ ಇಂತಹ ವಿಚಾರಗಳು ಆ ವ್ಯಕ್ತಿಯನ್ನು ಅನುಗುಣವಾದ ಕರ್ಮಗಳನ್ನು ಮಾಡಲು ಹಚ್ಚುತ್ತವೆ.
ಜ್ಞಾನಿಯು ಸಹ, ತನಗೆ ಇಷ್ಟವಿಲ್ಲದಿದ್ದಾಗ್ಯೂ ಇಂತಹ ವಿಚಾರ ಚಕ್ರದಲ್ಲಿ ಸಿಲುಕಿರುತ್ತಾನೆ. ಸಾಮಾನ್ಯ ಜನರಿಗೆ ಈ ವಿಷ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮನೋಬಲವು ಹೆಚ್ಚಾಗಿರುವ ಕೆಲವು ಧೀರರು ಮಾತ್ರ ಇದರಿಂದ ತಪ್ಪಿಸಿಕೊಳ್ಳಬಲ್ಲರು. ಹೀಗೆ ತಪ್ಪಿಸಿಕೊಳ್ಳುವ ಉಪಾಯವನ್ನು ಮುಂದಿನ ಶ್ಲೋಕದಲ್ಲಿ ತಿಳಿಸಲಾಗಿದೆ.

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ |
ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ || 34 ||
ಅರ್ಥ : ಇಂದ್ರಿಯ ವಿಷಯಗಳಲ್ಲಿಯ ಪ್ರೇಮ ಹಾಗೂ ದ್ವೇಷಭಾವವು ಆಯಾಯಾ ಇಂದ್ರಿಯಗಳಲ್ಲಿ ನೆಲೆಸಿವೆ. ಜನರು ಈ ತರಹದ ಪ್ರೇಮ ದ್ವೇಷಗಳ ಆಕರ್ಷಣೆಗೆ ಬಲಿ ಬೀಳಬಾರದು. ಏಕೆಂದರೆ ಅವು ಮನುಷ್ಯನ ಶತ್ರುಗಳು
ಪ್ರತಿಯೊಬ್ಬ ಮನುಷ್ಯನೂ ತನಗೆ ಇಷ್ಟವಿಲ್ಲದಿದ್ದಾಗ್ಯೂ ತನ್ನ ಪ್ರಕೃತಿಯ ಸೆಳೆತಕ್ಕೆ ಸಿಕ್ಕು ಬಲಾತ್ಕಾರವಾಗಿ ಕರ್ಮ ಮಾಡುತ್ತಾನೆಂದೂ ಅದನ್ನು ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯವೆಂದೂ ಹಿಂದಿನ ಶ್ಲೋಕದಲ್ಲಿ ತಿಳಿಸಿ ಈಗ ಅದರಿಂದ ತಪ್ಪಿಸಿಕೊಳ್ಳುವ ದಾರಿಯನ್ನು ತೋರಿಸಲಾಗಿದೆ. ಈ ಸೆಳೆತದಿಂದ ತಪ್ಪಿಸಿಒಳ್ಳಲು ಇಷ್ಟಪಡುವ ಮನುಷ್ಯನು ತನ್ನಲ್ಲಿ ಸಂಚಿತನಾಗಿರುವ ವಾಸನಾ ಸೆಳೆತದ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ತನ್ನ ಈ ಪ್ರಯತ್ನದಲ್ಲಿ ಉಪಯೋಗಿಸುವುದು ಅತ್ಯವಶ್ಯಕ ಎಂಬುದನ್ನು ಮೊಟ್ಟಮೊದಲು ತಿಳಿದುಕೊಳ್ಳಬೇಕೆಂಬುದನ್ನು ಸೂಚಿಸಲು ಎಚ್ಚರಿಕೆಯ ರೂಪದಲ್ಲಿ ನಿಗ್ರಹವು ಏನು ಮಾಡೀತು ಎಂದು ಹೇಳಲಾಗಿದೆಯೇ ಹೊರತು ನಿರುತ್ಸಾಹಗೊಳಿಸುವುದಿಲ್ಲ – ಈ ದೃಷ್ಟಿಯಿಂದಲೇ ಅದೇ ಉಸಿರಿನಲ್ಲಿ ಈ ಸೆಳೆತದಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಹೇಳಲಾಗಿದೆ.
ಪ್ರೇಮ-ದ್ವೇಷಗಳು ಇಂದ್ರಿಯ ವಿಷಯಗಳಲ್ಲಿ ಇಲ್ಲ ಆಯಾಯಾ ಇಂದ್ರಿಯಗಳಲ್ಲಿಯೂ ಇಲ್ಲ. ಅವು ಉತ್ಪನ್ನವಾಗುವುದು ಮನಸ್ಸಿನಲ್ಲಿ ಇಂದ್ರಿಯ ವಿಷಯಗಳಿಂದ ಉತ್ಪನ್ನವಾಗುವ ಸಂವೇದನೆಗಳು, ಆಯಾಯಾ ಇಂದ್ರಿಯಗಳ ಮೂಲಕ ಮನಸ್ಸನ್ನು ತಟ್ಟುತ್ತವೆ. ಮನಸ್ಸು ತನ್ನ ಹಿಂದಿನ ಜನ್ಮದ ಸಂಸ್ಕಾರ ವಾಸನೆಗಳಿಗೆ ಅನುಸಾರವಾಗಿ ಕೆಲವು ಸಂವೇದನೆಗಳು ‘ಒಳ್ಳೆಯವು’ ಎಂದೂ ಕೆಲವು ‘ಕೆಟ್ಟವು’ ಎಂದೂ ತಿಳಿದುಕೊಂಡು ಮೊದಲಿನ ಗುಂಪಿನ ಮೇಲೆ ಪ್ರೇಮ ಮಾಡುತ್ತದೆ. ಎರಡನೆಯ ಗುಂಪಿನ ಮೇಲೆ ದ್ವೇಷ ಮಾಡುತ್ತದೆ. ಪ್ರೇಮವಿರುವ ವಿಷಯಗಳ ಮತ್ತು ವಸ್ತು ಕಡೆಗೆ ಮನಸ್ಸು ಆಕರ್ಷಿತವಾಗಿ ಅದನ್ನು ಪಡೆಯುವುದಕ್ಕೂ ದ್ವೇಷವಿರುವ ವಸ್ತುಗಳನ್ನು ದೂರೀಕರಿಸುವುದಕ್ಕೂ ಪ್ರಯತ್ನಿಸುತ್ತದೆ. ಇಂದ್ರಿಯ ವಿಷಯಗಳಿಂದ ಉಂಟಾಗುವ ಈ ರಾಗ ದ್ವೇಷಗಳ ಸೆಳೆತಕ್ಕೆ ಸಿಗಕೂಡದೆಂದು ಸಾಧಕರಿಗೆ ಮೊಟ್ಟ ಮೊದಲನೆಯ ಎಚ್ಚರಿಕೆಯನ್ನು ಕೊಡಲಾಗಿದೆ.
ಮನುಷ್ಯನು ಇಂದ್ರಿಯ ವಿಷಯಗಳಿಂದ ತುಂಬಿದ ಸಂಸಾರವನ್ನು ಬಿಟ್ಟು ಓಡಿ ಹೋಗದೆ, ಇಲ್ಲಿಯೇ ಇದ್ದುಕೊಂಡು ತನಗೆ ಲಭಿಸಿರುವ ಶರೀರ, ಮನಸ್ಸು ಬುದ್ಧಿಗಳ ಮುಖಾಂತರ ಇಂದ್ರಿಯ ವಿಷಯಗಳೊಡನೆ ಹೋರಾಡಿ ಅವುಗಳ ಮಧ್ಯದಲ್ಲಿಯೇ ನೆಲೆಸಿದಾಗ್ಯೂ ಅವುಗಳಿಂದ ಲಿಪ್ತನಾಗಿ ಆವೃತನಾಗದೆ, ಅವುಗಳ ಹಿಡಿತದಿಂದ ತಪ್ಪಿಸಿಕೊಂಡು ಇಲ್ಲಿಯೇ ಆತ್ಮಕಲ್ಯಾಣವನ್ನು ಸಾಧಿಸಿಕೊಳ್ಳಬೇಕೆಂದು ಗೀತೆಯು ಉಪದೇಶಿಸುತ್ತದೆ .
ಮೇಲಿನ ವಿವೇಚನೆಯಿಂದ ಸ್ಪಷ್ಟವಾಗುವುದೇನೆಂದರೆ, ಮನಸ್ಸು ವಿಷಯಗಳಲ್ಲಿ ಪ್ರವೇಶ ಮಾಡಿದರೆ ಮಾತ್ರ ಅವುಗಳ ಬಗ್ಗೆ ರಾಗ ದ್ವೇಷವುಂಟಾಗುತ್ತದೆ. ಇಲ್ಲದಿದ್ದರೆ ಇಲ್ಲ. ‘ಮಮ’ಕಾರವನ್ನು ತ್ಯಜಿಸಿ ಕರ್ಮ ಮಾಡುವುದರಿಂದ ಮನಸ್ಸನ್ನು ಹಿಂದಕ್ಕೆಳೆದುಕೊಂಡು ವಾಸನಾಮುಕ್ತನಾಗುವುದಕ್ಕೆ ಸಾಧ್ಯವಿದೆ ಎಂದು ಈ ಹಿಂದೆ ಹೇಳಿರುವುದನ್ನು ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಬೇಕು.

ವಾಸನೆಗಳನ್ನು ಬರಿದು ಮಾಡಿಕೊಳ್ಳುವುದು ಹೇಗೆ ?

ಶ್ರೇಯಾನ್‍ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ || 35 ||
ಅರ್ಥ : ತನ್ನ ಧರ್ಮವು ನೋಡುವುದಕ್ಕೆ ಶ್ರೇಷ್ಠವಲ್ಲವೆಂದು ಕಂಡಾಗ್ಯೂ ಮತ್ತು ತಾನು ಬೇರೆಯವರ ಧರ್ಮವನ್ನು ಚೆನ್ನಾಗಿ ಆಚರಿಸಬಲ್ಲೆನೆಂದು ಕಂಡಾಗ್ಯೂ ಪ್ರತಿಯೊಬ್ಬನಿಗೂ ತನ್ನ ಧರ್ಮವೇ ಹಿತಕರವು. ತನ್ನ ಧರ್ಮಾಚರಣೆಯಲ್ಲಿ ಮರಣವು ಪ್ರಾಪ್ತಿಯಾದಾಗ್ಯೂ ಅದು ಶ್ರೇಷ್ಠವು ಪರಧರ್ಮಾಚರಣೆಯು ಅಪಾಯಕರವಾದುದು.
ಇಲ್ಲಿ ‘ಧರ್ಮ’ ಎಂಬ ಶಬ್ದಕ್ಕೆ ನಾನಾತರಹದ ವ್ಯಾಖ್ಯೆಯನ್ನೂ ಮಾಡಲಾಗಿದೆ. ವರ್ಣಾಶ್ರಮ ಧರ್ಮ ಎಂಬ ಸಾಮಾನ್ಯ ಅರ್ಥವನ್ನು ಅನೇಕರು ಒಪ್ಪಿದಾಗ್ಯೂ ಆಧುನಿಕ ವೇದಾಂತಿಗಳು ಇದನ್ನು ವಿರೋಧಿಸುತ್ತಾರೆ. ಗೀತೆಯ ಉಪದೇಶದಂತೆ, ಜೀವನು ತನ್ನ ಹಿಂದಿನ ಜನ್ಮದಲ್ಲಿ ಸಂಚಿತವಾದ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಅನುಕೂಲವಾಗುವಂತಹ ಶರೀರ, ಮನಸ್ಸು ಬುದ್ಧಿಗಳನ್ನುಳ್ಳ ದೇಹವನ್ನು ಧರಿಸಿ, ತದನುಕೂಲವಾದ ಜಾತಿ ಹಾಗೂ ವಾತಾವರಣಗಳನ್ನು ಆರಿಸಿಕೊಂಡು ಜನ್ಮವೆತ್ತುತ್ತಾನೆಂಬುದು ನಿರ್ವಿವಾದವಾದುದು. ಈ ದೃಷ್ಟಿಯಿಂದ ಇಲ್ಲಿ ಧರ್ಮ ಎಂದರೆ ಜೀವನದ ನಿಯಮಗಳು ಎಂದರ್ಥವಾಗುತ್ತದೆ. ಜಾತಿಧರ್ಮ ಎಂಬ ಅರ್ಥವನ್ನೇ ಗ್ರಹಿಸುವುದು ಸಹ ಸೂಕ್ತವಾಗಿದೆ. ಏಕೆಂದರೆ ಆಯಾಯಾ ಜಾತಿ ಹಾಗೂ ವಾತಾವರಣದಲ್ಲಿ ಜನಿಸಿದ ಜೀವನು ಅನುಗುಣವಾದ ಕರ್ಮಗಳನ್ನೇ ಮಾಡಿ ತನ್ನ ವಾಸನೆಗಳನ್ನು ಬರಿದು ಮಾಡಿಕೊಳ್ಳಬೇಕಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಜಾತಿಯಲ್ಲಿ ಹುಟ್ಟಿದ ಜನರು ತಮ್ಮ ತಮ್ಮ ಜಾತಿಯ ಧರ್ಮಾಚರಣೆಗಳನ್ನು ಮಾಡಬೇಕೆಂದೂ, ಅದಕ್ಕಿಂತ ಉಚ್ಛ ಅಥವಾ ಕೆಳಗಿನ ಜಾತಿಯ ಧರ್ಮಾಚರಣೆಯನ್ನು ತಾವು ಚನ್ನಾಗಿ ಮಾಡಬಲ್ಲವೆಂದು ಕಂಡು ಬಂದಾಗ್ಯೂ ಅದು ಅಹಿತಕರವೆಂದೂ, ತನ್ನ ಜಾತಿಯ ಧರ್ಮಾಚರಣೆಯ ಕಾಲದಲ್ಲಿ ಮರಣವನ್ನೇ ಎದುರಿಸಬೇಕಾಗಿ ಬಂದರೂ ಅದು ಶ್ರೇಯಸ್ಕರವೆಂದೂ ಈ ಶ್ಲೋಕದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ರೀತಿಯ ಧರ್ಮಾಚರಣೆಯು ಆಯಾಯಾ ಜಾತಿಯಲ್ಲಿ ಜನ್ಮವೆತ್ತಿದ ಜೀವನಿಗೆ ಸ್ವಾಭಾವಿಕವೂ, ಪ್ರಕೃತಿಗನುಗುಣವಾದರೂ ಮತ್ತು ಎಲ್ಲದಕ್ಕೂ ಹೆಚ್ಚಾಗಿ ಸಂಚಿತವಾಸನೆಗಳನ್ನು ಬರಿದು ಮಾಡಿಕೊಳ್ಳಲು ಸುಲಭವಾದುದೂ ಆಗಿದೆ. ಇಲ್ಲಿ ಧರ್ಮ ಎಂಬ ಶಬ್ದದ ಅಂತರಾರ್ಥವೇನೆಂದರೆ, ಸಂಚಿತವಾಸನೆಗಳನ್ನು ಬರಿದು ಮಾಡಿಕೊಳ್ಳಲು ಅನುಗುಣವಾದ ಕರ್ಮಗಳು ಹಾಗೂ ಆಚರಣೆಗಳು ಎಂದರ್ಥ. ಈ ಸಂಚಿತವಾಸನೆಗಳು ಯಾವುವು. ಎಷ್ಟಿವೆ, ಹೇಗಿವೆ ಎಂದು ತಿಳಿದುಕೊಳ್ಳುವ ಸಾಧನೆ ಹಾಗೂ ಸಾಮಥ್ರ್ಯಗಳು ನಮಗಿಲ್ಲದಿರುವುದರಿಂದಲೂ ಜೀವನು ತನಗೆ ಅನುಕೂಲವಾದ ಶರೀರವನ್ನು ಆರಿಸಿ, ಸೂಕ್ತವಾದ ವಾತಾವರಣದಲ್ಲಿ ಜನ್ಮವೆತ್ತುವುದರಿಂದಲೂ ಅವನು ಜನಿಸಿದ ಜಾತಿಯ ಧರ್ಮವನ್ನೇ ಅವನ ಧರ್ಮ ಎಂದು ತಿಳಿದುಕೊಳ್ಳುವುದು ಹೆಚ್ಚು ಸೂಕ್ತವಾಗಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ವರ್ಣಾಶ್ರಮ ಧರ್ಮಗಳು ಲೋಪವಾಗಿರುವುದರಿಂದಲೂ ಆಯಾಯಾ ಧರ್ಮಾನುಯಾಯಿಗಳ ಆಚರಣೆಯು ಸಹ ಲುಪ್ತವಾಗಿರುವುದರಿಂದಲೂ ನಾನಾಕಾರಣ ಹಾಗು ಸಂದರ್ಭಗಳ ಒತ್ತಾಯದಿಂದ ಪ್ರತಿಯೊಬ್ಬನೂ ತನ್ನ ಜೀವನ ನಿರ್ವಹಣಕ್ಕಾಗಿ ತಾನು ಹುಟ್ಟಿದ ಜಾತಿ ಧರ್ಮಕ್ಕೆ ವಿರುದ್ಧವಾದ ಬೇರೆ ಬೇರೆ ದುಡಿಮೆಯನ್ನು ಮಾರ್ಗವನು ಅನುಸರಿಸಬೇಕಾಗಿರುವುದರಿಂದಲೂ, ವ್ಯಕ್ತಿಯು ಯಾವ ಧರ್ಮವನ್ನನುಸರಿಸಬೇಕೆಂಬ ಪ್ರಶ್ನೆಯು ಉದ್ಭ್ವಿಸುತ್ತದೆ. ನಮ್ಮ ವಾಸನೆಗಳನ್ನು ಬರಿದುಮಾಡಿಕ್ಕೊಳ್ಳಲು ಸೂಕ್ತವಾದ ನಮ್ಮ ಧರ್ಮವಾವುದು ಎಂದು ತಿಳಿದುಕೊಳ್ಳುವ ಸಾಮಥ್ರ್ಯವಾಗಲೀ, ಸಾಧನವಾಗಲೀ ನಮಗೆ ಲಭ್ಯವಿಲ್ಲದಿರುವುದರಿಂದ ಜೀವನದ ಓಘದಲ್ಲಿ ಸ್ವಾಭಾವಿಕವಾಗಿ ನಾವು ನಮ್ಮ ಜೀವನ ನಿರ್ವಹಣಕ್ಕಾಗಿ ಯಾವ ಯಾವ ಉದ್ಯೋಗವನ್ನು ಕೈಗೊಳ್ಳುತ್ತೇವೆಯೋ, ಅದೇ ನಮ್ಮ ಧರ್ಮಕ್ಕೆ ಅನುಕೂಲವಾದ ಕಾರ್ಯ ಎಂದು ನಿರ್ಧರಿಸಿಕೊಳ್ಳಬೇಕು. ಈ ಉದ್ಯೋಗದಲ್ಲಿ ನಮಗೆ ಲಾಭವೇ ಆಗಲೀ, ನಷ್ಟವೇ ಆಗಲೀ ಅದರ ಬಗ್ಗೆ ಚಿಂತಿಸದೆ ಅಥವಾ ಇತರೆ ಯಾವ ಕಾರಣದಿಂದಲೂ ಅದನ್ನು ತ್ಯಜಿಸದೆ ಅದೇ ಕರ್ಮವನ್ನು ತನ್ನ ಧರ್ಮ ಎಂಬ ದೃಷ್ಟಿಯಿಂದ ದಕ್ಷತೆಯಿಂದ, ಗೀತೆಯ ಉಪದೇಶದ ಹಿನ್ನಲೆಯನ್ನು
ಗಮನದಲ್ಲಿಟ್ಟುಕೊಂಡು ಆಚರಿಸಬೇಕು. ಈಗಿನ ಉದ್ಯೋಗಕ್ಕಿಂತ ಬೇರೆ ಉದ್ಯೋಗವನ್ನು ತಾನು ಚೆನ್ನಾಗಿ ಮಾಡಬಲ್ಲೆನು, ಮತ್ತು ಅದರಲ್ಲಿ ಹೆಚ್ಚು ಹಣವನ್ನು ಸಂಪಾದಿಸಬಲ್ಲೆನು ಎಂದು ಕಂಡಾಗ್ಯೂ ಅದನ್ನು ಪರಧರ್ಮ ಎಂದು ತಿಳಿದು ತ್ಯಜಿಸಬೇಕು. ಪ್ರಕೃತಿಯ ಓಘದಲ್ಲಿ ಸಾರಾಸಾರ ವಿಚಾರ ಮಾಡಿ ಮೊಟ್ಟಮೊದಲು ತಾನು ಆರಿಸಿಕೊಂಡು ಸ್ಥಿರವಾದ ಉದ್ಯೋಗವೇ ತನ್ನ ಜೀವನ ನಿರ್ವಹಣದ ಧರ್ಮ ಎಂದು ತಿಳಿಯಬೇಕು .

ಅರ್ಜುನ ಉವಾಚ
ಅಥ ಕೇನ ಪ್ರಯುಕ್ತೋ&ಯಂ ಪಾಪಂ ಚರತಿ ಪೂರುಷಃ |
ಅನಿಚ್ಛನ್ನಪಿ ವಾಷ್ಣೇಯ ಬಲಾದಿವ ನಿಯೋಜಿತಃ || 36 ||
ಅರ್ಜುನನು ಹೇಳುತ್ತಾನೆ
ಅರ್ಥ : ವಾಷ್ರ್ಣೇಯನೇ ಮನುಷ್ಯನು ತನಗೆ ಇಷ್ಟವಿಲ್ಲದಿದ್ದಾಗ್ಯೂ ಯಾವುದೋ ಒಂದು ಶಕ್ತಿಯಿಂದ ಬಲಾತ್ಕರಿಸಲ್ಪಟ್ಟಂತೆ ಪಾಪವನ್ನು ಆಚರಿಸುತ್ತಾನಲ್ಲಾ ಅದು ಏಕೆ ?
ಮನುಷ್ಯನಲ್ಲಿ ಸದ್ಭುದ್ಧಿ ಮತ್ತು ದುರ್ಬದ್ಧಿ ಇವೆರಡೂ ಇವೆ. ಕೆಟ್ಟ ಕೆಲಸಗಳನ್ನು ಮಾಡುವಾಗ ವಿವೇಕವು ಎಚ್ಚರಿಕೆಯನ್ನು ಕೊಡುತ್ತದೆ. ಆದರೆ ಆಸೆಗಳ ಹಿಡಿತದಲ್ಲಿ ಸಿಕ್ಕ ಮನುಷ್ಯನು ಆ ಎಚ್ಚರಿಕೆಯನ್ನು ಗಮನಿಸದೆ ಇಲ್ಲವೆ ತಾನು ತೀರ್ಮಾನಿಸಿದುದೇ ಸರಿಯಾದ ಮಾರ್ಗ ಎಂಬ ನಂಬಿಕೆಯಿಂದ ಪಾಪಕಾರ್ಯಗಳನ್ನು ಮಾಡುತ್ತಾನೆ. ಇದು ತನ್ನ ಒಂದು ದೌರ್ಬಲ್ಯ ಎಂಬ ಅರಿವು ಅರ್ಜುನನಿಗುಂಟಾಗ ಹತ್ತಿದೆ. ತಾನು ಯುದ್ಧದಿಂದ ಹಿಂದೆ ಸರಿಯಬೇಕೆಂಬ ಮೊದಲಿನ ತೀರ್ಮಾನವು ಸರಿಯಲ್ಲ ಎಂದು ತೋರಹತ್ತಿದೆ. ಅಂತೆಯೇ ಈ ಪ್ರಶ್ನೆಯನ್ನು ಕೇಳಿದ್ದಾನೆ.
ಶ್ರೀ ಭಗವಾನುವಾಚ
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾವಿದ್ಧ್ಯೇನಮಿಹ ವೈರಿಣಮ್ || 37 ||
ಅರ್ಥ : ಆಸೆ ಮತ್ತು ಸಿಟ್ಟು ಇವೆರಡು ರಜೋಗುಣದಿಂದ ಹುಟ್ಟಿದವುಗಳು. ಇವು ಮಹಾಪಾಪಿಗಳೂ, ಸರ್ವವನ್ನೂ ಭಕ್ಷಿಸ ತಕ್ಕವುಗಳು ಮನುಷ್ಯನ ಶತ್ರುಗಳೂ ಆಗಿವೆ ಎಂದು ತಿಳಿ.
ಕಾಮ ಏಷ ಕ್ರೋಧ ಏಷ : ಯಾವುದಾದರೂ ಒಂದು ವಸ್ತುವನ್ನು ಇಲ್ಲವೆ ಇಂದ್ರಿಯ ವಿಷಯವನ್ನು ಸಂಪಾದಿಸಿಕೊಳ್ಳುವ ಮತ್ತು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮನಸ್ಸಿನಲ್ಲಿ ಹುಟ್ಟುವ ವಿಚಾರ ತರಂಗಗಳಿಗೆ ‘ಆಸೆ’ [ಕಾಮ] ಎಂದು ಹೆಸರು. ಈ ಆಸೆಗಳು ಇಂದ್ರಿಯಗಳ ಮೂಲಕ ಹೊರಬಿದ್ದು ಇಂದ್ರಿಯ ವಿಷಯ (ವಸ್ತು)ಗಳಲ್ಲಿ ಪ್ರವೇಶಿಸುತ್ತವೆ. ಮಧ್ಯದಲ್ಲಿ ವಿಘ್ನವೊದಗಿದರೆ ಆಗ ಅದೇ ವಿಚಾರ ತರಂಗಗಳು ಪರಿವರ್ತಿತವಾಗಿ, ಹಿಂತಿರುಗಿ ಮನಸ್ಸಿಗೆ ಬರುತ್ತವೆ. ತತ್ಪರಿಣಾಮವೇ ‘ಕೋಪ’. ಮನುಷ್ಯನು ಮಾಡುವ ನಾನಾ ತರಹದ ಹೀನಕೃತ್ಯಗಳು ಮತ್ತು ಪಾಪಗಳಿಗೆ ಕಾಮ (ಆಸೆ) ಮತ್ತು ಕ್ರೋಧ ಇವೇ ಕಾರಣವಾಗಿವೆ. ಇವು ಮನುಷ್ಯನ ವಿಚಾರ ಶಕ್ತಿಯನ್ನು ನಾಶಮಾಡಿ ಅವನನ್ನು ಪಶುವೃತ್ತಿಗೆ, ರಾಕ್ಷಸ ವೃತ್ತಿಗೆ ನೂಕಿ ಅವನಿಂದ ಮಾಡಬಾರದಂತಹ ನೀಚ ಕರ್ಮಗಳನ್ನು ಮಾಡಿಸುತ್ತವೆ. ಆದುದರಿಂದ ಇವೆರಡನ್ನೂ ‘ಮಹಾಶನ’ ಮತ್ತು ‘ಮಹಾಪಾಪಾ’ ಎಂದು ಕರೆಯಲಾಗಿದೆ.

ಆಸೆಯು ನಮ್ಮ ಶತ್ರು ಹೇಗೆ ?

ಧೂಮೇನಾವ್ರಿಯತೇ ವಹ್ನಿರ್ಯಥಾ„ದರ್ಶೋ ಮಲೇನ ಚ |
ಯಥೋಲ್ಭೇನಾವೃತೋ ಗರ್ಭಸ್ತಥಾ ತೇನೇದಮಾವೃತಮ್ || 38 ||
ಅರ್ಥ : ಬೆಂಕಿಯ ಹೊಗೆಯಿಂದಲೂ ಕನ್ನಡಿಯು ಧೂಳಿನಿಂದಲೂ ಗರ್ಭದಲ್ಲಿರುವ ಪಿಂಡವು ಗರ್ಭವೇಷ್ಟನ ಅಥವಾ ಮಾಸದ ಚೀಲದಿಂದಲೂ ಮುಚ್ಚಲ್ಪಟ್ಟಿರುವಂತೆ ಬುದ್ಧಿಯು ಕಾಮ ಮತ್ತು ಕ್ರೋಧಗಳಿಂದ ಮುಚ್ಚಲ್ಪಟ್ಟಿದೆ.
ಮನುಷ್ಯನಲ್ಲಿ ಉಂಟಾಗುವ ಕಾಮ (ಆಸೆ)ವನ್ನು ಮೂರು ವಿಧವಾಗಿ ವಿಂಗಡಿಸಬಹುದು
1. ಆಸೆಯು ತೀರ ಕೆಳಮಟ್ಟದಲ್ಲಿದ್ದು ಕೇವಲ ಶಾರೀರಿಕ ಸುಖವನ್ನು ಮಾತ್ರ ಬಯಸುವುದು
2. ಇದಕ್ಕಿಂತ ಮೇಲ್ಮಟ್ಟಕ್ಕೇರಿ ಅಧಿಕಾರ, ಸಂಪತ್ತು, ಶಕ್ತಿ ಕೀರ್ತಿಗಳನ್ನು ಬಯಸುವುದು
3. ಇನ್ನೂ ಮೇಲ್ಮಟ್ಟಕ್ಕೇರಿ ಆತ್ಮಜ್ಞಾನ ಮತ್ತು ಮನಃ ಶಾಂತಿಯನ್ನು ಬಯಸುವುದು. ಇಂದ್ರಿಯ ವಿಷಯಗಳ ಮೇಲೆ ನಮಗುಂಟಾಗುವ ಮೋಹದ ದರ್ಜೆಗನುಗುಣವಾಗಿ ಕಾಮವನ್ನು ಕ್ರಮಶಃ ತಾಮಸಿಕ ರಾಜಸಿಕ ಮತ್ತು ಸಾತ್ವಿಕ ಎಂಬುದಾಗಿ ವಿಂಗಡಿಸಬಹುದು.
ಹೊಗೆಯ ಉಪಮಾನದಲ್ಲಿ ಬೆಂಕಿಯನ್ನು ಆವರಿಸಿದ ಹೊಗೆಯು ಸೂಕ್ಷ್ಮವಾಗಿರುವುದರಿಂದಲೂ ಹೊಗೆಯ ಆವರಣವಿದ್ದಾಗ್ಯೂ ಬೆಂಕಿಯು ಎದ್ದು ಕಾಣುವುದರಿಂದಲೂ, ಈ ಆವರಣವು ಜಾಗ್ರತೆ ನಾಶವಾಗಿ ಬೆಂಕಿಯು ಎದ್ದು ಕಾಣುವುದರಿಂದಲೂ, ಇದನ್ನು ಸಾತ್ವಿಕ ಕಾಮಕ್ಕೆ ಹೋಲಿಸಲಾಗಿದೆ. ಧೂಳಿನ ಉಪಮಾನದಲ್ಲಿ ಧೂಳು ಕನ್ನಡಿಯನ್ನು ಮುಚ್ಚಿ ಪ್ರತಿಬಿಂಬವು ಕಾಣದಂತೆ ಮಾಡಿದೆ. ಇಲ್ಲಿ ಆವರಣವು ಪೂರ್ಣವಾಗಿದೆ. ಇದರ ಪರಿಣಾಮವು ಸಹ ಮೊದಲಿನದಕ್ಕಿಂತ ಕಷ್ಟ. ಹೊಗೆಯಂತೆ ಕೇವಲ ಗಾಳಿ ಬೀಸುವಿಕೆಯಿಂದ ಈ ಆವರಣವು ಹೋಗುವುದಿಲ್ಲ. ಇದನ್ನು ತೆಗೆಯಲು ಕನ್ನಡಿಯನ್ನು ಸಾಕಷ್ಟು ತಿಕ್ಕಿ ತೊಳೆಯುವ ಕಾರ್ಯವು ಅವಶ್ಯಕ. ಧೂಳು ಅತಿದಪ್ಪವಾಗಿದ್ದರೆ ಮತ್ತು ಜಿಗುಟಾಗಿದ್ದರೆ ಪ್ರತಿಬಿಂಬವು ಸ್ವಲ್ಪವೂ ಕಾಣುವುದಿಲ್ಲ. ಇದನ್ನು ‘ರಾಜಸಿಕ ಕಾಮ’ ಎಂದು ಕರೆಯಬಹುದು. ಉಲ್ಬವು ಗರ್ಬಪಿಂಡವನ್ನು ಮುಚ್ಚಿದ ಉಪಮಾನ ಇದು ತಾಮಸಿಕ ಕಾಮವಾಗಿದೆ. ಇಲ್ಲ ಆವರಣವು ಸಂಪೂರ್ಣವಾಗಿಯೂ ಬಲವಾಗಿಯೂ ಇದೆ. ಈ ಆವರಣದಿಂದಾಗಿ ಗರ್ಭಪಿಂಡವು ಸ್ವಲ್ಪವೂ ಗೋಚರಿಸುವುದಿಲ್ಲ. ಕಾಲಕ್ರಮೇಣ ತಾನಾಗಿಯೇ ಅದು ಹೊರಕ್ಕೆ ಬರುವವರೆಗೂ ಅದು ಕಾಣುವುದಿಲ್ಲ. ಅಂತೆಯೇ ತಾಮಸಿಕ ಕಾಮವಿರುವ ಮನುಷ್ಯನಲ್ಲಿ ಸಹ ಶಾರೀರಿಕ ಸುಖದ ಬಯಕೆಯು ಅತಿ ತೀವ್ರವಾಗಿದ್ದು ಅದು ಬುದ್ಧಿಯನ್ನೂ ಆತ್ಮಜ್ಞಾನವನ್ನೂ ಸಂಪೂರ್ಣವಾಗಿ ಮುಚ್ಚಿರುತ್ತದೆ. ದೀರ್ಘಕಾಲದ ನಂತರ ಆಸೆಗಳ ವಾಸನೆಗಳೆಲ್ಲವೂ ಬರಿದಾದ ಮೇಲೆ ಮಾತ್ರ ಅವನು ಮೇಲ್ಮಟ್ಟಕ್ಕೇರ ಬಹುದಾಗಿದೆ. ಈ ರೀತಿಯಾಗಿ ಸಾತ್ವಿಕ ರಾಜಸಿಕ, ತಾಮಸಿಕ ಆಸೆಗಳು ನಮ್ಮಲ್ಲಿರುವ ಆತ್ಮಜ್ಯೋತಿಯನ್ನು ಮುಚ್ಚಿ ಅದು ಕಾಣದಂತೆ ಮಾಡುತ್ತವೆ.

ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ |
ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ || 39 ||
ಅರ್ಥ : ಕೌಂತೇಯನೇ, ಜ್ಞಾನಿಯ ಬುದ್ಧಿಯು ನಿತ್ಯ ವೈರಿಯಾದ ಬೆಂಕಿಯ ಹಾಗೆ ತೃಪ್ತಿಪಡಿಸಲು ಅಸಾಧ್ಯವಾದ, ಈ ಆಸೆಯಿಂದ ಮುಚ್ಚಲ್ಪಟ್ಟಿದೆ.
ಮನುಷ್ಯನ ಬುದ್ಧಿಯು ಆಸೆಯಿಂದ ಕವಿಯಲ್ಪಟ್ಟರೆ ಅವನ ವಿಚಾರಶಕ್ತಿ ಹಾಗೂ ವಿವೇಕವು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಇಲ್ಲಿ ಸೂಚಿಸಲಾಗಿದೆ. ಬೆಂಕಿಯನ್ನೂ ಆರಿಸಲು ತುಪ್ಪವನ್ನೂ ಹೊಯ್ದರೆ, ಬೆಂಕಿಯು ಆರದೆ ಪುನಃ ಪುನಃ ಹೆಚ್ಚುತ್ತಲೇ ಹೋಗುವಂತೆ ಆಸೆಯನ್ನು ತೃಪ್ತಿಪಡಿಸಿದ ಹಾಗೆಲ್ಲಾ ಅದು ಇನ್ನೂ ಬುದ್ಧಿ ವೃದ್ಧಿಯಾಗುತ್ತಲೇ ಹೋಗುತ್ತದೆ. ಅದನ್ನು ತೃಪ್ತಿಪಡಿಸಲು ಸಾಧ್ಯವೇ ಇಲ್ಲ.
ಆಸೆಯನ್ನು ಗೆಲ್ಲಲು ಸುಲಭವಾಗಲೆಂದು ಆಸೆಯು ನೆಲೆಸಿರುವ [ಅಡಗಿರುವ] ಸ್ಥಳಗಳನ್ನು ತಿಳಿಸಲಾಗಿದೆ.

ಇಂದ್ರಿಯಾಣಿ ಮನೋಬುದ್ಧಿರಸ್ಯಾಷ್ಟಾನಮುಚ್ಯತೇ |
ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್ || 40 ||
ಅರ್ಥ : ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವು ಆಸೆಯು ನೆಲೆಸಿರುವ ಸ್ಥಾನಗಳು ಇವುಗಳ ಮುಖಾಂತರ ಅದು ಜ್ಞಾನಶಕ್ತಿಯನ್ನು ಮುಚ್ಚಿ ಅಜ್ಞಾನವು ಕವಿಯುವಂತೆ ಮಾಡುತ್ತದೆ .
ದೊಡ್ಡ ದರೋಡೆಕಾರನು ತನ್ನ ಕಾರ್ಯಕ್ಷೇತ್ರವು ವಿಸ್ತಾರವಾದಂತೆ ತಾನು ನೆಲೆಸುವ ಹಾಗೂ ಕಾರ್ಯಕ್ಷೇತ್ರದ ಹಲವಾರು ಕೇದ್ರಗಳನ್ನು ಕಟ್ಟಿಕೊಳ್ಳುವಂತೆ ಆಸೆಯು ತನ್ನ ವಿಸ್ತೃತ ಕಾರ್ಯದ ದೃಷ್ಟಿಯಿಂದ ಇಂದ್ರಿಯಗಳು ಮನಸ್ಸು ಮತ್ತು ಬುದ್ಧಿಗಳಲ್ಲಿ ತನ್ನ ಕಾರ್ಯಕೇಂದ್ರಗಳನ್ನು ಕಟ್ಟಿಕೊಂಡಿದೆ. ಮೊಟ್ಟಮೊದಲ ಕಾರ್ಯಕ್ಷೇತ್ರವು ಇಂದ್ರಿಯಗಳಲ್ಲಿರುತ್ತದೆ. ವಿಚಾರ ತರಂಗಗಳು ನಂತರ ಮನಸ್ಸಿಗೆ ತಲುಪಿ ಅದು ಆಸೆಯಿಂದ ಆವರಿಸಲ್ಪಟ್ಟ ಹಾಗೆ ಅಲ್ಲಿ ಎರಡನೆಯ ಕಾರ್ಯಕ್ಷೇತ್ರವು ನಿರ್ಮಾಣವಾಗುತ್ತದೆ. ಕೊನೆಯದಾಗಿ ಹಿಂದಿನ ಜನ್ಮದ ವಾಸನೆಗಳು ವಿಕಾಸವಾದ ಹಾಗೆ ಬುದ್ಧಿಯು ಇನ್ನೊಂದು ಕಾರ್ಯಕ್ಷೇತ್ರವಾಗಿ ಪರಿಣಮಿಸುತ್ತದೆ. ಹೀಗೆ ಅಜ್ಞಾನದಿಂದ ಆವೃತನಾದ ವ್ಯಕ್ತಿಯು ಅಹಂಕಾರಯುತನಾಗಿ ತಾನೇ ಶರೀರ ಎಂದು ಬಗೆದು ಶಾರೀರಿಕ ಭೋಗಗಳಲ್ಲಿ ನಿರತನಾಗುತ್ತಾನೆ ಮನಸ್ಸೇ ತಾನು ಎಂದು ತಿಳಿದು ಮಾನಸಿಕ ಭೋಗಗಳಲ್ಲಿ ನಿರತನಾಗುತ್ತಾನೆ ಕೊನೆಯದಾಗಿ ಬುದ್ಧಿಯೇ ತಾನು ಎಂದು ತಿಳಿದು ಹಿಂದಿನವಾಸನೆಗಳನ್ನು ಜ್ಞಾಪಿಸಿಕೊಂಡು ಆ ಭೋಗಗಳಲ್ಲಿ ನಿರತನಾಗುತ್ತಾನೆ.

ಈ ಕೆಳಗಿನ ಶತ್ರುವನ್ನು ಗೆಲ್ಲುವ ಉಪಾಯವೇನು ?

ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ |
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ || 41 ||
ಅರ್ಥ : ಆದ್ದರಿಂದ ಭರತಶ್ರೇಷ್ಠನೇ ಮೊದಲು ಇಂದ್ರಿಯಗಳನ್ನು ನಿಗ್ರಹಿಸಿ ಜ್ಞಾನವಿಜ್ಞಾನಗಳನ್ನು ನಾಶಗೊಳಿಸುವ, ಪಾಪಿಯಾದ ಈ ಆಸೆಯನ್ನು ಕೊಂದುಬಿಡು.
ಇಲ್ಲಿ ಸಹ ಶ್ರೀಕೃಷ್ಣನು ತಾರ್ಕಿಕವಾಗಿ ವಿಷಯವನ್ನು ಸಮರ್ಥಿಸಿ ನಂತರ ತನ್ನ ತೀರ್ಮಾನವನ್ನು ಹೇಳಿದ್ದಾನೆ.
ಜ್ಞಾನ ಎಂದರೆ ಶಾಸ್ತ್ರೀಯ ಗ್ರಂಥಗಳ ಇಲ್ಲವೇ ಗುರುವಿನ ಮೂಲಕ ತಿಳಿದುಕೊಂಡು ಪ್ರಪಂಚ, ವಿವಿಧ ವಸ್ತು ಅಥವಾ ವಿಷಯಗಳ ತಿಳುವಳಿಕೆ ಹಾಗೂ ಆತ್ಮನ ಸಂಬಂಧದ ತಿಳುವಳಿಕೆ. ಇದೇ ಜ್ಞಾನವನ್ನು ತಾನು ಸ್ವತಃ ಅನುಭವಿಸಿ ಅರಿತುಕೊಂಡರೆ ಅದಕ್ಕೆ ವಿಜ್ಞಾನ ಎಂದು ಹೆಸರು.
ನಾವು ನಮ್ಮ ಸಾಧನೆಯಿಂದ ಗಳಿಸಿದ ಹಾಗೂ ಗಳಿಸುವ ಎಲ್ಲಾ ತರಹದ ಜ್ಞಾನಸಾಧನೆಗೆ ಮತ್ತು ಬುದ್ಧಿ ಶಕ್ತಿಯ ಮೂಲಕ, ಗುರುವಿನ ಹಾಗೂ ಶಾಸ್ತ್ರಗಳ ಆದೇಶವನ್ನು ತಿಳಿದುಕೊಂಡು ಅದನ್ನು ಆಚರಣೆಯಲ್ಲಿ ತರುವುದಕ್ಕೆ ಆಸೆಯು ಬಲವಾದ ಆತಂಕವನ್ನುಂಟು ಮಾಡುವ ಶತ್ರುವಾಗಿದೆ.

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ |
ಮನಸ್ಸಸ್ತು ಪರಾ ಬುಧ್ಧಿರ್ಯೋ ಬುದ್ಧೇಃ ಪರಸತ್ತು ಸಃ || 42 ||
ಅರ್ಥ : ಇಂದ್ರಿಯಗಳು ಶರೀರದ ಇತರೆ ಭಾಗಗಳಿಗಿಂತ ಶ್ರೇಷ್ಠವಾದವುಗಳು. ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠವಾದುದು. ಬುದ್ಧಿಯು ಮನಸ್ಸಿಗಿಂತ ಶ್ರೇಷ್ಠವು ಬುದ್ಧಿಗಿಂತ ಆತ್ಮನು ಶ್ರೇಷ್ಠನು.
ಶತ್ರುವು ನೆಲೆಸಿರುವ ಸ್ಥಳಗಳನ್ನು ಹೀಗೆ ಕಂಡುಹಿಡಿದು ಇಂದ್ರಿಯಗಳು ಇಂದ್ರಿಯ ವಿಷಯ ಭೋಗಗಳಲ್ಲಿ ಮಗ್ನವಾಗದಂತೆ ನಿಗ್ರಹಿಸಿ ಮನಸ್ಸನ್ನು ಬುದ್ಧಿಯ ಕಡೆಗೆ ತಿರುಗಿಸಿ ನಂತರ ಆತ್ಮಧ್ಯಾನದಲ್ಲಿ ನಿಶ್ಚಿತಗೊಳಿಸಬೇಕು.

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ |
ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ || 43 ||
ಅರ್ಥ : ಆತ್ಮನು ಬುದ್ಧಿಗಿಂತ ಶ್ರೇಷ್ಠನು ಎಂಬುದನ್ನು ಹೀಗೆ ತಿಳಿದುಕೊಂಡು ನಿನ್ನನ್ನು ಆತ್ಮನವಶಗೊಳಿಸಿ ಮಹಾಬಾಹುವೇ ಆಸೆ ಎಂಬ ಮಹಾಶತ್ರುವನ್ನು ಕೊಂದುಬಿಡು.
ಹೀಗೆ ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಬುದ್ಧಿಯ ಕಡೆಗೆ ತಿರುಗಿಸಿ ಆತ್ಮಧ್ಯಾನದಲ್ಲಿ ನಿರತನಾಗಿದ್ದು ಮುಂದೆ ಸಹ ಉತ್ಪನ್ನವಾಗುವ ಆಸೆಗಳನ್ನು ನಾಶಮಾಡಿದರೆ ಮಾತ್ರ ಆತ್ಮಾನಂದವನ್ನು ಪಡೆಯಬಹುದು.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಕರ್ಮಯೋಗೋ ನಾಮ
ತೃತೀಯೋ„ಧ್ಯಾಯಃ