S O U L B L I S S

Loading

Bhagavad Gita – Vinayak Rao Bapat – Chapter 5

ಐದನೆಯ ಅಧ್ಯಾಯ
ಕರ್ಮಸನ್ಯಾಸಯೋಗ
ಪೀಠಿಕೆ
ಇದುವರೆಗಿನ ಉಪದೇಶವು ಅರ್ಜುನನ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡಿದೆ. ಕರ್ಮ ಮಾಡುವುದೇ ಬೇಡ ಎಂದು ತೀರ್ಮಾನಿಸಿ ಯುದ್ಧ ಮಾಡಲು ಹಿಂಜರಿದ ಅವನು ಕರ್ಮಮಾಡುವುದು ಒಳ್ಳೆಯದು ಎಂದು ಕ್ರಮಶಃ ತಿಳಿದುಕೊಳ್ಳಲು ಪ್ರಾರಂಭಿಸಿದ್ದಾನೆ. ಆದರೆ ಕೃಷ್ಣನು ಹೇಳಿದ, “ಆತ್ಮನ್ಯೇವಾತ್ಮನಾತುಷ್ಟಃ” (ಅ.2 ಶ್ಲೋಕ 55), “ಮಯಿ ಸರ್ವಾಣಿ ಕರ್ಮಾಣಿ ಸನ್ಯಸ್ಯಾಧ್ಯಾತ್ಮ ಚೇತಸಾ” (ಅ.3 ಶ್ಲೋಕಾ 30) ಈ ವಾಕ್ಯಗಳಿಂದಲೂ (ಅ.4 ಶ್ಲೋ 35 ಇತ್ಯಾದಿ), ಕರ್ಮ ಮಾಡುವುದು ಶ್ರೇಷ್ಠವೋ, ಸನ್ಯಾಸವು ಶ್ರೇಷ್ಠವೋ ಎಂಬುದನ್ನು ನಿರ್ಣಯಿಸಲಾಗದೆ ಈ ಅಧ್ಯಾಯದ ಪ್ರಾರಂಭದಲ್ಲಿ ತನ್ನ ಈ ಸಂಶಯದ ಪರಿಹಾರಕ್ಕಾಗಿ ಪ್ರಶ್ನೆಯನ್ನು ಕೇಳಿದ್ದಾನೆ. ಯುದ್ಧದಿಂದ ಹಿಂತಿರುಗಿ ಸನ್ಯಾಸವನ್ನು ಸ್ವೀಕರಿಸಬೇಕೆಂದು ಅರ್ಜುನನ ಮನಸ್ಸಿನಲ್ಲಿದ್ದುದರಿಂದ ಮೇಲೆ ತಿಳಿಸಿದ ವಾಕ್ಯಗಳು ಸನ್ಯಾಸವನ್ನೇ ಪ್ರತಿಪಾದಿಸುತ್ತವೆ ಎಂದು ಅವನು ತಪ್ಪಾಗಿ ತಿಳಿದುಕೊಂಡು ಈ ಪ್ರಶ್ನೆಯನ್ನು ಕೇಳಿದ್ದಾನೆ.
ಆದರೆ ವಸ್ತುತಃ ಶ್ರೀಕೃಷ್ಣನು ಕರ್ಮತ್ಯಾಗ ಮಾಡಿ ಸನ್ಯಾಸವನ್ನು ಸ್ವೀಕರಿಸಬೇಕೆಂದು ಎಲ್ಲಿಯೂ ಹೇಳಲಿಲ್ಲ. ಕರ್ಮಫಲವನ್ನು ತ್ಯಾಗಮಾಡಬೇಕೆಂದು ಹೇಳಿದ್ದಾನೆಯೇ ಹೊರತು ಕರ್ಮತ್ಯಾಗವನ್ನಲ್ಲ. ಕರ್ಮ ಮಾಡುವುದರ ಮೂಲಕ ಅಭಿವೃದ್ಧಿಯನ್ನು ಸಾಧಿಸಿ ಕ್ರಮಶಃ ಆತ್ಮಜ್ಞಾನವನ್ನು ಪಡೆಯಬಹುದೆಂಬುದನ್ನು ವಿವರಿಸಿದ್ದಾನೆ. ಆತ್ಮಜ್ಞಾನ ಸಾಧನೆಯು ಪ್ರಾರಂಭದಿಂದಲೂ ವಿವಿಧ ಅಂತಸ್ತುಗಳಲ್ಲಿ ಕ್ರಮಶಃ ಮೇಲಕ್ಕೇರುತ್ತಾ ಹೋಗಬೇಕೆಂದು ಸಾಧನೆಗೆ ಅನುಕೂಲವಾಗುವಂತೆ ಅದರ ಎಲ್ಲಾ ವಿವರಗಳನ್ನು ಸಹ ತಿಳಿಸಿದ್ದಾನೆ. ಪ್ರಾರಂಭದಲ್ಲಿ ಆಸೆಯಿಂದ ಕೂಡಿ ಯಜ್ಞಯಾಗಾದಿ ಕರ್ಮಗಳನ್ನು ಮಾಡುವುದು. ನಂತರ ಫಲಾಸೆಯನ್ನು ತ್ಯಾಗಮಾಡಿ ಕರ್ಮಯೋಗ ರೀತ್ಯಾ ಹನ್ನೆರಡು ತರಹದ ‘ಯಜ್ಞ’ಗಳನ್ನು ಮಾಡಿ. ಮನೋಬುದ್ಧಿ ನಿಗ್ರಹ ಮಾಡಿಕೊಂಡು ಮುಂದಿನ ಅಂತಸ್ತಿಗೇರಲು ಪೂರ್ವ ತಯಾರಿ ಮಾಡಿಕೊಳ್ಳುವುದು ಮತ್ತು ಕೊನೆಯಾಗಿ ಧ್ಯಾನಮಗ್ನನಾಗಿ ಆತ್ಮಾನಂದವನ್ನು ಪಡೆಯುವುದು ಹೀಗೆ ಸಾಧನೆಯ ಮೂರು ಘಟ್ಟಗಳನ್ನು ವರ್ಣಿಸಲಾಗದೆ ಸಾಧನೆಯ ಐದನೆಯ ಅಧ್ಯಾಯವು ಕರ್ಮಯೋಗ ಮತ್ತು ಧ್ಯಾನಯೋಗಗಳ ಮಧ್ಯದ ಸೇತುವೆಯಂತಿದೆ. ಆದ್ದರಿಂದ ಇದಕ್ಕೆ ಕರ್ಮಸನ್ಯಾಸಯೋಗ ಎಂದು ಹೆಸರು.

ಐದನೇ ಅಧ್ಯಾಯ
ಕರ್ಮಸಂನ್ಯಾಸಯೋಗ
ಅರ್ಜುನ ಉವಾಚ
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ |
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ || 1 ||
ಅರ್ಥ : ಕೃಷ್ಣನೇ, ನೀನು ಒಮ್ಮೆ ಸನ್ಯಾಸವನ್ನು ಹೊಗಳುತ್ತೀಯೆ, ಇನ್ನೊಮ್ಮೆ ಕರ್ಮಯೋಗವನ್ನು ಹೊಗಳುತ್ತೀಯೆ. ಇವೆರಡರಲ್ಲಿ ಯಾವುದು ಶ್ರೇಷ್ಠವೋ ಅದನ್ನು ನನಗೆ ಸ್ಪಷ್ಟವಾಗಿ ತಿಳಿಸು.
ಅರ್ಜುನನು ತನ್ನ ಮನೋದೌರ್ಬಲ್ಯವನ್ನು ಕ್ರಮೇಣ ಕಳೆದುಕೊಂಡು, ಕರ್ಮಯೋಗದ ತತ್ವವನ್ನು ಒಪ್ಪಲು ಆರಂಭಿಸಿದ್ದಾನೆ. ಆದರೆ ಕೃಷ್ಣನು ಹಿಂದಿನ ಅಧ್ಯಾಯದ ಕೊನೆಯಲ್ಲಿ ಜ್ಞಾನದ ವಿಚಾರದ ವಾಕ್ಯಗಳನ್ನು ಹೇಳಿ ಶ್ರೀಕೃಷ್ಣನು ಹೇಳಿದ ಎರಡು ಮಾರ್ಗಗಳು ಬೇರೆ ಬೇರೆ ಎಂದು ತಿಳಿದುಕೊಂಡು ತನ್ನ ಅನುಮಾನದ ಪರಿಹಾರಕ್ಕಾಗಿ ಈ ಪ್ರಶ್ನೆಯನ್ನು ಕೇಳಿದ್ದಾನೆ.
ಶ್ರೀಭಗವಾನುವಾಚ
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ |
ತಯೋಸ್ತು ಕರ್ಮಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ || 2 ||
ಭಗವಂತನು ಹೇಳುತ್ತಾನೆ
ಅರ್ಥ : ಸನ್ಯಾಸ ಮತ್ತು ಕರ್ಮಯೋಗ ಇವೆರಡೂ ಶ್ರೇಯಸ್ಕರವಾದವುಗಳೇ. ಆದರೆ ಇವೆರಡರಲ್ಲಿ ಸನ್ಯಾಸಕ್ಕಿಂತ ಕರ್ಮಯೋಗವು ಹಿರಿದಾದುದು.
ಈ ವಿಷಯವನ್ನು ಸ್ಪಷ್ಟೀಕರಿಸಲು ಸನ್ಯಾಸಿಯ ಲಕ್ಷಣಗಳನ್ನು ಹೇಳಲಾಗುತ್ತದೆ.

ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷಿ ನ ಕಾಂಕ್ಷತಿ |
ನಿದ್ರ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ || 3 ||
ಅರ್ಥ : ಸನ್ಯಾಸಿಗೆ ಯಾವುದರ ಮೇಲೂ ಆಸೆಯಾಗಲೀ, ದ್ವೇಷವಾಗಲೀ ಇಲ್ಲ ಮತ್ತು ಅವನು ದ್ವಂದ್ವಗಳಲ್ಲಿ ಉದ್ರಿಕ್ತನಾಗುವುದಿಲ್ಲ. ಮಹಾಬಾಹುವೇ ಇಂತಹವನು ಸಂಸಾರಬಂಧನದಿಂದ ಬಿಡುಗಡೆಯನ್ನು ಹೊಂದುತ್ತಾನೆ.
ಇಲ್ಲಿ ಸನ್ಯಾಸಿಯ ವರ್ಣನೆಯನ್ನು ಮಾಡುವಾಗ ಹೊರಗಿನ ವೇಷದ ಬಗ್ಗೆ ಮಹತ್ವವನ್ನು ಕೂಡದೆ ಮಾನಸಿಕ ಹಾಗೂ ಬೌದ್ಧಿಕ ತ್ಯಾಗಕ್ಕೆ ಮಹತ್ವ ಕೊಟ್ಟಿರುವುದನ್ನು ಗಮನಿಸಬೇಕು.

ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಾಃ |
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ || 4 ||
ಅರ್ಥ : ಸಾಂಖ್ಯ ಅಂದರೆ ಜ್ಞಾನ, ಮತ್ತು ಯೋಗ. ಇವೆರಡೂ ಬೇರೆ ಬೇರೆ ಮಾರ್ಗಗಳೆಂದು ಮಕ್ಕಳು (ತಿಳುವಳಿಕೆಯಿಲ್ಲದವರು) ತಿಳಿಯುತ್ತಾರೆ. ಬುದ್ಧಿವಂತರು ಹೀಗೆ ತಿಳಿಯುವುದಿಲ್ಲ. ಯಾವುದೇ ಒಂದು ಮಾರ್ಗವನ್ನು ಅನುಸರಿಸಿದರೂ ಎರಡರ ಫಲವೂ ಸಿಗುತ್ತದೆ.
ಜ್ಞಾನಮಾರ್ಗ, ಅಂದರೆ ಕರ್ಮ ಮಾಡುವಾಗಲೆಲ್ಲಾ “ನಾನು ಮಾಡುವವನು” ಎಂಬ ಅಹಂಕಾರವನ್ನು ತ್ಯಜಿಸಿರುವುದು ಮತ್ತು ಕರ್ಮಮಾರ್ಗ ಎಂದರೆ ಫಲಾಶೆಯನ್ನು ತ್ಯಜಿಸಿ ಕರ್ತವ್ಯ ದೃಷ್ಟಿಯಿಂದ ಕರ್ಮಮಾಡುವುದು; ಹೀಗೆ ಎರಡು ಮಾರ್ಗಗಳ ಫಲವೂ ಒಂದೇ ಆಗಿರುವುದರಿಂದ ಯಾವ ಮಾರ್ಗವನ್ನು ಅನುಸರಿಸಿದರೂ ಒಂದೇ ಫಲವು ಸಿಗುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡೂ ಮಾರ್ಗಗಳಿಂದ ಒಂದೇ ಫಲವು ಹೇಗೆ ಸಿಗುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.

ಯಾತ್ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ |
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಠ್ಯತಿ || 5 ||
ಅರ್ಥ : ಸಾಂಖ್ಯ (ಜ್ಞಾನ) ಮಾರ್ಗದಿಂದ ಯಾವ ಸ್ಥಾನವು ಸಿಗುತ್ತದೆಯೋ ಅದೇ ಸ್ಥಾನವು ಕರ್ಮಯೋಗಾಚರಣೆಯಿಂದಲೂ ಸಿಗುತ್ತದೆ. ಯಾರು ಸಾಂಖ್ಯ ಮತ್ತು ಯೋಗ ಇವೆರಡೂ ಒಂದೇ ಎಂದು ತಿಳಿಯುತ್ತಾರೋ ಅವರೇ ಸರಿಯಾದ ತಿಳುವಳಿಕೆಯನ್ನು ಪಡೆದವರು.
ಇಲ್ಲಿ ಸಾಂಖ್ಯ ಎಂದರೆ ಜ್ಞಾನ ಎಂದರ್ಥ. ಪಶ್ಯತಿ ಎಂದರೆ ಕೇವಲ ಕಣ್ಣಿನಿಂದ ನೋಡುವುದಲ್ಲ. ಜ್ಞಾನದ ಕಣ್ಣಿನಿಂದ ಕಾಣುವುದು ಸರಿಯಾದ ಜ್ಞಾನವನ್ನು ಹೊಂದುವುದು ಎಂದರ್ಥ.

ಸಂನ್ಯಾಸಸ್ತು ಮಹಾಬಾಹೋ ದುಃಖಮಾಫ್ತುಮಯೋಗತಃ |
ಯೋಗಯುಕ್ತೋ ಮುನಿಬ್ರ್ರಹ್ಮ ನಚಿರೇಣಾಧಿಗಚ್ಛತಿ || 6 ||
ಅರ್ಥ : ಸನ್ಯಾಸವು ಮಹಾಬಾಹುವೇ, ಕರ್ಮಯೋಗಾಭ್ಯಾಸವಿಲ್ಲದೆ ದೊರೆಯಲಾರದು. ಯೋಗದಿಂದ ಕೂಡಿದ ಸ್ಥಿರಬುದ್ಧಿಯುಳ್ಳ ಮುನಿಯು ಜಾಗೃತೆಯಾಗಿ ಅದನ್ನು ಗಳಿಸುತ್ತಾನೆ.
ಶ್ರೀಕೃಷ್ಣನು ಆತ್ಮಜ್ಞಾನು ಸಂಧಾನದಲ್ಲಿ ಆತ್ಮಜ್ಞಾನ ಸಂಧಾನದಲ್ಲಿ ಕರ್ಮಯೋಗಕ್ಕಿರುವ ಸ್ಥಾನವನ್ನು ಸ್ಪಷ್ಟ ಶಬ್ದಗಳಲ್ಲಿ ಸಮರ್ಥಿಸಿ ಹೇಳಿದ್ದಾನೆ. ಕರ್ಮಯೋಗವನ್ನು ಅಭ್ಯಾಸ ಮಾಡದೆ ಸನ್ಯಾಸವು ಸಾಧ್ಯವಿಲ್ಲವೆಂದು ಕರ್ಮಯೋಗದಲ್ಲಿ ಸಿದ್ಧಿ ಹೊಂದಿದವನು ಜಾಗೃತೆಯಾಗಿ ಸನ್ಯಾಸ ಸ್ಥಿತಿಯನ್ನು ತಲುಪುತ್ತಾನೆಂದೂ ಸ್ಪಷ್ಟವಾಗಿ ಹೇಳಿದ್ದಾನೆ. ಕರ್ಮಯೋಗವಿಲ್ಲದಿದ್ದರೆ ಕರ್ಮತ್ಯಾಗ ತಾನೆ ಹೇಗೆ ಸಾಧ್ಯ? ನನ್ನಲ್ಲಿಲ್ಲದ ವಸ್ತುವನ್ನು ನಾನು ತ್ಯಾಗ ಮಾಡುವುದಾದರೂ ಎಂತು ?
ಅಜ್ಞಾನದಿಂದ ಕೂಡಿದ ಮನಸ್ಸು ಬುದ್ಧಿಗಳನ್ನು ಕರ್ಮಯೋಗದ ಅಭ್ಯಾಸದ ಮೂಲಕ ಶುದ್ಧಗೊಳಿಸಿ, ಸಂಚಿತ ವಾಸನೆಗಳನ್ನು ಬರಿದು ಮಾಡಿಕೊಂಡು ನಂತರ ಆ ಶುದ್ಧ ಮನಸ್ಸಿನಿಂದ ಧ್ಯಾನದಲ್ಲಿ ಏಕಾಗ್ರತೆಯನ್ನು ಗಳಿಸಿದರೆ ಕರ್ಮತ್ಯಾಗ ಮಾಡುವುದು ಸುಲಭವಾಗುತ್ತದೆ. ಹೀಗೆ ಪೂರ್ವ ತಯಾರಿಯು ಇಲ್ಲದೆ ಒಮ್ಮೆಲೇ ಕರ್ಮತ್ಯಾಗ ಮಾಡಿದರೆ, ಬಾಹ್ಯ ಇಂದ್ರಿಯಗಳು ಕರ್ಮಗಳನ್ನು ಬಿಡಬಹುದಷ್ಟೇ ಅಲ್ಲದೆ ಒಳಗೆ ಮನಸ್ಸು ತೀವ್ರವಾಗಿ ಕರ್ಮದಲ್ಲಿ ನಿರತನಾಗಿಯೇ ಇರುತ್ತದೆ. ಈ ದೃಷ್ಟಿಯಿಂದಲೇ ಕರ್ಮಯೋಗವು ಕರ್ಮತ್ಯಾಗಕ್ಕಿಂತ ಶ್ರೇಷ್ಠವಾದುದೆಂದು ಶ್ರೀಕೃಷ್ಣನು ಪ್ರಾರಂಭದಲ್ಲಿಯೇ ಹೇಳಿದ್ದಾನೆ.

ಕರ್ಮಯೋಗಿಗೆ ಅವನು ಮಾಡುವ ಕರ್ಮದಿಂದ ಬಂಧನವಿಲ್ಲ.

ಯೋಗಯುಕ್ತೋ ವಿಶುದ್ದಾತ್ಮಾ ವಿಜಿತಾತ್ಮಾಜಿತೇಂದ್ರಿಯಃ |
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ || 7 ||
ಅರ್ಥ : ಮನಸ್ಸನ್ನು ಶುದ್ಧಗೊಳಿಸಿಕೊಂಡಿರುವ ಇಂದ್ರಿಯಗಳನ್ನು ನಿಗ್ರಹ ಮಾಡಿರುವ ಎಲ್ಲಾ ಪ್ರಾಣಿಗಳಲ್ಲಿರುವ ಜೀವಾತ್ಮನು ತಾನೇ ಎಂದು ತಿಳಿದುಕೊಂಡಿರುವ, ಕರ್ಮಯೋಗಿಯು ಕರ್ಮಗಳನ್ನು ಮಾಡಿದಾಗ್ಯೂ ಅದರಿಂದ ಅವನಿಗೆ ಲೇಪವಿಲ್ಲ.
ಕರ್ಮಯೋಗಿಯು ಹೀಗೆ ಜಾಗ್ರತೆಯಾಗಿ ಜ್ಞಾನವನ್ನು ಪಡೆದು ಸನ್ಯಾಸ ಸ್ಥಿತಿಯನ್ನು ತಲುಪುತ್ತಾನೆ ಎಂಬುದನ್ನು ಹಿಂದಿನ ಶ್ಲೋಕದಲ್ಲಿ ಹೇಳಲಾಗಿದೆ. ಅವನು ಜ್ಞಾನವನ್ನು ಪಡೆಯುವ ಮೊದಲು, ಆಂತರಿಕವಾಗಿ ಅವನ ಮನಸ್ಸು ಬುದ್ಧಿಗಳಲ್ಲಿ ಯಾವ ಯಾವ ಮಾರ್ಪಾಟಾಗುತ್ತದೆಂಬುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಕರ್ಮಯೋಗಿಯ ಸಾಧನೆಯು ಬೆಳೆದಂತೆ ಮೊಟ್ಟಮೊದಲು ಅವನ ಬುದ್ಧಿಯು ಶುದ್ಧವಾಗುತ್ತದೆ. ಬುದ್ಧಿಯು ಶುದ್ಧವಾಗುವುದೆಂದರೆ ಉದ್ರಿಕ್ತಗೊಳ್ಳಬಹುದಾದ ವಿವಿಧ ಸಂದರ್ಭಗಳಲ್ಲಿ ಮನಸ್ಸು ಬುದ್ಧಿಗಳ ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಆಶೆ ಮತ್ತು ಇತರೆ ಉದ್ರೇಕಗಳಿಂದ ಮಾನಸಿಕ ಉದ್ವೇಗವು ಕಡಿಮೆಯಾದಷ್ಟು ಮನಸ್ಸು ಬುದ್ಧಿಗಳು ಅಷ್ಟು ಹೆಚ್ಚಾಗಿ ಶುದ್ಧವಾಗಿವೆ ಎಂದು ತಿಳಿಯಬೇಕು. ಇಂತಹ ಬುದ್ಧಿಯಿಂದ ಫಲಾಪೇಕ್ಷೆಯನ್ನು ತ್ಯಜಿಸಿ ಕೇವಲ ಕರ್ತವ್ಯ ದೃಷ್ಟಿಯಿಂದ ಇಲ್ಲವೆ ಯಜ್ಞಭಾವದಿಂದ ಕರ್ಮಗಳನ್ನು ಮಾಡಿದರೆ ಸಂಚಿತವಾಸನೆಗಳು ಬರಿದಾಗುತ್ತವೆ ಮತ್ತು ಹೊಸ ವಾಸನೆಗಳು ಹುಟ್ಟುವುದಿಲ್ಲ. ಹೀಗೆ ಬುದ್ಧಿ ಮನಸ್ಸುಗಳು ಆಸೆಯ ಅಲೆಗಳ ಬಡಿತದಿಂದ ಹಾಗೂ ವಾಸನೆಗಳ ಸಂಗ್ರಹದ ಹೊರೆಯಿಂದ ಶುದ್ಧಗೊಳಿಸಲ್ಪಟ್ಟ ಹಾಗೆ ಮನಸ್ಸಿನ ಶಾಂತತೆಯು ವೃದ್ಧಿಯಾಗುತ್ತದೆ.
ಶಾಂತತೆಯು ಲಭಿಸಿದರೆ ಮುಂದೆ ಏಕಾಗ್ರತೆಯಿಂದ ಧ್ಯಾನ ಮಗ್ನನಾಗಿ ಆತ್ಮಾನಂದವನ್ನು ಪಡೆಯಬಹುದು. ಹೀಗೆ ಮಾನಸಿಕ ಬೌದ್ಧಿಕ ಶಾಂತಿಯನ್ನು ಪಡೆದ ಯೋಗಿಯು ಕಾಲ ಕಾಲಕ್ಕೆ ಉತ್ಪನ್ನವಾಗಬಹುದಾದ ಆಸೆಗಳನ್ನು ಬಹು ಸುಲಭವಾಗಿ ತ್ಯಜಿಸಿ ಇಂದ್ರಿಯ ನಿಗ್ರಹವನ್ನು ಸಾಧಿಸಬಲ್ಲನು. ಇವನು ಕ್ರಮೇಣ ಧ್ಯಾನದಲ್ಲಿ ನಿರತನಾಗಿ ತಾನೇ ಪರಮಾತ್ಮನು ಎಂಬ ಜ್ಞಾನವನ್ನು ಅನುಭವಿಸುತ್ತಾನೆ.

ಜ್ಞಾನಿಯು ಕರ್ಮ ಮಾಡುವಾಗ ಅವನ ಮನೋಭಾವ ಹೇಗಿರುತ್ತದೆ ?

ನೈವ ಕಿಂಚಿತ್ಯರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ |
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ || 8 ||
ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ನಿಮಿಷನ್ನಪಿ |
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ || 9 ||
ಅರ್ಥ : ಶರೀರದಿಂದ ನಡೆಯುವ ನೋಡುವುದು, ಕೇಳುವುದು, ಮುಟ್ಟುವುದು, ವಾಸನೆ ತೆಗೆದುಕೊಳ್ಳುವುದು, ತಿನ್ನುವುದು, ಚಲಿಸುವುದು, ನಿದ್ರಿಸುವುದು, ಉಸಿರಾಡುವುದು, ಮಾತನಾಡುವುದು, ಮಲಮೂತ್ರಗಳನ್ನು ವಿಸರ್ಜಿಸುವುದು, ಹಿಡಿದುಕೊಳ್ಳುವುದು, ಕಣ್ಣುಗಳನ್ನು ತೆರೆಯುವುದು ಹಾಗೂ ಮುಚ್ಚುವುದು, ಇತ್ಯಾದಿ ವಿವಿಧ ಕಾರ್ಯಗಳಲ್ಲಿ ಸಂಬಂಧಪಟ್ಟ ಇಂದ್ರಿಯಗಳು ಇಂದ್ರಿಯ ವಿಷಯಗಳಲ್ಲಿ ಪ್ರವೇಶಿಸಿ ಆಯಾಯಾ ಕಾರ್ಯಗಳಾಗುತ್ತವೆಂದು ‘ತಾನು’ ಯಾವ ಕಾರ್ಯವನ್ನು ಮಾಡುವವನಲ್ಲವೆಂದು ಕರ್ಮಯೋಗಿಯು ತಿಳಿದುಕೊಂಡು ಉದಾಸೀನನಾಗಿರುತ್ತಾನೆ. ನಿದ್ರೆಯಲ್ಲಿದ್ದಾಗ ನಾವು ಉಸಿರಾಡುತ್ತೇವೆ. ಆದರೆ ನಮಗೆ ಅದರ ಅರಿವಿರುವುದಿಲ್ಲ. ನಾವು ಅದರ ಬಗ್ಗೆ ಉದಾಸೀನರಾಗಿರುತ್ತೇವೆ ಏಕೆಂದರೆ ಆ ಕಾಲದಲ್ಲಿ ಅಹಂಕಾರವು ಜಾಗೃತವಾಗಿರುವುದಿಲ್ಲ. ಯೋಗಿಯು ಯಾವಾಗಲೂ ಅಹಂಕಾರವನ್ನು ತ್ಯಜಿಸಿರುವುದರಿಂದ ಅವನು ತಾನು ಮಾಡುವ ಕಾರ್ಯಗಳ ಬಗ್ಗೆ ಉದಾಸೀನನಾಗಿರುತ್ತಾನೆ. ಆಯಾಯಾ ಕರ್ಮಗಳು ಇಂದ್ರಿಯಗಳಿಂದ ತಮ್ಮಷ್ಟಕ್ಕೆ ತಾವೇ ಆಗುತ್ತವೆ ಎಂಬ ಭಾವದಲ್ಲಿರುತ್ತಾನೆ. ಆ ಕರ್ಮಗಳನ್ನು ಮಾಡುವವನು ‘ನಾನಲ್ಲ’ ಎಂಬ ಭಾವವಿದ್ದರೂ ಕರ್ಮಗಳು ದಕ್ಷತೆಯಿಂದ ಸಾಗುತ್ತಿವೆಯೋ ಇಲ್ಲವೋ ಎಂಬ ಬಗ್ಗೆ ಮಾತ್ರ ಅವನು ಸದಾ ಜಾಗೃತನಾಗಿರುತ್ತಾನೆ. ಕರ್ಮವು ಹಾಳಾಗಲು ಆಸ್ಪದ ಕೊಡುವುದಿಲ್ಲ. ಆದ್ದರಿಂದ ಯೋಗಿ ಎಂದರೆ ನಿದ್ರೆಯಲ್ಲಿ ಓಡಾಡುವವನು ಎಂದು ತಿಳಿಯಬಾರದು. ಕರ್ಮದಲ್ಲಿ ಅವನು ನಿರಾಸಕ್ತನಾಗಿದ್ದಗ್ಯೂ ಅದರ ಯಶಸ್ಸಿನ ಬಗ್ಗೆ ಹಾಗೂ ದಕ್ಷತೆಯ ಬಗ್ಗೆ ಅವನು ಸದಾ ಜಾಗೃತನಾಗಿರುತ್ತಾನೆ. ಇದನ್ನು ಗಮನಿಸಬೇಕು.

ಕರ್ಮ ಮಾಡುವಾಗ ಯೋಗಿಯು ಮನೋಭಾವ ಹೇಗಿರುತ್ತದೆ ?

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾಕರೋತಿ ಯಃ |
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ || 10 ||
ಅರ್ಥ : ಯಾರು ಮೋಹವನ್ನು ತ್ಯಜಿಸಿ ಬ್ರಹ್ಮಾರ್ಪಣ ಬುದ್ಧಿಯಿಂದ ಕರ್ಮವನ್ನು ಮಾಡುತ್ತಾರೋ, ಅವರು ನೀರಿನಲ್ಲಿರುವ ಕಮಲಪತ್ರವು ನೀರಿನಿಂದ ಲೇಪವನ್ನು ಹೊಂದದÀಂತೆ, ಕರ್ಮಗಳಿಂದ ಲೇಪಹೊಂದದೆ ನಿರ್ಲಿಪ್ತರಾಗಿರುತ್ತಾರೆ.
ಬ್ರಹ್ಮಾರ್ಪಣ – ನಾವು ಒಪ್ಪಿದ ಧ್ಯೇಯವನ್ನು ಪುನಃ ಪುನಃ ಜ್ಞಾಪಿಸಿಕೊಳ್ಳುವುದರಿಂದ ಅದರ ಜೊತೆಗೆ ಹೆಚ್ಚು ನಿಕಟವಾದ ಸಂಬಂಧವನ್ನಿಟ್ಟುಕೊಂಡು ಅದರ ಸಂಪೂರ್ಣ ಪರಿಚಯವನ್ನು ಹೊಂದಬಹುದು. ಕರ್ಮಗಳನ್ನು ಬ್ರಹ್ಮಾರ್ಪಣ ಬುದ್ಧಿಯಿಂದ ಮಾಡುವದೆಂದರೆ ಯಜ್ಞಭಾವದಿಂದ ‘ನಾನು ಮತ್ತು ಕರ್ಮ’ ಇವೆರಡೂ ಬ್ರಹ್ಮ ಎಂದು ತಿಳಿದುಕೊಂಡು, ಕರ್ಮ ಮಾಡುವ ಮೂಲಕ (ಯಜ್ಞ) ಅದನ್ನು ಬ್ರಹ್ಮನಿಗೆ ಅರ್ಪಿಸಿ ಬಿಡುವುದು ಮತ್ತು ಕರ್ಮದಲ್ಲಿ ಮಮಕಾರವನ್ನಾಗಲೀ ಫಲಾಶೆಯನ್ನಾಗಲೀ ಇಟ್ಟುಕೊಳ್ಳುದಿರುವುದು ವ್ಯವಹಾರದಲ್ಲಿ ನಾನು, ನನ್ನದು ಎಂಬುದನ್ನು ನಾವು ಹೇಗೆ ಪದೇ ಪದೇ ಜ್ಞಾಪಿಸಿಕೊಳ್ಳುತ್ತೇವೆಯೋ ಅಂತೆಯೇ ಅದರ ಸ್ಥಳದಲ್ಲಿ ಪದೇ ಪದೇ ಬ್ರಹ್ಮನನ್ನು ಜ್ಞಾಪಿಸಿಕೊಳ್ಳಬೇಕು. ಹೀಗೆ ಬ್ರಹ್ಮನ (ಪರಮಾತ್ಮನ) ಜ್ಞಾಪಕವು ಹೆಚ್ಚು ಸಾರಿ ಬಂದ ಹಾಗೆಲ್ಲಾ ಮಮಕಾರವು ಕರಗಿ ನಾಶವಾಗುತ್ತದೆ ಮತ್ತು ನಾವು ಕ್ರಮೇಣ ಪರಮಾತ್ಮನ ಸಮೀಪಕ್ಕೆ ಹೋಗುತ್ತೇವೆ. ಅಹಂಯುತನಾದ ನಾನು ನನ್ನನ್ನು ಅರಿತುಕೊಂಡ ಅಹಂ ಆಗಬೇಕು.

ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ |
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾ„ತ್ಮಶುದ್ಧಯೇ || 11 ||
ಅರ್ಥ : ಯೋಗಿಗಳು ತಾವು ಮಾಡುವ ಕರ್ಮದಲ್ಲಿ ಆಸಕ್ತಿಯನ್ನು ತ್ಯಜಿಸಿ ಕೇವಲ ಶರೀರದಿಂದ, ಮನಸ್ಸಿನಿಂದ, ಬುದ್ಧಿಯಿಂದ ಇಲ್ಲವೆ ಜ್ಞಾನೇಂದ್ರಿಯಗಳಿಂದ ಆತ್ಮಶುದ್ಧಿಗಾಗಿ ಕರ್ಮವನ್ನು ಮಾಡುತ್ತಾರೆ. ಯೋಗಿಯು ಕರ್ಮವನ್ನು ಮಾಡುವಾಗ ಇಂದ್ರಿಯಗಳು ಕರ್ಮ ಮಾಡುತ್ತವೆ ಎಂದು ತಿಳಿದು, ತಾನು ಮಾತ್ರ ಸಾಕ್ಷಿಯಂತೆ, ನಿರೀಕ್ಷಕನಂತೆ, ನಿರ್ಲಿಪ್ತನಾಗಿ ಅದನ್ನು ನೋಡುತ್ತಿರುತ್ತಾನೆ. ಹೀಗೆ ಕರ್ಮ ಮಾಡುತ್ತಾ ಸಂಚಿತವಾಸನೆಗಳು ಬರಿದಾಗಿ, ಮನಸ್ಸು ಬುದ್ಧಿಗಳು ಶುದ್ಧಿಗೊಂಡು ಆತ್ಮವಿಕಾಸಕ್ಕೆ ಅರ್ಹವಾಗುತ್ತವೆ. ಇವನು ಕರ್ಮ ಮಾಡುವುದು ‘ಆತ್ಮಶುದ್ಧಯೇ’ ಅಂದರೆ ಆತ್ಮಶುದ್ಧಿಗಾಗಿ.
ಇಂತಹ ಕರ್ಮದಿಂದ ಸಿಗುವ ತುಲನಾತ್ಮಕ ಲಾಭಗಳು

ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪೆÇ್ನೀತಿ ನೈಷ್ಠಿಕೀಮ್ |
ಆಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ || 12 ||
ಅರ್ಥ : ಸಮಬುದ್ಧಿಯುಳ್ಳ ಯೋಗಿಯು, ಫಲಾಸೆಯನ್ನು ಬಿಟ್ಟು ಕರ್ಮ ಮಾಡಿ, ಶಾಶ್ವತವಾದ ಶಾಂತಿಯನ್ನು ಗಳಿಸುತ್ತಾನೆ. ಯೋಗಿಯಲ್ಲದ ಸಾಮಾನ್ಯ ಮನುಷ್ಯನು ಆಸೆಯಿಂದ ಕರ್ಮಮಾಡಿ ಕರ್ಮಫಲಕ್ಕೆ ತಾನೇ ಅಧಿಕಾರಿ ಎಂದು ತಿಳಿದು ಬಂಧನಕ್ಕೆ ಸಿಗುತ್ತಾನೆ.
ಮನಃಶಾಂತಿಯು ಹೊರಗಿನ ವಾತಾವರಣದಿಂದ ಸಾಧನೆಗಳಿಂದ ರಾಜಕೀಯ ಇಲ್ಲವೇ ಸಾಮಾಜಿಕ ನಿಯಮಗಳಿಂದ ಸಿಗತಕ್ಕದಲ್ಲ. ಮನಸ್ಸು ವಿವಿಧ ಆಸೆಗಳು ಇಲ್ಲವೆ ನಾನಾ ತರಹದ ಉದ್ರಿಕ್ತ ಸಂದರ್ಭಗಳ ಸಂವೇದನೆಗಳಿಂದ ಕ್ಷೋಭೆಗೊಳ್ಳದೆ, ಸಮಾಧಾನದಿಂದ, ಸಮತ್ವದಿಂದ ಇದ್ದರೆ ಮಾತ್ರ ಶಾಂತಿಯು ಲಭಿಸುತ್ತದೆ. ಇದು ಒಳಗಿನ ಇಂದ್ರಿಯಗಳು ಶುದ್ಧಗೊಂಡಿರುವ ಲಕ್ಷಣ, ಆತ್ಮವು ಮೇಲ್ಮಟ್ಟಕ್ಕೇರುತ್ತಿರುವ ಗುರುತು. ಸ್ವಾರ್ಥವನ್ನು ತ್ಯಜಿಸಿ, ಯಜ್ಞಭಾವದಿಂದ ಕರ್ಮ ಮಾಡುವುದರಿಂದ ಇದನ್ನು ಸುಲಭವಾಗಿ ಸಾಧಿಸಬಹುದು. ಇದಕ್ಕೆ ವಿರುದ್ಧವಾಗಿ ಸ್ವಾರ್ಥಬುದ್ಧಿಯಿಂದ ಕರ್ಮಮಾಡಿ, ಕರ್ಮಫಲವನ್ನು ನಾನೇ ಭೋಗಿಸಬೇಕು ಎಂಬ ಕಾತರತೆಯಿದ್ದರೆ ಅಂತಹ ಮನುಷ್ಯನು ಸಂಸಾರದೊಂದಿಗೆ ಇನ್ನು ಗಾಢವಾಗಿ ಬಂಧಿಸಲ್ಪಡುತ್ತಾನೆ. ಅವನು ಮಾಡಿದ ಕರ್ಮಗಳು ಹೊಸ ವಾಸನೆಗೆ ಕಾರಣವಾಗುತ್ತದೆ.

ಆತ್ಮಜ್ಞಾನಿಯು ಯಾವ ರೀತಿಯಲ್ಲಿರುತ್ತಾನೆ ?

ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾಸ್ತೇ ಸುಖಂ ವಶೀ |
ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ || 13 ||
ಅರ್ಥ : ಇಂತಹ ಯೋಗಿಯು ಎಲ್ಲಾ ಕರ್ಮಗಳನ್ನು ಮನಸ್ಸಿನಿಂದ ತ್ಯಾಗ ಮಾಡಿ ಒಂಭತ್ತು ಬಾಗಿಲುಗಳಿಂದ ಕೂಡಿದ ಈ ದೇಹದಲ್ಲಿ ಆತ್ಮಾನಂದದಲ್ಲಿ ನೆಲೆಸಿರುತ್ತಾನೆ. ಅವನು ಯಾವ ಕರ್ಮವನ್ನೂ ಮಾಡುವುದಿಲ್ಲ ಬೇರೊಬ್ಬರಿಂದ ಮಾಡಿಸುವುದೂ ಇಲ್ಲ.
ಶರೀರದಲ್ಲಿರುವ ನವದ್ವಾರಗಳು ಈ ದೇಹ ಎಂಬ ಪಟ್ಟಣದ ಒಂಭತ್ತು ಬಾಗಿಲುಗಳನ್ನು ಇಂದ್ರಿಯನಿಗ್ರಹವನ್ನು ಸಾಧಿಸಿದ ಯೋಗಿಯು ಆತ್ಮಾನಂದದಲ್ಲಿದ್ದು ಈ ಶರೀರದಲ್ಲಿ ನೆಲೆಸಿ, ಶರೀರದಿಂದಾಗುವ ಎಲ್ಲಾ ಕರ್ಮಗಳನ್ನು ಸಾಕ್ಷೀರೂಪದಲ್ಲಿ ನೋಡುತ್ತಿರುತ್ತಾನೆ .

ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ |
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ || 14 ||
ಅರ್ಥ : ಪ್ರಪಂಚದ ಯಜಮಾನನಾದ ಪರಮಾತ್ಮನು ಕರ್ಮಮಾಡದವನು, ಕರ್ಮ ಮತ್ತು ಕರ್ಮಫಲ ಇವಾವುದನ್ನೂ ಸೃಷ್ಟಿಸುವುದಿಲ್ಲ. ಅವು ಪ್ರಕೃತಿಯಿಂದ ಸ್ವಭಾವವಾಗಿ ಹುಟ್ಟುತ್ತವೆ.
ಆತ್ಮ ಅಥವಾ ಪರಮಾತ್ಮನು ನಿಷ್ಕ್ರಿಯನು. ಆತನು ಅಜ್ಞಾನದಿಂದ ಆವೃತನಾಗಿ ಶರೀರಧಾರಿಯಾದರೆ, ವಿವಿಧ ಕರ್ಮಗಳನ್ನು ಮಾಡುವವನು ತಾನೆಂದೂ ಕರ್ಮಫಲಗಳಿಗೆ ತಾನು ಅಧಿಕಾರಿ ಎಂದೂ ತಿಳಿಯುತ್ತಾನೆ. ಅವನು ತನ್ನ ಹಿಂದಿನ ಜನ್ಮದ ವಾಸನೆಗಳಿಗನುಗುಣವಾಗಿ ಕರ್ಮಗಳನ್ನು ಮಾಡುತ್ತಾನೆ. ವಿದ್ಯುತ್ತು ಸುಪ್ತವಾದ ಶಕ್ತಿ. ಆದರೆ ಅದನ್ನು ಕೋಣೆಯೊಳಗಿನ ದೀಪ, ಪಂಖ, ರೇಡಿಯೋ ಇತ್ಯಾದಿ ಸಾಧನೆಗಳಿಗೆ ಜೋಡಿಸಿದರೆ, ಆಗ ಅದರ ಶಕ್ತಿಯು ಜಾಗೃತವಾಗಿ ಅಪೇಕ್ಷಿತ ವಿವಿಧ ಕಾರ್ಯಗಳನ್ನು ಮಾಡುತ್ತದೆ. ಅಂತೆಯೇ ಸುಪ್ತಶಕ್ತಿಯಾದ ಆತ್ಮವು ಅಹಂಕಾರದ ಮೂಲಕ ಇಂದ್ರಿಯ ಮನಸ್ಸು, ಬುದ್ಧಿಗಳಿಗೆ ಜೋಡಿಸಲ್ಪಟ್ಟರೆ ವಿವಿಧ ಕಾರ್ಯಗಳನ್ನು ಮಾಡುತ್ತದೆ. ಫಲವನ್ನು ಅನುಭವಿಸುವವನು ಜೀವನೇ ಹೊರತು ಆತ್ಮನಲ್ಲ. ಹೀಗೆ ಜೀವನದ ಎಲ್ಲಾ ಕಾರ್ಯಗಳು ಹಿಂದಿನ ವಾಸನೆಗಳಿಗೆ ಅನುಗುಣವಾಗಿ ಸ್ವಾಭಾವಿಕವಾಗಿರುತ್ತವೆ.

ಅಜ್ಞಾನದ ಆವರಣದಿಂದ ಜೀವಿಗಳು ಮೋಹಗೊಂಡಿದ್ದಾರೆ.

ನಾದತ್ತೇ ಕಸ್ಯಚಿತ್ಪಾಪಂ ನ ಚೈವ ಸುಕೃತಂ ವಿಭುಃ |
ಆಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ || 15 ||
ಅರ್ಥ : ಪರಮಾತ್ಮನು ಜೀವಿಯು ಮಾಡುವ ಕರ್ಮಗಳ ಪಾಪವನ್ನಾಗಲೀ, ಪುಣ್ಯವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಜ್ಞಾನವು ಅಜ್ಞಾನದಿಂದ ಮುಚ್ಚಲ್ಪಟ್ಟಿದ್ದರಿಂದ ಜೀವಿಗಳು ಮೋಹಗೊಂಡಿದ್ದಾರೆ.
ಜ್ಞಾನವು ಪ್ರಕಾಶವಾಗುವುದು ಹೇಗೆ ?

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ |
ತೇಷಾಮಾದಿತ್ಯವಜ್ಞಾನಂ ಪ್ರಕಾಶಯತಿ ತತ್ಪರಮ್ || 16 ||
ಅರ್ಥ : ಯಾರು ಜ್ಞಾನದಿಂದ ತಮ್ಮ ಅಜ್ಞಾನದ ಆವರಣವನ್ನು ಕಿತ್ತುಹಾಕುತ್ತಾರೋ, ಅವರಿಗೆ ಜ್ಞಾನವು ಸೂರ್ಯನು ವಸ್ತುಗಳನ್ನು ಪ್ರಕಾಶಿಸಿ ತೋರಿಸುವಂತೆ ಆತ್ಮ ವಸ್ತುವನ್ನು ತೋರಿಸುತ್ತದೆ.
ರಾತ್ರಿಕಾಲದಲ್ಲಿರುವ ಘನವಾದ ಕತ್ತಲೆಯು ಸೂರ್ಯೋದಯವಾದ ಕೂಡಲೆ ನಾಶವಾಗುವಂತೆ, ಜ್ಞಾನೋದಯವಾದ ಕೂಡಲೇ ಅಜ್ಞಾನವು ನಾಶವಾಗುತ್ತದೆ. ಅಜ್ಞಾನವು ಸ್ವಲ್ಪ ಸ್ವಲ್ಪವಾಗಿ ಹೋಗುವುದಿಲ್ಲ. ಕತ್ತಲೆಯಂತೆ ಒಂದೇ ಸಾರಿ ನಾಶವಾಗುತ್ತದೆ.
ಸೂರ್ಯನನ್ನು ನೋಡುವುದಕ್ಕೆ ಬೇರೆ ಬೆಳಕು ಬೇಡ. ಸೂರ್ಯನು ಬೆಳಕು ಅಂತೆಯೇ ಆತ್ಮನನ್ನು ನೋಡುವುದಕ್ಕೆ ಬೇರೆ ಬೆಳಕು ಬೇಡ. ಮಳೆಗಾಲದಲ್ಲಿ ಸೂರ್ಯನನ್ನು ಕವಿದ ಮೋಡವು ಬದಿಗೆ ಸರಿದ ಕೂಡಲೇ ಸೂರ್ಯನು ಕಾಣುವಂತೆ ಆತ್ಮನನ್ನು ಕವಿದಿರುವ ಅಜ್ಞಾನವು ಸರಿದ ಕೂಡಲೇ(ಜೀವನಿಗೆ) ಆತ್ಮದರ್ಶನವಾಗುತ್ತದೆ. ಅದು ಸ್ವಯಂಪ್ರಕಾಶವಾದುದು. ಎಲ್ಲಾ ವಸ್ತುಗಳನ್ನೂ ಪ್ರಕಾಶಿಸತಕ್ಕದ್ದೂ ಆದ್ದರಿಂದ ಅದರ ದರ್ಶನಕ್ಕೆ ಬೇರೆ ಬೆಳಕಿನ ಅವಶ್ಯಕತೆಯಿಲ್ಲ.
ಕನಸು ಕಾಣುವವನು ಕನಸು ಮುಗಿದು ಎಚ್ಚರಾದ ನಂತರ ಎಚ್ಚರವಾಗಿರುವವನೂ, ಕನಸುಕಂಡವನೂ ತಾನೇ ಎಂದು ಅರಿಯುತ್ತಾನೆ. ಇದರಿಂದಲೇ ಅಜ್ಞಾನದಿಂದ ಕೂಡಿದ ಜೀವನು, ತನ್ನ ಅಜ್ಞಾನವನ್ನು ಕಳೆದುಕೊಂಡು ಜ್ಞಾನವನ್ನು ಗಳಿಸಿದ ಕೂಡಲೇ ತಾನೇ ಪರಮಾತ್ಮನು ಎಂಬುದನ್ನು ತಿಳಿಯುತ್ತಾನೆ. ಜೀವ ಮತ್ತು ಪರಮಾತ್ಮ ಇವರ ಸಂಬಂಧವನ್ನು ಮತ್ತು ಜೀವನು ಪರಮಾತ್ಮನನ್ನು ಕಾಣುವ ವಿಧಾನವನ್ನು ಇಲ್ಲಿ ಸುಂದರವಾಗಿ ವರ್ಣಿಸಲಾಗಿದೆ.

ಇಂತಹ ಯೋಗಿಗೆ ಪುನರ್ಜನ್ಮವಿಲ್ಲ.

ತದ್ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್ಪರಾಯಣಾಃ |
ಗಚ್ಛಂತ್ಯಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ || 17 ||
ಅರ್ಥ : ಯಾರ ಬುದ್ಧಿಯು ಪರಮಾತ್ಮನ ವಿಚಾರದಲ್ಲಿಯೇ ನಿರತವಾಗಿರುತ್ತದೆಯೋ ಯಾರು ತಾನು ಮತ್ತು ಪರಮಾತ್ಮ ಇಬ್ಬರೂ ಒಂದೇ ಎಂಬ ಐಕ್ಯಭಾವವನ್ನು ಹೊಂದಿರುತ್ತಾರೋ, ಯಾರು ಪರಮಾತ್ಮ ಸಾಧನೆಯಲ್ಲಿಯೇ ನಿರತನಾಗಿರುತ್ತಾರೋ, ಮತ್ತು ಯಾರು ಅವನಲ್ಲಿ ಸಂಪೂರ್ಣವಾಗಿ ಅನುರಕ್ತರಾಗಿರುತ್ತಾರೋ, ಅಂತಹವರು ತಮ್ಮ ಜ್ಞಾನದ ಮೂಲಕ ಪಾಪಗಳೆಲ್ಲವನ್ನು ಕಳೆದುಕೊಳ್ಳುವುದರಿಂದ ಪುನರ್ಜನ್ಮವೆತ್ತುವುದಿಲ್ಲ.
ಆತ್ಮಜ್ಞಾನವನ್ನು ಪಡೆದ ಯೋಗಿಯು ತನ್ನ ನಿತ್ಯಜೀವನದಲ್ಲಿ ಯಾವಾಗಲೂ ಪರಮಾತ್ಮನನ್ನೇ ಚಿಂತಿಸುತ್ತಾನೆ. ತಾನು ಮಾಡುವ ಕಾರ್ಯಗಳು, ನೋಡುವ ವಸ್ತುಗಳು, ಎಲ್ಲದರಲ್ಲಿಯೂ ಪರಮಾತ್ಮನನ್ನು ಕಾಣುತ್ತಾನೆ. ಪರಮಾತ್ಮನು ಆಯಾಯಾ ವಿವಿಧ ರೂಪಗಳಲ್ಲಿ ತನ್ನೆದುರಿಗೆ ನಟಿಸುತ್ತಿದ್ದಾನೆಂದು ತಿಳಿಯುತ್ತಾನೆ. ಹೀಗೆ ಅವನ ಬುದ್ಧಿಯು ಯಾವಾಗಲೂ ಅವನ ಚಿಂತನೆಯಲ್ಲಿಯೇ ಇರುತ್ತದೆ. ಅವನ ಮನಸ್ಸು ತಾನು ಮಾಡುವ ಎಲ್ಲಾ ಕಾರ್ಯಗಳ ಮೂಲಕ ಅವನ ಸ್ತೋತ್ರವನ್ನೇ ಹಾಡುತ್ತದೆ. ಅವನು ಪರಮಾತ್ಮನನ್ನೇ ತನ್ನ ಗುರಿಯಾಗಿಟ್ಟುಕೊಂಡು ಲಭಿಸಿದ ಆ ಆನಂದದಲ್ಲಿಯೇ ತೃಪ್ತಿಯನ್ನು ಹೊಂದಿ ಶಾಂತನಾಗಿರುತ್ತಾನೆ. ಕನಸಿನಲ್ಲಿ ಕಂಡ ಹುಲಿಯು ಎಚ್ಚರಿಕೆಯಾದ ಮೇಲೆ ಭಯಪಡಿಸಲಾರದಷ್ಟೆ ! ಅಂತೆಯೇ ಆತ್ಮಜ್ಞಾನವನ್ನು ಹೊಂದಿದ ಯೋಗಿಯು ಅಜ್ಞಾನದಿಂದಾಗುವ ಇಂದ್ರಿಯಗಳ ಆಕರ್ಷಣೆಗೆ ಹೆದರುವುದಿಲ್ಲ. ಜ್ಞಾನೋದಯವಾದ ಮೇಲೆ ಅವನ ವಾಸನೆಗಳೆಲ್ಲವೂ ಸುಟ್ಟು ಹೋಗುವುದರಿಂದಲೂ ಅನಾಸಕ್ತನಾಗಿ ಕರ್ಮ ಮಾಡುವುದರಿಂದ ಹೊಸ ವಾಸನೆಗಳು ಹುಟ್ಟದಿರುವುದರಿಂದಲೂ ಅವನು ಆತ್ಮಾನಂದದಲ್ಲಿ ನಿರತನಾಗಿರುತ್ತಾನೆ. ಅಂತೆಯೇ ಅವನಿಗೆ ಪುನರ್ಜನ್ಮವಿಲ್ಲ.

ಇಂತಹ ಜ್ಞಾನಿಯು ಜನರೊಡನೆ ಹೇಗೆ ವರ್ತಿಸುತ್ತಾನೆ ?

ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ || 18 ||
ಅರ್ಥ : ವಿದ್ಯೆಯನ್ನು ಕಲಿತು ವಿನಯದಿಂದ ವರ್ತಿಸುವ ವ್ಯಕ್ತಿ, ಬ್ರಾಹ್ಮಣ, ಆಕಳು, ಆನೆ, ನಾಯಿ ಮತ್ತು ಚಂಡಾಲ ಇವರೆಲ್ಲರನ್ನೂ ಜ್ಞಾನಿಯು ಸಮಭಾವದಿಂದ ಕಾಣುತ್ತಾನೆ. ಎಲ್ಲರಲ್ಲಿಯೂ ಪರಮಾತ್ಮನು ಅಖಂಡವಾಗಿ ವ್ಯಾಪಿಸಿರುವುದನ್ನು ಕಾಣುತ್ತಾನೆ.
ಜ್ಞಾನಿಗೆ ಸಮತ್ವ ದೃಷ್ಟಿಯಿದೆ. ಸಮುದ್ರಕ್ಕೆ ಎಲ್ಲಾ ಅಲೆಗಳು ಒಂದೇ. ಬಂಗಾರಕ್ಕೆ ಆಭರಣಗಳ ಆಕಾರ, ತೂಕಗಳ ಅರಿವಿಲ್ಲ. ಎಲ್ಲವೂ ಬಂಗಾರ ಎಂಬುದೊಂದೇ ಅರಿವು. ವಿವಿಧ ರೂಪದ ಮಣ್ಣಿನ ಪಾತ್ರೆಗಳೆಲ್ಲದರಲ್ಲಿಯೂ ಮಣ್ಣು ಒಂದೇ . ಇದೇ ರೀತಿಯಲ್ಲಿ ಜ್ಞಾನಿಯು ಹೊರಗಿನ ನಾಮ, ರೂಪಗಳ ಭೇದವನ್ನು ಗಮನಿಸದೆ, ಎಲ್ಲಾ ಜೀವಿ ಹಾಗೂ ವಸ್ತುಗಳಲ್ಲಿ ಅವುಗಳ ಇರುವಿಕೆಗೆ ಕಾರಣನಾದ ಪರಮಾತ್ಮನೊಬ್ಬನನ್ನೇ ಕಾಣುತ್ತಾನೆ.

 

ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ |
ನಿರ್ದೋಷಂ ಹಿ ಸಮಂ ಬ್ರಹ್ಮತಸ್ಮಾದ್ಬ್ರಹ್ಮಣೇ ತೇ ಸ್ಥಿತಾಃ || 19 ||
ಅರ್ಥ : ಯಾರ ಮನಸ್ಸು ಸಮತ್ವ ಸ್ಥಿತಿಯಲ್ಲಿರುತ್ತದೆಯೋ ಅವರು ಈ ಜನ್ಮದಲ್ಲಿಯೇ ಸ್ವರ್ಗವನ್ನು ಗೆಲ್ಲುತ್ತಾರೆ. (ಪಡೆಯುತ್ತಾರೆ) ಬ್ರಹ್ಮನು ದೋಷವಿಲ್ಲದವನೂ, ಸಮಸ್ಥಿತಿಯಲ್ಲಿರುವವನೂ, ಆಗಿದ್ದಾನೆ. ಆದ್ದರಿಂದ ಅವನು ಬ್ರಹ್ಮನಲ್ಲಿ ಐಕ್ಯತೆಯನ್ನು ಪಡೆಯುತ್ತಾನೆ.
ಕರ್ಮಕಾಂಡೊಕ್ತ ಹಾಗೂ ಪುರಾಣೋಕ್ತ ವಿಶಿಷ್ಟ ಕರ್ಮಗಳನ್ನು ಮಾಡುವುದರಿಂದ ಮರಣಾನಂತರ ಸ್ವರ್ಗಪ್ರಾಪ್ತಿಯೂ, ಅನಂತ ಸುಖವೂ ಲಭಿಸುತ್ತದೆಂಬ ಫಲವರ್ಣನೆಯಿದೆ. ಆದರೆ ಗೀತೆಯಲ್ಲಿ ಹೇಳಿದ ಜ್ಞಾನಮಾರ್ಗದ ಆಚರಣೆಯಿಂದ ಫಲಕ್ಕಾಗಿ, ಬೇರೆ ಲೋಕಕ್ಕೆ ಹೋಗಬೇಕಿಲ್ಲವೆಂದೂ, ಅಂತಹ ಸ್ವರ್ಗಸುಖವನ್ನು ಮತ್ತು ಅದಕ್ಕೂ ಹಿರಿಯ ಸುಖವಾದ ಆತ್ಮಾನಂದವನ್ನು ಈ ಜನ್ಮದಲ್ಲಿಯೇ ಪಡೆಯಬಹುದೆಂದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಜ್ಞಾನಿಯ ವರ್ತನೆಯು ಹೇಗಿರುತ್ತದೆ ?

ನ ಪ್ರಹೃಷ್ಯೇತ್ಪ್ರೀಯಂ ಪ್ರಾಪ್ಯ ನೋದ್ವಿಜೇತ್ಪ್ರಾಷ್ಯ ಚಾಪ್ರಿಯಮ್ |
ಸ್ಥಿರಬುದ್ಧಿರಸಂಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ || 20 ||
ಅರ್ಥ : ಬ್ರಹ್ಮಜ್ಞಾನವನ್ನು ಹೊಂದಿ ಅದೇ ಸ್ಥಿತಿಯಲ್ಲಿ ನೆಲೆಸಿರುವವನು ಸಂಸಾರದಲ್ಲಿ ತನಗೆ ಬೇಕಾದುದು ಲಭಿಸಿದರೆ ಸಂತೋಷಗೊಳ್ಳುವುದೂ ಇಲ್ಲ. ಬೇಡಾದುದು ಸಿಕ್ಕರೆ ಉದ್ವೇಗಗೊಳ್ಳುವುದೂ ಇಲ್ಲ. ಈ ಎರಡೂ ಸಂದರ್ಭಗಳಲ್ಲಿಯೂ ಸ್ಥಿರವಾದ ಸಮಬುದ್ಧಿಯುಳ್ಳವನಾಗಿರುತ್ತಾನೆ. ಅವನ ಮನಸ್ಸು ಬುದ್ಧಿಗಳು ಸುಖದುಃಖಗಳಿಂದ ಮೋಹಗೊಳ್ಳುವುದಿಲ್ಲ.
ಪ್ರಪಂಚದಲ್ಲಿ ನಾನಾ ತರಹದ ಘಟನೆಗಳು ನಡೆಯುತ್ತಿದ್ದರೂ ಮನುಷ್ಯನು ಸಾಮಾನ್ಯವಾಗಿ ವ್ಯಥೆಗೊಳ್ಳುವುದಿಲ್ಲ. ಇಲ್ಲವೇ ಉದ್ರೇಕಗೊಳ್ಳುವುದಿಲ್ಲ. ಆದರೆ ಆ ಘಟನೆಗಳೊಂದಿಗೆ ತನಗಿರುವ ವೈಯುಕ್ತಿಕ ಸಂಪರ್ಕದಿಂದಾಗಿ ಇಲ್ಲವೆ ಸಂಬಂಧದಿಂದಾಗಿ ಸುಖ ದುಃಖಗಳಿಗೆ ಈಡಾಗುತ್ತಾನೆ. ಊರಿನಲ್ಲಿ ಯಾರಾದರೂ ಸತ್ತರೆ ನಮಗೆ ದುಃಖವಾಗುವುದಿಲ್ಲ. ಆದರೆ ನಮ್ಮ ತಂದೆ ಇಲ್ಲವೆ ತಾಯಿ ಅಥವಾ ಇತರೆ ಹತ್ತಿರದ ಸಂಬಂಧಿಕರು ಸತ್ತರೆ ಅದು ನಮಗೆ ದೊಡ್ಡ ಆಘಾತವೆನಿಸುತ್ತದೆ. ಇದರಿಂದ ತಿಳಿಯುವುದೇನೆಂದರೆ ಸತ್ತು ಹೋದ ಮನುಷ್ಯನೊಂದಿಗೆ ನಮ್ಮ ಮನಸ್ಸು ಮೊದಲೇ ನಿಕಟ ಸಂಬಂಧವನ್ನು ಹೊಂದಿರದಿದ್ದರೆ ಸಾವು ನಮ್ಮ ಮನಸ್ಸಿನ ಮೇಲೆ ಯಾವ ಆಘಾತವನ್ನುಂಟುಮಾಡಲಾರದು. ಬ್ರಹ್ಮಜ್ಞಾನಿಯು ತನ್ನ ಮನಸ್ಸನ್ನು ಹೊರಗಿನ ಸಜೀವ ನಿರ್ಜೀವ
ವಸ್ತುಗಳಿಂದ ಹಿಂದೆಳೆದುಕೊಂಡು ಅದನ್ನು ಆತ್ಮನ ಕಡೆಗೆ ತಿರುಗಿಸಿ, ಆತ್ಮಧ್ಯಾನದಲ್ಲಿಯೇ ನಿರತನಾಗಿರುವುದರಿಂದ ಅವನಿಗೆ ಪ್ರಿಯವಾದ ವಸ್ತುಗಳು ಲಭಿಸುವುದರಿಂದ ಸಂತೋಷವಾಗಲೀ, ಅಪ್ರಿಯವಾದ ವಸ್ತುಗಳು ಲಭಿಸುವುದರಿಂದ ದುಃಖವಾಗಲೀ ಆಗುವುದಿಲ್ಲ. ಅವನ ಬುದ್ಧಿಯು ಎರಡೂ ಸಂದರ್ಭಗಳಲ್ಲಿಯೂ ಸಾಮ್ಯಸ್ಥಿತಿಯಲ್ಲಿ ಸ್ಥಿರವಾಗಿರುತ್ತದೆ.
ಆ ಶ್ಲೋಕದಲ್ಲಿ ಬ್ರಹ್ಮಜ್ಞಾನ ಪ್ರಾಪ್ತಿಯು ವಿವಿಧ ಘಟ್ಟಗಳನ್ನು ಎಷ್ಟು ಸಶಾಸ್ತ್ರೀಯವಾಗಿ ವಿವರಿಸಲಾಗಿದೆ ಎಂಬುದನ್ನು ಗಮನಿಸಬೇಕು.
1. ಬೇಕಾದ ಇಲ್ಲವೆ ಬೇಡವಾದ ವಸ್ತುಗಳಿಂದ ಸುಖ ಅಥವಾ ದುಃಖಗಳಿಗೆ ಒಳಗಾಗದೆ ಇರುವವನು ಸಮತ್ವ ಬುದ್ಧಿಯನ್ನು ಹೊಂದುತ್ತಾನೆ
2. ಸಮತ್ವ ಬುದ್ಧಿಯನ್ನು ಗಳಿಸಿದರೆ ಅದರಿಂದ ಅಜ್ಞಾನ ಇಲ್ಲವೆ ಭ್ರಾಂತಿಯು ಪರಿಹಾರವಾಗುತ್ತದೆ
3. ಅಜ್ಞಾನ ನಾಶವಾದರೆ ಬ್ರಹ್ಮಜ್ಞಾನವಾಗುತ್ತದೆ.
4. ಬ್ರಹ್ಮಜ್ಞಾನವಾದ ನಂತರ ಅವನು ಬ್ರಹ್ಮಾನಂದದಲ್ಲಿರುತ್ತಾನೆ.

ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ಸುಖಮ್ |
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ || 21 ||
ಅರ್ಥ : ಬ್ರಹ್ಮಜ್ಞಾನಿಯು ಹೊರಗಿನ ಇಂದ್ರಿಯ ವಿಷಯಗಳೊಡನೆ ಮಾನಸಿಕ ಸಂಪರ್ಕವನ್ನು ಹೊಂದದೆ ಅಂದರೆ ಅವುಗಳಲ್ಲಿ ನಿರಾಸಕ್ತನಾಗಿದ್ದು ಆತ್ಮಧ್ಯಾನದಿಂದ ಸುಖವನ್ನು ಪಡೆಯುತ್ತಾನೆ. ಹೀಗೆ
ಆತ್ಮಧ್ಯಾನದಲ್ಲಿ ನಿರತನಾಗಿ ಅವನು ಅಕ್ಷಯವಾದ ಸುಖವನ್ನು ಗಳಿಸುತ್ತಾನೆ.
ಇಂದ್ರಿಯ ಸುಖಗಳು ದುಃSಕಾರಕ

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ |
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ || 22 ||
ಅರ್ಥ : ಇಂದ್ರಿಯಗಳ ಸ್ಪರ್ಶದಿಂದ ದೊರಕುವ ಸುಖಗಳು ದುಃಖಕಾರಕವಾಗಿವೆ. ಏಕೆಂದರೆ ಈ ಸುಖಗಳಿಗೆ ಪ್ರಾರಂಭವಿದ್ದಂತೆ ಅಂತ್ಯವೂ ಇದೆ. ಆದ್ದರಿಂದ ಕೌಂತೇಯನೇ ಬುದ್ಧಿವಂತನಾದವನು ಇವುಗಳಲ್ಲಿ ಆಸಕ್ತನಾಗುವುದಿಲ್ಲ.
ಸಂಸಾರದ ಸುಖಗಳು ದುಃಖಕಾರಕಗಳಾಗುತ್ತವೆ ಎಂಬುದು ಮೇಲ್ನೋಟಕ್ಕೆ ತಪ್ಪಾಗಿ ಕಾಣುತ್ತದೆ. ಇಂದ್ರಿಯ ಸುಖಗಳು ಪ್ರಾರಂಭದಲ್ಲಿ ‘ಸುಖ’ ಎಂದು ಕಾಣುತ್ತವೆ ನಿಜ, ಆದರೆ ಕೊನೆಯಲ್ಲಿ ದುಃಖಕರವಾಗಿ ಪರಿಣಮಿಸುತ್ತವೆ. ಈ ಸಂದರ್ಭದಲ್ಲಿ ವ್ಯವಹಾರದ ಒಂದು ಸಾಮಾನ್ಯ ಉದಾಹರಣೆಯನ್ನು ಹೇಳಬಹುದು. ಒಬ್ಬ ವ್ಯಕ್ತಿಗೆ ಅತಿಪ್ರಿಯವಾದ ಮೊದಲನೆಯ ಹೋಳಿಗೆಯು ತುಂಬಾ ಸುಖವನ್ನು ಕೊಡುತ್ತದೆ. ಅಂತೆಯೇ ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಹೋಳಿಗೆಯು ವ್ಯಕ್ತಿಗೆ ಪ್ರಿಯಕರ. ಆಹ್ಲಾದಕರ ಮತ್ತು ಸುಖಕರ ಎಂದು ಅವನು ಅದನ್ನು ಇನ್ನೂ ತಿನ್ನುತ್ತಾ ಹೋದರೆ ಕೊನೆಯಲ್ಲಿ ಹೋಳಿಗೆಯಿರಲಿ, ಅದರ ಹೆಸರು ಸಹ ಅವನಿಗೆ ದುಃಖಕರವಾಗುತ್ತದೆ. ಹೀಗೆ ದುಃಖಕರವಾದ ಕೊನೆಯ ಹೋಳಿಗೆಯಲ್ಲಿ ಯಾವ ಮಾರ್ಪಾಟೂ ಆಗಲಿಲ್ಲ. ಅದು ಎಲ್ಲಾ ದೃಷ್ಟಿಯಿಂದಲೂ ಮೊಟ್ಟಮೊದಲು ಹೋಳೀಗೆಯಂತೆಯೇ ಇದೆ. ಆದಾಗ್ಯೂ ಹೋಳಿಗೆಯು ಅವನಿಗೆ ಕೊನೆಯಲ್ಲಿ ದುಃಖಕರವಾಯಿತು. ಈ ಮಾರ್ಪಾಟು ಆದುದು ಅವನ ಮನಸ್ಸಿನಲ್ಲಿ ಮಾತ್ರ. ಇದೇ ರೀತಿ ಎಲ್ಲಾ ಭೋಗವಸ್ತುಗಳನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಬುದ್ಧಿವಂತನಾದನು ಇಂದ್ರಿಯ ಸುಖಗಳಲ್ಲಿ ಆಸಕ್ತನಾಗುವುದಿಲ್ಲ.
ಆತ್ಮಜ್ಞಾನಕ್ಕೆ ವಿಘ್ನಕಾರಕರಾದ ಇಬ್ಬರು ಆಂತರಿಕ ಶತ್ರುಗಳಿದ್ದಾರೆ ಅವರನ್ನು ಮೊದಲು ಹೊರಕ್ಕೆ ಹಾಕಬೇಕು.

ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಯರೀರವಿಮೋಕ್ಷಣಾತ್ |
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ || 23 ||
ಅರ್ಥ : ಯಾವನು ಈ ಜನ್ಮದಲ್ಲಿಯೇ, ಈ ಶರೀರವನ್ನು ಬಿಟ್ಟುಹೋಗುವ ಮೊದಲೇ ಕಾಮ ಮತ್ತು ಕ್ರೋಧ ಎಂಬ ಎರಡು ವೇಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೋ ಅವನೇ ಯೋಗಿಯು ಅವನೇ ಸುಖಪುರುಷನು.
ಹಿಂದೆ ಹೇಳಿದ ‘ಜ್ಞಾನಿ’ಯ ಲಕ್ಷಣಗಳನ್ನು ನೋಡಿ, ಆ ಸ್ಥಿತಿಯನ್ನು ತಲುಪುವುದು ಅಸಾಧ್ಯವೆಂದು ಅದು ಕೇವಲ ತಾತ್ವಿಕ ವರ್ಣನೆ ಎಂದೂ ತಿಳಿದುಕೊಂಡು ಅದರಲ್ಲಿ ವಿಶ್ವಾಸವು ಹುಟ್ಟದಿರಬಹುದೆಂದು ಊಹಿಸಿ ಅದರ ಪರಿಹಾರಕ್ಕಾಗಿ ಆ ಸ್ಥಿತಿಯನ್ನು ಈ ಜನ್ಮದಲ್ಲಿಯೇ ಸಾಧಿಸುವುದು ಸಾಧ್ಯವೆಂದು ಹೇಳಿ, ಆ ಮಾರ್ಗವನ್ನು ಸಹ ತೋರಿಸಲಾಗಿದೆ. ಅದರ ಸಾಧನೆಗೆ ಮೊಟ್ಟಮೊದಲು ಕಾಮ ಕ್ರೋಧಗಳನ್ನು ಜಯಿಸಬೇಕು. ಇದು ಹೊರಗೆ ನೋಡುವುದಕ್ಕೆ ಸಾಮಾನ್ಯ ವಾಕ್ಯದಂತೆ ಕಂಡರೂ ತುಂಬಾ ಅರ್ಥವಾತ್ತಾಗಿದೆ. ಹಾಗೂ ಪ್ರಬಲವಾದ ಸಾಧನವಾಗಿದೆ. ಸಂಸಾರದ ಚಟುವಟಿಕೆಗಳಿಗೆ ಕಾಮವು ಕಾರಣವೆಂದು ಅದರ ಪ್ರಾಪ್ತಿಯಲ್ಲಿ ವಿಘ್ನವೊದಗಿದರೆ ಕ್ರೋಧ ಉತ್ಪನ್ನವಾಗುತ್ತದೆಂದು ಹೀಗೆ ಒಂದೊಂದೇ ದೌರ್ಬಲ್ಯಗಳು ಹೆಚ್ಚಾಗುತ್ತಾ ಮನುಷ್ಯನು ಪತಿತನಾಗುತ್ತಾನೆಂದು ಈ ಹಿಂದೆ ವಿವರಿಸಿದ “ಕ್ರೋಧಾತ್ಭವತಿ ಸಂಮೋಹಃ ಸಂಮೋಹಾತ್‍ಸ್ಮೃತಿ ವಿಭ್ರಮಃ | ಸ್ಮೃತಿಭ್ರಂಶಾದ್ಭುದ್ಧಿನಾಶೋ
ಬುದ್ಧಿನಾಶಾತ್ ಪ್ರಣಶ್ಯತಿ” ಎಂಬುದನ್ನು ಜ್ಞಾಪಿಸಿಕೊಳ್ಳಬೇಕು

ಯಾರು ಬ್ರಹ್ಮಜ್ಞಾನವನ್ನು ಪಡೆಯುತ್ತಾರೆ. ?
ಯೋ„ಂತಃಸುಖೋ„ಂತರಾರಾಮಸ್ತಥಾಂತಜ್ರ್ಯೋತಿರೇವ ಯಃ |
ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋ„ಧಿಗಚ್ಛತಿ || 24 ||
ಅರ್ಥ : ಯಾರು ತನೊಳಗೇ ಸುಖವನ್ನು ಅನುಭವಿಸುತ್ತಾನೋ ಯಾರು ತನ್ನೊಳಗೇ ಆನಂದವನ್ನು [ಆತ್ಮಾನಂದ] ಕಾಣುತ್ತಾನೋ ಯಾರು ತನ್ನೊಳಗೇ ಜ್ಞಾನದ ಬೆಳಕನ್ನು ಕಾಣುತ್ತಾನೋ ಅಂತಹ ಯೋಗಿಯು ಬ್ರಹ್ಮೈಕ್ಯವನ್ನು ಹೊಂದುತ್ತಾನೆ. ಆತನೇ ಬ್ರಹ್ಮನಾಗುತ್ತಾನೆ.
ಯೋಗಿಯು ಬಾಹ್ಯಪ್ರಪಂಚದಿಂದ ಇಂದ್ರಿಯಗಳನ್ನು ಹಿಂದಕ್ಕೆ ಎಳೆದುಕೊಂಡು ಮನಸ್ಸನ್ನು ಆತ್ಮಧ್ಯಾನದ ಕಡೆಗೆ ತಿರುಗಿಸಿ ಏಕಾಗ್ರತೆಯಿಂದ ಧ್ಯಾನಮಾಡುತ್ತಾ ಆತ್ಮಾನಂದವನ್ನು ಅನುಭವಿಸುತ್ತಾನೆ.

ಲಭಂತೇ ಬ್ರಹ್ಮನಿರ್ವಾಣಮೃಷಯಃ ಕ್ಷೀಣಕಲ್ಮಷಾಃ |
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ || 25 ||
ಅರ್ಥ : ಪಾಪಗಳನ್ನು ಕಳೆದುಕೊಂಡು ತಾನು ಬೇರೆ ಪರಮಾತ್ಮನು ಬೇರೆ ಎಂಬ ಅಜ್ಞಾನವನ್ನು ಕತ್ತರಿಸಿ ಹಾಕಿ ಇಬ್ಬರೂ ಒಂದೇ ಎಂಬ ಅನುಭವವನ್ನು ಪಡೆದು ಆತ್ಮನಿಗ್ರಹವನ್ನು ಸಾಧಿಸಿ ಎಲ್ಲಾ ಪ್ರಾಣಿಗಳಿಗೆ ಹಿತವನ್ನುಂಟು ಮಾಡುವುದರಲ್ಲಿಯೇ ನಿರತರಾಗಿರುವ ಋಷಿಗಳು ಬ್ರಹ್ಮೈಕ್ಯವನ್ನು ಹೊಂದುತ್ತಾರೆ.
ಹಿಂದೆ ಹೇಳಿದ ಸಾಧನೆಗಳ ಮುಖಾಂತರ ಯೋಗಿಯು ಬ್ರಹ್ಮಜ್ಞಾನವನ್ನು ಹೊಂದಿದ ಮೇಲೆ ಅವನು ಶರೀರವನ್ನು ಧರಿಸಿರುವವರೆಗೂ ಅವನ ಕರ್ತವ್ಯವೇನು ? ಜನರೊಡನೆ ಅವನ ವರ್ತನೆ ಹೇಗಿರುತ್ತದೆ ಎಂಬ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಯೋಗಿಯು ತಾನು ಆತ್ಮಾನಂದವನ್ನು ಪಡೆದನಂತರ ಸಮಾಜಕ್ಕೆ ಭಾರವಾಗಿ ಜೀವಿಸುವುದಿಲ್ಲ. ತಾನು ಗಳಿಸಿದ ಜ್ಞಾನ, ಶಾಂತಿ, ಕರ್ತವ್ಯಶಕ್ತಿ ಇವುಗಳನ್ನು ಲೋಕಹಿತಕ್ಕಾಗಿ ವಿನಿಯೋಗಿಸುತ್ತಾನೆ. ತಾನು ಆತ್ಮಾನಂದದಲ್ಲಿದ್ದಾಗ್ಯೂ ತನ್ನ ಶರೀರ, ಮನಸ್ಸು, ಬುದ್ಧಿಗಳನ್ನು ಜನತೆಯ ಸೇವೆಗಾಗಿ ವಿನಿಯೋಗಿಸುತ್ತಾನೆ. ಲೋಕಸೇವೆಯು ಅವನ ವಿಹಾರವಾಗುತ್ತದೆ. ಈ ಮಾತನ್ನು “ಸರ್ವಭೂತ ಹಿತೇರತಾಃ” ಎಂಬ ವಾಕ್ಯದಲ್ಲಿ ಸಂಕ್ಷೇಪವಾಗಿ ಸೂಚಿಸಲಾಗಿದೆ.

 

ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್ |
ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್ || 26 ||
ಅರ್ಥ : ಕಾಮಕ್ರೋಧಗಳನ್ನು ಗೆದ್ದಿರುವ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿರುವ ಮತ್ತು ಆತ್ಮಜ್ಞಾನವನ್ನು ಪಡೆದಿರುವ ಯೋಗಿಗಳು ಎಲ್ಲೆಡೆಯಲ್ಲಿಯೂ ಬ್ರಹ್ಮಾನಂದವನ್ನು ಕಾಣುತ್ತಾರೆ.
ಬ್ರಹ್ಮಜ್ಞಾನವನ್ನು ಪಡೆದ ಯೋಗಿಯು ಸಾಮಾನ್ಯ ಜನತೆಯ ಮಧ್ಯದಲ್ಲಿ ಲೋಕ ಸೇವಾ ದೃಷ್ಟಿಯಿಂದ ಕಾರ್ಯನಿರತನಾಗಿರುವಾಗ ಜನರ ಅಜ್ಞಾನ, ದೌರ್ಬಲ್ಯ, ಕುಂದುಕೊರತೆಗಳಿಂದ ಲಿಪ್ತವಾಗದೆ, ವಿವಿಧ ಆಕರ್ಷಣೆಗಳಿಗೆ ಬಲಿಯಾಗಿದೆ. ಕಾಮ, ಕ್ರೋಧಗಳಿಂದ ದೂರವಾಗಿದ್ದು, ಆತ್ಮಾನಂದದಲ್ಲಿರುತ್ತಾನೆ. ಇವನು ಇಲ್ಲಿಯೂ ಮತ್ತು ಮುಂದೆಯೂ ಈ ಆನಂದದಲ್ಲಿರುತ್ತಾನೆ. ಶಂಕರಾಚಾರ್ಯರು, ಕರ್ಮಯೋಗದ ಬಗ್ಗೆ ಭಾಷ್ಯವನ್ನು ಬರೆಯುತ್ತಾ ಹೀಗೆ ಹೇಳಿದ್ದಾರೆ. “ಕರ್ಮಯೋಗ ರೀತ್ಯಾ ಆಚರಿಸುವ ವಿವಿಧ ಕರ್ಮಗಳನ್ನು ಪರಮಾತ್ಮನಿಗೆ ಭಕ್ತಿಯಿಂದ ಅರ್ಪಣೆ ಮಾಡಿದರೆ, ಮೋಕ್ಷವು ಹಂತ ಹಂತವಾಗಿ ಸಿದ್ಧಿಸುತ್ತದೆ. ಇಂತಹ ಕರ್ಮದಿಂದ ಮೊದಲು ಮನಸ್ಸು ಶುದ್ಧವಾಗುತ್ತದೆ ಅದರಿಂದ ಜ್ಞಾನೋದಯವಾಗುತ್ತದೆ ಮುಂದೆ ಸನ್ಯಾಸ ಆನಂತರ ಮೋಕ್ಷ.
ಜ್ಞಾನವನ್ನು ಸಂಪಾದಿಸಲು ಧ್ಯಾನವು ಅವಶ್ಯಕವಾದುದರಿಂದ ಧ್ಯಾನ ಮಾಡುವ ವಿಧಾನವನ್ನು ತಿಳಿಸಲಾಗಿದೆ.
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶೈವಾಂತರೇ ಭ್ರುವೋಃ |
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ || 27 ||
ಯತೇಂದ್ರಿಯಮನೋಬುದ್ಧಿರ್ಮುನಿರ್ಮೋಕ್ಷರಾಯಣಃ |
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ || 28 ||
ಅರ್ಥ : ಇಂದ್ರಿಯಗಳು ಹೊರಗಿನ ವಿಷಯಗಳ ಕಡೆಗೆ ಓಡದಂತೆ ತಡೆಹಿಡಿದು ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ ಪ್ರಾಣಾಯಾಮ ವಿಧಾನದ ಮೂಲಕ ಪ್ರಾಣ ಮತ್ತು ಅಪಾನವಾಯುಗಳ ಗತಿಯನ್ನು ಸಮಾನವಾಗಿಟ್ಟುಕೊಂಡು ಇಂದ್ರಿಯಗಳು ಮನಸ್ಸು ಬುದ್ಧಿಗಳನ್ನು ನಿಗ್ರಹಿಸಿ ಮೋಕ್ಷವೇ ತನ್ನ ಗುರಿ ಎಂಬುದಾಗಿ ತಿಳಿದುಕೊಂಡು ಆಸೆ ಭಯ ಕ್ರೋಧಗಳಿಲ್ಲದವನಾಗಿ ಧ್ಯಾನ ಮಾಡುವ ಯೋಗಿಯು ಮುಕ್ತಿಯನ್ನು ಹೊಂದುತ್ತಾನೆ.
ಈ ಎರಡು ಶ್ಲೋಕಗಳಲ್ಲಿ ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗುವ ಧ್ಯಾನಯೋಗದ ವಿವರಗಳನ್ನು ಸಂಕ್ಷೇಪವಾಗಿ ವರ್ಣಿಸಲಾಗಿದೆ. ಒಂದು ಭಾಗವು ಮುಗಿದ ಮೇಲೆ ಮುಂದಿನ ವಿಭಾಗದ ಸೂಚನೆಯನ್ನು ಕೊಡುವುದು. ಸಂಸ್ಕೃತ ಸಾಹಿತ್ಯ ಹಾಗೂ ವೇದಾಂತ ಗ್ರಂಥಗಳ ಪದ್ಧತಿಯಾಗಿದೆ.
ಧ್ಯಾನ ಮಾಡುವಾಗ ಇಂದ್ರಿಯನಿಗ್ರಹವು ಅವಶ್ಯಕ. ಇಂದ್ರಿಯ ವಿಷಯಗಳೊಡನೆ ನಮ್ಮ ಮನಸ್ಸು ಸೇರಿದರೆ ಮಾತ್ರ ಅವು ಮನಸ್ಸಿನಲ್ಲಿ ವಿಚಾರ ತರಂಗಗಳನ್ನೆಬ್ಬಿಸಿ ಕಾಮ ಕ್ರೋಧಗಳಿಗೆ ಕಾರಣವಾಗುತ್ತದೆ. ಸಮುದ್ರದ ದಡದಲ್ಲಿ ದೂರದಲ್ಲಿ ನಿಂತಿರುವ ನಮಗೆ ಅಲೆಗಳು ಏನೂ ಮಾಡಲಾರವು. ಆದರೆ ಅಲೆಗಳ ಬಡಿತಕ್ಕೆ ಸಿಗುವಷ್ಟು ಹತ್ತಿರ ಹೋದರೆ ಅವು ನಮ್ಮ ಕಾಲು ಬುಡದ ನೆಲವನ್ನೇ ಸಡಿಲುಗೊಳಿಸಿ ನಮ್ಮನ್ನು ಕೆಡವಿ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ನೂಕಿ ಭ್ರಾಂತಿಗೊಳಿಸಬಹುದು. ಇಲ್ಲಿ ಇಂದ್ರಿಯ ನಿಗ್ರಹವೆಂದರೆ ಕಿವಿ, ಮೂಗು ಮೊದಲಾದ ಇಂದ್ರಿಯಗಳನ್ನು ಹತ್ತಿ ಮೊದಲಾದ ಬಾಹ್ಯ ಸಾಧನಗಳಿಂದ ಮುಚ್ಚಿಕೊಳ್ಳುವುದೆಂದಲ್ಲ. ಅವುಗಳನ್ನು ಒಳಗಿನಿಂದ ಮುಚ್ಚಬೇಕು. ಮನಸ್ಸು ಆ ಇಂದ್ರಿಯಗಳ ಮುಖಾಂತರ ಹೊರಕ್ಕೆ ಹೋಗಿ, ಇಂದ್ರಿಯ ವಿಷಯಗಳನ್ನು ತಲುಪದಂತೆ ನಿಗ್ರಹಿಸಬೇಕು.
ಪ್ರಾಣಾಪಾನವಾಯುಗಳನ್ನು ಸಮತ್ವದಲ್ಲಿಡುವುದು ನಮ್ಮ ಮನಸ್ಸು ಉದ್ರೇಕಗೊಂಡಿರುವಾಗ ಶ್ವಾಸೋಜ್ವಾಸಾದ ವೇಗದಲ್ಲಿ ತೀವ್ರತೆಯುಂಟಾಗುತ್ತದೆ. ಉದ್ರೇಕವು ಹೆಚ್ಚಾಗಿದ್ದರೆ ಇದರ ತೀವ್ರತೆಯ ಇನ್ನೂ ಹೆಚ್ಚುತ್ತದೆ. ಹೀಗೆ ಶ್ವಾಸದ ವೇಗಕ್ಕೂ ಮಾನಸಿಕ ಉದ್ರೇಕಕ್ಕೂ ನಿಕಟ ಸಂಬಂಧವಿದೆ. ಆದ್ದರಿಂದ ಶ್ವಾಸೋಚ್ಛ್ವಾಸದ ವೇಗವನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ಮನಸ್ಸನ್ನು ನಿಗ್ರಹಿಸಲು ಸಹಾಯವಗುತ್ತದೆ. ಶ್ವಾಸೋಚ್ಛ್ವಾಸವನ್ನು ನಿಗ್ರಹಿಸುವ ಈ ವಿಧಾನವನ್ನು ಪ್ರತ್ಯಕ್ಷ ಅಭ್ಯಾಸ ಹಾಗೂ ಅನುಭವವಿರುವ ಗುರುವಿನ ಮುಖಾಂತರ ಕಲಿತು ಅಭ್ಯಾಸ ಮಾಡಬೇಕು. ಕೇವಲ ಪುಸ್ತಕವನ್ನು ಓದಿ ಅಭ್ಯಾಸ ಮಾಡುವುದು ಅಪಾಯಕರ.

ಯೋಗಿಯು ಏನನ್ನು ಧ್ಯಾನ ಮಾಡುತ್ತಾನೆ ?

ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ |
ಸುಹೃದಂ ಸರ್ವಭೂತಾನಾಂ ಜ್ಞಾತ್ವಾಮಾಂ ಶಾಂತಿಮೃಚ್ಛತಿ || 29 ||
ಅರ್ಥ : ಅವನು, ನನ್ನನ್ನು ಯಜ್ಞ, ತಪಸ್ಸುಗಳನ್ನು ಸ್ವೀಕರಿಸುವವನೆಂದೂ, ಎಲ್ಲಾ ಜೀವಿಗಳ ಸ್ನೇಹಿತನೆಂದೂ ತಿಳಿದು ಶಾಂತಿಯನ್ನು ಹೊಂದುತ್ತಾನೆ.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಕರ್ಮಸಂನ್ಯಾಸಯೋಗೋ ನಾಮ
ಪಂಚಮೋ„ಧ್ಯಾಯಃ