S O U L B L I S S

Loading

Bhagavad Gita – Vinayak Rao Bapat – Chapter 6

ಆರನೆಯ ಅಧ್ಯಾಯ
ಧ್ಯಾನಯೋಗ
ಪೀಠಿಕೆ
ಕೆಲವು ವಿಚಾರಶೀಲರ ಅಭಿಪ್ರಾಯದಂತೆ ಈ ಆರನೆಯ ಅಧ್ಯಾಯದ ಜೊತೆಗೆ ಗೀತೆಯು ಮೊದಲನೆಯ ಭಾಗವು ಮುಗಿಯುತ್ತದೆ. ಈ ವಿಭಾಗದಲ್ಲಿ ‘ತತ್ವಮಸಿ’ ಎಂಬ ವೇದಮಂತ್ರದ ‘ತ್ವಮ್’ ಎಂಬುದರ ವರ್ಣನೆಯಿದೆ. ವೇದಾಂತ ಶಿಕ್ಷಣದಲ್ಲಿಯ ಮೊದಲನೆಯ ಘಟ್ಟವು ಈ ಅಧ್ಯಾಯದೊಂದಿಗೆ ಮುಗಿಯುವುದರಿಂದ, ಇದುವರೆಗೆ ಮಾಡಿದ ಉಪದೇಶವನ್ನು ಸಂಕ್ಷೇಪವಾಗಿ ಪುನರ್ವಿಮರ್ಶಿಸಿದರೆ ಮುಂದಿನ ಈಭಾಗವನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಕೊಳ್ಳಲು ಸುಲಭವಾಗುತ್ತದೆ.
ಎರಡನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಎಲ್ಲಾ ಉಪನಿಷತ್ತುಗಳ ಸಾರವನ್ನೂ ಸಂಕ್ಷೇಪವಾಗಿ ವಿವರಿಸಿದ್ದಾನೆ. ಅಧ್ಯಾಯದ ಕೊನೆಯಲ್ಲಿ ಸ್ಥಿತಪ್ರಜ್ಞ ಯೋಗಿಯ ವರ್ಣನೆಯನ್ನು ಮಾಡಲಾಗಿದೆ. ಸಾಧಕನು ತಾನೂ ಈ ಸ್ಥಿತಿಗೆ ಏರಬೇಕು ಎಂದು ಅಪೇಕ್ಷಿಸುವುದು ಸ್ವಾಭಾವಿಕ. ಆದರೆ ಈ ಸ್ಥಿತಿಯನ್ನು ಏಕಾಏಕಿ ಗಳಿಸಲು ಸಾಧ್ಯವಿಲ್ಲ. ಅದನ್ನು ದೀರ್ಘಕಾಲದ ಸತತ ಪ್ರಯತ್ನದ ಪರಿಣಾಮವಾಗಿ ವಿವಿಧ ಹಂತಗಳಲ್ಲಿ ಸಾಧಿಸಬೇಕು. ಅಂದರೆ ಈ ಸಾಧನೆಗೆ ಪ್ರತಿಯೊಂದು ಹಂತದಲ್ಲಿಯೂ ಪೂರ್ವತಯಾರಿಯು ಅತ್ಯವಶ್ಯಕ. ಇದಕ್ಕಾಗಿ ಉಪಾಸನಾಂಗವು ಹೇಳಲ್ಪಟ್ಟಿದೆ. ಕೇವಲ ಉಪದೇಶದಿಂದ ಅರ್ಜುನನನ್ನು ಸ್ಥಿತಪ್ರಜ್ಞನ ಅಂತಸ್ತಿಗೆ ಏರಿಸಲು ಸಾಧ್ಯವಿರಲಿಲ್ಲ. ಅಂತೆಯೇ ಅವನಿಗೆ ಪ್ರಾರಂಭಿಕ ಪಾಠಗಳನ್ನು ಹೇಳಿಕೊಟ್ಟು, ಕ್ರಮೇಣ ಹಂತಹಂತವಾಗಿ ಮೇಲಕ್ಕೇರಲು ಸಜ್ಜುಗೊಳಿಸಲಾಯಿತು. ಇದಕ್ಕಾಗಿ ಮೂರನೆಯ ಅಧ್ಯಾಯದಲ್ಲಿ ಕರ್ಮಯೋಗವನ್ನು ಹೇಳಿ ಅದರ ಸಂಪೂರ್ಣ ತಾಂತ್ರಿಕ ವಿವರಗಳನ್ನು ತಿಳಿಸಲಾಯಿತು.
ಹೊರಗಿನ ಪ್ರಪಂಚದಲ್ಲಿ ಮಾಡುವ ಕರ್ಮಗಳು ಎಷ್ಟೆ ಶ್ರೇಷ್ಠವಾಗಿದ್ದಾಗ್ಯೂ. ಆ ಕರ್ಮಗಳಿಂದ ಉಂಟಾಗುವ ಪ್ರತಿಕ್ರಿಯೆಗಳು ಮನಸ್ಸಿನ ಮೇಲೆ ತೀವ್ರವಾದ ಪರಿಣಾಮವನ್ನುಂಟು ಮಾಡಿ ತಮ್ಮ ಮುದ್ರೆಯನ್ನೊತ್ತುತ್ತವೆ. (ವಾಸನೆ) ಈ ತರಹದ ಮಾನಸಿಕ ವ್ರಣವನ್ನು ಮಾಯಿಸುವುದಕ್ಕಾಗಿ ಮತ್ತೆ ಹೊಸದಾಗಿ ಇಂತಹ ವ್ರಣಗಳುಂಟಾಗದಂತೆ ತಡೆಯುವುದಕ್ಕಾಗಿ ನಾಲ್ಕನೆಯ ಅಧ್ಯಾಯದಲ್ಲಿ ಜ್ಞಾನಕರ್ಮಸನ್ಯಾಸಯೋಗವನ್ನು ಹೇಳಿ ಸರಿಯಾದ ಜ್ಞಾನದಿಂದ ಕರ್ಮ ಮಾಡುವಾಗ, ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳುವ ಕಲೆಯನ್ನು ಕಲಿಸಲಾಯಿತು.
ಮೊದಲು ಅರ್ಜುನನಿಗೆ ಕರ್ಮಯೋಗವನ್ನು ಬೋಧಿಸಿ ನಂತರ ಕರ್ಮಸನ್ಯಾಸದ ವಿಚಾರವನ್ನು ಹೇಳಿದ್ದರಿಂದ ಅವನ ಮನಸ್ಸು ಗೊಂದಲಕ್ಕೀಡಾಯಿತು. ಅದರ ಪರಿಹಾರಕ್ಕಾಗಿ ಯಜ್ಞಭಾವದಿಂದ ಗಳಿಸಿಕೊಳ್ಳಬಹುದೆಂದು ಐದನೆಯ ಅಧ್ಯಾಯದಲ್ಲಿ ವಿವರಿಸಲಾಯಿತು. ಇದರಲ್ಲಿ (1) ‘ನಾನು’ ಮಾಡುವವನು ಎಂಬ ಅಹಂಕಾರವನ್ನು ತ್ಯಾಗಮಾಡುವುದು ಮತ್ತು (2) ಕರ್ಮಫಲವನ್ನು ತ್ಯಾಗ ಮಾಡಬಹುದು ಎಂಬ ಎರಡು ವಿವಿಧ ಮಾನಸಿಕ ತ್ಯಾಗದ ಮೂಲಕ ಕರ್ಮಮಾಡುವ ಕಲೆಯನ್ನು ತಿಳಿಸಿ ಅದರಿಂದ ಮಾನಸಿಕ ಶಾಂತಿಯು ದೊರೆಯುವುದರ ಜೊತೆಗೆ ಸಂಜಿತ ವಾಸನೆಗಳು ಬರಿದಾಗುತ್ತವೆಂದೂ ಹೇಳಲಾಗಿದೆ.
ಹೀಗೆ ಹಂತಹಂತಗಳಲ್ಲಿ ಶುದ್ಧಗೊಂಡಿರುವ ಮತ್ತು ಸಾಧನೆಯಿಂದ ಶಕ್ತಿಯನ್ನು ಪಡೆದಿರುವ ಮನಸ್ಸು ಇನ್ನೂ ಮೇಲ್ಮಟ್ಟದ ಧ್ಯಾನದಲ್ಲಿ ನಿರತವಾಗಿ ಆತ್ಮಜ್ಞಾನವನ್ನು ಪಡೆಯಲು ಅರ್ಹವಾಗುತ್ತದೆ. ಆದ್ದರಿಂದ ಈ ಅಧ್ಯಾಯದಲ್ಲಿ ಧ್ಯಾನಮಾಡುವ ಮೂಲಕ ಆತ್ಮಜ್ಞಾನವನ್ನು ಪಡೆಯುವ ವಿವರಗಳನ್ನು ತಿಳಿಸಲಾಗಿದೆ.
ಈ ಅಧ್ಯಾಯದಲ್ಲಿ ಧ್ಯಾನಯೋಗದ ಸಂಪೂರ್ಣ ಸಾಹಿತ್ಯವನ್ನೂ. ಆ ಕಲೆಯ ವಿವರವನ್ನೂ, ಧ್ಯಾನಕಾಲದಲ್ಲಿ ಒದಗುವ ಆತಂಕಗಳು ಇಲ್ಲವೆ ವಿಘ್ನಗಳನ್ನು ಅವುಗಳನ್ನು ಗೆಲ್ಲುವ ಉಪಾಯಗಳನ್ನು ತಾರ್ಕಿತವಾಗಿ ವಿವರಿಸಲಾಗಿದೆ. ಧ್ಯಾನ ಮಾಡಬೇಕೆಂಬ ಸಾಧಕರಿಗೆ ಈ ಅಧ್ಯಾಯದಲ್ಲಿ ಅದರ ಬಗೆಗಿನ ಸಂಪೂರ್ಣ ಸಾಹಿತ್ಯವಿದೆ. ಧ್ಯಾನ ಮಾಡುವ ಮಾರ್ಗವನ್ನೂ ಅದಕ್ಕೆ ಬೇಕಾಗುವ ಪೂರ್ವತಯಾರಿಯನ್ನು ಇಲ್ಲಿ ಕಾಣಬಹುದು.

ಆರನೆಯ ಅಧ್ಯಾಯ
ಆತ್ಮಸಂಯಮಯೋಗ ಅಥವಾ ಧ್ಯಾನಯೋಗ
ಶ್ರೀ ಭಗವಾನ್ ಉವಾಚ

ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ |
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ || 1 ||
ಅರ್ಥ : ಕರ್ಮಫಲದಲ್ಲಿ ಆಸೆಯನ್ನಿಟ್ಟುಕೊಳ್ಳದೆ ತನ್ನ ಕರ್ತವ್ಯ ಕರ್ಮವನ್ನು ಮಾಡುವವನು ಸನ್ಯಾಸಿ ಎನಿಸಿಕೊಳ್ಳುತ್ತಾನೆ. ಅವನೇ ಯೋಗಿಯು. ಅಗ್ನಿಯನ್ನು (ಯಜ್ಞ,ಯಾಗ) ಇಲ್ಲವೇ ಇತರೇ ಕರ್ಮಗಳನ್ನು ತ್ಯಜಿಸಿದ ಮಾತ್ರಕ್ಕೆ ಸನ್ಯಾಸಿಯಾಗುವುದಿಲ್ಲ.
ಇದುವರೆಗಿನ ಐದು ಅಧ್ಯಾಯಗಳಲ್ಲಿ ಎರಡು ವಿಷಯಗಳನ್ನು ಪ್ರಧಾನವಾಗಿ ಒಟ್ಟೊಟ್ಟಾಗಿ ಹೇಳಲಾಗಿದೆ. (1) ಕರ್ಮ ಮಾಡುವವನು ‘ನಾನು’ ಎಂಬ ಅಹಂಕಾರವನ್ನು ತ್ಯಜಿಸುವುದು (ಸನ್ಯಾಸ), ಮತ್ತು
(2) ಫಲಾಸೆಯನ್ನು ತ್ಯಜಿಸುವುದು (ಯೋಗ).
ಇವೆರಡೂ ತತ್ವಶಃ ಒಂದೇ ಎಂಬುದ್ನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಇಷ್ಟಕ್ಕೇ ನಿಲ್ಲಿಸದೆ ಗೃಹಸ್ಥನು ವ್ಯವಹಾರದ ಕರ್ಮಗಳನ್ನು ತ್ಯಜಿಸುವುದರಿಂದ ಅಥವಾ ಗೃಹಸ್ಥನು ಅಗ್ನಿಕರ್ಮಗಳನ್ನು ತ್ಯಜಿಸುವುದರಿಂದ ಸನ್ಯಾಸಿಯಾಗಲಾರನೆಂದೂ. ಅಂದರೆ ಹೊರಗಿನ ವೇಷಭೂಷಣಗಳು ಸನ್ಯಾಸ ಪದವಿಯನ್ನು ದೊರಕಿಸಿಕೊಡಲಾರವೆಂದು ಅದಕ್ಕೆ ಒಳಗಿನ, ಆಂತರಿಕ ಬದಲಾವಣೆಯು (ಮಾನಸಿಕ ತ್ಯಾಗವು) – ಅವಶ್ಯಕವೆಂದು ಮೇಲಿನ ಶ್ಲೋಕದಲ್ಲಿ ಸ್ಪಷ್ಟಪಡಿಸಲಾಗಿದೆ. ಆಂತರಿಕ ಇಂದ್ರಿಯಗಳನ್ನು ಧಾರ್ಮಿಕ ಸಾಧನೆಗಾಗಿ ಯಾವ ರೀತಿಯಲ್ಲಿ ತಿದ್ದಿ ಬಲಪಡಿಸಿಕೊಳ್ಳಬೇಕೆಂಬ ವಿವರಗಳನ್ನು ಈ ಅಧ್ಯಾಯದಲ್ಲಿ ಹೇಳಲಾಗಿದೆ.

ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿಪಾಂಡವ |
ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ || 2 ||
ಅರ್ಥ : ಪಾಂಡವನೇ, ಯಾವುದಕ್ಕೆ ಸನ್ಯಾಸ ಎಂದು ಹೇಳುತ್ತಾರೋ ಅದನ್ನೇ ಯೋಗ ಎಂದು ತಿಳಿ. ಕಾಮ ಕ್ರೋಧಾದಿ ಸಂಕಲ್ಪಗಳನ್ನು ತ್ಯಜಿಸದೆ ಇರುವವನು ಎಂದಿಗೂ ಯೋಗಿಯಾಗಲಾರನು.
ಸನ್ಯಾಸ ಮತ್ತು ಯೋಗ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಸನ್ಯಾಸವಿಲ್ಲದೆ ಯೋಗವಿಲ್ಲ. ಯೋಗವಿಲ್ಲದೆ (ಕರ್ಮಯೋಗ) ಸನ್ಯಾಸವಿಲ್ಲ.
ಕರ್ಮಯೋಗದ ಅಭ್ಯಾಸದ ಮೂಲಕ ಸನ್ಯಾಸವು ಲಭಿಸುತ್ತದೆ. ಮನಸ್ಸಿನಲ್ಲಿ ಸನ್ಯಾಸಭಾವವಿಲ್ಲದಿದ್ದರೆ (ಕರ್ಮಫಲ ಸನ್ಯಾಸ) ಕರ್ಮಯೋಗವನ್ನು ಸಾಧಿಸುವುದು ಸಾಧ್ಯವಿಲ್ಲ. ಯೋಗಿಯ ಇನ್ನೊಂದು ಮುಖ್ಯಲಕ್ಷಣವನ್ನು – ಸಂಕಲ್ಪತ್ಯಾಗ – ಈ ಶ್ಲೋಕದಲ್ಲಿ ಹೇಳಲಾಗಿದೆ.
‘ಸಂಕಲ್ಪ’- ಯಾವುದಾದರೊಂದು ಹೊಸ ಕಾರ್ಯವನ್ನು ಸಾಧಿಸಬೇಕೆಂದು, ಇಲ್ಲವೇ ಯಾವುದಾದರೊಂದು ವಸ್ತುವನ್ನು ಗಳಿಸಬೇಕೆಂದು ನಮ್ಮ ಮನಸ್ಸಿನಲ್ಲಿ ಪದೇ ಪದೇ ಹೊಸ ಹೊಸವಿಚಾರಗಳು – ಕಲ್ಪನೆಗಳು – ಹುಟ್ಟುತ್ತವೆ. ಈ ಕಲ್ಪನೆಗಳು ಸಾಮಾನ್ಯವಾಗಿ ಅಷ್ಟು ಬಲವಾಗಿರುವುದಿಲ್ಲ. ಆ ಕಲ್ಪನೆಗಳನ್ನು ಕೈಗೂಡಿಸಿಕೊಳ್ಳಲು ನಾವು ಅವಶ್ಯಕವಾದ ಪ್ರಯತ್ನವನ್ನು ಮಾಡುವುದರೊಳಗೆ, ಅಥವಾ ಕಾರ್ಯವನ್ನು ಪ್ರಾರಂಭಿಸುವುದರೊಳಗೆ ಅವು ಮಾಯವಾಗಿ ಪುನಃ ಬೇರೆ ಕಲ್ಪನೆಗಳು ಹುಟ್ಟುತ್ತವೆ. ಇದಕ್ಕೆ ‘ಸಂಕಲ್ಪ’ ಎಂದು ಹೆಸರು. ಯೋಗಿಯು ತನ್ನ ಮನಸ್ಸಿನಿಂದ ಇಂತಹ ಸಂಕಲ್ಪಗಳನ್ನು ಕಿತ್ತು ಹಾಕಬೇಕು ಇಲ್ಲವೇ ಅವುಗಳನ್ನು ತ್ಯಜಿಸಬೇಕು. ಏಕೆಂದರೆ ಮುಂದಿನ ಸಾಧನೆಗೆ ಈ ಸಂಕಲ್ಪವು ಒಂದು ಪ್ರಬಲವಾದ ಆತಂಕ — ಶತ್ರು. ಸಂಕಲ್ಪವನ್ನು ತ್ಯಾಗ ಮಾಡದೆ ಯೋಗಿಯಾಗುವುದು ಸಾಧ್ಯವಿಲ್ಲ. ಇಲ್ಲಿ ‘ಕಶ್ಚನ’ (ಯಾರೂ ಸಹ) ಎಂಬ ಶಬ್ದವು ಇದನ್ನು ಸೂಚಿಸುತ್ತದೆ.

ಕರ್ಮಯೋಗವು ಧ್ಯಾನಕ್ಕೆ ಸಹಾಯಕರ

ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ |
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ || 3 ||
ಅರ್ಥ : ಯೋಗವನ್ನು ಸಾಧಿಸಬೇಕೆನ್ನುವ ಮುನಿಗೆ ಕರ್ಮವು ಬಲವಾದ ಸಾಧನ. ಯೋಗವನ್ನು ಸಾಧಿಸಿದ ನಂತರ ಮುಂದಿನ ಸಾಧನೆಗೆ ಶಾಂತಿಯು ಸಹಾಯಕವಾಗುತ್ತದೆ.
ಮಾನಸಿಕ ಏಕಾಗ್ರತೆಯನ್ನು ಸಾಧಿಸಿ, ಆತ್ಮಜ್ಞಾನ ಮಾಡಿಕೊಳ್ಳಬೇಕೆನ್ನುವ ಸಾಧಕನಿಗೆ, ಕರ್ಮಯೋಗ ರೀತ್ಯಾ ಕರ್ಮ ಮಾಡುವುದು ಪ್ರಮುಖವಾದ ಸಾಧನವಾಗಿದೆ. ಹೀಗೆ ಕರ್ಮಮಾಡುವಾಗ ಅವನು ‘ನಾನು’ ಎಂಬ ಅಹಂಕಾರವನ್ನು, ಕರ್ಮಫಲಕ್ಕೆ ‘ನಾನೇ ಅಧಿಕಾರಿ’ ಎಂಬ ಭಾವವನ್ನೂ ಅಂದರೆ ಫಲಾಸೆಯನ್ನು ತ್ಯಜಿಸಿರುವುದರಿಂದ, ಸಂಚಿತವಾದ ವಾಸನೆಗಳು ಬರಿದಾಗುತ್ತವೆ ಮತ್ತು ಹೊಸವಾಸನೆಗಳು ಹುಟ್ಟುವುದಿಲ್ಲ. ಹೀಗಾಗಿ ಅವನು ಯೋಗಸಾಧನೆಯಲ್ಲಿ ಮೇಲ್ಮಟ್ಟಕ್ಕೇರುತ್ತಾನೆ. (ಯೋಗಾರೂಢ)
ಯೋಗಾರೂಢ ಎಂಬ ಶಬ್ದದಲ್ಲಿಯ ಉಪಮಾನವನ್ನು ‘ಕುದುರೆಯ ಸವಾರಿ’ ಯಿಂದ ತೆಗೆದುಕೊಳ್ಳಲಾಗಿದೆ. ಈ ಉಪಮಾನವು ತುಂಬಾ ಅರ್ಥವತ್ತಾಗಿದೆ. ಕುದುರೆಯ ಸವಾರಿಯನ್ನು ಮಾಡುವ ಮೊದಲು, ಸವಾರನು ತನ್ನ ಕೈಗಳಿಂದ ಲಗಾಮನ್ನು ಹಿಡಿದುಕೊಂಡು, ಒಂದು ಕಾಲನ್ನು ನೆಲದ ಮೇಲಿಟ್ಟುಕೊಂಡು, ಸ್ವಲ್ಪ ದೂರ ಕುದುರೆಯ ಜೊತೆಗೆ ಓಡುತ್ತಾ, ನಂತರ ಒಂದೇ ಸಾರಿ ನೆಗೆದು ಕುದುರೆಯ ಮೇಲೆ ಕುಳಿತುಕೊಂಡು, ಎರಡೂ ಕಾಲುಗಳಿಂದ ಕುದುರೆಯನ್ನು ಅದುಮಿ, ಲಗಾಮನ್ನು ಬಿಗಿಯಾಗಿ ಹಿಡಿದುಕೊಂಡರೆ ಕುದುರೆಯನ್ನು ಹತೋಟಿಯಲ್ಲಿಟ್ಟುಕೊಂಡು ಬೇಕಾದೆಡೆಗೆ ಸವಾರಿ ಮಾಡಿಕೊಂಡು ಹೋಗಬಹುದು. ಇದರಂತೆಯೇ ಮನಸ್ಸು ಎಂಬ ಕುದುರೆಯನ್ನು ಏರಿ, ಬಿಗಿಯಾಗಿ ಕುಳಿತುಕೊಳ್ಳುವ ಮಧ್ಯಂತರದ ಅವಧಿಯಲ್ಲಿ ಸವಾರನು ತುಂಬಾ ಶ್ರಮಪಡಬೇಕು. ಜಾಗರೂಕನಾಗಿರಬೇಕು. ಇಲ್ಲದಿದ್ದರೆ ಕುದುರೆಯು ಅವನನ್ನು ಭೂಮಿಗೆ ಕೆಡವಿಬಿಡುತ್ತದೆ. ಅಂತೆಯೇ ಸಾಧಕನು ‘ಯಜ್ಞ’ ಭಾವದಿಂದ ಕರ್ಮಯೋಗ ರೀತ್ಯಾ ಮಾಡುವ ಕರ್ಮಗಳ ಮೂಲಕ ಮನಸ್ಸು ಎಂಬ ಕುದುರೆಯ ಮೇಲೆ ಏರಿ, ಕಡಿವಾಣವನ್ನು (ಪಂಚೇಂದ್ರಿಯಗಳು) ಬಿಗಿಯಾಗಿ ಹಿಡಿದುಕೊಂಡು ನಿಗ್ರಹ ಮಾಡಿ) ತನ್ನ ಎರಡೂ ಕಾಲುಗಳಿಂದ ಕುದುರೆಯನ್ನು ಬಿಗಿಯಾಗಿ ಅಮುಕುತ್ತಾ ಸವಾರಿ ಮಾಡಬೇಕು. ಹೀಗೆ ಯೋಗಾರೂಢನಾದವನ ವಾಸನೆಗಳೆಲ್ಲವೂ ಬರಿದಾಗಿ, ಮನಸ್ಸು ಶುದ್ಧವಾದ ಮೇಲೆ ಆತನು ಇನ್ನೂ ಮೇಲ್ಮಟ್ಟಕ್ಕೇರಲು, ಅಂದರೆ ಧ್ಯಾನ ಸಾಧನೆ ಮಾಡಲು ಅವನು ಇದುವರೆಗೆ ಗಳಿಸಿದ ಮಾನಸಿಕ ಶಾಂತಿ ಹಾಗೂ ಸ್ಥಿರಚಿತ್ತ ಇವುಗಳನ್ನು ಸಾಧನವನ್ನಾಗಿ ಉಪಯೋಗಿಸಿಕೊಳ್ಳಬೇಕು.

ಯೋಗಾರೂಢ ಎಂದರೇನು ?

ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಜ್ಜತೆ |
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ || 4 ||
ಅರ್ಥ : ಸಾಧಕನು ಇಂದ್ರಿಯ ವಿಷಯಗಳಲ್ಲಾಗಲೀ, ಕರ್ಮಗಳಲ್ಲಾಗಲೀ, ಅನುರಕ್ತನಾಗದೇ, ಮಾನಸಿಕ ಸಂಕಲ್ಪಗಳೆಲ್ಲವನ್ನು ತ್ಯಜಿಸಿ ಹಾಕಿದರೆ, ಅವನಿಗೆ ಯೋಗಾರೂಢ ಎಂದು ಹೆಸರು.
ಸಾಧನೆಯಲ್ಲಿ ಮೇಲಕ್ಕೇರಬೇಕೆಂಬ ಸಾಧಕನು ಮೊಟ್ಟಮೊದಲು ಯಜ್ಞಭಾವದಿಂದ ಕರ್ಮ ಮಾಡುವುದು ಅವಶ್ಯಕ. ಇದರಿಂದ ಅವನು ಯೋಗಾರೂಢ ಸ್ಥಿತಿಗೆ ಮುಟ್ಟಿದರೆ, ಆ ನಂತರ ಇನ್ನೂ ವೇಗದಿಂದ ಮುಂದಿನ ಹೆಜ್ಜೆಯನ್ನಿಡಲು ಹಾಗೂ ಧ್ಯಾನದಿಂದ ಆತಜ್ಞಾನವನ್ನು ಪಡೆಯಲು ಹಿಂದೆ ತಿಳಿಸಿದಂತೆ ‘ಶಮ’ (ಶಾಂತಿ)ವು ಸಾಧನವಾಗುತ್ತದೆ. ಈ ಭೇದವನ್ನು ತಿಳಿದುಕೊಂಡು ಸಾಧನೆಯಲ್ಲಿ ನಿರತನಾಗುವುದಕ್ಕೆ ಸಹಾಯವಾಗಲೆಂದು ಯೋಗಾರೂಢನ ಲಕ್ಷಣಗಳನ್ನು ತಿಳಿಸಲಾಗಿದೆ. ಯೋಗಾರೂಢನಿಗೆ ಇಂದ್ರಿಯ ವಿಷಯಗಳಲ್ಲಿ ಸ್ವಲ್ಪವೂ ಆಕರ್ಷಣೆಯಿ¯್ಲ, ಆಸಕ್ತಿಯೂ ಇಲ್ಲ. ಇದು ಅವನು ಮನಸ್ಸನ್ನು ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡಿರುವ ಲಕ್ಷಣ. ಈ ರೀತಿ ತಿದ್ದಿದ ಮನಸ್ಸನ್ನು ಧ್ಯಾನದಲ್ಲಿ ನಿಲ್ಲಿಸಿದರೆ ಏಕಾಗ್ರತೆಯ ಲಭಿಸುತ್ತದೆ, ಮತ್ತು ಮನಸ್ಸು ಪುನಃ ಇಂದ್ರಿಯಗಳ ಕಡೆಗಾಗಲೀ, ಸಂಕಲ್ಪಗಳ ಕಡೆಗಾಗಲೀ ಓಡುವುದಿಲ್ಲ. ಮನಸ್ಸನ್ನು ಈ ಸ್ಥಿತಿಗೆ ತಂದು ನಿಲ್ಲಿಸುವವರೆಗೂ ಯಜ್ಞಭಾವದಿಂದ ಕರ್ಮ ಮಾಡುವುದನ್ನು ಬಿಡಬಾರದು.

ಉದ್ದರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || 5 ||
ಅರ್ಥ : ಮನುಷ್ಯನು ತನ್ನ ಉದ್ಧಾರವನ್ನು ತನ್ನ ಆತ್ಮದಿಂದಲೇ ಸಾಧಿಸಿಕೊಳ್ಳಬೇಕು. ತನ್ನನ್ನು ಎಂದಿಗೂ ಅವನತಿಗೆ ತಂದುಕೊಳ್ಳಬಾರದು. ಏಕೆಂದರೆ ತನಗೆ ಆತ್ಮನೇ ಬಂಧುವು. ದುರುಪಯೋಗ ಪಡಿಸಿಕೊಂಡರೆ ಆತ್ಮವೇ ಶತ್ರುವು.
ಮನುಷ್ಯನು ತನ್ನಲ್ಲಿ ಸುಪ್ತವಾಗಿರುವ ಆತ್ಮತೇಜಸ್ಸನ್ನು ಜಾಗೃತಗೊಳಿಸಿಕೊಂಡು ಮೇಲಕ್ಕೇರಲು, ಇಲ್ಲವೇ ಆತ್ಮತೇಜಸ್ಸನ್ನು ಇನ್ನೂ ಮಂಕುಗೊಳಿಸಿಕೊಂಡು ಅಧೋಗತಿಗಿಳಿಯಲು ಸ್ವತಂತ್ರನಾಗಿದ್ದಾನೆ. ಸರಿಯಾದ ಉಪಯೋಗದಿಂದ ಮೇಲಕ್ಕೇರಿ ಆ ಆತ್ಮಜ್ಞಾನವನ್ನು ಪಡೆದರೆ ಆತ್ಮನು ಬಂಧುವಾಗುತ್ತಾನೆ. ವಿರುದ್ದ ದಿಕ್ಕಿಗೆ ಹೋಗಬಯಸಿದರೆ ಆತ್ಮನು ಶತ್ರುವಾಗುತ್ತಾನೆ.
ನಮ್ಮೊಳಗೇ ನಾವು ವಿಚಾರ ಮಾಡಿದರೆ ಪ್ರತಿಯೊಬ್ಬನಲ್ಲಿಯೂ ವಿವೇಕವು ತರತಮಭೇದದಿಂದ ಜಾಗೃತವಾಗಿರುವುದು ಕಂಡುಬರುತ್ತದೆ. ಅದು ಪ್ರಾರಂಭದಲ್ಲಿ ಮತ್ತು ಆಗಾಗ್ಯೆ ನಮ್ಮ ದೋಷಗಳನ್ನು ಎತ್ತಿ ತೋರಿಸುತ್ತದೆ. ಆದರೆ ನಮ್ಮ ಮಾನಸಿಕ ಆವೇಶ, ಆಸೆ, ಆಕರ್ಷಣೆ, ಲೋಭ, ದ್ವೇಷ, ಇತ್ಯಾದಿ ದೌರ್ಬಲ್ಯಗಳಿಂದ ನಾವು ಆ ಸೂಚನೆಯನ್ನು ಗಮನಿಸದೆ ತಪ್ಪುದಾರಿಯ ಕಡೆಗೆ ನೂಕಲ್ಪಡುತ್ತೇವೆ. ಮನಸ್ಸು ಕೆಳಮಟ್ಟದ್ದು, ಬುದ್ಧೀ ಮೇಲ್ಮಟ್ಟದ್ದು. ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು ಪದೇ ಪದೇ ಬುದ್ಧಿಯ ವಿವೇಕದ ಬಡಿತದಿಂದ ತಿದ್ದುತ್ತಿರಬೇಕು. ಇದನ್ನು ಸಾಧಿಸಲು ವ್ಯಕ್ತಿಯು ಸತತವಾಗಿ ಸಾಧನೆಯನ್ನು ಮಾಡಿದ ವಿನಹ ಬೇರೆ ದಾರಿಯೇ ಇಲ್ಲ. ಹೀಗೆ ಸಾಧನೆಯನ್ನು ಮಾಡಿದರೆ ಮಾತ್ರ ಮೇಲ್ಮಟ್ಟಕ್ಕೇರಬಹುದು. ಬೇರೆಯವರ ಸಹಾಯದಿಂದ, ಗುರುವಿನ ಸಹಾಯದಿಂದ ಸಹ ಇದನ್ನು ಪಡೆಯುವುದು ಸಾಧ್ಯವಿಲ್ಲ. ತನ್ನ ಪ್ರಯತ್ನವು ಎಷ್ಟು ಬಲವಾಗಿ ಹಾಗೂ ತೀವ್ರವಾಗಿರುತ್ತದೆಯೋ, ಅಷ್ಟು ಜಾಗೃತೆಯಾಗಿ ಅಷ್ಟು ಮೇಲಕ್ಕೆ ಏರಬಹುದು. ಆದ್ದರಿಂದಲೇ ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕೆಂದು ಘೋಷಿಸಲಾಗಿದೆ. ಸಾಧಕನಿಗೆ ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ. ತನಗೆ ಸಾಧನೆಯಲ್ಲಿ ಲಭಿಸಿದ ಅಲ್ಪ ಲಾಭದಿಂದ, ಇಲ್ಲವೇ ಅದರಿಂದ ಹುಟ್ಟಿದ ಅಹಂಕಾರದಿಂದ ಅವನು ಸಾಧನೆಯನ್ನು ಸಡಿಲುಗೊಳಿಸಬಹುದಾದ ಭೀತಿಯುಂಟು. ಹೀಗೆ ಮಾಡಿದರೆ ಮನಸ್ಸು ದ್ವಿಗುಣವೇಗದಿಂದ ಹಿಂದಕ್ಕೆ ಓಡಿಹೋಗಿ ಇಂದ್ರಿಯ ವಿಷಯಗಳಲ್ಲಿ ಪುನಃ ಮಗ್ನವಾಗಬಹುದು. ಆದುದರಿಂದ ಮನಸ್ಸನ್ನು ಸಡಿಲು ಬಿಡಬಾರದೆಂದೂ, ಸಾಧನೆಯನ್ನು ಸತತವಾಗಿ ಸಾಗಿಸಬೇಕೆಂದೂ ಹೇಳಲಾಗಿದೆ. (ನಾತ್ಮಾನಮವಸಾದಯೇತ್ )

ಆತ್ಮನು ತನ್ನ ಬಂಧು ಇಲ್ಲವೇ ಶತ್ರು ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ?

ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ |
ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ || 6 ||
ಅರ್ಥ : ಯಾವನು ಆತ್ಮನಿಂದ ಆತ್ಮನನ್ನು ಜಯಿಸಿದ್ದಾನೋ, ಅವನಿಗೆ ಆತ್ಮವು ಬಂಧುವು. ಯಾವನು ಆತ್ಮನನ್ನು ಜಯಿಸಲಾರನೋ ಅವನಿಗೆ ಆತ್ಮನು ಶತ್ರುವು.
ಪ್ರತಿಯೊಬ್ಬನಲ್ಲಿಯೂ ದೈವೀಗುಣ ಮತ್ತು ಆಸುರೀಗುಣಗಳಿವೆ. ಯಾರು ಆತ್ಮನ ಸಹಾಯದಿಂದ ಮನೋನಿಗ್ರಹವನ್ನು ಸಾಧಿಸಿ ಅಸುರಿಗುಣಗಳನ್ನು ಜಯಿಸುತ್ತಾರೋ ಅವರಿಗೆ ಆತ್ಮನು ಬಂಧುವು. ಹಾಗೆ ಮಾಡಲಾರದವರಿಗೆ ಆತ್ಮನು ಶತ್ರುವು. ಮನಸ್ಸು ಇಂದ್ರಿಯ ವಿಷಯಗಳಲ್ಲಿ ಮಗ್ನವಾಗಿರುವಾಗ ಯಾರ ಅಹಂಕಾರವು ಎಷ್ಟರಮಟ್ಟಿಗೆ ವಿಷಯ ಸುಖಗಳಿಂದ ದೂರವಿರುತ್ತದೆಯೋ ಅಷ್ಟರಮಟ್ಟಿಗೆ ಆತ್ಮವು ಅವನ ಬಂಧುವು ಆತ್ಮನಿಂದ ಪ್ರೇರಿತವಾದ ವಿವೇಕ ಅಥವಾ ಸದ್ಬುದ್ಧಿಯ ಹಿಡಿತಕ್ಕೆ ಒಳಪಟ್ಟ ಅಂದರೆ ಮನೋನಿಗ್ರಹವುಳ್ಳ ಮನುಷ್ಯನಿಗೆ ಆತ್ಮವು ಬಂಧುವು

ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ |
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ || 7 ||
ಅರ್ಥ : ಆತ್ಮನಿಗ್ರಹವುಳ್ಳ ಶಾಂತವಾಗಿರುವ, ಶೀತ-ಉಷ್ಣ, ಸುಖ-ದುಃಖ, ಮಾನ–ಅಪಮಾನಗಳಲ್ಲಿ ಸಮಬುದ್ಧಿಯನ್ನು ಕಾಯ್ದುಕೊಂಡಿರುವ (ಯೋಗಿಗೆ ಯೋಗಾರೂಢ ಎಂದು ಹೆಸರು)
ಯೋಗಾರೂಢರು ಶಾರೀರಿಕ, ಮಾನಸಿಕ, ಬೌದ್ಧಿಕ ಈ ಮೂರು ಹಂತಗಳಲ್ಲಿಯೂ ಸಮತ್ವವನ್ನು ಕಾಯ್ದುಕೊಳ್ಳೆಬೇಕೆಂಬುದನ್ನು ಇಲ್ಲಿ ಸೂಚಿಸಲಾಗಿದೆ. ಶೀತ-ಉಷ್ಣವನ್ನು ಶಾರೀರಿಕ ಮಟ್ಟದಲ್ಲಿಯೂ, ಸುಖ-ದುಃಖಗಳನ್ನು ಮಾನಸಿಕ ಮಟ್ಟದಲ್ಲಿಯೂ ಮಾನ-ಅಪಮಾನವನ್ನು ಬೌದ್ಧಿಕಮಟ್ಟದಲ್ಲಿಯೂ ಸಹಿಸಿಕೊಳ್ಳಬೇಕು. ಹೀಗೆ ಮೂರೂ ಹಂತಗಳಲ್ಲಿಯೂ ಸಮತ್ವವನ್ನು ಕಾಯ್ದುಕೊಂಡವನು ಮಾತ್ರ ಏಕಾಗ್ರತೆಯಿಂದ ಪರಮಾತ್ಮನ ಧ್ಯಾನದಲ್ಲಿ ನಿರತನಾಗಿರಬಲ್ಲನು.

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯಃ |
ಯುಕ್ತ ಇತ್ಯುಚ್ಛ್ಯತೇ ಯೋಗೀ ಸಮಲೋಷ್ಮಾಶ್ಮಕಾಂಚನಃ || 8 ||
ಅರ್ಥ : ತನಗೆ ಲಭಿಸಿದ ಜ್ಞಾನ, ಹಾಗೂ ಅದರ ಅನುಭವದಿಂದ (ವಿಜ್ಞಾನ) ತೃಪ್ತನಾದ, ಕದಲದೇ, ಸ್ಥಿರವಾಗಿರುವ, ಇಂದ್ರಿಯಗಳನ್ನು ಜಯಿಸಿರುವ, ಮಣ್ಣು ಹೆಂಟೆ, ಕಲ್ಲು, ಬಂಗಾರ ಇವೆಲ್ಲವುಗಳನ್ನೂ ಒಂದೇ ದೃಷ್ಟಿಯಿಂದ ಕಾಣುವ ಯೋಗಿಯು ’ಯುಕ್ತ’ ಅಥವಾ ‘ಯೋಗಾರೂಢ’ ಎನಿಸಿಕೊಳ್ಳುತ್ತಾನೆ. ಶಾಸ್ತ್ರಗಳನ್ನು ಓದಿ ಆತ್ಮನ ವಿಚಾರವನ್ನು ತರ್ಕದ ಮೂಲಕ ತಿಳಿದುಕೊಳ್ಳುವುದಕ್ಕೆ ‘ಜ್ಞಾನ’ ಎಂದೂ ಅದನ್ನು ತನ್ನ ಆಚರಣೆಯಲ್ಲಿ ತಂದು, ಆ ತತ್ವವನ್ನು ಅನುಭವದಿಂದ ಪ್ರತ್ಯಕ್ಷವಾಗಿ ಅರಿತು ಸ್ಥಿರಪಡಿಸಿಕೊಳ್ಳುವುದಕ್ಕೆ ‘ವಿಜ್ಞಾನ’ ಎಂದೂ ಹೆಸರು. ಯುಕ್ತನು, ಪರಮಾತ್ಮನ ವಿಚಾರದಲ್ಲಿ ತಿಳಿದುಕೊಂಡ ಜ್ಞಾನವನ್ನು ಆಚರಣೆಯಿಂದ ಅನುಭವಿಸಿ ಆನಂದದಲ್ಲಿರುತ್ತಾನೆ.
ಪರಮಾತ್ಮನಿಗೆ ‘ಕೂಟಸ್ಥ’ ಎಂದು ಹೇಳಲಾಗಿದೆ. ಅಕ್ಕಸಾಲಿಗ ಅಥವಾ ಕಮ್ಮಾರನು ಉಪಯೋಗಿಸುವ ಅಡಿಗಲ್ಲಿಗೆ “ಕೂಟ” ಎಂದು ಹೆಸರು. ಕಮ್ಮಾರನು ಅಡಿಗಲ್ಲಿನ ಮೇಲೆ ಕಾದ ಕಬ್ಬಿಣವನ್ನಿಟ್ಟು ಬಡಿದು ಅದನ್ನು ಬೇಕಾದ ಆಕಾರಕ್ಕೆ ತಿದ್ದುತ್ತಾನೆ. ಎಷ್ಟೋ ಬಡಿತದ ಪೆಟ್ಟು ಬಿದ್ದರೂ ಅಡಿಗಲ್ಲು ಮಾತ್ರ ಸ್ವಲ್ಪವೂ ಬದಲಾವಣೆಯನ್ನು ಹೊಂದದೆ ಸ್ಥಿರವಾಗಿ ನಿಂತು, ತನ್ನ ಮೇಲೆ ಕುಳಿತುಕೊಳ್ಳುವ ಕಬ್ಬಿಣದ ತುಂಡುಗಳು ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಹೊಂದಲು ಆಸ್ಪದ ಮಾಡಿಕೊಡುತ್ತದೆ. ಪರಮಾತ್ಮನು ಸಹ ಅಡಿಗಲ್ಲಿನಂತೆ ಬದಲಾವಣೆಯನ್ನು ಹೊಂದದೆ ಇರುವುದರಿಂದ ಅವನಿಗೆ ಕೂಟಸ್ಥ ಎಂಬ ಹೆಸರು ಬಂದಿದೆ.
ಯೋಗಿಯು ಭೌತಿಕ ಸಂಪತ್ತುಗಳಿಂದ ಆಕರ್ಷಿತನಾಗುವುದಿಲ್ಲವೆಂಬುದನ್ನು ಇಲ್ಲಿ ತೋರಿಸಲಾಗಿದೆ. ಬಂಗಾರ, ಮಣ್ಣು ಹಂಟೆ, ಕಲ್ಲು ಇವೆಲ್ಲವನ್ನು ಅವನು ಸಮನಾಗಿ ಕಾಣುತ್ತಾನೆ. ಅವನಿಗೆ ಬಂಗಾರ ಅಂದರೆ ವಿಶೇಷ ಆಕರ್ಷಣೆಯಿಲ್ಲ. ಮಣ್ಣು ಹೆಂಟೆ ಎಂಬ ತುಚ್ಛ ಭಾವವೂ ಇಲ್ಲ. ಅವನು ಆತ್ಮಾನಂದದಲ್ಲಿರುವುದರಿಂದ, ಅವನಿಗೆ ಬಂಗಾರವು ಸಹ ಆತ್ಮಾನಂದಕ್ಕಿಂತ ಹೆಚ್ಚು ಸುಖವನ್ನು ಕೊಡಲಾರದು.

ಸುಹ್ಮನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು |
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ || 9 ||
ಅರ್ಥ : ಸದ್ಬುದ್ಧಿಯುಳ್ಳವನು, ಮಿತ್ರ, ಉದಾಸೀನ, ಮಧ್ಯಸ್ತಗಾರ, ಶತ್ರು, ಬಂಧು, ಸಾಧು, ಪಾಪಿ, ಇವರೆಲ್ಲರನ್ನೂ ಸಮಬುದ್ಧಿಯಿಂದ ಕಾಣುವವನು ಶ್ರೇಷ್ಠನು.
ಯೋಗಾರೂಢನು ಪ್ರಪಂಚದ ಬಾಹ್ಯವಸ್ತುಗಳೊಡನೆ ಯಾವ ರೀತಿಯ ಸಂಪರ್ಕವನ್ನಿಟ್ಟುಕೊಳ್ಳುತ್ತಾನೆಂದು ಹೇಳಿ ಪ್ರಪಂಚದ ವಿವಿಧ ಜನರೊಡನೆ ಹೇಗೆ ವರ್ತಿಸುತ್ತಾನೆಂಬುದನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಶತ್ರು, ಮಿತ್ರ, ಬಂಧು, ಸಾಧು ಇತ್ಯಾದಿ ವಿವಿಧ ರೀತಿಯ ಜನರೊಡನೆ ತನಗೆ ಸಂಪರ್ಕವುಂಟಾದಾಗ ಅವರನ್ನು ದ್ವೇಷಿಸುವುದೂ ಇಲ್ಲ. ಇಲ್ಲವೆ ಅತಿಯಾಗಿ ಪ್ರೀತಿಸುವುದೂ ಇಲ್ಲ. ಅವರೆಲ್ಲರೊಡನೆಯೂ ಒಂದೇ ರೀತಿಯಾಗಿ ಸಮತ್ವ ಬುದ್ಧಿಯಿಂದ ವರ್ತಿಸುತ್ತಾನೆ.

ಇಂತಹ ಸ್ಥಿತಿಯನ್ನು ಸಾಧಿಸುವ ವಿಧಾನ ಹೇಗೆ ?

ಯೋಗೀ ಯುಂಚಿತ ಸತತಮಾತ್ಮಾನಂ ರಹಸಿ ಸ್ಥಿತಃ |
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ || 10 ||
ಅರ್ಥ : ಯೋಗಿಯು ಏಕಾಂತ ಸ್ಥಳದಲ್ಲಿ ಕುಳಿತುಕೊಂಡು, ಶರೀರ ಮತ್ತು ಮನಸ್ಸುಗಳನ್ನು ನಿಗ್ರಹಿಸಿ, ಆಸೆಯನ್ನೂ ಸಂಗ್ರಹಬುದ್ಧಿಯನ್ನೂ ತ್ಯಜಿಸಿ ಸತತವೂ ಧ್ಯಾನ ಮಾಡುತ್ತಿರಬೇಕು.
ಆತ್ಮಾಜ್ಞಾನವಾಗಬೇಕಾದರೆ ಮನುಷ್ಯನು ತನ್ನ ಪ್ರಯತ್ನದಿಂದಲೇ ಅದನ್ನು ಸಾಧಿಸಬೇಕೆಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಗುರುವಿನ ಸೇವೆ ಮಾಡುವುದರಿಂದ ಆತನು ತನ್ನನ್ನು ಅನುಗ್ರಹಿಸಿ ತನಗೆ ಜ್ಞಾನೋದಯವಾಗುವಂತೆ ಮಾಡುತ್ತಾನೆ ಎಂಬುದು ತಪ್ಪು ಕಲ್ಪನೆ ಎಂದೂ ಗುರುವು ಸಹಾಯ ಮಾಡಬಲ್ಲನಾದರೂ ಸಾಧಕನ ಪ್ರಯತ್ನವಿಲ್ಲದಿದ್ದರೆ ಜ್ಞಾನವು ಲಭಿಸಲಾರದೆಂದು ಇಲ್ಲಿ ತಿಳಿಸಲಾಗಿದೆ. ಇದು ಸಾಧ್ಯವಿದ್ದಿದ್ದರೆ ಶ್ರೀಕೃಷ್ಣ ಪರಮಾತ್ಮನು ತನ್ನ ಅತ್ಯಂತ ಪ್ರಿಯಮಿತ್ರನೂ, ಶಿಷ್ಯನೂ ಆದ ಅರ್ಜುನನಿಗೆ ಆತ್ಮಜ್ಞಾನವನ್ನು ಪ್ರತ್ಯಕ್ಷವಾಗಿ ಕೊಡಬಹುದಿತ್ತು. ಆದರೆ ಹಾಗೆ ಮಾಡದೇ ಆ ಜ್ಞಾನವನ್ನು ಹೀಗೆ ಕೊಡಲು ಬರುವುದಿಲ್ಲವೆಂದೂ, ಅದನ್ನು ಅಭ್ಯಾಸದಿಂದ ಸ್ವತಃ ಗಳಿಸಬೇಕೆಂದೂ ಸ್ಪಷ್ಟಪಡಿಸಲಾಗಿದೆ.
ಏಕಾಂತ ಧ್ಯಾನ ಮಾಡುವಾಗ ಏಕಾಂತವು ಅವಶ್ಯಕ. ಏಕಾಂತವೆಂದರೆ ಸಂಸಾರವನ್ನು ಬಿಟ್ಟು ಕಾಡಿಗೆ ಹೋಗಿ ಜೀವಿಸಬೇಕೆಂದಲ್ಲ. ಮನೆಯಲ್ಲಿ ಸಾಧ್ಯವಿದ್ದ ಮಟ್ಟಿಗೆ ಹೆಚ್ಚು ಜನರ ಸಂಪರ್ಕವಿಲ್ಲದ ಒಂದು ಮೂಲೆಯಲ್ಲಿ ಕುಳಿತು ಧ್ಯಾನ ಮಾಡಬಹುದು. ಹೊರಗಿನ ಏಕಾಂತಕ್ಕಿಂತ ಮನಸ್ಸನ್ನು ಹೊರಗಿನ ಇಂದ್ರಿಯ ವಿಷಯಗಳಿಂದ ಒಳಕ್ಕೆ ಎಳೆದುಕೊಂಡು ಏಕಾಂತವನ್ನು ಸಾಧಿಸಬೇಕು.

ರಹಸಿ : ಅಂದರೆ ಧ್ಯಾನವನ್ನು ಗುಟ್ಟಾಗಿ ಮಾಡಬೇಕು. ತಾನು ಮಾಡುವ ಸಾಧನೆಯ ಬಗ್ಗೆ ಪ್ರಚಾರವು ಒಳ್ಳೆಯದಲ್ಲ. ಪ್ರಜಾರದಲ್ಲಿ ವಿನಿಯೋಗವಾಗುವ ಶಕ್ತಿಯನ್ನು ಧ್ಯಾನಕ್ಕೆ ವಿನಿಯೋಗಿಸಬೇಕು. ತಾನು ಮಾಡುವ ಧ್ಯಾನದ ವಿಚಾರವನ್ನು ತನ್ನ ಗುರುವಿನ ಹೊರತು ಬೇರೆಯವರಿಗೆ ತಿಳಿಸಬಾರದು. ನಿಜವಾದ ಸಾಧಕರೊಡನೆ ಚರ್ಚೆ ಮಾಡುವುದು ಬಾಧಕವಲ್ಲ ಆದಾಗ್ಯೂ ಈಗ ತನ್ನನ್ನು ಹೊಗಳಿಕೊಳ್ಳುವ ಭಾವವಿರದೆ, ಸಾಧನೆಯಲ್ಲಿಯ ತೊಡಕುಗಳನ್ನೂ ಸಂಶಯಗಳನ್ನೂ ನಿವಾರಿಸಿಕೊಳ್ಳುವ ಉದ್ದೇಶವಿರಬೇಕು. ರಹಸಿ ವ್ಯಾವಹಾರಿಕ, ಪ್ರಾಪಂಚಿಕ ಜನರೊಡನೆ ತನ್ನ ಸಾಧನೆಯ ವಿಚಾರದಲ್ಲಿ ಮಾತನಾದಬಾರದು. ಇದನ್ನು ಸೂಚಿಸಲು ರಹಸಿ ಎಂದು ಹೇಳಲಾಗಿದೆ.
‘ಏಕಾಕೀ’- ಧ್ಯಾನ ಮಾಡುವಾಗ ಒಬ್ಬನೇ ಇರಬೇಕು. ಅನೇಕ ಜನರ ಮಧ್ಯದಲ್ಲಿ ಕುಳಿತುಕೊಂಡು ಧ್ಯಾನ ಮಾತನಾಡಬಾರದು.
ಭಜನೆಯನ್ನು ನಾಮಕೀರ್ತನೆಯನ್ನು ಸಾಮೂಹಿಕವಾಗಿ ಮಾಡಬಹುದು ಆದರೆ ಧ್ಯಾನವನ್ನು ಏಕಾಂತದಲ್ಲಿಯೇ ಮಾಡಬೇಕು.
ನಿರಾಶೀರಪರಿಗ್ರಹಃ- ಇಂದ್ರಿಯ ಸುಖ, ಭೋಗ ವಸ್ತುಗಳನ್ನು ಗಳಿಸುವ ಹಾಗೂ ಸಂಗ್ರಹಿಸುವ ಆಸೆ ಇದ್ದರೆ ಮನಸ್ಸು ಅದರಲ್ಲಿ ನಿರತವಾಗಿ, ನಾನಾ ರೀತಿಯ ಕಲ್ಪನೆಗಳಲ್ಲಿ ಮಗ್ನವಾಗಿರುವುದರಿಂದ, ಧ್ಯಾನಮುಖವಾಗುವುದು, ಏಕಾಗ್ರವಾಗುವುದು ಸಾಧ್ಯವಿಲ್ಲ. ಆದ್ದರಿಂದ ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು ತರುವುದು ಅವಶ್ಯಕ ಎಂಬುದನ್ನು ಈ ಎರಡು ಶಬ್ದಗಳಲ್ಲಿ ಸೂಚಿಸಲಾಗಿದೆ.

ಸಾಧಕನ ಆಸನ, ಆಹಾರ, ವಿಹಾರಗಳು ಹೇಗಿರಬೇಕು ?
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ |
ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಮ್ || 11 ||
ಅರ್ಥ : ಶುಚಿಯಾದ ಸ್ಥಳದಲ್ಲಿ ಅತಿ ಎತ್ತರವೂ ಅಲ್ಲದ ಅತಿ ತಣ್ಣಗಾಗಿಯೂ ಇಲ್ಲದ ಸ್ಥಿರವಾದ ಆಸನವನ್ನು ತಯಾರಿಸಿಕೊಳ್ಳಬೇಕು. ಅದರ ಮೇಲೆ ದರ್ಭೆ ಅಥವಾ ಹುಲ್ಲಿನ ಚಾಪೆ ಮತ್ತು ಕೃಷ್ಣಾಜನಗಳನ್ನು ಹಾಸಿ, ಅದರ ಮೇಲೆ ಶುಭ್ರವಾದ ಬಟ್ಟೆಯನ್ನು ಹಾಸಿ ಅಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು.
ಧ್ಯಾನವನ್ನು ಮಾಡಲು ಬೇಕಾದ ಎಲ್ಲಾ ಸಲಕರಣೆಗಳು ಹೇಗಿರಬೇಕು, ಧ್ಯಾನ ಮಾಡುವುದು ಹೇಗೆ ಎಂಬ ವಿವರಗಳನ್ನು ವಿವರಿಸುವಾಗ, ಮೊಟ್ಟ ಮೊದಲು ‘ಆಸನ’ ವನ್ನು ವರ್ಣಿಸಲಾಗಿದೆ. ಧ್ಯಾನಕ್ಕೆ ಕುಳಿತುಕೊಳ್ಳುವ ಸ್ಥಳವು ಚೊಕ್ಕಟವಾಗಿರಬೇಕು. ಆಸನವು ಅತಿಯಾಗಿ ಎತ್ತರವೂ ಇರಬಾರದು. ಅತಿ ತಗ್ಗಾಗಿಯೂ ಇರಬಾರದು. ಆಸನವು ಅಲುಗಾಡದೆ ಸ್ಥಿರವಾಗಿರಬೇಕು. ಅದರ ಮೇಲೆ ದರ್ಬೆ, ಕೃಷ್ಣಾಜಿನ, ಬಟ್ಟೆ ಇವುಗಳನ್ನು ಕ್ರಮವಾಗಿ ಒಂದರ ಮೇಲೊಂದು ಹಾಕಿ, ಅದರ ಮೇಲೆ ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಆಸನವು ಒಟ್ಟಿನಲ್ಲಿ ಸುಖವಾಗಿರಬೇಕು. ಇದರ ಮೇಲೆ ಪದ್ಮಾಸನ ಅರ್ಧಪದ್ಮಾಸನ, ಇಲ್ಲವೆ ಯೋಗಾಸನ ಇವುಗಳ ಪೈಕಿ ಯಾವುದಾದರೊಂದು ಅನುಕೂಲವಾದ, ಸುಖಕರವಾದ ಆಸನವನ್ನು ಹಾಕಿ ಕುಳಿತುಕೊಂಡು ಧ್ಯಾನ ಮಾಡಬೇಕು.
ಧ್ಯಾನ ಮಾಡುವುದು ಹೇಗೆ ?

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ |
ಉಪವಿಶ್ಯಾಸನೇ ಯುಂಜ್ಯಾದ್ಯೋಗಮಾತ್ಮವಿಶುದ್ಧಯೇ || 12 ||
ಅರ್ಥ : ಹೀಗೆ ತಯಾರು ಮಾಡಿದ ಆಸನದ ಮೇಲೆ ಕುಳಿತುಕೊಂಡು ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಏಕಾಗ್ರ ಮಾಡಿಕೊಂಡು ಆತ್ಮಶುದ್ಧಿಗಾಗಿ ಯೋಗದ ಅಭ್ಯಾಸ ಮಾಡಬೇಕು.
ಆಸನದ ಮೇಲೆ ಸ್ಥಿರವಾಗಿ ಕುಳಿತುಕೊಳ್ಳಬೇಕು. ಅಂದರೆ ಶರೀರವು ಅಲುಗಾಡದಂತೆ ಕುಳಿತುಕೊಳ್ಳಬೇಕು. ಹೀಗೆ ಸ್ಥಿರವಾಗಿ ಕುಳಿತುಕೊಂಡು ಇಂದ್ರಿಯಗಲನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಂಡು ಮನಸ್ಸನ್ನು ಏಕಾಗ್ರ ಮಾಡಬೇಕು. ಸಾಮಾನ್ಯವಾಗಿ ಎಲ್ಲಾ ಉಪದೇಶಕರು ಮನಸ್ಸನ್ನು ಏಕಾಗ್ರ ಮಾಡಬೇಕೆಂದು ಹೇಳುತ್ತಾರೆಯೇ ಹೊರತು ಈ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕೆಂದು ಯಾರೂ ಹೇಳುವುದಿಲ್ಲ. ಆದರೆ ಗೀತೆಯಲ್ಲಿ ಈ ಗುಟ್ಟನ್ನು ಹೇಳಲಾಗಿದೆ. ಮನಸ್ಸು ಚಂಚಲವಾದುದರಿಂದ ಯಾವಾಗಲೂ ಇಂದ್ರಿಯ ಸುಖಗಳ ಕಡೆಗೆ ಓಡುತ್ತದೆ.
ಮನಸ್ಸು ಇನ್ನೊಂದು ರೀತಿಯಲ್ಲಿ ಸಹ ಅಂದರೆ ತನ್ನೊಳಗೇ ಮುಂದೆ ಸಿಗಬಹುದಾದ ಕಾಲ್ಪನಿಕ ಸುಖಗಳ ಕಲ್ಪನೆಯಲ್ಲಿ ಮಗ್ನವಾಗುತ್ತದೆ. ಮನಸ್ಸನ್ನು ಈ ಎರಡೂ ಮಾರ್ಗಗಳಿಂದಲೂ ನಿಗ್ರಹಿಸಬೇಕು. ಹೊರಗೆ ಇಂದ್ರಿಯ ವಿಷಯಗಳ ಭೋಗಗಳ ಕಡೆಗೆ ಒಲಿಯದಂತೆ ಶಾರೀರಿಕವಾಗಿ ಇಂದ್ರಿಯ ನಿಗ್ರಹವನ್ನು ಮಾಡಿ, ಮನಸ್ಸಿನಲ್ಲಿ ಸಂಕಲ್ಪಗಳು ಅಂದರೆ ಕಾಲ್ಪನಿಕ ಸಖಭೋಗದ ವಿಚಾರಗಳು ಬಂದಂತೆ ಅವುಗಳನ್ನು ಕಿತ್ತು ಬಿಸಾಡಬೇಕು. “ಯತಚಿತ್ತೇಂದ್ರಿಯಕ್ರಿಯಃ” ಎಂಬ ಶಬ್ದದಲ್ಲಿ ಈ ಅರ್ಥವು ಅಡಕವಾಗಿದೆ. ಹೀಗೆ ಮನಸ್ಸಿನ ಎರಡೂ ದಾರಿಗಳನ್ನು ಮುಚ್ಚಿದರೆ ಮನಸ್ಸು ಏಕಾಗ್ರವಾಗುತ್ತದೆ. ನಂತರ ಯೋಗಾಭ್ಯಾಸವನ್ನು ಮಾಡಬೇಕು. ಇಲ್ಲಿ ‘ಯೋಗ’ ಎಂದರೆ ಪರಮಾತ್ಮನ ಧ್ಯಾನದಲ್ಲಿ ನಿರತನಾಗಿರುವುದು (ಧ್ಯಾನಯೋಗ) ಎಂದರ್ಥ. ಹೀಗೆ ಧ್ಯಾನ ಮಾಡುವುದರಿಂದ ಆತ್ಮದರ್ಶನವಾಗುತ್ತದೆ ಎಂಬ ತಿಳುವಳಿಕೆಯು ತಪ್ಪಾದುದು ಎಂಬುದನ್ನು ತೋರಿಸಲು ಧ್ಯಾನಮಾಡುವ ಉದ್ದೇಶವನ್ನು “ಆತ್ಮಶುದ್ಧಯೇ” ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನಿತ್ಯವೂ ಧ್ಯಾನ ಮಾಡುವುದರಿಂದ ಮನಸ್ಸು ಬುದ್ಧಿಗಳು ಶುದ್ಧವಾಗುತ್ತವೆ. ಮನಸ್ಸಿನಲ್ಲುಂಟಾಗುವ ಉದ್ರೇಕಗಳು, ಮನಸ್ಸಿನ ದೋಷಗಳು, ಧ್ಯಾನದಿಂದ ಈ ಉದ್ರೇಕಗಳು ಇಲ್ಲದಂತಾಗಿ, ಮನಸ್ಸು ಶುದ್ಧವಾಗಿ ಶಾಂತವಾಗುತ್ತದೆ. ಆಗ ಸುಖ ದುಃಖಾದಿ ದ್ವಂದ್ವಗಳಲ್ಲಿ ಮನಸ್ಸಿನ ಸಮತ್ವವನ್ನು ಕಾಯ್ದುಕೊಳ್ಳುವ ಶಕ್ತಿ ಬರುತ್ತದೆ ಹೀಗೆ ಮನಸ್ಸು ಶುದ್ಧವಾಗಿ ಏಕಾಗ್ರವಾದರೆ, ನಂತರ ಶುಭ್ರವಾದ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಾಣುವಂತೆ, ಆತ್ಮದರ್ಶನವಾಗುತ್ತದೆ.
ಧ್ಯಾನದ ಇತರೆ ವಿವರಗಳು

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥರಃ |
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ || 13 ||
ಅರ್ಥ : ಹಿಂದೆ ತಿಳಿಸಿದಂತೆ ಆಸನದಲ್ಲಿ ಸ್ಥಿರವಾಗಿ ಕುಳಿತುಕೊಂಡು, ಬೆನ್ನು, ಕುತ್ತಿಗೆ, ತಲೆಗಳನ್ನು ನೇರವಾಗಿ ಅಲುಗಾಡಿದಂತೆ ನಿಲ್ಲಿಸಿ, ಸುತ್ತಮುತ್ತ ನೋಡದೆ, ದೃಷ್ಟಿಯನ್ನು ಮೂಗಿನ ತುದಿಯಲ್ಲಿ ಕೇಂದ್ರಿಕೃತ ಮಾಡಿ, (ಧ್ಯಾನ ಮಾಡಬೇಕು).
ಧ್ಯಾನಮಾಡಲು ಪಾಲಿಸಬೇಕಾದ ಇತರೆ ಕೆಲವು ವಿವರಗಳನ್ನು ಹೇಳಲಾಗಿದೆ. ತನಗೆ ಅನುಕೂಲವಾದ ಹಾಗೂ ಅಭ್ಯಾಸವಾದ ಪದ್ಮಾಸನ, ಅರ್ಧಪದ್ಮಾಸನ ಇಲ್ಲವೇ ಬೇರೆ ಯಾವುದಾದರೂ ಆಸನವನ್ನು ಹಾಕಿ ಕುಳಿತುಕೊಂಡು (ಕಾಲು, ಪಾದಗಳನ್ನು ಪದೇ ಪದೇ ಸಡಿಲು ಮಾಡಬಾರದು) ಇಲ್ಲವೆ ಚಲಿಸಬಾರದು. ಅವು ಸ್ಥಿರವಾಗಿರಬೇಕು ಬೆನ್ನೆಲುಬನ್ನು ಮುಂದಕ್ಕೆ ಬಗ್ಗಿಸದೆ ನೇರವಾಗಿಟ್ಟುಕೊಂಡು ಕುಳಿತುಕೊಳ್ಳಬೇಕು. ಬೆನ್ನು, ಕೈ, ಕುತ್ತಿಗೆ ಇವುಗಳನ್ನು ಎಡಕ್ಕೆ, ಬಲಕ್ಕೆ, ಹಿಂದಕ್ಕೆ, ಮುಂದಕ್ಕೆ, ಮೇಲೆ, ಕೆಳಗೆ ಹೀಗೆ ಯಾವ ದಿಕ್ಕಿಗೂ ಚಲಿಸದಂತೆ ಸ್ಥಿರವಾಗಿಟ್ಟುಗೊಳ್ಳಬೇಕು (ಅಚಲಮ್) . ದೃಷ್ಟಿಯು ಸಹ ಸಿಕ್ಕ ಸಿಕ್ಕ ಕಡೆಗೆ ಓಡದೆ ಮೂಗಿನ ತುದಿಯಲ್ಲಿ ಏಕಾಗ್ರವಾಗಿರಬೇಕು. ಸುತ್ತಲೂ ನೋಡಲು ಪ್ರಾರಂಭಿಸಿದರೆ ಮನಸ್ಸು ಅದರ ಹಿಂದೆಯೇ ಓಡುತ್ತದೆ, ಹಾಗೂ ಮನಸ್ಸಿನ ಏಕಾಗ್ರತೆಯು ನಷ್ಟವಾಗುತ್ತದೆ.

ಪ್ರಶಾಂತಾತ್ಮಾ ವಿಗತಭೀಬ್ರಹ್ಮಚಾರೀವ್ರತೇ ಸ್ಥಿತಃ |
ಮನಃ ಸಂಯಮ್ಮ ಮಚ್ಚಿತ್ತೋ ಯುಕ್ತ ಆಸೀತ ಮತ್ಸರಃ || 14 ||
ಅರ್ಥ : ಮನಸ್ಸನ್ನು ಶಾಂತವಾಗಿಟ್ಟುಕೊಂಡು, ಹೆದರಿಕೆಯನ್ನು ಕಿತ್ತೊಗೆದು, ಮನೋನಿಗ್ರಹದಿಂದ ಬ್ರಹ್ಮಚರ್ಯವ್ರತವನ್ನು ಪಾಲಿಸುತ್ತಾ ನನ್ನಲ್ಲಿ ಮನಸ್ಸನ್ನು ನಿಲ್ಲಿಸಿ, “ನಾನೇ” ಪರಮ ಧ್ಯೇಯನು’ ಎಂದು ನಂಬಿ’ ನನ್ನನ್ನೇ’ ಧ್ಯಾನಿಸುತ್ತಾ ಇರಬೇಕು.
ಮನಸ್ಸಿನ ಶಾಂತತೆಯು ಒಂದೇ ಸಾರಿ ಲಭಿಸುವುದಿಲ್ಲ. ಸಾಧಕನು ಕೆಲವು ಕಾಲದವರೆಗೆ ಧ್ಯಾನ ಮಾಡಿದರೆ ಅದರಿಂದ ಅವನ ಮನಸ್ಸು ಸ್ವಲ್ಪಮಟ್ಟಿಗೆ ಶಾಂತವಾಗುತ್ತದೆ. ಇದಕ್ಕೆ ‘ಪ್ರಶಾಂತಾತ್ಮಾ’ ಎಂದು ಹೆಸರು. ಮೊಟ್ಟಮೊದಲು ಈ ಮೆಟ್ಟಲನ್ನೇರಿ ನಂತರ ಮುಂದಿನ ಸಾಧನೆಯನ್ನು ಮಾಡಬೇಕು. ವಿಷಯಾಸಕ್ತವಾದ ಮನಸ್ಸು, ಸಾಧನೆಯು ಬಲವಾದಂತೆ, ಇಂದ್ರಿಯ ನಿಗ್ರಹದ ಮೂಲಕ ವಿಷಯಾಭಿಲಾಷೆಯನ್ನು ತ್ಯಜಿಸಿದ ಹಗೆ ಸಾಧಕನಿಗೆ ತಾನು ಯಾವುದೋ ಒಂದು ‘ಏನೂ ಇಲ್ಲದಿರುವಿಕೆಯಲ್ಲಿ, ಕರಗಿ ಹೋಗುತ್ತಿದ್ದೇನೆ ಎಂಬ ಹೆದರಿಕೆಯುಂಟಾಗುತ್ತದೆ. ವಿಷಯಗಳಲ್ಲಿ ಮಗ್ನವಾಗಿದ್ದ ಅಹಂಕಾರವು ಪರಮಾತ್ಮನ ಇರುವಿಕೆಯನ್ನು ನಂಬಲಾರದು. ಇಂತಹ ಹೆದರಿಕೆಯನ್ನು ಮನಸ್ಸಿನಿಂದ ಕಿತ್ತೊಗೆಯಬೇಕು. ‘ವಿಗತಭೀಃ’ ಎಂಬ ಶಬ್ದವೂ ಈ ಮಾತನ್ನು ಪುಷ್ಠೀಕರಿಸುತ್ತದೆ. ಆತ್ಮಸಾಧನೆಗೆ ಇವಿಷ್ಟೇ ಸಾಲದು. ಸಾಧಕನು ಬ್ರಹ್ಮಚರ್ಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅಂದರೆ ಶಾರೀರಿಕ, ಮಾನಸಿಕ, ಹಾಗೂ ಬೌದ್ಧಿಕವಾಗಿ ಪಾಲಿಸಬೇಕು. ಕಾಮೇಂದ್ರಿಯವನ್ನು ನಿಗ್ರಹಿಸುವುದುದಷ್ಟೇ ಬ್ರಹ್ಮಚರ್ಯವಲ್ಲ. ಅದು ಅತಿ ಅವಶ್ಯಕವಾದಾಗ್ಯೂ ಇತರೆ ಇಂದ್ರಿಯಗಳ ನಿಗ್ರಹವೂ ಬ್ರಹ್ಮಚರ್ಯೆಯಲ್ಲಿ ಅಡಗಿವೆ. ಮನಸ್ಸನ್ನು ಬ್ರಹ್ಮನ ವಿಚಾರದಲ್ಲಿ ಧ್ಯಾನದಲ್ಲಿ ನೆಲೆ ನಿಲ್ಲಿಸಬೇಕು. ಮನಸ್ಸು ಚಂಚಲವಾದುದರಿಂದ, ಅದನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದುಕೊಂಡರೆ ಅದು ಬೇರೆಡೆಗೆ ಹೋಗಲು ಪ್ರಯತ್ನಿಸುತ್ತದೆ. ಆದ್ದರಿಂದ ಅದನ್ನು ‘ಬ್ರಹ್ಮನ’ ಧ್ಯಾನದಲ್ಲಿ ಸ್ಥಿರವಾಗಿ ನಿಲ್ಲಿಸಿದರೆ ಬೇರೆಡೆಗೆ ಹೋಗುವ ಸಂಭವ ಕಡಿಮೆ. ಮನಸ್ಸು ಈ ಒಳಗಿನ ಆನಂದವನ್ನು ಒಮ್ಮೆ ಸವಿದರೆ ಮುಂದೆ ಬೇರೆಡೆಗೆ ಹೋಗಲು ಇಷ್ಟಪಡುವುದಿಲ್ಲ. ಈ ರೀತಿ ಪೂರ್ವತಯಾರಿಯನ್ನು ಮಾಡಿಕೊಂಡು ಏಕಾಗ್ರ ಮನಸ್ಸಿನಿಂದ, “ಪರಮಾತ್ಮನೇ ತನ್ನ ಗುರಿ” ಎಂದು ನಂಬಿ ಆತನ ಧ್ಯಾನದಲ್ಲಿ ಮಗ್ನನಾಗಬೇಕು.

ಯುಂಜನ್ನೆವಂ ಸದಾತ್ಮಾನಂ ಯೋಗೀ ನಿಯತಮಾನಸಃ |
ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ತಾಮಧಿಗಚ್ಛತಿ || 15 ||
ಅರ್ಥ : ಈ ರೀತಿಯಾಗಿ ಮನಸ್ಸನ್ನು ನಿಗ್ರಹಮಾಡಿ ಧ್ಯಾನದ ಮೂಲಕ ಮನಸ್ಸಿನ ಶಾಂತಿಯನ್ನು ಸಾಧಿಸಿದ ಯೋಗಿಯು ನನ್ನಲ್ಲಿಯೇ ಇರುವ ಶ್ರೇಷ್ಠವಾದ ನಿರ್ವಾಣ (ಮೋಕ್ಷ) ಎಂಬ ಶಾಂತಿಯನ್ನು ಪಡೆಯುತ್ತಾನೆ.
ಧ್ಯಾನದಲ್ಲಿ ಸಾಧಿಸಬೇಕಾದ ಹೊರಗಿನ ಶುಚಿತ್ವ ಶಾರೀರಿಕ, ಆಸನ ಇಂದ್ರಿಯ ನಿಗ್ರಹ, ಮಾನಸಿಕ ನಿಗ್ರಹ ಹಾಗೂ ಶಾಂತಿ ಮತ್ತು ಬೌದ್ಧಿಕ ಅನುಸಂಧಾನ ಇವುಗಳನ್ನು ವಿವರಿಸಿ, ಧ್ಯಾನದಲ್ಲಿಯ ಕೊನೆಯ ಹಂತವನ್ನು ಇಲ್ಲಿ ವರ್ಣಿಸಲಾಗಿದೆ. ಮನಸ್ಸನ್ನು ನಿಗ್ರಹಿಸಿ, ಮನಸ್ಸಿನಲ್ಲಿ ಬೇರೆ ಬೇರೆ ಉದ್ರೇಕಗಳುಂಟಾಗದಂತೆ ಸದಾ ಜಾಗರೂಕನಾಗಿರಬೇಕೆಂದು ಇನ್ನೊಮ್ಮೆ ಒತ್ತಿ ಹೇಳಲಾಗಿದೆ. ಹೀಗೆ ಧ್ಯಾನಮಾಡುವಾಗ ಉದ್ರೇಕಗಳಿಲ್ಲದೆ ಶಾಂತವಾದ ಮನಸ್ಸು, ಮನಸ್ಸು ಬುದ್ಧಿಗಳಿಗಿಂತ ಆಚೆಯಿರುವ ‘ಪರಮಶಾಂತಿ’ ಯನ್ನು ಅನುಭವಿಸುತ್ತದೆ. ”ನನ್ನ ಅನುಭವವೇ ಈ ಶಾಂತಿ” ಎಂದು ಇಲ್ಲಿ ಹೇಳಲಾಗಿದೆ. ಇನ್ನು ಮುಂದೆ ಸಾಧಕನು ಅಹಂಕಾರವನ್ನು ದಾಟಿ, ಅದರ ಆವರಣದಿಂದಾಚೆಗೆ ನೋಡುತ್ತಾ ‘ತಾನೇ ಆ ಶಾಂತಿ’ ‘ತನ್ನಲ್ಲೇ ಆ ಶಾಂತಿ ಇದೆ’ ಎಂಬುದನ್ನು ಅನುಭವಿಸುತ್ತಾನೆ.

ಸಾಧಕನ ಆಹಾರಾದಿ ನಿಯಮಗಳು ಹೇಗಿರಬೇಕು ?

ನಾತ್ಯಶ್ನತಸ್ತು ಯೋಗೋ„ಸ್ತಿ ನ ಚೈಕಾಂತಮನಶ್ನತಃ |
ನ ಚಾತಿ ಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ || 16 ||
ಅರ್ಥ : ಅರ್ಜುನನೇ! ಅತಿಯಾಗಿ ಆಹಾರವನ್ನು ಸೇವಿಸುವವನು, ಇಲ್ಲವೇ ಆಹಾರವನ್ನೇ ಸೇವಿಸದೇ ಉಪವಾಸವಿರುವವನು ಅಂತೆಯೇ ಅತಿಯಾಗಿ ನಿದ್ರಿಸುವವನು ಇಲ್ಲವೇ ನಿದ್ರೆಗೆಟ್ಟು ಎಚ್ಚರಾಗಿರುವವನು ಇವರಾರಿಗೂ ಯೋಗವು ಸಾಧ್ಯವಿಲ್ಲ.
ಸಾಧಕನ ಅಜ್ಞಾನದಿಂದ ಇಲ್ಲವೆ ಆತುರತೆಯಿಂದ ಸಾಧನೆಯಲ್ಲಿ ಒದಗಬಹುದಾದ ಕುಂದುಕೊರತೆ ಹಾಗೂ ವಿಘ್ನಗಳನ್ನು ತಿಳಿಸಿ, ಅವುಗಳನ್ನು ತಿದ್ದಿಕೊಂಡರೆ, ಸಾಧನೆಯು ಸುಲಭವೂ, ನಿರ್ವಿಘ್ನವೂ ಆಗುತ್ತದೆಂಬ ದೃಷ್ಟಿಯಿಂದ ಈ ಮತ್ತು ಮುಂದಿನ ಶ್ಲೋಕಗಳಲ್ಲಿ ಕೆಲವು ವಿವರಗಳನ್ನು ಹೇಳಲಾಗಿದೆ. ಸಾಧಕನು ಆಹಾರ, ನಿದ್ರೆ ಹಾಗೂ ಇತರೆ ವಿಹಾರಗಳಲ್ಲಿ ಎರಡೂ ದಿಕ್ಕುಗಳಲ್ಲಿ ಅಂದರೆ ಭೋಗ ಮತ್ತು ತ್ಯಾಗಗಳಲ್ಲಿ ‘ಅತಿ’ ಯನ್ನು ತ್ಯಜಿಸಿ ಮಧ್ಯಮಾರ್ಗವನ್ನು ಅವಲಂಬಿಸಬೇಕು.

ಯುಕ್ತಾಹಾರವಿಹಾರಸ್ಯ ಯಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || 17 ||
ಅರ್ಥ : ಆಹಾರ, ವಿಹಾರ, ಕರ್ಮಗಳು, ನಿದ್ರೆ, ಮತ್ತು ಎಚ್ಚರ ಇವುಗಳಲ್ಲಿ ಮಿತವಾಗಿರುವ ಸಾಧಕನಿಗೆ ಯೋಗವು ದುಃಖನಾಶಕವಾಗುತ್ತದೆ.
ಯುಕ್ತಚೇಷ್ಟಸ್ಯ ಕರ್ಮಸು – ಎಂಬ ಶಬ್ದಗಳಲ್ಲಿ ಇನ್ನೊಂದು ಗೂಢ ಸೂಚನೆಯು ಅಡಗಿದೆ. ಸಾಧಕನು ವ್ಯವಹಾರದಲ್ಲಿ ಫಲಾಪೇಕ್ಷೆಯಿಲ್ಲದೆ, ಲೋಕಸಂಗ್ರಹ ದೃಷ್ಟಿಯಿಂದ ತಾನು ಆರಿಸಿಕೊಂಡಿರುವ ಕರ್ಮವನ್ನು ಮಾಡುವಾಗ (ಲೋಕಸೇವೆ), ಆ ಕರ್ಮವು ಶ್ರೇಷ್ಠವೆಂದು ಭಾವಿಸಿ, ಅದರಲ್ಲಿ ಸಹ ಅತಿಯಾಗಿ ಅನುರಕ್ತನಾಗಬಾರದೆಂಬ ಸೂಚನೆ ಇದರಲ್ಲಿದೆ. ಏಕೆಂದರೆ ಇಂತಹ ಕರ್ಮವು ತನ್ನ ವಾಸನೆಯನ್ನು ಬರಿದು ಮಾಡಿಕೊಳ್ಳುವುದಕ್ಕಿರುವುದರಿಂದ ಅದರಲ್ಲಿ ಅತಿಯಾಗಿ ಅನು ರಕ್ತನಾದರೆ ಅದೇ ಕರ್ಮದಿಂದ ಪುನಃ ವಾಸನೆಗಳುಂಟಾಗಿ ಅವು ಬಂಧನಕ್ಕೆ ಕಾರಣವಾಗುತ್ತವೆ. ಆದ್ದರಿಂದ ಇದರಲ್ಲಿ ಸಹ ಮಿತವಾಗಿರಬೇಕೆಂಬುದು ಸಾಮಾನ್ಯವಾದ ಅರ್ಥ.
‘ಅವಬೋಧ’ – ಎಂದರೆ ನಿದ್ರೆ ಮಾಡದೆ ಇರುವುದು. ಇದರಲ್ಲಿಯೂ ಮಿತನಾಗಿರಬೇಕು. ಸಾಧಕನು ಪ್ರಾರಂಭದಲ್ಲಿ ಅತಿ ಉತ್ಸಾಹದಿಂದ ನಿದ್ರೆಗೆಟ್ಟು ದೀರ್ಘಕಾಲದವರೆಗೆ ಏಕಾಸನದಲ್ಲಿ ಕುಳಿತುಕೊಂಡು ಧ್ಯಾನ ಮಾಡಬಹುದು. ಇದು ಹಿತವಲ್ಲವೆಂದು ಪ್ರಾರಂಭದಲ್ಲಿ ದೀರ್ಘಕಾಲದ ವರೆಗೆ ಧ್ಯಾನಮಗ್ನನಾಗದೆ, ಇದರಲ್ಲಿ ಸಹ ಮಿತವಾಗಿರುವಬೇಕೆಂದು ಹೇಳಲಾಗಿದೆ.

ಸಾಧಕನು ‘ಯುಕ್ತ’ ನಾಗುವುದು ಯಾವಾಗ ?
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ |
ನಿಃಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ || 18 ||
ಅರ್ಥ : ಚೆನ್ನಾಗಿ ನಿಗ್ರಹಿಸಲ್ಪಟ್ಟ ಮನಸ್ಸು, ನಿಸ್ಪೃಹವಾಗಿ, ಆತ್ಮಧ್ಯಾನದಲ್ಲಿಯೇ ನಿರತವಾಗಿದ್ದರೆ ಆಗ ಆ ಸಾಧಕನಿಗೆ ಯುಕ್ತ ಅಂದರೆ ಆತ್ಮನಲ್ಲಿ ನೆಲೆಸಿರುವರು ಎಂದು ಹೆಸರು.
ಇಲ್ಲಿಂದ ಮುಂದೆ ಆರು ಶ್ಲೋಕಗಳಲ್ಲಿ ಯೋಗಿಯು ಗಳಿಸುವ ಫಲ, ಆತ್ಮಜ್ಞಾನವಾದ ನಂತರ ಅವನು ಪ್ರಪಂಚದಲ್ಲಿ ವ್ಯವಹರಿಸುವ ರೀತಿ, ಹಾಗೂ ಅವನ ಅನುಭವಗಳು ಇವೆಲ್ಲವನ್ನೂ ಹೇಳಲಾಗಿದೆ. ಸಾಧಕರಿಗೆ ಅವಶ್ಯಕವಾದ ವಿವರಗಳು ಇಲ್ಲಿವೆ. ಧ್ಯಾನಕಾಲದಲ್ಲಿ ಅನುಭವಿಸಬಹುದಾದ ಕೆಲವು ಸತ್ಯಾಂಶಗಳು ಸಹ ವರ್ಣಿಸಲ್ಪಟ್ಟಿವೆ. ಯುಕ್ತ ಎಂಬ ಶಬ್ದದ ಹೆಚ್ಚಿನ ವಿವರಣೆಯನ್ನು ಈ ಭಾಗದಲ್ಲಿ ಕಾಣಬಹುದು (ಅ. 6ರಲ್ಲಿ ಶ್ಲೋಕ 7 ಮತ್ತು 8 ನೋಡಿರಿ)
ಮನಸ್ಸು ಚೆನ್ನಾಗಿ ನಿಗ್ರಹಿಸಲ್ಪಟ್ಟರೆ ಅದು ಆತ್ಮಾನಂದದಲ್ಲಿ ಮಗ್ನವಾಗುತ್ತದೆ. “ನಿಸ್ಪೃಹಃ !” ಎಂದರೆ ಆಸೆಯ ‘ಗೀಳನ್ನು’ ತ್ಯಜಿಸುವುದು ಇಲ್ಲಿ ‘ಆಸೆ’ ‘ಆಸೆಯ ಗೀಳು’ ಇವುಗಳಲ್ಲಿಯ ವ್ಯತ್ಯಾಸವನ್ನು ಗಮನಿಸಬೇಕು. ಹಣದ ಬಗ್ಗೆ ಆಸೆ ಇರುವುದು ತಪ್ಪಲ್ಲ. ಏಕೆಂದರೆ ಹಣವಿಲ್ಲದೆ ಯಾವ ವ್ಯವಹಾರವೂ ಸಾಗದೆ ಇರುವುದರಿಂದ ಅದರ ಬಗ್ಗೆ ಆಸೆ ಇರುವುದರಿಂದಲೇ ಅದನ್ನು ಗಳಿಸಲು ನಾವು ನಾನಾ ರೀತಿಯ ಕರ್ಮಗಳನ್ನು ಬುದ್ಧಿವಂತಿಕೆಯಿಂದ ಮಾಡುತ್ತೇವೆ ಹಾಗೂ ಹಣವನ್ನು ಕೂಡಿ ಹಾಕಿ ಸಂಗ್ರಹಿಸುತ್ತೇವೆ. ಆದರೆ ಈ ಆಸೆಯು ಬಲಿತು ವೃದ್ಧಿಯಾಗಿ ವ್ಯಕ್ತಿಯನ್ನು ಆವರಿಸಿ ನುಂಗಿ ಬಿಟ್ಟರೆ ಆತನು ಅದರ ಕೈಯಲ್ಲಿ ಸಿಕ್ಕು ಹುಚ್ಚನಂತಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಾನೆ. ಇದಕ್ಕೆ ಆಸೆಯ ಗೀಳು ಎಂದು ಹೆಸರು. ಇದನ್ನು ಪ್ರಯತ್ನದಿಂದ ನಿಗ್ರಹಿಸಬೇಕು. (ನಿಸ್ಪೃಹಃ)
ಸಾಮಾನ್ಯವಾದ ಆಸೆಯು ಮಾನಸಿಕ ಉದ್ರೇಕವನ್ನುಂಟು ಮಾಡುವುದಿಲ್ಲ ಆದರೆ ‘ಆಸೆಯ ಗೀಳು’ ಹಿಡಿದರೆ ಮಾತ್ರ ಕೆಡುಕು ಅದನ್ನು ತ್ಯಜಿಸಬೇಕು.

ಯಥಾ ದೀಪೆÇೀ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ |
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ || 19 ||
ಅರ್ಥ : ಗಾಳಿಯಿಲ್ಲದಿರುವ ಸ್ಥಳಗಳಲ್ಲಿ ದೀಪವು ಅಲುಗಾಡದೆ ಸ್ಥಿರವಾಗಿ ಉರಿಯುವಂತೆ, ಮನೋನಿಗ್ರಹವನ್ನು ಸಾಧಿಸಿದ ಯೋಗಿಯು, ಶಾಂತನಾಗಿ, ಆತ್ಮಧ್ಯಾನದಲ್ಲಿ ನಿರತನಾಗಿರುತ್ತಾನೆ.

ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ |
ಯತ್ರ ಚೈವಾತ್ಮನಾತ್ಮಾನಾಂ ಪಶ್ಯನ್ನಾತ್ಮನಿ ತುಷ್ಯತಿ || 20 ||
ಅರ್ಥ : ಯೋಗವನ್ನು ಅಭ್ಯಾಸ ಮಾಡಿ, ತನ್ಮೂಲಕ ಮನಸ್ಸನ್ನು ನಿಗ್ರಹಿಸಿ, ಆತ್ಮನಿಂದ ಆತ್ಮನನ್ನು ನೋಡುತ್ತಾ, ಮನಸ್ಸಿನ ಶಾಂತಿಯನ್ನು ಹೊಂದಿದಾಗ್ಯೆ ಆತನು ತೃಪ್ತಿಯಲ್ಲಿರುತ್ತಾನೆ.

ಸುಖಮಾತ್ಯಂತಿಕಂ ಯತ್ತದ್ಭುದ್ಧಿಗ್ರಾಹ್ಯಮತೀದ್ರಿಯಮ್ |
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ || 21 ||
ಅರ್ಥ : ಯೋಗಿಯು ಧ್ಯಾನಮಗ್ನನಾಗಿರುವಾಗ, ಇಂದ್ರಿಯಗಳಿಗೆ ನಿಲುಕದೆ ಇರುವ ಅತ್ಯಂತ ಸುಖವನ್ನು (ಪರಮಾತ್ಮನನ್ನು) ಶುದ್ಧ ಬುದ್ಧಿಯಿಂದ ತಿಳಿದು ಅದರಲ್ಲಿಯೂ ಸ್ಥಿರವಾಗಿ ನಿಂತುಬಿಡುತ್ತಾನೆ.

ಯಂ ಲಬ್ದ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ |
ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ || 22 ||
ಅರ್ಥ : ಈ ಸ್ಥಿತಿಯನ್ನು ಗಳಿಸಿದ ಸಾಧಕನು ಇದಕ್ಕಿಂತ ಅಧಿಕವಾದ ಲಾಭವು ಬೇರೆ ಯಾವುದೂ ಇಲ್ಲವೆಂದು ತಿಳಿಯುತ್ತಾನೆ. ಎಂತಹ ಮಹತ್ತರವಾದ ದುಃಖವೊದಗಿದರೂ ಸಹ ಅವನು ವಿಚಲಿತನಾಗದೆ ಶಾಂತವಾಗಿಯೇ ಇರುತ್ತಾನೆ.

ತಂ ವಿದ್ಯಾದ್ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ |
ಸ ನಿಶ್ಚಯೇನ ಯೋಕ್ತವ್ಯೋ ಯೋಗೋ„ನಿರ್ವಿಣ್ಣಚೇತಸಾ || 23 ||
ಅರ್ಥ : ಮನಸ್ಸು ದುಃಖದೊಡನೆ ಸೇರುವುದನ್ನು ತಪ್ಪಿಸಿಕೊಳ್ಳುವ ಈ ಸ್ಥಿತಿಯನ್ನು ‘ಯೋಗ’ ಎಂದು ತಿಳಿಯಬೇಕು. ಇದನ್ನು ದೃಢ ನಿಶ್ಚಯದಿಂದಲೂ ಸ್ತಿಮಿತ ಮನಸ್ಸಿನಿಂದಲೂ ಗಳಿಸಬೇಕು.
‘ಯೋಗ’ ಸ್ಥಿತಿಯನ್ನು ಗಳಿಸಿದ ಸಾಧಕನ ಸಂಪೂರ್ಣ ಚಿತ್ತವನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಪ್ರತಿಯೊಬ್ಬರೂ ದೃಢವಾದ ನಿಶ್ಚಯದಿಂದ ಇದನ್ನು ಗಳಿಸಬೇಕೆಂದು ಕೃಷ್ಣನು ಹೇಳಿದ್ದಾನೆ. ಇಂತಹ ಸ್ತಿಮಿತ ಮನಸ್ಸಿನಿಂದ, ಶಾಂತವಾಗಿದ್ದ ಕಾಲದಲ್ಲಿ ಆತ್ಮಜ್ಞಾನವು ಅಂದರೆ ತಾನೇ ಪರಮಾತ್ಮ ಎಂಬ ಅನುಭವವಾಗುತ್ತದೆ. ಈ ಅನುಭವವಾದ ಮೇಲೆ ಸಂಸಾರದಲ್ಲಿ ಎಂತಹ ಕಠಿಣತಮ ದುಃಖವು ಒದಗಿದರೂ ಸಹ ಅದು ಯೋಗಿಯ ಮನಸ್ಸಿನ ಶಾಂತಿಯನ್ನು ಕದಲಿಸಬಾರದು. ಅದಕ್ಕಾಗಿಯೇ ಈ ಸ್ಥಿತಿಗೆ ದುಃಖ ಸಂಯೋಗ ವಿಯೋಗ’ ಅಂದರೆ ದುಃಖವು ಮನಸ್ಸಿನೊಡನೆ ಸೇರುವುದನ್ನು ತಪ್ಪಿಸಿಕೊಳ್ಳೂವುದು ಎನ್ನಲಾಗಿದೆ. ಈ ಆನಂದವು ಇಂದ್ರಿಯಗಳಿಂದ ತಿಳಿಯತಕ್ಕದ್ದಲ್ಲ. ಬುದ್ಧಿಯು ಶುದ್ಧವಾಗಿರುವಾಗ, ಆ ಬುದ್ಧಿಗೆ ಗೋಚರಿಸುತ್ತದೆ. ಬುದ್ಧಿಯ ಶುದ್ಧತೆ ಎಂದರೆ ಬುದ್ಧಿಯಲ್ಲಿ ರಜೋಗುಣ ತಮೋಗುಣಗಳು ಚೆನ್ನಾಗಿ ಇಲ್ಲವೆ ತೀರ ಕಡಿಮೆಯಾಗಿ ಸತ್ವಗುಣವು ಪ್ರಧಾನವಾಗಿರುವ ಸ್ಥಿತಿ. ತಮೋಗುಣವು ಬುದ್ಧಿಯನ್ನು ಕವಿದು ಅದು ಸರಿಯಾಗಿ ಕೆಲಸ ಮಾಡುದಂತೆ ಆವರಣವನ್ನು ಕಲ್ಪಿಸುತ್ತದೆ. ರಜೋ ಗುಣವು ಬುದ್ಧಿಯನ್ನು ಉದ್ರೇಕಗೊಳಿಸುತ್ತದೆ. ಸಾಧನೆಯಿಂದ ಇವೆರಡೂ ಎಷ್ಟು ಕಡಿಮೆಯಾಗುತ್ತದೆಯೋ ಅಷ್ಟು ಸತ್ವಗುಣವು ಹೆಚ್ಚುತ್ತದೆ. ಸತ್ವಗುಣವು ಪ್ರಚುರವಾಗಿರುವಾಗ ಮನಸ್ಸಿನ ಏಕಾಗ್ರತೆಯೂ, ಶಾಂತತೆಯೂ ನಂತರ ಆತ್ಮಜ್ಞಾನವೂ ಲಭಿಸುತ್ತದೆ. ಇದೇ ಪರಮ ಸುಖಪದವು. ಈ ಸುಖವು ಕ್ಷಣಕಾಲ ಮಾತ್ರ ಲಭಿಸತಕ್ಕದ್ದು, ಆನಂತರ ಅದು ಇಲ್ಲವಾಗಿ ಇನ್ನೊಮ್ಮೆ ಅಂತಹ ಕಾಲ ಬರುವವರೆಗೂ ಕಾಯಬೇಕಾಗುತ್ತದೆ ಎಂಬ ಸಂಶಯವನ್ನು ಪರಿಹಾರ ಮಾಡುವುದಕ್ಕಾಗಿ, “ಗುರುಣಾಪಿ ವಿಚಾಲ್ಯತೆ” ಮಹತ್ತರವಾದ ದುಃಖದಿಂದ ಸಹ ಅವನ ಮನಸ್ಸು ಚಲಿಸುವುದಿಲ್ಲ. (ಚಂಚಲವಾಗುವುದಿಲ್ಲ) ಎಂದು ತಿಳಿಸಲಾಗಿದೆ. ಇಂತಹ ಯೋಗಿಯು ಪುನಃ ಸಂಸಾರ ಬಂಧನದಲ್ಲಿ ಸಿಕ್ಕು ದುಃಖಗಳಾಗಲೀ ಹಣವನ್ನು ಗಳಿಸುವುದು ಮತ್ತು ಉಳಿಸುವುದಕ್ಕಾಗಲೀ ಇಲ್ಲವೆ ಸಂಸಾರದ ಇತರೆ ಯಾವ ತಾಪತ್ರಯಗಳಿಗಾಗಲೀ ಅಥವಾ ಆಕರ್ಷಣೆಗಾಗಲೀ, ಸಿಲುಕುವುದಿಲ್ಲ ಎಂಬುದನ್ನು ಸೂಚಿಸಲು ಯಂಲಬ್ದ್ವಾ ಚಾಪರಂ ಲಾಭಂ ಮನ್ಯತೆನಾಧಿಕಂ ತತಃ’ ಅಂದರೆ ಈ ಶಾಂತಿಯನ್ನು ಪಡೆದ ನಂತರ ಇದಕ್ಕಿಂತ ಮಹತ್ತರವಾದ ಬೇರೆ ಯಾವ ಲಾಭವೂ ಇಲ್ಲ ಎಂಬ ಮನವರಿಕೆಯು ಅವನಿಗಾಗುತ್ತದೆ ಎಂದು ಹೇಳಿ ಅವನು ಸಂಸಾರದ ಆಕರ್ಷಣೆಗಳಿಗೆ ಸಹ ಒಲಿಯುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸಲಾಗಿದೆ.
‘ಯೋಗ’ ಎಂಬ ಶಬ್ದಕ್ಕೆ ಇಲ್ಲಿ ಒಂದು ಕ್ರಾಂತಿಕಾರಕ ಅರ್ಥವನ್ನು ಕೊಡಲಾಗಿದೆ. ದುಃಖ ಸಂಯೋಗವಿಯೋಗ’ ಅಂದರೆ ದುಃಖದೊಡನೆ ಸೇರುವಿಕೆಯ ವಿಯೋಗ. ಮನಸ್ಸು ಹೀಗೆ ದುಃಖದೊಡನೆ ವಿಯೋಗವನ್ನು ಹೊಂದಿ ಆತ್ಮಜ್ಞಾನದಲ್ಲಿ ಸ್ಥಿರವಾಗಿ ನಿಲ್ಲಬೇಕು. ಈ ಜ್ಞಾನದ ಉಪದೇಶವನ್ನು ಕೇಳಿ ಆನಂದಪಟ್ಟು ಕೊನೆಗೆ ಅಲ್ಲಿಗೇ ಬಿಟ್ಟು ಬಿಡಬಾರದು. ಈ ಯೋಗವನ್ನು ದೃಢವಾದ ನಿರ್ಧಾರದಿಂದಲೂ ಬಲವಾದ ಸತತ ಸಾಧನೆಯಿಂದಲೂ ಅವಶ್ಯವಾಗಿ ಗಳಿಸಬೇಕು. (ಸನಿಶ್ಚಯೇನ ಯೋಕ್ತವ್ಯೊ ಯೋಗೋ„ನಿರ್ವಿಣ್ಣ ಚೇತಸಾ)

ಸಂಕಲ್ಪಪ್ರಭಾವಾನ್ ಕಾಮಾಂಸ್ತ್ಯಕ್ತ್ಯಾ ಸರ್ವಾನಶೇಷತಃ |
ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತಃ || 24 ||
ಶನೈಃ ಶನೈರುಪರಮೇದ್ಬುದ್ಧ್ಯಾ ಧೃತಿಗೃಹೀತಯಾ |
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ || 25 ||
ಅರ್ಥ : ಸಂಕಲ್ಪದಿಂದ ಉತ್ಪನ್ನವಾದ ಮಾನಸಿಕ ಆಸೆಗಳೆಲ್ಲವನ್ನು ಸಂಪೂರ್ಣವಾಗಿ ತ್ಯಜಿಸಿ ಮನಸ್ಸಿನಿಂದ ಎಲ್ಲಾ ಇಂದ್ರಿಯಗಳನ್ನೂ ನಿಗ್ರಹಿಸಿ ಬುದ್ಧಿಯನ್ನು ಸ್ಥಿರವಾಗಿಟ್ಟುಕೊಂಡು, ಸ್ವಲ್ಪ ಸ್ವಲ್ಪವಾಗಿ (ಕ್ರಮಶಃ) ಮನಃ ಶಾಂತಿಯನ್ನು ಗಳಿಸಬೇಕು-ಸಾಧಿಸಬೇಕು. ಆನಂತರ ಮನಸ್ಸನ್ನು ಆತ್ಮನಲ್ಲಿ ಸ್ಥಿರಪಡಿಸಿ ಅದೇ ಧ್ಯಾನದಲ್ಲಿರಬೇಕು. ಬೇರೆ ಏನನ್ನು ಮನಸ್ಸಿನಿಂದ ಚಿಂತಿಸಬಾರದು.
ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದೆಳೆದುಕೊಂಡು ಧ್ಯಾನದಲ್ಲಿ ಏಕಾಗ್ರ ಮಾಡುವುದು ‘ಯೋಗ’ದ ಗುರಿ ಎಂದು ಈ ಹಿಂದೆ ತಿಳಿಸಲಾಯಿತು. ಇಂತಹ ಮನಸ್ಸಿನಿಂದ ಧ್ಯಾನಮಗ್ನನಾದರೆ ಹೇಗೆ ಆತ್ಮಾನುಸಂಧಾನದಲ್ಲಿ ನಿರತನಾಗಿ ಪರಮಸುಖವನ್ನು ಪಡೆಯಬಹುದೆಂಬುದನ್ನೂ ಹೇಳಲಾಯಿತು. ಇದುವರೆಗಿನದು ಕೇವಲ ತಾತ್ವಿಕ – ತಾರ್ಕಿಕ ವರ್ಣನೆ, ಸಾಧಕನು ಇದನ್ನು ಆಚರಣೆಯಲ್ಲಿ ತರಲು ಉಪಯೋಗವಾಗಲೆಂದು ಇವೆರಡು ಶ್ಲೋಕಗಳಲ್ಲಿ, ಗುರಿಯನ್ನು ಸಾಧಿಸುವ ಸಾಧನೆಯ ಪ್ರತ್ಯಕ್ಷ ವಿವರಗಳನ್ನು ತಿಳಿಸಲಾಗಿದೆ. ಈ ವರ್ಣನೆಯ ಪ್ರತಿಯೊಂದು ಶಬ್ದವೂ ಸಾಧಕನಿಗೆ ಹೇಗೆ ಪ್ರತ್ಯಕ್ಷ ವಿವರಣೆಗಳನ್ನು ತಿಳಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡು ಆಚರಣೆಯಲ್ಲಿ ತರಬೇಕೆಂಬುದೇ ಈ ವಿವರಗಳ ಉದ್ದೇಶ.
ಕಾಲ್ಪನಿಕ ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಅತ್ಯವಶ್ಯಕ.
ಆಸೆಗಳನ್ನು ಸ್ವಲ್ಪ ಕಾಲ ತ್ಯಜಿಸಿದರೆ ಸಾಲದು. ಅವುಗಳನ್ನು ಸಂಪೂರ್ಣವಾಗಿ, ಏನೂ ಶಿಲ್ಕು ಉಳಿಯದಂತೆ ತ್ಯಜಿಸಬೇಕು. (ಅಶೇಷತಃ) (ಕಾಲ್ಪನಿಕ ಆಸೆಗಳ ವರ್ಣನೆಯನ್ನು ಇದೇ ಅಧ್ಯಾಯದ 2ನೇ ಶ್ಲೋಕದ ವಿವರಗಳಲ್ಲಿ ನೋಡಿರಿ). ಈ ಆಸೆಯು ಸ್ವಲ್ಪವಾದರೂ ಮನಸ್ಸಿನಲ್ಲಿ ಉಳಿದರೆ, ಮನೆಯೊಳಗೆ ಕಳ್ಳನನ್ನಿಟ್ಟುಕೊಂಡಂತೆಯೇ ಸರಿ. ‘ಯೋಗ’ವನ್ನು ಸಾಧಿಸಬೇಕೆಂಬ ಆಸೆ ಸಹ ಇರಕೂಡದು. ಹೀಗೆ ಕಾಲ್ಪನಿಕ (ಸಂಕಲ್ಪ) ಆಸೆಗಳನ್ನು ಕಿತ್ತುಹಾಕಿದರೆ ಅದರಿಂದ ಮನಸ್ಸು, ಶಕ್ತಿಯುತವಾಗಿ, ಇಂದ್ರಿಯಗಳೆಂಬ ಪುಂಡು ಕುದುರೆಗಳನ್ನು ನಿಗ್ರಹಿಸಿ ಬಿಗಿಯಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಗಳಿಸುತ್ತದೆ. ನಮ್ಮ ಮನಸ್ಸು ಸಾಮಾನ್ಯವಾಗಿ ಇಂದ್ರಿಯಗಳನ್ನು ನಿಗ್ರಹಿಸಲು ಅಸಮರ್ಥವಾಗಿದೆ ಎಂಬುದು ನಿಜವಾದುದು. ಈ ದೌರ್ಜನ್ಯಕ್ಕೆ ಕಾರಣವೇನೆಂದರೆ, ಮನಸ್ಸು ಸತತವೂ ಸಂಕಲ್ಪ ಜನ್ಯ ಆಸೆಗಳ ವಿಚಾರ ಮಾಡುವುದರಲ್ಲಿ ತನ್ನ ಶಕ್ತಿಯನ್ನು ವ್ಯಯಿಸಿ ದುರ್ಬಲವಾಗಿದೆ. ಪ್ರತಿನಿತ್ಯವೂ ಸೋರಿ ವ್ಯರ್ಥವಾಗುತ್ತಿರುವ ಈ ಶಕ್ತಿಯನ್ನು ತಡೆದು ನಿಲ್ಲಿಸಿದರೆ, ಮನಸ್ಸು ಬಲಗೊಂಡು ಕ್ರಮೇಣ ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಗ್ರಹಿಸುವ ಸಾಮಥ್ರ್ಯವನ್ನು ಪಡೆಯುತ್ತದೆ. ಮನಸ್ಸಿನ ಏಕಾಗ್ರತೆಯನ್ನೂ ಶಾಂತಿಯನ್ನೂ ಗಳಿಸುವುದಕ್ಕೆ ಇದೊಂದೇ ಉಪಾಯ . ಇದರ ಹೊರತು ಬೇರೆ ದಾರಿ ಇಲ್ಲ. ಇದನ್ನು ಬೆಳಗಾಗುವುದರೊಳಗಾಗಿ ಪಡೆಯುವುದು ಸಾಧ್ಯವಿಲ್ಲವೆಂದೂ ಸತತವಾದ ದೀರ್ಘ ಪ್ರಯತ್ನದಿಂದ ಕ್ರಮೇಣ ಸ್ವಲ್ಪ ಸ್ವಲ್ಪವಾಗಿ (ಶನೈಃ ಶನೈಃ)
ಸಾಧಿಸಬೇಕೆಂದು ಸೂಚಿಸಲಾಗಿದೆ.

ಮನಸ್ಸನ್ನು ಇಂದ್ರಿಯಗಳಿಂದ ಹಿಂದೆಳೆದು ಏಕಾಗ್ರ ಮಾಡಿದ ಮೇಲೆ, ಮುಂದಿನ ಹಂತದ ಸಾಧನೆಯ ಪ್ರಾರಂಭವಾಗುತ್ತದೆ. ಮನಸ್ಸನ್ನು ಇನ್ನೂ ಶುದ್ಧಗೊಳಿಸಿ ಸಂಸ್ಕಾರಗೊಳಿಸುವುದಾಗಿ (ಸಂಸ್ಕಾರ ಎಂದರೆ ದೋಷಗಳನ್ನು ಕಳೆದು ಸದ್ಗುಣಗಳನ್ನು ಜಾಗೃತಗೊಳಿಸುವುದು) ಅದನ್ನು ಬುದ್ಧಿಯ ವಶಕ್ಕೆ ಒಪ್ಪಿಸಬೇಕು. ಬುದ್ಧಿಯ ಮನಸ್ಸಿಗಿಂತ ಸೂಕ್ಷ್ಮವಾಗಿರುವುದರಿಂದ, ಮತ್ತು ಅದಕ್ಕಿಂತ ಮೇಲ್ತರಗತಿಯದಾಗಿರುವುದರಿಂದ ಅದು ತನ್ನ ವಿಚಾರ ಶಕ್ತಿಯಿಂದ, ಮನಸ್ಸಿನ ನಿಗ್ರಹ ಶಕ್ತಿ ಹಾಗೂ ಏಕಾಗ್ರತೆಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಹೀಗೆ ನಿಗ್ರಹಿಸಿದ ಮನಸ್ಸನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಅದಕ್ಕೆ ಚಿಂತನೆ ಮಾಡಲು ಯಾವುದಾದರೂ ವಿಷಯ ಬೇಕು. ಬುದ್ಧಿಯು
ಮನಸ್ಸನ್ನು ಈಗ ಪರಮಾತ್ಮನ ಧ್ಯಾನ ಮಾಡಲು ಹಚ್ಚುತ್ತದೆ. ಈ ರೀತಿಯಾಗಿ ಪಳಗಿದ ಮನಸ್ಸಿಗೆ ಸರಿಯಾದ ದಾರಿಯನ್ನು ತೋರಿಸಿ ಆತ್ಮಧ್ಯಾನ ಮಾಡಲು ಹಚ್ಚಿದರೆ, ಅದು ಅದರಲ್ಲಿಯೇ ನಿರತವಾಗಿ, ಆನಂದವನ್ನು ಅನುಭವಿಸುತ್ತದೆ. ಧ್ಯಾನದ ವಿವಿಧ ಹಂತಗಳಲ್ಲಿ ಇದು ಕೊನೆಯ ಘಟ್ಟ. ಈ ಸ್ಥಿತಿಯನ್ನು ತಲುಪಿದ ಮೇಲೆ ಮನಸ್ಸು ಬುದ್ಧಿಗಳು ಪರಮಾತ್ಮನಲ್ಲಿ ಲೀನವಾಗಿ ಬಿಡುತ್ತವೆ. ಆಗ ಯಾವ ಧ್ಯಾನವನ್ನೂ ಮಾಡಲಾಗುವುದಿಲ್ಲ. ಧ್ಯಾನ, ಧ್ಯಾನ ಮಾಡುವವನು, ಧ್ಯಾನ ಮಾಡುವ ವಸ್ತು ಎಲ್ಲವೂ ಪರಮಾತ್ಮ ಮಯವಾಗಿ ಬಿಡುತ್ತದೆ. ಆದ್ದರಿಂದ ಈ ಸ್ಥಿತಿಯನ್ನು ತಲುಪಿದ ನಂತರ “ನ ಕಿಂಚಿದಪಿ ಚಿಂತಯೇತ್” ಈಗ ಏನನ್ನೂ ಧ್ಯಾನ ಮಾಡಬೇಕಿಲ್ಲ ಎಂದು ಹೇಳಲಾಗಿದೆ. ಧ್ಯಾನ ಮಾಡಲು ಆಗುವುದೂ ಇಲ್ಲ. ಮನಸ್ಸು ಪರಮ ಶಾಂತಿಯನ್ನು ತಲುಪಿದ ನಂತರ ಚಿಂತನೆಯ ಕಾರ್ಯವು ಬೇಕಿಲ್ಲ. ಬಾಗಿಲನ್ನು ನೂಕು ನೀನು ಒಳಗೆ ಹೋಗುವೆ’ ಎಂದಂತೆ ಈಗ ಬಾಗಿಲನ್ನು ನೂಕಿದ್ದಾಯಿತು. ಒಳಗೆ ಹೋಗುವ ಕಾರ್ಯವು ನಮಗೆ ತಿಳಿಯದಂತೆ ತಾನಾಗಿಯೇ ಆಗಿಬಿಡುತ್ತದೆ. ಅದಕ್ಕೆ ಯಾವ ಹೊಸ ಪ್ರಯತ್ನವೂ ಬೇಡ.

ಚಂಚಲ ಮನಸ್ಸಿನವರಿಗೆ ಚೇತನವನ್ನು ಕೊಡಲು ಇನ್ನೊಂದು ವಿವರ

ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ |
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ || 26 ||
ಅರ್ಥ : ಧ್ಯಾನ ಮಾಡುವಾಗ ಮನಸ್ಸು ಏಕಾಗ್ರವಾಗಿ ನಿಲ್ಲದೆ ನುಣುಚಿಕೊಂಡು ಬೇರೆ ಬೇರೆ ಕಡೆಗೆ ಹೋಗಿ ನಾನಾ ವಿಷಯಗಳನ್ನು ವಿಚಾರ ಮಾಡ ಹತ್ತುತ್ತದೆ. ಮನಸ್ಸು ಹೀಗೆ ತಪ್ಪಿಸಿಕೊಂಡು ಹೋದ ಹಾಗೆಲ್ಲಾ ಅದನ್ನು ಹಿಂದಕ್ಕೆ ಎಳೆದು ತಂದು ಪುನಃ ಪುನಃ ಆತ್ಮಧ್ಯಾನದಲ್ಲಿ ನಿಲ್ಲಿಸಬೇಕು.
ಸಾಧಕನು ಧ್ಯಾನ ಮಾಡುವಾಗ ಧ್ಯಾನ ವಸ್ತುವನ್ನು ಬಿಟ್ಟು ಮನಸ್ಸನ್ನು ಪದೇ ಪದೇ ಓಡಿ ಹೋಗುತ್ತಿರುವುದನ್ನು ಅನುಭವಿಸುತ್ತಾನೆ. ಎಷ್ಟೋ ಸಾರಿ ದೀರ್ಘಕಾಲದವರೆಗೂ, ಧ್ಯಾನ ಇಲ್ಲವೆ ಜಪವನ್ನು ಮಾಡುತ್ತಿದ್ದಾಗ್ಯೂ ಮನಸ್ಸು ಏಕಾಗ್ರವಾಗಿರದೆ, ಯಾವಾಗಲೂ ನುಣುಚಿಕೊಂಡು ಹೋಗಿ ಬೇರೆ ಬೇರೆ ವಿಚಾರಗಳಲ್ಲಿ ಮಗ್ನನಾಗಿರುತ್ತದೆ. ಮಧ್ಯದಲ್ಲಿ ಎಲ್ಲೋ ಒಮ್ಮೆ ಮನಸ್ಸು ಓಡಿ ಹೋಗಿರುವುದು ತಿಳಿಯುತ್ತದೆ! ಇನ್ನು ಕೆಲವು ಸಾರಿ ಮನಸ್ಸು ಬೇರೆ ವಿಚಾರವನ್ನು ಮಾಡ ತೊಡಗಿದ ಕೂಡಲೇ ತಿಳಿಯುತ್ತದೆ. ಈ ಎರಡೂ ಸಂದರ್ಭಗಳಲ್ಲಿಯೂ ಮನಸ್ಸು ಬೇರೆ ವಿಚಾರದಲಿ ಮಗ್ನವಾಗಿದೆ ಎಂದು ತಿಳಿದ ಕೂಡಲೇ, ಅದನ್ನು ಹಿಂದಕ್ಕೆಳೆದು (ಇಲ್ಲವೆ ಇಷ್ಟಮೂರ್ತಿಯ ಧ್ಯಾನದಲ್ಲಿ) ತಂದು ಆತ್ಮಧ್ಯಾನದಲ್ಲಿ ಸ್ಥಿರಪಡಿಸಬೇಕು. ಮನಸ್ಸು ಓಡಿ ಹೋದ ಹಾಗೆಲ್ಲಾ ಪುನಃ ಪುನಃ ಎಳೆದು ತಂದು ಧ್ಯಾನದಲ್ಲಿ ನಿಲ್ಲಿಸಬೇಕು. ಮನಸ್ಸು ಸ್ವಾಭಾವಿಕವಾಗಿ ಚಂಚಲ ಸ್ವಭಾವವುಳ್ಳದ್ದು ಮತ್ತು ಅಸ್ಥಿರವಾದುದು ಆಗಿದೆ. ಅದು ಯಾವ ಒಂದು ವಿಚಾರವನ್ನು ದೀರ್ಘಕಾಲದ ವರೆಗೆ ಚಿಂತಿಸಲಾರದು ಮತ್ತು ಸ್ಥಿರವಾಗಿ ಅನೇಕ ವಿಚಾರಗಳನ್ನು ಚಿಂತಿಸಲಾರದು. ಇದು ಅದರ ಸ್ವಭಾವಗುಣ, ಅಥವಾ ದೌರ್ಬಲ್ಯ. ಸತತವಾದ ಪ್ರಯತ್ನದಿಂದ ಹಾಗೂ ಬಲವಾದ ಅಭ್ಯಾಸದಿಂದ ಅದು ಆತ್ಮಧ್ಯಾನದಲ್ಲಿ ನಿರತವಾಗುವಂತೆ ಮಾಡಬೇಕು.
ಹೀಗೆ ಶ್ರದ್ಧೆಯಿಂದ ಧ್ಯಾನ ಮಾಡುತ್ತಿದ್ದಾಗ್ಯೂ ಮತ್ತು ದೀರ್ಘಕಾಲ ಸಾಧನೆಯನ್ನು ಮಾಡಿದ್ದಾಗ್ಯೂ ಮನಸ್ಸು ಏಕಾಗ್ರವಾಗದೆ ಇನ್ನೂ ಚಂಚಲವಾಗಿಯೇ ಇರುವುದು ಅನೇಕ ಸಾಧಕರ ಅನುಭವಕ್ಕೆ ಬಂದಿದೆ. ಮನಸ್ಸಿನ ಈ ಓಟಕ್ಕೆ ನಾನಾ ಕಾರಣಗಳಿರಬಹುದು. ಉದಾಹರಣೆ – ಹಿಂದಿನ ಜನ್ಮದ ಪ್ರಬಲವಾಸನೆಗಳು, ಇದೇ ಜನ್ಮದ ಹಿಂದಿನ ಅನುಭವಗಳು, ಹತ್ತಿರದಲ್ಲಿರುವ ವಿವಿಧ ಆಕರ್ಷಕ ವಸ್ತುಗಳು ಅಥವಾ ವಿಚಾರಗಳು ಮತ್ತು ಅವುಗಳ ಬಗ್ಗೆ ಸುಪ್ತವಾಗಿರುವ ಆಧ್ಯಾತ್ಮಕ ಸಿದ್ಧಿಯ ನಂತರದ ಕಾಮನೆಗಳು (ಸಂಕಲ್ಪ) ಇತ್ಯಾದಿ. ಹೀಗೆ ಕಾರಣಗಳು ಯಾವುದೇ ಇದ್ದಾಗ್ಯೂ ಮನಸ್ಸನ್ನು ಅವುಗಳಿಂದ ಹಿಂದಕ್ಕೆಳೆದು ತಂದು ಪುನಃ ಪುನಃ ಧ್ಯಾನಮಗ್ನವಾಗಿರುವಂತೆ ಮಾಡಬೇಕು.

ಸಾಧಕರ ಮೇಲೆ ಈ ಯೋಗದ ಪರಿಣಾಮ

ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ |
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ || 27 ||
ಅರ್ಥ : ಪ್ರಶಾಂತವಾದ ಮನಸ್ಸುಳ್ಳ ಆಸೆಗಳು ಶಮನವಾಗಿರುವ, ಪಾಪರಹಿತವಾದ, ಇಂತಹ ಯೋಗಿಯು ಉತ್ತಮವಾದ ಸುಖವನ್ನು ಅಂದರೆ ಪರಮ ಪದವಿಯಾದ ಬ್ರಹ್ಮತ್ವವನ್ನು ಪಡೆಯುತ್ತಾನೆ.
ಮನಸ್ಸನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದು ನಿಗ್ರಹ ಮಾಡಿ ಮಾನಸಿಕ ಶಾಂತಿಯನ್ನು ಗಳಿಸಿದ ಹಾಗೆ, ಕ್ರಮೇಣ ಕಲ್ಪನಾ ತರಂಗಗಳು ಅಳಿದು ಮನಸ್ಸು ಏಕಾಗ್ರವಾಗುತ್ತದೆ. ಕಲ್ಪನೆಗಳು ಪೂರ್ತಿಯಾಗಿ ನಿಂತಮೇಲೆ ಮನಸ್ಸು ಆತ್ಮಧ್ಯಾನದಲ್ಲಿ ನಿಲ್ಲುತ್ತದೆ. ಯೋಗಿಯು ಇಂತಹ ಸಮಯದಲ್ಲಿ ಪರಮಶಾಂತಿಯನ್ನು ಹೊಂದುತ್ತಾನೆ. ಹೀಗೆ ಶಾಂತಿಯನ್ನು ಪಡೆಯುವ ರೀತಿಯನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಮನಸ್ಸು ರೋಮಾಂಚವನ್ನುಂಟು ಮಾಡುವಂತಹ ಇಂತಹ ಶಾಂತಿಯನ್ನು ಪಡೆದಾಗ್ಯೆ, ಹಿಂದಿನ ಜನ್ಮದ ವಾಸನೆಗಳೆಲ್ಲವೂ ತಾವಾಗಿಯೇ ಕಳಚಿ ಬೀಳುತ್ತವೆ ಅಂದರೆ ಮನಸ್ಸು ಎಲ್ಲಾ ಸಂಚಿತ ವಾಸನೆಗಳಿಂದ ಮುಕ್ತವಾಗಿ ಶುದ್ಧವಾಗಿ ಪಾಪರಹಿತವಾಗುತ್ತದೆ.

ಯುಂಜನ್ನೇವಂ ಸದಾ„ತ್ಮಾನಂ ಯೋಗೀ ವಿಗತಕಲ್ಮಷಃ |
ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ಯುತೇ || 28 ||
ಅರ್ಥ : ಯೋಗಿಯು ಯಾವಾಗಲೂ ಆತ್ಮಸಾಧನೆಯಲ್ಲಿಯೇ ನಿರತನಾಗಿದ್ದು ಮನಸ್ಸಿನ ಕಲ್ಮಷಗಳೆಲ್ಲವನ್ನೂ ಕಳೆದುಕೊಂಡು ಬ್ರಹ್ಮಾನಂದ ಎಂಬ ಪರಮಸುಖವನ್ನು ಸವಿಯುತ್ತಾನೆ.
ರಬ್ಬರಿನ ಪುಗ್ಗವು ಆಕಾಶದಲ್ಲಿ ಮೇಲಕ್ಕೇರುತ್ತಾ ಏರುತ್ತಾ ಕೊನೆಗೆ ಸ್ಪೋಟಗೊಂಡು ಒಳಗಿನ ಆಕಾಶವನ್ನು ಹೊರಗಿನ ಆಕಾಶದೊಡನೆ ಐಕ್ಯಗೊಳಿಸುತ್ತದೆ. ತಾನು ಮಾತ್ರ ಒಡೆದು ಕೆಳಗೆ ಬೀಳುತ್ತದೆ. ಇದರಂತೆ ಮನಸ್ಸು ಧ್ಯಾನದಲ್ಲಿರುವಾಗ ಶಾಂತಿಸ್ಥಿತಿಯನ್ನು ಗಳಿಸಿ, ಸ್ಪೋಟಗೊಂಡು, ಅಹಂಕಾರವನ್ನು ಕಳಚಿ ಕೆಳಗೆ ಹಾಕಿ, ಈಗ ಪರಮಾತ್ಮನೇ ಆದ ತಾನು ಅಖಂಡ ಪರಮಾತ್ಮನೊಡನೆ ಸೇರಿಕೊಂಡು ಲೀನವಾಗಿ ಪರಮಾನಂದವನ್ನು ಅನುಭವಿಸುತ್ತದೆ (ಬ್ರಹ್ಮ ಸಂಶ್ಪರ್ಶ ಸುಖ) ಸಾಧಕನು ಈಗ ಮನಸ್ಸು, ಬುದ್ಧಿಗಳನ್ನು ದಾಟಿ, ಅಹಂಕಾರವನ್ನು ಕಳಚಿ ಹಾಕಿರುವುದರಿಂದ ಬ್ರಹ್ಮನೇ ಆಗುತ್ತಾನೆ. ಅಂದರೆ ತಾನೇ ಬ್ರಹ್ಮನು ಎಂಬ ಅನುಭವವನ್ನು ಪಡೆಯುತ್ತಾನೆ. ಇದಕ್ಕೆ ಬ್ರಹ್ಮಸಂಸ್ಪರ್ಶ ಸುಖ ಎಂದು ಹೇಳಲಾಗಿದೆ.
ಯೋಗಿಯು ಈಗ ಎಲ್ಲರಲ್ಲಿಯೂ ಪರಮಾತ್ಮನನ್ನೇ ಕಾಣುತ್ತಾನೆ
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ |
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || 29 ||
ಅರ್ಥ : ಯೋಗಿಯು ಎಲ್ಲಾ ಜೀವಿಗಳಲ್ಲಿರುವ ಆತ್ಮನು ತಾನೇ ಎಂದು ಎಲ್ಲಾ ಜೀವಿಗಳು ತನ್ನಲ್ಲಿವೆ ಎಂದೂ ಈಗ ತಿಳಿಯುತ್ತಾನೆ. (ಮೇಲೆ ವರ್ಣಿಸಿದ ಸ್ಥಿತಿಯನ್ನು ಮುಟ್ಟಿದ ಮೇಲೆ) ಅವನಿಗೆ ಎಲ್ಲೆಡೆಯಲ್ಲಿಯೂ ಸಮದೃಷ್ಟಿಯಿರುತ್ತದೆ. ಅವನಿಗೆ ಎಲ್ಲವೂ ಪರಮಾತ್ಮಮಯವಾಗಿ ಕಾಣುತ್ತದೆ.
ಎಲ್ಲ ಮಣ್ಣಿನ ಪಾತ್ರೆಗಳಲ್ಲಿರುವ ಮಣ್ಣಿನಂತೆ, ಎಲ್ಲಾ ‘ಬಲ್ಬು’ಗಳಲ್ಲಿರುವ ವಿದ್ಯುತ್ತಿನಂತೆ, ಎಲ್ಲಾ ಬಂಗಾರದ ಆಭರಣಗಳಲ್ಲಿರುವ ಬಂಗಾರದಂತೆ, ಎಲ್ಲಾ ಪ್ರಾಣಿಗಳಲ್ಲಿರುವ ಆತ್ಮನೂ ತನ್ನೊಳಗಿರುವ ಆತ್ಮನೂ ಒಂದೇ ಎಂಬ ಅನುಭವವನ್ನು ಯೋಗಿಯು ಈಗ ಪಡೆಯುತ್ತಾನೆ.
ನಾವು ಶರೀರಮಟ್ಟದಿಂದ ಶಾರೀರಿಕ ಪ್ರಪಂಚವನ್ನು ಮಾನಸಿಕ ಮಟ್ಟದಿಂದ ಎಲ್ಲರ ಮಾನಸಿಕ ಪರಿಸ್ಥಿತಿಯನ್ನೂ ನೋಡುತ್ತೇವೆ. ಇದರಂತೆಯೇ ಬೌದ್ಧಿಕ ಮಟ್ಟದಿಂದ ಬೌದ್ಧಿಕ ಅಂತಸ್ತನ್ನು ತಿಳಿಯುತ್ತೇವೆ. ಸಾಧಕನು ಬೌದ್ಧಿಕಮಟ್ಟವನ್ನು ಮೀರಿ (ದಾಟಿ) ಆಧ್ಯಾತ್ಮಿಕ ಮಟ್ಟಕ್ಕೇರಿದರೆ ತಾನೇ ಪರಮಾತ್ಮ ಎಂಬ ಜ್ಞಾನವನ್ನು ಪಡೆಯುತ್ತಾನೆ. ಈಗ ಅವನಿಗೆ ಹೊರಗಿನ ಪ್ರಪಂಚದಲ್ಲಿರುವುದೆಲ್ಲವೂ ಪರಮಾತ್ಮಮಯವಾಗಿ ಕಾಣಿಸುತ್ತದೆ. ಈ ಸ್ಥಿತಿಯಲ್ಲಿ ಅವನು ತಾನೇ ಎಲ್ಲಾ ಜೀವಿಗಳ ಆತ್ಮ ಎಂಬುದಾಗಿಯೂ, ಎಲ್ಲಾ ಜೀವಿಗಳ ಆತ್ಮವೂ ತನ್ನ ಆತ್ಮ ಎಂಬುದಾಗಿಯೂ ಕಾಣುತ್ತಾನೆ. ಇಂತಹ ಯೋಗಿಗೆ ಬ್ರಾಹ್ಮಣ, ಹಸು, ಆನೆ, ನಾಯಿ, ಚಂಡಾಲ ಎಂಬ ಹೊರಗಿನ ಶಾರೀರಿಕ ಭೇದಗಳು ಕಾಣುವುದಿಲ್ಲ. (ಅ.5 ಶ್ಲೋ 18)

ಈ ಅನುಭವದಿಂದ ಸಿಗುವ ಲಾಭವೇನು ?

ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ |
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ || 30 ||
ಅರ್ಥ : ಯಾರು ನನ್ನನ್ನು ಎಲ್ಲೆಡೆಯಲ್ಲಿಯೂ ಕಾಣುತ್ತಾರೋ ಮತ್ತು ನನ್ನಲ್ಲಿ ಎಲ್ಲವನ್ನು ಕಾಣುತ್ತಾರೋ ಅವರು ನನ್ನಿಂದ ಬೇರೆಯಾಗುವುದಿಲ್ಲ ನಾನು ಅವರಿಂದ ಬೇರೆಯಾಗುವುದಿಲ್ಲ.
ಹಿಂದೆ ಹೇಳಿದ ಭಾವವನ್ನೇ ಪುನಃ ಸ್ಪಷ್ಟಪಡಿಸಲಾಗಿದೆ. ಇಲ್ಲಿ ಶ್ರೀಕೃಷ್ಣನು ಹೇಳಿದ ನನ್ನನ್ನು ನನ್ನಲ್ಲಿ ಎಂದರೆ ಆತ್ಮನನ್ನು ಆತ್ಮನಲ್ಲಿ ಎಂದು ತಿಳಿದುಕೊಳ್ಳಬೇಕು. ಎಲ್ಲೆಡೆಯಲ್ಲಿಯೂ, ಎಲ್ಲಾ ನಾಮ ರೂಪಗಳಲ್ಲಿಯೂ ಪರಮಾತ್ಮನೇ ಇದ್ದಾನೆ ಎಂಬಲ್ಲಿ “ಈಶಾವಾಸ್ಯಮಿದಂ ಸರ್ವಂಯತ್ಕಿಂಚ ಜಗತ್ಯಾಂ ಜಗತ್” ಎಂಬ ಉಪನಿಷತ್ತಿನ ಉಪದೇಶವನ್ನು ಇಲ್ಲಿ ಉದ್ಧರಿಸಲಾಗಿದೆ.
ಅವನು ‘ನನ್ನಿಂದ’ ಬೇರೆಯಾಗುವುದಲ್ಲ. ಇಲ್ಲಿ ಅವನು ಮತ್ತು ‘ನಾನು’ ಎಂಬ ಭೇದವೇ ಇಲ್ಲ. ಕನಸು ಕಾಣುವವನು ಎಚ್ಚರಾದ ನಂತರ ಅವನೇ ಎಚ್ಚರಗೊಂಡವನಾದಂತೆ, ಎಚ್ಚರಗೊಂಡವನು ಕನಸು ಕಾಣುವವನಿಗಿಂತ ಬೇರೆಯಲ್ಲ. ಅಂತೆಯೇ ಆತ್ಮನು ಪರಮಾತ್ಮನಿಗಿಂತ ಬೇರೆ ಇಲ್ಲ. ಇಬ್ಬರೂ ಒಂದೇ. ಪರಮಾತ್ಮನು ಅಹಂಕಾರ ಎಂಬ ಕವಚವನ್ನು ಹಾಕಿಕೊಂಡರೆ ಶರೀರಧಾರಿಯಾಗಿ ಜನಿಸುತ್ತಾನೆ. ಇವನಿಗೆ ಜೀವಿ ಎನ್ನುತ್ತೇವೆ. ಇದೇ ಜೀವನು ತನ್ನ ಸಾಧನೆಯಿಂದ ‘ಅಹಂಕಾರ’ ಎಂಬ ಕವಚವನ್ನು ಕಿತ್ತೊಗೆದರೆ ಅವನೇ ಪರಮಾತ್ಮನಾಗುತ್ತಾನೆ. ನಾಟಕದಲ್ಲಿ ಭಿಕ್ಷುಕನ ಪಾತ್ರವನ್ನು ವಹಿಸುವವನು ನಿಜವಾದ ಭಿಕ್ಷುಕನಲ್ಲ. ಅವನು ಬೇರೆ ಭಿಕ್ಷುಕ ಬೇರೆ. ಭಿಕ್ಷುಕನ ವೇಷವನ್ನು ಕಳಚಿ ಹಾಕಿದರೆ ಅವನೇ ಅವನಾಗುತ್ತಾನೆ. ಇದರಂತೆಯೇ ಅಹಂಕಾರ ಎಂಬ ವೇಷವನ್ನು ಕಳಚಿ ಹಾಕಿದರೆ ಜೀವನು ಪರಮಾತ್ಮನಾಗುತ್ತಾನೆ. ಅವನಿಂದ ಇವನು, ಇವನಿಂದ ಅವನು ಬೇರೆಯಾಗುವುದೆಂಬುದಿಲ್ಲ.

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ |
ಸರ್ವಥಾ ವರ್ತಮಾನೋ„ಪಿ ಸಯೋಗೀ ಮಯಿ ವರ್ತತೇ || 31 ||
ಅರ್ಥ : ನನ್ನೊಡನೆ ಏಕತ್ವವನ್ನು ಹೊಂದಿದ ಯೋಗಿಯು, ಎಲ್ಲಾ ಪ್ರಾಣಿಗಳಲ್ಲಿಯೂ ಇರುವ ನನ್ನನ್ನು ಧ್ಯಾನಿಸುತ್ತಾ, ತಾನು ಯಾವುದೇ ರೀತಿಯಲ್ಲಿದ್ದಾಗ್ಯೂ ನನ್ನಲ್ಲಿಯೇ ನೆಲೆಸಿರುತ್ತಾನೆ.
ಯೋಗಿಯು ಎಲ್ಲಾ ಪ್ರಾಣಿಗಳಲ್ಲಿಯೂ ಚೇತನವಸ್ತುವಾದ ‘ನನ್ನನ್ನೇ’ ಸದಾ ಕಾಣುತ್ತಾನೆ. ತಾನು ಪ್ರಪಂಚದಲ್ಲಿ ಯಾವ ತರಹದ ಜೀವನವನ್ನು ನಡೆಸುತ್ತಿದ್ದಾಗ್ಯೂ ಮತ್ತು ಯಾವುದೇ ತರಹದ ಕಾರ್ಯಗಳಲ್ಲಿ ನಿರತನಾಗಿದ್ದಾಗ್ಯೂ ಆಯಾಯಾ ಚಟುವಟಿಕೆಗಳ ಮಧ್ಯದಲ್ಲಿ ಸಹ ಯಾವಾಗಲೂ ಆಂತರಿಕವಾಗಿ ನನ್ನ ಧ್ಯಾನವನ್ನು ಮಾಡುತ್ತಾನೆ. ಈ ಸ್ಥಿತಿಯನ್ನು ಪಡೆದ ಯೋಗಿಯು ಕಾಡಿಗೆ ಹೋಗಿ ವಾಸ ಮಾಡಬೇಕಾಗಿಲ್ಲವೆಂದು ಪ್ರಪಂಚದಲ್ಲಿಯೇ ಇದ್ದುಕೊಂಡು, ನಿತ್ಯದ ವ್ಯವಹಾರಗಳನ್ನು ಮಾಡುತ್ತಾ ಅದರ ಮಧ್ಯದಲ್ಲಿಯೇ ಅಥವಾ ಆ ವ್ಯವಹಾರಗಳಲ್ಲಿಯೇ ಸತತವೂ ಪರಮಾತ್ಮನ ಧ್ಯಾನವನ್ನು ಮಾಡಬಹುದೆಂದು ಇಲ್ಲಿ ಎತ್ತಿತೋರಿಸಲಾಗಿದೆ. ಶಾರೀರಿಕ ರೋಗಗಳಿಂದ ಪೀಡಿತನಾದವನು ಆರೋಗ್ಯಧಾಮದಲ್ಲಿ ಕೆಲವು ಕಾಲ ಚಿಕಿತ್ಸೆಯನ್ನು ಪಡೆದು ರೋಗಮುಕ್ತನಾಗಿ ಹೊಸ ಶಕ್ತಿಯನ್ನು ಗಳಿಸಿ ಪುನಃ ತನ್ನ ನಿತ್ಯ ಜೀವನದ ಎಲ್ಲಾ ಕೆಲಸಗಳನ್ನು ದ್ವುಗುಣಿತ ಉತ್ಸಾಹದಿಂದ ಮಾಡುವಂತೆ ಮಾನಸಿಕ ದೌರ್ಬಲ್ಯ (ಕಾಮಕ್ರೋಧಾದಿ) ಎಂಬ ರೋಗದಿಂದ ಪೀಡಿತನಾದ ಸಾಧಕನು ಕೆಲವು ಕಾಲ ಅಧ್ಯಾತ್ಮಿಕ ಸಾಧನೆ ಎಂಬ ಏಕಾಂತ ಚಿಕಿತ್ಸೆಯನ್ನು ಪಡೆದು ಶಕ್ತಿಯನ್ನು ಗಳಿಸಿಕೊಂಡು ಪುನಃ ಸಂಸಾರದ ಎಲ್ಲಾ ವಿಧದ ಚಟುವಟಿಕೆಗಳಲ್ಲಿಯೂ, ತನ್ನ ಜ್ಞಾನವನ್ನು ವಿನಿಯೋಗಿಸುತ್ತಾ ದ್ವಿಗುಣಿತ ಉತ್ಸಾಹದಿಂದ ಕಾರ್ಯನಿರತನಾಗಿರುತ್ತಾನೆ. ಇಂತಹ ಯೋಗಿಯು ಕರ್ಮಗಳನ್ನು ಸುಂದರವಾಗಿಯೂ, ಯಶಸ್ವಿಯಾಗಿಯೂ ಮಾಡಬಲ್ಲನು. ನಮ್ಮ ದೇಶದಲ್ಲಿ ಈ ಹಿಂದೆ ಆಗಿಹೋದ ಎಲ್ಲಾ ವಿಭಾಗಗಲಲ್ಲಿಯ ವಿಜ್ಞಾನಿಗಳು, ಅಧ್ಯಾತ್ಮ ಸಿದ್ಧಿಯನ್ನು ಪಡೆದು, ಆ ನಂತರವೇ, ಮಹತ್ತರವಾದ, ಶಾಶ್ವತವಾದ, ಇದುವರೆಗೂ ಬದಲಾವಣೆಯನ್ನು ಹೊಂದದ ವಿವಿಧ ಸಂಶೋಧನೆಗಳನ್ನು ಸಾಧಿಸಿದ್ದಾರೆಂಬುದನ್ನು ಗಮನಿಸಬೇಕು. ಅವರು ಶುದ್ಧ ಬುದ್ಧಿಯ ತುದಿಯಿಂದ ನೋಡಿದ, ಸತ್ಯಾಂಶಗಳನ್ನು ಪ್ರಪಂಚದ ಎದುರಿಗಿಟ್ಟಿದ್ದಾಳೆ. ಹಾಗಾಗಿ ಅವರು ತಪ್ಪಾಗಿ ಅಥವಾ ಅಸ್ಪಷ್ಟವಾಗಿ ಯಾವುದನ್ನೂ ಕಾಣದೆ ಸತ್ಯಾಂಶವನ್ನು ಸ್ಪಷ್ಟವಾಗಿ ಕಂಡಿದ್ದಾರೆ. ಇಂತಹ ಬುದ್ಧಿಯನ್ನು ಯಾವ ದಿಕ್ಕಿಗೆ ತಿರುಗಿಸಿದರೆ ಅವರಿಗೆ ಆಯಾಯಾ ದಿಕ್ಕಿನಲ್ಲಿ ಸತ್ಯಾಂಶಗಳೇ, ಶುದ್ಧ ತತ್ವಗಳೇ ಕಾಣುತ್ತವೆ. ಇದೇ ನಿಜವಾದ ಸಂಶೋಧನೆ. ಹಿಂದಿನ ವಿಜ್ಞಾನಿಗಳೆಲ್ಲರೂ ಋಷಿ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ನಮ್ಮ ವಿಜ್ಞಾನಿಗಳು, ಇಲ್ಲವೇ ವಿಜ್ಞಾನಿಗಳಾಗಬೇಕೆಂಬ ತರುಣ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಿಳಿದುಕೊಂಡು ತಾವೂ ಸಹ ನಿಜವಾದ ಹಾಗೂ ಉಪಯುಕ್ತವಾದ ಸಂಶೋಧನೆಯನ್ನು ಮಾಡುವುದಕ್ಕಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗುವುದು ಅತ್ಯವಶ್ಯಕ ಎಂಬುದನ್ನು ಮನಗಾಣಬೇಕು.

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋ„ರ್ಜುನ |
ಸುಖಂ ವಾಯದಿ ವಾ ದುಃಖಂ ಸ ಯೋಗೀ ಪರಮೋ ಮತಃ || 32 ||
ಅರ್ಥ : ಅರ್ಜುನನೇ ಎಲ್ಲರನ್ನು ತನ್ನಂತೆಯೇ ಕಾಣುತ್ತಾ ಸುಖದುಃಖಗಳೆರಡನ್ನು ಸಮನಾಗಿ ತಿಳಿಯುವನು ಶ್ರೇಷ್ಠನಾದ ಯೋಗಿಯು.
ಸಮಾಜದಲ್ಲಿ ಮನುಷ್ಯನ ಕರ್ತವ್ಯವನ್ನು ತೋರಿಸಿ, ಆ ಸಂದರ್ಭಗಳಲ್ಲಿ ಯೋಗಿಯು ಯಾವ ರೀತಿಯಲ್ಲಿ ವರ್ತಿಸುತ್ತಾನೆಂಬುದನ್ನು ಈ ಶ್ಲೋಕದಲ್ಲಿ ನಿರ್ದೇಶಿಸಲಾಗಿದೆ. ಪ್ರಪಂಚದ ಎಲ್ಲಾ ಜನರನ್ನೂ ತನ್ನಂತೆಯೇ, ತನ್ನ ಆತ್ಮವೆಂದೇ ತಿಳಿದು ಅವರ ದುಃಖವು ತನ್ನ ದುಃಖವೆಂದು ತಿಳಿಯಬೇಕು. ನಮ್ಮ ದುಃಖಗಳನ್ನು ಎಷ್ಟು ಜಾಗ್ರತೆಯಿಂದ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆಯೋ, ಅಷ್ಟೇ ಜಾಗ್ರತೆಯಿಂದ ಪರಿಹರಿಸಲು ಸಹ ಯತ್ನಿಸಬೇಕೆಂದು ಈ ಶ್ಲೋಕದ ಉಪದೇಶ. ಯೋಗಿಯು ಪರರ ಸುಖವನ್ನು ದುಃಖವನ್ನು ತನ್ನ ಸುಖ ದುಃಖಗಳೆಂದೇ ತಿಳಿಯುತ್ತಾನೆ. ತನ್ನ ಆತ್ಮವೇ ಅವರ ಆತ್ಮ ಎಂಬ ಅಖಂಡ ಜ್ಞಾನ ಹಾಗೂ ಅನುಭವವು ಅವನಿಗೆ ಬಂದಿರುವುದರಿಂದ ಅವನು ತಾನು ಪರರು ಎಂಬ ಭೇದವನ್ನು ಕಾಣದೆ ಎಲ್ಲಿರಲ್ಲಿಯೂ ತಾನೇ ಇದ್ದೇನೆ ಎಂದು ತಿಳಿಯುತ್ತಾನೆ. ಆದ್ದರಿಂದ ಪರರ ದುಃಖವೇ ತನ್ನ ದುಃಖ ಎಂದು ತಿಳಿದು ತನ್ನ ದುಃಖವನ್ನು ಪರಿಹರಿಸಿಕೊಂಡಂತೆ ಪರರ ದುಃಖವನ್ನು ಪರಿಹರಿಸಲು ಯತ್ನಿಸುತ್ತಾನೆ. ತನಗೆ ಪರರು ದುಃಖವನ್ನು ಕೊಡುವುದಿಲ್ಲ. ನನ್ನ ಹಲ್ಲುಗಳು ನನ್ನ ನಾಲಿಗೆಯನ್ನು ಕಡಿದರೆ ನಾನು ಹಲ್ಲುಗಳನ್ನು ಶಿಕ್ಷಿಸದಿರುವಂತೆ.
ಯೋಗಿಗೆ ಪ್ರತಿಯೊಂದು ಜೀವಿಗಳಲ್ಲಿಯೂ ಪ್ರೇಮವೇ ಇರುತ್ತದೆ. ಎಲ್ಲಿರಲ್ಲಿಯೂ ದಯ ಹಾಗೂ ಕನಿಕರವಿರುತ್ತದೆ. ತಾನು ಸಮಾಜದಿಂದ ಸ್ವೀಕರಿಸಿದುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ನೀಡುತ್ತಾನೆ. ಪ್ರಪಂಚದಲ್ಲಿ ತಾನು ಉಪಭೋಗಿಸಿದುದಕ್ಕಿಂತ ವ್ಯಯಿಸಿದುದಕ್ಕಿಂತ ಹೆಚ್ಚು ಉತ್ಪನ್ನ ಮಾಡುತ್ತಾನೆ. ಆದಾಗ್ಯೂ ಅವನು ಆತ್ಮನಿಷ್ಠನಾಗಿಯೇ ಇರುತ್ತಾನೆ.
ಅರ್ಜುನ ಉವಾಚ
ಯೋ„ಯಂ ಯೋಗಸ್ತ್ವಯಾ ಪೆÇ್ರೀಕ್ತಃ ಸಾಮ್ಯೇನ ಮಧುಸೂದನ |
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ || 33 ||
ಅರ್ಜುನನು ಹೇಳುತ್ತಾನೆ
ಅರ್ಥ : ಮಧುಸೂದನನೇ, ನೀನು ಇದುವರೆಗೆ ತಿಳಿಸಿದ ‘ಸಾಮ್ಯತೆಯ ಯೋಗ’ವನ್ನು ನನ್ನ ಚಂಚಲ ಮನಸ್ಸಿನಿಂದ ಅನುಭವಿಸಿ ತಿಳಿಯಲು ಅಶಕ್ತನಾಗಿದ್ದೇನೆ.
ಇದುವರೆಗಿನ ಉಪದೇಶವನ್ನು ಕೇಳಿದ ಅರ್ಜುನನು ಎಲ್ಲದರಲ್ಲಿಯೂ ಇರುವ ಆತ್ಮನು ತಾನೇ’ ಎಂಬ
ತತ್ವವನ್ನು ಬುದ್ಧಿಯಿಂದ ಒಪ್ಪಿದಾಗ್ಯೂ ಪ್ರತ್ಯಕ್ಷವಾಗಿ ಆಚರಿಸಲು, ಅನುಭವಿಸಿ ಜೀವಿಸಲು ಸಾಧ್ಯವಿಲ್ಲವೆಂದೂ ಇದು ಅವ್ಯವಹಾರವೆಂದು ತೋರಿಸಲು ಈ ಪ್ರಶ್ನೆಯನ್ನು ಕೇಳಿದ್ದಾನೆ. ಅದರ ಪುಷ್ಟೀಕರಣಕ್ಕೆ ಕೃಷ್ಣನ ಉಪದೇಶದಿಂದಲೇ ಅವನ ಶಬ್ದಗಳನ್ನೇ ಉಲ್ಲೇಖಿಸಿ “ಮನಸ್ಸು ಚಂಚಲವಾಗಿರುವುದರಿಂದ “ಇದು ಮುಂದಿನ ಶ್ಲೋಕದಲ್ಲಿ ಅಸಾಧ್ಯ ಎಂದು ತನ್ನ ವಾದವನ್ನೇ ಸಮರ್ಥಿಸಿಕೊಂಡಿದ್ದಾನೆ.

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ಧೃಢಮ್ |
ತಸ್ಯಾಹಮ್ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ || 34 ||
ಅರ್ಥ : ಮನಸ್ಸು ಎಲೈ ಕೃಷ್ಣನೇ, ಸ್ವಭಾವವಾಗಿ ಚಂಚಲವಾದುದೂ ಸೆಡುವಾದುದು, ಬಲಯುತವಾದುದೂ ದೃಢವಾದುದೂ ಅಂದರೆ ಬೇಗ ಹತೋಟಿಗೆ ಸಿಗದುದು ಆಗಿದೆ. ಗಾಳಿಯನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಹೇಗೆ ಅಸಾಧ್ಯವೋ, ಹಾಗೆ ಮನಸ್ಸನ್ನು ನಿಗ್ರಹಿಸುವುದು ಸಹ ಅಸಾಧ್ಯವೆಂತ ತಿಳಿಯುತ್ತೇವೆ.
ಅರ್ಜುನನು ಈ ಪ್ರಶ್ನೆಯನ್ನು ಸುಲಭ ದಾರಿಯನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳಿದ್ದಾನೆ. ಮನಸ್ಸಿನ ವಿವಿಧ ಗುಣಗಳನ್ನು ವಿವರಿಸಿ ಅದನ್ನು ನಿಗ್ರಹಿಸುವುದು ತನಗೆ ಏಕೆ ಅಸಾಧ್ಯ ಎಂಬುದನ್ನು ಇಲ್ಲಿ ತೋರಿಸಿದ್ದಾನೆ.

ಗಾಳಿಯ ಉಪಮಾನವು ಅರ್ಥವತ್ತಾಗಿದೆ.
ಶ್ರೀ ಭಗವಾನುವಾಚ

ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ || 35 ||
ಭಗವಂತನು ಹೇಳುತ್ತಾನೆ
ಅರ್ಥ : ಮಹಾಬಾಹುವೇ (ಅರ್ಜುನನೇ) ಮನಸ್ಸನ್ನು ನಿಗ್ರಹಿಸುವುದು ಕಷ್ಟ ಎಂಬುದರಲ್ಲಿ ಸಂಶಯವಿಲ್ಲ. ಆದಾಗ್ಯೂ ಅದನ್ನು ಸತತವಾದ ಅಭ್ಯಾಸದಿಂದಲೂ ವೈರಾಗ್ಯದಿಂದಲೂ ನಿಗ್ರಹಿಸಬೇಕು.
ತನ್ನ ವಾದವನ್ನು ಒಪ್ಪದೇ ತನ್ನದೇ ಶಬ್ದಗಳನ್ನು ಉಪಯೋಗಿಸಿ ವಿರೋಧಿಸಿದ ತನ್ನ ಶಿಷ್ಯನ ನಡತೆಯಿಂದ ಕೃಷ್ಣನು ಕುಪಿತಗೊಳ್ಳಲಿಲ್ಲ. ತನ್ನ ಮನಸ್ಸಿನ ಶಾಂತತೆಯನ್ನು ಕಾಯ್ದುಕೊಂಡು ಸ್ವಲ್ಪವೂ ಉದ್ರಿಕ್ತನಾಗದೆ ಸಮಾಧಾನದಿಂದಲೇ ಉತ್ತರಿಸುತ್ತಿದ್ದಾನೆ.
ಶ್ರೀಕೃಷ್ಣನು ಶ್ರೇಷ್ಠ ಮಾನಸಶಾಸ್ತ್ರಜ್ಞನಂತೆ ಉತ್ತರವಿತ್ತಿದ್ದಾನೆ. ಏಕೆಂದರೆ ಅರ್ಜುನನನ್ನು ಈಗ ಕೇವಲ ಬೌದ್ಧಿಕ ಮಟ್ಟದಿಂದ ತೃಪ್ತಿಪಡಿಸಿದರೆ ಸಾಲದು. ಅವನ ಹೃದಯಪರಿವರ್ತನೆಯಾಗಬೇಕಾಗಿದೆ. ಪ್ರಾರಂಭದಲ್ಲಿಯೇ ಅರ್ಜುನನು ಮುಂದು ಮಾಡಿದ ವಾದವು ನಿಜವಾಗಿಯೂ ಸರಿಯಾದುದು ಎಂದು ‘ಅಸಂಶಯಮ್’ ಎಂಬ ಶಬ್ದದಿಂದ ಒಪ್ಪಿ, ಮುಂದೆ ಮಹಾಬಾಹೂ ಎಂದು ಅವನನ್ನು ಹೊಗಳಿ ಅರ್ಜುನನನ್ನು ಉತ್ಸಾಹಗೊಳಿಸಿದ್ದಾನೆ. ಈ ಶಬ್ದವನ್ನು ಉಪಯೋಗಿಸುವುದರಲ್ಲಿ ಎರಡು ಕಾರಣವಿದೆ. ಒಂದು ಅರ್ಜುನನನ್ನು ಹೊಗಳಿ, ಅವನ ಮನಸ್ಸನ್ನು ಹುರಿದುಂಬಿಸಿ ತನ್ನ ಕಡೆಗೆ ಆಕರ್ಷಿಸಿಕೊಳ್ಳುವುದು. ಇನ್ನೊಂದು ಮಹಾಬಾಹು ಎಂದರೆ ಯುದ್ಧದಲ್ಲಿ ಮಹಾಬಲಿಷ್ಠನಾದವನು. ಇಂತಹವನು ಕ್ಷುಲ್ಲಕವಾದ ಮನಸ್ಸಿಗೆ ಹೆದರಿ ಅಳುಕುವುದೇ? ಹಿರಿಯ ಶೂರಯೋಧನು ತನ್ನದೇ ಆದ ತೋಟದಿಂದ ಕೆಲವು ಹೂಗಳನ್ನು ಕದ್ದು ತಂದರೆ ಅದು ಪರಾಕ್ರಮವಾಯಿತೇ? ಶತ್ರುವು ಬಲಿಷ್ಠನಾದಷ್ಟು ಅವನೊಡನೆ ವೀರಾವೇಶದಿಂದ ಹೋರಾಡಿ ಜಯಿಸಿದರೆ ಮಾತ್ರ ಆ ವೀರನ ಯೋಗ್ಯತೆಯು ಹೆಚ್ಚುತ್ತದೆ ಎಂಬುದನ್ನು ಈ ಶಬ್ದವು ಸೂಚಿಸುತ್ತದೆ. ಇಷ್ಟಕ್ಕೇ ಬಿಡದೆ, ಕೃಷ್ಣನು ಮನಸ್ಸನ್ನು ಗೆಲ್ಲುವ ದಾರಿಯನ್ನು ತೋರಿಸಿದ್ದಾನೆ. ಬಲವಾದ ಅಭ್ಯಾಸದಿಂದ ಅಂದರೆ ಪುನಃ ಪುನಃ ಮಾಡುವ ತೀವ್ರವಾದ ಪ್ರಯತ್ನದಿಂದ ಮನಸ್ಸನ್ನು ನಿಗ್ರಹಿಸಬೇಕು. ಕಷ್ಟವೆಂದು ಬಿಡಕೂಡದು. ಕಷ್ಟವೆಂದು ಕಂಡಾಗ್ಯೂ ಇನ್ನೂ ಹೆಚ್ಚು ಪ್ರಯತ್ನ ಮಾಡಬೇಕು. ಅಭ್ಯಾಸದ ಜೊತೆಗೆ ವೈರಾಗ್ಯವೂ ಹುಟ್ಟಬೇಕು. ವೈರಾಗ್ಯ ಎಂದರೆ ವಿಷಯ ಸುಖಗಳಲ್ಲಿ ಆಸಕ್ತಿಯಿಲ್ಲದಿರುವುದು. ಅಭ್ಯಾಸವು ಬಲವಾದಂತೆ ಇಂದ್ರಿಯಗಳ ಆಸಕ್ತಿಯು ಕಡಿಮೆಯಾಗುತ್ತದೆ. ಆಸಕ್ತಿಯು ಕಡಿಮೆಯಾದಂತೆ ಅಭ್ಯಾಸವು ಬಲಗೊಳಿಸುತ್ತದೆ. ಇವೆರಡೂ ಒಂದಕ್ಕೊಂದು ಪೂರಕ. ಆದಾಗ್ಯೂ ಅಭ್ಯಾಸವನ್ನು ಮೊಟ್ಟಮೊದಲು ಸಾಧಿಸಬೇಕು. ಅಭ್ಯಾಸವು ಬಲವಾದಂತೆ ವೈರಾಗ್ಯವು ತಾನೇ ಬರುತ್ತದೆಂದು ಇವೆರಡೂ ಒಟ್ಟುಗೂಡಿದರೆ ಮನೋನಿಗ್ರಹವು ಸಾಧಿಸುತ್ತದೆ.

ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ |
ವಶ್ಯಾತ್ಮನಾ ತು ಯತತಾ ಶಕ್ಯೋ„ವಾಪ್ತುಮುಪಾಯುತಃ || 36 ||
ಅರ್ಥ : ಆತ್ಮನಿಗ್ರಹವಿಲ್ಲದವನಿಗೆ ಯೋಗವು ಸಾಧ್ಯವಿಲ್ಲ. ಆತ್ಮನಿಗ್ರಹವುಳ್ಳವನು ಉಪಾಯದಿಂದ ಅದನ್ನು ಸಾಧಿಸುತ್ತಾನೆ. ಇದು ತನ್ನ ಮತವು.
ಪ್ರತಿಯೊಂದು ಕಾರ್ಯವನ್ನು ಸಾಧಿಸುವುದಕ್ಕೂ ಆತ್ಮನಿಗ್ರಹ ಮತ್ತು ಇಂದ್ರಿಯ ವಿಷಯ ಸುಖತ್ಯಾಗ ಇವು ಅವಶ್ಯಕ. ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿ, ಚುನಾವಣೆಗೆ ನಿಂತ ಉಮೇದುವಾರ ಮೊದಲಾದವರು ತಾವು ಹಿಡಿದ ಕಾರ್ಯವನ್ನು ಸಫಲಗೊಳಿಸುವುದಕ್ಕಾಗಿ ನಾನಾ ರೀತಿಯ ಕಷ್ಟವನ್ನು ಸಹಿಸುವುದಕ್ಕೆ ಮತ್ತು ಹಲವಾರು ವಿಧಗಳಿಂದ ತ್ಯಾಗಮಾಡುವುದಕ್ಕೆ ಸಂತೋಷದಿಂದಲೇ ಸಿದ್ಧರಾಗಿರುವುದನ್ನು ನಮ್ಮ ನಿತ್ಯ ವ್ಯವಹಾರದಲ್ಲಿ ನೋಡುತ್ತೇವೆ ಮತ್ತು ಇಂತಹ ತ್ಯಾಗ ಹಾಗೂ ಸಂಯಮಗಳನ್ನು ಇತರೆ ಕಾರ್ಯಗಳಲ್ಲಿಯೂ ಕಾಣಬಹುದು. ಪ್ರಪಂಚದಲ್ಲಿಯ ಸಾಮಾನ್ಯ ಕಾರ್ಯ ಸಾಧನೆಗೆ ಇಷ್ಟು ಸಂಯಮ ಹಾಗೂ ತ್ಯಾಗಗಳು ಅವಶ್ಯಕವಾದರೆ, ಜೀವನದ ಉಚ್ಛ ಧ್ಯೇಯವಾದ ಪರಮಶಾಂತಿಯ ಪ್ರಾಪ್ತಿಗಾಗಿ ಎಷ್ಟು ತ್ಯಾಗ ಹಾಗೂ ಸಂಯಮ ಬೇಕು ? ಸಂಯಮವು ಪ್ರಮಾಣದಲ್ಲಿ ಹೆಚ್ಚಿದಷ್ಟೂ ನಾವು ಗುರಿಯ ಹತ್ತಿರ ಹೋಗುತ್ತೇವೆ. ಸಂಯಮವಿಲ್ಲದಿದ್ದರೆ ನಿಂತಲ್ಲೇ ನಿಲ್ಲುತ್ತೇವೆ. ಕೆಲವು ಸಾರಿ ಅಧೋಗತಿಗೂ ಇಳಿಯಬಹುದು. ಸಂಯಮವಿಲ್ಲದವನಿಗೆ ಯೋಗವಿಲ್ಲ. ಸಂಯಮಿಯು ಅದನ್ನು ಗಳಿಸುತ್ತಾನೆ.
ಈ ಉತ್ತರದಿಂದ ಸಮಾಧಾನವನ್ನು ಹೊಂದಿದ ಅರ್ಜುನನು ಮೃದುವಾಗಿ, ಇನ್ನೊಂದು ಪ್ರಶ್ನೆಯನ್ನು ಕೇಳುತ್ತಾನೆ.

ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ |
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ || 37 ||

ಕಚ್ಚಿನ್ನೋಭಯವಿಭ್ರಷ್ಟಶ್ಛಿನ್ನಾಭ್ರಮಿವ ನಶ್ಯತಿ |
ಅಪ್ರತಿಷ್ಠೋ ಮಹಾಬಾಹೋ ವಿಮುಢೋ ಬ್ರಹ್ಮಣಃ ಪಥಿ || 38 ||

ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತಃ |
ತ್ವದನ್ಯಃ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ || 39 ||
ಅರ್ಥ : ಕೃಷ್ಣನೇ, ಶ್ರದ್ಧೆಯಿಂದ ಕೂಡಿ ಯೋಗಾಭ್ಯಾಸದ ಸಾಧನೆಯನ್ನು ಮಾಡುವವನು, ತನ್ನ ಮನಸ್ಸನ್ನು ನಿಗ್ರಹಿಸಲಾರದೆ ಇದ್ದರೆ, ಅವನು ಸಿದ್ಧಿಯನ್ನು ಹೊಂದುವುದಿಲ್ಲವೇನೋ ನಿಜ. ಆದರೆ ಅವನು ಯಾವ ಗತಿಯನ್ನು ಮುಟ್ಟುತ್ತಾನೆ. ಮೋಡದ ಸಣ್ಣ ತುಂಡುಗಳು ಗಾಳಿಯಿಂದ ತೂರಲ್ಪಟ್ಟು ಆಕಾಶದಲ್ಲಿ ಕರಗಿ ಹೋಗುವಂತೆ, ಬ್ರಹ್ಮಪಥದಿಂದ ಹಿಮ್ಮುಖನಾದ ಅವನು ಆಧಾರವಿಲ್ಲದವನಾಗಿ ನಾಶಹೊಂದುವುದಿಲ್ಲವಷ್ಟೆ! ಕೃಷ್ಣನೇ, ನನ್ನ ಈ ಸಂಶಯವನ್ನು ಪರಿಹರಿಸು. ಇದನ್ನು ಪರಿಹರಿಸುವವರು ನಿನ್ನ ಹೊರತು ಬೇರೆಯಾರೂ ಇಲ್ಲ.
ಸಾಮಾನ್ಯ ಮನುಷ್ಯನಿಗೆ ಹಾಗೂ ಸಾಧಕನಿಗೆ ಉಂಟಾಗಬಹುದಾದಂತಹ ಸಂಶಯವನ್ನು ಅರ್ಜುನನು ವ್ಯಕ್ತಪಡಿಸಿದ್ದಾನೆ. ಹಿಂದೆ ತಿಳಿಸಿದಂತೆ ಯೋಗವನ್ನು ಅಭ್ಯಾಸ ಮಾಡಲು ವಿಷಯ ಸುಖಗಳನ್ನು ತ್ಯಜಿಸಿ ಮನೋನಿಗ್ರಹವನ್ನು ಸಾಧಿಸಬೇಕು. ಹೀಗೆ ಸಾಧನೆಯನ್ನು ಮುಂದುವರಿಸಿ ಅದರಲ್ಲಿ ಜಯವನ್ನು ಹೊಂದಿದವನು ಆತ್ಮಾನಂದವನ್ನು ಅನುಭವಿಸಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರು ಸಾಧನೆಯನ್ನು ಸಾಕಷ್ಟು ತೀವ್ರವಾಗಿ ಮಾಡದಿರಬಹುದು, ಕೆಲವರು ಅರ್ಧಕ್ಕೆ ಬಿಟ್ಟು ಬಿಡಬಹುದು. ಉಳಿದವರು ಸಾಧನೆ ಸಾಗಿರುವಾಗಲೇ ಮೃತಪಡಬಹುದು. ಇಂತಹವರಿಗೆ ಸಂಸಾರದಲ್ಲಿ ಇಂದ್ರಿಯ ಸುಖವೂ ಇಲ್ಲ. (ಅವರಾಗಿಯೇ ಅವುಗಳನ್ನು ತ್ಯಜಿಸಿರುವುದರಿಂದ) ಯೋಗವು ಇನ್ನೂ ಸಿದ್ಧಿಸದಿರುವುದರಿಂದ ಬ್ರಹ್ಮಾನಂದವೂ ಇಲ್ಲ. ಹೀಗೆ ಇತೋಭ್ರಷ್ಟ ತತೋ ಭ್ರಷ್ಟ’ ಎಂಬಂತೆ ಎರಡೂ ಕಡೆಯಲ್ಲಿಯೂ ಸುಖವಿಲ್ಲದವರಾಗುತ್ತಾರಲ್ಲಾ ! ಅಂತಹವರ ಗತಿ ಏನು ? ಎಂಬುದೇ ಮುಖ್ಯವಾದ ಪ್ರಶ್ನೆ. ಇವನು ಯೋಗವನ್ನು ಗಳಿಸಲು ಸಂಸಾರದ ಸುಖವನ್ನೂ ಅನುಭವಿಸಲಿಲ್ಲ. ಬೇಸಿಗೆಯ ಕಾಲದ ಸಣ್ಣ ಸಣ್ಣ ಮೋಡಗಳು ಆಕಾಶದಲ್ಲಿ ಪರ್ವತಗಳ ಹಿಂದುಗಡೆಗೆ ತೇಲಾಡುತ್ತಾ ದೊಡ್ಡಗಾಳಿಯು ಬೀಸಿದಾಗ ಎಲ್ಲವೂ ಒಟ್ಟಾಗಿ ಮುಂದೆ ಹರಿದು ಹೋಗುತ್ತವೆ. ಆದರೆ ಕೆಲವು ಇನ್ನೂ ಸಣ್ಣ ಮೋಡಗಳು. ಈ ಎಲ್ಲಾ ಮೋಡಗಳ ಜೊತೆಗೆ ಸೇರದೇ ಹಿಂದುಳಿಯುತ್ತವೆ. ಇವು ಸ್ವತಃ ಮಳೆಯನ್ನು ಸುರಿಸುವಷ್ಟು ಶಕ್ತಿಯುತವಲ್ಲ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಸಣ್ಣಗಾಳಿಯು ಬೀಸಿದಾಗ ಮುಂದಕ್ಕೆ ಹರಿದು ಗಾಳಿಯಲ್ಲಿ ಕರಗಿ ಹೋಗುತ್ತವೆ. ಇದರಂತೆ ಯೋಗವನ್ನು ಸಾಧಿಸಲಾರದ ಸಾಧಕನು ಯೋಗವನ್ನು ಗಳಿಸಲಿಲ್ಲ. ಸಂಸಾರ ಸುಖವನ್ನು ಅನುಭವಿಸಲಿಲ್ಲ ಎಂಬಂತಾಗಿ ನಾಶ ಹೊಂದಬಹುದಲ್ಲವೇ ಎಂಬುದು ಅರ್ಜುನನ ಸಂಶಯ .
ಶ್ರೀ ಭಗವಾನುವಾಚ
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ |
ನ ಹಿ ಕಲ್ಯಾಣಕೃತ್‍ಕಶ್ಚಿದ್ದುರ್ಗತಿಂ ತಾತ ಗಚ್ಛತಿ || 40 ||
ಭಗವಂತನು ಹೇಳುತ್ತಾನೆ
ಅರ್ಥ : ಅರ್ಜುನನೇ, ಅಂತಹ ಸಾಧಕನಿಗೆ ಈ ಲೋಕದಲ್ಲಾಗಲೀ, ಬೇರೆ ಲೋಕದಲ್ಲಾಗಲೀ, ದುರ್ಗತಿ ಎಂಬುದೇ ಇಲ್ಲ. ಮಗನೇ ಸತ್ಕಾರ್ಯವನ್ನು ಮಾಡುವವನಿಗೆ ದುರ್ಗತಿಯು ಹೇಗೆ ದೊರಕೀತು?
ಮುಂದಿನ ಐದು ಶ್ಲೋಕಗಳಲ್ಲಿ ಅರ್ಜುನನ ಸಂಶಯವನ್ನು ತರ್ಕಬದ್ಧವಾಗಿ ಪರಿಹರಿಸಲಾಗಿದೆ. ಯೋಗದಿಂದ ಭ್ರಷ್ಟನಾದವನಿಗೆ ಎಂದಿಗೂ ದುರ್ಗತಿ ಇಲ್ಲ ಎಂದು ಪ್ರಾರಂಭದಲ್ಲಿಯೇ ಆಶ್ವಾಸನೆ ಕೊಡಲಾಗಿದೆ.
ಯೋಗಾಭ್ಯಾಸವನ್ನು ಮಾಡುವಾಗ ಮಧ್ಯದಲ್ಲಿ ಮರಣ ಬಂದರೆ ಅದು ಅಲ್ಲಿಗೆ ಮುಗಿದು ಹೋಯಿತು ಎಂದು ತಿಳಿದುಕೊಳ್ಳುವುದು ತಪ್ಪು. ನಮ್ಮ ಈಗಿನ ಜನ್ಮವು ಹಿಂದಿನ ಜನ್ಮದ ಮುಂದುವರೆಯುವಿಕೆಯಾಗಿದೆ. ಈ ಜನ್ಮದಲ್ಲಿ ನಾವು ಮಾಡುವ ಕರ್ಮ, ಪಡೆದ ಜ್ಞಾನ, ಇತ್ಯಾದಿಗಳ ಮೂಲಕ ಮುಂದಿನ ಜನ್ಮದ ಪೂರ್ವ ತಯಾರಿ ನಡೆದಿದೆ. ಇವತ್ತು (ಈ ದಿನ) ನಿನ್ನೆಯ ಮುಂದುವರಿಯುವಿಕೆ ಇದ್ದಂತೆ ನಾಳೆಯು ಇವತ್ತಿನ ಮುಂದುವರಿಯುವಿಕೆ.
ಯೋಗಭ್ರಷ್ಠನ ಗತಿ ಏನಾಗುತ್ತದೆ ?

ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ |
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋ„ಭಿಜಾಯತೇ || 41 ||
ಅರ್ಥ : ಯೋಗವನ್ನು ಅಭ್ಯಾಸ ಮಾಡುತ್ತಿರುವ ಸಾಧಕನು ಮಧ್ಯದಲ್ಲಿಯೇ ಮರಣವನ್ನು ಹೊಂದಿದರೆ ಸದ್ಗತಿಯ ಲೋಕಗಳಲ್ಲಿ ದೀರ್ಘಕಾಲ ವಾಸಮಾಡಿ, ಆನಂತರ ಶುಚಿವಂತರಾದ ಮತ್ತು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ.
ನಾವು ಈ ಜನ್ಮದಲ್ಲಿ ಮಾಡುವ ಕರ್ಮಗಳನ್ನು ಸತ್ಕರ್ಮ ಮತ್ತು ದುಷ್ಕರ್ಮ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ದುಷ್ಕರ್ಮಗಳನ್ನು ಮಾಡುವವರು ಮುಂದಿನ ಜನ್ಮಗಳಲ್ಲಿ ಇನ್ನೂ ಅಧೋಗತಿಗಿಳಿಯುತ್ತಾರೆ. ಸತ್ಕರ್ಮಗಳನ್ನು ಮಾಡುವವರು ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಾ ಕ್ರಮೇಣ ಮೇಲ್ಮಟ್ಟಕ್ಕೇರುತ್ತಾರೆ. ಸತ್ಕರ್ಮಗಳನ್ನು ಮಾಡುವವರಲ್ಲಿಯೂ ಎರಡು ವಿಧವಿದೆ. 1. ಫಲಾಸೆಯಿಂದ ಕರ್ಮ ಮಾಡುವವರು
2. ಫಲತ್ಯಾಗಮಾಡಿ ಕರ್ಮ ಮಾಡುವವರು
ಇವರಿಬ್ಬರೂ ಸತ್ಪುರುಷರೇ ಮೊದಲನೆಯ ಗುಂಪಿನವರು ಬೇರೆ ಬೇರೆ ಲೋಕಗಳಲ್ಲಿ (ಮರಣದ ನಂತರ) ತಮ್ಮ ಇಚ್ಛಿತ ಫಲವನ್ನು ಅನುಭವಿಸಿ ನಂತರ ಶ್ರೀಮಂತರ ಇಲ್ಲವೆ ಶುಚಿರ್ಭೂತರಾದವರ ಮನೆಯಲ್ಲಿ ಪುನಃ ಜನಿಸುತ್ತಾರೆ.

ಫಲಾಸೆಯನ್ನು ತ್ಯಾಗ ಮಾಡಿದವರ ಗತಿಯೇನು ?

ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ |
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ || 42 ||
ಅರ್ಥ : (ಫಲಾಸೆಯನ್ನು ತ್ಯಜಿಸಿ ಕರ್ಮ ಮಾಡಿದವರು) ಬುದ್ಧಿವಂತರಾದ ಯೋಗಿಗಳ ಕುಲದಲ್ಲಿ ಜನಿಸುತ್ತಾರೆ. ಇಂತಹ ಜನ್ಮಸಿಗುವುದು ದುರ್ಲಭ.
ಕರ್ಮಫಲವನ್ನು ತ್ಯಜಿಸಿ ಯೋಗವನ್ನು ಅಭ್ಯಾಸ ಮಾಡುತ್ತಿರುವ ಸಾಧಕನು ಮಧ್ಯದಲ್ಲಿಯೇ ಮೃತಪಟ್ಟರೆ, ಅವನಲ್ಲಿ ಇಂದ್ರಿಯ ವಿಷಯ ಸುಖಗಳ ವಾಸನೆಯಿಲ್ಲದಿರುವುದರಿಂದ ಅವನು ಅವುಗಳ ಭೋಗಕ್ಕಾಗಿ ಬೇರೆ ಯಾವ ಲೋಕಗಳಿಗೂ ಹೋಗಬೇಕಾಗಿಲ್ಲ. ಬ್ರಹ್ಮಾನಂದವೇ ಅವನ ಪರಮಧ್ಯೇಯವಾಗಿರುವುದರಿಂದ ಮತ್ತು ಆ ಸಂಸ್ಕಾರವೇ (ವಾಸನೆ) ಅವನಲ್ಲಿ ಪ್ರಬಲವಾಗಿರುವುದರಿಂದ, ಅದರ ಸಾಧನೆಗಾಗಿ, ಸಿದ್ಧಿಗಾಗಿ, ಅವನಿಗೆ ಅನುಕೂಲವಾದ ವಾತಾವರಣವೆಂದರೆ ಯೋಗಿಗಳ ಸಹವಾಸ. ಆದುದರಿಂದ ಅವನು ಶ್ರೇಷ್ಠರಾದ ಯೋಗಿಗಳ
ಕುಲದಲ್ಲಿಯೇ ಜನಿಸುತ್ತಾನೆ. ಹಿರಿಯ ಹಾಗೂ ಖ್ಯಾತಿವೆತ್ತ ಸಿದ್ಧಪುರುಷರ ಜೀವನವನ್ನು ನೋಡಿದರೆ ಸಹ ಇದೇ ಕಂಡುಬರುತ್ತದೆ. ಶಂಕರಾಚಾರ್ಯರು, ಬುದ್ಧ, ಏಸುಕ್ರಿಸ್ತ ಮೊದಲಾದವರು ತಮ್ಮ ಜೀವನದ ಚಿಕ್ಕ ವಯಸ್ಸಿನಲ್ಲಿಯೇ ಮಹತ್ಕಾರ್ಯಗಳನ್ನು ಸಾಧಿಸಿರುವುದನ್ನು ನೋಡಬೇಕು. ಹಿಂದಿನ ಜನ್ಮದ ತಮ್ಮ ಸಾಧನೆಯನ್ನು ಈಗ ಅವರು ಮುಂದುವರಿಸುತ್ತಾರೆ.

ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್ |
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ || 43 ||
ಅರ್ಥ : ಕುರುನಂದನನೇ, ಈ ಜನ್ಮದಲ್ಲಿ ಅವರು, ಹಿಂದಿನ ಜನ್ಮದ ಜ್ಞಾನ ಹಾಗೂ ಸಾಧನೆಯ ಜ್ಞಾಪಕವನ್ನು ಹೊಂದಿ ತಮ್ಮ ಸಾಧನೆಯನ್ನು ಇನ್ನೂ ಹೆಚ್ಚು ಪರಿಶ್ರಮದಿಂದ ಮುಂದುವರಿಸಿ ಸಿದ್ಧಿಯತ್ತ ಸಾಗುತ್ತಾರೆ.
ಇಂತಹ ಸಾಧಕನು ಈ ಜನ್ಮದಲ್ಲಿ ತನ್ನ ಸಾಧನೆಯನ್ನು ಪುನಃ ಮೊದಲಿನಿಂದ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆಂಬ ಸಂಶಯವನ್ನು ಇಲ್ಲಿ ಪರಿಹರಿಸಲಾಗಿದೆ. ಅವನಿಗೆ ಹೊಸದಾಗಿ ಕಲಿಯಬೇಕಾದುದಿಲ್ಲ. ಹಿಂದೆ ಕಲಿತುದನ್ನು ಪುನರಾವಲೋಕನ ಮಾಡಿ ಜ್ಞಾಪಿಸಿಕೊಳ್ಳುವುದಷ್ಟೇ ಸಾಕು. ಆ ಮಾರ್ಗದಲ್ಲಿ ಸ್ವಲ್ಪ ಪ್ರವೇಶಿಸಿದ ಕೂಡಲೇ ಅವನಿಗೆ ಹಿಂದಿನ ಜನ್ಮದ ಅನುಭವಗಳು, ಜ್ಞಾನ ಇವೆಲ್ಲವೂ ತಾವಾಗಿಯೇ ಅವನ ಮನಸ್ಸಿನಲ್ಲಿ ನಾನು ಮುಂದು ತಾನು ಮುಂದು ಎಂದು ನುಗ್ಗಿ ನುಗ್ಗಿ ಬರುತ್ತವೆ. ಹೀಗಾಗಿ ಅವನು ತನ್ನ ಪ್ರಾರಂಭಿಕ ವಿದ್ಯಾಭ್ಯಾಸಾದಿಗಳನ್ನು ಅತಿಶ್ರೇಷ್ಟವಾಗಿ ಮುಗಿಸಿಕೊಂಡು ಸಾಧನೆಯನ್ನು ಪ್ರಾರಂಭಿಸುತ್ತಾನೆ. ಸಾಧನೆಯನ್ನು ಹಿಂದಿನ ಜನ್ಮದಲ್ಲಿ ಎಲ್ಲಿಗೆ ನಿಲ್ಲಿಸಿದ್ದನೋ ಅಲ್ಲಿಂದ ಮುಂದಕ್ಕೆ ಅದನ್ನು ಸಾಗಿಸುತ್ತಾನೆ. ಈ ಜನ್ಮದಲ್ಲಿ ಸಾಧನೆಯನ್ನು ಬಲಗೊಳಿಸುತ್ತಾನೆ.
ಶ್ರೀಕೃಷ್ಣನು ಅರ್ಜುನನ್ನು ಕುರುನಂದನ ಎಂದು ಸಂಬೋಧಿಸಿ ಅವನೂ ಸಹ ಶ್ರೇಷ್ಠಕುಲದಲ್ಲಿ ಜನಿಸಿದವನೆಂದೂ, ಹಿಂದಿನ ಜನ್ಮದಲ್ಲಿ ನರ-ನಾರಾಯಣರ ಅವತಾರ ಕಾಲದಲ್ಲಿ ನರನಾಗಿದ್ದವನೇ ಈಗ ಅರ್ಜುನನಾಗಿ ಜನಿಸಿದ್ದಾನೆಂದೂ ನಾರಾಯಣನಾಗಿದ್ದವನೇ ಕೃಷ್ಣನಾಗಿ ಅವನಿಗೆ ಉಪದೇಶ ಮಾಡುತ್ತಿದ್ದಾನೆಂದೂ ಪ್ರಾಯಶಃ ಸೂಚಿಸಿದ್ದಾನೆ.

ಹಿಂದಿನ ಜನ್ಮದಲ್ಲಿ ಗಳಿಸಿದ ಜ್ಞಾನವು ಈ ಜನ್ಮದಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ.

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋ„ಪಿ ಸಃ |
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ || 44 ||
ಅರ್ಥ : ಹಿಂದಿನ ಜನ್ಮದ ಸಾಧನೆಯ ಪರಿಣಾಮವಾಗಿಯೇ ಈ ಜನ್ಮವನ್ನು ಪಡೆದ ಅವನಿಗೆ, ಆತ್ಮಜ್ಞಾನವನ್ನು ಪಡೆಯಬೇಕೆಂಬ ಆಸೆಯುಂಟಾಗುವುದಷ್ಟೇ ಸಾಕು, ಅದರಿಂದಲೇ ಅವನು ಸಾಧನೆಯನ್ನು ಮುಂದುವರಿಸಿ ಶಬ್ದಬ್ರಹ್ಮವನ್ನು ದಾಟುತ್ತಾನೆ.
ಹಿಂದೆ ತಿಳಿಸಿದಂತೆ, ಇವತ್ತು ನಿನ್ನೆಯ ಮುಂದುವರಿಯುವಿಕೆ. ನಾಳೆ ಇವತ್ತಿನ ಮುಂದುವರಿಯುವಿಕೆ, ಎಂಬ ಹಿನ್ನಲೆಯಲ್ಲಿ ಈ ಶ್ಲೋಕವನ್ನು ಓದಬೇಕು. ಈ ಶ್ಲೋಕದ ಅರ್ಥ ವಿವರಣೆಗಾಗಿ ವ್ಯವಹಾರದ ಒಂದು ಉದಾಹರಣೆಯನ್ನು ಹೇಳಬಹುದು. ಬ್ಯಾಂಕಿನಲ್ಲಿ ನಮ್ಮ ಖಾತೆಯಲ್ಲಿ ಶಿಲ್ಕಿರುವ ಹಣ ಎಷ್ಟು ಎಂಬುದನ್ನು ತಿಳಿಯಬೇಕಾದರೆ, ಜಮಾ ಹಾಗೂ ಖರ್ಚಿನ ವಿಭಾಗಗಳೆರಡನ್ನೂ ಒಟ್ಟಾಗಿ ಲೆಕ್ಕ ಮಾಡಬೇಕು. ಯಾವ ಬ್ಯಾಂಕಿನವನೂ ಈ ಲೆಕ್ಕದಲ್ಲಿ ನಮಗೆ ಮೋಸಮಾಡದೇ ಸರಿಯಾದ ಲೆಕ್ಕವನ್ನು ತೋರಿಸುವಂತೆ ನಮ್ಮ ಕರ್ಮಗಳ ಸರಿಯಾದ ಲೆಕ್ಕವಿದೆ ಎಂದು ತಿಳಿಯಬೇಕು.
ಸಾಧಕನು ಹಿಂದಿನ ಜನ್ಮದ ಸಾಧನೆ ಸಂಸ್ಕಾರಗಳಿಗನುಗುಣವಾಗಿ ಈ ಜನ್ಮವನ್ನು ಪಡೆದಿದ್ದಾರೆ. ವಿದ್ಯಾವಂತನಾದ ಹಾಗೂ ಸುಸಂಸ್ಕೃತನಾದ ವ್ಯಕ್ತಿಯು ತನ್ನ ಎಲ್ಲಾ ಆಚರಣೆ ಹಾಗೂ ನಡೆನುಡಿಗಳಲ್ಲಿ ತನ್ನ ಹಿರಿತನವನ್ನು ತನಗರಿವಿಲ್ಲದಂತೆಯೇ ಪ್ರಕಟಿಸುತ್ತಾನೆ. ಯಾವ ಸುಸಂಸ್ಕೃತನೂ ಹೆಚ್ಚು ಕಾಲ ದಡ್ಡನಂತೆ ವರ್ತಿಸಲಾರರು. ಅಂತೆಯೇ ಯಾವ ನೀಚನೂ ಹೆಚ್ಚು ಕಾಲ ಧರ್ಮಾತ್ಮನಂತೆ ವರ್ತಿಸಲಾರನು. ಸ್ವಲ್ಪ ಕಾಲದಲ್ಲಿಯೇ ಅವರ ನಿಜವಾದ ಬೆಳಕು ತಾನಾಗಿಯೇ ಪ್ರಕಾಶಕ್ಕೆ ಬಂದು ಎದ್ದು ಕಾಣುತ್ತದೆ. ಇದರಂತೆಯೇ ಹಿಂದಿನ ಜನ್ಮದಲ್ಲಿ ಸಾಧನೆಯನ್ನು ಮಾಡಿದ ಸಾಧಕನು ತನ್ನ ನಡೆ, ನುಡಿ, ವ್ಯವಹಾರಗಳಲ್ಲಿ ಸ್ವಭಾವವಾಗಿ ತನ್ನ ಹಿಂದಿನ ಜನ್ಮದ ಸಂಸ್ಕೃತಿಯ ಪ್ರತಿಭೆಯನ್ನು ಪ್ರಕಟಿಸುತ್ತಾನೆ. ಇದರ ಸತ್ಯತೆಯನ್ನು ಪ್ರಪಂಚದಲ್ಲಿ ಅನೇಕ ಪ್ರತಿಭಾವಂತರ ಉದಾಹರಣೆಗಳಿಂದ ಕಾಣಬಹುದು.
ಶಬ್ದ ಬ್ರಹ್ಮಾತಿವರ್ತತೆ – ಶಂಕರಾಚಾರ್ಯರ ಭಾಷ್ಯದಂತೆ ಶಬ್ದ ಬ್ರಹ್ಮ ಅಂದರೆ, ವೇದದಲ್ಲಿ ಹೇಳಿರುವ ಕರ್ಮಕಾಂಡೋಕ್ತ ಸಾಧನೆಯ ಕ್ರಿಯೆಗಳು. ಯೋಗವನ್ನು ಹಿಂದಿನ ಜನ್ಮದಲ್ಲಿ ಅಭ್ಯಾಸ ಮಾಡಿದ ಸಾಧನೆಗೆ ಈ ಜನ್ಮದಲ್ಲಿ ಯೋಗದ ವಿಚಾರವು ಮನಸ್ಸಿನಲ್ಲಿ ಬಂದರಷ್ಟೇ ಸಾಕು. ಅವನಿಗೆ ಹಿಂದಿನ ಜನ್ಮದ ಸಾಧನೆಗಳೆಲ್ಲವೂ ಜ್ಞಾಪಕವಾಗುತ್ತವೆ. ಅವನು ಆಕರ್ಷಕವೂ ತೀವ್ರ ಫಲದಾಯಾವೂ ಆದ, ವೇದೋಕ್ತ ಯಜ್ಞಯಾಗಾದಿ ಕರ್ಮಗಳಿಂದ ಆಕರ್ಷಿಸಲ್ಪಡದೆ, ನೇರವಾಗಿ ಯೋಗವನ್ನೇ ಆಚರಣೆಯಲ್ಲಿ ತರುತ್ತಾನೆ.

ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಷಃ |
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್ || 45 ||
ಅರ್ಥ : ಹೀಗೆ ಸತತವಾಗಿ ಪ್ರಯತ್ನ ಮಾಡುತ್ತಿರುವ ಯೋಗಿಯು ಅನೇಕ ಜನ್ಮಗಳ ನಂತರ ಪಾಪರಹಿತವಾಗಿ ಪರಮಗತಿಯನ್ನು ಹೊಂದುತ್ತಾನೆ.
ಹಿಂದಿನ ಜನ್ಮದ ವಿವಿಧ ಕರ್ಮಗಳಿಂದ ಮನಸ್ಸಿನ ಮೇಲೆ ಉಂಟಾದ ವಾಸನೆಗಳಿಗೆ ವೇದಾಂತದ ಭಾಷೆಯಲ್ಲಿ ‘ಪಾಪ’ ಅಥವಾ ಒಳಗಿನ ದೋಷ ಎಂದು ಹೆಸರು. ಸಂಚಿತವಾದ ಪಾಪಗಳು ಸತತವಾದ ಪ್ರಯತ್ನದಿಂದ ಹಲವಾರು ಜನ್ಮಗಳಲ್ಲಿ ಬರಿದಾಗಿರುತ್ತವೆ. ಈ ಜನ್ಮದಲ್ಲಿ ಫಲಾಸೆಯನ್ನು ತ್ಯಜಿಸಿ ಕರ್ಮ ಮಾಡುವುದರಿಂದ ಇನ್ನು ಮುಂದೆ ಹೊಸವಾಸನೆಗಳು (ಪಾಪ) ಹುಟ್ಟುವುದಿಲ್ಲ. ಇರುವ ವಾಸನೆಗಳು ಬರಿದಾದ ಮೇಲೆ ಅವನು ಪರಮಗತಿಯನ್ನು ಹೊಂದುತ್ತಾರೆ. ವಾಸನೆಗಳು ಇಲ್ಲವಾದ ಮೇಲೆ ಮನಸ್ಸು ಇರಲಾರದು. ಏಕೆಂದರೆ ವಾಸನೆಗಳ ಸಮೂಹಕ್ಕೇನೇ ಮನಸ್ಸು ಎಂದು ಹೆಸರು. ಮನಸ್ಸು ಇಲ್ಲವಾದರೆ ಅಹಂಕಾರವು ನಾಶವಾಗುತ್ತದೆ ಅಹಂಕಾರದಿಂದ ಕೂಡಿದ ಪರಮಾತ್ಮನಲ್ಲಿ (ಜೀವಿ) ಅಹಂಕಾರವು ಅಳಿದರೆ ಉಳಿದುದೇ ಪರಮಾತ್ಮ.
ಅನೇಕ ಜನ್ಮಗಳ ಸಾಧನೆಯ ನಂತರ ಅವನು ಪರಮಗತಿಯನ್ನು ಹೊಂದುತ್ತಾನೆ ಎಂಬ ವಾಕ್ಯವನ್ನು ನೋಡಿ ಸಾಧಕನು ಹೆದರಬೇಕಾಗಿಲ್ಲ. ಇಲ್ಲವೇ ನಿರುತ್ಸಾಹನಾಗಬೇಕಿಲ್ಲ. ಇದು ಈಗ ತಾನೆ ಮನುಷ್ಯ ಜನ್ಮಕ್ಕೆ ಬಂದವನಿಗೆ ಹೇಳಿದ ಮಾತು. ಅವನು ಇವತ್ತು ಸಾಧನೆಯನ್ನು ಪ್ರಾರಂಭಿಸಿದರೆ ಮನೋನಿಗ್ರಹವನ್ನು ಗಳಿಸಿ ಪರಾಗತಿಯನ್ನು ಹೊಂದಲು ಅನೇಕ ಜನ್ಮಗಳು ಬೇಕೆಂಬುದು ನಿಜ. ಎಷ್ಟು ಜನ್ಮಗಳು ಬೇಕು ಎಂಬುದು ಅವನ ಸಾಧನೆಯು ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಆದರೆ ಸಾಧಕನಾದವನು ಈಗಾಗಲೇ ತನ್ನ ಸಾಧನೆಯಲ್ಲಿ ಎಷ್ಟೋ ಮುಂದುವರೆದಿದ್ದು ಅನೇಕ ಸದ್ಗುಣಗಳನ್ನು ಮೈಗೂಡಿಸಿಕೊಂಡು ಮನೋನಿಗ್ರಹವನ್ನು ಸ್ವಲ್ಪಮಟ್ಟಿಗಾದರೂ ಗಳಿಸಿ, ವಿವೇಕವನ್ನು ಬೆಳೆಸಿಕೊಂಡಿದ್ದರೆ ಮತ್ತು ಇನ್ನು ತೀವ್ರವಾದ ಸಾಧನೆಯನ್ನು ಮಾಡಬೇಕೆಂಬ ಉತ್ಸಾಹದಿಂದ ಕೂಡಿದ್ದು ಸಾಧನೆಯನ್ನು ಸತತವಾಗಿ ನಡೆಯಿಸುವ ಅಂತಸ್ತಿಗೆ ತಲುಪಿದ್ದರೆ ಅವನು ಈಗಾಗಲೇ ಎಷ್ಟೋ ಜನ್ಮಗಳನ್ನು ಇಂತಹ ಸಾಧನೆಯಲ್ಲಿ ಕಳೆದಿದ್ದಾನೆಂದು ತಿಳಿಯಬೇಕು. ಮನಸ್ಸು ವಿಷಯಗಳ ಕಡೆಗೆ ಒಲಿಯದೆ ಪರಮಾತ್ಮನ ಕಡೆಗೆ ಓಡುತ್ತಿರುವುದು ಸಾಧನೆಯಲ್ಲಿ ಅಭಿರುಚಿ ಹೆಚ್ಚಾಗಿರುವುದು. ಉದ್ರೇಕಗೊಳ್ಳ ಬಹುದಾದ ಸಂದರ್ಭಗಳಲ್ಲಿ ಸಹ ಮನಸ್ಸು ಶಾಂತವಾಗಿರುವುದು ನೈತಿಕ ಜೀವನವಿರುವುದು, ಇತ್ಯಾದಿ ಲಕ್ಷಣಗಳು ಸಾಧಕನು ಗುರಿಯು ಸಮೀಪದಲ್ಲಿದ್ದಾನೆಂಬುದನ್ನು ಸೂಚಿಸುತ್ತವೆ.

ಎಲ್ಲರಿಗಿಂತಲೂ ಯೋಗಿಯು ಶ್ರೇಷ್ಠನು

ತಪಸ್ವಿಭ್ಯೋ„ಧಿಕೋ ಯೋಗೀ ಜ್ಞಾನಿಭ್ಯೋ„ಪಿ ಮತೋ„ಧಿಕಃ |
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ || 46 ||
ಅರ್ಥ : ಯೋಗಿಯು ತಪಸ್ವಿ ಜ್ಞಾನಿ ಮತ್ತು ಕರ್ಮ ಮಾಡುವವನು ಇವರೆಲ್ಲರಿಗಿಂತಲೂ ಶ್ರೇಷ್ಠನು ಆದುದರಿಂದ ಅರ್ಜುನ ನೀನು ಯೋಗಿಯಾಗು.
ಆತ್ಮಧ್ಯಾನದಲ್ಲಿ ಧ್ಯಾನವು ಎಲ್ಲಾ ಮಾರ್ಗಗಳಿಗಿಂತಲೂ ಶ್ರೇಷ್ಠವೆಂಬುದನ್ನು ತೋರಿಸಲು ತುಲನಾತ್ಮಕವಾಗಿ ಪಟ್ಟಿಮಾಡಿ ಹೇಳಲಾಗಿದೆ. ಶಾರೀರಿಕವಾಗಿ ಇಂದ್ರಿಯ ನಿಗ್ರಹ ಮಾಡಿ, ತಪಸ್ಸನ್ನು ಮಾಡುವವರಿಗಿಂತ ಧ್ಯಾನಯೋಗವನ್ನು ಸಾಧಿಸಿದ ಯೋಗಿಯು ಶ್ರೇಷ್ಠನು ಅದೇ ರೀತಿ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ಪರಮಾತ್ಮನನ್ನು ತಿಳಿಯಲೇಪಿಕ್ಷಿಸುವ ಜ್ಞಾನಿಗಳಿಗಿಂತಲೂ ಯೋಗಿಯು ಶ್ರೇಷ್ಠನು. ಕರ್ಮಕಾಂಡದಲ್ಲಿ ಹೇಳಿದ ವಿವಿಧ ಯಜ್ಞಯಾಗಾದಿ ಕರ್ಮಗಳನ್ನು ಮಾಡುವವನಿಗಿಂತಲೂ ಧ್ಯಾನಯೋಗಿಯು ಶ್ರೇಷ್ಠನು. ಎಲ್ಲಾ ಇಂದ್ರಿಯಗಳನ್ನು ನಿಗ್ರಹಿಸಿ, ತಾನು ಶರೀರ ಮನಸ್ಸು ಬುದ್ಧಿಗಳಲ್ಲವೆಂಬುದನ್ನು ತಿಳಿದುಕೊಂಡು ಆತ್ಮಧ್ಯಾನದಲ್ಲಿ ನಿರತನಾಗಿರುವ ಯೋಗಿಯು ಎಲ್ಲಾ ವಿವಿಧ ಸಾಧಕರಲ್ಲಿಯೂ ಶ್ರೇಷ್ಠನು.

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ |
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯಕ್ತತಮೋ ಮತಃ || 47 ||
ಅರ್ಥ : ಯಾವ ಯೋಗಿಯು ಶ್ರದ್ಧೆಯಿಂದ ಕೂಡಿದವನಾಗಿ, ತನ್ನ ಅಂತರಾತ್ಮವನ್ನು ನನ್ನಲ್ಲಿ ಐಕ್ಯಗೊಳಿಸಿ ನನ್ನನ್ನೇ ಧ್ಯಾನಿಸುತ್ತಾ ಇರುತ್ತಾನೋ, ಅವನೇ ಯೋಗ್ಯನು ಎಂದು ನನ್ನ ಮತವು.
ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಏಕಾಗ್ರ ಮಾಡಿ ಅದನ್ನು ಧ್ಯಾನದಲ್ಲಿ ನಿಲ್ಲಿಸಬೇಕು. ಧ್ಯಾನ ಮಾಡುವಾಗ ಮನಸ್ಸನ್ನು ಬೇರೆ ಬೇರೆ ವಿಶಿಷ್ಟ ವಸ್ತುಗಳ ಮೇಲೆ ಏಕಾಗ್ರವಾಗಿ ಕೇಂದ್ರೀಕರಿಸಿ ಧ್ಯಾನ ಮಾಡುವ ಪದ್ಧತಿಯು ಮೊದಲಿನಿಂದಲೂ ಬಂದಿದೆ. ತನಗೆ ಇಷ್ಟವಾದ ಪರಮಾತ್ಮನ ಪ್ರತೀಕವನ್ನು (ಮೂರ್ತಿ) ತನ್ನ ಎದುರಿಗಿಟ್ಟುಕೊಂಡು ಧ್ಯಾನ ಮಾಡುವುದು, ಗುರುವಿನ ಮೂರ್ತಿ ಅಥವಾ ಆಕಾರವನ್ನು ಧ್ಯಾನ ಮಾಡುವುದು, ಕುಂಡಲಿಯನ್ನು ಧ್ಯಾನ ಮಾಡುವುದು, ಪಂಚಭೂತಗಳಲ್ಲಿ ಯಾವುದಾದರೊಂದನ್ನು ಧ್ಯಾನ ಮಾಡುವುದು, ಉಪನಿಷತ್ತುಗಳಲ್ಲಿ ಹೇಳಿದ ಮಹಾವಾಕ್ಯವನ್ನು ಧ್ಯಾನ ಮಾಡುವುದು, ಹೀಗೆ ಹಲವಾರು ವಿಧಗಳಿವೆ. ಇವೆಲ್ಲವುಗಳಲ್ಲಿಯೂ ಆತ್ಮನ ಧ್ಯಾನ ಮಾಡುವವನೇ ಹೆಚ್ಚು ಯುಕ್ತನು ಶ್ರೇಷ್ಠರು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಶ್ಲೋಕದಲ್ಲಿ ಧ್ಯಾನ ಮಾಡುವ ಶ್ರೇಷ್ಠಮಾರ್ಗವಾವುದೆಂಬುದನ್ನು ತೋರಿಸಲಾಗಿದೆ. ಮುಂದಿನ ಅಧ್ಯಾಯದಲ್ಲಿ ಯೋಗವನ್ನು ವಿವರಿಸಿ ಅಂತಃಕರಣವನ್ನು ಶುದ್ಧಗೊಳಿಸಿ ಮನಸ್ಸನ್ನು ಏಕಾಗ್ರ ಮಾಡಿ ಪರಮಾತ್ಮನಲ್ಲಿ ನಿಲ್ಲಿಸುವ ಪೂರ್ವತಯಾರಿಯನ್ನು , ಅದನ್ನು ಸಾಧಿಸುವ ವಿವರಗಳನ್ನೂ ಹೇಳಲಾಗಿದೆ. ಧ್ಯಾನದ ವಿವರಗಳನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಆತ್ಮಸಂಯಮಯೋಗೋ ನಾಮ
ಷಷ್ಠೋ„ಧ್ಯಾಯಃ