S O U L B L I S S

Loading

Bhagavad Gita – Vinayak Rao Bapat – Chapter 8

ಎಂಟನೆಯ ಅಧ್ಯಾಯ
ಅಕ್ಷರ ಬ್ರಹ್ಮಯೋಗ
ಪೀಠಿಕೆ
ಯೋಗಿಯು ಅಥವಾ ಯುಕ್ತನು ಪರಾ ಮತ್ತು ಅಪರಾ ಪ್ರಕೃತಿಗಳಲ್ಲಿಯ ವ್ಯತ್ಯಾಸವನ್ನು ತಿಳಿದುಕೊಂಡು, ಪರಾಪ್ರಕೃತಿಯ ಧ್ಯಾನದಲ್ಲಿ ನಿರತನಾಗಿದ್ದು, ತನ್ನ ಇಚ್ಛಾನುಸಾರವಾಗಿ ಲೋಕಹಿತಕ್ಕಾಗಿ, ವಿವಿಧ ಕಾರ್ಯಗಳನ್ನು ಫಲಾಪೇಕ್ಷೆಯಿಲ್ಲದೆ ಮಾಡುತ್ತಿರುತ್ತಾನೆ. ಹಿಂದಿನ ಅಧ್ಯಾಯದಲ್ಲಿ ಪರಾಪ್ರಕೃತಿಯ ಜ್ಞಾನವನ್ನು ತಿಳಿಸಲಾಯಿತು. ಈ ಅಧ್ಯಾಯದಲ್ಲಿ ಆ ಅನುಭವವನ್ನು ಪಡೆಯುವ ವಿವರಗಳನ್ನು ತಿಳಿಸಲಾಗಿದೆ. ಆತ್ಮಜ್ಞಾನವನ್ನು ಪಡೆದ ಯುಕ್ತನು ಅದರ ಅನುಭವವನ್ನು ತನ್ನ ವ್ಯವಹಾರದ ಎಲ್ಲಾ ರಂಗಗಳಲ್ಲಿಯೂ ದಕ್ಷತೆಯಿಂದ ಹಾಗೂ ಜಾಣ್ಮೆಯಿಂದ ಉಪಯೋಗಿಸಿ, ವ್ಯವಹಾರದಲ್ಲಿ ಸಹ ಕಾರ್ಯಚತುರನಾಗಿರುತ್ತಾನೆ.
ಈ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನ ಪ್ರಶ್ನೆಗೆ ಉತ್ತರಕೊಡುತ್ತಾ ಸ್ಪೂರ್ತಿಗೊಂಡವನಾಗಿ, ಮನುಷ್ಯನು ಮರಣಕಾಲದಲ್ಲಿ ಪರಮಾತ್ಮನ ಧ್ಯಾನವನ್ನು ಮಾಡಿದರೆ ಆತನು ಪರಮಾತ್ಮನನ್ನೇ ಸೇರುತ್ತಾನೆ, ಎಂದು ಘೋಷಿಸಿದನು. ನಿತ್ಯಜೀವನದಲ್ಲಿ ಅಭ್ಯಾಸವಾಗಿದ್ದ ವಿಷಯವೇ ಮರಣಕಾಲದಲ್ಲಿ ಜ್ಞಾಪಕ ಬರುತ್ತದೆಂದೂ ಆದ್ದರಿಂದ ನಿತ್ಯವೂ ಪರಮಾತ್ಮನನ್ನು ಧ್ಯಾನ ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕೆಂದು ಹೇಳಿ ಧ್ಯಾನ ಮಾಡುವ ವಿವರಗಳನ್ನು ತಿಳಿಸಿದ್ದಾನೆ. ಕೊನೆಯಲ್ಲಿ ಈ ರೀತಿಯಾಗಿ ಪರಬ್ರಹ್ಮನನ್ನು (ಪರಮಾತ್ಮನಿಗೆ ವೇದಾಂತ ಭಾಷೆಯಲ್ಲಿ ಪರಬ್ರಹ್ಮ ಎನ್ನಲಾಗುತ್ತದೆ) ಧ್ಯಾನಿಸುವವರು, ಬೆಳಕಿನ ದಾರಿಯಿಂದ ಹೋಗಿ ಪರಬ್ರಹ್ಮನಲ್ಲಿ ಐಕ್ಯವಾಗುತ್ತಾರೆಂದೂ ಯಜ್ಞ ಯಾಗಾದಿಗಳ ಮೂಲಕ ಉಪಾಸನೆ ಮಾಡುವವರು ಕತ್ತಲೆಯ ದಾರಿಯಲ್ಲಿ ಹೋಗಿ ಸ್ವರ್ಗವೇ ಮೊದಲಾದ ಲೋಕಗಳಲ್ಲಿ ನಿರ್ದಿಷ್ಟ ಕಾಲದವರೆಗೆ ಸುಖವನ್ನು ಅನುಭವಿಸಿ ಪುನಃ ಭೂಲೋಕದಲ್ಲಿ ಜನ್ಮವೆತ್ತುತ್ತಾರೆಂದು ಹೇಳಿ ಈ ಎರಡೂ ಮಾರ್ಗಗಳ ಪೈಕಿ ಧ್ಯಾನಮಾರ್ಗದಿಂದ ಪರಬ್ರಹ್ಮನನ್ನು ಸೇರುವುದು ಉಚಿತವೆಂದು ಹೇಳಲಾಗಿದೆ.

ಎಂಟನೆಯ ಅಧ್ಯಾಯ
ಅಕ್ಷರ ಬ್ರಹ್ಮಯೋಗ
ಅರ್ಜುನ ಉವಾಚ
ಕಿಂ ತದ್ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ |
ಅಧಿಭೂತಂ ಚ ಕಿಂ ಪೆÇ್ರೀಕ್ತಮಧಿದೈವಂ ಕಿಮುಚ್ಯತೇ || 1 ||
ಅರ್ಜುನನು ಹೇಳುತ್ತಾನೆ
ಅರ್ಥ : ಬ್ರಹ್ಮ ಎಂದರೆ ಯಾವುದು ? ಅಧ್ಯಾತ್ಮ ಎಂದರೇನು? ಅಧಿಭೂತ ಎಂದು ಯಾವುದಕ್ಕೆ ಹೆಸರು? ಯಾವುದಕ್ಕೆ ಅಧಿದೈವ ಎನ್ನುತ್ತಾರೆ ?

ಅಧಿಯಜ್ಞಃ ಕಥಂ ಕೋ„ತ್ರ ದೇಹೇ„ಸ್ಮಿನ್ ಮಧುಸೂದನ |
ಪ್ರಯಾಣಕಾಲೇ ಚ ಕಥಂ ಜ್ಞೇಯೋ„ಸಿ ನಿಯತಾತ್ಮಭಿಃ || 2 ||
ಅರ್ಥ : ಮಧುಸೂದನನೇ ಈ ಶರೀರದಲ್ಲಿ ಅಧಿಯಜ್ಞನು ಯಾರು ಮತ್ತು ಹೇಗೆ ? ಮರಣಕಾಲದಲ್ಲಿ ನೀನು ಆತ್ಮನಿಗ್ರಹವುಳ್ಳವನಿಂದ ಹೇಗೆ ತಿಳಿಯಲ್ಪಡುತ್ತೀಯೆ.
ಹಿಂದಿನ ಅಧ್ಯಾಯದ ಕೊನೆಯ ಭಾಗದಲ್ಲಿ ಉಪಯೋಗಿಸಿದ ಹೊಸ ಶಬ್ದಗಳು ಅರ್ಜುನನಿಗೆ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಅಂತೆಯೇ, ಯುಕ್ತನು ಮರಣಕಾಲದಲ್ಲಿ ಪರಮಾತ್ಮನನ್ನು ತಿಳಿಯುವುದು ಹೇಗೆ ಎಂಬುದು ಅರ್ಥವಾಗಲಿಲ್ಲ. ಆದ್ದರಿಂದ ಪ್ರಶ್ನೆ ಮಾಡಿದ್ದಾನೆ.
ಶ್ರೀ ಭಗವಾನುವಾಚ
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋ„ಧ್ಯಾತ್ಮಮುಚ್ಯತೇ |
ಭೂತಭಾವೋದ್ಬವಕರೋ ವಿಸರ್ಗಃ ಕರ್ಮಸಂಜ್ಞಿತಃ || 3 ||
ಶ್ರೀ ಭಗವಂತನು ಹೇಳುತ್ತಾನೆ
ಅರ್ಥ : ಪ್ರಪಂಚದಲ್ಲೆಲ್ಲಾ ಶ್ರೇಷ್ಠನಾದವನೇ, ಬ್ರಹ್ಮನು ಅವನು ನಾಶವಿಲ್ಲದವನು. ಅವನ ಪ್ರಕೃತಿಗೆ ಅಧ್ಯಾತ್ಮ ಎಂದು ಹೆಸರು. ಜೀವಿಗಳನ್ನು ಸೃಷ್ಟಿಸುವ ಕಾರ್ಯಕ್ಕೆ ಹಾಗೂ ದೇವತೆಗಳಿಗೆ ಕೊಡುವ ಆಹುತಿಗಳಿಗೆ ಕರ್ಮ ಎಂದು ಹೆಸರು.

ಅಧಿಭೂತಂ ಕ್ಷರೋ ಭಾವಃ ಪುರುಷಾಶ್ಚಾಧಿದೈವತಮ್ |
ಅಧಿಯಜ್ಞೋ„ಹಮೇವಾತ್ರ ದೇಹೇ ದೇಹಭೃತಾಂ ವರ || 4 ||
ಅರ್ಥ : ಪ್ರಪಂಚದಲ್ಲಿ ಸೃಷ್ಟಿಯಾಗಿರುವ ಮತ್ತು ನಾಶವಾಗುವ ಎಲ್ಲಾ ವಸ್ತುಗಳಿಗೂ ‘ಅಧಿಭೂತ’ ಎಂದು ಹೆಸರು. ಎಲ್ಲಾ ಭೂತಗಳಲ್ಲಿಯೂ ಅಂತರಾತ್ಮನಾಗಿರುವ ಪುರುಷನು ‘ಅಧಿದೈವತ’ ಮನುಷ್ಯರಲ್ಲಿ ಶ್ರೇಷ್ಠನಾದ ಅರ್ಜುನನೇ ಈ ಶರೀರದಲ್ಲಿ ಸಾಕ್ಷಿಯಾಗಿರುವ ನಾನೇ ಅಧಿಯಜ್ಞನು.
ಅಕ್ಷರಬ್ರಹ್ಮಪರಮಮ್ – ಪ್ರಪಂಚವನ್ನು ನಾಶರಹಿತವಾದ ಬದಲಾವಣೆಗಳನ್ನು ಹೊಂದದ ಶಾಶ್ವತವಾದ, ಪರಮಾತ್ಮನಿಗೆ ‘ಬ್ರಹ್ಮ’ ಎಂದು ಹೆಸರು. ಇವನು ನಾಶರಹಿತವಾದುದರಿಂದ (ಅಕ್ಷರ) ಇವನಿಗೆ ಅಕ್ಷರಬ್ರಹ್ಮ ಎಂಬ ಹೆಸರೂ ಇದೆ. ಇವನೇ ಶರೀರಧಾರಿಯಾಗಿ ಇಂದ್ರಿಯಗಳು, ಮನಸ್ಸು, ಬುದ್ಧಿಗಳಿಗೆ ಚೇತನವನ್ನು ಕೊಡುತ್ತಾನೆ. ಶರೀರಧಾರಿಯಾಗಿ ನಾನಾ ರೀತಿಯ ಸುಖದುಃಖಗಳನ್ನು ಅನುಭವಿಸುವ ಇವನಿಗೆ (ಜೀವ) ‘ಅಧ್ಯಾತ್ಮ’ ಎಂದು ಹೆಸರು. ಕರ್ಮ ಎಂದರೆ ಕೇವಲ ಶಾರೀರಿಕ ಕರ್ಮಗಳು ಹಾಗೂ ಯಜ್ಞ ಯಾಗಾದಿ ಕರ್ಮಗಳಷ್ಟೇ ಅಲ್ಲ. ಎಲ್ಲಾ ಕರ್ಮಗಳಾಗುವಂತೆ, ಅವುಗಳನ್ನು ಮಾಡುವಂತೆ ಸ್ಪೂರ್ತಿಯನ್ನು ಚೇತನವನ್ನೂ ಕೊಡುವ ಶಕ್ತಿಯು ಸಹಕರ್ಮದಲ್ಲಿ ಐಕ್ಯವಾಗುತ್ತದೆ. ನಾಶವಾಗುವ ಎಲ್ಲಾ ವಸ್ತುಗಳಿಗೂ ಜೀವಿಗಳಿಗೂ ‘ಅಧಿಭೂತ’ ಎಂದು ಹೆಸರು. ಇದಕೆ ‘ಕ್ಷರ’ಎಂಬ ಹೆಸರೂ ಇದೆ. (ಪರಮಾತ್ಮನಿಗೆ ‘ಅಕ್ಷರ’ ಎಂದು ಹೆಸರಿದ್ದಂತೆ). ಕ್ಷರ ಎಂದರೆ ನಾಶವಾಗತಕ್ಕದ್ದು. ಅಕ್ಷರ ಮತ್ತು ಕ್ಷರಗಳಿಗಿರುವ ವ್ಯತ್ಯಾಸವನ್ನು ಉಗಿ ಮತ್ತು ಉಗಿಯ ಯಂತ್ರಗಳಿಂದಲೂ ವಿದ್ಯುಚ್ಛಕ್ತಿ ಮತ್ತು ಹಾಡುವ ರೇಡಿಯೋದಿಂದಲೂ ಊಹಿಸಬಹುದು. ಅಕ್ಷರವು ಕ್ಷರಕ್ಕೆ ಚೇತನವನ್ನು ಕೊಡುತ್ತದೆ. ಇವೆಲ್ಲವುಗಳಲ್ಲಿಯೂ ಪರಮಾತ್ಮನೊಬನೇ ನಿಜವಾದ ಹಾಗೂ ಶಾಶ್ವತವಾದ ವಸ್ತು. ಉಳಿದುದೆಲ್ಲವೂ ನಾಶವಾಗ ತಕ್ಕವುಗಳು.

ಮರಣಕಾಲದಲ್ಲಿ ಪರಮಾತ್ಮನನ್ನು ಧ್ಯಾನಿಸುವವನಿಗೆ ಏನಾಗುತ್ತದೆ ?

ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಮ್ |
ಯಃ ಪ್ರಯಾತಿ ಸ ಮದ್ಬಾವಂ ಯಾತಿ ನಾಸ್ತ್ಯತ್ರ ಸಂಶಯಃ || 5 ||
ಅರ್ಥ : ಮರಣಕಾಲದ ಸಮಯದಲ್ಲಿ ನನ್ನಲ್ಲೇ ಧ್ಯಾನಿಸುತ್ತಾ, ಈ ಶರೀರವನ್ನು ಬಿಟ್ಟು ಹೋಗುವ ಜೀವಿಯು ನನ್ನನ್ನೇ ಸೇರುತ್ತಾನೆ. ಇದರಲ್ಲಿ ಸಂಶಯವಿಲ್ಲ.
ಶರೀರಧಾರಿಯಾದ ಜೀವನು, ತಾನು ಈ ಶರೀರದ ಮುಖಾಂತರ ಬರಿದು ಮಾಡಿಕೊಳ್ಳಬೇಕಾದ ವಾಸನೆಗಳೆಲ್ಲವೂ ತೀರಿದ ಮೇಲೆ, ಈ ಶರೀರದ ಜೊತೆಗಿರುವ ಸಂಬಂಧ, ಕರ್ತವ್ಯ ಇವುಗಳೆಲ್ಲವನ್ನು ಮರೆತು ಈ ಶರೀರವನ್ನು ಬಿಟ್ಟು ಹೊರಟು ಹೋಗುತ್ತಾನೆ. ಹಾಗೆ ಹೋಗುವ ಕಾಲದಲ್ಲಿ ಆತನ ಮನಸ್ಸಿನ ಮೇಲೆ ಯಾವ ಭಾವವು ಅಥವಾ ವಾಸನೆಯು ಪ್ರಬಲವಾಗಿರುತ್ತದೆಯೋ ಅದಕ್ಕನುಸಾರವಾದ ಹೊಸ ದೇಹವನ್ನು ಆರಿಸಿಕೊಳ್ಳುತ್ತಾನೆ. ಸಾಧನೆ ಅಥವಾ ಯೋಗದಿಂದ ಮನಸ್ಸು, ಬುದ್ಧಿಗಳನ್ನು ತಿದ್ದಿ ಯಾವಾಗಲೂ ಪರಮಾತ್ಮನ ಧ್ಯಾನವನ್ನೇ ಮಾಡುತ್ತಿದ್ದರೆ, ಆ ಅಭ್ಯಾಸಬಲದಿಂದ ಇವನ ಮನಸ್ಸಿನ ಮೇಲೆ ಅದೇ ವಾಸನೆಯು ಬಲವಾಗಿರುತ್ತದೆ. ಆದ್ದರಿಂದ ಈ ಜೀವನು ಪರಮಾತ್ಮನನ್ನೇ ಸೇರುತ್ತಾನೆ. ಇದನ್ನು ಬಿಟ್ಟು, ಜೀವನು ಸಂಸಾರದಿಂದ ಬಂಧಿತವಾಗಿ ಇಂದ್ರಿಯ ಸುಖಾಭಿಲಾಷೆಯಲ್ಲಿಯೇ, ನಿರತನಾಗಿದ್ದರೆ ಶರೀರವನ್ನು ಬಿಟ್ಟು ಹೋಗುವಾಗ ಇಂದ್ರಿಯಾಭಿಲಾಷೆಗಳೇ ಪ್ರಧಾನವಾಗಿರುವುದರಿಂದ ಮುಂದಿನ ಜನ್ಮದಲ್ಲಿ ಆ ಭೋಗಗಳನ್ನು ಅನುಭವಿಸಲು ಅನುಕೂಲವಾದ ಇನ್ನೂ ಕೆಳಮಟ್ಟದ ಜನ್ಮಗಳನ್ನೇ ಪಡೆಯಬೇಕಾಗುತ್ತದೆ. ಇದನ್ನು ಸ್ಪಷ್ಟಗೊಳಿಸಿ ಒತ್ತಿ ಹೇಳುವುದಕ್ಕಾಗಿ ಶ್ರೀಕೃಷ್ಣನು ‘ಇದರಲ್ಲಿ ಸಂಶಯವಿಲ್ಲ’ ಎಂದು ಹೇಳಿದ್ದಾನೆ.

ಇದೇ ಅಂಶವನ್ನು ತಾರ್ಕಿಕ ದೃಷ್ಟಿಯಿಂದ ಸಹ ವಿವರಿಸಲಾಗಿದೆ

ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || 6 ||
ಅರ್ಥ : ಜೀವನು ಮರಣಕಾಲದಲ್ಲಿ ಯಾವ ಯಾವ ವಿಷಯಗಳನ್ನು ಅಥವಾ ರೂಪಗಳನ್ನು ಚಿಂತಿಸುತ್ತಾನೋ, ಅವನು ಮುಂದಿನ ಜನ್ಮದಲ್ಲಿ ಅಂತಹದೇ ಶರೀರವನ್ನು ಪಡೆಯುತ್ತಾನೆ. ಅವನು ಜೀವಮಾನದಲ್ಲಿ ಪದೇ ಪದೇ ಚಿಂತಿಸುವ ವಸ್ತು, ವಿಷಯ ಅಥವಾ ರೂಪಗಳ ಸಂಸ್ಕಾರವೇ ಮನಸ್ಸಿನಲ್ಲಿ ಬಲವಾಗಿರುವುದರಿಂದ ಮರಣ ಕಾಲದಲ್ಲಿ ಸಹ ಅದೇ ವಿಷಯ ಅಥವಾ ರೂಪಗಳು ಸ್ವಭಾವವಾಗಿ ಇಲ್ಲವೆ ಅಭ್ಯಾಸ ಬಲದಿಂದ ಜ್ಞಾಪಕಕ್ಕೆ ಬರುತ್ತವೆ
“ನೆನೆದಂತೆ ಮನ” ಎಂಬ ಗಾದೆ ಇದೆ. ನಮ್ಮ ವಿಚಾರದಂತೆ ಆಚಾರ ವಿಚಾರಗಳು. ನಮ್ಮ ಆಚಾರಗಳನ್ನು (ಕರ್ಮ) ನಿಯಂತ್ರಿಸುತ್ತವೆ. ವಿಚಾರಗಳು ಸಾಮಾನ್ಯವಾಗಿ ಹಿಂದಿನ ಜನ್ಮದ ವಾಸನೆಗಳಿಗೆ ಅನುಗುಣವಾಗಿರುತ್ತವೆ. ಆದರೆ ನಮ್ಮ ಪ್ರಯತ್ನದಿಂದ, ವಿವೇಕದಿಂದ ಸರಿಯಾದ ತಿಳವಳಿಕೆಯನ್ನು ಪಡೆಯುವುದರಿಂದ, ನಮ್ಮ ವಿಚಾರವನ್ನು ತಪ್ಪುದಾರಿಯಿಂದ ತಪ್ಪಿಸಿ, ಸರಿಯಾದ ದಾರಿಗೆ ತೆಗೆದುಕೊಂಡು ಹೋಗುವ ಸ್ವಾತಂತ್ರ್ಯವು ನಮಗಿದೆ. ಅಂತೆಯೇ ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದು ಬುದ್ಧಿಯ ಅಧೀನ ಪಡಿಸಿ, ಅವೆರಡನ್ನೂ ಧರ್ಮ, ನೀತಿ, ಸತ್ಕರ್ಮ, ಲೋಕಹಿತ, ಆತ್ಮಧ್ಯಾನಗಳ ಕಡೆಗೆ ತಿರುಗಿಸಿದರೆ, ನಮ್ಮ ಕರ್ಮವು ಸಹ ತದನುಗುಣವಾದದ್ದಾಗುತ್ತದೆ. ಹೀಗೆ ಸತತವೂ ಆತ್ಮಧ್ಯಾನ ಮಾಡುವ ಅಭ್ಯಾಸವನ್ನು ಮೈಗೂಡಿಸಿಕೊಂಡರೆ, ಮರಣಕಾಲದಲ್ಲಿ ಸಹ, ಅಭ್ಯಾಸ ಬಲದಿಂದ ಅದೇ ವಿಚಾರವು ಜ್ಞಾಪಕಕ್ಕೆ ಬಂದು, ಅದಕ್ಕನುಗುಣವಾದ ಮುಂದಿನ ಜನ್ಮವು ಸಿಗುತ್ತದೆ.

ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ |
ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ || 7 ||
ಅರ್ಥ : ಆದ್ದರಿಂದ ಅರ್ಜುನ ಎಲ್ಲಾ ಕಾಲಗಳಲ್ಲಿಯೂ, ನನ್ನನ್ನೇ ಧ್ಯಾನಿಸುತ್ತಾ ಯುದ್ಧ ಮಾಡು. ಮನಸ್ಸು ಬುದ್ಧಿಗಳನ್ನು ನನ್ನಲ್ಲಿ ಏಕಾಗ್ರ ಮಾಡಿದರೆ ನೀನು ಸಂಶಯವಿಲ್ಲದೆ ನನ್ನನ್ನೇ ಸೇರುತ್ತೀಯೆ.
ಇಲ್ಲಿ ಅರ್ಜುನನಿಗೆ ಯುದ್ಧಮಾಡು ಎಂದು ಸ್ಪಷ್ಟವಾಗಿ ಹೇಳಿ ನಾವು ಪ್ರತಿಯೊಬ್ಬರೂ ನಮ್ಮ ವ್ಯವಹಾರದಲ್ಲಿಯ ಕರ್ತವ್ಯ ಕರ್ಮಗಳನ್ನು ಮಾಡಲೇಬೇಕೆಂದು ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿದುಕೊಳ್ಳಬೇಕು. ಕರ್ಮಗಳನ್ನು ಮಾಡುವಾಗ ಮತ್ತು ಸಾಧ್ಯವಿದ್ದಮಟ್ಟಿಗೂ ಇತರೆ ಎಲ್ಲಾ ಕಾಲಗಳಲ್ಲಿ ಸಹ ಪರಮಾತ್ಮನ ಧ್ಯಾನವನ್ನು ಮಾಡಬೇಕು. ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಹೊರಗೆ ಕರ್ಮನಿರತರಾಗಬೇಕು. ಕರ್ಮ ಮಾಡುವಾಗ ಕರ್ಮದಲ್ಲಿ ಕರ್ಮದ ವಿವಿಧ ಅಂಗಗಳಲ್ಲಿ ಪರಮಾತ್ಮನ ಇರುವಿಕೆಯನ್ನು ಕಂಡರೆ ಗುರುತಿಸಿದರೆ, ಅದೂ ಧ್ಯಾನವೇ ಆಗುತ್ತದೆ. ಈ ರೀತಿ ಕರ್ಮ ಮಾಡಬೇಕೆಂದೇ (ಯುದ್ಧ ಮಾಡಬೇಕೆಂದೇ) ಇಲ್ಲಿ ಹೇಳಲಾಗಿದೆ ಮಾಮನಸ್ಮರಯುದ್ಧ್ಯ ಚ
ಹೀಗೆ ಸದಾಕಾಲವೂ ಪರಮಾತ್ಮನ ಧ್ಯಾನ ಮಾಡುತ್ತಿದ್ದರೆ ಮಾತ್ರ ಮರಣಕಾಲದಲ್ಲಿ ಪರಮಾತ್ಮನ ಜ್ಞಾಪಕವಾಗುತ್ತದೆ. ಇದನ್ನು ಬಿಟ್ಟು ನಿತ್ಯ ವ್ಯವಹಾರದಲ್ಲಿ ಸ್ವೇಚ್ಛೆಯಾಗಿ ವರ್ತಿಸುತ್ತಾ, ಮರಣಕಾಲದಲ್ಲಿ ಮಾತ್ರ ಪರಮಾತ್ಮನ ಧ್ಯಾನ ಮಾಡೋಣವೆಂದು ತಿಳಿದುಕೊಂಡಿದ್ದರೆ ಆ ಕಾಲದಲ್ಲಿ ಧ್ಯಾನ ಮಾಡಲು ಆತನ ಜ್ಞಾಪಕ ಬರುವುದಿಲ್ಲವೆಂದು ಪರೋಕ್ಷವಾಗಿ ಹೇಳಲಾಗಿದೆ.

ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ |
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ || 8 ||
ಅರ್ಥ : ಮನಸ್ಸು ಬೇರೆ ಕಡೆಗೆ ಓಡದಂತೆ ಪರಮಾತ್ಮನ ಧ್ಯಾನದಲ್ಲಿ, ಅಭ್ಯಾಸದಿಂದ ಏಕಾಗ್ರ ಮಾಡಿ ಸತತವೂ ಅವನನ್ನೇ ಚಿಂತಿಸುತ್ತಿದ್ದರೆ, ಪಾರ್ಥನೇ, ಅವನು ಶ್ರೇಷ್ಠನಾದ ಪರಮಪುರುಷನನ್ನು ಸೇರುತ್ತಾನೆ.
ಈ ರೀತಿಯಾಗಿ ಅಭ್ಯಾಸ ಮಾಡುವುದರಿಂದ ಈ ಜನ್ಮದಲ್ಲಿಯೇ ಪರಮಾತ್ಮನನ್ನು ಸೇರಬಹುದು. ಮನಸ್ಸನ್ನು ಏಕಾಗ್ರಮಾಡಿ ಸತತವೂ ಪರಮಾತ್ಮನ ಧ್ಯಾನ ಮಾಡುವುದರಿಂದ, ಅಹಂಕಾರದ ಆವರಣವು ತೆಳುವಾಗುತ್ತಾ ಬರುತ್ತದೆ. ಈ ಆವರಣವು ಕರಗಿ ಹೋದರೆ ಉಳಿಯುವುದು ಶುದ್ಧ ಪರಮಾತ್ಮನೇ. ಹೊಸದಾಗಿ ಅವನನ್ನು ಸೇರಬೇಕಾದುದೆಂಬುದಿಲ್ಲ. ‘ಈಗ’ ನಾನೇ ಪರಮಾತ್ಮನು ಎಂಬ ಅರಿವುಂಟಾಗುತ್ತದೆ.

ಪರಮ ಪುರುಷನ ಲಕ್ಷಣಗಳೇನು ?
ಕವಿಂ ಪುರಾಣಮನುಶಾಸಿತಾರ –
ಮಣೋರಣೀಯಾಂಸಮನುಸ್ಮರೇದ್ಯಃ |
ಸರ್ವಸ್ಯ ಧಾತಾರಮಚಿಂತ್ಯರೂಪ –
ಮಾದಿತ್ಯವರ್ಣಂ ತಮಸಃ ಪರಸ್ತಾತ್ || 9 ||
ಅರ್ಥ : ಪರಮಾತ್ಮನು ಸರ್ವಜ್ಞನು ಪುರಾತನನು ಸರ್ವಪ್ರಪಂಚಕ್ಕೂ ಒಡೆಯನು, ಅಣುವಿಗಿಂತಲೂ ಸೂಕ್ಷ್ಮವಾಗಿರುವವನು. ಸರ್ವ ಪ್ರಪಂಚಕ್ಕೂ ಆಧಾರನು, ಮನಸ್ಸಿನಿಂದ ಚಿಂತಿಸಲು ಸಿಗದವನು ಸೂರ್ಯನಂತೆ ಪ್ರಕಾಶವುಳ್ಳವನು ಮತ್ತು ಅಜ್ಞಾನದ ಆಚೆಗಿರುವವನು ಎಂದು ಯಾರು ಅವನನ್ನು ಧ್ಯಾನ ಮಾಡುತ್ತಾನೋ.
ಹಿಂದಿನ ಶ್ಲೋಕದಲ್ಲಿ ಏಕಾಗ್ರ ಮನಸ್ಸಿನಿಂದ ‘ಪರಮ ಪುರುಷ’ ನನ್ನು ಧ್ಯಾನಿಸಬೇಕೆಂದು ಹೇಳಲಾಗಿದೆ. ಗೀತೆಯು ಕೇವಲ ಬೌದ್ಧಿಕ ಉಪದೇಶವಷ್ಟನ್ನೇ ಹೇಳಿ ಬಿಡದೆ, ಪ್ರತ್ಯಕ್ಷವಾಗಿ ಅದರ ಅನುಭವವನ್ನು ಪಡೆಯಬೇಕೆಂದು ಅದನ್ನು ಆಚರಣೆಯಲ್ಲಿ ತರಬೇಕೆಂದು ಹಾಗೆ ಮಾಡಿದರೆ ಮಾತ್ರ ಇಚ್ಛಿತ ಗುರಿಯನ್ನು ಮುಟ್ಟಬಹುದೆಂದು ಒತ್ತಿ ಒತ್ತಿ ಹೇಳುತ್ತದೆ. ಆದ್ದರಿಂದ ಈ ಶ್ಲೋಕದಲ್ಲಿ ಮತ್ತು ಮುಂದಿನ ಶ್ಲೋಕದಲ್ಲಿ ‘ಪರಮ ಪುರುಷನ’ ವರ್ಣನೆಯನ್ನು ಹೇಳಿ, ಅವನ ಯಾವ ಯಾವ ಗುಣಗಳನ್ನು ಧ್ಯಾನಮಾಡಬೇಕೆಂಬುದನ್ನು ಸೂಚಿಸಲಾಗಿದೆ. ಈ ವರ್ಣನೆಯಲ್ಲಿ ಉಪಯೋಗಿಸಲಾಗಿರುವ ಯಾವ ಪದಗಳೂ ಪರಮಾತ್ಮನ ಸಂಪೂರ್ಣ ವರ್ಣನೆಯನ್ನು ಮಾಡಲಾರವು. ಪರಮಾತ್ಮನನ್ನು ಸಂಕೇತ ಮಾಡಿ ತೋರಿಸುವ ದೃಷ್ಟಿಯಿಂದ ಈ ಪದಗಳನ್ನು ಉಪಯೋಗಿಸಲಾಗಿದೆಯೇ ಹೊರತು ಅವು ಪರಮಾತ್ಮನ ಸಂಪೂರ್ಣ ವರ್ಣನೆ ಎಂದು ತಿಳಿಯಬಾರದು. ಏಕೆಂದರೆ ಅವನನ್ನು ಅಥವಾ ಅವನ ಶಕ್ತಿಯನ್ನು ಸಂಪೂರ್ಣ ವರ್ಣನೆ ಮಾಡಿ ಪೂರೈಸಲು ಸಾಧ್ಯವಿಲ್ಲ. ಧ್ಯಾನ ಮಾಡಲು ಅವನ ಶಕ್ತಿಯ ಕಲ್ಪನೆ ಬರಲೆಂಬ ದೃಷ್ಟಿಯಿಂದ ಈ ವರ್ಣನೆಯನ್ನು ಮಾಡಲಾಗಿದೆ.
ಕವಿಮ್ – ಎಂದರೆ ಎಲ್ಲವನ್ನೂ ತಿಳಿದವನು. ಸೂರ್ಯನಿಗೆ ಕಾಣದ ವಸ್ತುವಿಲ್ಲ ಅಥವಾ ಸೂರ್ಯನು ಎಲ್ಲವನ್ನು ಕಾಣುತ್ತಾನೆ. ಎನ್ನುತ್ತೇವೆ. ಏಕೆಂದರೆ ಸೂರ್ಯನು ಎಲ್ಲಾ ವಸ್ತುಗಳನ್ನೂ ಬೆಳಗಿಸುತ್ತಾನೆ. ಅಂತೆಯೇ ಪರಮಾತ್ಮನ ಸಾನ್ನಿಧ್ಯವಿಲ್ಲದೆ ಯಾವ ವಸ್ತುಗಳ ಜ್ಞಾನವೂ ಆಗದು. ಎಲ್ಲ ವಸ್ತುಗಳಲ್ಲಿಯೂ ಅವನಿದ್ದಾನೆ. ಆದ್ದರಿಂದ ಅವನನ್ನು ಕವಿ ಅಥವಾ ಸರ್ವಜ್ಞ ಎಂದು ಹೇಳಲಾಗಿದೆ.
ಪುರಾಣಮ್ – ಪರಮಾತ್ಮನು ಸೃಷ್ಟಿಗಿಂತ ಮಾಡಲು ಇದ್ದನು. ಅವನಿಂದಲೇ ಸೃಷ್ಟಿಯಾಯಿತು. ಆದ್ದರಿಂದ ಅವನನ್ನು ಪುರಾಣ ಎನ್ನಲಾಗಿದೆ.
ಅನುಶಾಸಿತಾರಮ್ – ಪ್ರಪಂಚದ ಒಡೆಯನು ಅಂದರೆ ಪೆÇೀಲೀಸನಂತೆ ರಕ್ಷಣೆ ಮಾಡುವವನು ಎಂದಲ್ಲ. ಇವನ ಇರುವಿಕೆಯಿಂದಲೇ, ಚೇತನದಿಂದಲೇ, ನಿಯಂತ್ರಣದಿಂದಲೇ, ಎಲ್ಲಾ ವಸ್ತುಗಳ ಸೃಷ್ಟಿಯೂ, ಚಲನವಲನಗಳೂ ಸುಗಮವಾಗಿ ಸಾಗುತ್ತದೆ
ಅಣೋರಣೀಯಾನ್ – ಅಣುವಿಗಿಂತಲೂ ಚಿಕ್ಕದಾಗಿರುವವನು. ಅಣುವು ಮೂಲವಸ್ತುವಿನ ಅತೀ ಸಣ್ಣಭಾಗವಾಗಿದ್ದರೂ ಮೂಲವಸ್ತುವಿನ ಎಲ್ಲಾ ಗುಣಗಳನ್ನು ಹೊಂದಿದೆ. ಯಾವ ವಸ್ತುವೇ ಆಗಲೀ ಸೂಕ್ಷ್ಮವಾದಷ್ಟೂ ಹೆಚ್ಚು ವ್ಯಾಪಕ ಶಕ್ತಿಯುಳ್ಳದ್ದಾಗುತ್ತದೆ. ಮಂಜುಗಡ್ಡೆಗಿಂತ ನೀರು ಸೂಕ್ಷ್ಮ.. ನೀರಿಗಿಂತ ಉಗಿ ಹೆಚ್ಚು ಸೂಕ್ಷ್ಮ. ಅದು ಹೆಚ್ಚು ವ್ಯಾಪಕ.
ಹೀಗೆ ಪರಮಾತ್ಮನು ಅಣುವಿಗಿಂತಲೂ ಸೂಕ್ಷ್ಮನು. ಇವನು ಇಡೀ ಪ್ರಪಂಚದ ಎಲ್ಲೆಡೆಯಲ್ಲಿಯೂ, ಪ್ರತಿಯೊಂದು ಅಣುವಿನೊಳಗೂ ವ್ಯಾಪಿಸಿರುವನು
ಸರ್ವಸ್ಯಧಾತಾರಮ್ – ಪ್ರಪಂಚದ ಎಲ್ಲಾ ವಸ್ತುಗಳ ಇರುವಿಕೆಗೂ ಇವನೇ ಕಾರಣನು. ಅವುಗಳನ್ನು ಆಧರಿಸಿರುವವನೂ ಇವನೇ. ಚಿತ್ರಮಂದಿರದಲ್ಲಿ ಬಿಳಿಯ ಪರದೆಯ ಮೇಲೆ ನಾನಾ ತರಹದ ಚಿತ್ರಗಳನ್ನು (ಸುಖ-ದುಃಖಗಳ, ಶಾಂತ-ಉದ್ರೇಕ ಸನ್ನಿವೇಶಗಳ ಹಾಗೂ ಇತರೆ ಬಗೆಯ ಅನೇಕ ಚಿತ್ರಗಳನ್ನು) ನಾವು ನೋಡುತ್ತೇವೆ. ಎದುರುಗಡೆಗೆ ಬಿಳಿಯ ಪರದೆ ಇಲ್ಲದಿದ್ದರೆ ಈ ಯಾವ ಚಿತ್ರಗಳನ್ನೂ ನಾವು ನೋಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಪರದೆಯು ಎಲ್ಲಾ ಚಿತ್ರಗಳನ್ನು ಧರಿಸುತ್ತದೆ. ಎಲ್ಲಾ ಚಿತ್ರಗಳಿಗೂ ಆಧಾರವಾಗಿದೆ. ಇದರಂತೆಯೇ ಪರಮಾತ್ಮನು ಪ್ರಪಂಚದ ಸರ್ವವಸ್ತುಗಳಿಗೂ ಆಧಾರನು ಎಂದು ತಿಳಿಯಬೇಕು.
ಅಚಿಂತ್ಯ ರೂಪಮ್ – ಪರಮಾತ್ಮನು ಸರ್ವಜ್ಞ, ಪುರಾಣ, ಅಣೋರಣೀಯ, ಸರ್ವಸ್ಯಧಾತಾರ, ಎಂಬ ಗುಣಗಳಿಂದ ಕೂಡಿದವನಾಗಿರುವುದರಿಂದ ಇವನ ರೂಪದ ಕಲ್ಪನೆಯನ್ನು ಮಾಡಲು ಸಾಧ್ಯವಿದೆ ಎಂಬ ಭಾವನೆ ಬರಬಹುದೆಂದು ಊಹಿಸಿ, ಇವನ ರೂಪವನ್ನು ಇಂದ್ರಿಯ, ಮನಸ್ಸು, ಬುದ್ಧಿಗಳಿಂದ ಕಲ್ಪನೆ ಮಾಡಲು ಸಹ ಸಾಧ್ಯವಿಲ್ಲವೆಂದು ಹೇಳಲಾಗಿದೆ. ಏಕೆಂದರೆ ಅವನು ಇಡೀ ಪ್ರಪಂಚಕ್ಕೇನೇ ಆಧಾರವಾಗಿರುವಂತೆ, ಇಂದ್ರಿಯ ಮನಸ್ಸು, ಬುದ್ಧಿಗಳಿಗೆ ಸಹ ಆಧಾರನಾಗಿರುವುದರಿಂದ ಮತ್ತು
ಅವುಗಳ ಒಳಗೆ, ಹೊರಗೆ ವ್ಯಾಪ್ತನಾಗಿರುವುದರಿಂದ, ಇವುಗಳಿಂದ ಅವನನ್ನು ತಿಳಿಯಲು ಸಾಧ್ಯವಿಲ್ಲ. ಮನಸ್ಸು, ಇಂದ್ರಿಯಗಳನ್ನು ದಾಟಿ ಪರಮಾತ್ಮನ ಧ್ಯಾನದಲ್ಲಿದ್ದಾಗ ಆತನ ಅನುಭವವನ್ನು ಪಡೆಯಬಹುದೇ ಹೊರತು ಅದನ್ನು ವರ್ಣಿಸಲು ಸಾಧ್ಯವಿಲ್ಲ.
ಆದಿತ್ಯವರ್ಣಮ್ – ಸೂರ್ಯನನ್ನು ನೋಡಲು ಬೇರೆ ಬೆಳಕಿನ ಅವಶ್ಯಕತೆ ಇಲ್ಲ. ಏಕೆಂದರೆ ಅವನೇ ತೇಜಸ್ಸಿನ ಉಗಮ. ಅದರಂತೆಯೇ ಪರಮಾತ್ಮನನ್ನು ನೋಡಲು ಬೇರೆ ಬೆಳಕು ಬೇಡ. ಅಹಂಕಾರ ಎಂಬ ಅಜ್ಞಾನದ ಪರದೆಯನ್ನು ಸರಿಸಿದ ಕೂಡಲೆ ಈ ಬೆಳಕು ತಾನಾಗಿಯೇ ಕಾಣುತ್ತದೆ. ಕನಸು ಕಾಣುವವನು ಎಚ್ಚರಾಗಿರುವವನನ್ನು ಕಾಣಲಾರನು. ಏಕೆಂದರೆ ಎಚ್ಚರ ಎಚ್ಚರಾದ ಸ್ಥಿತಿಗೆ ಬಂದ ಕೂಡಲೇ, ಕನಸು ಕಾಣುವವನು ಇಲ್ಲವಾಗಿ ಅವನೇ ಎಚ್ಚರಗೊಂಡವನಾಗುತ್ತಾನೆ. ಇದರಂತೆಯೇ ಅಹಂಕಾರವು ನಾಶವಾದ ಕೂಡಲೇ ಸ್ವಯಂ ಜ್ಯೋತಿಯಾದ ಪರಮಾತ್ಮನು ಗೋಚರಿಸುತ್ತಾನೆ, ಅಂದರೆ ತಾನೇ ಪರಮಾತ್ಮನು ಎಂಬ ಜ್ಞಾನೋದಯವಾಗುತ್ತದೆ.
ತಮಸಃ ಪರಸ್ತಾತ್ – ಅಂದರೆ ಇವನಲ್ಲಿ ಅಜ್ಞಾನವಿಲ್ಲ . ಇವನು ಅಜ್ಞಾನವನ್ನು ದಾಟಿ ಅದರಾಚೆಗಿದ್ದಾನೆ. ಮನುಷ್ಯನು ತನ್ನ ಅಜ್ಞಾನವನ್ನು (ಅಹಂಕಾರ) ಕಳೆದುಕೊಂಡರೆ, ಪರಮಾತ್ಮನ ಅನುಭವವನ್ನು ಹೊಂದುತ್ತಾನೆ.

ಪ್ರಯಾಣಕಾಲೇ ಮನಸಾಚಲೇನ
ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ |
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್
ಸ ತಂ ಪರಂ ಪುರುಷಮುಪೈತಿ ದಿವ್ಯಮ್ || 10 ||
ಅರ್ಥ : ಮರಣ ಕಾಲದಲ್ಲಿ ಸ್ಥಿರವಾದ ಮನಸ್ಸಿನಿಂದಲೂ, ಭಕ್ತಿಯಿಂದಲೂ ಕೂಡಿ, ಯೋಗಬಲದಿಂದ ಎರಡೂ ಹುಬ್ಬುಗಳ ಮಧ್ಯದಲ್ಲಿ ಪ್ರಾಣವಾಯುವನ್ನು ನಿಲ್ಲಿಸಿ (ಪ್ರಾಣಯಾಮ ವಿಧಾನದಿಂದ) ಧ್ಯಾನ ಮಾಡಿದರೆ ಅವನು ದಿವ್ಯವಾದ ಪರಮ ಪುರುಷನನ್ನು ಸೇರುತ್ತಾನೆ.
ಇಲ್ಲಿ ಪ್ರಯಾಣಕಾಲೇ ಎಂದರೆ ಮರಣಕಾಲದಲ್ಲಿ ಎಂದು ಅರ್ಥ ಮಾಡಬಾರದು. ಏಕೆಂದರೆ ಮರಣಕಾಲದಲ್ಲಿ ಈ ರೀತಿಯಾಗಿ ಏಕಾಗ್ರ ಮನಸ್ಸಿನಿಂದ ಸ್ಥಿರವಾಗಿ ಕುಳಿತುಕೊಂಡು ಪ್ರಾಣವಾಯುವನ್ನು ಹುಬ್ಬುಗಳ ಮಧ್ಯದಲ್ಲಿ ನಿಲ್ಲಿಸುವುದು ಅಸಾಧ್ಯವಾದುದೇ ಸರಿ. ಹೀಗೆ ಅಸಾಧ್ಯವಾದುದನ್ನು ಮಾಡಿದರೆ ಪರಮಾತ್ಮನನ್ನು ಸೇರಬಹುದು ಎಂದು ಹೇಳುವ ಉದ್ದೇಶ ಗೀತೆಗಿಲ್ಲ. ಸಾಧ್ಯವಾಗುವ ಮಾರ್ಗವನ್ನು ತೋರಿಸಿ, ಅದನ್ನು ಸುಲಭಗೊಳಿಸುವ ವಿಧಾನವನ್ನು ವಿವರಿಸುವುದೇ ಗೀತೆಯ ದಾರಿ. ಮರಣ ಕಾಲದಲ್ಲಿ ಎಂದರೆ ‘ಅಹಂಕಾರವು ನಾಶ ಹೊಂದುವ ಕಾಲದಲ್ಲಿ ಎಂಬ ಅರ್ಥವನ್ನು ಮಾಡಿದರೆ ಅದು ಗೀತೆಯ ಉಪದೇಶಕ್ಕೆ ಸರಿಹೋಗುತ್ತದೆ. ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಂಡು, ಬುದ್ಧಿಯ ಅಧೀನಕ್ಕೆ ಒಳಪಡಿಸಿ ಆತ್ಮಧ್ಯಾನದಲ್ಲಿ ಸ್ಥಿರಪಡಿಸಿರುವಾಗ ಮನಸ್ಸು ಏಕಾಗ್ರವಾಗಿ ಅಹಂಕಾರದ ಅಂಚನ್ನು ದಾಟುವ ಈ ಕಾಲದಲ್ಲಿ ಮೇಲೆ ಹೇಳಿದಂತೆ ಭಕ್ತಿಯಿಂದಲೂ, ಯೋಗದಿಂದಲೂ ಧ್ಯಾನ ಮಾಡಿದರೆ ಪರಮಾತ್ಮನನ್ನು ಹೊಂದುತ್ತಾನೆ ಎಂಬ ಅರ್ಥವು ಸಾಧುವಾಗಿದೆ.
ಭಕ್ತಿ ಎಂದರೆ ಪ್ರೇಮ ಮಾಡುವವನು, ಪ್ರೇಮಿಸುವ ವಸ್ತುವಿನೊಡನೆ ಸರ್ವವಿಧದಿಂದಲೂ ಏಕೀ ಭಾವವನ್ನು ಹೊಂದುವುದು. ಶಂಕರಾಚಾರ್ಯರ ವ್ಯಾಖ್ಯಾನದಂತೆ ಇಲ್ಲಿ ಭಕ್ತಿ ಎಂದರೆ, ಅಹಂಕಾರದಿಂದ ಕೂಡಿದ ಜೀವಿಯು ಅಹಂಕಾರವನ್ನು ತ್ಯಜಿಸಿ ತಾನು ಪ್ರೀತಿಸುವ ಪರಮಾತ್ಮನೊಡನೆ, ಏಕೀ ಭಾವವನ್ನು ಹೊಂದುವುದು. ಯೋಗಬಲ ಎಂದರೆ ಕೇವಲ ಕುಂಡಿಲಿನಿ ಶಕ್ತಿಯನ್ನು ಜಾಗೃತಗೊಳಿಸುವ ಯೋಗಾಭ್ಯಾಸ ಎಂಬ ಸಂಕುಚಿತ ಅರ್ಥವನ್ನು ಮಾಡಬಾರದು. ಧ್ಯಾನ, ಭಜನಾದಿ ಇತರೆ ವಿಧಾನಗಳ ಮೂಲಕ ಸತತವಾಗಿ ಪರಮಾತ್ಮನ ಉಪಾಸನೆಯನ್ನು ಮಾಡುವವರೂ ಸಹ, ಸತತ ಅಭ್ಯಾಸದಿಂದ ಆತ್ಮಶಕ್ತಿಯನ್ನು ಗಳಿಸಿಕೊಂಡಿರುತ್ತಾರೆ. ಈ ಶಕ್ತಿಗೆ ಯೋಗಬಲ ಎನ್ನಬೇಕು.

ಯದಕ್ಷರಂ ವೇದವಿದೋ ವದಂತಿ
ವಿಶಂತಿ ಯದ್ಯತಯೋ ವೀತರಾಗಾಃ |
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ
ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ || 11 ||
ಅರ್ಥ : ವೇದವನ್ನು ತಿಳಿದವರು ಯಾವುದಕ್ಕೆ ಅಕ್ಷರ (ನಾಶರಹಿತವಾದುದು) ಎನ್ನುತ್ತಾರೋ, ಆಸೆಗಳನ್ನು ತ್ಯಜಿಸಿ ಇಂದ್ರಿಯ ನಿಗ್ರಹವನ್ನು ಮಾಡಿದ ಯೋಗಿಗಳು ಯಾವ ಪದವಿಯನ್ನು ಸೇರುತ್ತಾರೋ, ಯಾವುದನ್ನು ಅಪೇಕ್ಷಿಸಿ ಬ್ರಹ್ಮಚರ್ಯೆಯನ್ನಾಚರಿಸುತ್ತಾರೋ, ಆ ಶ್ರೇಷ್ಠವಾದ ಪದವನ್ನು (ಅಕ್ಷರ) ನಿನಗೆ ಸಂಕ್ಷೇಪವಾಗಿ ವರ್ಣಿಸುತ್ತೇನೆ.
ವೀತರಾಗಃ – ಇಡೀ ಗೀತೆಯು ಆಸೆಯ ತ್ಯಾಗವನ್ನೇ ಹಾಡುತ್ತದೆ. ಆಸೆಯು ಎಲ್ಲಾ ತರಹದ ಅಭಿವೃದ್ಧಿಗೂ ಆತಂಕವೆಂದೂ ಸಿದ್ಧಿಯನ್ನು ಪಡೆಯಲು ಅದನ್ನು ತ್ಯಜಿಸುವುದು ಅವಶ್ಯಕವೆಂದು ಹೇಳಲಾಗಿದೆ. ಸ್ವಾಭಾವಿಕವಾಗಿ ಉತ್ಪನ್ನವಾಗುವ ಇಂದ್ರಿಯಗಳ ಆಸೆಯನ್ನು ಅಮುಕಬೇಕೆಂದು ಗೀತೆಯು ಹೇಳುವುದಿಲ್ಲ. ಆಸೆಗಳನ್ನು ನಿಗ್ರಹ ಮಾಡುವುದು ಮತ್ತು ಆಸೆಗಳನ್ನು ತ್ಯಜಿಸುವುದು ಇವುಗಳಲ್ಲಿಯ ವ್ಯತ್ಯಾಸವನ್ನು ಗಮನಿಸಬೇಕು. ಗೀತೆಯು ಆಸೆಯನ್ನು ತ್ಯಜಿಸಬೇಕೆಂದು (ತ್ಯಾಗ) ಹೇಳುತ್ತದೆ. ಮನಸ್ಸು ಬುದ್ಧಿಗಳು ವಿಕಾಸವನ್ನು ಹೊಂದಿದ ಹಾಗೆ ಅದನ್ನು ಕ್ರಮೇಣ ಸಾಧಿಸಬೇಕು. ಏಕಾಏಕಿ ದಮನ ಮಾಡುವುದಲ್ಲ. ಹೊಸದಾಗಿ ಉದಯಿಸಿದ ಹೂವಿನ ಮೊಗ್ಗು, ಕ್ರಮೇಣ ಅರಳಿ ಹೂವಾಗಿ ತನ್ನ ಸುಂದರವಾದ ಪಟಲಗಳನ್ನು ತ್ಯಾಗಮಾಡಿ, ಕಳಚಿ ಹಾಕಿ, ಫಲವಾಗಲು ತಯಾರಾಗುತ್ತದೆ. ತಾನು ವಿಕಾಸವನ್ನು ಹೊಂದುವುದಕ್ಕಾಗಿ ಹೂವು ಮಾಡಿದ ತ್ಯಾಗವಾಗಿದೆ ಇದು. ಮನುಷ್ಯನು ಸಹ ಇದೇ ರೀತಿಯಾಗಿ ತ್ಯಾಗವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲಿ ತ್ಯಾಗ ಎಂದರೆ ಇಂದ್ರಿಯಗಳಿಗೆ ದುಃಖವನ್ನುಂಟುಮಾಡುವುದಕ್ಕೆ ವಿಧಿಸುವ ಶಿಕ್ಷೆಯಲ್ಲ. ಆತ್ಮೋನ್ನತಿಗಾಗಿ ಪ್ರಾರಂಭಿಸಿದ ಪ್ರಯಾಣದಲ್ಲಿಯ ಒಂದು ಹೆಜ್ಜೆ. ನಮ್ಮಲ್ಲಿ ಆಸೆಯ ಪ್ರಮಾಣವು ಸಂಖ್ಯೆಯು ಹೆಚ್ಚಿದಂತೆ, ಮನಸ್ಸಿನ ಉದ್ರೇಕವೂ, ಚಂಚಲತೆಯೂ, ಹೆಚ್ಚಾಗುತ್ತದೆ. ಮನಸ್ಸಿನ ಅಲ್ಲೋಲಕಲ್ಲೋಲವು ಹೆಚ್ಚಾದಷ್ಟೂ ಮಾನಸಿಕ ಶಕ್ತಿಯೂ, ಏಕಾಗ್ರತೆಯೂ ಕಡಿಮೆಯಾಗುತ್ತದೆ. ಆಂತರಿಕ ಮನಸ್ಸಿನಲ್ಲಿ ಶಾಂತತೆ ಹಾಗೂ ಏಕಾಗ್ರತೆ ಬೆಳೆದಷ್ಟು ಸಾಧಕನು ಸಿದ್ಧಿಯ ಹತ್ತಿರ ಹೋಗುತ್ತಾನೆ. ಅಂತೆಯೇ ಆಸೆಗಳನ್ನು ಕಳೆದುಕೊಳ್ಳಬೇಕೆಂದು, ಅವುಗಳನ್ನು ತ್ಯಜಿಸಿಬೇಕೆಂದು ಗೀತೆಯು ಒತ್ತಿ ಒತ್ತಿ ಹೇಳುತ್ತದೆ.
ಉಪಾಸನೆಯ ಪ್ರಾರಂಭಿಕ ತಯಾರಿಯನ್ನು ವಿವರಿಸಲಾಗಿದೆ.

ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ |
ಮೂಧ್ನ್ರ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ || 12 ||
ಅರ್ಥ : ಎಲ್ಲಾ ದ್ವಾರಗಳನ್ನೂ ಮುಚ್ಚಿ, ಮನಸ್ಸನ್ನು ಹೃದಯದಲ್ಲಿ ನಿಲ್ಲಿಸಿ, ಪ್ರಾಣವಾಯುವನ್ನು ಶಿರಸ್ಸಿನಲ್ಲಿ ಸೇರಿಸಿ, ಆತ್ಮಧ್ಯಾನದಲ್ಲಿ ನಿರತನಾಗಿ.

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರಮ್ |
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ || 13 ||

ಅರ್ಥ : ‘ಓಂ’ ಎಂಬ ಬ್ರಹ್ಮಸೂಚಕವಾದ ಒಂದಕ್ಷರವನ್ನು ಬಾಯಿಯಿಂದ ಉಚ್ಚರಿಸುತ್ತಾ, ನನ್ನನ್ನೇ ಧ್ಯಾನಮಾಡುತ್ತಾ, ಯಾರು ಶರೀರವನ್ನು ಬಿಟ್ಟುಹೋಗುತ್ತಾರೋ ಅವನು ಪರಮಗತಿಯನ್ನು ಸೇರುತ್ತಾನೆ.
ಧ್ಯಾನದಲ್ಲಿ ಮನಸ್ಸನ್ನು ಏಕಾಗ್ರವಾಗಿ ಮಾಡಲು ಇಂದ್ರಿಯ ನಿಗ್ರಹ, ಮನಸ್ಸನ್ನು ಹೃದಯದಲ್ಲಿ ನಿಲ್ಲಿಸುವುದು, ಮತ್ತು ಪ್ರಾಣವಾಯುವನ್ನು ಶಿರಸ್ಸಿನಲ್ಲಿ ಸೇರಿಸುವುದು ಈ ಮೂರು ಕಾರ್ಯಗಳನ್ನು ಸಾಧಿಸುವುದು ಅವಶ್ಯಕವೆಂದು ಈ ಎರಡು ಶ್ಲೋಕಗಳಲ್ಲಿ ಹೇಳಲಾಗಿದೆ.
ಇಂದ್ರಿಯ ನಿಗ್ರಹ- ಸಾವಿರಾರು ತೂತುಗಳಿರುವ ಚರ್ಮ, ಕಿವಿ, ಮೂಗು, ಕಣ್ಣು ಮತ್ತು ನಾಲಿಗೆ ಈ ಐದು ಇಂದ್ರಿಯಗಳ ಅಥವಾ ದ್ವಾರಗಳ ಮುಖಾಂತರ ಇಂದ್ರಿಯ ವಿಷಯಗಳ ಸಂವೇದನೆಯು ಮನಸ್ಸನ್ನು ಮುಟ್ಟಿ ಅಲ್ಲಿ ಉದ್ರೇಕವನ್ನೂ, ಆಕರ್ಷಣೆಯನ್ನೂ ಹುಟ್ಟಿಸುತ್ತದೆ. ಈ ಐದು ದ್ವಾರಗಳ ಮುಖಾಂತರವೇ ಪ್ರಪಂಚದ ವಿವಿಧ ಆಕರ್ಷಣೆಗಳು ಮನಸ್ಸನ್ನು ಆಕರ್ಷಿಸುತ್ತವೆ ಮತ್ತು ಈ ದ್ವಾರಗಳ ಮುಖಾಂತರವೇ ಮನಸ್ಸು ಶರೀರದಿಂದ ಹೊರಕ್ಕೆ ಹೋಗಿ, ವಿಷಯ ಸುಖಗಳ ಕೊಳಚೆಯಲ್ಲಿ ಬಿದ್ದು, ಹೊರಳಾಡುತ್ತದೆ. ವಿವೇಕ, ನಿಗ್ರಹ ಮತ್ತು ಅಲಿಪ್ತತೆಗಳ ಮುಖಾಂತರ ಸಾಧಕನು ಈ ದ್ವಾರಗಳನ್ನು ಮೊಟ್ಟಮೊದಲು ಮುಚ್ಚಬೇಕು. ಇದರಿಂದ ಇಂದ್ರಿಯ ವಿಷಯ ಸುಖಗಳು ಮನಸ್ಸನ್ನು ಆಕರ್ಷಿಸುವುದೂ.
ಮನಸ್ಸು ಹೊರಕ್ಕೆ ಓಡಿಹೋಗುವುದೂ ತಪ್ಪಿ ಮನಸ್ಸು ಹತೋಟಿಗೆ ಬರುತ್ತದೆ. ಮನಸ್ಸನ್ನು ಹೃದಯದಲ್ಲಿ ನಿಲ್ಲಿಸುವುದು – ಇಂದ್ರಿಯ ನಿಗ್ರಹ ಮತ್ತು ಅಲಿಪ್ತತೆಯಿಂದ ಮನಸ್ಸು ಉದ್ರೇಕಗೊಳ್ಳದಂತೆ ತಡೆಯಬಹುದು. ಆದರೆ ಹಿಂದಿನ ಜನ್ಮದಲ್ಲಿ ಸಂಪಾದಿಸಿದ ವಾಸನೆಗಳ ಬಲದಿಂದ ಹೊರಗಿನ ಸುಖ ಸಾಧನೆಗಳನ್ನು ನೋಡುವ ಮಾತ್ರದಿಂದ, ಹಳೆಯ ಜ್ಞಾಪಕವು ಮೇಲಕ್ಕೆದ್ದು, ವಿಷಯ ವಾಸನೆಗಳ ಕಡೆಗೆ ಮನಸ್ಸು ಓಡಬಹುದು, ಇಲ್ಲವೇ ತನ್ನೊಳಗೇ ಅವುಗಳ ಚಿಂತನೆಯನ್ನು ಮಾಡಬಹುದು. ನಿಗ್ರಹ ಮಾಡಿದ ಮನಸ್ಸನ್ನು ಬೇರೆ ಕಡೆಗೆ ಕೇಂದ್ರೀಕರಿಸದಿದ್ದರೆ ಅದು ಒಳಗೇ ಬಲಿತು ಹಿಡಿತದಲ್ಲಿಡಲು ಅಸಾಧ್ಯವಾಗಬಹುದು. ಈ ಎರಡು ಕಾರಣಗಳಿಂದಾಗಿ ನಿಗ್ರಹಿಸಲ್ಪಟ್ಟ ಮನಸ್ಸನ್ನು ಹೃದಯದಲ್ಲಿ ನಿಲ್ಲಿಸಬೇಕು, ಅಂದರೆ ಬುದ್ಧಿಯ ಅಧೀನಕ್ಕೆ ಒಳಪಡಿಸಿ, ಆತ್ಮಧ್ಯಾನದ ಕಡೆಗೆ ತಿರುಗಿಸಬೇಕು ಎಂದು ವಿಧಿಸಲಾಗಿದೆ. ವೇದಾಂತ ಭಾಷೆಯಲ್ಲಿ ಹೃದಯ ಎಂದರೆ ರಕ್ತವನ್ನು ಹಂಚುವ ಹೃದಯ ಎಂಬ ಯಂತ್ರವಲ್ಲ. ಹೃದಯ ಎಂದರೆ ಬುದ್ಧಿ ಎಂದು ತಿಳಿದುಕೊಳ್ಳಬೇಕು. ಪ್ರಾಣವನ್ನು ಶಿರಸ್ಸಿನಲ್ಲಿ ನಿಲ್ಲಿಸುವುದೆಂದರೆ ಪ್ರಾಣಾಯಾಮ ಪದ್ಧತಿಯಿಂದ ಪ್ರಾಣಯಾಮವನ್ನು ಹುಬ್ಬುಗಳ ಮಧ್ಯದಲ್ಲಿ ನಿಲ್ಲಿಸುವುದು. ಈ ರೀತಿಯಾಗಿ ಪೂರ್ವ ತಯಾರಿಯನ್ನು ಮಾಡಿಕೊಂಡು ‘ಓಂ’ ಎಂಬ ಅಕ್ಷರ ಜಪವನ್ನು ಮಾಡಬೇಕು. ಹೀಗೆ ಹೊರಗಿನ ಪ್ರಪಂಚದ ಅರಿವನ್ನು ಮರೆತು, ಮನಸ್ಸಿನ ಏಕಾಗ್ರತೆಯಿಂದ ಪರಬ್ರಹ್ಮನನ್ನು ಧ್ಯಾನಿಸುತ್ತಾ ಮಾನಸಿಕವಾಗಿ ಓಂಕಾರದ ಉಚ್ಛಾರಣೆ ಮಾಡುತ್ತಿದ್ದರೆ, ಅಹಂಕಾರವು ಕರಗಿ ಇಲ್ಲವಾಗುತ್ತದೆ. ಇಲ್ಲಿ ಅಹಂಕಾರದ ಮರಣವನ್ನು ಸೂಚಿಸಲಾಗಿದೆಯೇ ಹೊರತು ಶಾರೀರಿಕ ಮರಣವನ್ನಲ್ಲ. ಹೀಗೆ ಅಹಂಕಾರವು ಮರಣ ಹೊಂದಿದರೆ ಸಾಧಕನು ಅಖಂಡವಾದ ಪರಬ್ರಹ್ಮನಲ್ಲಿ ಐಕ್ಯವಾಗುತ್ತಾನೆ. ತಾನೇ ಪರಬ್ರಹ್ಮ ಎಂಬ ಅರಿವನ್ನು ಪಡೆಯುತ್ತಾನೆ. ಪರಮಾತ್ಮ + ಅಹಂಕಾರ = ಜೀವ. ಪರಮಾತ್ಮ ಜೀವ – ಅಹಂಕಾರ = ಪರಮಾತ್ಮ .
ಜೀವನಿಂದ ಅಹಂಕಾರವನ್ನು ತೆಗೆದುಬಿಟ್ಟರೆ ಉಳಿಯುವುದೇ

ಪರಮಾತ್ಮವನ್ನು ಬೇರೆ ರೀತಿಯಿಂದಲೂ ಪಡೆಯಬಹುದು.

ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ |
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ || 14 ||
ಅರ್ಥ : ಪಾರ್ಥನೇ, ಯಾವಾಗಲೂ ನನ್ನನ್ನೇ ಚಿಂತಿಸುತ್ತಾ ಇರುವ ನಿತ್ಯಯುಕ್ತನಾದ ಯೋಗಿಗೆ ನಾನು ಸುಲಭವಾಗಿ ಸಿಗುತ್ತೇನೆ.
ನಿತ್ಯಯುಕ್ತಃ – ಮನಸ್ಸನ್ನು ಇಂದ್ರಿಯ ವಿಷಯಗಳ ಕಡೆಗೆ ಓಡಿಹೋಗಲು ಬಿಡದೆ ತಡೆಹಿಡಿದು ಅದನ್ನು ಆತ್ಮಧ್ಯಾನದ ಕಡೆಗೆ ತಿರುಗಿಸಿರುವವನಿಗೆ ನಿತ್ಯಯುಕ್ತ ಎಂದು ಹೆಸರು – ವಾರಕ್ಕೊಮ್ಮೆ ಇಲ್ಲವೆ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧ್ಯಾನಮಾಡುವುದನ್ನು ಗೀತೆ ಹೇಳುವುದಿಲ್ಲ. ಪ್ರತಿನಿತ್ಯವೂ ಕ್ಲುಪ್ತಕಾಲದಲ್ಲಿ ಧ್ಯಾನ ಮಾಡುವುದು ಅವಶ್ಯಕ. ಅದರಂತೆಯೇ ಸಾಧ್ಯವಿದ್ದ ಮಟ್ಟಿಗೂ ಇಡೀ ದಿವಸವೂ, ಎಲ್ಲಾ ಕಾರ್ಯಗಳ ಮಧ್ಯದಲ್ಲಿ ಸಹ ಪರಮಾತ್ಮನ ಜ್ಞಾಪಕವನ್ನು ಮಾಡಿಕೊಳ್ಳಬೇಕು. ಇಂತಹ ಸಾಧಕನಿಗೆ ಸುಲಭವಾಗಿ ಸಿಗುತ್ತೇನೆ ಎಂದು ಪರಮಾತ್ಮನು ಇಲ್ಲಿ ಆಶ್ವಾಸನೆಯನ್ನು ಕೊಟ್ಟಿದ್ದಾನೆ.
ಪರಮಾತ್ಮನನ್ನು ಪಡೆಯಲು ಈ ರೀತಿ ಶ್ರಮಪಡುವುದಾದರೂ ಏಕೆ ?

ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ |
ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ || 15 ||
ಅರ್ಥ : ನನ್ನನ್ನು ಪಡೆದ ನಂತರ ಇಂತಹ ಮಹಾತ್ಮರು ದುಃಖಕ್ಕೆ ಕಾರಣವಾದ ಮತ್ತು ನಾಶವುಳ್ಳ ಮನುಷ್ಯ ಜನ್ಮವನ್ನು ಪುನಃ ಪಡೆಯುವುದಿಲ್ಲ. ಅವರು ಪರಮಗತಿಯನ್ನು ಹೊಂದುತ್ತಾರೆ.
ವ್ಯವಹಾರದಲ್ಲಿ ಯಾವುದಾದರೊಂದು ಶ್ರಮಸಾಧ್ಯವಾದ ಕೆಲಸವನ್ನು ಕೈಗೊಳ್ಳುವಾಗ ಅದರಿಂದ ಲಭಿಸುವ ಲಾಭವೇನು ? ಆಕಾರ್ಯದಿಂದ ಸಾಧಿಸುವ ಗುರಿ ಏನು ಎಂದು ವಿಚಾರಿಸುವುದು ಸ್ವಾಭಾವಿಕ. ಸಾಧಿಸಬಹುದಾದ ಗುರಿ ಅಥವಾ ಧ್ಯೇಯವು ಉಚ್ಛವಾಗಿದ್ದರೆ, ಕಾರ್ಯವು ಎಷ್ಟೇ ಕಠಿಣವಿದ್ದರೂ, ಆತಂಕಗಳು ಎಷ್ಟೇ ಬಂದರೂ, ಅವುಗಳನ್ನು ಎದುರಿಸುವ, ದಾಟುವ ಎದೆಗಾರಿಕೆ ಬರುತ್ತದೆ. ಅಂತೆಯೇ ಪರಮಾತ್ಮನನ್ನು ಪಡೆಯುವುದರಿಂದ ಸಿಗುವ ಲಾಭವೇನು ಎಂಬುದನ್ನು ಇಲ್ಲಿ ವರ್ಣಿಸಲಾಗಿದೆ. ಪುನರ್ಜನ್ಮವು ದುಃಖದಾಯಕವೆಂದು ಎಲ್ಲಾ ಶಾಸ್ತ್ರಗಳೂ ಹೇಳುತ್ತವೆ. ಪರಮಾತ್ಮನಲ್ಲಿ ಐಕ್ಯ ಹೊಂದಿದ ನಂತರ ಇಂತಹ ದುಃಖಕರವಾದ ಪುನರ್ಜನ್ಮದ ಪೀಠಿಕೆಯಲ್ಲಿ ಹೆದರಿಕೆ ಎಂಬ ಆಶ್ವಾಸನೆಯು ಇಲ್ಲಿ ಕೊಡಲ್ಪಟ್ಟಿದೆ.
ಉಪನಿಷತ್ಕಾಲದ ಪ್ರಾರಂಭದಲ್ಲಿ ಮರಣವು ದುಃಖಕರವೆಂದು ಮರಣ ರಹಿತನಾಗುವುದು
ಅಮೃತತ್ವಮ್ – ಪರಮ ಧ್ಯೇಯವೆಂದು ತಿಳಿಯಲಾಗಿತ್ತು. ಅನುಭವವೂ, ವಿಚಾರ ಶಕ್ತಿಯೂ ಬೆಳೆದಂತೆ ಮರಣದ ಬಗ್ಗೆ ಇರುವ ಕಲ್ಪನೆಯು ಬದಲಾಯಿತು. ಮರಣವೆಂಬುದು ಜೀವನದಲ್ಲಿ ಉದ್ದಕ್ಕೂ ಒದಗುವ ಕೇವಲ ಒಂದು ಬದಲಾವಣೆ ಮಾತ್ರವೆಂದೂ ಮರಣದಿಂದ ಇರುವಿಕೆಯ ಕೊನೆಯಾಗದೆ,
ಆ ನಂತರ ಮುಂದಿನ ಇನ್ನೊಂದು ಸ್ಥಿತಿಯು ¨ಂದೇ ಬರುತ್ತದೆಂದೂ ಆದ್ದರಿಂದ ಪುನರ್ಜನ್ಮವಿಲ್ಲದಂತೆ ಮಾಡುವುದೇ ಶ್ರೇಷ್ಠವಾದ ಧ್ಯೇಯವೆಂದೂ ತಿಳಿಯಲಾಯಿತು. ಪುನರ್ಜನ್ಮವು ಅಹಂಕಾರದಿಂದ ವಾಸನೆಯ ಬಲದಿಂದ ಉತ್ಪನ್ನವಾಗುತ್ತದೆ. ವಿದ್ಯುತ್ತು ಬಲ್ಬಿನೊಡನೆ ಸಂಯೋಗ ಹೊಂದಿದರೆ ಮಾತ್ರ ಬೆಳಕು ಬರುತ್ತದೆ. ಬಲ್ಬು ಒಡೆದು ಹೋದರೆ ಅದರೊಳಗೆ ವಿದ್ಯುತ್ತು ಸಂಚಾರವಾದರೂ ಬೆಳಕನ್ನು ಕೊಡಲಾರದು. ಅಂತೆಯೇ ಅಹಂಕಾರವು ಕಳಚಿ ಹೋದರೆ ಪುನರ್ಜನ್ಮವಿಲ್ಲ. ಎಚ್ಚರಾದ ಮೇಲೆ ಕನಸಿನೊಳಗಿನ ಹೆಂಡತಿ ಮಕ್ಕಳೊಡನೆ ಇರುವ ಸಂಬಂಧವು ತಾನಾಗಿಯೇ ಕಳಚಿಹೋದಂತೆ ಆತ್ಮಜ್ಞಾನವಾದ ಮೇಲೆ ಶರೀರ, ಮನಸ್ಸು, ಬುದ್ಧಿ ಹಾಗೂ ಅವುಗಳಿಂದ ಉತ್ಪನ್ನವಾಗುವ ಸಂವೇದನೆಗಳಿಂದ ನಿರ್ಲಿಪ್ತನಾಗಿರಬಹುದು.
ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋ„ರ್ಜುನ |
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮನ ವಿದ್ಯತೇ || 16 ||
ಅರ್ಥ : ಅರ್ಜುನನೇ, ಬ್ರಹ್ಮಲೋಕದವರೆಗೆ ಇರುವ ಎಲ್ಲಾ ಲೋಕಗಳಲ್ಲಿರುವವರೂ ತಮ್ಮ ಆಯಸ್ಸು ತೀರಿದ ಮೇಲೆ ಪುನಃ ಹುಟ್ಟುತ್ತಾರೆ. ಆದರೆ ನನ್ನನ್ನು ಸೇರಿದವರಿಗೆ ಪುನರ್ಜನ್ಮವಿಲ್ಲ.
ಕೆಲವು ನಿರ್ದಿಷ್ಟ ಯಜ್ಞ ಯಾಗಾದಿಗಳು ಹಾಗೂ ಉಪಾಸನೆಗಳನ್ನು ಮಾಡುವುದರಿಂದ ಸಾಧಕರು ಸ್ವರ್ಗಲೋಕ, ಬ್ರಹ್ಮಲೋಕಗಳಿಗೆ ಹೋಗುತ್ತಾರೆಂದು ಹೇಳಲಾಗಿದೆ. ಅವರು ಆಯಾಯಾ ಲೋಕಗಳಿಗೆ ಹೋಗಿ ತಮ್ಮ ಪುಣ್ಯವು ತೀರುವವರೆಗೂ ಅಲ್ಲಿ ಸುಖವನ್ನು ಅನುಭವಿಸಿ ಉಳಿದ ವಾಸನೆಗಳನ್ನು ಭೋಗಿಸುವುದಕ್ಕಾಗಿ ಪುನಃ ಭೂಲೋಕದಲ್ಲಿ ಹುಟ್ಟಬೇಕಾಗುತ್ತದೆ. ಆದರೆ ಅಹಂಕಾರವನ್ನು ಕಳಚಿ ಹಾಕಿ ನನ್ನನ್ನು ಸೇರಿದವರಿಗೆ ಮಾತ್ರ ಪುನರ್ಜನ್ಮವಿಲ್ಲ. ಎಚ್ಚರಾದ ಮೇಲೆ ಪುನಃ ಕನಸಿನ ರಾಜ್ಯದೊಳಕ್ಕೆ ಪ್ರವೇಶ ಇಲ್ಲದಿರುವಂತೆ.

ಸಹಸ್ರಯುಗಪರ್ಯಂತಮಹರ್ಯದ್ಬ್ರಹ್ಮಣೋ ವಿದುಃ |
ರಾತ್ರಿಂ ಯುಗಸಹಸ್ರಾಂತಾಂ ತೇ„ಹೋರಾತ್ರವಿದೋ ಜನಾಃ || 17 ||
ಅರ್ಥ : ಮನುಷ್ಯರ ಒಂದು ಸಾವಿರ ಯುಗಗಳ ಕಾಲವು ಬ್ರಹ್ಮನ ಒಂದು ಹಗಲೆಂದೂ ಮತ್ತೆ ಪುನಃ ಒಂದು ಸಾವಿರ ಯುಗ ಕಾಲವು ಒಂದು ರಾತ್ರಿ ಎಂದೂ ಕಾಲದ ಅಳತೆಯನ್ನು ತಿಳಿದ ವಿದ್ವಾಂಸರು ಲೆಕ್ಕ ಹಾಕಿದ್ದಾರೆ.
ಮನುಷ್ಯನು ಮಾನಸಿಕವಾಗಿ ಉದ್ರೇಕಗೊಂಡಿರುವಾಗ, ಯಾವುದಾದರೂ ಕಾತರದಿಂದ ಕೂಡಿರುವಾಗ, ಅವನಿಗೆ ಕಾಲವು ಬಹಳ ನಿಧಾನವಾಗಿ ತಡವಾಗಿ ಚಲಿಸುತ್ತದೆ. ಆದರೆ ಅದೇ ಮನುಷ್ಯನು ಸಂತೋಷದಲ್ಲಿರುವಾಗ, ಯಾವುದಾದರೂ ಸುಖದಲ್ಲಿ ಮುಳುಗಿರುವಾಗ, ಇಲ್ಲವೇ ಸಂತೋಷ ಕೂಟದಲ್ಲಿ ಮಗ್ನನಾಗಿರುವಾಗ, ಅವನಿಗೆ ಕಾಲವು ಅತಿ ಜಾಗ್ರತೆಯಾಗಿ ಚಲಿಸುತ್ತದೆ. ಇದೇ ರೀತಿ ದುಃಖದಲ್ಲಿರುವಾಗ ಪ್ರತಿಯೊಂದು ಘಳಿಗೆಯೂ ಒಂದೊಂದು ಘಂಟೆಗಿಂತಲೂ ತಡವಾಗಿರುವಂತೆ ಕಾಣುತ್ತದೆ. ಈ ಅನುಭವದ ಮೇಲೆ ಮನುಷ್ಯನಲ್ಲಿ ಉಂಟಾಗುವ ಎರಡು ವಿಧದ ಅನುಭವಗಳ ಮಧ್ಯದ ಅವಧಿಗೆ ‘ಕಾಲ’ ಎಂಬ ಹೆಸರನ್ನು ಕೊಡಲಾಗಿದೆ. ಮನಸ್ಸಿನ ಮೇಲೆ ಅನುಭವಗಳು, ಉದ್ರೇಕಗಳು ಹೆಚ್ಚಾದಷ್ಟು ಕಾಲವು ತಡವಾಗಿ ನಿಧಾನವಾಗಿ ಚಲಿಸುತ್ತದೆ. ಮನಸ್ಸು ಶಾಂತವಾಗಿದ್ದು, ಒಂದೇ ಅನುಭವವು ಹೆಚ್ಚು ಕಾಲವಿದ್ದಷ್ಟೂ ಕಾಲವು ವೇಗವಾಗಿ ಚಲಿಸುತ್ತದೆ. ಒಂದೇ ತರಹದ ಅನುಭವವಿರುವಾಗ ಕಾಲವನ್ನು ಅಳೆಯುವುದಕ್ಕೆ ಆಗುವುದಿಲ್ಲ. ಕೇವಲ ಒಂದೇ ಒಂದು ಬಿಂದು ಇರುವಾಗ ಉದ್ದವನ್ನು ಅಳೆಯಲು ಆಗುವುದಿಲ್ಲ. ಉದ್ದವನ್ನು ಅಳೆಯಬೇಕಾದರೆ ಕನಿಷ್ಟ ಪಕ್ಷ ಎರಡು ಬಿಂದುಗಳಾದರೂ ಬೇಕು. ಕಾಲದ ಅಳತೆಗೂ ಅಷ್ಟೆ. ಇದಕ್ಕೆ ಕನಿಷ್ಟ ಪಕ್ಷ ಎರಡು ಅನುಭಗಳಾದರೂ ಬೇಕು. ಈ ಅಳತೆಯ ಮೇರೆಗೆ ಮೇಲಿನ ಲೋಕಗಳಲ್ಲಿ ಸ್ವರ್ಗಲೋಕ, ಬ್ರಹ್ಮಲೋಕ ಇತ್ಯಾದಿ. ಜನರ ಮಾನಸಿಕ ಶಾಂತಿಯು ಹೆಚ್ಚು ಹೆಚ್ಚಾಗಿರುವುದರಿಂದ ಅವರ ಕಾಲಮಾನವು ನಮ್ಮ ಕಾಲಮಾನಕ್ಕಿಂತ ದೀರ್ಘವಾದುದೆಂದು ಹಿಂದಿನ ವಿಜ್ಞಾನಿಗಳು ಕಂಡು ಹಿಡಿದರು. ಬ್ರಹ್ಮಲೋಕದಲ್ಲಿ ಮನಃಶಾಂತಿಯು ಬಹಳ ಬಲವಾಗಿರುವುದರಿಂದ ಹೆಚ್ಚು ಸ್ಥಿರವಾಗಿರುವುದರಿಂದ ಅಲ್ಲಿಯ ಕಾಲಮಾನವು ಅತಿ ದೀರ್ಘವಾದುದಾಗಿದೆ.

ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಯೇ |
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ || 18 ||
ಅರ್ಥ : ಅರ್ಥ : ಬ್ರಹ್ಮನ ದಿವಸವು ಪ್ರಾರಂಭವಾದ ಮೇಲೆ, ಅವ್ಯಕ್ತರಿಂದ ವ್ಯಕ್ತವಾದ ಈ ಲೋಕದ ಸೃಷ್ಟಿಯಾಗುತ್ತದೆ ಮತ್ತು ಅವನ ರಾತ್ರಿಯು ಪ್ರಾರಂಭವಾದ ಮೇಲೆ ಈ ಎಲ್ಲಾ ಸೃಷ್ಟಿಯೂ ಅವ್ಯಕ್ತದಲ್ಲಿ ಸೇರಿಹೋಗುತ್ತದೆ.

ಭೂತಗ್ರಾಮಃ ಸ ಏವಾಯಂ ಭೂತ್ವಾಭೂತ್ವಾ ಪ್ರಲೀಯತೇ |
ರಾತ್ರ್ಯಾಗಮೇ„ವಶಃ ಪಾರ್ಥ ಪ್ರಭವತ್ಯಹರಾಗಮೇ || 19 ||
ಅರ್ಥ : ಎಲ್ಲಾ ಜೀವಿಗಳು ಈ ರೀತಿಯಾಗಿ ಬ್ರಹ್ಮನ ಹಗಲಿನಲ್ಲಿ ಹುಟ್ಟುತ್ತವೆ ಮತ್ತು ಅವನ ರಾತ್ರಿಯು ಪ್ರಾರಂಭವಾದ ಕೂಡಲೆ ಅವನಲ್ಲಿ ಸೇರಿಹೋಗುತ್ತವೆ. ಈ ಚಕ್ರವು ಹೀಗೆ ತಿರುಗುತ್ತಲೇ ಇದೆ.
ವೇದಾಂತರೀತ್ಯಾ ಸೃಷ್ಟಿ ಅಥವಾ ಹುಟ್ಟುವಿಕೆ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಕುಂಬಾರನು ಮಣ್ಣಿನಿಂದ ತರತರಹದ ಮಡಿಕೆಗಲನ್ನು ಸೃಷ್ಟಿಸುತ್ತಾನೆ. ಈ ಮಣ್ಣಿನಲ್ಲಿ ಮಡಿಕೆಯ ರೂಪಗುಣಗಳೆಲ್ಲವೂ ಮೊದಲೇ ಅವ್ಯಕ್ತವಾಗಿದ್ದವು. ಅವ್ಯಕ್ತವಾಗಿದ್ದುದನ್ನು ಅವನು ವ್ಯಕ್ತರೂಪಕ್ಕೆ ತಂದು ಅದಕ್ಕೆ ಒಂದು ಹೆಸರನ್ನು ಕೊಟ್ಟನು. ಮಣ್ಣಿನಲ್ಲಿ ಮಡಿಕೆಯ ಗುಣಗಳಿವೆಯೇ ಹೊರತು ‘ಲಾಡು’ ವಿನ ಗುಣವಿಲ್ಲ. ಮಣ್ಣಿನಿಂದ ಒಂದು ಸಣ್ಣ ತುಣುಕು ಲಾಡುವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ. ‘ಲಾಡು’ ಸೃಷ್ಟಿಗೆ ಆ ಗುಣಗಳು ಅವ್ಯಕ್ತವಾಗಿರುವ ವಸ್ತುವೇ ಬೇಕು.
ಮಾವಿನ ಓಟೆಯು (ಬೀಜ) ಮಾವಿನ ಮರವನ್ನೂ ಹಸುವು ಹಸುವನ್ನೂ (ಗೋವು) ಹುಟ್ಟಿಸುವಂತೆ, ಮನಸ್ಸಿನ ಸದ್ವಿಚಾರಗಳು ಪುನಃ ಅದೇ ತರಹದ ಸದ್ವಿಚಾರಗಳನ್ನು ಹುಟ್ಟಿಸುತ್ತವೆ. ಇದರಿಂದ ಕ್ರಮೇಣ ಮುಂದೆ ಮನಸ್ಸಿನಲ್ಲಿ ಸದ್ವಿಚಾರಗಳ ದೊಡ್ಡ ವಿಚಾರ ತರಂಗಗಳೇಳುತ್ತವೆ. ಈ ವಿಚಾರಗಳ ವಾಸನೆಯ ನಮ್ಮ ಇಂದ್ರಿಯ ಮನಸ್ಸುಗಳಲ್ಲಿ ಅವ್ಯಕ್ತವಾಗಿ, ಸುಪ್ತವಾಗಿದ್ದು ನಮ್ಮ ಈ ಜನ್ಮದ ಆಚಾರ ವಿಚಾರಗಳ ರೂಪದಲ್ಲಿ ಹೊರಬಿದ್ದು. (ಸೃಷ್ಟಿಯಾಗಿ) ನಮ್ಮ ಜೀವನವನ್ನು ಸುಖಮಯವಾಗಿ ಇಲ್ಲವೇ ದುಃಖಮಯವಾಗಿ ಮಾಡುತ್ತವೆ.
ಒಂದು ಧರ್ಮಶಾಲೆಯಲ್ಲಿ ಒಬ್ಬ ವೈದ್ಯ, ವಕೀಲ, ಭಕ್ತ ಮತ್ತು ಒಬ್ಬ ಡಕಾಯಿತ ಹೀಗೆ ನಾಲ್ಕು ಜನರು ಮಲಗಿದ್ದಾರೆ. ರಾತ್ರಿಯನ್ನು ನಿದ್ರಿಸುವಾಗ ಅವರೆಲ್ಲರೂ ಒಂದೇ ರೀತಿಯ ಎಲುಬು ಮಾಂಸಗಳ ರಾಶಿ. ಅವರಲ್ಲಿ ಯಾವ ಭೇದವೂ ಇಲ್ಲ. ಅವರ ಹೃದಯದಲ್ಲಿರುವ ಗುಣಗಳಾವುವೂ ಹೊರಗೆ ಪ್ರಕಟವಾಗುವುದಿಲ್ಲ. ಪ್ರಪಂಚವೆಲ್ಲವೂ ಬ್ರಹ್ಮನಲ್ಲಿ ಈ ರೀತಿಯಾಗಿ ನಿದ್ರಿಸುವಾಗ ಅದು ಪ್ರಳಯ. ಬೆಳಗಾದ ಮೇಲೆ ಈ ನಾಲ್ಕು ಜನರೂ ತಮ್ಮ ತಮ್ಮ ಬೇರೆ ಬೇರೆ ಕರ್ತವ್ಯಗಳಲ್ಲಿ ನಿರತರಾಗುವಂತೆ, ಬ್ರಹ್ಮನ ಹಗಲಿನಲ್ಲಿ ಎಲ್ಲವೂ ಸೃಷ್ಟಿಯಾಗುತ್ತವೆ.

ಪರಸ್ತಸ್ಮಾತ್ತು ಭಾವೋ„ನ್ಯೋ„ವಕ್ತೋವ್ಯಕ್ತಾತ್ ಸನಾತನಃ |
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ || 20 ||
ಅರ್ಥ : ಅವ್ಯಕ್ತಕ್ಕಿಂತ ಶ್ರೇಷ್ಠವಾದ ಪುರಾತನವಾದ ಇನ್ನೊಂದು ‘ಅವ್ಯಕ್ತ’ ಇದೆ. ಎಲ್ಲಾ ಭೂತಗಳು ನಾಶ ಹೊಂದಿದ ಮೇಲೆ ಸಹ ಈ ಅವ್ಯಕ್ತವು ನಾಶವಾಗದೆ ಉಳಿಯುತ್ತದೆ.
ಪಾಠಶಾಲೆಯಲ್ಲಿಯ ಕರಿಯ ಹಲಗೆಯ ಮೇಲೆ ಒಮ್ಮೆ ಗಣಿತದ ಉಪಾಧ್ಯಾಯನು ಬಂದು ತಾನು ಕಲಿಸಬೇಕಾದ ಅಂಶಗಳನ್ನು ಬರೆಯುತ್ತಾನೆ. ಮುಂದಿನ ಪಾಠಕ್ಕೆ ಬರುವ ಇತಿಹಾಸದ ಶಿಕ್ಷಕನು ಅದನ್ನು ಅಳಿಸಿ ಹಾಕಿ, ತಾನು ಬೋಧಿಸಬೇಕಾದುದನ್ನು ಬರೆಯುತ್ತಾನೆ. ನಂತರ ಭೂಗೋಳದ ಶಿಕ್ಷಕನು ಹಾಗು ಮುಂದೆ ಇತರೆ ಶಿಕ್ಷಕರು ಬಂದು ಇದೇ ರೀತಿ ಮೊದಲು ಬರೆದುದೆಲ್ಲವನ್ನು ಅಳಿಸಿ ಹಾಕಿ ತಾವು ಬೋಧಿಸಬೇಕಾದ ಪಾಠಗಳನ್ನು ಬರೆಯುತ್ತಾರೆ. ಬೇರೆ ಬೇರೆ ಉಪಾಧ್ಯಾಯರು ಬರೆದ ವಿಷಯಗಳು ಬೇರೆ ಬೇರೆ ಆದಾಗ್ಯೂ ಎಲ್ಲಾ ಕಾಲದಲ್ಲಿಯೂ ಕರಿಯ ಹಲಗೆಯು ಮಾತ್ರ ವ್ಯತ್ಯಾಸವಾಗದೆ ಒಂದೇ ರೀತಿಯಾಗಿ ಉಳಿದಿದೆ. ಇದರಂತೆಯೇ ಅವ್ಯಕ್ತದಿಂದ ಸೃಷ್ಟಿಯಾದ ಬದಲಾಗುತ್ತಿರುವ ಪ್ರಪಂಚವು, ಸ್ಪಷ್ಟವಾಗಿ ಯಾವಾಗಲೂ ಎದ್ದು ಪ್ರಕಾಶಿಸಬೇಕಾದರೆ, ತನ್ನ ಹಿನ್ನಲೆಯಲ್ಲಿ ಬದಲಾವಣೆಯನ್ನು ಹೊಂದದ ಸ್ಥಿರವಾದ ಅಂದರೆ ಎಲ್ಲಾ ಜೀವಿಗಳು ನಾಶವಾದಾಗ್ಯೂ ತಾನು ಮಾತ್ರ ನಾಶವಾಗದ ವಸ್ತುವು ಇರಬೇಕು. ಎಲ್ಲಾ ಉಪಾಧ್ಯಾಯರು ವಿದ್ಯಾರ್ಥಿಗಳು ತರಗತಿಯನ್ನು ಬಿಟ್ಟು ಮನೆಗೆ ಹೋದಾಗ್ಯೂ ಕರಿಯ ಹಲಗೆಯು ಮಾತ್ರ ನಾಶವಾಗದೆ (ಮನೆಗೆ ಹೋಗದೇ) ಅಲ್ಲಿಯೇ ಉಳಿಯುತ್ತದೆ. ಪರಮಾತ್ಮ ಅಥವಾ ಶುದ್ಧ ಜ್ಞಾನವು ಕರಿಯ ಹಲಗೆಯಂತೆ ಪ್ರಪಂಚದ ಎಲ್ಲಾ ಜೀವಿಗಳು ನಾಶವಾದಾಗ್ಯೂ ತಾನು ಮಾತ್ರ ನಾಶವಾಗದೆ ಸ್ಥಿರವಾಗಿ ಉಳಿಯುತ್ತದೆ. ಈ ಪರಮಾತ್ಮನೇ ಈ ಶ್ಲೋಕದಲ್ಲಿ ಶ್ರೇಷ್ಠವಾದ “ಇನ್ನೊಂದು ಅವ್ಯಕ್ತ” ಎಂದು ಹೇಳಲಾಗಿದೆ.
ಹಿಂದಿನ ಜನ್ಮಗಳ ವಾಸನೆಗಳು ಅವ್ಯಕ್ತವಾಗಿವೆ. ಇದಕ್ಕೆ ವೇದಾಂತ ಭಾಷೆಯಲ್ಲಿ ‘ಅವಿದ್ಯಾ’ ಎಂದು ಹೆಸರು. ಇವು ಮನುಷ್ಯನ ಮನಸ್ಸು, ಬುದ್ಧಿಗಳನ್ನು ಆವರಿಸಿ ಅವನು ‘ತಾನು ಪರಮಾತ್ಮ’ ಎಂಬುದನ್ನು ಮರೆಯುವಂತೆ ಮಾಡುತ್ತದೆ. ನನ್ನಲ್ಲಿ ಇದ್ದ ಅಥವಾ ಇರುವ ವಸ್ತುವಿನ ಬಗ್ಗೆ ಮಾತ್ರ ಅಜ್ಞಾನ ಅಥವಾ ಮರೆವು ಬರುವುದು ಸಾಧ್ಯವಿಲ್ಲ. ಅವಿದ್ಯೆಯು ಸತ್ಯ ವಸ್ತುವನ್ನು ಮರೆಮಾಚಿ ಬೇರೆ ಬೇರೆ ಅಸತ್ಯ ದೃಶ್ಯಗಳನ್ನು ತೋರಿಸುತ್ತದೆ. ಮೇಲಿನ ಉಪಮಾನದಲ್ಲಿ ಕರಿಯ ಹಲಿಗೆಯು ನಾಶವಿಲ್ಲದ ಸತ್ಯವಸ್ತು. ಅದರ ಮೇಲೆ ಬರೆಯಲ್ಪಟ್ಟ ಬೇರೆ ಬೇರೆ ಪಾಠಗಳು ‘ವ್ಯಕ್ತ’ ವಸ್ತುಗಳು.
ಈ ಅವ್ಯಕ್ತವೇ ಎಲ್ಲಕ್ಕಿಂತ ಶ್ರೇಷ್ಠವಾದುದೋ ಅಥವಾ ಇದಕ್ಕಿಂತ ಶ್ರೇಷ್ಠವಾದುದು ಇದೆಯೋ ?

ಅವ್ಯಕ್ತೋ„ಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || 21 ||
ಅರ್ಥ : ಈ ಅವ್ಯಕ್ತವೇ ಮನುಷ್ಯನು ಸಾಧಿಸಬೇಕಾದ ಪರಮಗತಿಯು ಇದು ನಾಶರಹಿತವಾದುದು. ಇಲ್ಲಿ ಬಂದು ಸೇರಿದವರು ಪುನಃ ಜನ್ಮವೆತ್ತುವುದಿಲ್ಲ. ಅದೇ ನನ್ನ ವಾಸಸ್ಥಾನವು.
ಇದನ್ನೇ ಹಿಂದೆ ಮೂರನೆಯ ಅಧ್ಯಾಯದಲ್ಲಿ ‘ಅಕ್ಷರ’ ಎಂದು ಈ ಸ್ಥಾನವನ್ನು ಹೇಳಲಾಗಿದೆ. ಈ ಸ್ಥಾನವನ್ನು ಸೇರಿದರೆ ಪುನರ್ಜನ್ಮವಿಲ್ಲ. ಈ ಸ್ಥಾನವನ್ನು ಸೇರುವುದು ಹೇಗೆ ?

ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭಸ್ತ್ವನನ್ಯಯಾ |
ಯಸ್ಯಾಂತಃಸ್ಯಾನಿ ಭೂತಾನಿ ಯೇನ ಸರ್ವಮಿದಂ ತತಮ್ || 22 ||
ಅರ್ಥ : ಆ ಪರಮ ಪುರುಷನು ಪಾರ್ಥನೇ, ಅನನ್ಯವಾದ ಭಕ್ತಿಗೆ ಮಾತ್ರ ಸಿಗತಕ್ಕವನು. ಎಲ್ಲಾ ಭೂತಗಳು ಇವನಲ್ಲಿಯೇ ಇವೆ. ಇವನಿಂದಲೇ ಸರ್ವಜಗತ್ತು ವ್ಯಾಪ್ತವಾಗಿದೆ.
ಇಲ್ಲಿ ಭಕ್ತಿ ಎಂದರೆ ಸಾಮಾನ್ಯ ಭಕ್ತಿ ಅಲ್ಲ. ಅನನ್ಯವಾದ ಭಕ್ತಿ. ಅಂದರೆ ಸಾಧಕನು ತನ್ನ ಶರೀರ ಮನಸ್ಸು ಬುದ್ಧಿಗಳೊಡನೆ ಲಿಪ್ತನಾಗಿರದೆ ತನ್ನನ್ನೇ ಮರೆತು ಬೇರೆ ಯಾವ ವಿಚಾರವನ್ನೂ ಚಿಂತಿಸದೇ, ಕೇವಲ ಪರಮಾತ್ಮನ ಚಿಂತನೆಯನ್ನೇ ಏಕಾಗ್ರವಾಗಿ ಮಾಡುವುದು. ಪ್ರಾರಂಭದಲ್ಲಿ ಇಂತಹ ಭಕ್ತನು ತಾನೇ ಪರಮಾತ್ಮನು ಎಂಬ ಅನುಭವವನ್ನು ಪಡೆದಾಗ್ಯೂ ಅದು ಸಾಲದು. ಪ್ರಪಂಚದ ಎಲ್ಲಾ ಸೃಷ್ಟಿವಸ್ತುಗಳಲ್ಲಿಯೂ ಅಖಂಡವಾಗಿ ವ್ಯಾಪ್ತನಾಗಿರುವ ಪರಮಾತ್ಮನೇ ತಾನು ಎಂಬ ಮತ್ತು ತನ್ನಲ್ಲಿಯೇ ಎಲ್ಲಾ ಜಗತ್ತೂ ಇದೆ ಎಂಬ ಅನುಭವವಾಗಿರಬೇಕು. ಈ ಶ್ಲೋಕದ ಕೊನೆಯ ಭಾಗದಲ್ಲಿ ಈ ಮಾತನ್ನೇ ಹೇಳಲಾಗಿದೆ. ಮಣ್ಣಿನ ಪಾತ್ರೆಯು ಮಣ್ಣಿನಲ್ಲಿದೆ. ಮತ್ತು ಮಣ್ಣು ಎಲ್ಲಾ ಪಾತ್ರೆಗಳಲ್ಲಿಯೂ ಇದೆ.

ಪರಮಾತ್ಮನನ್ನು ಸೇರಲು ಎರಡು ದಾರಿಗಳು

ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ |
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ || 23 ||
ಅರ್ಥ : ಭರತಶ್ರೇಷ್ಠನೇ, ಯಾವ ಮಾರ್ಗದಿಂದ ಹೋದರೆ ಯೋಗಿಗಳು ಪುನರ್ಜನ್ಮಕ್ಕೆ ಬರುವುದಿಲ್ಲವೋ, ಮತ್ತು ಯಾವ ಮಾರ್ಗದಿಂದ ಹೋದರೆ ಪುನರ್ಜನ್ಮಕ್ಕೆ ಬರುತ್ತಾರೋ ಅದನ್ನು ನಿನಗೆ ತಿಳಿಸುತ್ತೇನೆ.
ಪುನರ್ಜನ್ಮವಿಲ್ಲದ ಮಾರ್ಗ

ಅಗ್ನಿಜ್ರ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ |
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ || 24 ||
ಅರ್ಥ : ಬೆಂಕಿ, ಬೆಳಕು, ಹಗಲು, ಶುಕ್ಲಪಕ್ಷ, ಉತ್ತರಾಯಣದ ಆರು ತಿಂಗಳುಗಳು, ಈ ದಾರಿಯಲ್ಲಿ ಹೋಗುವ ಬ್ರಹ್ಮಜ್ಞಾನಿಗಳು ಬ್ರಹ್ಮನನ್ನು ಸೇರುತ್ತಾರೆ.
ಇಲ್ಲಿ ‘ದೇವಯಾನ’ ಮತ್ತು ‘ಪಿತೃಯಾನ’ ಎಂಬ ಎರಡು ಮಾರ್ಗಗಳನ್ನು ವರ್ಣಿಸಲಾಗಿದೆ. ಉಪನಿಷತ್ತುಗಳ ವರ್ಣನೆಯಂತೆ ಸಾಧಕನು, ತಾನು ಮಾಡುವ ಯಜ್ಞ ಯಾಗ ಮೊದಲಾದ ಕರ್ಮಗಳು ಹಾಗೂ ಉಪಾಸನೆಗಳ ಫಲವಾಗಿ, ದೇವಯಾನದ ಮಾರ್ಗವಾಗಿ ಸೂರ್ಯಲೋಕಕ್ಕೆ ಹೋಗಿ ಆ ಮುಖಾಂತರ ನಂತರ ಬ್ರಹ್ಮಲೋಕವನ್ನು ಸೇರಿ, ಬ್ರಹ್ಮನ ಕಲ್ಪಾಂತರದ ವರೆಗೂ ಪರಮಾನಂದವನ್ನು ಅನುಭವಿಸಿ, ಬ್ರಹ್ಮನ ಜೊತೆಗೆ ತಾನೂ ಮುಕ್ತಿಯನ್ನು ಪಡೆಯುತ್ತಾನೆ. ಬೆಂಕಿ, ಬೆಳಕು, ಹಗಲು, ಶುಕ್ಲಪಕ್ಷ ಮತ್ತು ಉತ್ತರಾಯಣ ಇವುಗಳಿಗೆ ‘ಸೂರ್ಯ’ನು ಅಧಿ ದೇವತೆ. ದೇವತೆಗಳು ಈ ಮಾರ್ಗದಿಂದ (ಸೂರ್ಯಲೋಕದ ಮುಖಾಂತರ) ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಶ್ರೇಷ್ಠ ಸಾಧಕನೂ ಸಹ ಈ ಮಾರ್ಗದಿಂದಲೇ ಬ್ರಹ್ಮಲೋಕಕ್ಕೆ ಹೋಗುತ್ತಾನೆ.
ಪುನರ್ಜನ್ಮವಿರುವ ಮಾರ್ಗ

ಧೂಮೋ ರಾತ್ರಿಸ್ತಥಾ ಕೃಷ್ಣ ಷಣ್ಮಾಸಾ ದಕ್ಷಿಣಾಯನಮ್ |
ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ || 25 ||
ಅರ್ಥ : ಹೊಗೆ, ರಾತ್ರಿ, ಕೃಷ್ಣಪಕ್ಷ, ದಕ್ಷಿಣಾಯನದ ಆರು ತಿಂಗಳುಗಳು. ಈ ಮಾರ್ಗದಲ್ಲಿ ಹೋಗುವ ಯೋಗಿಯು ಪುನರ್ಜನ್ಮಕೆ ಬರುತ್ತಾನೆ. ಈ ಮಾರ್ಗದ ಅಧಿದೇವತೆಯು ಚಂದ್ರನು.
ಇದಕ್ಕೆ ಪಿತೃಯಾನ ಎಂದು ಹೆಸರು. ಯಜ್ಞಯಾಗಾದಿ ಕರ್ಮಗಳು ಮತ್ತು ಉಪಾಸನೆಗಳನ್ನು ಮಾಡುವ ಸಾಧಕರು ತಮ್ಮ ಕರ್ಮಫಲಕ್ಕನುಸಾರವಾಗಿ ಪಿತೃಯಾನದ ಮುಖಾಂತರ ಪಿತೃಲೋಕಕ್ಕೆ ಅಂದರೆ ಸ್ವರ್ಗಲೋಕಕ್ಕೆ ಹೋಗುತ್ತಾರೆ. ಅಲ್ಲಿ ಅವರು ಅನುಭೋಗಿಸಬೇಕಾದ ವಾಸನೆಗಳೆಲ್ಲವೂ ಮುಗಿದ ಮೇಲೆ, ಬಾಕಿ ಉಳಿದ ವಾಸನೆಗಳನ್ನು ಭೋಗಿಸುವುದಕ್ಕಾಗಿ ಪುನಃ ಭೂಲೋಕದಲ್ಲಿ ಜನ್ಮವೆತ್ತುತ್ತಾರೆ.
ಹೊಗೆ, ರಾತ್ರಿ, ಕೃಷ್ಣಪಕ್ಷ ದಕ್ಷಿಣಾಯನ ಇವುಗಳ ಅಧಿದೇವತೆಯು ಚಂದ್ರನು. ಚಂದ್ರನು ಇಂದ್ರಿಯ ಸುಖಗಳ ಅಧಿದೇವತೆ. ಇಂದ್ರಿಯ ಸುಖಗಳ ಅಭಿಲಾಷೆಯಿಂದ ಸತ್ಕರ್ಮಗಳನ್ನು ಮಾಡಿದವರು ಈ ಮಾರ್ಗದಿಂದ ಸ್ವರ್ಗಲೋಕಕ್ಕೆ ಹೋಗಿ, ಅಲ್ಲಿಯ ಭೋಗವು ಮುಗಿದ ನಂತರ ಪುನಃ ಭೂಲೋಕದಲ್ಲಿ ಜನಿಸುತ್ತಾರೆ. ಇವರು ಮೊದಲು ಫಲಾಸೆಯಿಂದ ಕರ್ಮ ಮಾಡಿದಾಗ್ಯೂ ನಂತರ ಫಲಾಸೆಯನ್ನು ತ್ಯಜಿಸಿ ಉಪಾಸನೆ ಮಾಡುವುದರಿಂದ ಹಾಗೂ ಆತ್ಮಾನಂದದಲ್ಲಿರಲು ಪ್ರಯತ್ನಿಸುವುದರಿಂದ ಅವರು ಕ್ರಮೇಣ ಬ್ರಹ್ಮನೇ ಆಗುತ್ತಾರೆ. (ಇದೇ ಅಧ್ಯಾಯದ 27 ಶ್ಲೋಕದ ಟಿಪ್ಪಣಿಯನ್ನು ನೋಡಿರಿ)

 

 

ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ |
ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನಃ || 26 ||
ಅರ್ಥ : ಪ್ರಪಂಚದಲ್ಲಿ ಹೀಗೆ ಬೆಳಕಿನ ಮಾರ್ಗ ಮತ್ತು ಕತ್ತಲೆಯ ಮಾರ್ಗ ಎಂಬ ಎರಡು ಶಾಶ್ವತವಾದ ದಾರಿಗಳಿವೆ. ಬೆಳಕಿನ ಮಾರ್ಗದಿಂದ ಹೋದರೆ ಪುನರ್ಜನ್ಮವಿಲ್ಲ. ಕತ್ತಲೆಯ ಮಾರ್ಗದಿಂದ ಹೋದರ ಪುನರ್ಜನ್ಮವುಂಟು

ಈ ದಾರಿಗಳನ್ನು ತಿಳಿದುಕೊಳ್ಳುವುದರ ಫಲವೇನು ?
ನೈತೇ ಸೃತೀ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ |
ತಸ್ಮಾತ್‍ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ || 27 ||
ಅರ್ಥ : ಈ ಎರಡೂ ದಾರಿಗಳನ್ನು ತಿಳಿದುಕೊಳ್ಳುವುದರಿಂದ ಅರ್ಜುನನೇ ಯೋಗಿಯು ಎಂದಿಗೂ ಭ್ರಮೆಗೊಳಗಾವುದಿಲ್ಲ. ಆದ್ದರಿಂದ ಎಲ್ಲಾ ಕಾಲಗಳಲ್ಲಿಯೂ ಯೋಗಯುಕ್ತನಾಗಿರು.
ಸಾಧಕನು ಕರ್ಮಗಳನ್ನು ಮಾಡುವ ಮನೋಭಾವ ಮತ್ತು ಅವನ ಸಾಧನೆಯ ಹಿರಿಮೆಗನುಸಾರವಾಗಿ ಅವನು ಬೆಳಕಿನ ದಾರಿ ಇಲ್ಲವೇ ಕತ್ತಲೆಯ ದಾರಿಯಲ್ಲಿ ಹೋಗುತ್ತಾನೆಂದೂ ಆದ್ದರಿಂದ ಅವನು ಭ್ರಮೆಗೊಳಗಾಗುವುದಿಲ್ಲವೆಂದು ತಿಳಿಸಿ ಕೊನೆಗೆ ಯೋಗಯುಕ್ತನಾಗಿರಬೇಕೆಂದು ಅರ್ಜುನನ ನೆಪಮಾಡಿಕೊಂಡು ಬೋಧಿಸಲಾಗಿದೆ. ಅಂದರೆ ಮನಸ್ಸನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದು, ಬಾಹ್ಯ ವಿಷಯಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ ಏಕಾಗ್ರತೆಯಿಂದ ಆತ್ಮಧ್ಯಾನದಲ್ಲಿ ನಿಲ್ಲಿಸಬೇಕೆಂದು ಹೇಳಲಾಗಿದೆ.

ಧ್ಯಾನ ಮಾಡುವುದರಿಂದ ಯಜ್ಞಯಾಗಾದಿಗಳನ್ನು ಮಾಡಿದ ಫಲವೂ ಸಿಗುತ್ತದೆ.

ವೇದೇಷು ಯಜ್ಞೇಷು ತಪಸ್ಸು ಚೈವ
ದಾನೇಷು ಯತ್ಪುಣ್ಯ ಫಲಂ ಪ್ರದಿಷ್ಟಮ್ |
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ
ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ || 28 ||
ಅರ್ಥ : ವೇದಾಭ್ಯಾಸ, ಯಜ್ಞ, ತಪಸ್ಸು ಮತ್ತು ದಾನಗಳಿಂದ ಯಾವ ಯಾವ ಪುಣ್ಯಫಲಗಳು ಸಿಗುತ್ತವೆ ಎಂದು ಹೇಳಲಾಗಿದೆಯೋ, (ಶೃತಿ ಸ್ಮೃತಿಗಳಲ್ಲಿ) ಅವೆಲ್ಲವುಗಳಿಗಿಂತಲೂ ಹೆಚ್ಚಾದ ಫಲವನ್ನು ಈ ಎರಡು ಮಾರ್ಗಗಳನ್ನು ತಿಳಿದ ಯೋಗಿಯು ಪಡೆಯುತ್ತಾನೆ. ಅಂದರೆ ಯೋಗಿಯು ನನ್ನ ಪರಮ ಸ್ಥಾನವನ್ನು ಹೊಂದುತ್ತಾನೆ.
ವೇದಗಳ ಕರ್ಮಕಾಂಡ ಮತ್ತು ಸ್ಮೃತಿಗಳಲ್ಲಿ ನಾನಾತರಹದ ಇಷ್ಟಾರ್ಥ ಫಲಗಳನ್ನು ಕೊಡತಕ್ಕ ಮತ್ತು ಸ್ವರ್ಗ ಸುಖವನ್ನು ಕೊಡಬಲ್ಲ ಅನೇಕ ಯಜ್ಞಯಾಗಾದಿಗಳು, ವ್ರತನಿಯಮಗಳು, ಉಪಾಸನೆಗಳು, ಹೇಳಲ್ಪಟ್ಟಿವೆ. ಅರ್ಜುನನು ಅವನ ಕಾಲದ ಇತರೆ ಜನರಂತೆ ಈ ಕರ್ಮಕಾಂಡದಲ್ಲಿ ಹೆಚ್ಚು ಶ್ರದ್ಧೆಯುಳ್ಳವನಾಗಿದ್ದನು. ಧರ್ಮದಂತೆ ನಡೆಯುವವನು ಆ ಮಾರ್ಗದಲ್ಲೇ ಚಲಿಸಬೇಕೆಂದು ಅವನು ನಂಬಿದ್ದನು. ಧ್ಯಾನಮಾರ್ಗವನ್ನು ಬೋಧಿಸಿದ ಮೇಲೆ ಕೃಷ್ಣನಿಗೆ ಈ ವಿಚಾರವು ಜ್ಞಾಪಕಕ್ಕೆ ಬಂದು ಅರ್ಜುನನು ಧ್ಯಾನಕ್ಕಿಂತ ಯಜ್ಞಯಾಗಾದಿಗಳಿಗೇನೇ ಪ್ರಾಧ್ಯಾನ್ಯತೆಯನ್ನು ಇನ್ನೂ ಕೊಡಬಹುದೆಂದು ಊಹಿಸಿ, ಅದರ ಪರಿಹಾರಕ್ಕಾಗಿ, ಧ್ಯಾನ ಮಾರ್ಗಾನುಚರಣೆಯಿಂದ (ಯಜ್ಞಯಾಗಾದಿ ಕರ್ಮಗಳಿಂದ ಸಿಗುವ ಲಾಭಗಳೆಲ್ಲವನ್ನೂ ಪಡೆಯಬಹುದೆಂದೂ ಅಷ್ಟೇ ಅಲ್ಲದೇ ಅದಕ್ಕಿಂತ ಹೆಚ್ಚಿನ ಲಾಭವನ್ನೂ ಸಹ ಗಳಿಸಬಹುದೆಂದು ಹೇಳಿದ್ದಾನೆ.
ವಿವಿಧ ಉಪಾಸನೆ ಹಾಗೂ ಇತರೆ ಕರ್ಮಗಳಿಂದ ಅಂತಃಕರಣವು ಶುದ್ಧವಾಗಿ ಮನಸ್ಸು ಹತೋಟಿಗೆ ಬಂದು, ಧ್ಯಾನ ಮಾಡಲು ಪೂರ್ವತಯಾರಿಯನ್ನು ಮಾಡಿದಂತಾಗುತ್ತದೆ. ಮುಂದೆ ಅವನು ಧ್ಯಾನದ ಅಭ್ಯಾಸವನ್ನು ಮಾಡಿದರೆ, ಪರಮಪುರುಷನನ್ನು ಪಡೆಯಬಹುದು. ಧ್ಯಾನದಲ್ಲಿ ರುಚಿ ಇರುವವರು ಹಿಂದೆ ತಿಳಿಸಿದ ವಿಧಾನದಲ್ಲಿ ಪ್ರಾರಂಭದಿಂದಲೇ ಧ್ಯಾನವನ್ನು ಮಾಡಬಹುದು. ಇದೇ ಹಿರಿಯ ಮಾರ್ಗ.

ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾನುಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಅಕ್ಷರಬ್ರಹ್ಮÀಯೋಗೋ ನಾಮ
ಅಷ್ಟಮೋ„ಧ್ಯಾಯಃ