S O U L B L I S S

Loading

Bhagavad Gita – Vinayak Rao Bapat – Chapter 11

ಅಧ್ಯಾಯ-11
ವಿಶ್ವರೂಪ ದರ್ಶನ
ಪೀಠಿಕೆ
ಪ್ರಪಂಚದ ಸರ್ವ ಚರಾಚರ ವಸ್ತುಗಳಲ್ಲಿಯೂ ಪರಮಾತ್ಮನು ವ್ಯಾಪ್ತನಾಗಿದ್ದಾನೆಂದೂ, ಅವೆಲ್ಲವುಗಳ ಸೃಷ್ಟಿ. ಸ್ಥಿತಿ, ನಾಶಗಳಿಗೆ ಅವನೇ ಕಾರಣನೆಂದೂ, ಉತ್ಕøಷ್ಟ ವಸ್ತುಗಳಲ್ಲಿ ಅವನನ್ನು ಕಾಣಬಹುದೆಂದು ಸೂಚಿಸಿ, ಕೆಲವು ಉದಾಹರಣೆಗಳನ್ನು ನಿರ್ದೇಶ ಮಾಡಿ ಹೇಳಲಾಯಿತು. ಹೀಗೆ ಶ್ರೇಷ್ಠ ವಸ್ತುಗಳಲ್ಲಿ ಪರಮಾತ್ಮನನ್ನು ಕಾಣುವ ಅಭ್ಯಾಸಮಾಡಿಕೊಂಡು, ಕ್ರಮೇಣ ಪ್ರಪಂಚದ ಎಲ್ಲಾ ವಸ್ತುಗಳಲ್ಲಿಯೂ ಅವನನ್ನು ಕಾಣಲು ಕಲಿಯಬೇಕೆಂದು ಸಹ ಹೇಳಲಾಯಿತು.
ಸೃಷ್ಟಿಯಾದ ಎಲ್ಲಾ ವಸ್ತುಗಳಲ್ಲಿ ಪರಮಾತ್ಮನ ವಿಭೂತಿಯನ್ನು ಕಾಣಬೇಕೆಂಬ ತಾತ್ವಿಕ ವರ್ಣನೆಯನ್ನು ಕೇಳಿ, ಅರ್ಜುನನಿಗೆ ಅದರಲ್ಲಿ ವಿಶ್ವಾಸ ಹುಟ್ಟಿದರೂ, ಆ ತತ್ವವನ್ನು ಜೀರ್ಣಿಸಿಕೊಂಡು ಅನುಭವಿಸುವುದು ಸಾಧ್ಯವಾಗಲಿಲ್ಲ. ಅದನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಕುತೂಹಲವು ಅವನಲ್ಲುಂಟಾಯಿತು. ಅಂತೆಯೇ, ಅರ್ಜುನನನ್ನು ತಿದ್ದಿ ಯುದ್ಧ ಪ್ರವೃತ್ತನನ್ನಾಗಿ ಮಾಡಲು, ಹಾಗೂ ಇದುವರೆಗೆ ಉಪದೇಶಿಸಿದ ತತ್ವವು ಅವನಿಗೆ ಮನದಟ್ಟಾಗಿ, ಅದರಲ್ಲಿ ಅವನಿಗೆ ಸಂಪೂರ್ಣ ಶ್ರದ್ಧೆ ಹುಟ್ಟಲು ಅದನ್ನು ಪ್ರತ್ಯಕ್ಷವಾಗಿ ತೋರಿಸುವ ಅವಶ್ಯಕತೆಯೂ ಇತ್ತು. ಅಂತೆಯೇ ಈ ಅಧ್ಯಾಯದಲ್ಲಿ ಶ್ರೀಕೃಷ್ಣಪರಮಾತ್ಮನು, ತನ್ನ ದೇಹದಲ್ಲಿ ಸರ್ವಸೃಷ್ಟಿಯೂ ಇರುವ ವಿಶ್ವರೂಪವನ್ನು ತೋರಿಸುವುದನ್ನು ವರ್ಣಿಸಲಾಗಿದೆ.
ಈ ಅಧ್ಯಾಯಕ್ಕೆ ‘ವಿಶ್ವರೂಪದರ್ಶನ’ ಎಂಬ ಹೆಸರಿದೆ. ಪರಮಾತ್ಮನು ಎಲ್ಲಾ ಪ್ರಾಣಿಗಳ ಶರೀರಾಂತರ್ಗತನಾಗಿ, ಎಲ್ಲಾ ಕಾಲಗಳಲ್ಲಿಯೂ ಅನುಭವಿಸುವ, ಶಾರೀರಿಕ, ಮಾನಸಿಕ, ಬೌದ್ಧಿಕ ಅನುಭವಗಳಿಗೆ ‘ವಿಶ್ವ’ ಎಂದು ಹೆಸರು. ಕೆಲವರು ಇದಕ್ಕೆ ‘ವಿರಾಟ್’ ಎನ್ನುತ್ತಾರೆ. ಅವರ ಅಭಿಪ್ರಾಯದಂತೆ ಪರಮಾತ್ಮನು ವ್ಯಕ್ತಿಯ ಶರೀರಾಂತರ್ಗತನಾಗಿ ಜೀವನೆಂಬ ಹೆಸರಿನಿಂದ ಭೋಗಿಸುವ ಅನುಭವಗಳಿಗೆ ‘ವಿಶ್ವ’ ಎಂದೂ ಇವನೇ ಎಲ್ಲಾ ಮನುಸ್ಯರ ಶರೀರ, ಮನಸ್ಸು, ಬುದ್ಧೀಗಳ ಮುಖಾಂತರ ಭೋಗಿಸುವ ಎಲ್ಲಾ ಒಟ್ಟು ಅನುಭವಗಳಿಗೆ ‘ವಿರಾಟ’ ಎಂದೂ ಹೆಸರು. ಸಂಸ್ಕøತ ಸಾಹಿತ್ಯದಲ್ಲಿ ವಿಶ್ವ ಮತ್ತು ವಿರಾಟ್ ಈ ಎರಡೂ ಶಬ್ದಗಳನ್ನೂ ಸಮಾನಾರ್ಥದಲ್ಲಿ ಉಪಯೋಗಿಸಿರುವುದರಿಂದ ವಿಶ್ವರೂಪ ದರ್ಶನ ಎಂದರೆ ವಿರಾಡ್ರೂಪ ಎಂದೇ ಅರ್ಥ ಮಾಡಬೇಕೆಂದು, ಮಹಾಭಾರತಕ್ಕೆ ಭಾಷ್ಯವನ್ನು ಬರೆದ ಮಧುಸೂದನ ಸರಸ್ವತಿಗಳು ಅಭಿಪ್ರಾಯಪಡುತ್ತಾರೆ.
ಈ ಅಧ್ಯಾಯವು ಸಂಸ್ಕøತ ಸಾಹಿತ್ಯದಲ್ಲಿ ಒಂದು ಉತ್ತಮವಾದ ಕೃತಿಯಾಗಿದೆ. ಇದರಲ್ಲಿ ಉಪಯೋಗಿಸಲಾಗಿರುವ ವೃತ್ತ, ಪ್ರತಿಯೊಂದು ಶಬ್ದಗಳು, ವಿವಿಧ ದೃಶ್ಯಗಳ ವರ್ಣನೆ, ಇವೆಲ್ಲವೂ ಅಪೂರ್ವವಾಗಿವೆ. ವಿಶ್ವರೂಪ ದರ್ಶನದಿಂದ ಅರ್ಜುನನ ಮನಸ್ಸಿನ ಮೇಲಾದ ಆಶ್ಚರ್ಯ, ಶ್ರದ್ಧೆ, ಹೆದರಿಕೆ, ಭಕ್ತಿ ಮೊದಲಾದವುಗಳನ್ನು ಗಮನಿಸಬೇಕು. ಪ್ರಪಂಚದ ವೇದಾಂತ ಸಾಹಿತ್ಯದಲ್ಲಿ ಈ ಅಧ್ಯಾಯವು ಉತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ.

ಅಧ್ಯಾಯ-11
ವಿಶ್ವರೂಪ ದರ್ಶನ
ಅರ್ಜುನನ ಉವಾಚ:
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ |
ಯತ್ತ್ವಯೋಕ್ತಂ ವಚಸ್ತೇನ ಮೋಹೋ„ಯಂ ವಿಗತೋ ಮಮ|| || 1 ||
ಅರ್ಥ :- ನನ್ನ ಮೇಲಿನ ಪ್ರೇಮದಿಂದ ನೀನು ಇದುವರೆಗೆ ಬೋಧಿಸಿದ ಅತಿ ಗುಟ್ಟಾದ ಆಧ್ಯಾತ್ಮಿಕ ಉಪದೇಶದಿಂದ ನನ್ನ ಅಜ್ಞಾನವೆಲ್ಲವೂ ನಾಶವಾಯಿತು.
ಹಿಂದಿನ ಅಧ್ಯಾಯದಲ್ಲಿಯ ವರ್ಣನೆಯನ್ನು ಕೇಳಿದ ನಂತರ ತನ್ನ ಭ್ರಾಂತಿಯೆಲ್ಲವೂ ನಾಶವಾಯಿತೆಂದು ಅರ್ಜುನನು ತಾನಾಗಿಯೇ ಒಪ್ಪಿಕೊಂಡಿದ್ದಾನೆ. ಅಜ್ಞಾನವು ಹೋದ ಮಾತ್ರಕ್ಕೆ ಜ್ಞಾನವಾದಂತಾಗಲಿಲ್ಲ. ಜ್ಞಾನದ ಅರಿವಾಗಲು ಅಜ್ಞಾನನಾಶವು ಮೊದಲನೆಯ ಹೆಜ್ಜೆ. ಎಲ್ಲಾ ವಸ್ತುಗಳಲ್ಲಿಯೂ ಪರಮಾತ್ಮನ ಇರುವಿಕೆಯನ್ನು ಕಾಣಬೇಕೆಂಬ ಈ ಉಪದೇಶವು ಅರ್ಜುನನ ಬುದ್ಧಿಗೆ ನಾಟಿದುದರಿಂದ, ವಿವಿಧ ನಾಮರೂಪಗಳು ಭಿನ್ನಭಿನ್ನ ಎಂದು ಇದುವರೆಗೆ ತಿಳಿದ ಅವನು, ಅವೆಲ್ಲವುಗಳಲ್ಲಿಯೂ ಒಳಹೊಕ್ಕು ಅಖಂಡವಾಗಿರುವ ಪರಮಾತ್ಮನನ್ನು ಕಾಣಬೇಕೆಂದು ಬಯಸುವುದು ಹಾಗೂ ಪ್ರಯತ್ನ ಮಾಡುವುದು ಸ್ವಾಭಾವಿಕವಾಗಿದೆ. ಈ ಅಖಂಡ ತತ್ವವನ್ನು ಅವನ ಮನಸ್ಸು ಬುದ್ಧಿಗಳು ತಾತ್ವಿಕವಾಗಿ ಒಪ್ಪಿಕೊಂಡಾಗ್ಯೂ, ಅವನಿಗೆ ಇನ್ನೂ ಎಲ್ಲಾ ನಾಮ ರೂಪಗಳಲ್ಲಿಯೂ ಒಬ್ಬನೇ ಪರಮಾತ್ಮನನ್ನು ಕಾಣುವ ಅನುಭವವಾಗಿರಲಿಲ್ಲ. ಶ್ರೀಕೃಷ್ಣನು ತನ್ನ ಮೇಲಿನ ಪ್ರೇಮದಿಂದ ಈ ತಾತ್ವಿಕ ಉಪದೇಶವನ್ನು ಬೋಧಿಸಿದ್ದಾನೆಂದು ಅರ್ಜುನನು ಗ್ರಹಿಸಿದ್ದಾನೆ.
ಅರ್ಜುನನ ಮನಸ್ಸಿನಲ್ಲಿ ಇನ್ನೊಂದು ಬಯಕೆ ಇದೆ. ಅದನ್ನು ತಿಳಿಸುವುದಕ್ಕಾಗಿ ಪೀಠಿಕಾರೂಪದಲ್ಲಿ ಇನ್ನೂ ಕೆಲವು ಮಾತುಗಳನ್ನು ಹೇಳುತ್ತಾನೆ

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರತೋ ಮಯಾ |
ತ್ವತ್ವಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ || || 2 ||
ಅರ್ಥ :- ಕಮಲಾಕ್ಷನೇ, ಎಲ್ಲಾ ಭೂತಗಳ ಹುಟ್ಟುವಿಕೆ, ಮತ್ತು ನಾಶಗಳ ವಿಷಯವನ್ನು ಮತ್ತು ನಿನ್ನ ಶಾಶ್ವತವಾದ ಮಹಾತ್ಮೆಗಳನ್ನೂ ನನಗೆ ವಿಸ್ತಾರವಾಗಿ ತಿಳಿಸಿದ್ದೀಯೆ.
ಗುರು-ಶಿಷ್ಯರ ಸಂವಾದಲ್ಲಿ ಶಿಷ್ಯನು ಗುರುವಿನ ಹತ್ತಿರ ಹೊಸ ವಿಷಯವನ್ನು ಕೇಳುವ ಮೊದಲು, ಗುರುವು ಉಪದೇಶಿಸಿದ ಹಿಂದಿನ ಪಾಠವು ತನಗೆ ಚೆನ್ನಾಗಿ ತಿಳಿಯಿತೆಂದು ಹೇಳುವ ಪದ್ಧತಿಯಿದೆ. ಇದರಿಂದ ಗುರುವಿಗೆ ಸಮಾಧಾನವಾಗುತ್ತದೆ. ಮತ್ತು ಶಿಷ್ಯನು ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಅರ್ಹನು ಎಂಬುದನ್ನು ಸೂಚಿಸಿದಂತಾಗುತ್ತದೆ. ಅರ್ಜುನನು ಇದೇ ಪದ್ಧತಿಯನ್ನು ಇಲ್ಲಿ ಅನುಸರಿಸಿದ್ದಾನೆ. ಶ್ರದ್ಧೆಯುಳ್ಳ ಶಿಷ್ಯನು ಕೇಳುವ ಪ್ರಶ್ನೆಗಳನ್ನು ಉತ್ತರಿಸುವುದು ಗುರುವಿನ ಕರ್ತವ್ಯ. ಇದೇ ರೀತಿ ಅರ್ಜುನನ ಸಂದೇಹವನ್ನು ಯೋಗೇಶ್ವರನಾದ ಕೃಷ್ಣನು ಹೇಗೆ ಪರಿಹರಿಸಿದ್ದಾನೆಂಬುದನ್ನು ಮುಂದೆ ಕಾಣಬಹುದು. ಅರ್ಜುನನ ಬೇಡಿಕೆ ಏನು?

ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ |
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ || || 3 ||
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ |
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ || 4 ||
ಅರ್ಥ :- ಪರಮೇಶ್ವರನೇ, ನಿನ್ನ ಇರುವಿಕೆಯ ಸ್ಥಿತಿಯನ್ನು ನೀನು ಇದುವರೆಗೆ ವರ್ಣಿಸಿದ್ದೀಯೆ. ಅದು ಯಥಾರ್ಥವಾದುದು. ನಿನ್ನ ಆ ಈಶ್ವರೀ ರೂಪವನ್ನು ನೋಡಬೇಕೆಂಬ ಇಚ್ಛೆ ನನಗುಂಟಾಗಿದೆ. ಪ್ರಭುವೇ, ನಾನು ಅದನ್ನು ನೋಡಬಹುದೆಂದು ನೀನು ತಿಳಿಯುವುದಾದರೆ, ಯೋಗೇಶ್ವರನೇ, ನನಗೆ ನಿನ್ನ ಆ ಶಾಶ್ವತವಾದ ರೂಪವನ್ನು ತೋರಿಸು.
ಹಿಂದಿನ ಅಧ್ಯಾಯದಲ್ಲಿ ವರ್ಣಿಸಿದಂತಹ ಈಶ್ವರೀ ರೂಪವನ್ನು ತೋರಿಸಬೇಕೆಂದು ಅರ್ಜುನನು ಶ್ರೀಕೃಷ್ಣನನ್ನು ಕೇಳಿದನು. ಆದರೆ ಮರುಕ್ಷಣದಲ್ಲಿಯೇ, ತನ್ನ ಧಾಷ್ರ್ಟತೆಯನ್ನು ಮನಗಂಡು, “ತಾಯಿ ತಾನು ರೂಪವನ್ನು ನೋಡಬಹುದಾದರೆ ತೋರಿಸು” ಎಂದು ವಿನಯದಿಂದ ಕೇಳಿದ್ದಾನೆ. ಹಿರಿಯರಲ್ಲಿ, ಗುರುಗಳಲ್ಲಿ, ಗೌರವವನ್ನು ಸೂಚಿಸುವುದಕ್ಕಾಗಿ ಈ ರೀತಿಯಾಗಿ ವಿನಯದಿಂದ ಕೇಳುವ ಪದ್ಧತಿಯಿದೆ. ಅರ್ಜುನನು ಈ ಮಾತನ್ನು ಕೇವಲ ಬಾಹ್ಯಾಡಂಬರಕ್ಕಾಗಿ ಹೇಳಲಿಲ್ಲ. ಈ ವಿನಯ ಹಾಗೂ ಗೌರವವು ಅವನಲ್ಲ ಅಂತಃಕರಣದಿಂದ ಬಂದುದಾಗಿದೆ. ಅವನು ಉಪಯೋಗಿಸಿದ ‘ಪ್ರಭೋ’ ‘ಯೋಗೇಶ್ವರ’ ಎಂಬ ಸಂಬೋಧನಗಳಿಂದ ಇದು ಸ್ಪಷ್ಟವಾಗುತ್ತದೆ. ಶ್ರೀಕೃಷ್ಣನು ಕೇವಲ ತನ್ನ ಸಂಬಂಧಿಯೂ, ಸಾರಥಿಯೂ ಆದ ಕೃಷ್ಣನಲ್ಲ. ಅವನು ಪರಮ ಸಿದ್ಧಪುರುಷನು, ಅವನೇ ಪರಮಾತ್ಮನು ಎಂಬುದು ಅರ್ಜುನನಿಗೆ ಈಗ ಖಾತ್ರಿಯಾಗಿದೆ.
ಅರ್ಜುನನನ್ನು ತೃಪ್ತಿಪಡಿಸಿ, ಕಾರ್ಯೋನ್ಮುಖನಾಗಿ ಮಾಡಲೋಸುಗ, ತನ್ನ ವಿಶ್ವರೂಪವನ್ನು ತೋರಿಸಬೇಕೆಂದು ಶ್ರೀಕೃಷ್ಣನು ನಿರ್ಧರಿಸಿದನು. ಎಲ್ಲಾ ನಾಮರೂಪಗಳಲ್ಲಿಯೂ ಪರಮಾತ್ಮನು ಅಖಂಡನಾಗಿದ್ದಾನೆ, ಮತ್ತು ಎಲ್ಲಾ ನಾಮ ರೂಪಗಳ ಸೃಷ್ಟಿ, ಸ್ಥಿತಿ, ಲಯಗಳು ಪರಮಾತ್ಮನಿಂದಲೇ, ಅವನಲ್ಲಿಯೇ ಆಗುತ್ತವೆ ಎಂಬ ಅಂಶಗಳನ್ನು ಪರಮಾತ್ಮನು ಅರ್ಜುನನಿಗೆ ತೋರಿಸಬೇಕಾಗಿತ್ತು.

ಶ್ರೀ ಭಗವಾನುವಾಚ
ಪಠ್ಯ ಮೇ ಪಾರ್ಥ ರೂಪಾಣಿ ಶತಶೋ„ಥ ಸಹಸ್ರಶಃ |
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ || || 5 ||
ಭಗವಂತನು ಹೇಳುತ್ತಾನೆ.
ಅರ್ಥ :- ಪಾರ್ಥನೇ ನೋಡು, ನಾನಾವಿಧವಾದ, ದಿವ್ಯವಾದ, ನಾನಾ ಬಣ್ಣಗಳಿಂದಲೂ, ನಾನಾ ಆಕಾರಗಳಿಂದಲೂ ಕೂಡಿದ ನನ್ನ ನೂರಾರು, ಸಾವಿರಾರು ರೂಪಗಳನ್ನು ನೋಡು ಬಂಗಾರದಿಂದ ಆಭರಣಗಳನ್ನು ಮಾಡುತ್ತಾರೆ ನಿಜ. ಎಲ್ಲಾ ಆಭರಣಗಳಲ್ಲಿ ಬಂಗಾರ ಇದೆ ಎಂದು ತಿಳಿಯುವುದು ಸುಲಭ. ಆದರೆ ಬಂಗಾರದಲ್ಲಿ ಎಲ್ಲಾ ತರಹದ, ಎಲ್ಲಾ ಆಕಾರದ ಆಭರಣಗಳೂ ಇರುವುದನ್ನು ಕಾಣುವುದು ಮಾತ್ರ ಸುಲಭವಲ್ಲ. ಇದನ್ನು ಬಾಹ್ಯ ಚಕ್ಷುವಿನಿಂದ ಕಾಣಲು ಸಾಧ್ಯವಿಲ್ಲ. ಅದಕ್ಕೆ ಚುರುಕಾದ ಬುದ್ಧಿಯ ಚಕ್ಷುವೇ ಬೇಕು. ಶ್ರೀಕೃಷ್ಣನು, ತನ್ನ ಶರೀರದಲ್ಲಿಯೇ, ನಾನವಿಧವಾದ ನಾಮರೂಪಗಳನ್ನು ನೋಡು ಎಂದು ಅರ್ಜುನನಿಗೆ ಹೇಳಿದಾಗ್ಯೂ, ಅವನ ಬಾಹ್ಯ ಚಕ್ಷುವಿನಿಂದ ಆ ರೂಪಗಳನ್ನು ನೋಡುವುದು ಸಾಧ್ಯವಿರಲಿಲ್ಲ. ಅರ್ಜುನನ ಬೌದ್ಧಿಕ ಚಕ್ಷುವು ಇನ್ನೂ ತೆರೆದಿರಲಿಲ್ಲ. ಈ ವಿಶ್ವರೂಪ ದೃಶ್ಯವನ್ನು ನೋಡುವಂತೆ ಆ ಕಣ್ಣನ್ನು ಇನ್ನೂ ಸಜ್ಜುಗೊಳಿಸಿರಲಿಲ್ಲ. ನಮ್ಮೆದುರಿಗೆ ಶಕ್ತಿಯುತವಾದ ದೂರದರ್ಶಕ ಯಂತ್ರವಿದೆ. ಅದನ್ನು ನೋಡಬೇಕಾದ ವಸ್ತುವಿನ ಎದುರಿಗಿಟ್ಟರೆ ಸಾಲದು. ಆ ವಸ್ತುವು ಯಂತ್ರದ ದೃಷ್ಟಿ ಪಥದೊಳಗೆ ಬರುವಂತೆ ಸಜ್ಜುಗೊಳಿಸಬೇಕಾಗುವುದು ಅವಶ್ಯಕ.
ತನ್ನ ರೂಪವನ್ನು ನೋಡು ಎಂದು ಹೇಳಿ, ಕೃಷ್ಣನು ಪೀಠಿಕಾರೂಪದಲ್ಲಿ ಅಲ್ಲಿ ಏನೇನನ್ನು ನೋಡಬೇಕೆಂಬುದನ್ನು ಸಂಕ್ಷೇಪವಾಗಿ ತಿಳಿಸಿದ್ದಾನೆ.

ಪಶ್ಶಾದಿತ್ಯಾನ್ವಸೂನ್ ರುದ್ರನಶ್ವಿನೌ ಮರುತಸ್ತಥಾ |
ಬಹೂನ್ಯದೃಷ್ಟಪೂರ್ವಾಣಿ ಪಶ್ಶಾಶ್ಚರ್ಯಾಣಿ ಭಾರತ || || 6 ||
ಅರ್ಥ :- ಭಾರತನೇ, ಅಲ್ಲಿ ಆದಿತ್ಯರು, ವಸುಗಳು, ರುದ್ರರು, ಅಶ್ವಿನೀ ದೇವತೆಗಳು, ಮರುತ್ತುಗಳು, ಇವರೆಲ್ಲರೂ ಒಟ್ಟಾಗಿರುವುದನ್ನು ನೋಡು. ಅಲ್ಲದೆ ಹಿಂದೆ ನೋಡದೆ ಇರತಕ್ಕಂತಹ ಆಶ್ಚರ್ಯಕರವಾದ ಇನ್ನೂ ಅನೇಕ ದೃಶ್ಯಗಳನ್ನೂ ನೋಡು.
ಹಿಂದಿನ ಅಧ್ಯಾಯದಲ್ಲಿ ಪರಮಾತ್ಮನ ವಿಭೂತಿಗಳನ್ನು ವಿವರಿಸುವಾಗ ಹೇಳಿದ ಆದಿತ್ಯರು, ವಸುಗಳು, ರುದ್ರರು, ಮೊದಲಾದ ಎಲ್ಲಾ ವಿಭೂತಿಗಳನ್ನು ತನ್ನ ಶರೀರದಲ್ಲಿ ಒಂದೇ ಕಡೆಗೆ ಪ್ರತ್ಯಕ್ಷವಾಗಿ ನೋಡಬಹುದೆಂದು ಸೂಚಿಸುತ್ತಾನೆ. ಇವಲ್ಲದೆ ನೋಡಬೇಕಾದ ಇನ್ನೂ ಅನೇಕ ದೃಶ್ಯಗಳೂ ಇವೆ ಎಂದು ಹೇಳಿದ್ದಾನೆ.
ಮೇಲಿನ ವಾಕ್ಯದಿಂದ ಅರ್ಜುನನ ಕುತೂಹಲವನ್ನು ಕೆರಳಿಸಿ, ಅವನು ಯಾವಾವುದನ್ನು ನೋಡಬೇಕೆಂದು ಕೃಷ್ಣನು ಇನ್ನೂ ಹೇಳಿದ್ದಾನೆ.

ಇಹೈಕಸ್ಥಂ ಜಗತ್ಕøತ್ಸ್ನಂ ಪಶ್ಶಾದ್ಯ ಸಚಾರಾಚರಮ್ |
ಮಮ ದೇಹೇ ಗುಡಾಕೇಶ ಯಚ್ಚಾನ್ಯತ್ ದ್ರಷ್ಟುಮಿಚ್ಛಸಿ || || 7 ||
ಅರ್ಥ :- ಗುಡಾಕೇಶನೇ, ನನ್ನ ಈ ಶರೀರದಲ್ಲಿ, ಚರಾಚರ ವಸ್ತುಗಳಿಂದ ಕೂಡಿದ ಸರ್ವ ಜಗತ್ತು ಒಟ್ಟುಗೂಡಿ ಇರುವುದನ್ನು ನೋಡು, ಅಲ್ಲದೆ ನಿನಗೆ ಇನ್ನೂ ಏನೇನು ನೋಡಬೇಕೆಂದಿದೆಯೋ ಅವೆಲ್ಲವೂ ಇಲ್ಲಿರುವುದನ್ನು ನೋಡು.
ಅರ್ಜುನನು ಏನೇನನ್ನು ನೋಡಬೇಕೆಂದು ಸಂಕ್ಷೇಪವಾಗಿ ಹೇಳಲಾಗಿದ್ದರೂ, ವರ್ಣನೆಯು ಸಂಪೂರ್ಣವಾಗಿದೆ. ಜೊತೆಗೆ ಅವನಿಗೆ ಇಷ್ಟವಿರುವ ಇತರೆ ಎಲ್ಲಾ ವಿಷಯಗಳನ್ನು ಸಹ ನೋಡಬಹುದೆಂದು ಹೇಳಿ ಪೂರ್ವ ತಯಾರಿಯನ್ನು ಮಾಡಲಾಗಿದೆ.
ಪರವಸ್ತುವನ್ನು ಎಲ್ಲಾ ನಾಮರೂಪಗಳಲ್ಲಿ ಕಾಣಬೇಕೆಂದು ಹಿಂದಿನ ಅಧ್ಯಾಯದಲ್ಲಿ ತಿಳಿಸಲಾಗಿದೆ. ಈಗ ಎಲ್ಲಾ ನಾಮರೂಪಗಳನ್ನು ಒಬ್ಬನಲ್ಲಿಯೇ ಕಾಣಬೇಕೆಂಬುದನ್ನು ಈ ಮುಂದೆ ವಿವರಿಸಲಾಗುತ್ತದೆ. ಅದಕ್ಕೆ ಅವಶ್ಯಕವಾದ ಶಕ್ತಿಯನ್ನು ದಯಪಾಲಿಸುವುದಾಗಿ ಕೃಷ್ಣನು ಆಶ್ವಾಸನೆಯನ್ನು ಕೊಡುತ್ತಾನೆ.

ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ |
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಶ ಮೇ ಯೋಗಮೈಶ್ವರಮ್ || || 8 ||
ಅರ್ಥ :- ಆದರೆ ನೀನು ಈ ಕಣ್ಣುಗಳಿಂದ ಅದನ್ನು ನೋಡಲು ಸಾಧ್ಯವಿಲ್ಲ. ಆದುದರಿಂದ ನಿನಗೆ ದಿವ್ಯದೃಷ್ಟಿಯನ್ನು ಕೊಡುತ್ತೇನೆ. ನನ್ನ ಈಶ್ವರೀ ಯೋಗವನ್ನು ನೋಡು.
ಸ್ಥೂಲ ಇಂದ್ರಿಯಗಳಿಂದ ಸೂಕ್ಷ್ಮವಸ್ತುಗಳನ್ನು ತಿಳಿಯಲಾಗುವುದಿಲ್ಲ. ಸ್ಥೂಲ ಇಂದ್ರಿಯಗಳು ಬಾಹ್ಯ ಜಗತ್ತಿನ ಸ್ಥೂಲವಸ್ತುಗಳ ಜ್ಞಾನವನ್ನು ಮಾತ್ರ ತಿಳಿಸಬಲ್ಲವು. ಕಾವ್ಯದ ಒಂದು ಪದ್ಯವನ್ನು ಮಾತ್ರ ಓದುವುದಕ್ಕೆ ಕೇವಲ ಅಕ್ಷರ ಜ್ಞಾನವಷ್ಟೆ ಇದ್ದರೆ ಸಾಕು. ಆದರೆ ಆ ಪದ್ಯದಲ್ಲಿ ಅಡಗಿದ ಭಾವವನ್ನು ತಿಳಿದುಕೊಳ್ಳುವುದಕ್ಕೆ ಆ ವಿಷಯದಲ್ಲಿ, ಪರಿಣಿತವಾದ ಮನಸ್ಸು ಬುದ್ಧಿಗಳು ಬೇಕು. ಇದೇ ರೀತಿಯಾಗಿ ನಾನಾವಸ್ತುಗಳಲ್ಲಿ ಒಬ್ಬನೇ ಪರಮಾತ್ಮನನ್ನು ಕಾಣುವುದಕ್ಕೆ ಶ್ರದ್ಧೆಯಿಂದ ಆದ್ರ್ರವಾದ ಹೃದಯವು ಸಾಕು. ಆದರೆ ನಾನಾವಸ್ತುಗಳು ಒಬ್ಬನಲ್ಲೇ ಇರುವುದನ್ನು ನೋಡಬೇಕಾದರೆ ಆದ್ರ್ರ ಹೃದಯದ ಜೊತೆಗೆ ವೇದಾಂತದ ತರ್ಕವನ್ನು ತಿಳಿದುಕೊಳ್ಳಬಲ್ಲ ಶಿಕ್ಷಿತ ಹಾಗೂ ಕುಶಾಗ್ರ ಬುದ್ಧಿ ಬೇಕು. ಶ್ರೀಕೃಷ್ಣನು ಅರ್ಜುನನಲ್ಲಿ ಈ ಶಕ್ತಿಯು ಜಾಗೃತವಾಗುವಂತೆ ಮಾಡಿದನು. ಯುದ್ಧರಂಗದ ಇದುವರೆಗಿನ ದೃಶ್ಯವು ಈಗ ಧೃತರಾಷ್ಟ್ರನ ಅರಮನೆಗೆ ಬದಲಾಗಿದೆ.
ಸಂಜಯ ಉವಾಚ
ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿಃ |
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ || 9 ||
ಸಂಜಯನು ಹೇಳುತ್ತಾನೆ
ಅರ್ಥ :- ಈ ರೀತಿಯಾಗಿ ಹೇಳಿ, ಎಲೈ ರಾಜನೇ, ಯೋಗೇಶ್ವರನಾದ ಹರಿಯು ಪಾರ್ಥನಿಗೆ ತನ್ನ ದಿವ್ಯವಾದ ಈಶ್ವರೀ ರೂಪವನ್ನು ತೋರಿಸಿದನು.
ಸಂಜಯನು ಧೃತರಾಷ್ಟ್ರನಿಗೆ ಈ ರೀತಿಯಾಗಿ ಹೇಳಿ, ತಾನು ಅರಮನೆಯಿಂದಲೇ ಕಂಡ ಈಶ್ವರೀ ರೂಪವನ್ನು ಸ್ಥೂಲವಾಗಿ ವಿವರಿಸುತ್ತಿದ್ದಾನೆ.

ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್ |
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ || || 10 ||
ಅರ್ಥ :- ಅನೇಕ ಬಾಯಿಗಳುಳ್ಳ, ಅನೇಕ ಕಣ್ಣುಗಳುಳ್ಳ, ಅನೇಕ ಅದ್ಭುತ ರೂಪಗಳುಳ್ಳ ದಿವ್ಯವಾದ ಅನೇಕ ಆಭರಣಗಳನ್ನು ಧರಿಸಿರುವ, ಮತ್ತು ಕೈಯಲ್ಲಿ ದಿವ್ಯವಾದ ಆಯುಧಗಳನ್ನು ಎತ್ತಿ ಹಿಡಿದಿರುವ, (ರೂಪವನ್ನು ತೋರಿಸಿದನು)

ದಿವ್ಯಮಾಲಾಂಬರಧರಂ ದಿವ್ಯಗಂಧಾನುಲೇಪನಮ್ |
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ || 11 ||
ಅರ್ಥ:- ದಿವ್ಯವಾದ ಹಾರಗಳನ್ನೂ, ವಸ್ತ್ರಗಳನ್ನೂ ಧರಿಸಿರುವ, ದಿವ್ಯವಾದ ಸುಗಂಧಗಳನ್ನು ಶರೀರಕ್ಕೆ ಲೇಪಿಸಿಕೊಂಡಿರುವ, ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿರುವ, ಪ್ರಕಾಶಿಸುತ್ತಿರುವ, ಅನಂತವಾಗಿರುವ (ಕೊನೆಯೇ ಇಲ್ಲದ), ಎಲ್ಲಾ ದಿಕ್ಕುಗಳಲ್ಲಿಯೂ, ಮುಖವಿರುವ, (ರೂಪವನ್ನು ತೋರಿಸಿದನು)
ಚಿತ್ರಕಾರನು ಚಿತ್ರವನ್ನು ಬರೆಯುವಾಗ ಮೊದಲು ಬಟ್ಟೆಯ ಮೇಲೆ, ಸ್ಥೂಲವಾದ ಆಕಾರವನ್ನು ಚಿತ್ರಿಸಿ, ನಂತರ ಒಂದೊಂದೇ ವಿವರಗಳನ್ನು ತನ್ನ ಕೈ ಚಳಕದಿಂದ ಮೂಡಿಸುವಂತೆ, ವ್ಯಾಸನು ಮೊದಲು ವಿಶ್ವರೂಪದ ಸ್ಥೂಲವಿವರವನ್ನು ಹೇಳಿ, ನಂತರ ಒಂದೊಂದೇ ವಿವರಗಳನ್ನು (ಹಾರ, ವಸ್ತ್ರ ಇತ್ಯಾದಿ) ವರ್ಣಿಸುತ್ತಿದ್ದಾನೆ. ಸಂಜಯನು ಆ ವಿಶ್ವರೂಪವನ್ನು ತಾನು ಕಂಡಂತೆ ಇನ್ನೂ ವರ್ಣಿಸುತ್ತಾನೆ.

ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ |
ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ || || 12 ||
ಅರ್ಥ :- ಆಕಾಶದಲ್ಲಿ ಒಂದೇ ಕಾಲದಲ್ಲಿ ಹುಟ್ಟಿದ ಸಾವಿರ ಸೂರ್ಯರ ತೇಜಸ್ಸು ಆ ರೂಪದ ತೇಜಸ್ಸಿಗೆ ಸರಿಯಾದೀತೋ ಏನೋ!
ತತ್ರೈಕಸ್ಥಂ ಜಗತ್ಕøತ್ಸ್ನಂ ಪ್ರವಿಭಕ್ತಮನೇಕಧಾ |
ಅಪಶ್ಶದ್ದೇವದೇವಸ್ಯ ಶರೀರೇ ಪಾಂಡವಸ್ತದಾ || || 13 ||
ಅರ್ಥ :- ಸರ್ವ ಜಗತ್ತೂ ಬೇರೆ ಬೇರೆ ಗುಂಪುಗಳಾಗಿ, ಆ ದೇವದೇವನಾದ ಪರಮಾತ್ಮನ ಶರೀರದಲ್ಲಿ ಒಂದೇ ಕಡೆ ಇರುವುದನ್ನು ಅರ್ಜುನನು ಕಂಡನು.
ಈ ದರ್ಶನದಿಂದ ಅರ್ಜುನಲ್ಲುಂಟಾದ ಶಾರೀರಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಸಹ ಸಂಜಯನು ವರ್ಣಿಸಿದ್ದಾನೆ.

ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ |
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರ ಭಾಷತ || ಕೃತಾಂಜಲಿರಿವ ಭಾರತ || 14 ||
ಅರ್ಥ :- ಆಗ ಅರ್ಜುನನು, ಆಶ್ಚರ್ಯಚಕಿತನಾಗಿ, ರೋಮಾಂಚನಗೊಂಡವನಾಗಿ, ಕೈಗಳನ್ನು ಜೋಡಿಸಿಕೊಂಡು, ತಲೆಯನ್ನು ಬಗ್ಗಿಸಿ ನಮಸ್ಕಾರ ಮಾಡಿ ಹೇಳಿದನು.
ಸಂಜಯನು ಅರ್ಜುನನ ಶರೀರದಲ್ಲಾದ ಬದಲಾವಣೆಯಷ್ಟೇ ಅಲ್ಲ, ಮನಸ್ಸಿನಲ್ಲಾದ ಬದಲಾವಣೆಯನ್ನೂ ಸಹ, ಅರಮನೆಯಲ್ಲಿ ಕುಳಿತಲ್ಲಿಂತಲೇ ನೋಡಬಲ್ಲವನಾಗಿದ್ದನು. ಅರ್ಜುನನ ಶರೀರದಲ್ಲಿ ರೋಮಾಂಚನವಾದುದನ್ನು ಸಹ ಅವನು ಕಂಡನು. ಅರ್ಜುನನಿಗೆ ಈಗ ಕೃಷ್ಣನಲ್ಲಿ ನಿಜವಾದ ಭಕ್ತಿ ಹಾಗೂ ಗೌರವಗಳುಂಟಾಗಿವೆ. ಇದುವರೆವಿಗೂ ನಮಸ್ಕರಿಸದಿದ್ದ ಅವನು, ಕೃಷ್ಣನಿಗೆ ಕೈಮುಗಿದು, ತಲೆ ಬಗ್ಗಿಸಿ ನಮಸ್ಕಾರ ಮಾಡಿದ್ದಾನೆ.

ಅರ್ಜುನನ ಉವಾಚ
ಪಶ್ಶಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತವಿಶೇಷ ಸಂಘಾನ್ |
ಬ್ರಹ್ಮಾಣಮೀಶಂ ಕಮಲಾಸನಸ್ಥ –
ಮೃಷೀಂಶ್ಚ ಸರ್ವಾನುರಗಾಂಶ್ಚದಿವ್ಯಾನ್ || || 15 ||

ಅರ್ಜುನನು ಹೇಳುತ್ತಾನೆ.
ಅರ್ಥ :- ಪರಮಾತ್ಮನೇ, ಎಲ್ಲಾ ದೇವತೆಗಳ ಹಾಗೂ ಭೂತಗಳ ಗುಂಪುಗಳು ಒಟ್ಟಾಗಿ ನಿನ್ನ ಈ ದೇಹದಲ್ಲಿರುವುದನ್ನು ನೋಡುತ್ತಿದ್ದೇನೆ. ಬ್ರಹ್ಮ, ಶಂಕರ ಮತ್ತು ಕಮಲಾಸನನಾದ ವಿಷ್ಣು ಇವರನ್ನೂ ಎಲ್ಲಾ ಋಷಿಗಳನ್ನೂ, ದಿವ್ಯವಾದ ಹಾವುಗಳನ್ನು ನೋಡು.
ಕೃಷ್ಣನ ಶರೀರದಲ್ಲಿ ಅರ್ಜುನನು ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣವಾದ ಬ್ರಹ್ಮ, ವಿಷ್ಣು, ಮಹೇಶ್ವರನನ್ನೂ, ಭೂಲೋಕದ ಹಾಗೂ ದೇವಲೋಕದ ವಸ್ತುಗಳನ್ನು ಕಂಡನು.

ಅನೇಕಬಾಹೂದರವಕ್ತ್ರನೇತ್ರಂ
ಪಶ್ಶಾಮಿ ತ್ವಾಂ ಸರ್ವತೋ„ನಂತರೂಪಮ್ |
ನಾಂತಂ ನ ಮಧ್ಯಂ ನ ಪುನಸ್ತವಾದಿಂ –
ಪಶ್ಶಾಮಿ ವಿಶ್ವೇಶ್ವರ ವಿಶ್ವರೂಪ || || 16 ||
ಅರ್ಥ :- ಅನೇಕ ಬಾಹುಗಳು, ಅನೇಕ ಉದರಗಳು, ಅನೇಕ ಬಾಯಿಗಳು, ಅನೇಕ ಕಣ್ಣುಗಳು, ಇರುವ ಅನೇಕಾನೇಕ ರೂಪಗಳು ನಿನ್ನ ದೇಹದ ಸರ್ವ ದಿಕ್ಕುಗಳಲ್ಲಿಯೂ ಇರುವುದನ್ನು ನೋಡುತ್ತಿದ್ದೇನೆ. ನಿನ್ನ ಈ ರೂಪು ಎಲ್ಲಿಂದ ಪ್ರಾರಂಭವಾಯಿತು. ಅದರ ಮಧ್ಯಭಾಗವಾವುದು, ಮತ್ತು ತುದಿಯಾವುದು ಎಂಬುದು ತಿಳಿಯದಾಗಿದೆ. ವಿಶ್ವೇಶ್ವರನೇ ನಿನ್ನ ಈ ವಿಶ್ವರೂಪವು ಅಗಾಧವಾದುದಾಗಿದೆ.
ಸೃಷ್ಟಿಯಾದ ಎಲ್ಲಾ ಭೂತಗಳಲ್ಲಿಯೂ ಪರಮಾತ್ಮನು ಅಖಂಡನಾಗಿದ್ದಾನೆ, ಮತ್ತು ಆ ಎಲ್ಲಾ ಭೂತಗಳೂ ಅವನಲ್ಲಿವೆ, ಎಂಬುದನ್ನು ಅರ್ಜುನನು ಕಾಣುತ್ತಿದ್ದಾನೆ, ಎಲ್ಲಾ ಭೂತಗಳೂ ಅವನಲ್ಲಿವೆ ಎಂದು ಹೇಳಿರುವುದರಿಂದ, ಆ ಭೂತಗಳ ಗುಂಪುಗಳು ಕಪಾಟಿನಲ್ಲಿ ಸಾಮಾನುಗಳು ಒಟ್ಟು ಸೇರಿಸಲ್ಪಟ್ಟಂತೆ ಇಡಲ್ಪಟ್ಟಿವೆ ಎಂದು ತಿಳಿಯಬಾರದು. ಈ ದೃಶ್ಯವನ್ನು ಸ್ಥೂಲಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದನ್ನು ಅನುಭವಿಸಿ ಮಾತ್ರ ತಿಳಿಯಬಹುದು. ಚಿತ್ರಕಾರನು ಈ ಚಿತ್ರವನ್ನು ಚಿತ್ರಿಸಿ ತೋರಿಸಲು ಹೋದರೆ ಅದೊಂದು ಆಭಾಸವೇ ಆದೀತು. ಅರ್ಜುನನು ಈ ಎಲ್ಲಾ ರೂಪಗಳನ್ನೂ ಕಂಡಾಗ್ಯೂ, ಅದನ್ನು ಈ ರೀತಿ ಚಿತ್ರಿಸಲು, ಹಾಗೂ ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲನೆಂಬುದನ್ನು ಸೂಚಿಸಲು ಆ ರೂಪದ ಆದಿ, ಮಧ್ಯ ಮತ್ತು ಅಂತ್ಯವು ಎಲ್ಲಿದೆ ಎಂಬುದು ತಿಳಿಯದಾಗಿದೆ ಎಂದು ಅದೇ ಸ್ವರದಲ್ಲಿ ಹೇಳಿರುವುದನ್ನು ಗಮನಿಸಬೇಕು. ಹಾರದಲ್ಲಿಯ ದಾರದೊಳಗೆ ವಿವಿಧ ಮಣಿಗಳು ಪೋಣಿಸಲ್ಪಟ್ಟಂತೆ ಪರಮಾತ್ಮನಲ್ಲಿ ಎಲ್ಲಾ ಭೂತಗಳಿರುವುದನ್ನೂ ತಿಳಿಯಬೇಕು.

ಕಿರೀಟನಂ ಗದಿನಂ ಚಕ್ರಿಣಂ ಚ
ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ |
ಪಶ್ಶಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾ –
ದ್ವೀಪ್ತಾನಲಾರ್ಕದ್ಯುತಿ ಮಪ್ರಮೇಯಮ್ || || 17 ||
ಅರ್ಥ :- ಕಿರೀಟವನ್ನು ಧರಿಸಿ ಕೈಯಲ್ಲಿ ಗದೆಯನ್ನೂ, ಚಕ್ರವನ್ನೂ ಹಿಡಿದು ಕೊಂಡಿರುವ ನಿನ್ನನ್ನು ನೋಡುತ್ತಿದ್ದೇನೆ. ನೀನು ಸುತ್ತಲೂ ಉಜ್ವಲವಾಗಿ ಉರಿಯುತ್ತಿರುವ, ತೇಜಸ್ಸಿನ ರಾಶಿಯಂತೆ ಕಾಣುತ್ತಿದ್ದೀಯೆ. ಪ್ರಖರವಾದ ಜ್ವಾಲೆಯಿಂದ ಉರಿಯುತ್ತಿರುವ ಬೆಂಕಿಯಂತೆ, ಸೂರ್ಯನಂತೆ, ತೇಜಸ್ಸುಳ್ಳ, ಊಹಿಸಲು ಸಹ ಸಾಧ್ಯವಿದ ಈ ರೂಪವನ್ನು ನೋಡುವುದು ಕೂಡ ಕಷ್ಟವಾಗುತ್ತಿದೆ.
ವಿಶ್ವರೂಪದ ವರ್ಣನೆಯನ್ನು ಮಾಡಲು ಹೊರಟ ಅರ್ಜುನನು ಆ ರೂಪದ ವಿಸ್ತಾರವು ಎಷ್ಟಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲವೆಂದೂ, ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಅದನ್ನು ನೋಡುವುದು ಮತ್ತು ಶಬ್ದಗಳಿಂದ ವರ್ಣಿಸುವುದು ಕೂಡಾ ಸಾಧ್ಯವಿಲ್ಲವೆಂದೂ ಹೇಳುತ್ತಿದ್ದಾನೆ. ಹೀಗೆ ಶಬ್ದಗಳಿಂದ ವರ್ಣಿಸಲು ಅಸಾಧ್ಯವಾದುದರಿಂದ, ಪರಮಾತ್ಮನನ್ನು ಬೌದ್ಧಿಕ ದೃಷ್ಟಿಯಿಂದ ವರ್ಣಿಸುವ, ಹೊಗಳುವ, ಪ್ರಯತ್ನಮಾಡುತ್ತಾನೆ.

ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ || || 18 ||
ಅರ್ಥ:- ನೀನು ನಾಶರಹಿತನದವನೂ, ಪರಮಶ್ರೇಷ್ಠನೂ ಆಗಿದ್ದೀಯೆ. ಪ್ರಪಂಚದಲ್ಲಿ ತಿಳಿಯಬೇಕಾದ ವಸ್ತುವು ನೀನೇ ಸರಿ. ಈ ಪ್ರಪಂಚದ ಇರುವಿಕೆಗೆ ನೀನೇ ಆಗಾರವು. ಶಾಶ್ವತವಾದ ಸನಾತನ ಧರ್ಮವನ್ನು ಕಾಪಾಡತಕ್ಕವನೂ ನೀನೇ. ನನ್ನ ಅಭಿಪ್ರಾಯದಲ್ಲಿ ನೀನು ಪುರಾಣ ಪುರುಷನಾಗಿದ್ದೀಯೆ.
ಸಮುದ್ರದಲ್ಲಿ ಅನೇಕಾನೇಕ ಅಲೆಗಳು ಹುಟ್ಟುತ್ತವೆ, ಮತ್ತು ಒಂದರ ಮೇಲೊಂದರಂತೆ ಉಕ್ಕಿ ಬರುತ್ತವೆ. ಹೀಗೆ ಅವು ಸ್ವಲ್ಪ ಕಾಲ ಸಮುದ್ರದ ಮೇಲಿದ್ದು, ನಂತರ ಕರಗಿ ಸಮುದ್ರದಲ್ಲಿಯೇ ಲೀನವಾಗುತ್ತವೆ. ಅಂದರೆ ಅಲೆಗಳು ಸಮುದ್ರದಲ್ಲಿ ಹುಟ್ಟಿದುವು. ಅಲ್ಲೇ ಬದುಕಿದವು. ಮತ್ತು ಅಲ್ಲೇ ನಾಶವಾದುವು. ಈ ರೀತಿಯಾಗಿ ಸತತವೂ ನಡೆಯುತ್ತಿದೆ. ಅಲೆಗಳಿಗೆ ಸಮುದ್ರವು ಆಗರ ಎನ್ನುತ್ತೇವೆ. ಅಂತೆಯೇ ಅಲೆಗಳಿಗೆ ಸಮುದ್ರವೇ ವಿಶ್ರಾಂತಿ ಸ್ಥಾನವು, ಇದರಂತೆ ಜಗತ್ತಿನಲ್ಲಿ ಹುಟ್ಟಿ ಬರುವ ಪ್ರತಿಯೊಂದು ಭೂತಗಳ ಹುಟ್ಟು, ಇರುವಿಕೆ, ನಾಶ ಇವು ಪರಮಾತ್ಮನಲ್ಲೇ ಆಗುತ್ತವೆ ಎಂಬುದನ್ನು ಅರ್ಜುನನು ಊಹಿಸುತ್ತಿದ್ದಾನೆ. ಇಷ್ಟೇ ಅಲ್ಲ, ಪ್ರತಿಯೊಬ್ಬ ಮಾನವನ ಮನೋಸಾಗರದಲ್ಲಿ ಹುಟ್ಟುವ, ಇರುವ, ನಾಶವಾಗುವ ಎಲ್ಲಾ ವಿಚಾರ ತರಂಗಗಳಿಗೂ ಸಹ ಪರಮಾತ್ಮನೇ ವಾಸಸ್ಥಾನವೆಂದು, ಅರ್ಜುನನು ತಾನು ನೋಡಿದ ದೃಶ್ಯದಿಂದ ಊಹಿಸುತ್ತಿದ್ದಾನೆ. ಪ್ರಪಂಚದಲ್ಲಿ ಕಾಣುತ್ತಿರುವ ನಾನಾ ರೀತಿಯ ಬದಲಾವಣೆಗಳೆಲ್ಲವೂ, ಬದಲಾವಣೆಯನ್ನು ಹೊಂದದ ಪರಮಾತ್ಮನ ಶರೀರದಲ್ಲಿವೆ ಎಂದು ಅವನು ತಿಳಿದು ಅದೇ ರೀತಿ ವರ್ಣಿಸಿದ್ದಾನೆ.
ಈ ಶ್ಲೋಕದಲ್ಲಿಯ ‘ಶಾಶ್ವತ ಧರ್ಮಗೋಪ್ತಾ’ ಎಂಬ ಶಬ್ದಗಳು ತುಂಬಾ ಅರ್ಥವತ್ತಾಗಿವೆ. ಇದು ವ್ಯಾಸನ ವರ್ಣನಾ ಕೌಶಲ್ಯವನ್ನೂ, ಗಹನ ವಿಷಯವನ್ನು ಸಂಗ್ರಹವಾಗಿ ವರ್ಣಿಸುವ ಸಾಮಥ್ರ್ಯವನ್ನೂ ವ್ಯಕ್ತಪಡಿಸುತ್ತದೆ. ಶಾಶ್ವತವಾಗಿ ಧರ್ಮವನ್ನು ರಕ್ಷಿಸುವವನು, ಧರ್ಮವನ್ನು ಶಾಶ್ವತವಾಗಿ ರಕ್ಷಿಸುವವನು, ಶಾಶ್ವತವಾದ ಧರ್ಮವನ್ನು ಶಾಶ್ವತವಾಗಿ ರಕ್ಷಿಸುವವನು ಎಂದು ಮೂರು ವಿಧವಾದ ಅರ್ಥವನ್ನು ಮಾಡಬಹುದು. ಮೂರೂ ಅರ್ಥಗಳೂ ಸಾಧುವಾಗಿವೆ.

ಅನಾದಿಮಧ್ಯಾಂತಮನಂತವೀರ್ಯ –
ಮನಂತಬಾಹುಂ ಶಸಿಸೂರ್ಯ ನೇತ್ರಮ್ |
ಪಶ್ಶಾಮಿ ತ್ವಾಂ ದೀಪ್ತಹುತಾಶವಕ್ತ್ರಂ-
ಸ್ವತೇಜಸಾ ವಿಶ್ವಮಿದಂ ತಪಂತಮ್ || || 19 ||
ಅರ್ಥ :- ನೀನು ಆದಿ, ಮಧ್ಯ, ಅಂತ್ಯಗಳಿಲ್ಲದವನೆಂದೂ, ಅನಂತವಾದ ಶಕ್ತಿಯುಳ್ಳವನೆಂದೂ, ಲೆಕ್ಕವಿಲ್ಲದಷ್ಟು ಬಾಹುಗಳುಳ್ಳವನೆಂದೂ, ಚಂದ್ರಸೂರ್ಯನನ್ನು ಕಣ್ಣುಗಳಾಗುಳ್ಳವನೆಂದೂ, ತೇಜಸ್ಸಿನಿಂದ ಉರಿಯುತ್ತಿರುವ ಬೆಂಕಿಯನ್ನು ಬಾಯಿಯಾಗುಳ್ಳವನೆಂದೂ, ನಿನ್ನ ತೇಜಸ್ಸಿನ ಪ್ರಖರತೆಯಿಂದ ಇಡೀ ಪ್ರಪಂಚವನ್ನೇ ಸುಡುತ್ತಿರುವವನೆಂದೂ, (ಪ್ರಪಂಚಕ್ಕೆ ಕಾಟನ್ನು ಕೊಡುವವನೆಂದೂ) ಕಾಣುತ್ತಿದ್ದೇನೆ.
ಇಲ್ಲಿ ಲೆಕ್ಕವಿಲ್ಲದಷ್ಟು ಕೈಗಳು, ಮತ್ತು ಅನಂತ ಶಕ್ತಿ ಎಂದರೆ, ಪ್ರಪಂಚದಲ್ಲಿ ಕೆಲಸ ಮಾಡುವ ಎಲ್ಲಾ ಕೈಗಳು, ಮತ್ತು ಅದರ ಹಿಂದೆ ಇರುವ ಕೆಲಸಮಾಡುವ ಶಕ್ತಿ, ಇವೆಲ್ಲವುಗಳಿಗೂ ಪರಮಾತ್ಮನು ಚೇತನವನ್ನು ಕೊಡುವವನು ಮತ್ತು ಈ ವಿವಿಧ ಸಾಧನೆಗಳ ಮೂಲಕ ಅವನ ಶಕ್ತಿಯು ಪ್ರಪಂಚದಲ್ಲಿ ಪ್ರಕಟವಾಗುತ್ತಿದೆ ಎಂದು ತಿಳಿಯಬೇಕು.
ಸೂರ್ಯಚಂದ್ರರು ಕಣ್ಣುಗಳು – ಸೂರ್ಯನು ಪ್ರಪಂಚಕ್ಕೆ ಬೆಳಕನ್ನು ಕೊಡುವವನು. ಅ ಬೆಳಕು ಚಂದ್ರನಿಂದ ಪ್ರತಿಬಿಂಬಿಸುತ್ತದೆ. ಹೀಗಾಗಿ ಚಂದ್ರ ಸೂರ್ಯರಿಬ್ಬರೂ ಪ್ರಪಂಚಕ್ಕೆ ಬೆಳಕನ್ನು ಕೊಡುವವರೆಂದು ಪರಿಗಣಿಸಲಾಗಿದೆ. ಎಲ್ಲಾ ದೃಶ್ಯಗಳನ್ನೂ ನಾವು ಕಣ್ಣುಗಳಿಂದ ನೋಡುತ್ತೇವೆ. ಕಣ್ಣುಗಳಿಲ್ಲದಿದ್ದರೆ ಹೊರಗಿನ ದೃಶ್ಯಗಳು ಕಾಣಲಾರವು. ದೃಶ್ಯಗಳನ್ನು ನೋಡಲು ಬರೇ ಕಣ್ಣು ಸಾಲದು. ನೋಡಲ್ಪಡುವ ವಸ್ತುಗಳ ಮೇಲೆ ಬೆಳಕು ಬೀಳಬೇಕು. ಆಗ ಮಾತ್ರ ನಾವು ಕಣ್ಣುಗಳಿಂದ ನೋಡಲು ಸಾಧ್ಯ. ಸೂರ್ಯ ಚಂದ್ರರು ವಸ್ತುಗಳನ್ನು ನೊಡಲು ಈ ಬೆಳಕನ್ನು ಕೊಡುವುದರಿಂದ, ಪ್ರಪಂಚದ ಎಲ್ಲಾ ವಸ್ತುಗಳನ್ನು ನೋಡಲು ಅವರು ಕಣ್ಣುಗಳು ಎಂದು ತಿಳಿಯಲಾಗಿದೆ.
ಉರಿಯುತ್ತಿರುವ ಬಾಯಿ – – ಬಾಯಿಂದ ನಾವು ಮಾತನಾಡುತ್ತೇವೆ ಆಹಾರದ ರುಚಿಯನ್ನು ನೋಡುತ್ತೇವೆ. ಇವೆರಡೂ ಕಾರ್ಯಗಳಿಗೂ – ಕಾವು ಅಥವಾ ಉಷ್ಣತೆಯು ಅವಶ್ಯಕ. ಎಂಬುದನ್ನು ಸೂಚಿಸುತ್ತದೆ.

ದ್ಯಾವಾಪೃಥವ್ಯೋರಿದಮಂತರಂ ಹಿ
ವ್ಯಾಪ್ತಂ ತ್ವಯೈಕೇನ ದಿಶಶ್ಚಸರ್ವಾಃ ||
ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ _
ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ || || 20 ||
ಅರ್ಥ :- ಮಹಾತ್ಮನೇ, ನಿನ್ನ ಈ ರೂಪಿನಿಂದ ಇಡೀ ಭೂಲೋಕ ಮತ್ತು ಆಕಾಶಗಳೂ, ಹಾಗೂ ಎಲ್ಲಾ ದಿಕ್ಕುಗಳೂ, ಸಂಪೂರ್ಣವಾಗಿ ತುಂಬಿ ಹೋಗಿವೆ. ನಿನ್ನ ಅದ್ಭುತವೂ, ಉಗ್ರವೂ ಆದ ಈ ರೂಪವನ್ನು ನೋಡಿ ಮೂರು ಲೋಕದ ಜನರೂ ಹೆದರಿ ನಡುಗುತ್ತಿದ್ದಾರೆ.
ಅರ್ಜುನನು ನೋಡಿದ ಪರಮಾತ್ಮನ ರೂಪು ಬಹಳ ವಿಸ್ತಾರವಾದುದಾಗಿತ್ತು. ಅದು ಇಡೀ ಭೂಮಂಡಲವನ್ನೂ, ಸಂಪೂರ್ಣ ಆಕಾಶವನ್ನೂ ತುಂಬಿ, ಅದರ ಆಚೆಗೆ ಸಹ ಹೋಗಿತ್ತು. ಇಂತಹ ಅದ್ಭುತವಾದ ರೂಪವನ್ನು ನೋಡಿ ಅರ್ಜುನನು ಹೆದರಿದನು, ತಾನು ಹೆದರಿದ್ದೇನೆ ಎಂದು ಒಂದೇ ಸಾರಿ ಹೇಳಲು ಸಂಕೋಚಪಟ್ಟು, ಮೂರೂ ಲೋಕದ ಜನರು ಹೆದರಿದ್ದಾರೆ ಎಂದು ಹೇಳಿದ್ದಾನೆ. ಮುಂದೆ, ತಾನೂ ಹೆದರಿರುವುದಾಗಿ ಒಪ್ಪಿಕೊಳ್ಳುವುದನ್ನು ನೋಡಬಹುದು.
ಯುದ್ಧದಲ್ಲಿ ತಾವು ಗೆಲ್ಲುತ್ತೇವೆಯೋ ಇಲ್ಲವೋ ಎಂಬ ಬಗ್ಗೆ ಅರ್ಜುನನಿಗೆ ಸಂಶಯವಿತ್ತು. ಅವನ ಈ ಭಯವನ್ನು ಹೋಗಲಾಡಿಸುವುದಕ್ಕಾಗಿ ಶ್ರೀಕೃಷ್ಣನು, ತನ್ನ ಶರೀರದಲ್ಲಿ ಅವನಿಗೆ ವಿವಿಧ ದೃಶ್ಯಗಳನ್ನು ತೋರಿಸುತ್ತಾನೆ. ಮತ್ತು ಜೊತೆಗೆ ಯುದ್ಧದ ಭವಿಷ್ಯಸೂಚಕ ದೃಶ್ಯಗಳನ್ನು ತೋರಿಸುತ್ತಾನೆ.

ಅಮಿ ಹಿ ತ್ವಾಂ ಸುರಸಂಘಾ ವಿಶಂತಿ
ಕೇಚಿದ್ಭಿತಾಃ ಪ್ರಾಂಜಲಯೋ ಗೃಣಂತಿ |
ಸ್ವಸ್ತೀತ್ಯುಕ್ತ್ವಾಮಹರ್ಷಿಸಿದ್ಧಸಂಘಾಃ
ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ || || 21 ||
ಅರ್ಥ :- ದೇವತೆಗಳ ಸಮೂಹವೇ ನಿನ್ನ ಶರೀರದೊಳಕ್ಕೆ ಪ್ರವೇಶಿಸುತ್ತಿವೆ. ಕೆಲವರು ಹೆದರಿ ಕೈಮುಗಿದುಕೊಂಡು ನಿನ್ನನ್ನು ಸ್ತೋತ್ರಮಾಡುತ್ತಿದ್ದಾರೆ. ಮಹರ್ಷಿಗಳ ಮತ್ತು ಸಿದ್ಧರ ಗುಂಪುಗಳು ‘ನಿನಗೆ ಕಲ್ಯಾಣವಾಗಲಿ’ ಎಂದು ಆಶೀರ್ವದಿಸುತ್ತಿದ್ದಾರೆ. ಮತ್ತು ವೇದೋಕ್ತ ಸ್ತೋತ್ರಗಳಿಂದ ನಿನ್ನನ್ನು ಬಹುವಾಗಿ ಹೊಗಳುತ್ತಿದ್ದಾರೆ.
ಪ್ರಪಂಚದಲ್ಲಿರುವ ಜನರನ್ನು ಮೂರು ಗುಂಪುಗಳಾಗಿ ವಿವರಿಸಿ, ಅವರ ಸ್ಥಿರ ಹೇಗಿದೆ ಎಂಬುದನ್ನು ಈ ವರ್ಣನೆಯಲ್ಲಿ ಎತ್ತಿ ತೋರಿಸಲಾಗಿದೆ. ಮೊದಲನೆಯ ಗುಂಪಿನನವರು ಕ್ರಿಮಿಕೀಟಗಳಂತೆ ನಿಸ್ಸಹಾಯಕರಾಗಿ, ಪರಮಾತ್ಮನ ಶರೀರದೊಳಕ್ಕೆ ಹೊಕ್ಕು ನಾಶವಾಗುತ್ತಿದ್ದಾರೆ. ಇದಕ್ಕಿಂತ ಸ್ವಲ್ಪ ಮೇಲ್ದರ್ಜೆಯ ಗುಂಪಿನವರು, ತಮ್ಮ ಮರಣವು ನಿಶ್ಚಯವಾದುದೆಂದು ತಿಳಿದು. ಹೆದರಿ ಕೊಂಡಿದ್ದಾಗ್ಯೂ, ಪರಮಾತ್ಮನೇ ಗತಿ ಎಂದು ನಂಬಿ, ಆತನನ್ನು ಭಯಭಕ್ತಿಯಿಂದ ಸ್ತೋತ್ರಮಾಡುತ್ತಾರೆ. ಮೂರನೆ ಗುಂಪಿನವರು ಜ್ಞಾನಿಗಳಾದ ಸಿದ್ಧರು, ಹಾಗೂ ಮಹರ್ಷಿಗಳು, ಪರಮಾತ್ಮನ ನಾಶಕಾರ್ಯದಿಂದ ಪ್ರಪಂಚಕ್ಕೆ ಕಲ್ಯಾಣವಾಗುತ್ತದೆಂದೂ, ಪರಮಾತ್ಮನು ಮಾಡುವ ಯಾವ ಕಾರ್ಯವೂ ವ್ಯರ್ಥವಾಗುವುದಿಲ್ಲವೆಂದೂ, ಇವೆಲ್ಲವೂ ಆತನ ಲೀಲೆ ಎಂದೂ, ತಿಳಿದು, ನಂಬಿ, ಶಾಂತಚಿತ್ತರಾಗಿ, ಮುಂದೆ ಲೋಕ ಕಲ್ಯಾಣವಾಗಲೆಂದು, ದಿವ್ಯ ಸ್ತೋತ್ರಗಳಿಂದ ಪರಮಾತ್ಮನನ್ನು ಸ್ತುತಿಸುತ್ತಾರೆ. ಈ ರೂಪನ್ನು ನೋಡಿ ದೇವಲೋಕದ ಜನರ ಮೇಲೆ ಯಾವ ಪರಿಣಾಮವಾಯಿತು.
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ –
ವಿಶ್ವೇ„ಶ್ಚಿನೌ ಮರುತಶ್ಚೋಷ್ಠಪಾಶ್ಚ |
ಗಂಧರ್ವ ಯಕ್ಷಾಸುರಸಿದ್ಧಸಂಘಾ –
ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ || || 22 ||
ಅರ್ಥ :- ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವರು, ಅಶ್ವಿನೀ ದೇವತೆಗಳು ಮರುತ್ತುಗಳು. ಪಿತೃಗಳು ಗಂಧರ್ವರು ಯಕ್ಷರು, ಅಸುರ ಮತ್ತು ಸಿದ್ಧರು ಇವರೆಲ್ಲರೂ ನಿನ್ನ ಈ ರೂಪವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಭೂಲೋಕದವರು ಅರ್ಚಿಸುತ್ತಿರುವ ದೇವಲೋಕದ ರುದ್ರರು, ಆದಿತ್ಯರು, ಮೊದಲಾದ ಎಲ್ಲಾ ವಿಶಿಷ್ಟ ಅಧಿದೇವತೆಗಳು ಸಹ (ರುದ್ರರು-ನಾಶದ ಅಧಿದೇವತೆಗಳು, ವಸುಗಳು-ಋತುಗಳ ಅಧಿದೇವತೆಗಳು, ಮರುತ್ತುಗಳು-ಗಾಳಿಯ ಅಧಿದೇವತೆಗಳು ಇತ್ಯಾದಿ), ಈ ರೂಪವನ್ನು ನೋಡಿ ಆಶ್ಚರ ್ಯ ಚಕಿತರಾಗಿರುವುದನ್ನು ಅರ್ಜುನನು ನೋಡಿ ಅದನ್ನು ವರ್ಣಿಸುತ್ತಿದ್ದಾನೆ.

ರೂಪಂ ಮಹತ್ತೇ ಬಹುವಕ್ತ್ರನೇತ್ರಂ –
ಮಹಾಬಾಹೋ ಬಹುಬಾಹೂರು ಪಾದಮ್ |
ಬಹೂದರಂ ಬಹುದಂಷ್ಟ್ರಾಕರಾಲಂ –
ದೃಷ್ಟ್ವಾಲೋಕಾಃ ಪ್ರವ್ಯಥಿತಾಸ್ತಥಾಹಮ್ || || 23 ||
ಅರ್ಥ :- ಮಹಾಬಾಹುವೇ, ಅನೇಕ ಬಾಯಿಗಳೂ, ಕಣ್ಣುಗಳೂ ಉಳ್ಳ, ಅನೇಕ ಕೈಗಳೂ ಕಾಲುಗಳೂ ಇರುವ, ಉದರಗಳು ಅನೇಕಾನೇಕವಾಗಿರುವ, ಭಯಂಕರವಾದ ಅನೇಕ ಕೋರೆಹಲ್ಲುಗಳಿರುವ, ಅಳತೆಯಿಲ್ಲದಷ್ಟು ದೊಡ್ಡದಾದ ನಿನ್ನ ಈ ರೂಪವನ್ನು ನೋಡಿ ಎಲ್ಲಾ ಲೋಕಗಳೂ ಹೆದರಿವೆ. ನಾನು ಸಹ ಹೆದರಿದ್ದೇನೆ.
ನಭಃಸ್ಪøಶಂ ದೀಪ್ತಮನೇಕವರ್ಣಂ –
ವ್ಯಾತ್ತಾನನಂ ದೀಪ್ತವಿಶಾಲ ನೇತ್ರಮ್ |
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ
ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ || || 24 ||
ಅರ್ಥ :- ವಿಷ್ಣುವೇ, ಆಕಾಶಕ್ಕೆ ಮುಟ್ಟುತ್ತಿರುವ, ನಾನಾ ಬಣ್ಣಗಳ ಜ್ವಾಲೆಗಳಿಂದ ಉರಿಯುತ್ತಿರುವ, ತೆರೆದುಕೊಂಡ ಬಾಯಿಗಳುಳ್ಳ, ಬೆಂಕಿಯನ್ನು ಉಗುಳುತ್ತಿರುವ, ವಿಶಾಲವಾದ ಕಣ್ಣುಗಳುಳ್ಳ, ನಿನ್ನ ಈ ಅದ್ಭುತ ರೂಪವನ್ನು ನೋಡಿ, ನಾನು ಮನಸಿನೊಳಗೆ ಹೆದರಿದವನಾಗಿದ್ದೇನೆ, ನನಗೆ ಧೈರ್ಯವಾಗಲೀ, ಶಾಂತಿಯಾಗಲೀ ಇಲ್ಲವಾಗಿದೆ.
ಶ್ರೀಕೃಷ್ಣನ, ಕೇವಲ ಮಾನುಷಾಕಾರದ ಶರೀರದಲ್ಲಿ, ಅರ್ಜುನನು ಇಂತಹ ಅಸಾಮಾನ್ಯವಾದ, ಅದ್ಭುತವಾದ, ಭಯಂಕರವಾದ ರೂಪವನ್ನು ನೋಡಿದನು. ಈ ದೃಶ್ಯದಲ್ಲಿ ಅನೇಕರು ಭಯದಿಂದ ನಡುಗತ್ತಿರುವುದನ್ನು ಕಂಡು, ಅರ್ಜುನನು ಸಹ ಹೆದರಿಕೆಯಿಂದ ನಡುಗಿ, ತನ್ನ ಚಿತ್ತವನ್ನು ಸಮಾಧಾನಕ್ಕೆ ತಂದು ಕೊಳ್ಳಲಾರದವನಾದನು. ಅದನ್ನು ಅವನೇ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾನೆ. ಸಾಮಾನ್ಯವಾಗಿ ಮನುಷ್ಯನು ಜನರ ಗುಂಪಿನಲ್ಲಿರುವಾಗ, ಇಡೀ ಗುಂಪು ಸಂತೋಷದಿಂದ, ದುಃಖದಿಂದ, ಇಲ್ಲವೇ ಭಯದಿಂದ ಕೂಡಿದ್ದರೆ, ತಾನೂ ಸಹ ಮಾನಸಿಕವಾಗಿ ಅದೇ ಭಾವವನ್ನು ಹೊಂದಿದವನಾಗುತ್ತಾನೆ. ಪ್ರಾಯಶಃ ಅರ್ಜುನನಿಗೂ ಹೀಗಾಗಿರಬಹುದು. ವೀರಕ್ಷತ್ರಿಯನಾದ ತಾನು ಈ ರೀತಿಯಾಗಿ ಹೆದರಬಾರದೆಂಬುದನ್ನು ಮನಗಂಡು, ತನ್ನ ಹೆದರಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ, ಈ ರೂಪವು ಅತಿ ಅಮಾನುಷವೂ. ಭಯಂಕರವೂ ಆಗಿದೆ ಎಂದು ವರ್ಣಿಸಿ, ಇಡೀ ಲೋಕವೇ ಹೆದರುತ್ತಿದೆ ಎಂದು ಹೇಳಿದ್ದಾನೆ. ಇಂತಹ ಮಾನಸಿಕ ಭೀತಿಯುಂಟಾಗಿರುವಾಗ ಅವನು ಈ ರೂಪವನ್ನು ‘ವಿಷ್ಣು’ ಎಂದು ಸಂಬೋಧಿಸಿದ್ದಾನೆ.
ವೀರಕ್ಷತ್ರಿಯನಾದ ತಾನು ಹೆದರುತ್ತಿರುವುದು ಏಕೆ ಎಂದು ಕಾರಣವನ್ನು ಹೇಳಿ ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ.
ದಂಷ್ಟ್ರಾಕರಾಲಾನಿ ಚ ತೇ ಮುಖಾನಿ
ದೃಷ್ಟೈವ ಕಾಲಾನಲಸನ್ನಿಭಾನಿ |
ದಿಶೋನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ || || 25 ||
ಅರ್ಥ :-ದೇವತೆಗಳ ಒಡೆಯನೇ ಜಗತ್ತಿಗೆ ನಿವಾಸ ಸ್ಥಾನನಾದವನೇ ಭಯಂಕರವಾದ ಕೋರೆ ದಾಡೆಗಳಿಂದ ಕೂಡಿ, ಪ್ರಲಯಾಗ್ನಿಯನ್ನು ಉಗುಳುತ್ತಿರುವ ನಿನ್ನ ಈ ಅದ್ಭುತವಾದ ಬಾಯಿಯನ್ನು ನೋಡಿ, ನಾನು ದಿಕ್ಕು ಕಾಣದವನಾಗಿದ್ದೇನೆ, ನನಗೆ ಸಮಾಧಾನವೂ ಶಾಂತಿಯೂ ಇಲ್ಲವಾಗಿದೆ. ಆದುದರಿಂದ ನನ್ನ ಮೇಲೆ ಕರುಣೆ ಮಾಡು.
ಅಪಾರವಾದ ಈ ರೂಪವನ್ನು ನೋಡಿ ಅರ್ಜುನನು ಶ್ರೀಕೃಷ್ಣನನ್ನು ‘ವಿಷ್ಣು’ ಎಂದು ಸಂಬೋಧಿಸಿದ್ದಾನೆ. ಉದ್ದವಾದ ಪಾದಗಳುಳ್ಳವನಿಗೆ ‘ವಿಷ್ಣು’ ಎಂದು ಹೆಸರು (ಇಲ್ಲಿ ಪಾದ ಎಂದರೆ ನಡೆಯುವಾಗ ಒಂದು ಹೆಜ್ಜೆಗೂ, ಇನ್ನೊಂದು ಹೆಜ್ಜೆಗೂ ಇರುವ ಅಂತರ ಎಂದು ತಿಳಿಯಬೇಕು).
ಮೇಲೆ ವರ್ಣಿಸಿದ ರೂಪದಲ್ಲಿ ಭಯಂಕರವಾದ ಕೋರೆದಾಡೆಗಳಿಂದ ಕೂಡಿದ, ಪ್ರಲಯಾಗ್ನಿಯನ್ನು ಉಗುಳುತ್ತಿರುವ ದೃಶ್ಯವನ್ನು ನೋಡಿ ಅರ್ಜುನನು ಇನ್ನು ಹೆದರಿದ್ದಾನೆ. ಅದ್ಭುತವಾದ, ಅವನ
ಊಹೆಗೂ ಸಿಗದ ಈ ಭಯಂಕರ ರೂಪವನು ಅಕಸ್ಮಾತ್ತಾಗಿ ನೋಡಿ ಅವನು ದಿಗ್ಭ್ರಮೆಗೊಂಡು ಏನು ಮಾಡಬೇಕೆಂದು ತಿಳಿಯದವನಾಗಿದ್ದಾನೆ. ಇಂತಹ ವೇಳೆಯಲ್ಲಿ ಅಹಂಕಾರ, ಶಾರೀರಿಕ, ಮಾನಸಿಕ, ಬೌದ್ಧಿಶಕ್ತಿಗಳೆಲ್ಲವೂ ನಷ್ಟವಾಗಿ ಮನುಷ್ಯನು ಶರಣಾಗತಿಯ ವಿನಹ ಬೇರೆ ದಾರಿಯನ್ನು ಕಾಣುವುದಿಲ್ಲ. ತನ್ನ ಶಕ್ತಿ ಸಾಮಥ್ರ್ಯಗಳ ಬಗ್ಗೆ ಅಹಂಕಾರವಿರುವವರೆಗೂ ಶರಣಾಗತನಾಗುವ ಭಾವ ಹಾಗೂ ನಿಜವಾದ ಆಂತರಿಕ ಪ್ರಾರ್ಥನೆ ಹೊರಕ್ಕೆ ಇರುವುದಿಲ್ಲ. ಪರಮಾತ್ಮನ ಸಾಮಥ್ರ್ಯದ ಎದುರಿಗೆ ತನ್ನ ಸಾಮಥ್ರ್ಯವು ಏನೂ ಕೆಲಸಕ್ಕೆ ಬಾರದುದು ಎಂಬ ಅರಿವುಂಟಾದ ನಂತರವೇ ಆಂತರಿಕ ಹೃದಯದಿಂದ ಪರಮಾತ್ಮನ ಬಗ್ಗೆ ನಿಜವಾದ ಪ್ರಾರ್ಥನೆ ಬರುತ್ತದೆ. ಅಂತೆಯೇ ಅದನ್ನು ಅರ್ಜುನನ ಪ್ರಕಟಿಸಿದ್ದಾನೆ.
ಭವಿಷ್ಯಸೂಚಕ ದೃಶ್ಯವನ್ನು ಅರ್ಜುನನ್ನು ವಿಶ್ವರೂಪದಲ್ಲಿ ತಾನು ಕಂಡಂತೆ ವರ್ಣಿಸುತ್ತಾನೆ.
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿಷಾಲಸಂಘೈಃ |
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ
ಸಹಾಸ್ಮದೀಯೈರಪಿ ಯೋಧಮುಖ್ಯೈಃ || || 26 ||
ಅರ್ಥ :- ಧೃತರಾಷ್ಟ್ರನ ಎಲ್ಲಾ ಮಕ್ಕಳು, ಮತ್ತು ಅವರ ಸಹಾಯಕ್ಕೆ ಬಂದಿರುವ ಎಲ್ಲಾ ರಾಜರುಗಳ ಗುಂಪುಗಳು, ಭೀಷ್ಮ, ದ್ರೋಣ, ಕರ್ಣ, ಮತ್ತು ನಮ್ಮ ಕಡೆಯ ಪ್ರಮುಖ ಸೇನಾನಾಯಕರು.

ವಕ್ತ್ರಾಣೀ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾಕರಾಲಾನಿ ಭಯಾನಕಾನಿ |
ಕೇಚಿದ್ವಿಲಗ್ನಾದಶನಾಂತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ || || 27 ||
ಅರ್ಥ :- ನಿನ್ನ ಭಯಂಕರವಾದ ಮತ್ತು ಕರಾಲವಾದ ಕೋರೆದಾಡಿಗಳಿಂದ ಕೂಡಿದ ಬಾಯಿಯೊಳಕ್ಕೆ ವೇಗದಿಂದ ಪ್ರವೇಶಿಸುತ್ತಿದ್ದಾರೆ. ಕೆಲವರು ನಿನ್ನ ಹಲ್ಲುಗಳ ಸಂದಿಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ತಲೆಗಳು ನಿನ್ನ ಹಲ್ಲುಗಳಿಂದ ಪುಡಿ ಮಾಡಲ್ಪಡುತ್ತಿವೆ.
ಸೃಷ್ಟಿ, ಸ್ಥಿತಿ, ಲಯಗಳ ತತ್ವವನ್ನು ಈ ವಿಶ್ವರೂಪದಲ್ಲಿ ಕಾಣಬಹುದು. ಸಮುದ್ರದಿಂದ ಅನೇಕಾನೇಕ ತೆರೆಗಳು ಏಳುತ್ತವೆ, ಸ್ವಲ್ಪ ಕಾಲ ಸಮುದ್ರದ ಮೇಲೆ ನಾಟ್ಯವಾಡುತ್ತವೆ, ನಂತರ ವೇಗವಾಗಿ ಸಮುದ್ರದಲ್ಲಿ ಲೀನವಾಗುತ್ತವೆ. ಇದೇ ರೀತಿಯಲ್ಲಿ ಅನೇಕ ನಾಮರೂಪಗಳು ಪರಮಾತ್ಮನ ತೆರೆದ ಬಾಯಿಯೊಳಕ್ಕೆ ವೇಗವಾಗಿ ಬಂದು ಬಿದ್ದು, ಇದ್ದು, ಅರಚಿ ನಾಶವಾಗುತ್ತವೆ. ಈಗಿರುವ ವಸ್ತುವು ನಾಶವಾಗದ ವಿನಹ ಅದರ ಸ್ಥಳದಲ್ಲಿ ಬೇರೆ ಹೊಸ ಸೃಷ್ಟಿಯು ಆಗಲಾರದು. ಈಗ ನಮ್ಮ ಕಣ್ಣೆದುರಿಗೆ ಕಾಣುತ್ತಿರುವ ಸೃಷ್ಟಿಯು ಉದ್ದಕ್ಕೂ ಸಾಗಿ ಬಂದ ಬದಲಾವಣೆಗಳ ತಳಿಕೆಗಳಾಗಿವೆ. ನಿನ್ನೆ ಇದ್ದುದು ಬದಲಾವಣೆಯನ್ನು ಹೊಂದಿ ಇವತ್ತಿನ ರೂಪಕ್ಕೆ ಬಂದಿವೆ. ಇವತ್ತಿದ್ದದ್ದು ಇನ್ನೂ ಬದಲಾವಣೆಯನ್ನು ಹೊಂದಿ ನಾಳೆ ಬೇರೆ ರೂಪವನ್ನು ತಾಳುತ್ತದೆ. ಬದಲಾವಣೆಯನ್ನು ಹೊಂದದೆ ಅದೇ ಸ್ಥಿತಿಯಲ್ಲಿರುವುದು ಸಾಧ್ಯವೇ ಇಲ್ಲ. ಅಷ್ಟೇ ಸ್ಥಿತಿಯಲ್ಲಿರುವುದಾದರೆ ಹೊಸ ಸೃಷ್ಟಿಯೂ ಸಾಧ್ಯವಿಲ್ಲ. ಇವತ್ತಿರುವ ವಸ್ತುವು ಆ ಸ್ಥಿತಿಯನ್ನು ತೊರೆದು (ನಾಶವಾಗಿ) ಬೇರೆ ರೂಪಕ್ಕೆ ಮಾರ್ಪಾಟಾಗಬಹುದು, ಇಲ್ಲವೇ ಅದು ಸಂಪೂರ್ಣ ನಾಶವಾಗಿ ಅದರಿಂದ ಬೇರೆ ಒಂದು ಅಥವಾ ಅನೇಕ ವಸ್ತುಗಳ ಸೃಷ್ಟಿಯಾಗಬಹುದು. ಅಖಂಡನಾದ ಪರಮಾತ್ಮನಿಂದ ಬೇರೆ ಬೇರೆ ವಸ್ತುಗಳ ಸೃಷ್ಟಿಯಾಗುವಂತೆ, ಎಲ್ಲಾ ವಸ್ತುಗಳ ಇರುವಿಕೆಗೆ ಅವನೇ ಕಾರಣಾಗಿರುವಂತೆ, ಅವುಗಳ ನಾಶಕ್ಕೂ ಅವನೇ ಕಾರಣನೆಂದೂ, ಆ ಎಲ್ಲಾ ವಸ್ತುಗಳೂ ನಾಶವಾಗುವಾಗ, ತೆರೆಗಳು ಸಮುದ್ರದಲ್ಲಿಯೇ ಲೀನವಾಗುವಂತೆ, ಪರಮಾತ್ಮನಲ್ಲಿಯೇ ವೇಗವಾಗಿ ಹೋಗಿ ಸೇರುತ್ತವೆಂದೂ, ಇಲ್ಲಿ ಅರ್ಜುನನು ಪ್ರತ್ಯಕ್ಷವಾಗಿ ಕಾಣುತ್ತಿದ್ದಾನೆ, ತನಗೆ ಹೆದರಿಕೆಯನ್ನುಂಟು ಮಾಡಿದ ಶತ್ರುಗಳ ಮುಖಂಡರು, ಈ ರೀತಿಯಾಗಿ ಪರಮಾತ್ಮನ ಬಾಯಿಯೊಳಕ್ಕೆ ಹೊಕ್ಕು ನಾಶವಾಗುತ್ತಿದ್ದಾರೆಂದು ಕಂಡಾಗ್ಯೂ, ಅದನ್ನು ಕೇವಲ ಪ್ರತೀಕವಾಗಿ ತಿಳಿದುಕೊಳ್ಳಬೇಕು. ಹೀಗೆ ಇಡೀ ಪ್ರಪಂಚವೇ ಪರಮಾತ್ಮನಲ್ಲಿ ಲೀನವಾಗಿ ಹೊಸ ಸೃಷ್ಟಿಯಾಗುತ್ತದೆ.
ಕರ್ಣ – ಪಾಂಡವರ ತಾಯಿಯಾದ ಕುಂತಿ ದೇವಿಯ ಹೊಟ್ಟೆಯಲ್ಲಿ ಸೂರ್ಯನ ಮಂತ್ರ ಪ್ರಭಾವದಿಂದ ಜನಿಸಿದವನು ಇನ್ನೂ ಕುಮಾರಿಯಾಗಿದ್ದ ಕುಂತಿಯು ಜನಾಪವಾದಕ್ಕೆ ಹೆದರಿ ಶಿಶುವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲು ಬಿಟ್ಟಳು. ಕೌರವರ ಕಡೆಯ ಒಬ್ಬ ದೂತನಿಗೆ ಇದು ಸಿಕ್ಕಿತು. ಮಕ್ಕಳಿಲ್ಲದ ಅವನು ಈ ಶಿಶುವನ್ನು ತನ್ನ ಮಗನೆಂದೇ ಸಾಕಿದನು. ಇವನಿಗೆ ನಮ್ಮ ಅಂಗ ದೇಶದ ರಾಜನನ್ನಾಗಿ ಮಾಡಿದನು. ಕರ್ಣನು ದುರ್ಯೋಧನನ ಪಕ್ಷದಲ್ಲಿದ್ದು ಅರ್ಜುನನನ್ನು ಕೊಲ್ಲುತ್ತೇನೆಂದು ಪಣತೊಟ್ಟನು. ಅರ್ಜುನನೊಡನೆ ಸಮಾನತೆಯಿಂದ ಯುದ್ಧಮಾಡಬಲ್ಲ ವೀರರು, ದುರ್ಯೋಧನನ ಪಕ್ಷದಲ್ಲಿ ಕರ್ಣನ ಹೊರತು ಬೇರೆ ಯಾರೂ ಇರಲಿಲ್ಲ.
ಭೂತ, ವರ್ತಮಾನ, ಮತ್ತು ಭವಿಷ್ಯತ್ ಕಾಲಗಳು, ಅಖಂಡನಾಗಿ ಒಂದೇ ಆಗಿರುವುದನ್ನು, ಅರ್ಜುನನು ಈ ವಿರಾಟ್ ರೂಪದಲ್ಲಿ ಕಂಡನು. ಭೂತಕಾಲವು ಈಗಿನ ಅಂದರೆ ವರ್ತಮಾನ ಕಾಲದಲ್ಲಿರುವುದನ್ನೂ, ಇನ್ನು ಮುಂದೆ ಏನಾಗುತ್ತದೆಂಬ ಭವಿಷ್ಯವನ್ನೂ ಅವನು ಇಲ್ಲಿ ಕಂಡಿದ್ದಾನೆ. ಶತ್ರುಗಳ ಮುಖಂಡರು ಪರಮಾತ್ಮನ ಬಾಯಿಯೊಳಕ್ಕೆ ಬಿದ್ದು ಸಾಯುತ್ತಿರುವುದನ್ನು ನೋಡಿ ಹೆದರಿದಾಗ್ಯೂ, ಅವನು ಯುದ್ಧದ ಭವಿಷ್ಯವನ್ನು ಮುಂದಾಗಿ ತಿಳಿದಿದ್ದಾನೆ.
ಶತ್ರುಗಳ ಮುಖಂಡರು ಪರಮಾತ್ಮನ ಬಾಯಿಯೊಳಕ್ಕೆ ಹೇಗೆ ಪ್ರವೇಶಿಸುತ್ತಿದ್ದಾರೆಂಬುದನ್ನು ಅವನೇ ಇನ್ನೂ ವರ್ಣಿಸುತ್ತಿದ್ದಾನೆ.
ಯಥಾ ನದೀನಾಂ ಬಹುವೋ„ಂಬುವೇಗಾಃ
ಸಮುದ್ರಮೇವಾಭಿಮುಖಾ ದ್ರವÀಂತಿ ||
ತಥಾ ತವಾಮೀ ನರಲೋಕವೀರಾ
ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ||.28 ||.
ಅರ್ಥ :- ಪ್ರವಾಹದಿಂದ ಕೂಡಿದ ನದಿಗಳು ವೇಗವಾಗಿ ಹರಿದು ಸಮುದ್ರವನ್ನು ಪ್ರವೇಶಿಸುವಂತೆ, ಭೂಲೋಕದ ಈ ನರವೀರರೆಲ್ಲರೂ, ನಿನ್ನ ಉರಿಯುತ್ತಿರುವ ಬಾಯಿಯೊಳಕ್ಕೆ ಪ್ರವೇಶಿಸುತ್ತಿದ್ದಾರೆ.
ಈ ಶ್ಲೋಕದಲ್ಲಿ ವೇದಾಂತ ತತ್ವವನ್ನು ಕಾವ್ಯಮಯವಾಗಿ ವರ್ಣಿಸಲಾಗಿದೆ. ಸಮುದ್ರವು ನೀರಿನ ಆಗರ. ಸಮುದ್ರದ ನೀರು, ಆವಿಯ ರೂಪದಲ್ಲಿ ಹರಿಯುತ್ತದೆ. ಒಂದೇ ನೀರು ಬೇರೆ ಬೇರೆ ನದಿಗಳಾಗಿ ಬೇರೆಬೇರೆ ಹೆಸರನ್ನು ಗಳಿಸುತ್ತದೆ. ಇಲ್ಲಿ ನೀರು ಒಂದು ನಿಮಿಷವೂ ನಿಲ್ಲದೆ ಸತತವಾಗಿ ಹರಿಯುತ್ತಾ ಸಮುದ್ರವನ್ನು ಸೇರುತ್ತದೆ. ನದಿಗಳು ಹರಿದ ಭೂ ಪ್ರದೇಶಕ್ಕನುಗುಣವಾಗಿ ಬೇರೆಬೇರೆ ನಾಮರೂಪಗಳನ್ನು ಹೊಂದಿದಾಗ್ಯೂ ಅವೆಲ್ಲವರೂ ಕೊನೆಯಲ್ಲಿ ಹುಟ್ಟಿದ ಸ್ಥಳಕ್ಕೆ ಅಂದರೆ ಸಮುದ್ರಕ್ಕೆ ವಾಪಸ್ಸು ಬಂದು ಸೇರುತ್ತವೆ. ಪ್ರವಾಹವಿರುವಾಗ ನದಿಯ ನೀರು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಹರಿದು ಬಂದು ಸಮುದ್ರವನ್ನು ಸೇರುವಂತೆ, ನರಲೋಕದ ವೀರರೆಲ್ಲರೂ, ತಮ್ಮ ಭೂ ಲೋಕದ ಕಾರ್ಯವು ಮುಗಿದ ಮೇಲೆ, ವೇಗವಾಗಿ ಮರಣ ಹೊಂದುತ್ತಾರೆ ಎಂಬುದು ಸ್ಥೂಲವಾದ ಅರ್ಥ – ನದಿಗಳು ಸಮುದ್ರದಿಂದಲೇ ಹುಟ್ಟಿ, ಭೂಮಿಯಲ್ಲಿ ತಮ್ಮ ಕಾರ್ಯವನ್ನು ಮಾಡಿ ಮುಗಿಸಿದ ಮೇಲೆ, ಪುನಃ ಸಮುದ್ರವನ್ನೇ ಸೇರುವಂತೆ, ಪರಮಾತ್ಮನಿಂದಲೇ ಹುಟ್ಟಿದ ನರಲೋಕದ ವೀರರು (ಹಾಗೂ ಇತರೆ ಎಲ್ಲಾ ಸೃಷ್ಟಿಯು) ಇಲ್ಲಿಯ ಕಾರ್ಯವು ಮುಗಿದ ಮೇಲೆ ಪುನಃ ವೇಗವಾಗಿ ಪರಮಾತ್ಮನನ್ನೇ ಸೇರುತ್ತಾರೆ.

ಯಥಾ ಪ್ರದೀಪ್ತಾಂ ಜ್ವಲನಂ ಪತಂಗಾ
ವಿಶಂತಿ ನಾಶಾಯ ಸಮೃದ್ಧವೇಗಾಃ
ತಥೈವ ನಾಶಾಯ ವಿಶಂತಿ ಲೋಕಾ –
ಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ || || 29 ||
ಅರ್ಥ :- ಬೆಂಕಿಯನ್ನು ಕಂಡ ಪತಂಗಗಳು ವೇಗವಾಗಿ ಬೆಂಕಿಯೊಳಕ್ಕೆ ಹಾರಿ ಬಿದ್ದು ನಾಶವಾಗುವಂತೆ, ಈ ವೀರರು ಸಹ ನಿನ್ನ ಬಾಯಿಯೊಳಕ್ಕೆ ವೇಗವಾಗಿ ನುಗ್ಗಿ ನಾಶಹೊಂದುತ್ತಿದ್ದಾರೆ.
ವ್ಯಕ್ತವಾದ ಸೃಷ್ಟಿಯು ಅವ್ಯಕ್ತದಿಂದ ಹುಟ್ಟಿ, ಕೆಲವು ಕಾಲ ಇದ್ದು, ಕೊನೆಯಲ್ಲಿ ಅವ್ಯಕ್ತದಲ್ಲಿಯೇ ಲಯವಾಗುತ್ತದೆಂಬ ತತ್ವವು; ನದಿಯ ಸಮುದ್ರದಿಂದ ನೀರನ್ನು ತೆಗೆದುಕೊಂಡು, ಭೂಮಿಯಲ್ಲಿ ಹರಿದು, ಪುನಃ ಸಮುದ್ರದಲ್ಲಿಯೇ ಐಕ್ಯವಾಗುತ್ತದೆಂಬ ಉಪಮಾನದಿಂದ ಸುಂದರವಾಗಿ ವರ್ಣಿಸಲ್ಪಟ್ಟಿದೆ. ಉಪಮಾನವು ಯಾವಾಗಲೂ ಸಂಪೂರ್ಣ ಹೋಲಿಕೆಯಾಗದು. ಎಷ್ಟು ಭಾಗವನ್ನು ಹೋಲಿಸಲಾಗುತ್ತದೆಯೋ ಅಷ್ಟು ಭಾಗದ ಭಾವವನ್ನು ಮಾತ್ರ ಗ್ರಹಿಸಬೇಕು. ವಿಚಾರಶಕ್ತಿಯಿರುವ ಜೀವಿಗಳು, ವಿಚಾರಶಕ್ತಿಯಿಲ್ಲದ ನೀರಿನಂತೆ ವೇಗವಾಗಿ ಸಮುದ್ರವನ್ನು ಸೇರಿ ನಾಶವಾಗಲಾರರು ಎಂಬ ಅನುಮಾನವುಂಟಾಗಬಹುದೆಂಬುದನ್ನು ಊಹಿಸಿ, ಅದನ್ನು ಪರಿಹರಿಸುವುದಕ್ಕಾಗಿ ಪತಂಗದ ಉದಾಹರಣೆಯನ್ನು ಕೊಡಲಾಗಿದೆ. ಪತಂಗವು ಬೆಂಕಿಯನ್ನು ಕಂಡು ಅದು ಒಂದು ಸುಂದರವಾದ ಹಣ್ಣು ಎಂದು ತಿಳಿದು, ಬೆಂಕಿಯಿಂದ ಆಕರ್ಷಿಸಲ್ಪಟ್ಟು, ಬೇಕೆಂತಲೇ ಓಡಿ ಹೋಗಿ ಬೆಂಕಿಯಲ್ಲಿ ಬಿದ್ದು ಸುಟ್ಟು ಸತ್ತು ಹೋಗುತ್ತದೆ. ಎಲ್ಲಾ ಜೀವಿಗಳೂ, ನದಿಗಳಂತೆ ಪತಂಗಗಳಂತೆ, ತಮ್ಮ ಹತೋಟಿಯಿಲ್ಲದೆ. ಅವ್ಯಕ್ತದ ಕಡೆಗೆ ಓಡಿಹೋಗಿ ಮರಣದ ದವಡೆಯಲ್ಲಿ ಸಿಕ್ಕು ನಾಶವಾಗುತ್ತವೆ. ಹೀಗೆ ನಾಶವಾಗುವುದು ಸಹ ಒಂದು ಬದಲಾವಣೆ, ಕೃಷ್ಣನು ಅರ್ಜುನನಿಗೆ ಈ ದೃಶ್ಯವನ್ನು ತೋರಿಸಿ, ಅವನ ಮನಸ್ಸಿನಲ್ಲುಂಟಾಗಿದ್ದ, “ನಾನು ಎಲ್ಲಾ ಜನರನ್ನೂ ಕೊಲ್ಲುತ್ತೇನೆ” ಎಂಬ ಭಾವವು ತಪ್ಪು ತಿಳಿವಳಿಕೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದ್ದಾನೆ. ಈ ಹಿಂದೆ ಇದನ್ನು ತಾರ್ಕಿಕ ಹಿನ್ನೆಲೆಯಲ್ಲಿ ವರ್ಣಿಸಲಾಗಿದೆ.

ಲೇಲಿಹ್ಯಸೇ ಗ್ರಸಮಾನಃ ಸಮಂತಾ
ಲ್ಲೋಕಾನ್ಸಮಗ್ರಾನ್ವದನೈಜ್ರ್ವಲದ್ಬಿಃ
ತೇಜೋಭಿರಾಪೂರ್ಯ ಜಗತ್ಸಮಗ್ರಂ
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ || || 30 ||
ಅರ್ಥ :- ನಿನ್ನ ಈ ಉರಿಯುತ್ತಿರುವ ಬಾಯಿಗಳಿಂದ ನೀನು ಎಲ್ಲಾ ಕಡೆಗಳಿಂದಲೂ ಸರ್ವ ಜಗತ್ತನ್ನೂ ನೆಕ್ಕಿ ನುಂಗುತ್ತಿರುವೆ. ವಿಷ್ಣುವೇ, ಉಗ್ರವಾಗಿ ಉರಿಯುತ್ತಿರುವ ನಿನ್ನ ತೇಜಸ್ಸಿನಿಂದ ಜಗತ್ತನ್ನೇ ತುಂಬಿ ಸುಡುತ್ತಿರುವೆ.
ಸೃಷ್ಟಿ ಮತ್ತು ನಾಶ ಇವು ಒಂದಾದ ಮೇಲೊಂದರಂತೆ ಒದಗತಕ್ಕವೇ. ನಾಶವೆಂದರೆ ಸಂಪೂರ್ಣ ನಾಶವಲ್ಲ. ಅದು ಕೇವಲ ನಾಮರೂಪಗಳಲ್ಲಿಯ ಬದಲಾವಣೆ ಅಷ್ಟೆ. ಚಿತ್ರ ಮಂದಿರದಲ್ಲಿ ಯಂತ್ರದ ದೀಪದ ಎದುರಿಗೆ ಅನೇಕ ಚಿತ್ರಗಳನ್ನು ಓಡಿಸಲಾಗುತ್ತದೆ. ಒಂದು ಚಿತ್ರವು ಹೋಗಿ ಇನ್ನೊಂದು ಚಿತ್ರವು ಬರುತ್ತದೆ. ಹೋದ ಚಿತ್ರವು ನಾಶವಾಗಿ ಇನ್ನೊಂದು ಚಿತ್ರ ಬರಲು ಆಸ್ಪದವನ್ನು, ಅನುಕೂಲವಾದ ವಾತಾವರಣವನ್ನು, ಕಲ್ಪಿಸಿಕೊಟ್ಟಿತು. ಈ ರೀತಿಯಾಗಿ ಚಿತ್ರಗಳು ಹೋಗುವಿಕೆ ಮತ್ತು ಬರುವಿಕೆಯಿಂದ, ನಮಗೆ ವಿವಿಧ ಘಟನೆಗಳ, ಕಥೆಯ, ಕಲ್ಪನೆಯುಂಟಾಗುತ್ತದೆ. ಇದೇ ರೀತಿ ನಮ್ಮ ಜೀವನದಲ್ಲಿ, ಕಾಲ ಮತ್ತು ಸ್ಥಳಗಳಿಗನುಸಾರವಾಗಿ, ಅನೇಕಾನೇಕ ಚಿತ್ರಗಳು, ಘಟನೆಗಳು, ಅನುಭವಗಳು, ಬರುತ್ತವೆ. ಇರುತ್ತವೆ ಮತ್ತು ಹೋಗುತ್ತವೆ. ಈ ಎಲ್ಲಾ ಘಟನೆಗಳು, ಅನುಭವಗಳು, ಬರುತ್ತವೆ, ಇರುತ್ತವೆ ಮತ್ತು ಹೋಗುತ್ತವೆ. ಈ ಎಲ್ಲಾ ಘಟನೆಗಳನ್ನು ಒಟ್ಟುಗೂಡಿಸಿ, ನಮ್ಮ ಜೀವನದ ಅನುಭವ ಎನ್ನುತ್ತೇವೆ. ಜಗತ್ತಿನ ಈ ಒಟ್ಟು ಅನುಭವಗಳನ್ನು ಬ್ರಹ್ಮ, ವಿಷ್ಣು, ರುದ್ರ ಎಂಬ ಮೂರು ದೇವತೆಗಳೆಂಬ ಹೆಸರಿನಿಂದ ಕರೆಯಲಾಗಿದೆ. ಬ್ರಹ್ಮನು ಸೃಷ್ಟಿ ಮಾಡುವವನು, ಈಶ್ವರನು ನಾಶಮಾಡುವವನು, ಜೀವನದಲ್ಲಿಯ ಇರುವಿಕೆಯ ಎಲ್ಲಾ ಅನುಭವಗಳಿಗೆ, ಘಟನೆಗಳಿಗೆ ಕಾರಣನಾದವನು ವಿಷ್ಣು. ಆದ್ದರಿಂದಲೇ ಅರ್ಜುನನು ಕೃಷ್ಣನನ್ನು ಈಗ ವಿಷ್ಣು ಎಂದು ಸಂಬೋಧಿಸಿದ್ದಾನೆ.

ಅಖ್ಯಾಹಿ ಮೇ ಕೋ ಭವಾನುಗ್ರರೂಪೋ
ನಮೋ„ಸ್ತುತೇ ದೇವವರ ಪ್ರಸೀದ |
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ
ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ || || 31 ||
ಅರ್ಥ :- ಇಷ್ಟು ಉಗ್ರ ರೂಪವನ್ನು ಧರಿಸಿರುವ ನೀನು ಯಾರೆಂಬುದನ್ನು ನನಗೆ ತಿಳಿಸು. ಪುರುಷೋತ್ತಮನೇ, ನಿನಗೆ ನಮಸ್ಕಾರವು ನನ್ನ ಮೇಲೆ ದಯೆ ತೋರು. ಮೂಲಪುರುಷನಾದ ನೀನು ಯಾರು ಎಂಬುದನ್ನು ತಿಳಿಯಲು ಇಚ್ಛಿಸುತ್ತೇನೆ. ನೀನು ಈ ಉಗ್ರ ರೂಪವನ್ನು ಧರಿಸಿರುವ ಉದ್ದೇಶವೇನೋ ಎಂಬುದನ್ನು ತಿಳಿಯಲಾರದನಾಗಿದ್ದೇನೆ.
ವಿರಾಟ ರೂಪವನ್ನು ನೋಡಿದ ಅರ್ಜುನನು ಅದನ್ನು ತಿಳಿಯಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದಾಗ್ಯೂ, ಅದೂ, ನಿಜವಾದ ಜ್ಞಾನವನ್ನು ತಿಳಿಯಬೇಕೆಂಬ ಸಾತ್ವಿಕ ಅಪೇಕ್ಷೆಯಲ್ಲ. ಉಗ್ರವಾದ ರೂಪವನ್ನು ನೋಡಿ ಹೆದರಿದ ಅವನು ಆ ರೂಪಿನೊಳಕ್ಕೆ ತನ್ನ ಶತ್ರುಗಳಾದ ಕೌರವರೂ, ಅವರ ಕಡೆಯ ಪ್ರಮುಖರೂ ಪ್ರವೇಶಿಸಿ, ಸಿಕ್ಕಿ ಸಾಯುತ್ತಿರುವ ದೃಶ್ಯವನ್ನು ಕಂಡು, ಆ ವಿಷಯವನ್ನು ಖಚಿತಮಾಡಿಕೊಳ್ಳಬೇಕೆಂದು ಈ ಪ್ರಶ್ನೆಯನ್ನು ಕೇಳಿದ್ದಾನೆ.
ಅರ್ಜುನನ ಈ ಮನೋಭಾವವನ್ನು ತಿಳಿದ ಪರಮಾತ್ಮನು, “ತಾನು ಈಗ ನಾಶ ಮಾಡುವ ಕಾರ್ಯವನ್ನೂ ಪ್ರಾರಂಭಿಸಿದ್ದೇನೆ” ಎಂದು ತಿಳಿಸಿ ಅವನ ಅನುಮಾನವನ್ನು ಪರಿಹರಿಸುತ್ತಾನೆ.

ಶ್ರೀ ಭಗವಾನುವಾಚ
ಕಾಲೋ„ಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ –
ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ |
ಋತೇ„ಪಿ ತ್ವಾಂ ನ ಭವಿಷ್ಯಂತಿ ಸರ್ವೇ
ಯೇ„ವಸ್ಥಿತಾಃ ಪ್ರತ್ಯನೀಕೇಷು ಯೋಧಾಃ || || 32 ||
ಶ್ರೀ ಭಗವಂತನು ಹೇಳುತ್ತಾನೆ
ಅರ್ಥ :- ನಾನು ಲೋಕನಾಶಕನಾದ ಕಾಲನು. ಈಗ ನಾನು ಪ್ರಪಂಚವನ್ನು ನಾಶ ಮಾಡುವುದರಲ್ಲಿ ಉದ್ಯುಕ್ತನಾಗಿದ್ದೇನೆ. ನೀನು ಸುಮ್ಮನೆ ಇದ್ದಾಗ್ಯೂ ಶತ್ರು ಸೈನ್ಯದಲ್ಲಿ ಶೂರಯೋಧರೂ ಉಳಿಯವುದಿಲ್ಲ.
ಎಲ್ಲರನ್ನೂ ನಾಶಮಾಡಲು ಉದ್ಯುಕ್ತನಾಗಿದ್ದೇನೆ ಎಂದರೆ, “ಪರಮಾತ್ಮನು ಈಗ ಇರುವುದನ್ನು ನಾಶಮಾಡುವ ಕಠಿಣ ಹೃದಯದವನು, ಕ್ರೂರಿಯು ಆಗಿದ್ದಾನೆ” ಎಂದು ತಿಳಿಯಬಾರದು. ಎಷ್ಟೋ ಸಾರಿ ದಯೆ ಅಥವಾ ಕರುಣೆಯಿಂದ ನಾಶ ಮಾಡುವ ಕಾರ್ಯವನ್ನು ಮಾಡಬೇಕಾಗುತ್ತದೆ. ಉದಾಹರಣೆ- ಕೊಳೆತ ಕೈಯನ್ನು ಕತ್ತರಿಸಿ ಹಾಕುವುದು. ಲಡ್ಡಾಗಿರುವ ಮನೆಯನ್ನು ಅಥವಾ ಸೇತುವೆಯನ್ನು ಕೆಡವಿ ಹಾಕುವಿದಿ ಇತ್ಯಾದಿ, ಮೇಲಾಗಿ ನಾಶ ಎಂದರೆ ಒಂದು ಬದಲಾವಣೆ, ಹೊಸನಾಮ ರೂಪಗಳನ್ನು ಕೊಡುವುದಕ್ಕೆ ಮಾಡಿದ ಬದಲಾವಣೆ, ಈಗ ಪ್ರಕೃತ ಕಾರ್ಯದಲ್ಲಿ ಸಹ ದುರ್ಜನರನ್ನು, ದುಷ್ಟ ಶಕ್ತಿಯನ್ನು ನಾಶಮಾಡಿ, ಧರ್ಮಸ್ಥಾಪನೆ ಮಾಡುವುದಾಗಿದೆ. ಬಹುಜನರ ಹಿತದೃಷ್ಟಿಯಿಂದ ಕೆಲವು ದುರ್ಜನರನ್ನು ಕೊಲ್ಲುವುದಾಗಿದೆ. ಹೊಸದಾಗಿ ಧರ್ಮಸ್ಥಾಪನೆ ಮಾಡುವ ಕಾರ್ಯದಲ್ಲಿ ಯುದ್ಧದಲ್ಲಿ ಅರ್ಜುನನಿಗೆ ಜಯವಾಗುತ್ತದೆ ಎಂಬ ದೃಶ್ಯವನ್ನು ತೋರಿಸಲಾಗಿದ್ದರೂ, ಅದನ್ನು ಇಲ್ಲಿ ಇನ್ನು ಸ್ಪಷ್ಟಪಡಿಸಲಾಗಿದೆ. ಅರ್ಜುನನಿಗೆ “ನೀನು ಯುದ್ಧ ಮಾಡದೆ ಇದ್ದರೂ ಸಹ ಶತ್ರುವೀರರಲ್ಲಿ ಪ್ರತಿಯೊಬ್ಬರೂ ಸಾಯುತ್ತಾರೆ” ಎಂದು ಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ.
ಈ ದೈವೈಚ್ಛೆಯನ್ನು ಉಪಯೋಗಿಸಿಕೊಂಡು, ನೀನು ಯಶಸ್ಸನನ್ನೂ, ಕೀರ್ತಿಯನ್ನೂ ಗಳಿಸು ಎಂದು ಅರ್ಜುನನಿಗೆ ಸೂಚನೆ ಮಾಡಲಾಗಿದೆ.

ತಸ್ಮ್ವಾತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ |
ಮಯೈವೈತೇ ನಿಹತಾಃ ಪೂರ್ವಮೇವ
ನಿಮಿತ್ತಮಾತ್ರಂ ಭವ ಸವ್ಯಸಾಚಿನ್ || || 33 ||
ಅರ್ಥ :- ಆದ್ದರಿಂದ ಸವ್ಯಸಾಚಿಯೇ, ಎದ್ದೇಳು, ಯಶಸ್ಸನ್ನು ಗಳಿಸು, ಶತ್ರುಗಳನ್ನೆಲ್ಲಾ ಗೆದ್ದು ಸಮೃದ್ಧವಾದ ರಾಜ್ಯ ಸುಖವನ್ನು ಅನುಭವಿಸು, ಇವರೆಲ್ಲರೂ ನನ್ನಿಂದ ಈಗಾಗಲೇ ಕೊಲ್ಲಲ್ಪಟ್ಟಿದ್ದಾರೆ. ನೀನು ನೆಪ ಮಾತ್ರನಾಗು.
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ
ಕರ್ಣಂ ತಥಾನ್ಯಾನಪಿ ಯೋಧವೀರಾನ್ |
ಮಯಾ ಹತಾಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುಧ್ಯಸ್ಯ ಜೇತಾಸಿ ರಣೇ ಸಪತ್ನಾನ್ || || 34 ||
ಅರ್ಥ :- ಭೀಷ್ಮ, ದ್ರೋಣ, ಜಯದ್ರಥ, ಕರ್ಣ ಮತ್ತು ಅನೇಕ ವೀರ ಯೋಧರು ಈಗಾಗಲೇ ನನ್ನಿಂದ ಕೊಲ್ಲಲ್ಪಟ್ಟಿದ್ದಾರೆ. ಆದುದರಿಂದ ನೀನು ಅವನ್ನು ಕೊಂದೇ ಕೊಲ್ಲುತ್ತೀಯೆ, ಹೆದರಬೇಡ, ಯುದ್ಧಮಾಡು ಯುದ್ಧದಲ್ಲಿ ನೀನು ಶತ್ರುಗಳನ್ನು ನಿಜವಾಗಿಯೂ ಜಯಿಸುತ್ತೀಯೆ.
ಕಾಲ ಪ್ರಭಾವದಿಂದ ಶತ್ರುಗಳೆಲ್ಲರೂ ನಾಶವಾಗಲಿದ್ದಾರೆ. ಅರ್ಜುನನು ಯುದ್ಧ ಮಾಡದಿದ್ದರೂ ಸಹ ಅವರು ನಾಶವಾಗಿಯೇ ಆಗುತ್ತಾರೆ. ಆದ್ದರಿಂದ ಈ ಕಾಲ ಮಹಿಮೆಯ ಸದವಕಾಶವನ್ನು ಉಪಯೋಗಿಸಿಕೊಂಡು ನೀನು ಯುದ್ಧಮಾಡಿ ಜಯವನ್ನು ಗಳಿಸು. ಶತ್ರುಗಳು ನಿಜವಾಗಿಯೂ ಸಾಯುತ್ತಾರೆ. ಎಂದು ಅರ್ಜುನನಿಗೆ ಕೃಷ್ಣನು ಇನ್ನೂ ಸ್ಪಷ್ಟವಾಗಿ ಹೇಳಿದ್ದಾನೆ.
ನಾವು ಸಾಧಿಸಿದ್ದೇವೆಂದು ವಿಜ್ಞಾನಿಗಳು, ರಾಜಕಾರಣಿಗಳಿ, ಸೈನಿಕ ದಂಡನಾಯಕರು, ಹಾಗೂ ಇತರೆ ಮುಖಂಡರು ಜಂಬ ಕೊಚ್ಚಿಕೊಳ್ಳುವ ಎಲ್ಲಾ ಕಾರ್ಯಗಳಲ್ಲಿಯೂ, ಮನುಷ್ಯನು ಕೇವಲ ಒಂದು ನೆಪ ಮಾತ್ರ. ಪರಮಾತ್ಮನ ಮನಸ್ಸಿನಲ್ಲಿ ಯಾವ ಕೆಲಸವನ್ನು ಮಾಡಬೇಕೆಂದಿರುತ್ತದೆಯೋ, ಅದನ್ನು ಅವನು ಮನುಷ್ಯನನ್ನು ನೆಪಮಾಡಿಕೊಂಡು ಮಾಡುತ್ತಾನೆ. ಆಧುನಿಕ ಮಹತ್ತರ ಸಾಧನೆಗಳಾದ ರೇಡಿಯೋ, ವಿಮಾನ, ಉಗಿಯಂತ್ರ, ಮಾರಕ ಅಸ್ತ್ರಗಳು, ರೇಡಾರ್, ಅಣುಬಾಂಬು ಮೊದಲಾದ ಪ್ರತಿಯೊಂದೂ ಪರಮಾತ್ಮನ ತೊಡೆಯ ಮೇಲೆ ಮಕ್ಕಳಾಟದಂತಿವೆ. ಪಂಚಭೂತಗಳು ಹಾಗೂ ಅವುಗಳಿಂದ ಉತ್ಪನ್ನವಾದ ವಿವಿಧ ವಸ್ತುಗಳಲ್ಲಿ, ನಿರ್ದಿಷ್ಟವಾದ ವಿಶಿಷ್ಟ ಶಕ್ತಿಯನ್ನು ಇಟ್ಟವನು ಪರಮಾತ್ಮನೇ. ಆ ವಸ್ತುಗಳಲ್ಲಿ ಇಂತಹ ಅಪೂರ್ವ ಶಕ್ತಿಗಳಿಲ್ಲದಿದ್ದರೆ ಮನುಷ್ಯನು ಏನನ್ನೂ ಸಾಧಿಸಲು ಆಗುತ್ತಿರಲಿಲ್ಲ. ಮನುಷ್ಯನು ಸಾಧಿಸಿರುವ ಈ ಸಾಧನೆಗಳು ಇಲ್ಲವೇ ಸಂಶೋಧನೆಗಳು, ಪರಮಾತ್ಮನು ಭೌತಿಕ ವಸ್ತುಗಳಲ್ಲಿಟ್ಟಿರುವ ಶಕ್ತಿಯನ್ನು, ಬುದ್ಧಿವಂತಿಕೆಯಿಂದ ಜೋಡಿಸುವುದಷ್ಟೇ ಆಗಿದೆ. ಒಂದು ಪಾತ್ರೆಯಲ್ಲಿ ಬಿಸಿನೀರಿದೆ. ಇನ್ನೊಂದರಲ್ಲಿ ತಣ್ಣೀರಿದೆ. ಇವೆರಡನ್ನೂ ಸೇರಿಸಿ ಸ್ನಾನಕ್ಕೆ ಯೋಗ್ಯವಾದ ಬಿಸಿನೀರನ್ನು ತಾನು ತಯಾರಿಸಿದೆ ಎಂದು ಚಿಕ್ಕ ಮಗು ತನ್ನ ತಾಯಿಗೆ ಹೇಳಿದಂತಿದೆ ಈ ಸಾಧನೆಗಳು.
ಪ್ರತಿಯೊಂದು ಕಾರ್ಯದಲ್ಲಿಯೂ ಪರಮಾತ್ಮನಿಗೆ ಶರಣು ಹೋಗುವುದು ಅವಶ್ಯಕವಿದ್ದಾಗ್ಯೂ, ಮನುಷ್ಯನು ಇಚ್ಛಿತ ಕಾರ್ಯವನ್ನು ಸಾಧಿಸಬೇಕಾದರೆ ಬುದ್ಧಿವಂತಿಕೆ, ಕರ್ಮದಕ್ಷತೆ, ಸತತ ಪ್ರಯತ್ನ ಇವೆಲ್ಲವೂ ಅತ್ಯವಶ್ಯಕ. ಆ ರೀತಿ ಪ್ರಯತ್ನಮಾಡಿ ಯಶಸ್ಸನ್ನು ಗಳಿಸಬೇಕೆಂದು ಅರ್ಜುನನಿಗೆ ಸೂಚಿಸಲಾಗಿದೆ.
ಶತ್ರುಗಳ ಗುಂಪಿನಲ್ಲಿ ದ್ರೋಣ, ಭೀಷ್ಮ ಮೊದಲಾದ ವೀರರು ಅಜೇಯರು ಎಂಬ ಭೀತಿಯು ಅರ್ಜುನನಲ್ಲಿತ್ತು. ದ್ರೋಣಾಚಾರ್ಯರು ಅರ್ಜುನನ ಧನುರ್ವಿದ್ಯಾ ಗುರುಗಳು. ಅರ್ಜುನನು ಅವರ ಪ್ರೀತಿಗೆ ಪಾತ್ರನಾಗಿದ್ದಾಗ್ಯೂ. ಅವರಲ್ಲಿ ಇನ್ನೂ ಕೆಲವು ಅಪೂರ್ವ ಅಸ್ತ್ರ ಶಸ್ತ್ರಗಳಿದ್ದವು. ಭೀಷ್ಮನು ಇಚ್ಛಾಮರಣಿ. ಅವನಾಗಿಯೇ ಇಷ್ಟ ಪಡದ ವಿನಹ ಅವನನ್ನು ಯಾರೂ ಕೊಲ್ಲುವಂತಿರಲಿಲ್ಲ. ಯುದ್ಧದಲ್ಲಿ ಅವನನ್ನು ಜಯಿಸಬಲ್ಲ ಶೂರರು ಆ ಕಾಲದಲ್ಲಿ ಯಾರೂ ಇರಲಿಲ್ಲ. ಜಯದ್ರಥನ ತಂದೆಯು ತಪಸ್ಸು ಮಾಡುತ್ತಿದ್ದು, “ಯಾರು ತನ್ನ ಮಗನ ತಲೆಯನ್ನು ನೆಲಕ್ಕೆ ಕೆಡುವುತ್ತಾರೋ, ಅವರ ತಲೆಯು ಸಹ ಕೂಡಲೇ ನೆಲಕ್ಕೆ ಬೀಳಲಿ” ಎಂದು ತನ್ನ ಮಗನಿಗೆ ವರವನ್ನು ಕೊಟ್ಟಿದ್ದನು. ಕರ್ಣನಿಗೆ ಇಂದ್ರನು ಒಂದು ಮಹಾಸ್ತ್ರವನ್ನು ಕೊಟ್ಟಿದ್ದನು. ಮತ್ತು ಅವನನ್ನು ರಕ್ಷಣೆ ಮಾಡಲು, ಸೂರ್ಯನಿಂದ ಕವಚ, ಕುಂಡಲಗಳು ಕೊಡಲ್ಪಟ್ಟಿದ್ದವು. ಹೀಗೆ ಈ ನಾಲ್ಕು ವೀರರನ್ನು ಜಯಿಸುವುದು ಸಾಧ್ಯವಿಲ್ಲ ಎಂಬ ಹೆದರಿಕೆ ಅರ್ಜುನಲ್ಲಿತ್ತು. ಕೃಷ್ಣನು ಆ ಹೆದರಿಕೆಯನ್ನು ಹೋಗಲಾಡಿಸಿದ್ದಾನೆ.

ಸಂಜಯ ಉವಾಚ
ಏತಚ್ಛ್ರತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನಃ ಕಿರೀಟೀ |
ನಮಸ್ಕøತ್ವಾಭೂಯ ಏವಾಹ ಕೃಷ್ಣಂ –
ಸಗದ್ಗದಂ ಭೀತಭೀತಃ ಪ್ರಣಮ್ಯ || || 35 ||
ಸಂಜಯ ಹೇಳುತ್ತಾನೆ.
ಅರ್ಥ :- ಕೇಶವನ ಈ ಮಾತುಗಳನ್ನು ಕೇಳಿ. ಕಿರೀಟಧಾರಿಯಾದ ಅರ್ಜುನನು ಕೈಗಳನ್ನು ಜೋಡಿಸಿಕೊಂಡು, ನಡುಗುತ್ತಾ, ಶ್ರೀಕೃಷ್ಣನಿಗೆ ಪದೇ ಪದೇ ನಮಸ್ಕರಿಸುತ್ತಾ, ಗದ್ಗದ ಕಂಠದಿಂದ ಕೂಡಿದವನಾಗಿ, ಹೆದರುತ್ತಾ ಹೇಳಿದನು.
ಪಾಂಡವ ಪಕ್ಷಪಾತಿಯಾದ ಸಂಜಯನು ಪುನಃ, ಕೌರವಸೇನೆಯ ಮಹಾವೀರರು ನಾಶವಾಗುತ್ತಿರುವುದನ್ನೂ ಅರ್ಜುನನು ಕಿರೀಟಧಾರಿಯಾಗಿ ಕೃಷ್ಣನನ್ನು ಬೇಡುತ್ತಿರುವುದನ್ನು ಚಿತ್ರಿಸಿ ಹೇಳಿದ್ದಾನೆ. ಕುರುಡನಾದ ಧೃತರಾಷ್ಟ್ರನು ಇನ್ನಾದರೂ ಯುದ್ಧವನ್ನು ನಿಲ್ಲಿಸಲಿ ಎಂಬುದೇ ಅವನ ಆಶಯ.
ಅರ್ಜುನ ಉವಾಚ
ಸ್ಥಾನೇ ಹೃಷಿಕೇಶ ತವ ಪ್ರಕೀತ್ರ್ಯಾ
ಜಗತ್ಪ್ರಹೃಷ್ಯತ್ಯನುರಜ್ಯತೇ ಚ |
ರಕ್ಷಾಂಸಿ ಭೀತಾಣಿ ದಿಶೋ ದ್ರವಂತಿ
ತ್ವಮಕ್ಷರಂ ಸದಸತ್ತತ್ಪರಂ ಯತ್ || ಸರ್ವೇ ನಮಸ್ಯಂತಿಚ ಸಿದ್ಧಸಂಘಾಃ || 36 ||
ಅರ್ಜುನನು ಹೇಳುತ್ತಾನೆ
ಅರ್ಥ :- ಹೃಷಿಕೇಶನೇ, ಇಡೀ ಪ್ರಪಂಚವು ನಿನ್ನನ್ನು ಸ್ತೋತ್ರ ಮಾಡುತ್ತಾ ಸಂತೋಷಪಡುತ್ತಿದೆ. ರಾಕ್ಷಸರೂ ಎಲ್ಲಾ ದಿಕ್ಕುಗಳಲ್ಲಿಯೂ ಓಡಿ ಹೋಗುತ್ತಿದ್ದಾರೆ. ಸಿದ್ಧರ ಗುಂಪುಗಳು ನಿನಗೆ ನಮಸ್ಕಾರ ಮಾಡುತ್ತಿವೆ. ಇವೆಲ್ಲವೂ ಯಥಾಯೋಗ್ಯವೇ ಸರಿ.
ಇಲ್ಲಿಂದ ಮುಂದೆ ಹನ್ನೊಂದು ಶ್ಲೋಕಗಳಲ್ಲಿ ಅರ್ಜುನನು ವಿಶ್ವರೂಪದ ಸ್ತುತಿಯನ್ನು ಮಾಡಿದ್ದಾನೆ. ಪರಮಾತ್ಮನ ವರ್ಣನಾತ್ಮಕ ಸ್ತೋತ್ರಗಳಲ್ಲಿ ಇದು ಒಂದು ಶ್ರೇಷ್ಠ ಕೃತಿ ಎಂದು ಗಣಿಸಲಾಗಿದೆ.

ಕಸ್ಮಾಚ್ಚತೇ ನ ನಮೇರನ್ಮಹಾತ್ಮನ್
ಗರೀಯಸೇ ಬ್ರಹ್ಮಣೋಪಾದಿ |
ಅನಂತ ದೇವೇಶ ಜಗನ್ನಿವಾಸ
ತ್ವಮಕ್ಷರಂ ಸದಸತ್ತರ್ಪರಂ ಯತ್ || || 37 ||
ಅರ್ಥ :- ಮಹಾತ್ಮನೇ, ಅವರು ನಿನಗೆ ನಮಸ್ಕರಿಸದೆ ಇರುವುದಾದರೂ ಹೇಗೆ? ನೀನು ಸೃಷ್ಟಿಕರ್ತನಾದ ಬ್ರಹ್ಮನಿಗಿಂತಲೂ ಹೆಚ್ಚಿನವನು. ಅಂತ್ಯವಿಲ್ಲದವನೇ, ದೇವದೇವನೇ ಇಡೀ ಜಗತ್ತಿಗೆ ಆಶ್ರಯ ಸ್ಥಾನದವನಾದ ನೀನು ನಾಶರಹಿತನು ಸತ್ಯ ಮತ್ತು ಅಸತ್ಯಗಳೆರಡೂ ನೀನೇ- ಅವೆರಡರ ಆಚೆಗಿರುವವನೂ ನೀನೇ.
ಸತ್, ಅಸತ್‍ಗಳಿಗಾಚೆಗಿರುವವನು – ಚಿತ್ರಮಂದಿರದ ಪರದೆಯ ಮೇಲೆ ಸುಖಾಂತ್ಯ ಹಾಗೂ ದುಃಖಾಂತ್ಯ ದೃಶ್ಯಗಳೆರಡನ್ನೂ ನೋಡುತ್ತೇವೆ. ಈ ಎರಡೂ ತರಹದ ಚಿತ್ರಗಳನ್ನು ನಮಗೆ ಚಿತ್ರದ ಹಿಂದಿರುವ ಬೆಳಕು ತೋರಿಸುತ್ತದೆ. ಬೆಳಕು ಸುಖಾಂತ್ಯವೂ ಅಹುದು. ದುಂಖಾಂತ್ಯವೂ ಅಹುದು. ಅವೆರಡರಿಂದ ನಿರ್ಭಾದಿತವಾಗಿ ಅವುಗಳಿಗಾಚೆ ಇರುವುದೂ.
ಅಹುದು. ವಿವಾಹದ ಉಂಗುರವು ಬಂಗಾರದಿಂದ ಮಾಡಲ್ಪಟ್ಟಿದೆ. ಕಂಠಾಭರಣವು ಸಹ ಬಂಗಾರದಿಂದ ಮಾಡಲ್ಪಟ್ಟಿದೆ. ಆದರೆ ಬಂಗಾರವು ಉಂಗುರ ಎಂದು ಅಥವಾ ಕಂಠಾಭರಣ ಎಂದು ಹೇಳಲು ಬರುವುದಿಲ್ಲ. ಅದು ಉಂಗುರವೂ ಅಹುದು. ಕಂಠಾಭರಣವೂ ಅಹುದು, ಅವುಗಳಾಚೆಗಿರುವುದೂ ಅಹುದು. ಅದು ಬೇರೆ ಆಭರಣವೂ ಆಗಬಹುದು. ಪರಮಾತ್ಮನನ್ನು ಸಹ ಇದೇ ರೀತಿಯಾಗಿ ಸತ್, ಮತ್ತು ಅಸತ್‍ಗಳಾಚೆಗಿರುವವನು ಎಂದು ತಿಳಿದುಕೊಳ್ಳಬೇಕು.

ತ್ವಮಾದಿದೇವಃ ಪುರುಷಃ ಪುರಾಣ –
ಸ್ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನಂತರೂಪ || || 38 ||
ಅರ್ಥ :- ಅನಂತರೂಪವೇ, ನೀನು ಆದಿ ದೇವನು, ಪುರಾಣಪುರುಷನು, ಪ್ರಪಂಚಕ್ಕೆ ಆಶ್ರಯಸ್ಥಾನವು ನೀನೇ ಸರಿ. ತಿಳಿದವನೂ ನೀನೇ, ತಿಳಿಯಲ್ಪಡ ಬೇಕಾದವನೂ ನೀನೇ. ಪರಮಶಾಂತಿ ಸ್ಥಾನವೂ ನೀನೇ. ನಿನ್ನಿಂದಲೇ ಈ ಪ್ರಪಂಚದ ಒಳಗೆ ಹೊರಗೆ ವ್ಯಾಪಿಸಲ್ಪಟ್ಟಿದೆ.
ಅರ್ಜುನನು ಕೃಷ್ಣನನ್ನು ಈಗ ಗೋಪಾಲಕನೆಂದಾಗಲೀ, ನೆಂಟನೆಂದಾಗಲೀ, ಮಿತ್ರನೆಂದಾಗಲೀ, ವಾಸುದೇವನೆಂದಾಗಲೀ, ಕಾಣದೆ, ಅವನು ಶುದ್ಧ ಪರಮಾತ್ಮನೆಂದು ಕಂಡು, ಅನುಭವಿಸಿ ಆ ರೀತಿಯಾಗಿ ವರ್ಣಿಸಿದ್ದಾನೆ.

ವಾಯುರ್ಯಮೋ„ಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಸ್ತ್ವಂ ಸಹಸ್ರಕೃತ್ವಃ
ನಮೋ ನಮಸ್ತೇ„ಸ್ತು ಸಹಸ್ರಕೃತ್ವಃ
ಪುನಶ್ಚಭೂಯೋ„ಪಿ ನಮೋ ನಮಸ್ತೇ || || 39 ||
ಅರ್ಥ :- ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ ಬ್ರಹ್ಮ, ಪ್ರಪಿತಾಮಹ, ಇವರೆಲ್ಲರೂ ನೀನೇ ಆಗಿದ್ದೀಯೆ ನಿನಗೆ ಸಾವಿರ ಬಾರಿ ನಮಸ್ಕಾರವು ಪುನಃ ಪುನಃ ನಮಸ್ಕಾರವು.
ವೇದಕಾಲದಲ್ಲಿ ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ, ಈ ದೇವತೆಗಳನ್ನು ಯಜ್ಞ ಯಾಗಾದಿಗಳ ಮೂಲಕ ಆರಾಧಿಸುತ್ತಿದ್ದರು, ಮತ್ತು ಅವರ ಉಪಾಸನೆಯನ್ನೂ ಮಾಡುತ್ತಿದ್ದರು. ವಿದ್ಯಾವಂತರು ಸಹ ಈ ರೀತಿ ಆಚರಿಸುತ್ತಿದ್ದರು. ಶ್ರೀಕೃಷ್ಣಪರಮಾತ್ಮನೇ ಈ ಎಲ್ಲಾ ದೇವತೆಗಳಲ್ಲಿಯೂ, ಹಾಗೂ ಇಡೀ ಪ್ರಪಂಚದಲ್ಲಿಯೂ ಅಖಂಡವಾಗಿ ವ್ಯಾಪಿಸಿರುವ ಪರಾತ್ಪರ ವಸ್ತುವು ಎಂಬ ಅರಿವು ಅರ್ಜುನನಿಗೆ ಈಗ ಉಂಟಾಗಿದೆ. ಆದ್ದರಿಂದ ಎಲ್ಲಾ ದೇವತೆಗಳಿಗೂ ಒಡೆಯನಾದ ದೇವದೇವನಿಗೆ ನಮಸ್ಕಾರ ಮಾಡುತ್ತಿದ್ದಾನೆ.

ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋ„ಸ್ತುತೇ ಸರ್ವತ ಏವ ಸರ್ವ |
ಅನಂತವೀರ್ಯಾಮಿತವಿಕ್ರಮಸ್ತ್ವಂ –
ಸರ್ವಂ ಸಮಾಪ್ನೋಷಿ ತತೋ„ಸಿ ಸರ್ವಃ || || 40 ||
ಅರ್ಥ :- ನಿನ್ನ ಎದುರಿಗೆ ನಮಸ್ಕಾರವೂ, ನಿನ್ನ ಹಿಂದೆ ನಮಸ್ಕಾರವು, ಸರ್ವವೇ, ನಿನಗೆ ಸರ್ವ ದಿಕ್ಕಿನಿಂದಲೂ ನಮಸ್ಕಾರವು, ನಿನ್ನ ಶಕ್ತಿಯು ಅನಂತವಾದುದು. ನಿನ್ನ ಶಕ್ತಿ ಸಾಹಸಗಳನ್ನು ಅಳತೆ ಮಾಡಲಾಗದು. ಎಲ್ಲದರಲ್ಲಿಯೂ ನೀನು ವ್ಯಾಪಿಸಿದ್ದೀಯೆ. ಆದ್ದರಿಂದ ನೀನು ಎಲ್ಲೆಡೆಯಲ್ಲಿಯೂ ಇದ್ದೀಯೆ.
ಪರಮಾತ್ಮನು ಹಿಂದೆ, ಮುಂದೆ, ಕೆಳಗೆ, ಮೇಲೆ, ಎಡಕ್ಕೆ, ಬಲಕ್ಕೆ, ಒಳಗೆ. ಹೊರಗೆ, ಮತ್ತು ಸರ್ವೆಡೆಯಲ್ಲಿಯೂ, ಸರ್ವ ಕಾಲದಲ್ಲಿಯೂ ಪ್ರತಿಯೊಂದು ಭೂತಗಳ ಒಳಗೂ ಹೊರಗೂ ವ್ಯಾಪಿಸಿಕೊಂಡು ಅಖಂಡವಾಗಿದ್ದಾನೆ. ಅವನಿಲ್ಲದಿದ್ದರೆ ಯಾವ ವಸ್ತುಗಳೂ ಇರಲಾರವು. ಪ್ರತಿಯೊಂದು ಶಕ್ತಿಯ, ಧೈರ್ಯದ, ಬುದ್ಧಿವಂತಿಕೆಯ ಕಾರ್ಯಗಳ ಶಕ್ತಿದಾತನೂ ಅವನೇ. ಸಮುದ್ರವು ಎಲ್ಲಾ ಅಲೆಗಳಲ್ಲಿಯೂ ಇರುವಂತೆ, ಪರಮಾತ್ಮನು ಸೃಷ್ಟಿಯಾದ ಎಲ್ಲಾ ವಸ್ತುಗಳಲ್ಲಿಯೂ ಇದ್ದಾನೆ.
ಶ್ರೀಕೃಷ್ಣನು ಪರಮಾತ್ಮನೆಂಬುದನ್ನು ಮನಗಂಡ ಅರ್ಜುನನು, ತಾನು ಅವನಲ್ಲಿ ಇದುವರೆಗೆ ಗೈದಿರಬಹುದಾದ ಅಪಚಾರಕ್ಕಾಗಿ ಕ್ಷಮೆ ಬೇಡುತ್ತಾನೆ.
ಸಖೇತಿ ಮತ್ವಾಪ್ರಸಭಂ ಯದುಕ್ತಂ
ಹೇ ಕೃಷ್ಣ ಹೇ ಯಾದವ ಹೇ ಸಖೇತಿ |
ಅಜಾನತಾ ಮಹಿಮಾನಂ ತವೇದಂ _
ಮಯಾ ಪ್ರಮಾದಾತ್ಪ್ರಣಯೇನ ವಾಪಿ || || 41 ||
ಅರ್ಥ :- ನಿನ್ನ ಈ ಮಹಿಮೆಯನ್ನು ತಿಳಿಯದೆ ಸ್ನೇಹಿತನೆಂಬ ದೃಷ್ಟಿಯಿಂದ ನಿನಗೆ ನಾನು ಹೇ ಕೃಷ್ಣ, ಹೇ ಯಾದವ, ಎಲೈ ಸ್ನೇಹಿತನೇ, ಎಂದು ಪ್ರೇಮದಿಂದಾಗಲೀ, ತಿಳಿಯದೇ ಆಗಲೀ, ಒರಟುತನದಿಂದಾಗಲೀ ಹೇಳಿದ್ದರೆ,

ಯಚ್ಛಾವಹಾಸಾರ್ಥಮಸತ್ಕøತೋ„ಸಿ
ವಿಹಾರಶಯ್ಯಾಸನಭೋಜನೇಷು |
ಏಕೋ„ಥವಪ್ಯಚ್ಯುತ ತತ್ಸವಾಕ್ಷಂ –
ತತ್ಕ್ಷಾಮಯೇತ್ವಾಮಹಮಪ್ರಮೇಯಮ್ || || 42 ||
ಅರ್ಥ :- ಅಪ್ರಮೇಯನೇ, ನಿನಗೆ ಆಟದಲ್ಲಾಗಲೀ, ಮಲಗಿರುವಾಗಲೀ, ಕುಳಿತಿರುವಾಗಲೀ, ಊಟಮಾಡುವಾಗಲೀ, ಅಥವಾ ಒಬ್ಬನೇ ಇದ್ದಾಗಲಾಗಲೀ, ಇಲ್ಲವೇ ಬೇರೆ ಜನರೊಡನೆ ಇರುವಾಗಲಾಗಲೀ, ನಾನು, ಅಚ್ಚುತನೇ, ಯಾವುದೇ ರೀತಿಯಲ್ಲಿ ತಮಾಷೆಯನ್ನು ಮಾಡಿದ್ದರೂ, ಅದನ್ನು ಕ್ಷಮಿಸು.
ತನ್ನ ಜೊತೆಗೆ ಇದುವರೆಗೆ ಒಡನಾಡುತ್ತಿದ್ದ ತನ್ನ ನಿಕಟ ಸ್ನೇಹಿತನಾದ ಕೃಷ್ಣನೇ ಇಡೀ ಜಗತ್ತಿಗೆ ಒಡೆಯನಾದ ಪರಮಾತ್ಮನು ಎಂಬ ಅರಿವುಂಟಾದ ಕೂಡಲೇ, ಅರ್ಜುನನಿಗೆ ಕೃಷ್ಣನಲ್ಲಿ ಅಪಾರವಾದ ಗೌರವವೂ ಪೂಜ್ಯಭಾವವೂ ಉಂಟಾಯಿತು. ಆದ್ದರಿಂದ ಇದುವರೆಗೆ ತಾನು ತಿಳಿಯದೇ ಮಾಡಿದ ಅಪಚಾರವನ್ನು ಕ್ಷಮಿಸಬೇಕೆಂದು ಬೇಡುತ್ತಿದ್ದಾನೆ.
ಪಿತಾಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |
ನ ತ್ವತ್ಸಮೋ„ಸ್ತ್ಯಭೃಧಿಕಃ ಕುತೂ„ನ್ಯೋ –
ಲೋಕತ್ರಯೇ„ಪ್ಯಪ್ರತಿಮಪ್ರಭಾವ || || 43 ||
ಅರ್ಥ:- ಮೂರು ಲೋಕಗಳಲ್ಲಿ ಅಸಮಾನವಾದ ಪ್ರತಿಭೆಯುಳ್ಳವನೇ. ಈ ಚರಾಚರ ಪ್ರಪಂಚಗಳಿಗೆಲ್ಲಕ್ಕೂ ನೀನೇ ತಂದೆಯು. ನೀನು ಪೂಜ್ಯನಾದವನು. ಪ್ರಪಂಚಕ್ಕೆ ಪರಮ ಗುರುವು. ನಿನಗೆ ಸಮಾನರಾದವರು ಮೂರು ಲೋಕಗಳಲ್ಲಿಯೂ ಯಾರೂ ಇಲ್ಲ. ಇನ್ನು ಹೆಚ್ಚಿನವರು ತಾನೇ ಎಲ್ಲಿದ್ದಾರೆ.

ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಯಂ
ಪ್ರಸಾದಯೇ ತ್ವಾಮಹಮೀಶ ಮೀಡ್ಯಮ್ ||
ಪಿತೇವ ಪುತ್ರಸ್ಯ ಸಖೇವ ಸಖ್ಯಃ
ಪ್ರಿಯಃ ಪ್ರಿಯಾಯಾರ್ಷಃ ದೇವ ಸೋಢಮ್ || || 44 ||
ಅರ್ಥ :- ಆದ್ದರಿಂದ ದೇವದೇವನೇ, ನಾನು ನಿನಗೆ ಅಡ್ಡಬಿದ್ದು ನಮಸ್ಕಾರ ಮಾಡಿ, ನನ್ನನ್ನು ಕರುಣಿಸು ಎಂದು ಬೇಡುತ್ತಿದ್ದೇನೆ. ತಂದೆಯು ಮಗನನ್ನು ಕ್ಷಮಿಸುವಂತೆ, ಸ್ನೇಹಿತನು ತನ್ನ ಪ್ರಿಯಮಿತ್ರನನ್ನು ಮನ್ನಿಸುವಂತೆ. ಪ್ರೇಮಿಯು ತನ್ನ ಪ್ರಿಯೆಯನ್ನು ಕ್ಷಮಿಸುವಂತೆ ನೀನು ನನ್ನನ್ನು ಕ್ಷಮಿಸು.
ಶರಣಾಗತನಾಗಿ ಸಾಷ್ಟಾಂಗ ನಮಸ್ಕಾರ ಮಾಡುವುದೆಂದರೆ ಅದು ಕೇವಲ ಶಾರೀರಿಕ ಕ್ರಿಯೆಯಷ್ಟೇ ಅಲ್ಲ. ಆಂತರಿಕವಾಗಿ, ಮಾನಸಿಕವಾಗಿ ಸಹ ಇಂತಹ ಬದಲಾವಣೆಯಾಗಬೇಕು. “ನಾನೇ ಶರೀರವು; ನಾನೇ ಸರ್ವಶಕ್ತನು, ಎಲ್ಲಾ ಕಾರ್ಯಗಳನ್ನೂ ಸಾಧಿಸುವವನು ನಾನ” ಎಂಬ ಅಹಂಕಾರವನ್ನು ತ್ಯಜಿಸಿ ಪ್ರತಿಯೊಂದು ಕಾರ್ಯವೂ ಪರಮಾತ್ಮನ ಇಚ್ಛೆಯಂತೆ ನಡೆಯುತ್ತದೆ. ‘ನಾನು’ ಕೇವಲ ನೆಪ ಮಾತ್ರ ಎಂಬ ಸತ್ಯಾಂಶವನ್ನು ತಿಳಿದು, ತನಗೆ ಸರಿಯಾದ ಮಾರ್ಗವನ್ನು ತೋರಿಸಬೇಕೆಂದು ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ಬೇಡಿ, ಆತಂಕವಾಗಿ ಸಹ ನಮಸ್ಕಾರ ಮಾಡಬೇಕು. ಇದರಿಂದ ಅಹಂಕಾರವು ಅಳಿದು, ಮನಸ್ಸು ಶುದ್ಧವಾಗಿ ನಮಸ್ಕಾರದ ಮೂಲಕ ಅರ್ಪಿಸುವಂತೆ, ಅಹಂಕಾರಯುಕ್ತವಾದ ವಾಸನೆಗಳನ್ನೂ ಸಹ ಪರಮಾತ್ಮನಿಗೆ ಅರ್ಪಿಸಬೇಕು. ಇದಕ್ಕೆ ಶರಣಾಗತಿಯ ಹಾಗೂ ಸಾಷ್ಟಾಂಗ ನಮಸ್ಕಾರದ ಅಂತರಾರ್ಥವು
ಪರಮಾತ್ಮನು ತನ್ನ ಮೊದಲಿನ ರೂಪವನ್ನು ತೋರಿಸಬೇಕೆಂದು ಅರ್ಜುನನು ಬೇಡುತ್ತಾನೆ.

ಅದೃಷ್ಟಪೂರ್ವಂ ಹೃಷಿತೋಸ್ಮಿದೃಷ್ಟ್ವಾ
ಭಯೇನ ಚ ಪ್ರವ್ಯಥಿತಃ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ || || 45 ||
ಅರ್ಥ :- ದೇವನೇ, ಈ ಹಿಂದೆ ಯಾರೂ ನೋಡದೆ ಇರುವಂತಹ ಈ ರೂಪವನ್ನು ನೋಡಿ. ಸಂತೋಷಗೊಂಡಿದ್ದೇನೆ. ಆದರೆ ಭಯವೂ ಸಹ ಆಗಿರುವುದರಿಂದ ನನಗೆ ದುಃಖವಾಗುತ್ತಿದೆ. ಆದ್ದರಿಂದ ದೇವೇಶನೇ, ಜಗತ್ತಿಗೆ ವಾಸಸ್ಥಾನನಾದವನೇ, ನನ್ನ ಮೇಲೆ ಕೃಪೆ ಮಾಡಿ, ನನಗೆ ನಿನ್ನ ಮೊದಲಿನ ರೂಪವನ್ನೇ ತೋರಿಸು.
ಸಾಧಕನು ಆತ್ಮಜ್ಞಾನವನ್ನು ಹೊಂದಿದಾಗ ಅವನ ಮನಸ್ಸು ಸಂತುಷ್ಟವಾಗುತ್ತದೆ. ಆದರೆ ಅಕಸ್ಮಾತ್ತಾಗಿ ಉಂಟಾಗುವ ಹೆದರಿಕೆಯು ಅವನನ್ನು ಪುನಃ ಹಿಂದಕ್ಕೆ ಅಂದರೆ ಶಾರೀರಿಕ ಮಟ್ಟಕ್ಕೆ ತಂದರೆ, ಆಗ ಅದರಿಂದ ಮಾನಸಿಕ ಉದ್ರೇಕವುಂಟಾಗುತ್ತದೆ. ಅರ್ಜುನನಿಗೂ ಹೀಗೇ ಆಯಿತು ವಿಶ್ವರೂಪವನ್ನು ನೋಡಿ ಸಂತೋಷಗೊಂಡ ಅವನು ಆ ಆನಂದದಲ್ಲಿಯೇ ಇದ್ದುಕೊಂಡು, ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ತನಗೆ ಚಿರಪರಿಚಿತವಾದ ರೂಪನ್ನು ನೋಡಿ, ಅದರಲ್ಲಿ ಆನಂದವನ್ನು ಕಾಣಬಹುದೆಂದು ಬಯಸಿ, ಮೊದಲಿನ ರೂಪವನ್ನು ತೋರಿಸಬೇಕೆಂದು ಬೇಡಿದ್ದಾನೆ.

ಕಿರೀಟನಂ ನದಿನಂ ಚಕ್ರಹಸ್ತ-ಗದಿನಂ
ಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ |
ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ || || 46 ||
ಅರ್ಥ :- ಸಾವಿರ ಬಾಹುಗಳುಳ್ಳ ವಿಶ್ವಮೂರ್ತಿಯೇ, ಕಿರೀಟವನ್ನು ಧರಿಸಿ, ಕೈಯಲ್ಲಿ ಚಕ್ರವನ್ನೂ, ಗದೆಯನ್ನೂ ಹಿಡಿದುಕೊಂಡಿರುವ, ಮತ್ತು ನಾಲ್ಕು ಭುಜಗಳಿರುವ (ಕೈಗಳಿರುವ) ನಿನ್ನ ಮೊದಲಿನ ರೂಪವನ್ನೇ ನೋಡಲು ಇಚ್ಛಿಸುತ್ತೇನೆ.
ಅರ್ಜುನನು ವಿಶ್ವರೂಪವನ್ನು ಹೆಚ್ಚು ಕಾಲ ನೋಡಲಾರದೆ, ತನ್ನ ಇಷ್ಟ ದೇವತೆಯಾದ, ಪುರಾಣದಲ್ಲಿ ವರ್ಣಿಸಲ್ಪಟ್ಟ ವಿಷ್ಣುವಿನ ಸೌಮ್ಯ ರೂಪವನ್ನು ತೋರಿಸಬೇಕೆಂದು ಬೇಡಿಕೊಂಡಿದ್ದಾನೆ. ಮೇಲಿನ ವರ್ಣನೆಯು ವಿಷ್ಣುವಿನ ವರ್ಣನೆಯಾಗಿದೆ.

ಶ್ರೀ ಭಗವಾನುವಾಚ
ಮಯಾ ಪ್ರಸನ್ನೇನ ತವಾರ್ಜುನೇದಂ |
ರೂಪಂ ಪರಂ ದರ್ಶಿತಮಾತ್ಮಯೋಗಾತ್ |
ತೇಜೋಮಯಂ ವಿಶ್ವಮನಂತಮಾದ್ಯಂ
ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ || || 47 ||
ಶ್ರೀ ಭಗವಂತನು ಹೇಳುತ್ತಾನೆ.
ಅರ್ಥ :- ನಾನು ನಿನ್ನ ಮೇಲೆ ತೋರಿಸಿದ ಅನುಗ್ರಹದಿಂದಾಗಿ ನನ್ನ ಯೋಗ ಸಾಮಥ್ರ್ಯದಿಂದ
ನಿನಗೆ ಈ ಶ್ರೇಷ್ಠವಾದ ರೂಪು ತೋರಿಸಲ್ಪಟ್ಟಿತು. ತೇಜೋಮಯವೂ ಅನಂತವೂ, ಪ್ರಾಚೀನವೂ ಆದ ಈ ವಿಶ್ವ ರೂಪವು ಇದುವರೆಗೆ ನಿನ್ನ ಹೊರತಾಗಿ ಬೇರೆ ಯಾರಿಂದಲೂ ನೋಡಲ್ಪಡಲಿಲ್ಲ.
ಈ ರೂಪುವು ಇದುವರೆಗೆ ಯಾರಿಂದಲೂ ನೋಡಲ್ಪಡಲಿಲ್ಲ ಎಂದರೆ, ಯುದ್ಧ ಭೂಮಿಯಲ್ಲಿ ಮನೋಭಗ್ನತೆಯಿಂದ ವಿವೇಕವನ್ನು ಕಳೆದುಕೊಂಡ, ಅರ್ಜುನನ ಸ್ಥಿತಿಯಲ್ಲಿರುವ ಬೇರೆ ಯಾರಿಂದಲೂ ನೋಡಲ್ಪಡಲಿಲ್ಲ ಎಂದು ತಿಳಿಯಬೇಕು. ಮೇಲಾಗಿ ಈ ರೂಪವನ್ನು ನೋಡುವ ದಿವ್ಯದೃಷ್ಟಿಯನ್ನು ಕೃಷ್ಣನು ಅರ್ಜುನನಿಗೆ ದಯಪಾಲಿಸಿದ್ದನು.

ನ ವೇದಯಜ್ವಾದ್ಯ ಯನೈರ್ಪ ದಾನೈ- ನವೇದಯಜ್ಞಾಧ್ಯಯನೈರ್ನ ದಾನೈಃ

ರ್ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ |
ಏವಂರೂಪಃ ಶಕ್ಯ ಅಹಂ ನೃಲೋಕೇ
ದ್ರಷ್ಟುಂ ತ್ವದನ್ಯೇನ ಕುರುಪ್ರವೀರ || || 48 ||
ಅರ್ಥ:- ಕುರುವೀರನೇ, ವೇದಾಭ್ಯಾಸದಿಂದಾಗಲೀ, ಯಜ್ಞಗಳಿಂದಾಗಲೀ, ದಾನಗಳಿಂದಾಗಲೀ, ವ್ರತ ಉಪವಾಸಾದಿ ಕ್ರಿಯೆಗಳಿಂದಾಗಲೀ, ಉಗ್ರವಾದ ತಪಸ್ಸಿನಿಂದಾಗಲೀ, ಭೂಲೋಕದಲ್ಲಿ ನಿನ್ನ ಹೊರತಾಗಿ ಬೇರೆ ಯಾರೂ ನನ್ನ ಈ ರೂಪನ್ನು ನೋಡಲಾರರು.
ವೇದಾಧ್ಯಯನ, ಯಜ್ಞ ಯಾಗಾದಿಗಳಿಂದ ಈ ರೂಪಿನ ದರ್ಶನವು ಸಾಧ್ಯವಿಲ್ಲವೆಂದು ಇಲ್ಲಿ ಹೇಳಲಾಗಿದೆ. ಯಜ್ಞಯೋಗಾದಿಗಳು. ವ್ರತಗಳು ತಪಸ್ಸು ಇತ್ಯಾದಿಗಳು ಆತ್ಮದರ್ಶನಕ್ಕೆ ಸಹಾಯ ಮಾಡತಕ್ಕ ಮಾರ್ಗಗಳೇ ಹೊರತು ಅವೇ ಗುರಿಯಲ್ಲ. ಹಸಿವಾಗಿರುವಾಗ ಅಡಿಗೆಯನ್ನು ಮಾಡುವುದು ಹಸಿವನ್ನು ಹಿಂಗಿಸುವ ಸಾಧನ. ಅಷ್ಟರಿಂದಲೇ ಹಸಿವು ಹಿಂಗುವುದಿಲ್ಲ. ಮಾಡಿದ ಅಡಿಗೆಯನ್ನು ತಿನ್ನುವುದರಿಂದ ಮಾತ್ರ ಹಸಿವು ಹಿಂಗುತ್ತದೆ. ವೇದಾದ್ಯಯನ, ಯಜ್ಞ ತಪಸ್ಸು ಮೊದಲಾದವುಗಳಿಂದ ಮನಸ್ಸು ಏಕಾಗ್ರವಾಗುತ್ತದೆ. ಈ ಏಕಾಗ್ರ ಮನಸ್ಸಿನಿಂದ ಮುಂದೆ ಧ್ಯಾನಮಾಡಿ ಯೋಗವನ್ನು ಸಾಧಿಸಬೇಕು.

ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾರೂಪಂ ಘೋರಮೀದೃಙ್ಮಮೇದಮ್ |
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ –
ತದೇವ ಮೇ ರೂಪಮಿದಂ ಪ್ರಪಶ್ಶ || || 49 ||
ಅರ್ಥ :- ನನ್ನ ಈ ಘೋರ ರೂಪವನ್ನು ನೋಡಿ ದಿಙ್ಮೂಢನಾಗಿ ಹೆದರಬೇಡ. ಹೆದರಿಕೆಯನ್ನು ಬಿಟ್ಟು, ಸಂತೋಷಗೊಂಡವನಾಗಿ ನನ್ನ ಮೊದಲಿನ ರೂಪವನ್ನೇ ನೋಡು.
ಶರೀರಧಾರಿಯಾದ ಶ್ರೀಕೃಷ್ಣನೇ ಪರಾತ್ಪರನಾದ ಪರಮಾತ್ಮನು ಅವನು ಅರ್ಜುನನಲ್ಲಿ ಈ ಭಾವವನ್ನು ಸ್ಥಿರಗೊಳಿಸಲು, ಅರ್ಜುನನಿಗೆ ತನ್ನ ಕೃಷ್ಣನ ರೂಪವನ್ನೇ ಪುನಃ ತೋರಿಸಿದನು.

ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ |
ಆಶ್ಚಾಸಯಾಮಾಸ ಚ ಭೀತಮೇನಂ –
ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ || || 50 ||
ಸಂಜಯನು ಹೇಳುತ್ತಾನೆ
ಅರ್ಥ :- ಅರ್ಜುನನಿಗೆ ಈ ರೀತಿಯಾಗಿ ಹೇಳಿ, ವಾಸುದೇವನು ಪುನಃ ತನ್ನ ಮೊದಲಿನ ರೂಪವನ್ನು ತೋರಿಸಿದನು. ಆ ಮಹಾತ್ಮನು ತನ್ನ ಮೊದಲಿನ ಸೌಮ್ಯ ರೂಪವನ್ನು ತಾಳಿ ಭೀತಿಗೊಂಡ ಅರ್ಜುನನನ್ನು ಸಮಾಧಾನಗೊಳಸಿದನು.

ಅರ್ಜುನ ಉವಾಚ
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ |
ಇದಾನೀಮಸ್ಥಿ ಸಂವೃತ್ತಃ ಸುಚೇತಾಃ ಪ್ರಕೃತಿಂ ಗತಃ || || 51 ||
ಅರ್ಜುನ ಹೇಳುತ್ತಾನೆ.
ಅರ್ಥ :- ಜರ್ನಾದನನೇ ನಿನ್ನ ಈ ಸೌಮ್ಯವಾದ ಮಾನುಷರೂಪವನ್ನು ನೋಡಿ, ನಾನು ಶಾಂತನಾಗಿದ್ದೇನೆ. ಮತ್ತು ನನ್ನ ಮನಸ್ಸು ಮೊದಲಿನಂತೆ ಸಮಾಧಾನ ಸ್ಥಿತಿಗೆ ಬಂದಿದೆ.
ಪರಮಾತ್ಮನ ಜ್ಞಾನವನ್ನು ಪಡೆಯಲು, ಸಾಧನೆಯಿಂದ ಅರ್ಹತೆಯನ್ನು ಪಡೆಯದೇ ಇರುವ ಅರ್ಜುನನಂತಹ ಸಾಧಕರು ಸಹ ಜ್ಞಾನೋದಯವಾದ ಕೂಡಲೇ, ಸಂತೋಷಗೊಂಡವರಾಗಿದ್ದಾಗ್ಯೂ, ಮಾನಸಿಕ ಉದ್ರೇಕದಿಂದ ಭಯಗೊಂಡವರೂ ಆಗುತ್ತಾರೆ. ಏಕೆಂದರೆ ಅವರು ಶಾರೀರಿಕ ಮಟ್ಟದಲ್ಲಿ ಇನ್ನೂ ಅಲ್ಪ ಸ್ವಲ್ಪ ವಿಹರಿಸುತ್ತಲೇ ಇರುತ್ತಾರೆ. ಅಂತಹ ಸ್ಥಿತಿಯಲ್ಲಿ, ಸೌಮ್ಯವಾದ ಇಷ್ಟ ಮೂರ್ತಿಯ ದರ್ಶನದಿಂದ ಮಾನಸಿಕ ಉದ್ವಿಗ್ನತೆಯು ಅಳಿದು ಮನಃಶಾಂತಿಯುಂಟಾಗುತ್ತದೆ.

ಶ್ರೀ ಭಗವಾನುವಾಚ
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ |
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಾಕಾಂಕ್ಷಿಣಃ || || 52 ||

ಭಗವಂತನು ಹೇಳುತ್ತಾನೆ
ಅರ್ಥ :- ನೀನು ಈಗ ನೋಡಿದ ನನ್ನ ರೂಪ ನೋಡಲು ಸಿಗುವುದು ದುರ್ಲಭ. ದೇವತೆಗಳು ಸಹ ಈ ರೂಪವನ್ನು ನೋಡಬೇಕೆಂದು ಯಾವಾಗಲೂ ಅಪೇಕ್ಷಿಸುತ್ತಿರುತ್ತಾರೆ.

ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ |
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ || || 53 ||
ಅರ್ಥ :- ನೀನು ಈಗ ನೋಡಿದ ರೂಪವನ್ನು ವೇದಾಧ್ಯಯನ, ತಪಸ್ಸು, ದಾನ, ಯಜ್ಞಯಾಗಾದಿಗಳು ಇವಾವುಗಳಿಗಿಂತಲೂ ನೋಡಲು ಸಾಧ್ಯವಿಲ್ಲ.
ಮನುಷ್ಯರಿಗಿಂತ ಬುದ್ಧಿಶಕ್ತಿಯಲ್ಲಿ ಮೇಲ್ಮಟ್ಟದಲ್ಲಿರುವ ದೇವತೆಗಳು ಸಹ ಪರಮಾತ್ಮನ ಈ ರೂಪವನ್ನು ನೋಡಬೇಕೆಂದು ನಾನಾವಿಧವಾಗಿ ಪ್ರಯತ್ನ ಮಾಡುತ್ತಾರೆ. ಆದರೆ ಅವರಾರಿಗೂ ಅದು ಸಾಧ್ಯವಾಗಲಿಲ್ಲ.
ಪರಮಾತ್ಮನ ಕೃಪೆಯಿಂದಾಗಿ ಅರ್ಜುನನಿಗೆ ಇಂತಹ ಅಪೂರ್ವವಾದ ರೂಪವನ್ನು ನೋಡಲು ಸಾಧ್ಯವಾಯಿತು.
ಪರಮಾತ್ಮನ ಈ ತರಹದ ವಿಶೇಷ ಅನುಗ್ರಹವನ್ನು ಯಾರ ಮೇಲೆ ಮಾಡುತ್ತಾನೆ ಎಂಬುದನ್ನು ಅವನೇ ಹೇಳುತ್ತಾನೆ.

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋ„ರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || || 54 ||
ಅರ್ಥ :- ಪರಂತಪನೇ, ಕೇವಲ ಅನನ್ಯವಾದ ಭಕ್ತಿಯಿಂದ ಮಾತ್ರ ನನ್ನನ್ನು ಈ ರೀತಿಯಾಗಿ ನೋಡುವುದು, ತತ್ವಶಃ ತಿಳಿಯುವುದು, ಮತ್ತು ಅನುಭವಿಸುವುದು ಸಾಧ್ಯವಿದೆ.
ಅಹಂಕಾರದಿಂದ ಬಿಡುಗಡೆಯನ್ನು ಹೊಂದುವುದಕ್ಕೆ ಭಕ್ತಿಯು ಬಲವಾದ ಸಾಧನ. ನಂತರ ಪರಮಾತ್ಮನಲ್ಲಿ ಏಕೀಭಾವವನ್ನು ಹೊಂದುವುದಕ್ಕೂ ಭಕ್ತಿಯು ಬಲವಾದ ಸಾಧನವಾಗಿದೆ. ಆದರೆ ಈ ಭಕ್ತಿಯು ಅನನ್ಯವಾಗಿರಬೇಕು. ಏಕಾಗ್ರ ವಾಗಿರಬೇಕು. ಹೊಯ್ದಾಡುತ್ತಿರಬಾರದು. ವ್ಯಕ್ತಿಯು ತಾನು ಶರೀರ, ಮನಸ್ಸು, ಬುದ್ಧಿಗಳೆಂಬುದನ್ನು ಮರೆತು, ತನ್ನ ಇಷ್ಟ ದೇವತೆಯೊಡನೆ ತಾದಾತ್ಮ್ಯವನ್ನು ಹೊಂದಬೇಕು ಇಷ್ಟಮೂರ್ತಿಯ ಧ್ಯಾನದಲ್ಲಿ ಮಗ್ನನಾಗಿ, ತನ್ನ ಶರೀರ, ಮನಸ್ಸು, ಬುದ್ಧಿಗಳನ್ನು ಮರೆಯಬೇಕು. ಇದಕ್ಕೆ ಅನನ್ಯ ಭಕ್ತಿ ಎಂದು ಹೆಸರು.
ಆತ್ಮಜ್ಞಾನದ ಮೂರು ಹಂತಗಳನ್ನು ಇಲ್ಲಿ ವರ್ಣಿಸಲಾಗಿದೆ. ಜ್ಞಾತುಮ್‍ದೃಷ್ಟುಮ್ ಪ್ರವೇಷ್ಟುಮ್ –
(1) ಜ್ಞಾತುಮ್-ತಿಳಿದುಕೊಳ್ಳುವುದು. ಪರಮಾತ್ಮನ ವಿಚಾರವನ್ನು ಗುರುಗಳ ಉಪದೇಶದಿಂದ ಇಲ್ಲವೇ ಶಾಸ್ತ್ರಾಧ್ಯಯನದಿಂದ ತರ್ಕಬದ್ಧವಾಗಿ ತಿಳಿದುಕೊಳ್ಳುವುದು.
(2) ದೃಷ್ಟುಮ್ – ನಂತರ ಹೀಗೆ ತಿಳಿದ ಜ್ಞಾನವನ್ನು ನಿತ್ಯದ ಆಚರಣೆಯಲ್ಲಿ ತಂದು, ತದನುಕೂಲವಾದ ರೀತಿಯಲ್ಲಿ ತನ್ನ ಜೀವನವನ್ನು ನಡತೆಯನ್ನು ಮಾರ್ಪಡಿಸಿಕೊಂಡು ಸಾಧನೆಯನ್ನು ಮಾಡುವುದು, ಸಾಧನೆಯು ಬಲಿತ ಹಾಗೆ ಅಹಂಕಾರವು ಕಡಿಮೆಯಾದ ಹಾಗೆ ತಾನು ಶರೀರ ಮನಸ್ಸು ಬುದ್ಧಿಗಳಲ್ಲ ಎಂಬ ಅರಿವು ಸ್ಥಿರವಾದ ಹಾಗೆ, ಮತ್ತು ಹಿಂದೆ ತಿಳಿಸಿದಂತೆ ಯೋಗವು ಸಾಧಿಸಲ್ಪಟ್ಟ ಹಾಗೆ ಮನಸ್ಸಿನ ಹೊಯ್ದಾಟವು ಕಡಿಮೆಯಾಗಿ, ಮನಸ್ಸು ಇಷ್ಟ ಮೂರ್ತಿಯ ಧ್ಯಾನದಲ್ಲಿ ಏಕಾಗ್ರವಾಗಿ ನಿಲ್ಲುತ್ತದೆ. ಈ ಸ್ಥಿತಿಯು ಸಾಧಿಸಿದ ನಂತರ ಸಾಧನೆಯನ್ನು ಇನ್ನೂ ಬಲಗೊಳಿಸಬೇಕು.
(3) ಪ್ರವೇಷ್ಟುಮ್ ನಂತರದ ಮೆಟ್ಟಿಲು ‘ಪ್ರವೇಷ್ಟುಮ್’- ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಏಕಾಗ್ರವಾದರೆ ಈಗ ಅದೇ ಆನಂದದಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ನಂತರ ಪ್ರಪಂಚದ ವಿವಿಧ ವಸ್ತುಗಳಲ್ಲಿಯೂ, ವಿವಿಧ ಕರ್ಮಗಳಲ್ಲಿಯೂ, ವಿವಿಧ ಆಗು ಹೋಗುಗಳಲ್ಲಿಯೂ, ಅಂತೂ ಪ್ರತಿಯೊಂದರಲ್ಲಿಯೂ, ಪರಮಾತ್ಮನನ್ನು ಕಾಣುತ್ತಾ ಕೇವಲ ಲೋಕ ಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡುತ್ತಿರುವುದು.

ಮತ್ಕರ್ರ್ಮಕೃನೃತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ || || 55 ||
ಅರ್ಥ :- ಪಾಂಡವನೇ, ನನಗೋಸ್ಕರವಾಗಿ ಕರ್ಮ ಮಾಡು, ನಾನೇ ಪರಾತ್ಪರ ವಸ್ತು ಎಂದು ತಿಳಿ. ನನ್ನಲ್ಲಿ ಭಕ್ತಿಯನ್ನು ಮಾಡು, ರಾಗದ್ವೇಷಾದಿ ಬಂಧನಗಳಿಂದ ಬಿಡುಗಡೆಯನ್ನು ಹೊಂದಿರು. ಯಾರ ಮೇಲೂ, ಯಾವುದರ ಮೇಲೂ, ಯಾವ ಪ್ರಾಣಿಗಳ ಮೇಲೂ ದ್ವೇಷಮಾಡಬೇಡ. ಹೀಗೆ ನನ್ನಲ್ಲಿ ಮರೆಹೊಕ್ಕವನು ನನ್ನನ್ನೇ ಸೇರುತ್ತಾನೆ.
ಅನನ್ಯ ಭಕ್ತಿಯಿಂದ ಪರಮಾತ್ಮನನ್ನು ಸೇರಬಹುದೆಂದು ಹೇಳಿ, ಅದನ್ನು ಆಚರಣೆಯಲ್ಲಿ ಪ್ರತ್ಯಕ್ಷವಾಗಿ ಸಾಧಿಸುವ ವಿವರಗಳನ್ನು ಈ ಶ್ಲೋಕದಲ್ಲಿ ತಿಳಿಸಲಾಗಿದೆ. ಇಲ್ಲಿ ಐದು ಸಾಧನಾ ಮಾರ್ಗಗಳನ್ನು ಬೋಧಿಸಲಾಗಿದೆ. (1) ಎಲ್ಲಾ ಕರ್ಮಗಳನ್ನು ನನಗೇ ಅರ್ಪಿಸು. (2) ನಿನ್ನ ಪರಮ ಧ್ಯೇಯವು ನಾನಾಗಿರಲಿ. (3) ನನ್ನನ್ನು ಭಕ್ತಿಯಿಂದ ಅರ್ಚಿಸು, (4) ಯಾವ ರೀತಿಯ ಇಂದ್ರಿಯ ಅಥವಾ ಮಾನಸಿಕ ಬಂಧನಗಳಿಗೂ ಒಳಗಾಗಬೇಡ (ನಿರ್ಲಿಪ್ತನಾಗಿರು) (5) ಯಾರ ಮೇಲೂ ದ್ವೇಷ ಮಾಡಬೇಡ. ಇದರಲ್ಲಿ ಸಾಧನೆಯ ಸಂಪೂರ್ಣ ವಿವರಣೆ ಅಡಗಿದೆ. ಆತ್ಮನಿಗ್ರಹದ, ಇಂದ್ರಿಯ ನಿಗ್ರಹದ ದಾರಿಯಿದೆ. ಶಾರೀರಿಕ ಹಾಗೂ ಮಾನಸಿಕ ನಿರ್ಲಿಪ್ತತೆಯನ್ನು ಸಾಧಿಸಬೇಕಾದರೆ, ಆತ್ಮಧ್ಯಾನವು ಅವಶ್ಯಕ. ಎಲ್ಲರಲ್ಲಿಯೂ ಪರಮಾತ್ಮನನ್ನು ಕಾಣಬೇಕು. ಅವನು ಬೇರೆ ಎಂಬ ಭಾವವು ಬಂದರೆ ಮಾತ್ರ ಅಲ್ಲಿ ದ್ವೇಷ ಅಥವಾ ಶತ್ರು ಭಾವವುಂಟಾಗಬಹುದು. ನಮ್ಮ ಶರೀರದ ಎಡಗೈಯು ಬಲಗೈಯನ್ನು ದ್ವೇಷಿಸಲಾರದು. ಹಲ್ಲು ನಾಲಿಗೆಯನ್ನು ಕಚ್ಚಿದಾಗ್ಯೂ ನಾಲಿಗೆಯು ಹಲ್ಲನ್ನು ದ್ವೇಷಿಸಲಾರದು. ಏಕೆಂದರೆ ಅವೆಲ್ಲವೂ ಒಂದೇ ಶರೀರದ ಅವಯವಗಳು. ಇದರಂತೆ ಯಾರಲ್ಲಿಯೂ ಬೇರೆಯವನು ಎಂಬ ಭಾವವನ್ನಿಟ್ಟುಕೊಳ್ಳದೆ, ಅವರೆಲ್ಲರಲ್ಲಿಯೂ, ಪರಮಾತ್ಮನನ್ನು ಕಾಣಲು ಪ್ರಯತ್ನಿಸಿದರೆ ಯಾರಲ್ಲಿಯೂ ದ್ವೇಷಭಾವವುಂಟಾಗುವುದಿಲ್ಲ. `
ಓಂ ತತ್ವದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ವಿಶ್ವರೂಪದರ್ಶನಯೋಗೋನಾಮ…
ಏಕಾದಶೋ„ಧ್ಯಾಯಃ
*******