S O U L B L I S S

Loading

Bhagavad Gita – Vinayak Rao Bapat – Chapter 16

ಹದಿನಾರನೆಯ ಅಧ್ಯಾಯ
ದೈವಾಸುರಸಂಪದ್ವಿಭಾಗ ಯೋಗ

ಪೀಠಿಕೆ
ಪ್ರತಿಯೊಬ್ಬ ಧರ್ಮಪ್ರಚಾರಕರೂ ನೀತಿ ಹಾಗೂ ಅನೀತಿ ವ್ಯವಹಾರಗಳ, ಹಾಗೂ ನಡತೆಗಳ ವಿವರವಾದ ವರ್ಣನೆಯನ್ನು ಮಾಡಿದ್ದಾರೆ. ಈ ವಿಷಯದಲ್ಲಿ ಪ್ರಾಯಶಃ ಪ್ರತಿಯೊಬ್ಬರೂ ಒಮ್ಮತದಿಂದಿದ್ದಾರೆ. ನೀತಿಯ ನಿಯಮಗಳನ್ನು ಆಯಾಯ ದೇಶ, ಕಾಲ, ವಾತಾವರಣ, ಹಾಗೂ ಸಂದರ್ಭಗಳಿಗನುಸಾರವಾಗಿ ವಿಧಿಸಲಾಗಿದೆ. ಆದಾಗ್ಯೂ ಸಾವಿರಾರು ವರ್ಷಗಳ ಹಿಂದೆ ನಿರ್ಣಯಿಸಲ್ಪಟ್ಟ ಸದ್ಗುಣಗಳು ಇಂದಿಗೂ ಸದ್ಗುಣಗಳೆಂದು ಕರೆಯಲ್ಪಡುತ್ತವೆ. ಅವುಗಳನ್ನು ಮೈಗೂಡಿಸಿಕೊಂಡವರನ್ನು ಸತ್ಪುರುಷರೆಂದು ಕರೆಯುತ್ತೇವೆ. ಇಡೀ ಮನುಜ ಸಮಾಜವನ್ನು ದೈವೀಗುಣವುಳ್ಳವರು (ಸದ್ಗುಣ) ಮತ್ತು ಆ ಅಸುರೀ ಸುರಿ ೀಗುಣವುಳ್ಳವರು. (ದುರ್ಗಣ) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಸುರೀಗುಣವುಳ್ಳವರು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬನೇ ಪರಮಾತ್ಮನಿದ್ದಾಗ್ಯೂ ಅವರೆಲ್ಲರ ಗುಣಗಳು ಬೇರೆಬೇರೆ ರೀತಿಯಾಗುವುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಹುಟ್ಟುತ್ತದೆ. ಮನುಷ್ಯರ ಸ್ವಭಾವ, ನಡತೆ, ಮಾನಸಿಕ ವಿಚಾರ, ಇವು ಅವರಲ್ಲಿ ಪ್ರಬಲವಾಗಿರುವ, ಸತ್ವ, ರಜಸ್ಸು, ತಮೋಗುಣಗಳಿಗೆ ಅನುಸಾರವಾಗಿರುತ್ತವೆ ಎಂದು ಹಿಂದೆ ಹೇಳಲಾಗಿದೆ. ಮನುಷ್ಯನು ತನ್ನಲ್ಲಿರುವ ದುರ್ಗುಣಗಳನ್ನು ಕಳೆದುಕೊಂಡು, ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದರಿಂದ ಅವನು ತನ್ನ ಹಿತವನ್ನು ಸಾಧಿಸಿಕೊಳ್ಳುವುದರ ಜೊತೆಗೆ, ಸಮಾಜದ ಹಿತವನ್ನೂ ಸಾಧಿಸಬಹುದಾದುದರಿಂದ, ಈ ವಿಷಯವನ್ನು ಇನ್ನೂ ಸ್ಪಷ್ಟವಾಗಿ ಹಾಗೂ ವಿವರವಾಗಿ ತಿಳಿಸುವುದು ಅವಶ್ಯವೆಂದು ಶ್ರೀಕೃಷ್ಣನು ಬಗೆದು, ಅದನ್ನು ಈ ಅಧ್ಯಾಯದಲ್ಲಿ ದೈವೀಗುಣ ಮತ್ತು ಅಸುರೀಗುಣ ಎಂದು ಎರಡು ವಿಭಾಗ ಮಾಡಿ ವರ್ಣಿಸಿದ್ದಾನೆ. ಈ ಲಕ್ಷಣಗಳನ್ನು ಓದಿ ಇನ್ನೊಬ್ಬರನ್ನು ಅಸುರೀಗುಣದವರು ಎಂದು ಟೀಕಿಸಲು ಉದ್ಯುಕ್ತರಾಗುವದಕ್ಕಿಂತ, ತಮ್ಮಲ್ಲಿ ಆ ಗುಣಗಳಿವೆಯೇ ಹೇಗೆ ಎಂಬುದನ್ನು ಹುಡುಕಿ, ಅವುಗಳನ್ನು ನಿವಾರಿಸಿಕೊಳ್ಳುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕೆಂಬುದೇ ಈ ವರ್ಣನೆಯ ಉದ್ದೇಶ.

ಹದಿನಾರನೆಯ ಅಧ್ಯಾಯ
ದೈವಾಸುರಸಂಪದ್ವಿಭಾಗ ಯೋಗ
ಶ್ರೀ ಭಗವಾನುವಾಚ
ಅಭಯಂ ಸತ್ವಸಂಶುದ್ಧಿಜ್ರ್ಞಾನ ಯೋಗವ್ಯವಸ್ಥಿತಿಃ |
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ || 1 ||
ಶ್ರೀ ಭಗವಂತನು ಹೇಳುತ್ತಾನೆ.
ಅರ್ಥ :- ಹೆದರಿಕೆಯಲ್ಲಿರುವುದು, ಶುದ್ಧ ಹೃದಯವಿರುವುದು, ಜ್ಞಾನ ಮತ್ತು ಯೋಗಗಳಲ್ಲಿ ಸ್ಥಿರತೆ, ದಾನ ಇಂದ್ರಿಯ ನಿಗ್ರಹ, ಯಜ್ಞ, ಶಾಸ್ತ್ರಾಧ್ಯಯನ, ತಪಸ್ಸು, ಮತ್ತು ಸರಳತನ.
ಸಾಧಕನು ಮೈಗೂಡಿಸಿಕೊಳ್ಳಬೇಕಾದ ಇಪ್ಪತ್ತು ಸದ್ಗುಣಗಳನ್ನು ಹದಿಮೂರನೆಯ ಅಧ್ಯಾಯದಲ್ಲಿ (ಶ್ಲೋ. 8-12) ವರ್ಣಿಸಿರುವುದನ್ನು ಈ ವರ್ಣನೆಯೊಡನೆ ತಿಳಿದುಕೊಳ್ಳುವುದು ಉಪಯುಕ್ತವಾಗಿದೆ.
ಅಭಯಮ್- ಈ ಸದ್ಗುಣಗಳ ಪೈಕಿ ‘ಭಯವಿಲ್ಲದಿರುವುದು’ ಶಿಖರ ಪ್ರಾಯವಾಗಿದೆ. ಸಾಧಕನು ನಿರ್ಭಯನಾಗಿರಬೇಕು. ಅವನು ತನ್ನ ಸಂಪೂರ್ಣಭಾರವನ್ನು ಪರಮಾತ್ಮನ ಮೇಲೆ ಹಾಕಿರುವುದರಿಂದ ನಿರ್ಭಯನಾಗಿದ್ದಾನೆ. ಭಯದ ಸಂದರ್ಭಗಳು ಒದಗಿಸಿದಾಗಲೆಲ್ಲಾ, ತನ್ನ ವಿಚಾರ ಶಕ್ತಿಯಿಂದ, ವಿವೇಕದಿಂದ, ಆತ್ಮತೇಜಸ್ಸಿನಿಂದ ಆ ಭಯವನ್ನು ಓಡಿಸಿ ಬಿಡುತ್ತಾನೆ. ಭಯವು ತನ್ನನ್ನು ಆಕ್ರಮಿಸಲು ಆಸ್ಪದ ಕೊಡುವುದಿಲ್ಲ.
ಸತ್ವಸಂಶುದ್ಧಿ:- ಸಾಧಕನು ಕೇವಲ ಸದ್ಗುಣಗಳನ್ನು ಮೈಗೂಡಿಸಿಕೊಂಡು ಆತ್ಮಾನಂದವನ್ನು ಪಡೆದು ಸುಮ್ಮನೆ ಕುಳಿತುಕೊಳ್ಳಬೇಕೆಂಬುದಲ್ಲ. ಅವನು ತನ್ನಲ್ಲಿದ್ದ ಸದ್ಗುಣಗಳ ಲಾಭವು ಸಮಾಜಕ್ಕೆ ಉಪಯೋಗವಾಗುವಂತೆ, ಅವುಗಳನ್ನು ಸತತವೂ ಧಾರೆ ಎರೆಯುತ್ತಿರಬೇಕೆಂಬುದು ಗೀತಾಚಾರ್ಯನ ಮತ. ಇಂತಹ ಉದಾರ ಭಾವವು ಹೃದಯಲ್ಲಿರಬೇಕು. ಸಾಧಕನು ತನ್ನ ಮನಸ್ಸಿನಲ್ಲಿ ಸಹ ಕೆಟ್ಟ ವಿಚಾರಗಳನ್ನು ಚಿಂತಿಸದೆ, ಸದ್ಭಾವ ಮತ್ತು ಆತ್ಮತೇಜಸ್ಸುಗಳನ್ನು ತನ್ನ ಮುಖಾಂತರ, ಸುತ್ತಮುತ್ತಲಿನ ಜನತೆಗೆ ತಲುಪಿಸುವಂತಹ ಶುದ್ಧ ಹೃದಯದವನಾಗಿರಬೇಕು.
ಜ್ಞಾನಯೋಗ ವ್ಯವಸ್ಥಿತಿ:- ಜ್ಞಾನ ಮತ್ತು ಯೋಗಗಳಲ್ಲಿ ಭಕ್ತಿ ಮತ್ತು ಸ್ಥಿರತೆಯಿರುವಿಕೆ, ಕ್ಷುಲ್ಲಕ ವಿಚಾರಗಳನ್ನು ಮತ್ತು ಇಂದ್ರಿಯ ಲಾಲಸೆಯನ್ನು ಮನಸ್ಸಿನಿಂದ ಕಿತ್ತು ಬಿಸಾಡುವುದರಿಂದ ಮಾತ್ರ ಇದು ಸಾಧ್ಯ. ಒಂದು ಮಗುವು ಸುಂದರವಾದ ಗಾಜಿನ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡಿರುವಾಗ ಅದು ಅದನ್ನು ಬಿಸುಡಿ ಒಡೆಯಬಾರದೆಂದು ತಂದೆತಾಯಿಗಳು ಅದಕ್ಕೆ ಆಕರ್ಷಕವಾದ ಮಿಠಾಯಿ ಹಾಗೂ ಇತರೆ ತಿಂಡಿಗಳನ್ನು ಕೊಟ್ಟು, ಅದನ್ನು ತೆಗೆದುಕೊಂಡು ಬದಿಗಿಡುವಂತೆ, ಸಾಧಕನು ತನ್ನ ಮನಸ್ಸನ್ನು ಪರಮಾತ್ಮನ ಕಡೆಗೆ ತಿರುಗಿಸಿ, ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಳ್ಳುತ್ತಾನೆ.
ದಾನಂ ದಮಶ್ಚ ಯಜ್ಞಶ್ಚ:- ಸಾಧಕನು ದಾನ, ದಮ, ಯಜ್ಞಗಳ ಮುಖಾಂತರ ಜ್ಞಾನ ಮತ್ತು ಯೋಗಗಳಲ್ಲಿ ಸ್ಥಿರತೆಯನ್ನು ಪಡೆಯಬಹುದು. ತಾನು ಸಂಗ್ರಹ ಮಾಡಿಡಬಾರದು, ಎಂಬುದನ್ನು ಮೈಗೂಡಿಸಿಕೊಳ್ಳಲು, ಮತ್ತು ಬಾಹ್ಯ ಆಕರ್ಷಕ ವಸ್ತುಗಳ್ನು ತನ್ನಲ್ಲಿಟ್ಟುಕೊಳ್ಳದೆ ತ್ಯಾಗಮಾಡಿ ಅವುಗಳ ಮೇಲಿನ ಮೋಹವನ್ನು ಕಡಿದುಕೊಳ್ಳಲು; ಹಾಗೂ ಯಾರಿಗೆ ಕೊಡಲಾಗುತ್ತದೆಯೋ ಅವರೂ, ತಾನು ಒಂದೇ ಎಂಬ ಭಾವವನ್ನು ಹೊಂದಲು; ದಾನವು ಉತ್ತಮವಾದ ಸಾಧನವಾಗಿದೆ. ಇಂದ್ರಿಯ ನಿಗ್ರಹ ಮಾಡುವುದು (ದಮ) ಸಾಧನೆಗೆ ಅವಶ್ಯಕ.
ಯಜ್ಞದಲ್ಲಿ ಧ್ಯಾನ ಮತ್ತು ಅರ್ಜವ ಇವೆರಡೂ ಒಟ್ಟಾಗಿ ಬರುತ್ತವೆ. ಜೊತೆಗೆ ಇದರಲ್ಲಿ ದಾನ ಮತ್ತು ದಮಗಳೂ ಸೇರಬೇಕು. ಯಜ್ಞದಲ್ಲಿ ಇವು ಮೂರೂ ಪರಸ್ಪರ ಸಂಬಂಧಪಟ್ಟಿವೆ. ಸಾಧಕನು ಧ್ಯಾನಮಾಡಿ ಏಕಾಗ್ರತೆಯನ್ನು ಸಾಧಿಸಲು ಇವು ಮೂರೂ ಅವಶ್ಯಕ.
ಸ್ವಾಧ್ಯಾಯ- ಶಾಸ್ತ್ರಾಧ್ಯಯನ ಮಾಡುವುದರಿಂದ ಆತ್ಮತತ್ವವನ್ನು ತಾತ್ವಿಕವಾಗಿ ತಿಳಿದುಕೊಂಡು ಅದನ್ನು ಆಚರಣೆಯಲ್ಲಿ ತರುವುದಕ್ಕೆ ಸುಲಭವಾಗುತ್ತದೆ.
ತಪ:- ಇಂದ್ರಿಯ ನಿಗ್ರಹದಿಂದ ಗಳಿಸಿದ ಶಕ್ತಿಯನ್ನು ಒಳಗೆ ತಿರುಗಿಸಿ ಧ್ಯಾನ ಮಗ್ನನಾಗುವ ವಿಧಿಗೆ ತಪಸ್ ಎಂದು ಹೆಸರು.
ಆರ್ಜವಮ್-ಸರಳತನ, ಮನೋಭಾವ, ಆಚಾರ, ವಿಚಾರ, ನುಡಿ, ಇವುಗಳಲ್ಲಿ ಸರಳತನವಿರುವುದು ಆತ್ಮಶುದ್ಧಿಗೆ ಸಹಕಾರಿಯಾಗಿದೆ. ಮನಸ್ಸು ಒಳಗೊಂದು, ಹೊರಗೊಂದು ರೀತಿಯಲ್ಲಿರದೆ ಎರಡೂ ಒಂದೇ ವಿಧವಾಗಿರುವುದಕ್ಕೆ ಸರಳತನ ಎಂದು ಹೆಸರು. ತನ್ನ ಮನಸ್ಸಿನ ಭಾವ, ಧ್ಯೇಯ, ನಂಬಿಕೆ, ಆಸೆ, ಆಕಾಂಕ್ಷೆ, ಸಾಧನೆ, ವಿವೇಕ, ಇತ್ಯಾದಿ ಎಲ್ಲಾ ವಿಚಾರಗಳಲ್ಲಿಯೂ ಸರಳತನವಿರಬೇಕು ಇವೆಲ್ಲವೂ ಸದ್ಗುಣಗಳು- ದೈವೀ ಗುಣಗಳು.

ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್ |
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್|| 2 ||
ಅರ್ಥ :- ಅಹಿಂಸೆ, ಸತ್ಯವನ್ನು ನುಡಿಯುವುದು, ಸಿಟ್ಟು ಮಾಡದಿರುವುದು, ತ್ಯಾಗಮಾಡುವ ಸ್ವಭಾವ, ಮನಃಶಾಂತಿ, ವಕ್ರತನವಿಲ್ಲದಿರುವಿಕೆ, ಭೂತದಯೆ, ಇಂದ್ರಿಯ ಲೋಲುಪತೆಯಿಲ್ಲದಿರುವುದು, ಮೃದು ಸ್ವಭಾವ, ವಿನಯ, ಚಂಚಲತೆಯಿಲ್ಲದಿರುವುದು.
ಅಹಿಂಸೆ- ಎಂದರೆ ಯಾವ ಪ್ರಾಣಿಗೂ ಹಿಂಸೆ ಮಾಡದಿರುವುದು. ಪ್ರಪಂಚದಲ್ಲಿ ಸಂಪೂರ್ಣ ಅಹಿಂಸೆಯನ್ನು ಪಾಲಿಸುವುದು ಸಾಧ್ಯವೇ ಇಲ್ಲ. ಆದಾಗ್ಯೂ ತನ್ನಿಂದ ಬೇರೆಯವರಿಗೆ ನೋವಾಗಬಾರದು ಎಂಬ ಭಾವವನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು, ಸಾಧ್ಯವಿದ್ದಮಟ್ಟಿಗೂ ಅದನ್ನು ಪಾಲಿಸಬೇಕು. ಇದು ಸಾಧ್ಯವಿಲ್ಲದೇ ಹೋದಲ್ಲಿ ಕಡಿಮೆ ಹಿಂಸೆಯ ದಾರಿಯನ್ನು ಆರಿಸಿಕೊಳ್ಳಬೇಕು. ಒಟ್ಟು ಮಾನಸಿಕವಾಗಿ ಅಹಿಂಸೆಯ ಭಾವವಿರಬೇಕು.
ಸತ್ಯ- ಸತ್ಯವನ್ನು ನುಡಿಯುವ ನೇಮವು ತುಂಬಾ ಬೆಲೆಯುಳ್ಳದ್ದು ಸಾಧಕನಿಗೆ ಇದು ಅವಶ್ಯಕ.
ಅಕ್ರೋಧ- ಸಿಟ್ಟು ಮಾಡದಿರುವುದು, ಸಿಟ್ಟು ಮಾಡುವುದರಿಂದ ಮನಸ್ಸು ಉದ್ವೇಗವನ್ನು ಹೊಂದಿ ಮುಂದೆ ಮೋಹ, ಸ್ಮøತಿಭ್ರಂಶಾದಿಗಳುಂಟಾಗುತ್ತವೆ. ಸಿಟ್ಟು ಬರುವಂತಹ ಸಂದರ್ಭಗಳಲ್ಲಿ ಸಹ ಮನಸ್ಸಿ ಮನಸ್ಸಿನ ಶಾಂತಿಯನ್ನು ಕಾಯ್ದುಕೊಳ್ಳಬೇಕು.
ತ್ಯಾಗ -ಇಂದ್ರಿಯ ಸುಖಗಳನ್ನು ತ್ಯಾಗಮಾಡುವುದು, ಪರರ ಹಿತಕ್ಕಾಗಿ ತನ್ನ ಸುಖವನ್ನು ತ್ಯಾಗಮಾಡುವುದು, ಹಾಗೂ ಆತ್ಮಧ್ಯಾನಕ್ಕೆ ಮನಸ್ಸನ್ನು ಏಕಾಗ್ರ ಮಾಡಲು ಇಂದ್ರಿಯ ಸುಖಗಳನ್ನು ತ್ಯಾಗಮಾಡುವುದು.
ಶಾಂತಿ- ಮನಸ್ಸು ಉದ್ರೇಕಗೊಳ್ಳಬಹುದಾದ ಸಂದರ್ಭಗಳಲ್ಲಿ, ಅಂತಹ ಉದ್ರೇಕಕ್ಕೆ ಆಸ್ಪದ ಕೊಡದೆ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು, ಉದ್ವೇಗಗೊಂಡಾಗ, ಕೋಪ ಬಂದಾಗ ಸಹ ಈ ತತ್ವವನ್ನು ಜ್ಞಾಪಿಸಿಕೊಂಡು, ತನ್ನ ದೌರ್ಬಲ್ಯವನ್ನು ಮನಗಂಡು, ಆಗಲಾದರೂ ಶಾಂತನಾಗಿರಲು ಪ್ರಯತ್ನಮಾಡಬೇಕು. ಸತತ ಪ್ರಯತ್ನದಿಂದ ಇದನ್ನು ಸಾಧಿಸಬೇಕು.
ಅವೈಶುನಮ್- ಅಪೈಶುನಮ್ ದುರ್ಭಷೆಗಳನ್ನಾಡುವುದು, ದುರ್ಭಾಷೆ ಇತರೆಯವರನ್ನು ನಿಂದಿಸುವುದು, ಇವು ಮಾನಸಿಕ ದುರ್ಬಲತೆಯ, ಮನುಷ್ಯನು ಕೆಳಮಟ್ಟಕ್ಕಿಳಿಯುತ್ತಿದ್ದಾನೆಂದು ಸೂಚಿಸುವ ಲಕ್ಷಣಗಳು. ಇದನ್ನು ಕ್ರಮಶಃ ತಿದ್ದಿಕೊಳ್ಳಬೇಕು. ದುರ್ಭಾಷೆಯನ್ನು ಉಪಯೋಗಿಸಿದ ಮೇಲೆ ತನ್ನ ಈ ತಪ್ಪು ತಿಳಿದರೆ ಆಗಲಾದರೂ ತಿದ್ದಿಕೊಳ್ಳಲು ಹಿಂಜರಿಯಬಾರದು. ದಯೆ- ಕೆಟ್ಟ ಮನುಷ್ಯರಲ್ಲಿ, ನೀಚರಲ್ಲಿ, ದೋಷಿಗಳಲ್ಲಿ ಸಹ ಪರಮಾತ್ಮನನ್ನು ಕಾಣಬೇಕಾದರೆ, ಅವರು ಇನ್ನೂ ಕೆಳಮಟ್ಟದಲ್ಲಿದ್ದಾರಲ್ಲಾ! ಎಂದು ಕನಿಕರ ಪಡಬೇಕು ನಂತರ ಸಾಧ್ಯವಾದರೆ ಅವರನ್ನು ಮೇಲಕ್ಕೆ ತರಲು ಪ್ರಯತ್ನಪಡಬೇಕು. ಇದು ದಯೆ ಎನಿಸಿಕೊಳ್ಳುತ್ತದೆ. ಇದೇ ರೀತಿಯಾಗಿ ಕಷ್ಟದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿಯೂ ದಯೆಯುಳ್ಳವನಾಗಿ ಅವರ ಕಷ್ಟವನ್ನು ಪರಿಹರಿಸಲು ಪ್ರಯತ್ನಮಾಡಬೇಕು.
ಅಲೋಲುಪ್ತ್ವಮ್- ಸಾಮಾನ್ಯ ಮನುಷ್ಯನು, ಇಂದ್ರಿಯ ಸುಖಗಳೇ ತನ್ನ ಧ್ಯೇಯ ಎಂದು ತಿಳಿದು ಆ ಸುಖಗಳಲ್ಲಿಯೇ ಮಗ್ನನಾಗಿ, ಲೋಲುಪನಾಗಿ ತನ್ನನ್ನೇ ಮರೆಯುತ್ತಾನೆ. ಸಾಧಕನು ಇಂತಹ ದೌರ್ಬಲ್ಯವನ್ನು ಗೆಲ್ಲಬೇಕು.
ಮಾರ್ದವಂ ಹ್ರೀ- ಮೃದು ಸ್ವಭಾವ ಮತ್ತು ವಿನಯ ಇವು ಆಚರಿಸಬೇಕಾದ ಮತ್ತು ಸಾಧಿಸಬೇಕಾದ ನಿಯಮಗಳಿಗಿಂತ ವ್ಯಕ್ತಿಯು ತನ್ನ ನಡತೆಯಿಂದ ಹಾಗೂ ಸಾಧನೆಯಿಂದ ಪಡೆದ ಲಾಭದ ಸೌಂದರ್ಯದ ಒಂದು ಭಾಗ ಎನ್ನಬಹುದು. ಸದ್ಗುಣಗಳನ್ನು ಮೈಗೂಡಿಸಿ ಕೊಂಡವರಲ್ಲಿ ಈ ಗುಣವು ಎದ್ದು ಕಾಣುತ್ತದೆ.
ಅಚಾಪಲಮ್- ಇಂದ್ರಿಯಗಳನ್ನು ಅನಾವಶ್ಯಕವಾಗಿ ಚಲಿಸುವುದು. ಮನಸ್ಸಿನ ಅಶಾಂತಿಯು ಈ ರೂಪದಲ್ಲಿ ಪ್ರಕಟವಾಗುತ್ತದೆ. ಒಂದೇ ಸಾರಿ ಉದ್ರೇಕಗೊಂಡವನಂತಹ ಚಟುವಟಿಕೆಗಳು, ಸಮಾಧಾನವಿಲ್ಲದಿರುವಿಕೆ, ಅಸ್ವಾಭಾವಿಕವಾಗಿ ಅಂಗಾಂಗಗಳನ್ನು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಮಾತನಾಡುವುದು, ವೇಗವಾಗಿ ತನ್ನಷ್ಟಕ್ಕೆ ತಾನೇ ಅಂಗಾಂಗಗಳನ್ನು ಚಲಿಸುತ್ತಿರುವುದು, ಇತ್ಯಾದಿಗಳು, ಮನಸ್ಸಿನ ಓಲಾಟವನ್ನು ವ್ಯಕ್ತಪಡಿಸುತ್ತವೆ. ಇವುಗಳನ್ನು ತಡೆಯಬೇಕು ಇವು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತವೆ.

ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋನಾತಿಮಾನಿತಾ |
ಭವಂತಿ ಸಂಪದಂ ದೈವೀಂಭಿಜಾತಸ್ಯ ಭಾರತ || 3 ||
ಅರ್ಥ :- ತೇಜಸ್ಸು, (ಕಾರ್ಯಮಾಡುವ ಸ್ಫೂರ್ತಿ) ತಪ್ಪು ಮಾಡಿದವರನ್ನು ಕ್ಷಮಿಸುವುದು, ಮನಸ್ಥೈರ್ಯ, ಶುಚಿತ್ವ, ದ್ವೇಷ ಮಾಡದಿರುವಿಕೆ, ಜಂಬಕೊಚ್ಚಿ ಕೊಳ್ಳದಿರುವಿಕೆ, ಇವು, ಭಾರತನೇ, ದೈವೀ ಸಂಪತ್ತಿನ ಗುಣಗಳು.
ತೇಜಸ್ಸು- ಎಂದರೆ ಕೇವಲ ಮುಖದ ಮೇಲೆ ಎದ್ದು ಕಾಣುವ ಕಾಂತಿಯಲ್ಲ. ತೀಕ್ಷ್ಣ ಬುದ್ಧಿ, ಕಣ್ಣಿನಲ್ಲಿರುವ ಕಾಂತಿ, ಮುಖದ ಮೇಲೆ ಒಡೆದು ಮೂಡಿದ ಶಾಂತಿ, ಎಲ್ಲಾ ಕಾರ್ಯಗಳಲ್ಲಿಯೂ ಪ್ರಕಟವಾಗಿರುವ ಚಿತ್ತಸ್ಥೈರ್ಯ, ಹಾಗೂ ಸಮಾಧಾನ, ಒಡನಾಡಿ ಒಡನಾಗಿಗಳೊಡನೆ ತೋರಿಸುವ ಪ್ರೇಮ, ಇವೆಲ್ಲವೂ ತೇಜಸ್ಸಿನ ಲಕ್ಷಣಗಳು.
ಕ್ಷಮಾ- ಎಂದರೆ ಜನರೊಡನೆ ದಯೆಯಿಂದ ಅಥವಾ ಕನಿಕರದಿಂದ, ಅವರು ಮಾಡಿದ ತಪ್ಪುಗಳನ್ನು ಮನ್ನಿಸಿ ಅವರನ್ನು ತಿದ್ದುವುದು. ಆದಾಗ್ಯೂ ಅನ್ಯಾಯವೊದಗಿದಾಗ ಅಷ್ಟೇ ತೀವ್ರತೆಯಿಂದ ಪ್ರತಿಭಟಿಸುವುದು ಸಹ ಕ್ಷಮಾಗುಣದಲ್ಲಿ ಸೇರುತ್ತದೆ. ಕ್ಷಮೆ ಎಂದರೆ ಹೇಡಿಯ ತಾಳ್ಮೆಯಲ್ಲ.
ಧೃತಿ – ತಾನು ಹಿಡಿದ ಕಾರ್ಯದಲ್ಲಿ ಎಷ್ಟೇ ಅಡಚಣೆಗಳು ಹಾಗೂ ವಿಘ್ನಗಳು ಬರಲಿ, ಇಲ್ಲವೇ ಕಾರ್ಯವು ಫಲಿಸದೇ ಹೋಗಲಿ, ಅವುಗಳಿಂದ ಸ್ವಲ್ಪವೂ ಹಿಮ್ಮೆಟ್ಟದೆ, ಪುಟಕೊಟ್ಟಂತೆ ಇನ್ನೂ ಹೆಚ್ಚು ಸ್ಫೂರ್ತಿಯಿಂದ, ಜಯಿಸುವವರೆಗೂ ಕಾರ್ಯಮಾಡುವ ಮನಸ್ಥೈರ್ಯಕ್ಕೆ ಧೃತಿ ಎಂದು ಹೆಸರು.
ಶೌಚಮ್- ಬಾಹ್ಯ ಶುಚಿಯು ಎಷ್ಟು ಮುಖ್ಯವೋ, ಅಷ್ಟೇ ಪ್ರಾಧಾನ್ಯತೆಯು ಮಾನಸಿಕ ಹಾಗೂ ಆಂತರಿಕ ಶುಚಿತ್ವಕ್ಕೂ ಇದೆ. ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಕೆಟ್ಟ ಕಲ್ಪನೆಗಳನ್ನು ಮಾಡದಿರುವುದೇ ಆಂತರಿಕ ಶುಚಿತ್ವ.
ಅದ್ರೋಹ- ಹಿಂದೆ ಹೇಳಿದ ಅಹಿಂಸೆ ಎಂಬ ಪದವನ್ನೇ ಬೇರೆ ಅರ್ಥದಲ್ಲಿ ಉಪಯೋಗಿಸಲಾಗಿದೆ. ಅದ್ರೋಹ ಎಂದರೆ ದ್ವೇಷಿಸದೇ ಇರುವುದು. ಅಹಿಂಸೆಯಲ್ಲಿ ಪ್ರತ್ಯಕ್ಷ ಹಿಂಸೆಯನ್ನು ಮಾಡಕೂಡದೆಂದು ಹೇಳಿದ್ದರೆ, ಇಲ್ಲಿ ಇನ್ನೊಬ್ಬರನ್ನು ದ್ವೇಷಿಸಬೇಕೆಂಬ, ಅವನಿಗೆ ಕೆಡಕು ಮಾಡಬೇಕೆಂಬ ಕಲ್ಪನೆಗಳು ಮನಸ್ಸಿನಲ್ಲಿ ಸಹ ಬರಬಾರದೆಂದು ತಿಳಿಸಲಾಗಿದೆ.
ನಾತಿಮಾನಿತಾ- ತನ್ನ ಶಕ್ತಿಯ ಬಗ್ಗೆ ಇಲ್ಲವೆ ತಾನು ಮಾಡಿದ ಕಾರ್ಯದ ಬಗ್ಗೆ ಇಲ್ಲಿ ಇಲ್ಲ ಸಲ್ಲದ ಅಭಿಮಾನವನ್ನು ತಾಳುವುದು, ಇಲ್ಲವೇ ಉತ್ಪ್ರೇಕ್ಷೆ ಮಾಡಿ ಜಂಭ ಕೊಚ್ಚಿಕೊಳ್ಳುವುದು, ಇವಾವುದೂ ಕೂಡದು. ಇದರಿಂದ ಅನಾವಶ್ಯಕವಾಗಿ ಮನಸ್ಸು ಉದ್ರೇಕಗೊಳ್ಳುವುದನ್ನು ತಡೆಯಬಹುದು. ಈ ಇಪ್ಪತ್ತಾರು ಗುಣಗಳ್ನು ಸಾಧಕನು ಮೈಗೂಡಿಸಿಕೊಂಡರೆ, ಸಾಧನೆಯನ್ನು ವೇಗದಿಂದ ಮುಂದುವರಿಸಿ ಗುರಿಯನ್ನು ಮುಟ್ಟುವುದು ಸುಲಭವಾಗುತ್ತದೆ.

ದಂಭೋ ದರ್ಪೋಭಿಮಾನಶ್ಚ ಕ್ರೋಧ ಪಾರುಷ್ಯಮೇವ ಚ |
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ || 4 ||
ಅರ್ಥ :- ಕಪಟ, ದರ್ಪ, ತಾನೇ ಸಮರ್ಥನೆಂಬ ಜಂಭ, ಸಿಟ್ಟು, ಒರಟುತನ, ಮತ್ತು ಅಜ್ಞಾನ ಇವು ಪಾರ್ಥನೇ ಅಸುರೀಗುಣಗಳು.
ಈ ಪುಟ್ಟ ಶ್ಲೋಕದಲ್ಲಿ ಎಲ್ಲಾ ದುರ್ಗುಣಗಳನ್ನು ಸಂಗ್ರಹಿಸಿ ವಿವರಿಸಲಾಗಿದೆ. ಇವುಗಳನ್ನು ತಿಳಿದುಕೊಂಡು, ಪ್ರತಿಯೊಬ್ಬನೂ ತನ್ನಲ್ಲಿ ಇಂತಹ ಹೀನಗುಣಗಳೇನಾದರೂ ಇದ್ದಲ್ಲಿ, ಅವುಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನ ಮಾಡಬೇಕು ಇವುಗಳು ಇಲ್ಲವಾದರೆ ಇಲ್ಲವೇ ಕಡಿಮೆಯಾದರೆ, ಅಷ್ಟೇ ಪ್ರಮಾಣದಲ್ಲಿ ಸದ್ಗುಣಗಳು ವೃದ್ಧಿಯಾಗುತ್ತವೆ.
ದಂಭ- ವ್ಯಕ್ತಿಯು ತನ್ನಲ್ಲಿ ವಸ್ತುತಃ ದುರ್ನಡತೆಗಳು ಹಾಗೂ ದುರ್ವಿಚಾರಗಳು ಇದ್ದಾಗ್ಯೂ ಹೊರಗೆ ಅವು ಕಾಣದಂತೆ ಮುಚ್ಚಿಕೊಳ್ಳಲು ಮತ್ತು ತಾನು ಸತ್ಪುರುಷನೆಂದು ತೋರಿಸಿಕೊಳ್ಳಲು ಸೋಗುಹಾಕಿ ಕೊಳ್ಳುವುದಕ್ಕೆ ದಂಭ ಎಂದು ಹೆಸರು.
ದರ್ಪ- ತನ್ನಲ್ಲಿರುವ ಶಾರೀರಿಕ ಸಂಪತ್ತು, ವಿದ್ಯಾ, ಧನ, ಅಧಿಕಾರ, ಸ್ಥಾನಮಾನ ಇವುಗಳಿಂದ ತಾನೇ ಸರ್ವಶ್ರೇಷ್ಠನು, ಎಲ್ಲವನ್ನೂ ಸಾಧಿಸಬಲ್ಲವನು ಉಳಿದವರೆಲ್ಲರೂ ತನ್ನ ಸೇವಕರು, ಎಂಬ ಅಹಂಕಾರದಿಂದ ಪ್ರತಿಯೊಬ್ಬರೊಡನೆಯೂ ನಿಷ್ಠುರವಾಗಿ ವರ್ತಿಸುವಿಕೆ. ತಾನೇ ಹೆಚ್ಚು ಎಂಬ ಅಹಂಭಾವವಿರುವುದರಿಂದ ಇವನ ಮನಸ್ಸು ಯಾವಾಗಲೂ ಉದ್ರೇಕಗೊಂಡಿರುತ್ತದೆ. ಇಂತಹವನನ್ನು ಸಾಮಾನ್ಯವಾಗಿ ಯಾರೂ ಪ್ರೀತಿಸುವುದಿಲ್ಲ.
ಕ್ರೋಧ – ಈತನು ತನ್ನ ಅಹಂಕಾರದಿಂದ ಪ್ರಪಂಚವು ತನ್ನನ್ನು ತಾನು (ತಪ್ಪಾಗಿ) ತಿಳಿದುಕೊಂಡಿರುವ ರೀತಿಯಲ್ಲಿ ಗೌರವಿಸುವುದಿಲ್ಲವೆಂದು ಕಂಡು ಅನಾವಶ್ಯಕವಾಗಿ ಸಿಟ್ಟು ಮಾಡುತ್ತಾನೆ. ಇದು ಅವನ ಮಾತುಗಳಲ್ಲಿ ಹಾಗೂ ವರ್ತನೆಗಳಲ್ಲಿ ವ್ಯಕ್ತಪಡುತ್ತದೆ. ಕಾಲಕ್ರಮೇಣ ಇವನ ವರ್ತನೆಯು ಒರಟುತನದ್ದಾಗುತ್ತದೆ.
ಪೌರುಷ್ಯ- ಈ ರೀತಿಯ ಮನುಷ್ಯನು ಕ್ರೋಧದಿಂದ ಸಂತಪ್ತನಾಗಿ ತನ್ನನ್ನೇ ತಾನು ಮರೆತು ಬುದ್ಧಿಹೀನನಂತೆ ವರ್ತಿಸುತ್ತಾನೆ. ಸಾರಾಸಾರಾ ಸಾರಾಸಾರ ವಿವೇಕಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಅಜ್ಞಾನದಿಂದ ಆವರಿಸಲ್ಪಡುತ್ತಾನೆ. ಇವು ಆಸುರೀ ಸಂಪತ್ತುಗಳುಳ್ಳ ಮನುಷ್ಯನ ಲಕ್ಷಣಗಳು.

ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮಾತಾಃ | ಮತಾ
ಮಾ ಶುಚಃ ಸಂಪದಂ ದೈವೀಮಭಿಜಾತೋ„ಸಿ ಪಾಂಡವ || 5 ||
ಅರ್ಥ :- ದೈವೀ ಸಂಪತ್ತುಗಳನ್ನು ಮೈಗೂಡಿಸಿಕೊಂಡರೆ ಮುಕ್ತಿ ಸಿಗುತ್ತದೆ. ಅಸುರೀ ಸಂಪತ್ತು ಮನುಷ್ಯನನ್ನು ಸಂಸಾರಕ್ಕೆ ಇನ್ನೂ ಗಟ್ಟಿಯಾಗಿ ಬಿಗಿದು ಕಟ್ಟುತ್ತದೆ. ಪಾಂಡವನೇ, ನೀನು ದುಃಖಿಸಬೇಡ, ಏಕೆಂದರೆ ನಿನ್ನಲ್ಲಿ ದೈವೀಗುಣಗಳಿವೆ.
ಈ ಲಕ್ಷಣಗಳನ್ನು ಕೇಳಿ ಪ್ರಾಯಶಃ ಅರ್ಜುನನ ಮನಸ್ಸಿನಲ್ಲಿ ತಾನು ಯಾವ ಗುಂಪಿಗೆ ಸೇರಿದವನು ಎಂಬ ವಿಚಾರಗೊಂದಲವುಂಟಾಗಿರಬೇಕು. ಇದನ್ನು ಶ್ರೀಕೃಷ್ಣನು ಗುರುತಿಸಿ, ಅರ್ಜುನನ್ನೂ ಸಮಾಧಾನಮಾಡುತ್ತಾ, ಅವನು ದೈವೀ ಗುಣಗಳಿಂದ ಕೂಡಿದವನು ಎಂದು ಹೇಳಿದ್ದಾನೆ. ಭಗವದ್ಗೀತೆಯನ್ನು ಇದುವರೆವಿಗೆ ತಾಳ್ಮೆಯಿಂದ ಅಭ್ಯಾಸ ಮಾಡಿದವರು ಸಹ ಇದೇ ಗುಂಪಿಗೆ ಸೇರುತ್ತಾರೆ. ಏಕೆಂದರೆ ಈ ಗುಣಗಳಿಲ್ಲದಿದ್ದರೆ ಗೀತೆಯನ್ನು ಇಲ್ಲಿಯವರೆಗೆ ತಾಳ್ಮೆಯಿಂದಲೂ, ಶಾಂತಿಯಿಂದಲೂ ಓದುವುದೇ ಸಾಧ್ಯವಿರಲಿಲ್ಲ. ದೈವೀ ಗುಣಗಳಿರುವ ಮನುಷ್ಯನ ಮನಸ್ಸು ಶಾಂತವಾಗಿರುವದುರಿಂದ ಅವನು ಏಕಾಗ್ರತೆಯಿಂದ ತನ್ನ ಗುರಿಯನ್ನು ಸಾಧಿಸಬಲ್ಲನು. ಅಸುರೀಗುಣಗಳಿಂದ ಮನಸ್ಸು ಇನ್ನೂ ಉದ್ರೇಕಗೊಳ್ಳುವುದರಿಂದ, ಅವನಲ್ಲಿರುವ ಅಹಂಕಾರವು ಇನ್ನೂ ಹೆಚ್ಚಾಗಿ, ಅವನು ಇನ್ನೂ ಅಧೋಗತಿಗಿಳಿಯುತ್ತಾ ಹೋಗುತ್ತಾನೆ. ಅಂತೆಯೇ ಸಂಸಾರಕ್ಕೆ ಬಂಧಿತನಾಗುತ್ತಾನೆ.

ದ್ವೌಭೂತಸರ್ಗೌ ಲೋಕೇ„ಸ್ಮಿನ್‍ದೈವ ಅಸುರ ಏವ ಚ |
ದೈವೋ ವಿಸ್ತರಣಾ ಪ್ರೋಕ್ತ ಅಸುರಂ ಪಾರ್ಥ ಮೇ ಶೃಣು || 6 ||
ಅರ್ಥ :- ಪ್ರಪಂಚದಲ್ಲಿ ದೈವೀಪ್ರಕೃತಿ ಮತ್ತು ಅಸುರೀ ಪ್ರಕೃತಿ ಎಂಬ ಎರಡು ಗುಂಪಿನ ಜನರಿದ್ದಾರೆ. ಪಾರ್ಥನೇ ಇದುವರೆಗೆ ದೈವೀ ಪ್ರಕೃತಿಯನ್ನು ವಿವರವಾಗಿ ವರ್ಣಿಸಲಾಯಿತು. ಇನ್ನು ಅಸುರೀ ಪ್ರಕೃತಿಯವರ ವರ್ಣನೆಯನ್ನು ಕೇಳು.
ಇವೆರಡಲ್ಲದೆ ರಾಕ್ಷಸೀ ಪ್ರಕೃತಿ ಎಂಬ ಗುಂಪೂ ಇದೆ. ಇವರು ತೀರ ಕೆಳಮಟ್ಟದವರಾದ್ದರಿಂದ, ಅವರು ಮನುಷ್ಯ ಶರೀರವನ್ನು ಹೊಂದಿದಾಗ್ಯೂ ಧರ್ಮವನ್ನು ತಿಳಿದುಕೊಂಡು ಆಚರಣೆಯಲ್ಲಿ ತರುವಷ್ಟು ಅವರ ಮನಸ್ಸು ಇನ್ನೂ ವಿಕಾಸವನ್ನು ಹೊಂದಿರುವುದಿಲ್ಲ. ಅವರು ಕ್ರಮೇಣ ಮೇಲಕ್ಕೇರಿ, ಅಸುರೀ ಪ್ರಕೃತಿಗೆ ಬರುತ್ತಾರೆ. ಅಲ್ಲಿಂದ ಮುಂದೆ ಅವರು ತಮ್ಮ ಸ್ವಪ್ರಯತ್ನದಿಂದ ಧಾರ್ಮಿಕ ಮಾರ್ಗವನ್ನು ಅನುಸರಿಸುವ ಶಕ್ತಿಯನ್ನು ಗಳಿಸುತ್ತಾರೆ. ಅವರು ಧಾರ್ಮಿಕ ಉಪದೇಶಕ್ಕೆ ಈ ರೀತಿಯಾಗಿ ಅನರ್ಹರಾದುದರಿಂದ ಈ ಪ್ರಕೃತಿಯನ್ನು ಇಲ್ಲಿಯ ವರ್ಣನೆಯಲ್ಲಿ ಸೇರಿಸಲಿಲ್ಲ.
ಈ ವಿಭಾಗದಲ್ಲಿ ಅಸುರೀಗುಣಗಳನ್ನು ವರ್ಣಿಸಲಾಗುತ್ತದೆ. ಇವು ದುರ್ಗುಣ-ಗಳಾಗಿರುವುದರಿಂದ, ಸುಗುಣಗಳಿಗೆ ವಿರೋಧವಾದುದು ಎಂಬ ಅರ್ಥವಲ್ಲ ಸುಗುಣಗಳಿಗೆ ಉದಾತ್ತ ಆಸೆಗಳಿದ್ದಂತೆ, ದುರ್ಗುಣಗಳಿಗೆ ಸಹ ವಿಶಿಷ್ಠ ತರಹದ ಆಸೆಗಳಿವೆ. ಒಳ್ಳೆಯದನ್ನು ತಪ್ಪಾಗಿ ತಿಳಿದುಕೊಂಡು, ತಪ್ಪಾಗಿ ಆಚರಿಸಿದರೆ ಕೆಟ್ಟದಾಗುತ್ತದೆ. ಸದ್ಗುಣಗಳು ಅಜ್ಞಾನ ಎಂಬ ವಿಷದಿಂದ ಲೇಪಗೊಂಡರೆ ದುರ್ಗುಣಗಳಾಗುತ್ತವೆ. ದುರ್ಗುಣಗಳಲ್ಲಿಯ ವಿಷವನ್ನು ಚನ್ನಾಗಿ ತಿಕ್ಕಿ ತೊಳೆದು ಹಾಕಿದರೆ ಅವೇ ಸದ್ಗುಣಗಳಾಗುತ್ತವೆ.

ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ |
ನ ಶೌಚಂ ನಾಪಿ ಚಾಚೋರೋ ನ ಸತ್ಯಂ ತೇಷು ವಿದ್ಯತೇ || 7 ||
ಅರ್ಥ :- ಆಸುರೀ ಪ್ರವೃತ್ತಿಯವರು, ಯಾವ ಕೆಲಸಗಳನ್ನು ಮಾಡಬೇಕು. ಯಾವುದನ್ನು ಮಾಡಬಾರದು ಎಂಬುದನ್ನು (ಪ್ರವೃತ್ತಿ, ನಿವೃತ್ತಿ) ತಿಳಿಯಲಾರರು. ಇವರಿಗೆ ಶುಚಿತ್ವ, ಸದಾಚಾರ, ಸತ್ಯ ಇವಾವುವೂ ಬೇಕಿಲ್ಲ.

ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ |
ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್ || 8 ||
ಅರ್ಥ :- ಪ್ರಪಂಚದಲ್ಲಿ ಸತ್ಯಕ್ಕೆ ಬೆಲೆಯೇ ಇಲ್ಲ. ಅಸತ್ಯದ ಮೇಲೆಯೇ ಎಲ್ಲವೂ ಅವಲಂಬಿಸಿದೆ (ನಿಂತಿದೆ) ಇಲ್ಲಿ ನೀತಿಯು ಸಲ್ಲದು, ದೇವರೆಂಬುವನೇ ಇಲ್ಲ. ಕಾಮೇಚ್ಛೆಯಿಂದ ಹೆಣ್ಣು ಗಂಡುಗಳು ಕೂಡಿ ಈ ಪ್ರಪಂಚವು ಸೃಷ್ಟಿಯಾಗಿದೆ, ಇಷ್ಟಲ್ಲದೆ ಮತ್ತೇನು? ಎಂದು ಅವರು ಹೇಳುತ್ತಾರೆ.
ಆಸುರೀ ಪ್ರಕೃತಿಯವರು ಯಾವ ಕಾರ್ಯವನ್ನು ಮಾಡಬೇಕು. ಯಾವುದನ್ನು ತ್ಯಜಿಸಬೇಕು. ಎಂಬುದನ್ನು ತಿಳಿಯಬಾರರು. ಇವರಿಗೆ ಆಂತರಿಕ ಶುಚಿತ್ವವೂ ಇಲ್ಲ, ಬಾಹ್ಯ ಶಾರೀರಿಕ ಶುಚಿತ್ವವೂ ಇಲ್ಲ. ಕೊಟ್ಟ ಮಾತನ್ನು ಸಲ್ಲಿಸಲಾರರು ಇವರಲ್ಲಿ ಸತ್ಯವನ್ನು ಪಾಲಿಸುವ ಶಕ್ತಿಯಿಲ್ಲ. ಇವರು ನಾಸ್ತಿಕರಾಗಿರುತ್ತಾರೆ.

ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಲ್ಪಬುದ್ಧಯಃ
ಪ್ರಭವಂತ್ಯುಗ್ರಕರ್ಮಾಣಕ್ಷಯಾಯ ಜಗತೋ„ಹಿತಾಃ || 9 ||
ಅರ್ಥ :- ಈ ರೀತಿಯಾದ ಅಭಿಪ್ರಾಯವನ್ನು ಹೊಂದಿದ, ಬುದ್ಧಿ ಹೀನರಾದ, ಆತ್ಮ ಘಾತುಕರಾದ ಇವರು, ಪ್ರಪಂಚಕ್ಕೆ ಅಹಿತವನ್ನುಂಟು ಮಾಡುವಂತಹ ಕ್ರೂರಕರ್ಮಗಳನ್ನು ಮಾಡುತ್ತಾ ಜನತೆಯ ಶತ್ರುವಾಗಿ ಪರಿಣಮಿಸುತ್ತಾರೆ.
ನೆಷ್ಟಾತ್ಮಾನ :- ವ್ಯಕ್ತಿಯು ತನ್ನನ್ನೇ ಮರೆತು, ತನ್ನ ವಿದ್ಯೆ, ಅಧಿಕಾರ, ಸಾಮಾಜಿಕ ಸ್ಥಾನಮಾನ, ಜವಾಬ್ದಾರಿ ಇತ್ಯಾದಿಗಳೆಲ್ಲವನ್ನೂ ಮೆರತು ಹುಚ್ಚನಂತೆ ಇಲ್ಲವೆ ಕುಡುಕನಂತೆ ತನ್ನ ಹತೋಟಿ ಇಲ್ಲದೆ ಸ್ವೇಚ್ಛೆಯಾಗಿ ವರ್ತಿಸುವುದರಿಂದ ಇಂತಹವರಲ್ಲಿ ವಾಸನೆಯು ಇನ್ನೂ ಬಲವಾಗಿ ಅಜ್ಞಾನವು ವೃದ್ಧಿಯಾಗುತ್ತದೆ ಅವರು ತಾನು ಮನುಷ್ಯನೆಂಬುದನ್ನೇ ಮುಷ್ಯರೆಂಬುದನ್ನೇ ಮರೆತು ಪ್ರಾಣಿಗಳ ಮಟ್ಟಕ್ಕಿಳಿದು ಕ್ರೂರವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ. ಆತ್ಮಜ್ಞಾನವನ್ನು ಪಡೆಯಲು ಮೇಲಕ್ಕೇರುವ ಬದಲು ಇನ್ನೂ ಕೆಳಕ್ಕಿಳಿಯುತ್ತಾರೆ ಆದುದರಿಂದ ಅವರು ಆತ್ಮಘಾತ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಅಲ್ಪಬುದ್ಧಯ- “ಪ್ರಪಂಚದಲ್ಲಿ ದೇವರೆಂಬುವನೇ ಇಲ್ಲ, ತನ್ನ ಪ್ರಯತ್ನದಿಂದ ಏನು ಬೇಕಾದದ್ದನ್ನೂ ಸಾಧಿಸಬಹುದು” ಎಂದು ಇವರು ತಿಳಿದುಕೊಂಡು ತಮ್ಮ ಇಂದ್ರಿಯಗಳ ಸುಖಕ್ಕಾಗಿ ಸ್ವೇಚ್ಛೆಯಾಗಿ ವರ್ತಿಸುತ್ತಾರೆ. ಪ್ರತಿಯೊಂದು ಹೆಜ್ಜೆಗೂ ಸೋಲನ್ನೂ ದುಃಖವನ್ನೂ ಅನುಭವಿಸುತ್ತಾ ಸೇಡು ತೀರಿಸಿಕೊಳ್ಳುವ ಭಾವದಿಂದ ಇನ್ನೂ ಹೆಚ್ಚು ಕ್ರೂರಿಯೂ, ಅನ್ಯಾಯಿಯೂ ಆಗುತ್ತಾರೆ. ಇವರ ಬುದ್ಧಿಯ ವಿಚಾರಶಕ್ತಿಯು ನಷ್ಟವಾಗುತ್ತದೆ. ಇಂತಹ ಮನುಷ್ಯರು ದಿನದಿನಕ್ಕೂ ಹೆಚ್ಚು ಹೆಚ್ಚು ಕ್ರೂರಕರ್ಮಗಳನ್ನು ಮಾಡುತ್ತಾ ಹೋಗುತ್ತಾರೆ.

ಕಾಮಮಾಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ |
ಮೋಹಾತ್ ಗೃಹೀತ್ವಾ ಸದ್ ಗ್ರಾಹಾನ್ ಪ್ರವರ್ತಂತೇ„ಶುಚಿವ್ರತಾಃ || 10 ||
ಅರ್ಥ :- ಪೂರೈಸಲು ಆಗದಷ್ಟು ಆಸೆಗಳುಳ್ಳ ಇವರು ಕಪಟ, ಅಹಂಕಾರ ಮತ್ತು ಗರ್ವದಿಂದ ಕೂಡಿದವರಾಗಿ, ಅಜ್ಞಾನದಿಂದ, ಹಾನಿಕರ ವಿಚಾರಗಳನ್ನು ಚಿಂತಿಸುತ್ತಾ ತಪ್ಪು ದಾರಿಯಲ್ಲಿ ನಡೆಯುತ್ತಾರೆ.
ಆಸೆಗಳನ್ನು ತೃಪ್ತಿಪಡಿಸಿ ಪೂರೈಸಲು ಸಾಧ್ಯವೇ ಇಲ್ಲ. ಒಂದು ಮುಗಿದ ಮೇಲೆ ಮತ್ತೊಂದು, ತಳಿಕೆಯಂತೆ ಹಿಂದೆಯೇ ಬರುತ್ತದೆ. ಕಪಟ, ಅಹಂಕಾರ, ಗರ್ವ, ಇವುಗಳಿಂದ ಮಾನಸಿಕ ಉದ್ರೇಕವೂ ಇನ್ನೂ ಹೆಚ್ಚಾಗಿ ಆ ಮನುಷ್ಯನು ಪಶುವೃತ್ತಿಗಿಳಿಯುತ್ತಾನೆ.

ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾಃ |
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ || 11 ||
ಅರ್ಥ :- ಸಾಯುವವರೆಗೂ ನಾನಾತರಹದ ಚಿಂತೆಗಳುಳ್ಳವರಾಗಿ, ಇಂದ್ರಿಯ ಸುಖ ಭೋಗವೇ ಜೀವನದ ಪರಮ ಧ್ಯೇಯವೆಂದೂ ಮತ್ತು ಇದರ ಹೊರತು ಬೇರೆ ಏನೂ ಇಲ್ಲವೆಂದೂ ಅವರು ತಿಳಿಯುತ್ತಾರೆ.

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ |
ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ || 12 ||
ಅರ್ಥ :- ಕಾಮ ಮತ್ತು ಕ್ರೋಧಗಳಿಂದ ಕೂಡಿದ ಇವರು ನೂರಾರು ಆಸೆಗಳಿಂದ ಬಿಗಿಯಲ್ಪಟ್ಟವರಾಗಿ, ಅನ್ಯಾಯ ಮಾರ್ಗದಿಂದ ತಮ್ಮ ಕಾಮನೆಗಳನ್ನು ಪೂರೈಸಿ-ಕೊಳ್ಳುತ್ತಾರೆ. ಮತ್ತು ಅನ್ಯಾಯದಿಂದ ಹಣವನ್ನು ಸಂಗ್ರಹಿಸುತ್ತಾರೆ.

ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ |
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ || 13 ||
ಅರ್ಥ :- ಇವತ್ತು ಇಷ್ಟನ್ನು ಸಂಪಾದಿಸಿದ್ದೇನೆ. ನನ್ನ ಇಂತಹ ಆಸೆಗಳನ್ನು ಇನ್ನೂ (ನಾಳೆ) ಕೈಗೂಡಿಸಿಕೊಳ್ಳುತ್ತೇನೆ. ನನ್ನಲ್ಲಿ ಇವತ್ತು ಇಷ್ಟು ಧನವಿದೆ, ಮುಂದೆ ಇನ್ನೂ ಇಷ್ಟು ಧನವನ್ನು ಗಳಿಸುತ್ತೇನೆ.

ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ |
ಈಶ್ವರೋ„ಹಮಹಂ ಭೋಗೀ ಸಿದ್ಧೋ„ಹಂ ಬಲವಾನ್ ಸುಖೀ|| 14 ||
ಅರ್ಥ :- ಈಗ ನನ್ನ ಈ ಶತ್ರುವು ಕೊಲ್ಲಲ್ಪಟ್ಟನು. ಉಳಿದವರನ್ನು ಸಹ ಸಧ್ಯದಲ್ಲಿಯೇ ಕೊಲ್ಲುತ್ತೇನೆ. ನಾನೇ ಈಶ್ವರನು, ನಿಜವಾದ ಸುಖಪುರುಷನೂ ನಾನೇ ಸರಿ. ನಾನೇ ಸಿದ್ಧಪುರುಷನು ಬಲಶಾಲಿಯೂ, ಸುಖಿಯೂ ನಾನೇ.
ಅಹಂಭಾವದಿಂದ ಕೂಡಿದ, ಆಸುರೀ ಪ್ರಕೃತಿಯ ಜನರು ಪ್ರಪಂಚದಲ್ಲಿ ವ್ಯವಹರಿಸುವಾಗ ವ್ಯಕ್ತಪಡಿಸುವ ಗುಣಗಳನ್ನು ವರ್ಣಿಸಲಾಯಿತು. ಈಗಿನ ಜಡಾತ್ಮವಾದದ ಜನರ ನಡವಳಿಕೆಗಳನ್ನು ಈ ವರ್ಣನೆಯೊಡನೆ ಹೋಲಿಸಿ ನೋಡಿದರೆ ಎರಡೂ ಒಂದೇ ಆಗಿರುವುದು ಕಾಣುತ್ತದೆ. ಮುಂದಿನ ಶ್ಲೋಕದಲ್ಲಿ ಇವರ ಮಾನಸಿಕ ಭಾವವನ್ನು ವರ್ಣಿಸಲಾಗಿದೆ.

ಆಢ್ಯೋ„ಭಿಜನವಾನಸ್ಮಿಕೋ„ನ್ಯೋ„ಸ್ತಿ ಸದೃಶೋಮಯಾ |
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತ್ಯಜ್ಞಾನವಿಮೋಹಿತಾಃ || 15 ||
ಅರ್ಥ :- ನಾನು ಶ್ರೀಮಂತನು, ನಾನು ಉತ್ತಮ ಕುಲದಲ್ಲಿ ಜನಿಸಿದವನು. ನನಗೆ ಸಮಾನರಾದವರು ಬೇರೆ ಯಾರಿದ್ದಾರೆ. ನಾನು ಬೇಕಾದಷ್ಟು ದಾನಮಾಡೇನು. ಬೇಕಾದಷ್ಟು ಸುಖಪಟ್ಟೇನು, ಎಂಬುದಾಗಿ, ಇವನು ಅಜ್ಞಾನದಿಂದ ಕೂಡಿದ ನಾನಾ ತರಹದ ಕಲ್ಪನೆಗಳಲ್ಲಿ ಮುಳುಗಿರುತ್ತಾನೆ.
ಅಜ್ಞಾನದಿಂದ ಕೂಡಿದ ಇಂತಹ ಜನರು ಪ್ರಪಂಚವನ್ನು ತಪ್ಪಾಗಿ ತಿಳಿದುಕೊಂಡು, ತಮ್ಮ ಅಹಂಕಾರಕ್ಕನುಗುಣವಾಗಿ ಪ್ರಪಂಚದೊಡನೆ ತಮ್ಮ ಸಂಬಂಧವಿದೆ ಎಂಬುದಾಗಿ ತಿಳಿದುಕೊಂಡು ಭ್ರಾಂತಿಯಿಂದ ವರ್ತಿಸುತ್ತಾರೆ. ತಮ್ಮ ವಿದ್ಯೆ, ಸಂಪತ್ತು, ಅಧಿಕಾರ, ಕುಲಗಳಿಗಾಗಿ ಹೆಮ್ಮೆಪಡುತ್ತಾ ಆತ್ಮಸ್ತುತಿಯನ್ನು ಮಾಡಿಕೊಳ್ಳುತ್ತಾರೆ. ತಾವು ಮಾಡುವ ದಾನಾದಿಗಳಿಂದ ಇಡೀ ಪ್ರಪಂವವನ್ನೂ, ಬೇಕಾದರೆ ಪರಮಾತ್ಮನನ್ನು ಕೊಂಡುಕೊಳ್ಳುವುದಾಗಿ ಭಾವಿಸುತ್ತಾರೆ. ತಾವು ಇಷ್ಟಪಟ್ಟರೆ ಇಡೀ ಪ್ರಪಂಚಕ್ಕೆ ಸುಖಕೊಡಬಲ್ಲೆವು ಎಂದು ಭ್ರಮಿಸುತ್ತಾರೆ.

ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ |
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇ„ಶುಚೌ || 16 ||
ಅರ್ಥ :- ನಾನಾ ರೀತಿಯ ಕಲ್ಪನೆಗಳಿಂದ ಚಿತ್ತಭ್ರಮೆಯನ್ನು ಹೊಂದಿ, ಅಜ್ಞಾನ ಎಂಬ ಬಲೆಯಲ್ಲಿ ಸಿಕ್ಕಿಕೊಂಡು, ಯಾವಾಗಲೂ ಇಂದ್ರಿಯ ಸುಖಗಳಲ್ಲಿಯೇ ಲೋಲುಪರಾಗಿ, ಅವರು ಹೀನ ತರಗತಿಯ ನರಕದಲ್ಲಿ ಬೀಳುತ್ತಾರೆ.
ಅಹಂಭಾವದಿಂದ ಕೂಡಿದ ಮನುಷ್ಯನು ವಿಷಯಲೋಲುಪನಾದರೆ ಅವನು ಪತಿತನಾಗುತ್ತಾನೆ. ಹಾಗೂ ಅವನಿಗೆ ಮಾನಸಿಕ ಅಶಾಂತಿಯುಂಟಾಗುತ್ತದೆ. ಇದರ ಪರಿಣಾಮವಾಗಿ, ಮನಸ್ಸು ಏಕಾಗ್ರವಾಗದೇ ಸಿಕ್ಕಸಿಕ್ಕ ನಾನಾತರಹದ ಕಾಲ್ಪನಿಕ ವಿಚಾರಗಳಲ್ಲಿ ಮುಳುಗಿರುತ್ತದೆ. ಇವನು ಹಗಲು ಕನಸುಗಳನ್ನು ಕಾಣುತ್ತಾ, ತನ್ನ ಬುದ್ಧಿ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇಂತಹ ಬುದ್ಧಿಯು ಅವನಿಗೆ ಪರಿಸ್ಥಿತಿಯು ಸರಿಯಾದ ಚಿತ್ರವನ್ನು ತೋರಿಸದೆ, ಅದು ವಿಕಾರವಾಗಿರುವಂತೆ ತೋರಿಸುತ್ತದೆ. ಮನಸ್ಸು ಇಂದ್ರಿಯ ಲೋಲುಪತೆಯಲ್ಲಿ ಮಗ್ನವಾದರೆ, ಮೋಟಾರು ಡ್ರೈವರನು ಹೆಂಡವನ್ನು ಕುಡಿದು ಮೋಟಾರನ್ನು ನಡೆಸಿದಂತಾಗುತ್ತದೆ ಇವನ ಸ್ಥಿತಿ. ಒಟ್ಟಿನಲ್ಲಿ ಇಂತಹ ಮನುಷ್ಯನು ಶಾರೀರಿಕ, ಮಾನಸಿಕ, ಹಾಗೂ ಬೌದ್ಧಿಕವಾಗಿ ಬಳಲಿದವನಾಗಿ ದಿಕ್ಕು ಕಾಣದೆ, ತಾನೇ ಸೃಷ್ಟಿಸಿಕೊಂಡ, ನಾನಾತರಹದ ದುಃಖಗಳಿಗೆ ತುತ್ತಾಗುತ್ತಾನೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ನರಕವನ್ನು ಸಹ ಸ್ವರ್ಗವಾಗಿ ಪರಿವರ್ತಿಸಬಹುದು. ಅದು ಹತೋಟಿಯಲ್ಲಿಲ್ಲದಿದ್ದರೆ ಸ್ವರ್ಗವು ಸಹ ನರಕವಾಗುತ್ತದೆ. ಇಂತಹ ಮನುಷ್ಯನಿಗೆ ಈಗ ಯಾವುದರಲ್ಲಿಯೂ ಸುಖ ಕಾಣುವುದಿಲ್ಲ. ಅವನಿಗೆ ನಿಜವಾಗಿ ಸುಖದಾಯಕವಾದ, ಹಿತಕರವಾದ ವಾತಾವರಣವಿದ್ದರೂ ಅದು ಅವನಿಗೆ ನರಕದಂತೆ ದುಃಖಕರವಾಗುತ್ತದೆ. ಅವನಾಗಿ ಸಾಧಿಸಿಕೊಂಡ ಮಾನಸಿಕ ದೌರ್ಬಲ್ಯವೇ ಇದಕ್ಕೆ ಕಾರಣ.

ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ |
ಯಜಂತೇ ನಾಮಯಜ್ಞೆಸ್ತೇ ಯಜ್ಞೈದಂಭೇನಾವಿಧಿಪೂರ್ವಕಮ್ || 17 ||
ಅರ್ಥ :- ಅಹಂಭಾವದಿಂದ ತನ್ನನ್ನೇ ತಾನು ಹೊಗಳಿಕೊಳ್ಳುವ, ಮೊಂಡತನದ ಹಟವುಳ್ಳ, ಧನ, ಗೌರವಗಳೆಂಬ ಮತ್ತಿನಿಂದ ಕೂಡಿರುವ, ಮನುಷ್ಯನು ಯಜ್ಞಗಳನ್ನೇನಾದರೂ ಮಾಡಿದರೆ, ಅದು ಕೇವಲ ಡಂಭಾಚಾರದ್ದಾಗಿರುತ್ತದೆ. ಯಜ್ಞವನ್ನು ಮಾಡುವುದು ತಾನು ಮಾಡಿದೆನೆಂದು ಜಂಭಕೊಚ್ಚಿಕೊಳ್ಳುವುದಷ್ಟಕ್ಕಲ್ಲದೆ, ಅದನ್ನು ವಿಧಿವತ್ತಾಗಿ ಮಾಡುವುದಿಲ್ಲ.
ಆಸುರೀ ಪ್ರಕೃತಿಯ ಮನುಷ್ಯನು ಸಮಾಜ ಸೇವೆ ಅಥವಾ ದೇಶಸೇವೆಯನ್ನು ಮಾಡಲು ಮುಂದೆ ಬಂದರೆ, ಅವನು ಸ್ವಾರ್ಥ ತ್ಯಾಗ ಮಾಡುತ್ತೇನೆಂದು ನಾನಾರೀತಿಯಲ್ಲಿ ಪ್ರಚಾರ ಮಾಡಿಕೊಂಡಾಗ್ಯೂ, ಅವನ ಪ್ರಕೃತಿಯ ಸ್ವಭಾವದಿಂದಾಗಿ ನಿಜವಾದ ತ್ಯಾಗವನ್ನೂ ಮಾಡಲು ಶಕ್ತನಾಗಿರುವುದಿಲ್ಲ. ಸ್ವಲ್ಪ ತ್ಯಾಗ ಮಾಡುವುದರೊಳಗೇ ಅಹಂಕಾರ ಬಂದು ತುಂಬಿ, ತಾನು ಮಾಡಿದ ತ್ಯಾಗಕ್ಕೆ ಪ್ರತಿಫಲವನ್ನು ಗುಟ್ಟಾಗಿ ಪಡೆಯಲು ಪ್ರಾರಂಭಿಸುತ್ತಾನೆ. ಇವನು ಮಾಡುವ ಸಾಮಾಜಿಕ ಕಾರ್ಯಗಳಲ್ಲಿ ಸಹ ನಿಜವಾದ ತ್ಯಾಗಕ್ಕಿಂತ ಡಂಭಾಚಾರವೇ ಹೆಚ್ಚಾಗಿರುತ್ತದೆ. ಜೊತೆಗೆ ಸ್ವಾರ್ಥತೆ ಬೇರೆ ತುಂಬಿರುತ್ತದೆ.

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮಪರದೇಹೇಷು ಪ್ರದ್ವಿಷಂತೋ„ಭ್ಯಸೂಯಕಾಃ || 18 ||
ಅರ್ಥ :- ಅಹಂಕಾರ, ಶಾರೀರಿಕ ಬಲ ಇಲ್ಲವೇ ಅಧಿಕಾರ ಬಲ, ದರ್ಪ, ಕಾಮ, ಕ್ರೋಧ, ಇವುಗಳನ್ನು ಆಶ್ರಯಿಸಿದ ಆಸುರೀ ಪ್ರಕೃತಿಯವರು ತಮ್ಮ ಶರೀರದಲ್ಲಿರುವ ಹಾಗೂ ಇತರೆ ಎಲ್ಲರ ದೇಹದಲ್ಲಿಯೂ ಇರುವ ನನ್ನನ್ನು ದ್ವೇಷಿಸುತ್ತಾರೆ.
ಅಹಂಕಾರವು ಮನುಷ್ಯನನ್ನು ಆವರಿಸಿಬಿಟ್ಟರೆ, ಅವನು ತೀರ ಕೆಳತರಗತಿಯ ಪ್ರಾಣಿಗಳಂತೆ ವರ್ತಿಸಲು ವರ್ತಿಸುತ್ತಾನೆ. ಕಾಮೋನ್ಮತ್ತನಾದ ಇವನು ಮನುಷ್ಯನಂತೆ ವರ್ತಿಸದೆ ಪಶುವಿನಂತೆ ವರ್ತಿಸುತ್ತಾನೆ. ಅಹಂಕಾರ, ಬಲ, ದರ್ಪ, ಇವು ಒಂದೊಂದೇ ಮನುಷ್ಯನನ್ನು ಪಶುವೃತ್ತಿಗೆ ನೂಕುವ ಸಾಮಥ್ರ್ಯವನ್ನು ಹೊಂದಿವೆ. ಇವು ಮೂರೂ ಸೇರಿಬಿಟ್ಟರೆ ಕೇಳುವುದೇನು? ಅವನು ದ್ವಿಪಾದ ಪಶುವಾಗಿ ಬಿಡುತ್ತಾನೆ. ಈ ರೀತಿಯಾಗಿ ವರ್ತಿಸಿದರೆ ಹಾನಿ ಏನು ಎಂಬ ಪ್ರಶ್ನೆಗೆ ಗೀತೆಯಲ್ಲಿ ಉತ್ತರವನ್ನೂ ಹೇಳಲಾಗಿದೆ. ಈ ತರಹದ ವರ್ತನೆಯಿಂದ ಆ ಮನುಷ್ಯನು, ಸಮಾಜಕ್ಕೆ ಹಾನಿಯನ್ನುಂಟು ಮಾಡುವುದರ ಜೊತೆಗೆ ತಾನೂ ದುಃಖಕ್ಕೊಳಗಾಗುತ್ತಾನೆ. ಅವನಲ್ಲಿಯೂ ಈ ವಾಸನೆಗಳು ಇನ್ನೂ ಬಲಿತು ಹೆಚ್ಚು ಹೆಚ್ಚು ಸಂಚಯವಾಗಿ, ಅವುಗಳನ್ನು ಭೋಗಿಸುವುದಕ್ಕಾಗಿ ಅವನು ಮುಂದಿನ ಜನ್ಮದಲ್ಲಿ ಇನ್ನೂ ಕೆಳಮಟ್ಟದ ಶರೀರವನ್ನು ಪಡೆಯುತ್ತಾನೆ. ಹೀಗೆ ಕ್ರಮೇಣ ಅವನು ಅವನತಿಗಿಳಿಯುತ್ತಾನೆ. ಇಂತಹವನು ಉತ್ಕ್ರಾಂತಿಯ ಏಣಿಯಲ್ಲಿ ಮೇಲಕ್ಕೇರುವುದು ತುಂಬಾಕಷ್ಟ. ಇವನು ಪರಮಾತ್ಮನನ್ನು ದೂಷಿಸುತ್ತಾ ತಾನೇ ಪರಮಾತ್ಮನ ಸಾಮಥ್ರ್ಯವುಳ್ಳವನು ಎಂದು ಹೇಳಿಕೊಳ್ಳುತ್ತಾನೆ.

ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ |
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು || 19 ||
ಅರ್ಥ :- ಹೀಗೆ ಕ್ರೂರಿಗಳಾಗಿರುವ, ಮತ್ತು ಪರಮಾತ್ಮನನ್ನು ದ್ವೇಷಿಸುವ ಮನುಷ್ಯರಲ್ಲಿ ಅತೀ ಕೆಳಮಟ್ಟಕ್ಕೆ ಸೇರಿದ ಜನರು ಶಾಶ್ವತವಾಗಿ ಅಸುರರ ಹೊಟ್ಟೆಯಲ್ಲಿ ಹುಟ್ಟುವಂತೆ ಮಾಡುತ್ತೇನೆ.
ಇಂತಹ ಜನರಿಗೆ ತಮ್ಮ ಸಂಚಿತ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಅಸುರರ ಶರೀರವೇ ಹಿತಕರವು. ಬೇರೆ ದೇಹವು ಅವರಿಗೆ ದುಃಖಕರವಾಗುತ್ತದೆ. ಬೇರೆ ದೇಹದ ಮೂಲಕ ಅವರು ತಮ್ಮ ವಾಸನೆಗಳನ್ನು ಬರಿದು ಮಾಡಿಕೊಳ್ಳಲು ಶಕ್ಯವಿಲ್ಲ.

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ |
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ||20 ||
ಅರ್ಥ :- ಕೌಂತೇಯನೇ, ಹೀಗೆ ಅಸುರರ ಶರೀರದಲ್ಲಿ ಹುಟ್ಟಿದ ಇವರು ಪ್ರತಿಯೊಂದು ಜನ್ಮದಲ್ಲಿಯೂ ಇನ್ನೂ ಹೆಚ್ಚು ಹೆಚ್ಚು ಮೂಢರಾಗುತ್ತಾ ಹೋಗುತ್ತಾರೆ. ಮತ್ತು ಕೊನೆಯಲ್ಲಿ ಅಧೋಗತಿಗೆ ಬೀಳುತ್ತಾರೆ. ಹೀಗಾಗಿ ಅವರು ನನ್ನನ್ನು ಪಡೆಯಲಾರರು.
ಬಹುಮಂದಿ ಮನುಷ್ಯರಲ್ಲಿ ಆಸುರೀಗುಣಗಳೇ ಹೆಚ್ಚಾಗಿವೆ. ಇವನು ಈ ಗುಣಗಳ ಸೆಳೆತಕ್ಕೆ ಸಿಕ್ಕು ವರ್ತಿಸುವುದಾದರೆ ಕ್ರಮೇಣ ಅಧೋಗತಿಗಿಳಿಯುತ್ತಾರೆ. ಆದರೆ ಬುದ್ಧಿವಂತಿಕೆಯಾದ ತಮ್ಮ ಗುಣಗಳನ್ನು ತಿದ್ದಿಕೊಂಡು, ದೋಷಗಳನ್ನು ತೊಳೆದು ಹಾಕಿ ಸದ್ಗುಣಗಳನ್ನು ಮೈಗೂಡಿಸಿಕೊಂಡರೆ, ಮೇಲಕ್ಕೇರಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಬಹುದು. ಪ್ರತಿಯೊಬ್ಬರೂ ಈ ರೀತಿಯಾಗಿ ಪ್ರಯತ್ನಮಾಡಬೇಕೆಂದು, ಸಾಧನೆಗೆ ಅನುಕೂಲವಾದ ತಾತ್ವಿಕ ಉಪದೇಶವನ್ನು ಪ್ರತ್ಯಕ್ಷ ಆಚರಣೆಗೆ ಅವಶ್ಯಕವಾದ ವಿವರಗಳನ್ನು ಸಂಕ್ಷೇಪವಾಗಿ ಒಂದೇ ಶ್ಲೋಕದಲ್ಲಿ ಶ್ರೀಕೃಷ್ಣನು ಪುನಃ ಹೇಳಿದ್ದಾನೆ.

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ |
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ಪ್ರಯಂ ತ್ಯಜೇತ್ || 21 ||
ಅರ್ಥ :- ಕಾಮ, ಕ್ರೋಧ ಮತ್ತು ಲೋಭ ಇವು ಆತ್ಮನಾಶಕ್ಕೆ ಕಾರಣವಾಗುವ ಮತ್ತು ಆತ್ಮನನ್ನು ನರಕಕ್ಕೆ ನೂಕುವ ಮೂರು ಮಾರ್ಗಗಳು, ಆದುದರಿಂದ ಇವುಗಳಿಗೆ ಆಸ್ಪದ ಕೊಡದೆ ಅವುಗಳನ್ನು ಜಯಿಸಬೇಕು.
ನರಕವನ್ನು ಸೇರಲು ಇವು ಮೂರು ದ್ವಾರಗಳು. ಸ್ವರ್ಗ ಮತ್ತು ನರಕಗಳು ಮನಸ್ಸಿನ ಶಾಂತಿ ಅಥವಾ ಉದ್ರೇಕಗಳಿಂದ ಸೃಷ್ಟಿಯಾಗುತ್ತವೆ. ಕಾಮ, ಕ್ರೋಧ, ಮತ್ತು ಲೋಭಗಳಿಂದ ಉದ್ರೇಕವು ಪ್ರತಿ ಹೆಜ್ಜೆಗೂ ಹೆಚ್ಚಾಗುವುದರಿಂದ ಇವು ಜೀವನನ್ನು ನರಕಕ್ಕೆ ತೆಗೆದುಕೊಂಡು ಹೋಗಿ ಮುಟ್ಟಿಸುವ ಮಹಾದ್ವಾರಗಳೆಂದು ಹೇಳಲಾಗಿದೆ.
ಈ ಅಧ್ಯಾಯದಲ್ಲಿ ಪ್ರಾಮುಖ್ಯವಾಗಿ, ಇಂದ್ರಿಯ ವಿಷಯ ಸುಖಭೋಗಗಳಿಗೆ ಮನಸೋಲದೆ ಅವುಗಳನ್ನು ಜಯಿಸಬೇಕೆಂದೂ, ಅದರಿಂದ ಮಾತ್ರ ಮನಸ್ಸಿನ ಏಕಾಗ್ರತೆಯನ್ನು ತದನಂತರ ಆತ್ಮಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆಂದೂ, ತಿಳಿಸಲಾಗಿದೆ. ಸನ್ಮಾರ್ಗವನ್ನು ತೋರಿಸುವುದು. ಅದರ ಆಚರಣೆಗೆ ಸಹಾಯಕವಾಗುತ್ತದೆ ಇದೇ ರೀತಿಯಾಗಿ ತಪ್ಪು ದಾರಿಯನ್ನು ಬೊಟ್ಟು ಮಾಡಿ ತೋರಿಸಿ, ಆ ದಾರಿಯಲ್ಲಿ ಚಲಿಸುವುದರಿಂದ ಆಗುವ ಅನಾಹುತವನ್ನು, ಅಪಾಯವನ್ನೂ ಸೂಚಿಸುವುದು ಸಹ ಮುಂಜಾಗ್ರತೆಯ ದೃಷ್ಟಿಯಿಂದ ಸಾಧಕರಿಗೆ ತುಂಬಾ ಉಪಯುಕ್ತವಾಗಿದೆ. ತಪ್ಪು ಮಾರ್ಗಗಳಾವುವು ಎಂಬುದನ್ನು ತಿಳಿದುಕೊಂಡರೆ, ಸಾಧಕನು ತಾನು ಆ ಮಾರ್ಗದಲ್ಲಿ ಚಲಿಸುತ್ತಿರುವುದನ್ನು ಗಮನಿಸಿದಾಗ್ಯೂ, ಕೂಡಲೇ ಆ ದಾರಿಯಿಂದ ಹಿಂದಕ್ಕೆ ಸರಿದು ಸನ್ಮಾರ್ಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ಕಾಮ, ಕ್ರೋಧ, ಲೋಭ ಇವು ಜೀವನನ್ನು ನರಕಕ್ಕೆ ನೂಕುವುದು ಮೂರು ದ್ವಾರ ದವಾರಗಳೆಂದು ತಿಳಿಸಿ ಇದರ ಬಗ್ಗೆ ಎಚ್ಚರಿಕೆಯನ್ನೂ ಸೂಚನೆಯನ್ನೂ ಕೊಡಲಾಗಿದೆ.
ಇಂದ್ರಿಯ ಸುಖಗಳನ್ನು ಅಪೇಕ್ಷಿಸುವುದಕ್ಕೆ ಆಸೆ ಎಂದು ಹೆಸರು. ತನ್ನ ಆಸೆ ಹಾಗೂ ಆ ವಸ್ತು ಇವುಗಳ ಮಧ್ಯದಲ್ಲಿ ವಿಘ್ನವೊದಗಿದರೆ, ಆತಂಕವುಂಟಾದಂತೆ ಆಗ ಕ್ರೋಧವುಂಟಾಗುತ್ತದೆ. ಇದರಿಂದ ಮನಸ್ಸು ಉದ್ರೇಕವಾಗಿ, ವಿಕಾರವನ್ನು ಹೊಂದಿ, ಆ ವ್ಯಕ್ತಿಯು ಸಾರಾಸಾರ ವಿಚಾರಗೆಟ್ಟು ಹುಚ್ಚನಂತೆ ವರ್ತಿಸುತ್ತಾನೆ. ಪರಿಣಾಮವಾಗಿ ಆತನ ಪತನ ಪ್ರಾರಂಭವಾಗುತ್ತದೆ. ಕ್ರೋಧವು ಮನೋರಂಗದಲ್ಲೇಳುವ ಬಿರುಗಾಳಿಯಾಗಿದ್ದರೆ, ಲೋಭವು ಮನಸ್ಸಿನ ಶಾಂತಿಯನ್ನು ಕಲಕುವ ಒಳಗಿನಿಂದಲೇ ಸ್ಫೋಟಗೊಳ್ಳುವ ಮಹಾಶಕ್ತಿಯಾಗಿದೆ. ಒಮ್ಮೆ ಒಂದು ಆಸೆಯು ಪೂರೈಸಲ್ಪಟ್ಟರೆ ಸಾಕು, ಅದು ಆಸೆಗಳ ಅನೇಕಾನೇಕ ಕಳಿಕಗಳನ್ನೇ ತಳಿಕೆಗಳನ್ನೇ ತನ್ನ ಹಿಂದೆ ಎಳೆದುಕೊಂಡು ಬರುತ್ತದೆ. ಈ ಆಸೆಗಳನ್ನು ತೃಪ್ತಿಪಡಿಸುವುದು, ತೃಪ್ತಿಪಡಿಸಿ ಪೂರೈಸುವುದು ಸಾಧ್ಯವೇ ಇಲ್ಲ.

ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ |
ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್ || 22 ||
ಅರ್ಥ :- ಈ ಮೂರೂ ನರಕ ದ್ವಾರಗಳಿಂದ ಬಿಡುಗಡೆ ಹೊಂದಿದವನು, ಕೌಂತೇಯನೇ, ತನಗೆ ಶ್ರೇಯಸ್ಕರವಾದ ಮಾರ್ಗವನ್ನನುಸರಿಸಿದರೆ ನಂತರ ಉತ್ತಮ ಗತಿಯನ್ನು ಪಡೆಯುತ್ತಾನೆ.
ತನ್ನ ಜೀವನ ರಥವು ಈ ಮೂರು ಆಘಾತಗಳಿಂದ ಉರುಳದಂತೆ ಮನುಷ್ಯನು ಎಚ್ಚರಿಕೆಯಿಂದ ಕಾಯ್ದುಕೊಂಡರೆ, ಅವನು ಸನ್ಮಾರ್ಗದಲ್ಲಿ ಸುಖವಾಗಿ ಸಂಚಿರಿಸಿ, ತನ್ನ ಗುರಿಯನ್ನು ಮುಟ್ಟುತ್ತಾನೆ. ಸನ್ಮಾರ್ಗದಲ್ಲಿ ಪ್ರವರ್ತಿಸುವುದು ಎಷ್ಟು ಮುಖ್ಯವೋ, ಹಾಗೆಯೇ ಮಧ್ಯದಲ್ಲಿ ಎಚ್ಚರಗೇಡಿತನದಿಂದ ದಾರಿತಪ್ಪಿ ಅಡ್ಡದಾರಿಯಲ್ಲಿ ಹೋಗದಿರುವುದೂ ಅಷ್ಟೇ ಮುಖ್ಯ. ರಸ್ತೆಯಲ್ಲಿ ಆಕರ್ಷಕವಾದ ಕಾಮ, ಕ್ರೋಧ, ಲೋಭ, ಎಂಬ ಕವಲು ದಾರಿಗಳನ್ನು ಸಾಧಕನು ಗುರುತಿಸಿಕೊಂಡು, ಆ ದಾರಿಯಲ್ಲಿ ಹೋಗದಂತೆ ತುಂಬಾ ದಕ್ಷತೆಯನ್ನು ವಹಿಸುವುದು, ಅತೀವ ಅವಶ್ಯಕ. ಅಡ್ಡದಾರಿಯನ್ನು ಬಿಟ್ಟರೆ ಅವನು ಸರಿಯಾದ ದಾರಿಯಲ್ಲಿಯೇ ಹೋಗಬಹುದು. ಹೀಗೆ ಮಾಡಿದರೆ ಅವನು ಶ್ರೇಯಸ್ಸನ್ನು ಗಳಿಸುತ್ತಾನೆ. ಶ್ರೇಯಸ್ ಎಂದರೆ ವ್ಯಕ್ತಿಯ ಹಿತದ ಜೊತೆಗೆ ಅವನ ಸುತ್ತಮುತ್ತಲಿರುವವನರ ಹಿತವೂ ಐಕ್ಯವಾಗುತ್ತದೆ. ಸಾಧಕನು ಈ ಎರಡೂ ಕಾರ್ಯಗಳನ್ನು ಒಟ್ಟಾಗಿ ಸಾಧಿಸುತ್ತಾನೆ. ಆದರೆ ಸಿದ್ಧಿಯು ಅಷ್ಟು ಸುಲಭವಾಗಿ ಸಿಗತಕ್ಕದ್ದಲ್ಲ. ಹೂವಿನ ಮೊಗ್ಗು ಚನ್ನಾಗಿ ತುಂಬಿ ಬೆಳೆದು, ಬಿರಿಮೊಗ್ಗಾಗಿ, ಅರಳಿ, ವಿಕಸಿತವಾದ ನಂತರವೇ ಹೂವು ಎನಿಸಿಕೊಳ್ಳುತ್ತದೆ. ಇದೇ ರೀತಿ ಸಾಧಕನು ನಿಯಮಿತ ಜೀವನ, ಶಿಸ್ತು, ಶಾಸ್ತ್ರಾಭ್ಯಾಸ, ಜ್ಞಾನ, ಮತ್ತು ಅಭ್ಯಾಸ ಇವುಗಳ ಮೂಲಕ ಆತ್ಮಜ್ಞಾನವನ್ನು ಪಡೆಯುತ್ತಾನೆ. ತಪ್ಪುದಾರಿಯನ್ನು ಬಿಟ್ಟ ಮಾತ್ರಕ್ಕೆ ಸರಿಯಾದ ದಾರಿಯಲ್ಲಿ ಹೋಗುತ್ತಾನೆಂದೇನಲ್ಲ. ಸರಿಯಾದ ದಾರಿಯಲ್ಲಿ ಪ್ರಯತ್ನ ಪೂರ್ವಕವಾಗಿ ಸಾಗಿ ಮುಂದೆ ಚಲಿಸುವುದೂ ಅವಶ್ಯಕ. ರೋಗಿಯು ಆಹಾರವನ್ನು ತ್ಯಜಿಸಬೇಕೆಂದು ಹೇಳಿದರೆ ಅತಿಯಾಗಿ ಉಣ್ಣುವುದನ್ನು ತ್ಯಜಿಸಬೇಕೆಂದರ್ಥ. ಆದರೆ ಇಷ್ಟರಿಂದಲೇ ಸಂಪೂರ್ಣ ಆರೋಗ್ಯ ಲಭಿಸುವುದಿಲ್ಲ. ಜೊತೆಗೆ ಪೌಷ್ಠಿಕವಾದ ಆಹಾರವನ್ನು ವಿಧಿಗನುಸಾರವಾಗಿ ಸೇವಿಸುವುದು ಸಹ ಅವಶ್ಯಕವೆನಿಸುತ್ತದೆ.

ಯಃ ಶಾಸ್ತ್ರವಿಧಿಮುತ್ಸøಜ್ಯ ವರ್ತತೇ ಕಾಮಕಾರತಃ |
ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್ || 23 ||
ಅರ್ಥ :- ಯಾವನು ಶಾಸ್ತ್ರಗಳಲ್ಲಿ ಹೇಳಿರುವ ವಿಧಿನಿಯಮಗಳನ್ನು ಬಿಟ್ಟು ಅಥವಾ ನಿರ್ಲಕ್ಷಿಸಿ, ಕೇವಲ ಸ್ವಾರ್ಥಾಭಿಲಾಷೆಯಿಂದ ಕರ್ಮಗಳನ್ನು ಮಾಡುತ್ತಾನೋ ಅವನು ಸಿದ್ಧಿಯನ್ನು ಗಳಿಸುವುದಿಲ್ಲ, ಸುಖವನ್ನು ಗಳಿಸುವುದಿಲ್ಲ. ಅವರಿಗೆ ಉತ್ತಮ ಗತಿಯೂ ಸಿಗುವುದಿಲ್ಲ.
ಕಾಮ, ಕ್ರೋಧ, ಲೋಭಗಳನ್ನು ನಿಗ್ರಹಿಸುವುದರಿಂದ ಸಂಗ್ರಹಿತವಾದ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಬೇಕು. ಆದರೆ ಹಾಗೆ ಮಾಡದೆ, ಆ ಶಕ್ತಿಯ್ನು ದುರುಪಯೋಗ ಮಾಡಿದರೆ, ಸಾಧಕನು ತುಂಬಾ ದುಃಖಕ್ಕೀಡಾಗಬೇಕಾಗುತ್ತದೆ. ಪುರಾಣದಲ್ಲಿ ಪ್ರಸಿದ್ಧರಾದ ರಾವಣ ಕುಂಭಕರ್ಣ ಮೊದಲಾದ ಅಸುರರು ಕಠಿಣವಾದ ತಪಶ್ಚರ್ಯದಿಂದ ಅಪಾರವಾದ ಆಂತರಿಕ ಶಕ್ತಿಯನ್ನು ಸಂಪಾದಿಸಿದರು. ಆದರೆ ಅವರೆಲ್ಲರೂ, ತಮ್ಮ ಈ ಶಕ್ತಿಯನ್ನು ತಪ್ಪಾದ ಮಾರ್ಗದಲ್ಲಿ ಉಪಯೋಗಿಸಿದ್ದರಿಂದ, ತಾವು ನಾಶವಾಗುವುದರ ಜೊತೆಗೆ ತಮ್ಮ ಬಾಂಧವರು, ಮಿತ್ರರು, ಆಶ್ರಿತರು ಹಾಗೂ ಇಡೀ ಜನಾಂಗವೇ ಅಪಾರವಾದ ದುಃಖಕ್ಕೀಡಾಗುವಂತೆ ಮಾಡಿದರು. ಸಾಧಕನಾಗಲೀ, ಅವನ ಸುತ್ತ ಮುತ್ತಲಿರುವ ಜನತೆಯಾಗಲೀ, ಸಾಧಕನ ತಪ್ಪಿನಿಂದ ಇಂತಹ ಅಪಾಯಕ್ಕೀಡಾಗಬಾರದೆಂದು ಇಲ್ಲಿ ಮುನ್ನೆಚ್ಚರಿಕೆಯನ್ನು ಕೊಡಲಾಗಿದೆ.
ಸಾಧಕನು ಆತ್ಮಸಾಧನೆಯ ಮಾರ್ಗದಲ್ಲೇ ಆಗಲೀ, ಅಥವಾ ಇತರೆ ವಿಚಾರಗಳಲ್ಲೇ ಆಗಲೀ, ತನ್ನ ಸಾಧನೆಯನ್ನು ಮುಂದುವರಿಸುವಾಗ, ಆತನ ಮನಸ್ಸಿನಲ್ಲಿ; (1) ಇಂದ್ರಿಯ ಸುಖಗಳನ್ನು ಭೋಗಿಸುವುದಕ್ಕಾಗಿ ಕರ್ಮಗಳನ್ನು ಮಾಡುತ್ತಿದ್ದೇನೆಂಬ ಭಾವವಿರಬಾರದು. ಮನಸ್ಸಿನಲ್ಲಿ ಈ ಭಾವವಿದ್ದರೆ, ಸರ್ವ ವಿಧದಿಂದಲೂ ಇಂದ್ರಿಯ ಸುಖಗಳನ್ನನುಭವಿಸುವ ಪ್ರಯತ್ನವೇ ನಡೆಯುತ್ತದೆಯೇ ಹೊರತು, ಕರ್ಮದ ಪಾವಿತ್ರ್ಯತೆ ಇಲ್ಲವೇ ಕರ್ಮದ ದಕ್ಷತೆಯ ಕಡೆಗೆ ಸಾಕಷ್ಟು ಲಕ್ಷ್ಯವನ್ನು ಪೂರೈಸಲು ಆಗುವುದಿಲ್ಲ. (2) ಕರ್ಮದ ವಿವಿಧ ವಿವರಗಳನ್ನು ನಿರ್ಣಯಿಸುವಾಗ, ತನ್ನ ಮನಸ್ಸಿಗೆ ಬಂದಂತೆ ವರ್ತಿಸದೆ, ಆ ಕರ್ಮದ ಬಗ್ಗೆ ಶಾಸ್ತ್ರದಲ್ಲಿ ವಿಧಿಸಿದ, ಇಲ್ಲವೇ ಅನುಭವಿಗಳು ತೋರಿಸಿದ ಎಲ್ಲಾ ನಿಯಮಗಳನ್ನೂ ಪಾಲಿಸಬೇಕು. ಕೆಲವು ವಿಧಿ ನಿಯಮಗಳು ತನ್ನ ವಿಚಾರಕ್ಕೆ ಒಪ್ಪದಿದ್ದಾಗ್ಯೆ, ಒಂದೇ ಸಾರಿ ಅವುಗಳನ್ನು ತ್ಯಜಿಸದೆ, ಅವುಗಳನ್ನು ಪಾಲಿಸುತ್ತಾ ಅವುಗಳ ಬಗ್ಗೆ, ಮುಂದೆ ಸಮಾಧಾನ ಚಿತ್ತವಿರುವಾಗ ಸಹಾನುಭೂತಿಯಿಂದ ವಿಚಾರ ಮಾಡಬೇಕು. ನಸುಖಂ ನ ಪರಾಂಗತಿಮ್- ಶಾಸ್ತ್ರ ವಿಧಿಗಳನ್ನು ತ್ಯಜಿಸಿ, ತನ್ನ ಇಂದ್ರಿಯ ಸುಖಾಭಿಲಾಷೆಗಾಗಿಯೇ ಕರ್ಮವನ್ನು ಮಾಡುತ್ತಾ ಆಧ್ಯಾತ್ಮಿಕ ಸಾಧನೆಯನ್ನು ಮಾಡುವವನ ಪರಿಣಾಮವೇನಾಗುತ್ತದೆಂದು ಇಲ್ಲಿ ವರ್ಣಿಸಲಾಗಿದೆ. ಆಸೆಯಿಂದ ತುಂಬಿ, ಲೋಭಕ್ಕೊಳಗಾಗಿ, ಕ್ರೋಧದಿಂದ, ನುಚ್ಚು ನೂರುಮಾಡಲ್ಪಟ್ಟು, ಇಂದ್ರಿಯ ಸುಖಗಳ ಮಾಯಾಜಾಲದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಧಕನು, ಕ್ರೂರವಾದ ಕಾಮಗಳಿಂದ ಪೀಡಿತನಾಗಿ, ಮನಸ್ಸಿನಲ್ಲೇಳುವ ನಾನಾತರಹದ ಉದ್ವೇಗ, ನಿರಾಸೆ, ಆಶಾಭಂಗ ಇವುಗಳಿಂದ ಮನಃಶಾಂತಿಯನ್ನು ಕಳೆದುಕೊಂಡು ದುಃಖಕ್ಕೀಡಾಗುತ್ತಾನೆ. ಹೀಗಾಗಿ ಸುಖವು ಸಿಗುವುದಿಲ್ಲ. ಅವನ ಸಾಧನೆಯು ಫಲಿಸದೆ ಇರುವುದರಿಂದ ಸದ್ಗತಿಯೂ ಇಲ್ಲ.
ಹಾಗಾದರೆ ಏನು ಮಾಡಬೇಕು.
ತಸ್ಮಾಚ್ಛಾಸ್ತ್ರಂ ಪ್ರಮಾಣಂತೇ ಕಾರ್ಯಕಾರ್ಯವ್ಯವಸ್ಥಿತೌ |
ಜ್ಞಾತ್ವಾಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ || 24 ||
ಅರ್ಥ :- ಆದುದರಿಂದ ಯಾವ ಕರ್ಮವನ್ನು ಮಾಡಬೇಕು, ಯಾವ ಕರ್ಮವನ್ನೂ ಮಾಡಬಾರದು ಎಂದು ತೀರ್ಮಾನ ಮಾಡುವುದಕ್ಕೆ ಶಾಸ್ತ್ರವು ಆಧಾರವಗಿರಲಿ ಧರ್ಮಶಾಸ್ತ್ರದಲ್ಲಿ ಹೇಳಿದ ವಿಧಿಗಳಿಗೆ ಅನುಸಾರವಾಗಿ ಕರ್ಮ ಮಾಡು.
ಧರ್ಮಮಾರ್ಗದಲ್ಲಿ ಚಲಿಸುವಾಗ ಯಾವ ಕಾರ್ಯವನ್ನೂ ಮಾಡಬೇಕು, ಮತ್ತು ಯಾವುದನ್ನು ತ್ಯಜಿಸಬೇಕು ಎಂಬುದನ್ನು ವ್ಯಕ್ತಿಯು ನೇರವಾಗಿ, ತನ್ನ ಸುಖದ ದೃಷ್ಟಿಯಿಂದ (ಇಂದ್ರಿಯ ಸುಖ) ನಿಶ್ಚಯಿಸಬಾರದು. ಋಷಿ ಪ್ರಣೀತವಾದ ಶಾಸ್ತ್ರ ಗ್ರಂಥಗಳಲ್ಲಿ ಆ ಬಗ್ಗೆ ಏನು ಹೇಳಲಾಗಿದೆಯೋ, ಅದರಂತೆ ವರ್ತಿಸಬೇಕು. ಋಷಿಗಳು ಈ ಮಾರ್ಗದಲ್ಲಿ ಸಾಧನೆಯನ್ನು ಮಾಡಿ, ಅನುಭವವನ್ನು ಪಡೆದು, ನಮಗೆ ಸುಲಭ ಹಾಗೂ ಸುಗಮ ಎಂದು ಕಂಡ ಮಾರ್ಗವನ್ನು ನಮಗಾಗಿ ದಯಪಾಲಿಸಿದ್ದಾರೆ. ಅವರ ಅನುಭವದ ಲಾಭವನ್ನು ನಾವು ಪಡೆದರೆ ನಾವೂ ಸಹ ಸುಲಭವಾಗಿ ಇಷ್ಟಾರ್ಥವನ್ನು ಪಡೆಯಬಹುದು. ಆದುದರಿಂದ ಕರ್ಮನಿರ್ಣಯಕ್ಕೆ ಶಾಸ್ತ್ರವೇ ಆಧಾರವಾಗಿರಬೇಕು. ಸಾಧಕನು ಈ ಶಾಸ್ತ್ರಗಳನ್ನು ಓದಿ ವಿವರಗಳನ್ನು ತಿಳಿದುಕೊಳ್ಳ ಬೇಕು. ಕರ್ತುಮಹಾರ್ಹಸಿ- ಶಾಸ್ತ್ರಗಳಲ್ಲಿ ಹೇಳಿದ ವಿವರಗಳನ್ನು ಕೇವಲ ತಿಳಿದುಕೊಂಡರಷ್ಟೇ ಸಾಲದು. ಅನೇಕ ಸಾಧಕರಿಗೆ ಈ ಎಲ್ಲಾ ವಿವರಗಳೂ ಗೊತ್ತಿವೆ. ಆದರೆ ಅವರು ಯಾವುದಾದರೂ ಇಂದ್ರಿಯಗಳ ಆಸೆಗೆ, ಸ್ವಾರ್ಥಕ್ಕೆ ಬಲಿಬಿದ್ದು, ಶಾಸ್ತ್ರವಿಧಿಗಳನ್ನು ಪಾಲಿಸದೆ, ತಮ್ಮ ಮನಸ್ಸಿಗೆ ಬಂದಂತೆ ಆಚರಿಸುತ್ತಾ, ತಮ್ಮ ಬುದ್ಧಿವಂತಿಕೆಯಿಂದ ತಾವು ಮಾಡಿದುದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇಂತಹವರಿಗಾಗಿ ಈ ಎಚ್ಚರಿಕೆಯನ್ನು ಹೇಳಲಾಗಿದೆ. ನಿರ್ಣಯ ಕೈಗೊಳ್ಳುವಾಗ, ತನ್ನ ವೈಯಕ್ತಿಕ ಸುಖದ ಕಡೆಗೆ ಗಮನವನ್ನು ಕೊಡದೆ, ಶಾಸ್ತ್ರಗಳಲ್ಲಿ ಏನು ಹೇಳಿದೆ, ಎಂಬುದನ್ನು ಓದಿ ಸ್ಪಷ್ಟವಾಗಿ ತಿಳಿದುಕೊಂಡು, ಅದನ್ನು ಆಚರಣೆಯಲ್ಲಿ ತರಬೇಕು ಎಂದು ಶ್ರೀ ಕೃಷ್ಣನು ಒತ್ತಿ ಹೇಳಿದ್ದಾನೆ. ಈ ಕಡೆಯ ಶಬ್ದಕ್ಕೆ ತುಂಬಾ ಪ್ರಾಮುಖ್ಯತೆ ಇದೆ.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ದೈವಾಸುರಸಂಪದ್ವಿಭಾಗ ಯೋಗೋನಾಮ…
ಷೋಡಶೋ„ಧ್ಯಾಯಃ
*******