S O U L B L I S S

Loading

Bhagavad Gita – Vinayak Rao Bapat – Chapter 4

ನಾಲ್ಕನೆಯ ಅಧ್ಯಾಯ
ಜ್ಞಾನಕರ್ಮಸನ್ಯಾಸಯೋಗ
ಪೀಠಿಕೆ
ಮೂರನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ
ಕರ್ಮಯೋಗ ರಹಸ್ಯವನ್ನುಪದೇಶಿಸಿ ಅದನ್ನು ಸಾಧಿಸುವ ವಿವರವನ್ನು ಸಹ ತಿಳಿಸಿದನು. ಹೀಗೆ ಮನುಷ್ಯನು ತನ್ನ ವ್ಯಾವಹಾರಿಕ ಕರ್ಮಗಳನ್ನು ದಕ್ಷತೆಯಿಂದ ಮಾಡಿ ತನ್ಮೂಲಕ ವಾಸನೆಗಳನ್ನು ಬರಿದು ಮಾಡಿಕೊಂಡು, ತಾನು ನಿರ್ಲಿಪ್ತನಾಗಿರುವ ಕಲೆಯನ್ನು ಬೋಧಿಸಲಾಯಿತು. ಅಂತೆಯೇ ಕರ್ಮದಲ್ಲಿ ಬಂಧನಕ್ಕೆ ಕಾರಣವಾವುದು ಎಂಬುದನ್ನು ಎತ್ತಿ ತೋರಿಸಿ ಬಂಧನಕ್ಕೆ ಸಿಲುಕದಂತೆ ಕರ್ಮಗಳನ್ನು ಮಾಡಿದರೆ ಆತ್ಮಜ್ಞಾನ ಸುಗಮವಾಗುವುದು ಎಂಬುದನ್ನು ಸಹ ತೋರಿಸಲಾಯಿತು.
ಆದರೆ ಅರ್ಜುನನಿಗೆ ಆತನು ಬೆಳೆದ ವಾತಾವರಣ ಹಾಗೂ ಸಂಸ್ಕೃತಿಯಿಂದಾಗಿ ಇದರಲ್ಲಿ ವಿಶ್ವಾಸ ಹುಟ್ಟಲಿಲ್ಲವೆಂಬುದನ್ನು ಊಹಿಸಿ ಅವನಿಗೆ ವೇದೋಕ್ತ ಕರ್ಮಮಾರ್ಗದಲ್ಲಿ ನಂಬಿಕೆಯಿದ್ದುದರಿಂದ ಈ ಕರ್ಮಯೋಗವು ಸಹ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ ಎಂದೂ ಅದನ್ನು ತಾನೇನೂ ಕಲ್ಪನೆ ಮಾಡಿ ಊಹಿಸಿ ಹೇಳಿದ್ದಲ್ಲವೆಂದೂ ಹಿಂದಿನದನ್ನೇ ಒಪ್ಪಹಾಕಿ ಮೆರುಗುಕೊಟ್ಟು ಹೊಸರೀತಿಯಲ್ಲಿ ಹೇಳಲಾಗಿದೆ ಎಂದೂ ಈ ಮಾರ್ಗವು ಧರ್ಮ ಸಮ್ಮತವಾದುದೆಂದೂ ತಿಳಿಸಲಾಯಿತು.
ಪರಮಾತ್ಮನ ಎಡೆಗೆ ಹೋಗಲು ಅನೇಕ ಮಾರ್ಗಗಳಿದ್ದಾಗ್ಯೂ ಎಲ್ಲಾ ಮಾರ್ಗಗಳು ಒಟ್ಟಾಗಿ ಒಂದು ಕಡೆ ಸೇರಿ ಕೊನೆಯಲ್ಲಿ ಎಲ್ಲರೂ ಆ ಒಂದು ಮಾರ್ಗದಲ್ಲಿ ಸಂಚರಿಸಿ ಪರಮಾತ್ಮನ ದರ್ಶನವನ್ನು ಪಡೆಯುವುದರಿಂದ ಆ ಮಾರ್ಗವಾವುದು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಆತ್ಮಜ್ಞಾನವಾಗದ ಹೊರತು ಪರಮಾತ್ಮನನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲದ್ದರಿಂದ ಈ ಜ್ಞಾನವನ್ನು ಬೋಧಿಸುವ ಅಧ್ಯಾಯಕ್ಕೆ ‘ಜ್ಞಾನಯೋಗ’ ಎಂದು ಕೆಲವರು ಕರೆಯುತ್ತಾರೆ. ಮನುಷ್ಯನು ಕರ್ಮಯೋಗದ ಆಚರಣೆಯ ಮೂಲಕ ತನ್ನ ಮನಸ್ಸು ಬುದ್ಧಿಗಳನ್ನು ತಿದ್ದಿಕೊಂಡು ಸಜ್ಜುಗೊಳಿಸಿದರೆ ಮಾತ್ರ ಧ್ಯಾನಮಗ್ನನಾಗಿ ಈ ಜ್ಞಾನವನ್ನು ತಡೆಯಲು ಸಾಧ್ಯವಾಗುತ್ತದೆ.
ಅರ್ಜುನನಲ್ಲಿ ವಿಶ್ವಾಸವನ್ನೂ ಶ್ರದ್ಧೆಯನ್ನೂ ಹೆಚ್ಚಿಸುವುದಕ್ಕಾಗಿ ಶ್ರೀಕೃಷ್ಣನು ತಾನು ಅರ್ಜುನನ ಮಿತ್ರ, ಸಾರಥಿ ಎಂಬುದನ್ನು ಅರೆತು ಮೇಲ್ಮಟ್ಟದಲ್ಲಿ ನಿಂತುಕೊಂಡು, ತಾನು ಶುದ್ಧ ಪರಮಾತ್ಮ ಎಂಬ ಜ್ಞಾನದಲ್ಲಿ ನೆಲೆಸಿ ಇದುವರೆಗಿನ ಬೋಧವನ್ನು ಮಾಡಿದ್ದಾನೆ. ಈ ಅಧ್ಯಾಯದಲ್ಲಿ ಸಹ ಉಪದೇಶವನ್ನು ಇದೇ ಭಾವದಿಂದ ಮುಂದುವರಿಸಿದ್ದಾನೆ.

ನಾಲ್ಕನೇ ಅಧ್ಯಾಯ
ಜ್ಞಾನಕರ್ಮಸಂನ್ಯಾಸಯೋಗ
ಭಗವಾನುವಾಚ
ಇಮಂ ವಿವಸ್ವತೇ ಯೋಗಂ ಪೆÇ್ರೀಕ್ತವಾನಹಮವ್ಯಯಮ್ |
ವಿವಸ್ವಾನ್ಮನವೇ ಪ್ರಾಹ ಮನುರಿಕ್ಪ್ವಾಕವೇ„ಬ್ರವೀತ್ || 1 ||
ಅರ್ಥ : ಈ ಶಾಶ್ವತವಾದ ಯೋಗವನ್ನು ನಾನು ಮೊಟ್ಟಮೊದಲು ಸೂರ್ಯನಿಗೆ ಉಪದೇಶ ಮಾಡಿದೆನು. ಸೂರ್ಯನು ಮನುವಿಗೂ, ಮನುವು ಇಕ್ಷ್ವಾಕುವಿಗೂ ಉಪದೇಶ ಮಾಡಿದರು.
ವೇದವನ್ನು ತಾನೇ ಸೃಷ್ಟಿಸಿದವನೆಂದೂ, ಕರ್ಮಯೋಗವನ್ನು ತಾನೇ ಈ ಹಿಂದೆ ಸೂರ್ಯನಿಗೆ ಉಪದೇಶ ಮಾಡಿದೆನೆಂದೂ, ಆದುದರಿಂದಲೇ ಇದು ಹೊಸತಲ್ಲವೆಂದೂ ವೇದದಲ್ಲಿರುವುದನ್ನೇ ಪುನಃ ಹೇಳಿದ್ದೇನೆಂದೂ ಶ್ರೀಕೃಷ್ಣನು ತಾನು ಪರಮಾತ್ಮನು ಎಂಬ ಜ್ಞಾನಮಟ್ಟದಿಂದ ಹೇಳಿದ್ದಾನೆ.
ವೇದವು ಅವ್ಯಯವಾದುದು ಪುರಾತನವಾದುದು, ಪರಮಾತ್ಮನ ಮುಖದಿಂದ ಹೊರಬಿದ್ದುದು ಎಂದರೆ ಅನೇಕ ಆಧುನಿಕ ಶಿಕ್ಷಿತರು ಮುಖ ಮುರಿಯುತ್ತಾರೆ. ‘ವೇದ’ ಎಂದರೆ ಓಲೆಗರಿಯಲ್ಲಿ ಬರೆದ ಗ್ರಂಥಗಳು. ಅವು ನಾಶವಾಗತಕ್ಕವುಗಳು ಇದು ಹೇಗೆ ಅವ್ಯಯವಾದೀತು ಎಂಬುದು ಅವರ ಕಲ್ಪನೆ. ವೇದ ಎಂದರೆ ಕೇವಲ ಓಲಗರಿ ಗ್ರಂಥವಲ್ಲ ಅದರಲ್ಲಿ ತಿಳಿಸಿದ ಜ್ಞಾನಕ್ಕೆ ವೇದ ಎಂದು ಹೆಸರು ಈ ಜ್ಞಾನವನ್ನು ನಾವು ತಿಳಿದುಕೊಳ್ಳಲಿ ಅಥವಾ ತಿಳಿದುಕೊಳ್ಳದಿರಲಿ ಜ್ಞಾನವು ಮಾತ್ರ ಅಖಂಡವಾಗಿ ಯಾವಾಗಲೂ ಇರುತ್ತದೆ ಅದು ನಾಶವಾಗುವುದಿಲ್ಲ.
ಈ ಶ್ಲೋಕದಲ್ಲಿ ಇನ್ನೊಂದು ಹೊಸ ಸೂಚನೆ ಇದೆ. ಭೂಮಿಯಲ್ಲಿ ಈ ಯೋಗವನ್ನು ಮೊಟ್ಟಮೊದಲು ಮನು, ಇಕ್ಷ್ವಾಕು ಮೊದಲಾದ ರಾಜರಿಗೆ ಬೋಧಿಸಲಾಯಿತು. ಅವರು ಇತರೆ ಶಿಷ್ಯರಿಗೆ ಬೋಧಿಸಿದರು. ನೈತಿಕ ಹಾಗೂ ಧಾರ್ಮಿಕ ನಿಯಮಗಳನ್ನು ಸ್ವತಃ ಆಚರಣೆಗೆ ತಂದು ಅದರಂತೆ ಜೀವನವನ್ನು ನಡೆಸಿದರೆ ಮಾತ್ರ ಇತರೆ ಅನುಯಾಯಿಗಳು ಅವುಗಳನ್ನು ಪಾಲಿಸುತ್ತಾರೆ. ಕೇವಲ ಉಪದೇಶದಿಂದ ಅಥವಾ ಕಾನೂನಿನಿಂದ ಈ ಕೆಲಸವಾಗುವುದಿಲ್ಲ. ಈ ಕರ್ಮಯೋಗವನ್ನು ಸಹ ಸೂರ್ಯ, ಮನು, ಇಕ್ಷ್ವಾಕು ಮೊದಲಾದವರು ತಮ್ಮ ಜೀವನದಲ್ಲಿ ಸ್ವತಃ ಆಚರಣೆಯಲ್ಲಿ ತಂದು ಸತ್ಯಾಂಶವನ್ನು ಮನಗಂಡು, ನಂತರ ಇತರೆಯವರಿಗೆ ಬೋಧಿಸಿದ್ದಾರೆ. ಸೂರ್ಯನು ಶ್ರೇಷ್ಠ ಕರ್ಮಯೋಗಿಯು ಅವನು ತನ್ನ ಕರ್ಮವನ್ನು ತಪ್ಪದೆ ಇವತ್ತಿನವರೆಗೂ ಮಾಡುತ್ತಲೇ ಇದ್ದಾನೆ.

ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ |
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ || 2 ||
ಅರ್ಥ : ಈ ರೀತಿಯಾಗಿ ತಲತಲಾಂತರದಿಂದ ಪ್ರಾಪ್ತವಾದ ಈ ಯೋಗವನ್ನು ರಾಜರ್ಷಿಗಳು ತಿಳಿದುಕೊಂಡು ಆಚರಿಸಿದರು. ಎಲೈ ಪರಂತಪನೆ! ದೀರ್ಘಕಾಲವು ಗತಿಸಿ ಹೋಗಿರುವುದರಿಂದ ಅದು ನಷ್ಟವಾಗಿದೆ.
ಈ ಯೋಗವು ಮುಂದೆ ಅಶಕ್ತರ ಕೈಗೆ ಸಿಕ್ಕು ಅವರು ಆಚರಣೆಗೆ ತರದೆ ನಷ್ಟವಾಗಿರುವುದರಿಂದ, ಅದನ್ನೇ ಈಗ ಪುನಃ ಅರ್ಜುನನಿಗೆ ಬೋಧಿಸಲಾಗುತ್ತದೆ.

ಸ ಏವಾಯಂ ಮಯಾ ತೇ„ದ್ಯ ಯೋಗಃ ಪೆÇ್ರೀಕ್ತಃ ಪುರಾತನಃ |
ಭಕ್ತೋ„ಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ || 3 ||
ಅರ್ಥ : ನಾನು ಹಿಂದೆ ಉಪದೇಶ ಮಾಡಿದ ಅದೇ ಯೋಗವನ್ನೇ ಈಗ ನಿನಗೆ ಹೇಳಿದ್ದೇನೆ. ಏಕೆಂದರೆ ನೀನು ನನ್ನ ಭಕ್ತನೂ, ಸಖನೂ ಆಗಿದ್ದೀಯೆ. ಇದು ಶ್ರೇಷ್ಠವಾದ ರಹಸ್ಯವಾಗಿದೆ.
ಅಧ್ಯಾಯದ ಪ್ರಾರಂಭದ ಶ್ಲೋಕದಲ್ಲಿ ಕರ್ಮಯೋಗವು ಹೊಸತೇನೂ ಅಲ್ಲವೆಂದೂ, ಹಿಂದೆ ವೇದದಲ್ಲಿ ಹೇಳಲ್ಪಟ್ಟಿದ್ದೇ ಆಗಿದೆ ಎಂದೂ ಸ್ಪಷ್ಟಪಡಿಸಿ ಇ’ದು ಹೊಸತು’ ಎಂದು ಮೂಗುಮುರಿಯುವವರಿಗೆ ಸ್ಪಷ್ಟ ಉತ್ತರವನ್ನು ಹೇಳಲಾಗಿದೆ.
ಗುರುವು ಶಿಷ್ಯನಿಗೆ ಉಪದೇಶ ಮಾಡುವಾಗ ಅವರಿಬ್ಬರ ಮಾನಸಿಕ ಪರಿಸ್ಥಿತಿ ಹೇಗಿರಬೇಕು ಇಲ್ಲಿ ತಿಳಿಸಲಾಗಿದೆ. ಗುರುವಿಗೆ ಶಿಷ್ಯನಲ್ಲಿ ಆತ್ಮೀಯತೆಯೂ, ಪ್ರೇಮವೂ, ಅನುಕಂಪವೂ ಜ್ಞಾನವನ್ನು ಬೋಧಿಸಬೇಕೆಂಬ ಆಸಕ್ತಿಯೂ ಇರಬೇಕು. ಶಿಷ್ಯನಿಗೆ ಗುರುವಿನಲ್ಲಿ ಶ್ರದ್ಧೆಯೂ, ಭಕ್ತಿಯೂ ಇರುವುದರ ಜೊತೆಗೆ ಅವನು ಗುರುವಿಗೆ ಶರಣಾಗತವಾಗಿರಬೇಕು. ಕೊಡುವವನ ಮತ್ತು ಸ್ವೀಕರಿಸುವವನ ಮಾನಸಿಕ ಮಟ್ಟವು ಒಂದೇ ರೀತಿಯ ವಾತಾವರಣದಲ್ಲಿರುವ ಸುಸಂದರ್ಭದಲ್ಲಿ ಮಾಡಿದ ಉಪದೇಶವು ಮಾತ್ರ ಪರಿಣಾಮಕರವಾಗುತ್ತದೆ.
ಅರ್ಜುನ ಉವಾಚ
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ |
ಕಥಮೇತದ್ವಿಜಾನೀಯಾಂ ತ್ವಮಾದೌ ಪೆÇ್ರೀಕ್ತವಾನಿತಿ || 4 ||
ಅರ್ಥ : ಸೂರ್ಯನು ಮೊದಲು ಹುಟ್ಟಿದವನು. ನೀನು ಅನಂತರ ಹುಟ್ಟಿದವನು. ಆದುದರಿಂದ ನೀನು ಹಿಂದೆ ಸೂರ್ಯನಿಗೆ ಈ ತತ್ವವನ್ನು ಉಪದೇಶ ಮಾಡಿದ್ದೆ ಎಂದು ನಾನು ಹೇಗೆ ತಾನೆ ತಿಳಿಯಲಿ ?
ಶ್ರೀ ಭಗವಾನುವಾಚ
ಬಹೂನಿ ಮೇ ವೃತೀತಾನಿ ಜನ್ಮಾನಿ ತವ ಚಾರ್ಜುನ |
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ || 5 ||
ಅರ್ಥ : ನನಗೆ ಹಾಗೂ ನಿನಗೆ ಈ ಹಿಂದೆ ಅನೇಕ ಜನ್ಮಗಳುಂಟಾಗಿವೆ. ನಾನು ಹಿಂದಿನ ಜನ್ಮಗಳಲ್ಲಿ ಏನೇನು ಮಾಡಿದ್ದೇನೆಂಬ ನೆನಪು ನನಗಿದೆ. ಆದರೆ ನಿನಗೆ ಮಾತ್ರ ಆ ನೆನಪಿಲ್ಲ.

 

ಅಜೋ„ಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋ„ಪಿ ಸನ್ |
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಮಾ || 6 ||
ಅರ್ಥ : ನಾನು ಜನ್ಮರಹಿತನೂ, ನಾಶರಹಿತನೂ ಮತ್ತು ಎಲ್ಲಾ ಪ್ರಾಣಿಗಳಿಗೆ ಒಡೆಯನೂ ಆಗಿದ್ದಾಗ್ಯೂ, ಪ್ರಕೃತಿಯನ್ನು ನನ್ನ ಅಧೀನದಲ್ಲಿಟ್ಟುಕೊಂಡು ನನ್ನ ಮಾಯೆಯಿಂದ ಜನ್ಮವನ್ನು ತಾಳುತ್ತೇನೆ.
ಪರಮಾತ್ಮನು ಸರ್ವತಂತ್ರ ಸ್ವತಂತ್ರನಾಗಿದ್ದಾಗ್ಯೂ ತಾನು ಇಷ್ಟಪಟ್ಟಾಗ್ಯೆ, ಜನರ ಅಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ ಅಜ್ಞಾನದಿಂದ ಆವೃತನಾದ ಮನುಷ್ಯನ ರೂಪವನ್ನು ಧರಿಸಿ ಜನ್ಮಕ್ಕೆ ಬರುತ್ತಾನೆ. ಆದಾಗ್ಯೂ ಅವನಿಗೆ ಅಜ್ಞಾನದ ಬಂಧನವಿಲ್ಲ. ಮೋಟಾರು ಕಾರಿನ ಚಾಲಕನು ಅದಕ್ಕೆ ಬಂಧಿತನಾಗಿ ಮೋಟಾರನ್ನು ನಡೆಸುತ್ತಾನೆ. ಆದರೆ ಅದರ ಮಾಲಿಕನು ಅದಕ್ಕೆ ಬಂಧಿತನಾಗದೆ ಅದರಲ್ಲಿ ಕುಳಿತುಕೊಂಡು ಇಷ್ಟಪಟ್ಟ ಸ್ಥಳಕ್ಕೆ ಹೋಗಿ, ಅದನ್ನು ಅಲ್ಲಿಯೇ ಬಿಟ್ಟು ನಿಶ್ಚಿಂತೆಯಿಂದ ತನ್ನ ಕೆಲಸವನ್ನು ಮುಗಿಸಿಕೊಂಡು ಬಂದು ಪುನಃ ಮೋಟಾರಿನಲ್ಲಿ ಬೇಕಾದಲ್ಲಿಗೆ ಹೋಗುತ್ತಾನೆ. ಮೋಟಾರನ್ನು ಕಾಯುವ ಜವಾಬ್ದಾರಿಯು ಚಾಲಕನದ್ದೇ ಹೊರತು ಯಜಮಾನನದ್ದಲ್ಲ. ಇದರಂತೆಯೇ ಪರಮಾತ್ಮನು ಶುದ್ಧ ಜ್ಞಾನವುಳ್ಳವನಾಗಿ ಮೋಟಾರಿನ ಮಾಲೀಕನಂತೆ ಶರೀರದಲ್ಲಿ ವ್ಯವಹರಿಸುತ್ತಾನೆ. ಪ್ರತಿಯೊಬ್ಬ ಜೀವನೂ ಶುದ್ಧ ಪರಮಾತ್ಮನೇ ಆಗಿದ್ದಾಗ್ಯೂ ಅವನಿಗೆ ಈ ಜ್ಞಾನವಿಲ್ಲದುದರಿಂದಲೂ ಅಜ್ಞಾನದಿಂದ ಆವೃತನಾಗಿರುವುದರಿಂದಲೂ ಅವನು ಮೋಟಾರಿನ ಚಾಲಕನಂತೆ ಈ ಶರೀರಕ್ಕೆ ಬಂಧಿತನಾಗಿದ್ದಾನೆ.

ಪರಮಾತ್ಮನು ಯಾವಾಗ ಮತ್ತು ಏಕೆ ಅವತಾರ ಮಾಡುತ್ತಾನೆ ?

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || 7 ||
ಅರ್ಥ : ಯಾವ ಯಾವ ಕಾಲದಲ್ಲಿ ಭಾರತನೇ! ಧರ್ಮವು ನಷ್ಟವಾಗಿ ಅಧರ್ಮವು ಪ್ರಬಲವಾಗುತ್ತದೆಯೋ ಆಗ ನಾನು ಅವತಾರ ಮಾಡುತ್ತೇನೆ.
ಹೀಗೆ ಅವತರಿಸುವ ಕಾರ್ಯವೇನು ?

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || 8 ||
ಅರ್ಥ : ಸಾಧುಗಳನ್ನು ರಕ್ಷಿಸುವುದಕೂ ದುರ್ಜನರನ್ನು ನಾಶಮಾಡುವುದಕ್ಕೂ ಮತ್ತು ಪುನಃ ಧರ್ಮಸಂಸ್ಥಾಪನೆ ಮಾಡುವುದಕ್ಕೂ ನಾನು ಪ್ರತಿಯೊಂದು ಯುಗದಲ್ಲಿಯೂ ಅವತಾರ ಮಾಡುತ್ತೇನೆ.
ಅವತಾರ ರಹಸ್ಯವನ್ನು ತಿಳಿಯುವುದಕ್ಕೆ ಫಲವೇನು ?

ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ |
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋ„ರ್ಜುನ || 9 ||
ಅರ್ಥ : ನಾನು ಜನ್ಮವನ್ನು ತಾಳುವ ಮತ್ತು ಆ ಕಾಲದಲ್ಲಿ ಆಚರಿಸುವ ಕರ್ಮಗಳ ತಾತ್ವಿಕ ಹಿನ್ನಲೆಯನ್ನು ಯಾರು ಸರಿಯಾಗಿ ತಿಳಿದುಕೊಳ್ಳುತ್ತಾರೋ, ಅವರು ಈ ದೇಹವನ್ನು ಬಿಟ್ಟ ನಂತರ ಪುನಃ ಹುಟ್ಟುವುದಿಲ್ಲ. ಅರ್ಜುನ, ಅವರು ನನ್ನಲ್ಲೇ ಐಕ್ಯರಾಗುತ್ತಾರೆ.
ಪರಮಾತ್ಮನು ಅವತಾರ ಮಾಡಿದಾಗ್ಯೂ ಸಾಮಾನ್ಯ ಮನುಷ್ಯನಂತೆ ಅಜ್ಞಾನದಿಂದ ಆವ್ರತನಾಗಿ ಅಹಂಕಾರದಿಂದ ಕೂಡಿರದೆ ಸರ್ವಕಾಲದಲ್ಲಿಯೂ ತಾನು ಶುದ್ಧ ಪರಮಾತ್ಮ’ ಎಂಬ ಅರಿವಿನಿಂದ ಇರುತ್ತಾನೆ. ಆದುದರಿಂದ ಇಂತಹ ಅವತಾರೀ ಪುರುಷರ ಸಗುಣೋಪಾಸನೆಯಿಂದ ಸಹ ಮನುಷ್ಯನು ಜ್ಞಾನವನ್ನು ಪಡೆದು ಜನನ ಮರಣದಿಂದ ಮುಕ್ತನಾಗುತ್ತಾನೆ ಎಂದು ಪರ್ಯಾಯವಾಗಿ ಹೇಳಲಾಗಿದೆ.

ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ |
ಬಹುವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ || 10 ||
ಅರ್ಥ : ಆಸಕ್ತಿ ಭಯ ಮತ್ತು ಕೋಪಗಳನ್ನು ಬಿಟ್ಟು ನನ್ನ ಧ್ಯಾನದಲ್ಲೇ ನಿರತನಾಗಿ ನನ್ನನ್ನೇ ಆಶ್ರಯಿಸಿ ನನ್ನ ಉಪಾಸನೆಯನ್ನು ಮಾಡಿದ ಅನೇಕ ಸಾಧಕರು ಜ್ಞಾನಾಗ್ನಿಯಿಂದ ಶುದ್ಧರಾಗಿ ನನ್ನನ್ನೇ ಸೇರಿರುತ್ತಾರೆ.
ಆ ಶ್ಲೋಕದಲ್ಲಿ ಸಾಧನೆಯಿಂದ ಆತ್ಮಜ್ಞಾನವನ್ನು ಪಡೆಯುವ ಮಾರ್ಗವನ್ನು ಹೇಳಲಾಗಿದೆ. ಆಸೆ ಕೋಪ ಮತ್ತು ಭಯಗಳನ್ನು ಜಯಿಸಬೇಕು, ನಿಗ್ರಹಿಸಬೇಕು, ಎಂಬ ಉಪದೇಶದಿಂದ ಶರೀರದ ಮುಖಾಂತರ ಮನೋನಿಗ್ರಹವನ್ನು ಸಾಧಿಸಬೇಕೆಂಬ ಕರ್ಮಯೋಗವನ್ನೂ, ನನ್ನಲ್ಲಿಯೇ ನಿರತನಾಗಿ ನನ್ನನ್ನೇ ಆಶ್ರಯಿಸು ಎಂಬ ಉಪದೇಶದಲ್ಲಿ ಭಾವಿಕರಾದವರಿಗೆ ಭಕ್ತಿ ಮಾರ್ಗವನ್ನೂ ಬುದ್ಧಿ ಮತ್ತು ವಿವೇಕದಿಂದ ಮನಸ್ಸನ್ನು ನಿಗ್ರಹಿಸಿ ‘ನಾನೇ ಶುದ್ಧಪರಮಾತ್ಮನು’ ಎಂಬ ಜ್ಞಾನವನ್ನು ಪಡೆಯಬೇಕೆಂಬ (ಜ್ಞಾನತಪಸಾ) ಉಪದೇಶದಲ್ಲಿ ಬುದ್ಧಿಜೀವಿಗಳಿಗೆ ಜ್ಞಾನಮಾರ್ಗವನ್ನೂ ಉಪದೇಶಿಸಲಾಗಿದೆ. ಈ ಮೂರೂ ದಾರಿಗಳ ಪೈಕಿ ಯಾವ ಮಾರ್ಗದಿಂದ ಸಾಧನೆಯನ್ನು ಮಾಡಿದರೂ ತಲುಪುವ ಗುರಿಯು ಒಂದೇ ಆಗಿದೆ.

ಯೇ ಯಥಾಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವತ್ರ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || 11 ||
ಅರ್ಥ : ಯಾರು ನನ್ನನ್ನು ಯಾವ ಮಾರ್ಗದಿಂದ ಸೇರಲು ಪ್ರಯತ್ನಿಸುತ್ತಾರೋ ಅವರಿಗೆ ನಾನು ಅದೇ ಮಾರ್ಗದಲ್ಲಿ ಫಲವನ್ನು ಕೊಡುತ್ತೇನೆ. ಪ್ರತಿಯೊಂದು ಮಾರ್ಗದಿಂದ ಬರುವವರು ನನ್ನನ್ನು ಸೇರುತ್ತಾರೆ.
ಪರಮಾತ್ಮನಿಗೆ ಯಾವ ಕಾರ್ಯದಲ್ಲಾಗಲೀ, ಮಾರ್ಗದಲ್ಲಾಗಲೀ ಪ್ರೇಮವೂ ಇಲ್ಲ. ದ್ವೇಷವೂ ಇಲ್ಲ. ಇದು ಇರುವುದು ಮನುಷ್ಯನಲ್ಲಿ ಮಾತ್ರ. ಪರಮಾತ್ಮನನ್ನು ಸೇರಬೇಕೆಂದು ಯಾರು ಯಾವ ಮಾರ್ಗದಲ್ಲಿ ಪ್ರಯತ್ನ ಮಾಡುತ್ತಾರೋ, ಅವರಿಗೆ ಆ ಮಾರ್ಗದಲ್ಲಿಯೇ ಸಿದ್ಧಿಯನ್ನು ಕೊಡುತ್ತೇನೆ. ಎಂದು ಈ ಶ್ಲೋಕದಲ್ಲಿ ಆಶ್ವಾಸನೆಯನ್ನು ಕೊಡಲಾಗಿದೆ. ಮನೆಯಲ್ಲಿರುವ ವಿದ್ಯುಚ್ಛಕ್ತಿಯನ್ನು ನಾವು ದೀಪ, ಒಲೆ, ಪಂಖ, ರೇಡಿಯೋ ಇತ್ಯಾದಿ ಯಾವ ಸಾಧನಕ್ಕೆ ಜೋಡಿಸುತ್ತೇವೆಯೋ ಅದರ ಮೂಲಕ ವಿದ್ಯುತ್ ಶಕ್ತಿಯು ನಮಗೆ ಇಚ್ಛಿತ ಫಲವನ್ನು ಕೊಡುತ್ತದೆ. ಒಂದು ಸಾಧನೆಯ ಮೂಲಕ ಹರಿಯುವ ವಿದ್ಯುತ್ತು, ತಾನಾಗಿಯೇ ಇನ್ನೊಂದು ಸಾಧನೆಗೆ ಹೋಗಿ ಆ ಯಂತ್ರವನ್ನು ಚಲಿಸಲಾರದು. ನಾವು ಅದಕ್ಕೆ ತಕ್ಕ ಜೋಡಣೆಯನ್ನು ಮಾಡಲೇಬೇಕು. ಇದರಂತೆಯೇ ನಾವು ಯಾವ ಮಾರ್ಗದಿಂದ ಪರಮಾತ್ಮನ ಆರಾಧನೆಯನ್ನು ಮಾಡುತ್ತೇವೆಯೋ ಆ ಮಾರ್ಗವನ್ನು ಅವನು ನಮಗೆ ಅನುಗ್ರಹವನ್ನು ಮಾಡುತ್ತಾನೆ.

ಸಾಮಾನ್ಯ ಜನರು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಏಕೆ ಪ್ರಯತ್ನ ಪಡುವುದಿಲ್ಲ ?

ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ |
ಕ್ಷಿಪ್ರಂ ಹಿ ಮಾನಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ || 12 ||
ಅರ್ಥ : ಪ್ರಾಪಂಚಿಕ ಕರ್ಮಗಳಲ್ಲಿ ಲಾಭವನ್ನು ಪಡೆಯಬೇಕೆಂಬ ಆಸೆಯಿಂದ ಜನರು ಯಜ್ಞಗಳ ಮೂಲಕ ದೇವತೆಗಳನ್ನು ಅರ್ಚಿಸುತ್ತಾರೆ. ಏಕೆಂದರೆ ಭೂಲೋಕದಲ್ಲಿ ಇಂತಹ ಕರ್ಮಗಳಿಂದ ಜಾಗ್ರತೆಯಾಗಿ ಇಷ್ಟಾರ್ಥವು ಸಿದ್ಧಿಸುತ್ತದೆ.
ಮನುಷ್ಯನಲ್ಲಿ ನಾಲ್ಕು ವಿಭಾಗಗಳು

ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮದ್ಯಯಮ್ || 13 ||
ಅರ್ಥ : ಮನುಷ್ಯರಲ್ಲಿ ಇರುವ ಗುಣ ಮತ್ತು ಕರ್ಮ ಮಾಡುವ ಸಾಮಥ್ರ್ಯ ಇವುಗಳಿಗನುಸಾರವಾಗಿ ನಾನು ಅವರನ್ನು ನಾಲ್ಕು ವರ್ಣಗಳಾಗಿ ವಿಂಗಡಿಸಿದ್ದೇನೆ.
ಈ ವಿಭಾಗವನ್ನು ಮಾಡಿದವನು ನಾನೇ ಆಗಿದ್ದಾಗ್ಯೂ ಅವ್ಯಯನಾದ ನಾನು ಅದರಿಂದ ಲಿಪ್ತನಾಗಿಲ್ಲ. ನಾನು ಮಾಡಿದ್ದರೂ ಮಾಡಿದಂತೆಯೇ ಇದ್ದೇನೆ.
ವ್ಯವಹಾರದಲ್ಲಿ ಉದ್ಯೋಗ ಅಥವಾ ವ್ಯಾಪಾರಗಳ ದೃಷ್ಟಿಯಿಂದ ವ್ಯಾಪಾರಿಗಳು, ವಕೀಲರು, ಡಾಕ್ಟರರು, ರಾಜಕಾರಣಿಗಳು ಎಂದು ನಾನಾ ವಿಧವಾಗಿ ಜನರನ್ನು ವಿಂಗಡಿಸುವಂತೆ ಮನುಷ್ಯನ ಬುದ್ಧಿಶಕ್ತಿ, ಶಾರೀರಿಕ ಶಕ್ತಿ, ಸತ್ವ ರಜ ತಮೋಗುಣಗಳಿಂದ ಯುಕ್ತನಾದ ಮಾನಸಿಕ ಅಂತಸ್ತು, ಇತ್ಯಾದಿಗಳ ದೃಷ್ಟಿಯಿಂದ ಅವರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಮಾಜವು ಸುವ್ಯವಸ್ಥಿತವಾಗಿ ಸಾಗಬೇಕೆಂದು ಈ ಗುಂಪುಗಳನ್ನು ಮಾಡಲಾಗಿದೆಯೇ ಹೊರತು ಇದರಲ್ಲಿ ಒಂದು ಹಿರಿದು ಮತ್ತೊಂದು ಕಿರಿದು ಎಂಬ ಭಾವವಾಗಲೀ, ಒಂದರೊಡನೆ ಇನ್ನೊಂದು ಪೈಪೆÇೀಟಿಯನ್ನು ನಡೆಸಬೇಕೆಂಬುದಾಗಲೀ ಇಲ್ಲ. ತತ್ವತಃ ಒಂದಕ್ಕೆ ಇನ್ನೊಂದು ಪೂರಕವಾಗಿದೆ. ಸಾತ್ವಿಕ, ವಿಚಾರ ಹಾಗೂ ಕರ್ಮಗಳುಳ್ಳವನು ಎಂದೂ ತಾಮಸಿಕ ಗುಣಗಳಿಂದ ಕೂಡಿ ಕೇವಲ ಶಾರೀರಿಕ ಸುಖಗಳಲ್ಲಿಯೇ ಮಗ್ನನಾಗಿರುವವನು ‘ಶೂದ್ರ’ ಎಂದೂ ಹೇಳಬಹುದು (6-18 ಶ್ಲೋಕಗಳ ವ್ಯಾಖ್ಯಾನವನ್ನು ನೋಡಿರಿ)

ನನಗೆ ಈ ಕರ್ಮದಿಂದ ಬಂಧನವಿಲ್ಲ.

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋ„ಭಿಜಾನಾತಿ ಕರ್ಮಭಿರ್ನ ಸ ಬದ್ದ್ಯತೇ || 14 ||
ಅರ್ಥ : ಕರ್ಮಗಳು ನನ್ನನ್ನು ಬಂಧಿಸಲಾರವು. ನನಗೆ ಕರ್ಮಫಲದಲ್ಲಿ ಆಸೆ ಇಲ್ಲ. ಯಾರು ನನ್ನನ್ನು ಈ ರೀತಿಯಾಗಿ ತಿಳಿಯುತ್ತಾರೋ ಅವರಿಗೂ ಕರ್ಮದ ಬಂಧನವಿಲ್ಲ.
ಕರ್ಮದ ಲೇಪ ಅಥವಾ ಬಂಧನ ಇವು ಫಲಾಸೆ ಮತ್ತು ಅಹಂಕಾರವಿರುವವನಿಗೆ ಮಾತ್ರ ಇದೆ. ಪರಮಾತ್ಮನು ಅಹಂಕಾರವರ್ಜತವಾಗಿರುವುದರಿಂದ ಮತ್ತು ಮಾಯಾ ಬಂಧನಕ್ಕೆ ಸಿಲುಕುವುದರಿಂದ ಅವನಿಗೆ ಬಂಧನವಾಗಲೀ ಫಲಾಸೆಯಾಗಲೀ ಇಲ್ಲ. ಯಾರು ಈ ತತ್ವವನ್ನು ತಿಳಿದು ಅಹಂಕಾರವರ್ಜಿತರಾಗಿ ಕರ್ಮ ಮಾಡುತ್ತಾರೋ ಅವರಿಗೆ ಸಹ ಕರ್ಮದಿಂದ ಲೇಪವಿಲ್ಲ.
ಹರಿವಾಣದಲ್ಲಿಯ ನೀರಿನಲ್ಲಿ ಸೂರ್ಯನ ಪ್ರತಿಬಿಂಬವು ಬಿದ್ದರೆ ನೀರು ಅಲುಗಾಡಿದಂತೆ ಸೂರ್ಯನ ಪ್ರತಿಬಿಂಬವೂ ಅಲುಗಾಡುತ್ತದೆ. ನೀರು ಕದಡಿ ರಾಡಿಯಾಗಿದ್ದರೆ ಬಿಂಬವು ಅಸ್ಪಷ್ಟವಾಗುತ್ತದೆ. ಆದರೆ ಈ ಅಲುಗಾಡುವಿಕೆಯಾಗಲೀ ಅಸ್ಪಷ್ಟತೆಯಾಗಲೀ ನೀರಿನಲ್ಲಿಯ ಬಿಂಬಕ್ಕಿದೆಯೇ ಹೊರತು ಮೇಲಿರುವ ಸೂರ್ಯನಿಗಲ್ಲ. ಅಂತೆಯೇ ಜೀವಿಯು ಮಾಡುವ ಕರ್ಮಗಳ ಲೇಪವು ಆತ್ಮನಿಗಲ್ಲ.

ಜನರು ಹಿಂದೆ ಸಹ ಈ ರೀತಿಯಾಗಿ ಕರ್ಮ ಮಾಡಿದ್ದರು.

ಏವಂ ಜ್ಞಾತ್ವಾಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ |
ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಮ್ || 15 ||
ಅರ್ಥ : ಈ ತತ್ವವನ್ನು ತಿಳಿದುಕೊಂಡು ಹಿಂದಿನ ಕಾಲದಲ್ಲಿ ಸಹ, ಮೋಕ್ಷಾಪೇಕ್ಷಿಗಳು ಕರ್ಮಯೋಗರೀತ್ಯಾ ಕರ್ಮವನ್ನು ಮಾಡಿದರು. ಆದ್ದರಿಂದ ನೀನೂ ಸಹ ನಿನ್ನ ಪೂರ್ವಜರಂತೆ ಕರ್ಮಮಾಡು .
ಕರ್ಮ ಮಾಡುವವನು ನಾನಲ್ಲ ನಾನು ಕರ್ಮಫಲವನ್ನು ಅಪೇಕ್ಷಿಸುವವನೂ ಅಲ್ಲ ಎಂಬುದನ್ನು ತಾತ್ವಿಕವಾಗಿ ಮನದಟ್ಟು ಮಾಡಿಕೊಂಡು, “ಪರಮಾತ್ಮನ ಸೇವಾ ಮನೋಭಾವದಿಂದ ಕರ್ಮಮಾಡಿದರೆ ಅದರಲ್ಲಿ ಅಹಂಭಾವವಿಲ್ಲದೆ ಅದು ಶುದ್ಧಕರ್ಮವಾಗುತ್ತದೆ. ಇಂತಹ ಕರ್ಮದಿಂದ ಬಂಧನವಿಲ್ಲ. ಕರ್ಮಯೋಗದ ಈ ತತ್ವರೀತ್ಯಾ ಹಿಂದಿನ ಕಾಲದಲ್ಲಿ ಸಹ ಜನರು ಕರ್ಮವನ್ನು ಮಾಡಿ ಸಂಸಾರಬಂಧನದಿಂದ ಮುಕ್ತರಾಗಿರುವುದರಿಂದ ಎಲ್ಲರೂ ಈ ರೀತಿಯಾಗಿ ಕರ್ಮಮಾಡಬೇಕೆಂದು ಅರ್ಜುನನ ನೆವ ಮಾಡಿಕೊಂಡು ಶ್ರೀಕೃಷ್ಣನು ಉಪದೇಶ ಮಾಡಿದ್ದಾನೆ.
ಯಾವ ಕರ್ಮವನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಬುದ್ಧಿವಂತರು ಸಹ ಮೋಹಗೊಳ್ಳುವುದರಿಂದ ಅದನ್ನು ವಿವರಿಸಲಾಗಿದೆ.

ಕಿಂ ಕರ್ಮ ಕಿಮಕರ್ಮೇತಿ ಕವಯೋ„ಪ್ಯತ್ರ ಮೋಹಿತಾಃ |
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞಾತ್ವಾ ಮೋಕ್ಷಸೇ„ಶುಭಾತ್ || 16 ||
ಅರ್ಥ : ಯಾವುದು ಕರ್ಮ ಯಾವುದು ಅಕರ್ಮ ಎಂಬುದನ್ನು ನಿರ್ಣಯಿಸಲಾರದೆ ಬುದ್ಧಿವಂತರು ಸಹ ಮೋಹಗೊಳ್ಳುತ್ತಾರೆ. ಆದುದರಿಂದ ನಿನಗೆ ಕರ್ಮ-ಅಕರ್ಮ ತತ್ವವನ್ನು ತಿಳಿಸುತ್ತೇನೆ. ಇದನ್ನು ತಿಳಿದುಕೊಂಡೆಯಾದರೆ ನೀನು ಸಂಸಾರ ಚಕ್ರದಿಂದ (ಜನನ – ಮರಣ) ಬಿಡುಗಡೆಯನ್ನು ಹೊಂದುತ್ತೀಯೆ.
ಪ್ರಪಂಚದಲ್ಲಿ ಇಷ್ಟಾರ್ಥಸಿದ್ಧಿಗಾಗಿ ನಾವು ಮಾಡುವ ಇಂದ್ರಿಯಗಳ ಚಲನವಲನಗಳಾದಿಗಳಿಗೆ ‘ಕರ್ಮ’ ಎಂತಲೂ ಅವುಗಳನ್ನು ಚಲಿಸದೆ ಸುಮ್ಮನಿರುವುದಕ್ಕೆ ‘ಅಕರ್ಮ’ ಎಂತಲೂ ಸಾಮಾನ್ಯವಾದ ತಿಳುವಳಿಕೆಯಿದೆ. ಆದರೆ ಅಧ್ಯಾತ್ಮ ದೃಷ್ಟಿಯಿಂದ ಇದು ಸರಿಯಲ್ಲ. ಕರ್ಮದಲ್ಲಿ ಹೊರಗಿನ ಚಲನವಲನಾದಿಗಳಿಗಿಂತ ಅವುಗಳಿಗೆ ಪ್ರೇರಕವಾದ ಹಿಂದಿರುವ ಮಾನಸಿಕ ಭಾವವು ಮುಖ್ಯ. ಇದರ ಮೇಲೆ (ಮಾನಸಿಕ ಭಾವ) ಕರ್ಮ-ಅಕರ್ಮಗಳನ್ನು ನಿರ್ಧರಿಸಬೇಕು. ಕರ್ಮದ ಹೊರಗಿನ ರೂಪದಿಂದ ಕರ್ಮವು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದೆ ಅದರ ಹಿಂದಿರುವ ಮಾನಸಿಕ ಭಾವಗಳನ್ನು ನೋಡಬೇಕು ಯಾವುದೇ ಒಂದು ಕೆಲಸವು ಹೊರ ಮೈ ನೋಟಕ್ಕೆ ಸುಂದರವಾಗಿಯೂ, ಆಕರ್ಷಕವಾಗಿಯೂ, ಉದಾರವಾಗಿಯೂ ತೋರಬಹುದು. ಆದರೆ ಅದರ ಹಿನ್ನಲೆಯಲ್ಲಿ ಅತಿ ನೀಚವಾದ ಉದ್ದೇಶ ಅಥವಾ ಭಾವನೆಯಿರಬಹುದು.

ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ |
ಆಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ || 17 ||
ಅರ್ಥ : ಕರ್ಮದ ವಿಷಯದಲ್ಲಿ ಕರ್ಮ- ಅಂದರೆ ಮಾಡಬೇಕಾದುದು, ವಿಕರ್ಮ ಅಂದರೆ ಮಾಡಬಾರದುದು ಮತ್ತು ಅಕರ್ಮ – ಮಾಡದೆ ಇರುವುದು ಈ ಮೂರು ವಿಷಯಗಳನ್ನು ತಿಳಿದುಕೊಳ್ಳಬೇಕು . ಹೀಗೆ ಕರ್ಮದ ಗತಿಯು ಗೂಢವಾಗಿದೆ.
ಮನುಷ್ಯನು ಚಲನವಲನಾದಿಗಳನ್ನು ಮಾಡುತ್ತಿರುವುದು ಬದುಕಿರುವ ಲಕ್ಷಣ. ಜೀವಿಸಿರುವುದಕ್ಕಾಗಿ ಚಲನವಲನಗಳನ್ನು ಅಥವಾ ಚಟುವಟಿಕೆಗಳು ಅವಶ್ಯಕ ಚಟುವಟಿಎಗಳಿಲ್ಲದಿರುವುದು ಮರಣದ ಲಕ್ಷಣ. ಕರ್ಮದಲ್ಲಿ ಎರಡು ವಿಧಗಳಿವೆ. ರಚನಾತ್ಮಕ ಕರ್ಮ ಮತ್ತು ವಿಧ್ವಂಸಾತ್ಮಕ ಕರ್ಮ. ಮೊದಲನೆಯದು ‘ಕರ್ಮ’ ಎರಡನೆಯದು ‘ವಿಕರ್ಮ’. ಕರ್ಮವು ಪ್ರಪಂಚಕ್ಕೆ ಹಿತಕರ. ವಿಕರ್ಮವು ಅಹಿತಕರ. ಏನೂ ಕರ್ಮಮಾಡದೆ ಆಲಸ್ಯವಾಗಿರುವುದು ‘ಅಕರ್ಮ’. ಆಲಸ್ಯವನ್ನು ಬಿಟ್ಟು ವಿಕರ್ಮವನ್ನು ತ್ಯಜಿಸಿ ಕರ್ಮವನ್ನು ಮಾಡಬೇಕೆಂದು ಗೀತೆಯು ಹೇಳುತ್ತದೆ. ಇದನ್ನು ನಿರ್ಣಯಿಸುವಾಗ ಆಂತರಿಕ ಮನೋಭಾವಕ್ಕೆ ಪ್ರಾಧಾನ್ಯತೆಯನ್ನು ಕೊಡಬೇಕು.

ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ |
ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್ || 18 ||
ಅರ್ಥ : ಯಾರು ಕರ್ಮದಲ್ಲಿ ಆಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಕಾಣುತ್ತಾನೋ ಅವನು ಮನುಷ್ಯನಲ್ಲಿ ಬುದ್ಧಿವಂತನೆಂದೂ ನಿಜವಾದ ಕರ್ಮಯೋಗಿ ಎಂದೂ ತಿಳಿಯಲ್ಪಡುತ್ತಾನೆ.
ಹೊರಗೆ ಎಡಬಿಡದ ಚಲನವಲನಾದಿಗಳಿಂದ ಕೂಡಿದ ಕರ್ಮವನ್ನು ಮಾಡುತ್ತಿದ್ದಾಗ್ಯೂ ಮನಸ್ಸು ಮಾತ್ರ ಅದರಲ್ಲಿ ನಿರತವಾಗದೆ, ಅವುಗಳಿಂದ ಉದ್ರಿಕ್ತವಾಗದೆ, ಶಾಂತವಾಗಿರುವುದನ್ನು ಸಿದ್ಧ ಪುರುಷರಲ್ಲಿ ಕಾಣಬಹುದು. ಇವರು ಬಾಹ್ಯ ಕರ್ಮಗಳನ್ನು ಮಾಡುತ್ತಿದ್ದಾಗ್ಯೂ ಅವುಗಳಲ್ಲಿ ಆಸಕ್ತವಾಗಿರದೆ ಆತ್ಮಧ್ಯಾನದ ಆನಂದದಲ್ಲಿರುತ್ತಾರೆ.
ಇದೇ ತರಹದ ಇನ್ನೊಂದು ಉದಾಹರಣೆಯನ್ನು ನೋಡಬಹುದು. ವಿಜ್ಞಾನಿ ಇಲ್ಲವೆ ಕವಿಯು ಹೊರಗೆ ನೋಡುವುದಕ್ಕೆ ಯಾವ ಶಾರೀರಿಕ ಚಟುವಟಿಕೆಗಳನ್ನೂ ಮಾಡದೆ ಧ್ಯಾನಮಗ್ನರಾಗಿರುತ್ತಾನೆ. ಈಗ ಅವನ ಮನಸ್ಸಿನಲ್ಲಿ ತಾನು ಮಾಡಬೇಕಾಗಿರುವ ಕಾರ್ಯದ ಬಗ್ಗೆ ಗಾಢ ವಿಚಾರವು ನಡೆದಿರುತ್ತದೆ. ಇವನಲ್ಲಿ ಬಾಹ್ಯ ಇಂದ್ರಿಯಗಳು ಸ್ತಬ್ಧವಾಗಿದ್ದಾಗ್ಯೂ ಮನಸ್ಸು ಮಾತ್ರ ಜಾಗೃತವಾಗಿ ತೀವ್ರ ಚಟುವಟಿಕೆಯಿಂದಿರುತ್ತದೆ.
ಕರ್ಮದಲ್ಲಿ ಅಕರ್ಮವನ್ನು ಕಾಣುವುದು – ಕರ್ಮದಲ್ಲಿ ‘ಫಲಾಸೆ’ ಮತ್ತು ‘ಆಸಕ್ತಿ’ ಇವು ಬಂಧನಕ್ಕೆ ಕಾರಣವಾಗಿವೆ. ನಾವು ಮಾಡುವ ಕರ್ಮದಲ್ಲಿ ಫಲಾಸೆಯನ್ನಾಗಲೀ, ಆಸಕ್ತಿಯನ್ನಾಗಲೀ ಇಟ್ಟುಕೊಳ್ಳದೆ” ಕರ್ಮಮಾಡುವುದಷ್ಟೇ ನನ್ನ ಧರ್ಮ. ನಾನು ಈ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ದಕ್ಷತೆಯಿಂದ ಮಾಡಿ ಅದನ್ನು ಪರಮಾತ್ಮನಿಗೆ ಅರ್ಪಿಸುತ್ತೇನೆ. ಇದರ ಫಲಕ್ಕೆ ನಾನು ಜವಾಬ್ದಾರನು ಅಲ್ಲ. ಅಧಿಕಾರಿಯೂ ಅಲ್ಲ.” ಎಂಬ ಮನೋಭಾವವನ್ನಿಟ್ಟುಕೊಂಡು, ಕರ್ಮ ಮಾಡಿದರೆ, ಅಂತಹ ಕರ್ಮದಿಂದ ಬಂಧನವಿಲ್ಲದಿರುವುದರಿಂದ ಈ ಕರ್ಮವು ತತ್ವಶಃ ‘ಅಕರ್ಮ’ವೇ ಆಗುತ್ತದೆ. ಕರ್ಮದಲ್ಲಿ ಅಕರ್ಮವನ್ನು ಕಾಣುವುದು ಎಂದು ಇದಕ್ಕೆ ಹೇಳುತ್ತಾರೆ.
ಅಕರ್ಮಣಿಚ ಕರ್ಮಯಃ – ಶಾರೀರಿಕವಾಗಿ ಯಾವ ಬಾಹ್ಯ ಕರ್ಮಗಳನ್ನು ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾಗ್ಯೂ ನಿಗ್ರಹಮಾಡಲ್ಪಟ್ಟ ವಿಷಯ ಭೋಗಗಳ ವಿಚಾರ ತರಂಗಗಳು ಮನಸ್ಸಿನಲ್ಲಿ ಉದ್ರೇಕವಾಗಿ, ಇಡೀ ಮನಸ್ಸನ್ನೇ ಆವರಿಸಿ, ಆ ವ್ಯಕ್ತಿಯು ಅದೇ ವಿಚಾರದಲ್ಲಿ ಮಗ್ನನಾಗಿರುವಂತೆ ಮಾಡುತ್ತವೆ. ಈ ಮನುಷ್ಯನು ಹೊರಗೆ ನೋಡುವುದಕ್ಕೆ ಯಾವ ಕರ್ಮವನ್ನು ಮಾಡದಿರುವಂತೆ ಕಂಡಾಗ್ಯೂ ತತ್ವಶಃ ಅವನು ಕರ್ಮಮಾಡಿಕೊಂಡಂತೆಯೇ ಸರಿ. ಹಿಂದೆ ತಿಳಿಸಿದ ಕವಿ ಹಾಗೂ ವಿಜ್ಞಾನಿಗಳ ಉದಾಹರಣೆಯನ್ನು ಈ ಗುಂಪಿನಲ್ಲೇ ಸೇರಿಸಬಹುದು. ಅಕರ್ಮದಲ್ಲಿ ಕರ್ಮವನ್ನು ಕಾಣುವುದು ಎಂದು ಇದಕ್ಕೆ ಹೇಳುತ್ತಾರೆ. ಸಾರಾಂಶವೇನೆಂದರೆ ಕರ್ಮದಲ್ಲಿ ಬಾಹ್ಯ ಇಂದ್ರಿಯಗಳ ಚಟುವಟಿಕೆಗಳಿಗಿಂತ ಅದರ ಹಿಂದಿರುವ ಮನೋಭಾವದ ಆಧಾರದ ಮೇಲೆ ಕರ್ಮ-ಅಕರ್ಮಗಳನ್ನು ನಿರ್ಧರಿಸಬೇಕು.

ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ |
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ || 19 ||
ಅರ್ಥ : ಯಾರು ಫಲಾಸೆಯನ್ನಿಟ್ಟುಕೊಳ್ಳದೆ ಎಲ್ಲಾ ಕರ್ಮಗಳನ್ನು ಮಾಡುತ್ತಾರೋ, ಮತ್ತು ಯಾರ ಕರ್ಮಗಳು ಜ್ಞಾನಾಗ್ನಿಯಿಂದ ಸುಡಲ್ಪಟ್ಟಿದ್ದರಿಂದ ಬಂಧಕರವಲ್ಲವೋ, ಅಂತಹ ಕರ್ಮಯೋಗಿಯನ್ನು ಬುದ್ಧಿವಂತರು ‘ಜ್ಞಾನಿ’ ‘ಮುನಿ’ ಎಂದು ಕರೆಯುತ್ತಾರೆ.
ಫಲಾಸೆಯು ಕರ್ಮದಲ್ಲಿಯ ದೊಡ್ಡ ದೋಷ. ಇದರ ಇನ್ನೊಂದು ದೋಷವಾವುದೆಂದರೆ ನಾನು ಮಾಡುವವನು ಎಂಬ ಅಹಂಕಾರ. ಜ್ಞಾನಿಯಾದವನು ಇವೆರಡನ್ನೂ ತ್ಯಜಿಸಿ ಕರ್ಮ ಮಾಡುತ್ತಾನೆ. ಅವನು ಕರ್ಮ ಮಾಡುವಾಗ ಆತ್ಮಾನಂದದಲ್ಲಿರುತ್ತಾನೆ. ಈತನಲ್ಲಿ ಅಹಂಕಾರ ಹಾಗೂ ಆಸೆಗಳು ಜ್ಞಾನಾಗ್ನಿಯಿಂದ ಸುಟ್ಟುಹೋಗಿರುವುದರಿಂದ ಅವನು ಕರ್ಮ ಮಾಡಿದರೂ ಮಾಡದಿದ್ದ ಹಾಗೆಯೇ ಸರಿ. ಪಂಡಿತನಾದವನು ಕರ್ಮವನ್ನು ಈ ರೀತಿಯಾಗಿ ಮಾಡುತ್ತಾನೆಂದು ಸೂಚಿಸಿ, ಪ್ರತಿಯೊಬ್ಬರೂ ಇದೇ ಭಾವದಿಂದ ಕರ್ಮಮಾಡಬೇಕೆಂದು ಕರ್ಮಮಾರ್ಗವನ್ನು ಬೊಟ್ಟುಮಾಡಿ ತೋರಿಸಲಾಗಿದೆ.

ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪೆÇ್ತೀ ನಿರಾಶ್ರಯಃ |
ಕರ್ಮಣ್ಯಭಿಪ್ರವೃತ್ತೋ„ಪಿ ನೈವ ಕಿಂಚಿತ್ಕರೋತಿ ಸಃ || 20 ||
ಅರ್ಥ : ಇಂತಹ ಮುನಿಯು ಕರ್ಮಫಲದಲ್ಲಿ ಆಸೆಯನ್ನು ತ್ಯಜಿಸಿ ಯಾವಾಗಲೂ ತೃಪ್ತನಾಗಿಯೇ ಇದ್ದು ಬಾಹ್ಯವಸ್ತುಗಳ ಮೇಲೆ ಅವಲಂಬಿಸದೆ (ಆತ್ಮನಲ್ಲಿ ಆಶ್ರಯವನ್ನು ಹೊಂದಿ) ಕರ್ಮಗಳನ್ನು ಮಾಡುತ್ತಿದ್ದಾಗ್ಯೂ, ಅವನು ತತ್ವಶಃ ಕರ್ಮ ಮಾಡಿದಂತಲ್ಲ.
ಕರ್ಮಫಲದ ಮೇಲಿನ ಆಸೆಯನ್ನು ತ್ಯಜಿಸುವುದೆಂದರೆ ತಾನು ಯಾವುದಾದರೊಂದು ಕರ್ಮವನ್ನು ಪ್ರಾರಂಭಿಸುವಾಗ ತನ್ನ ಗುರಿ ಏನೆಂಬುದನ್ನು ತಿಳಿದುಕೊಳ್ಳದೆ ಕರ್ಮವನ್ನು ಪ್ರಾರಂಭಿಸಬೇಕೆಂಬ ಅರ್ಥವಲ್ಲ. ಕರ್ಮವನ್ನು ಮಾಡುವ ಉದ್ದೇಶ ಇಲ್ಲವೆ ಗುರಿಯ ಅರಿವಿಲ್ಲದಿದ್ದರೆ ಕರ್ಮವನ್ನು ಸಾಧಿಸಲು ಕರ್ಮವನ್ನು ದಕ್ಷತೆಯಿಂದ ಮಾಡಲು, ಕರ್ಮದ ವಿವಿಧ ಅಂಗಗಳನ್ನು ನಿರ್ಧರಿಸಲು ಮತ್ತು ಅವುಗಳನ್ನು ಆಚರಣೆಯಲ್ಲಿ ತರಲು ಸಾಧ್ಯವಿಲ್ಲ. ಇದೇ ರೀತಿಯಾಗಿ ಕರ್ಮಯೋಗಿಯು ತಾನು ಮಾಡಿದ ಕರ್ಮದ ಫಲವನ್ನು ಭೋಗಿಸಕೂಡದು ಎಂದು ಅರ್ಥವಲ್ಲ. ಕರ್ಮಫಲತ್ಯಾಗ ಎಂಬ ಶಬ್ದದ ಅರ್ಥವನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಆದುದರಿಂದ ಅದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅವಶ್ಯಕ
ತ್ಯಕ್ತ್ವಾ ಕರ್ಮಫಲಾಸಂಗಮ್ – ನಾವು ಹೊಸ ಕರ್ಮದ ಯೋಜನೆಯನ್ನು ಮಾಡುವಾಗ ಆ ಕರ್ಮದಿಂದ ಏನನ್ನು ಸಾಧಿಸಬೇಕು ಎಂಬುದನ್ನು ನಿಶ್ಚಯಿಸಿಕೊಂಡರೆ ಮಾತ್ರ ಅದಕ್ಕೆ ಅನುಕೂಲವಾಗುವಂತೆ, ಪೆÇೀಷಕವಾಗುವಂತೆ ಕರ್ಮದ ವ್ಯಾವಹಾರಿಕ ಹಾಗೂ ತಾಂತ್ರಿಕ ವಿವರಗಳನ್ನು ಯೋಜಿಸಲು ಸಾಧ್ಯವಾಗುತ್ತದೆ. ಹೀಗೆ ಗುರಿಯನ್ನು ನಿರ್ಧರಿಸಿ ಕರ್ಮದ ವಿವರಗಳನ್ನು ನಿಶ್ಚಯಿಸಿದ ಮೇಲೆ ಕರ್ಮವನ್ನು ಗೊತ್ತಾದ ರೀತಿಯಲ್ಲಿ ಆಚರಿಸಲು ನಮ್ಮ ಶಾರೀರಿಕ ಮಾನಸಿಕ, ಬೌದ್ಧಿಕ ಶಕ್ತಿಗಳನ್ನು ವಿನಿಯೋಗಿಸಬೇಕು ಆದರೆ ಕರ್ಮವನ್ನು ಪ್ರಾರಂಭಿಸಿದ ಮೇಲಾಗಲೀ, ಕರ್ಮವನ್ನು ಮಾಡುತ್ತಿರುವಾಗಲಾಗಲೀ, ಕರ್ಮಫಲ ಬಗ್ಗೆ ಇಲ್ಲವೆ ಅದರ ಭೋಗದ ಬಗ್ಗೆ ಮನಸ್ಸಿನಲ್ಲಿ ವಿಚಾರವನ್ನು ಮಾಡುತ್ತಾ ವಿವಿಧ ಕಲ್ಪನೆಗಳಲ್ಲಿ ಕಾಲವನ್ನೂ ಶಕ್ತಿಯನ್ನು ವ್ಯಯಮಾಡಬಾರದು. ಈಗ ನಾವು ಕರ್ಮಫಲದ ವಿಚಾರದಲ್ಲಿ ಆಸಕ್ತರಾದರೆ ನಮ್ಮ ಶಕ್ತಿಂiÀi ಬಹುಭಾಗವು ಇನ್ನೂ ಹುಟ್ಟದೇ ಇರುವ ಫಲದ ಕಲ್ಪನೆಯಲ್ಲಿ ವ್ಯಯವಾಗುವುದರಿಂದಲೂ ಮುಂದೆ ಸಿಗಬಹುದಾದ ಫಲಭೋಗದ ಕಲ್ಪನೆಯಲ್ಲಿಯೇ ಮನೋಬುದ್ಧಿಗಳು ನಿರತವಾಗುವುದರಿಂದಲೂ ನಾವು ಈಗ ಮಾಡಬೇಕಾದ ಕರ್ಮದಲ್ಲಿ ಸಾಕಷ್ಟು ಶಕ್ತಿಯನ್ನು ದಕ್ಷತೆಯನ್ನು ಜಾಣ್ಮೆಯನ್ನು ವಿನಿಯೋಗಿಸಲು ಅಸಮರ್ಥರಾಗುತ್ತೇವೆ ಇಲ್ಲವೆ ಇದಕ್ಕೆ ಉಪಯೋಗಿಸಬೇಕಾದ ಶಕ್ತಿಯು ಅನಾವಶ್ಯಕವಾದ ಕಲ್ಪನೆಗಳಲ್ಲಿ ವ್ಯಯವಾಗಿ ಕರ್ಮದ ಯಶಸ್ಸಿಗೆ ಕೊರತೆಯಾಗುತ್ತದೆ. ಫಲಾಪೇಕ್ಷೆಯನ್ನು ತ್ಯಜಿಸುವುದು ಎಂಬ ಶಬ್ದದ ಈ ಸ್ಪಷ್ಟವಾದ ಅರ್ಥವನ್ನು ತಿಳಿದುಕೊಂಡರೆ ಅನೇಕ ತಪ್ಪು ಕಲ್ಪನೆಗಳು ನಿವಾರಣೆಯಾಗುತ್ತದೆ. ತ್ಯಕ್ತ್ವಾ ಕರ್ಮಫಲಾಸಂಗಮ್ ಎಂಬ ಶಬ್ದಗಳಲ್ಲಿ ಈ ಅರ್ಥವು ಅಡಗಿದೆ. “ಕರ್ಮಫಲಕ್ಕೆ ಅಂಟಿಕೊಳ್ಳುವ ಸ್ವಭಾವವನ್ನು ತ್ಯಜಿಸಿ ಎಂಬುದು ಇದರ ಶಬ್ದಾರ್ಥ. ನಾವು ಮಾಡಿದ ಕರ್ಮದಿಂದ ಸಿಗುವ ಫಲದಲ್ಲಿ ನಮ್ಮ ಜೀವನ ನಿರ್ವಹಣಕ್ಕೆ ಅವಶ್ಯಕವಾದಷ್ಟನ್ನು ಆಸಕ್ತಿಯಿಲ್ಲದೆ ಅನುಭವಿಸಿ ಉಳಿದುದನ್ನು ಲೋಕಸಂಗ್ರಹಕ್ಕಾಗಿ ವಿನಿಯೋಗಿಸಬೇಕು.
ನಿತ್ಯತೃಪ್ತ – ಮನಸ್ಸಿನಲ್ಲಿ ಆಸೆಗಳು ಇಲ್ಲದಿದ್ದ ಮೇಲೆ ಅಂದರೆ ಇರುವ ಆಸೆಗಳು ಬರಿದಾಗಿ ಹೊಸ ಆಸೆಗಳು ಹುಟ್ಟದಿದ್ದರೆ ಅಂತಹ ಯೋಗಿಯೂ ಯಾವಾಗಲೂ ತೃಪ್ತನಾಗಿಯೇ ಇರುತ್ತಾನೆ.
ನಿರಾಶ್ರಯ – ಸಾಮಾನ್ಯ ಮನುಷ್ಯನು ತಾನು ಮಾಡಿದ ಕರ್ಮದ ಫಲವನ್ನು ತಾನೇ ಭೋಗಿಸಬೇಕು, ಅದಕ್ಕೆ ತಾನೇ ಅಧಿಕಾರಿಯು ಎಂದು ತಿಳಿದುಕೊಂಡು ತಾನು ಹಿಂದೆ ಗಳಿಸಿದ ಹಾಗೂ ಮುಂದೆ ಗಳಿಸುವ ಲಾಭವನ್ನೇ ಆಶ್ರಯಿಸಿಕೊಂಡಿರುತ್ತಾನೆ. ಯೋಗಿಯು ತಾನು ಮಾಡಿದ ಕರ್ಮದ ಫಲವನ್ನು ತ್ಯಾಗಬುದ್ಧಿಯಿಂದ ಪರಮಾತ್ಮನಿಗೆ ಸಂಪೂರ್ಣವಾಗಿ ಅರ್ಪಿಸಿ, ಆತನು ತನ್ನ ಜೀವನ ನಿರ್ವಹಣಕ್ಕಾಗಿ ಏನನ್ನು, ಎಷ್ಟನ್ನು ಒದಗಿಸುತ್ತಾನೊ ಅಷ್ಟರಿಂದಲೇ ತೃಪ್ತಿಪಡುವುದನ್ನು ಕಲಿಯುತ್ತಾನೆ. ಆತನು ಪರಮಾತ್ಮನ ಹೊರತು ಬೇರೆ ಯಾವುದನ್ನೂ ಅವಲಂಬಿಸಿರುವುದಿಲ್ಲ.
ಈ ರೀತಿಯಾಗಿ ಸಿದ್ಧಪುರುಷನು ಲೋಕಹಿತಕ್ಕಾಗಿ ಕರ್ಮಮಾಡಿದರೂ ಆ ಕರ್ಮದಿಂದ ಬಂಧಿತನಾಗುವುದಿಲ್ಲ ಏಕೆಂದರೆ ಬಂಧನಕ್ಕೆ ಕಾರಣವಾದ ಅಹಂಕಾರವು ಅವನಲ್ಲಿಲ್ಲ.

ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ |
ಶಾರೀರಂ ಕೇವಲಂ ಕರ್ಮ ಕುರ್ವನ್ನಾಪೆÇ್ನೀತಿ ಕಿಲ್ಬಿಷಮ್ || 21 ||
ಅರ್ಥ : ಆಸೆಯನ್ನು ತ್ಯಜಿಸಿ, ಮನಸ್ಸು ಬುದ್ಧಿಗಳನ್ನು ಆತ್ಮಧ್ಯಾನದ ಕಡೆಗೆ ತಿರುಗಿಸಿ ತನ್ನಲ್ಲಿದ್ದ ವ್ಯಾವಹಾರಿಕ ಸಾಧನ ಸಂಪತ್ತುಗಳು ತನ್ನವು ಎಂಬ ಸ್ವಾಮಿತ್ವ ಭಾವವನ್ನು ತ್ಯಜಿಸಿ, ಶರೀರ ಮನಸ್ಸುಗಳಿಂದ ಕರ್ಮಗಳನ್ನು ಮಾಡಿದರೆ ಅವು ಬಂಧನಕರವಲ್ಲ. ಅದರಿಂದ ಪಾಪವಿಲ್ಲ.
ಅಹಂಕಾರದಿಂದ ಕೂಡಿ ಮಾಡಿದ ಕರ್ಮವು ಮಾತ್ರ ಅಂತರಂಗದ ಮೇಲೆ ಮುದ್ರಿತವಾಗಿ ‘ವಾಸನೆ’ಗೆ ಕಾರಣವಾಗುತ್ತದೆ. ಫಲಾಪೇಕ್ಷೆ ಇಲ್ಲದಿದ್ದರೆ ಅಹಂಕಾರವೂ ಇಲ್ಲ, ವಾಸನೆಯೂ ಇಲ್ಲ. ಕರ್ಮವನ್ನು ಮಾಡಿದರೂ ತತ್ವಶಃ ಮಾಡದಂತೆಯೇ ಸರಿ. ಆತ್ಮನು ಅಜ್ಞಾನದಿಂದ ಆವೃತನಾಗಿ ತಾನೇ ಈ ಶರೀರ, ಮನಸ್ಸು, ಬುದ್ಧಿ ಎಂದು ತಿಳಿದುಕೊಂಡರೆ ಮಾತ್ರ ಅಹಂಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಹಂಕಾರ ನಾಶಕ್ಕಾಗಿ ಮೂರು ನಿಯಮಗಳು ಹೇಳಲ್ಪಟ್ಟಿವೆ.
1. ಫಲಾಶೆಯ ತ್ಯಾಗ
2. ಮನಸ್ಸು ಬುದ್ಧಿಗಳ ನಿಗ್ರಹ ಮತ್ತು ಧ್ಯಾನದಲ್ಲಿ ನಿರತನಾಗಿರುವಿಕೆ.
3. ವ್ಯಾವಹಾರಿಕ ಸುಖ ಸಂಪತ್ತುಗಳ ಸ್ವಾಮಿತ್ವ ತ್ಯಾಗ. ಇಂತಹ ಯೋಗಿಯು ತಾನು
ಕರ್ಮವನ್ನು ಮಾಡೂತ್ತಿದ್ದೇನೆ ಎಂದು ತಿಳಿಯದೆ “ಪರಮಾತ್ಮನೇ ತನ್ನ ಈ ಶರೀರವನ್ನು
ಒಂದು ಸಾಧನವನ್ನಾಗಿ ಮಾಡಿಕೊಂಡು ಕರ್ಮವನ್ನು ಮಾಡಿಸುತ್ತಿದ್ದಾನೆ” ಎಂಬ ಭಾವದಿಂದ
ಇರುತ್ತಾನೆ. ವೀಣೆಯಿಂದ ಹೊರಡುವ ಸಂಗೀತವು ಇಂಪಾಗಿಲ್ಲದಿದ್ದರೆ ಪ್ರೇಕ್ಷಕರು
ವೀಣೆಯನ್ನು ದೂಷಿಸುವುದಿಲ್ಲ. ಏಕೆಂದರೆ ವೀಣೆಯು ತಾನಾಗಿ ನುಡಿಯುವುದಿಲ್ಲ.
ವಾದ್ಯಗಾರನ ಕೈಚಳಕಕ್ಕೆ ಅನುಗುಣವಾಗಿ ಅದು ಹಾಡುತ್ತದೆ. ಅಹಂಕಾರವನ್ನು ತ್ಯಜಿಸಿದ
ಯೋಗಿಯು ವೀಣೆ ಇದ್ದಂತೆ ಶ್ರೇಷ್ಠ ವಾದ್ಯಗಾರನಾದ ಪರಮಾತ್ಮನು ತನ್ನನ್ನು ಹೇಗೆ ಮೀಟಿ
ನುಡಿಸುತ್ತಾನೋ ಹಾಗೆ ಹಾಡುತ್ತಾನೆ ಅವನು ಬಾರಿಸಿದ ಹಾಡನ್ನು ಹಾಡುವುದಷ್ಟೇ ತನ್ನ
ಕರ್ತವ್ಯ ಎಂದು ತಿಳಿದು ನಮ್ರನಾಗಿರುತ್ತಾನೆ.

ಯೋಗಿಯು ಪ್ರಪಂಚದಲ್ಲಿ ಹೇಗೆ ಜೀವಿಸುತ್ತಾನೆ ?

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ |
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ || 22 ||
ಅರ್ಥ : ತನ್ನ ಜೀವನ ನಿರ್ವಹಣಕ್ಕಾಗಿ ಪರಮಾತ್ಮನು ಎಷ್ಟನ್ನು ಹಾಗೂ ಏನನ್ನು ಒದಗಿಸುತ್ತಾನೋ ಅದರಿಂದ ತೃಪ್ತನಾಗಿರುವ, ಸುಖ-ದುಃಖಾದಿಗಳಿಂದ ನಿರ್ಬಾಧಿತನಾಗಿರುವ ಯಾರಲ್ಲಿಯೂ ಯಾವುದರಲ್ಲಿಯೂ ದ್ವೇಷವಿರದ ಮನಸ್ಸು ಬುದ್ಧಿಗಳ ಸಮತ್ವವನ್ನು ಕಾಪಾಡಿಕೊಂಡಿರುವ ತಾನು ಹಿಡಿದ ಕಾರ್ಯವು ಸಿದ್ಧಿಸಲಿ ಇಲ್ಲವೆ, ಸಿದ್ಧಿಯಾಗದಿರಲಿ ಅದರಿಂದ ಮನಸ್ಥೈರ್ಯವನ್ನು ಕಳೆದುಕೊಳ್ಳದೆ ಎರಡನ್ನೂ ಒಂದೇ ರೀತಿಯಾಗಿ ತಿಳಿಯುವ ಯೋಗಿಯು ಪ್ರಾಪಂಚಿಕ ಕರ್ಮಗಳಲ್ಲಿ ನಿರತನಾಗಿದ್ದರೂ, ಅವನು ಅವುಗಳಿಂದ ಬಂಧಿತನಾಗುವುದಿಲ್ಲ.
ಇಂತಹ ಯೋಗಿಯು ಅಹಂಕಾರವನ್ನು ತ್ಯಜಿಸಿರುವುದರಿಂದ ಮನಸ್ಸು ಬುದ್ಧಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತಾನೆ. ಸುಖ-ದುಃಖ, ಲಾಭ-ನಷ್ಟ, ಒಳ್ಳೆಯದು-ಕೆಟ್ಟದ್ದು, ಇತ್ಯಾದಿ ದ್ವಂದ್ವಗಳಲ್ಲಿ ಅವನ ಮನಸ್ಸು ಪ್ರವೇಶಿಸದೆ ಇರುವುದರಿಂದ ಅವುಗಳನ್ನು ಅನುಭವಿಸಿದರೂ ಸಹ ಅವನು ಮಾತ್ರ ಅವುಗಳ ಕಡೆಗೆ ಉದಾಸೀನನಾಗಿದ್ದು ಆತ್ಮಾನಂದದಲ್ಲಿರುವುದರಿದ ಅವು ಅವನನ್ನು ಪೀಡಿಸಲಾರವು. ಇವನು ವ್ಯವಹಾರದಲ್ಲಿ ಸಾಮಾನ್ಯ ಜನರ ಜೊತೆಗೆ ಅವರಂತೆಯೇ ಎಲ್ಲಾ ಕರ್ಮಗಳನ್ನು ಮಾಡೂತ್ತಿದ್ದಾಗ್ಯೂ ಆ ಕರ್ಮಗಳನ್ನು ಫಲಾಪೇಕ್ಷೆಯಿಲ್ಲದೆ ಕರ್ತವ್ಯ ದೃಷ್ಟಿಯಿಂದ ಪರಮಾತ್ಮನ ಅರ್ಚನೆ ಎಂಬ ಭಾವದಿಂದ ಮಾಡುತ್ತಿರುವುದರಿಂದ ಅವನು ಮಾಡುವ ಕರ್ಮವು ಹೆಚ್ಚು ದಕ್ಷತೆಯಿಂದ ಕೂಡಿರುತ್ತದೆ.
ಇಂತಹ ಸಿದ್ಧಪುರುಷನು ಯಾವ ರೀತಿಯಲ್ಲಿ ಕರ್ಮವನ್ನು ಮಾಡುತ್ತಾನೆಂಬುದನ್ನು ಮುಂದಿನ ಒಂಭತ್ತು ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ಇದನ್ನು ತಿಳಿದುಕೋಂಡು ಸಾಧಕನು ಸಹ ಈ ರೀತಿಯಲ್ಲಿ ಆಚರಿಸಲಿ ಎಂಬುದೇ ಉದ್ದೇಶ .

ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ |
ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ || 23 ||
ಅರ್ಥ : ಆಸಕ್ತಿಯನ್ನು ಕಳಚಿಕೊಂಡಿರುವ, ಮುಕ್ತನಾಗಿರುವ ಅಂದರೆ ಮಾನಸಿಕ ಸಂಬಂಧದಿಂದ ಬಿಡುಗಡೆ ಹೊಂದಿರುವ ಆತ್ಮಜ್ಞಾನವನ್ನು ಹೊಂದಿರುವ ಸಿದ್ಧಪುರುಷನು ತಾನು ಮಾಡುವ ಕರ್ಮಗಳನ್ನು ‘ಯಜ್ಞ’ ಭಾವದಿಂದ ಮಾಡುವುದರಿಂದ ಆ ಕರ್ಮಗಳು ಯಾವ ತರಹದ ವಾಸನೆಯನ್ನು ಉಂಟುಮಾಡದೆ ಕರಗಿ ಹೋಗುತ್ತವೆ.
ಸಿದ್ಧಪುರುಷನ ಲಕ್ಷಣಗಳನ್ನು ಈ ಶ್ಲೋಕದಲ್ಲಿ ಮೂರು ಶಬ್ದಗಳಿಂದ ವರ್ಣಿಸಲಾಗಿದೆ. ‘ಗತಸಂಗಸ್ಯ’ ಅಂದರೆ ಸಿದ್ಧನು ಪ್ರಾಪಂಚಿಕ ವಿವಿಧ ವಸ್ತುಗಳೊಡನೆ ಇಲ್ಲವೆ ಇಂದ್ರಿಯ ವಿಷಯಗಳೊಡನೆ ಆಕರ್ಷಣೆಯನ್ನು ಹೊಂದದೆ ಅವುಗಳಿಂದ ತನಗೆ ಸುಖವು ದೊರೆಯುವುದಿಲ್ಲ ಎಂಬ ದೃಢವಾದ ಜ್ಞಾನದಿಂದ, ಅವುಗಳಲ್ಲಿ ಆಸಕ್ತಿಯನ್ನು ಕಳಚಿಕೊಂಡಿರುತ್ತಾನೆ. ‘ಮುಕ್ತಸ್ಯ – ಎಂದರೆ ಇಂದ್ರಿಯ ವಿಷಯಗಳು ಮನಸ್ಸಿನ ಮೇಲೆ ಉಂಟುಮಾಡುವ ಚೋದನೆ, ಕ್ಷೋಭೆ, ಕಳವಳ ಮೊದಲಾದ ಭಾವಗಳಿಗೆ ಆಸ್ಪದ ಕೊಡದೆ ಮನಸ್ಸನ್ನು ನಿಗ್ರಹಮಾಡಿ ವಿಷಯಗಳ ಬಂಧನದಿಂದ ಬಿಡುಗಡೆ ಹೊಂದಿರುವುದು.
ಜ್ಞಾನಾವಸ್ಥಿತಃ ಚೇತಸಃ – ನಿಗ್ರಹಿಸಲ್ಪಟ್ಟ ಮನಸ್ಸನ್ನು ಬುದ್ಧಿಯ ಕಡೆಗೆ ತಿರುಗಿಸಿ, “ತಾನು ಈ ಶರೀರವಲ್ಲ. ತಾನು ಶುದ್ಧ ಪರಮಾತ್ಮನು” ಎಂಬ ಜ್ಞಾನವನ್ನು ಪಡೆದು ಅದೇ ಧ್ಯಾನದಲ್ಲಿರುವುದು. ಮೊದಲನೆಯದು ಶಾರೀರಿಕ ದೃಷ್ಟಿಯಿಂದ ಎರಡನೆಯದು ಮಾನಸಿಕ ದೃಷ್ಟಿಯಿಂದ ಮತ್ತು ಮೂರನೆಯ ಬೌದ್ಧಿಕ ದೃಷ್ಟಿಯಿಂದ ಸಾಧಿಸಬೇಕಾದ ಸಾಧನೆಗಳು

ಇವನು ಮಾಡುವ ಕರ್ಮವು ಏಕೆ ಕರಗಿಹೋಗುತ್ತದೆ ?

ಬ್ರಹ್ಮಾರ್ಪಣಂ ಬ್ರಹ್ಮಹವಿಬ್ರ್ರಹ್ಮಾಗ್ನೌಬ್ರಹ್ಮಣಾ ಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ || 24 ||
ಅರ್ಥ : ಯಜ್ಞ ಭಾವದಿಂದ ಮಾಡುವ ಕರ್ಮದಲ್ಲಿ ಅವನು ಕೊಡುವ ಘೃತಾಹುತಿ ಆಹುತಿಯನ್ನು ಅಗ್ನಿಯಲ್ಲಿ ಹಾಕುವ ಸವುಟು, ಅಗ್ನಿ, ಹೋಮ ದ್ರವ್ಯಗಳು ಹೋಮ ಮಾಡುವವನು, ಇವೆಲ್ಲವೂ ಬ್ರಹ್ಮವೇ ಆಗಿರುತ್ತದೆ. ಅವನು ಸೇರುವಸ್ಥಾನವೂ ಬ್ರಹ್ಮ ತಾನು ಮಾಡುವ ಎಲ್ಲಾ ಕರ್ಮಗಳಲ್ಲಿ ಅವನು ಬ್ರಹ್ಮನನ್ನೇ ಕಾಣುತ್ತನೆ.
ಅಹಂಕಾರದಿಂದ ಮುಕ್ತನಾದ ಜೀವಾತ್ಮನಿಗೆ ಅಂದರೆ ಶುದ್ಧಪರಮಾತ್ಮನಿಗೆ ವೈದಿಕ ಭಾಷೆಯಲ್ಲಿ ‘ಬ್ರಹ್ಮ’ ಎಂದು ಹೇಳುತ್ತಾರೆ. ಇಲ್ಲಿ ಕೊಟ್ಟಿರುವ ಉಪಮಾನವನ್ನು ವೇದದಲ್ಲಿ ಹೇಳಿದ ‘ಯಜ್ಞ’ಗಳಿಂದ ಆರಿಸಿಕೊಳ್ಳಲಾಗಿದೆ. ಯಜ್ಞದಲ್ಲಿ ವಿಶಿಷ್ಟ ಅಧಿದೇವತೆ ಅಗ್ನಿ, ಹೋಮದ್ರವ್ಯಗಳು ಮತ್ತು ಹೋಮ ಮಾಡುವವನು. ಈ ನಾಲ್ಕು ಸಾಮಗ್ರಿಗಳಿವೆ. ಇದೇ ಉಪಮಾನವನ್ನು ತೆಗೆದುಕೊಂಡು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಸಿದ್ಧಪುರುಷನು ಕರ್ಮಗಳನ್ನು ಮಾಡುವಾಗ ಕರ್ಮಮಾಡುವ ತಾನು ಹೋಮ ಮಾಡಲು ಉಪಯೋಗಿಸುವ ಅಗ್ನಿ, ಹೋಮದ್ರವ್ಯಗಳು, ಮತ್ತು ಆಹುತಿಯನ್ನು ಸ್ವೀಕರಿಸುವ ಅಧಿದೇವತೆ ಇವೆಲ್ಲವೂ ಶುದ್ಧ ಪರಮಾತ್ಮ ಅಥವಾ ‘ಬ್ರಹ್ಮ’ ಎಂಬ ಭಾವವನ್ನಿಟ್ಟುಕೊಂಡು ಕರ್ಮ ಮಾಡುತ್ತಾನೆ. ಅವನಿಗೆ ಕಾಣುವುದೆಲ್ಲವೂ ಬ್ರಹ್ಮವೇ. ಈ ಪ್ರಪಂಚದ ಪ್ರತಿಯೊಂದು ವಸ್ತು ಹಾಗೂ ಚಲನವಲನಾದಿಗಳಲ್ಲಿಯೂ ಅವನು ಬ್ರಹ್ಮನನ್ನು ಕಾಣುತ್ತಾನೆ. ಬ್ರಹ್ಮನ ಹೊರತು ಅವನಿಗೆ ಬೇರೇನೂ ಕಾಣಿಸುವುದಿಲ್ಲ.

ದೈವಮೇವಾಪರೆ ಯಜ್ಞಂ ಯೋಗಿನಃ ಪರ್ಯುಪಾಸತೇ |
ಬ್ರಹ್ಮಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ || 25 ||
ಅರ್ಥ : ಕೆಲವು ಯೋಗಿಗಳು ದೈವಯಜ್ಞವನ್ನೂ ಕೆಲವರು ಬ್ರಹ್ಮಯಜ್ಞವನ್ನೂ, ಇನ್ನೂ ಕೆಲವರು ಕೇವಲ ಯಜ್ಞವನ್ನು ಮಾಡುತ್ತಾರೆ.
ಯಜ್ಞ ಶಬ್ದದ ಅರ್ಥದಲ್ಲಿ ಬಹಳ ಭಿನ್ನಾಭಿಪ್ರಾಯವಿದೆ. ಇಷ್ಟಾರ್ಥ ಸಿದ್ಧಿಗಾಗಿ ವಿಶಿಷ್ಟ ದೇವತೆಯನ್ನು ಆವಾಹನೆ ಮಾಡಿ, ಶಾಸ್ತ್ರವಿಧಿಗನುಸಾರವಾಗಿ ಮಂತ್ರೋಚ್ಛಾರಣೆಯ ಮೂಲಕ ಅಗ್ನಿಯಲ್ಲಿ ಆಹುತಿಗಳನ್ನು ಹಾಕುವುದು ಮೊದಲಾದ ಕರ್ಮಗಳನ್ನೊಳಗೊಂಡ ತಾಂತ್ರಿಕ ಕ್ರಿಯೆಗಳಿಗೆ ‘ದೇವಯಜ್ಞ’ ಎಂದು ಒಂದು ಕಾಲದ ಅಭಿಪ್ರಾಯವಿತ್ತು. ಈಗಲೂ ಇದನ್ನು ನಂಬುವವರೂ ಇದ್ದಾರೆ. ಹಾಗೆ ನಂಬುವವರು ಅದರಂತೆ ಆಚರಿಸಲಿ ಅವರ ಭಾವವನ್ನು ಹಾಳುಮಾಡುವುದು ಬೇಡ. ಗೀತೆಯಲ್ಲಿ ಅರ್ಜುನನು ಯಜ್ಞಭಾವದಿಂದ ಕರ್ಮಮಾಡಬೇಕೆಂದು ಹೇಳಿರುವುದರಿಂದ ಈ ಉಪದೇಶದ ಹಿನ್ನಲೆಯಲ್ಲಿ ಯಜ್ಞದ ಅರ್ಥವನ್ನು ನೋಡಬೇಕು. ಇಲ್ಲಿ ಪ್ರತ್ಯಕ್ಷ ಶಾರೀರಿಕ ಕ್ರಿಯೆಗಳಿಗಿಂತ ಮಾನಸಿಕ ಹಾಗೂ ಬೌದ್ಧಿಕ ಕ್ರಿಯೆಗಳಿಗೆ ಪ್ರಾಮುಖ್ಯತೆ ಹೆಚ್ಚಾಗಿದೆ.
ಈ ದೃಷ್ಟಿಯಿಂದ ದೈವಯಜ್ಞ ಎಂದರೇನೆಂಬುದನ್ನು ನೋಡೋಣ. ನಮ್ಮ ಇಂದ್ರಿಯಗಳಿಗೆ ಬೆಳಕನ್ನು ಕೊಡುವ ಅಂದರೆ ಕಣ್ಣುನೋಡುವಂತೆ ಕಿವಿಯು ಕೇಳುವಂತೆ, ನಾಲಿಗೆಯು ರುಚಿನೋಡುವಂತೆ, ಮೂಗು ವಾಸನೆಯನ್ನು ಗ್ರಹಿಸುವಂತೆ ಚರ್ಮವು ಸ್ಪರ್ಶಜ್ಞಾನವನ್ನು ಹೊಂದುವಂತೆ ಬೆಳಕನ್ನು ಚೇತಸ್ಸನ್ನು ಕೊಡುವ ಆಯಾಯಾ ಇಂದ್ರಿಯಗಳ ಅಧಿದೇವತೆಗೆ ’ದೇವ’ ಎಂದು ಹೆಸರು. ಯೋಗಿಯು ಪ್ರಾಪಂಚಿಕ ವ್ಯವಹಾರದಲ್ಲಿ ಇಂದ್ರಿಯ ವಿಷಯಗಳೊಡನೆ ಸಂಪರ್ಕವನ್ನು ಹೊಂದುತ್ತಾನೆ ನಿಜ. ಆದರೆ ಅವನು ಸಾಮಾನ್ಯ ಮನುಷ್ಯನಂತೆ ಸುಖಭೋಗಗಳಲ್ಲಿ ನಿರತನಾಗಿರದೆ, ಇಂದ್ರಿಯ ಭೋಗಗಳನ್ನು ಅನುಭೋಗಿಸುವಾಗಲೆಲ್ಲಾ,” ಆಯಾಯಾ ಇಂದ್ರಿಯಗಳನ್ನು ಆಯಾಯಾ ಇಂದ್ರಿಯಗಳ ಅಗ್ನಿಯಲ್ಲಿ ಆಹುತಿಯಾಗಿ ಕೊಟ್ಟು ಇಂದ್ರಿಯ ಅಧಿದೇವತೆಗಳನ್ನು ತೃಪ್ತಿಪಡಿಸುತ್ತೇನೆ” ಎಂಬ ಭಾವವನ್ನಿಟ್ಟುಕೊಂಡು, ಆ ಜ್ಞಾನದಿಂದ ಭೋಗಗಳನ್ನು ಆಹುತಿ ಅಥವಾ ಯಜ್ಞರೂಪದಲ್ಲಿ ಭೋಗಿಸುತ್ತಾನೆ. ಇಂದ್ರಿಯ ಭೋಗಗಳನ್ನು ಅನುಭವಿಸುವಾಗ “ನಾನು ನನ್ನ ಸುಖಕ್ಕಾಗಿ ಭೋಗಿಸುತ್ತೇನೆ” ಎಂಬ ಭಾವವನ್ನು ತ್ಯಜಿಸಿ, “ಇಂದ್ರಿಯಗಳ ಅಧಿದೇವತೆಗಳಿಗೆ ಆಹುತಿಯನ್ನು ಕೊಡುವುದಕ್ಕಾಗಿ ಭೋಗಿಸುತ್ತೇನೆ” ಎಂಬ ಭಾವವನ್ನಿಟ್ಟುಕೊಂಡರೆ ಅದು ‘ದೇವಯಜ್ಞ’ ವಾಗುತ್ತದೆ. ಈ ಭೋಗದಲ್ಲಿ ಮನಸ್ಸು ನಿರತನಾಗದೆ ಇರುವುದರಿಂದ ಆ ಕರ್ಮವು ಬಂಧನಕ್ಕೆ ಕಾರಣವಲ್ಲ.
ಇನ್ನು ಕೆಲವರು ‘ಬ್ರಹ್ಮಯಜ್ಞ’ವನ್ನೂ ಮಾಡುತ್ತಾರೆ. ಜ್ಞಾನೇಂದ್ರಿಯಗಳು, ಬ್ರಹ್ಮ ಅಥವಾ ಆತ್ಮನಿಂದ ಚೇತನವನ್ನು ಪಡೆದರೆ ಮಾತ್ರ, ತಮ್ಮ ತಮ್ಮ ಕ್ರಿಯೆಗಳನ್ನು ಮಾಡಬಲ್ಲವು. ಅಹಂಕಾರ ಎಂಬ ಅಜ್ಞಾನದಿಂದ ಕೂಡಿರುವವರೆಗೆ ಇಂದ್ರಿಯ ವಿಷಯಗಳು ನಮಗೆ ಸುಖ-ದುಃಖಗಳನ್ನುಂಟು ಮಾಡಬಲ್ಲವು. ಯೋಗಿಗಳು ‘ಬ್ರಹ್ಮ್’ ಎಂಬ ಅಗ್ನಿಯಲ್ಲಿ ‘ನಾನು’ ಎಂಬ ಅಹಂಕಾರದಿಂದ ಕೂಡಿದ ಜೀವವನ್ನು ಹೋಮ ಮಾಡುತ್ತಾರೆ ಅಂದರೆ ಅಹಂಕಾರವನ್ನು ತ್ಯಜಿಸಿ ತಾನು ಶುದ್ಧ ಪರಮಾತ್ಮ ಎಂಬ ಜ್ಞಾನದಿಂದ ಇರುತ್ತಾರೆ.

ಇತರೆ ವಿಧದ ಯಜ್ಞಗಳು

ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ |
ಶಬ್ದಾದೀನ್‍ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ || 26 ||
ಅರ್ಥ : ಇನ್ನು ಕೆಲವರು ಇಂದ್ರಿಯಗಳನ್ನು ನಿಗ್ರಹ ಎಂಬ ಅಗ್ನಿಯಲ್ಲಿ ಹೋಮ ಮಾಡಿ (ಆಹುತಿ ಕೊಟ್ಟು) ಇಂದ್ರಿಯ ನಿಗ್ರಹವನ್ನು ಸಾಧಿಸುತ್ತಾರೆ. ಮತ್ತೆ ಕೆಲವರು ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳನ್ನು ಇಂದ್ರಿಯ ಎಂಬ ಅಗ್ನಿಯಲ್ಲಿ ಹೋಮ ಮಾಡುತ್ತಾರೆ. ಅಂದರೆ ಇಂದ್ರಿಯಗಳು ಇಂದ್ರಿಯ ವಿಷಯಗಳೊಡನೆ ಸಂಪರ್ಕವನ್ನು ಹೊಂದಿದಾಗ್ಯೂ ಅದು ಮನಸ್ಸಿನವರೆಗೆ ತಲುಪುವುದಿಲ್ಲ. ಈ ಕಾರ್ಯಗಳಲ್ಲಿ ಇವರು ಅಲಿಪ್ತರಾಗಿರುತ್ತಾರೆ.
ವೇದೋಕ್ತ ಯಜ್ಞದಲ್ಲಿ ಬೆಂಕಿಯಲ್ಲಿ ಆಹುತಿಯನ್ನು ಹಾಕುವುದರಿಂದ ಯಜ್ಞದ ಅಧಿದೇವತೆಯು ತೃಪ್ತಿಯನ್ನು ಹೊಂದಿ ಇಚ್ಛಿತ ಫಲವನ್ನು ಕೊಡುತ್ತದೆ. ಅದೇ ರೀತಿ ಹೇಳಿದ ಯಜ್ಞದಲ್ಲಿ ಕೆಲವು ಯೋಗಿಗಳು ‘ಆತ್ಮನಿಗ್ರಹ’ ಎಂಬ ಅಗ್ನಿಯಲ್ಲಿ ‘ಇಂದ್ರಿಯಗಳು’ ಎಂಬ ಆಹುತಿಯನ್ನು ಹಾಕಿ ಯಜ್ಞ ಮಾಡುತ್ತಾರೆ. ಇದರಿಂದ ಇಂದ್ರಿಯಗಳ ಸೂಕ್ಷ್ಮಚಾಪಲ್ಯವು ಸುಟ್ಟು ಹೋಗಿ ಇಂದ್ರಿಯಗಳು ಯೋಗಿಯ ಹತೋಟಿಯಲ್ಲುಳಿಯುತ್ತವೆ.

ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ |
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ || 27 ||
ಅರ್ಥ : ಕೆಲವರು ಜ್ಞಾನದಿಂದ ಪ್ರದೀಪ್ತವಾದ ಆತ್ಮನಿಗ್ರಹ ಎಂಬ ಅಗ್ನಿಯಲ್ಲಿ ಎಲ್ಲಾ ಇಂದ್ರಿಯಗಳು ಮತ್ತು ಪ್ರಾಣಕರ್ಮಗಳನ್ನು ಹೋಮ ಮಾಡುತ್ತಾರೆ.
ಇಂದ್ರಿಯ ಕರ್ಮ ಅಂದರೆ ಜ್ಞಾನೇಂದ್ರಿಯ ಕರ್ಮಗಳು ಪ್ರಾಣಕರ್ಮ ಅಂದರೆ ಕರ್ಮೇಂದ್ರಿಯ ಕರ್ಮಗಳು ನಾನು ಈ ದೇಹದಲ್ಲಿ ನಾನು ಶುದ್ಧ ಪರಮಾತ್ಮನು ಎಂಬ ಜ್ಞಾನದಿಂದ ಅಹಂಕಾರವನ್ನು ಕಳಚಿಕೊಳ್ಳುವುದಕ್ಕೆ ‘ಆತ್ಮ ಸಂಯಮ ಯೋಗ’ ಎಂದು ಹೆಸರು. ‘ಯೋಗ’ ಎಂಬ ಶಬ್ದದಿಂದ ಹೆದರಿದ ಅರ್ಜುನನಿಗೆ ಶ್ರೀಕೃಷ್ಣನು ಯೋಗದ ವಿವಿಧ ಅರ್ಥಗಳನ್ನು ಹೇಳುತ್ತಾ ಹೇಗೆ ಅದನ್ನು ಹೆಚ್ಚು ಹೆಚ್ಚು ಪರಿಚಯ ಮಾಡಿಕೊಡುತ್ತಿದ್ದಾನೆ ಮತ್ತು ಹೇಗೆ ಅದನ್ನು ಪದೇ ಪದೇ ಬಳಸುತ್ತಾ ಅದರ ಬಗ್ಗೆ ಇರುವ ಭೀತಿಯನ್ನು ಕಳೆಯುತ್ತಿದ್ದಾನೆ ಎಂಬುದನ್ನು ಗಮನಿಸಬೇಕು.
ಇನ್ನೂ ಕೆಲವು ಯಜ್ಞಗಳನ್ನು ಹೇಳಲಾಗಿದೆ.

ದ್ರೈವಯಜ್ಞಾಸ್ತÀಪೆÇೀಯಜ್ಞಾ ಯೋಗಯಜ್ಞಾಸ್ತಥಾಪರೇ |

ಸ್ವಾಧ್ಯಾಯಜ್ಞಾನಯಜ್ಞಾಶ್ಚಯತಯಃ ಸಂಶಿತವ್ರತಾಃ || 28 ||
ಅರ್ಥ : ಯತಿಗಳು ಮತ್ತು ವ್ರತನಿಷ್ಠರು, ಸಂಪತ್ತು, ತಪಸ್ಸು, ಯೋಗ, ವೇದಾಧ್ಯಯನ ಮತ್ತು ಜ್ಞಾನ ಇವುಗಳನ್ನು ಬೇರೆ ಬೇರೆಯಾಗಿ ಹೋಮಮಾಡಿ ಆಯಾಯಾ ಯಜ್ಞವನ್ನು ಆಚರಿಸುತ್ತಾರೆ.
ತನ್ನಲ್ಲಿರುವ ಸಂಪತ್ತಿನಲ್ಲಿ, ತಾನು ಬೇಕಾದಷ್ಟನ್ನು ಮಿತವಾಗಿ ಉಪಯೋಗಿಸಿಕೊಂಡು ಉಳಿದುದನ್ನು ಲೋಕಹಿತ ದೃಷ್ಟಿಯಿಂದ ಸತ್ಪಾತ್ರದಲ್ಲಿ ವಿನಿಯೋಗಿಸುತ್ತಾ ಆ ಕಾರ್ಯದಲ್ಲಿ ಅಹಂಕಾರರಹಿತನಾಗಿ ಮಾಡುವ ಯಜ್ಞಕ್ಕೆ ‘ದ್ರವ್ಯಯಜ್ಞ’ ಎಂದು ಹೆಸರು ಇದರಲ್ಲಿ ದ್ರವ್ಯದ ಬಾಹುಲ್ಯತೆಗೆ ಪ್ರಾಮುಖ್ಯತೆ ಇಲ್ಲ. ಅದನ್ನು ಹೇಗೆ ಗಳಿಸಲಾಯಿತು ಮತ್ತು ಯಾವ ಭಾವದಿಂದ ಕೊಡಲಾಯಿತು ಎಂಬುದಕ್ಕೆ ಮಹತ್ವ ಹೆಚ್ಚು.
ಕೆಲವು ವಿಶಿûಷ್ಟ ನಿಯಮಗಳನ್ನು ಅನುಸರಿಸುತ್ತಾ ಉಕ್ತವಾದ ಶಾಸ್ತ್ರೋಕ್ತ ಪದ್ಧತಿಯಂತೆ ನಿರ್ದಿಷ್ಟ ವ್ರತಗಳನ್ನು (ನಿಷ್ಕಾಮ ವ್ರತ) ಮತ್ತು ಧ್ಯಾನ ಮೊದಲಾದ ಸಾಧನೆಗಳನ್ನು ಮಾಡಿ, ನಿಯಮಿತ ಜೀವನವನ್ನು ನಡೆಸಿ, ಮಾಡುವ ಉಪಾಸನೆಗೆ ‘ತಪೆÇೀಯಜ್ಞ’ ಎಂದು ಹೆಸರು. ಇದರಿಂದ ಕ್ರಮೇಣ ಆತ್ಮನಿಗ್ರಹವು ಸಾಧಿಸುತ್ತದೆ. ‘ಯೋಗಯಜ್ಞ’ ಎಂದರೆ ಹೃದಯದಲ್ಲಿ ನೆಲೆಸಿರುವ ಪರಮಾತ್ಮನನ್ನು ಭಕ್ತಿಯಿಂದ ಉಪಾಸನೆ ಮಾಡುವುದು. ವೇದಗಳು ಹಾಗೂ ಇತರೆ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಪಡೆದ ಜ್ಞಾನದ ಮೂಲಕ, ತನ್ನ ದೋಷಗಳು ಹಾಗೂ ದೌರ್ಬಲ್ಯಗಳನ್ನು ತಾನೇ ಕಂಡು ಹಿಡಿದುಕೊಂಡು, ಅವುಗಳನ್ನು ತಿದ್ದಿಕೊಳ್ಳುತ್ತಾ ಶಾಸ್ತ್ರಭ್ಯಾಸದಿಂದ ಜ್ಞಾನವನ್ನು ಪಡೆಯುವುದಕ್ಕೆ “ಸ್ವಾಧ್ಯಾಯ ಯಜ್ಞ” ಎಂದು ಹೆಸರು. ಆತ್ಮಜ್ಞಾನವನ್ನು ಪಡೆದು ಆ ಅಗ್ನಿಯಲ್ಲಿ ತನ್ನ ಅಜ್ಞಾನ ಮತ್ತು ಅಹಂಕಾರಗಳನ್ನು ಹೋಮ ಮಾಡಿ ಆತ್ಮಾನಂದದಲ್ಲಿರುವುದಕ್ಕೆ ಜ್ಞಾನಯಜ್ಞ’ ಎಂದು ಹೆಸರು
ಈ ಎಲ್ಲಾ ಯಜ್ಞಗಳಲ್ಲಿಯೂ ಬಾಹ್ಯಾಡಂಬರ ಬೂಟಾಟಿಕೆ ಮತ್ತು ತಾನು ಒಬ್ಬ ಸಿದ್ಧ ಎಂದು ಹೊಗಳಿಸಿಕೊಳ್ಳಬೇಕೆಂಬ ಅಹಂಕಾರಗಳಿರದೆ ನಿಷ್ಕಪಟವಾದ ಅಂತಃಶುದ್ಧಿ ಮತ್ತು ಸತತವಾದ ಅಭ್ಯಾಸ ಇವುಗಳಿರುವುದು ಅವಶ್ಯಕ. (ಯತಯಃ) ಪ್ರಾಣಾಯಾಮ ಎಂಬ ಇನ್ನೊಂದು ಯಜ್ಞವಿದೆ.

ಪ್ರಾಣಾಯಾಮ ಎಂಬ ಇನ್ನೊಂದು ಯಜ್ಞವಿದೆ.

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇ„ಪಾನಂ ತಥಾಪರೇ |
ಪ್ರಾಣಾಪಾನಗತೀ ರುದ್ಧ್ವಾಪ್ರಾಣಾಯಾಮಪರಾಯಣಾಃ || 29 ||
ಅರ್ಥ: ಕೆಲವರು ಪ್ರಾಣವಾಯುವಿನಲ್ಲಿ ಅಪಾನವಾಯುವನ್ನು ಕೆಲವರು ಅಪಾನವಾಯುವಿನಲ್ಲಿ ಪ್ರಾಣವಾಯುವನ್ನು ಹೋಮ ಮಾಡುತ್ತಾರೆ. ಮತ್ತೆ ಕೆಲವರು ಪ್ರಾಣಾಯಾಮದ ಮೂಲಕ ಎರಡೂ ವಾಯುಗಳ ಗತಿಯನ್ನು ತಡೆದು ಆತ್ಮಧ್ಯಾನದಲ್ಲಿರುತ್ತಾರೆ.
ಒಂದು ಗೊತ್ತಾದ ವಿಶಿಷ್ಟ ವಿಧಾನದಿಂದ ಗಾಳಿಯನ್ನು ಶ್ವಾಸಕೋಶದ ಒಳಕ್ಕೆ ತೆಗೆದುಕೊಳ್ಳುವುದು, ಒಳಗೆ ಹಿಡಿದು ನಿಲ್ಲಿಸುವುದು ಮತ್ತು ಹೊರಕ್ಕೆ ಬಿಡುವುದು. ಈ ಕ್ರಮಕ್ಕೆ ‘ಪ್ರಾಣಾಯಾಮ’ ಎಂದು ಹೆಸರು. ಇದೂ ಒಂದು ತರಹದ ಸಾಧನೆ. ಇದರಿಂದ ಇಂದ್ರಿಯ ಮಾರ್ಗಗಳು ಶುದ್ಧವಾಗಿ ಏಕಾಗ್ರತೆಯಿಂದ ಧ್ಯಾನಮಾಡಲು ಸಹಾಯವಾಗುತ್ತದೆ.
ಕೊನೆಯದಾದ ಹನ್ನೆರಡನೆಯ ಯಜ್ಞವನ್ನು ಹೇಳಲಾಗಿದೆ.

ಅಪರೇ ನಿಯತಾಹಾರಾಃ ಪ್ರಾಣಾನ್ಪ್ರಾಣೇಷು ಜುಹ್ವತಿ |
ಸರ್ವೇಷ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ || 30 ||
ಅರ್ಥ : ಇನ್ನು ಕೆಲವರು ನಿಯಮಿತವಾಗಿ ಆಹಾರವನ್ನು ಸೇವಿಸುತ್ತಾ ಪ್ರಾಣವಾಯುವಿನಲ್ಲಿ ಪ್ರಾಣವಾಯುವನ್ನು ಹೋಮ ಮಾಡುತ್ತಾರೆ. ಹೀಗೆ ವಿವಿಧ ರೀತಿಯಲ್ಲಿ ಯಜ್ಞ ಮಾಡುವವರೆಲ್ಲರೂ ಯಜ್ಞದ ಅರ್ಥವನ್ನು ತಿಳಿದವರಾಗಿದ್ದಾರೆ. ಅವರು ಮಾಡುವ ಯಜ್ಞದಿಂದ ಅವರು ಪಾಪಮುಕ್ತರಾಗುತ್ತಾರೆ.
ಕೆಲವರು ಆಹಾರದಲ್ಲಿ ವಿಶಿಷ್ಟ ನಿಯಮಗಳನ್ನು ಪಾಲಿಸುತ್ತಾ ವ್ರತಬದ್ಧವಾಗಿ ತನ್ಮೂಲಕ ಇಂದ್ರಿಯಗಳನ್ನು ನಿಗ್ರಹಿಸಿ, ಯಜ್ಞಮಾಡುತ್ತಾರೆ. ವೇದಕಾಲದಲ್ಲಿಯ ಜನರು ಆಹಾರಶಾಸ್ತ್ರವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿ, ಜನರ ವಿವಿಧ ಶಾರೀರಿಕ ಮಾನಸಿಕ ಸಂಸ್ಕಾರ ಹಾಗೂ ಅವರು ಮಾಡುವ ಕೆಲಸಕ್ಕೆ ಅನುಗುಣವಾಗಿ ಯಾರು ಯಾರು ಯಾವ ಯಾವ ತರಹದ ಆಹಾರವನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕೆಂಬುದನ್ನು ಸ್ಪಷ್ಟವಾಗಿ ಅರಿತಿದ್ದರು. ಇಷ್ಟೇ ಅಲ್ಲ. ಆಹಾರದಲ್ಲಿ ಕೆಲವು ವಿಶಿಷ್ಟ ನಿಯಮಗಳನ್ನು ಪಾಲಿಸುವುದರಿಂದ ಇಂದ್ರಿಯ ನಿಗ್ರಹದ ಜೊತೆಗೆ ಮಾನಸಿಕ ಹಾಗೂ ಬೌದ್ಧಿಕ ಶಕ್ತಿಗಳನ್ನು ಜಾಗ್ರತಗೊಳಿಸಿಕೊಂಡು ಮನುಷ್ಯನು ತನ್ನ ನಡತೆ ಹಾಗೂ ಗುಣಗಳನ್ನು ತಿದ್ದಿಕೊಳ್ಳಬಹುದಾದ ಕಲೆಯನ್ನು ಸಹ ಕಲಿತುಕೊಂಡಿದ್ದರು.
ಮೇಲೆ ಹೇಳಿದ ವಿವಿಧ ರೀತಿಯ ಯಜ್ಞವನ್ನು ತ್ಯಾಗಬುದ್ಧಿಯಿಂದ ದೀರ್ಘಕಾಲದವರೆಗೆ ಆಚರಿಸಿದರೆ ಈ ಯಜ್ಞಗಳ ಮೂಲಕ ಮನುಷ್ಯನು ಪಾಪಮುಕ್ತನಾಗಿ ಪರಿಶುದ್ಧನಾಗುತ್ತಾನೆ. ಆದರೆ ಇವುಗಳಿಂದ

ಆತ್ಮಜ್ಞಾನವಾಗುವುದಿಲ್ಲ. ಈ ಜ್ಞಾನವನ್ನು ಪಡೆಯುವ ಮುಂದಿನ ಸಾಧನೆಗೆ ಅವನು ಅರ್ಹನಾಗುತ್ತಾನೆ.
ಇದುವರೆಗೆ ವಿವರಿಸಿದ ಹನ್ನೆರಡು ತರಹದ ಯಜ್ಞಗಳಲ್ಲಿ ‘ಸ್ವಪ್ರಯತ್ನ’ ಹಾಗೂ ‘ತ್ಯಾಗ’ ಬುದ್ಧಿಯಿಂದ ಮಾಡಲಾಗುವ ಸಾಧಕನು ಪಾಪಮುಕ್ತನಾಗಿ ಮುಂದಿನ ಸಾಧನೆಯನ್ನು ಮಾಡಲು ಅರ್ಹತೆಯನ್ನು ಪಡೆಯುವುದರಿಂದ ಇವುಗಳಲ್ಲಿ ಒಂದು ಹಿರಿದು ಇನ್ನೊಂದು ಕಿರಿದು ಎಂಬ ಭಾವವಿಲ್ಲ.

ಯಜ್ಞ ಮಾಡದೆ ಬದುಕಲಾಗುವುದಿಲ್ಲ.

ಯಜ್ಞಶಿಷ್ಟಾಮೃಸ್ತಭುಜಃ ಯಾಂತಿ ಬ್ರಹ್ಮಸನಾತನಮ್ |
ನಾಯಂ ಲೋಕೋ„ಸ್ತ್ಯಯಜ್ಞಸ್ಯ ಕುತೋ„ನ್ಯಃ ಕುರುಸತ್ತಮ || 31 ||
ಅರ್ಥ : ಯಜ್ಞಭಾವದಿಂದ ಕರ್ಮಮಾಡಿ ಉಳಿದ ಅಮೃತ ತುಲ್ಯವಾದ ಭಾಗವನ್ನು ಸೇವಿಸುವವರು ಶಾಶ್ವತವಾದ ಬ್ರಹ್ಮಪದವನ್ನು ಸೇರುತ್ತಾರೆ. ಕುರುಶ್ರೇಷ್ಠನೇ, ಯಜ್ಞ ಮಾಡದೆ ಇರುವವರಿಗೆ ಈ ಲೋಕದಲ್ಲಿ ಸುಖವಿಲ್ಲ. ಬೇರೆ ಲೋಕದಲ್ಲಿ ಹೇಗೆ ತಾನೆ ದೊರಕೀತು?
ಯಜ್ಞ ಎಂಬ ಶುಬ್ದಕ್ಕೆ ಹಿಂದೆ ಹೇಳಲಾದ ವ್ಯಾಖ್ಯೆ ಮತ್ತು ಯಜ್ಞದಲ್ಲಿ ಕೇವಲ ಕರ್ಮಕಾಂಡೋಕ್ತ ಯಜ್ಞವಲ್ಲದೆ ಇತರೆ ಹನ್ನೆರಡು ತರಹದ ಯಜ್ಞಗಳು ಸಮಾವೇಶಗೊಂಡಿರುವ ಸತ್ಯಾಂಶ ಇವುಗಳ ಹಿನ್ನಲೆಯಲ್ಲಿ ‘ಯಜ್ಞಶೇಷ’ ಎಂದರೆ ಯಜ್ಞದ ನಂತರ ಉಳಿದ ಹೋಮದ್ರವ್ಯ ಅಥವಾ ‘ಚರು’ ಎಂಬ ಅರ್ಥಮಾಡಕೂಡದು ‘ಯಜ್ಞ ಶೇಷಾಮೃತ’ ಎಂದರೆ ಹಿಂದೆ ಹೇಳಿದ ಹನ್ನೆರಡು ತರಹ ಯಜ್ಞಗಳ ಫಲರೂಪವಾದ ಅಮೃತ ಎಂದು ತಿಳಿದುಕೊಳ್ಳಬೇಕು. ಯಜ್ಞಗಳ ಫಲ ಎಂದರೆ ಯಜ್ಞಾಭಾವನೆಯಿಂದ ಮಾಡುವ ಸಾಧನೆಗಳಿಂದ ಲಭಿಸುವ ಇಂದ್ರಿಯನಿಗ್ರಹ ಮತ್ತು ಆತ್ಮಶುದ್ಧೀ ಇವುಗಳನ್ನು ಯಜ್ಞಶೇಷ ಎಂಬ ಭಾವನೆಯಿಂದ ಅನುಭವಿಸಿ ತನ್ಮೂಲಕ ಸಾಧನೆಯ ಮುಂದಿನ ಹಂತವಾದ ಧ್ಯಾನದಲ್ಲಿ ನಿರತನಾಗಬೇಕು. ಇಂತಹ ಸಾಧಕನು ಧ್ಯಾನಕಾಲದಲ್ಲಿ ಹೆಚ್ಚು ಏಕಾಗ್ರತೆಯಿಂದ ಧ್ಯಾನ ಮಾಡಬಲ್ಲನು. ಈ ಲೋಕದಲ್ಲಿ ತ್ಯಾಗ ಹಾಗೂ ಸ್ವಪ್ರಯತ್ನದ ಹೊರತಾಗಿ ಏನನ್ನೂ ಗಳಿಸುವುದು ಸಾಧ್ಯವಿಲ್ಲವೆಂದೂ ಇವೆರಡೂ ಇಲ್ಲದವರಿಗೆ ಈ ಲೋಕದಲ್ಲಾಗಲೀ, ಮುಂದಿನ ಲೋಕದಲ್ಲಾಗಲೀ ಸುಖವಿಲ್ಲವೆಂದು ತಿಳಿಸಿ ಎಲ್ಲರೂ ಯಜ್ಞಭಾವದಿಂದ ಕರ್ಮನಿರತರಾಗಬೇಕೆಂದು ಹೇಳಲಾಗಿದೆ.
ಈ ಹನ್ನೆರಡು ಯಜ್ಞಗಳು ಕೃಷ್ಣನ ಕಲ್ಪನೆಯಲ್ಲವೆಂದು ಇವು ಬ್ರಹ್ಮನ ಮುಖದಿಂದ ಬಂದವುಗಳೆಂದೂ ಸ್ಪಷ್ಟಪಡಿಸಲಾಗಿದೆ.

 

 

ಏವಂ ಬುಹವಿಧಾ ಯಜ್ಞಾಃ ವಿತತಾ ಬ್ರಹ್ಮಣೋ ಮುಖೇ |
ಕರ್ಮಜಾನ್ವಿದ್ಧಿ ತಾನ್ಸರ್ವಾನೇವಂ ಜ್ಞಾತ್ವಾವಿಮೋಕ್ಷ್ಯಸೇ || 32 ||
ಅರ್ಥ : ಈ ರೀತಿಯಾಗಿ ಇನ್ನೂ ಅನೇಕ ವಿಧವಾದ ಯಜ್ಞಗಳನ್ನು ಸ್ವತಃ ಬ್ರಹ್ಮನೇ ಹೇಳಿದ್ದಾನೆ. ಇವೆಲ್ಲವುಗಳಲ್ಲಿಯೂ (ತ್ಯಾಗ ಬುದ್ಧಿಯಿಂದ ಮಾಡುವ) ಕರ್ಮವು ಪ್ರಧಾನವಾಗಿದೆ, ಎಂಬ ತತ್ವವನ್ನು ತಿಳಿದರೆ ನೀನು ಪಾಪಗಳಿಂದ ಮುಕ್ತನಾಗುತ್ತೀಯೆ.
ಯಜ್ಞಗಳು ಸಾಧನೆಯ ಮಾರ್ಗಗಳೇ ಹೊರತು ಅವು ಮುಟ್ಟತಕ್ಕ ಇಲ್ಲವೆ ಸಾಧಿಸತಕ್ಕ ‘ಗುರಿ’ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ ಎಲ್ಲಾ ಯಜ್ಞಗಳಲ್ಲಿಯೂ ತ್ಯಾಗಬುದ್ಧಿ ಮತ್ತು ಸತತ ಪರಿಶ್ರಮ ಇವು ಅವಶ್ಯಕ ಎಂಬುದನ್ನೂ ಗಮನಿಸಬೇಕು.

ಯಜ್ಞದ ಅಂತಿಮ ಗುರಿ ಏನು ?

ಶ್ರೇಯಾನ್ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞಃ ಪರಂತಪ |
ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ || 33 ||
ಅರ್ಥ : ದ್ರವ್ಯಗಳಿಂದ ಮಾಡುವ ಯಜ್ಞಕ್ಕಿಂತ ಜ್ಞಾನಯಜ್ಞವು ಶ್ರೇಷ್ಠವಾದುದು . ಏಕೆಂದರೆ ಪ್ರಾರ್ಥನೆ ಎಲ್ಲಾ ಕರ್ಮಗಳೂ, (ಯಜ್ಞಗಳು ಸಹ) ಕೊನೆಯಲ್ಲಿ ಜ್ಞಾನೋದಯದಲ್ಲಿ ಸಮಾಪ್ತಿಯಾಗುತ್ತವೆ.
ಯಜ್ಞ ಎಂದರೆ ಯಾವುದಾದರೊಂದು ಹೋಮದ್ರವ್ಯವನ್ನು ಅಗ್ನಿಯಲ್ಲಿ ಆಹುತಿಯಾಗಿ ಹಾಕಿ ಮಾಡಲಾಗುವ ಕರ್ಮಕಾಂಡೊಕ್ತ್ತ ತಾಂತ್ರಿಕ ಕ್ರಿಯೆಗಳು ಎಂದು ಅರ್ಜುನನ ಮನಸ್ಸಿನಲ್ಲಿದ್ದ ನಂಬಿಕೆಯನ್ನೂ ಇಂದ್ರಿಯ ನಿಗ್ರಹ ಮೊದಲಾದವುಗಳು ಹೇಗೆ ‘ಯಜ್ಞ’ ವಾದೀತು ಎಂಬ ಅನುಮಾನವನ್ನು ಹೋಗಲಾಡಿಸಲು ಎಲ್ಲಾ ಯಜ್ಞಗಳ ಗುರಿ ಏನೆಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಜ್ಞಾನ ಎಂಬ ಆಹುತಿಯನ್ನು ‘ಜ್ಞಾನ’ ಎಂಬ ಅಗ್ನಿಯಲ್ಲಿ ಆಹುತಿಯಾಗಿ ಹಾಕಿ, ಸುಟ್ಟು ಬೂದಿ ಮಾಡಿ ‘ಆತ್ಮಜ್ಞಾನ’ವನ್ನು ಸಂಪಾದಿಸುವುದಕ್ಕೆ ಜ್ಞಾನಯಗ್ನ ಎಂದು ಹೆಸರು. ಪ್ರಪಂಚದಲ್ಲಿರುವ ಎಲ್ಲಾ ಯಜ್ಞಗಳ ಗುರಿಯೂ ಜ್ಞಾನವನ್ನು ಸಂಪಾದಿಸಲು ಮನುಷ್ಯನನ್ನು ಯೋಗ್ಯನನ್ನಾಗಿ ಮಾಡುವುದೇ ಆಗಿರುವುದರಿಂದ ಜ್ಞಾನಯಜ್ಞವು ಎಲ್ಲಾ ಯಜ್ಞಗಳಲ್ಲಿಯೂ ಶ್ರೇಷ್ಠವಾದುದು.
ಹಿಂದೆ ತಿಳಿಸಿದಂತೆ ಅಜ್ಞಾನದಿಂದ ಆಸೆ ಉತ್ಪನ್ನವಾಗುತ್ತದೆ. ಆಸೆಯಿಂದ ಕರ್ಮ ಮಾಡುತ್ತೇವೆ. ಹೀಗೆ ಎಲ್ಲಾ ಕರ್ಮಗಳಿಗೆ ಮೂಲ ಕಾರಣವಾದ ಅಜ್ಞಾನವು ಜ್ಞಾನಾಗ್ನಿಯಲ್ಲಿ ಸುಟ್ಟು ಜ್ಞಾನ ಪ್ರಾಪ್ತಿಯಾದರೆ ಎಲ್ಲಾ ಕರ್ಮಗಳ ಫಲವು ಲಭಿಸಿದಂತಾಗುತ್ತದೆ. ಆದ್ದರಿಂದ ಎಲ್ಲಾ ಯಜ್ಞಗಳು ಜ್ಞಾನದಲ್ಲಿ ಪರಿಸಮಾಪ್ತಗೊಳ್ಳುತ್ತವೆ ಎಂದು ಹೇಳಲಾಗಿದೆ.

 

ಹಾಗಾದರೆ ಜ್ಞಾನವನ್ನು ಪಡೆಯುವ ಮಾರ್ಗವಾವುದು ?
ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ || 34 ||
ಅರ್ಥ : ಆತ್ಮಜ್ಞಾನವನ್ನು ಪಡೆದ ಜ್ಞಾನಿಗಳಿಗೆ ನಮಸ್ಕಾರ ಮಾಡುವುದು ಪ್ರಶ್ನೆಯನ್ನು ಕೇಳುವುದು ಮತ್ತು ಸೇವೆ ಮಾಡುವುದು ಇವುಗಳಿಂದ ಜ್ಞಾನವನ್ನು ತಿಳಿದುಕೊಳ್ಳಬೇಕು.
ಗುರುವು ಶಿಷ್ಯನಿಗೆ ಜ್ಞಾನವನ್ನು ಉಪದೇಶಿಸುವಾಗ ಗುರು-ಶಿಷ್ಯರಲ್ಲಿ ಮಧ್ಯದಲ್ಲಿ ಪ್ರೇಮವೂ ಆತ್ಮೀಯತೆಯೂ ಬೆಳೆದು, ಇಬ್ಬರೂ ಪರಸ್ಪರರನ್ನು ಅರಿತುಕೊಂಡಿರುವುದು ಅವಶ್ಯಕ. ಜೊತೆಗೆ ಶಿಷ್ಯನಲ್ಲಿ ಜ್ಞಾನವನ್ನು ಸ್ವೀಕರಿಸಲು ಹಾಗೂ ಅದನ್ನು ಗೃಹಿಸಿ ಜೀರ್ಣಿಸಿಕೊಂಡು ಅನುಭವಿಸಲು ಯೋಗ್ಯವಾದ ಮಾನಸಿಕ, ಬೌದ್ಧಿಕ ತಯಾರಿಯೂ ಬೇಕು. ಶಿಷ್ಯನಲ್ಲಿ ಯಾವ ತರಹದ ಪೂರ್ವ ತಯಾರಿಕೆಯು ಬೇಕೆಂಬುದನ್ನು ಈ ಶ್ಲೋಕದಲ್ಲಿ ತಿಳಿಸಲಾಗಿದೆ. ಎಂತಹ ಗುರುವು ಮಾತ್ರ ಜ್ಞಾನವನ್ನು ಉಪದೇಶಿಸಬಲ್ಲನು ಎಂಬುದನ್ನ್ನು ಜ್ಞಾನಿನಃ, ತತ್ವದರ್ಶಿನಃ ಎಂಬ ಎರಡು ಶಬ್ದಗಳಲ್ಲಿ ಹೇಳಲಾಗಿದೆ.
ನಮಸ್ಕಾರ ಮಾಡುವುದೆಂದರೆ, ಗುರುವಿನ ಎದುರಿಗೆ ಶಾರೀರಿಕವಾಗಿ ಅಡ್ಡಬಿದ್ದು, ಸಾಷ್ಟಾಂಗ ನಮಸ್ಕಾರವನ್ನು ಮಾಡುವುದರ ಜೊತೆಗೆ, ಶಿಷ್ಯನ ಮನಸ್ಸು ಬುದ್ಧಿಗಳಲ್ಲಿ ಸಹ ಗುರುವಿನ ಬಗ್ಗೆ ಗೌರವ, ಭಕ್ತಿ, ವಿನಯ, ವಿಧೇಯತೆ, ತಾಳ್ಮೆ ಮೊದಲಾದ ಸದ್ಗುಣಗಳು ಜಾಗೃತವಾಗಿರಬೇಕು. ಮನಸ್ಸಿನೊಳಗೆ ವಿವಾದವನ್ನು ದ್ವೇಷವನ್ನು ಇಟ್ಟುಕೊಂಡು, ಹೊರಗೆ ಡಂಭಾಚಾರಕ್ಕಾಗಿ ಅಡ್ಡಬಿದ್ದರೆ ಸಾಲದು. ಗುರುವು ಹೇಳಿದುದನ್ನು ಸುಮ್ಮನೆ ಕೇಳಿಕೊಂಡು ಒಪ್ಪಿಕೊಳ್ಳಕೂಡದು. ತನ್ನ ಮನಸ್ಸಿನಲ್ಲುಂಟಾದ ಸಂಶಯಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿಯೂ, ಉಪದೇಶಿಸಿದ ತತ್ವಗಳು ಸರಿಯಾಗಿ ತಿಳಿಯದಿದ್ದರೆ ಅವುಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದಕ್ಕಾಗಿಯೂ, ಬಾರಿಬಾರಿಗೂ ಗುರುವಿನೊಡನೆ ಪ್ರಶ್ನೆಮಾಡಿ ಸಂಶಯವನ್ನು ಪರಿಹರಿಸಿಕೊಳ್ಳಬೇಕು.
ಸೇವೆಮಾಡುವುದು ಗುರು ಶಿಷ್ಯರಲ್ಲಿ ಆತ್ಮೀಯತೆ ಹಾಗೂ ಪ್ರೇಮವು ವೃದ್ಧಿಯಾಗುವುದಕ್ಕಾಗಿ. ಶಿಷ್ಯನು ಗುರುವಿನಲ್ಲಿ ತನ್ನ ತಂದೆ ಎಂಬ ಭಾವವನ್ನಿಟ್ಟುಕೊಂಡು ಆತನ ಸೇವೆಯನ್ನು ಮಾಡಬೇಕು. ಇದಕ್ಕಿಂತಲೂ ಹೆಚ್ಚಿನ ಮಹತ್ವದ ವಿಷಯವೇನೆಂದರೆ ಗುರುವು ಉಪದೇಶಿಸಿದ ರೀತಿಯಲ್ಲಿ ತನ್ನ ಜೀವನ ನಡತೆ ಆಚರಣೆಗಳನ್ನು ತಿದ್ದಿಕೊಂಡರೆ, ಅದರಿಂದ ಗುರುವಿಗೆ, ಸೇವೆ ಮಾಡಿದಷ್ಟೇ ಆನಂದವಾಗುತ್ತದೆ.
ಈ ರೀತಿಯಾಗಿ ಗುರು ಶಿಷ್ಯರಲ್ಲಿ ಆತ್ಮೀಯತೆಯು ಶ್ರುತಿಗೂಡಿದರೆ ಆಗ ಶಿಷ್ಯನು ಗುರುವು ಉಪದೇಶ ಮಾಡಿದ ಜ್ಞಾನವನ್ನು ಸ್ಪಷ್ಟವಾಗಿ ಸಂಪೂರ್ಣವಾಗಿ ಗ್ರಹಿಸಿ ತಿಳಿದುಕೊಳ್ಳುತ್ತಾನೆ. ಮನೆಯಲ್ಲಿರುವ ರೇಡಿಯೋವನ್ನು ತನಗೆ ಬೇಕಾದ ಕೇಂದ್ರದೊಡನೆ ಶ್ರುತಿಗೂಡಿಸಿ ಜೋಡಿಸಿದರೆ ಮಾತ್ರ ಆ ಕೇಂದ್ರದ ಸುದ್ದಿಯನ್ನು ಕೇಳುವಂತೆ.
ಇದೇ ರೀತಿಯಾಗಿ ಗುರುವಿನಲ್ಲಿ ಸಹ ಎರಡು ಮುಖ್ಯ ಯೋಗ್ಯತೆಗಳಿರಬೇಕು
1. ಸಂಪೂರ್ಣವಾದ ಹಾಗೂ ಸ್ಪಷ್ಟವಾದ ಜ್ಞಾನ
2. ಆತ್ಮಜ್ಞಾನದ ಅನುಭವ

ಹೀಗೆ ಜ್ಞಾನವನ್ನು ಪಡೆದರೆ ಆಗುವ ಲಾಭವೇನು ?
ಯಜ್ಞಾತ್ವಾನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ |
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ || 35 ||
ಅರ್ಥ : ಈ ಜ್ಞಾನವನ್ನು ಪಡೆದರೆ, ಎಲೈ ಪಾಂಡವನೆ, ನೀನು ಪುನಃ ಈ ರೀತಿಯಾಗಿ ಮೋಹಗೊಳ್ಳುವುದಿಲ್ಲ ಮತ್ತು ನೀನು, ನಿನ್ನಲ್ಲಿ ಹಾಗೂ ನನ್ನಲ್ಲಿ ಎಲ್ಲಾ ಭೂತಗಳು ನೆಲೆಸಿರುವುವು ಎಂಬುದನ್ನು ಮತ್ತು ನಾವಿಬ್ಬರೂ ಒಂದೇ ಎಂಬುದನ್ನು ತಿಳಿಯುತ್ತೀಯೆ.
ಆತ್ಮಜ್ಞಾನವಾದ ಮೇಲೆ ಜೀವನು ಅಹಂಕಾರವನ್ನು ಕಳಚಿಹಾಕಿ, ತಾನೇ ಆತ್ಮನು ಎಂಬುದಾಗಿ ತಿಳಿಯುತ್ತಾನೆ. ಈ ಜ್ಞಾನದ ಅನುಭವವಾಗುವವರೆಗೂ ಗುರುವಿನ ಅವಶ್ಯಕತೆಯಿದೆ.
ಜ್ಞಾನದ ಮಹತ್ವವನ್ನು ಇನ್ನೂ ವರ್ಣಿಸಲಾಗಿದೆ.

ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ |
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ || 36 ||
ಅರ್ಥ : ನೀನು ಪಾಪಿಗಳಲ್ಲೆಲ್ಲಾ ಹೆಚ್ಚಿನ ಪಾಪಿಯಾಗಿದ್ದಾಗ್ಯೂ ಸಹ ಈ ಜ್ಞಾನ ಪ್ರಾಪ್ತಿಯಾದ ಕೂಡಲೆ ಎಲ್ಲಾ ಪಾಪಗಳನ್ನು ದಾಟಿಬಿಡುತ್ತೀಯ.
ಪಾಪವು ಅಹಂಕಾರದಿಂದ ಹುಟ್ಟುತ್ತದೆ. ಜ್ಞಾನೋದಯದಿಂದ ಅಹಂಕಾರವೇ ನಾಶವಾದ ಮೇಲೆ ಅಜ್ಞಾನಜನ್ಯವಾದ ಪಾಪಗಳು ಕರಗಿ ಹೋಗುತ್ತವೆ. ಎಚ್ಚರಾದ ಮೇಲೆ ಕನಸಿನ ಸಾಮ್ರಾಜ್ಯವು ಕರಗಿ ಹೋದಂತೆ ಇಂತಹ ಜ್ಞಾನಿಯು ಪ್ರಪಂಚದಲ್ಲಿ ಜೀವಿಸಿ, ಸಾಮಾನ್ಯ ಮನುಷ್ಯನಂತೆ ವ್ಯವಹರಿಸಿದಾಗ ಅವನು ಪ್ರತಿಯೊಂದು ಸಜೀವ, ನಿರ್ಜೀವ ವಸ್ತುಗಳನ್ನು ಆಯಾಯಾ ವಸ್ತುಗಳೆಂದು ತಿಳಿಯದೆ ಶುದ್ಧ ಪರಮಾತ್ಮನು ಆಯಾಯಾ ರೂಪಗಳಲ್ಲಿ ನಟಿಸುತ್ತಿದ್ದಾನೆ ಎಂದು ತಿಳಿಯುತ್ತಾನೆ.
ಜ್ಞಾನವು ಪಾಪವನ್ನು ಹೇಗೆ ನಾಶಮಾಡುತ್ತದೆ.

 

ಯಥೈಧಾಂಸಿ ಸಮಿದ್ಧೋ„ಅಗ್ನಿರ್ಭಸ್ಮಸಾತ್ಕುರುತೇ„ರ್ಜುನ |
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ || 37 ||
ಅರ್ಥ : ಉರಿಯುತ್ತಿರುವ ಬೆಂಕಿಯು ಕಟ್ಟಿಗೆಯನ್ನು ಸುಟ್ಟು ಬೂದಿ ಮಾಡುವಂತೆ ಅರ್ಜುನನೇ, ಜ್ಞಾನಾಗ್ನಿಯು ಎಲ್ಲಾ ಕರ್ಮಗಳನ್ನು ಸುಟ್ಟು ಬೂದಿ ಮಾಡುತ್ತದೆ.
ಅರ್ಜುನನಿಗೆ ಕರ್ಮಕಾಂಡದಲ್ಲಿ ಹೇಳಿದ ಯಜ್ಞದ ಪರಿಚಯವಿದ್ದುದರಿಂದ, ಅವನಿಗೆ ಈ ಉಪದೇಶದಲ್ಲಿ ಆತ್ಮೀಯಭಾವನು ಹುಟ್ಟಿ ವಿಷಯವು ಸರಿಯಾಗಿ ತಿಳಿಯಲೆಂದು ಅಗ್ನಿಯ ಉಪಮಾನವನ್ನು ಹೇಳಲಾಗಿದೆ. ಬೆಂಕಿಯಲ್ಲಿ ಬೇರೆ ಬೇರೆ ಜಾತಿಯ, ಬಣ್ಣದ, ತೂಕದ, ಅಳತೆಯ, ಗುಣಗಳ ಕಟ್ಟಿಗೆಗಳನ್ನು ಆಹುತಿಯಾಗಿ ಹಾಕಿದಾಗ್ಯೂ ಅವೆಲ್ಲವೂ ಒಂದೇ ಪ್ರಕಾರದಲ್ಲಿ ಸುಟ್ಟು ಆಕಾರ ರೂಪಗಳಿಲ್ಲದ ಬೂದಿಯಾಗುವಂತೆ, ನಾವು ಮಾಡಿದ ಎಲ್ಲಾ ಕರ್ಮಗಳೂ ಒಂದೇ ಪ್ರಕಾರದಲ್ಲಿ ಸುಟ್ಟು ಬೂದಿಯಾಗುತ್ತವೆ. ಇಲ್ಲಿ ಕರ್ಮ ಎಂದರೆ ಇನ್ನು ಫಲವನ್ನು ಕೊಡದೆ ಇರುವ ಹಿಂದಿನ ಜನ್ಮದ ಮತ್ತು ಮುಂದೆ ಫಲವನ್ನು ಕೊಡಬಹುದಾದ ಈ ಜನ್ಮದಲ್ಲಿ ಮಾಡಿದ ಕರ್ಮಗಳು ಎಂದು ತಿಳಿದುಕೊಳ್ಳಬೇಕು. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳಿಂದ ಉಂಟಾದ ವಾಸನೆಗಳನ್ನು ಅನುಭವಿಸಿ ತೀರಿಸಲೇಬೇಕು. ಇದಕ್ಕೆ ಪ್ರಾರಬ್ಧ ಕರ್ಮಗಳೆಂದು ಹೆಸರು.

ಜ್ಞಾನಕ್ಕೆ ಸಾಟಿಯಾದುದು ಯಾವುದೂ ಇಲ್ಲ.

ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ || 38 ||
ಅರ್ಥ : ಈ ಪ್ರಪಂಚದಲ್ಲಿ ಜ್ಞಾನಕ್ಕಿಂತಲೂ ಪವಿತ್ರವಾದುದು ಬೇರೆ ಯಾವುದೂ ಇಲ್ಲ. ಯೋಗಾಭ್ಯಾಸವನ್ನು ಮಾಡಿ ಸಿದ್ಧಿ ಪಡೆದವನು ಸಕಾಲದಲ್ಲಿ ಜ್ಞಾನವನ್ನು ಪಡೆಯುತ್ತಾನೆ.
ಆತ್ಮಜ್ಞಾನದ ಮಹಿಮೆಯನ್ನು ವರ್ಣಿಸುವ ಭರದಲ್ಲಿ, ಶ್ರೀಕೃಷ್ಣನು ಅತಿ ಉತ್ಸಾಹದಿಂದ ಸ್ಪೋಟಗೊಂಡಂತೆ, ಜ್ಞಾನಕ್ಕಿಂತ ಪವಿತ್ರವಾದುದು ಬೇರೆ ಯಾವುದು ಇಲ್ಲ ಎಂದು ಘೋಷಿಸಿದ್ದಾನೆ. ಮನುಷ್ಯನು ಹಿಂದೆ ವಿವರಿಸಿದ ವಿವಿಧ ಯಜ್ಞಗಳ ಮೂಲಕ ಸಾಧನೆಯನ್ನು ಮಾಡಿ, ತನ್ನ ಪ್ರಯತ್ನದಿಂದ (ತತ್ಸ್ವಯಂ) ಸಿದ್ಧಿಯನ್ನು ಪಡೆದರೆ ಸಕಾಲದಲ್ಲಿ ಅವನಿಗೆ ಜ್ಞಾನೋದಯವಾಗುತ್ತದೆ. ಇಲ್ಲಿ ಸಕಾಲದಲ್ಲಿ (ಕಾಲೇನ) ಎಂದರೆ, ಸಾಧಕನ ಪ್ರಯತ್ನದ ತೀವ್ರತೆಗನುಗುಣವಾಗಿ ಎಂದರ್ಥ. ಸಾಧಕನ ಅಜ್ಞಾನವು ಪರಿಹಾರವಾಗಿ, ಅವನು ಪರಿಶುದ್ಧನಾದ ಮೇಲೆ, ಈ ಜ್ಞಾನವಾಗುತ್ತದೆ. ಸಾಧನೆಯ ಬಲವತ್ತರವಾದಷ್ಟೂ ಆ ಕಾಲವು ಹತ್ತಿರವಾಗುತ್ತದೆ. ಇದನ್ನೇ ‘ಅಚಿರಾತ್’ ಎಂದು ಮುಂದಿನ ಶ್ಲೋಕದಲ್ಲಿ ಹೇಳಿದೆ.

ಜ್ಞಾನವನ್ನು ಪಡೆಯುವ ಸುಲಭಮಾರ್ಗ

ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ದ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ || 39 ||
ಅರ್ಥ : ಶ್ರದ್ಧೆಯಿರುವ, ಸಾಧನೆಯಲ್ಲಿಯೇ ನಿರತನಾಗಿರುವ, ಇಂದ್ರಿಯಗಳನ್ನು ನಿಗ್ರಹಮಾಡಿದ, ಮನುಷ್ಯನು ಈ ಜ್ಞಾನವನ್ನು ಹೊಂದಿ ಮುಂದೆ ಜಾಗ್ರತೆಯಾಗಿ ಪರಮಶಾಂತಿಯನ್ನು ಪಡೆಯುತ್ತಾನೆ.
ಜ್ಞಾನವನ್ನು ಪಡೆಯಬೇಕಾದರೆ ಸಾಧಕನು ಯಾವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಇಲ್ಲಿ ವಿವರವಾಗಿ ಹೇಳಲಾಗಿದೆ. ಅನೇಕ ಸಾಧಕರು ದೀರ್ಘಕಾಲ ಸಾಧನೆ ಮಾಡಿದಾಗ್ಯೂ ಈ ಜ್ಞಾನವನ್ನು ಪಡೆಯುವುದಿಲ್ಲ. ಅವರು ತಮ್ಮ ದೋಷಗಳನ್ನು ಕಂಡು ಹಿಡಿದು, ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ಮುಂದುವರಿಯಲು ಈ ವಿವರವು ತುಂಬಾ ಸಹಾಯಕವಾಗಿದೆ. ಸಾಧಕನಿಗೆ ಶ್ರದ್ಧೆ, ತತ್ಪರತೆ (ಅಂದರೆ ಅದೇ ಕಾರ್ಯದಲ್ಲಿ ಭಕ್ತಿಯಿಂದ ನಿರತವಾಗಿರುವಿಕೆ) ಮತ್ತು ಇಂದ್ರಿಯ ನಿಗ್ರಹ ಇವು ಮೂರು ಅವಶ್ಯಕ.
ಶ್ರದ್ಧೆ ಎಂದರೆ ಮೂಢನಂಬಿಕೆಯಲ್ಲ. ಈ ಉಪದೇಶದಲ್ಲಿ ನಂಬಿಕೆಯಿರಬೇಕಾದುದು ಅವಶ್ಯಕವಾದರೂ, ಮೂಢನಂಬಿಕೆ ಹಿತವಲ್ಲ. ಶಾಸ್ತ್ರಗಳಲ್ಲಿ ಉಲ್ಲೇಖವಾದ ವಿವರಣೆಗಳ ಆಂತರಿಕ ಅರ್ಥವನ್ನು ತಿಳಿದುಕೊಳ್ಳುವುದು, ಗುರುವಿನ ಅನುಭವದ ಮಾತುಗಳನ್ನು ತಿಳಿದುಕೊಳ್ಳುವುದು ಹಾಗೂ ಅವುಗಳನ್ನು ನಂಬುವುದು (ತಿಳಿದುಕೊಂಡು ನಂಬುವುದು) ಇದಕ್ಕೆ ಶ್ರದ್ಧೆ ಎಂದು ಹೆಸರು.
ತತ್ಪರಃ – ಆತ್ಮಜ್ಞಾನವನ್ನು ತಾನು ಯಾವ ದಾರಿಯಿಂದ ಪಡೆಯಬೇಕು ಎಂದು ನಿಶ್ಚಯಿಸಿಕೊಂಡ ಮೇಲೆ, ಆ ಮಾರ್ಗದ ವಿವರಗಳನ್ನು ತಿಳಿದುಕೊಂಡು, ಅದರಂತೆ ಆಚರಣೆಯನ್ನಿಟ್ಟುಕೊಂಡು, ಅದರಲ್ಲಿ ಅಚಲವಾದ ಭಕ್ತಿಯನ್ನು ಹೊಂದಿ ಸತತವೂ ಸಾಧನೆಯಲ್ಲಿ ನಿರತನಾಗಿರಬೇಕು. ಮೂರನೆಯದು ಇಂದ್ರಿಯ ನಿಗ್ರಹ ಗೀತೆಯು ಈ ವಿಷಯದಲ್ಲಿ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದೆ. ಇಂದ್ರಿಯ ಚಾಪಲ್ಯವು ಮನುಷ್ಯನನ್ನು ಸುಖ ದುಃಖಗಳಿಂದ ಬಿಗಿದು ಈ ಸಂಸಾರಕ್ಕೆ ಕಟ್ಟಿ ಹಾಕುತ್ತದೆ. ಆದ್ದರಿಂದ ಮೊಟ್ಟಮೊದಲು ಮತ್ತು ಕೊನೆಯ ತನಕ ಅನಂತರವೂ ಸಹ ಇಂದ್ರಿಯಗಳು ಇಂದ್ರಿಯ ವಿಷಯಗಳ ಕಡೆಗೆ ಓಡದಂತೆ ಹಿಂದಕ್ಕೆಳೆದು ಆತ್ಮನಲ್ಲಿ ನಿಲ್ಲಿಸಲು ಸತತವೂ ಬಲವಾದ ಪ್ರಯತ್ನ ಮಾಡುತ್ತಿರುವುದು ಅತ್ಯವಶ್ಯಕ.

ಈ ಉಪದೇಶದಲ್ಲಿ ಸಂಶಯಪಡಬಾರದು.

ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ |
ನಾಯಂ ಲೋಕೋ„ಸ್ತಿನ ಪರೋ ನ ಸುಖಂ ಸಂಶಯಾತ್ಮನಃ || 40 ||
ಅರ್ಥ : ಅಜ್ಞಾನದಿಂದ ಕೂಡಿರುವ, ಶ್ರದ್ಧೆಯಿಲ್ಲದಿರುವ ಮತ್ತು ಯಾವಾಗಲೂ ಸಂಶಯ ಸ್ವಭಾವವುಳ್ಳ ಮನುಷ್ಯನು ಏಳಿಗೆಯನ್ನು ಪಡೆಯದೆ ನಾಶ ಹೊಂದುತ್ತಾನೆ. ಸಂಶಯಪಡುವವನಿಗೆ ಇಹದಲ್ಲಿಯೂ ಸುಖವಿಲ್ಲ. ವರದಲ್ಲಿಯೂ ಸುಖವಿಲ್ಲ.
ಹಿಂದೆ ಹೇಳಿದುದನ್ನೇ ಒತ್ತಿ ಹೇಳುವ ಉದ್ದೇಶದಿಂದ ಪುನಃ ಬೇರೆ ವಿಧದಲ್ಲಿ ಹೇಳಲಾಗಿದೆ.
ಕರ್ಮಗಳು ಎಂತಹವರನ್ನು ಬಂಧಿಸುವುದಿಲ್ಲ.

ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ |
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ || 41 ||
ಅರ್ಥ : ಯೋಗ ದೃಷ್ಟಿಯಿಂದ ಕರ್ಮಗಳನ್ನು ತ್ಯಜಿಸಿ, ಜ್ಞಾನದಿಂದ ತನ್ನ ಸಂಶಯಗಳನ್ನು ನಿವಾರಿಸಿಕೊಂಡು ಆತ್ಮನಲ್ಲಿ ಲೀನವಾದ ಪುರುಷನು ಕರ್ಮಗಳನ್ನು ಮಾಡಿದಾಗ್ಯೂ ಧನಂಜಯನೇ, ಆ ಕರ್ಮಗಳು ಅವನನ್ನು ಬಂಧಿಸಲಾರೆವು.
ಇದುವರೆಗಿನ ಉಪದೇಶವನ್ನು ಈ ಶ್ಲೋಕದಲ್ಲಿ ಸಂಗ್ರಹ ರೂಪದಲ್ಲಿ ಹೇಳಲಾಗಿದೆ. ಕರ್ಮಯೋಗದ ತತ್ವವನ್ನು ತಿಳಿದುಕೊಂಡು ಫಲಾಶೆಯನ್ನು ತ್ಯಾಗಮಾಡಿ, ನಿರಾಸಕ್ತನಾಗಿ ಕರ್ಮಮಾಡುತ್ತಾ, ಜೀವನದ ಗುರಿಯ ಬಗ್ಗೆ ಆಗಾಗ್ಗೆ ಉತ್ಪನ್ನವಾಗಬಹುದಾದ ಸಂಶಯಗಳನ್ನು ಶಾಸ್ತ್ರಾಭ್ಯಾಸ ಹಾಗೂ ಆತ್ಮಧ್ಯಾನಗಳಿಂದ ಲಭಿಸಿದ ಅನುಭವಗಳಿಂದ ಪರಿಹರಿಸಿಕೊಂಡರೆ, ಕ್ರಮೇಣ ಅಹಂಕಾರವು ಅಳಿದು, ತಾನು ಪರಮಾತ್ಮನು ಎಂ¨ ಅರಿವುಂಟಾಗುತ್ತದೆ. ಹೀಗೆ ಆತ್ಮನಲ್ಲಿ ಲೀನವಾದ ಮನುಷ್ಯನು ವ್ಯಾವಹಾರಿಕವಾಗಿ ಕರ್ಮಗಳನ್ನು ಮಾಡಿದಾಗ್ಯೂ ಆ ಕರ್ಮಗಳಲ್ಲಿ ‘ಮಮ’ಕಾರವಿಲ್ಲದಿರುವುದರಿಂದ ಅವುಗಳಿಂದ ಲೇಪವಾಗಲೀ, ಹೊಸ ವಾಸನೆಗಳಾಗಲೀ ಉಂಟಾಗುವುದಿಲ್ಲ.
ಕೊನೆಯಲ್ಲಿ ತೀರ್ಮಾನ ರೂಪದಲ್ಲಿ ಏನು ಮಾಡಬೇಕೆಂದು ಹೇಳಲಾಗಿದೆ.

ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ |
ಛಿತ್ತೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ || 42 ||
ಅರ್ಥ : ಆದ್ದರಿಂದ ಭಾರತನೇ, ಜ್ಞಾನ ಎಂಬ ಕತ್ತಿಯಿಂದ, ನಿನ್ನ ಹೃದಯದಲ್ಲಿ ನೆಲೆಸಿರುವ ಸಂಶಯ ಎಂಬ ಅಜ್ಞಾನವನ್ನು ಕತ್ತರಿಸಿ ಹಾಕಿ ಈ, ಕರ್ಮಯೋಗಕ್ಕೆ ಶರಣು ಹೋಗು ಹೆದರಬೇಡ ಎದ್ದೇಳು.
ಅರ್ಜುನನಿಗೆ ಪ್ರೇಮಪೂರ್ವಕವಾಗಿ ಹೇಳಿದ ಈ ಮಾತುಗಳಲ್ಲಿ ತುಂಬಾ ಶಕ್ತಿ ಅಡಗಿದೆ. ಇಲ್ಲಿ ‘ಯೋಗ’ ಎಂದರೆ ಕರ್ಮಯೋಗ ರೀತ್ಯಾ – ಅಂದರೆ ಹಿಂದೆ ಹೇಳಿದ ಹನ್ನೆರಡು ಯಜ್ಞಗಳ ಮೂಲಕ ಕರ್ಮಮಾಡಬೇಕೆಂತಲೂ, ಅದಕ್ಕಾಗಿ ಹೆದರಿಕೆ ಸಂಶಯಗಳನ್ನು ಕಳಚಿ ಹಾಕಿ ಮೈಕೊಡವಿಕೊಂಡು ಯುದ್ಧಕ್ಕೆ ಸನ್ನದ್ಧನಾಗಿ ಎದ್ದು ನಿಲ್ಲಬೇಕೆಂತಲೂ ಪೆÇ್ರೀತ್ಸಾಹಿಸಲಾಗಿದೆ. ಇದು ಇಡೀ ಮನುಷ್ಯವರ್ಗಕ್ಕೆ ಕರೆದ ಕರೆ ಎಂದು ತಿಳಿದುಕೊಂಡು ಈ ರೀತಿ ಆಚರಿಸಬೇಕು.
ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಜ್ಞಾನಕರ್ಮಸಂನ್ಯಾಸಯೋಗೋ ನಾಮ
ಚತುರ್ಥೋ„ಧ್ಯಾಯಃ