S O U L B L I S S

Loading

Bhagavad Gita – Vinayak Rao Bapat – Chapter 13

ಅಧ್ಯಾಯ-13
ಕ್ಷೇತ್ರ-ಕ್ಷೇತ್ರಜ್ಞ ವಿಭಾಗಯೋಗ
ಪೀಠಿಕೆ
ಪ್ರತಿಯೊಂದು ಶರೀರದಲ್ಲಿರುವ ಪರಮಾತ್ಮನು ಶರೀರದ ಅವಯವಗಳಿಗಿಂತ ಹೇಗೆ ಭಿನ್ನವಗಿ, ನಿರ್ಲಿಪ್ತನಾಗಿದ್ದಾನಂಬುದನ್ನೂ, ಅವನ ಸ್ವರೂಪ ಎಂತದೆಂಬುದನ್ನು ಈ ಅಧ್ಯಾಯದಲ್ಲಿ ಭಕ್ತಿಯೋಗವನ್ನು ಹೇಳಿ, ಸಾಧಕನು ಮೈಗೂಡಿಸಿಕೊಳ್ಳಬೇಕಾದ ಸದ್ಗುಣಗಳನ್ನೂ ತಿಳಿಸಲಾಯಿತು. ಈ ರೀತಿ ಪೂರ್ವ ತಯಾರಿಯಾದ ಮೇಲೆ, ಈ ಅಧ್ಯಾಯದಲ್ಲಿ ಪರಮಾತ್ಮನ ಸ್ವರೂಪವನ್ನು ವಿವರಿಸಿ, ಸಾಧಕನು ನಿರಾಕಾರವಾದ, ನಾಶವಿಲ್ಲದ, ಅವನನ್ನು ಧ್ಯಾನಮಾಡುವ ವಿವರಗಳನ್ನು ತಿಳಿಸಲಾಗುತ್ತದೆ. ಮಾಮೂಲಿನಂತೆ ಈ ಅಧ್ಯಾಯದಲ್ಲಿಯ ವಿವರಣೆಯು ಸಹ ತರ್ಕಬದ್ಧವಾಗಿರುವುದನ್ನು ಕಾಣಬಹುದು.
ಹಿಂದೆ ಜ್ಞಾನವಿಜ್ಞಾನಯೋಗ, (ಅ.2) ಮತ್ತು ಅಕ್ಷರ ಬ್ರಹ್ಮಯೋಗ (ಅ8) ಈ ಎರಡು ಅಧ್ಯಾಯಗಳಲ್ಲಿ ಹೇಳಿದ ವಿಷಯವನ್ನೇ ಈ ಅಧ್ಯಾಯದಲ್ಲಿ ಮುಂದುವರಿಸಲಾಗಿದೆ. ಅರ್ಜುನನ ಸಂಶಯವನ್ನು ಹೋಗಲಾಡಿಸಲು, ಮಧ್ಯದಲ್ಲಿ ಬೇರೆ ವಿಷಯಗಳನ್ನು ವಿವರಿಸಬೇಕಾಯಿತು. ಸಂಶಯವನ್ನು ಪರಿಹರಿಸಿದ ನಂತರ ಶ್ರೀಕೃಷ್ಣನು ಹಿಂದೆ ಅರ್ಧಕ್ಕೆ ನಿಲ್ಲಿಸಿದ ವಿಷಯವನ್ನು ಈಗ ಪುನಃ ವಿವರಿಸಲು ಪ್ರಾರಂಭಿಸಿದ್ದಾನೆ.
ಈ ಹಿಂದೆ ತಿಳಿಸಿದಂತೆ “ತತ್ವಮಸಿ” ಎಂಬ ಮಹಾಕಾವ್ಯದಲ್ಲಿಯ ‘ತ್ವಮ್’ ಮತ್ತು ‘ತತ್’ ಶಬ್ದಗಳ ವರ್ಣನೆಯನ್ನು ಇದುವರೆಗಿನ ಬೋಧದಲ್ಲಿ ತಿಳಿಸಲಾಗಿದೆ. ಈ ಅಧ್ಯಾಯದಿಂದ ಆರು ಅಧ್ಯಾಯಗಳಲ್ಲಿ ಉಳಿದ ‘ಅಸಿ’ ಎಂಬ ಶಬ್ದದ ವರ್ಣನೆಯನ್ನು ಕಾಣಬಹುದು.
ಈ ಅಧ್ಯಾಯದಲ್ಲಿ ಜಡದೇಹ (ಕ್ಷೇತ್ರ) ಮತ್ತು ಇದರಲ್ಲಿದ್ದುಕೊಂಡು ಈ ದೇಹಕ್ಕೆ ಚೇತನವನ್ನು ಕೊಡುವ ಆತ್ಮನ (ಕ್ಷೇತ್ರಜ್ಞ ) ವಿವರಗಳಿವೆ. ಆದ್ದರಿಂದ ಈ ಅಧ್ಯಾಯಕ್ಕೆ ‘ಕ್ಷೇತ್ರಕ್ಷೇತ್ರಜ್ಞ ಯೋಗ’ ಎಂದು ಹೆಸರು.
ಪರಮಾತ್ಮನು ಈ ಜಡಶರೀರದಲ್ಲಿದ್ದುಕೊಂಡು, ಅದರ ಚಲನವಲನಾದಿಗಳಿಗೆ ಕಾರಣನಾಗಿರುವುದರಿಂದ ಅವನು ಈ ಶರೀರವನ್ನು (ಕ್ಷೇತ್ರ) ಸಂಪೂರ್ಣವಾಗಿ ತಿಳಿದವನಾಗಿದ್ದಾನೆ (ಜ್ಞ). ಪ್ರತಿಯೊಬ್ಬ ವ್ಯಕ್ತಿಯೂ ಬೇರೆಬೇರೆ ಕರ್ಮ ಕ್ಷೇತ್ರದಲ್ಲಿದ್ದು, ವ್ಯವಹರಿಸುವವರಿಗೆ ಅವನು ಆಯಾ ಕ್ಷೇತ್ರದ ವಿವರಣೆಗಳನ್ನು ತಿಳಿದವನು ಎನ್ನುತ್ತೇವೆ. ಉದಾಹರಣೆ, ಮೋಟಾರನ್ನು ನಡೆಸುತ್ತಿರುವವನನ್ನು ಡ್ರೈವರ್ ಎನ್ನುತ್ತೇವೆ. ಕುದುರೆಯ ಮೇಲೆ ಸವಾರಿ ಮಾಡುವವನನ್ನು ಸವಾರ ಎನ್ನುತ್ತೇವೆ. ಮೋಟಾರಿನಿಂದ ಇಳಿದು ಬಂದ ಮೇಲೆ, ಕುದುರೆಯಿಂದ ಇಳಿದು ಬಂದ ಮೇಲೆ, ಅವರಿಬ್ಬರೂ ಸಾಮಾನ್ಯ ವ್ಯಕ್ತಿಗಳೇ. ಅವರ ಕರ್ಮ ಸಾಮಥ್ರ್ಯವು ಅವರವರ ಕಾರ್ಯಕ್ಷೇತ್ರದಲ್ಲಿ ಮಾತ್ರ ವ್ಯಕ್ತಪಡುತ್ತದೆ.
ಶುದ್ಧ ಪರವಸ್ತುವು ಜಡ ಶರೀರದಲ್ಲಿದ್ದುಕೊಂಡು, ತಾನೇ ಶರೀರ ಎಂಬ ಅಜ್ಞಾನದಿಂದ ಆವೃತ್ತವಾಗಿ, ಶರೀರದ ಮುಖಾಂತರ ಸುಖ-ದುಃಖ, ಜಯ-ಸೋಲು, ಶಾಂತಿ-ಉದ್ವೇಗ, ಧೈರ್ಯ-ಹೆದರಿಕೆ, ಮೊದಲಾದ ಸಾವಿರಾರು ತರಹದ ಅನುಭವಗಳನ್ನು ಪಡೆಯುತ್ತದೆ. ಹೀಗೆ ಶರೀರದಲ್ಲಿ ಬಂಧಿತನಾದ ಪರಮಾತ್ಮನಿಗೆ ‘ಕ್ಷೇತ್ರಜ್ಞ’ ಎಂತಲೂ, ‘ಜೀವ’ ಎಂತಲೂ ಕರೆಯಲಾಗಿದೆ.
ಈ ಶರೀರದಲ್ಲಿ ಜಡವಸ್ತುವಾದ ಶರೀರದ ಬೇರೆಬೇರೆ ವಿಧಾನಗಳು, ಮತ್ತು ಇವೆಲ್ಲವುಗಳಿಗೂ ಚೇತನವನ್ನು ಕೊಡುವ ‘ಜೀವ’ ಇವರಿಬ್ಬರಿದ್ದಾರೆ. ಸುಖದುಃಖಗಳನ್ನುನುಭವಿಸುತ್ತಿರುವ ‘ಜೀವನು’ ಅಜ್ಞಾನದಿಂದ ಆವೃತ್ತನಾಗಿ ಈ ಶರೀರಕ್ಕೆ ಬಂಧಿಸಲ್ಪಟ್ಟಿರುವ ಪರಮಾತ್ಮನೇ ಆಗಿದ್ದಾನೆ. “ನಾನು ಈ ಶರೀರವಲ್ಲ. ನಾನು ಶುದ್ಧ ಪರಮಾತ್ಮನು” ಎಂಬ ಜ್ಞಾನವನ್ನು ಅವನು ಧ್ಯಾನಯೋಗದಿಂದ ಸಾಧಿಸಿದರೆ ಅವನೇ ಪುನಃ ಪರಮಾತ್ಮನಾಗುತ್ತಾನೆ. ಗಣಿತದ ಪ್ರಮೇಯದಂತೆ ಪರಮಾತ್ಮ + ಶರೀರ = ಜೀವ. ಅಥವಾ ಜೀವ – ಶರೀರ = ಪರಮಾತ್ಮ ಎಂದು ಹೇಳಬಹುದು. ಜೀವನು ‘ತಾನೇ ಶರೀರ’ ಎಂಬ ಅಜ್ಞಾನವನ್ನು/ ಅಹಂಕಾರವನ್ನು ಕಳಚಿ ಹಾಕಿದರೆ, ಅವನೇ ಪರಮಾತ್ಮನೆಂಬ ಅರಿವುಂಟಾಗುತ್ತದೆ. ಇದನ್ನು ಸಾಧಿಸುವುದು ಹೇಗೆ ಎಂಬ ವಿವರಗಳನ್ನು ಈ ಅಧ್ಯಾಯದಲ್ಲ ವರ್ಣಿಸಲಾಗಿದೆ.

ಅಧ್ಯಾಯ-13
ಕ್ಷೇತ್ರ-ಕ್ಷೇತ್ರಜ್ಞ ವಿಭಾಗಯೋಗ
ಅರ್ಜುನ ಉವಾಚ

ಅರ್ಜುನ ಉª ಪ್ರಕೃತಿಂಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವಚ |
ಏತದ್ವೇದಿತುಮಿಚ್ಛಾಮಿ ಜ್ಞಾನಂಜ್ಞೇಯಂಚ ಕೇಶವ || || 1 ||
ಅರ್ಜುನ ಹೇಳುತ್ತಾನೆ.
ಅರ್ಥ :- ಕೇಶವನೇ, ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞೇಯ ಇವುಗಳ ವಿಚಾರವನ್ನು ತಿಳಿಯಲು ಇಚ್ಛಿಸುತ್ತೇನೆ.
ಈ ಶ್ಲೋಕವು ಭಗವದ್ಗೀತೆಯ ಮೂಲಗ್ರಂಥದಲ್ಲಿಲ್ಲವೆಂದು ಕೆಲವರ ಅಭಿಪ್ರಾಯ. ಶಂಕರಾಚಾರ್ಯರು ಈ ಶ್ಲೋಕಕ್ಕೆ ಭಾಷ್ಯವನ್ನು ಬರೆಯಲಿಲ್ಲ. ಗೀತೆಯಲ್ಲಿ ಒಟ್ಟು 200 ಶ್ಲೋಕಗಳಿವೆ. ಇದನ್ನು ಸೇರಿಸಿದರೆ 201 ಶ್ಲೋಕಗಳಿವೆ. ಇದರ ತಾರ್ಕಿಕ ಚರ್ಚೆ ಏನು ಬೇಕಾದರೂ ಇರಲಿ, ಅಧ್ಯಾಯದಲ್ಲಿ ವಿವರಿಸಲಾಗುವ ವಿಷಯಗಳೇನು ಎಂಬುದನ್ನು ಈ ಶ್ಲೋಕವು ಸಂಕ್ಷೇಪವಾಗಿ ತಿಳಿಸುವುದರಿಂದ ಇದು ಉಪಯುಕ್ತವಾಗಿದೆ.
ಪ್ರಕೃತಿ-ಪುರುಷ:- ಪ್ರಪಂಚದಲ್ಲಿರುವ ಎಲ್ಲಾ ಜಡವಸ್ತುಗಳಿಗೆ ‘ಪ್ರಕೃತಿ’ ಎಂತಲೂ, ಅವೆಲ್ಲವುಗಳಲ್ಲಿಯೂ ಅಂತರ್ಗತನಾಗಿರುವ ಚೇತನಾವಸ್ತುವಿಗೆ ‘ಪುರುಷ’ ಎಂತಲೂ ಹೆಸರು. ಪುರುಷನು ಪ್ರಕೃತಿಯ ವಿನಹ ವ್ಯಕ್ತಗೊಳ್ಳಲಾರನು. ಪ್ರಕೃತಿ ಮತ್ತು ಪುರುಷ ಇವರ ಸಂಯೋಗವಾದರೆ, ಪ್ರಪಂಚದ ಎಲ್ಲಾ ಚಲನವಲನಾದಿಗಳೂ, ಅನುಭವಗಳೂ ಉಂಟಾಗುತ್ತವೆ. ವಿದ್ಯುತ್ತು ಸ್ವತಃ ಪ್ರಕಾಶವನ್ನು ಕೊಡಲಾರದು ಬಿಚ್ಚಿನೋಡಿದರೆ ಬಲ್ಬಿನೊಡನೆ ಅದು ಸಂಯೋಗವನ್ನು ಹೊಂದಿದರೆ ಮಾತ್ರ ಪ್ರಕಾಶವು ಹೊರಬೀಳುತ್ತದೆ. ಕ್ಷೇತ್ರ ಮತ್ತು ಕ್ಷೇತ್ರಜ್ಞ :- ಈ ಶಬ್ದಗಳ ಅರ್ಥವನ್ನು ಈ ಅಧ್ಯಾಯದ ಪೀಠಿಕೆಯಲ್ಲಿ ಹೇಳಲಾಗಿದೆ. ಕ್ಷೇತ್ರ ಎಂದರೆ ಶರೀರ, ಕ್ಷೇತ್ರಜ್ಞ ಎಂದರೆ ಜೀವ. ಜೀವನು ತಾನು ಶರೀರವಲ್ಲ ಎಂಬ ಜ್ಞಾನವನ್ನು ಪಡೆದರೆ ಅವನೇ ಪರಮಾತ್ಮನೆಂಬ ಅನುಭವವುಂಟಾಗುತ್ತದೆ. ಜ್ಞಾನ-ಜ್ಞೇಯ:- ಜ್ಞಾನ ಎಂದರೆ ಪರಮಾತ್ಮನ ಜ್ಞಾನ. ಜ್ಞೇಯ ಎಂದರೆ ತಿಳಿಯಲ್ಪಡಬೇಕಾದ ವಸ್ತು-ಪರಮಾತ್ಮ.

ಶ್ರೀಭಗವಾನುವಾಚ
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ |
ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ || || 2 ||
ಅರ್ಥ :- ಕೌಂತೇಯನೇ, ಈ ಶರೀರಕ್ಕೆ ‘ಕ್ಷೇತ್ರ’ ಎಂತಲೂ, ಇದು ತನ್ನ ಶರೀರ ಎಂದು ತಿಳಿಯದವನಿಗೆ ಕ್ಷೇತ್ರಜ್ಞ ಎಂತಲೂ, ಈ ಜ್ಞಾನದಲ್ಲಿ ಪರಿಣಿತರಾದವರು ಹೇಳುತ್ತಾರೆ.
ಪ್ರಕಾಶಿತವಾದ ಅನೇಕ ಗೀತೆಯ ಪುಸ್ತಕಗಳಲ್ಲಿ ಈ ಶ್ಲೋಕವನ್ನು ಅಧ್ಯಾಯಿಂದ ಅಧ್ಯಾಯದ
ಮೊದಲನೇ ಶ್ಲೋಕವನ್ನಾಗಿ ಪರಿಗಣಿಸಲಾಗಿದೆ. ಶ್ರೀಕೃಷ್ಣನು ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ವಿಷಯವನ್ನು ತೆಗೆದುಕೊಂಡು ಉಪದೇಶವನ್ನು ಮುಂದುವರಿಸಿದ್ದಾನೆ.
ಕನಸು ಕಾಣುವವನು ತಾನು ಕಾಣುತ್ತಿರುವುದೆಲ್ಲವೂ ನಿಜವಾಗಿ ಘಟಿಸುತ್ತಿರುವುದಾಗಿ ತಿಳಿಯುತ್ತಾನೆ. ಆದರೆ ಎಚ್ಚರಾದ ಕೂಡಲೇ, ತಾನು ಕಂಡುದೆಲ್ಲವೂ ಕನಸೆಂದೂ, ಅವಾವೂ ನಿಜವಲ್ಲವೆಂದೂ, ತಾನು ಅವಾವುಗಳಿಂದಲೂ ಬಂಧಿತನಾಗಿಲ್ಲವೆಂದೂ ತಿಳಿಯುತ್ತಾನೆ. ಇದರಂತೆಯೇ ಚೇತನ ವಸ್ತುವು ಈ ಶರೀರದ ಮುಖಾಂತರ ಅನುಭವಿಸುವ ಸುಖ ದುಃಖಾದಿ ದ್ವಂದ್ವಗಳು ಹಾಗೂ ಇತರೆ ಅನುಭವಗಳೆಲ್ಲವೂ ನಿಜವೆಂದು ತಿಳಿಯುತ್ತದೆ. ಧ್ಯಾನದಿಂದ ಮೇಲ್ಮಟ್ಟಕ್ಕೇರಿ ಎಚ್ಚರವಾದ ನಂತರ ಇವೆಲ್ಲವೂ ಕನಸೆಂಬ ಅರಿವಾಗುತ್ತದೆ.
ಉಗಿಯಶಕ್ತಿ, ವಿದ್ಯುಚ್ಛಕ್ತಿ ಮೊದಲಾದ ಶಕ್ತಿಗಳು ಪ್ರಕಟವಾಗಬೇಕಾದರೆ ಅನುಕೂಲವಾದ ಬೇರೆಬೇರೆ ಸಾಧನಗಳು ಅವಶ್ಯಕ. ಉಗಿಯು ತನ್ನ ಶಕ್ತಿಯನ್ನು ಪ್ರಕಟಿಸಬೇಕಾದರೆ ಅದು ಇಂಜನ್ನಿನ ಮುಖಾಂತರ ಹಾಯ್ದು ಹೋಗಬೇಕು. ಅಂದರೆ ಮಾತ್ರ ಅದು ರೈಲನ್ನು ಚಲಿಸಬಲ್ಲದು. ವಿದ್ಯುತ್ತು ಪಂಖದ ಮುಖಾಂತರ ಹಾಯ್ದರೆ ನಮಗೆ ತಂಪಾದ ಗಾಳಿಯನ್ನು ಕೊಡುತ್ತದೆ. ಹೀಗೆ ರೈಲು ಇಂಜಿನ್ನು ಉಗಿಶಕ್ತಿಯ ಕಾರ್ಯಕ್ಷೇತ್ರ. ಪಂಖದ ಇಂಜಿನ್ನು ವಿದ್ಯುತ್ತಿನ ಕಾರ್ಯಕ್ಷೇತ್ರ. ಇದರಂತೆಯೇ ಬೇರೆ ಬೇರೆ ತರಹದ ಶರೀರಗಳು ಆಯಾಯಾ ಜೀವದ ಕಾರ್ಯಕ್ಷೇತ್ರ. ಇವೆಲ್ಲಕ್ಕೂ ‘ಕ್ಷೇತ್ರ’ ಎಂದು ಹೆಸರು. ಈ ಶರೀರವು ರೈಲ್ವೆ ಇಂಜಿನ್ನಿನಂತೆ ಜಡವಸ್ತು, ಉಗಿಯು ಇಂಜಿನ್ನಿಗೆ ಚಾಲನಾಶಕ್ತಿಯನ್ನು ಕೊಟ್ಟಂತೆ, ಆತ್ಮನು ಈ ಜಡ ಶರೀರದ ಚಲನವಲನಾದಿಗಳಿಗೆ, ಆಶೆ ಆಕಾಂಕ್ಷೆಗಳಿಗೆ, ತಿಳಿಯುವ ಶಕ್ತಿಗೆ, ಚೇತನಾಶಕ್ತಿಯನ್ನು ಕೊಡುತ್ತಾನೆ. ಇವನಿಗೆ ಕ್ಷೇತ್ರಜ್ಞ ಎಂದು ಹೆಸರು.
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ |
ಕ್ಷೇತ್ರಕ್ಷೇತ್ರಜ್ಞಯೋಜ್ರ್ಞಾನಂ ಯತ್ತಜ್ಜ್ಞಾನಂ ಮತಂ ಮಮ || || 3 ||
ಅರ್ಥ :- ಎಲ್ಲಾ ಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಭಾರತನೇ, ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವರ ವಿಷಯವನ್ನು ತಿಳಿದುಕೊಳ್ಳುವ ಜ್ಞಾನವೇ ನಿಜವಾದ ಜ್ಞಾನ ಎಂದು ನನ್ನ ಅಭಿಪ್ರಾಯ.
ಈ ಶ್ಲೋಕದಲ್ಲಿ ಒಂದು ಮುಖ್ಯವಾದ ಸಿದ್ಧಾಂತವನ್ನು ಹೇಳಲಾಗಿದೆ. “ಎಲ್ಲಾ ಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನು ನಾನೊಬ್ಬನೇ ಆಗಿದ್ದೇನೆ” ಅಂದರೆ ಒಬ್ಬನೇ ಪರಮಾತ್ಮನು ಬೇರೆಬೇರೆ ಶರೀರದಲ್ಲಿದ್ದೂಕೊಂಡು ಬೇರೆಬೇರೆ ಕ್ಷೇತ್ರಜ್ಞ (ಜೀವ) ಎನಿಸಿಕೊಳ್ಳುತ್ತಾನೆ. ಹೀಗೆ ಜಡ ಶರೀರದಲ್ಲಿ ಮಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆಯೇ ಹೊರತು ಚೇತನಾ ವಸ್ತುವು ಒಬ್ಬನೇ. ದೀಪ ಪಂಖ, ರೇಡಿಯೋ, ಒಲೆ, ರೆಫ್ರಿಜೇಟರ್ ಮೊದಲಾದ ಬೇರೆ ಬೇರೆ ವಿವಿಧ ಸಾಧನಗಳನ್ನು ಚಲಿಸುವ ವಿದ್ಯುತ್ತು ಒಂದೇ ಆಗಿದ್ದಂತೆ.

ತತ್‍ಕ್ಷೇತ್ರಂ ಯಚ್ಚ ಯಾದೃಕಶ್ಚ ಯದ್ವಿಕಾರಿ ಯತಶ್ಚ ಯತ್ |
ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು || || 4 ||
ಅರ್ಥ :- ಆ ಕ್ಷೇತ್ರವು ಯಾವುದು, ಅದರ ಸ್ವಭಾವವೇನು, ಅದು ಯಾವಯಾವ ಬದಲಾವಣೆಗಳನ್ನು ಹೊಂದುತ್ತದೆ, ಅದು ಎಲ್ಲಿಂದ ಬಂದಿತು, ಅದು ಯಾರು, ಅದರ ಶಕ್ತಿ ಏನು ಇವೆಲ್ಲವನ್ನೂ ಸಂಕ್ಷೇಪವಾಗಿ ಹೇಳುತ್ತೇನೆ ಕೇಳು :

ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ || || 5 ||
ಅರ್ಥ :- ಋಷಿಗಳು ಬ್ರಹ್ಮನನ್ನು ನಾನಾರೀತಿಯಲ್ಲಿ, ಬೇರೆ ಬೇರೆ ಛಂದಸ್ಸುಗಳಲ್ಲಿ ಹಾಡಿದ್ದಾರೆ ಅವರು ತರ್ಕಬದ್ಧವಾಗಿಯೂ, ಸಿದ್ಧಾಂತರೂಪದಲ್ಲಿಯೂ, ಸೂತ್ರರೂಪ-ದಲ್ಲಿಯೂ, ಪದಗಳಿಂದಲೂ ಹಾಡಿದ್ದಾರೆ.
ಇಲ್ಲಿ ಹೇಳಲಾಗುವ ವಿವರಣೆಗಳು ಶ್ರೀಕೃಷ್ಣನು ಕಲ್ಪನೆಯಿಂದ ತನ್ನ ಮಾತಿನ ಚಮತ್ಕಾರದಿಂದ ವರ್ಣಿಸಲ್ಪಟ್ಟವುಗಳಲ್ಲ ಇಡೀ ಭಗವದ್ಗೀತೆಯಲ್ಲಿ, ಅವನು ಹೇಳಿರುವ ಸಿದ್ಧಾಂತಗಳೂ, ವಿವರಗಳೂ-ಋಷಿಗಳಿಂದ ಉಪನಿಷತ್ತುಗಳಲ್ಲಿ ವರ್ಣಿಸಲ್ಪಟ್ಟಿವೆ. ಈ ಮಾತು ಎಲ್ಲಾ ವಿವರಗಳಿಗೂ ಅನ್ವಯಿಸುವುದಾದರೂ, ‘ಬ್ರಹ್ಮನ’ ವರ್ಣನೆಯನ್ನು ವಿವರಿಸು ವಿಭಾಗಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಇವು ಋಷಿಗಳು ಹೇಳಲ್ಪಟ್ಟಿದ್ದೆಂದು ಮೂಢನಂಬಿಕೆಯಿಂದ ಒಪ್ಪಬೇಕೇ ಎಂಬ ಆಕ್ಷೇಪವೂ ಬರಬಹುದೆಂದು ಊಹಿಸಿ, ಶ್ರೀಕೃಷ್ಣನು, ಹಾಗೆ ಮೂಢ ನಂಬಿಕೆಯಿಂದ ಒಪ್ಪಕೂಡದೆಂದೂ, ಆದರೆ ಇವು ತರ್ಕಬದ್ಧವಾಗಿರುವುದರಿಂದ ಒಪ್ಪಲೇಬೇಕೆಂದೂ ಪ್ರಾರಂಭದಲ್ಲಿಯೇ ಹೇಳಿದ್ದಾನೆ. (ಹೇತುಮದ್ಭಿರ್ವಿನಿಶ್ಚಿತ್ಯೆ). ಹೀಗೆ ತರ್ಕಬದ್ಧವಾಗಿರುವ ಪ್ರತಿಯೊಂದು ಸಿದ್ಧಾಂತವನ್ನೂ ಬುದ್ಧಿವಂತರು ಒಪ್ಪುತ್ತಾರೆ.

ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ |
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ || || 6 ||
ಅರ್ಥ :- ಪಂಚಮಹಾಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತಮೂಲ ಪ್ರಕೃತಿ, ಹನ್ನೊಂದು ಇಂದ್ರಿಯಗಳು, ಮತ್ತು ಐದು ಇಂದ್ರಿಯ ವಿಷಯಗಳು, ಇಚ್ಛೆ, ದ್ವೇಷ, ಸುಖ, ದುಃಖ, ಶರೀರ, ಬುದ್ಧಿ, ಧೈರ್ಯ ಇವೆಲ್ಲವುಗಳ ಸಂಯೋಗದಿಂದ ಉಂಟಾದುದೇ ಕ್ಷೇತ್ರ.

ಇಚ್ಛಾದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ |
ಏತತ್‍ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ || || 7 ||
ಅರ್ಥ :- ಇಚ್ಛೆ, ದ್ವೇಷ, ಸುಖ, ದುಃಖ, ಶರೀರ, ಬುದ್ಧಿ, ಧೈರ್ಯ ಇವೆಲ್ಲವುಗಳ ಸಂಯೋಗದಿಂದ ಉಂಟಾದುದೇ ಕ್ಷೇತ್ರ.
ಪಂಚಮಹಾಭೂತಗಳು – ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಇವುಗಳಿಗೆ ಪಂಚ ಮಹಾಭೂತಗಳು ಎಂದು ಹೆಸರು. ಅಹಂಕಾರ-ಈ ಶರೀರದಲ್ಲಿದ್ದುಕೊಂಡು, ಸುಖವನ್ನೂ ದುಃಖವನ್ನೂ ಅನುಭೋಗಿಸುತ್ತಾ “ಶರೀರವು ನಾನು, ಇದು ನನ್ನ ಶರೀರ, ನಾನು ಕರ್ಮಗಳನ್ನು ಮಾಡುವನು, ಅನುಭೋಗಿಸುವವನು ನಾನು” ಎಂಬಿತ್ಯಾದಿ ಭಾವಗಳನ್ನು ವ್ಯಕ್ತಪಡಿಸುವ ಜೀವನಿಗೆ ‘ಅಹಂಕಾರ’ ಎಂದು ಹೆಸರು. ಮನಸ್ಸು. ಸಂಗ್ರಹಿಸಿದ ಸಂವೇದನೆಗಳನ್ನು ಸಾರಾಸಾರ ವಿಚಾರಮಾಡಿ, ಹೀಗೆಯೇ ಮಾಡಬೇಕು ಎಂಬುದನ್ನೂ, ಒಳ್ಳೆಯದು-ಕೆಟ್ಟದ್ದು, ಧಾರ್ಮಿಕ ಅಧಾರ್ಮಿಕ, ಇತ್ಯಾದಿ ತೀರ್ಮಾನಗಳನ್ನು ಬುದ್ಧಿಯು ಮಾಡುತ್ತದೆ. ಮೂಲಪ್ರಕೃತಿ-ಪ್ರತಿಯೊಬ್ಬ ಮನುಷ್ಯನೂ ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಮುದ್ರೆಯು ಅವನ ಅಂತಃಕರಣದ ಮೇಲೆ ಸೂಕ್ಷ್ಮ ರೂಪದಲ್ಲಿ ಮುದ್ರಿತವಾಗಿರುತ್ತದೆ. ಇವುಗಳಿಗೆ ವಾಸನೆ ಎಂದು ಹೆಸರು. ಸಂಚಿತವಾದ ಈ ವಾಸನೆಗಳನ್ನು ಭೋಗಿಸಲು, ಅನುಕೂಲವಾದ ಮನಸ್ಸು ಬುದ್ಧಿಗಳನ್ನುಳ್ಳ ಶರೀರವನ್ನು ಪಡೆದು, ಜೀವನು ಈಗಿನ ಜನ್ಮವನ್ನು ಪಡೆದಿರುತ್ತಾನೆ, ಹೀಗೆ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ವಾಸನೆಗಳಿರುತ್ತವೆ. ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳ ಒಟ್ಟು ವಾಸನೆಗಳ ಸಮುದಾಯಕ್ಕೆ ‘ಮೂಲಪ್ರಕೃತಿ’ ಎಂದು ಹೆಸರು. ಈ ವಾಸನೆಗಳಿಗನುಸಾರವಾಗಿ ಬೇರೆಬೇರೆ ಜೀವಿಗಳು ಸೃಷ್ಟಿಯಾಗುತ್ತವೆ. ವೇದಾಂತ ಪರಿಭಾಷೆಯಲ್ಲಿ ಈ ಮೂಲ ಪ್ರಕೃತಿಗೆ ‘ಮಾಯೆ’ ಎನ್ನುತ್ತಾರೆ. ಮಾಯೆಯಿಂದಲೇ ಪ್ರಪಂಚ ಸೃಷ್ಟಿಯಾಗುತ್ತದೆ. ಮೂಲಪ್ರಕೃತಿಗೆ ಚೇತನವನ್ನು ಕೊಡುವ ಪರಮಾತ್ಮನೇ ಸೃಷ್ಟಿಕರ್ತನು. ಅವನೇ ಪ್ರತಿಯೊಬ್ಬ ಮನುಷ್ಯನ ಶರೀರದಲ್ಲಿದ್ದುಕೊಂಡು, ಅದಕ್ಕೆ ಚೇತನವನ್ನು ಕೊಡುವಾಗ ‘ಜೀವ’ ಎನಿಸಿಕೊಳ್ಳುತ್ತಾನೆ. ಹÀತ್ತು ಇಂದ್ರಿಯಗಳು :- ಪಂಚ ಜ್ಞಾನೇಂದ್ರಿಯಗಳ ಮುಖಾಂತರ ನಮಗೆ ಹೊರಗಿನ ಪ್ರಪಂಚದ ಜ್ಞಾನವುಂಟಾಗುತ್ತದೆ. ಪಂಚ ಕರ್ಮೇಂದ್ರಿಗಳಿಂದ ಜೀವನ ಹಾಗೂ ವ್ಯವಹಾರದ ಕರ್ಮಗಳನ್ನೂ ಮಾಡುತ್ತೇವೆ. ಹನ್ನೊಂದನೆಯ ಇಂದ್ರಿಯ ಮನಸ್ಸು :- ಐದು ಜ್ಞಾನೇಂದ್ರಿಯಗಳ ಮೂಲಕ ವಿವಿಧ ಜ್ಞಾನವನ್ನು ಪಡೆದು, ಅನುಗುಣವಾದ ಕರ್ಮಗಳನ್ನು ಕರ್ಮೇಂದ್ರಿಯಗಳಿಂದ ಮಾಡಿಸುವ ಕೆಲಸವು ಮನಸ್ಸಿಗೆ ಸೇರಿದ್ದು. ಆದುದರಿಂದ ಇದು ಉಭಯಾತ್ಮಕ ಅಂದರೆ ಮನಸ್ಸು ಕರ್ಮೇಂದ್ರಿಯವೂ ಅಹುದು. ಜ್ಞಾನೇಂದ್ರಿಯವೂ ಅಹುದು. ಐದು ಇಂದ್ರಿಯ ವಿಷಯಗಳು. ಪ್ರತಿಯೊಂದು ಜ್ಞಾನೇಂದ್ರಿಯವೂ ಬೇರೆಬೇರೆ ತರಹದ ಜ್ಞಾನವನ್ನು ಗ್ರಹಿಸುತ್ತದೆ. ಕಣ್ಣು-ನೋಡುವುದು, ಕಿವಿ-ಕೇಳುವುದು, ಮೂಗು-ವಾಸನೆಯನ್ನು ಗ್ರಹಿಸುವುದು, ನಾಲಿಗೆ-ರುಚಿ ನೋಡುವುದು, ಮತ್ತು ಚರ್ಮ-ಸ್ಪರ್ಶಜ್ಞಾನವನ್ನು ಪಡೆಯುವುದು. ಈ ಎಲ್ಲಾ ಇಂದ್ರಿಯಗಳೂ ತಮ್ಮ ನಿರ್ದಿಷ್ಟ ಕೆಲಸ ತನ್ನಷ್ಟೇ ಮಾಡಬಲ್ಲವೇ ಹೊರತು, ಬೇರೆ ಇಂದ್ರಿಯಗಳ ಕರ್ಮವನ್ನು ಮಾಡಲಾರವು. ನಮಗೆ ಬಾಹ್ಯ ಪ್ರಪಂಚದ ಜ್ಞಾನವು ಈ ಎಲ್ಲಾ ಇಂದ್ರಿಯಗಳ ಒಟ್ಟು ಜ್ಞಾನದಿಂದ ತಿಳಿಯುತ್ತದೆ. ಇದುವರೆಗೆ ಹೇಳಿದ ಪಂಚಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತ, ಹತ್ತು ಇಂದ್ರಿಯಗಳು, ಮನಸ್ಸು, ಮತ್ತು ಐದು ಇಂದ್ರಿಯ ವಿಷಯಗಳು, ಹೀಗೆ ಒಟ್ಟು ಇಪ್ಪತ್ತುನಾಲ್ಕು ತತ್ವಗಳ ಒಟ್ಟುಸೇರುವಿಕೆಗೆ ಸಾಂಖ್ಯತತ್ವದಂತೆ ಶರೀರ ಎಂದು ಹೆಸರು. ಗೀತೆಯ ಮತದಂತೆ, ಮನಸ್ಸಿಲ್ಲುಂಟಾಗುವ ರಾಗ-ದ್ವೇಷ, ಸುಖ-ದುಃಖ, ಬುದ್ಧೀ, ಧೈರ್ಯ ಹಾಗೂ ಹೀಗೆ ಹೇಳಿದ ಇಪ್ಪತ್ತುನಾಲ್ಕು ತತ್ವಗಳು ಇವುಗಳ ಒಟ್ಟು ಸೇರುವಿಕೆಗೆ ಶರೀರ ಎಂದು ಹೆಸರು. ಒಟ್ಟಿನಲ್ಲಿ ಶರೀರ ಎಂದರೆ ಎಲ್ಲಾ ವಿವಿಧ ಅವಯವಗಳು, ಮನಸ್ಸು, ಬುದ್ಧಿ, ಅಹಂಕಾರ, ಹಾಗೂ ಎಲ್ಲಾ ಅವಯವಗಳಿಂದ ನೋಡಲ್ಪಡುವ ಇಲ್ಲವೇ ಅನುಭವಿಸಲ್ಪಡುವ ಎಲ್ಲಾ ತರಹದ ಭಾವಗಳೂ ಸಹ ಶರೀರ ಶಬ್ದಲ್ಲಿ ಐಕ್ಯವಾಗುತ್ತವೆ. ಇಂದ್ರಿಯ ಮನಸ್ಸು, ಬುದ್ಧಿಗಳ ಮುಖಾಂತರ, ತಿಳಿಯಬಹುದಾದ ಎಲ್ಲಾ ಸಂವೇದನೆಗಳೂ ಶರೀರ ಶಬ್ದದ ಈ ವ್ಯಾಖ್ಯೆಯೊಳಗೆ (ಕ್ಷೇತ್ರ) ಬರುತ್ತವೆ. ಇವೆಲ್ಲವನ್ನೂ ತಿಳಿಯುವವನಿಗೆ ಕ್ಷೇತ್ರಜ್ಞ ಎಂದು ಹೆಸರು.
ಕ್ಷೇತ್ರಜ್ಞನ ವರ್ಣನೆಯನ್ನು ತಿಳಿಯುವ ಮೊದಲು, ಮಾನಸಿಕ ತಯಾರಿಯು ಬೇಕೆಂಬುದನ್ನು ಸೂಚಿಸಲು, ಸಾಧಕನು ಪೂರ್ವತಯಾರಿಯ ದೃಷ್ಟಿಯಿಂದ ಯಾವ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದನ್ನು ತಿಳಿಸಲಾಗಿದೆ.

ಅಮಾನಿತ್ವಮದಂಭಿತ್ವಮಹಿಂಸಾ ಕ್ಷಾಂತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ || || 8 ||
ಅರ್ಥ :- ನಮ್ರತೆ, ಡಾಂಭಿಕತನವಿಲ್ಲದಿರುವಿಕೆ, ಅಹಿಂಸೆ, ಕ್ಷಮಾಗುಣ, ಸರಳತನ, (ಪ್ರಾಮಾಣಿಕತನ), ಗುರುಗಳ ಸೇವೆ ಮಾಡುವುದು, ಶುಚಿತ್ವ, ಸ್ಥೈರ್ಯ, ಆತ್ಮನಿಗ್ರಹ.
ಇಲ್ಲಿಂದ ಮುಂದಿನ ನಾಲ್ಕು ಶ್ಲೋಕಗಳಲ್ಲಿ ಆತ್ಮವಿಕಾಸಕ್ಕೆ ಪೂರಕವಾದ ಹಾಗೂ ಪೋಷಕವಾದ ಸದ್ಗುಣಗಳನ್ನು ತಿಳಿಸಲಾಗಿದೆ. ಸಾಧಕನು ಅವುಗಳನ್ನು ಮೈಗೂಡಿಸಿ ಕೊಳ್ಳಬೇಕು. ಈ ಗುಣಗಳಲ್ಲಿ ‘ಜ್ಞಾನ’ದ ಪ್ರಾಥಮಿಕ ಪಾಠವನ್ನು ಕಾಣಬಹುದು.

ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ |
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್ || || 9 ||
ಅರ್ಥ :- ಇಂದ್ರಿಯ ವಿಷಯ ಸುಖಗಳಲ್ಲಿ ಉದಾಸೀನನಾಗಿರುವುದು ಅಹಂಕಾರವಿಲ್ಲದಿರುವುದು, ಜನನ, ಮರಣ, ಮುಪ್ಪು, ರೋಗ, ಇವು ದುಃಖದಾಯಕಗÀಳೆಂದು ತಿಳಿದಿರುವುದು.
ಜನನ ಮರಣಗಳು ದುಃಖಕಾರ್ಯಗಳೆಂದು ತಿಳಿಯುವುದು – ಈಗಿರುವ ಸ್ಥಿತಿಯು ದುಃಖಕರವೆಂಬ ಅನುಭವವಾದಂತೆ, ಅನುಭವವಾದರೆ, ಆ ಭಾವವು ಮನಸ್ಸಿನಲ್ಲಿ ಸ್ಥಿರವಾಗಿ ಮೂಡಿದರೆ ಮಾತ್ರ ಆದ ದುಃಖವನ್ನು ಹೋಗಲಾಡಿಸಿಕೊಳ್ಳುವ ಮತ್ತು ಅದಕ್ಕಿಂತ ಉತ್ತಮವಾದ ಬೇರೆಯದನ್ನು ಆರಿಸುವ, ಸಾಧಿಸುವ, ವಿಚಾರವೂ ಹಾಗೂ ಪ್ರಯತ್ನವೂ ಪ್ರಾರಂಭವಾಗುತ್ತದೆ. ಈಗಿರುವುದೇ ಸುಖ ಎಂದು ತಿಳಿಯುವುದಾದರೆ ಹೊಸದನ್ನು ಗಳಿಸುವ ಪ್ರಯತ್ನವೇನೂ ಆಗಲಾರದು. ಈ ಶರೀರದಲ್ಲಿ ಜೀವಿಸಿರುವ ಜೀವನು, ಈ ಜೀವನವು ದುಃಖಮಯವಾದುದೆಂದು ಮನಗಂಡರೆ ಮಾತ್ರ ಅದರ ವಿರುದ್ಧ ದಂಗೆ ಏಳುವುದೂ ಅದಕ್ಕೂ ಹೆಚ್ಚಿನ ಸುಖವನ್ನು ಗಳಿಸಲು ಪ್ರಯತ್ನಿಸುವುದು ಸಾಧ್ಯವಾಗುತ್ತದೆ. ಆದ್ದರಿಂದ ಈ ಶರೀರದಿಂದ ಏನೇನು ದುಃಖವನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಅಧ್ಯಾತ್ಮಸಾಧನೆಗೆ ಅವಶ್ಯಕವಾಗಿದೆ.

ಆಸಕ್ತಿರಸಭಿಷ್ವಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು || || 10 ||
ಅರ್ಥ :- ಆಸಕ್ತಿಯಿಲ್ಲದಿರುವಿಕೆ, ಮಕ್ಕಳು, ಹೆಂಡತಿ, ಗೃಹ, ಮೊದಲಾದವುಗಳು ತನ್ನದು ಎಂಬ ಅತಿಯಾದ ಅಭಿಮಾನವಿಲ್ಲದಿರುವುದು ತನಗೆ ಬೇಕಾಗುವುದು ಇಲ್ಲವೆ ಬೇಡಾದುದು ಯಾವುದೇ ಲಭಿಸಿದರೂ, ಅವೆರಡರಲ್ಲಿಯು ಸಮಾನವಾದ ಶಾಂತ ಮನಸ್ಸನ್ನಿಟ್ಟುಕೊಂಡಿರುವುದು.
ಆಸಕ್ತಿ :- ಇಂದ್ರಿಯ ವಿಷಯ ಸುಖಗಳಲ್ಲಿ ಲಂಟಪನಾಗದೆ ಅವುಗಳಲ್ಲಿ ಉದಾಸೀನನಾಗಿರುವುದಕ್ಕೆ ‘ಆಸಕ್ತಿ’ ಎಂದು ಹೆಸರು. ಮನಸ್ಸು ಇಂದ್ರಿಯ ವಿಷಯಗಳಲ್ಲಿ ಮಗ್ನವಾದಷ್ಟು ಮನಸ್ಸಿನಲ್ಲಿ ಉದ್ರೇಕವು ಹೆಚ್ಚಾಗುತ್ತದೆ. ತತ್ಪರಿಣಾಮವಾಗಿ ನಾವು ನಾನಾತರಹದ ದುಃಖಗಳಿಗೀಡಾಗುತ್ತಾನೆ. ಮಗುವು ಬೆಂಕಿಯನ್ನು ನೋಡಿ ಆಸೆಯಿಂದ ಅದರಲ್ಲಿ ಬೆರಳನ್ನು ಹಾಕಿದರೆ ಅದು ಸುಡುತ್ತದೆ. ಇಲ್ಲಿ ಬೆಂಕಿಗೆ ಸುಡುವ ಗುಣವಿದ್ದರೂ, ಅದು ತಾನಾಗಿಯೇ ಬಂದು ಬೆರಳನ್ನು ಸುಡಲಿಲ್ಲ. ಮಗುವಿನಲ್ಲಿ ಉಂಟಾದ ಆಸೆಯಿಂದ ಮಗುವು ತನ್ನ ಬೆರಳನ್ನು ಬೆಂಕಿಯಲ್ಲಿಟ್ಟಿತು. ಆಗ ಬೆಂಕಿಯು ಅದನ್ನು ಸುಟ್ಟಿತು. ಇದೇ ರೀತಿ ಮನಸ್ಸು ಇಂದ್ರಿಯ ವಿಷಯಗಳಲ್ಲಿ ಪ್ರವೇಶಿಸಿ ಅದರಲ್ಲಿಯೇ ಮಗ್ನವಾದರೆ ಅದು ಮನಸ್ಸನ್ನು ಸುಡುತ್ತದೆ, ಉದ್ರೇಕಗೊಳಿಸುತ್ತದೆ. ಮನಸ್ಸಿನ ಈ ಆಸೆಯಿಂದ ಕ್ರಮೇಣ ಕ್ರೋಧ, ಹೆದರಿಕೆ, ಸಮ್ಮೋಹ, ಸ್ಮøತಿ ಭೃಂಶಗಳುಂಟಾಗಿ; ಆ ಮನುಷ್ಯನು ವಿಚಾರಗೆಟ್ಟವನಂತೆ, ನಾನಾ ತರಹದ ಆ ಕಾರ್ಯಗಳನ್ನು ಮಾಡಿ, ಅನೇಕ ತರಹದ ದುಃಖಕ್ಕೀಡಾಗುತ್ತಾನೆ. ಆದುದರಿಂದ ಇಂದ್ರಿಯ ವಿಷಯಗಳಲ್ಲಿನ ಆಸಕ್ತಿಯನ್ನು ತೊರೆಯಬೇಕೆಂಬುದು ಇಲ್ಲಿ ಹೇಳಲಾಗಿದೆ.
ಹೆಂಡತಿ, ಮಕ್ಕಳು ನನ್ನವರೆಂಬ ಅಭಿಮಾನವಿಲ್ಲದಿರುವುದು. ಹೀಗೆ ಹೇಳಿದ ಮಾತ್ರದಿಂದ ಹೆಂಡತಿ, ಮಕ್ಕಳೊಡನೆ ನಿಷ್ಠುರತೆಯಿಂದ ವರ್ತಿಸಬೇಕೆಂದಾಗಲೀ, ಅವರನ್ನು ತ್ಯಜಿಸಬೇಕೆಂದಾಗಲೀ ತಿಳಿಯಬಾರದು. ಸಂಸಾರದಲ್ಲಿ ತನ್ನ ಕರ್ತವ್ಯ ದೃಷ್ಟಿಯಿಂದ ಅವರ ಪಾಲನೆ ಪೋಷಣೆಗಳನ್ನು ತನ್ನ ಶಕ್ತಿಗನುಸಾರವಾಗಿ, ಲೋಪವಿಲ್ಲದಂತೆ, ದಕ್ಷತೆಯಿಂದ ಮಾಡಲೇಬೇಕು. ಆದರೆ ತಾನು ಮಾತ್ರ ಅವರಲ್ಲಿ ಆಸಕ್ತಿಯನ್ನು ಇಲ್ಲವೇ ಮಮಕಾರವನ್ನು ಹಚ್ಚಿಗೊಳ್ಳದೆ, ಅವರಲ್ಲಿ ಲೋಲುಪನಾಗದೆ ಇರಬೇಕು. ತಾನು ಹೊರಗೆ ಅವರ ಸೇವೆಯನ್ನು ಮಾಡಿದಾಗ್ಯೂ ಮನಸ್ಸಿನಲ್ಲಿ ಆಸಕ್ತಿಯನ್ನು ಕಿತ್ತು ಹಾಕಬೇಕು. ನನ್ನದು, ನನ್ನವರು ಎಂಬ ಭಾವವಿದ್ದರೆ ಮಾತ್ರ ಆಸಕ್ತಿಹುಟ್ಟುತ್ತದೆ. ಅದಿಲ್ಲದಿದ್ದರೆ ಆಸಕ್ತಿ ಇಲ್ಲ.
ಹೀಗೆ ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಂಗ್ರಹಿಸಿದ ಶಕ್ತಿಯನ್ನು ಕರ್ಮಮಾರ್ಗದಲ್ಲಿ ವಿನಿಯೋಗಿಸಬೇಕು.

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ || 11 ||
ಅರ್ಥ :- ಪರಮಾತ್ಮನು ಮತ್ತು ನಾನು ಇಬ್ಬರೂ ಒಂದೇ ಎಂಬ ಅನನ್ಯ ಯೋಗ ಭಾವದಿಂದ ನನ್ನಲ್ಲಿ ಭಕ್ತಿಯನ್ನು ಮಾಡುವುದು, ಏಕಾಂತ ಸ್ಥಳದಲ್ಲಿ ವಾಸವಾಗಿರುವುದು, ಜನರ ಗುಂಪಿನ ಮಧ್ಯದಲ್ಲಿರುವುದಕ್ಕೆ ಜಿಗುಪ್ಸೆಪಡುವುದು.
ಶ್ರೀಕೃಷ್ಣನ ಉಪದೇಶವು ಉದ್ದಕ್ಕೂ ವ್ಯವಹಾರಕ್ಕೆ ಅನುಕೂಲವಾಗುವಂತಹ ಮಾರ್ಗವನ್ನೇ ತೋರಿಸಿದೆ. ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು, ಶರೀರ, ಮನಸ್ಸು, ಬುದ್ಧಿಗಳನ್ನು ಹೇಗೆ ತಿದ್ದಿಕೊಳ್ಳಬೇಕು. ಮತ್ತು ಮನಸ್ಸನ್ನು ದುವ್ರ್ಯಯದಿಂದ ಹೇಗೆ ಹಿಂದಕ್ಕೆಳೆದುಗೊಳ್ಳಬೇಕು ಎಂಬುದನ್ನು ಹಿಂದಿನ ಶ್ಲೋಕದಲ್ಲಿ ತಿಳಿಸಲಾಗಿದೆ. ಹೀಗೆ ಮನಸ್ಸನ್ನು ನಿಗ್ರಹಿಸುವುದರಿಂದ ಅಪಾರವಾದ ಶಕ್ತಿಸಂಗ್ರಹವಾಗುತ್ತದೆ. ಹರಿಯುವ ನೀರನ್ನು ಅಡ್ಡಗಟ್ಟಿದಂತೆ- ಈಗ ಮನಸ್ಸನ್ನು ಸರಿಯಾದ ದಾರಿಯಲ್ಲಿ ತಿರುಗಿಸಿದರೆ ಆ ಶಕ್ತಿಯು ಮಹಾಕಾರ್ಯವನ್ನು ಸಾಧಿಸಬಲ್ಲದು. ಇಲ್ಲವಾದರೆ ಸಂಗ್ರಹವಾದ ಆ ಶಕ್ತಿಯೇ ತನ್ನ ಶತ್ರುವಾಗುತ್ತದೆ. ಆದುದರಿಂದ ಆ ಸರಿಯಾದ ದಾರಿ ಯಾವುದು ಎಂಬುದನ್ನು ಇಲ್ಲಿ ತೋರಿಸಿ, ನಿಗ್ರಹಿಸಲ್ಪಟ್ಟ ಮನಸ್ಸನ್ನು ಅದರ ಮೇಲೆಯೇ ಕೇಂದ್ರೀಕರಿಸಬೇಕು. ದಿನಕ್ಕೊಂದು ಮೂರ್ತಿಯನ್ನು ಧ್ಯಾನಿಸುತ್ತಾ ಹೋಗಬಾರದು. ತಾನು ಬೇರೆ ಮೂರ್ತಿಯನ್ನು ನೋಡಿದಾಗ್ಯೂ ತನ್ನ ಇಷ್ಟ ದೇವನೇ ಆ ರೂಪದಲ್ಲಿ ಪ್ರಕಟಿಸುತ್ತಿದ್ದಾನೆಂದು ಭಾವಿಸಿ ಅಲ್ಲಿ ಸಹ ತನ್ನ ಇಷ್ಟ ದೇವತೆಯನ್ನು ಕಾಣಬೇಕು.
ಅವ್ಯಭಿüಚಾರೀ ಭಕ್ತಿ
ಅನನ್ಯಯೋಗ ಧ್ಯಾನಮಾಡುವಾಗ ತಾನು ಹಾಗೂ ಪರಮಾತ್ಮನು ಇಬ್ಬರೂ ಒಂದೇ ಎಂಬ ಭಾವವಿರಬೇಕು. ಬೇರೆ ಬೇರೆ ಎಂಬ ವಿಚಾರ ಆಗಬಾರದು. ಬೇರೆ ಎಂಬ ವಿಚಾರ ಬಂದರೆ ಮನಸ್ಸಿನ ಏಕಾಗ್ರತೆಯು ಭಂಗವಾಗುತ್ತದೆ. ಇದರ ಪೂರ್ವ ತಯಾರಿಕೆಗಾಗಿ ಈ ಮೊದಲು ಅವ್ಯಭಿಚಾರೀ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಲಾಗಿದೆ. ಸಾಧಕನು ತನ್ನ ಮನಸ್ಸನ್ನು ಪರಮಾತ್ಮನಿಗೆ ವಿವಾಹಮಾಡಿಕೊಟ್ಟಿದ್ದಾನೆ. ಆದುದರಿಂದ ಧ್ಯಾನಕಾಲದಲ್ಲಿ ಈ ಮನಸ್ಸಿನಿಂದ ಬೇರೆ ವಿಚಾರಮಾಡಬಾರದು. ಮನಸ್ಸು ಪರಮಾತ್ಮನಲ್ಲಿ ಏಕೀಭಾವವನ್ನು ಹೊಂದಬೇಕು. ಇದಕ್ಕೆ ‘ಅನನ್ಯ ಯೋಗ’ ಎಂದು ಹೆಸರು. ಹಿಂದೆ ಹೇಳಿದ ಭಾವವನ್ನೇ ಒತ್ತಿ ಹೇಳುವುದಕ್ಕಾಗಿ ಅನನ್ಯಯೋಗ ಎಂಬ ಹೊಸಪದವನ್ನು ಉಪಯೋಗಿಸಲಾಗಿದೆ. ಈ ತರಹದ ಧ್ಯಾನಮಾಡಲು ಅನುಕೂಲವಾದ ವಾತಾವರಣವಿರಬೇಕು. ಅದಕ್ಕಾಗಿ ಏಕಾಂತವಾಸವನ್ನು ಹೇಳಲಾಗಿದೆ.

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ |
ಏತಜ್ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋ„ನ್ಯಥಾ || 12 ||
ಅರ್ಥ :- ಆತ್ಮಜ್ಞಾನಾನಂದವನ್ನು ಸದಾ ಅನುಭವಿಸುತ್ತಿರುವುದು. ಮತ್ತು ಈ ಜ್ಞಾನವನ್ನು ತಿಳಿದುಕೊಳ್ಳುವುದರ ಪರಮಗುರಿ ಏನೆಂಬುದನ್ನು ಮನಗಂಡಿರುವುದು, ಇದಕ್ಕೆ ‘ಜ್ಞಾನ’ ಎನ್ನುತ್ತಾರೆ. ಇವುಗಳಿಗೆ ವಿರುದ್ಧವಾದುದು ‘ಅಜ್ಞಾನ’.
ಸಾಧಕನು ಗಳಿಸಬಹುದಾದ ಹದಿನೆಂಟು ಸದ್ಗುಣವನ್ನು ವರ್ಗಿಸಿ, ಕೊನೆಯದಾದ ‘ಜ್ಞಾನ’ದ ಎರಡು ಗುಣಗಳನ್ನು ಇಲ್ಲಿ ಹೇಳಲಾಗಿದೆ. ಅಧ್ಯಾತ್ಮಜ್ಞಾನ ನಿತ್ಯತ್ವಂ- ಆತ್ಮಜ್ಞಾನವನ್ನು ಕೇವಲ ಬುದ್ಧಿಯಿಂದ ತಿಳಿದುಕೊಂಡರೆ ಸಾಲದು. ಅದನ್ನು ಆಚರಣೆಯಲ್ಲಿ ತರಬೇಕು. ಜೀವನದಲ್ಲಿ ಭೇದವಿಲ್ಲ. ಪರಮಾತ್ಮನೊಬ್ಬನೇ ಸತ್ಯ ವಸ್ತು” ಎಂಬ ಜ್ಞಾನವನ್ನು ನಿತ್ಯಜೀವನದ ಆಚರಣೆಯಲ್ಲಿ ತರಬೇಕು. ಪ್ರಪಂಚದ ಎಲ್ಲಾ ವ್ಯವಹಾರಗಳಲ್ಲಿಯೂ, ಎಲ್ಲಾ ದೃಶ್ಯಗಳಲಿಯೂ ಪರಮಾತ್ಮನನ್ನು ಕಾಣಬೇಕು. ತತ್ವಜ್ಞಾನಾರ್ಥ ದರ್ಶನಮ್- ಸಾಧಕನು, ತಾನೇ ಅನುಭವವನ್ನು ಪಡೆಯಬೇಕೆಂಬ ಗುರಿಯನ್ನಿಟ್ಟುಕೊಂಡಿರುತ್ತಾನೆ. ಈ ಗುರಿಯು ಕಣ್ಣೆದುರಿಗಿದ್ದರೆ ಸಾಧನೆಯನ್ನು ಬಲಗೊಳಿಸಲು ಸುಲಭವಾಗುತ್ತದೆ.
ಜ್ಞಾನದಿಂದ ತಿಳಿದುಕೊಳ್ಳಬೇಕಾದುದೇನು?
ಜ್ಞೇಯಂ ಯತ್ತತ್ಪ್ರದವಕ್ತ್ಯಾಮಿ ಯಜ್ಜ್ಜಾತ್ವಾಮೃತಮಶ್ನುತೇ |
ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ || 13 ||
ಅರ್ಥ :- ತಿಳಿಯಬೇಕಾದುದು ಏನು (ಜ್ಞೇಯ) ಎಂಬುದನ್ನು ಹೇಳುತ್ತೇನೆ. ಇದನ್ನು ನೀನು ತಿಳಿದೆಯಾದರೆ. ನಾಶವಿಲ್ಲದ, ಪ್ರಾರಂಭವಿಲ್ಲದ, ಸತ್ ಮತ್ತು ಅಸತ್‍ಗಳಿಗಾಚೆ ಇರುವ ಬ್ರಹ್ಮನನ್ನು ಸೇರುತ್ತೀಯೆ.
ತಿಳಿಯಬೇಕಾದುದೇನು ಎಂದು ಹೇಳಿ, ಅದನ್ನು ಸ್ಪಷ್ಟವಾಗಿ ತಿಳಿಸಲಿಲ್ಲವೆಂದು ಕೆಲವು ಟೀಕಾಕಾರರು ಆಕ್ಷೇಪವೆತ್ತಿದ್ದಾರೆ. ಆದರೆ ಇದು ಸಲ್ಲದು, ಸದ್ವಸ್ತುವನ್ನು ವರ್ಣಿಸಲು ಸಾಧ್ಯವಿಲ್ಲ. ಆದುದರಿಂದ ಇದನ್ನು ತಿಳಿದ ಸಾಧಕನಲ್ಲಿ ಆಗುವ ಬದಲಾವಣೆಯನ್ನು ತಿಳಿಸಿ (ಅಮೃತಮಶ್ನುತೆ), ಅಮೃತಮಶ್ನುತೇ ಆ ಮೂಲಕ, ಅವನಿಗೆ ಸದವಸ್ತುವಿನ ಜ್ಞಾನವಾಯಿತೆಂದು ಭಾವಿಸಬೇಕೆಂದು ಸೂಚಿಸಲಾಗಿದೆ. ಜ್ಞೇಯದ ಹಿರಿಮೆಯನ್ನು ವರ್ಣಿಸುವುದರಿಂದ ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ.

ಸರ್ವತಃಪಾಣಿಪಾದಂ ತತ್ಸರ್ವತೋ„ಕ್ಷಿಶಿರೋಮುಖಮ್ |
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ || 14 ||
ಅರ್ಥ :- ಎಲ್ಲಾ ಕಡೆಗೂ ಕೈಯಿ ಮತ್ತು ಕಾಲುಗಳುಳ್ಳವನೂ, ಎಲ್ಲಾ ಕಡೆಗೂ ಕಣ್ಣು ಮತ್ತು ತಲೆಗಳುಳ್ಳವನೂ, ಎಲ್ಲಾ ಕಡೆಗೂ ಕಿವಿಗಳುಳ್ಳವನೂ ಆದ ಪರಮಾತ್ಮನು ಎಲ್ಲಾ ವಸ್ತುಗಳಲ್ಲಿಯೂ ಆವರಿಸಿದ್ದಾನೆ.
ಪ್ರತಿಯೊಂದು ಜೀವಿಗಳ ಕೈಯಿ, ಕಾಲುಗಳು, ಕಣ್ಣು, ಕಿವಿ, ತಲೆ, ಮತ್ತು ಇತರೆ ಎಲ್ಲಾ ಅವಯವಗಳಲ್ಲಿಯೂ ಪರಮಾತ್ಮನು ಅಖಂಡವಾಗಿರುವುದರಿಂದ ಮತ್ತು ಅವೆಲ್ಲವುಗಳಿಗೂ ಅವನೇ ಚೇತನಶಕ್ತಿಯನ್ನು ಕೊಡುವುದರಿಂದ ಎಲ್ಲಾ ಕಡೆಗೂ ಕಣ್ಣು, ಕಿವಿ, ತಲೆ ಇತ್ಯಾದಿಗಳುಳ್ಳವನು ಎಂದು ಹೇಳಲಾಗಿದೆ. ಪರಮಾತ್ಮನು ಜಡ ಶರೀರದಲ್ಲಿದ್ದುಕೊಂಡು ಅವುಗಳಿಗೆ ಚೇತನವನ್ನು ಕೊಡುತ್ತಾನೆ ಎಂದು ಹೇಳುವುದರಿಂದ, ಅವನು ಕೇವಲ ಜಡವಸ್ತುಗಳಿರುವಲ್ಲಿ ಮಾತ್ರ ಇದ್ದಾನೆ ಎಂಬ ತಪ್ಪು ಕಲ್ಪನೆ ಬರಬಾರದೆಂದು ತಿಳಿಸುವುದಕ್ಕಾಗಿ, ಅವನು ಇಡೀ ಪ್ರಪಂಚವನ್ನು ಅಖಂಡವಾಗಿ ವ್ಯಾಪಿಸಿದ್ದಾನೆ (ಸರ್ವ ಮಾವ್ಯತ್ಯತಿಷ್ಠತಿ) ಎಂದು ಹೇಳಲಾಗಿದೆ. ಈ ವರ್ಣನೆಯನ್ನು ಪುರುಷ ಸೂಕ್ತದ ಮೊದಲನೆಯ ಮಂತ್ರದಿಂದ ತೆಗೆದುಕೊಳ್ಳಲಾಗಿದೆ.

ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ |
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತø ಚ || 15 ||
ಅರ್ಥ :- ಆತ್ಮನು ಎಲ್ಲಾ ಇಂದ್ರಿಯಗಳ ಕರ್ಮಗಳ ಮುಖಾಂತರ ಪ್ರಕಟವಾಗಿದ್ದಾನೆ. ಆದಾಗ್ಯೂ ಅವನು ಇಂದ್ರಿಯಗಳಿಲ್ಲದವನು; ಅವನು ಯಾವುದರಲ್ಲಿಯೂ ಆಸಕ್ತನಾಗಿಲ್ಲದಿದ್ದಾಗ್ಯೂ ಪ್ರತಿಯೊಂದರ ಇರುವಿಕೆಗೂ ಕಾರಣನಾಗಿದ್ದಾನೆ (ಎಲ್ಲವನ್ನೂ ಧರಿಸಿದ್ದಾನೆ). ನಿಗುರ್ಣನಾಗಿದ್ದಾಗ್ಯೂ ಎಲ್ಲಾ ಗುಣಗಳನ್ನೂ ಅನುಭವಿಸುತ್ತಿದ್ದಾನೆ.
ಆತ್ಮನನ್ನು ವರ್ಣಿಸಲು ವಿರೋಧಾಭಾಸ ಎಂಬ ಒಂದು ಪದ್ಧತಿಯಿದೆ. ಇದರಲ್ಲಿ ಮೊದಲು ಒಂದು ಗುಣವು ಇರುವುದಾಗಿ ಹೇಳಿ, ನಂತರ (ಆ) ಯಾವಗುಣವೂ ಇಲ್ಲದವನು ಎಂದು ಹೇಳಲಾಗುತ್ತದೆ. ಪರಮಾತ್ಮನು ಗುಣಗಳಿಂದ ಕೂಡಿರುವವನೂ ಆಗಿದ್ದಾನೆ ಮತ್ತು ಯಾವ ಗುಣಗಳಿಲ್ಲದವನೂ ಆಗಿದ್ದಾನೆ. ಆದುದರಿಂದ ಹೇಗೆ ಹೇಳಿದರೂ ಅವನ ವರ್ಣನೆಯೇ ಆಗುತ್ತದೆ. ಉಪನಿಷತ್ತುಗಳಲ್ಲಿ ಪರಮಾತ್ಮನನ್ನು ಈ ರೀತಿ ವರ್ಣಿಸಲಾಗಿದೆ. (ಶ್ವೇತಾಶ್ವತರ ಉಪನಿಷತ್). ಈ ಶ್ಲೋಕದಲ್ಲಿ ಸಹ ಅದೇ ಪದ್ಧತಿಯನ್ನು ಅನುಸರಿಸಲಾಗಿದೆ.
ಆತ್ಮನು ಇಂದ್ರಿಯಗಳಿಗೆ ಚೇತನಾಶಕ್ತಿಯನ್ನು ಕೊಟ್ಟು, ಆ ಇಂದ್ರಿಯಗಳ ಮುಖಾಂತರ ವಿವಿಧ ಅನುಭವಗಳನ್ನು ಪಡೆಯುತ್ತಿರುವುದರಿಂದ, ಅವನು ಇಂದ್ರಿಯಗಳುಳ್ಳವನು ಎಂದು ಭಾಸವಾಗುತ್ತದೆ. ಆದರೆ ಆಳವಾಗಿ ವಿಚಾರ ಮಾಡಿದರೆ ಈ ಇಂದ್ರಿಯಗಳು ನಾಶವಾಗತಕ್ಕವುಗಳೆಂದೂ, ಆ ನಂತರ ಸಹ, ಪರಮಾತ್ಮನು ಯಾವ ಬದಲಾವಣೆಯನ್ನೂ ಹೊಂದದೆ ಇರುತ್ತಾನೆಂಬುದೂ ತಿಳಿಯುತ್ತದೆ.
ಅಸಕ್ತಂಸರ್ವಭೃತ್:- ಅಲೆಗಳಿಲ್ಲದೆ ಸಮುದ್ರವಿಲ್ಲ. ಆದರೆ ಎಲ್ಲಾ ಅಲೆಗಳನ್ನು ಸೇರಿಸಿದರೂ ಅದು ಸಮುದ್ರವಾಗಲಾರದು. ಸಮುದ್ರವು ಅಲೆಗಳಿಂದ ತುಂಬದಾಗ್ಯೂ, ಅದು ಅಲೆಗಳೊಡನೆ ಅಂಟಿಕೊಂಡಿದೆ ಎನ್ನಲಾಗುವುದಿಲ್ಲ. ಸಮುದ್ರವು ಅಲೆಗಳಿಂದ ಬೇರೆಯಾಗಿದ್ದಾಗ್ಯೂ, ಅದು ಅಲೆಗಳಿಗೆ ಆಧಾರವಾಗಿದೆ. ಅಲೆಗಳನ್ನು ಅದು ಆಧರಿಸುತ್ತದೆ. ಹತ್ತಿಯಿಂದ ಬಟ್ಟೆಯಾಗುತ್ತದೆ ನಿಜ. ಆದರೆ ಹತ್ತಿಯೇ ಬಟ್ಟೆಯಲ್ಲ. ಬಟ್ಟೆಯಾಗಲು ಹತ್ತಿಯೇ ಆಧಾರ. ಇದರಂತೆಯೇ ಪ್ರಪಂಚದ ವಿವಿಧ ಸೃಷ್ಟಿಗಳು ಪರಮಾತ್ಮನಲ್ಲ. ಆದರೆ ಅವುಗಳ ಇರುವಿಕೆಗೆ ಕಾರಣನಾದವನೂ, ಅವುಗಳಿಗೆ ಆಧಾರನೂ ಪರಮಾತ್ಮನೇ. ಕಂಬ ಮತ್ತು ಭೂತ ಇವುಗಳಲ್ಲಿ ಯಾವ ಸಂಬಂಧವೂ ಇಲ್ಲ. ಆದರೆ ಭೂತ ಎಂಬ ಆಭಾಸಕ್ಕೆ ಕಂಬವೇ ಆಧಾರ.
ನಿರ್ಗುಣಗುಣ ಭೋಕ್ತøಚ- ಮನಸ್ಸಿನ ವಿವಿಧ ರೀತಿಯ ಅನುಭವ ಹಾಗೂ ವಿಚಾರಗಳನ್ನು ಸತ್ವ, ರಜಸ್ಸು, ತಮಸ್ಸು ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ. ಇವುಗಳಿಗೆ ಗುಣಗಳು ಎಂದು ಹೆಸರು. ಪರಮಾತ್ಮನು ಮನಸ್ಸಿನ ಈ ಗುಣಗಳೊಡನೆ ಬಂಧಿತನಾಗಿ ಅವುಗಳನ್ನು ಅನುಭವಿಸುವಾಗ ‘ಜೀವ’ ಎನಿಸಿಕೊಳ್ಳುತ್ತಾನೆ. ಅವುಗಳಿಂದ ನಿರ್ಲಿಪ್ತನಾಗಿದ್ದರೆ ತಾನೇ ಪರಮಾತ್ಮನಾಗುತ್ತಾನೆ. ಆಗ ಯಾವ ಗುಣಗಳೂ ಇಲ್ಲದವನಾಗುತ್ತಾನೆ.
ಎಲ್ಲಾ ಶರೀರದೊಳಗಿರುವ ಜೀವರೂ ಪರಮಾತ್ಮನೇ ಸರಿ.
ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ |
ಸೂಕ್ಷ್ಮತ್ತ್ವಾತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ || 16 ||
ಅರ್ಥ :- ಆತ್ಮನು ಎಲ್ಲಾ ಜೀವಿಗಳ ಒಳಗೂ ಹೊರಗೂ ಇದ್ದಾನೆ. ಪ್ರತಿಯೊಂದು ಚಲಿಸುವ ಮತ್ತು ಸ್ಥಿರವಸ್ತುಗಳಿಗೂ ಅವನೇ ಸರಿ. ಪರಮಾತ್ಮನು ಅತಿ ಸೂಕ್ಷ್ಮವಾಗಿರುವುದರಿಂದ ಅವನನ್ನು ಇಂದ್ರಿಯಗಳಿಂದ ತಿಳಿಯಲು ಸಾಧ್ಯವಿಲ್ಲ. ಅವನು ದೂರದಲ್ಲಿ ಇದ್ದಾನೆ, ಹತ್ತಿರದಲ್ಲಿಯೂ ಇದ್ದಾನೆ.
ಆಕಾಶವಾಣಿ ಕೇಂದ್ರದಿಂದ ಸುದ್ದಿಗಳು ಬಿತ್ತರಿಸಲ್ಪಡುತ್ತವೆ. ನಮ್ಮ ಮನೆಯಲ್ಲಿ ರೇಡಿಯೋ ಇದ್ದರೆ ಆ ಸುದ್ಧಿಗಳ ಕೇಳಬಹುದು. ಇದೇ ರೀತಿ ಎಲ್ಲೆಲ್ಲಿ ರೇಡಿಯೋ ಇದೆಯೋ ಆ ಎಲ್ಲಾ ಸ್ಥಳಗಳಲ್ಲಿಯೂ ಆ ಸುದ್ಧಿಗಳನ್ನು ಕೇಳಬಹುದು. ಆದ ಮಾತ್ರಕ್ಕೆ ಈ ಸುದ್ಧಿಯೂ ರೇಡಿಯೋ ಯಂತ್ರ ಇಲ್ಲದಿರುವ ಸ್ಥಳಗಳಲ್ಲಿ ‘ಇಲ್ಲ’ ಎಂದು ಹೇಳುವಂತಿಲ್ಲ. ಏಕೆಂದರೆ ಈ ಸುದ್ಧಿಯು ಇಡೀ ವಾಯುಮಂಡಲದಲ್ಲಿ ಹರಡಿದೆ, ಅದನ್ನು ಗ್ರಹಿಸಬಲ್ಲ ಸಾಧನವಿರುವಲ್ಲೆಲ್ಲಾ ಆ ಸುದ್ದಿಯನ್ನು ಕೇಳಬಹುದು. ಇದೇ ರೀತಿಯಾಗಿ ಪರಮಾತ್ಮನು ಪ್ರಪಂಚ ಎಲ್ಲೆಲ್ಲಾ ಅಖಂಡವಾಗಿ ವ್ಯಾಪ್ತನಾಗಿದ್ದಾನೆ. ಮನಸ್ಸು ಬುದ್ಧಿಗಳಿಂದ ಕೂಡಿದ ಶರೀರವಿರುವಲ್ಲೆಲ್ಲಾ ಅವನು ಅವುಗಳಿಗೆ ಚೇತನವನ್ನು ಕೊಟ್ಟು ಅಲ್ಲಿ ವ್ಯಕ್ತನಾಗುತ್ತಾನೆ. ಆದಾಗ್ಯೂ ರೇಡಿಯೋ ಕೇಂದ್ರದಿಂದ ಬಿತ್ತರಿಸಲ್ಪಟ್ಟ ಸುದ್ಧಿಯಂತೆ ಅವನು ಎಲ್ಲಾ ಕಡೆಗಳಲ್ಲಿಯೂ ಅಖಂಡನಾಗಿ ವ್ಯಾಪ್ತನಾಗಿದ್ದಾನೆ.

ಅಚರಂಜರಮೇವ ಚ – ಅಚರಂಚರಮೇವಚ
ಆತ್ಮನು ಚಲಿಸುವುದಿಲ್ಲ. ಇವನು ಪ್ರಪಂಚದ ಎಲ್ಲಾ ಕಡೆಗೂ ವ್ಯಾಪಿಸಿರುವುದರಿಂದ ಮತ್ತು ಅವನು ಇಲ್ಲದೇ ಇರುವ ಸ್ಥಳವಿಲ್ಲದುದರಿಂದ ಅವನು ಚಲಿಸುವುದು ಸಾಧ್ಯವೇ ಇಲ್ಲ. ಏಕೆಂದರೆ, ಚಲಿಸುವುದೆಂದರೆ ಈಗ ಇರುವ ಒಂದು ಸ್ಥಳವನ್ನು ಬಿಟ್ಟು ಈಗ ತಾನು ಇಲ್ಲದೇ ಇರುವ ಬೇರೊಂದು ಸ್ಥಳಕ್ಕೆ ಹೋಗುವುದಾಗಿದೆ. ಎಲ್ಲಾ ಕಡೆಗಳಲ್ಲಿಯೂ ಪರಮಾತ್ಮನು ಇರುವುದರಿಂದಲೂ, ಅವನು ಚಲಿಸದೇ ಇರುವುದರಿಂದಲೂ ಅವನು ‘ಅಚರ’ ಎಂದು ಹೇಳಲಾಗಿದೆ. ಆದರೆ ಪರಮಾತ್ಮನು ಶರೀರಗತವಾಗಿರುವಾಗ ಶರೀರವು ಚಲಿಸಿದಂತೆ ಅವನೂ ಚಲಿಸುತ್ತಾನೆ. ಈ ದೃಷ್ಟಿಯಿಂದ ಅವನು ಚಲಿಸುವವನು ಎಂದು ಹೇಳಲಾಗಿದೆ. ನಾವು ಮೋಟಾರು ಕಾರಿನಲ್ಲಿ ಕುಳಿತಿದ್ದೇವೆ. ಮೋಟಾರು ವೇಗದಿಂದ ಚಲಿಸುತ್ತಿದೆ. ಅದರಲ್ಲಿರುವ ನಾವು ಕುಳಿತಿದ್ದೇವೆ. ಮೋಟಾರು ಚಲಿಸದಂತೆ ನಾವೂ ಚಲಿಸುತ್ತೇವೆ. ಇದರಂತೆಯೇ ಶರೀರವು ಚಲಿಸಿದಂತೆಲ್ಲಾ ಶರೀರದಲ್ಲಿರುವ ಪರಮಾತ್ಮನೂ ಚಲಿಸುತ್ತಾನೆ. ಆದ್ದರಿಂದ ಅವನಿಗೆ ‘ಚರ’ ಎಂದು ಹೇಳಲಾಗಿದೆ. ಸೂಕ್ಷ್ಮತ್ತ್ವಾತದವಿಜ್ಞೇಯಂ:- ಪರಮಾತ್ಮನು ಸೂಕ್ಷ್ಮವಾಗಿರುವುದರಿಂದ ಇಂದ್ರಿಯಗಳಿಂದ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ನಾವು ಸ್ಥೂಲ ಪಂಚಭೂತಗಳನ್ನು ನೋಡೋಣ. ಇವುಗಳಲ್ಲಿ ಭೂಮಿಯು ಅತಿ ಹೆಚ್ಚು ಸ್ಥೂಲವಾದುದು ಇದನ್ನು ನಾವು ಐದೂ ಇಂದ್ರಿಯಗಳಿಂದಲೂ ನೋಡಿ ತಿಳಿಯಬಹುದು. ಇದಕ್ಕಿಂತ ಸೂಕ್ಷ್ಮವಾದ ನೀರನ್ನು ಕೇವಲ ನಾಲ್ಕು ಇಂದ್ರಿಯಗಳಿಂದ ತಿಳಿಯಬಹುದು ನಾಸಿಕ ಇಂದ್ರಿಯಕ್ಕೆ ಇದು ಗೋಚರವಲ್ಲ. ಬೆಂಕಿಯನ್ನು ರÀುಚಿನೋಡಲು ಆಗುವುದಿಲ್ಲ. ನಾಸಿಕ ಕ್ರಿಯೆಯಿಂದ ತಿಳಿಯುವುದೂ ಸಾಧ್ಯವಿಲ್ಲ. ಗಾಳಿಯನ್ನು ನೋಡಲೂ ಸಾಧ್ಯವಿಲ್ಲ. ಆಕಾಶವು ಇದಕ್ಕಿಂತ ಸೂಕ್ಷ್ಮವಾಗಿದೆ. ಅದರಲ್ಲಿ ಕೇವಲ ಶಬ್ದ ಮಾತ್ರ ಇದೆ. ಅದು ಇತರೆ ಯಾವ ಇಂದ್ರಿಯಗಳಿಗೂ ಗೋಚರವಲ್ಲ. ಪರಮಾತ್ಮನು ಆಕಾಶಕ್ಕಿಂತಲೂ ಸೂಕ್ಷ್ಮವಾಗಿರುವುದರಿಂದ ಅವನು ಕರ್ಣೇಂದ್ರಿಯಕ್ಕೆ ಸಹ ಗೋಚರನಲ್ಲ. ಇತರೇ ಇಂದ್ರಿಯಗಳಿಂದಲೂ ಸಾಧ್ಯವೇ ಇಲ್ಲ. ದೂರಸ್ಥಂ ಚಾಂತಿಕೇ ಚ ತತ್ ಪರಮಾತ್ಮನು ದೂರದಲ್ಲಿಯೂ ಇದ್ದಾನೆ, ಹತ್ತಿರದಲ್ಲಿಯೂ ಇದ್ದಾನೆ. ಅವನು ಅಖಂಡವಾಗಿ ಎಲ್ಲೆಡೆಯೂ ವ್ಯಾಪಿಸಿರುವುದರಿಂದ ಅವನು ಅಲ್ಲಿಯೂ ಇದ್ದಾನೆ. ಇಲ್ಲಿಯೂ ಇದ್ದಾನೆ, ಎಲ್ಲೆಲ್ಲಿಯೂ ಇದ್ದಾನೆ.

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ |
ಭೂತಭರ್ತೃ ಚ ತಜ್ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ || || 17 ||
ಅರ್ಥ:- ಆತ್ಮನು ಅಖಂಡನಾಗಿದಾಗ್ಯೂ, ಬೇರೆ ಬೇರೆ ಭೂತಗಳಲ್ಲಿ ಆಯಾಯಾ ರೂಪಗಳಲ್ಲಿದ್ದಾನೆ. ಎಲ್ಲಾ ಭೂತಗಳಿಗೂ ಅವನು ಆಧಾರನು. ತಿಳಿಯ ಬೇಕಾದವನೂ ಅವನೇ. ಪ್ರಪಂಚವನ್ನು ನುಂಗುವವನೂ (ನಾಶಮಾಡುವವನು) ಮತ್ತು ಸೃಷ್ಟಿಸುವವನೂ ಅವನೇ ಸರಿ.
ಆಕಾಶವು ಪ್ರಪಂಚದಲ್ಲೆಲ್ಲಾ ಅಖಂಡವಾಗಿ ಒಂದೇ ಆಗಿದೆ ಆದಾಗ್ಯೂ ಕೋಣೆಯು ನಾಲ್ಕು ಗೋಡೆಯ ಒಳಗೆ ಬಂಧಿಸಲ್ಪಟ್ಟಿರುವ ಆಕಾಶಕ್ಕೆ ಕೋಣೆಯ ಆಕಾರ, ಗಡಿಗೆಯ ಒಳಗಡೆ ಇರುವ ಆಕಾಶಕ್ಕೆ ಗಡಿಗೆಯ ಆಕಾಶ ಇತ್ಯಾದಿ ರೀತಿಯಾಗಿ ಹೇಳುತ್ತೇವೆ. ಬೇರೆ ಬೇರೆ ವಸ್ತುಗಳಲ್ಲಿರುವ ಆಕಾಶವು ಬೇರೆಬೇರೆಯಾಗಿ ಕಾಣುವಂತೆ, ಆತ್ಮನು ಸಹ ಅಖಂಡವಾಗಿದ್ದಾಗ್ಯೂ. ಬೇರೆ ಬೇರೆ ಶರೀರಗಳಲ್ಲಿ ಬೇರೆಬೇರೆ-ಯಾಗಿರುವಂತೆ ಕಾಣುತ್ತಾನೆ.
ಗ್ರಸಿಷ್ಣ ಗ್ರಸಿಷ್ಣು ಪ್ರಭವಿಷ್ಣು ಚ :- ಕಂಬವನ್ನು ನೋಡಿದಾಗ್ಯೆ ಭೂತದ ಕಲ್ಪನೆ ಬಂದಿತು. ಅಂದರೆ ಆ ಭೂತವು ಕಂಬದಿಂದ ಸೃಷ್ಟಿಯಾಯಿತು. ಅದು ‘ಕಂಬ’ ಎಂದು ತಿಳಿದ ನಂತರ ‘ಭೂತವು’ ಇಲ್ಲವಾಯಿತು. ಅದನ್ನು ಕಂಬವೇ ನುಂಗಿತು. ಭೂಮಿಯು ಎಲ್ಲಾ ಸಸ್ಯಗಳನ್ನೂ ಸೃಷ್ಟಿಸುತ್ತದೆ. ಮತ್ತು ಅವೆಲ್ಲವುಗಳನ್ನೂ ನುಂಗಿಬಿಡುತ್ತದೆ. ಇದರಂತೆಯೇ ಸತ್ಯವಸ್ತುವು ಅಖಂಡವಾಗಿ, ಶಾಶ್ವತವಾಗಿದೆ. ನಮ್ಮ ಮನಸ್ಸಿನ ಭ್ರಾಂತಿಯಿಂದ ಅದರಲ್ಲಿ ಪ್ರಪಂಚದ ವಿವಿಧ ವಸ್ತುಗಳು ಹಾಗೂ ಪ್ರಾಣಿಗಳು ಸೃಷ್ಟಿಯಾಗಿರುವಂತೆ ಹಾಗೂ ನಾಶವಾಗುವಂತೆ ನಾವು ಕಾಣುತ್ತೇವೆ. ಮನಸ್ಸು ಬುದ್ಧಿಗಳು ಸಂಸಾರದಿಂದ ಬಂಧಿತವಾದರೆ ಸೃಷ್ಟಿ ಎಂದು ಕಾಣುತ್ತದೆ. ಇದನ್ನು ದಾಟಿ ಆತ್ಮಜ್ಞಾನವನ್ನು ಪಡೆದರೆ, ಸೃಷ್ಟಿಯ ಯಾವ ವಸ್ತುಗಳೂ, ಹೊರಗಿನ ನಾಮರೂಪ ಭೇದಗಳೂ ಕಾಣದೆ, ಎಲ್ಲವೂ ಅಖಂಡ ಪರಮಾತ್ಮನೆಂಬ ಅರಿವುಂಟಾಗುತ್ತದೆ. ಎಚ್ಚರವಾದನಂತರ ಕನಸಿನಲ್ಲಿ ಕಂಡ ಸೃಷ್ಟಿಯೆಲ್ಲವೂ ಸುಳ್ಳು ಎಂದು ತಿಳಿಯುವದಂತೆ. ಕನಸಿನಲ್ಲಿ ಸೃಷ್ಟಿಯು ನಾಶವಾದಂತೆ ತಿಳಿದುಕೊಳ್ಳಬೇಕು.
ಆತ್ಮನು ಅಖಂಡವಾಗಿದ್ದಾಗ್ಯೂ ನಮಗೆ ಕಾಣದಿದ್ದ ಮೇಲೆ ಅವನು ಕತ್ತಲೆ ನುಂಗುತ್ತಿರಬಹುದಲ್ಲವೇ? ಅಲ್ಲ ಕೇಳು.
ಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸಃ ಪರಮುಚ್ಯತೇ |
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ || 18 ||
ಅರ್ಥ :- ಅದು ಎಲ್ಲಾ ಬೆಳಕಿಗೂ ಬೆಳಕನ್ನು ಕೊಡುವುದಾಗಿದೆ. ಕತ್ತಲಿಗಿಂತ ಆಚೆಗಿದೆ. ಜ್ಞಾನ ಎನ್ನುವುದು ಇದೇ. ತಿಳಿಯ ಬೇಕಾದುದೂ ಇದೇ. ಜ್ಞಾನದಿಂದ ಪಡೆಯಬೇಕಾದುದೂ ಇದೇ. ಎಲ್ಲರ ಹೃದಯದಲ್ಲಿ ಇರುವುದೂ ಇದೆ.
ಬಾಹ್ಯ ಪ್ರಪಂಚದಲ್ಲಿ, ನಾವು ಯಾವುದಾದರೂ ವಸ್ತುವನ್ನು ನೋಡಬೇಕಾದರೆ ಅದು ನಮ್ಮ ಕಣ್ಣೆದುರಿಗಿದ್ದರೆ ಸಾಲದು. ಆ ವಸ್ತುವಿನ ಮೇಲೆ ಬೆಳಕು ಬೀಳಬೇಕು. ಅಂದರೆ ಮಾತ್ರ ಅದು ನಮಗೆ ಕಾಣುತ್ತದೆ. ಇದೇ ಉದಾಹರಣೆಯನ್ನು ತೆಗೆದುಕೊಂಡು ಮೇಲಿನ ವರ್ಣನೆಯನ್ನು ಮಾಡಲಾಗಿದೆ. ಇದರಂತೆಯೇ ಕಣ್ಣಿನಿಂದ ನಾವು ವಸ್ತುಗಳನ್ನು ನೋಡಬೇಕಾದರೆ ನೋಡುವ ಶಕ್ತಿಯನ್ನು ಪಡೆಯಲು ಕಣ್ಣಿಗೆ ಒಳಗಿನ ಬೆಳಕು ಬೇಕು. ಹಾಗೆಯೇ ಎಲ್ಲಾ ಇಂದ್ರಿಯಗಳಿಂದ ವಿಷಯ ಗ್ರಹಣ ಮಾಡುವುದಕ್ಕೆ ಆಯಾಯಾ ಇಂದ್ರಿಯಗಳಿಗೆ ಒಳಗಿನಿಂದ ಬೆಳಕು ಬರಬೇಕು. ಈ ಬೆಳಕು ಇಲ್ಲದಿದ್ದರೆ ಎಲ್ಲಾ ಇಂದ್ರಿಯಗಳೂ ಜಡ ವಸ್ತುಗಳಂತೆಯೇ ಸರಿ. ಹೀಗೆ ಇಂದ್ರಿಯಗಳು, ಮನಸ್ಸು, ಬುದ್ಧಿ ಇವುಗಳಿಗೆ ಬೆಳಕನ್ನು ಕೊಡುವವನು ಪರಮಾತ್ಮನೇ ಆಗಿದ್ದಾನೆ. ನಮಗೆ ಹೊರಗಿನ ಪ್ರಪಂಚದಲ್ಲಿ ಕಾಣುವ ಜ್ಯೋತಿ ಮೂರ್ತಿಗಳಾದ ಸೂರ್ಯ, ಚಂದ್ರ, ಅಗ್ನಿ ಇವುಗಳಿಗೆ ಬೆಳಕನ್ನು ಕೊಡುವವನೂ ಪರಮಾತ್ಮನೇ ಆಗಿದ್ದಾನೆ. ಇದೇ ಮಾತನ್ನು ಜ್ಯೋತಿಷಾಮಪಿತ ತಜ್ಯೋತಿಃ ಎಂಬುದು ಸೂಚಿಸುತ್ತದೆ.
ಕತ್ತಲೆಗಿಂತ ಆಚೆ ಇರುವವನು. ಸೂರ್ಯನು ಜ್ಯೋತಿಸ್ವರೂಪನೇ ಆಗಿರುವುದರಿಂದ ಅವನಲ್ಲಿ ಕತ್ತಲೆಯಲ್ಲಿ. ಆಶ್ರಯ ಆತ್ಮನು ಸೂರ್ಯನಿಗೆ ಸಹ ಬೆಳಕನ್ನು ಕೊಡುವುದರಿಂದ, ಅಂದರೆ ಸೂರ್ಯನಿಗೆ ಬೆಳಗುವ ಶಕ್ತಿಯು ಆತ್ಮನಿಂದಲೇ
ಲಭಿಸುವುದರಿಂದ, ಆತ್ಮನಲ್ಲಿ ಸಹ ಕತ್ತಲೆ ಇಲ್ಲ. ಬೆಳಕನ್ನು ಕಾಣಲು, ನಮ್ಮ ಕಣ್ಣಿಗೆ ಒಳಗಿನಿಂದ ಬೆಳಕು ಬೇಕಾಗುವಂತೆ ಕತ್ತಲೆಯನ್ನು ತಿಳಿಯಲು ಸಹ ಒಳಗಿನ ಬೆಳಕು ಬೇಕು. ಕುರುಡನಲ್ಲಿ ಈ ಬೆಳಕು ಇಲ್ಲದಿರುವುದರಿಂದ ಅವರಿಗೆ ಕತ್ತಲೆ ಬೆಳಕುಗಳ ಭೇದ ಕಾಣುವುದಿಲ್ಲ. ಆತ್ಮನು ಕತ್ತಲೆಯನ್ನು ಸಹ ತಿಳಿಯುವ ಬೆಳಕನ್ನು ಕೊಡುತಾನೆ. ಆದ್ದರಿಂದ ಅವನು ಕತ್ತಲೆಯ ಆಚೆಗಿದ್ದಾನೆ.
ಜ್ಞಾನಂ, ಜ್ಞೇಯಂ, ಜ್ಞಾನ ಗಮ್ಯಂ- ಹಿಂದೆ ಹೇಳಿದಂತೆ, ‘ಅಮಾನಿತ್ವ ಮದಂಭಿತ್ವಂ ಇತ್ಯಾದಿ’
ಸದ್ಗುಣಗಳನ್ನು ಮೈಗೂಡಿಸಿಕೊಂಡು, ಆತ್ಮ ಜ್ಞಾನಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಂಡ ನಂತರ, ‘ಪರಮಾತ್ಮನ ಜ್ಞಾನವೇ ನಿಜವಾದ ಜ್ಞಾನ, ತಿಳಿಯಬೇಕಾದವನು ಅವನೇ. ತಿಳಿಯ ಬೇಕಾದುದೂ ಅವನೇ’ ಎಂಬ ಜ್ಞಾನವಾಗುತ್ತದೆ.
ಹೃದಿಸರ್ವತ್ಯ ವಿಷ್ಟಿತಮ್ ಆತ್ಮನು ಸರ್ವರ ಹೃದಯದಲ್ಲಿಯೂ ನೆಲೆಸಿದ್ದಾನೆ. ಇಲ್ಲಿ ಹೃದಯ ಎಂದರೆ ನಮ್ಮ ಇಡೀ ದೇಹಕ್ಕೆ ರಕ್ತವನ್ನು ಹಂಚುವ ‘ಹೃದಯ’ ಎಂಬ ಅವಯವವಲ್ಲ ಇದು ಮನಸ್ಸಿನಲ್ಲಿ ನೆಲೆಸಿರುವ, ಎಲ್ಲಾ ಸದ್ಗುಣಗಳಿಂದಲೂಗಳಿಗೂ ಉಗಮ ಸ್ಥಾನವಾದ ಸೂಕ್ಷ್ಮ ಹೃದಯ. ಹಿಂದೆ ತಿಳಿಸಿದ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಚೇತನಾವಸ್ತುವನ್ನು ಧ್ಯಾನಮಾಡಿದರೆ ಆಗ ಜ್ಞಾನ ಎಂಬ ಬೆಳಕು ಪ್ರಕಟವಾಗುತ್ತದೆ. ಆದುದರಿಂದ ಸದ್ಗುಣಗಳಿಗೆ ಅಂದವಾದ ಅಗರ ಹೃದಯದಲ್ಲಿ ಆತ್ಮನಿದ್ದಾನೆ ಎಂದು ಹೇಳಲಾಗಿದೆ.
ಭಕ್ತಿಯಿಂದ ಈ ಬೆಳಕನ್ನು ಸಾಧಿಸಬೇಕು.
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ |
ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ || 19 ||
ಅರ್ಥ :- ಇದುವರೆಗೆ ಕ್ಷೇತ್ರ, ಜ್ಞಾನ, ಮತ್ತು ಜ್ಞೇಯ ಇವುಗಳನ್ನು ವರ್ಣಿಸಲಾಯಿತು. ನನ್ನ ಭಕ್ತನು ಇವುಗಳನ್ನು ತಿಳಿದುಕೊಳ್ಳುವುದರಿಂದ ನನ್ನನ್ನೇ ಸೇರುತ್ತಾನೆ.
ಭಕ್ತನೆಂದರೆ ಕೇವಲ ಭಾವೋದ್ರೇಕ ಕಾಲದಲ್ಲಿ ಮಾತ್ರ ಪರಮಾತ್ಮನಲ್ಲಿ ಭಕ್ತಿ ಮಾಡುವವನಲ್ಲ. ಬುದ್ಧಿಯ ವಿಚಾರ ಶಕ್ತಿಯಿಂದ ಕ್ಷೇತ್ರ ಮತ್ತು ಕ್ಷೇತ್ರಜ್ಞರಲ್ಲಿಯ ಭೇದವನ್ನು ತಿಳಿದುಕೊಂಡು, ಸೃಷ್ಟಿಯಾದ ಎಲ್ಲಾ ಚರಾಚರ ಜಗತ್ತಿನಲ್ಲಿಯೂ ಪರಮಾತ್ಮನಿರುವುದನ್ನು ಕಾಣುವವನೇ ಭಕ್ತನು. ಇಂದಹ ಭಕ್ತನು, “ನನ್ನ” ಸ್ಥಿತಿಯನ್ನು ಹೊಂದುತ್ತಾನೆ. ಅಂದರೆ ಪರಮಾತ್ಮನೇ ಆಗುತ್ತಾನೆ. ಪ್ರಕೃತಿ-ಪುರುಷ ಸಂಯೋಗದಿಂದ ಪ್ರಪಂಚದ ಸೃಷ್ಟಿ.

ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ |
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್ || || 20 ||
ಅರ್ಥ :- ಪ್ರಕೃತಿ ಮತ್ತು ಪುರುಷ ಇವರಿಬ್ಬರೂ ಆದಿ ಇಲ್ಲದವರು ಓದಜ. ಈಸದನಾ ಪಬಜಪಾಲ-ಪ್ರಪಂಚದಲ್ಲಿರುವ ಎಲ್ಲಾ ತರಹದ ಸೃಷ್ಟಿಗಳೂ, ಮತ್ತು ಗುಣಗಳೂ ಪ್ರಕೃತಿಯಿಂದ ಹುಟ್ಟಿದವುಗಳೆಂದು ತಿಳಿ.
ಪ್ರಕೃತಿಯು ಪರಾ ಪ್ರಕೃತಿ ಮತ್ತು ಅಪರಾಪ್ರಕೃತಿ ಎಂದು ಎರಡು ವಿಧವಾಗಿದೆ ಎಂದು ಈ ಹಿಂದೆ ಹೇಳಲಾಗಿದೆ. ಈ ಅಧ್ಯಾಯದಲ್ಲಿ ಈ ಎರಡೂ ಪ್ರಕೃತಿಗಗಳನನ್ನು ‘ಕ್ಷೇತ್ರಜ್ಞ’ ಎಂದು ಕರೆಯಲಾಗಿದೆ. ಪರಾ ಮತ್ತು ಅಪರಾ ಪ್ರಕೃತಿಗಳಿಂದ ಪ್ರಥಮ ಪ್ರಪಂಚದ ಸೃಷ್ಟಿಯಾಗುತ್ತದೆಂದು ಹಿಂದೆ ಹೇಳಲಾಗಿದೆ. ಇದೇ ಭಾವವನ್ನು ಈ ಅಧ್ಯಾಯದಲ್ಲಿ ಬೇರೆ ಶಬ್ದಗಳನ್ನು ಪಯೋಗಿಸಿ ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವರು ಎಲ್ಲಾ ಸೃಷ್ಟಿಗೂ ಕಾರಣ ಎಂದು ಹೇಳಲಾಗಿದೆ. ಪ್ರಕೃತಿ ಮತ್ತು ಪುರುಷ ಇಬ್ಬರೂ ಅನಾದಿ. ಇವರಿಬ್ಬರು ಈಶ್ವರನ ಎರಡು ಮುಖಗಳು. ಪರಮಾತ್ಮನು ಶಾಶ್ವತನಾದುದರಿಂದ ಅವನ ಪ್ರಭಾವ ಮತ್ತು ಶಕ್ತಿಗಳಾದ ಪ್ರಕೃತಿ ಪುರುಷರು ಸಹ ಶಾಶ್ವತ ಮತ್ತು ಅನಾದಿ. ಪ್ರಕೃತಿ ಪುರುಷರ ಸಂಯೋಗದಿಂದ ಸೃಷ್ಟಿ, ಸ್ಥಿತಿ, ಲಯಗಳಾಗುತ್ತವೆ. ಇವೆರಡಕ್ಕೂ ತೇಜಸ್ಸು ಬರುವುದು ಪರಮಾತ್ಮನಿಂದ. ಎಲ್ಲಾ ರೂಪಗಳೂ, ವಿಕಾರಗಳೂ, ಸುಖದುಃಖಾದಿ ಅನುಭಗಳೂ, ಮತ್ತು ಎಲ್ಲಾ ಮನೋಭಾವಗಳೂ ಪ್ರಕೃತಿಯಿಂದ ಹುಟ್ಟುತ್ತವೆ. ಒಟ್ಟಿನಲ್ಲಿ ಸರ್ವ ಸೃಷ್ಟಿಯೂ ಪ್ರಕೃತಿಯಿಂದ ಹುಟ್ಟುತ್ತದೆ. ಪರಮಾತ್ಮನು ಪ್ರಕೃತಿಗೆ ಈ ಕಾರ್ಯವನ್ನು ಮಾಡುವ ಶಕ್ತಿಯನ್ನು ಕೊಟ್ಟು, ತಾನು ಮಾತ್ರ ಯಾವ ಬದಲಾವಣೆಯನ್ನೂ ಹೊಂದದೆ ಕೂಟಸ್ಥನಂತಿದ್ದಾನೆ.

ಕಾರ್ಯಕರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ |
ಪುರುಷಃ ಸುಖದುಃಖಾನಾಂ ಭೋಕ್ತøತ್ವೇ ಹೇತುರುಚ್ಯತೇ || 21 ||
ಅರ್ಥ :- ಕಾರ್ಯಗಳಿಗೆ ಬೇಕಾದ ಕಾರಣ ಕಾರ್ಯಗಳಾಗುವಿಕೆ ಇವು ಪ್ರಕೃತಿಯಿಂದ ಆಗುತ್ತವೆ. ಸುಃಖದುಃಖಾದಿಗಳ ಅನುಭವಕ್ಕೆ ಪುರುಷನು ಕಾರಣ.
ಇಲ್ಲಿ ಹೇಳಿದ ಕಾರ್ಯ ಅಂದರೆ ಪಂಚಭೂತಗಳು, ಪಂಚಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ ಈ ಹದಿಮೂರು ತತ್ವಗಳಿಂದ ಕೂಡಿದ ಶರೀರ ಈ ಶರೀರಕ್ಕೆ ಚೇತನವನ್ನು ಕೊಡುವವನೂ, ಸುಖದುಃಖಾದಿ ಅನುಭವಗಳು ತಿಳಿಯುವಂತೆ ಮಾಡುವವನೂ, ಪುರುಷನಾಗಿದ್ದಾನೆ. ಆದುದರಿಂದ ಸುಖದುಃಖಾದಿಗಳಿಗೆ ಪುರುಷನು ಕಾರಣ ಎಂದು ಹೇಳಲಾಗಿದೆ.
ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್ |
ಕಾರಣಂ ಗುಣಸಂಗೋ„ಸ್ಯ ಸದಸದ್ಯೋನಿಜನ್ಮಸು || 22 ||
ಅರ್ಥ :- ಪುರುಷನು ಪ್ರಕೃತಿಯಲ್ಲಿದ್ದುಕೊಂಡು ಪ್ರಕೃತಿಯ ಗುಣಗಳನ್ನೂ ಅನುಭವಿಸುತ್ತಾನೆ. ಮತ್ತು ಅವುಗಳಿಗೆ ಅನುಗುಣವಾದ ಒಳ್ಳೆಯ, ಕೆಟ್ಟ ಯೋನಿಗಳಲ್ಲಿ ಜನ್ಮಗಳನ್ನು ಪಡೆಯುತ್ತಾನೆ.
ಪುರುಷ, ಜೀವ, ಕ್ಷೇತ್ರಜ್ಞ, ಭೋಕ್ತø ಇವೆಲ್ಲವೂ ಸಮಾನವಾಚಕ ಪದಗಳು. ಶುದ್ಧ ಪರಮಾತ್ಮನಿಗೆ ಸಂಸಾರದ ಬಂಧವಿಲ್ಲ. ಆದರೆ ಅವನೇ ಶರೀರದಲ್ಲಿ ಬಂಧಿತನಾದರೆ, ಸಂಸಾರಕ್ಕೆ ಬಂಧಿತನಾಗಿ ವಿವಿಧ ಸುಖ ದುಃಖಗಳನ್ನು ಭೋಗಿಸುತ್ತಾನೆ.
ಭುಂಕ್ತೇ ಪ್ರಕೃತಿಜಾನ್ಗುಣಾನ್ – ಸುಖ-ದುಃಖ ಅವುಗಳ ಜೊತೆಗೆ ಲಿಪ್ತನಾಗಿರುವುದರಿಂದ ಇವನಿಗೆ ಅವುಗಳ ‘ವಾಸನೆ’ ಉಂಟಾಗುತ್ತದೆ. ಅಂದರೆ ಈ ಅನುಭವಗಳು ಅವನ ಅಹಂಕಾರದ ಮೇಲೆ ಸೂಕ್ಷ್ಮರೂಪದಲ್ಲಿ ತಮ್ಮ ತಮ್ಮ ಮುದ್ರೆಯನ್ನು ಒತ್ತುತ್ತವೆ. ಈ ವಾಸನೆಗಳು ಸಂಗ್ರಹವಾಗುತ್ತಲೇ ಹೋಗುತ್ತವೆ. ಜೀವನು ಈ ಶರೀರವನ್ನು ಬಿಟ್ಟು ಹೋಗುವಾಗ, ಈ ವಾಸನಾ ಸಮೂಹಗಳನ್ನು ಸೂಕ್ಷ್ಮರೂಪದಲ್ಲಿ ತನ್ನ ಜೊತೆಗೆ ತೆಗೆದುಕೊಂಡು ಹೋಗುತ್ತಾನೆ. ಹೀಗೆ ಸಂಚಿತವಾದ ವಾಸನೆಗಳನ್ನು ಭೋಗಿಸುವುದಕ್ಕೆ ಅನುಕೂಲವಾದ ಶರೀರವನ್ನು ಪಡೆದು ಪುನಃ ಜನ್ಮವೆತ್ತುತ್ತಾನೆ. ಆತ್ಮನು ಈ ಶರೀರದೊಡನೆ ಹೊಂದಿರುವ ಮೋಹದಿಂದಾಗಿ, ತಾನು ಸಚ್ಚಿದಾನಂದ ಸ್ವರೂಪನೆಂಬುದನ್ನು ಮರೆತು ಶರೀರದಲ್ಲಿ ಬಂಧಿತನಾಗಿರುತ್ತಾನೆ.

ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ |
ಪರಮಾತ್ಮೇತಿ ಚಾಪ್ಯುಕ್ತೋ ದೇಹೇ„ಸ್ಮಿನ್ ಪುರುಷಃ ಪರಃ || 23 ||
ಅರ್ಥ :- ದೇಹಧಾರಿಯಾದ ಈ ಶ್ರೇಷ್ಠಪುರುಷನು ಪ್ರೇಕ್ಷಕನು, ಅನುಮತಿ ಕೊಡುವವನು, ಆಧಾರನು, ಅನುಭವಿಸುವವನು, ಒಡೆಯನು, ಪರಮಾತ್ಮನು ಎಂಬುದಾಗಿ ಕರೆಯಲ್ಪಡುತ್ತಾನೆ.
ದೇಹಧಾರಿಯಾದ ಪರಮಾತ್ಮ(ಜೀವ) ಮತ್ತು ಶುದ್ಧ ಪರಮಾತ್ಮ ಇವರನ್ನು ಇಲ್ಲಿ ಹೋಲಿಸಲಾಗಿದೆ. ನೀರಿನ ಕಡಾಯಿಯಲ್ಲಿರುವ ಚಂದ್ರನು ಆಕಾಶದಲ್ಲಿರುವ ಚಂದ್ರನ ಪ್ರತಿಬಿಂಬ. ನೀರಿನ ಮೇಲೆ ಪ್ರತಿಬಿಂಬವು ಕಾಣಬೇಕಾದರೆ ಮೇಲೆ ನಿಜವಾದ ಚಂದ್ರನಿರಲೇಬೇಕು. ಪ್ರತಿಬಿಂಬವು ನೀರಿನ ಮೇಲ್ಮೈಯನ್ನು ಅವಂಬಿಸಿದೆ. ಇದು ಅಲುಗಾಡುತ್ತಿದ್ದರೆ ಬಿಂಬವೂ ಅಲುಗಾಡುತ್ತದೆ. ಇದು ಹೊಲಸಾಗಿದ್ದರೆ ಬಿಂಬವು ಅಸ್ಪಷ್ಟವಾಗಿ ಕಾಣಿಸುತ್ತದೆ. ನೀರಿನ ಮೇಲ್ಮೈಯು ಸ್ವಚ್ಛವಾಗಿ, ಶಾಂತವಾಗಿದ್ದರೆ, ಅಲುಗಾಡದ, ಸ್ಪಷ್ಟವಾದ ಬಿಂಬವು ಕಾಣುತ್ತದೆ. ಬಿಂಬವು ಯಾವುದೇ ರೀತಿಯಲ್ಲಿ ಬದಲಾವಣೆಯನ್ನು ಹೊಂದಿದಾಗ್ಯೂ ಇವಾವುವೂ ಮೇಲಿರುವ ಚಂದ್ರನಿಗೆ ಸಂಬಂಧವಿಲ್ಲ. ಅವನಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ನೀರಿನ ಮೇಲ್ಮೈಯಲ್ಲಾಗುವ ಬದಲಾವಣೆಗಳು ಕೇವಲ ಬಿಂಬದಲ್ಲಿ ಮಾತ್ರ ಮಾರ್ಪಾಟನ್ನು ಮಾಡಬಲ್ಲುದೇ ಹೊರತು, ಚಂದ್ರನ ಮೇಲೆ ಯಾವ ಬದಲವಣೆಯನ್ನು ಉಂಟು ಮಾಡಲಾರದು. ಆದುದರಿಂದ ‘ಕ್ಷೇತ್ರಜ್ಞ’ನು ಜ್ಞಾನ ಮತ್ತು ಕ್ಷೇತ್ರಗಳ ಸಂಪರ್ಕದಿಂದ ಉಂಟಾದ ಅವಸ್ಥಾವಿಶೇಷ ಎನ್ನಬಹುದು. ಶರೀರದಲ್ಲಿರುವ ಬುದ್ಧಿಯ ಮೇಲೆ (ಬಿಂಬ) ಶರೀರವು (ನೀರು) ಪರಿಣಾಮವನ್ನುಂಟು ಮಾಡುತ್ತದೆ. ಅಂದಮೇಲೆ ಈ ತರಹದ ಯಾವ ಪರಿಣಾಮವೂ ಆಗದಿರುವ, ಸ್ಥಿರವಾದ ಜ್ಞಾನವು (ಚಂದ್ರ) ಇರಲೇ ಬೇಕೆಂದಾಯಿತು.
ಶಾಸ್ತ್ರೀಯ ವಿವೇಚನೆಯ ದೃಷ್ಟಿಯಿಂದ ಇಲ್ಲಿ ಎರಡು ಪುರುಷನನ್ನು ವರ್ಣಿಸಲಾಗಿದೆ. (1) ಶರೀರಧಾರಿಯಾದ ಕ್ಷೇತ್ರಜ್ಞ ಅಥವಾ ಜೀವ ಎಂಬ ಅಜ್ಞಾನದಿಂದ ಆವೃತನಾದ ಪುರುಷ, ಮತ್ತು (2) ಅಜ್ಞಾನದ ಲೇಪವಿಲ್ಲದಿರುವ ಶುದ್ಧ ಪರಮಾತ್ಮ. ಶರೀರದಲ್ಲಿ ಈ ಎರಡೂ ಪುರುಷರೂ ಇದ್ದಾರೆ. ಶರೀರಧಾರಿಯಾದ ಜೀವನು ತನ್ನ ಜೀವನದ ವ್ಯವಹಾರಗಳಲ್ಲಿ ಮಗ್ನನಾಗಿರುವಾಗ ಪರಮಪುರುಷನು ಈ ಎಲ್ಲಾ ಕಾರ್ಯಗಳನ್ನೂ ಯಾವ ದೃಷ್ಟಿಯಿಂದ ನೋಡುತ್ತಿರುತ್ತಾನೆ ಎಂಬುದನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. ಉಪದ್ರಷ್ಟಾ :- ಎಂದರೆ ದೂರದಲ್ಲಿ ನಿಂತುಕೊಂಡು ನಡೆಯುತ್ತಿರುವ ಘಟನೆಗಳನ್ನು ನೋಡುತ್ತಿರುವವನು, ಅನುಮಂತಾ:- ಜೀವನು ಪ್ರಪಂಚದ ವ್ಯವಹಾರಗಳಲ್ಲಿ ಸಂಪೂರ್ಣನಾಗಿ ಮಗ್ನನಾಗದೆ, ಸತ್ಕಾರ್ಯಗಳನ್ನು ಮಾಡುತ್ತಿರುವಾಗ, ಆ ಕಾರ್ಯಗಳನ್ನು ಮಾಡುವಂತೆ ಒಪ್ಪಿಗೆಕೊಡುವವನು. ಭರ್ತಾ:- ಜೀವನು, ತಾನು ಪರಮಾತ್ಮನೆಂಬ ಭಾವವನ್ನಿಟ್ಟುಕೊಂಡು ಎಲ್ಲಾ ಕಾರ್ಯಗಳನ್ನೂ ಮಾಡುತ್ತಾ ಆ ಕಾರ್ಯಗಳನ್ನು ಪರಮಾತ್ಮನಿಗೆ ಅರ್ಪಿಸುವಾಗ ಆ ಕಾರ್ಯಗಳು ಯಶಸ್ವಿಯಾಗುವಂತೆ ಅನುಗ್ರಹಿಸುವವನು. ಭೋಕ್ತಾ:- ಜೀವನು ಪರಮಾತ್ಮನಿಗೆ ಸಂಪೂರ್ಣ ಶರಣಾಗತನಾಗಿ, ಯೋಗಯುಕ್ತನಾಗಿದ್ದುಕೊಂಡು, ತಾನೇ ನಿತ್ಯ ಚೈತನ್ಯ ಸ್ವರೂಪನೆಂಬ ಅನುಭವವನ್ನು ಪಡೆದು ಅವುಗಳನ್ನು ಭೋಗಿಸುವವನು. ಮಹೇಶ್ವರ :- ಈ ಸ್ಥಿತಿಯನ್ನು ಮುಟ್ಟಿದಾಗ್ಯೆ ಜೀವನು ತಾನೇ ಸಚ್ಚಿದಾನಂದ ಸ್ವರೂಪನಾದ ಮಹೇಶ್ವರನಾಗುತ್ತಾನೆ. ಈಗ ಅವನ ಅಜ್ಞಾನವನ್ನು ಬಂಧನ ಇವೆಲ್ಲವೂ ಕಳಚಿ ಹೋಗುತ್ತದೆ.
ಇಂತಹ ಜೀವನು ಜೀವನ ಚಕ್ರದಲ್ಲಿ ಹೇಗೆ ವರ್ತಿಸುತ್ತಾನೆ.

ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ |
ಸರ್ವಥಾ ವರ್ತಮಾನೋ„ಪಿ ನ ಸ ಭೂಯೋ„ಭಿಜಾಯತೇ || 24 ||
ಅರ್ಥ :- ಯಾವನು ಹೀಗೆ ಪ್ರಕೃತಿ ಮತ್ತು ಪುರುಷರನ್ನೂ, ಅವರ ಗುಣಗಳನ್ನೂ, ತಿಳಿದುಕೊಳ್ಳುತ್ತಾನೋ, ಅವನು ಪ್ರಪಂಚದಲ್ಲಿ ಯಾವುದೇ ಸ್ಥಿತಿಯಲ್ಲಿದ್ದರೂ, ಪುನಃ ಜನ್ಮವೆತ್ತುವುದಿಲ್ಲ.
ಪರಮ ಪುರುಷನು ಶರೀರಧಾರಿಯಾಗಿ ಬಂಧಿತನಾಗಿರುವುದರಿಂದಲೇ ನಾನಾ ತರಹದ ಸುಖದುಃಖಗಳಿಗೆ ಈಡಾಗುತ್ತಾನೆ. ಅವನು ಹೀಗೆ ಬಂಧಿತನಾಗದೆ ಕೇವಲ ಸಾಕ್ಷಿಯಂತೆ ಇದ್ದಿದ್ದರೆ ಹೀಗೆ ಸುಖದುಃಖಗಳನ್ನು ಅನುಭವಿಸಬೇಕಾಗಿದ್ದಿಲ್ಲ. ಆದರೆ ಅವನು ಅಜ್ಞಾನದಿಂದ ಆವೃತನಾಗಿ ಶರೀರಧಾರಿಯಾಗಿದ್ದಾನೆ. ಮತ್ತು ‘ನಾನು’ ಎಂಬ ಅಹಂಭಾವದಿಂದ ಕೂಡಿ ನಾನಾ ತರಹದ ಶಾರೀರಿಕ, ಮಾನಸಿಕ ಕರ್ಮಗಳನ್ನು ಮಾಡುತ್ತಾನೆ. ಈ ಕರ್ಮಗಳ ವಾಸನೆಗಳು ಅನವ ಅಂತಃಕರಣದ ಮೇಲೆ ಮುದ್ರಿತವಾಗಿದ್ದು ಮುಂದೆ ಆ ವಾಸನೆಗಳನ್ನು ಭೋಗಿಸುವುದಕ್ಕಾಗಿ ಪುನಃ-ಪುನಃ ಜನ್ಮವೆತ್ತುತ್ತಲೇ ಇರುತ್ತಾನೆ. ಈ ತತ್ವವನ್ನು ತಿಳಿದುಕೊಂಡು ತಾನೇ ಪರಮೇಶ್ವರನು ಎಂಬ ಜ್ಞಾನವನ್ನು ಹೊಂದಿದ ಜೀವನ, ಸಂಚಿತ ವಾಸನೆಗಳೆಲ್ಲವೂ ಕರಗಿ ಹೋಗುವುದರಿಂದ ಅವನು ಪುನರ್ಜನ್ಮವನ್ನು ಎತ್ತುವುದಿಲ್ಲ.
ಆತ್ಮಜ್ಞಾನವನ್ನು ಪಡಿಯಲು ಇರುವ ಮಾರ್ಗಗಳು
ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ |
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ || 25 ||
ಅರ್ಥ :- ಕೆಲವರು ಧ್ಯಾನಮಾಡುತ್ತಾ ಆತ್ಮನಲ್ಲಿ ಆತ್ಮನನ್ನು ಕಾಣುತ್ತಾರೆ. ಕೆಲವರು ಜ್ಞಾನ ಯೋಗದಿಂದಲೂ, ಮತ್ತೆ ಕೆಲವರು ಕರ್ಮಯೋಗದಿಂದಲೂ ಈ ಜ್ಞಾನವನ್ನು ಪಡೆಯುತ್ತಾರೆ.
ಮನುಷ್ಯರ ಉತ್ಕ್ರಾಂತಿ, ಶಾರೀರಿಕ ಶಕ್ತಿ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಇವು ಭಿನ್ನಭಿನ್ನವಾಗಿರುವುದರಿಂದ ಆತ್ಮಸಾಧನೆಗೆ ಎಲ್ಲರಿಗೂ ಸಾರ್ವಜನಿಕವಾದ ಒಂದೇ ಮಾರ್ಗವು ಹಿತಕರವಾಗುವುದಿಲ್ಲ. ಪ್ರತಿಯೊಬ್ಬರೂ ಅವರವರ ಅಂತಸ್ತು ಹಾಗೂ ಶಕ್ತಿಗೆ ಅನುಗುಣವಾದ ಮಾರ್ಗದಲ್ಲಿ ಸಾಧನೆಯನ್ನು ಮಾಡಿ, ಕ್ರಮೇಣ ಒಂದೊಂದೇ ಮೆಟ್ಟಲನ್ನು ಏರುತ್ತಾ ಹೋಗಬೇಕು. ಹೀಗೆ ಮಾಡಿದರೆ ಮಾತ್ರ ಸಾಧನೆಯು ಫಲಪ್ರದವಾಗಿ ಸಿದ್ಧಿಯನ್ನು ಪಡೆಯಬಹುದು. ಈ ದೃಷ್ಟಿಯಿಂದ ಎಲ್ಲಾ ಸಾಧಕರಿಗೂ ಅನುಕೂಲವಾಗುವಂತೆ ವಿವಿಧ ಮಾರ್ಗಗಳು ಹೇಳಲ್ಪಟ್ಟಿವೆ. ಪ್ರತಿಯೊಬ್ಬರೂ ಅವರವರಿಗೆ ಸೂಕ್ತವಾದ ಮಾರ್ಗದಲ್ಲಿ ಸಾಧನೆಯನ್ನು ಮಾಡಬಹುದು. ಈ ಎಲ್ಲಾ ಮಾರ್ಗಗಳೂ ಒಂದೇ ಗುರಿಯನ್ನು ಮುಟ್ಟುವುದರಿಂದ ಇದರಲ್ಲಿ ಶ್ರೇಷ್ಠ, ಕನಿಷ್ಟ, ಇಲ್ಲವೇ ಹಿರಿತು, ಕಿರಿದು ಎಂಬ ಭೇದವಿಲ್ಲ. ವ್ಯತ್ಯಾಸವಿರುವುದು, ಕೇವಲ, ಸಾರ್ಥಕರ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಮಾತ್ರ. ಪ್ರಾರಂಭಿಕ ಸಾಧನೆಗಳಿಂದ, ಮನಸ್ಸು ‘ಸಂಕಲ್ಪ’ಗಳ ಕಲ್ಪನೆಯಲ್ಲಿ ತನ್ನ ಶಕ್ತಿಯ ವ್ಯಯವನ್ನು ನಿಲ್ಲಿಸಿ, ಪರಮಾತ್ಮನ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿದ ಹಾಗೆ ಮೇಲ್ಮಟ್ಟದ ಸಾಧನೆಗೆ- ಧ್ಯಾನಯೋಗಕ್ಕೆ ಅರ್ಹವಾಗುತ್ತದೆ. ಅಲ್ಲಿಯವರೆಗೆ ಪ್ರಾರಂಭಿಕ ಸ್ತರದ ಸಾಧನೆಗಳನ್ನು ಮಾಡಬೇಕು. ಧ್ಯಾನಯೋಗ, ಸಾಂಖ್ಯಯೋಗ, ಹಾಗೂ ಕರ್ಮಯೋಗಗಳನ್ನು ಈ ಹಿಂದೆ ವಿವರಿಸಲಾಗಿದೆ. ಆತ್ಮಾನಮಾತ್ಮನಿ- ಯೋಗಿಯು ಧ್ಯಾನಮಾಡುವಾಗ, ತನ್ನ ಆತ್ಮನಲ್ಲಿ ಪರಮಾತ್ಮನನ್ನು ಕಾಣುತ್ತಾನೆ. ತಾನೂ, ಪರಮಾತ್ಮ ಇಬ್ಬರೂ ಒಂದೇ ಎಂದು ತಿಳಿಯುತ್ತಾನೆ. ಇಲ್ಲಿ ಧ್ಯಾನಮಾಡುವವ, ಧ್ಯಾನಮಾಡಲ್ಪಡುವ ವಸ್ತು. ಮತ್ತು ಧ್ಯಾನದಿಂದ ತಿಳಿಯಲ್ಪಟ್ಟ ವಸ್ತು ಇವೆಲ್ಲ ತನ್ನ ಆತ್ಮ ಎಂದು ಏಕೆ ಕರೆಯಲಾಗಿದೆ ಎಂಬ ಕುತೂಹಲವುಂಟಾಗುತ್ತದೆ. ಕಾರಣವಿಷ್ಟೆ, ಧ್ಯಾನದ ಪರಮ ಗುರಿಯನ್ನು ಮುಟ್ಟಿದಾಗ್ಯೆ ಸಾಧಕನು ತನ್ನ ಶರೀರ, ಮನಸ್ಸು, ಬುದ್ಧಿ, ಇವೆಲ್ಲವೂ, ಪರಮಾತ್ಮನೇ ಎಂಬ ಅನುಭವವನ್ನು ಪಡೆಯುತ್ತಾನೆ. ಅವು ಬೇರೆ ಪರಮಾತ್ಮನು ಬೇರೆ ಎಂಬ ಭಾವವೇ ಇರುವುದಿಲ್ಲ. ನೀರಿನ ನೊರೆ, ಸಣ್ಣ ಅಲೆಗಳು, ದೊಡ್ಡ ಅಲೆಗಳು ಎಲ್ಲವೂ ಸಮುದ್ರದವೇ ಎಂಬಂತೆ; ಕನಸು ಕಾಣುವವನು, ಕನಸು, ಕಂಡ ದೃಶ್ಯ ಇವೆಲ್ಲವೂ ಎಚ್ಚರವಾದ ಮನುಷ್ಯನಲ್ಲಿಯೇ ಇದ್ದಂತೆ ಸಾಧಕನು, ಪ್ರತಿಯೊಂದನ್ನೂ ಪರಮಾತ್ಮ ಮಯವಾಗಿ ಕಾಣುತ್ತಾನೆ.
ಈ ಧ್ಯಾನಯೋಗಕ್ಕೆ ಎಲ್ಲರೂ ಅರ್ಹರಲ್ಲ. ಮನಸ್ಸಿನ ಏಕಾಗ್ರತೆಯನ್ನು ಇನ್ನೂ ಸಾಧಿಸದಿದ್ದವರು. ಶಾಸ್ತ್ರಾಭ್ಯಾಸದಿಂದ ತರ್ಕಬದ್ಧವಾಗಿ ಮೂಲಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು. ಇದಕ್ಕೆ ಸಾಂಖ್ಯಯೋಗ ಎಂದು ಹೆಸರು. ಇನ್ನೂ ಕೆಲವರಿಗೆ ಈ ರೀತಿಯ ಶಾಸ್ತ್ರಾಭ್ಯಾಸವನ್ನು ಮಾಡುವುದೂ, ಮೂಲತತ್ವಗಳನ್ನು ತಿಳಿದುಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಅಂತಹವರಿಗೆ ಕರ್ಮಯೋಗವು ಹೇಳಲ್ಪಟ್ಟಿದೆ. ಇದರಲ್ಲಿ ಸಾಧಕನು ತಾನು ಮಾಡುವ ಎಲ್ಲಾ ಕರ್ಮಗಳನ್ನು ಫಲಾಪೇಕ್ಷಯನ್ನಿಟ್ಟುಕೊಳ್ಳದೆ, ಅವು ಪರಮಾತ್ಮನ ಸೇವೆ ಎಂಬ ಭಾವದಿಂದ ಮಾಡಿ, ಅವುಗಳನ್ನು ಪರಮಾತ್ಮನಿಗೆ ಅರ್ಪಿಸುತ್ತಾನೆ.
ಇನ್ನೂ ಕೆಳಮಟ್ಟದವರು ಯಾವ ಸಾಧನೆಯನ್ನು ಮಾಡಬೇಕು.

ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ |
ತೇ„ಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ || 26 ||
ಅರ್ಥ :- ಇನ್ನೂ ಕೆಲವರು, ಮೇಲಿನ ಮೂರೂ ಮಾರ್ಗಗಳನ್ನು ತಿಳಿಯದೇ ಇದು ಇರುವವರು ನಾನೇ ಪರಮ ಧ್ಯೇಯ ಎಂಬುದನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡು, ಅದನ್ನೇ ನಂಬಿ ನನ್ನ ಉಪಾಸನೆಯನ್ನು ಮಾಡುತ್ತಾರೆ, ಇವರೂ ಸಹ ಮೃತ್ಯುವನ್ನು ದಾಟಿ ನನ್ನನ್ನು ಸೇರುತ್ತಾರೆ.
ಇಲ್ಲಿ ಮೃತ್ಯು ಏಜೋಮಾ (ಮರಣ) ಎಂದರೆ ಶರೀರದ ಮರಣ ಎಂದು ತಿಳಿಯಬಾರದು. ಪರಮಾತ್ಮನ ಭಜನೆ, ಹಾಗೂ ಪೂಜೆಯ ವಿಧಾನವನ್ನು ಕೇಳಿ ತಿಳಿದುಕೊಂಡ ಜನರು ಪರಮಾತ್ಮನಲ್ಲಿ ಶ್ರದ್ಧೆಯನ್ನೂ ಭಕ್ತಿಯನ್ನೂ ಹೊಂದಿದವರಾಗಿ, ಅವನ ಉಪಾಸನೆಯನ್ನು ಮಾಡುತ್ತಾ, ಅಹಂಕಾರವನ್ನು ಕಳೆದುಕೊಂಡು, ಅವನನ್ನೇ ಸೇರುತ್ತಾರೆ ಎಂಬ ಆಶ್ವಾಸನೆಯು ಕೊಡಲ್ಪಟ್ಟಿದೆ. ತೀರ ಕೆಳಮಟ್ಟದಲ್ಲಿರುವ ಸಾಧಕರೇ ಈ ಉತ್ತಮಗತಿಯನ್ನು ಪಡೆಯಬಲ್ಲರೆಂದ ಮೇಲೆ, ಶಾಸ್ತ್ರಗಳಲ್ಲಿ ಹೇಳಿರುವ ಜ್ಞಾನವನ್ನು ಬುದ್ಧಿಯ ವಿಮರ್ಶೆಯಿಂದ ತಿಳಿದುಕೊಂಡು ಧ್ಯಾನಮಾಡುವ ಮೇಲ್ಮಟ್ಟದ ಜನರು ಇನ್ನೂ ಜಾಗ್ರತೆಯಾಗಿ ಪರಮಾತ್ಮನನ್ನು ಸೇರಬಲ್ಲರು ಎಂಬುದನ್ನು ಈ ಭಾಗವು ಒತ್ತಿ ಹೇಳುತ್ತದೆಂದು ಶಂಕರಾಚಾರ್ಯರು ಅರ್ಥಮಾಡಿದ್ದಾರೆ.

ಯಾವತ್ಸಂಜಾಯತೇ ಕಿಂಚಿತ್ಸತ್ತ್ವಂ ಸ್ಥಾವರಜಂಗಮಮ್ |
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ತದ್ವಿದ್ವಿ ಭರತರ್ಷಭ || 27 ||
ಅರ್ಥ :- ಭರತ ಶ್ರೇಷ್ಠನೇ, ಪ್ರಪಂಚದಲ್ಲಿ ಸೃಷ್ಟಿಯಾದ ಪ್ರತಿಯೊಂದು ಸ್ಥಾವರ, ಜಂಗಮ, ವಸ್ತುಗಳೂ, ಕ್ಷೇತ್ರ ಮತ್ತು ಕ್ಷೇತ್ರಜ್ಞರ (ಪ್ರಕೃತಿ-ಪುರುಷರ) ಸಂಯೋಗದಿಂದ ಆದದ್ದು ಎಂದು ತಿಳಿ.
ಪ್ರಕೃತಿ ಪುರುಷರ ಈ ಸಂಯೋಗವು ನಿಜವಾದ ಸಂಯೋಗವ ಇದಕ್ಕೆ ಅಧ್ಯಾಸ ಎಂದು ಹೆಸರು. ಕಂಬದಲ್ಲಿ ‘ಭೂತ’ ಇದೆ ಎಂದು ಭಾವಿಸಿ ಕಂಬದಲ್ಲಿ ‘ಭೂತ’ದ ಎಲ್ಲಾ ಅಂಗಾಂಗಗಳನ್ನೂ ಚಲನವಲನಾದಿಗಳನ್ನು ಕಲ್ಪಿಸಿ, ಆರೋಪಿಸುವಂತೆ, ಪ್ರಕೃತಿ ಪುರುಷರ ಸಂಯೋಗವು ಈ ರೀತಿ ಪರಸ್ಪರ ಅಧ್ಯಾಸ ಸಂಯೋಗವಾಗಿದೆ. ಆತ್ಮನು ಶರೀರದ ಜೊತೆಗೆ ಸೇರಿಕೊಂಡು, ವಿವಿಧ ಕರ್ಮಗಳನ್ನು ಮಾಡಿ, ಸುಃಖದುಃಖಗಳನ್ನು ಅನುಭವಿಸಲು ಪ್ರೇರೇಪಿಸುವಂತೆ, ಪ್ರಕೃತಿಯೊಡನೆ ಸೇರಿ ಸಕಲ ಚರಾಚರ ವಸ್ತುಗಳನ್ನೂ, ಇಡೀ ಪ್ರಪಂಚವನ್ನೂ ಸೃಷ್ಟಿಸಲು ಪ್ರೇರೇಪಿಸುತ್ತಾನೆ.
ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ |
ವಿನಶ್ಶತ್ಸ್ವವಿನಶ್ಯಂತಂ ಯಃ ಪಶ್ಶತಿ ಸ ಪಶ್ಶತಿ || 28 ||
ಅರ್ಥ :- ನಾಶವಾಗತಕ್ಕಂತಹ ಸೃಷ್ಟಿಯಾದ ಎಲ್ಲಾ ಚರಾಚರವಸ್ತುಗಳಲ್ಲಿಯೂ, ನಾಶವಾಗದೆ ಇರುವ ಪರಮಾತ್ಮನನ್ನು ಕಾಣುವವನೇ ನಿಜವಾಗಿ ಕಾಣಬಲ್ಲವನು ನಿಜವಾದ ಜ್ಞಾನವುಳ್ಳವನು.

ಸಮಂ ಪಶ್ಶನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ |
ನ ಹಿನಸ್ತ್ಯಾತ್ಮನಾತ್ಮನಂ ತತೋ ಯಾತಿ ಪರಾಂ ಗತಿಮ್ || 29 ||
ಅರ್ಥ :- ಹೀಗೆ ಎಲ್ಲೆಡೆಯಲ್ಲಿಯೂ ಪರಮಾತ್ಮನು ಸಮನಾಗಿದ್ದಾನೆಂದು ಕಾಣುವವನು, ನಿಜವಾದ ಜ್ಞಾನವನ್ನು ಹೊಂದಿರುವುದರಿಂದ, ಅವನು ತನ್ನ ಆತ್ಮದಿಂದ ಆತ್ಮಘಾತವನ್ನು ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅವನು ಶ್ರೇಷ್ಠಗತಿಯನ್ನು ಸೇರುತ್ತಾನೆ.
ಈತನು ಪ್ರಪಂಚದ ಚರಾಚರ ವಸ್ತುಗಳನ್ನು ನೋಡಿ, ಅವುಗಳ ಬಾಹ್ಯ ರೂಪಗಳಿಂದ ಭ್ರಾಂತಿಗೊಂಡು, ಅವು ಬೇರೆ ಬೇರೆ ವಸ್ತುಗಳು ಇಲ್ಲವೇ ಜೀವಿಗಳು ಎಂದು ಭ್ರಮಿಸುವುದಿಲ್ಲ. ಅವನು ಹೊರಗಿನ ರೂಪಗಳನ್ನು ನೋಡುತ್ತಿದ್ದಾಗ್ಯೂ, ಆ ಎಲ್ಲಾ ರೂಪಗಳಿಗೆ ಚೇತನವನ್ನು ಕೊಡುವ ಪರವಸ್ತುವೇ ಶಾಶ್ವತವಾದ ಪರಮಾತ್ಮನೆಂದೂ, ಅವನೇ ತಾನೆಂದೂ, ಅಖಂಡ ಅನುಭವವನ್ನು ಹೊಂದಿರುತ್ತಾನೆ. ಕಂಬದಲ್ಲಿ ಭೂತವಿರುವಂತೆ ಕಂಡು ನಾವು ಭ್ರಮಿಸಿ, ಅದು ನಿಜವಾದ ‘ಭೂತ’ ಎಂದೇ ಮೋಸ ಹೋಗುತ್ತೇವೆ. ಅದು ನಿಜವಾಗಿ ಕಂಬ ಎಂಬ ಜ್ಞಾನವುಂಟಾದರೆ ‘ಭೂತ’ ಎಂಬ ಭ್ರಮೆಯು ಸಂಪೂರ್ಣವಾಗಿ ನಾಶವಾಗುತ್ತದೆ. ಇದೇ ರೀತಿಯಲ್ಲಿ ಸಿದ್ಧಪುರುಷನು ಹೊರಗಿನ ರೂಪಗಳನ್ನು ನೋಡಿ ಭ್ರಮೆಗೊಳ್ಳದೆ, ಅವುಗಳಿಗೆ ಆಧಾರವಾದ ಪರಮಾತ್ಮನನ್ನೇ ಕಾಣುತ್ತಾನೆ. ಅಂತೆಯೇ ಅವನು ಪರಮಾತ್ಮನೇ ಆಗಿಬಿಡುತ್ತಾನೆ.
ನಹಿನಸ್ತ್ಯಾತ್ಮನಾತ್ಮನಂ:- ತನ್ನ ಆತ್ಮದಿಂದ ಆತ್ಮಘಾತಮಾಡಿಕೊಳ್ಳುವುದಿಲ್ಲ. ಆತ್ಮನು ಹೇಗೆ ಆತ್ಮನ ಶತ್ರುವಾಗುತ್ತಾನೆಂಬುದನ್ನು ಅಧ್ಯಾಯ 6. ಶ್ಲೋಕ 5-6ರಲ್ಲಿ ಹೇಳಲಾಗಿದೆ. ಅಹಂಕಾರದಿಂದ ಕೂಡಿದ ಜೀವನು, ಆಂತರಿಕ ಬುದ್ಧಿಯ ವಿವೇಕವನು ತೋರಿಸುವ ದಾರಿಯಲ್ಲಿ ಹೋಗದಿದ್ದರೆ, ಈಗ ಜೀವನು ಆತ್ಮನ ಶತ್ರುವಾಗುತ್ತಾನೆ. ನಾನು ಸವಾರಿ ಮಾಡುತ್ತಿರುವ ವಾಹನವು ನನ್ನ ಅಧೀನದಲ್ಲಿದ್ದರೆ, ಅದು ನನ್ನನ್ನು ಎಲ್ಲಿಯೋ ಗುಂಡಿಯಲ್ಲಿ ಕೆಡವಿ ಅಪಾಯಕ್ಕೆ ಗುರಿಮಾಡುತ್ತದೆ. ಆಗ ನನ್ನ ವಾಹನವೇ ನನ್ನ ಶತ್ರುವಾಯಿತು. ಇದೇ ರೀತಿ ಜೀವನು ಆತ್ಮನ ಹತೋಟಿಗೊಳಪಡದೆ ಸ್ವತಂತ್ರವಾಗಿ ವರ್ತಿಸಿದರೆ ಆಗ ಅವನು ಆತ್ಮನನ್ನು ಅಪಾಯಕ್ಕೆ ಗುರಿ ಮಾಡುವುದರಿಂದ ಆತ್ಮನ ಶತ್ರುವಾಗುತ್ತಾನೆ. ‘‘ಅವನು’’, ಎಲ್ಲಾ ಚರಾಚರವಸ್ತುಗಳಲ್ಲಿಯೂ ಅಖಂಡವಾಗಿ ನಟಿಸುತ್ತಿರುವ ಪರಮಾತ್ಮನನ್ನು ಕಾಣುವುದಾದರೆ ಅವನೇ ಆತ್ಮನ ಮಿತ್ರನಾಗುತ್ತಾನೆ.

ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಾಮಾಣಾನಿ ಸರ್ವಶಃ |
ಯಃ ಪಶ್ಶತಿ ತಥಾತ್ಮಾನಮಕರ್ತಾರಂ ಸ ಪಶ್ಶತಿ || 30 ||
ಅರ್ಥ :- ಮಾಡಲ್ಪಡುವ ಎಲ್ಲಾ ಕರ್ಮಗಳೂ ಪ್ರಕೃತಿಯಿಂದಲೇ ಮಾಡಲ್ಪಡುತ್ತವೆ. ಆತ್ಮನು ಯಾವ ಕರ್ಮವನ್ನೂ ಮಾಡುವುದಿಲ್ಲ ಎಂದು ಯಾವನು ತಿಳಿಯುತ್ತಾನೋ ಅವನೇ ನಿಜವಾಗಿ ತಿಳಿದವನು.
ಎಲ್ಲಾ ಕರ್ಮಗಳಿಗೂ ಚೇತನವನ್ನು ಕೊಡುವವನು ಆತ್ಮನಾಗಿದ್ದಾಗ್ಯೂ ಕರ್ಮಗಳು ಪ್ರಕೃತಿಗನುಸಾರವಾಗಿ ಭಿನ್ನ ಭಿನ್ನವಾಗಿರುತ್ತವೆ. ಆದುದರಿಂದ ಕರ್ಮಮಾಡುವುದು ‘ಪ್ರಕೃತಿ’ ಎನ್ನಲಾಗಿದೆ. ಉದಾಹರಣೆ:- ವಿವಿಧ ಶಕ್ತಿಯ ಬೆಳಕನ್ನು ಕೊಡುವ ನೂರಾರು ಬಲ್ಬುಗಳಲ್ಲಿ ವಿದ್ಯುತ್ತು ಒಂದೇ ಚೇತನಾ ಶಕ್ತಿಯಾಗಿದ್ದಾಗ್ಯೂ ಬೆಳಕನ್ನು ಕೊಡುವ ತೀವ್ರತೆಯು ಮಾತ್ರ ಆಯಾಯ ಬಲ್ಬುಗಳನ್ನೇ ಅವಲಂಬಿಸಿದೆ.

ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಶತಿ |
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ || || 31 ||
ಅರ್ಥ :- ಸೃಷ್ಟಿಯಾದ ಎಲ್ಲಾ ಭೂತಗಳೂ ಒಂದೇ ಆತ್ಮನಲ್ಲಿವೆ ಎಂದೂ, ಅವೆಲ್ಲವೂ ಆತ್ಮನಿಂದಲೇ ಹೊರಟು, ಹೊರಗೆ ವಿಸ್ತಾರವಾಗಿ ವ್ಯಾಪಿಸಿಕೊಂಡಿವೆ ಎಂದೂ ಯಾವನು ತಿಳಿಯುತ್ತಾನೋ ಅವನು ಬ್ರಹ್ಮನಾಗುತ್ತಾನೆ. ಎಲ್ಲಾ ಜೀವಿಗಳೂ ಆತ್ಮನಿಂದಲೇ ಹುಟ್ಟುತ್ತವೆ, ಎಂದು ಜ್ಞಾನಿಯು ತಿಳಿಯುತ್ತಾನೆ. ಒಂದೇ ಸಮುದ್ರದಂದ ಲಕ್ಷಾಂತರ ಅಲೆಗಳು ಹುಟ್ಟಿ ಬರುವಂತೆ ಒಂದೇ ಆತ್ಮನಿಂದ ಅನೇಕಾನೇಕ ಜೀವಿಗಳು ಹುಟ್ಟುತ್ತವೆ. ಪ್ರಪಂಚದ ಸೃಷ್ಟಿಯೆಲ್ಲವೂ ಅವನಿಂದಲೇ ಹುಟ್ಟುತ್ತದೆ. ಹೀಗೆ ನೋಡಿದಲ್ಲೆಲ್ಲಾ ಆಯಾಯಾ ನಾಮರೂಪಗಳನ್ನು ಕಾಣದೆ ಅವುಗಳಿಗೆ ಕಾರಣನಾದ ಆತ್ಮನನ್ನು ಕಾಣುವ ಶಕ್ತಿಯನ್ನು ಗಳಿಸಿದವನು ಬ್ರಹ್ಮನೇ ಆಗುತ್ತಾನೆ. ಅವನಿಗೆ ಪ್ರಪಂಚದಲ್ಲಿ ಬ್ರಹ್ಮನ ಹೊರತು ಬೇರೇನೂ ಕಾಣಿಸದು.
ಎಲ್ಲಾ ಜೀವಿಗಳಲ್ಲಿರುವ ಆತ್ಮನು ಒಬ್ಬನೇ ಆದ ಮೇಲೆ ಜೀವಿಗಳು ಮಾಡುವ ಕರ್ಮಗಳಿಂದ ಆತ್ಮನಿಗೆ ‘ವಾಸನೆ’ಗಳುಂಟಾಗಬಹುದಲ್ಲವೇ ಎಂಬ ಸಂಶಯವನ್ನು ನಿರಸನಗೊಳಿಸಲಾಗಿದೆ.

ಅನಾದಿತ್ವಾನ್ನಿರ್ಗುಣತ್ವಾತ್ಪರಮಾತ್ಮಾಯಮವ್ಯಯಃ |
ಶರೀರಸ್ಥೋ„ಪಿ ಕೌಂತೇಯ ನ ಕರೋತಿ ನ ಲಿಪ್ಯತೇ || 32 ||
ಅರ್ಥ:- ಕೌಂತೇಯನೇ, ಈ ಪರಮಾತ್ಮನು ಅನಾದಿಯಾದುದರಿಂದಲೂ, ನಿರ್ಗುಣನಾದುದರಿಂದಲೂ, ನಾಶವಿಲ್ಲದವನಾದುದರಿಂದಲೂ, ಪ್ರತಿಯೊಂದು ಶರೀರದಲ್ಲಿದ್ದಾಗ್ಯೂ ಅವನು ಯಾವ ಕರ್ಮವನ್ನೂ ಮಾಡುವುದಿಲ್ಲ, ಮತ್ತು ಜೀವನು ಮಾಡುವ ಕರ್ಮಗಳಿಂದ ಲಿಪ್ತನಾಗುವುದೂ ಇಲ್ಲ.
ಪರಮಾತ್ಮನು ಜೀವನಿಗೆ ಕರ್ಮ ಮಾಡುವ ಚೇತನವನ್ನು ಕೊಟ್ಟಾಗ್ಯೂ, ಅವನು ಮಾತ್ರ ಯಾವ ಕರ್ಮವನ್ನೂ ಮಾಡುವುದಿಲ್ಲ. ಕರ್ಮ ಮಾಡಿ ಅವನು ಗಳಿಸಬೇಕಾದುದೇನೂ ಇಲ್ಲ. ಹಿಂದೆ ತಿಳಿಸಿದಂತೆ ಪ್ರಕೃತಿಯಿಂದ ಎಲ್ಲಾ ಕರ್ಮಗಳೂ ಆಗುತ್ತವೆ. ಪರಮಾತ್ಮನು ‘ತಾನು ಈ ಶರೀರ’ ಎಂಬ ಅಜ್ಞಾನದಿಂದ ಕೂಡಿ ‘ಜೀವ’ ಎನಿಸಿಕೊಂಡು, ಕರ್ಮಗಳಿಂದ ಬಂಧಿತನಾಗುತ್ತಾನೆ. ಆದರೆ ಈ ಜೀವನಿಗೆ ಚೇತನವನ್ನು ಕೊಡುವ ಪರಮಾತ್ಮನು ಮಾತ್ರ ಎಲ್ಲಾ ಕರ್ಮಗಳಿಂದಲೂ ನಿರ್ಬಾಧಿತನಾಗಿರುತ್ತಾನೆ. ಇವನು ಶರೀರದಲ್ಲಿ ನೆಲೆಸಿದಾಗ್ಯೂ ಜೀವನು ಮಾಡುವ ಕರ್ಮಗಳಿಂದ ಬಂಧಿತನಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಒಬ್ಬ ನ್ಯಾಯಾಧೀಶನು, ಗೋಪಾಲರಾವ್ ಎಂಬುವನು ಕೊಲೆಗಾರನೆಂಬ ತೀರ್ಮಾನಕ್ಕೆ ಬಂದು ಅವನಿಗೆ ಮರಣ ಶಿಕ್ಷೆಯನ್ನು ವಿಧಿಸುತ್ತಾನೆ. ಆದಾಗ್ಯೂ ನ್ಯಾಯಾಧೀಶನು ಕೊಲೆಗಾರನೆಂದು ಯಾರೂ ತಿಳಿಯುವುದಿಲ್ಲ. ಅವನು ನ್ಯಾಯಸ್ಥಾನದ ಪೀಠದ ಮೇಲೆ ಕುಳಿತಿರುವಾಗ ನ್ಯಾಯದೃಷ್ಟಿಯಿಂದ ತೀರ್ಮಾನಮಾಡಿ ಮರಣಶಿಕ್ಷೆಯನ್ನು ಕೊಟ್ಟ ಅಪ್ಪಣೆಯಿಂದ ಅವನು ಬಂಧಿತನಾಗುವುದಿಲ್ಲ.

ಯಥಾ ಸರ್ವಗತಂ ಸೌಕÁ್ಷ್ಮ್ಯದಾಕಾಶಂ ನೋಪಲಿಷ್ಠತೇ |
ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ || 33 ||
ಅರ್ಥ:- ಎಲ್ಲಾ ಕಡೆಗೂ ವ್ಯಾಪಿಸಿರುವ ಆಕಾಶವು ಸೂಕ್ಷ್ಮವಾಗಿರುವುದರಿಂದಲೂ ಲಿಪ್ತನಾಗದೆ ಇರುವಂತೆ, ಎಲ್ಲಾ ಕಡೆಗೂ ವ್ಯಾಪಿಸಿರುವ ಆತ್ಮವು ಶರೀರದಲ್ಲಿದ್ದಾಗ್ಯೂ ಅದರಿಂದ ಲಿಪ್ತವಾಗುವುದಿಲ್ಲ.
ಪಂಚಭೂತಗಳ ಪೈಕಿ ಆಕಾಶವು ಅತಿಸೂಕ್ಷ್ಮವಾದುದು. ಇದು ಎಲ್ಲಾ ಸ್ಥೂಲಗಳ ಒಳಗೂ ಹೊರಗೂ ವ್ಯಾಪಿಸಿದೆ. ಎಲ್ಲಾ ವಸ್ತುಗಳೂ ಆಕಾಶದಲ್ಲಿವೆ. ವಸ್ತುಗಳಿಗೆ ಇರಲು ನಿಲ್ಲಲು ಆಸ್ಪದವನ್ನು ಕೊಡುತ್ತದ್ದಾದರಿಂದ ಇದಕ್ಕೆ ಆಕಾಶ ಎಂದು ಹೆಸರು. ಭೂತಗಳು ಸೂಕ್ಷ್ಮವಾಗಿದ್ದಷ್ಟು ಅವುಗಳ ವ್ಯಾಪಕ ಶಕ್ತಿ ಹೆಚ್ಚಾಗಿರುತ್ತದೆ. ಸೂಕ್ಷ್ಮ ವಸ್ತುವು, ಸ್ಥೂಲವಸ್ತುಗಳಿಂದ ಲಿಪ್ತವಾಗುವುದು ಶಕ್ಯವಿಲ್ಲ. ಪರಮಾತ್ಮನು ಆಕಾಶಕ್ಕಿಂತಲೂ ಸೂಕ್ಷ್ಮವಾಗಿರುವುದರಿಂದ, ಅವನು ಯಾವ ವಸ್ತುಗಳಿಂದಲೂ ಆಕಾಶದಿಂದ ಸಹ ಲಿಪ್ತನಾಗುವುದಿಲ್ಲ. ಏಕೆಂದರೆ ಪರಮಾತ್ಮನಿಗಿಂತ ಸೂಕ್ಷ್ಮವಾದ ವಸ್ತುವು ಬೇರೆ ಯಾವುದೂ ಇಲ್ಲ.
ಈ ಶರೀರದಲ್ಲಿರುವ ಕೆಲಸವಾದರೂ ಏನು?
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿದಂ ರವಿಃ |
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ || 34 ||
ಅರ್ಥ :- ಒಬ್ಬನೇ ಸೂರ್ಯನು ಇಡೀ ಪ್ರಪಂಚಕ್ಕೆ ಬೆಳಕನ್ನು ಕೊಡುವಂತೆ, ಭಾರತನೇ, ಎಲ್ಲಾ ಕ್ಷೇತ್ರಗಳ ಒಡೆಯನಾದ ಪರಮಾತ್ಮನು ಈ ಎಲ್ಲಾ ಕ್ಷೇತ್ರಗಳನ್ನೂ ಬೆಳಗುತ್ತಾನೆ.
ಸೂರ್ಯನು ಇಡೀ ಪ್ರಪಂಚಕ್ಕೆ ಬೆಳಕನ್ನು ಕೊಡುತ್ತಾನೆ. ಪರಮಾತ್ಮನು ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳು. ಶರೀರ, ಮನಸ್ಸು, ಬುದ್ಧಿ ಇವುಗಳಿಗೆ ಬೆಳಕನನ್ನು ಕೊಡುತ್ತಾನೆ. ಸೂರ್ಯನು ಒಳ್ಳೆಯದು, ಕೆಟ್ಟದ್ದು, ಸುಂದರ-ಕುರೂಪಿ, ಸುಗುಣ-ದುರ್ಗುಣ, ಮೊದಲಾದವುಗಳನ್ನು ಬೆಳಗಿಸುತ್ತಾನೆ. ಆದರೆ ಅವುಗಳಿಂದ ಲಿಪ್ತನಾಗುವುದಿಲ್ಲ. ಕುರೂಪ, ದುರ್ಗುಣಗಳು ಸೂರ್ಯನನ್ನು ವಿಕಾರಗೊಳಿಸಲಾರವು. ಸುರೂಪ, ಸುಗುಣಗಳು ಅವನ ಸೌಂದರ್ಯವನ್ನು ಹೆಚ್ಚಿಸುವುದೂ ಇಲ್ಲ. ಇದರಂತೆಯೇ ಪರಮಾತ್ಮನು ಎಲ್ಲಾ ಜೀವಿಗಳನ್ನು ಬೆಳಗಿಸುತ್ತಾನೆ. ಜೀವಿಗಳು ಮಾಡುವ ಒಳ್ಳೆಯ-ಕೆಟ್ಟ ಕರ್ಮಗಳಿಂದ ಅವನು ನಿರ್ಬಾಧಿತನಾಗಿರುತ್ತಾನೆ.

ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ |
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ || || 35 ||
ಅರ್ಥ :- ಯಾರು ಜ್ಞಾನ ಎಂಬ ಕಣ್ಣಿನಿಂದ ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವರಲ್ಲಿರುವ ಭೇದವನ್ನು, ಮತ್ತು ಭೂತಗಳು ಪ್ರಕೃತಿಯಿಂದ ಬಿಡುಗಡೆ ಹೊಂದುವನ್ನು ಕಾಣುತ್ತಾರೋ, ಅವರು ಪರಮ ಪದವಿಯನ್ನು ಸೇರುತ್ತಾರೆ.
ಬುದ್ಧಿಯು ಸೂಕ್ಷ್ಮ ವಿಚಾರಶಕ್ತಿಯಾದ ಕ್ಷೇತ್ರ, ಕ್ಞೇತ್ರಜ್ಞ, ಪರಮಾತ್ಮ ಇವುಗಳ ಸಂಬಂಧವನ್ನು ತಿಳಿದುಕೊಳ್ಳಬೇಕಾದರೆ ಹೃದಯ ಮತ್ತು ಬುದ್ಧಿಗಳ ಮಿಲನ ಬೇಕು. ಈ ಜ್ಞಾನವನ್ನು ಸ್ಪಷ್ಟವಾಗಿ ತಿಳಿಯುವ ಸಾಧನಕ್ಕೆ ಧರ್ಮಶಾಸ್ತ್ರದಲ್ಲಿ ‘ಜ್ಞಾನದ ಕಣ್ಣು’ ಎಂದು ಹೇಳುತ್ತಾರೆ. ಈ ಜ್ಞಾನವನ್ನು ತಿಳಿದ ಮೇಲೆ ಪ್ರಕೃತಿ, ಅಂದರೆ ಅವಿದ್ಯೆಯು ನಾಶವಾಗುತ್ತದೆ. ಆಗ ಈ ಕ್ಷೇತ್ರ, ಇಡೀ ಸಂಸಾರ ಮೊದಲಾದವುಗಳು ಕನಸಿನ ವಸ್ತುಗಳಂತೆ ‘ಸುಳ್ಳು’, ‘ಮಿಥ್ಯಾ’ ಎಂಬ ಅರಿವುಂಟಾಗುತ್ತದೆ. ಈ ಸ್ಥಿತಿಗೆ ‘ಭೂತ ಪ್ರಕೃತಿ ಮೋಕ್ಷ’ ಎಂದು ಹೆಸರು. ಈ ಶರೀರವು ಮಿಥ್ಯ ಎಂಬ ಜ್ಞಾನವಾಗುವುದೂ, ಪರಮಾತ್ಮನ ಜ್ಞಾನವಾಗುವುದೂ ಎರಡೂ ಒಂದೇ.
ಓಂ ತತ್ವದಿತಿ
ಶ್ರೀಮದ್ಭಗವದ್ಗೀತಾಸೂಪನಿಪತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ
ಶ್ರೀಕೃಷ್ಣಾರ್ಜುನ ಸಂವಾದೇ ಕ್ಷೇತ್ರಕ್ಷೇತ್ರಜ್ಞ ವಿಭಾಗ ಯೋಗೋನಾಮ…
ತ್ರಯೋದಶೋ„ಧ್ಯಾಯಃ
*******