S O U L B L I S S

Loading

Bhagavad Gita – Vinayak Rao Bapat – Chapter 7

ಏಳನೆಯ ಅಧ್ಯಾಯ
ಜ್ಞಾನ ವಿಜ್ಞಾನಯೋಗ
ಪೀಠಿಕೆ
ಪ್ರಮುಖ ಗೀತಾಭ್ಯಾಸಿಗಳ ಹಾಗೂ ವಿಮರ್ಶಕರ ಅಭಿಪ್ರಾಯದಂತೆ, ಶ್ರೀಮಧ್ಭಗವದ್ಗೀತೆಯಲ್ಲಿ, ಉಪನಿಷತ್ತುಗಳ ಸಾರವಾದ ಮತ್ತು ಮಹಾವಾಕ್ಯಗಳಲ್ಲಿ ಒಂದಾದ ‘ತತ್ವಮಸಿ’ (ಅದೇ ನೀನಾಗಿದ್ದೀಯೆ) ಎಂಬುದರ ವರ್ಣನೆ ಇದೆ. ಹಿಂದೆ ತಿಳಿಸಿದಂತೆ ಗೀತೆಯನ್ನು ಪ್ರತಿ ಆರು ಅಧ್ಯಾಯಗಳಿಗೆ ಒಂದೊಂಡು ಭಾಗದಂತೆ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯ ಆರು ಅಧ್ಯಾಯಗಳಲ್ಲಿ ‘ತತ್ವಮಸಿ’ ಎಂಬ ಮಹಾವಾಕ್ಯದಲ್ಲಿಯ ‘ತ್ವಮ್’ ಎಂಬ ಶಬ್ದದ ವರ್ಣನೆಯಿದೆ ಎರಡನೆಯ ಭಾಗವಾದ ಏಳನೆಯ ಅಧ್ಯಾಯದಿಂದ ಆರು ಅಧ್ಯಾಯಗಳಲ್ಲಿ ‘ತತ್’ ಶಬ್ದದ ವರ್ಣನೆಯಿದೆ. ಕೊನೆಯ ಭಾಗದಲ್ಲಿ ‘ಅಸಿ’ ಶಬ್ದದ ವರ್ಣನೆ ಇದೆ.
ಪರಮಾತ್ಮನು ಅಹಂಕಾರ ಆವರಣವನ್ನು ಹಾಕಿಕೊಂಡು ಜೀವನಾಗಿ ಜನಿಸುತ್ತಾನೆಂದೂ ಪ್ರತಿಯೊಬ್ಬ ಮನುಷ್ಯನ ಪರಮಧ್ಯೇಯವು “ತಾನು ಶುದ್ಧ ಪರಮಾತ್ಮನು” ಎಂಬ ಜ್ಞಾನವನ್ನು ಪಡೆಯುವುದಾಗಿದೆ ಎಂದೂ ಹೇಳಿ ಆ ಜ್ಞಾನವನ್ನು ಪಡೆಯುವ ಮಾರ್ಗವನ್ನು ತೋರಿಸಿ, ಅದನ್ನು ಸತತವಾದ ಅಭ್ಯಾಸದ ವಿನಹ ಗಳಿಸಲಾಗುವುದಿಲ್ಲವೆಂದೂ. ಅದಕ್ಕಾಗಿ ಮನಸ್ಸನ್ನು ಇಂದ್ರಿಯಗಳಿಂದ ಹಿಂದಕ್ಕೆಳೆದುಕೊಂಡು ತನ್ಮೂಲಕ ಅಹಂಕಾರದ ಆವರಣವನ್ನು ತೆಳುಗೊಳಿಸಿ ನಂತರ ಮನಸ್ಸನ್ನು ಬುದ್ಧಿಯ ವಶಕ್ಕೊಪ್ಪಿಸಿ ‘ಯೋಗ’ವನ್ನು ಸಾಧಿಸಿ ಆತ್ಮನನ್ನು ಧ್ಯಾನಿಸುತ್ತಿರಬೇಕೆಂದು ಹೇಳಿ ಅದಕ್ಕೆ ವಿವಿಧ ಸಾಧನೆಯ ಮಾರ್ಗಗಳನ್ನು ವರ್ಣಿಸಲಾಯಿತು.
ಈ ರೀತಿಯಾಗಿ ಧ್ಯಾನ ಮಾಡುವ ಯೋಗಿಯು ತಪಸ್ವಿಗಿಂತಲೂ ಮತ್ತು ಯಜ್ಞಾಯಾಗಾದಿ ಕರ್ಮಗಳನ್ನು ಮಾಡುವವನಿಗಿಂತಲೂ ಶ್ರೇಷ್ಠನು ಎಂದು ಹಿಂದಿನ ಅಧ್ಯಾಯದಲ್ಲಿ ಹೇಳಲಾಯಿತು. ಈ ಅಧ್ಯಾಯದಲ್ಲಿ ‘;ತತ್’ ಪದದ ವರ್ಣನೆಯು ಮತ್ತು ಅದನ್ನು ಧ್ಯಾನ ಮಾಡುವ ವಿಭಾಗವೂ ವಿವರಿಸಲ್ಪಟ್ಟಿದೆ. ಇಲ್ಲಿ ಪರಮಾತ್ಮನ ಜ್ಞಾನ ಹಾಗೂ ಅದರ ಅನುಭವ (ವಿಜ್ಞಾನ) ಗಳನ್ನು ತಿಳಿಸುವುದರಿಂದ ಈ ಅಧ್ಯಾಯಕ್ಕೆ ಜ್ಞಾನವಿಜ್ಞಾನ ಎಂದು ಹೆಸರು.

ಏಳನೆಯ ಅಧ್ಯಾಯ
ಜ್ಞಾನ ವಿಜ್ಞಾನಯೋಗ
ಶ್ರೀಭಗವಾನ್ ಉವಾಚ
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ |
ಆಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು || 1 ||
ಅರ್ಥ : ಪಾರ್ಥನೇ, ನನ್ನನ್ನು ತಿಳಿಯಬೇಕೆಂಬ ಆಸಕ್ತಿಯಿಂದ ಕೂಡಿದ ಮನಸ್ಸುಳ್ಳವನಾಗಿ ನನ್ನನ್ನೇ ಆಶ್ರಯಿಸಿ ಯೋಗವನ್ನು ಅಭ್ಯಾಸ ಮಾಡುವುದರಿಂದ ನೀನು ಸಂಶಯವಿಲ್ಲದೆ ನನ್ನನ್ನು ಸಂಪೂರ್ಣವಾಗಿ ಹೇಗೆ ತಿಳಿಯಬಲ್ಲೆ ಎಂಬುದನ್ನು ಹೇಳುತ್ತೇನೆ.
ಈ ಅಧ್ಯಾಯದಲ್ಲಿ ಮನಸ್ಸು ಎಂದು ಹೇಳಿದಲ್ಲೆಲ್ಲಾ ಸಾಮಾನ್ಯ ಮನಸ್ಸು ಎಂದು ತಿಳಿಯದೆ ನಿಗ್ರಹಿಸಲ್ಪಟ್ಟು ಧ್ಯಾನದಲ್ಲಿ ಏಕಾಗ್ರವಾದ ಮನಸ್ಸು ಎಂದು ತಿಳಿಯಬೇಕು. ಹೀಗೆ ಶುದ್ಧಗೊಳಿಸಲ್ಪಟ್ಟ ಮನಸ್ಸು ಮಾತ್ರ ಆತ್ಮಧ್ಯಾನ ಮಾಡಲು ಸಮರ್ಥವಾಗುತ್ತದೆ.

ಜ್ಞಾನಂ ತೇ„ಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ |
ಯಜ್ಞಾತ್ವಾ ನೇಹ ಭೂಯೋ„ನ್ಯಜ್ಞಾತವ್ಯಮವಶಿಷ್ಯತೇ || 2 ||
ಅರ್ಥ : ನಾನು ನಿನಗೆ ಆತ್ಮನ ವಿಚಾರದ ಜ್ಞಾನವನ್ನು ಮತ್ತು ಅದರ ಅನುಭವವನ್ನು ಸಂಪೂರ್ಣವಾಗಿ ಹೇಳುತ್ತೇನೆ. ಇದನ್ನು ನೀನು ತಿಳಿದೆಯಾದರೆ ಇನ್ನು ಮುಂದೆ ತಿಳಿಯಬೇಕಾದುದೇನೂ ಉಳಿಯುವುದಿಲ್ಲ.
ಆತ್ಮಜ್ಞಾನದ ಹಾಗೂ ಅದರ ಅನುಭವದ (ವಿಜ್ಞಾನ) ಒಳಗುಟ್ಟುಗಳ ಸಹಿತ ಸಂಪೂರ್ಣ ಜ್ಞಾನವನ್ನು ಈ ಅಧ್ಯಾಯಗಳಲ್ಲಿ ವಿವರಿಸುವುದಾಗಿ ಘೋಷಣೆ ಇದೆ. ಸಾಮಾನ್ಯವಾಗಿ ವ್ಯವಹಾರದಲ್ಲಿ ನಾವು ನೋಡುತ್ತಿರುವಂತೆ ಸಂಪೂರ್ಣ ಒಳಗುಟ್ಟುಗಳನ್ನು ಯಾರೂ ಹೇಳುವುದಿಲ್ಲ. ತಾತ್ವಿಕ ಜ್ಞಾನ ಇಲ್ಲವೆ ಪ್ರತ್ಯಕ್ಷ ಆಚರಣೆಯಲ್ಲಿಯ ಮುಖ್ಯವಾದ ಒಳಗುಟ್ಟುಗಳನ್ನು ಯಾವಾಗಲೂ ಗೌಪ್ಯವಾಗಿಡಲಾಗುತ್ತದೆ. ಇದು ಎಲ್ಲಾ ಕಡೆಯಲ್ಲಿಯೂ ಇವತ್ತಿನ ಪ್ರಪಂಚದಲ್ಲಿ ಸಹ ಕಂಡು ಬರುತ್ತಿವೆ. ಆಧುನಿಕ ಪಾಶ್ಚಾತ್ಯ ವಿಜ್ಞಾನಿಗಳು ಸಂಪೂರ್ಣ ಒಳಗುಟ್ಟುಗಳನ್ನು ತಿಳಿಸುತ್ತಿರುವುದಾಗಿ ಹೇಳುತ್ತಿದ್ದರೂ ಅದು ಕೇವಲ ಪ್ರಚಾರದ ಮಾತುಗಳು . ಒಳಹೊಕ್ಕು ನೋಡಿದರೆ, ಇಲ್ಲವೆ ಆಚರಣೆಯಲ್ಲಿ ತಂದು ನೋಡಿದರೆ, ಅವರು ಅನೇಕ ಗುಟ್ಟುಗಳನ್ನು ತಿಳಿಸಲಿಲ್ಲ ಎಂಬುದನ್ನು ಮನಗಾಣುತ್ತೇವೆ. ಆದರೆ ಶ್ರೀಕೃಷ್ಣನು ಮಾತ್ರ ಸಂಪೂರ್ಣ ವಿವರಗಳನ್ನು ತಿಳಿಸುತ್ತೇನೆಂದು ಇದನ್ನು ತಿಳಿದುಕೊಂಡರೆ ಇನ್ನು ಹೊಸದಾಗಿ ತಿಳಿದುಕೊಳ್ಳಬೇಕಾದ ವಿವರಗಳೇನೂ ಉಳಿಯುವುದಿಲ್ಲವೆಂದು ಪ್ರಾರಂಭದಲ್ಲಿಯೇ ಸ್ಪಷ್ಟವಾಗಿ ಘೋಷಿಸಿದ್ದಾನೆ. ಅದೇ ರೀತಿಯಲ್ಲಿ ಎಲ್ಲಾ ವಿವರಗಳನ್ನು ಬಹಿರಂಗ ಪಡಿಸಿರುವುದನ್ನು ಮುಂದೆ ಕಾಣಬಹುದು.
ಈ ಜ್ಞಾನವನ್ನು ತಿಳಿದುಕೊಂಡು ಅನುಭವಿಸಲು ಕೆಲವರೇ ಅರ್ಹರು

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ |
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ || 3 ||
ಅರ್ಥ : ಸಾವಿರಾರು ಮನುಷ್ಯರಲ್ಲಿ ಯಾವನೋ ಒಬ್ಬನು ಆತ್ಮಜ್ಞಾನವನ್ನು ಪಡೆಯಬೇಕೆಂಬ ಹಂಬಲದಿಂದ ನಿಜವಾಗಿ ಪ್ರಯತ್ನಿಸುತ್ತಾನೆ. ಹಾಗೆ ಪ್ರಯತ್ನ ಮಾಡಿ ಸ್ವಲ್ಪವಾದರೂ ಸಿದ್ಧಿಯನ್ನು ಹೊಂದಿದವರ ಪೈಕಿ, ಎಲ್ಲೋ ಕೆಲವರು ಮಾತ್ರ ನನ್ನನ್ನು ತತ್ವಶಃ ತಿಳಿಯುತ್ತಾರೆ.
ಆತ್ಮಜ್ಞಾನವನ್ನು ಪಡೆಯಲು ಉತ್ಸಾಹ ಮತ್ತು ಶ್ರದ್ಧೆ ಇದ್ದರಷ್ಟೇ ಸಾಲದು. ಅದರ ವಿಚಾರದ ಸಂಪೂರ್ಣ ಸಾಹಿತ್ಯ ಜ್ಞಾನವನ್ನು ಪಡೆದರೂ ಸಾಲದು. ಜ್ಞಾನವನ್ನು ತಿಳಿದುಕೊಂಡು ಪ್ರತ್ಯಕ್ಷ ಆಚರಣೆಯಲ್ಲಿ ತರಬೇಕು ಮತ್ತು ಅದರ ಅನುಭವವನ್ನು ಪಡೆಯಬೇಕು. ಈ ರೀತಿ ಪ್ರತ್ಯಕ್ಷ ಪ್ರಯತ್ನವನ್ನು ಯಾರು ಎಷ್ಟು ಜೋರಿನಿಂದ ಶ್ರದ್ಧೆಯಿಂದ, ತಾಳ್ಮೆಯಿಂದ, ಆಂತರಿಕ ಮನಃಶುದ್ಧಿಯಿಂದ ಆಚರಿಸುತ್ತಾರೋ ಅವರು ಸಾಧನೆಯಲ್ಲಿ ಅಷ್ಟು ಮುಂದುವರಿದು ಸಿದ್ಧಿಯ ಹತ್ತಿರ ಹೋಗುತ್ತಾರೆ. ಕೆಲವೇ ಜನರು ಸಿದ್ಧಿಯ ಹತ್ತಿರ ಹೋಗುತ್ತಾರೆಂದೂ ಅಂತಹವರಲ್ಲಿ ಕೆಲವರು ಮಾತ್ರ ಆತ್ಮಜ್ಞಾನವನ್ನು ಪಡೆಯುತ್ತಾರೆಂದೂ ಸತ್ಯಾಂಶವನ್ನು ಇಲ್ಲಿ ತಿಳಿಸಲಾಗಿದೆ. ಇದು ಅರ್ಜುನನನ್ನು ಇಲ್ಲವೆ ಸಾಧಕರನ್ನು ಹೆದರಿಸುವುದಕ್ಕೆ ಹೇಳಿದ ಮಾತಲ್ಲ. ಸತ್ಯ ಸ್ಥಿತಿಯನ್ನು ತಿಳಿದುಕೊಂಡು ಸಾಧಕನು ತನ್ನ ಪ್ರಯತ್ನವನ್ನು ಬಲಗೊಳಿಸಲಿ ಎಂಬುದೇ ಮುಖ್ಯ ಉದ್ದೇಶ. ಸಾಧನೆಯನ್ನು ಮಾಡಬೇಕೆಂಬ ಬಲವಾದ ಆಸೆಯಿರುವ ಮತ್ತು ಸಾಧನೆಯಲ್ಲಿ ಮೌನವಾಗಿ ನಿರತನಾಗಿರುವ ಸಾಧಕರು ಸಿದ್ಧಿಯ ಹತ್ತಿರವಿರುವ ಕೆಲವೇ ಜನರ ಗುಂಪಿನಲ್ಲಿ ಸೇರುತ್ತಾರೆಂಬುದನ್ನು ತಿಳಿದುಕೊಳ್ಳಬೇಕು. ಇವರು ತಮ್ಮ ಪ್ರಯತ್ನವನ್ನು ದೃಢ ನಿರ್ಧಾರದಿಂದ ಬಲಗೊಳಿಸಿದರೆ ಸಿದ್ಧಿಯನ್ನು ಜಾಗ್ರತೆಯಾಗಿ ಪಡೆಯುತ್ತಾರೆ.
ಪೀಠಿಕೆಯ ರೂಪದಲ್ಲಿ ಎಚ್ಚರಿಕೆಯನ್ನು ಕೊಟ್ಟು ಕೃಷ್ಣನು ಉಪದೇಶವನ್ನು ಪ್ರಾರಂಭಿಸಿದ್ದಾನೆ.

ಭೂಮಿರಾಪೆÇೀ„ನಲೋ ವಾಯುಃ ಖಂ ಮನೋ ಬುದ್ಧಿರೇವ ಚ |
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ || 4 ||
ಅರ್ಥ : ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವು ನನ್ನ ಎಂಟು ವಿಧವಾದ ಪ್ರಕೃತಿಗಳು.
ಹೊರಗಿನ ಪ್ರಪಂಚದಲ್ಲಿ ಪರಮಾತ್ಮನು ಹೇಗೆ ಲೀನವಾಗಿದ್ದಾನೆ ಎಂಬುದನ್ನು ವಿವಿಧ ರೀತಿಯಲ್ಲಿ ವರ್ಣಿಸಲಾಗಿದೆ. ಇಲ್ಲಿ ಸಾಂಖ್ಯತತ್ವಜ್ಞಾನ್ದದ ವರ್ಣನೆಯನ್ನು ಹೇಳಲಾಗಿದೆ. ಈ ತತ್ವದಿಂದ ಭೌತಿಕ ಜಡವಸ್ತುಗಳಲ್ಲಿರುವ ಪರಮಾತ್ಮನು ಆ ಜಡ ವಸ್ತುಗಳ ಸಮೂಹವು ಸಚೇತನ ವಸ್ತುವಿನಂತೆ ವರ್ತಿಸಲು ಪ್ರೇರೇಪಿಸುತ್ತಾನೆ. ಆಧುನಿಕ ಜಗತ್ತಿನಲ್ಲಿಯ ಉದಾಹರಣೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಉಕ್ಕು ಮತ್ತು ಕಬ್ಬಿಣಗಳಿಂದ ಮನುಷ್ಯನು ಒಂದು ರೈಲ್ವೆ ಇಂಜಿನನ್ನು ತಯಾರಿಸುತ್ತಾನೆ. ಅತಿಯಾದ ಒತ್ತಡವುಳ್ಳ ನೀರಿನ ಆವಿಯ ಶಕ್ತಿಯನ್ನು ಅದರೊಳಗೆ ತುಂಬುತ್ತಾನೆ. ವಸ್ತುತಃ ಕೇವಲ ಯಂತ್ರವಾಗಲೀ, ಕೇವಲ ಆವಿಯಾಗಲೀ ಅಚೇತನ ವಸ್ತುಗಳು. ಆವಿಯನ್ನು ಗೊತ್ತಾದ ರೀತಿಯಲ್ಲಿ, ಯಂತ್ರದೊಡನೆ ಸಂಯೋಜಿಸಿದರೆ ಯಂತ್ರವು ಚಲಿಸುತ್ತದೆ ಅದರಲ್ಲಿ ಒಂದು ದೊಡ್ಡ ಶಕ್ತಿಯುತ್ಪನ್ನವಾಗುತ್ತದೆ.
ಭೌತಿಕ ಮೂಲಜಡವಸ್ತುಗಳಿಗೆ ವೇದಾಂತ ಪರಿಭಾಷೆಯಲ್ಲಿ ‘ಪ್ರಕೃತಿ’ ಎಂತಲೂ ಅದರೊಳಗಿರುವ ಚೇತನಾಶಕ್ತಿಗೆ ‘ಪುರುಷ’ ಎಂತಲೂ ಹೆಸರು. ಪ್ರಕೃತಿ ಪುರುಷರ ಸಂಯೋಗವೇ ‘ಜೀವ’. ಮನುಷ್ಯನು ಸಹ ಪ್ರಕೃತಿ ಪುರುಷರ ಸಂಯೋಗ. ಪುರುಷನು ಪ್ರಕೃತಿಯೊಂದಿಗೆ ಲೀನವಾಗಿ ತಾನೇ ಪ್ರಕೃತಿ ಎಂದು ತಿಳಿದುಕೊಂಡು ವಿವಿಧ ಸುಖ ದುಃಖಗಳಿಗೀಡಾಗುತ್ತಾನೆ. ಹೀಗೆ ಉಂಟಾದ ಪ್ರಕೃತಿ-ಪುರುಷರ ಸಂಯೋಗಕ್ಕೆ ‘ಅಹಂಕಾರ’ ಎಂದು ಹೆಸರು. ಇದು ಪುರುಷನಿಗಿರುವ ಅಜ್ಞಾನದ ಆವರಣವಾಗಿದೆ. ಈ ಆವರಣವನ್ನು ಜೀವನು ಕಳಚಿ ಹಾಕಿ. ತಾನೇ ಪುರುಷರು ಎಂದು ತಿಳಿದುಕೊಳ್ಳಬೇಕಾದುದು ಮನುಷ್ಯನ ಗುರಿ.
ಈ ತತ್ವವನ್ನು ವಿವರಿಸುವುದಕ್ಕಾಗಿ ಮೂಲಪ್ರಕೃತಿ ಎಂದರೇನೆಂಬುದನ್ನು ಈ ಶ್ಲೋಕದಲ್ಲಿ ತಿಳಿಸಲಾಗಿದೆ. ಪಂಚಮಹಾಭೂತಗಳು (ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ) ಮನಸ್ಸು, ಬುದ್ಧಿ, ಅಹಂಕಾರ ಇವು ಪುರುಷನ ಎಂಟು ವಿವಿಧ ಮೂಲ ಪ್ರಕೃತಿಗಳು. ಶರೀರದಲ್ಲಿರುವ ಪಂಚೇಂದ್ರಿಯಗಳು ಪಂಚಮಹಾಭೂತಗಳ ಪ್ರತೀಕಗಳು ಇವುಗಳ ಮುಖಾಂತರ ನಮಗೆ ಹೊರಗಿನ ಪ್ರಪಂಚದ ಜ್ಞಾನವುಂಟಾಗುತ್ತದೆ. ಹೊರಗಿನ ವಸ್ತುಗಳ ಜ್ಞಾನವು ಪಂಚೇಂದ್ರಿಯಗಳ ಮೂಲಕ ಮನಸ್ಸಿಗೆ ತಲುಪುತ್ತದೆ. ಬುದ್ಧಿಯನ್ನು ಅದನ್ನು ವಿಮರ್ಶೆಮಾಡಿ ತೀರ್ಮಾನಕ್ಕೆ ಬರುತ್ತದೆ ಹೀಗೆ ಇಂದ್ರಿಯಗಳ ಮುಖಾಂತರ ನೋಡುವವನು, ಮನಸ್ಸಿನ ಮುಖಾಂತರ ತಿಳಿಯುವವನು, ಬುದ್ಧಿಯ ಮುಖಾಂತರ ನಿಷ್ಕರ್ಷೆ ಮಾಡುವವನು ಇವೆಲ್ಲಾ ಕಾರ್ಯಗಳಲ್ಲಿಯೂ ಅಖಂಡವಾಗಿರುವ ‘ನಾನು’ ಎಂಬ ತತ್ವಕ್ಕೆ ಅಹಂಕಾರ ಎಂದು ಹೆಸರು. ಇವೆಲ್ಲವೂ ಸೇರಿದರೆ ಮನುಷ್ಯ.
ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿಮೇ ಪರಾಮ್ |
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ || 5 ||
ಅರ್ಥ : ಇದು ನನ್ನ ಅಪರಾ(ಕೆಳದರ್ಜೆಯ) ಪ್ರಕೃತಿಯು. ಮಹಾಭಾಹುವೇ, ಪರಾಪ್ರಕೃತಿ ಎಂಬ ನನ್ನ ಇನ್ನೊಂದು ಪ್ರಕೃತಿ ಇದೆ. ಅದು ಎಲ್ಲಾ ಜೀವಿಗಳ ಬದುಕಿಗೆ ಕಾರಣವಾಗಿದೆ, ಮತ್ತು ಅದರಿಂದಲೇ ಈ ಸರ್ವ ಜಗತ್ತು ನಿಂತಿದೆ. ಈ ಪರಾಪ್ರಕೃತಿಯ ಚೇತನದಿಂದಲೇ ಜೀವಿಗಳು ಜೀವಿಸುತ್ತವೆ. ಇಲ್ಲಿ ‘ಜಗತ್’ ಎಂದರೆ ಕೇವಲ ಇಂದ್ರಿಯಗಳಿಗೆ ಗೋಚರವಾಗುವ ಪ್ರಪಂಚವಲ್ಲ. ಇಂದ್ರಿಯಗಳು ಮನಸ್ಸು, ಮತ್ತು ಬುದ್ಧಿ ಇವುಗಳಿಂದ ತಿಳಿಯಲ್ಪಡುವ ಬ್ರಾಹ್ಯಪ್ರಪಂಚ, ಸಂವೇದನಾತ್ಮಕ ಪ್ರಪಂಚ, ಕಾಲ್ಪನಿಕ ಇಲ್ಲವೇ ಭಾವನಾತ್ಮಕ ಪ್ರಪಂಚ ಇವೆಲ್ಲವೂ ಐಕ್ಯವಾಗುತ್ತವೆ. ಈ ಎಲ್ಲಾ ಪ್ರಪಂಚಗಳೂ ಪರಾಪ್ರಕೃತಿಯಿಂದ ನಿಂತಿವೆ.

ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ |
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ || 6 ||
ಅರ್ಥ : ಎಲ್ಲಾ ಭೂತಗಳು ಈ ಎರಡು ಪ್ರಕೃತಿಗಳಿಂದ ಹುಟ್ಟುತ್ತವೆ. ಎಲ್ಲಾ ಪ್ರಪಂಚಗಳ ಹುಟ್ಟುವಿಕೆಗೂ ನಾಶಕ್ಕೂ ನಾನೇ ಕಾರಣನು.
ಪರಾ ಮತ್ತು ಅಪರಾ ಪ್ರಕೃತಿಗಳ ಸಂಯೋಗದಿಂದ ಸರ್ವಜಗತ್ತು ಚಲಿಸುತ್ತದೆ. ವಿದ್ಯುಚ್ಛಕ್ತಿಯು ಬಲ್ಬಿನ ಒಳಗಿರುವ ತಂತಿಯೊಂದಿಗೆ ಸಂಯೋಗವಾದರೆ ಮಾತ್ರ ಬೆಳಕನ್ನು ಕೊಡುತ್ತದೆ. ಬಲ್ಬು ಇಲ್ಲದಿದ್ದರೆ ವಿದ್ಯುತ್ತು ಬೆಳಕನ್ನು ಕೊಡಲಾರದು. ಅಂತೆಯೇ ವಿದ್ಯುತ್ತು ಇಲ್ಲದಿದ್ದರೂ ಕೇವಲ ಬಲ್ಬು ಬೆಳಕನ್ನು ಕೊಡಲಾರದು. ಎರಡೂ ಸಂಯೋಗ ಹೊಂದಿದಾಗ ಮಾತ್ರ ಬೆಳಕು ಬರುತ್ತದೆ. ಇದರಂತೆಯೇ ಪರಾಪ್ರಕೃತಿಯು ಅಪರಾಪ್ರಕೃತಿಯ ಜೊತೆಗೆ ಸಂಯೋಗ ಹೊಂದಿದರೆ ಆ ಶಕ್ತಿಯು ಬೇರೆ ಬೇರೆ ವಿಧಾನಗಳಲ್ಲಿ ಪ್ರಕಟವಾಗುತ್ತದೆ. ಈ ಸಂಯೋಗವು ತಪ್ಪಿದರೆ ಎಲ್ಲಾ ಚಟುವಟಿಕೆಗಳು ನಿಂತು ಹೋಗುತ್ತವೆ.

ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ |
ಮಯಿ ಸರ್ವಮಿದಂ ಪೆÇ್ರೀತಂ ಸೂತ್ರೇ ಮಣಿಗಣಾ ಇವ || 7 ||
ಅರ್ಥ : ನನಗಿಂತಲೂ ಶ್ರೇಷ್ಠವಾದುದು ಬೇರೆ ಯಾವುದೂ ಇಲ್ಲ. ಧನಂಜಯನೇ, ಸೂತ್ರದಲ್ಲಿ ಮಣಿಗಳು ಪೆÇೀಣಿಸಲ್ಪಟ್ಟಂತೆ ಈ ಎಲ್ಲಾ ಪ್ರಪಂಚವೂ ನನ್ನಲ್ಲಿ ಪೆÇೀಣಿಸಲ್ಪಟ್ಟಿವೆ.
ಅಪರಾಪ್ರಕೃತಿಯ ಜೊತೆಗೆ ಪರಾಪ್ರಕೃತಿಯು ಸೇರಿದರೆ ‘ಜೀವಿ’ ಎನಿಸಿಕೊಳ್ಳುತ್ತಾನೆ. ಪರಮಾತ್ಮನ ಸಂಯೋಗವಿಲ್ಲದ ವಿನಹ ಮನುಷ್ಯನು ಬದುಕಲಾರನು. ಚಲನವಲನಗಳನ್ನು ಹೊಂದಲಾರನು ಪ್ರತಿಯೊಬ್ಬ ಮನುಷ್ಯನು ರೂಪ, ಆಕಾರ, ಗುಣ, ಕರ್ಮ ಮಾಡುವ ಶಕ್ತಿ, ಮಾನಸಿಕ ಹಾಗೂ ಬೌದ್ಧಿಕ ವಿಕಾಸ ಇವೆಲ್ಲವೂ ಭಿನ್ನವಾಗಿರುವುದರಿಂದ ಪ್ರತಿಯೊಬ್ಬ ಮನುಷ್ಯನಲ್ಲಿರುವ ಪರಮಾತ್ಮನು ಭಿನ್ನ ಭಿನ್ನವಾಗಿರಬೇಕು ಎಂಬ ಸಂಶಯವು ಸ್ವಭಾವನಾಗಿ ಬರುತ್ತದೆ. ಈ ಸಂಶಯವನ್ನು ಈ ಶ್ಲೋಕದಲ್ಲಿ ಹೋಗಲಾಡಿಸಲಾಗಿದೆ. ಸೂತ್ರದಲ್ಲಿ ವಿವಿಧ ಮಣಿಗಳನ್ನು ಪೆÇೀಣಿಸಿದರೆ ಸರವಾಗುವಂತೆ, ಪ್ರಪಂಚದಲ್ಲಿರುವ ವಿವಿಧ ತರಹದ ಎಲ್ಲಾ ಜೀವಿಗಳು ಪರಮಾತ್ಮ ಎಂಬ ಸೂತ್ರದಲ್ಲಿ ಪೆÇೀಣಿಸಲ್ಪಟ್ಟಿವೆ. ಮಣಿಗೆಳು ಆಕಾರ, ರೂಪ, ಗುಣಗಳಲ್ಲಿ ಸೂತ್ರಕ್ಕಿಂತ ಭಿನ್ನವಾಗಿರುವಂತೆ ವಿವಿಧ ಜೀವಿಗಳ ಶರೀರ ಮನಸ್ಸು, ಬುದ್ಧಿಗಳು ಪರಮಾತ್ಮನಿಗಿಂತ ಭಿನ್ನವಾಗಿವೆ. ಆದಾಗ್ಯೂ ಎಲ್ಲಾ ಮಣಿಗಳ ಒಳಗೆ ಸೂತ್ರವು ಸೇರಿಕೊಂಡು ಮಣಿಗಳೆಲ್ಲವನ್ನು ಹಿಡಿದಿಟ್ಟುಕೊಂಡಿರುವಂತೆ ಎಲ್ಲಾ ಜೀವಿಗಳೊಳಗೂ ಪರಮಾತ್ಮನು ವ್ಯಾಪಿಸಿ, ಈ ಪ್ರಪಂಚದ ಇರುವಿಕೆಗೆ ಕಾರಣನಾಗಿದ್ದಾನೆ. ಎಲ್ಲಾ ಮಣಿಗಳಲ್ಲಿಯೂ ಒಂದೇ ಸೂತ್ರವು ಅಖಂಡವಾಗಿರುವಂತೆ ಎಲ್ಲಾ ಜೀವಿಗಳಲ್ಲಿರುವ ಪರಮಾತ್ಮನೂ ಅಖಂಡವಾಗಿದ್ದಾನೆ.

ರಸೋ„ಹಮಪ್ಸು ಕೌಂತೇಯ ಪ್ರಭಾಸ್ಮಿಶಶಿಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು || 8 ||
ಅರ್ಥ : ಕೌಂತೇಯನೇ, ನೀರಿನಲ್ಲಿರುವ ರಸವೂ, ಚಂದ್ರ ಸೂರ್ಯದಲ್ಲಿರುವ ಬೆಳಕು, ವೇದದಲ್ಲಿರುವ ‘ಓಂ’ ಕಾರವೂ, ಆ ಆಕಾಶದಲ್ಲಿರುವ ಶಬ್ದವೂ, ಮನುಷ್ಯರಲ್ಲಿರುವ ಶಕ್ತಿಯೂ, ನಾನೇ ಆಗಿದ್ದೇನೆ.
ಈ ಎಲ್ಲಾ ಶಕ್ತಿಗಳನ್ನು ಕೊಡುವವನೂ ‘ನಾನು’ ‘ನನ್ನ’ ಇರುವಿಕೆಯಿಂದಲೇ ಅವರೆಲ್ಲರಲ್ಲಿಯೂ ಆಯಾಯಾ ಶಕ್ತಿಗಳು ಬರುತ್ತವೆ.

ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾಮಸೌ |
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು || 9 ||
ಅರ್ಥ : ಭೂಮಿಯಲ್ಲಿರುವ ಸುಗಂಧ, ಅಗ್ನಿಯಲ್ಲಿರುವ ತೇಜಸ್ಸು, ಎಲ್ಲಾ ಪ್ರಾಣಿಗಳಲ್ಲಿರುವ ಜೀವ, ತಪಸ್ವಿಗಳಲ್ಲಿರುವ ತಪೆÇೀಶಕ್ತಿ, ಇವೆಲ್ಲವೂ ನಾನೇ ಆಗಿದ್ದೇನೆ.
ಸೂತ್ರದಲ್ಲಿ ಮಣಿಗಳು ಪೆÇೀಣಿಸಲ್ಪಟ್ಟಿರುವಂತೆ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳು, ಜೀವಿಗಳು, ಪರಮಾತ್ಮನಲ್ಲಿ ಪೆÇೀಣಿಸಲ್ಪ್ಟ್ಟಿವೆ. ಅವನಿಂದಲೇ ಅವುಗಳ ಇರುವು, ಅವನ ಹೊರತು ಪ್ರಪಂಚದಲ್ಲಿ ಏನೂ ಇರಲಾರದು ಎಂಬುದನ್ನು ಈ ಎರಡು ಶ್ಲೋಕಗಳಲ್ಲಿ ಉದಾಹರಣೆಯ ಮೂಲಕ ವರ್ಣಿಸಲಾಗಿದೆ. ಚಂದ್ರ, ಸೂರ್ಯ, ಭೂಮಿ, ಬೆಂಕಿ, ಪ್ರಾಣಿಗಳು, ತಪಸ್ವಿ, ಇವರೆಲ್ಲರ ಇರುವಿಕೆ ಕಾರ್ಯಕ್ಷಮತೆ, ಇತ್ಯಾದಿಗಳೆಲ್ಲದಕ್ಕೂ ಪರಮಾತ್ಮನೇ ಕಾರಣನು. ಅಂದರೆ ಅವುಗಳ ಸ್ವಾಭಾವಿಕ ಧರ್ಮವು ಅವನ ಇರುವಿಕೆಯಿಂದಲೇ ಲಭಿಸಿದೆ.
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿಪಾರ್ಥ ಸನಾತನಮ್ |
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ || 10 ||
ಅರ್ಥ : ಪಾರ್ಥನೇ, ಎಲ್ಲಾ ಜೀವಿಗಳ, ಹುಟ್ಟುವಿಕೆಗೆ ‘ನನ್ನನ್ನು’ ಶಾಶ್ವತವಾದ ಬೀಜ ರೂಪವನ್ನಾಗಿ ತಿಳಿ. ಬುದ್ಧಿವಂತರಲ್ಲಿಯು, ಬುದ್ಧಿವಂತಿಕೆಯೂ ತೇಜೋವಂತರ ತೇಜಸ್ಸೂ ನಾನೇ ಸರಿ.

ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ |
ಧರ್ಮಾವಿರುದ್ಧೋ ಭೂತೇಷು ಕಾಮೋ„ಸ್ಮಿ ಭರತರ್ಷಭ || 11 ||
ಅರ್ಥ : ಬಲವಂತರಲ್ಲಿಯ ಕಾಮರಾಗವಿರಹಿತವಾದ ಶಕ್ತಿಯು ನಾನು, ಅಂತೆಯೇ, ಭರತ ಶ್ರೇಷ್ಠನೇ, ಎಲ್ಲಾ ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಕಾಮವೂ ನಾನು.
ಪರಮಾತ್ಮನ ಸಾನಿಧ್ಯವನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ವಿವಿಧ ಉದಾಹರಣೆಗಳನ್ನು ಕೊಡುತ್ತಾ ಈ ಶ್ಲೋಕದಲ್ಲಿ, ಬಲಶಾಲಿಗಳಲ್ಲಿಯ ಬಲವು ‘ನಾನು’ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಮನುಷ್ಯನು ತನ್ನ ಆಸೆ ಇಲ್ಲವೇ ಪ್ರೇಮಕ್ಕೆ ಕೊರತೆ ಅಥವಾ ವಿರೋಧ ಬಂದಾಗ ತನ್ನ ‘ಬಲ’ ವನ್ನು ಪ್ರಕಟಿಸುತ್ತಾನೆ. ಆದರೆ ಇಲ್ಲಿ ಹೇಳಿರುವುದು ಅಂತಹ ಬಲವಲ್ಲ. ಕಾಮ, ರಾಗಗಳಿಂದ ಪ್ರೇರಿತವಾಗದೇ ಇರುವ ‘ಸಾತ್ವಿಕ ಬಲ’ ವನ್ನು ಇಲ್ಲಿ ಹೇಳಲಾಗಿದೆ. ಕಾಮ ಎಂದರೆ ತನ್ನಲ್ಲಿ ಇಲ್ಲದೇ ಇರುವ ವಸ್ತುವಿನಲ್ಲಿ ಆಸೆ, ರಾಗ ಅಂದರೆ ತನ್ನಲ್ಲಿ ಇರುವ ವಸ್ತುವಿನಲ್ಲಿ ಆಸೆ. ಈ ಕಾಮರಾಗಗಳಿಗಾಗಿ ವ್ಯಕ್ತಿ, ಸಮಾಜ, ಜಾತಿ ಅತ್ತು ದೇಶಗಳಲ್ಲಿ ಪದೇ ಪದೇ ಹೋರಾಟವಾಗುತ್ತದೆ. ‘ನಾನು’ ಜನರಲ್ಲಿರುವ ‘ಆಸೆ’ ಎಂದು ಹೇಳಿರುವಲ್ಲಿ ಅದು ಸಾಮಾನ್ಯ ಮಾನವನ ಶಾರೀರಿಕ ಆಸೆಯಲ್ಲವೆಂದೂ, ಧರ್ಮಕ್ಕೆ ವಿರುದ್ಧವಲ್ಲದ ಆಸೆ ಎಂದೂ ಹೇಳುರುವುದನ್ನು ಗಮನಿಸಬೇಕು. ವ್ಯಕ್ತಿಯನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಮೇಲ್ಮಟ್ಟಕೆ ಏರಿಸಿ ಆತ್ಮಜ್ಞಾನದ ಕಡೆಗೆ ತೆಗೆದುಕೊಂಡು ಹೋಗಲು ಪೆÇೀಷಕವಾದ ಸಹಾಯ ಮಾಡುವ ಎಲ್ಲಾ ಕರ್ಮಗಳಿಗೂ ಮತ್ತು ವಿಚಾರಗಳಿಗೂ ‘ಧರ್ಮ’ ಎಂದು ಹೆಸರು. ಇಂತಹ ಈ ಧರ್ಮಕ್ಕೆ ವಿರುದ್ಧವಲ್ಲದ ಆಸೆ ‘ನಾನು’ ಎಂದು ಹೇಳಲಾಗಿದೆ.

ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ |
ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ || 12 ||
ಅರ್ಥ : ಮನುಷ್ಯರಲ್ಲಿರುವ ಸಾತ್ವಿಕ, ರಾಜಸಿಕ, ತಾಮಸಿಕ ಭಾವಗಳೆಲ್ಲವೂ ‘ನನ್ನಿಂದ’ ಲೇ ಬಂದಿವೆ ಎಂದು ತಿಳಿ. ನಾನು ಅವುಗಳಲ್ಲಿಲ್ಲ. ಅವು ನನ್ನಲ್ಲಿವೆ.
ಪೆÇೀಷಿಸಲ್ಪಟ್ಟಿವೆ, ಎಂಬ ವಾಕ್ಯದ ವರ್ಣನೆಯನ್ನು ಇದುವರೆಗಿನ ಉದಾಹರಣೆಗಳ ಮೂಲಕ ವಿವರಿಸಲಾಗಿದೆ.
ಮನುಷ್ಯನ ಮನಸ್ಸು ಬುದ್ಧಿಗಳಲ್ಲಿ ಉತ್ಪನ್ನವಾಗುವ ಭಾವಗಳನ್ನು ಸಾತ್ವಿಕ, ರಾಜಸಿಕ, ತಾಮಸಿಕ, ಎಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಈ ಭಾವಗಳಿಗನುಸಾರವಾಗಿ ವ್ಯಕ್ತಿಯ ಆಚಾರ, ವಿಚಾರಗಳಿರುತ್ತವೆ. ಸತ್ವ ಎಂದರೆ ಶಾಂತಿಯನ್ನು ಕಾಪಾಡಿಕೊಳ್ಳುವ ಸೌಮ್ಯಗುಣ, ಕರ್ಮ ಮಾಡಲು ಪ್ರಚೋದಿಸುವುದು ರಜೋಗುಣ, ತಪ್ಪಾಗಿ ಕೆಲಸವನ್ನು ಮಾಡಲು ಅಥವಾ ಆಲಸ್ಯದಿಂದಿರಲು ಪ್ರಚೋದಿಸುವುದು ತಮೋಗುಣ. ಇವುಗಳ ವಿವರವಾದ ವರ್ಣನೆಯು ಮುಂದೆ ಬರುತ್ತದೆ. ಈ ಎಲ್ಲಾ ತರಹದ ಆಚಾರ, ವಿಚಾರಗಳು ಪರಮಾತ್ಮನ ಇರುವಿಕೆಯಿಂದ. ಅವನಿಂದಲೇ ಹುಟ್ಟುತ್ತವೆ. ಆದಾಗ್ಯೂ ಪರಮಾತ್ಮನು ಮಾತ್ರ ಅವುಗಳಿಂದ ಲಿಪ್ತನಾಗಿರುವುದಿಲ್ಲ, ಬಂಧಿತನಾಗುವುದಿಲ್ಲ. ಸಮುದ್ರದಿಂದ ಅಲೆಗಳು ಹುಟ್ಟುತ್ತವೆ. ಆದರೆ ಸಮುದ್ರವು ಅಲೆಗಳಿಂದ ನಿರ್ಬಾಧಿತವಾಗಿರುತ್ತವೆ.
ಜನರು ಪರಮಾತ್ಮನ ನಿಜ ತತ್ವವನ್ನು ಏಕೆ ತಿಳಿದುಕೊಳ್ಳುವುದಿಲ್ಲ

ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್ |
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ || 13 ||
ಅರ್ಥ : ಇಡೀ ಪ್ರಪಂಚದಲ್ಲಿರುವ ಜನರು ಈ ಮೂರು ಗುಣಗಳಿಂದ ಮೋಹಿತರಾಗಿ, ನಾನು ಪರಮ ಶ್ರೇಷ್ಠನೂ, ನಾಶರಹಿತನೂ ಎಂಬುದನ್ನು ತಿಳಿಯಲಾರದೆ ಹೋಗುತ್ತಾರೆ.
ಈ ಮೂರು ಗುಣಗಳೆಂಬ ಅಜ್ಞಾನವು ಬುದ್ಧಿಯನ್ನು ಮುಚ್ಚಿಕೊಂಡಿರುವುದರಿಂದ ಪರಮಾತ್ಮನ ಜ್ಞಾನವಾಗುವುದಿಲ್ಲ. ಮುಂಗಪ್ಪಿನಲ್ಲಿ ದೂರದಿಂದ ಒಂದು ಮೋಟುಮರವನ್ನು ಕಂಡು ನಾವು ಅದು ‘ಭೂತ ಅಥವಾ ದೆವ್ವ’ ಎಂದು ಭ್ರಾಂತರಾಗಿ ಹೆದರುತ್ತೇವೆ. ನಮ್ಮಲ್ಲಿ ‘ಭೂತ’ ಎಂಬ ಭಾವವಿರುವವರೆಗೂ ಮೋಟು ಮರದ ನಿಜಸ್ಥಿತಿಯನ್ನು ತಿಳಿಯುವ ಧೈರ್ಯವಿಲ್ಲ ನಿಜಸ್ಥಿತಿ ತಿಳಿಯುವುದೂ ಇಲ್ಲ. ಅಂತೆಯೇ ಅಜ್ಞಾನದಿಂದ ಅವೃತವಾದ ಮನಸ್ಸು ಬುದ್ಧಿಗಳಿಂದ ಪರಮಾತ್ಮನ ನಿಜವಾದ ಅರಿವುಂಟಾಗುವಿದಿಲ್ಲ. ಇದಕ್ಕೆ ‘ಮಾಯೆ’ ಎಂದು ಹೆಸರು .
ಈ ಮಾಯೆಯಿಂದ ಬಿಡುಗಡೆ ಹೊಂದುವುದು ಹೇಗೆ ?

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ |
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ || 14 ||
ಅರ್ಥ : ಗುಣಗಳಿಂದ ಸೃಷ್ಟಿಸಲ್ಪಟ್ಟ ನನ್ನ ಈ ಮಾಯೆಯನ್ನು ದಾಟುವುದು ಕಷ್ಟ ಸಾಧ್ಯವು. ಯಾರು ನನ್ನನ್ನೇ ಶರಣು ಹೋಗುತ್ತಾರೋ ಅವರು ಈ ಮಾಯೆಯನ್ನು ದಾಟಲು ಶಕ್ತರಾಗುತ್ತಾರೆ.
ಅಹಂಕಾರದಿಂದ ಕೂಡಿದ ಜೀವಿಯು ಈ ಮಾಯೆಯನ್ನು ದಾಟಲಾರೆನೆಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಸತತವಾಗಿ ಪ್ರಯತ್ನ ಮಾಡುತ್ತಾ ಪರಮಾತ್ಮನ ಶರಣು ಹೋಗುವ ಸಾಧಕನು ಮಾತ್ರ ಅದನ್ನು ದಾಟಬಲ್ಲನು, ಎಂಬ ಆಶ್ವಾಸನವು ಇಲ್ಲಿದೆ. ಇದನ್ನು ಸಾಧಿಸುವ ವಿವರಗಳನ್ನು ಹಿಂದಿನ ಅಧ್ಯಾಯದಲ್ಲಿ ಹೇಳಲಾಗಿದೆ.

ದುರ್ಜನರು ವiತ್ತು ಅಜ್ಞಾನಿಗಳು ನನ್ನನ್ನು ಹೊಂದಲಾರರು.

ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ |
ಮಾಯಾಯಾ„ಪಹೃತಜ್ಞಾನಾಃ ಆಸುರಂ ಭಾವಮಾಶ್ರಿತಾಃ || 15 ||
ಅರ್ಥ : ದುಷ್ಕರ್ಮಿಗಳು ಅಜ್ಞಾನಿಗಳು ಮತ್ತು ಇನ್ನೂ ವಿಕಾಸವನ್ನು ಹೊಂದದೇ ತೀರ ಕೆಳಮಟ್ಟದಲ್ಲಿರುವವರು. ನನ್ನನ್ನು ಪಡೆಯಲಾರರು. ತಮ್ಮ ಅಜ್ಞಾನದಿಂದ ಬುದ್ಧಿಯ ವಿಚಾರ ಶಕ್ತಿ ಹಾಗೂ ವಿವೇಕವನ್ನು ಕಳೆದುಕೊಂಡ ಇವರು ಅಸುರರಂತೆ ವರ್ತಿಸುತ್ತಾರೆ.
ಮನುಷ್ಯರು ಅಜ್ಞಾನವನ್ನು ಕಳೆದುಕೊಂಡು ಹೇಗೆ ಪರಮಾತ್ಮನನ್ನು ಸೇರಬಹುದೆಂಬುದನ್ನು ಹೇಳಿ, ಇದಕ್ಕೆ ವಿರುದ್ಧ ಗುಂಪಿನ ಜನರು ಅಜ್ಞಾನದಿಂದ ಬಂಧಿತರಾಗಿ ಇನ್ನೂ ಅವನತಿಗಿಳಿಯುತ್ತಾ ಹೇಗೆ ಪರಮಾತ್ಮನಿಂದ ದೂರ ಸರಿಯುತ್ತಾರೆಂಬುದನ್ನು ತುಲನಾತ್ಮಕವಾಗಿ ತೋರಿಸಲಾಗಿದೆ.
ನನ್ನನ್ನು ಭಜಿಸುವ ಜನರು ನಾಲ್ಕು ವಿಧವಾಗಿದ್ದಾರೆ.

ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋ„ರ್ಜುನ |
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀಚ ಭರತರ್ಷಭ || 16 ||
ಅರ್ಥ : ಭರತಶ್ರೇಷ್ಠನೇ, ನಾಲ್ಕು ವಿಧದ ಜನರು ನನ್ನನ್ನು ಭಜಿಸುತ್ತಾರೆ. ದುಃಖದಿಂದಿರುವವರು, ಜ್ಞಾನಾಪೇಕ್ಷಿಗಳು, ಹಣದ ಆಸೆಯಿರುವವರು ಮತ್ತು ಜ್ಞಾನಿಯು ಇವರೆಲ್ಲರೂ ಸಜ್ಜನರು, ಪುಣ್ಯವಂತರು.
ಕಬ್ಬಿಣ ಮತ್ತು ಉಕ್ಕುಗಳಿಂದ ಮಾಡಲ್ಪಟ್ಟ ರೇಲ್ವೆ ಇಂಜನ್ನು ಚಲಿಸಬೇಕಾದರೆ ಅದಕ್ಕೆ ಆವಿಶಕ್ತಿಯ ಪ್ರಚೋದನೆ ಬೇಕು. ಇದರಂತೆಯೇ ಮನುಷ್ಯನು ತನಗೆ ಇಷ್ಟವಾದ ಕೆಲಸವನ್ನು ಮಾಡಬೇಕಾದರೆ, ಆಂತರಿಕ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು ಅದನ್ನು ಉಪಯೋಗಿಸಿಕೊಳ್ಳಬೇಕು. ಈ ಶಕ್ತಿಯು ಪರಮಾತ್ಮನಿಂದ ಬರುತ್ತದೆ. ಇದನ್ನು ನಾವು ನಮ್ಮ ಕಷ್ಟಪರಿಹಾರಕ್ಕೆ, ಸುಖಪ್ರಾಪ್ತಿಗೆ, ಅಥವಾ ಇನ್ನು ಬೇರೆ ಯಾವ ಕಾರ್ಯಕ್ಕೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಹೀಗೆ ಪರಮಾತ್ಮನ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಅದನ್ನು ತನಗೆ ಬೇಕಾದ ಮಾರ್ಗದಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ‘ಭಜನೆ’ ಎಂದು ಹೆಸರು. ಜನರು ಪರಮಾತ್ಮನನ್ನು ತಮ್ಮ ದುಃಖನಿವಾರಣೆಗೆ, ಜ್ಞಾನಪ್ರಾಪ್ತಿಗೆ, ಹಣಗಳಿಸುವಿಕೆಗೆ ಮತ್ತು ಕೇವಲ ಪರಮಾತ್ಮನ ಆನಂದಾನುಭಕ್ಕೆ ಉಪಯೋಗಿಸುತ್ತಾರೆ. ಮನೆಯಲ್ಲಿರುವ ವಿದ್ಯುಚ್ಛಕ್ತಿಯು ಗುಪ್ತವಾಗಿ ಕಾಣದೆ ಇದ್ದಾಗ್ಯೂ ನಾವು ಅದನ್ನು ಯಾವ ಯಾವ ಸಾಧನೆಗಳಿಗೆ ಜೋಡಿಸುತ್ತೇವೆಯೋ (ದೀಪ, ಪಂಖ, ರೆಫ್ರಿಜಿರೇಟರ್, ರೇಡಿಯೋ, ಇತ್ಯಾದಿ), ಆಯಾಯಾ ಆಸೆಗಳನ್ನು ಅನುಪೂರೈಸುವಂತೆ. ನಾವು ಯಾವ ಭಾವದಿಂದ ಬೇಡುತ್ತೇವೆಯೋ ಆಯಾಯಾ ಆಸೆಗಳು ಪರಮಾತ್ಮನಿಂದ ಪೂರೈಸಲ್ಪಡುತ್ತವೆ. ಈ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿದರೆ ಅಭಿವೃದ್ಧಿಯನ್ನು ಹೊಂದುವಂತೆ, ತಪ್ಪಾದ ಮಾರ್ಗದಲ್ಲಿ ಉಪಯೋಗಿಸಿದರೆ ದುಃಖವನ್ನು ಅನುಭವಿಸಬೇಕಾಗುತ್ತದೆ. ಉದಾಹರಣೆ – ಚಳಿಗಾಲದಲ್ಲಿ ನಾವು ವಿದ್ಯುಚ್ಛಾಕ್ತಿಯನ್ನು ಪಂಖಕ್ಕೆ ಜೋಡಿಸಿ, ವಿದ್ಯುತ್ತು ನನ್ನ ಬಗ್ಗೆ ನಿಷ್ಕರುಣೆ” ಎಂದು ಆರೋಪಿಸುವಂತಿಲ್ಲ. ಪಂಖಕ್ಕೆ ಜೋಡಿಸಿ ವಿದ್ಯುತ್ತು ಪಂಖವನ್ನು ಚಲಿಸಬಲ್ಲುದೇ ಹೊರತು, ಕೋಣೆಯಲ್ಲಿರುವ ಬಿಸಿ ಮಾಡುವ ಸಾಧನವನ್ನು ಚಲಿಸಲಾರದು.

ಈ ನಾಲ್ಕು ವಿಧದ ಜನರಲ್ಲಿ ಶ್ರೇಷ್ಠರಾರು ?

ತೇಷಾಂಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೇ |
ಪ್ರಿಯೋ ಹಿ ಜ್ಞಾನಿನೋ„ತ್ಯರ್ಥಮಹಂ ಸ ಚ ಮಮ ಪ್ರಿಯಃ || 17 ||
ಅರ್ಥ : ಇವರ ಪೈಕಿ ಯೋಗದಿಂದ ಕೂಡಿದ ಮತ್ತು ನನ್ನಲ್ಲೇ ಭಕ್ತಿಯುಳ್ಳ, ಜ್ಞಾನಿಯು ಶ್ರೇಷ್ಠನು. ನಾನು ಈ ಜ್ಞಾನಿಗೆ ಅತ್ಯಂತ ಪ್ರಿಯನು ಮತ್ತು ಅವನು ನನಗೆ ಅತ್ಯಂತ ಪ್ರಿಯನಾದವನು.
ಜ್ಞಾನಿಗೆ ‘ನಾನು’ ಅತ್ಯಂತ ಪ್ರಿಯನು – ಪ್ರೇಮಿಯು ಪ್ರೇಯಸಿಯ ಜೊತೆಗೆ ಹೊಂದಿರುವ ಏಕಾತ್ಮವು ಪ್ರೇಮದ ಅಳತೆಗೋಲು. ತ್ಯಾಗವು ಪ್ರೇಮದ ಹಾಡಿನ ಶ್ರುತಿಯು. ಸ್ವಾರ್ಥಾಭಿಲಾಷೆಯಲ್ಲದಿರುವಿಕೆಯ ಪ್ರೇಮದ ದ್ವಾರದ ಬೀಗದ ಕೈ. ನಿಜವಾದ ಪ್ರೇಮವು ಪ್ರತಿಫಲವನ್ನಪೇಕ್ಷಿಸುವುದಿಲ್ಲ. ಜ್ಞಾನಿಯು ಪರಮಾತ್ಮನಲ್ಲಿ ಇಂತಹ ಪ್ರೇಮವನ್ನು ಹೊಂದಿರುತ್ತಾನೆ. ಆತನನ್ನು ಧ್ಯಾನಿಸುವುದರಲ್ಲಿಯೇ ಅವನಿಗೆ ಆನಂದ. ಅವನು ಅದರಿಂದಲೇ ತೃಪ್ತಿಯನ್ನು ಹೊಂದುತ್ತಾನೆ. ಜ್ಞಾನಿಗೆ ನಾನು ಅತ್ಯಂತ ಪ್ರಿಯನಾದಂತೆ ಅವನು ನನಗೆ ಅತ್ಯಂತ ಪ್ರಿಯನು.
ಉಳಿದ ಮೂರು ಗುಂಪಿನವರು ಪರಮಾತ್ಮನಿಗೆ ಪ್ರಿಯರಲ್ಲ ಎಂದು ತಿಳಿಯಬಾರದು.

 

ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ವೈವ ಮೇ ಮತಮ್ |
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ || 18 ||
ಅರ್ಥ : ಉಳಿದ ಈ ಮೂರು ಗುಂಪಿನವರೂ ಸಹ ನಿಜವಾಗಿಯೂ ಉಚ್ಛಮಟ್ಟದವರು. ಆದಾಗ್ಯೂ ಜ್ಞಾನಿಯನ್ನು ನಾನು ನನ್ನ ಆತ್ಮವೆಂದೇ ತಿಳಿಯುತ್ತೇನೆ. ಏಕೆಂದರೆ ಅವನು ನನ್ನನ್ನೇ ಧ್ಯಾನಿಸುತ್ತಾ ನಾನೇ ಅವನ ಪರಮಗತಿ ಎಂದು ನಂಬಿದ್ದಾನೆ.
ಜ್ಞಾನಿಯ ಹೊರತು ಉಳಿದ ಮೂರು ಗುಂಪಿನವರು ತಮ್ಮ ಸ್ವಾರ್ಥಕ್ಕಾಗಿ ಪರಮಾತ್ಮನನ್ನು ಭಜಿಸುವುದರಿಂದಲೂ, ಅವರು ಸ್ವಲ್ಪವಾದರೂ ಪರಮಾತ್ಮನೊಡನೆ ಸಂಬಂಧವನ್ನು ಹೊಂದುವುದರಿಂದಲೂ, ಅವರೆಲ್ಲರೂ ಉದಾರಿಗಳು ಎಂದು ಹೇಳಲಾಗಿದೆ. ಹಿಂದೆ ತಿಳಿಸಿದಂತೆ ಸಾವಿರಾರು ಜನರ ಪೈಕಿ ಒಬ್ಬರು ಎಂದು ಹೇಳಲಾದ ಸಾಲಿನಲ್ಲಿ ಈ ಗುಂಪಿನ ಪ್ರತಿಯೊಬ್ಬರೂ ಬರುತ್ತಾರೆ. ಇವರು ತಮ್ಮ ಆಸೆಯು ಪೂರ್ತಿಗಾಗಿ ಪರಮಾತ್ಮನ ಅರ್ಚನೆಯನ್ನು ಮಾಡಿ, ಮುಂದೆ ಕ್ರಮೇಣ ಮೇಲ್ಮಟ್ಟಕ್ಕೇರಿದಂತೆ, ಮುಂದಿನ ಘಟ್ಟದ ಸಾಧನೆಯನ್ನು ಮಾಡಲು ಅರ್ಹರಾಗುತ್ತಾರೆ.

ಜ್ಞಾನಿಯು ನನ್ನ ಆತ್ಮ ಹೇಗೆ ?

ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದತ್ಯೇ |
ವಾಸುದೇವಃ ಸರ್ವಮಿತಿ ಸ ಮಹಾತ್ಮಾಸುದುರ್ಲಭಃ || 19 ||
ಅರ್ಥ : ಅನೇಕ ಜನ್ಮಗಳ ನಂತರ ಜ್ಞಾನಿಯು ನನ್ನನ್ನು ಪಡೆಯುತ್ತಾನೆ. ನನ್ನಲ್ಲಿ ಐಕ್ಯಹೊಂದುತ್ತಾನೆ. ಈಗ ಅವನು ಸೃಷ್ಟಿಯಲ್ಲಿರುವ ಎಲ್ಲಾ ವಸ್ತುಗಳು, ಜೀವಿಗಳು, ವಾಸುದೇವ (ಪರಮಾತ್ಮ) ಎಂದು ತಿಳಿಯುತ್ತಾನೆ. ಇಂತಹ ಮಹಾತ್ಮರು ಅತಿ ವಿರಳ.
ಇಂತಹ ಮಹಾತ್ಮರು ಸಿಗುವುದು ಅತಿ ವಿರಳ ಎಂದು ಹೇಳಿರುವುದರಿಂದ ನಿರಾಶೆಗೊಳ್ಳಬೇಕಾಗಿಲ್ಲ. ಮನುಷ್ಯನ ಉತ್ಕ್ರಾಂತಿ ವಿಚಾರವನ್ನು ಸ್ವಲ್ಪ ಆಳವಾಗಿ ವಿಮರ್ಶಿಸಿದರೆ ಸತ್ಯಾಂಶವು ವ್ಯಕ್ತವಾಗುತ್ತದೆ. ಇಡೀ ಸೃಷ್ಟಿಯಲ್ಲಿ ಭೂಮಂಡಲವು ಕೇವಲ ಒಂದು ಬಿಂದು ಮಾತ್ರ, ಇಂತಹ ಪುಟ್ಟ ಭೂಮಿಯ ಮೇಲೆ ವಾಸಿಸುವ ಜನರಲ್ಲಿ ವಿಚಾರ ಶಕ್ತಿಯನ್ನು ಬೆಳೆಯಿಸಿಕೊಂಡಿರುವವರ ಸಂಖ್ಯೆಯು ಬಹಳ ಕಡಿಮೆ. ಮಾನಸಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಬೆಳೆಯಿಸಿಕೊಂಡಿರುವವರಲ್ಲಿ ಬಹಳ ಸ್ವಲ್ಪ ಜನರು ಮಾತ್ರ, ಧಾರ್ಮಿಕ ಭಾವನೆಯನ್ನು ಹೊಂದಿ ಧಾರ್ಮಿಕ ವಿಚಾರಗಳನ್ನು ಓದುವ, ತಿಳಿದುಕೊಳ್ಳುವ ಅಭಿರುಚಿಯನ್ನು ಹಿಂದಿರುತ್ತಾರೆ. ಧಾರ್ಮಿಕ ಗ್ರಂಥಗಳನ್ನು ಓದುವವರೆಲ್ಲರೂ ಅದರಲ್ಲಿ ಹೇಳಿರುವಂತೆ ಆಚರಿಸುವುದಿಲ್ಲ. ಕೇವಲ ಓದುವುದರಿಂದ ಇಲ್ಲವೆ ಆ ತತ್ವವನ್ನು ಇನ್ನೊಬ್ಬರಿಗೆ ಉಪದೇಶ ಮಾಡುವುದರಿಂದ ಅವರಿಗೆ ತೃಪ್ತಿಯಾಗುತ್ತದೆ. ಹೀಗಾಗಿ ಆ ತತ್ವವನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರುವವರ ಸಂಖ್ಯೆ ತೀರಾ ಕಡಿಮೆ. ಇಂತಹ ಸಾಧಕರಲ್ಲಿ ಕೆಲವರು ಆತ್ಮಜ್ಞಾನವನ್ನು ಪಡೆಯಲು ಅನುಕೂಲವಾದ ಮಾನಸಿಕ, ಬೌದ್ಧಿಕ ತಯಾರಿಯನ್ನು ಸಾಧಿಸಿರುತ್ತಾರೆ. ಇವರು ಆತ್ಮಜ್ಞಾನದ ಮಹಾದ್ವಾರದಲ್ಲಿ ನಿಂತಿರುವವರು. ಆದಾಗ್ಯೂ ಸಹ ಇಂತಹವರಲ್ಲಿ ಕೆಲವೇ ಧೀರರು ಮಾತ್ರ ಇದೇ ಜನ್ಮದಲ್ಲಿ ಆತ್ಮಜ್ಞಾನವನ್ನು ಪಡೆಯುತ್ತಾರೆ.
ಹೀಗೆಂದ ಮಾತ್ರಕ್ಕೆ ಉಳಿದವರಿಗೆ ಆತ್ಮಜ್ಞಾನವಿಲ್ಲ ಎಂದಲ್ಲ. ಅವರ ತಯಾರಿಯು ಇನ್ನೂ ಸಾಕಾಗಲಿಲ್ಲವೆಂದು ಅವರು ಇನ್ನೂ ಸಾಧನೆಯನ್ನು ಮಾಡಿ ಇಂತಹವರು ಕ್ರಮೇಣ ಪ್ರಗತಿಯನ್ನು ಸಾಧಿಸುತ್ತಾ ಮುಂದು ಮುಂದಿನ ಜನ್ಮದಲ್ಲಿ ಶುಚಿವಂತರಾದ, ಸಿದ್ಧರ ಮನೆಯಲ್ಲಿ ಜನಿಸಿ, ಸಾಧನೆಯನ್ನು ಬಲಗೊಳಿಸಿ ಹೆಚ್ಚು ಹೆಚ್ಚು ಪರಮಾತ್ಮನ ಸಮೀಪಕ್ಕೆ ಹೋಗುತ್ತಾರೆ. ಸಂಚಿತವಾದ ವಾಸನೆಗಳೆಲ್ಲವೂ ಬರಿದಾದ ಕೂಡಲೇ, ಅಹಂಕಾರವು ನಾಶವಾಗುವುದರಿಂದ ಇವರು ಅದೇ ಜನ್ಮದಲ್ಲಿ ಜ್ಞಾನವನ್ನು ಪಡೆಯುತ್ತಾರೆ. ಈ ಜನ್ಮದಲ್ಲಿ ಸಾಧನೆಯ ಅಭಿರುಚಿವುಳ್ಳವರು, ಈಗಾಗಲೇ ಅನೇಕ ಜನ್ಮಗಳನ್ನು ದಾಟಿ ಬಂದಿದ್ದಾರೆಂದು ಅವರು ಇನ್ನು ಜಾಗ್ರತೆಯಾಗಿ ಆತ್ಮಜ್ಞಾನವನ್ನು ಪಡೆಯುತ್ತಾರೆಂದು ತಿಳಿಯಬೇಕು.

ಎಲ್ಲರೂ ಪರಮಾತ್ಮನನ್ನು ಏಕೆ ಭಜಿಸುವುದಿಲ್ಲ ?

ಕಾಮೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇ„ನ್ಯದೇವತಾಃ |
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ || 20 ||
ಅರ್ಥ : ನಾನಾ ಆಸೆಗಳಿಂದ ಮೋಹಿತರಾದ ಜನರು ಆಯಾಯಾ ಆಸೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ದೇವತೆಗಳನ್ನು ನಿರ್ದಿಷ್ಟ ವಿಧಿ ನಿಯಮಗಳಿಗನುಸಾರವಾಗಿ ಆರಾಧಿಸುತ್ತಾರೆ. ಹೀಗೆ ಅವರು ತಮ್ಮ ಪ್ರಕೃತಿಯು ಸೆಳೆತದಿಂದ ಆ ಕಡೆಗೆ ನೂಕಲ್ಪಡುತ್ತಾರೆ.
ಇಲ್ಲಿ ದೇವತೆಗಳು ಎಂದರೆ ಈ ಹಿಂದೆ ಮೂರನೆಯ ಅಧ್ಯಾಯದಲ್ಲಿ ಹೇಳಿದಂತೆ ಇಂದ್ರಿಯಗಳ ಅಧಿದೇವತೆಗಳು ಎಂಬ ಅರ್ಥವನ್ನಿಟ್ಟುಕೊಳ್ಳಬೇಕು. ಇಂತಹ ಮನುಷ್ಯನು ಇಂದ್ರಿಯ ಸುಖವನ್ನು ಪಡೆಯಬೇಕೆಂಬ ಉತ್ಕಟವಾದ ಅಭಿಲಾಷೆಯಿಂದ ಕೂಡಿರುತ್ತಾರೆ. ಯಾವ ಯಾವ ಇಂದ್ರಿಯಗಳ ಸುಖದ ಅಪೇಕ್ಷೆಯು ಹೆಚ್ಚಾಗಿರುತ್ತದೆಯೋ, ಆಯಾಯಾ ಇಂದ್ರಿಯಗಳ ಅಧಿದೇವತೆಗಳನ್ನು ಅವನು ಶಾಸ್ತ್ರೋಕ್ತ ವಿಧಿಯಿಂದ ಆರಾಧಿಸುತ್ತಾನೆ ಮತ್ತು ಅದಕ್ಕೆ ಅನುಗುಣವಾದ ಕರ್ಮಗಳನ್ನು ಮಾಡುತ್ತಾನೆ. ಇಂತಹ ಬುದ್ಧಿಯು ಹಾಗೂ ಕರ್ಮ ಮಾಡುವ ಸ್ವಭಾವವು ಅವನಿಗೆ ಹಿಂದಿನ ಜನ್ಮದ ವಾಸನೆಗಳಿಂದ (ತನ್ನ ಪ್ರಕೃತಿ) ಸ್ವಭಾವವಾಗಿ ಬಂದಿರುತ್ತದೆ.
ಹಾಗಾದರೆ ಆತ್ಮನ ಕಾರ್ಯವೇನು ?
ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ |
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ || 21 ||
ಅರ್ಥ : ಯಾರು ಯಾವ ದೇವತೆಯನ್ನು ಶ್ರದ್ಧೆಯಿಂದ ಆರಾಧಿಸಲು ಇಚ್ಛಿಸುತ್ತಾರೋ ಅವರಿಗೆ ಆಯಾಯಾ ದೇವತೆಯಲ್ಲಿ ಅಚಲವಾದ ಶ್ರದ್ಧೆಯನ್ನು ನಾನು ಕೊಡುತ್ತೇನೆ.
ಈ ಶ್ಲೋಕದಲ್ಲಿ ವೇದಾಂತ ಧರ್ಮವು ಎಷ್ಟು ಉದಾರ ಭಾವವುಳ್ಳದ್ದು, ಎಂಬುದು ವ್ಯಕ್ತಪಟ್ಟಿದೆ. ಪ್ರಪಂಚದಲ್ಲಿ ಬೇರೆ ಬೇರೆ ದೇವತೆಗಳ ಉಪಾಸಕರು ತಮ್ಮ ಮಾರ್ಗವೇ ಹಿರಿದು, ಉಳಿದವುಗಳೆಲ್ಲವೂ ತುಚ್ಛ ಎಂಬ ಭಾವದಿಂದ ಪರಸ್ಪರ ಹೊಡೆದಾಡುವುದು, ದ್ವೇಷಿಸುವುದು ಇತ್ಯಾದಿಗಳನ್ನು ಕಾಣುತ್ತೇವೆ. ಆದರೆ ವೇದಾಂತ ಧರ್ಮದಲ್ಲಿ ಈ ದ್ವೇಷಕ್ಕೆ ಕಾರಣವಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಸಂಸ್ಕಾರಕ್ಕನುಗುಣವಾಗಿ ಬೇರೆ ಬೇರೆ ದೇವತೆಗಳನ್ನು ಶ್ರದ್ಧೆಯಿಂದ ಅರ್ಚಿಸಿದರೆ ಅವರಿಗೆ ಅಯಾಯಾ ದೇವತೆಗಳಲ್ಲಿಯೇ ಶ್ರದ್ಧೆಯು ಹುಟ್ಟುವಂತೆ ಮಾಡಿ ಅವರು ಪರಮಾತ್ಮನನ್ನು ಆಯಾಯಾ ದೇವತೆಗಳ ರೂಪದಲ್ಲಿ ಅರ್ಚಿಸುವಂತಹ ಭಕ್ತಿಯನ್ನು ಕೊಡುತ್ತೇನೆಂಬ ಆಶ್ವಾಸನೆಯು ಇಲ್ಲಿದೆ. ಏಕೆಂದರೆ ಎಲ್ಲಾ ದೇವತೆಗಳಲ್ಲಿಯೂ ಪರಮಾತ್ಮನೇ ಇರುವುದರಿಂದ ಯಾರು ಯಾವ ದೇವತೆಯನ್ನು ಅರ್ಚಿಸಿದರೂ ಅವರು ಪರಮಾತ್ಮನನ್ನೇ ಅರ್ಚಿಸಿದಂತಾಗುತ್ತದೆ.
ಬೇರೆ ವಿವಿಧ ಉಪಾಸಕರಲ್ಲಿ ಯಾರನ್ನೂ ನಿಂದಿಸಕೂಡದು ಏಕೆಂದರೆ ಇವರೆಲ್ಲರೂ ಪರಮಾತ್ಮನ ಅನುಗ್ರಹವನ್ನು ಪಡೆಯಬೇಕೆಂದಿರುವ ಉದಾರಿಗಳು, ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರಕೃತಿ (ವಾಸನೆ) ಗನುಸಾರವಾದ ಇಂದ್ರಿಯ ಸುಖಾಭಿಲಾಷೆಯುಳ್ಳವರಾಗಿದ್ದಾರೆ. ಆದ್ದರಿಂದ ಕೇವಲ ಶಾರೀರಿಕ ಸುಖವನ್ನು ಬಯಸುವವರನ್ನು ತುಚ್ಛವಾಗಿ ಪರಿಗಣಿಸುವ. ಅಂತೆಯೇ ಬೌದ್ಧಿಕ ಸುಖ ಬಯಸುವವರನ್ನು ಶ್ಲಾಘಿಸುವ ಕಾರಣವಿಲ್ಲ. ಉತ್ಕ್ರಾಂತಿ ನಿಯಮದಂತೆ ಎಲ್ಲರೂ ಒಂದೇ ಸಾಲಿನಲ್ಲಿದ್ದಾರೆ. ಕೆಲವರು ಮುಂದಿದ್ದಾರೆ ಉಳಿದವನು ಹಿಂದಿದ್ದಾರೆ ಅಷ್ಟೆ. ಇವತ್ತು ಮುಂದಿದ್ದವರು ಒಮ್ಮೆ ಹಿಂದಿದ್ದರು. ಇವತ್ತು ಹಿಂದಿರುವವರು ಕಾಲಾಂತರದಲ್ಲಿ ಮುಂದೆ ಬರುತ್ತಾರೆ. ಆದ್ದರಿಂದ ಮುಂದಿವವರು, ಹಿಂದಿರುವವರ ಬಗ್ಗೆ ಕನಿಕರ ಪಡಬೇಕೇ ಹೊರತು, ಅವರನ್ನು ತುಚ್ಛವಾಗಿ ಕಾಣಬಾರದು.

 

ಶ್ರದ್ಧೆಯಿಂದ ಅವರ ಆಸೆಯು ಹೇಗೆ ಪೂರೈಸಲ್ಪಡುತ್ತದೆ.
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧನಮೀಹತೇ |
ಲಭತೇ ಚ ತತಃ ಕಾಮಾನ್ಮಯೈವ ವಿಹಿತಾನಿ ತಾನ್ || 22 ||
ಅರ್ಥ : ಅವನು ಈ ರೀತಿಯ ಶ್ರದ್ಧೆಯಿಂದ ಕೂಡಿದವನಾಗಿ ಆ ದೇವತೆಯ ಆರಾಧನೆಯನ್ನು ಮಾಡುತ್ತಾನೆ ಮತ್ತು ಆ ದೇವತೆಯಿಂದ ನಾನೇ ಒಪ್ಪಿಗೆ ಕೊಟ್ಟಂತಹ ಇಷ್ಟಾರ್ಥಗಳನ್ನು ಪಡೆಯುತ್ತಾನೆ.
ಪರಮಾತ್ಮನು ಎಲ್ಲಾ ಕಡೆಗಳಲ್ಲಿಯೂ, ಎಲ್ಲಾ ದೇವತೆಗಳಲ್ಲಿ ಅಖಂಡವಾಗಿರುವುದರಿಂದಲೂ ಅವನ ಪ್ರೇರಣೆಯಿಂದಲೇ ದೇವತೆಗಳು ಇಷ್ಟಾರ್ಥವನ್ನು ಕೊಡುತ್ತಾರೆ. ನಿರ್ದಿಷ್ಟವಾದ ರೇಡಿಯೋ ಕೇಂದ್ರದ ಜೊತೆಗೆ, ತನ್ನ ರೇಡಿಯೋ ಯಂತ್ರವನ್ನು ಸರಿಯಾಗಿ ಜೋಡಿಸಿದರೆ ವಿದ್ಯುತ್ತರಂಗಗಳು, ಬಿತ್ತನೆಯ ಕೇಂದ್ರದಿಂದ ಸುದ್ಧಿಗಳನ್ನು ತಾವಾಗಿಯೇ, ತಂದುಕೊಡುವಂತೆ ಈ ಕಾರ್ಯವು ಸಾಗಿರುತ್ತದೆ. ಪರಮಾತ್ಮನನ್ನು ವಿದ್ಯುತ್ತಿಗೂ ರೇಡಿಯೋಗಳನ್ನು ವಿವಿಧ ದೇವತೆಗಳಿಗೂ ಹೋಲಿಸಲಾಗಿದೆ. ವಿದ್ಯುತ್ತಿಲ್ಲದಿದ್ದರೆ ರೇಡಿಯೋಗಳು ಯಾವ ಕೆಲಸವನ್ನು ಮಾಡಲಾರವು.

ಅಜ್ಞಾನಿಗಳು ಇಂದ್ರಿಯ ಸುಖಗಳನ್ನು ಅಪೇಕ್ಷಿಸುವುದರಿಂದ ಅವರು ಆತ್ಮಜ್ಞಾನವನ್ನು ಪಡೆಯಲಾರರು.

ಅಂತವತ್ತು ಫ¯ಂ ತೇಷಾಂ ತದ್ಭವತ್ಯಲ್ಪಮೇಧಸಾಮ್ |
ದೇವಾನ್‍ದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ || 23 ||
ಅರ್ಥ : ಸಾಮಾನ್ಯ ಜಾಣರಾದ ಇಂತಹವರಿಗೆ ಸಿಗುವ ಫಲವು ಅಂತ್ಯವುಳ್ಳದ್ದು ಅಂದರೆ ನಾಶವಾಗತಕ್ಕದ್ದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ನನ್ನನ್ನು ಪೂಜಿಸುವವರು ನನ್ನನ್ನು ಸೇರುತ್ತಾರೆ.
ಭತ್ತವನ್ನು ಬಿತ್ತಿದರೆ ಸಿಗುವುದು ಭತ್ತ ಮಾತ್ರ. ಗೋಧಿಯನ್ನು ಬಿತ್ತಿದವನು ಗೋಧಿಯನ್ನು ಪಡೆಯುತ್ತಾನೆ. ಅಂತೆಯೇ ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ಅವರು ಪಡೆದ ಅಥವಾ ಪಡೆಯುವ ಫಲವು ಸಹ ದೇವತೆಗಳಂತೆ ನಾಶವುಳ್ಳದ್ದು. ನಾಶವುಳ್ಳ ಕೊನೆಯುಳ್ಳ ಪ್ರತಿಯೊಂದು ವಸ್ತುವೂ ದುಃಖವನ್ನುಂಟು ಮಾಡುತ್ತದೆ. ಏಕೆಂದರೆ ಸುಖದ ನಾಶ ಅಥವಾ ಸುಖದ ಕೊನೆ ಎಂದರೆ ದುಃಖ. ಸುಖದ ವಸ್ತುಗಳು ಲಭಿಸಿದಾಗ್ಯೆ ಸ್ವಲ್ಪ ಕಾಲ ಸಂತೋಷವೂ, ಇಂದ್ರಿಯಗಳ ತೃಪ್ತಿಯೂ ಲಭಿಸಿದರೂ ಆ ನಂತರ ಇಂದ್ರಿಯ ತೃಪ್ತಿಯು ಹಳಸಿ ಕಹಿಹಾಗುತ್ತದೆ ಮುಂದೆ ಬೇರೆ ವಸ್ತುವಿನ ಅಪೇಕ್ಷೆಯಾಗುತ್ತದೆ. ಆಗ ಮೊದಲಿನ ವಸ್ತುವಿನಲ್ಲಿ ವಿರಸವೂ, ದ್ವೇಷವೂ ಉತ್ಪನ್ನವಾಗುತ್ತದೆ.
ಭಕ್ತರು ದೇವತೆಗಳನ್ನು ಪೂಜಿಸುವಂತೆ ಅದೇ ಶ್ರದ್ದೆಯಿಂದ ಪರಮಾತ್ಮನನ್ನು ಪೂಜಿಸಿದರೆ, ಶಾಶ್ವತವಾದ ಶಾಂತಿಯನ್ನು ಹೊಂದಿ ಪರಮಾತ್ಮನೇ ಆಗುತ್ತಾರೆ. ಇಲ್ಲಿ ಅದರ ತುಲನಾತ್ಮಕ ವರ್ಣನೆ ಇದೆ. ಪರಮಾತ್ಮನನ್ನು ಭಜಿಸುವವರು ಅವನನ್ನೇ ಸೇರುತ್ತಾರೆ ಎಂಬ ಆಶ್ವಾಸನೆಯೂ ಇದೆ.
ಹಾಗಾದರೆ ಎಲ್ಲರೂ ಪರಮಾತ್ಮನನ್ನು ಏಕೆ ಭಜಿಸುವುದಿಲ್ಲ ?

ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ || 24 ||
ಅರ್ಥ : ಮೂಢರು ಅವ್ಯಕ್ತನಾದ ನಾನು ಮನುಷ್ಯ ರೂಪದಲ್ಲಿ ಹುಟ್ಟಿ ಬಂದಿದ್ದೇನೆಂದು ತಿಳಿಯುತ್ತಾರೆ. ಅವರು ಕೇವಲ ನನ್ನ ಬಾಹ್ಯರೂಪವನ್ನು ಕಾಣುತ್ತಾರೆಯೇ ಹೊರತು, ನಾನು ಅವ್ಯಕ್ತನೆಂದು, ಶ್ರೇಷ್ಠ ಪುರುಷನೆಂದು ತಿಳಿಯಲಾರರು.
ಇಂದ್ರಿಯಗಳು ಮನಸ್ಸು ಮತ್ತು ಬುದ್ಧಿಗಳಿಂದ ತಿಳಿಯಲ್ಪಡುವ ವಸ್ತುವಿಗೆ ‘ವ್ಯಕ್ತ’ ಎಂತಲೂ ಇವುಗಳಿಂದ ಕಾಣಲಾಗದ ವಸ್ತುವಿಗೆ ‘ಅವ್ಯಕ್ತ’ ಎಂತಲೂ ಹೆಸರು. ಸೂತ್ರದಲ್ಲಿಯ ಮಣಿಗಳಂತೆ ಎಲ್ಲಾ ವಸ್ತುಗಳು ಪರಮಾತ್ಮನಲ್ಲಿ ಪೆÇೀಣಿಸಲ್ಪಟ್ಟಿವೆ ಎಂಬುದನ್ನು ಮೂಢರು ತಿಳಿಯಲಾರದೆ ಅಂದರೆ ‘ನನ್ನ’ ಅವ್ಯಕ್ತ ಭಾವವನ್ನರಿಯಲಾರದೆ ನಾನು ಮನುಷ್ಯ ರೂಪದಲ್ಲಿ ಜನಿಸಿರುವವನೆಂದು ತಿಳಿಯುತ್ತಾರೆ.

ಈ ಅಜ್ಞಾನಕ್ಕೆ ಕಾರಣವೇನು ?

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ |
ಮೂಢೋ„ಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ || 25 ||
ಅರ್ಥ : ನನ್ನ ಮಾಯೆಯಿಂದ ಆವೃತರಾದ ಈ ಲೋಕದ ಜನರು ನನ್ನನ್ನು ತಿಳಿಯಲಾರರು. ನಾನು ಹುಟ್ಟು ಇಲ್ಲದವನೆಂಬುದನ್ನು ಸಾವು ಇಲ್ಲದವನೆಂಬುದನ್ನೂ ಸಹ ಈ ಮೂಢರು ತಿಳಿಯಲಾರರು.
ಅವ್ಯಕ್ತನಾದ ಪರಮಾತ್ಮನು ಪ್ರಪಂಚದ ಬೇರೆ ಬೇರೆ ವ್ಯಕ್ತವಾದ ನಾಮರೂಪಗಳನ್ನು ಹೊಂದುವಂತೆ ಮಾಡುವ ಶಕ್ತಿವಿಶೇಷಕ್ಕೆ ‘ಮಾಯೆ’ ಎಂದು ಹೆಸರು. ಇದು ಸಹ ಅವ್ಯಕ್ತವಾದುದು. ಪರಮಾತ್ಮನ ಆದೇಶದಂತೆ ಮಾಯೆಯು ಸೃಷ್ತಿಯಾದ ಎಲ್ಲಾ ಜೀವಿಗಳಲ್ಲಿಯೂ ಅಜ್ಞಾನವನ್ನು ತುಂಬಿ ಅವರು ‘ತಾವು ಪರಮಾತ್ಮ’ ಎಂಬ ನಿಜವಾದ ಅರಿವನ್ನು ಮರೆಯುವಂತೆ ಮಾಡುತ್ತದೆ. ಪ್ರತಿಯೊಂದು ವ್ಯಕ್ತಿಯಲ್ಲಿರುವ ಈ ಮಾಯೆಗೆ ‘ಅವಿದ್ಯಾ’ ಎಂದು ಹೆಸರು. ಈ ಅವಿದ್ಯೆಯು ಮನುಷ್ಯನಲ್ಲಿರುವ ರಜಸ್ಸು ಮತ್ತು ತಮೋಗುಣಗಳಿಂದ ಉಂಟಾಗಿದೆ. ರಜೋಗುಣವು ಮಾನಸಿಕ ಉದ್ರೇಕಗಳನ್ನುಂಟುಮಾಡುತ್ತದೆ. ತಮೋಗುಣವು ಅಜ್ಞಾನವನ್ನುಂಟು ಮಾಡುತ್ತದೆ. ಇವೆರಡರ ಜೊತೆಗೆ ಸತ್ವಗುಣವೂ ಇದೆ. (ಸತ್ವಗುಣವು ಪ್ರಧಾನವಾಗಿರುವಾಗ ಜ್ಞಾನೋದಯವಾಗುತ್ತದೆ) ಹೀಗೆ ಅಜ್ಞಾನದಿಂದ ಆವೃತರಾದ ಜನರು ಪರಮಾತ್ಮನನ್ನು ತಿಳಿಯಲಾರರು. ಮೋಟುಮರವನ್ನು ಮುಂಗಪ್ಪಿನಲ್ಲಿ ನೋಡಿದಾಗ ನಮ್ಮ ಮನಸ್ಸಿನಲ್ಲಿ ಉಂಟಾದ ‘ದೆವ್ವ’ ಎಂಬ ಭಾವದ ಅಜ್ಞಾನವಿರುವವರೆಗೂ, ‘ಅದು ದೆವ್ವವಲ್ಲ. ಅದು ಮೋಟುಮರ’ ಎಂಬ ಸತ್ಯವು ನಮಗೆ ತಿಳಿಯದಿರುವಂತೆ, ಈ ಶರೀರವೇ ನಾನು ಎಂಬ ಅಜ್ಞಾನ ಇರುವವರೆಗೂ ಪರಮಾತ್ಮನ ಜ್ಞಾನವಾಗುವುದಿಲ್ಲ.

ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ |
ಭಿವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ || 26 ||
ಅರ್ಥ : ಅರ್ಜುನನೇ, ಹಿಂದೆ ಸೃಷ್ಟಿಯಿಂದ ಈಗ ಬದುಕಿರುವ ಮತ್ತು ಮುಂದೆ ಸೃಷ್ಟಿಯಾಗುವ ಎಲ್ಲಾ ಜೀವಿಗಳನ್ನು ನಾನು ಬಲ್ಲೆನು ಆದರೆ ನನ್ನನ್ನು ಮಾತ್ರ ಅವರಾರೂ ತಿಳಿಯಲಾರರು.
ಜನರ ಈ ಮೋಹಕ್ಕೆ ಕಾರಣವೇನು ?

ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ |
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ || 27 ||
ಅರ್ಥ : ಪರಂತಪನೇ, ಇಚ್ಛೆ ಮತ್ತು ದ್ವೇಷಗಳಿಂದ ಉತ್ಪನ್ನವಾದ, ಅಜ್ಞಾನದಿಂದ ಎಲ್ಲಾ ಪ್ರಾಣಿಗಳು ಜನ್ಮಧಾರಭ್ಯ ಮೋಹಗೊಂಡಿರುತ್ತವೆ.
ಎಲ್ಲಾ ಪ್ರಾಣಿಗಳು ತಮ್ಮ ಹಿಂದಿನ ಜನ್ಮದ ವಾಸನೆಗಳಿಗೆ ಅನುಗುಣವಾದ ಮನೋಬುದ್ಧಿಗಳನ್ನುಳ್ಳ ಶರೀರವನ್ನು ಪಡೆದಿರುತ್ತವೆ. ಪ್ರತಿಯೊಬ್ಬ ಜೀವಿಯ ಅಂತಃಕರಣದ ಮೇಲೆ ಈ ವಾಸನೆಗಳ ಹೊರೆಯು ಇರುವುದರಿಂದ ಅವು ಜನ್ಮದಾರಾಭ್ಯ ಅಜ್ಞಾನದಿಂದ ಕೂಡಿರುತ್ತವೆ.
ನನ್ನನ್ನು ತಿಳಿಯಬಲ್ಲ ಜನರ ಲಕ್ಷಣಗಳೇನು ?

ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ |
ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ || 28 ||
ಅರ್ಥ : ಪುಣ್ಯಕರ್ಮಗಳನ್ನು ಮಾಡಿದ, ಪಾಪಗಳನ್ನು ಕಳೆದುಕೊಂಡಿರುವ ಸುಖದುಃಖಾದಿ ದ್ವಂದ್ವಗಳಿಂದ ನಿರ್ಬಾಧಿತರಾಗಿರುವ, ವ್ರತಬದ್ಧರಾದ ಮನುಷ್ಯರು ನನ್ನನ್ನು ಭಜಿಸುತ್ತಾರೆ.
ಪಾಪಕರ್ಮಗಳು ಎಂದರೆ ಇಂದ್ರಿಯ ಸುಖಭೋಗಗಳನ್ನು ಪಡೆಯುವ ಬಲವಾದ ಆಸೆಯಿಂದ ಮಾಡಿದ ಕರ್ಮಗಳು ಇವುಗಳಿಂದ ವಾಸನೆಯ ಇನ್ನೂ ಬಲವಾಗುತ್ತದೆ. ಪಾಪಗಳನ್ನು ಕಳೆದುಕೊಳ್ಳುವುದು ಎಂದರೆ ಸಂಚಿತವಾಸನೆಗಳನ್ನು ಅನುಭೋಗಿಸಿ ತೀರಿಸುವುದು. ಆದರೆ ಈ ವಾಸನೆಗಳನ್ನು ಅನುಭವಿಸುವ ಕಾರ್ಯದಿಂದ ಪುನಃ ಹೊಸ ವಾಸನೆಗಳು ಹುಟ್ಟುತ್ತವೆ. ಆದುದರಿಂದ ಸಂಚಿತವಾಸನೆಗಳು ಎಷ್ಟು ಪ್ರಬಲವಾಗಿವೆಯೋ ಅದಕ್ಕಿಂತ ಹೆಚ್ಚು ಬಲವಾದ ಪ್ರಯತ್ನದಿಂದ ಪುಣ್ಯಕರ್ಮಗಳನ್ನು ಮಾಡಬೇಕು. ಪುಣ್ಯಕರ್ಮಗಳೆಂದರೆ, “ನಾನೇ ಆತ್ಮನು, ಕರ್ಮಮಾಡುವವನು ನಾನಲ್ಲ. ನನಗೆ ಫಲಾಸೆಯಲ್ಲಿ ಎಂದು ಯಜ್ಞಭಾವದಿಂದ ಕರ್ಮ ಮಾಡುವುದು. ಈ ತರಹದ ಕರ್ಮಗಳಿಂದ ಹೊಸವಾಸನೆಗಳು ಉತ್ಪನ್ನವಾಗುವುದಿಲ್ಲ. ಹೀಗೆ ಸಂಚಿತ ವಾಸನೆಗಳು ಅಳಿದು, ಹೊಸವಾಸನೆಗಳಿಗೆ ಆಸ್ಪದವಿಲ್ಲದಂತೆ ಕೆಲವು ಜನರು ಮಾತ್ರ ವ್ರತಬದ್ಧಕ್ಕಾಗಿ ನನ್ನನ್ನು ಭಜಿಸುತ್ತಾರೆ. ಈ ರೀತಿಯಾಗಿ ಮನಸ್ಸು ಬುದ್ಧಿಗಳನ್ನು ಸಿದ್ಧಗೊಳಿಸಿದರೆ ಆ ಮೂಲಕ ಪರಮಾತ್ಮನ ಜ್ಞಾನವನ್ನು ಪಡೆಯುವುದು ಸುಲಭ.

ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ |
ತೇ ಬ್ರಹ್ಮತದ್ವಿದುಃ ಕೃತ್ಸ್ನ ಮಧ್ಯಾತ್ಮಂ ಕರ್ಮ ಚಾಖಿಲಮ್ || 29 ||
ಅರ್ಥ : ಮುಪ್ಪು ಮತ್ತು ಮರಣಗಳಿಂದ ಬಿಡುಗಡೆಯನ್ನು ಹೊಂದುವುದಕ್ಕಾಗಿ, ಯಾರು ನನ್ನನ್ನೇ ಆಶ್ರಯಿಸುತ್ತಾರೋ, ಅವರು ಜ್ಞಾನವನ್ನು ಹೊಂದಿ ಬ್ರಹ್ಮನನ್ನು ತಿಳಿಯುತ್ತಾರೆ ಮತ್ತು ಕರ್ಮಗಳನ್ನು ತಿಳಿಯುತ್ತಾರೆ.
ಪರಮಾತ್ಮನನ್ನು ಆಶ್ರಯಿಸಿದವನು ಮರಣದಿಂದ ಬಿಡುಗಡೆ ಹೊಂದುತ್ತಾನೆ. ಅವನು ಆತ್ಮಜ್ಞಾನವನ್ನು ಪಡೆಯುತ್ತಾನೆ. ಆತ್ಮಜ್ಞಾನ, ಬ್ರಹ್ಮಜ್ಞಾನ ಎರಡೂ ಒಂದೇ. ಅವನು ಈ ಸ್ಥಿತಿಯನ್ನು ಮುಟ್ಟಿದ ಮೇಲೆ ಸಂಸಾರವನ್ನು ಬಿಟ್ಟು ಕಾಡಿಗೇನು ಹೋಗುವುದಿಲ್ಲ. ಅದಕ್ಕೆ ವಿರೋಧವಾಗಿ ತನ್ನ ಜ್ಞಾನವನ್ನೂ ಮನೋನಿಗ್ರಹವನ್ನೂ ಉಪಯೋಗಿಸಿ ಲೋಕಸಂಗ್ರಹಕ್ಕಾಗಿ ವ್ಯವಹಾರದ ವಿವಿಧ ಕರ್ಮಗಳನ್ನು ‘ಯಜ್ಞ’ ಭಾವದಿಂದ ಮಾಡುತ್ತಾ, ತಾನು ಮಾತ್ರ ಉದಾಸೀನನಾಗಿದ್ದು ಇತರೆ ಜನರಿಗೆ ಮೇಲ್ಪಂಕ್ತಿ ಯಾಗಿರುತ್ತಾನೆ. ಕರ್ಮಚಾಖಿಲಮ್ ಎಂಬ ಶಬ್ದದಲ್ಲಿ ಈ ಅರ್ಥವಿದೆ. ಇದೇ ಭಾವವನ್ನು ಮುಂದಿನ ಶ್ಲೋಕದಲ್ಲಿ ಇನ್ನು ಸ್ಪಷ್ಟಪಡಿಸಲಾಗಿದೆ.

ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ |
ಪ್ರಯಾಣಕಾಲೇ„ಪಿ ಚ ಮಾಂ ತೇ ವಿದುರ್ಯುಕ್ತಚೇತಸಃ || 30 ||
ಅರ್ಥ : ಯಾರು ನನ್ನನ್ನು ಅಧಿಭೂತನನ್ನಾಗಿಯೂ, ಅಧಿದೇವನನ್ನಾಗಿಯೂ ಮತ್ತು ಅಧಿಯಜ್ಞನನ್ನಾಗಿಯೂ ತಿಳಿಯುತ್ತಾರೋ ಅವರು ಸ್ಥಿರವಾದ ಬುದ್ಧಿಯಿಂದ ಮರಣ ಕಾಲದಲ್ಲಿ ಸಹ ನನ್ನನ್ನೇ ಚಿಂತಿಸುತ್ತಾರೆ.
ಅಧಿಭೂತ – ಸೃಷ್ಟಿಯಾದ ಎಲ್ಲಾ ವಸ್ತುಗಳಿಗೂ ‘ಭೂತ’ ಎಂದು ಹೆಸರು. ಈ ಎಲ್ಲಾ ವಸ್ತುಗಳು ಹಾಗೂ ಜೀವಿಗಳಲ್ಲಿದ್ದುಕೊಂಡು ಅವುಗಳ ಇರುವಿಕೆ ಚಲನವಲನಾದಿಗಳಿಗೆ ಕಾರಣನಾದವನಿಗೆ ‘ಅಧಿಭೂತ’ ಎಂದು ಹೆಸರು.
ಅಧಿದೈವ – ಇಂದ್ರಿಯಗಳು ಮನಸ್ಸು ಮತ್ತು ಬುದ್ಧಿಗಳ ಚಲನವಲನಾದಿಗಳಿಗೆ ಕಾರಣವಾದ ಚೇತನಾವಸ್ತು (ಪರಮಾತ್ಮ) ‘ಅಧಿಯಜ್ಞ – ಮನುಷ್ಯನು ಶರೀರ, ಮನಸ್ಸು, ಬುದ್ಧಿಗಳ ಮುಖಾಂತರ ಮಾಡುವ ಎಲ್ಲಾ ಕಾರ್ಯಗಳಿಗೂ ‘ಅಧಿಯಜ್ಞ’ ಎಂದು ಹೆಸರು. ಕರ್ಮ ಕಾಂಡೋಕ್ತ ಯಜ್ಞಯಾಗಾದಿಗಳು ಸಹ ಇದರಲ್ಲಿ ಅಂತರ್ಗತವಾಗುತ್ತವೆ.
ಕೊನೆಯ ಎರಡು ಶ್ಲೋಕಗಳಲ್ಲಿ ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗುವ ವಿಷಯವನ್ನು ಸಂಕ್ಷೇಪವಾಗಿ ತಿಳಿಸಲಾಗಿದೆ ಪರಮಾತ್ಮನ ಜ್ಞಾನವನ್ನು ಪಡೆದ ಸಿದ್ಧ ಪುರುಷನು (ಯೋಗಿಯು), ಕರ್ಮದ ಎಲ್ಲಾ ಅಂಗಗಳನ್ನು ಚನ್ನಾಗಿ ತಿಳಿದುಕೊಂಡವನಾಗಿದ್ದು ಲೋಕಹಿತಕ್ಕಾಗಿ ತನ್ನ ಜ್ಞಾನವನ್ನೂ ಮನೋನಿಗ್ರಹ ಶಕ್ತಿಯನ್ನೂ ವ್ಯವಹಾರದ ಎಲ್ಲಾ ಕಾರ್ಯಗಳನ್ನೂ ದಕ್ಷತೆಯಿಂದ ಮಾಡುವುದರಲ್ಲಿ ವಿನಿಯೋಗಿಸುತ್ತಾನೆಂಬುದನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಹೊರಗೆ ಇಂದ್ರಿಯಗಲು ಕರ್ಮವನ್ನು ಮಾಡುತ್ತಿದ್ದಾಗ್ಯೂ ಮನಸ್ಸು ಒಳಗೆ ಆತ್ಮಾನಂದದಲ್ಲಿರುತ್ತದೆ. ಮಾಡುವ ಕರ್ಮಗಳಲ್ಲಿ ಅವನು ಲಿಪ್ತನಾಗುವುದಿಲ್ಲ. ಆದರೆ ಕರ್ಮದಲ್ಲಿ ಅಜಾಗರೂಕತೆಯಾಗದಂತೆ ಅವನು ಸತತವೂ ಎಚ್ಚರದಿಂದಿರುತ್ತಾನೆ.

ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಜ್ಞಾನವಿಜ್ಞಾನಯೋಗೋ ನಾಮ
ಸಪ್ತಮೋ„ಧ್ಯಾಯಃ